ಕೊಡಚಾದ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಡಚಾದ್ರಿ
ಪಶ್ಚಿಮ ಘಟ್ಟಗಳು ಮತ್ತು ಅರೇಬಿಯನ್ ಸಮುದ್ರದ ಹಿನ್ನೀರಿನಿಂದ ಕಂಡಂತೆ ಕೊಡಚಾದ್ರಿ[೧]
ಎತ್ತರ೧,೩೪೩ m (೪,೪೦೬ ft)
Location
Kodachadri is located in Karnataka
Kodachadri
Kodachadri
ಕರ್ನಾಟಕದ ಭೂಪಟದಲ್ಲಿ ಕಂಡಂತೆ
ನೆಲೆಕರ್ನಾಟಕ, ಭಾರತ
ಶ್ರೇಣಿಪಶ್ಚಿಮ ಘಟ್ಟಗಳು
ನಿರ್ದೇಶಾಂಕ13°51′39″N 74°52′29″E / 13.86083°N 74.87472°E / 13.86083; 74.87472Coordinates: 13°51′39″N 74°52′29″E / 13.86083°N 74.87472°E / 13.86083; 74.87472
Climbing
ಮೊದಲ ಆರೋಹಣಇತಿಹಾಸದಲ್ಲಿ
ಸುಲಭದ ದಾರಿನಾಗೋಡಿ ಇಂದ

ಕೊಡಚಾದ್ರಿ ಬೆಟ್ಟ ಸಾಲುಗಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಇದರಲ್ಲಿ ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ೧೩೪೩ ಮೀ. ಕೊಡಚಾದ್ರಿ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ಕೊಡಚಾದ್ರಿ ಬೆಟ್ಟ ಸಾಲುಗಳು ಮೂಕಾಂಬಿಕ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಸಣ್ಣ ದೇವಾಲಯವಿದೆ. ಈ ಜಾಗದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂಬ ಪ್ರತೀತಿಯಿದೆ. ಸರ್ವಜ್ಞ ಪೀಠಕ್ಕಿಂತ ೨ ಕಿ.ಮೀ ಮೊದಲು ಮೂಲ ಮೂಕಾಂಬಿಕ ದೇವಸ್ಥಾನವಿದೆ. ಸರ್ವಜ್ಞ ಪೀಠದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ ಚಿತ್ರಮೂಲ ಎಂಬ ಸ್ಥಳ ತಲುಪಬಹುದು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ. ಈ ಜಾಗವು ಹಲವಾರು ಜಾತಿಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಕೊಡಚಾದ್ರಿ ಬೆಟ್ಟವು ದಟ್ಟವಾದ ಅರಣ್ಯ ಹಾಗು ಶೋಲ ಕಾಡುಗಳಿಂದ ಆವೃತವಾಗಿದೆ. ಇಪ್ಪತ್ತನೆಯ ಶತಮಾನದಲ್ಲಿ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕವಾಗಿ ಸುತ್ತಾಡಿದ ಲೇಖಕ ಮತ್ತು ಪರಿಸರ ಪ್ರೇಮಿ ಡಾ.ಶಿವರಾಮ ಕಾರಂತರು ಒಂದೆಡೆ ಇದನ್ನು ದಾಖಲಿಸಿದ್ದಾರೆ. ಸಹ್ಯಾದ್ರಿಯ ಈ ಭಾಗದಲ್ಲಿ ಮೇಲೆದ್ದಿರುವ ಮೂರು ಪರ್ವತ ಶಿಖರಗಳನ್ನು ಕಾಲ್ನಡಿಗೆಯಲ್ಲಿ ಏರಿದ ಡಾ|ಕಾರಂತರ ಪ್ರಕಾರ ಕುದುರೆಮುಖ ಶಿಖರವು ಅತ್ಯಂತ ದೂರದ ಚಾರಣ, ಕುಮಾರ ಪರ್ವತವು ತುಂಬಾ ಕಠಿಣವೆನಿಸುವ ದಾರಿ; ಮತ್ತು ಕೊಡಚಾದ್ರಿಯು ಇವೆಲ್ಲಕ್ಕಿಂತಲೂ ಚಂದದ ತಾಣವಾಗಿದೆ.

ಸ್ಥಳದ ಇತಿಹಾಸ[ಬದಲಾಯಿಸಿ]

ಕೊಡಚಾದ್ರಿಗೆ ಪುರಾತನ ಕಾಲದಿಂದಲೂ ಜನರು ಯಾತ್ರೆ ಹೋಗುತ್ತಿದ್ದರು. ಇಲ್ಲಿಗೆ ಸಮೀಪದ ನಗರ ಹತ್ತಿರದ ನಿಲಸಕಲ್ಲು ಎಂಬಲ್ಲಿ ನವ ಶಿಲಾಯುಗದ ಕಾಲದ ನಿಲುವುಗಲ್ಲುಗಳ ಸಾಲುಗಳನ್ನು ಗಮನಿಸಿದರೆ, ಈ ಸುತ್ತಲಿನ ಪ್ರದೇಶದಲ್ಲಿ ಕನಿಷ್ಟ ಮೂರು ಸಾವಿರ ವರುಷಗಳಿಂದ ಜನವಸತಿ ಇರಬೇಕು ಎನಿಸುತ್ತದೆ. ಕೊಡಚಾದ್ರಿಯಲ್ಲಿ ಪುರಾತನ ಜನವಸತಿ ಇದ್ದ ಕುರುಹು ಇನ್ನೂ ಪತ್ತೆಯಾಗಿಲ್ಲವಾದರೂ, ಕ್ರಿ.ಶ. ಏಳನೆಯ ಶತಮಾನದಲ್ಲಿ ಶಂಕರಾಚಾರ್ಯರು ಕೊಡಚಾದ್ರಿಗೆ ಭೇಟಿ ಕೊಟ್ಟಿದ್ದರು ಎನ್ನಲಾಗಿದ್ದು, ಇಲ್ಲಿದ್ದ ಮೂಲ ಮೂಕಾಂಬಿಕೆಯನ್ನು ಪರ್ವತದ ತಳದಲ್ಲಿರುವ ಕೊಲ್ಲೂರಿನಲ್ಲಿ ಪ್ರತಿಷ್ಟೆ ಮಾಡಿದರು ಎಂದು ಕೊಲ್ಲೂರಿನ ಸ್ಥಳಪುರಾಣ ಹೇಳುತ್ತದೆ. ಕೊಡಚಾದ್ರಿಗೆ ನೂರಾರು ವರುಷಗಳಿಂದ ಜನರು ಯಾತ್ರೆಯರೂಪದಲ್ಲಿ ಚಾರಣ ಹೋಗುತ್ತಿದ್ದುದು ಸಹಜವಾಗಿದೆ. ಶಿಖರದ ಹತ್ತಿರವಿರುವ ಮೂಲ ಮೂಕಾಂಬಿಕ ದೇವಾಲಯವೂ ಸಹ ಸಾಕಷ್ಟು ಪುರಾತನವಾದದ್ದು. ಈ ದೇವಾಲಯದ ಬಳಿ ಇರುವ ಸುಮಾರು ೪೦ ಅಡಿ ಎತ್ತರದ ಕಬ್ಬಿಣದ ಕಂಬವು, ಮೂಕಾಸುರನನ್ನು ವಧಿಸಲು ದೇವಿ ಉಪಯೋಗಿಸಿದ ತ್ರಿಶೂಲ ಎಂದು ಸ್ಥಳೀಯರು ಹೇಳುತ್ತಾರೆ. ಇದು ಪುರಾತನ ವಿಧಾನಗಳಿಂದ ತಯಾರಾದ ಕಬ್ಬಿಣ ಎಂದು ಸಂಶೋಧನೆಗಳಿಂದ ಪತ್ತೆಯಾಗಿದೆ.

ವಿಶಿಷ್ಟ ಅರಣ್ಯ[ಬದಲಾಯಿಸಿ]

ಕೊಡಚಾದ್ರಿಯ ಸುತ್ತ ಮುತ್ತ ಇರುವುದು ಸಹ್ಯಾದ್ರಿಯ ವಿಶಿಷ್ಟ ನಿತ್ಯ ಹರಿದ್ವರ್ಣ ಅರಣ್ಯ. ಭಾರತದ ಅತಿ ಹೆಚ್ಚು ಮಳೆ ಬೀಳುವ ಈ ಪರ್ವತ ಶ್ರೇಣಿಯಲ್ಲಿ ಬೆಳೆದಿರುವ ಮಳೆಕಾಡು ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿದೆ ಎಂದರೂ ತಪ್ಪಾಗದು. ಕೊಡಚಾದ್ರಿಯ ತುದಿಯಲ್ಲಿ ನಿಂತು ನೋಡಿದರೆ, ನಾಲ್ಕೂದಿಕ್ಕಿನಲ್ಲಿ ನಿಬಿಡಾರಣ್ಯವು ಅಲೆ ಅಲೆಯಂತೆ ಹರಡಿರುವ ದೃಶ್ಯ ಕಾಣುತ್ತದೆ. ಕೊಡಚಾದ್ರಿ ಇರುವ ಜಿಲ್ಲೆಯಲ್ಲೇ ಹುಟ್ಟಿ ಬೆಳೆದ ಕವಿ ಕುವೆಂಪು ತಮ್ಮ ಒಂದು ಕವನದಲ್ಲಿ ಹೇಳಿದಂತೆ, "ಹಸುರಿತ್ತಲ್, ಹಸುರತ್ತಲ್, ಹಸುರೆತ್ತಲ್, ಕಡಲಿನಲಿ" ಎಂಬ ಸಾಲು ನೆನಪಾಗುವ ತಾಣ ಕೊಡಚಾದ್ರಿ.

ಸೂರ್ಯಾಸ್ತ[ಬದಲಾಯಿಸಿ]

ಕೊಡಚಾದ್ರಿಯ ಸೂರ್ಯಾಸ್ತ ಅಪರೂಪದ್ದು. ಶಿಖರದಿಂದ ಸಾಕಷ್ಟು ಸ್ಪಷ್ಟವಾಗಿಯೇ ಕಾಣಿಸುವ ಸಮುದ್ರದಲ್ಲಿ, ಚಿನ್ನದ ಬಣ್ಣದ ಸೂರ್ಯನು ಮುಳುಗುವಾಗ, ನೀರಿನ ವಕ್ರೀಭವನದಿಂದಲೋ ಅಥವಾ ವಾತಾವರಣದ ಹಲವು ಪದರಗಳಿಂದಲೋ, ಸೂರ್ಯನು ತಾಳುವ ವಿವಿಧ ರೂಪಗಳು ಚೋದ್ಯವನ್ನುಂಟುಮಾಡುತ್ತದೆ. ವಾತಾವರಣದಲ್ಲಿ ದೂಳಿನ ಅಂಶ ಕಡಿಮೆಯಿದ್ದ ದಿನ ಮತ್ತು ತಿಳಿಯಾಗಿ ಕಾಣುವ ದಿನದ ಸೂರ್ಯಾಸ್ತದ ಸಮಯದಲ್ಲಿ ಸೂರ್ಯನು ಚಿನ್ನದ ಬುಗುರಿಯಂತೆ, ಚಿನ್ನದ ಬೋಗುಣಿಯಂತೆ, ಟೋಪಿಯಂತೆ, ಗಾಲಿಚಕ್ರದಂತೆ, ಕೊಡದ ರೀತಿ, ಬಿಲ್ಲೆಯ ರೀತಿ, ಚಿನ್ನದ ಚೂರಿನ ರೀತಿ, ಉಂಗುರದ ತುದಿಯ ರೀತಿ ಈ ತೆರ ವಿವಿಧರೂಪಗಳಲ್ಲಿ ಸ್ಪಷ್ಟವಾಗಿ ಕಾಣುತ್ತಾನೆ. ವಿಶಾಲಾಕಾಶ ಮತ್ತು ದೂರದ ದಿಗಂತದ ಮಬ್ಬು ಹಿನ್ನೆಲೆಯಲ್ಲಿ ಹೊಂಬಣ್ಣದ ಸೂರ್ಯನು, ಈ ರೀತಿಯ ನಾನಾರೂಪ ಧರಿಸುತ್ತಾ ಕ್ರಮೇಣ ಸಮುದ್ರದೊಳಗೆ ಜಾರಿ ಕಣ್ಮರೆಯಾಗಿ, ಎಲ್ಲೆಲ್ಲೂ ಮಬ್ಬು ಮಾತ್ರ ಪಸರಿಸಿದಾಗ, ಈ ನಿಸರ್ಗನಾಟಕದ ಭವ್ಯತೆಗೆ ಬೆರಗಾಗುತ್ತೇವೆ. ಆ ಪ್ರಕೃತಿಗೆ ಇದು ದಿನನಿತ್ಯದ, ಏಕತಾನದ ದಿನಚರಿಯೇ ಆದರೂ, ಆ ಅಪೂರ್ವ ಅನುಭೂತಿಯನ್ನು ಅನುಭವಿಸಿದ ನಮ್ಮ ಮನವು, ವಿಶಾಲ ಪರದೆಯ ಮೇಲೆ ನಡೆದ ಹೊನ್ನಿನ ಬಣ್ಣದ ಸೂರ್ಯನ ಆಟವಿದೋ ಅಥವಾ ನಿಸರ್ಗದ ಅರ್ಥಗರ್ಭಿತ ನಾಟಕವಿದೋ ಎಂದು ವಿಸ್ಮಯ ಪಡುತ್ತದೆ. ಜೊತೆಗೆ, ಅಮೂರ್ತ ಭಾವನೆಗಳಿಗೆ ಪಕ್ಕಾದ ಮನವು ಕ್ಷಣಕಾಲ ಮಂಕಾಗಿ, ಆ ಭವ್ಯತೆಯನ್ನು ತಾನೇ ತಾನಾಗಿ ಅನುಭವಿಸುತ್ತಿದೆಯೋ ಎಂಬ ವಿಸ್ಮೃತಿಗೆ ನಾವು ಒಳಗಾಗುತ್ತೇವೆ.

ತಲುಪುವುದು ಹೇಗೆ?[ಬದಲಾಯಿಸಿ]

ಕೊಡಚಾದ್ರಿ ಬೆಟ್ಟವನ್ನು ತಲುಪಲು ತೀರ ಕಡಿದಾದ, ಕಚ್ಚಾ ರಸ್ತೆಯ ಸೌಲಭ್ಯವಿದೆ. (ಜೀಪಿನಲ್ಲಿ ಮಾತ್ರ ಹೋಗಬಹುದು).ಕೊಲ್ಲೂರು, ನಿಟ್ಟೂರು, ಸಂಪೆಕಟ್ಟೆ, ಕಟ್ಟಿನಹೊಳೆ ಯಿಂದ ಜೀಪ್ ಸರ್ವಿಸ್ ಇದೆ. ಹೊಸನಗರ ತಾಲೂಕಿನ ಸಂಪೆಕಟ್ಟೆ ಕಟ್ಟಿನಹೊಳೆ ತನಕ ಟಾರ್ ರಸ್ತೆ ಇದ್ದು ನಂತರ ಕಚ್ಚಾ ರಸ್ತೆಯಲ್ಲಿ ಬೆಟ್ಟವನ್ನು ತಲುಪಬಹುದು. ಚಾರಣ ಮಾಡಲು ಬಯಸುವವರು ಉಡುಪಿ-ಶಿವಮೊಗ್ಗ ಗಡಿಯಲ್ಲಿ ಇರುವ ನಾಗೋಡಿ ಅರಣ್ಯ ತಪಾಸಣಾ ಕೇಂದ್ರದಿಂದ ಸ್ವಲ್ಪ ಮುಂದೆ ೧೦ ಕಿ.ಮೀ ಹೋಗಿ ಗೌರಿಕೆರೆಯಲ್ಲಿ ಬಲಕ್ಕೆ ತಿರುಗಿ ಸುಮಾರು ೫ ಕಿ.ಮೀ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಸಿಗುವ ಕಟ್ಟಿನಹೊಳೆ ಬಳಿಯಿಂದ ಚಾರಣ ಮಾಡಬಹುದು. ಶಿವಮೊಗ್ಗ-ಹೊಸನಗರ ಕಡೆಯಿಂದ ಬಂದಲ್ಲಿ ಚಿಕ್ಕಪೇಟೆ ನಗರದಲ್ಲಿ ಬಲಕ್ಕೆ ತಿರುಗಿ ೧೫ ಕಿ.ಮೀ ಸಾಗಿದರೆ ಸಂಪೆಕಟ್ಟೆ, ಅಲ್ಲಿಂದ ಎಡಕ್ಕೆ ತಿರುಗಿ ೮ ಕಿ.ಮೀ ಸಾಗಿದಾಗ ಕಟ್ಟಿನಹೊಳೆ ಸಿಗುವುದು. ಚಾರಣ ಮಾಡಲು ೩ ಕಡೆಯಿಂದ ದಾರಿ ಇದ್ದು 1. ನಾಗೋಡಿ ಸಮೀಪದ ಕಾರೆಘಟ್ಟ ದಿಂದ ವಳೂರು ಮಾರ್ಗವಾಗಿ ಕೊಡಚಾದ್ರಿ 2. ನಾಗೋಡಿ ಸಮೀಪದ ಮರಕುಟಿಗ ದಿಂದ ಹಿಡ್ಲುಮನೆ ಪಾಲ್ಸ್ ಮೂಲಕ ಕೊಡಚಾದ್ರಿ 3.ಕಟ್ಟಿನಹೊಳೆಯಿಂದ ರಸ್ತೆಯ ಮೂಲಕ ಅಥವಾ ಹಿಡ್ಲುಮನೆ ಪಾಲ್ಸ್ ದಾರಿಯ ಮೂಲಕ ಕೊಡಚಾದ್ರಿ

ಎಲ್ಲೆಲ್ಲಿಂದ ಎಷ್ಟು ದೂರ?[ಬದಲಾಯಿಸಿ]

ಬೆಂಗಳೂರಿನಿಂದ ೩೮೮ ಕಿ.ಮೀ.

ಸಮೀಪದ ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಕೊಡಚಾದ್ರಿ ಬೆಟ್ಟದಲ್ಲಿರುವ ಪ್ರಮುಖ ಸ್ಥಳಗಳು[ಬದಲಾಯಿಸಿ]

ಸುತ್ತಮುತ್ತಲಿನ ಇತರ ಪ್ರಮುಖ ಸ್ಥಳಗಳು[ಬದಲಾಯಿಸಿ]

ತಂಗುವುದು ಎಲ್ಲಿ?[ಬದಲಾಯಿಸಿ]

ಮೂಲ ಮೂಕಾಂಬಿಕ ದೇವಸ್ಥಾನದ ಬಳಿ ಕರ್ನಾಟಕ ಲೋಕೋಪಯೋಗಿ ಇಲಾಖೆಯವರ (PWD)ಅಥಿತಿ ಗೃಹವಿದೆ. ಇಲ್ಲಿ ಉಳಿಯಲು ಮೊದಲು ಅನುಮತಿ ಪಡೆದಿರಬೇಕು. ಹಾಗೆಯೆ ಕೊಡಚಾದ್ರಿಯಲ್ಲಿ ಮೂಲ ಮೂಕಾಂಬಿಕ ದೇವಸ್ಥಾನದ ಅರ್ಚಕರ ಮನೆಗಳಲ್ಲಿ ಊಟ ಮತ್ತು ಉಳಿಯಲು ಅನುಕೂಲವಿದೆ. ಕೊಲ್ಲೂರಿನಲ್ಲಿ ಹಲವಾರು ಹೋಟೆಲ್ ಗಳು ಮತ್ತು ಅತಿಥಿಗೃಹಗಳು ಲಭ್ಯ.

ಕೊಡಚಾದ್ರಿ ಬೆಟ್ಟದ ಮೇಲಿನಿಂದ ಕಾಣುವ ಸೂರ್ಯಾಸ್ತದ ದೃಶ್ಯವಂತೂ ಅಪರೂಪದ್ದು. ಸರ್ವಜ್ಞ ಪೀಠವು ಸೂರ್ಯಾಸ್ತ ನೋಡಲು ಸೂಕ್ತ ಸ್ಥಳ. ಪ್ರವಾಸಿ ಮಂದಿರದ ಹಿಂಭಾಗದಲ್ಲಿರುವ ಬೆಟ್ಟದಿಂದ ಕಾಣುವ ಸೂರ್ಯೋದಯವೂ ಅನುಪಮವಾದ ನೋಟ. ಈ ಬೆಟ್ಟವನ್ನು ವೆಂಕಟರಾಯನ ದುರ್ಗ ಎನ್ನಲಾಗುತ್ತಿದ್ದು, ಇಲ್ಲಿ ಬುರುಜು ನಿರ್ಮಿಸಿದ ಕುರುಹುಗಳನ್ನು ಕಾಣಬಹುದು.

External links[ಬದಲಾಯಿಸಿ]

Coordinates: 13°52′N 74°52′E / 13.867°N 74.867°E / 13.867; 74.867{{#coordinates:}}: cannot have more than one primary tag per page

ಚಿತ್ರಮಾಲೆ[ಬದಲಾಯಿಸಿ]

ಉಲ್ಲೇಖನ[ಬದಲಾಯಿಸಿ]