ಹರಿಣಿ
ಹರಿಣಿ | |
---|---|
ಜನನ | ೧೯೩೭ ಉಡುಪಿ, ಮದ್ರಾಸ್ ಪ್ರಾಂತ್ಯ, ಬ್ರಿಟಿಷ್ ಇಂಡಿಯಾ |
ವೃತ್ತಿ(ಗಳು) | ನಟಿ, ನಿರ್ಮಾಪಕಿ |
ಸಕ್ರಿಯ ವರ್ಷಗಳು | ೧೯೫೧–೧೯೬೭ |
ಸಂಗಾತಿ | ಡಾ.ಎಸ್.ರಾವ್ |
ಹರಿಣಿ ಕನ್ನಡ ಚಿತ್ರರಂಗದ ನಟಿ, ನಿರ್ಮಾಪಕಿ. ಜಗನ್ಮೋಹಿನಿ(೧೯೫೧) ಚಿತ್ರದ ಮೋಹಿನಿ ಪಾತ್ರದಿಂದ ಖ್ಯಾತರಾದ ಹರಿಣಿ ಕನ್ಯಾದಾನ(೧೯೫೪), ನಂದಾದೀಪ(೧೯೬೩) ಮತ್ತು ನಾಂದಿ(೧೯೬೪) ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.[೧] ಚಿತ್ರರಂಗದ ಜೀವಮಾನ ಸಾಧನೆಗಾಗಿ ಕರ್ನಾಟಕ ಸರ್ಕಾರ ನೀಡುವ ಡಾ. ರಾಜಕುಮಾರ್ ಪ್ರಶಸ್ತಿಯನ್ನು ೨೦೧೬ರಲ್ಲಿ ಪಡೆದಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ಹರಿಣಿಯವರು ೧೯೩೭ರಲ್ಲಿ ಉಡುಪಿಯ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯ ಮತ್ತು ಭಾರತಿ ದಂಪತಿಯ ನಾಲ್ಕನೆಯ ಮಗುವಾಗಿ ಜನಿಸಿದರು. ತಂದೆ ಶ್ರೀನಿವಾಸ ಉಪಾಧ್ಯಾಯರು ಉದ್ಯಮಿ, ಕಾಂಗ್ರೆಸ್ ಕಾರ್ಯಕರ್ತ ಮತ್ತು ಗಾಂಧಿವಾದಿ. ಇವರು ಸ್ವಾತಂತ್ರ್ಯ ಹೋರಾಟದ ಸಂಧರ್ಭದಲ್ಲಿ, ಬರೋಡಾದ ವಿಶ್ವವಿದ್ಯಾಲಯದಲ್ಲಿ ಇದ್ದ ತಮ್ಮ ಗ್ರಂಥಪಾಲಕ ಉದ್ಯೋಗವನ್ನು ತ್ಯಜಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿದ್ದರು. ಉಡುಪಿಯಲ್ಲಿದ್ದ ಉದ್ಯಮ ತೀವ್ರ ನಷ್ಟ ಅನುಭವಿಸಿದ್ದರಿಂದ ಉಡುಪಿಯಿಂದ ತಮಿಳುನಾಡಿನ ಮಧುರೆಗೆ ಹೋಗಿ ನೆಲೆಸಬೇಕಾಯಿತು. ಆಗ ಹರಿಣಿಯವರಿಗೆ ಕೇವಲ ಐದು ವರ್ಷ. ಮಧುರೆಯ ರಾಯಲ್ ಟಾಕೀಸ್ ಸಂಸ್ಥೆ ತಯಾರಿಸಿದ ಸುಂದರರಾವ್ ನಾಡಕರ್ಣಿ ನಿರ್ದೇಶನದ ಹರಿದಾಸ್(೧೯೪೪) ಎಂಬ ತಮಿಳು ಚಿತ್ರದಲ್ಲಿ ಬಾಲಕೃಷ್ಣನ ಪಾತ್ರವನ್ನು ನಿರ್ವಹಿಸುವ ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದ ಹರಿಣಿ ಶ್ರೀಮುರುಗನ್(೧೯೪೬) ಮತ್ತು ಕನ್ನಿಕಾ(೧೯೪೭) ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದರು. ೧೯೪೯ರಲ್ಲಿ ಉತ್ತಮ ಅವಕಾಶದ ನಿರೀಕ್ಷೆಯಿಂದ ಹರಿಣಿಯವರ ಕುಟುಂಬ ಮಧುರೆಯಿಂದ ಮದ್ರಾಸ್ಗೆ ಬಂದು ನೆಲೆಸಿತು. ಪುಣ್ಯವತಿ ಎಂಬ ತಮಿಳು ಚಿತ್ರದಲ್ಲಿ ಹರಿಣಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದರು.[೨]
ವೃತ್ತಿಜೀವನ
[ಬದಲಾಯಿಸಿ]ನಟಿಯಾಗಿ
[ಬದಲಾಯಿಸಿ]೧೯೫೧ರಲ್ಲಿ ಶಂಕರ್ ಸಿಂಗ್ ತಮ್ಮ ಮಹಾತ್ಮ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸಿದ ಜಗನ್ಮೋಹಿನಿ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸುವ ಮೂಲಕ ೧೪ ವರ್ಷದ ಹರಿಣಿ ನಾಯಕಿಯಾಗಿ ಕನ್ನಡ ಬೆಳ್ಳಿತೆರೆಯನ್ನು ಪ್ರವೇಶೀಸಿದರು. ಭದ್ರವಾಗಿ ನೆಲೆಯೂರಲು ಕನ್ನಡ ಚಿತ್ರರಂಗ ಪರದಾಡುತ್ತಿದ್ದ ದಿನಗಳಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿ ಇತಿಹಾಸ ಸೃಷ್ಟಿಸಿತು. ದಾವಣಗೆರೆಯಲ್ಲಿ ೩೬ ವಾರಗಳ ಕಾಲ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತು. ಪ್ರತಿಮಾ ದೇವಿ ನಿರ್ವಹಿಸಿದ್ದ ಪತಿವೃತೆಯಿಂದ ಆಕೆಯ ಪತಿಯನ್ನು ಕೈವಶಮಾಡಿಕೊಳ್ಳಲು ಆಕೆಗೆ ಅನೇಕ ಕಷ್ಟಗಳನ್ನು ನೀಡುವ ಋಣಾತ್ಮಕ ಛಾಯೆಯ ಮೋಹಿನಿಯಾಗಿ ಹರಿಣಿ ಮಿಂಚಿದ್ದರು. ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಮಾದಕ ನಟನೆಯಿಂದ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದ್ದರು. ಚಿತ್ರದ ಸನ್ನಿವೇಶವೊಂದರಲ್ಲಿ ಈಜುಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಈಜುಡುಗೆ ತೊಟ್ಟ ಮೊದಲ ಕನ್ನಡ ನಟಿಯೆನಿಸಿದರು. ಹರಿಣಿ ಅವರನ್ನು ನೋಡಲೆಂದೇ ಮತ್ತೆ ಮತ್ತೆ ಸಿನೆಮಾ ನೋಡುತ್ತಿದ್ದ ಜನರು 'ಟಿಕೇಟ್'ಗಾಗಿ ತಮ್ಮ ಹಸು, ಎಮ್ಮೆಗಳನ್ನು ಮಾರುತ್ತಿದ್ದರು. ಒಡವೆಗಳನ್ನು ಗಿರವಿ ಇಡುತ್ತಿದ್ದರು. ಬಂಗಾಲಿ ನಿರ್ದೇಶಕ ದೇವಕಿ ಬೋಸ್ ಅವರ ನಿರ್ದೇಶನದ ಹಿಂದಿಯಲ್ಲಿ ತಯಾರಾದ ರತ್ನ್ ದೀಪ್(೧೯೫೧) ಚಿತ್ರದ ಹಾಸ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದ ಹರಿಣಿ ಚಿತ್ರದ ಚಿತ್ರೀಕರಣಕ್ಕಾಗಿ ಕೋಲ್ಕತ್ತದಲ್ಲಿದ್ದುದರಿಂದ ಚಿತ್ರದ ಶತದಿನೋತ್ಸವದಲ್ಲಿ ಪಾಲ್ಗೊಂಡಿರಲಿಲ್ಲ. ಹರಿಣಿಯವರನ್ನು ನೋಡಲೆಂದೇ ಬಂದಿದ್ದ ಜನ ಗಲಾಟೆ ಮಾಡಿದ್ದರು. ಹರಿಣಿ ಮಾಡಿದ ಮೋಡಿ ಹಾಗಿತ್ತು.[೨]
ನಾಯಕಿ ಪಾತ್ರದ ಮಹತ್ವವೇನೆಂದು ಅರಿಯದ ವಯಸ್ಸಿನಲ್ಲಿ ನಾಯಕಿಯಾಗಿ ಅಭಿನಯಿಸಿ ಅಭಿಮಾನಿಗಳಲ್ಲಿ ಹುಚ್ಚು ಹಿಡಿಸಿದ್ದ ಹರಿಣಿಗೆ ಯಶಸ್ಸಿನೊಂದಿಗೆ ಮಾದಕ ನಟಿ ಎಂಬ ಬಿರುದೂ ಬಂದಿತು.[೩][೪] ಆ ನಂತರದಲ್ಲಿ ಬಂದ ಈ ಮಾದರಿಯ ಅನೇಕ ಪಾತ್ರಗಳನ್ನು ತಿರಸ್ಕರಿಸಿದ ಹರಿಣಿ ಅಭಿನಯಕ್ಕೆ ವಿಪುಲ ಅವಕಾಶಗಳಿರುವ ಚಿತ್ರಗಳತ್ತ ಗಮನ ಹರಿಸಿದರು.[೪]
ಬಿ.ವಿಠ್ಠಲಾಚಾರ್ಯ ನಿರ್ದೇಶನದ ಶ್ರೇಷ್ಠ ಸಾಮಾಜಿಕ ಚಿತ್ರಗಳಾದ ಸೌಭಾಗ್ಯಲಕ್ಷ್ಮಿ(೧೯೫೩) ಮತ್ತು ಕನ್ಯಾದಾನ(೧೯೫೪)ಗಳಲ್ಲಿ ಪ್ರೌಢ ಅಭಿನಯ ನೀಡಿದ ಹರಿಣಿ ತಾವು ಕೇವಲ ಬಣ್ಣದ ಬೊಂಬೆಯಲ್ಲ ಪ್ರಬುದ್ಧ ನಟಿ ಎಂಬುದನ್ನು ಸಾಬೀತುಪಡಿಸಿದರು. ಅಂತರ್ಜಾತೀಯ ವಿವಾಹದಂತಹ ಸೂಕ್ಷ್ಮ ಕಥಾವಸ್ತುವನ್ನು ಹೊಂದಿದ್ದ ಸೌಭಾಗ್ಯಲಕ್ಷ್ಮಿ ಚಿತ್ರದಲ್ಲಿ ಮೇಲ್ವರ್ಗದ ಶ್ರೀಮಂತ ಯುವಕನನ್ನು ಪ್ರೀತಿಸಿ ಮದುವೆಯಾಗಿ, ಸಮಾಜವನ್ನು ತಾಳ್ಮೆಯಿಂದ ಎದುರಿಸಿ ಗೆದ್ದರೂ ವಿಧಿಯಾಟಕ್ಕೆ ಬಲಿಯಾಗುವ ಕೆಳವರ್ಗದ ಬಡಹುಡುಗಿಯ ಪಾತ್ರದಲ್ಲಿ ಶ್ಲಾಘನೀಯ ಅಭಿನಯ ನೀಡಿದ ಹರಿಣಿ, ಕಪ್ಪುಹುಡುಗಿಯ ವಿವಾಹದ ಕುರಿತಾಗಿದ್ದ ಕನ್ಯಾದಾನ ಚಿತ್ರದಲ್ಲಿ ಕಪ್ಪು ಹುಡುಗಿಯ ಅಂತರಂಗದ ವೇದನೆಯನ್ನು ಭಾವಪೂರ್ಣವಾಗಿ ಅಭಿವ್ಯಕ್ತಿಸಿದ್ದಾರೆ. ಚಿತ್ರದ ಚಿತ್ರೀಕರಣದುದ್ದಕ್ಕೂ ಮುಖಕ್ಕೆ ಮಸಿ ಹಚ್ಚಿಕೊಂಡು ಅಭಿನಯಿಸಿದ ಕ್ರಮವೇ ಸವಾಲಿನದ್ದಾಗಿತ್ತು.[೪]
ಗಂಧರ್ವ ಕನ್ಯಾ(೧೯೫೫) ಚಿತ್ರದ ಮೊಸಳೆಯೊಂದಿಗೆ ಸೆಣಸಾಡುವ ದೃಶ್ಯವೊಂದರಲ್ಲಿ ಯಾವುದೇ ಬದಲಿ ಕಲಾವಿದರನ್ನು ಬಳಸದೇ ಸ್ವತಃ ತಾವೇ ಅಭಿನಯಿಸುವ ಮೂಲಕ ಎಂಥಾ ಸವಾಲಿಗೂ ಸೈ ಎಂದು ತೋರಿಸಿಕೊಟ್ಟಿದ್ದರು. ಹರಿಣಿ ವೃತ್ತಿ ಬದುಕಿನ ಇನ್ನೊಂದು ಮಹತ್ವದ ಚಿತ್ರ ವಿಚಿತ್ರ ಪ್ರಪಂಚ(೧೯೫೫). ಈ ಚಿತ್ರಕ್ಕೆ ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿದ್ದವರು ಪ್ರಖ್ಯಾತ ಸಾಹಿತಿ ದ.ರಾ.ಬೇಂದ್ರೆ. ಬಹುತೇಕ ಮರಾಠಿ ಮೂಲದ ಕಲಾವಿದರೇ ಇದ್ದ ಈ ಚಿತ್ರದಲ್ಲಿ ಬೇಂದ್ರೆಯವರ ಸಂಭಾಷಣೆಯನ್ನು ಸ್ಪುಟವಾಗಿ ಹೇಳಿಸುವಲ್ಲಿ ಹರಿಣಿಯವರ ಪಾತ್ರ ಮಹತ್ವದ್ದಾಗಿತ್ತು.[೪]
೧೯೫೯ರಲ್ಲಿ ತೆರೆಗೆ ಬಂದ ಧರ್ಮ ವಿಜಯ ಚಿತ್ರದಲ್ಲಿ ವರನಟ ರಾಜ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದ ಹರಿಣಿ ಆನಂತರದಲ್ಲಿ ನಾಗಾರ್ಜುನ(೧೯೬೧), ಶಿವಗಂಗೆ ಮಹಾತ್ಮೆ(೧೯೬೪) ಮತ್ತು ಸರ್ವಜ್ಞಮೂರ್ತಿ(೧೯೬೫) ಮುಂತಾದ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಜ್ ಕುಮಾರ್ ಮತ್ತು ಹರಿಣಿ ಜೋಡಿಯ ಅಪೂರ್ವ ಚಿತ್ರಗಳೆಂದರೆ ನಂದಾದೀಪ ಮತ್ತು ನಾಂದಿ.[೩]
ನಾಯಕಿಯರು ಋಣಾತ್ಮಕ ಪಾತ್ರವನ್ನು ನಿರ್ವಹಿಸಲು ಭಯಪಡುತ್ತಿದ್ದ ಸಂಧರ್ಭದಲ್ಲಿ ಆಶಾಸುಂದರಿ(೧೯೬೦) ಚಿತ್ರದ ಋಣಾತ್ಮಕ ಛಾಯೆಯ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ ಅಭಿನಯಿಸುವ ಮೂಲಕ ವಿಭಿನ್ನತೆ ಮೆರೆದಿದ್ದರು. ಆಪ್ತಗೆಳತಿ ವಿವಾಹವಾಗುವುದನ್ನು ಸಹಿಸದೆ ಅದನ್ನು ತಡೆಯುವುದಕ್ಕಾಗಿ ಅನೇಕ ಸಂಚುಗಳನ್ನು ರೂಪಿಸಿ ಆಕೆಯನ್ನು ಕಷ್ಟಗಳಿಗೆ ಗುರಿಮಾಡುವ ಪಾತ್ರದಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ.[೪] ಅರ್ಹವಾಗಿಯೇ ಶ್ರೇಷ್ಠ ಖಳ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದರು. ೧೯೬೦ರ ದಶಕದಲ್ಲಿ ತೆರೆಕಂಡ ಯಶಸ್ವೀ ಜಾನಪದ ಶೈಲಿಯ ಚಿತ್ರಗಳಾದ ರತ್ನಮಂಜರಿ(೧೯೬೨) ಮತ್ತು ವಿಧಿವಿಲಾಸ(೧೯೬೨) ಚಿತ್ರಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಾದ ನಂದಾದೀಪ(೧೯೬೩) ಮತ್ತು ನಾಂದಿ(೧೯೬೪) ಹರಿಣಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಿದ ಮಹೋನ್ನತ ಚಿತ್ರಗಳು. ಎಂ.ಆರ್.ವಿಠಲ್ ಅವರ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ ನಂದಾದೀಪ. ಚಿತ್ರ ನಿರ್ಮಾಣದಲ್ಲಿ ಸುರಕ್ಷೆಯ ಕಕ್ಷೆಯಲ್ಲೇ ಪರಿಭ್ರಮಿಸುವ ಅನಿವಾರ್ಯಕ್ಕೆ ನಿರ್ಮಾಪಕ-ನಿರ್ದೇಶಕರು ಜೋತು ಬಿದ್ದಿದ್ದಂತಹ ಕಾಲದಲ್ಲಿ ವಿಭಿನ್ನ ಕಥಾವಸ್ತು ಮತ್ತು ನಿರೂಪಣೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಪ್ರಯೋಗಾತ್ಮಕ ಚಿತ್ರ. ಅಣ್ಣನ ವಿಧ್ಯಾಭ್ಯಾಸಕ್ಕಗಿ ತಂದೆ ಮಾಡಿದ ಸಾಲವನ್ನು ತೀರಿಸಲು ಮನಸಾರೆ ಪ್ರೀತಿಸಿದ ಯುವಕನೊಂದಿಗಿನ ಪ್ರೀತಿಯ ಭಾವನೆಗಳನ್ನು ತೊರೆದು ತನ್ನ ವಯಸ್ಸಿನ ಮಗಳಿರುವ ಶ್ರೀಮಂತ ವಿಧುರನೊಂದಿಗೆ ವಿವಾಹವಾಗಿ ಪ್ರಜ್ಞಾಪೂರ್ವಕ ಜೀವನ ನಡೆಸಿದರೂ ಸಂಶಯ ಪಡುವ ಆತನ ವರ್ತನೆಗೆ ಬೇಸತ್ತು ಹಳೆಯ ಗೆಳೆಯನನ್ನು ಅರಸುತ್ತಾ ಬರುವಾಗ ಸ್ಪೋಟಕ್ಕೆ ಬಲಿಯಾಗುವ ದುರಂತ ಗೌರಿಯ ಪಾತ್ರದಲ್ಲಿ ತಮ್ಮ ಅವಿಸ್ಮರಣೀಯ ನೈಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.[೫] ೧೯೬೩ನೇ ಸಾಲಿನ ರಾಷ್ಟಪ್ರಶಸ್ತಿ ಪಡೆದಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿಯಾಗಿತ್ತು. ಹಳ್ಳಿಯ ಹುಡುಗಿ ಚಿತ್ರದಲ್ಲೂ ಇದೇ ಮಾದರಿಯ ಪಾತ್ರದಲ್ಲಿ ಮಿಂಚಿದ್ದಾರೆ.[೪] ನಾಂದಿ ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದ ಎನ್.ಲಕ್ಷ್ಮೀನಾರಾಯಣ್ ನಿರ್ದೇಶನದ ಚೊಚ್ಚಲ ಚಿತ್ರ. ಅಂಗವಿಕಲರೂ ಸಂತೃಪ್ತ ಜೀವನ ಸಾಧಿಸಬಹುದೆಂಬ ಸಂದೇಶವಿದ್ದ ಈ ಚಿತ್ರದಲ್ಲಿ ಹೆರಿಗೆಯ ಸಂಧರ್ಭದಲ್ಲಿ ಮೊದಲ ಪತ್ನಿಯನ್ನು ಕಳೆದುಕೊಂಡ ಆದರ್ಶ ಶಿಕ್ಷಕನ ಎರಡನೇ ಪತ್ನಿ ಗಂಗಾಳ ಪಾತ್ರದಲ್ಲಿ ಹರಿಣಿ ಅಭಿನಯಿಸಿದ್ದಾರೆ. ಮೂಗಿ ಮತ್ತು ಕಿವುಡಿಯಾಗಿದ್ದು ಪತಿಯ ಜೀವನದಲ್ಲಿ ಅನೇಕ ಅಚಾತುರ್ಯಗಳಿಗೆ ಕಾರಣಳಾಗಿದ್ದರೂ ತನ್ನ ಸನ್ನಡತೆಯಿಂದ ಪತಿಯ ಸಹಕಾರ ಪಡೆದು ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಪಾತ್ರದಲ್ಲಿ ಹರಿಣಿಯವರ ನೈಜ ಹೃದಯಸ್ಪರ್ಶಿ ಅಭಿನಯ ಅಪಾರ ಜನಮೆಚ್ಚುಗೆ ಗಳಿಸಿತ್ತು. ಪಾತ್ರದ ನೈಜತೆಗಾಗಿ ರಾಜ್ ಕುಮಾರ್ ಅವರೊಂದಿಗೆ ಮೂಗ ಮತ್ತು ಕಿವುಡರ ಶಾಲೆಗಳಿಗೆ ಭೇಟಿ ನೀಡಿ ಅವರ ಹಾವಭಾವಗಳನ್ನು ಹತ್ತಿರದಿಂದ ಗಮನಿಸಿ ಕಲಿತು ಅಭಿನಯಿಸುವ ಮೂಲಕ ವೃತ್ತಿಪರತೆಯನ್ನು ಮೆರೆದಿದ್ದರು. ಲಂಡನ್ನ ಕಾಮನ್ ವೆಲ್ತ್ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.[೬]
ರಾಜಾಶಂಕರ್ ಅವರೊಂದಿಗೆ ಮಂಗಳ ಮುಹೂರ್ತ(೧೯೬೩) ಮತ್ತು ಸುದರ್ಶನ್ ಅವರೊಂದಿಗೆ ಆನಂದಭಾಷ್ಪ(೧೯೬೪) ಚಿತ್ರಗಳಲ್ಲಿ ಹೊಸ ಸಾಧ್ಯತೆಯ ಅಭಿನಯ ನೀಡಿದ್ದರು. ಎಂ.ಆರ್.ವಿಠಲ್ ಅವರ ನಿರ್ದೇಶನದ ಮಂಗಳ ಮುಹೂರ್ತ ಚಿತ್ರದಲ್ಲಿ ಆಧುನಿಕತೆಯಿಂದ ಆಕರ್ಷಣೆಗೊಂಡು ಸಂಗಾತಿಯನ್ನು ತಿರಸ್ಕರಿಸಿ ತಾನು ಹೆಣೆದ ಬಲೆಯಲ್ಲಿ ತಾನೇ ಸಿಲುಕಿಕೊಂಡು ಕೊನೆಗೆ ಆಧುನಿಕತೆಯ ಸೋಗು ಅರ್ಥವಾಗಿ ಮಾನವೀಯತೆಯತ್ತ ಒಲಿಯುವ ಸವಾಲಿನ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ.[೫] ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ದೊರಕಿತ್ತು.[೩] ಆರ್. ನಾಗೇಂದ್ರ ರಾವ್ ನಿರ್ದೇಶನದ ಆನಂದಭಾಷ್ಪ ಚಿತ್ರದಲ್ಲಿನ ಹರಿಣಿಯವರ ಅಭಿನಯಕ್ಕೆ ಪತ್ರಿಕೆಗಳು ಮೆಚ್ಚುಗೆಯ ಸುರಿಮಳೆಗರೆದಿದ್ದವು. ಗಲ್ಲಾಪೆಟ್ಟಿಗೆಯಲ್ಲೂ ಈ ಚಿತ್ರ ಅಪೂರ್ವ ಯಶಸ್ಸು ಗಳಿಸಿತ್ತು.[೨] ಪತಿವ್ರತಾ(೧೯೬೫) ಚಿತ್ರದಲ್ಲಿ ವೇಶ್ಯೆಯಾಗಿ[೪] ಪ್ರಭಾವಶಾಲಿ ಅಭಿನಯ ನೀಡಿದ್ದ ಹರಿಣಿ ಕಲ್ಯಾಣ್ ಕುಮಾರ್ ಅವರು ಶೀರ್ಷಿಕೆ ಪಾತ್ರದಲ್ಲಿ ಅಭಿನಯಿದ್ದ ವಿಭಿನ್ನ ಪ್ರಯೋಗಾತ್ಮಕ ಚಿತ್ರ ಸುಬ್ಬಾಶಾಸ್ತ್ರಿ(೧೯೬೬)ಯಲ್ಲಿ ತನ್ನ ಪತಿಯನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡಿರುವ ಅಷಾಢಭೂತಿ ಸುಬ್ಬಾಶಾಸ್ತ್ರಿಯ ಮೋಸ ಮಂಚನೆಗಳನ್ನು ತನ್ನ ಜಾಣ್ಮೆಯಿಂದ ಬಯಲು ಮಾಡುವ ಶಾರದಾಳ ಪಾತ್ರದಲ್ಲಿ ಸ್ಮರಣೀಯ ಅಭಿನಯ ನೀಡಿದ್ದಾರೆ.
ಪೌರಾಣಿಕ ಚಿತ್ರ ಸತಿ ಸುಕನ್ಯಾ(೧೯೬೭)ದಲ್ಲಿ ರಾಜ್ ಕುಮಾರ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ ಹರಿಣಿ, ನಾಯಕಿಯಾಗಿ ಉತ್ತುಂಗದಲ್ಲಿರುವಾಗಲೇ ನಟನೆಗೆ ವಿದಾಯ ಹೇಳಿ ಎಲ್ಲರನ್ನು ಚಕಿತಗೊಳಿಸಿದ್ದರು.[೪] ಸುಮಾರು ಒಂದೂವರೆ ದಶಕಗಳ ಕಾಲ ತಮ್ಮ ಭಾವಾತಿರೇಕವಿಲ್ಲದ ನೈಜ ಅಭಿನಯದಿಂದ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಹರಿಣಿ ರಾಜ್ ಕುಮಾರ್, ಉದಯಕುಮಾರ್, ಕಲ್ಯಾಣ್ ಕುಮಾರ್, ರಾಜಾಶಂಕರ್ ಮುಂತಾದ ಎಲ್ಲಾ ಅಗ್ರಪಂಕ್ತಿಯ ನಾಯಕರೊಂದಿಗೆ ಅಭಿನಯಿಸಿದ್ದಾರೆ. ಎಂ.ಆರ್.ವಿಠಲ್, ಎನ್.ಲಕ್ಷ್ಮೀನಾರಾಯಣ್, ಹುಣಸೂರು ಕೃಷ್ಣಮೂರ್ತಿ, ಬಿ.ವಿಠ್ಠಲಾಚಾರ್ಯ ಮುಂತಾದ ಶ್ರೇಷ್ಠ ನಿರ್ದೇಶಕರೊಂದಿಗೆ ಕಲಸ ಮಾಡಿದ್ದಾರೆ.
ನಿರ್ಮಾಪಕಿಯಾಗಿ
[ಬದಲಾಯಿಸಿ]ಸಹೋದರರಾದ ವಾದಿರಾಜ್ ಮತ್ತು ಜವಾಹರ್ ನಿರ್ಮಾಣದ ನಂದಾದೀಪ ಮತ್ತು ನಾಂದಿ ಚಿತ್ರಗಳಲ್ಲಿ ನಾಯಕಿಯಾಗಿ ಕೆಲಸ ಮಾಡಿದ್ದ ಹರಿಣಿ ಚಿತ್ರ ನಿರ್ಮಾಣದ ಒಳ ಹೊರಗನ್ನು ಅರಿತಿದ್ದರು. ನಟಿಯಾಗಿ ನಿವೃತ್ತಿ ಹೊಂದಿದ ಮೇಲೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ ಹರಿಣಿ ತಮ್ಮ ವಿಜಯ ಭಾರತಿ ಸಂಸ್ಥೆಯಿಂದ ಪ್ರೇಮಕ್ಕೂ ಪರ್ಮಿಟ್ಟೆ(೧೯೬೭), ನಮ್ಮ ಮಕ್ಕಳು(೧೯೬೯), ಸೀತಾ(೧೯೭೦), ನಾ ಮೆಚ್ಚಿದ ಹುಡುಗ(೧೯೭೨), ಸೀತೆಯಲ್ಲ ಸಾವಿತ್ರಿ(೧೯೭೩) ಮತ್ತು ನಮ್ಮಮ್ಮನ ಸೊಸೆ(೧೯೮೦)ಗಳಂತಹ ಸದಭಿರುಚಿಯ ಚಿತ್ರಗಳನ್ನು ತಯಾರಿಸಿದ್ದಾರೆ. ಉತ್ತಮ ಸಂದೇಶಗಳಿದ್ದ ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ. ನಮ್ಮ ಮಕ್ಕಳು ಚಿತ್ರಕ್ಕೆ ಉತ್ತಮ ಕನ್ನಡ ಚಿತ್ರ ಫಿಲಂಫೇರ್ ಪ್ರಶಸ್ತಿಯೂ ಲಭಿಸಿದೆ. ಈ ಮೂಲಕ ಫಿಲಂಫೇರ್ ಪ್ರಶಸ್ತಿ ಪಡೆದ ಮೊದಲ ನಿರ್ಮಾಪಕಿಯೆನಿಸಿದರು.[೨]
ವೈಯಕ್ತಿಕ ಜೀವನ
[ಬದಲಾಯಿಸಿ]೧೯೭೨ರಲ್ಲಿ ಇಸ್ರೋದ ಪ್ರಸಿದ್ಧ ವಿಜ್ಞಾನಿ ಡಾ.ಎಸ್.ರಾವ್ ಅವರನ್ನು ವರಿಸಿದ ಹರಿಣಿ ಸುಮಾರು ೧೨ ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ವಾಸವಾಗಿದ್ದರು. ಈಗ ತಮ್ಮ ಪತಿ ಮತ್ತು ಏಕೈಕ ಪುತ್ರ ನಿಹಾರ್ ಅವರೊಂದಿಗೆ ಬೆಂಗಳೂರಿನಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.[೨] ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಮತ್ತು ನಿರ್ದೇಶಕ ವಾದಿರಾಜ್ ಇವರ ಸಹೋದರ. ಇನ್ನೋರ್ವ ಸಹೋದರ ಜವಾಹರ್ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು.
ಪ್ರಶಸ್ತಿ/ಪುರಸ್ಕಾರ
[ಬದಲಾಯಿಸಿ]- ಫಿಲ್ಮಫೇರ್ ಅತ್ಯುತ್ತಮ ಚಿತ್ರ ಪ್ರಶಸ್ತಿ - ನಮ್ಮ ಮಕ್ಕಳು (೧೯೬೯)[೨]
- ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (೨೦೦೯)[೭]
- ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ (ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ, ೨೦೦೯)[೮]
- ಬಿ.ಸರೋಜಾ ದೇವಿ ಪ್ರಶಸ್ತಿ (೨೦೧೦)[೯]
- ರಾಣಿ ಅಬ್ಬಕ್ಕ ಪ್ರಶಸ್ತಿ (೨೦೧೬)[೧೦]
- ಡಾ.ರಾಜ್‌ಕುಮಾರ್ ಪ್ರಶಸ್ತಿ (೨೦೧೬)[೧೧]
ಹರಿಣಿ ಅಭಿನಯದ ಚಿತ್ರಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಹರಿಣಿ". ಕರ್ನಾಟಕ ಚಲನಚಿತ್ರ ಅಕಾಡೆಮಿ.
- ↑ ೨.೦ ೨.೧ ೨.೨ ೨.೩ ೨.೪ ೨.೫ "ಕನ್ನಡದ ಜಗನ್ಮೋಹಿನಿ". ಪ್ರಜಾವಾಣಿ.
- ↑ ೩.೦ ೩.೧ ೩.೨ "Harini - Content Heroine of Yesteryears". ಸೂಪರ್ ಗುಡ್ ಮೂವಿಸ್.ಕಾಮ್. Archived from the original on 2011-01-26. Retrieved 2016-07-06.
- ↑ ೪.೦ ೪.೧ ೪.೨ ೪.೩ ೪.೪ ೪.೫ ೪.೬ ೪.೭ "The good, bad and funny". ದಿ ಹಿಂದೂ.
- ↑ ೫.೦ ೫.೧ "ಎಂ.ಆರ್.ವಿಠ್ಠಲ್ ಎಂಬ ಪ್ರಯೋಗಶೀಲ ನಿರ್ದೇಶಕ". ಸಂವಾದ.[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಕನ್ನಡದ ಹೊಸ ಅಲೆಗೆ ನಾಂದಿ ಹಾಡಿದವರು?". ವಿಜಯ ಕರ್ನಾಟಕ.
- ↑ "ಎಚ್.ಎಸ್.ಪಾರ್ವತಿ, ಮುದ್ದುಕೃಷ್ಣ , ಕುಂ.ವಿ.ಗೆ ರಾಜ್ಯೋತ್ಸವ ಪ್ರಶಸ್ತಿ". ಒನ್ ಇಂಡಿಯಾ.
- ↑ "RC AWARDS ? PROTHSAHA UTHSAHA!". ಚಿತ್ರತಾರಾ.
- ↑ "ಖ್ಯಾತ ಅಭಿನೇತ್ರಿ ಸರೋಜಾದೇವಿ ಪ್ರಶಸ್ತಿ ಪ್ರಕಟ". ಫಿಲ್ಮಿಬೀಟ್ ಕನ್ನಡ.
- ↑ "ಅಬ್ಬಕ್ಕ ಪುರಸ್ಕಾರಕ್ಕೆ ಹರಿಣಿ ಆಯ್ಕೆ". ಕನ್ನಡ ವರ್ಲ್ಡ್,ಕಾಮ್.
- ↑ "ಹಿರಿಯ ನಟಿ ಹರಿಣಿಗೆ ರಾಜ್‌ಕುಮಾರ್ ಪ್ರಶಸ್ತಿ". ಪ್ರಜಾವಾಣಿ. Archived from the original on 2020-12-03. Retrieved 2016-08-02.