ಚನ್ನಪಟ್ಟಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚನ್ನಪಟ್ಟಣ

ಚನ್ನಪಟ್ಟಣ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ರಾಮನಗರ
ನಿರ್ದೇಶಾಂಕಗಳು 12.6530° N 77.2050° E
ವಿಸ್ತಾರ 12.87 km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
65000
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೬೨೧೬೦ 562160
 - +91-80 / 91-8113
 - 

ಚನ್ನಪಟ್ಟಣ ರಾಮನಗರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಕಸಬಾ ಹೋಬಳಿ ಕೇಂದ್ರ. 543 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಜ್ಞಾನಮಂಟಪ ಕ್ಷೇತ್ರ ಎಂದು ಪ್ರಾಚೀನ ಕಾಲದಲ್ಲಿ ಕರೆಯಲ್ಪಡುತ್ತಿದ್ದ ಚಂದದನಗರಿ, ಬೊಂಬೆನಗರಿ ಎಂದು ಖ್ಯಾತಿ ಗಳಿಸಿರುವ ಚನ್ನಪಟ್ಟಣ.

ಬೆಂಗಳೂರಿನಿಂದ 'ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್' ಹಾದಿಯಲ್ಲಿ ಮುಂದೆ ಹೋದರೆ ಮೊದಲಿಗೆ ನೀವು ದಾಟುವ ನಗರ ರೇಷ್ಮೆ ನೆಲ ರಾಮನಗರ. ಆನಂತರ ಸಿಗುತ್ತದೆ ಚನ್ನಪಟ್ಟಣ. ಸುಂದರ ನಗರ ಚನ್ನಪಟ್ಟಣ ಮರದ ”’ಕರಕುಶಲ ವಸ್ತು”’ಗಳಿಗೆ ಪ್ರಸಿದ್ಧ. ಈ ತಾಲೂಕು ಮರದ ಗೊಂಬೆಗಳು ಹಾಗೂ ಆಟಿಕೆಗಳಿಗೆ ಬಹಳ ಪ್ರಸಿದ್ಧ. ಚನ್ನಪಟ್ಟಣ ತಾಲ್ಲೂಕಿನ ಪ್ರಸಿದ್ಧ ಸ್ಥಳಗಳೆಂದರೆ ಕೆಂಗಲ್, ದೊಡ್ಡ ಮಳೂರು, ಕೂಡ್ಲೂರು, ಬೇವೂರು,ಚಕ್ಕರೆ, ಚಕ್ಕಲೂರು, ದಶವಾರ, ಮಾಕಳಿ,ಅಬ್ಬೂರು, ಹೊಂಗನೂರು, ಇಗ್ಗಲೂರು, ಕೋಡಂಬಳ್ಳಿ, ಕಣ್ವ, ನಾಗವಾರ,ಇಗ್ಗಲೂರು , ಮುಂತಾದವು. ತಾಲ್ಲೂಕಿನ ಪ್ರಮುಖ ವ್ಯಕ್ತಿಗಳೆಂದರೆ, ಎಂ.ಎಸ್.ಪುಟ್ಟಣ್ಣ ಸಿ.ಕೆ. ವೆಂಕಟರಾಮಯ್ಯ, ಸಿ.ಎನ್. ಜಯಲಕ್ಷ್ಮಿದೇವಿ, ರಸಿಕಪುತ್ತಿಗೆ, ಸು.ತ.ರಾಮೇಗೌಡ, ಕಾಳೇಗೌಡ ನಾಗವಾರ, ಬಿ.ಜೆ.ಲಿಂಗೇಗೌಡ, ದೇ.ಜವರೆಗೌಡ, ಡಾ.ಶಶಿಧರ್‌ ಪ್ರಸಾದ್‌, ಕರ್ನಾಟಕದ ಮೊಟ್ಟಮೊದಲ ವಿದ್ಯಾಮಂತ್ರಿ ವಿ.ವೆಂಕಟಪ್ಪ, ಮೊಟ್ಟಮೊದಲ ವಿಧಾನ ಸಭೆ ಪ್ರತಿಪಕ್ಷ ದ ನಾಯಕ ಬಿ.ಕೆ. ಪುಟ್ಟರಾಮಯ್ಯ, ಎಂ. ವರದೇಗೌಡ, ಕೆಂಗಲ್ ಹನುಮಂತಯ್ಯ, ಡಾ.ಚಕ್ಕರೆ ಶಿವಶಂಕರ್,ಸಿ.ಪಿ.ಯೋಗಿಶ್ವರ್, ಬಿ.ಸರೋಜಾದೇವಿ. ತಾಲ್ಲೂಕಿನ ಬರಹಗಾರರು/ಸಂಶೋಧಕರು/ಕವಿಗಳು : ಎಂ.ಎಸ್.ಪುಟ್ಟಣ್ಣ, ರಸಿಕಪುತ್ತಿಗೆ, ಸು.ತ.ರಾಮೇಗೌಡ, ಕಾಳೇಗೌಡ ನಾಗವಾರ, ದೇ.ಜವರೆಗೌಡ, ಡಾ.ಚಕ್ಕರೆ ಶಿವಶಂಕರ್, ಶಿವರಾಮೇಗೌಡ ನಾಗವಾರ, ಡಾ. ಸಿ.ಕೆ. ನಾಗರಾಜು, ಮುಂತಾದವರು.

ಚನ್ನಪಟ್ಟಣ ತಾಲ್ಲೂಕಿನ ಪ್ರಮುಖ ನೀರಾವರಿ ಮೂಲವೆಂದರೆ ಕಣ್ವ ಜಲಾಶಯ ಹಾಗೂ ಇಗ್ಗಲೂರು ಹೆಚ್.ಡಿ. ದೇವೇಗೌಡ ಬ್ಯಾರೇಜ್. ೧೬ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಹರಿದಾಸ ಪಂಥವನ್ನು ಸ್ಥಾಪಿಸಿದ ಪ್ರಮುಖರಾದ ಶ್ರೀಪಾದರಾಜರು ವ್ಯಾಸರಾಯರು ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗ್ರಾಮದವರು.

ಚನ್ನಪಟ್ಟಣದ ಇತಿಹಾಸದ ಪುಟಗಳು

ಚನ್ನಪಟ್ಟಣದ ಇತಿಹಾಸದಲ್ಲಿ ಗಂಗರಿಂದ ಪ್ರಾರಂಭಗೊಂಡು ನಂತರದಲ್ಲಿ ಚೋಳರು, ಹೊಯ್ಸಳರು, ವಿಜಯನಗರದರಸರು, ಚನ್ನಪಟ್ಟಣ ಪಾಳೆಯಗಾರರು, ಮೈಸೂರು ಒಡೆಯರು ಆಳ್ವಿಕೆಯನ್ನು ನಡೆಸಿದರು.ಗಂಗರ ಕಾಲದಲ್ಲಿನ ಇತಿಹಾಸವನ್ನು ನೋಡುವುದಾದರೆ ಗಂಗರು ಚನ್ನಪಟ್ಟಣ ತಾಲ್ಲೂಕಿನ 'ಮಾಕುಂದ (ಮಂಕುಂದ)'ವನ್ನು ತಮ್ಮ ಉಪರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡಿರುವುದನ್ನು ಕಾಣಬಹುದು. ಗಂಗ ದೊರೆ ಶ್ರೀಪುರುಷನ ಆಳ್ವಿಕೆಯ ಕಾಲದಲ್ಲಿ ಕ್ರಿ.ಶ.೭೨೫ರಿಂದ ೭೮೫ರವರೆಗೆ ಮಂಕುಂದವನ್ನು ಉಪರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಗಂಗರು ಮಂಕುಂದವನ್ನು ಉಪರಾಜಧಾನಿಯನ್ನಾಗಿ ಮಾಡಿಕೊಂಡು ಕೆಲಕಾಲ ಆಳ್ವಿಕೆ ನಡೆಸಿದರೆ, ಚೋಳರ ಕಾಲದಲ್ಲಿ ಮಳೂರು, ಕೂಡ್ಲೂರು, ಮಳೂರು ಪಟ್ಟಣ ಮುಂತಾದವು ಪ್ರಮುಖ ಕೇಂದ್ರಗಳಾಗಿದ್ದವು. ಇವರ ಕಾಲದಲ್ಲಿ ಮಳೂರಿನ ಅಪ್ರಮೇಯ ದೇವಾಲಯ ಅಭಿವೃದ್ಧಿಯನ್ನು ಕಂಡಿತು. ಹೊಯ್ಸಳರ ಕಾಲದಲ್ಲಿ ಹೊಂಗನೂರು ಉಪರಾಜಧಾನಿಯಾಗಿ ಪ್ರಸಿದ್ಧಿಯಾಗಿತ್ತು. ಗಂಗರ ಮಂತ್ರಿ ಮಾರಸಿಂಹನ ಕೂಡ್ಲೂರು ಶಾಸನವನ್ನು ಕೂಡ್ಲೂರು ಗ್ರಾಮದಲ್ಲಿ ಕಾಣಬಹುದು ,ವಿಜಯನಗರದರಸರ ಕಾಲದಲ್ಲಿ ಚನ್ನಪಟ್ಟಣ ತಾಲ್ಲೂಕು ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಪಾಳೆಯಗಾರರ ಹಿಡಿತದಲ್ಲಿ ಹಂಚಿಹೋಗಿತ್ತು. ಬೇವೂರು, ಮಾಕಳಿ, ಮಳೂರು ಪಟ್ಟಣ ಮುಂತಾದವು ಪಾಳೆಯಪಟ್ಟನ್ನು ಹೊಂದಿದ್ದವು. ೧೫೮೦ರಲ್ಲಿ ಇಮ್ಮಡಿ ಜಗದೇವರಾಯನ ಕಾಲದಲ್ಲಿ ಚನ್ನಪಟ್ಟಣದಲ್ಲಿ ಬೃಹತ್ತಾದ ಕೋಟೆ ನಿರ್ಮಾಣವಾಗಿತ್ತು. ಮೈಸೂರು ಒಡೆಯರ ಆಳ್ವಿಕೆಯ ಕಾಲದಲ್ಲಿ ಸೈನ್ಯದ ನೆಲೆಯಾಗಿತ್ತು. ಹೈದರಾಲಿಯ ಗುರುವಾದ ಅಕಲ್ ಷಾ ಖಾದ್ರಿಯ ಮಸೀದಿಯನ್ನು ಚನ್ನಪಟ್ಟಣದಲ್ಲಿ ಕಾಣಬಹುದು. ವೀರಸಂಸ್ಕೃತಿಯ ನೆಲೆವೀಡು ಚನ್ನಪಟ್ಟಣ. ಇದಕ್ಕೆ ಸಾಕ್ಷಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚಿನ ವೀರಗಲ್ಲು, ಮಾಸ್ತಿಕಲ್ಲುಗಳು ದೊರೆಯುತ್ತವೆ.

ಚನ್ನಪಟ್ಟಣದ ಪಾಳೆಯಗಾರರು ಮತ್ತು ಇಮ್ಮಡಿ ಜಗದೇವರಾಯ

ಚನ್ನಪಟ್ಟಣ ಇತ್ತೀಚೆಗೆ ರಚನೆಯಾಗಿರುವ ರಾಮನಗರ ಜಿಲ್ಲೆಯ ಒಂದು ತಾಲೋಕು ಕೇಂದ್ರವಾಗಿದ್ದು ೧೫ ರಿಂದ ೧೭ನೇಶತಮಾನದವರೆಗೂ ಪ್ರಭಾವಿ ಪಾಳೆಯಗಾರರ ಆಳ್ವಿಕೆಯಲ್ಲಿತ್ತು. ಚನ್ನಪಟ್ಟಣದ ಪಾಳೆಯಗಾರರಲ್ಲಿ ಪ್ರಸಿದ್ಧರಾಗಿದ್ದ ರಾಣಾ ವಂಶದ ಪೆದ್ದ ಜಗದೇವರಾಯನೆಂಬುವವನು ಕ್ರಿ ಶ ೧೫೭೦ ರಲ್ಲಿ ಚನ್ನಪಟ್ಟಣದ ಅಧಿಕಾರಿಯಾಗಿ ನೇಮಿಸಲ್ಪಟ್ಟನು. ಇವನು ರಾಣಾ ವಂಶದಲ್ಲಿ ‘ಜಗದೇವರಾಯ’ನೆಂದು ಮೊದಲಿಗೆ ಕರೆಯಲ್ಪಟ್ಟ ತಿಮ್ಮಣ್ಣನಾಯಕನ ಮಗ. ಇಮ್ಮಡಿ ಜಗದೇವರಾಯ ಈ ವಂಶದ ಪ್ರಸಿದ್ಧ ಪಾಳೆಯಗಾರ. ಅಪಾರ ಧೈರ್ಯಶಾಲಿಯೂ, ಶೂರನೂ ಆಗಿದ್ದ ಈತ ಪೆದ್ದ(ಪೇದ) ಜಗದೇವರಾಯನ ಸಹೋದರ. ಆಗಾಗ ವಿಜಯನಗರ ಸಾಮ್ರಾಜ್ಯದ ಮೇಲೇ ದಂಡೆತ್ತಿ ಬರುತ್ತಿದ್ದ ವಿಜಾಪುರದ ಶಾಹೀ ಸುಲ್ತಾನರನ್ನು ಬಗ್ಗು ಬಡಿಯುವಲ್ಲಿ ಇಮ್ಮಡಿ ಜಗದೇವರಾಯನ ಪಾತ್ರ ಮಹತ್ವದ್ದು. ತನ್ನಂತಹ ಅನೇಕ ಪಾಳೆಯಗಾರ ಸಂಸ್ಥಾನಗಳೊಂದಿಗೆ ಸಮನ್ವಯ ಸಾಧಿಸಿ ಸೈನ್ಯಗಳನ್ನು ಕಲೆಹಾಕಿಕೊಂಡು ಹೋಗಿ ಶಾಹೀ ಸುಲ್ತಾನರನ್ನು ಹಿಮ್ಮೆಟ್ಟಿಸಿದನು. ಆಗಿನ ಶಾಹೀ ಸೈನ್ಯದ ದಂಡನಾಯಕರಾಗಿದ್ದ ಮುತುರ್ಜಾಖಾನ್, ಖಾನ್-ಖಾನ್, ನೂರ್-ಖಾನ್ ಮುಂತಾದವರನ್ನು ಇಮ್ಮಡಿ ಜಗದೇವರಾಯನ ನೇತೃತ್ವದ ಸೈನ್ಯ ಸೋಲಿಸಿ ಓಡಿಸಿತು. ಇಮ್ಮಡಿ ಜಗದೇವರಾಯನ ಶೌರ್ಯ-ಸಾಧನೆಗಳನ್ನು ಮೆಚ್ಚಿದ ವಿಜಯನಗರದ ಪ್ರಭುಗಳು, ೯ ಲಕ್ಷ ಪಘೋಡ(ಆ ಕಾಲದ ಚಾಲ್ತಿಯಲ್ಲಿದ್ದ ಹಣ)ಗಳ ವರಮಾನವಿದ್ದ ಜಿಲ್ಲೆಯೊಂದನ್ನು ಕೊಡುಗೆಯಾಗಿ ನೀಡಿದರು. ಶಾಹೀ ಸುಲ್ತಾನರ ನಿರಂತರ ದಾಳಿಯಿಂದ ಕಂಗೆಟ್ಟಿದ್ದ ವಿಜಯನಗರದ ಅರಸರು ಈ ಪ್ರದೇಶವನ್ನು ನಿಯಂತ್ರಿಸಲು ಸತತ ಹೆಣಗಾಡುತ್ತಿದ್ದರು. ಪೂರ್ವದ ಬಾರಾಮಹಲಿನಿಂದ(ಇಂದಿನ ಸೇಲಂ)-ಪಶ್ಚಿಮಘಟ್ಟಗಳವರೆಗಿನ ವಿಶಾಲ ಭಾಗ ಚನ್ನಪಟ್ಟಣ ಪಾಳೆಯಗಾರ ಸಂಸ್ಥಾನ(ಇಮ್ಮಡಿ ಜಗದೇವರಾಯನ)ದ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಪಟ್ಟಣವು ಈ ಪ್ರದೇಶದ ಹೃದಯ ಭಾಗದಲ್ಲಿದ್ದುದರಿಂದ ಸಹಜವಾಗಿಯೇ ಅದು ಇಮ್ಮಡಿ ಜಗದೇವರಾಯನ ರಾಜಧಾನಿಯಾಯಿತು. ‘ಚನ್ನಪಟ್ಟಣದ ಪಾಳೆಯಗಾರರು’ ಪ್ರಸಿದ್ಧಿಗೆ ಬಂದಿದ್ದು ಇಮ್ಮಡಿ ಜಗದೇವರಾಯನ ನಂತರವೇ ಎಂಬುದು ಇತಿಹಾಸದ ಗಮನಾರ್ಹ ಸಂಗತಿ. ಪಾಳೆಯಗಾರರಿಗೆ ಸಹಜವಾಗಿ ಸೈನ್ಯ-ಸಂಪನ್ಮೂಲದ ಕೊರತೆ ಬಹಳವಾಗಿದ್ದುದರಿಂದ ಇಮ್ಮಡಿ ಜಗದೇವರಾಯನ ನಂತರ ಈ ವಿಶಾಲ ಭೂಪ್ರದೇಶವೊಂದನ್ನು ನಿಯಂತ್ರಿಸುವುದು ಅವನ ವಾರಸುದಾರರಿಗೆ ಸಾಧ್ಯವಾಗದೇ ಹೋಯಿತು. ಇದರಿಂದ ಇನ್ನಷ್ಟು ಮರಿ ಪಾಳೆಯಗಾರರ ಹುಟ್ಟಿಕೊಂಡು ತಮ್ಮನ್ನು ಸ್ವತಂತ್ರರೆಂದು ಘೋಷಿಸಿಕೊಂಡರು. ಪರಿಣಾಮ ಚನ್ನಪಟ್ಟಣ ಸಂಸ್ಥಾನ ಮತ್ತೆ ಚಿಕ್ಕ ಪ್ರಾಂತ್ಯವಾಗಿಯೇ ಉಳಿಯಿತು. ಈ ಹೊತ್ತಿಗಾಗಲೇ ವಿಜಯನಗರದ ಅರಸರ ಪ್ರಾಬಲ್ಯವೂ ತಗ್ಗಿತ್ತು. ೧೫೭೦ ರಿಂದ ೧೬೩೦ರವರೆಗೆ ಚನ್ನಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಚನ್ನಪಟ್ಟಣ ಪಾಳೆಯಗಾರರು ವಿಶಾಲವಾದ ರಾಜ್ಯವನ್ನು ಆಳ್ವಿಕೆ ನಡೆಸಿದರು. ರಾಣಾಪೆದ್ದ ಜಗದೇವರಾಯ, ಇಮ್ಮಡಿ ಜಗದೇವರಾಯ, ಅಂಕುಶರಾಯ ಮುಂತಾದ ಪ್ರಮುಖ ದೊರೆಗಳು ಈ ಮನೆತನದವರಾಗಿದ್ದಾರೆ. ಮೊದಲು ವಿಜಯನಗರದರಸರ ಕೈಕೆಳಗಿನ ಅಧಿಕಾರಿಗಳಾಗಿ ನಂತರ ಚನ್ನಪಟ್ಟಣ ರಾಜ್ಯವನ್ನು ಸ್ಥಾಪಿಸಿ ಸುಮಾರು ೬೦ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಚನ್ನಪಟ್ಟಣ ರಾಜ್ಯದ ಕೊನೆಯ ಅರಸರು ತಿಮ್ಮಪ್ಪ ರಾಜೇ ಅರಸು, ಇಂದಿಗೂ ಕೋಟೆ ಮಾರಮ್ಮನ ಬಳಿಯಿರುವ ಕೋಟೆ ಹಿಂದೆ ತಿಮ್ಮಪ್ಪ ಅರಸರ ಅರಮನೆಯಾಗಿತ್ತು ಇವರ ಸಮಾಧಿ ಸ್ಥಳವು ಕುಡಿನೀರು ಕಟ್ಟೆಯ ವಿರಕ್ತಮಠದ ಆವರಣದಲ್ಲಿದೆ..