ಎಂ.ಎಸ್.ಪುಟ್ಟಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂ. ಎಸ್. ಪುಟ್ಟಣ್ಣ
ಜನನನವೆಂಬರ್ ೨೧, ೧೮೫೪
ಮೈಸೂರು
ಮರಣಏಪ್ರಿಲ್ ೧೧, ೧೯೩೦
ವೃತ್ತಿಶಿಕ್ಷಕ, ಅಮಲ್ದಾರರು, ಸಾಹಿತಿ, ಪತ್ರಿಕೋದ್ಯಮಿ

ಎಂ. ಎಸ್. ಪುಟ್ಟಣ್ಣ ನವರು (ನವೆಂಬರ್ ೨೧, ೧೮೫೪ - ಏಪ್ರಿಲ್ ೧೧, ೧೯೩೦) ಹೊಸಗನ್ನಡದ ಪ್ರಥಮ ಸಾಲಿನ ಸಾಹಿತಿಗಳಲ್ಲಿ ಪ್ರಮುಖರು.

ಜೀವನ[ಬದಲಾಯಿಸಿ]

ಮೈಸೂರು ಸೂರ್ಯನಾರಾಯಣಭಟ್ಟ ಪುಟ್ಟಣ್ಣ ನವರು ನವೆಂಬರ್ ೨೧, ೧೮೫೪ರ ವರ್ಷದಲ್ಲಿ ಮೈಸೂರಿನಲ್ಲಿ ಜನಿಸಿದರು. ಹುಟ್ಟಿದ ಹತ್ತೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡರು. ಬೇಸರಗೊಂಡ ತಂದೆ ಕಾಶಿಗೆ ಹೋಗಿ ಸನ್ಯಾಸಿಯಾದರು. ಪುಟ್ಟಣ್ಣನವರು ಬಂಧುಗಳ ಆಶ್ರಯದಲ್ಲಿ ಬೆಳೆದರು. ಅವರ ನಿಜ ನಾಮಧೇಯ ಲಕ್ಷ್ಮೀನರಸಿಂಹ ಶಾಸ್ತ್ರಿ. ಎಲ್ಲರೂ ಮಗುವಾಗಿದ್ದಾಗ ಪುಟ್ಟಣ್ಣ ಎನ್ನುತ್ತಿದ್ದುದು ಹಾಗೇ ಉಳಿಯಿತು. ಸಂಪ್ರದಾಯ ಕುಟುಂಬದ ಹಿನ್ನಲೆಯಲ್ಲಿ ವಿದ್ಯಾಬ್ಯಾಸದ ಪ್ರಾರಂಭ ಪಂತರ ಖಾಸಗಿ ಮಠಗಳಲ್ಲಿ ನಡೆಯಿತು. ಅನಂತರ ರಾಜಾ ಸ್ಕೂಲಿನಲ್ಲಿ (ಇಂದಿನದ ಮಹಾರಾಜಾ ಕಾಲೇಜು) ಎಫ್. ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹೋಧ್ಯಾಪಕರಾಗಿ ನೇಮಕಗೊಂಡರು. ವೃತ್ತಿಯೊಂದಿಗೆ ಅಧ್ಯಯನಕ್ಕೂ ಮನಸ್ಸು ಕೊಟ್ಟು ಮದರಾಸಿನಲ್ಲಿ ಬಿ.ಎ. ಪದವಿ ಪಡೆದರು. ಮುಂದೆ ಅಧ್ಯಾಪಕ ಪದವಿ ಬಿಟ್ಟು ಬೆಂಗಳೂರಿನ ಚೀಫ್ ಕೋರ್ಟಿನಲ್ಲಿ (ಈಗಿನ ಹೈಕೋರ್ಟಿನಲ್ಲಿ) ಭಾಷಾಂತರಕಾರರಾಗಿ ದುಡಿದರು. ೧೮೯೭ರಲ್ಲಿ ಅವರನ್ನು ಚಿತ್ರದುರ್ಗದ ಅಮಲ್ದಾರನ್ನಾಗಿ ನೇಮಿಸಲಾಯಿತು. ಮುಂದೆ ರಾಜ್ಯದ ಹಲವೆಡೆಗಳಲ್ಲಿ ಅಮಲ್ದಾರರಾಗಿ ಸೇವೆ ಸಲ್ಲಿಸಿದರು. ಬೆಂಗಳೂರಿನ ತೆರೆಗೆದಾರರ ಸಂಘಟಕರಾಗಿದ್ದ ಅವರು ಆ ದಿನಗಳಲ್ಲಿಯೇ ದಾಖಲೆಗಳನ್ನು ಕನ್ನಡದಲ್ಲಿ ಮೂಡಿಸಲು ಕಾರಣರಾದರು.

ಪರಿಶುದ್ಧ ಹಸ್ತ[ಬದಲಾಯಿಸಿ]

ವೃತ್ತಿ ಜೀವನದಲ್ಲಿ ಅವರು ಅತ್ಯಂತ ಪರಿಶುದ್ಧರಾಗಿದ್ದರು. ಅಮಲ್ದಾರರಾಗಿದ್ದಾಗ ತಿಂಗಳಿಗೆ ಹತ್ತು ದಿನಗಳ ಕಾಲದ ಸಂಚಾರದಲ್ಲಿ ಅವರು ಗ್ರಾಮಸ್ಥರಿಂದ ಹಾಲುಹಣ್ಣುಗಳನ್ನೂ ಬೆಲೆ ಕೊಡದೆ ಸ್ವೀಕರಿಸುತ್ತಿರಲಿಲ್ಲ. ಪಕ್ಕದ ಮನೆ ಖಾಲಿ ಬಿದ್ದಿದ್ದಾಗ ಆ ಮನೆಯಲ್ಲಿದ್ದ ಕರಿಬೇವಿನ ಸೊಪ್ಪನ್ನು ಕಿತ್ತಿದ್ದಕ್ಕಾಗಿ ಹೆಂಡತಿಯನ್ನು ಕೋರ್ಟಿಗೆ ಕರೆಸಿ ಜುಲ್ಮಾನೆ ಹಾಕಿದವರು ಅವರು. ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದ ಸಂಬಂಧಿಯೊಬ್ಬನನ್ನು ವಜಾ ಮಾಡಿದವರು. ಕೆಲಸವಿಲ್ಲದ್ದರಿಂದ ಕಳ್ಳತನಕ್ಕಿಳಿದೆ ಎಂದ ಕಳ್ಳನೊಬ್ಬನಿಗೆ ಮನೆಯಲ್ಲೇ ಕೆಲಸ ಕೊಡುವ ಧೈರ್ಯ ಮಾಡಿದವರು, ಮೇಲಧಿಕಾರಿಗಳಿಗೆ ವಸ್ತುಗಳನ್ನು ಸರಬರಾಜು ಮಾಡಬೇಕಾಗಿ ಬಂದರೆ ಅವರಿಗೆ ಬಿಲ್ಲು ಕಳಿಸಿ ಹಣ ವಸೂಲಿ ಮಾಡಿದವರು ಅವರು. ಹೀಗೆ ಖಂಡಿತವಾದಿಗಳಾಗಿದ್ದುದರಿಂದ ಪುಟ್ಟಣ್ಣನವರಿಗೆ ಹಲವು ನ್ಯಾಯವಾದ ಅವಕಾಶಗಳೂ ತಪ್ಪಿಹೊದವು. ೧೯೩೦ರಲ್ಲಿ ಕಡೆಯುಸಿರಿರುವವರೆಗೆ ಪುಟ್ಟಣ್ಣನವರು ಬರವಣಿಗೆ, ಸಾರ್ವಜನಿಕ ಸೇವೆಗಳಲ್ಲಿ ತೊಡಗಿದ್ದರು.

ಸಾಹಿತಿಯಾಗಿ[ಬದಲಾಯಿಸಿ]

ಪುಟ್ಟಣ್ಣನವರ ಗದ್ಯಸಾಧನೆ ಹಲವು ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡಿದೆ. ಕಥೆ, ಕಾದಂಬರಿಗಳು, ಜೀವನಚರಿತ್ರೆಗಳು, ರೂಪಾಂತರ ಭಾಷಾಂತರಗಳು, ಸಂಶೋಧನೆ, ಪಠ್ಯ ರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು ಈ ಮಾತಿಗೆ ಸಾಕ್ಷಿಯಾಗಿವೆ. ಜನಪ್ರಿಯವಾದ ಕಾದಂಬರಿಯ ಪ್ರಕಾರವನ್ನು ಯಶಸ್ವಿಯಾಗಿ ತಂದವರಲ್ಲಿ ಪುಟ್ಟಣ್ಣನವರು ಮುಂಚೂಣಿಯಲ್ಲಿದ್ದಾರೆ. ಕನ್ನಡದ ನುಡಿಗಟ್ಟಿನಿಂದ ಶ್ರೀಮಂತವಾದ ಶೈಲಿಯಲ್ಲಿ ಮೂಡಿದ ಅವರ ಕಾದಂಬರಿಗಳಾದ ‘ಮಾಡಿದ್ದುಣ್ಣೋ ಮಹಾರಾಯ’ (೧೯೧೫), , ‘ಮುಸುಗ ತೆಗೆಯೇ ಮಾಯಾಂಗನೆ’ (೧೯೨೮), ಹಾಗೂ ‘ಅವರಿಲ್ಲದೂಟ’ (ಪ್ರಕಟವಾದದ್ದು ೧೯೫೯) ಕಾದಂಬರಿಗಳು ಪುಟ್ಟಣ್ಣನವರ ಸಾಹಿತ್ಯಕ ಸಿದ್ಧಿಯ ಅತ್ಯುತ್ತಮ ಉದಾಹರಣೆಗಳು. ಆ ಕಾಲದ ಸಾಮಾಜಿಕ ಹಾಗೂ ಜನಪದ ವಿಚಾರಗಳು ಬೆರಗುಗೊಳಿಸುವಂತೆ ಇಲ್ಲಿ ಚಿತ್ರಿತವಾಗಿದೆ. ಅಂದಿನ ಸಾಂಸ್ಕೃತಿಕ ನೆಲೆಬೆಲೆಗಳೇನು ಎಂಬುದನ್ನು ಪುಟ್ಟಣ್ಣನವರ ಕಾದಂಬರಿಗಳಿಂದ ಸುಲಭವಾಗಿ ಕಂಡುಹಿಡಿಯಬಹುದು. ಅವರ ಕಾದಂಬರಿಗಳಷ್ಟು ಸಮರ್ಥವಾಗಿ ಕನ್ನಡದ ಬೇರೆ ಯಾವುದೇ ಕಾದಂಬರಿ ಮೈಸೂರಿನ ರಾಜಾಸ್ಥಾನವನ್ನು ಚಿತ್ರಿಸಿಲ್ಲ. ನಿಜವಾದ ರಾಜಭಕ್ತರಿಂದ ಹಿಡಿದು ಸಮಯಸಾಧಕರವರೆಗೆ ಹಲವು ಜನರ ಪರಿಚಯ ಇಲ್ಲಿದೆ. ಕಲೆ ಸಾಹಿತ್ಯಗಳ ಪೋಷಣೆಗಾಗಿ, ಧಾನಧರ್ಮಗಳಿಗಾಗಿ ಮುಮ್ಮಡಿಯವರ ಬೆಂಬಲವನ್ನು ತಿಳಿಸುವಾಗ ಅವರ ಅತ್ಯುಜ್ವಲ ವ್ಯಕ್ತಿತ್ವವನ್ನು ರೂಪಿಸಿದಂತೆಯೇ ದೌಲತ್ತಿಗೆ ಎರವಾಗಿ ರಾಜಕೀಯದಲ್ಲಿ ಸೋತ, ಹಲವು ಕ್ಷೋಭೆಗಳ ನಡುವೆ ತೊಳಲಾಡುವ ರಾಜರ ಚಿತ್ರಣವನ್ನೂ ಅವರು ಕೊಟ್ಟಿದ್ದಾರೆ. ಮುಮ್ಮಡಿಯವರಲ್ಲಿ ಪುಟ್ಟಣ್ಣನವರಿಗೆ ಅಪರಿಮಿತ ಗೌರವವಿತ್ತು.

ಪುಟ್ಟಣ್ಣನವರು ರಾಮಾಯಣವನ್ನೇ ಮನಸ್ಸಿನಲ್ಲಿಟ್ಟುಕೊಂಡು ಸ್ತ್ರೀಯ ಪಾತಿವ್ರತ್ಯವನ್ನು ಪ್ರಾಮಾಣಿಕತೆಯ ಒಂದು ರೂಪವೆಂದು ನಿರೂಪಿಸಿ ತಮ್ಮ ಮೊದಲ ಕಾದಂಬರಿ ‘ಮಾಡಿದ್ದುಣ್ಣೋ ಮಹಾರಾಯ’ ವನ್ನು ರಚಿಸಿದರು. ತಮ್ಮ ಮೊದಲ ದಾಂಪತ್ಯದ ಬಿರುಕಿನ ಕಾರಣದಿಂದ ನೊಂದ ಪುಟ್ಟಣ್ಣನವರು, ಅದಕ್ಕೆ ವಿರುದ್ಧ ಮುಕ್ತಾಯವನ್ನು ಈ ಕೃತಿಯಲ್ಲಿ ಕಾಣಿಸಿದ್ದಾರೆ. ಒಂದು ಸಂಸ್ಕೃತಿಯ ಧೋರಣೆಯನ್ನು ವೈಯಕ್ತಿಕ ನೆಲೆಗಟ್ಟಿನಲ್ಲಿ ಅನುಭವಿಸಿ, ಪಕ್ವತೆಯನ್ನು ಹೊಂದಿ ಕಲಾತ್ಮಕವಾಗಿ ಅದನ್ನು ಕೃತಿಯಾಗಿಸುವುದರ ಒಂದು ಶ್ರೇಷ್ಠ ಉದಾಹರಣೆ ‘ಮಾಡಿದ್ದುಣ್ಣೋ ಮಹಾರಾಯ’.

‘ಮುಸುಕ ತೆಗೆಯೇ ಮಾಯಾಂಗನೆ’ಯ ಹೆಸರು ಈ ಕಾದಂಬರಿ ಪತ್ತೇದಾರಿ ಕಥೆಯನ್ನೋ, ರಂಜನೀಯವಾದ ಸುರಸ ಕಥೆಯನ್ನೋ ಹೇಳುತ್ತದೆ ಎನಿಸುವಂತೆ ಮಾಡುತ್ತದೆ. ಬ್ರಿಟಿಷರ ಕೈಯಿಂದ ಮೈಸೂರು ಅರಸೊತ್ತಿಗೆಯನ್ನು ಬಿಡಿಸಿ ಪುನಃ ಅದನ್ನು ಮುಮ್ಮಡಿಯವರ ಕೈಸೇರುವಂತೆ ಮಾಡಲು ಬ್ರಿಟಿಷ್ ಸರದಾರರನ್ನು ತಮ್ಮ ಕಡೆಗೆ ಒಲಿಸಿಕೊಳ್ಳುವ ಒಂದು ಹವಣು ಇಲ್ಲಿ ಕಾಣುತ್ತದೆ. ಅಂದಿನ ಮೈಸೂರಿನ ರಾಜಕೀಯ ಸ್ಥಿತಿಯಲ್ಲಿನ ಒಳಜಗಳಗಳು, ಅಸೂಯೆ, ಪಿತೂರಿ ಮೊದಲಾದ ಎಲ್ಲ ಗೊಂದಲಗಳೂ ಈ ಕಥೆಯಲ್ಲಿ ಸ್ಪಷ್ಟವಾಗಿ ಚಿತ್ರಿತವಾಗಿವೆ.

‘ಅವರಿಲ್ಲದೂಟ’ ಕಥೆಯ ಒಂದೆಳೆಯನ್ನು ಇತ್ತೀಚಿಗೆ ಹಾಸ್ಯರೂಪಕವಾಗಿ ಸಂಪದದಲ್ಲಿ ಪ್ರಕಟಿಸಿದ್ದೆ, ಗರತಿಯೋಬ್ಬಳ ಮೇಲಿನ ಸಂಚು ಅಯಶಸ್ವಿಯಾಗುವುದಲ್ಲದೆ ನಿರಪರಾಧಿಗಳನ್ನು ಮೋಸಕ್ಕೊಳಗಾಗಿಸುವ ಯತ್ನವೂ ವಿಫಲವಾಗುವುದನ್ನು ಇಲ್ಲಿ ಕಾಣಬಹುದು. ಈ ಕೃತಿಯಲ್ಲಿ ಮೊದಲ ಎರಡು ಕಾದಂಬರಿಗಳಿಗಿಂತ ಸಂಭಾಷಣೆಗೆ ಹೆಚ್ಚಿನ ಮಹತ್ವ ದಕ್ಕಿದ್ದು ಕಥೆ ಬಲು ಚುರುಕಾಗಿ ಸಾಗುತ್ತದೆ.

ಪುರಾಣ ಇತಿಹಾಸ, ಕಾವ್ಯ, ಶಾಸ್ತ್ರ ಗ್ರಂಥಗಳು ಮತ್ತು ಇತರ ಹಲವು ಮೂಲಗಳಿಂದ ಆರಿಸಿದ ಸುಮಾರು ನೂರೈವತ್ತು ಕಥೆಗಳ ಸಂಕಲನವೇ ‘ನೀತಿಚಿಂತಾಮಣಿ’ (೧೮೮೪). ಕಥೆ ಎಂದರೆ ಪ್ರತಿ ಮಗುವಿನ ಕಣ್ಣೂ ಅರಳುತ್ತದೆ. ಕುತೂಹಲ ಕೊನರುತ್ತದೆ. ಈ ಕಥನ ಕುತೂಹಲವನ್ನೇ ಪುಟ್ಟಣ್ಣನವರು ಬಾಲ ಶಿಕ್ಷಣದಲ್ಲಿ ಒಂದು ಖಾತರಿಯಾದ ಅಸ್ತ್ರವನ್ನಾಗಿಸಿಕೊಂಡರು. ಮಕ್ಕಳ ಸಾಹಿತ್ಯ ನಿರ್ಮಾಪಕರೆಂಬ ಪಟ್ಟ ಈ ಕೃತಿಯಿಂದಲೇ ಪುಟ್ಟಣ್ಣನವರಿಗೆ ಲಭಿಸಿತು.

‘ಪುಟ್ಟಣ್ಣ ಹೇಳಿದ ಕಥೆಗಳು’ (ಪ್ರಕಟಗೊಂಡಿದ್ದು ೧೯೮೧) ಸಂಕಲನದಲ್ಲಿ ರೂಢಿಯ ಕಥೆಗಳಿಗೆ ಪ್ರಾಧಾನ್ಯ ದಕ್ಕಿದೆ. ‘ಪೇಟೆ ಮಾತಿನಜ್ಜಿ’(೧೯೨೭) ಒಂದು ರಮ್ಯಕಥೆ. ಜನಪದ ಕಥೆಗಳಲ್ಲಿ ಕಾಣುವಂತಹದು. ‘ಕಲಾವತೀ ಪರಿಣಯ’ ದಂತಹ ಕಾವ್ಯದ ಕಥೆಗೂ ಈ ಕಥೆಗೂ ಕೆಲವು ಹೊಲಿಕೆಗಳನ್ನು ಕಾಣಬಹುದು. ಚೀನಾ ದೇಶದ ತತ್ವಜ್ಞಾನಿ ಕನಫ್ಯೂಷಿಯಸ್ಸನನ್ನು ಕುರಿತ ‘ಕಾಂಪೂಷನ ಚರಿತ್ರೆ’ (೧೮೯೨), ಮುಮ್ಮಡಿಯವರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ‘ಕುಣಿಗಲ ರಾಮಾಶಾಸ್ತ್ರಿಗಳ ಚರಿತ್ರೆ’ (೧೯೧೦), ಹೈದಾರಾಬಾದಿನ ಮಂತ್ರಿ ‘ಸರ್ ಸಾಲಾರ್ ಜಂಗನಚರಿತ್ರೆ’ (೧೯೧೭), ಬಹಮನಿ ಸಂಸ್ಥಾನದ ಮಂತ್ರಿ ‘ಮಹಮದ್ ಗವಾನನ ಚರಿತ್ರೆ’ (೧೯೨೨) ಮತ್ತ್ರು ಸ್ವಸಾಮರ್ಥ್ಯದಿಂದ ರಾಜ್ಯ ಕಟ್ಟಿ ಆಳಿದ ಶಿವಾಜಿಯ ವೃತ್ತಾಂತ ‘ಛತ್ರಪತಿ ಶಿವಾಜಿ ಮಹಾರಾಜ’(ಪ್ರ.೧೯೮೧) ಇವು ಪುಟ್ಟಣ್ಣನವರು ರಚಿಸಿದ ಐದು ಜೀವನಚರಿತ್ರೆಗಳು. ಪುಟ್ಟಣ್ಣನವರು ಷೇಕ್ಸ್ ಪಿಯರ್ ಕವಿಯ ಮೂರು ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ‘ಸಿಂಬಲೈನ್’ ರೂಪಾಂತರ ‘ಜಯಸಿಂಹರಾಜ ಚರಿತ್ರೆ’, ‘ಕಿಂಗ್ ಲಿಯರ್’ ನಾಟಕದ ರೂಪಾಂತರ ‘ಹೇಮಚಂದ್ರ ವಿಲಾಸ’ ಮತ್ತು ಹ್ಯಾಮ್ಲೆಟ್’ ರೂಪಾಂತರ ‘ಹೇಮಲತ’. ಥಾಮಸ್ ಡೇ ಬರೆದ ‘ದಿ ಹಿಸ್ಟರಿ ಆಫ್ ಸ್ಟ್ಯಾಂಡ್ ಫುರ್ಡ್ ಅಂಡ್ ಮರ್ಟನ್’ ಕೃತಿಯ ರೂಪಾಂತರವೇ ‘ಸಮತಿ ಮದನಕುಮಾರರ ಚರಿತ್ರೆ’ (೧೮೯೭). ಮಕ್ಕಳಿಗೆ ಕಥೆಗಳ ಮೂಲಕ ಒಳ್ಳೆಯ ನಡತೆಯನ್ನು ಮತ್ತು ವಿದ್ಯಾಭ್ಯಾಸದ ವಿಷಯಗಳನ್ನು ಬೋಧಿಸುವುದೇ ಇಲ್ಲಿಯ ಸ್ವಾರಸ್ಯ. ಇಬ್ಬರು ಮುಗ್ಧ ಬಾಲಕರು ಗುರುಕುಲವಾಸದಲ್ಲಿ ಸ್ವಲ್ಪ ಕಾಲ ಬೆಳೆಯುವ ಚಿತ್ರಣ ಹಾಗೂ ಉಪಾಧ್ಯಾಯರು ಕೊಡುವ ಉತ್ತಮ ಶಿಕ್ಷಣ ಕ್ರಮ ಈ ಕೃತಿಯ ವಸ್ತು. ಮೂಲದ ಸಾರ ರೂಪಾಂತರದಲ್ಲಿ ಸೊಗಸಾಗಿ ಭಟ್ಟಿಯಿಳಿದಿದೆ. ಇಂಗ್ಲೀಷ್ ಭಾಷೆಯಲ್ಲದೆ ‘ಹಾತಿಂ ತಾಯ್’ (೧೯೨೦) ಪರ್ಷಿಯನ್ ಮೂಲದ ಕಥೆಯನ್ನು ಕೂಡ ಕನ್ನಡಕ್ಕೆ ಅನುವಾದಿಸಿದ್ದಾರೆ.

ಪುಟ್ಟಣ್ಣನವರು ಪಾಳೆಯಗಾರರನ್ನು ಕುರಿತು ಮೊದಲು ಬರೆದ ಕೃತಿ ‘ಪಾಳಯಗಾರರು’ (೧೯೨೩). ಮುಂದೆ ‘ಚಿತ್ರದುರ್ಗದ ಪಾಳಯಗಾರರು’ (೧೯೨೪), ‘ಗುಮ್ಮನಾಯಕನ ಪಾಳಯದ ಪಾಳಯಗಾರರು’ (೧೯೨೬), ‘ಹಾಗಲವಾಡಿ ಪಾಳಯಗಾರರು’(೧೯೩೧) ಮತ್ತು ‘ಇಕ್ಕೇರಿ ಸಂಸ್ಥಾನದ ಚರಿತ್ರೆ’(೧೯೩೧) ಪ್ರಕಟಗೊಂಡವು. ತಮ್ಮ ಅಮಲ್ದಾರ ವೃತ್ತಿಯಲ್ಲಿ ಹಲವು ಊರುಗಳನ್ನು ಸುತ್ತಬೇಕಾದಾಗ ಪುಟ್ಟಣ್ಣನವರು ಆಯಾ ಪಾಳಯಗಾರರ ವಂಶಸ್ಥರ ಬಳಿಯಲ್ಲಿದ್ದ ದಾಖಲೆಗಳನ್ನು ಸಂಗ್ರಹಿಸಿ ಆಳವಾಗಿ ಅಧ್ಯಯನ ಮಾಡಿದರು. ಈ ಪಾಳಯಗಾರರ ವಿಚಾರವಾಗಿ ಬೇರೆ ಎಲ್ಲೂ ಇಷ್ಟು ವ್ಯವಸ್ಥಿತವಾದ ದಾಖಲೆಗಳು ಸಿಗುವುದಿಲ್ಲ. ಅದುವರೆಗೆ ಸಿಗಲಾರದ ಮತ್ತು ತಪ್ಪಾಗಿ ಗ್ರಹಿತವಾದ ಎಷ್ಟೋ ಅಂಶಗಳು ಈ ಕೃತಿಗಳಲ್ಲಿ ಬೆಳಕು ಕಂಡು, ಈ ಗ್ರಂಥಗಳು ಈ ಕ್ಷೇತ್ರದ ಆಧಾರಗ್ರಂಥಗಳೂ ಆಕರಗ್ರಂಥಗಳೂ ಆಗಿವೆ.

ಪಠ್ಯಕೃತಿಗಳ ರಚನೆ[ಬದಲಾಯಿಸಿ]

ಚಾಮರಾಜ ಒಡೆಯರ ಅಧಿಕಾರಾವಧಿಯಲ್ಲಿ ಹಲವು ಪಾಠಶಾಲೆಗಳು ಪ್ರಾರಂಭವಾದವು. ಅಂದಿನ ದಿವನಾರಾದ ರಂಗಾಚಾರ್ಲು ಮತ್ತಿತರ ಮಹನೀಯರ ಪ್ರೋತ್ಸಾಹದಿಂದ ಪುಟ್ಟಣ್ಣನವರು ಹಲವಾರು ಪಠ್ಯಕೃತಿಗಳನ್ನು ರಚಿಸಿದರು. ಎರಡು ಭಾಗಗಳಲ್ಲಿ ‘ಹಿಂದೂ ಚರಿತ್ರ ದರ್ಪಣ’ (೧೮೮೨), ‘ಹಿಂದೂ ಚರಿತ್ರ ಸಂಗ್ರಹ’(೧೮೮೭), ‘ಕನ್ನಡ ಒಂದನೆಯ ಪುಸ್ತಕವು’ (೧೮೯೫) ಹಾಗೂ ‘ಕನ್ನಡ ಲೇಖನ ಲಕ್ಷಣ’ (೧೯೧೫) ಇವು ನಾಲ್ಕು ಪುಟ್ಟಣ್ಣನವರ ಪಠ್ಯಕೃತಿಗಳು. ಕನ್ನಡದಲ್ಲಿ ಇಂಥ ಪಠ್ಯಗಳ ರಚನೆಗೆ ಸಿದ್ಧಸೂತ್ರಗಳಿಲ್ಲದಿದ್ದ ಕಾಲದಲ್ಲಿ ಮಕ್ಕಳಿಗೆ ಭೋಧಿಸಬೇಕಾದ ಅಂಶಗಳನ್ನು ಒಂದು ಕ್ರಮಕ್ಕೆ ಅಳವಡಿಸಿದ ಈ ಕೃತಿಗಳು ಮುಂದಿನ ಅಂಥ ಕೃತಿಗಳಿಗೆ ಮಾರ್ಗದರ್ಶಿಯಾದವು. ಸುವ್ಯವಸ್ಥಿತ ವಿಷಯ, ಸಂಗ್ರಹಗುಣ, ನಕ್ಷೆ, ಭೂಪಟ, ಚಿತ್ರಗಳು ಇಲ್ಲಿನ ಅಚ್ಚುಕಟ್ಟನ್ನು ತಿಳಿಸುತ್ತವೆ. ಪ್ರಾರಂಭದ ಪಠ್ಯಗಳೇ ಇಷ್ಟು ಚೆನ್ನಾಗಿರುವುದು ಸಂತೋಷದ ವಿಷಯವಾಗಿದೆ. ನಾಡಿನ ಎಳೆಯರನ್ನು ಕಂಡರೆ ಪುಟ್ಟಣ್ಣನವರಿಗಿದ್ದ ಪ್ರೀತಿ, ಶಿಕ್ಷಣದಲ್ಲಿದ್ದ ಆಸಕ್ತಿ ಈ ಕೃತಿಗಳ ರಚನೆಗೆ ಮೂಲ ಕಾರಣ. ಪುಟ್ಟಣ್ಣನವರ ವೃತ್ತಿಜೀವನ ಪ್ರಾರಂಭವಾದುದು ಕೂಡ ಉಪಾಧ್ಯಾಯ ವೃತ್ತಿಯಿಂದ ಎಂಬುದು ಕೂಡ ಗಮನಾರ್ಹ ಸಂಗತಿ.

ಪತ್ರಿಕೋದ್ಯಮಿ[ಬದಲಾಯಿಸಿ]

ಪುಟ್ಟಣ್ಣನವರು ಎಂ. ಬಿ. ಶ್ರೀನಿವಾಸಯ್ಯಂಗಾರ್ಯರೊಡನೆ ೧೮೮೩ರ ಅಕ್ಟೋಬರ್ ಮಾಸದಲ್ಲಿ "ಹಿತಬೋಧಿನಿ" ಮಾಸಪತ್ರಿಕೆ ಆರಂಭಿಸಿದರು. ಮುಂದೆ ಅವರು ಮದರಾಸಿಗೆ ಉನ್ನತ ವ್ಯಾಸಂಗಕ್ಕೆ ತೆರಳಿದಾಗ ಮುಂದೆ ಪ್ರಸಿದ್ಧ ಪತ್ರಿಕೊಧ್ಯಮಿಗಳಾಗಿ ರೂಪುಗೊಂಡ ವೆಂಕಟಕೃಷ್ಣಯ್ಯನವರ ಬೆಳೆಯುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪತ್ರಿಕೆಯ ನಿರ್ವಹಣೆಯನ್ನು ವಹಿಸಿಕೊಟ್ಟರು.

ಕೃತಿಗಳು[ಬದಲಾಯಿಸಿ]

ಕಥಾ ಸಂಕಲನ[ಬದಲಾಯಿಸಿ]

ನೀತಿ ಚಿಂತಾಮಣಿ (೧೮೮೪) ■ಪೇಟಿ ಮಾತೇನಜ್ಜಿ(೧೯೨೭) ■ಪುಟ್ಟಣ್ಣ ಹೇಳಿದ ಕಥೆಗಳು

ಕಾದಂಬರಿಗಳು[ಬದಲಾಯಿಸಿ]

ಜೀವನ ಪರಿಚಯ[ಬದಲಾಯಿಸಿ]

 • ಕಾಂಪೂಷನ ಚರಿತ್ರೆ (೧೮೯೨)
 • ಕುಣಿಗಲ್ ರಾಮಶಾಸ್ತ್ರಿಗಳ ಚರಿತ್ರೆ (೧೯೧೦)
 • ಸರ್ ಸಾಲಾರ್ ಜಂಗನ ಚರಿತ್ರೆ
 • ಮಹಮೂದ್ ಗವಾನನ ಚರಿತ್ರೆ (೧೯೨೮)

ಇತರ[ಬದಲಾಯಿಸಿ]

 • ಹಿಂದೂ ಚರಿತ್ರೆ ದರ್ಪಣ ಭಾಗ-೧ (೧೮೮೨)
 • ಕನ್ನಡ ಒಂದನೆಯ ಪುಸ್ತಕವು (೧೮೯೫)
 • ಕನ್ನಡ ಲೇಖನ ಲಕ್ಷಣ (೧೯೧೫)
 • ಪಾಳೆಯಗಾರರು (೧೯೨೩)
 • ಚಿತ್ರದುರ್ಗದ ಪಾಳೆಯಗಾರರು (೧೯೨೪)
 • ಇಕ್ಕೆರಿ ಸಂಸ್ಥಾನದ ಚರಿತ್ರೆ (೧೯೩೧)

ಅನುವಾದ[ಬದಲಾಯಿಸಿ]

 • ಹೇಮಚಂದ್ರರಾಜ ವಿಲಾಸ (ಮೂಲ: ಶೇಕ್ಸ್ಪಿಯರನ ‘ಕಿಂಗ್ ಲಿಯರ್) (೧೮೯೯)
 • ಹೇಮಲತ (ಮೂಲ: ಶೇಕ್ಸ್ಪಿಯರನ ‘ಹ್ಯಾಮ್ಲೆಟ್’)

ಅಂತರ್ಜಾಲದಲ್ಲಿ ಲಭ್ಯ ಇರುವ ಪುಸ್ತಕಗಳು[ಬದಲಾಯಿಸಿ]

ಅವರ ಅನೇಕ ಪುಸ್ತಕಗಳು ಅಂತರ್ಜಲದಲ್ಲಿ ಉಚಿತವಾಗಿ ಲಭ್ಯ ಇದ್ದು ಅವುಗಳನ್ನು pustaka.sanchaya.net ತಾಣದಲ್ಲಿ ಈ ಕೊಂಡಿಯಲ್ಲಿ ಸಿಗುತ್ತವೆ.

ವಿದಾಯ[ಬದಲಾಯಿಸಿ]

ಎಂ. ಎಸ್. ಪುಟ್ಟಣ್ಣನವರು ಏಪ್ರಿಲ್ ೧೧, ೧೯೩೦ರ ವರ್ಷದಲ್ಲಿ ಈ ಲೋಕವನ್ನಗಲಿದರು. ಹೊಸಗನ್ನಡ ಸಾಹಿತ್ಯಕಕ್ಕೆ ತಮ್ಮದೇ ಆದ ರೀತಿಯಲ್ಲಿ ಹೊಸ ಮಾರ್ಗ ತೆರೆದುಕೊಟ್ಟವರಲ್ಲಿ ಪ್ರಮುಖರಾಗಿ ಅವರು ಚಿರಸ್ಮರಣೀಯರಾಗಿದ್ದಾರೆ.

ಆಕರಗಳು[ಬದಲಾಯಿಸಿ]

 1. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಕಟಣೆಯಾದ 'ಸಾಲು ದೀಪಗಳು' ಕೃತಿಯಲ್ಲಿ ಎಚ್. ಎಸ್. ಸುಜಾತಾ ಅವರ ಲೇಖನ