ವಿಷಯಕ್ಕೆ ಹೋಗು

ಮೈನಾವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈನಾವತಿ
ಹುಟ್ಟು
ಮೈನಾವತಿ

೨೬ ಜುಲೈ ೧೯೩೫
ಭಟ್ಕಳ, ಮುಂಬಯಿ ಪ್ರಾಂತ್ಯ, ಬ್ರಿಟಿಷ್ ಇಂಡಿಯಾ
ಉದ್ಯೋಗನಟಿ
ಸಕ್ರಿಯ ವರ್ಷಗಳು೧೯೫೫-೨೦೧೨
ಹೆಂಡತಿ/ಗಂಡಡಾ.ರಾಧಾಕೃಷ್ಣ

ಮೈನಾವತಿ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಮತ್ತು ಕಿರುತೆರೆ ಅಭಿನೇತ್ರಿ. ೧೯೫೦ ಮತ್ತು ೧೯೬೦ರ ದಶಕದಲ್ಲಿ ಸಕ್ರಿಯರಾಗಿದ್ದ ಮೈನಾವತಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಯರ ಸೊಸೆ(೧೯೫೭), ಅಬ್ಬಾ ಆ ಹುಡುಗಿ(೧೯೫೯), ಅನುರಾಧ(೧೯೬೭), ಶ್ರೀಕೃಷ್ಣದೇವರಾಯ(೧೯೭೦) ಮತ್ತು ಅಳಿಯ ಗೆಳೆಯ(೧೯೭೧) ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳಿಗೆ ಸಮರ್ಥವಾಗಿ ಜೀವ ತುಂಬಿ ಕನ್ನಡ ಪ್ರೇಕ್ಷಕರ ನೆಚ್ಚಿನ ಅಭಿನೇತ್ರಿ ಎನ್ನಿಸಿಕೊಂಡಿದ್ದರು. ತಮಿಳಿನ ಬೊಮ್ಮೈ ಕಲ್ಯಾಣಂ(೧೯೫೮), ಮಾಲಯಿಟ್ಟ ಮಂಗೈ(೧೯೫೮) ಮತ್ತು ಕುರವಂಜಿ(೧೯೬೦) ಮೈನಾವತಿ ಅಭಿನಯದ ಗಮನಾರ್ಹ ಚಿತ್ರಗಳಾಗಿವೆ[][][].

ಆರಂಭಿಕ ಜೀವನ

[ಬದಲಾಯಿಸಿ]

ಮೈನವಾತಿಯವರು ೨೬ ಜುಲೈ ೧೯೩೫ರಂದು ಉತ್ತರ ಕನ್ನಡದ ಭಟ್ಕಳದಲ್ಲಿ ರಂಗ ರಾವ್ ಮತ್ತು ಕಾವೇರಿ ಬಾಯಿ ದಂಪತಿಯ ಮಗುವಾಗಿ ಜನಿಸಿದರು. ಇವರ ತಂದೆ ರಂಗ ರಾವ್ ರವರು ಪ್ರಖ್ಯಾತ ಹರಿಕಥೆಯ ವಿದ್ವಾನ್ ರಾಗಿದ್ದರು ಮತ್ತು ಸಂಗೀತ, ಸಾಹಿತ್ಯ, ಅಭಿನಯ, ಚಿತ್ರಕಲೆಯಲ್ಲಿ ಪರಿಣಿತರು ಕೊಡ. ತಾಯಿ ಕಾವೇರಿ ಬಾಯಿ ಶಿಕ್ಷಕಿಯಾಗಿದ್ದರು. ಇವರ ಸಹೋದರ ಎಂ.ಪ್ರಭಾಕರ್ ರವರು ಪ್ರಸಿದ್ಧ ಸಂಗೀತಗಾರ. ಮೈನಾವತಿಯವರ ಅಕ್ಕ ಪಂಢರೀಬಾಯಿಯವರು ಚಿಕ್ಕಂದಿನಿಂದಲೇ ಹರಿಕಥೆಗಳನ್ನು ಮಾಡುತ್ತಿದ್ದರು ಮತ್ತು ರಂಗಭೂಮಿಯಲ್ಲೂ ಅಭಿನಯಿಸುತ್ತಿದ್ದರು. ವಾಣಿ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಪಂಢರೀಬಾಯಿ ನಂತರದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿಯಾಗಿ ಅಪಾರ ಹೆಸರು ಮಾಡಿದರು. ಸಹೋದರಿ ಪಂಢರೀಬಾಯಿಯವರ ದಾರಿಯಲ್ಲಿ ನಡೆದ ಮೈನಾವತಿಯವರು ಪಂಢರೀಬಾಯಿಯವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಸತಿ ಸಕ್ಕು ಚಿತ್ರದಲ್ಲಿ ಚಿಕ್ಕ ಪಾತ್ರಕ್ಕಾಗಿ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು[][].

ವೃತ್ತಿ ಜೀವನ

[ಬದಲಾಯಿಸಿ]

ಬೆಳ್ಳಿತೆರೆ

[ಬದಲಾಯಿಸಿ]

ಸತಿ ಸಕ್ಕು ಚಿತ್ರದ ಚಿಕ್ಕ ಪಾತ್ರದಲ್ಲಿ ಚೊಕ್ಕ ಅಭಿನಯ ನೀಡಿದ ಮೈನಾವತಿ ತಮಿಳಿನ ಪೊಣ್ ವಾಯಲ್(೧೯೫೪) ಚಿತ್ರದಲ್ಲಿನ ಗಮನಾರ್ಹ ಅಭಿನಯದಿಂದ ಚಿತ್ರರಸಿಕರ ಮನಸೆಳೆದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲಿಲ್ಲ[]. ನಂತರದಲ್ಲಿ ಮೈನಾವತಿ ಅಭಿನಯಿಸಿದ ಚಿತ್ರ ತಮಿಳಿನ ಎನ್ ಮಗಳ್(೧೯೫೫). ಈ ಚಿತ್ರದಲ್ಲಿ ನಾಯಕಿಯಾಗಿ ಶಕ್ತ ಅಭಿನಯ ನೀಡಿದರರೂ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು[]. ಪಂಢರೀಬಾಯಿ ಯವರು ಮುಖ್ಯ ಭೂಮಿಕೆಯಲ್ಲಿದ್ದ ಕುಲ ದೈವಂ(೧೯೫೬) ಚಿತ್ರದಲ್ಲಿ ಬಾಲ್ಯದಲ್ಲೇ ಗಂಡನನ್ನು ಕಳೆದುಕೊಂಡ ಹುಡುಗಿಯಾಗಿ ಭಾವಪೂರ್ಣ ಅಭಿನಯ ನೀಡಿದ್ದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದದ್ದಲ್ಲದೇ ರಾಷ್ಟ್ರಮಟ್ಟದ ಪುರಸ್ಕಾರ ಪಡೆಯಿತು[].

ರಾಜ್ ಕುಮಾರ್ ಮತ್ತು ಪಂಢರೀಬಾಯಿಯವರು ಮುಖ್ಯ ಭೂಮಿಕೆಯಲ್ಲಿದ್ದ ಭಕ್ತ ವಿಜಯ(೧೯೫೬) ಮತ್ತು ಹರಿಭಕ್ತ(೧೯೫೬) ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿ ಗಮನ ಸೆಳೆದರು. ಹರಿಭಕ್ತ ಚಿತ್ರದಲ್ಲಿ ಋಣಾತ್ಮಕ ಛಾಯೆಯ ವೇಶ್ಯಯ ಪಾತ್ರದಲ್ಲಿ ಪ್ರಶಂಸನೀಯ ಭಾವಾಭಿನಯ ಮತ್ತು ನೃತ್ಯಾಭಿನಯ ನೀಡಿದ ಮೈನಾವತಿ ಮುತ್ತೈದೆ ಭಾಗ್ಯ(೧೯೫೬) ಚಿತ್ರದಲ್ಲಿ ನಟಶೇಖರ ಕಲ್ಯಾಣ್ ಕುಮಾರ್ ರವರ ನಾಯಕಿಯಾಗಿ ನೀಡಿದ ಲವಲವಿಕೆಯ ಅಭಿನಯ ಪ್ರೇಕ್ಷಕರಿಗೆ ಹಿಡಿಸಿತ್ತು. ರಾಯರ ಸೊಸೆ(೧೯೬೭) ಚಿತ್ರದಲ್ಲಿ ವರದಕ್ಷಿಣೆ ಕಿರುಕುಳ ನೀಡಿದ ಮಾವನನ್ನು ತನ್ನ ಸದ್ಗುಣದಿಂದ ಗೆಲ್ಲುವ ಸೊಸೆಯ ಪಾತ್ರದಲ್ಲಿ ಮೈನಾವತಿಯವರದ್ದು ಅಪೂರ್ವ ಅಭಿನಯ. ೧೯೫೯ರಲ್ಲಿ ಬಿಡುಗಡೆಯಾದ ಅಬ್ಬಾ ಆ ಹುಡುಗಿ ಚಿತ್ರ ಮೈನಾವತಿಯವರ ವೃತ್ತಿ ಜೀವನದ ಮೈಲಿಗಲ್ಲು. ವಿಲಿಯಮ್ ಶೇಕ್ಸ್‌ಪಿಯರ್‌ ರವರ ದಿ ಟೇಮಿಂಗ್ ಆಫ್ ಶ್ರೂ ನಾಟಕವನ್ನು ಆಧರಿಸಿದ ಈ ಚಿತ್ರದಲ್ಲಿ ಪುರುಷ ದ್ವೇಷಿ ಸ್ವಾಭಿಮಾನಿ ಯುವತಿಯಾಗಿ ಮನೋಜ್ಞ ಅಭಿನಯ ನೀಡಿದ ಮೈನಾವತಿಯವರು ಈ ಚಿತ್ರದಲ್ಲಿ ಪ್ಯಾಂಟು ಶರ್ಟು ಧರಿಸಿ ಗಮನ ಸೆಳೆದಿದ್ದರು[].

ಪ್ರಖ್ಯಾತ ಮಲಯಾಳಂ ನಟ ಪ್ರೇಮ್ ನಜೀರ್ ರವರಿಗೆ ನಾಯಕಿಯಾಗಿ ಪುದುವಾಯಲ್(೧೯೫೭), ವಣ್ಣಕ್ಕಿಳಿ(೧೯೫೯), ಅನ್ಬುಕ್ಕೊರ್ ಅಣ್ಣಿ(೧೯೬೦) ಮುಂತಾದ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ ಮೈನಾವತಿಯವರು ಶಿವಾಜಿ ಗಣೇಶನ್ ರವರೊಂದಿಗೆ ಬೊಮ್ಮೈ ಕಲ್ಯಾಣಂ(೧೯೫೮) ಮತ್ತು ಕುರವಂಜಿ(೧೯೬೦) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಸಮರ್ಥ ಅಭಿನಯ ನಿಡಿದ್ದರು. ಮಾಲಯಿಟ್ಟ ಮಂಗೈ(೧೯೫೮) ಚಿತ್ರದಲ್ಲಿ ಮೈನಾವತಿ ಅಭಿನಯದ ಸೆಂದಮಿಳ್ ತೇನ್ ಮೊಳಿಯಾಲ್... ಗೀತೆ ತಮಿಳಿನ ಅಮರ ಮಧುರ ಗೀತೆಗಳಲ್ಲೊಂದಾಗಿದೆ.

ರಾಜ್ ಕುಮಾರ್ ಅಭಿನಯದ ಅನ್ನಪೂರ್ಣ(೧೯೬೪) ಮತ್ತು ಸರ್ವಜ್ಞಮೂರ್ತಿ(೧೯೬೫) ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ ಮೈನಾವತಿ ಮಹಾಸತಿ ಅನುಸೂಯ(೧೯೬೫) ಚಿತ್ರದಲ್ಲಿ ಪಾರ್ವತಿಯಾಗಿ ಅಚ್ಚುಕಟ್ಟಾದ ಅಭಿನಯ ನೀಡಿದ್ದರು. ಸುಬ್ಬಾಶಾಸ್ತ್ರಿ(೧೯೬೬) ಚಿತ್ರದಲ್ಲಿ ತನ್ನ ತಂದೆಗೆ ಮಂಕು ಬೂದಿ ಎರಚಿ ಆಸ್ಥಿ ಹೊಡೆದುಕೊಳ್ಳಲು ಹೊಂಚು ಹಾಕಿದ್ದ ಲಂಪಟ ಬುದ್ಧಿಯ ಸುಬ್ಬಾಶಾಸ್ತ್ರಿಯ ಅವಗುಣಗಳನ್ನು ತಂದೆ ಎದುರಿಗೇ ಟೀಕಿಸಿ ಅವನ ಕುತ್ಸಿತ ಬುದ್ಧಿಯನ್ನು ಧಿಕ್ಕರಿಸುವ ದಿಟ್ಟ ಹುಡುಗಿ ಸರಸ್ವತಿಯಾಗಿ ಅಮೋಘ ಅಭಿನಯ ನೀಡಿದ ಮೈನಾವತಿ ಪಂಢರೀಬಾಯಿ ನಿರ್ಮಾಣದ ಕುಟುಂಬ ಯೋಜನೆಯ ಮಹತ್ವ ಎತ್ತಿ ಹಿಡಿಯುವ ಕತೆಯನ್ನು ಹೊಂದಿದ್ದ ಅನುರಾಧ(೧೯೬೭) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಅವಿಸ್ಮರಣೀಯ ಅಭಿನಯ ನೀಡಿದ್ದರು[].

೧೯೬೦ರ ದಶಕದ ಕೊನೆಯಲ್ಲಿ ನಾಯಕಿಯ ಪಾತ್ರಕ್ಕೆ ಅವಕಾಶಗಳು ಕಡಿಮೆಯಾದ್ದರಿಂದ ಹಾಸ್ಯ ಪಾತ್ರಗಳತ್ತ ಗಮನ ಹರಿಸಿದ ಮೈನಾವತಿಯವರು ಅಮ್ಮ(೧೯೬೮), ಗಂಡೊಂದು ಹೆಣ್ಣಾರು(೧೯೬೯), ಶ್ರೀಕೃಷ್ಣದೇವರಾಯ(೧೯೭೦) ಮತ್ತು ಅಳಿಯ ಗೆಳೆಯ(೧೯೭೧) ಚಿತ್ರಗಳಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರಿಗೆ ಸರಿಸಾಟಿಯ ಅಭಿನಯ ನೀಡಿ ಪ್ರೇಕ್ಷಕರಿಂದ ಸೈ ಅನ್ನಿಸಿಕೊಂಡರು. ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ತೆನಾಲಿ ರಾಮಕೃಷ್ಣನ ಮಡದಿಯ ಪಾತ್ರಕ್ಕೆ ನವಿರು ಹಾಸ್ಯದಿಂದ ಜೀವ ತುಂಬಿದ ಪರಿ ಅಮೋಘ. ವಿವಾಹದ ನಂತರ ತಮ್ಮ ವೈಯಕ್ತಿಕ ಜೀವನಕ್ಕೆ ಮಹತ್ವ ಕೊಟ್ಟು ನಟನೆಯಿಂದ ಸುಧೀರ್ಘ ವಿರಾಮ ತೆಗೆದುಕೊಂಡ ಮೈನಾವತಿ ಮುಗಿಯದ ಕಥೆ(೧೯೭೬) ಮತ್ತು ಭಾಗ್ಯವಂತರು(೧೯೭೭) ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರೂ ಪೂರ್ಣ ಪ್ರಮಾಣದಲ್ಲಿ ಪೋಷಕ ನಟಿಯಾಗಿ ಚಿತ್ರರಂಗಕ್ಕೆ ಮರಳಿದ್ದು ೧೯೯೦ರ ದಶಕದಲ್ಲಿ. ಒಬ್ಬರಿಗಿಂತ ಒಬ್ಬರು(೧೯೯೨), ಚಿರಬಾಂಧವ್ಯ(೧೯೯೩), ಭಗವಾನ್ ಶ್ರೀ ಸಾಯಿಬಾಬ(೧೯೯೩), ಮಣಿಕಂಠನ ಮಹಿಮೆ(೧೯೯೩) ಮುಂತಾದ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಉತ್ತಮ ಅಭಿನಯ ನೀಡಿದ್ದರು[].

ಅಪ್ಪಟ ಭಾರತೀಯ ನಾರಿಯ ಪಾತ್ರಗಳ ಮೂಲಕ ಚಿರಸ್ಥಾಯಿಯಾಗಿರುವ ಸಹೋದರಿ ಪಂಢರೀಬಾಯಿಯವರ ಜೊತೆಗೆ ದಿಟ್ಟ ತುಂಟತನದ ಪಾತ್ರಗಳಲ್ಲಿ ಅಭಿನಯಿಸುತ್ತ ಚಿತ್ರರಸಿಕರ ಮನದಲ್ಲಿ ಗೌರವಾನ್ವಿತ ಸ್ಥಾನವನ್ನು ಸಂಪಾದಿಸಿದ ಮೈನಾವತಿ ಕನ್ನಡ ಚಿತ್ರರಂಗದ ಸುವರ್ಣಯುಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ದಕ್ಷಿಣ ಭಾರತದ ಜನಪ್ರಿಯ ನಟರಾದ ರಾಜ್ ಕುಮಾರ್, ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಕಲ್ಯಾಣ್ ಕುಮಾರ್, ಎಸ್.ಎಸ್.ರಾಜೇಂದ್ರನ್ ಮತ್ತು ರಾಜಾಶಂಕರ್ ಮುಂತಾದವರೊಂದಿಗೆ ಅಭಿನಯಿಸಿದ ಹಿರಿಮೆಗೆ ಪಾತ್ರರಾದ ಮೈನಾವತಿ ಹೆಚ್.ಎಲ್.ಎನ್.ಸಿಂಹ, ಬಿ.ವಿಠ್ಠಲಾಚಾರ್ಯ, ಟಿ.ವಿ.ಸಿಂಗ್ ಠಾಕೂರ್, ಕೃಷ್ಣನ್-ಪಂಜು ಮತ್ತು ಬಿ.ಆರ್.ಪಂತುಲು ಮುಂತಾದ ಜನಪ್ರಿಯ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ[].

ಕಿರುತೆರೆ

[ಬದಲಾಯಿಸಿ]

೧೯೯೦ರ ದಶಕದ ಕೊನೆಯಲ್ಲಿ ಕಿರುತೆರೆ ಪ್ರವೇಶಿಸಿದ ಮೈನಾವತಿಯವರು ಅಮ್ಮ ಮತ್ತು ಮನೆತನ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

೧೯೬೦ರ ದಶಕದ ಕೊನೆಯಲ್ಲಿ ಡಾ.ರಾಧಾಕೃಷ್ಣ ಅವರನ್ನು ಮದುವೆಯಾದ ಮೈನಾವತಿಯವರು ತಮ್ಮ ಕುಟುಂಬಕ್ಕೆ ಒತ್ತು ಕೊಟ್ಟು ನಟನೆಯಿಂದ ಧೀರ್ಘ ವಿರಾಮ ತೆಗೆದುಕೊಂಡರು. ಮೈನಾವತಿಯವರಿಗೆ ಶ್ಯಾಮಸುಂದರ್ ಮತ್ತು ಗುರುದತ್ ಎಂಬ ಇಬ್ಬರು ಪುತ್ರರು ಮತ್ತು ಗಾಯತ್ರಿ ಎಂಬ ಪುತ್ರಿ ಸೇರಿ ಮೂರು ಮಕ್ಕಳು. ಮೈನಾವತಿಯವರ ಮಗ ಗುರುದತ್ ಕಿರುತೆರೆ ಧಾರಾವಾಹಿಗಳ ನಿರ್ದೇಶಕ ಮತ್ತು ನಿರ್ಮಾಪಕ. ಮೈನಾವತಿಯವರು ಕೃಷ್ಣ ಮತ್ತು ದುರ್ಗಾ ದೇವಿಯ ಭಕ್ತೆಯಾಗಿದ್ದರು. ತಮ್ಮ ಪತಿ ರಾಧಾಕೃಷ್ಣ ಮತ್ತು ಮಗ ಶ್ಯಾಮಸುಂದರ್ ಅವರ ಅಕಾಲ ಮರಣದಿಂದ ಮಾನಸಿಕ ಆಘಾತಕ್ಕೊಳಗಾಗಿದ್ದರು.

ಮೈನಾವತಿಯವರು ನವೆಂಬರ್ ೧೦, ೨೦೧೨ ರಂದು ತಮ್ಮ ೭೮ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಬೆಂಗಳೂರಿನ ಬಿ.ಜಿ.ಎಸ್.ಗ್ಲೋಬಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೈನಾವತಿ ಅಭಿನಯದ ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೫೬ಭಕ್ತ ವಿಜಯಆರೂರು ಪಟ್ಟಾಭಿಡಾ.ರಾಜ್ ಕುಮಾರ್, ಪಂಢರೀಬಾಯಿ
೧೯೫೬ಹರಿ ಭಕ್ತಟಿ.ವಿ.ಸಿಂಗ್ ಠಾಕೂರ್ಡಾ.ರಾಜ್ ಕುಮಾರ್, ಪಂಢರೀಬಾಯಿ
೧೯೫೬ಮುತ್ತೈದೆ ಭಾಗ್ಯಬಿ.ವಿಠ್ಠಲಾಚಾರ್ಯಕಲ್ಯಾಣ್ ಕುಮಾರ್
೧೯೫೬ಕಚ ದೇವಯಾನಿಕೆ.ಸುಬ್ರಹ್ಮಣ್ಯಂಕೆ.ಎಸ್.ಅಶ್ವಥ್, ಬಿ.ಸರೋಜಾ ದೇವಿ
೧೯೫೭ಬೆಟ್ಟದ ಕಳ್ಳಎಸ್.ಎಂ.ಶ್ರೀರಾಮುಲು ನಾಯ್ಡುಕಲ್ಯಾಣ್ ಕುಮಾರ್
೧೯೫೭ರಾಯರ ಸೊಸೆಲಕ್ಷ್ಮಿಆರ್.ರಾಮಮೂರ್ತಿ ಮತ್ತು ಕೆ.ಎಸ್.ಮೂರ್ತಿಡಾ.ರಾಜ್ ಕುಮಾರ್, ಪಂಢರೀಬಾಯಿ, ಕಲ್ಯಾಣ್ ಕುಮಾರ್
೧೯೫೯ಅಬ್ಬಾ ಆ ಹುಡುಗಿಹೆಚ್.ಎಲ್.ಎನ್.ಸಿಂಹಡಾ.ರಾಜ್ ಕುಮಾರ್, ಪಂಢರೀಬಾಯಿ, ರಾಜಾಶಂಕರ್
೧೯೫೯ಮನೆಗೆ ಬಂದ ಮಹಾಲಕ್ಷ್ಮಿಬಿ.ವಿಠ್ಠಲಾಚಾರ್ಯಕಲ್ಯಾಣ್ ಕುಮಾರ್, ರೇವತಿ
೧೯೬೪ಅನ್ನಪೂರ್ಣಆರೂರು ಪಟ್ಟಾಭಿಡಾ.ರಾಜ್ ಕುಮಾರ್, ಪಂಢರೀಬಾಯಿ
೧೯೬೪ನವಜೀವನಪಿ.ಎಸ್.ಮೂರ್ತಿಪಂಢರೀಬಾಯಿ, ಕೆ.ಎಸ್.ಅಶ್ವಥ್
೧೯೬೫ಸರ್ವಜ್ಞ ಮೂರ್ತಿಆರೂರು ಪಟ್ಟಾಭಿಡಾ.ರಾಜ್ ಕುಮಾರ್, ಹರಿಣಿ
೧೯೬೫ಮಹಾಸತಿ ಅನುಸೂಯಬಿ.ಎಸ್.ರಂಗಾಡಾ.ರಾಜ್ ಕುಮಾರ್, ಪಂಢರೀಬಾಯಿ
೧೯೬೬ಸುಬ್ಬಾಶಾಸ್ತ್ರಿದೊರೆಸ್ವಾಮಿ ಅಯ್ಯಂಗಾರ್ಕಲ್ಯಾಣ್ ಕುಮಾರ್, ಹರಿಣಿ
೧೯೬೭ಅನುರಾಧಆರೂರು ಪಟ್ಟಾಭಿಪಂಢರೀಬಾಯಿ, ಜಯಂತಿ
೧೯೬೮ನಾನೇ ಭಾಗ್ಯವತಿಟಿ.ವಿ.ಸಿಂಗ್ ಠಾಕೂರ್ಕಲ್ಯಾಣ್ ಕುಮಾರ್, ಭಾರತಿ
೧೯೬೮ಗೌರಿ ಗಂಡಸುಂದರ್ ರಾವ್ ನಾಡಕರ್ಣಿನರಸಿಂಹರಾಜು, ರಾಜಾಶಂಕರ್
೧೯೬೮ಆನಂದ ಕಂದಎ.ಸಿ.ನರಸಿಂಹ ಮೂರ್ತಿ, ಟಿ.ದ್ವಾರಕಾನಾಥ್ಕಲ್ಯಾಣ್ ಕುಮಾರ್, ಕಲ್ಪನಾ
೧೯೬೮ಅಮ್ಮಬಿ.ಆರ್.ಪಂತುಲುಡಾ.ರಾಜ್ ಕುಮಾರ್, ಭಾರತಿ, ನರಸಿಂಹರಾಜು
೧೯೬೯ಗಂಡೊಂದು ಹೆಣ್ಣಾರುಬಿ.ಆರ್.ಪಂತುಲುಡಾ.ರಾಜ್ ಕುಮಾರ್, ಭಾರತಿ, ನರಸಿಂಹರಾಜು
೧೯೬೯ವಿಚಿತ್ರ ಸಂಸಾರಬಿ.ವಿ.ರಾಧ, ದ್ವಾರಕೀಶ್
೧೯೭೦ಅಪರಾಜಿತೆಆರ್.ಎಂ.ವೀರಭದ್ರಯ್ಯಕಲ್ಯಾಣ್ ಕುಮಾರ್, ಪಂಢರೀಬಾಯಿ
೧೯೭೦ಮೂರು ಮುತ್ತುಗಳುಆರೂರು ಪಟ್ಟಾಭಿರಾಜೇಶ್, ಪಂಢರೀಬಾಯಿ
೧೯೭೦ಶ್ರೀಕೃಷ್ಣದೇವರಾಯಬಿ.ಆರ್.ಪಂತುಲುಡಾ.ರಾಜ್ ಕುಮಾರ್, ಭಾರತಿ, ಜಯಂತಿ, ನರಸಿಂಹರಾಜು
೧೯೭೧ಅಳಿಯ ಗೆಳೆಯಬಿ.ಆರ್.ಪಂತುಲುಗಂಗಾಧರ್, ಭಾರತಿ, ನರಸಿಂಹರಾಜು
೧೯೭೬ಮುಗಿಯದ ಕಥೆದುರೈರಾಜೇಶ್, ಸುಮಿತ್ರಾ, ಪಂಢರೀಬಾಯಿ
೧೯೭೭ಭಾಗ್ಯವಂತರುಭಾರ್ಗವರಾಜ್ ಕುಮಾರ್, ಬಿ.ಸರೋಜಾದೇವಿ
೧೯೯೧ಗೃಹಪ್ರವೇಶಓಂ ಸಾಯಿಪ್ರಕಾಶ್ದೇವರಾಜ್, ಮಾಲಾಶ್ರೀ
೧೯೯೧ಎಸ್.ಪಿ.ಭಾರ್ಗವಿವಿ.ಸೋಮಶೇಖರ್ಮಾಲಾಶ್ರೀ, ದೇವರಾಜ್
೧೯೯೨ಒಬ್ಬರಿಗಿಂತ ಒಬ್ಬರುಎ.ಎಂ.ಸಮೀವುಲ್ಲಾಸುನೀಲ್, ಗುರುದತ್, ಕಿನ್ನಾರ, ವನಿತಾ ವಾಸು, ವಜ್ರಮುನಿ
೧೯೯೨ನನ್ನ ತಂಗಿಪೇರಾಲದೇವರಾಜ್, ಸೌಂದರ್ಯ
೧೯೭೧ಪ್ರೇಮ ಸಂಗಮಭಾರ್ಗವಅಂಬರೀಶ್, ಮಾಲಾಶ್ರೀ
೧೯೯೨ಮನ ಮೆಚ್ಚಿದ ಸೊಸೆಬಿ.ರಾಮಮೂರ್ತಿಮಾಲಾಶ್ರೀ, ಸುನೀಲ್
೧೯೯೩ಚಿರ ಬಾಂಧವ್ಯಎಂ.ಎಸ್.ರಾಜಶೇಖರ್ಶಿವರಾಜ್ ಕುಮಾರ್, ಶುಭಾಶ್ರೀ
೧೯೯೩ಭಗವಾನ್ ಶ್ರೀ ಸಾಯಿಬಾಬಓಂ ಸಾಯಿಪ್ರಕಾಶ್ಸಾಯಿಪ್ರಕಾಶ್, ಪಂಢರೀಬಾಯಿ, ತಾರ
೧೯೯೩ಮಣಿಕಂಠನ ಮಹಿಮೆಕೆ.ಶಂಕರ್ವಿಷ್ಣುವರ್ಧನ್, ತಾರ, ಶರತ್ ಬಾಬು, ಜಯಪ್ರದಾ
೧೯೯೩ಮಾಂಗಲ್ಯ ಬಂಧನಕೆ.ಭಗವಾನ್ಅನಂತ್ ನಾಗ್, ಮಾಲಾಶ್ರೀ, ಮೂನ್ ಮೂನ್ ಸೇನ್
೧೯೯೪ಮುತ್ತಣ್ಣಎಂ.ಎಸ್.ರಾಜಶೇಖರ್ಶಿವರಾಜ್ ಕುಮಾರ್, ಸುಪ್ರಿಯಾ, ಸ್ನೇಹಾ
೧೯೯೫ಮಿಸ್ಟರ್ ವಾಸುಜೋಸೈಮನ್ಟೈಗರ್ ಪ್ರಭಾಕರ್, ಚಂದ್ರಿಕಾ
೧೯೯೬ಗೆಲುವಿನ ಸರದಾರರೇಲಂಗಿ ನರಸಿಂಹ ರಾವ್ರಾಘವಂದ್ರ ರಾಜಕುಮಾರ್, ಶ್ರುತಿ
೧೯೯೬ಬಾಸ್ಕೆ.ಪಿ.ಭವಾನಿಶಂಕರ್ಟೈಗರ್ ಪ್ರಭಾಕರ್, ರಮೇಶ್ ಅರವಿಂದ್
೧೯೯೬ಶಿವಲೀಲೆವಿ.ಸ್ವಾಮಿನಾಥನ್ಕಲ್ಯಾಣ್ ಕುಮಾರ್, ಸಿತಾರ
೧೯೯೮ದೋಣಿ ಸಾಗಲಿಎಸ್.ವಿ.ರಾಜೇಂದ್ರಸಿಂಗ್ ಬಾಬುಶಶಿಕುಮಾರ್, ಸೌಂದರ್ಯ
೧೯೯೯ದಳವಾಯಿಶಿವಮಣಿಬಿ.ಸಿ.ಪಾಟಿಲ್, ವಿಜಯಲಕ್ಷ್ಮಿ
೨೦೦೩ಪ್ರೀತಿಸ್ಲೇ ಬೇಕುಯೋಗೀಶ್ ಹುಣಸೂರ್ವಿಜಯ್ ರಾಘವೇಂದ್ರ, ಛಾಯಾ ಸಿಂಗ್

[]

ತಮಿಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೫೪ಪೊಣ್ ವಾಯಲ್ಎ.ಟಿ.ಕೃಷ್ಣಸ್ವಾಮಿಟಿ.ಆರ್.ರಾಮಚಂದ್ರನ್, ಅಂಜಲಿದೇವಿ
೧೯೫೫ಎನ್ ಮಗಳ್ಕೆ.ವಿ.ಆರ್.ಆಚಾರ್ಯರಂಜನ್, ಎಸ್.ವರಲಕ್ಷ್ಮಿ, ಎಂ.ಎನ್.ನಂಬಿಯಾರ್
೧೯೫೬ಕುಲ ದೈವಂಕೃಷ್ಣನ್-ಪಂಜುಎಸ್.ವಿ.ಸಹಸ್ರನಾಮಮ್, ಪಂಢರೀಬಾಯಿ, ಎಸ್.ಎಸ್.ರಾಜೇಂದ್ರನ್
೧೯೫೬ನಲ್ಲ ವೀಡುಜೆ.ಸಿನ್ಹಾಶಿವಾಜಿ ಗಣೇಶನ್, ಪಂಢರೀಬಾಯಿ, ಎಂ.ಎನ್.ರಾಜಮ್
೧೯೫೭ಅರವಲ್ಲಿಅಲಂಗಾರವಲ್ಲಿಕೃಷ್ಣನ್-ಪಂಜುಜಿ.ವರಲಕ್ಷ್ಮಿ, ಎಸ್.ಜಿ.ಈಶ್ವರ್
೧೯೫೭ಪುದುವಾಯಲ್ಕೃಷ್ಣನ್-ಪಂಜುಪ್ರೇಮ್ ನಜೀರ್, ಎಸ್.ಎಸ್.ರಾಜೇಂದ್ರನ್
೧೯೫೮ಅನ್ಬು ಎಂಗೆಡಿ.ಯೋಗಾನಂದ್ಪಂಢರೀಬಾಯಿ, ಎಸ್.ಎಸ್.ರಾಜೇಂದ್ರನ್, ಕೆ.ಬಾಲಾಜಿ
೧೯೫೮ನಾನ್ ವಾಲಾರ್ಥ ತಂಗೈನಾರಾಯಣ ಮೂರ್ತಿಪ್ರೇಮ್ ನಜೀರ್, ಪಂಢರೀಬಾಯಿ
೧೯೫೮ಬೊಮ್ಮೈ ಕಲ್ಯಾಣಂಆರ್.ಎಂ.ಕೃಷ್ಣಸ್ವಾಮಿಶಿವಾಜಿ ಗಣೇಶನ್, ಜಮುನಾ
೧೯೫೮ಮಾಲಯಿಟ್ಟ ಮಂಗೈಜಿ.ಆರ್.ನಾಥನ್ಟಿ.ಆರ್.ಮಹಾಲಿಂಗಂ, ಪಂಢರೀಬಾಯಿ
೧೯೫೯ಎಂಗಳ್ ಕುಲ ದೇವಿಎ.ಸುಬ್ಬರಾವ್ಕೆ.ಬಾಲಾಜಿ, ಪಂಢರೀಬಾಯಿ
೧೯೫೯ಕಣ್ ತಿರಂದದುಕೆ.ವಿ.ಶ್ರೀನಿವಾಸನ್ರಾಮನಾಥನ್
೧೯೫೯ನಾಲು ವೆಳಿ ನೀಲಂಮುಕ್ತ ವಿ.ಶ್ರೀನಿವಾಸನ್ಎಸ್.ವಿ.ಸಹಸ್ರನಾಮಮ್, ಪಂಢರೀಬಾಯಿ, ದೇವಿಕಾ. ಮುತ್ತುರಾಮನ್
೧೯೫೯ವಣ್ಣಕ್ಕಿಳಿಟಿ.ಆರ್.ರಘುನಾಥ್ಪ್ರೇಮ್ ನಜೀರ್
೧೯೫೯ಸೊಲ್ಲು ತಂಬಿ ಸೊಲ್ಲುಟಿ.ವಿ.ಸುಂದರಂಎಸ್.ಎಸ್.ರಾಜೇಂದ್ರನ್
೧೯೬೦ಅನ್ಬುಕ್ಕೊರ್ ಅಣ್ಣಿಟಿ.ಆರ್.ರಘುನಾಥ್ಪಂಢರೀಬಾಯಿ, ಪ್ರೇಮ್ ನಜೀರ್
೧೯೬೦ಕುರವಂಜಿಎ.ಕಾಸಿಲಿಂಗಂಶಿವಾಜಿ ಗಣೇಶನ್, ಸಾವಿತ್ರಿ
೧೯೬೦ಮಹಾಲಕ್ಷ್ಮಿಎ.ಎಲ್.ನಾರಾಯಣನ್ಪಂಢರೀಬಾಯಿ, ಕೆ.ಬಾಲಾಜಿ, ಮುತ್ತುರಾಮನ್
೧೯೬೧ಮಲ್ಲಿಯುಂ ಮಂಗಲಂಮಲ್ಲಿಯಂ ರಾಜಗೋಪಾಲ್ಎಸ್.ವಿ.ಸಹಸ್ರನಾಮಮ್, ಪಂಢರೀಬಾಯಿ
೧೯೫೯ವಳಿಕಾಟ್ಟಿಪ್ರೇಮ್ ನಜೀರ್

ಉಲ್ಲೇಖಗಳು

[ಬದಲಾಯಿಸಿ]
  1. 1 2 3 4 5 "ಹಿರಿಯ ನಟಿ ಮೈನಾವತಿ ಇನ್ನಿಲ್ಲ". ಪ್ರಜಾವಾಣಿ.
  2. "ಬೆಳ್ಳಿತೆರೆಯ ಹಿರಿಯ ಅಭಿನೇತ್ರಿ ಮೈನಾವತಿ ಇನ್ನಿಲ್ಲ". ಫಿಲ್ಮಿ ಬೀಟ್.
  3. "ಹಿರಿಯ ನಟಿ ಮೈನಾವತಿ ಇನ್ನಿಲ್ಲ". ಜಸ್ಟ್ ಕನ್ನಡ. Archived from the original on 2015-03-22. Retrieved 2016-10-02.
  4. "ಎಂ.ಪ್ರಭಾಕರ್". ಸೊಬಗು.
  5. "ಪೊಣ್ ವಾಯಲ್ ೧೯೫೪". ದಿ ಹಿಂದು.
  6. "ಎನ್ ಮಗಳ್ ೧೯೫೫". ದಿ ಹಿಂದು.
  7. "Blast from the past: Kula Deivam 1956". ದಿ ಹಿಂದು.
  8. "ಪಂಡರೀಬಾಯಿ ಸೋದರಿ, ನಟಿ ಮೈನಾವತಿ ನಿಧನ". ವಿಜಯ ಕರ್ನಾಟಕ.
  9. "ಮೈನಾವತಿ ಅಭಿನಯದ ಚಿತ್ರಗಳು". ಚಿಲೋಕ.
"https://kn.wikipedia.org/w/index.php?title=ಮೈನಾವತಿ&oldid=1360165" ಇಂದ ಪಡೆಯಲ್ಪಟ್ಟಿದೆ