ಕವಲೇದುರ್ಗ
ಕವಲೇದುರ್ಗ ಕೋಟೆ | |
---|---|
ತೀರ್ಥಹಳ್ಳಿ ಇದರ ಭಾಗ | |
ತೀರ್ಥಹಳ್ಳಿ,ಕರ್ನಾಟಕ, ಭಾರತ | |
ನಿರ್ದೇಶಾಂಕಗಳು | 13°43′08″N 75°07′19″E / 13.71879°N 75.12198°E |
ಶೈಲಿ | ಕೋಟೆ |
ಸ್ಥಳದ ಮಾಹಿತಿ | |
ಇವರ ಹಿಡಿತದಲ್ಲಿದೆ | ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ |
ಇವರಿಗೆ ಮುಕ್ತವಾಗಿದೆ ಸಾರ್ವಜನಿಕರಿಗೆ | ಹೌದು |
ಪರಿಸ್ಥಿತಿ | ಪಾಳು ಬಿದ್ದಿದೆ |
ಸ್ಥಳದ ಇತಿಹಾಸ | |
ಕಟ್ಟಿದ್ದು | 9ನೇ ಶತಮಾನ[೧] |
ಕಟ್ಟಿದವರು | ವೆಂಕಟಪ್ಪ ನಾಯಕ (ಕೆಳದಿ ಸಂಸ್ಥಾನ) |
ಸಾಮಗ್ರಿಗಳು | ಪೆಡಸು ಕಲ್ಲು(Granites) |
ಕವಲೇದುರ್ಗ ತೀರ್ಥಹಳ್ಳಿ ತಾಲ್ಲೂಕಿನ ಹಸಿರು ಸಿರಿಯಿಂದ ಸಮೃದ್ಧವಾದ ಮೋಹಕ ತಾಣ.ತೀರ್ಥಹಳ್ಳಿಯಿಂದ ೧೮ ಕಿ.ಮೀ ಹಾಗೂ ಶಿವಮೊಗ್ಗದಿಂದ ಸುಮಾರು ೮೦ ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿ - ಸಾಲೂರು ಮಾರ್ಗವಾಗಿ ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಸಾಗಿದಾಗ ಈ ದುರ್ಗ ಎದುರಾಗುತ್ತದೆ. ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ಸುಂದರ ತಾಣ.ಇಲ್ಲಿ ೯ನೇ ಶತಮಾನದ ಕೋಟೆ ಇದೆ.ಇದು ಕೆಳದಿ ಸಂಸ್ಥಾನದ ನಾಲ್ಕನೇಯ ಹಾಗೂ ಕೊನೆಯ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ಕೆಳದಿ ಸಂಸ್ಥಾನದ ಅನೇಕ ಐತಿಹ್ಯ ಹಾಗೂ ಅಂದಿನ ವಾಸ್ತುಶಿಲ್ಪ, ಕಲೆ ಮತ್ತು ಸಂಸ್ಕೃತಿಗಳಿಗೆ ಈ ಕೋಟೆ ಇಂದೂ ಸಾಕ್ಷಿಯಾಗಿ ನಿಲ್ಲುತ್ತದೆ.
ಇತಿಹಾಸ
[ಬದಲಾಯಿಸಿ]ಕವಲೇದುರ್ಗ ಎನ್ನುವುದು ಕಾವಲು ದುರ್ಗ ಎಂಬ ಹೆಸರಿನ ಅಪಭ್ರಂಶ.ಕರ್ನಾಟಕದ ಇತಿಹಾಸದಲ್ಲಿ ನಾಗರಖಂಡ ಬನವಾಸಿ ನಾಡೆಂದು ಖ್ಯಾತಿಗೊಂಡಿದ್ದ ಮಲೆನಾಡು ಪ್ರದೇಶದ ಕವಲೇದುರ್ಗ ಒಂದು ಐತಿಹಾಸಿಕ ತಾಣ. ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗ, ಭುವನಗಿರಿ ದುರ್ಗ ಸಂಸ್ಥಾನವಾಗಿ ಮಾರ್ಪಟ್ಟ ಹಿನ್ನಲೆಯ ಹಿಂದೆ ಯುದ್ಧ ನಡೆದಿದೆ.ಮಲ್ಲವರು ಮೊದಲು ಸಾಗರದ ಸಮೀಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ(ನಗರ) ಕೋಟೆಕೊತ್ತಲ ನಿರ್ಮಿಸಿ ರಾಜ್ಯಭಾರ ಮಾಡುತ್ತಿದ್ದರು.ಆಗ ಕವಲೇದುರ್ಗದ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾಧೀನದಲ್ಲಿತ್ತು.ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂದು ಹೆಸರಿಟ್ಟು ಆಳ್ವಿಕೆ ನಡೆಸಿದರು.ಮಲ್ಲವ ವಂಶದಲ್ಲಿ ಪ್ರಖ್ಯಾತರಾದವರೆಂದರೆ, ಶಿವಪ್ಪ ನಾಯಕ,ರಾಣಿ ಚೆನ್ನಮ್ಮಾಜಿ ಮತ್ತು ರಾಣಿ ವೀರಮ್ಮಾಜಿ.ಛತ್ರಪತಿ ಶಿವಾಜಿ ಮಹಾಹಾರಾಜರ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿದ್ದು ಕವಲೇದುರ್ಗ ಸಂಸ್ಥಾನ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಇದೇ ವಿಷಯವಾಗಿ ಮೊಘಲ್ ದೊರೆ ಔರಂಗಜೇಬನೊಂದಿಗೆ ಯುದ್ಧಮಾಡಿ ಗೆದ್ದ ಕೀರ್ತಿ ರಾಣಿ ಚೆನ್ನಮ್ಮಾಜಿಯವರಿಗೆ ಸಂದಿದೆ.೧೮ನೇ ಶತಮಾನದಲ್ಲಿ ಮೈಸೂರು ರಾಜ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನರ ದಾಳಿಗೆ ಗುರಿಯಾಗಿ ಕವಲೇದುರ್ಗ ಸಾಕಷ್ಟು ನಾಶವಾಯಿತು.
ಈ ಕೋಟೆಯನ್ನು 9 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ನಂತರ 14 ನೇ ಶತಮಾನದಲ್ಲಿ ಚೆಲುವರಂಗಪ್ಪನಿಂದ ನವೀಕರಿಸಲ್ಪಟ್ಟಿತು.[೨] ಇದು ವಿಜಯಯನಗರ ಅರಸರ ಸಾಮಂತರಾಗಿದ್ದು, ಅದರ ಪತನದ ನಂತರ ಸ್ವತಂತ್ರರಾದ ಕೆಳದಿಯ ನಾಯಕರ ಭದ್ರಕೋಟೆಯಾಗಿತ್ತು. ವೆಂಕಟಪ್ಪ ನಾಯಕನು(ಕ್ರಿ.ಶ. 1582-1629) ಇಲ್ಲಿ ಒಂದು ಅರಮನೆಯನ್ನು ಕಟ್ಟಿ ಅದನ್ನು ಒಂದು ಅಗ್ರಹಾರವನ್ನಾಗಿಸಿದ. ಮತ್ತು ಮತ್ತಿನ ಮಠ ಎಂಬ ಶೃಂಗೇರಿ ಮಠದ ಉಪಮಠ,ಒಂದು ಖಜಾನೆ, ಒಂದು ಕಣಜ, ಆನೆಗಳಿಗಾಗಿ ಗಜಶಾಲೆ, ಕುದುರೆಗಳಿಗಾಗಿ ಅಶ್ವಶಾಲೆ ಮತ್ತು ಕೊಳಗಳನ್ನು ನಿರ್ಮಿಸಿದನು.
ಇದು ಮೂರು ಸುತ್ತಿನ ಕೋಟೆಯಾಗಿದ್ದು, ಬೆಟ್ಟದ ದಿಣ್ಣೆಗಳ ನೈಸರ್ಗಿಕ ಬಾಹ್ಯರೇಖೆಗಳನ್ನು ಅನುಸರಿಸಿ ಬೃಹದ್ಗಾತ್ರದ ಪೆಡಸುಕಲ್ಲುಗಳ ಇಟ್ಟಿಗೆಗಳನ್ನುಪಯೋಗಿಸಿ ನಿರ್ಮಿಸಲಾಗಿದೆ. ಪ್ರತಿ ಸುತ್ತಿನಲ್ಲೂ ಒಂದು ಮಹಾದ್ವಾರವಿದ್ದು ಅದರ ಇಕ್ಕೆಲಗಳಲ್ಲೂ ರಕ್ಷಣಾ ಕೊಠಡಿಗಳಿವೆ. ಕೋಟೆಯ ಮದ್ಯದಲ್ಲಿ ದೇವಾಲಯಗಳು, ಒಂದು ಪಾಳುಬಿದ್ದ ಅರಮನೆ ಹಾಗೂ ಇತರ ರಚನೆಗಳಿವೆ. ದುರ್ಗದ ತುತ್ತತುದಿಯಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿರುವ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ಎಂಬ ಸಣ್ಣ ದೇವಸ್ಥಾನವಿದೆ. ದೇವಸ್ಥಾನವು ಗರ್ಭಗೃಹವನ್ನು ಹೊಂದಿದ್ದು ಎದುರಿಗೆ ಒಂದು ನಂದಿಮಂಟಪ ಮತ್ತು ಮುಖಮಂಟಪವಿದೆ. ಸೂರ್ಯಾಸ್ತದ ಸಮಯದಲ್ಲಿ ಇಲ್ಲಿಂದ ಪಶ್ಚಿಮ ಕ್ಷಿತಿಜದಲ್ಲಿ ಮುಳುಗುವ ಸೂರ್ಯನ ಸುಂದರ ನೋಟ ಕಾಣಸಿಗುವುದು. ಕೋಟೆ ಒಳಗಿರುವ ಅರಮನೆಯ ಜಾಗದಲ್ಲಿ ದೊಡ್ಡ ಅಡಿಪಾಯ ಕಂಡುಬರುತ್ತದೆ.ಇತ್ತೀಚಿನ ಉತ್ಖನನದಿಂದ, ಪರಸ್ಪರ ಹೊಂದಿಕೊಂಡಿರುವ ಕೊಠಡಿಗಳು,ವಿಶಾಲವಾದ ಕಂಬದ ಜಗುಲಿ, ಪೂಜಾಗೃಹ,ಅಡಿಗೆ ಕೋಣೆ ಮತ್ತು ಅದರಲ್ಲಿರುವ ಕಲ್ಲಿನ ಐದು ಉರಿಕದ(ಬರ್ನರ್)ಒಲೆ, ಕಲ್ಲಿನ ವೇದಿಕೆಯಿರುವ ಸ್ನಾನದ ಕೋಣೆ,ಉತ್ತಮ ನೀರು ಸರಬರಾಜು ವ್ಯವಸ್ಥೆ, ಒಂದು ವಿಶಾಲವಾದ ಒಳ ಪ್ರಾಂಗಣ ನಂತರ ಮೆಟ್ಟಿಲಿನಿಂದ ಕೂಡಿದ ಒಂದು ಕೊಳ ಇವುಗಳಿಂದ ಕೂಡಿದ ಅರಮನೆಯ ವಾಸ್ತುಶಿಲ್ಪದ ಒಳನೋಟ ಕಾಣಸಿಗುತ್ತದೆ.
- ಹೆಜ್ಜೆ ಮೇಲೆ ಹೆಜ್ಜೆಯಿಟ್ಟರೂ ಸದ್ದು ಪ್ರತಿಧ್ವನಿಸುವಷ್ಟು ಪ್ರಶಾಂತ ಹಾಗೂ ಮೌನದ ಪರಿಸರ ಇಲ್ಲಿನದು. ಹಸಿರನ್ನು ಕಣ್ತುಂಬಿಕೊಳ್ಳುವುದು ಮಾತ್ರವಲ್ಲ- ಇತಿಹಾಸದ ಅರಿವನ್ನು ಮನದುಂಬಿಕೊಳ್ಳಲು ಇಲ್ಲಿ ಸಾಕಷ್ಟು ಅವಕಾಶವಿದೆ. ಇತಿಹಾಸದ ಕುರುಹುಗಳ ಹಿಂದೆ ನಡೆದರೆ, ಈ ದುರ್ಗವನ್ನು ಹಿಂದೊಮ್ಮೆ ಭುವನಗಿರಿ ದುರ್ಗ, ಕೌಲೇದುರ್ಗ ಎಂದು ಕರೆಯುತ್ತಿದ್ದು ದಾಗಿ ತಿಳಿದು ಬರುತ್ತದೆ.
- ಕವಲೇದುರ್ಗದಲ್ಲಿನ ಆಕರ್ಷಣೆಗಳಲ್ಲಿ ತಿಮ್ಮಣ್ಣನಾಯಕನ ಕೆರೆಯೂ ಒಂದು. ಹದಿನೆಂಟು ಎಕರೆ ವಿಸ್ತೀರ್ಣದ ಈ ಕೆರೆ, ಹಕ್ಕಿಗಳ ಚಿಲಿಪಿಲಿ ಕಲರವದಿಂದ, ಮೀನುಗಳ ಮುಳುಗಾಟ ದಿಂದ, ಬೆಳ್ಳಕ್ಕಿಯ ಹಿಂಡಿನಿಂದ ಗಮನ ಸೆಳೆಯುತ್ತದೆ. ಕೆರೆಯ ಮೇಲಿನಿಂದ ತೇಲಿ ಬರುವ ತಂಗಾಳಿಗೆ ಮೈಯೊಡ್ಡಿ ಜಲಚರಗಳ ದನಿ ಕೇಳಿಸಿಕೊಳ್ಳುವುದು ಹಿತವಾದ ಅನುಭವ.
- ಕೆಳದಿ ಅರಸರು ನಿರ್ಮಿಸಿದ ವೀರಶೈವ ಮಠ ಕವಲೇದುರ್ಗದಲ್ಲಿದೆ. ಈ ಅರಸರಿಗೆ ಏಳರ ಮೇಲೆ ವಿಶೇಷ ಮಮಕಾರ ಇದ್ದಿರಬೇಕು. ಆ ಕಾರಣದಿಂದಲೇ ಏಳು ಕೆರೆಗಳು ಇಲ್ಲಿವೆ. ಇಷ್ಟುಮಾತ್ರವಲ್ಲ, ಅರಸರು ಆರಾಧಿಸುತ್ತಿದ್ದ ನಾಗದೇವರಿಗೆ ಕೂಡ ಏಳು ಹೆಡೆ!
- ಮಠದಿಂದ ಸುಮಾರು ಒಂದು ಕಿ.ಮೀ. ಮುಂದೆ ಸಾಗಿದರೆ ಕೋಟೆಯ ಮುಖ್ಯದ್ವಾರ ಎದುರಾಗುತ್ತದೆ. ಮಹಾದ್ವಾರ ಪ್ರವೇಶಿಸಿದಂತೆ ಸುಮಾರು ೫೦-೬೦ ಅಡಿ ಎತ್ತರದ ಗೋಡೆ ನೋಡಬಹುದು. ಗೋಡೆಯ ಮೇಲೆ ಅಂದಿನ ಕಾಲದ ಚಿತ್ರಕಲೆಯನ್ನು ನೋಡಬಹುದು. ಕಾವಲುಗಾರರು ಉಳಿದುಕೊಳ್ಳಲು ಮಾಡಿದ್ದ ಚೌಕಾಕಾರದ ಕಾವಲುಗಾರ ಕೊಠಡಿ ಹಾಗೂ ಒಳಭಾಗದಲ್ಲಿ ಮುಖ ಮಂಟಪವನ್ನು ಎರಡನೇ ಮಹಾದ್ವಾರ ಹಾಯುವಾಗ ನೋಡಬಹುದು.
- ಮಂಟಪದ ಎಡಭಾಗದಲ್ಲಿ `ನಾಗತೀರ್ಥ~ವೆಂಬ ಕೊಳ ಹಾಗೂ ಸುಮಾರು ೬ ಅಡಿ ಎತ್ತರದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ನೋಡಬಹುದು. ಮೂರನೆ ಮಹಾದ್ವಾರ ದ ಬಲಭಾಗದಲ್ಲಿ ನಗಾರಿ ಕಟ್ಟೆಯಿದೆ. ಈ ಪರಿಸರದಲ್ಲಿ ಒಂದು ಸುರಂಗ ಮಾರ್ಗವನ್ನೂ ಕಾಣಬಹುದು. ನಾಲ್ಕನೆಯ ಮಹಾದ್ವಾರ ತಲುಪಲು ಇಳಿಜಾರಿನ ಹಾಸುಗಲ್ಲನ್ನು ದಾಟಬೇ ಕು. ಅಲ್ಲಿಯೂ ಒಂದು ಮುಖ ಮಂಟಪವನ್ನು ನೋಡಬಹುದು.
- ಕವಲೇದುರ್ಗದಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದು. ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇ ಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆಯಂತೆ. ಅರಸರ ಕಾಲದಲ್ಲಿ ತುಪ್ಪ ಹಾಗೂ ಎಣ್ಣೆಯನ್ನು ಶೇಖರಿಸಲು ಉಪಯೋಗಿಸುತ್ತಿದ್ದ ಬಾವಿಯನ್ನು ದುರ್ಗದಲ್ಲಿ ನೋಡಬಹುದು. ಇದಕ್ಕೆ ಎಣ್ಣೆ ಹಾಗೂ ತುಪ್ಪದ ಬಾವಿಯೆಂದೇ ಈಗಲೂ ಕರೆಯುತ್ತಾರೆ.
- ಶಿಸ್ತಿನ ಶಿವಪ್ಪನಾಯಕನ ಕಾಲದ ಏತನೀರಾವರಿ ಪದ್ಧತಿ ಬಳಕೆಯ ಕುರುಹುಗಳು ಕವಲೇದುರ್ಗದಲ್ಲಿ ಈಗಲೂ ಕಾಣಬಹುದು. ದಟ್ಟ ಅರಣ್ಯದ ನಡುವೆ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಅರಮನೆ ಕಲ್ಲು ಕಂಬಗಳ ಆಸರೆ ಹೊಂದಿದೆ. ಅರಮನೆಗೀಗ ಆಕಾಶವೇ ಛಾವಣಿ. ಕಂಬಗಳು ಮತ್ತು ಮಣ್ಣಿನ ಗೋಡೆಗಳು ಮಾತ್ರ ಉಳಿದಿವೆ.
ಚಿತ್ರ ಸಂಪುಟ
[ಬದಲಾಯಿಸಿ]-
ಇತಿಹಾಸ ಹೇಳುವ ಭಿತ್ತಿ ಚಿತ್ರ.
-
ಕೋಟೆಯ ಪಕ್ಷಿನೋಟ.
-
ಕೋಟೆಯ ನೆತ್ತಿಯಿಂದ ಕಾಣುವ ನೋಟ.
-
ಕಾಶಿ ವಿಶ್ವನಾಥ ದೇವಾಲಯ.
-
ದೇವಾಲಯದ ಪಕ್ಷಿನೋಟ.
-
ಕಾಶಿ ವಿಶ್ವನಾಥ ದೇವಾಲಯದ ಮುಂಭಾಗ.
-
ಪರ್ವತದ ತುದಿಯಲ್ಲಿರುವ ವಿಗ್ರಹ.
-
ಲಕ್ಷ್ಮೀ ನಾರಾಯಣ ದೇಗುಲ.
-
ಕಾಶಿ ವಿಶ್ವನಾಥ ದೇಗುಲ.
-
2ನೇ ಸುತ್ತಿನ ಕೋಟೆಗೆ ಕಲ್ಲಿನ ಹಾಸು ದಾರಿ.
-
ಕೋಟೆಯ ಬುಡದಲ್ಲಿರುವ ಕೆರೆ.
-
ಅರಮನೆಯ ಆವರಣದ ದ್ವಾರ.
-
ಅರಮನೆಯ ಅವಶೇಷ.
-
ಕೋಟೆಯ ಅವಶೇಷ.
-
ಕೋಟೆಯ ಪ್ರವೇಶ ಪ್ರದೇಶ.
-
ಭಗ್ನಗೊಂಡ ನಂದಿ.
-
ಶಾರ್ದೂಲ ವಿಗ್ರಹ.
-
ಕೋಟೆಯ ಗೋಡೆಯ ಮೇಲಿರುವ ಮಂಗನ ಕೆತ್ತನೆ.
-
ಭಗ್ನಗೊಂಡ ನೀರಿನ ಬಾನಿ(ಬೋಗುಣಿ).
-
ಕೋಟೆಯ ಹೊರವಲಯ
ವೀಡಿಯೋ
[ಬದಲಾಯಿಸಿ][ಕವಲೇದುರ್ಗ] ಶಿವಾ
ಹೊರಕೊಂಡಿಗಳು
[ಬದಲಾಯಿಸಿ]- http://hosachiguruu.blogspot.in/2012/12/blog-post.html
- ಕವಲೆದುರ್ಗ-ಕೋಟೆ-ಇತಿಹಾಸ-ತೀರ್ಥಹಳ್ಳಿ.ಇನ್ ಮಿಂದಾಣ[ಶಾಶ್ವತವಾಗಿ ಮಡಿದ ಕೊಂಡಿ]
ಉಲ್ಲೇಖಗಳು
[ಬದಲಾಯಿಸಿ]- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಏಪ್ರಿಲ್ 2023
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using gadget WikiMiniAtlas
- Pages using infobox military installation with deprecated syntax
- Commons link is locally defined
- Commons category with local link different than on Wikidata
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- ಕರ್ನಾಟಕದ ಇತಿಹಾಸ
- ಕರ್ನಾಟಕದ ಕೋಟೆಗಳು
- ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳು
- ತೀರ್ಥಹಳ್ಳಿ ತಾಲೂಕಿನ ಪ್ರವಾಸಿ ತಾಣಗಳು