ಭದ್ರಾವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭದ್ರಾವತಿ
ಬೆಂಕಿಪುರ, ವೆಂಕಿಪುರ
ನಗರ
ಉಕ್ಕಿನ ನಗರ
ಉಕ್ಕಿನ ನಗರ
Nickname(s): 
ಉಕ್ಕಿನ ನಗರ
ವಿದ್ಯುತ್ ಜಾಲದಕ್ಷಿಣ ಜಾಲ
ದೇಶ ಭಾರತ
ರಾಜ್ಯ ಕರ್ನಾಟಕ
ವಿಭಾಗಮೈಸೂರು
ಪ್ರದೇಶಮಲೆನಾಡು
ಜಿಲ್ಲೆಶಿವಮೊಗ್ಗ
ತಾಲ್ಲೂಕುಭದ್ರಾವತಿ
ಸ್ಥಾಪಿಸಿದವರುಸರ್ ಎಂ ವಿಶ್ವೇಶ್ವರಯ್ಯ
ಹೆಸರಿಡಲು ಕಾರಣಉಕ್ಕಿನ ಕಾರ್ಖಾನೆ
ಕೇಂದ್ರ ಕಛೇರಿಭದ್ರಾವತಿ
Area
 • Total೬೭.೦೫೩೬ km (೨೫.೮೮೯೫ sq mi)
Elevation
೫೯೪ m (೧,೯೪೯ ft)
Population
 (೨೦೧೧)
 • Total೧,೫೧,೧೦೨
 • ಸಾಂದ್ರತೆ೨,೩೦೦/km (೬,೦೦೦/sq mi)
 • ಪುರುಷರು
೭೫,೦೦೯
 • ಮಹಿಳೆಯರು
೭೬,೦೯೩
ಸಮಯ ವಲಯಯುಟಿಸಿ+೫:೩೦ (ಐ. ಎಸ್. ಟಿ)
ಪಿನ್
೫೭೭೩೦೧, ೫೭೭೩೦೨
ದೂರವಾಣಿ ಕೋಡ್೯೧ ೮೨೮೨
ವಾಹನ ನೋಂದಣಿಕೆ.ಏ-೧೪

ಭದ್ರಾವತಿ ಭಾರತ ದೇಶದ, ಕರ್ನಾಟಕ ರಾಜ್ಯದ, ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಕೈಗಾರಿಕಾ ಪಟ್ಟಣ. ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. 'ಕರ್ನಾಟಕದ ಉಕ್ಕಿನ ನಗರ'ವೆಂದು ಕರೆಯಲ್ಪಡುವ ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೫೫ ಕಿಲೋಮೀಟರ್ ಮತ್ತು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ೧೮ ಕಿಲೋಮೀಟರ್ ದೂರದಲ್ಲಿದೆ. ಈ ಪಟ್ಟಣವು ೬೭ ಚದರ ಕಿ.ಮೀ ಕ್ಷೇತ್ರಫಲ ಮತ್ತು ೨೦೦೧ ಜನಗಣತಿಯ ಪ್ರಕಾರ ೧,೬೦,೬೬೨ ಜನ ಸಂಖ್ಯೆ ಹೊಂದಿದೆ. ಇತ್ತೀಚಿನ ಚರಿತ್ರೆಯಲ್ಲಿ ಭದ್ರಾವತಿಯು ೧೯೧೮ರಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಹೆಸರಾಯಿತು. ಅನಂತರ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂದು ನಾಮಕರಣಗೊಂಡ ಇದು ಒಂದು ದೊಡ್ಡ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಸೌಕರ್ಯ ಹೊಂದಿದ್ದು ಭದ್ರಾವತಿಯ ಮುಖ್ಯ ಭಾಗವಾಗಿದೆ. ಕಾರ್ಖಾನೆಗಳ ಪಟ್ಟಣ ಎಂಬ ಪ್ರಖ್ಯಾತಿಯನ್ನು ಹೆಚ್ಚಿಸಿದ್ದು ೧೯೩೬ರಲ್ಲಿ ಸ್ಥಾಪಿಸಲಾದ ಮೈಸೂರು ಕಾಗದ ಕಾರ್ಖಾನೆ.

ಚರಿತ್ರೆ[ಬದಲಾಯಿಸಿ]

ಭದ್ರಾವತಿಯಲ್ಲಿರುವ ೧೩ನೇ ಶತಮಾನದ ಲಕ್ಷ್ಮೀನರಸಿಂಹ ದೇವಾಲಯದ ಎಡಗೋಪುರ

ಭದ್ರಾವತಿಯ ಹೆಸರು ಅದರ ಮೂಲಕ ಹರಿಯುವ ಭದ್ರಾ ನದಿಯಿಂದ ಉತ್ಪನ್ನವಾಗಿದೆ. ಹಿಂದೆ ಬೆಂಕಿಪುರ (ಅಥವಾ ವಂಕಿಪುರ/ವೆಂಕಿಪುರ) ಎಂದು ಕರೆಯಲ್ಪಟ್ಟಿತ್ತು. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಇಲ್ಲಿ ಕಬ್ಬಿಣದ ಕಾರ್ಖಾನೆಯನ್ನು ಸ್ಥಾಪಿಸಿದ ಮೇಲೆ ಭದ್ರಾವತಿ ಎಂಬ ಈ ಹೊಸ ಹೆಸರು ಈ ಊರಿಗೆ ಬಂದಿತೆಂದು ಹೇಳಲಾಗುತ್ತದೆ. ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಈ ಊರಿಗೆ ಬೆಂಕಿಪುರವೆಂದು ಕರೆಯುತ್ತಿದ್ದರು. ಈ ಬೆಂಕಿಪುರವೆಂಬ ಹೆಸರಿಗೂ ಬೆಂಕಿಗೂ ಯಾವ ಸಂಬಂಧವೂ ಇಲ್ಲ. ಈ ಬೆಂಕಿಪುರ ಎಂಬ ಪದವು ವಂಕೀಪುರ ಎನ್ನುವ ಹೆಸರಿ ಅಪಭ್ರಂಶವಷ್ಟೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಳಿ ಸಹ್ಯಾದ್ರಿಯ ಒಡಲಲ್ಲಿ ತನ್ನ ಉಗಮಸ್ಥಾನ ಹೊಂದಿರುವ ಭದ್ರಾನದಿಯು ಉತ್ತರಾಭಿಮುಖವಾಗಿ ಹರಿದು ಭದ್ರಾವತಿ ನಗರವನ್ನು ದಕ್ಷಿಣ ದಿಕ್ಕಿನಿಂದ ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸುವಾಗ, ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಎಡಕ್ಕೆ ತಿರುಗಿ ಪಶ್ಚಿಮ ವಾಹಿನಿಯಾಗುತದೆ. ಉತ್ತರ ದಿಕ್ಕಿನಿಂದ ಪಶ್ಛಿಮ ದಿಕ್ಕಿಗೆ ತಿರುಗುವ ಈ ತಿರುವಿಗೆ ಚಕ್ರತೀರ್ಥ ಎನ್ನುತ್ತಾರೆ. ಈ ಚಕ್ರತೀರ್ಥದ ಬಳಿ ಪುರಾಣ ಪ್ರಸಿದ್ಧ ವಂಕೀ ಮಹರ್ಷಿಗಳ ಆಶ್ರಮವಿತ್ತಂತೆ. ಈ ವಂಕೀ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ. ಸ್ವಾಮಿಯು ಈ ಋಷಿಗಳಿಗೆ ದರ್ಶನವಿತ್ತು, "ಪಶ್ಚಿಮವಾಹಿನಿಯಾದ ಭದ್ರೆಯ ಯಾವ ಪವಿತ್ರ ಕ್ಷೇತ್ರದಲ್ಲಿ ನೀನು ತಪವನ್ನಾಚರಿಸಿದೆಯೋ ಆ ಕ್ಷೇತ್ರದಲ್ಲಿ ನಾನು ಸ್ಥಿರವಾಗಿ ನೆಲೆಸಿ ಭಕ್ತರ ಅಭೀಷ್ಟೆಗಳನ್ನು ಈಡೇರಿಸುವನು" ಎಂದು ಹೇಳಿದನೆಂದು ಪ್ರತೀತಿ. ಮುಂದೆ ಹದಿಮೂರನೇ ಶತಮಾನದಲ್ಲಿ ಹೊಯ್ಸಳರ ವೀರನಸಿಂಹನು (ವಿಷ್ಣುವರ್ಧನನ ಮೊಮ್ಮಗ ಮತ್ತು ಎರಡನೇ ಬಲ್ಲಾಳನ ಮಗ) ವಂಕೀ ಮಹರ್ಷಿ ಮತ್ತು ಲಕ್ಷ್ಮೀನರಸಿಂಹ ಸ್ಥಳ ಪುರಾಣವಿದ್ದ ಈ ಪ್ರದೇಶದಲ್ಲಿ ಭವ್ಯವಾದ ಲಕ್ಷ್ಮೀನರಸಿಂಹ ದೇವಾಲಯವನ್ನು ಹೊಯ್ಸಳ ಶಿಲ್ಪಕಲಾ ಮಾದರಿಯಲ್ಲಿ ಕಟ್ಟಿಸಿ ಕ್ರಿ.ಶ. ೧೨೨೪ ನೇ ಇಸವಿಯ ವ್ಯಯನಾಮ ಸಂವತ್ಸರದ ದ್ವಿತೀಯ ಶುದ್ಧ ತ್ರಯೋದಶಿಯಂದು ಲೋಕಾರ್ಪಣೆ ಮಾಡಿದನು. ಇಂದಿಗೂ ಈ ದೇವಾಲಯ ಭದ್ರಾವತಿಯ ಹಳೇನಗರದಲ್ಲಿದ್ದು ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿ ಐತಿಹಾಸಿಕ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ. ಈ ಊರಿಗೆ ವಂಕೀಪುರ ಎಂಬ ಹೆಸರು ಇತ್ತೆಂಬುದಕ್ಕೆ ಇಂಬು ಕೊಡುವಂತೆ, ಶ್ರೀಲಕ್ಷ್ಮೀನರಸಿಂಹನ ಬಗ್ಗೆ ಒಂದು ಶ್ಲೋಕವಿದೆ. ಅದೆಂದರೆ "ಮಂಗಲಂ ಸ್ತಂಭ ಡಿಂಭಾಯ, ಮಂಗಲಂ ಮೃತ್ಯು ಮೃತ್ಯವೇ, ವಂಕೀಪುರ ನಿವಾಸಾಯ, ನರಸಿಂಹಾಯ ಮಂಗಲಂ" ಎಂದು. ಈ ಶ್ಲೋಕವನ್ನು ಇಂದಿಗೂ ದೇವಾಲಯ ದ್ವಾರದಲ್ಲಿ ಕಾಣಬಹುದು. ಹದಿನಾಲ್ಕನೇ ಶತಮಾನದಿಂದೀಚೆಗೆ ಈ ಊರಿಗೆ ಲಕ್ಷ್ಮೀಪುರ, ಲಕ್ಷ್ಮೀನರಸಿಂಹಪುರ, ಭದ್ರಾಪುರ ಇನ್ನೂ ಮುಂತಾದ ಹೆಸರುಗಳಿದ್ದವೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಇಷ್ಟೆಲ್ಲಾ ಹೆಸರುಗಳಿದ್ದೂ ವಂಕೀಪುರವೆಂಬ ಹೆಸರೇ ರೂಢಿಯಲ್ಲಿ ಉಳಿದುಕೊಂಡು ಕಾಲಕ್ರಮೇಣ ಜನರ ಬಾಯಲ್ಲಿ ಅದು ಬೆಂಕಿಪುರವಾದದ್ದು, ತದನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ಭದ್ರಾವತಿ ಎಂದು ಮರುನಾಮಕರಣಗೊಂಡಿತು.

ಭೌಗೋಳಿಕ[ಬದಲಾಯಿಸಿ]

ಭದ್ರಾವತಿಯು ಕರ್ನಾಟಕದ ಮಧ್ಯಭಾಗದಲ್ಲಿ, ಶಿವಮೊಗ್ಗ ಜಿಲ್ಲೆಯ ದಕ್ಷಿಣ-ಪೂರ್ವ ಕೊನೆಯಲ್ಲಿದೆ. ಭದ್ರಾವತಿಯು ೧೩° ೫೦' ಉತ್ತರ ಅಕ್ಷಾಂಶ ಹಾಗೂ ೭೫° ೪೨' ಪೂರ್ವ ರೇಖಾಂಶದಲ್ಲಿದೆ. ಭದ್ರಾವತಿ ತಾಲ್ಲೂಕು ಪಶ್ಚಿಮಕ್ಕೆ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಜೊತೆಗೆ, ಉತ್ತರಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಜೊತೆಗೆ, ಪೂರ್ವಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಜೊತೆಗೆ ಮತ್ತು ದಕ್ಷಿಣಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ. ಭದ್ರಾವತಿಯು ಸಮುದ್ರ ಮಟ್ಟದಿಂದ ೫೮೦ ಮಿ (೧೯೦೦ ಅಡಿ) ಮೇಲಿದೆ.

ಸಂಪರ್ಕ[ಬದಲಾಯಿಸಿ]

ರಸ್ತೆ[ಬದಲಾಯಿಸಿ]

ಬೆಂಗಳೂರಿನಿಂದ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು ಮತ್ತು ತರೀಕೆರೆ ಮೂಲಕ ಸಾಗುವ ಬೆಂಗಳೂರು-ಹೊನ್ನಾವರ ರಾ.ಹೆ.-೨೦೬ ಹೆದ್ದಾರಿ(ಬಿ.ಹೆಚ್ ರಸ್ತೆ)ಯ ಮೂಲಕ ಭದ್ರಾವತಿಯನ್ನು ತಲುಪಬಹುದು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ಬಸ್ಸುಗಳು ಭದ್ರಾವತಿಯಲ್ಲಿ ನಿಲ್ಲಿಸುತ್ತವೆ ಮತ್ತು ಪ್ರಯಾಣಕ್ಕೆ ಸುಮಾರು ಆರು ಘಂಟೆ ಸಮಯ ತೆಗೆದುಕೊಳ್ಳುತ್ತವೆ. ಚಿತ್ರದುರ್ಗ, ದಾವಣಗೆರೆ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಕೆಲವು ಸ್ಥಳಗಳು ಮುಂತಾದ ಬೇರೆ ಬೇರೆ ಕೆಲವು ಸ್ಥಳಗಳಿಂದ ಭದ್ರಾವತಿಗೆ ನೇರವಾಗಿ ರಸ್ತೆ ಸಂಪರ್ಕವಿದೆ. ಜಿಲ್ಲಾಕೇಂದ್ರ ಶಿವಮೊಗ್ಗವು ಕರ್ನಾಟಕದ ಎಲ್ಲಾ ಭಾಗಗಳಿಂದ ಚೆನ್ನಾಗಿ ರಸ್ತೆಯ ಮೂಲಕ ಸಂಪರ್ಕಿಸಲ್ಪಟ್ಟಿರುವುದರಿಂದ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಭದ್ರಾವತಿ ತಲುಪಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳ ಸೌಲಭ್ಯವಿದೆ.

ರೈಲು[ಬದಲಾಯಿಸಿ]

ಬೀರೂರು - ಶಿವಮೊಗ್ಗ ರೈಲ್ವೆ ಹಳಿ ಭದ್ರಾವತಿ ನಗರದ ಮೂಲಕ ಹಾದು ಹೋಗುತ್ತದೆ. ಪ್ರತಿದಿನ ಬೆಂಗಳೂರಿನಿಂದ ಶಿವಮೊಗ್ಗ ಮತ್ತು ತಾಳಗುಪ್ಪವರೆಗೆ ಚಲಿಸುವ ರೈಲುಗಳು ಭದ್ರಾವತಿಯಲ್ಲಿ ನಿಲ್ಲುತ್ತವೆ. ಮೈಸೂರು ಮತ್ತು ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಹೋಗುವ ರೈಲುಗಳಲ್ಲಿ ಬೀರೂರು ಜಂಕ್ಷನ್ ತನಕ ಬಂದು, ಅಲ್ಲಿಂದ ಶಿವಮೊಗ್ಗ ಕಡೆಗೆ ತೆರಳುವ ಬೇರೆ ರೈಲು ಅಥವಾ ಬಸ್ಸಿನಲ್ಲಿ ಭದ್ರಾವತಿಗೆ ಬರಬಹುದು. ಬೀರೂರಿಂದ ಭದ್ರಾವತಿ ರಸ್ತೆ ಮಾರ್ಗವಾಗಿ ೪೩ ಕಿ.ಮಿ. ದೂರವಿದೆ.

ವಿಮಾನ[ಬದಲಾಯಿಸಿ]

ಭದ್ರಾವತಿಗೆ ಅತಿ ಸಮೀಪದ ವಿಮಾನ ನಿಲ್ದಾಣ ಕುವೆಂಪು ವಿಮಾನ ನಿಲ್ದಾಣ ಶಿವಮೊಗ್ಗ. ಭದ್ರಾವತಿ ಇಂದ ಶಿವಮೊಗ್ಗ ವಿಮಾನ ನಿಲ್ದಾಣ 17 ಕಿ.ಮಿ ದೂರದಲ್ಲಿದೆ. ಬೆಂಗಳೂರು ತಿರುಪತಿ ಮತ್ತು ಹೈದ್ರಾಬಾದನಿಂದ ವಿಮಾನ ಹಾರಾಡುತ್ತದೆ. ಶಿವಮೊಗ್ಗ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ಭದ್ರಾವತಿಗೆ ರೈಲಿನಲ್ಲಿ ಅಥವಾ ರಸ್ತೆ ಮೂಲಕ ಪ್ರಯಾಣಿಸಬಹುದು.

ಕೈಗಾರಿಕೆಗಳು[ಬದಲಾಯಿಸಿ]

ಪ್ರವಾಸೀ/ಪ್ರೇಕ್ಷಣೀಯ ತಾಣಗಳು[ಬದಲಾಯಿಸಿ]

  • ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ - ಇದು ೧೩ನೇ ಶತಮಾನದ ಹೊಯ್ಸಳ ಶೈಲಿಯ ದೇವಾಲಯ. ಭದ್ರಾವತಿಯ ಹಳೆನಗರ ಭಾಗದಲ್ಲಿದೆ. ಸುಂದರ ಶಿಲ್ಪಕಲೆ ಹಾಗೂ ಭಗ್ನಶಿಲ್ವಗಳನ್ನು ಹೊಂದಿರುವ ಇದು ಈಗ ಕರ್ನಾಟಕ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದೆ.
  • ಭದ್ರಾ ಅಭಯಾರಣ್ಯ - ೧೯೫೧ರಲ್ಲಿ ಜಗರ ಕಣಿವೆ ಅಭಯಾರಣ್ಯ ಎಂದು ಸ್ಥಾಪಿಸಲ್ಪಟ್ಟಿತ್ತು. ಸುತ್ತಲೂ ಇರುವ ಲಕ್ಕವಳ್ಳಿ ಕಾಡನ್ನೂ ಸೇರಿಸಿ ೧೯೭೨ರಲ್ಲಿ ಇದನ್ನು ಭದ್ರಾ ಅಭಯಾರಣ್ಯ ಎಂದು ಮಾಡಲಾಯಿತು. ಈಗ ಇದು ೪೯೨ ಚದರ ಕಿ.ಮಿ.ಗಳಷ್ಟಿದೆ. ಇದರಲ್ಲಿ ಮುತ್ತೋಡಿ ಮತ್ತು ಲಕ್ಕವಳ್ಳಿ ಎಂಬ ಎರಡು ವಿಭಾಗಗಳಿವೆ. ಇಲ್ಲಿ ಇರುವ ಕೆಲವು ಪ್ರಾಣಿಗಳೆಂದರೆ ಹುಲಿ, ಚಿರತೆ, ಕಾಡುನಾಯಿ, ನರಿ, ಆನೆ, ಕರಡಿ, ಸಾಂಬಾರ್, ಜಿಂಕೆ, ಲಂಗೂರ್, ದೊಡ್ಡ ಮಲಬಾರ್ ಅಳಿಲು, monitor lizard, barking deer, wild boar, bonnet macaque, slender loris ಇತ್ಯಾದಿ. ಬುಲ್ ಬುಲ್, ಮರಕುಟುಕ, ಪಾರಿವಾಳಗಳು, shama, Malabar whistling thrush, hornbills, drongos and paradise flycatcher ಮುಂತಾದವು ಇಲ್ಲಿನ ಪಕ್ಷಿಗಳು. ಕೇಂದ್ರ ಸರ್ಕಾರದ ಟೈಗರ್ ಪ್ರಾಜೆಕ್ಟ್ ಈ ಅಭಯಾರಣ್ಯವನ್ನು ಒಳಗೊಂಡಿದೆ. ಅಕ್ಟೋಬರ್ ನಿಂದ ಫೆಬ್ರವರಿ ಇಲ್ಲಿನ ಭೇಟಿಗೆ ಒಳ್ಳೆಯ ಸಮಯ. ಇಲ್ಲಿ ಅರಣ್ಯ ಇಲಾಖೆಯ ಒಂದು ಜಂಗಲ್ ರೆಸಾರ್ಟ್ ಇದೆ. ಮೊದಲೇ ಕಾಯ್ದಿರಿಸಿಕೊಂಡು ರಾತ್ರಿ ತಂಗಬಹುದು.
  • ಭದ್ರಾ ನದಿ ಯೋಜನೆ (ಬಿ.ಆರ್.ಪ್ರಾಜೆಕ್ಟ್) - ಇದು ಭದ್ರಾವತಿಯಿಂದ ೨೦ ಕಿ.ಮಿ. ದೂರದ ಲಕ್ಕವಳ್ಳಿಯಲ್ಲಿದೆ. ಇದು ಸರ್ ಎಂ. ವಿಶ್ವೇಶ್ವರಯ್ಯನವರಿಂದ ರೂಪಿಸಲ್ಪಟ್ಟ ಅಣೆಕಟ್ಟು. ಭದ್ರಾವತಿ ಮತ್ತು ತರೀಕೆರೆ ತಾಲ್ಲೂಕಿನ ಪ್ರದೇಶಗಳ ನೀರಾವರಿ ಇದರಿಂದ ಆಗುತ್ತದೆ. ಇಲ್ಲಿ ಒಂದು ಸಣ್ಣ ವಿದ್ಯುತ್ ಉತ್ಪಾದನಾ ಘಟಕವೂ ಕೂಡ ಇದೆ. ಪಿಕ್ನಿಕ್ ಗೆ ಒಂದು ಉತ್ತಮ ತಾಣ.
  • ಕೂಡಲಿ - ಭದ್ರಾ ನದಿ ಹಾಗೂ ತುಂಗಾ ನದಿಗಳು ಸೇರುವ ಜಾಗ. ಭದ್ರಾವತಿಯಿಂದ ಹೊಳೆಹೊನ್ನೂರು ದಿಕ್ಕಿನಲ್ಲಿ 15 ಕಿ.ಮೀ. ದೂರದಲ್ಲಿದೆ.
  • ಗೊಂದಿ - ದೇವಸ್ಥಾನ, ಗುಹೆ ಹಾಗೂ ಚೆಕ್ ಡ್ಯಾಂ ಇರುವ ಸ್ಥಳ.
  • ಸುಣ್ಣದಹಳ್ಳಿ- ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಪಕ್ಕದಲ್ಲಿ ಭದ್ರಾ ನದಿ ಹರಿಯುತ್ತದೆ. ಭದ್ರಾವತಿಯಿಂದ ಸುಮಾರು ೪ ರಿಂದ ೫ ಕಿ.ಮಿ ಆಗುತ್ತದೆ.
  • ಗಂಗೂರು - ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನವಿದೆ , ಭದ್ರಾವತಿಯಿಂದ ಸುಮಾರು ೧೫ ಕಿ.ಮಿ ಆಗುತ್ತದೆ
  • ಉಕ್ಕುಂದ - ಶ್ರೀ ಕೆಂಚಮ್ಮ ದೇವಿ ದೇವಸ್ಥಾನ ಮತ್ತು ಬೆಟ್ಟ ಇದೆ

ಭದ್ರಾವತಿಯಿಂದ ಸುಮಾರು ೧೦ ಕೀ.ಮೀ ದೂರದಲ್ಲಿದೆ

ಪ್ರಮುಖ/ಪ್ರಸಿದ್ಧ ವ್ಯಕ್ತಿಗಳು[ಬದಲಾಯಿಸಿ]


ಗ್ರಂಥಾಲಯ/ವಾಚನಾಲಯಗಳು[ಬದಲಾಯಿಸಿ]

  • ಹಳೇನಗರ ಶಾಖಾ ಗ್ರಂಥಾಲಯ
  • ಕಾಗದನಗರ ಶಾಖಾ ಗ್ರಂಥಾಲಯ
  • ನ್ಯೂಟೌನ್ ಶಾಖಾ ಗ್ರಂಥಾಲಯ
  • ಅಂಬೇಡ್ಕರ್ ಶಾಖಾ ಗ್ರಂಥಾಲಯ
  • ವಾಚನಾಲಯ, ಮಿಲಿಟರಿ ಕ್ಯಾಂಪ್
  • ಸಂಚಾರಿ ಗ್ರಂಥಾಲಯ

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]