ವಿಷಯಕ್ಕೆ ಹೋಗು

ಯು.ಆರ್.ಅನಂತಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಯು. ಆರ್. ಅನ೦ತಮೂರ್ತಿ ಇಂದ ಪುನರ್ನಿರ್ದೇಶಿತ)
ಯು.‌ಆರ್. ಅನಂತಮೂರ್ತಿ
ಜನನ(೧೯೩೨-೧೨-೨೧)೨೧ ಡಿಸೆಂಬರ್ ೧೯೩೨
ಮೇಳಿಗೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಮೈಸೂರು ಸಂಸ್ಥಾನ, ಭಾರತ
ಮರಣ22 August 2014(2014-08-22) (aged 81)
ಬೆಂಗಳೂರು, ಕರ್ನಾಟಕ, ಭಾರತ
ವೃತ್ತಿಪ್ರಾಧ್ಯಾಪಕರು, ಕನ್ನಡದ ಪ್ರಸಿದ್ಧ ಸಾಹಿತಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕವಿತೆ, ಕತೆ, ಕಾದಂಬರಿ, ಪ್ರಬಂಧ, ಸಾಹಿತ್ಯವಿಮರ್ಶೆ, ನಾಟಕ
ಸಾಹಿತ್ಯ ಚಳುವಳಿನವ್ಯ

ಚಿತ್ರ:AnanthmurtyEsther.jpg
'ಡಾ.ಅನಂತಮೂರ್ತಿ, ಪತ್ನಿಯವರ ಜೊತೆ'
ಕನ್ನಡ ವಿಕಿಪೀಡಿಯದ ೯ನೇ ವಾರ್ಷಿಕೋತ್ಸವ ಸಮಯದಲ್ಲಿ - ಯು.‌ಆರ್ ಅನಂತಮೂರ್ತಿ

ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ಅವರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದರು ಮತ್ತು ನವ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು[] ,ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿರುವ ಆರನೇ ಬರಹಗಾರರಾಗಿದ್ದಾರೆ. ಈ ಪ್ರಶಸ್ತಿಯು ಭಾರತದಲ್ಲಿ ನೀಡಲ್ಪಟ್ಟ ಅತ್ಯುನ್ನತ ಗೌರವವಾಗಿದೆ. ೧೯೯೮ ರಲ್ಲಿ ಇವರು ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. ೧೯೮೦ ರ ದಶಕದ ಅಂತ್ಯದಲ್ಲಿ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಅವರು ೨೦೧೩ ರ ಮ್ಯಾನ್ ಬುಕರ್ ಅಂತರರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.

ಜನನ

ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 'ಮೇಳಿಗೆ' ಹಳ್ಳಿಯಲ್ಲಿ, ೧೯೩೨ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ (ಸತ್ಯಭಾಮ).[]

ವಿದ್ಯಾಭ್ಯಾಸ

'ದೂರ್ವಾಸಪುರ'ದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು."ಋಜುವಾತು "ಪತ್ರಿಕೆಯನು ಪ್ರಾರಂಭಿಸಿದರು.

ವೃತ್ತಿ ಜೀವನ

ಅನಂತಮೂರ್ತಿ ೧೯೭೦ ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕ ಮತ್ತು ಬೋಧಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ೧೯೮೭ ರಿಂದ ೧೯೯೧ ರವರೆಗೆ ಕೇರಳದ ಕೊಟ್ಟಾಯಂನಲ್ಲಿರುವ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು.[] ಅವರು ೧೯೯೨ ರವರೆಗೆ ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.[] ೧೯೯೩ ರಲ್ಲಿ ಅವರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಟಬಿಂಗನ್ ವಿಶ್ವವಿದ್ಯಾಲಯ, ಅಯೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ ಮತ್ತು ಶಿವಾಜಿ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಭಾರತೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.ಅನಂತಮೂರ್ತಿ ಎರಡು ಬಾರಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೨೦೧೨ ರಲ್ಲಿ ಅವರನ್ನು ಕರ್ನಾಟಕದ ಕೇಂದ್ರ ವಿಶ್ವವಿದ್ಯಾಲಯದ ಮೊದಲ ಕುಲಪತಿಯನ್ನಾಗಿ ನೇಮಿಸಲಾಯಿತು.

ಅನಂತಮೂರ್ತಿ ದೇಶದಲ್ಲಿ ಮತ್ತು ಹೊರಗಡೆ ಹಲವಾರು ಸೆಮಿನಾರ್‌ಗಳಲ್ಲಿ ಬರಹಗಾರ ಮತ್ತು ವಾಗ್ಮಿಗಳಾಗಿ ಉಪನ್ಯಾಸಗಳನ್ನು ನೀಡಿದ್ದಾರೆ. ಅವರು ಭಾರತೀಯ ಬರಹಗಾರರ ಸಮಿತಿಯ ಸದಸ್ಯರಾಗಿದ್ದರು ಮತ್ತು ೧೯೯೦ ರಲ್ಲಿ ಸೋವಿಯತ್ ಒಕ್ಕೂಟ, ಹಂಗೇರಿ, ಫ್ರಾನ್ಸ್ ಮತ್ತು ಪಶ್ಚಿಮ ಜರ್ಮನಿಯಂತಹ ದೇಶಗಳಿಗೆ ಭೇಟಿ ನೀಡಿದರು. ಸೋವಿಯತ್ ಪತ್ರಿಕೆಯೊಂದರ ಮಂಡಳಿಯ ಸದಸ್ಯರಾಗಿ ೧೯೮೯ ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ ರಲ್ಲಿ ಚೀನಾಕ್ಕೆ ಭೇಟಿ ನೀಡಿದ ಬರಹಗಾರರ ಸಮಿತಿಯ ನಾಯಕ ಅನಂತಮೂರ್ತಿ.

ಕೃತಿಗಳು

ಕಥಾ ಸಂಕಲನ

  • ಎಂದೆಂದೂ ಮುಗಿಯದ ಕತೆ (೧೯೫೫)
  • ಪ್ರಶ್ನೆ (೧೯೬೩)
  • ಮೌನಿ (೧೯೭೨)
  • ಆಕಾಶ ಮತ್ತು ಬೆಕ್ಕು (೨೦೦೧)
  • ಕ್ಲಿಪ್ ಜಾಯಿಂಟ್
  • ಘಟಶ್ರಾದ್ಧ
  • ಸೂರ್ಯನ ಕುದುರೆ (೧೯೮೧)
  • ಪಚ್ಚೆ ರೆಸಾರ್ಟ್ (೨೦೧೧)
  • ಬೇಟೆ, ಬಳೆ ಮತ್ತು ಓತಿಕೇತ
  • ಎರಡು ದಶಕದ ಕತೆಗಳು
  • ಮೂರು ದಶಕದ ಕಥೆಗಳು (೧೯೮೯)
  • ಐದು ದಶಕದ ಕತೆಗಳು (೨೦೦೨)

ಕಾದಂಬರಿಗಳು

  • ಸಂಸ್ಕಾರ (೧೯೬೫)
  • ಭಾರತೀಪುರ (೧೯೭೩)
  • ಅವಸ್ಥೆ (೧೯೭೮)
  • ಭವ (೧೯೯೪)
  • ದಿವ್ಯ (೨೦೦೧)
  • ಪ್ರೀತಿ ಮೃತ್ಯು ಮತ್ತು ಭಯ (೨೦೧೨)

ವಿಮರ್ಶೆ ಮತ್ತು ಪ್ರಬಂಧ ಸಂಕಲನ

  • ಪ್ರಜ್ಞೆ ಮತ್ತು ಪರಿಸರ (೧೯೭1)
  • ಪೂರ್ವಾಪರ (೧೯೮೦)
  • ಸಮಕ್ಷಮ (೧೯೮೦)
  • ಸನ್ನಿವೇಶ (೧೯೭೪)
  • ಯುಗಪಲ್ಲಟ (೨೦೦೧)
  • ವಾಲ್ಮೀಕಿಯ ನೆವದಲ್ಲಿ (೨೦೦೬)
  • ಮಾತು ಸೋತ ಭಾರತ (೨೦೦೭)
  • ಸದ್ಯ ಮತ್ತು ಶಾಶ್ವತ (೨೦೦೮)
  • ಬೆತ್ತಲೆ ಪೂಜೆ ಏಕೆ ಕೂಡದು (೧೯೯೯)
  • ಋಜುವಾತು (೨೦೦೭)
  • ಶತಮಾನದ ಕವಿ ಯೇಟ್ಸ್ (೨೦೦೮)
  • ಕಾಲಮಾನ (೨೦೦೯)
  • ಮತ್ತೆ ಮತ್ತೆ ಬ್ರೆಕ್ಟ್ (೨೦೦೯)
  • ಶತಮಾನದ ಕವಿ ವರ್ಡ್ಸ್ ವರ್ತ್ (೨೦೦೯)
  • ಶತಮಾನದ ಕವಿ ರಿಲ್ಕೆ (೨೦೦೯)
  • ರುಚಿಕರ ಕಹಿಸತ್ಯಗಳ ಕಾಲ (೨೦೧೧)
  • ಆಚೀಚೆ (೨೦೧೧)

ನಾಟಕ

  • ಆವಾಹನೆ (೧೯೬೮)

ಕವನ ಸಂಕಲನ

  • ಹದಿನೈದು ಪದ್ಯಗಳು (೧೯೬೭)
  • ಮಿಥುನ (೧೯೯೨)
  • ಅಜ್ಜನ ಹೆಗಲ ಸುಕ್ಕುಗಳು (೧೯೮೯)
  • ಅಭಾವ (೨೦೦೯)
  • ಸಮಸ್ತ ಕಾವ್ಯ (೨೦೧೨)

ಆತ್ಮಕತೆ

  • ಸುರಗಿ (೨೦೧೨)
  • ಮೊಳಕೆ (ಅಮಿತನ ಆತ್ಮಚರಿತ್ರೆ)

ಚಲನಚಿತ್ರವಾದ ಕೃತಿಗಳು

  • ಘಟಶ್ರಾದ್ಧ
  • ಸಂಸ್ಕಾರ
  • ಬರ
  • ಅವಸ್ಥೆ
  • ಮೌನಿ (ಸಣ್ಣಕಥೆ)
  • ದೀಕ್ಷಾ (ಹಿಂದಿ ಚಿತ್ರ)
  • ಪ್ರಕೃತಿ (ಸಣ್ಣಕಥೆ)

ಪ್ರಮುಖ ಉಪನ್ಯಾಸಗಳು

  • ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ, ತುಮಕೂರು, 2002
  • ಫ್ರೆಂಚ್ ಸಾಹಿತ್ಯ ಉತ್ಸವ, 2002
  • ಬರ್ಲಿನ್ ಸಾಹಿತ್ಯ ಉತ್ಸವ, 2002
  • ಕರ್ನಾಟಕವನ್ನು ಕುರಿತ ವಿಚಾರ ಸಂಕಿರಣ, ಅಯೋವಾ ವಿವಿ, 1997
  • ಭಾರತವನ್ನು ಕುರಿತ ವಿಚಾರ ಸಂಕಿರಣ, ಬರ್ಲಿನ್, ಜರ್ಮನಿ, 1997
  • 'ದಿ ವರ್ಡ್ ಆ್ಯಸ್ ಮಂತ್ರ: ಎ ಸೆಲೆಬ್ರೇಷನ್ ಆಫ್ ರಾಜಾರಾವ್' ವಿಚಾರ ಸಂಕಿರಣ, ಟೆಕ್ಸಾಸ್ ವಿವಿ, 1997
  • 'ಟ್ರಾನ್ಸ್‌ಲೇಟಿಂಗ್ ಸೌತ್ ಏಷ್ಯನ್ ಲಿಟರೇಚರ್' ವಿಚಾರ ಸಂಕಿರಣ, ಲಂಡನ್, 1993
  • ಭಾರತೀಯ ಲೇಖಕರ ನಿಯೋಗದ ಮುಖ್ಯಸ್ಥ, ಚೀನಾ, 1993
  • ಗಾಂಧಿ ಸ್ಮಾರಕ ಉಪನ್ಯಾಸ, ರಾಜಘಾಟ್, ವಾರಣಾಸಿ, 1989
  • 'ಮಾರ್ಕ್ಸಿಸಂ ಅಂಡ್ ಲಿಟರೇಚರ್', ಅಂಗನ್‌ಗಲ್ ಸ್ಮಾರಕ ಉಪನ್ಯಾಸ, ಮಣಿಪುರ, 1976.[]

ಪ್ರಶಸ್ತಿ ಮತ್ತು ಪುರಸ್ಕಾರಗಳು

ನಿಧನ

ಡಾ.ಅನಂತ ಮೂರ್ತಿಯವರು ೨೦೦೨ರಿಂದ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು. ಜೊತೆಗೆ ಸಕ್ಕರೆ ಕಾಯಿಲೆ ಕಾಡುತ್ತಿತ್ತು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ 'ಮಣಿಪಾಲ್ ಆಸ್ಪತ್ರೆ'ಯಲ್ಲಿ ೧೦ ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಹೊಂದದೆ ಮೂತ್ರಪಿಂಡ ವೈಫ಼ಲ್ಯ ಹಾಗು ಲಘು ಹೃದಯಾಘಾತದಿಂದ 2014ರ ಆಗಸ್ಟ್ 22ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೆಂಗಳೂರಿನ ಡಾಲರ್ ಕಾಲೊನಿಯಲ್ಲಿ ವಾಸಿಸುತ್ತಿದ್ದ ಮೂರ್ತಿಯವರ ಅಂತಿಮ ಸಂಸ್ಕಾರ, ಬೆಂಗಳೂರಿನ 'ಜ್ಞಾನಭಾರತಿ ಕಲಾಗ್ರಾಮ'ದಲ್ಲಿ2014ರ ಆಗಸ್ಟ್ 23 ನೆಯ ತಾರೀಖಿನ ಮಧ್ಯಾಹ್ನ ಸುಮಾರು ೪ ಗಂಟೆಗೆ ಜರುಗಿತು.[] ಮೂರ್ತಿಯವರು ಪತ್ನಿ ಎಸ್ತರ್, ಮಗ ಶರತ್ ಮತ್ತು ಮಗಳು ಅನುರಾಧರನ್ನು ಆಗಲಿದ್ದಾರೆ.[]

ಒಂದಿಷ್ಟು ಹೆಚ್ಚಿನ ಮಾಹಿತಿಗಳು

  • ೧೯೫೫ರಲ್ಲಿ ಎಂದೆಂದೂ ಮುಗಿಯದ ಕತೆ ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು.
  • ೧೯೬೫ರಲ್ಲಿ ಮೊದಲ ಕಾದಂಬರಿ ಸಂಸ್ಕಾರ ಪ್ರಕಟವಾಯಿತು. ಇದು ವ್ಯಾಪಕ ಚರ್ಚೆಗೆ ಒಳಗಾದ ಕಾದಂಬರಿ. ಈ ಕಾದಂಬರಿ ಭಾರತದ ಹಲವು ಭಾಷೆಗಳಲ್ಲದೆ, ಇಂಗ್ಲಿಷ್, ರಷ್ಯನ್, ಫ್ರೆಂಚ್, ಜರ್ಮನ್, ಹಂಗೇರಿಯನ ಮತ್ತಿತರ ಭಾಷೆಗಳಿಗೆ ಅನುವಾದವಾಗಿದೆ.
  • ಯು.ಆರ್.ಅನಂತಮೂರ್ತಿಯವರ ಮೊದಲ ಕಾದಂಬರಿ ಸಂಸ್ಕಾರ ಎಂದೇ ಎಲ್ಲರೂ ಭಾವಿಸಿದ್ದರು. ಅದಕ್ಕೂ ಮೊದಲೇ ಅನಂತಮೂರ್ತಿ ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ ಪ್ರೀತಿ-ಮೃತ್ಯು-ಭಯ ಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು.
  • ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
  • ಹಿರಿಯ ಸಮಾಜವಾದಿ ರಾಜಕಾರಣಿ ಜೆ. ಎಚ್. ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾಲಗೌಡ ಮತ್ತು ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲಿ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ.
  • ೧೯೮೧ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು ಋಜುವಾತು ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು.
  • ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.
  • ಅನಂತಮೂರ್ತಿಯವರ ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.
  • ಘಟಶ್ರಾದ್ಧ ಕತೆಯನ್ನು ಆಧರಿಸಿ ದೀಕ್ಷಾ ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ.
  • ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ, ಉಪನ್ಯಾಸ ನೀಡಿದ್ದಾರೆ.
  • ೧೯೮೦ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು. ಮಾರ್ಕ್ಸ್‌ವಾದದಿಂದ ಬಹಳ ಪ್ರಭಾವಿತರಾಗಿದ್ದ ಇವರು ತಮ್ಮ ಹಲವಾರು ಅಭಿಪ್ರಾಯಗಳನ್ನು ಪರೀಕ್ಷಿಸಿ ನೋಡಲು ಈ ಭೇಟಿ ನೆರವಾಯಿತು.
  • ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ ೧೯೮೯ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶ ವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.
  • ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಆರ್.ಕೆ .ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ.
  • ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರುಗಳನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ.
  • ವಿನಾಯಕ ಕೃಷ್ಣ ಗೋಕಾಕರ ಅನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎರಡನೆಯ ಕನ್ನಡಿಗ.
  • ಮ್ಯಾನ್ ಬುಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡ ೧೦ ಸಾಹಿತಿಗಳಲ್ಲಿ ಒಬ್ಬರು.
  • ೧೯೮೦ರ ಗೋಕಾಕ್ ಚಳುವಳಿಯನ್ನು ವಿರೋಧಿಸಿದ ಅನಂತಮೂರ್ತಿ, ಅದನ್ನು ದಂಗೆ ಎಂದು ಕರೆದರು.[]
  • ೧೯೯೭ರಲ್ಲಿ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮನೆ ನೀಡಲಾಯ್ತು. ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ರಿಗೆ ಅನಂತಮೂರ್ತಿಯವರು ಆಪ್ತರಾದುದರಿಂದ ಅದು ವಿವಾದಕ್ಕೆ ಕಾರಣವಾಯಿತು. ಕವಿಗಳಿಗೆ ಸರ್ಕಾರ ನೀಡುವ ನಿವೇಶನವನ್ನು ಹಿಂದಿರುಗಿಸಿದ ನಂತರ ಮನೆ ಪಡೆದದ್ದು ಎಂದು ತಮ್ಮ ಆತ್ಮ ಚರಿತ್ರೆ ಸುರಗಿಯಲ್ಲಿ ಅನಂತಮೂರ್ತಿ ವಿವರಿಸಿದ್ದಾರೆ.

ಉಲ್ಲೇಖಗಳು

  1. "ಆರ್ಕೈವ್ ನಕಲು" (PDF). Archived from the original (PDF) on 2020-01-11. Retrieved 2020-01-11.
  2. "U. R. Ananthamurthy - U. R. Ananthamurthy Biography - Poem Hunter". www.poemhunter.com (in ಇಂಗ್ಲಿಷ್). Retrieved 11 January 2020.
  3. https://www.mgu.ac.in/index.php?option=com_content&view=article&id=1330&Itemid=1286
  4. "ಆರ್ಕೈವ್ ನಕಲು". Archived from the original on 2008-10-11. Retrieved 2020-01-11.
  5. https://www.goodreads.com/author/list/6473576.U_R_Ananthamurthy_
  6. "ಆರ್ಕೈವ್ ನಕಲು". Archived from the original on 2020-09-29. Retrieved 2020-01-11.
  7. ಪಂಚಭೂತಗಳಲ್ಲಿ ಅನಂತಮೂರ್ತಿ ಲೀನ[permanent dead link]
  8. "Noted Kannada writer UR Ananthamurthy dies at 81". Hindustan Times (in ಇಂಗ್ಲಿಷ್). 22 August 2014. Retrieved 11 January 2020.
  9. http://www.thehindu.com/todays-paper/tp-national/tp-karnataka/writers-oppose-ananthamurthys-candidature-for-rajya-sabha/article3168762.ece

ಹೊರಕೊಂಡಿಗಳು