ವಿಷಯಕ್ಕೆ ಹೋಗು

ಕೆಳದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Infobox ನಗರ

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ ೮ ಕಿ.ಮೀ. ದೂರದಲ್ಲಿರುವ ಗ್ರಾಮ.

ಇತಿಹಾಸ

ಹನ್ನೆರಡನೆಯ ಶತಮಾನದಲ್ಲಿ ಈ ಊರು ಸಾಂತರಸರ ಅಧೀನದಲ್ಲಿತ್ತು. ಪೊಂಬುಚ್ಚ ಪುರವರಾಧೀಶ್ವರನಾಗಿದ್ದ ಮಹಾಮಂಡಳೇಶ್ವರ ತ್ರಿಭುವನಮಲ್ಲ ಭುಜಬಲ ಪ್ರತಾಪ ಶಾಂತರಸನ ತೃಟಿತ ಶಾಸನವೊಂದು ಇಲ್ಲಿ ದೊರೆತಿದೆ, ಊರು ಪ್ರಬುದ್ಧಮಾನಕ್ಕೆ ಬಂದುದು ೧೬ನೆಯ ಶತಮಾನದ ಆರಂಭದಲ್ಲಿ ; ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ. ಇಲ್ಲಿಯೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನವೊಂದಕ್ಕೆ ಸೇರಿದ್ದ ಚೌಡಗೌಡನೆಂಬ ರೈತನಿಗೆ ನಿಕ್ಷೇಪವೊಂದು ದೊರೆತುದಾಗಿಯೂ ಅದರ ಸಹಾಯದಿಂದ ಸಣ್ಣ ಪಾಳೆಯಪಟ್ಟೊಂದನ್ನು ಅವನು ಕಟ್ಟಿಕೊಂಡು ಮುಂದೆ ತನ್ನ ಪ್ರಭಾವವನ್ನು ಬೆಳೆಸಿಕೊಂಡನೆಂದೂ ಐತಿಹ್ಯವಿದೆ. ಇವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಎಂಟು ಮಾಗಣೆಗಳ ನಾಯಕತ್ವವನ್ನು ಕೊಟ್ಟು ಇವನನ್ನು ನಾಯಕನನ್ನಾಗಿ ಮಾಡಿದ. ಹೀಗೆ ಕೆಳದಿ ಸು.೧೫೦೦ರಲ್ಲಿ ಒಂದು ಪುಟ್ಟ ಸಂಸ್ಥಾನದ ರಾಜಧಾನಿಯಾಯಿತು. ಊರು ಬಹು ಬೇಗ ಬೆಳೆಯಿತು. ಅರಮನೆ, ಕೋಟೆ, ಕೆರೆಗಳನ್ನು ಇಲ್ಲಿ ಚೌಡಪ್ಪ ನಾಯಕ ಕಟ್ಟಿಸಿದ. ಜೊತೆಗೆ ಸುಂದರವಾದ ರಾಮೇಶ್ವರ ದೇವಾಲಯವನ್ನೂ ಕಟ್ಟಿಸಿದ. ಮುಂದೆ ೬೦ ವರ್ಷಗಳ ಕಾಲ ಇವನ ವಂಶದವರ ರಾಜಧಾನಿಯಾಗಿ ಅನಂತರ ರಾಜಧಾನಿ ಮೊದಲು ಇದರ ಸಮೀಪದಲ್ಲಿಯೇ ಇದ್ದ ಇಕ್ಕೇರಿಗೂ ಅನಂತರ ಬಿದನೂರಿಗೂ ಬದಲಾಯಿಸಲಾಯಿತಾದರೂ ಈ ಊರು ನಾಯಕರ ಆಳ್ವಿಕೆ ಕೊನೆಗೊಳ್ಳುವವರೆಗೂ ಆ ರಾಜ್ಯದ ಒಂದು ಪ್ರಮುಖ ನಗರವಾಗಿಯೇ ಮುಂದುವರೆಯಿತು. ಆದರೆ ಅನಂತರ ಇದರ ಪ್ರಾಮುಖ್ಯತೆ ಇಳಿಮುಖವಾಗಿ ಕಡೆಗೆ ಒಂದು ಸಾಮಾನ್ಯವಾದ ಹಳ್ಳಿಯಾಗಿ ಉಳಿಯಿತು. ಇಲ್ಲಿ ವಿಸ್ತಾರವಾಗಿ ಹರಡಿರುವ ಹಳೆಯ ಊರಿನ ನಿವೇಶನಗಳೂ ದೇವಾಲಯಗಳೂ, ಕೆರೆ, ಮಠಗಳೂ ಅದರ ಹಿಂದಿನ ವೈಭವಕ್ಕೆ ತೋರುಬೆರಳಾಗಿ ನಿಂತಿವೆ. ಇಲ್ಲಿ ಹೊಯ್ಸಳ-ದ್ರಾವಿಡ ಶೈಲಿಯಲ್ಲಿರುವ ರಾಮೇಶ್ವರ ದೇವಾಲಯ ಪ್ರಖ್ಯಾತವಾಗಿದೆ.

ಕೆಳದಿ ದೇವಾಲಯಗಳು

ಕೆಳದಿಗೆ ಹೋಗುತ್ತಿದ್ದಂತೆಯೇ ಎದುರಿಗೆ ರಾಮೇಶ್ವರ ದೇವಸ್ಥಾನ. ರಾಮೇಶ್ವರನ ಎಡಭಾಗದಲ್ಲಿ ಪಾರ್ವತಿ, ಬಲಭಾಗದಲ್ಲಿ ವೀರಭದ್ರನ ಗುಡಿಗಳಿವೆ. ಇವುಗಳೆಲ್ಲಾ ಹೊಯ್ಸಳ ದ್ರಾವಿಡ ಶೈಲಿಯಲ್ಲಿರೋ ದೇವಸ್ಥಾನಗಳು.

ಪಾರ್ವತಿ ದೇವಸ್ಥಾನ

ಮೊದಲು ಸಿಗುವುದು ಪಾರ್ವತೀ ದೇವಸ್ಥಾನ.ಇಲ್ಲಿನ ಛಾವಣಿಯೇ ಇಲ್ಲಿನ ಆಕರ್ಷಣೆಗಳಲ್ಲೊಂದು. ಇಲ್ಲಿರೋ ೪೦-೫೦ ಬಗೆಯ ಹೂವಿನ ಕೆತ್ತನೆಗಳಲ್ಲಿ ಪ್ರತಿಯೊಂದೂ ಭಿನ್ನವಾಗಿರೋದು ಆ ಶಿಲ್ಪಿಗಳ ಕರಕುಶಲತೆಗೆ, ಸೃಜನ ಶೀಲತೆಗೆ ಸಾಕ್ಷಿ. ಇಲ್ಲಿನ ಮೇಲ್ಚಾವಣಿಯಲ್ಲಿ ದೇವಾನು ದೇವತೆಗಳ ಕೆತ್ತನೆಗಳಿವೆ. ಇಲ್ಲಿ ೩೨ ಕೈಗಳ ಗಣಪತಿಯ ವಿಗ್ರಹವೊಂದಿದೆ. ಇಕ್ಕೇರಿಯ ಅಘೋರೇಶ್ವರ ದೇಗುಲದ ೩೨ ಕೈಗಳ ಗಣಪನನ್ನು ಮಾಡುವ ಮೊದಲು ಸಣ್ಣ ಪ್ರಮಾಣದಲ್ಲಿ (ಮಾಡೆಲ್ ಅನ್ನುವಂತೆ) ಇದನ್ನು ಕೆತ್ತಿದ್ದರು ಎನ್ನುವ ಪ್ರತೀತಿಯಿದೆ. ಇದರ ಬಲಭಾಗದಲ್ಲಿರುವುದು ಶ್ರೀ ರಾಮೇಶ್ವರ ದೇವಸ್ಥಾನ.ಪಾರ್ವತಿ- ರಾಮೇಶ್ವರ ದೇಗುಲಗಳ ಮಧ್ಯೆ ಇರೋ ಪ್ರದಕ್ಷಿಣಾ ಪಥದ ಇಕ್ಕೆಲಗಳ ಗೋಡೆಗಳಲ್ಲಿ ಅನೇಕ ದೇವಾನುದೇವತೆಗಳ, ಅಪ್ಸರೆಯರ, ರಾಮಾಯಣ ಮಹಾಭಾರತಗಳ ಕೆತ್ತನೆಗಳನ್ನು ನೋಡಬಹುದು

ರಾಮೇಶ್ವರ ದೇವಸ್ಥಾನ

ರಾಮೇಶ್ವರ ದೇಗುಲದಲ್ಲಿ ಇಕ್ಕೇರಿ, ಬನವಾಸಿಗಳಲ್ಲಿದ್ದಂತೆ ಆಳೆತ್ತರದ ನಂದಿಯಿರದೇ, ಶಿವನೆದುರು ಪುಟ್ಟ ನಂದಿಯಿದ್ದಾನೆ. ಬೆಳಗ್ಗಿನ ಸಮಯದಲ್ಲಿ ಅಥವಾ ಸಂಜೆ ೫ ರ ಮೇಲೆ ಹೋದರೆ ದೇವರ ದರ್ಶನ ಪಡೆಯಬಹುದು. ಈ ದೇಗುಲದ ಎದುರಿನ ನೆಲದಲ್ಲಿ ಹುಲಿ ಹಸು ಆಟದ ಪಟವನ್ನು, ಹಳಗನ್ನಡದ ಬರಹಗಳನ್ನೂ ಕಾಣಬಹುದು.

ವೀರಭದ್ರ ದೇವಸ್ಥಾನ

ವೀರಭದ್ರನ ಗುಡಿಯ ಮೇಲ್ಛಾವಣಿಯಲ್ಲಿ ಕೆಳದಿ ಸಾಮ್ರಾಜ್ಯದ ಲಾಂಛನ ಗಂಢಭೇರುಂಡವನ್ನು ಕಾಣಬಹುದು. ಆಗ ಕೆಲವು ಸಾರ್ಮಾಜ್ಯಗಳದ್ದು ಆನೆ ಲಾಂಛನವಾಗಿತ್ತು, ಕೆಲವದ್ದು ಸಿಂಹ. ಈ ಆನೆ, ಸಿಂಹಗಳೆರಡನ್ನು ತನ್ನ ಕಾಲುಗಳಲ್ಲಿ ಬಂಧಿಸಿದ ಎರಡು ತಲೆಯ ಗಂಢಭೇರುಂಡವನ್ನು ಲಾಂಛನವನ್ನಾಗಿಸಿದ ಕೆಳದಿಯ ಅರಸರು ತಮ್ಮ ಸಾರ್ಮಾಜ್ಯ ಎಲ್ಲರಿಗಿಂತಲೂ ಶಕ್ತಿಶಾಲಿಯಾಗಿ ಬೆಳೆಯಲೆಂಬ ಆಸೆ ಪಟ್ಟಿದ್ದರು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ವೀರಭದ್ರನ ಗುಡಿಯ ಗರ್ಭಗೃಹದ ಬಾಗಿಲನ್ನು ನೋಡಿದರೆ ಮೇಲ್ಗಡೆ ಕೃಷ್ಣನ ಪುಟ್ಟ ವಿಗ್ರಹ ಕಾಣುತ್ತದೆ. ವಿಜಯನಗರದ ಸಾರ್ಮಾಜ್ಯದ ಶ್ರೀ ಕೃಷ್ಣದೇವರಾಯನಿಗೆ ಸಾಮಂತರಾದ ಕೆಳದಿ ಅರಸರ ಗೌರವವನ್ನು ಇದು ಬಿಂಬಿಸುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಈ ದೇಗುಲದಲ್ಲಿ ಶುಕಭಾಷಿಣಿ, ಗಾರ್ಧಭ ಮಾನವ ಮುಂತಾದ ಕೆತ್ತನೆಗಳನ್ನು ಕಾಣಬಹುದು.ವೀರಭದ್ರ ದೇವಸ್ಥಾನದಿಂದ ಗಂಡಭೇರುಂಡ ಇರುವ ದಿಕ್ಕಿನ ಬಾಗಿಲಲ್ಲಿ ಹೊರಬಂದರೆ ಒಂದು ಧ್ವಜ ಸ್ಥಂಬ ಸಿಗುತ್ತದೆ. ಸಪ್ತ ಮಾತೃಕೆಯರು, ಗಣಪತಿ ಇದರ ವಿಶೇಷತೆ. ಶಿವಾಜಿಯ ಮಗ ರಾಜಾರಾಮನಿಗೆ ಔರಂಗಜೇಬನಿಂದ ರಕ್ಷಣೆ ಕೊಟ್ಟ ಕುರುಹಿನ ಶಿಲ್ಪಗಳು ಎಂದು ಧ್ವಜಸ್ಥಂಭದ ಶಿಲ್ಪಗಳ ಬಗ್ಗೆ ಕೆಲವರು ಅಭಿಪ್ರಾಯ ಪಡುತ್ತಾರೆ. ಇದೇ ಕಂಬದ ಮೇಲೆ ದೇಗುಲ ಸ್ಥಾಪನೆಯ ಬಗ್ಗೆ ಹಳಗನ್ನಡದಲ್ಲಿ ಬರೆಯಲಾಗಿದೆ. ಈ ದೇಗುಲದ ಹೊರ ಗೋಡೆಗಳ ಮೇಲೆ ದಶಾವತಾರದ ಕೆತ್ತನೆಗಳಿವೆ. ಜೊತೆಯಲ್ಲಿ ವಾಸ್ತುಪುರುಷ, ಶುಕಮುನಿ ಮತ್ತು ಗಿಳಿ, ನರಸಿಂಹ ಹೀಗೆ ಹಲವಾರು ಕೆತ್ತನೆಗಳನ್ನು ನೋಡಬಹುದು.

ಹೊರಾಂಗಣ

ದೇಗುಲಗಳ ಹೊರಾಂಗಣದಲ್ಲಿ ಒಂದೆಡೆ ನಾಗರಬನವಿದೆ. ಅದರ ಪಕ್ಕದಲ್ಲಿ ಆಗಿನ ಕಾಲದ ಪಣತವನ್ನು ಕಾಣಬಹುದು.

ವಾಸ್ತುಪುರುಷ

ಇದು ವೀರಭದ್ರ ದೇಗುಲದ ಹೊರಾಂಗಣದ ಪ್ರಮುಖ ಆಕರ್ಷಣೆ. ಸುಧಾರಿತ ಅಳತೆ,ತೆರಿಗೆ ಪದ್ದತಿಗೆ ಒತ್ತುಕೊಟ್ಟರೆಂದು ನಂಬಲಾದ ಕೆಳದಿ ಅರಸರ ಕಾಲದ ಅಳತೆಪಟ್ಟಿಯನ್ನು ಈ ಮೂರ್ತಿಯ ಪಕ್ಕದಲ್ಲಿ ನೋಡಬಹುದು.ವಾಸ್ತುಪುರುಷನ ಪಕ್ಕದಲ್ಲಿ ತಾಗಿಕೊಂಡಿರೋ ವೀರಭದ್ರ ರಾಮೇಶ್ವರ ದೇಗುಲದ ಮಧ್ಯೆ ಒಂದು ಕಳ್ಳದಾರಿ. ವೀರಭದ್ರ ದೇಗುಲದ ಪ್ರಧಾನ ಬಾಗಿಲ ಬಳಿ ತೆರೆಯೋ ಈ ಕಳ್ಳದಾರಿಗೆ ಸಾಗೋ ಮಾರ್ಗದಲ್ಲಿ ರಾಹುಕೇತು, ಸಪ್ತಮಾತೃಕೆಯರು ಮುಂತಾದ ಕೆತ್ತನೆಗಳಿವೆ

ಗೋಪಾಲಕೃಷ್ಣ ದೇವಸ್ಥಾನ

ಕೆಳದಿಯಿಂದ ಸಾಗರದತ್ತ ವಾಪಾಸ್ ಬರುವಾಗ ಗೋಪಾಲಕೃಷ್ಣ ದೇವಸ್ಥಾನವನ್ನು ಅದರ ಪಕ್ಕದಲ್ಲಿರೋ ತೊಟ್ಟಿಲಕೆರೆಯನ್ನೂ ಕಾಣಬಹುದು. ಶಿಥಿಲಾವಸ್ಥೆಯಲ್ಲಿದ್ದ ಈ ದೇಗುಲ ಈಗ ಜೀರ್ಣೋದ್ದಾರಗೊಂಡಿದೆ

ಕೆಳದಿ ಸಂಸ್ಥಾನ

ಹದಿನಾರನೆಯ ಶತಮಾನದ ಆರಂಭದಿಂದ ಹದಿನೆಂಟನೆಯ ಶತಮಾನದ ಉತ್ತರಾರ್ಧದವರೆವಿಗೂ ಸಮೃದ್ದಿಯ ತಾಣವಾಗಿ ಮೆರೆದದ್ದು ಕೆಳದಿ ಸಂಸ್ಥಾನ. ಕರ್ನಾಟಕದ ಮಲೆನಾಡು ಮತ್ತು ಕರಾವಳಿಯ ಭಾಗಗಳೆರಡನ್ನೂ ತನ್ನ ಆಳ್ವಿಕೆಯಡಿಯಲ್ಲಿ ಇಟ್ಟುಕೊಂಡಿದ್ದರು ಈ ಪ್ರಾಂತ್ಯದ ಅರಸರು. ಕೆಳದಿ ಸಂಸ್ಥಾನವನ್ನು ಆಳಿದ ಅರಸರು ಮೊದಲಿಗೆ ವಿಜಯನಗರದ ಅರಸರು ಸಾಮಂತರಾಗಿದ್ದು ಅವರ ಪತನಾನಂತರ ತಮ್ಮದೇ ಆದ ಸ್ವತಂತ್ರ ಅಸ್ತಿತ್ವವನ್ನು ರೂಢಿಸಿಕೊಂಡರು. ಗಂಡಭೇರುಂಡ ಇವರ ಲಾಂಛನವಾಯಿತು.

ಕೆಳದಿ ರಾಮೇಶ್ವರ ದೇವಾಲಯದಲ್ಲಿರುವ 'ಗಂಡಭೇರುಂಡ'ದ ಚಿತ್ರ

ಈ ಸಂಸ್ಥಾನದ ರಾಜಧಾನಿಗಳು ಕ್ರಮವಾಗಿ ಶಿವಮೊಗ್ಗ ಜಿಲ್ಲೆಸಾಗರದಿಂದ ೮ ಕಿ.ಮೀ. ದೂರದ ಕೆಳದಿ, ೫ ಕಿ.ಮೀ. ದೂರದ ಇಕ್ಕೇರಿ, ಹೊಸನಗರ ತಾಲ್ಲೂಕಿನಲ್ಲಿರುವ ಬಿದನೂರು(ನಗರ) ಮತ್ತು ತೀರ್ಥಹಳ್ಳಿಗೆ ೧೫ ಕಿ.ಮೀ. ದೂರ ದಲ್ಲಿರುವ ಕವಲೆದುರ್ಗ. ಆರಂಭದಲ್ಲಿ ಕೇವಲ ಚಂದ್ರಗುತ್ತಿ, ಕೆಳದಿ, ಇಕ್ಕೇರಿ, ಪೆರ್ಬಯಲು, ಎಲಗಳಲೆ, ಮೇದೂರು, ಕಲಸೆ, ಲಾತವಾಡಿ ಸೇರಿದಂತೆ ಎಂಟು ಮಾಗಣೆ(ವಿಭಾಗ)ಗಳನ್ನು ಒಳಗೊಂಡಿದ್ದ ಈ ಸಂಸ್ಥಾನವು ತನ್ನ ಉಚ್ಛ್ರಾಯಸ್ಥಿತಿಯಲ್ಲಿ ಈಗಿನ ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಹಾಸನ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಗಳ ಬಹುಭಾಗ ಮತ್ತು ಧಾರವಾಡ ಜಿಲ್ಲೆ, ಚಿತ್ರದುರ್ಗ ಜಿಲ್ಲೆ, ಉತ್ತರಕನ್ನಡ ಜಿಲ್ಲೆ ಗಳ ಕೆಲವು ಭಾಗಗಳ ಪ್ರಭುತ್ವವನ್ನು ಸಾಧಿಸಿದ್ದಲ್ಲದೆ ಕೇರಳ ರಾಜ್ಯದ ಕೆಲವು ಭಾಗಗಳನ್ನೂ ಒಳಗೊಂಡಿತ್ತು.

ವಾಣಿಜ್ಯ-ಉತ್ಪನ್ನಗಳು

ವಿಸ್ತಾರವಾಗಿದ್ದ ಸಾಮ್ರಾಜ್ಯವನ್ನು ಆಡಳಿತ ಸೌಕರ್ಯಕ್ಕಾಗಿ ಹಲವು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಕೆಳದಿಯ ಪ್ರಸಿದ್ಧ ಅರಸನಾದ ಶಿವಪ್ಪನಾಯಕನು ಜಾರಿಗೆ ತಂದಿದ್ದ ಕಂದಾಯ ವ್ಯವಸ್ಥೆ(ಶಿವಪ್ಪನಾಯಕನ ಶಿಸ್ತು)ಯಿಂದಾಗಿ ಕೃಷಿಕರೂ ನ್ಯಾಯವಾದ ಕಂದಾಯವನ್ನು ಸಲ್ಲಿಸುವಂತಾಗಿತ್ತು. ಇಲ್ಲಿಯ ಪ್ರಮುಖ ಉತ್ಪನ್ನಗಳಾದ ಮೆಣಸು, ಅಡಿಕೆ, ತಂಬಾಕು, ಶ್ರೀಗಂಧ, ಏಲಕ್ಕಿ, ಜೀರಿಗೆ, ಇಂಗು, ಸಾಸಿವೆ, ತೆಂಗು, ಅರಿಸಿನ ಮುಂತಾದ ನೈಸರ್ಗಿಕ ವಸ್ತುಗಳ ಜೊತೆಗೆ ರೇಷ್ಮೆ, ಬೆಲ್ಲ, ಹತ್ತಿಯಬಟ್ಟೆ ಮುಂತಾದ ಉತ್ಪನ್ನಗಳನ್ನು ಇಲ್ಲಿನ ನಿಡಿದಾದ ಕರವಳಿಯ ಬಂದರಿನ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಬದಲಾಗಿ ಅರಬ್ಬೀ ಕುದುರೆಗಳು, ಅನೇಕ ಬೆಲೆಬಾಳುವ ವಿದೇಶಿ ಪದಾರ್ಥಗಳು ಆಮದಾಗುತ್ತಿದ್ದವು. ಇದರೊಂದಿಗೆ ಪಶ್ಚಿಮಸಮುದ್ರದ ಮೂಲಕ ವಿದೇಶಗಳಿಗೆ ಹೋಗಬೇಕಿದ್ದ ಎಲ್ಲ ಸರಕುಗಳೂ ಇಲ್ಲಿಯ ಸುಂಕದಕಟ್ಟೆಯ ಮೂಲಕವೇ ಹಾದು ಹೋಗಬೇಕಾಗಿದ್ದಿದ್ದರಿಂದ ಅಪಾರವಾದ ಸುಂಕವು ಸಂಗ್ರಹವಾಗುತ್ತಿತ್ತು.

ಸಾಂಸ್ಕೃತಿಕ ಅಂಶಗಳು

ಕೆಳದಿ ಅರಸರ ಕಾಲದಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಇಂಬು ಕೊಡಲಾಯಿತು. ಶಿವಮೊಗ್ಗೆಯಲ್ಲಿರುವ ಶಿವಪ್ಪನಾಯಕನ ಅರಮನೆ, ಕೆಳದಿಯ ರಾಮೇಶ್ವರ ದೇವಾಲಯ, ವೀರಭದ್ರ ದೇವಾಲಯ, ಬಿದನೂರು ಆಂಜನೇಯ ದೇವಾಲಯ, ಕೋಟೆಗಳು, ಗುಡ್ಡೆ ವೆಂಕಟರಮಣ ದೇವಾಲಯ, ನೀಲಕಂಠೇಶ್ವರ ದೇವಾಲಯ, ಇಕ್ಕೇರಿಯ ಅಘೋರೇಶ್ವರ ದೇವಾಲಯ, ನಗರದ ಬಳಿ ಇರುವ ದೇವಗಂಗೆ ಮುಂತಾದವು ಕೆಳದಿ ಅರಸರ ವಾಸ್ತುಶಿಲ್ಪ ಚಾತುರ್ಯವನ್ನು ಹೇಳುತ್ತವೆ.

'ಸರ್ಪಬಂಧ'ದ ಸುಂದರ ಕೆತ್ತನೆ
ಕೆಳದಿ ದೇವಸ್ಥಾನದಲ್ಲಿರುವ ದಕ್ಷಬ್ರಹ್ಮ

ಈ ಅರಸರು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಯ ಕವಿ-ವಿದ್ವಾಂಸರಿಗೆ ಆಶ್ರಯವನ್ನಿತ್ತಿದ್ದರು. ಅರಸರೂ ಸಹ ಕವಿ-ವಿದ್ವಾಂಸರುಗಳಾಗಿದ್ದು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಹಿರಿಯ ವೆಂಕಟಪ್ಪನಾಯಕನು ಶಿವಗೀತಾವ್ಯಾಖ್ಯಾ , ವೀರಮಾಹೇಶ್ವರ ಸುಧಾವಾರ್ಧಿ , ಹಾಗೂ ತತ್ವಾಧಿಕಾರ ನಿರ್ಣಯಂ ಎಂಬ ಮೂರು ಕೃತಿಗಳನ್ನು ಬರೆದಿದ್ದಾನೆ. ಹಿರಿಯ ಬಸವಪ್ಪನಾಯಕನು ಶಿವತತ್ವರತ್ನಾಕರ , ಸುಭಾಷಿತ ಸುರದ್ರುಮ, ಸೂಕ್ತಿ ಸುಧಾಕರ ಮುಂತಾದ ಕೃತಿಗಳನ್ನು ರಚಿಸಿದ್ದಾನೆ. ಲಿಂಗಣ್ಣ ಕವಿಕೆಳದಿ ನೃಪವಿಜಯಂ , ಗಂಗಾದೇವಿಯ ಕೆಳದಿ ರಾಜ್ಯಾಭ್ಯುದಯಂ , ತಿರುಮಲ ಭಟ್ಟನ ಕರ್ನಾಟಕ ಶಿವಗೀತೆ , ಪರಮದೇವನ ತುರಂಗ ಭಾರತ ಮುಂತಾದವು ಈ ಕಾಲದ ಪ್ರಸಿದ್ಧ ಕೃತಿಗಳು.

ಕೆಳದಿ ನಾಯಕರ ವಂಶಾವಳಿ

ಕೆಳದಿ ಅರಸರ ಕಾಲದ ಸಾಹಿತ್ಯ ಮತ್ತು ಅಂದಿನ ಶಾಸನಗಳ ವಿಚಾರಗಳನ್ನು ಅನುಸರಿಸಿ ಕೆಳದಿ ನಾಯಕರ ಕಾಲವನ್ನು ಸಂಶೋಧಕರು ಅಂದಾಜಿಸಿದ್ದಾರೆ.

 • ಚೌಡಪ್ಪ (ಸುಮಾರು ೧೫೦೦-೧೫೩೦)

ಚೌಡಪ್ಪನಾಯಕ ಎಂದೂ ಹೆಸರಾದ ಈತ ಪಳ್ಳಿಚೈಲು ಎಂಬ ಹಳ್ಳಿಯಲ್ಲಿ ರೈತ ದಂಪತಿಗಳ ಮಗನಾಗಿ ಜನಿಸುತ್ತಾನೆ. ಸ್ವಸಾಮರ್ಥ್ಯದಿಂದ ತನ್ನದೇ ಪಾಳೆಯಪಟ್ಟನ್ನು ಕಟ್ಟಿಕೊಂಡು ನಾಯಕನಾಗಿ ಬೆಳೆಯುತ್ತಾನೆ.

 • ಸದಾಶಿವ ನಾಯಕ (ಸುಮಾರು ೧೫೩೦-೧೫೬೭)

ಚೌಡಪ್ಪನಾಯಕನ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವನು ಸದಾಶಿವ ನಾಯಕ. ಕಿರಿಯವನು ಭದ್ರಪ್ಪನಾಯಕ. ಸದಾಶಿವ ನಾಯಕನು ವಿಜಯನಗರದ ವಿರೋಧಿಗಳನ್ನು ಹಿಮ್ಮೆಟ್ಟಿಸಿ ಕೇರಳ ರಾಜ್ಯದ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾನೆ. ಸದಾಶಿವ ನಾಯಕನಿಗೆ ಮೂವರು ಮಕ್ಕಳಿದ್ದು ಅವರುಗಳು ತಂದೆಯ ನಂತರ ಸುಮಾರು ಮೂವತ್ತು (೧೫೬೭ ರಿಂದ೧೫೮೨)ವರುಷಗಳ ರಾಜ್ಯಭಾರ ಮಾಡುತ್ತಾರೆ.

 • ವೆಂಕಟಪ್ಪ ನಾಯಕ (೧೫೮೨-೧೬೨೯)

ಸಮರ್ಥ ಅರಸನಾಗಿದ್ದ ಈತನ ಕಾಲ್ದಲ್ಲಿ ಸಂಸ್ಥಾನವು ಸಂಪೂರ್ಣ ಸ್ವತಂತ್ರವಾಗುತ್ತದೆ. ಕೆಳದಿಯ ಮೇಲೆ ದಂಡೆತ್ತಿ ಬರುವ ಬಿಜಾಪುರದ ಸುಲ್ತಾನನನ್ನು ಸೋಲಿಸಿ ಅದರ ಸಂಕೇತವಾಗಿ ಹಾನಗಲ್ನಲ್ಲಿ ವಿಜಯಸ್ಥಂಭವನ್ನು ಸ್ಥಾಪಿಸುತ್ತಾನೆ. ಈತನ ಮೊಮ್ಮಗನಾದ ವೀರಭದ್ರ ನಾಯಕನ(೧೬೨೯-೧೬೪೫) ಕಾಲದಲ್ಲಿ ರಾಜ್ಯವು ಪದೇಪದೆ ಅನ್ಯರ ಧಾಳಿಗೆ ತುತ್ತಾಗುತ್ತದೆ. ಪೋರ್ಚುಗೀಸರು ಮತ್ತು ಆದಿಲ್ ಶಾಹಿಗಳು ಕೆಳದಿಯನ್ನು ಕಬಳಿಸಲು ಯತ್ನಿಸುತ್ತಾರೆ.

 • ಶಿವಪ್ಪನಾಯಕ (೧೬೪೫-೧೬೬೦)

ಕೆಳದಿ ಸಂಸ್ಥಾನವು ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿದ್ದು ಈತನ ಕಾಲದಲ್ಲೆ. ರಾಜಧಾನಿಯಾಗಿದ್ದಬಿದನೂರುನಗರವನ್ನು ಅಭಿವೃದ್ಧಿಪಡಿಸಿ ಕೋಟೆಗಳನ್ನು ನಿರ್ಮಿಸಿದನು. ದೇಶದ ನಾನಾ ಭಾಗಳ ವ್ಯಾಪಾರಿಗಳನ್ನೂ ಕುಶಲಕರ್ಮಿಗಳನ್ನೂ ಆಕರ್ಷಿಸಿ ವ್ಯಾಪಾರ-ವಾಣಿಜ್ಯವನ್ನು ಉತ್ತಮ ಪಡಿಸಿದನು. ಈತನ ಆಡಳಿತ ವ್ಯವಸ್ಥೆಯು ಶಿವಪ್ಪನಾಯಕನ ಶಿಸ್ತು ಎಂದು ಪ್ರಸಿದ್ಧವಾಯಿತು. ಪೋರ್ಚುಗೀಸರನ್ನೂ ಸೋಲಿಸಿದ ಹೆಗ್ಗಳಿಕೆ ಇವನದು. ಇವನ ನಂತರ ೧೨ ವರುಷಗಳ ಕಾಲ ಕೆಳದಿಯ ವೈಭವವು ಕೊಂಚ ಮಂಕಾಯಿತು.

 • ಎರಡನೆ ವೆಂಕಟಪ್ಪ ನಾಯಕ (೧೬೬೦-೧೬೬೧)
 • ಭದ್ರಪ್ಪ ನಾಯಕ (೧೬೬೧-೧೬೬೩)
 • ಹಿರಿಯ ಸೋಮಶೇಖರ ನಾಯಕ(೧೬೬೩-೧೬೭೧)
 • ಚೆನ್ನಮ್ಮ (೧೬೭೧-೧೬೯೭)

ಹಿರಿಯ ಸೋಮಶೇಖರ ನಾಯಕನ ಪತ್ನಿಯಾದ ಈಕೆಯು ಮಂಕಾಗಿದ್ದ ಕೆಳದಿ ಸಂಸ್ಥಾನವನ್ನು ತನ್ನ ಸಾಹಸ ಹಾಗೂ ಸಾಮರ್ಥ್ಯಗಳಿಂದ ಉತ್ತಮಗೊಳಿಸಿದಳು. ಹುಲಿಕೆರೆ ಎಂಬಲ್ಲಿ ಕೋಟೆಯನ್ನು ಕಟ್ಟಿಸಿ ಅದಕ್ಕೆ ಚೆನ್ನಗಿರಿ ಎಂದು ಹೆಸರಿಟ್ಟಳು. ಶಿವಾಜಿಯ ಮಗನಾದ ರಾಜಾರಾಮನಿಗೆ ಆಶ್ರಯವನ್ನು ನೀಡಿ ಔರಂಗಜೇಬನಂತಹ ಪ್ರಬಲನನ್ನು ಎದುರಿಸಿದ ದಿಟ್ಟೆ ಈಕೆ.

 • ಬಸವಪ್ಪನಾಯಕ (೧೬೯೨-೧೭೧೪)
 • ಇಮ್ಮಡಿ ಸೋಮಶೇಖರ ನಾಯಕ (೧೭೧೪-೧೭೩೧)
 • ಇಮ್ಮಡಿ ಬಸವಪ್ಪ ನಾಯಕ (೧೭೩೧-೧೭೫೪)
 • ವೀರಮ್ಮಾಜಿ -ಚೆನ್ನಬಸವನಾಯಕ

ಇಮ್ಮಡಿ ಬಸವಪ್ಪ ನಾಯಕನ ಕಾಲದವರೆವಿಗೂ ಉತ್ತಮವಾಗಿಯೇ ಇದ್ದ ಆಡಳಿತವು ವೀರಮ್ಮಾಜಿಯ ಕಾಲದಲ್ಲಿ ಹಿಡಿತ ತಪ್ಪಿ ಗೊಂದಲಗಳ ಗೂಡಾಗುತ್ತದೆ. ಈಕೆಯ ಮಗನಾದ ಚೆನ್ನಬಸವ ನಾಯಕ(೧೭೫೪-೧೭೫೬)ನು ಸಮರ್ಥನಾಗಿದ್ದರೂ ಸಹ ಅಧಿಕಾರವನ್ನು ಬಿಟ್ಟುಕೊಡದ ತಾಯಿ ಮತ್ತು ಆಂತರಿಕ ಹಿತಾಸಕ್ತಿಗಳ ದೆಸೆಯಿಂದ ಈತನಿಗೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಈ ದೌರ್ಬಲ್ಯವನ್ನು ಅರಿಯುವ ಹೈದರಾಲಿಯು ಕೆಳದಿಯ ಮೇಲೆ ೧೭೬೩ರಲ್ಲಿ ಆಕ್ರಮಣ ಮಾಡುವುದರೊಂದಿಗೆ ಸಂಸ್ಥಾನವು ಅವನತಿಯ ಹಾದಿಯನ್ನು ಹಿಡಿಯುತ್ತದೆ.

ಕೆಳದಿ ನಾಯಕರ ನಾಣ್ಯಗಳು

ಕೆಳದಿ ನಾಯಕರು ವಿಜಯನಗರದ ನಾಣ್ಯ ಪಧ್ಧತಿಯನ್ನೇ ಅನುಕರಿಸಿದ್ದಾರೆ. ನಮೂನೆ, ಚಿಹ್ನೆ ಮತ್ತು ತೂಕಗಳಲ್ಲಿ ಸಾಮ್ಯತೆಯು ಕಂಡುಬರುತ್ತದೆ. ಕೆಳದಿ ರಾಜ್ಯದ ಟಂಕಶಾಲೆಯು ಬಿದನೂರು ಮತ್ತು ಇಕ್ಕೇರಿ ಗಳಲ್ಲಿ ಇದ್ದೀತೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಶಾಸನಗಳು ಮತ್ತು ಬರೆಹಗಳನ್ನು ಆಧರಿಸಿ ನಾಯಕರ ಕಾಲದ ನಾಣ್ಯ ಪದ್ಧತಿಯ ಕೋಷ್ಟಕವನ್ನು ಹೀಗೆ ರಚಿಸಲಾಗಿದೆ.

 • ವರಹ = ಗದ್ಯಾಣ =೫೨ ಗ್ರೈನ್ = ೨ ಹೊನ್ನು
 • ೧ ಹೊನ್ನು = ೨ ಧರಣ = ೨೬ ಗ್ರೈನ್ = ೫ ಹಣ
 • ೩/೪ ಹಣ = ಮುಪ್ಪಾಗ = ೩.೫ ಗ್ರೈನ್
 • ೧ ಹಣ =೨ ಅಡ್ಡ = ೫ ಗ್ರೈನ್
 • ೧ ಅಡ್ಡ = ೨ ಹಾಗ = ೨.೫ ಗ್ರೈನ್
 • ೧ ಹಾಗ = ೨ ಬೇಳೆ = ೧.೨೫ ಗ್ರೈನ್
 • ೧ ಹಾಗ = ೪ ವೀಸ = ೧.೨೫ ಗ್ರೈನ್
 • ೧ ವೀಸ = ೨ ಅರೆವೀಸ = ೦.೬ ಗ್ರೈನ್
 • ೧ ಹಾಗ = ೧೬ ಕಾಸು = ೧.೨೫ ಗ್ರೈನ್
 • ೧ ತಾರ = ೪ ಕಾಸು
 • ೧ ಅರೆವೀಸ = ೨ ಕಾಸು

ಕೆಳದಿ ನಾಯಕರ ಚಿನ್ನದ ನಾಣ್ಯಗಳು ಹೆಚ್ಚು ದೊರೆತಿಲ್ಲವಾದರೂ ಪ್ರಸಿದ್ಧವಾದ ಇಕ್ಕೇರಿ ವರಹವನ್ನು ಸದಾಶಿವ ನಾಯಕನು ಅಚ್ಚು ಮಾಡಿಸಿದನೆಂದು ಹೇಳಲಾಗಿದೆ. ಈ ನಮೂನೆಯ ನಾಣ್ಯದ ಒಂದು ಬದಿಯಲ್ಲಿ ಶಿವ-ಪಾರ್ವತಿಯರ ಚಿತ್ರವಿದ್ದು ಇನ್ನೊಂದು ಬದಿಯಲ್ಲಿ ಶ್ರೀ ಸದಾ/ಶಿವ ಎಂದು ನಾಗರಿಯಲ್ಲಿ ಬರೆಯಿಸಲಾಗಿದೆ. ಹಾಗೆಯೇ ಗಂಡಭೇರುಂಡ, ನಂದಿಯ ಚಿತ್ರಗಳೂ ನಾಣ್ಯಗಳಲ್ಲಿ ಕಂಡು ಬರುತ್ತದೆ.

ಕೆಳದಿ ವಸ್ತುಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರ

ಕೆಳದಿಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರವನ್ನು ನೋಡಬಹುದು. ಕೆಳದಿ ಅರಸರ ಕಾಲದ ಇತಿಹಾಸದ ಪರಿಚಯ ಮಾಡಿಕೊಡುವ ಇಲ್ಲಿರುವ ಕೆಳದಿಯರಸರ ಅಥವಾ ಅದಕ್ಕಿಂತಲೂ ಹಿಂದೆ ಸಿಕ್ಕಿದ ಪ್ರಮುಖ ಶಿಲ್ಪಗಳೆಂದರೆ

 1. ನಂದಿಯ ಮೇಲಿನ ಶಿವಲಿಂಗ
 2. ಲಕ್ಷ್ಮೀನಾರಾಯಣ
 3. ಚೆನ್ನಕೇಶವ
 4. ಭೈರವ
 5. ಮಹಿಷಾಸುರ ಮರ್ಧಿನಿ
 6. ಆಂಜನೇಯ
 7. ಕೆಳದಿಯರಸರ ಕಾಲದ ಇಟ್ಟಿಗೆ ಹಂಚುಗಳು
 8. ತೂಕ/ವ್ಯಾಯಾಮದ ಕಲ್ಲುಗಳು
 9. ಯಲಕುಂದ್ಲಿಯಲ್ಲಿ ದೊರೆತ ರಾಚಮ್ಮದೇವಿಯ ಶಿಲ್ಪ
 10. ವಾಸ್ತುಕಂಬ
 11. ಜೈನ ತೀರ್ಥಂಕರರು
 12. ಕೆಳದಿಯರಸರ ಕುದುರೆ ಲಾಳ,ಕವಣೆ ಕಲ್ಲು, smoke bomb,ಶಿಲಾಯಗ ಕಾಲದ ಆಯುಧಗಳು
 13. ಅಕ್ಕಿ ಬೀಸೋ ಕಲ್ಲು
 14. ಪಾರ್ಶ್ವನಾಥ
 15. ಮಣ್ಣಿನ ವಸ್ತುಗಳು
 16. ಗಣಪತಿ
 17. ಮಡಿಕೆಗಳು
 18. ಮರದ ತೊಟ್ಟಿಲು
 19. ಜೈನರ ಬ್ರಹ್ಮದೇವ
 20. ಹೂವಿನ ರಸದಿಂದ ಚಿತ್ರಗಳನ್ನು ರಚಿಸುತ್ತಿದ್ದ ಎಸ್.ಕೆ.ಲಿಂಗಣ್ಣ ಅವರ ಭಾವಚಿತ್ರ
 21. ರಾಜರ ಕಾಲದ ಖಡ್ಗಗಳು
 22. ರಥದ ಮುಂಭಾಗದ ಭಾಗಗಳು
 23. ಮಸಾಲೆ ಅರೆಯುವ ಕಲ್ಲು
 24. ಮದಕಗಳು
 25. ತುಳಸೀ ಕಟ್ಟೆ
 26. ಕೆಳದಿ ಸಂಸ್ಥಾನಕ್ಕೆ ಬಂದ ಪತ್ರಗಳು,ಮೈಸೂರರಸರ ಮದುವೆಯ ಪತ್ರ ಇತ್ಯಾದಿ
 27. ಕಾಲುಗ
 28. ಹೂವು ಹಣ್ಣಿನ ರಸದಲ್ಲಿನ ಎಸ್.ಕೆ.ಲಿಂಗಣ್ಣ ಅವರ ಪೈಂಟಿಂಗುಗಳು
 29. ತಾಳೇಗರಿಗಳು
 30. ತಾಳೇ ಗರಿ ಕಟ್ಟಲು ಬಳಸೋ ಪಟ್ಟಿ, ಆಗಿನ ಕಾಲದ ಶಾಹಿಯ ಲೇಖನಿಗಳು
 31. ಶಿವಪ್ಪನಾಯಕನ ಫೋಟೋ
 32. ಅಚ್ಚರಾದಿ ಮಾರ್ಗ
 33. ಪ್ರಪಂಚದ ಭೂಪಟವನ್ನು ತೋರಿಸುವ ರಾಣಿ ವಿಕ್ಟೋರಿಯಾ ಪೈಟಿಂಗ್
 34. ಸಣ್ಣ ಅಕ್ಷರಗಳಲ್ಲಿ ಬರೆದ ಭಗವದ್ಗೀತೆಯ ಶ್ಲೋಕಗಳಿಂದಲೇ ರಚಿತವಾದ ಭಗವದ್ಗೀತಾ ಪೈಂಟಿಂಗ್
 35. ವಿಠಲ
 36. ರಥದ ಬಿಡಿಭಾಗಗಳು

ಪಕ್ಕದಲ್ಲಿರೋ ವಿಭಾಗದಲ್ಲಿ ಕೆಳದಿಯರಸರು ತೋಂಟಗಾರ ದಂಬಾಳ ಮಠಕ್ಕೆ ಕೊಟ್ಟ ಪಲ್ಲಕ್ಕಿ ಘಂಟೆ,ಶೃಂಗೇರಿ ಮಠಕ್ಕೆ ಕೊಟ್ಟ ಸ್ಫಟಿಕೆ ಲಿಂಗ, ಹೀಗೆ ಬೇರೆ ಬೇರೆ ಮಠ, ಮಂದಿರಗಳಿಗೆ ಕಾಣಿಕೆ ಕೊಟ್ಟ ವಸ್ತುಗಳ ಫೋಟೋ ಮಾಹಿತಿಯನ್ನು, ಯಕ್ಷಗಾನದ ಪರಿಕರಗಳು, ಸಂಗೀತ ವಾದ್ಯಗಳು ಮುಂತಾದವನ್ನೂ ಕಾಣಬಹುದು. ಮೇಲಿನ ಕೋಣೆಯಲ್ಲಿ ತಾಳೇಗರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲಾಗಿದೆ

ದಂತಕಥೆಗಳು

ಯಾದವ ಮುರಾರಿಯರ ಕಥೆ

ಕೆಳದಿಗೆ ಹೋಗ್ತಾ ನಮ್ಮೂರು ದಾಟಿದ ಮೇಲೆ ಸಿಗೋ ಊರು ಹಳ್ಳಿಬೈಲು. ಕೆಳದಿಯಲ್ಲಿ ಈಗಿರೋ ರಾಮೇಶ್ವರ, ವೀರಭದ್ರ ದೇವಸ್ಥಾನಗಳ ಕಾಲಕ್ಕೆ ಹೋಗೋಣ. ಹಳ್ಳಿಬೈಲಲ್ಲಿದ್ದ ಚೌಡಗೌಡ, ಭದ್ರಗೌಡ ಎಂಬ ಅಣ್ಣತಮ್ಮಂದಿರಿಗೆ ಯಾದವ, ಮುರಾರಿ ಎಂಬ ಸೇವಕರು. ಒಮ್ಮೆ ಚೌಡಗೌಡನಿಗೆ ಹೊಲ ಉಳುವ ಸಮಯದಲ್ಲಿ ನೇಗಿಲಿಗೆ ನಿಧಿಯ ಕೊಪ್ಪರಿಗೆಯ ಬಾಯಿ ಸಿಗುತ್ತದೆ. ಅದನ್ನು ತೆಗೆಯಲು ಹೆದರಿ ಹಾಗೇ ಬಿಟ್ಟ ಆತನಿಗೆ ರಾತ್ರಿ ನರಬಲಿ ಕೊಟ್ಟರೆ ಆ ನಿಧಿಯನ್ನು ಪಡೆಯಬಹುದೆಂಬ ಕನಸು ಬೀಳುತ್ತದೆ. ಒಡೆಯನಿಗಾಗಿ ಯಾದವ, ಮುರಾರಿ ತಮ್ಮ ನಾಗಮುರಿ ಕತ್ತಿಯಲ್ಲೇ ಬಲಿಯಾಗುತ್ತಾರೆ. ನಂತರ ಪಡೆದ ಸಂಪತ್ತಿನಿಂದ ಚೌಡಗೌಡ ಪುಟ್ಟ ಪಾಳೇಗಾರನಾಗಿ ಸುತ್ತಮುತ್ತಲ ಊರುಗಳನ್ನು ಆಳಲಾರಂಭಿಸುತ್ತಾನೆ. ಸುದ್ದಿ ತಿಳಿದ ವಿಜಯನಗರ ಅರಸರು ಈತನನ್ನು ಬಂಧಿಸುತ್ತಾರೆ.ಅದೇ ಸಮಯದಲ್ಲಿ ಬೈಲಹೊಲದ ಪಾಳೇಗಾರ ವಿಜಯನಗರದ ವಿರುದ್ದ ದಂಗೆ ಎದ್ದಿರುತ್ತಾನೆ. ಅವನನ್ನು ಸದೆ ಬಡಿದ ಚೌಡಗೌಡನ ಮತ್ತೆ ವಿಜಯನಗರದ ಕೃಪೆಗೆ ಪಾತ್ರನಾಗಿ ಮುದ್ರೆಯೊಂದನ್ನು ಪಡೆಯುತ್ತಾನೆ. ಹುಟ್ಟೂರಿಗೆ ಮರಳಿ ರಾಮೇಶ್ವರ ದೇವಸ್ಥಾನವನ್ನು ಕಟ್ಟಿಸುತ್ತಾನೆ. ನಂತರ ಕೆಳದಿ ವೀರಭೂಮಿ ಎಂದರಿತು ಅಲ್ಲೇ ವಿಜಯನಗರಕ್ಕೆ ಅಧೀನನಾಗಿ ತನ್ನ ಸಾರ್ಮಾಜ್ಯ ಸ್ಥಾಪಿಸುತ್ತಾನೆ. ನಂತರ ವಿಜಯನಗರದ ಸದಾಶಿವರಾಯನ ಕೃಪೆಗೆ ಪಾತ್ರ ಎಂದು ಈತನ ಮಗ ಸದಾಶಿವನಾಯಕನೆಂದು ರಾಜ್ಯವಾಳಲು ಪ್ರಾರಂಭಿಸುತ್ತಾನೆ.

ರಾಮೇಶ್ವರ ಶಿವಲಿಂಗ ಸಿಕ್ಕ ಕತೆ

ಹೀಗೇ ಒಂದು ದಿನ ಹೊಲವೊಂದರ ಹುತ್ತದ ಮೇಲೆ ಹಸು ಹಾಲು ಸುರಿಸುತ್ತಿರುವ ಆಶ್ಚರ್ಯದ ದೃಶ್ಯವನ್ನು ಚೌಡ ನಾಯಕ‌ ನೋಡುತ್ತಾನೆ. ಆ ಹುತ್ತವನ್ನು ಅಗೆದು ನೋಡಿದಾಗ ಅಲ್ಲೊಂದು ಶಿವಲಿಂಗ ಸಿಗುತ್ತದೆ.ಅದಕ್ಕೆ ಪುಟ್ಟಗುಡಿಯನ್ನು ಕಟ್ಟಿಸುತ್ತಾನೆ. ನಂತರ ವಿಜಯನಗರ ಸಾಮ್ರಾಜ್ಯದ ಮೊಹರನ್ನು ಪಡೆದು, ಅವರ ಅಧೀನರೆಂದು ಸಾಮ್ರಾಜ್ಯ ಕಟ್ಟೋ ಸಂಭ್ರಮದಲ್ಲಿ ರಾಮೇಶ್ವರ ದೇಗುಲವನ್ನು ಕಟ್ಟಿಸುತ್ತಾನೆ

ನಾಗರಮುರಿ

ಯಾದವ, ಮುರಾರಿ ಸಹೋದರರು ಒಮ್ಮೆ ಹೊಲವೂಳುತ್ತಿದ್ದಾಗ ಖಡ್ಗವೊಂದು ಅವರ ನೇಗಿಲಿಗೆ ಸಿಗುತ್ತದೆ. ಅದರ ಮಹತ್ವವೇನೆಂದು ಅರಿಯದಿದ್ದರೂ ಅದನ್ನು ತಂದು ಮನೆಯ ಸೂರಿನ ಮೇಲೆ ಇಡುತ್ತಾರೆ. ಕೆಲದಿನಗಳಲ್ಲೇ ಮನೆಯ ಸೂರಿನ ಮೇಲೆ ಬಂದು ಕೂರುವ ಯಾವುದೇ ಹಕ್ಕಿಯನ್ನು ಈ ಕತ್ತಿ ಹಾವಿನ ರೂಪ ತಾಳಿ ಕೊಲ್ಲುವ ಸೋಜಿಗವನ್ನು ಈ ಅಣ್ಣತಮ್ಮಂದಿರು ನೋಡುತ್ತಾರೆ. ಅಂದೇ ಅದನ್ನು ನಾಗರಮುರಿ ಅಂತ ಹೆಸರಿಟ್ಟು, ಚೆನ್ನಾಗಿ ತೊಳೆದು ಮನೆಯ ಒಳಗೆ ತಂದು ಇಡುತ್ತಾರೆ.

ಕೆಳದಿಯೆಂಬೋ ವೀರನೆಲ

ಕೆಳದಿ ಚೌಡಪ್ಪಗೌಡ/ಚೌಡಪ್ಪನಾಯಕ ವಿಜಯನಗರದಿಂದ ತನ್ನೂರಿಗೆ ಮರಳುತ್ತಿರುವಾಗ ಒಂದೆಡೆ ಚಿಗರೆಯೊಂದು ಚಿರತೆಯನ್ನು ಬೆನ್ನಟ್ಟೋ ದೃಶ್ಯವನ್ನು ನೋಡುತ್ತಾನೆ. ಈ ಅಪೂರ್ವ ದೃಶ್ಯದಿಂದ ಬೆರಗಾದ ಆತ ಈ ನೆಲ ಸಾಮಾನ್ಯದ್ದಲ್ಲ. ಇದು ವೀರಭೂಮಿ ಎಂದು ತನ್ನ ಸಾಮ್ರಾಜ್ಯವನ್ನು ಅಲ್ಲೇ ಪ್ರಾರಂಭಿಸುತ್ತಾನೆ. ಕೆಳದಿಯ ಸುತ್ತಮುತ್ತಲು ಈಗಲೂ ಅಲ್ಲಲ್ಲಿ ಯುದ್ದದಲ್ಲಿ ಮಡಿದ ವೀರರ ವೀರಗಲ್ಲುಗಳು, ಸತಿಯಾದವರ ಸತಿ ಕಲ್ಲುಗಳು ಸಿಕ್ಕುತ್ತವೆ.

ತಲುಪುವ ಬಗೆ

ಕೆಳದಿಗೆ ಶಿವಮೊಗ್ಗದಿಂದ ೮೦ ಕಿ.ಮೀ, ಸಾಗರದಿಂದ ೮ ಕಿ.ಮೀ ದೂರ. ಸಾಗರದಿಂದ ಕನಿಷ್ಟ ಪ್ರತೀ ಅರ್ಧಗಂಟೆಗಾದರೂ ಒಂದರಂತೆ ಕೆಳದಿಗೆ ಬಸ್ಸುಗಳಿವೆ.

ಕೆಳದಿ ಸಂಸ್ಥಾನದ ಬಗ್ಗೆ ಈವರೆಗೆ ಬಂದ ಪುಸ್ತಕಗಳು

ಆಕರ ಲೇಖಕರು/ಸಂಪಾದಕರು ಇಸವಿ ಪ್ರಕಾಶಕರು
ಎಪಿಗ್ರಾಫೀಯ ಕರ್ನಾಟಕ ಸಂ. ೮ (ಸಾಗರ ತಾಲ್ಲೂಕು)[೧] ಬಿ ಎಲ್ ರೈಸ್ ೧೮೯೪ ಮೈಸೂರು ಗವರ್ನಮೆಂಟ್ ಸೆಂಟ್ರಲ್ ಪ್ರೆಸ್, ಬೆಂಗಳೂರು
ಲಿಂಗಣ್ಣ ಕವಿ ವಿರಚಿತ ಕೆಳದಿ ನೃಪವಿಜಯಂ ಆರ್. ಶಾಮಾಶಾಸ್ತ್ರಿ ೧೯೨೧ ಮೈಸೂರು
ಪ್ರವಾಸಿ ಕಂಡ ಭಾರತ (ಸಂ ೪/೫) ಹೆಚ್ ಎಲ್ ನಾಗೇಗೌಡ ೧೯೭೪ ಐ ಬಿ ಎಚ್ ಪ್ರಕಾಶನ
ಇಕ್ಕೇರಿಯ ಐತಿಹಾಸಿಕ ಹಿನ್ನಲೆ ಕೆಳದಿ ಗುಂಡಾಜೋಯಿಸ್ ೧೯೭೫ ಕೆಳದಿ ವಸ್ತು ಸಂಗ್ರಹಾಲಯ
ಕೆಳದಿ ಅರಸರು ಮತ್ತು ಕನ್ನಡ ಸಾಹಿತ್ಯ ಸಾ. ಶಿ. ಮರುಳಯ್ಯ ೧೯೮೦ ಬೆಂಗಳೂರು ವಿಶ್ವವಿದ್ಯಾಲಯ
ಕೆಳದಿ ಅರಸರ ಕಾಲದ ವಾಸ್ತು ಮತ್ತು ಮೂರ್ತಿ ಶಿಲ್ಪ - ೧ ಎ ಸುಂದರ ೧೯೮೬ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ
ಕೆಳದಿ ಅರಸರ ಶಾಸನ ಸಂಪುಟ ಡಾ. ಕೆಳದಿ ವೆಂಕಟೇಶ್ ಜೊಯಿಸ್ ೧೯೯೧ ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠ, ಗದಗ
ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಡಾ. ಕೆಳದಿ ವೆಂಕಟೇಶ್ ಜೊಯಿಸ್ ೧೯೯೬ ಕಸಾಪ, ಬೆಂಗಳೂರು
ಕೆಳದಿ ಸಂಸ್ಥಾನ ಡಾ. ಕೆಳದಿ ವೆಂಕಟೇಶ್ ಜೊಯಿಸ್ ೨೦೦೦ ಶ್ರೀ ಸರಸ್ವತಿ ಸೇವಾ ಸಮಿತಿ, ಕೆಳದಿ
ಮರೆಯಲಾಗದ ಕೆಳದಿ ಸಾಮ್ರಾಜ್ಯ ಡಾ. ಕೆಳದಿ ವೆಂಕಟೇಶ್ ಜೊಯಿಸ್ ೨೦೦೮ ಶ್ರೀ ಸರಸ್ವತಿ ಸೇವಾ ಸಮಿತಿ, ಕೆಳದಿ
The Unforgettable Keladi Empire (ಮರೆಯಲಾಗದ ಕೆಳದಿ ಸಾಮ್ರಾಜ್ಯ - ಆಂಗ್ಲ ತರ್ಜುಮೆ) ಕವಿ ಸುರೇಶ ೨೦೦೮ ಶ್ರೀ ಸರಸ್ವತಿ ಸೇವಾ ಸಮಿತಿ, ಕೆಳದಿ
Glorious Keladi (ಇಂಗ್ಲಿಷ್ ಮತ್ತು ಕನ್ನಡ) ಕೆಳದಿ ಗುಂಡಾಜೋಯಿಸ್ ೨೦೧೧ ಕರ್ನಾಟಕ ಸರ್ಕಾರ

ಉಲ್ಲೇಖಗಳು

ಮಾಹಿತಿ ಮೂಲ ಗ್ರಂಥಗಳು: ಕನ್ನಡ ವಿಷಯ ವಿಶ್ವಕೋಶ, ಕರ್ನಾಟಕ ನಾಣ್ಯ ಪರಂಪರೆ, ಎಪಿಗ್ರಾಫಿಕಾ ಕರ್ನಾಟಕ[೧]

ಇದನ್ನೂ ನೋಡಿ

ಚಿತ್ರಗಳು

 1. ೧.೦ ೧.೧ Epigraphia carnatica. By B. Lewis Rice, Director of Archaeological Researches in Mysore, ೧೮೯೪
"https://kn.wikipedia.org/w/index.php?title=ಕೆಳದಿ&oldid=1202293" ಇಂದ ಪಡೆಯಲ್ಪಟ್ಟಿದೆ