ವಿಷಯಕ್ಕೆ ಹೋಗು

ವಂದನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಂದನಾ
ಜನನ
ಬಿ.ವಿಜಯಲಕ್ಶ್ಮಿ
ವೃತ್ತಿ(ಗಳು)ನಟಿ, ನಿರ್ಮಾಪಕಿ
ಸಕ್ರಿಯ ವರ್ಷಗಳು೧೯೬೨–೧೯೭೦

ವಂದನಾ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟಿ. ೧೯೬೦ರ ದಶಕದಲ್ಲಿ ನಾಯಕಿಯಾಗಿ ಚಾಲ್ತಿಯಲ್ಲಿದ್ದ ವಂದನಾ ಮೇರು ನಿರ್ದೇಶಕ ಜಿ.ವಿ.ಅಯ್ಯರ್ ಅವರ ಚಿತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಲಾಯರ್ ಮಗಳು(೧೯೬೩), ಪೋಸ್ಟ್ ಮಾಸ್ಟರ್(೧೯೬೪), ಭಾಗ್ಯದ ಬಾಗಿಲು(೧೯೬೮) ಮತ್ತು ಮೈಸೂರು ಟಾಂಗ(೧೯೬೮) ಚಿತ್ರಗಳಲ್ಲಿನ ಪಕ್ವ ಅಭಿನಯದಿಂದ ಜನಮನ್ನಣೆ ಗಳಿಸಿದ ಅಭಿನೇತ್ರಿ [೧][೨].

ವೃತ್ತಿಜೀವನ

[ಬದಲಾಯಿಸಿ]

೧೯೬೨ರಲ್ಲಿ ತೆರೆಗೆ ಬಂದ ಜಿ.ವಿ.ಅಯ್ಯರ್ ನಿರ್ದೇಶನದ ಕಲ್ಯಾಣ್ ಕುಮಾರ್, ಉದಯ್ ಕುಮಾರ್,ಲೀಲಾವತಿ ಮತ್ತು ಎಮ್.ವಿ.ರಾಜಮ್ಮ ಮುಂತಾದವರು ಅಭಿನಯಿಸಿದ ತಾಯಿ ಕರುಳು ಚಿತ್ರದ ಮೂಲಕ ಕನ್ನಡದ ಬೆಳ್ಳಿ ತೆರೆಗೆ ಪರಿಚಿತರಾದ ವಂದನಾ ಬಹುತಾರಾಗಣವಿದ್ದ ಮೊದಲ ಚಿತ್ರದಲ್ಲಿಯೇ ತಮ್ಮ ಅಭಿನಯ ಸಾಮರ್ಥ್ಯದಿಂದ ಚಿತ್ರಪಂಡಿತರ ಗಮನ ಸೆಳೆದರು. ವಂದನಾರ ಅಭಿನಯವನ್ನು ಮೆಚ್ಚಿದ ಜಿ.ವಿ.ಅಯ್ಯರ್ ತಾವು ನಿರ್ದೇಶಿಸಿದ ಬಂಗಾರಿ(೧೯೬೩), ಲಾಯರ್ ಮಗಳು(೧೯೬೩) ಮತ್ತು ಪೋಸ್ಟ್ ಮಾಸ್ಟರ್(೧೯೬೪) ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ನೀಡಿದರು. ಪೋಸ್ಟ್ ಮಾಸ್ಟರ್ ಚಿತ್ರದಲ್ಲಿ ಪರಿಸ್ಥಿತಿಯ ಸುಳಿಗೆ ಸಿಲುಕಿ ಮನೆಯನ್ನು ತೊರೆದ ತನ್ನ ತಂದೆಯ ಸ್ಥಾನದಲ್ಲಿ ನಿಂತು ಸ್ವಹಿತವನ್ನು ಮರೆತು ಕುಟುಂಬದ ಜವಾಬ್ದಾರಿಯನ್ನು ಸುಸೂತ್ರವಾಗಿ ನಿಭಾಯಿಸುವ ಪೋಸ್ಟ್ ಮಾಸ್ಟರನ ಮಗಳಾಗಿ ವಂದನಾರದ್ದು ಮನಮುಟ್ಟುವ ಭಾವಪೂರ್ಣ ಅಭಿನಯ. ತಾಯಿ ಕರುಳು ಚಿತ್ರದ ತಮಿಳು ಅವತರಣಿಕೆಯಾದ ತಾಯಿನ್ ಕರುಣೈ(೧೯೬೫) ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಅವರ ಜೋಡಿಯಾಗಿ ಅಭಿನಯಿಸಿದ್ದಾರೆ.

ರಾಜ್ ಕುಮಾರ್ ಮತ್ತು ಲೀಲಾವತಿ ಅಭಿನಯದ ಮದುವೆ ಮಾಡಿ ನೋಡು(೧೯೬೫) ಚಿತ್ರದ ಚಿಕ್ಕ ಪಾತ್ರದಲ್ಲಿ ಚೊಕ್ಕ ಅಭಿನಯ ನೀಡಿದ ವಂದನಾ ಉದಯಕುಮಾರ್ ಅವರೊಂದಿಗೆ ದೇವಮಾನವ(೧೯೬೬), ಕಲ್ಯಾಣ್ ಕುಮಾರ್ ಅವರೊಂದಿಗೆ ಕಲ್ಲುಸಕ್ಕರೆ(೧೯೬೭) ಚಿತ್ರಗಳಲ್ಲಿ ನಾಯಕಿಯಾಗಿ ಶಕ್ತ ಅಭಿನಯ ನೀಡಿದ್ದಾರೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು ನಾಯಕರಾಗಿ ಅಭಿನಯಿಸಿದ ಬ್ಲಾಕ್ ಮಾರ್ಕೆಟ್(೧೯೬೭) ಚಿತ್ರದಲ್ಲಿ ಮೋಹಕ ಪಾತ್ರದಲ್ಲಿ ಮಿಂಚಿದ ವಂದನಾ ರಾಜ್ ಕುಮಾರ್ ಮತ್ತು ಭಾರತಿ ಮುಖ್ಯ ಭೂಮಿಕೆಯಲ್ಲಿದ್ದ ಬೀದಿ ಬಸವಣ್ಣ(೧೯೬೭) ಮತ್ತು ರಾಜಶೇಖರ(೧೯೬೭) ಚಿತ್ರಗಳಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಬಿ.ಆರ್.ಪಂತುಲು ನಿರ್ದೇಶನದ ಬೀದಿ ಬಸವಣ್ಣ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಗಮನ ಸೆಳೆದ ವಂದನಾ ಜಿ.ವಿ.ಅಯ್ಯರ್ ನಿರ್ದೇಶನದ ರಾಜಶೇಖರ ಚಿತ್ರದಲ್ಲಿ ಋಣಾತ್ಮಕ ಛಾಯೆಯ ಪಂಕಜವಲ್ಲಿಯಾಗಿ ವಿಶಿಷ್ಥ ಅಭಿನಯ ನೀಡಿದ್ದಾರೆ.

ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದ ಭಾಗ್ಯದ ಬಾಗಿಲು(೧೯೬೮) ವರನಟ ಡಾ.ರಾಜ್ ಕುಮಾರ್ ಅಭಿನಯದ ೧೦೦ನೇ ಚಿತ್ರ. ಈ ಚಿತ್ರದಲ್ಲಿ ನಾಯಕಿಯಾಗಿ ಗಮನಾರ್ಹ ಅಭಿನಯ ನೀಡಿದ ವಂದನಾ ರಾಜ್ ಅಭಿನಯದ ೧೦೦ನೇ ಚಿತ್ರದ ನಾಯಕಿಯಾಗಿ ನಟಿಸಿದ ಹೆಗ್ಗಳಿಕೆಗೆ ಪಾತ್ರರು.

ನಟಶೇಖರ ಕಲ್ಯಾಣ್ ಕುಮಾರ್ ಅವರೊಂದಿಗೆ ಪ್ರವಾಸಿ ಮಂದಿರ(೧೯೬೮), ಮಮತೆ(೧೯೬೮) ಮತ್ತು ಮಂಕುದಿಣ್ಣೆ(೧೯೬೮) ಮುಂತಾದ ವಿಶಿಷ್ಠ ಚಿತ್ರಗಳಲ್ಲಿ ಅಭಿನಯಿಸಿದ ವಂದನಾ ಕಲ್ಯಾಣ್ ಕುಮಾರ್ ಮತ್ತು ಉದಯಕುಮಾರ್ ಅವರೊಂದಿಗೆ ಅಭಿನಯಿಸಿದ ಮೈಸೂರು ಟಾಂಗ(೧೯೬೮) ಚಿತ್ರದಲ್ಲಿ ಎರಡು ವಿಭಿನ್ನ ಛಾಯೆಯುಳ್ಳ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ಜಿ.ವಿ.ಅಯ್ಯರ್ ನಿರ್ದೇಶಿಸದ ಈ ಚಿತ್ರವನ್ನು ಸ್ವತಃ ವಂದನಾ ಅವರೇ ತಮ್ಮ ವಿಜಯಲಕ್ಷ್ಮಿ ಮೂವಿಟೋನ್ಸ್ ಸಂಸ್ಥೆಯಿಂದ ನಿರ್ಮಿಸಿದ್ದರು ಎನ್ನುವುದು ಗಮನಾರ್ಹ. ಇವರ ಕೊನೆಯ ಚಿತ್ರ ೧೯೭೦ರಲ್ಲಿ ಬಿಡುಗಡೆಗೊಂಡ ಬೋರೇಗೌಡ ಬೆಂಗಳೂರಿಗೆ ಬಂದ. ಈ ಚಿತ್ರದಲ್ಲಿ ಆಗಷ್ಟೇ ಚಿತ್ರರಂಗ ಪ್ರವೆಶಿಸಿದ್ದ ಶ್ರೀನಾಥ್ಗೆ ವಂದನಾ ನಾಯಕಿಯಾಗಿದ್ದರು.

ಸುಮಾರು ೮ ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು ೨೦ ಚಲನಚಿತ್ರಗಳಲ್ಲಿ ಅಭಿನಯಿಸಿರುವ ವಂದನಾ ಲೀಲಾವತಿ, ಜಯಂತಿ, ಭಾರತಿ ಮತ್ತು ಕಲ್ಪನಾ ನಾಯಕಿಯರಾಗಿ ಮೆರೆಯುತ್ತಿದ್ದ ೬೦ರ ದಶಕದಲ್ಲಿ ತಮ್ಮ ವಿಶಿಷ್ಠ ಅಭಿನಯದಿಂದ ಜನಮನಸೂರೆಗೊಂಡು ಕನ್ನಡ ಚಿತ್ರರಂಗದ ಸುವರ್ಣ ಯುಗದ ಪ್ರತಿಭಾವಂತ ನಾಯಕಿಯರಲ್ಲಿ ಒಬ್ಬರೆನಿಸಿದ್ದಾರೆ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ರಮೇಶ್, ಶ್ರೀನಾಥ್, ನರಸಿಂಹರಾಜು, ಬಿ.ಎಮ್.ವೆಂಕಟೇಶ್ ಮುಂತಾದ ಅಂದಿನ ಜನಪ್ರಿಯ ನಟರೊಂದಿಗೆ ನಟಿಸಿರುವ ವಂದನಾ ಜಿ.ವಿ.ಅಯ್ಯರ್, ಬಿ.ಆರ್.ಪಂತುಲು, ಕೆ.ಎಸ್.ಎಲ್.ಸ್ವಾಮಿ, ಎಂ.ಆರ್.ವಿಠಲ್, ವೈ.ಆರ್.ಸ್ವಾಮಿ ಮುಂತಾದ ಮೇರು ನಿರ್ದೇಶಕರ ಗರಡಿಯಲ್ಲಿ ಕೆಲಸ ಮಾಡಿದ್ದಾರೆ. ನಟ ಕಲ್ಯಾಣ್ ಕುಮಾರ್ ನಿರ್ದೇಶಿಸಿದ ಕಲ್ಲು ಸಕ್ಕರೆ ಮತ್ತು ಪ್ರವಾಸಿ ಮಂದಿರ ಚಿತ್ರಗಳಲ್ಲಿ ವಂದನಾ ಅಭಿನಯಿಸಿದ್ದಾರೆ.

ವಂದನಾ ನಟಿಸಿರುವ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೬೨ ತಾಯಿ ಕರುಳು ಕನ್ನಡ ಜಿ.ವಿ.ಅಯ್ಯರ್ ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಲೀಲಾವತಿ
೧೯೬೩ ಬಂಗಾರಿ ಕನ್ನಡ ಜಿ.ವಿ.ಅಯ್ಯರ್ ಕಲ್ಯಾಣ್ ಕುಮಾರ್
೧೯೬೩ ಲಾಯರ್ ಮಗಳು ಕನ್ನಡ ಜಿ.ವಿ.ಅಯ್ಯರ್ ಕಲ್ಯಾಣ್ ಕುಮಾರ್, ಉದಯ್ ಕುಮಾರ್
೧೯೬೪ ಪೋಸ್ಟ್ ಮಾಸ್ಟರ್ ಕನ್ನಡ ಜಿ.ವಿ.ಅಯ್ಯರ್ ಬಿ.ಎಂ.ವೆಂಕಟೇಶ್
೧೯೬೫ ತಾಯಿನ್ ಕರುಣೈ ತಮಿಳು ಜಿ.ವಿ.ಅಯ್ಯರ್ ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಲೀಲಾವತಿ
೧೯೬೫ ಮದುವೆ ಮಾಡಿ ನೋಡು ಕನ್ನಡ ಹುಣಸೂರು ಕೃಷ್ಣಮೂರ್ತಿ ರಾಜ್ ಕುಮಾರ್, ಲೀಲಾವತಿ, ನರಸಿಂಹರಾಜು
೧೯೬೬ ದೇವಮಾನವ ಕನ್ನಡ ಜಂಬು ಉದಯ್ ಕುಮಾರ್, ಜಯಂತಿ
೧೯೬೭ ಬೀದಿ ಬಸವಣ್ಣ ಕನ್ನಡ ಬಿ.ಆರ್.ಪಂತುಲು ರಾಜ್ ಕುಮಾರ್, ಭಾರತಿ, ನರಸಿಂಹರಾಜು
೧೯೬೭ ಧನಪಿಶಾಚಿ ಕನ್ನಡ ಎಸ್.ಎನ್.ಸಿಂಗ್ ಬಿ.ಎಂ.ವೆಂಕಟೇಶ್
೧೯೬೭ ಬ್ಲಾಕ್ ಮಾರ್ಕೆಟ್ ಕನ್ನಡ ಎಸ್.ಎನ್.ಸಿಂಗ್ ನರಸಿಂಹರಾಜು
೧೯೬೭ ಮಿಸ್ ಬೆಂಗಳೂರು ಕನ್ನಡ ಪಿ.ಎಸ್.ಮೂರ್ತಿ ಜಯಂತಿ
೧೯೬೭ ರಾಜಶೇಖರ ಕನ್ನಡ ಪಂಕಜವಲ್ಲಿ ಜಿ.ವಿ.ಅಯ್ಯರ್ ರಾಜ್ ಕುಮಾರ್, ಭಾರತಿ
೧೯೬೭ ಕಲ್ಲುಸಕ್ಕರೆ ಕನ್ನಡ ಕಲ್ಯಾಣ್ ಕುಮಾರ್ ಕಲ್ಯಾಣ್ ಕುಮಾರ್, ರೇವತಿ, ಜಯಂತಿ
೧೯೬೮ ಭಾಗ್ಯದ ಬಾಗಿಲು ಕನ್ನಡ ಕೆ.ಎಸ್.ಎಲ್.ಸ್ವಾಮಿ ರಾಜ್ ಕುಮಾರ್, ಬಿ.ವಿ.ರಾಧಾ
೧೯೬೮ ಮಮತೆ ಕನ್ನಡ ವೈ.ಆರ್.ಸ್ವಾಮಿ ಕಲ್ಯಾಣ್ ಕುಮಾರ್, ಲೀಲಾವತಿ
೧೯೬೮ ಮಂಕುದಿಣ್ಣೆ ಕನ್ನಡ ಕೆ.ಎಸ್.ಎಲ್.ಸ್ವಾಮಿ ಕಲ್ಯಾಣ್ ಕುಮಾರ್
೧೯೬೮ ಮೈಸೂರು ಟಾಂಗ ಕನ್ನಡ ಜಿ.ವಿ.ಅಯ್ಯರ್ ಕಲ್ಯಾಣ್ ಕುಮಾರ್, ಉದಯ್ ಕುಮಾರ್
೧೯೬೮ ಪ್ರವಾಸಿ ಮಂದಿರ ಕನ್ನಡ ಕಲ್ಯಾಣ್ ಕುಮಾರ್ ಕಲ್ಯಾಣ್ ಕುಮಾರ್
೧೯೬೮ ಚಿನ್ನಾರಿ ಪುಟ್ಟಣ್ಣ ಕನ್ನಡ ಬಿ.ಆರ್.ಪಂತುಲು ರಮೇಶ್, ಉದಯಚಂದ್ರಿಕಾ, ರಂಗ, ಜ್ಯೂ.ರೇವತಿ, ನರಸಿಂಹರಾಜು
೧೯೬೮ ಕಣ್ಣುಮುಚ್ಚಾಲೆ ಕನ್ನಡ ಎಂ.ಆರ್.ವಿಠಲ್ ಕಲ್ಯಾಣ್ ಕುಮಾರ್
೧೯೬೯ ನಿರಪರಾಧಿ ಕನ್ನಡ ಬಿ.ವಲ್ಲಿನಾಯಗಂ ಕಲ್ಯಾಣ್ ಕುಮಾರ್, ಸಾಹುಕಾರ್ ಜಾನಕಿ
೧೯೭೦ ಬೋರೇಗೌಡ ಬೆಂಗಳೂರಿಗೆ ಬಂದ ಕನ್ನಡ ಬಿ.ಎ.ಅರಸು ಕುಮಾರ್ ರಾಜೇಶ್, ಲೀಲಾವತಿ, ಶ್ರೀನಾಥ್

ಉಲ್ಲೇಖಗಳು

[ಬದಲಾಯಿಸಿ]
  1. "ಬಿ.ವಿಜಯಲಕ್ಷ್ಮಿ". ಚಿಲೋಕ.ಕಾಮ್.
  2. "ಬೆಳ್ಳಿ ತೆರೆಯ ಹಿಂದೆ... ದ್ವಾರಕೀಶ್". http://www.prajavani.net/. ಪ್ರಜಾವಾಣಿ. {{cite web}}: External link in |website= (help)
"https://kn.wikipedia.org/w/index.php?title=ವಂದನಾ&oldid=1150710" ಇಂದ ಪಡೆಯಲ್ಪಟ್ಟಿದೆ