ವಿಠ್ಠಲ
ವಿಠ್ಠಲ | |
---|---|
ದೇವನಾಗರಿ | विठोबा |
ಸಂಬಂಧ | ವಿಷ್ಣು ಅಥವಾ ಕೃಷ್ಣನ ಸ್ವರೂಪ |
ನೆಲೆ | ಪಂಢರಪುರ |
ಹೆಂಡತಿ | ರಖುಮಾಯಿ (ರುಕ್ಮಿಣಿ) |
ವಾಹನ | ಗರುಡ, ವಿಷ್ಣುವಿನೊಡನೆ ಸಂಬಂಧಿಸಿದಾಗ |
ವಿಠ್ಠಲ, ವಿಠೋಬಾ ಮತ್ತು ಪಾಂಡುರಂಗ ಎಂದೂ ಪರಿಚಿತನಿರುವ, ಮುಖ್ಯವಾಗಿ ಭಾರತದ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಆರಾಧಿಸಲಾಗುವ ಒಬ್ಬ ಹಿಂದೂ ದೇವರು. ಅವನನ್ನು ಸಾಮಾನ್ಯವಾಗಿ ಹಿಂದೂ ವಿಷ್ಣು ಅಥವಾ ಅವನ ಅವತಾರನಾದ ಕೃಷ್ಣ ಅಥವಾ, ಪ್ರಾಸಂಗಿಕವಾಗಿ, ಅವನ ಅವತಾರ ಬುದ್ಧನ ಒಂದು ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಅವನನ್ನು ಶಿವನೊಂದಿಗೂ ಸಂಬಂಧಿಸಲಾಗುತ್ತದೆ. ವಿಠ್ಠಲನನ್ನು ಹಲವುವೇಳೆ, ಸೊಂಟದ ಮೇಲೆ ಕೈಯಿಟ್ಟುಕೊಂಡು ಒಂದು ಇಟ್ಟಿಗೆಯ ಮೇಲೆ ನಿಂತಿರುವ, ಕೆಲವೊಮ್ಮೆ ಅವನ ಮುಖ್ಯ ಪತ್ನಿಯಾದ ರಖುಮಾಯಿ (ರುಕ್ಮಿಣಿ) ಜೊತೆಯಲ್ಲಿರುವಂತೆ, ಒಬ್ಬ ಕಪ್ಪು ಬಣ್ಣದ ಬಾಲಕನನ್ನಾಗಿ ಚಿತ್ರಿಸಲಾಗುತ್ತದೆ.
ವಿಠ್ಠಲನು ಮಹಾರಾಷ್ಟ್ರದ ಏಕದೇವತಾವಾದಿ ಬ್ರಾಹ್ಮಣೇತರ ವಾರಕರೀ ಪಂಥ ಮತ್ತು ಕರ್ನಾಟಕದ ಹರಿದಾಸ ಪಂಥಗಳ ಕೇಂದ್ರಬಿಂದುವಾಗಿದ್ದಾನೆ. ವಿಠ್ಠಲನ ಮುಖ್ಯ ದೇವಸ್ಥಾನ, ಕರ್ನಾಟಕದ ಗಡಿಗೆ ಹತ್ತಿರವಿರುವ, ಮಹಾರಾಷ್ಟ್ರದ ಪಂಢರಪುರದಲ್ಲಿದೆ. ವಿಠ್ಠಲನ ದಂತಕಥೆಗಳು, ಈ ದೇವರನ್ನು ಪಂಢರಪುರಕ್ಕೆ ಕರೆತಂದನೆಂದು ನಂಬಲಾದ, ಅವನ ಭಕ್ತ ಪುಂಡಲೀಕನ ಸುತ್ತ, ಮತ್ತು ವಾರಕರೀ ಮತದ ಕವಿ-ಸಂತರ ಒಬ್ಬ ಸಂರಕ್ಷಕನಾಗಿ ವಿಠ್ಠಲನ ಪಾತ್ರದ ಸುತ್ತ ಕೇಂದ್ರೀಕೃತವಾಗಿವೆ. ವಾರಕರೀ ಕವಿ-ಸಂತರು ವಿಠ್ಠಲನಿಗೆ ಸಮರ್ಪಿತವಾದ ಮತ್ತು ಮರಾಠಿಯಲ್ಲಿ ರಚಿಸಲಾದ, ಭಕ್ತಿ ಸಾಹಿತ್ಯದ ತಮ್ಮ ಅಪೂರ್ವವಾದ ಶೈಲಿ, ಅಭಂಗಕ್ಕಾಗಿ, ಪರಿಚಿತರಾಗಿದ್ದಾರೆ. ವಿಠ್ಠಲನಿಗೆ ಸಮರ್ಪಿತವಾದ ಇತರ ಭಕ್ತಿ ಸಾಹಿತ್ಯ, ಹರಿದಾಸರ ಕನ್ನಡ ಭಜನೆಯ ಹಾಡುಗಳು, ಮತ್ತು ದೇವರಿಗೆ ದೀಪವನ್ನು ಅರ್ಪಿಸುವ ಕ್ರಿಯಾವಿಧಿಗಳಿಗೆ ಸಂಬಂಧಿಸಲಾದ, ವಿಶಿಷ್ಟವಾದ ಹಿಂದೂ ಆರತಿ ಹಾಡುಗಳ ಮರಾಠಿ ರೂಪಾಂತರಗಳನ್ನು ಒಳಗೊಂಡಿದೆ. ವಿಠ್ಠಲನ ಪ್ರಮುಖ ಉತ್ಸವಗಳು ಹಿಂದೂ ಚಾಂದ್ರಮಾನ ಮಾಸದ ಏಕಾದಶಿಯಂದು ನಡೆಯುತ್ತವೆ: ಆಶಾಢ ಮಾಸದಲ್ಲಿ ಶಯನೀ ಏಕಾದಶಿ, ಮತ್ತು ಕಾರ್ತಿಕ ಮಾಸದಲ್ಲಿ ಪ್ರಬೋಧಿನಿ ಏಕಾದಶಿ.
ವಿಠ್ಠಲ ಮತ್ತು ಅವನ ಭಕ್ತಗಣ ಮತ್ತು ಅವನ ಹೆಸರಿನ ವಿಷಯದ ಕುರಿತ ಐತಿಹಾಸಿಕ ಸಾಹಿತ್ಯ ಮುಂದುವರಿದ ಚರ್ಚೆಯ ಒಂದು ಕ್ಷೇತ್ರವಾಗಿದೆ. ವಿವಿಧ ಭಾರತ ಇತಿಹಾಸದ ಅಧ್ಯಯನಕಾರರು (ಇಂಡಾಲಜಿಸ್ಟ್) ವಿಠ್ಠಲನ ಆರಾಧನೆ ಕುರಿತು ಅವನು ಪೂರ್ವದಲ್ಲಿ: ಒಂದು ವೀರಗಲ್ಲು, ಒಬ್ಬ ಗ್ರಾಮೀಣ ದೇವರು, ಶಿವನ ಒಬ್ಬ ಅಭಿವ್ಯಕ್ತಿ, ಒಬ್ಬ ಜೈನ ಸಂತ, ಅಥವಾ ವಿವಿಧ ಕಾಲಗಳಲ್ಲಿ ವಿವಿಧ ಭಕ್ತರಿಗೆ ಈ ಎಲ್ಲವೂ ಆಗಿದ್ದನೆಂಬ ಒಂದು ಪ್ರಾಗಿತಿಹಾಸವನ್ನು ಸೂಚಿಸಿದ್ದಾರೆ. ಅವನ ಭಕ್ತಗಣ ಮತ್ತು ಅವನ ಮುಖ್ಯ ದೇವಸ್ಥಾನದ ಉಗಮ ಎರಡೂ ಚರ್ಚೆಯ ವಿಷಯಗಳಾಗಿದ್ದರೂ, ೧೩ನೇ ಶತಮಾನದ ವೇಳೆಗೆ ಅವು ಆಗಲೇ ಅಸ್ತಿತ್ವದಲ್ಲಿದ್ದವೆಂಬುದಕ್ಕೆ ಸ್ಪಷ್ಟವಾದ ಸಾಕ್ಷ್ಯಾಧಾರವಿದೆ.
ವ್ಯುತ್ಪತ್ತಿ ಮತ್ತು ಇತರ ಹೆಸರುಗಳು
[ಬದಲಾಯಿಸಿ]ವಿಠ್ಠಲ, ಪಾಂಡುರಂಗ, ಪಂಢರೀನಾಥ, ಹರಿ ಮತ್ತು ನಾರಾಯಣ ಸಹಿತ ವಿಠ್ಠಲನು ಹಲವಾರು ಹೆಸರುಗಳಿಂದ ಪರಿಚಿತನಾಗಿದ್ದಾನೆ. ಈ ಹೆಸರುಗಳ ಉಗಮಗಳು ಮತ್ತು ಅರ್ಥಗಳ ಬಗ್ಗೆ ಹಲವು ಸಿದ್ಧಾಂತಗಳಿವೆ. ವಿಠ್ಠಲವೆಂಬ ಹೆಸರು ಎರಡು ಸಂಸ್ಕೃತ-ಮರಾಠಿ ಶಬ್ದಗಳು ಕೂಡಿ ಆಗಿದೆಯೆಂದು ವಾರಕರೀ ಸಂಪ್ರದಾಯ ಸೂಚಿಸುತ್ತದೆ: ವಿಟ್, ಅಂದರೆ 'ಇಟ್ಟಿಗೆ'; ಮತ್ತು ಥಲ್ ಶಬ್ದ ಸಂಸ್ಕೃತದ ಸ್ಥಳ (ಅಂದರೆ 'ನಿಂತಿರುವ') ಶಬ್ದದಿಂದ ಉತ್ಪತ್ತಿಯಾಗಿರಬಹುದು. ಈ ರೀತಿ, ವಿಠ್ಠಲ ಎಂದರೆ 'ಒಂದು ಇಟ್ಟಿಗೆಯ ಮೇಲೆ ನಿಂತಿರುವವನು' ಎಂದಾಗುತ್ತದೆ.[೧] ಪ್ರಾಚ್ಯ ಅಧ್ಯಯನಕಾರರಾದ ವಿಲಿಯಮ್ ಕ್ರುಕ್, ಈ ವಿವರಣೆಯನ್ನು ಬೆಂಬಲಿಸಿದ್ದಾರೆ.[೨] ಅವನ ಭಕ್ತ ಪುಂಡಲೀಕನ ದಂತಕಥೆಗೆ ಸಂಬಂಧಿತವಾದಂತೆ, ಕೈಗಳು ಸೊಂಟದ ಮೇಲಿರುವಂತೆ ಮತ್ತು ಒಂದು ಇಟ್ಟಿಗೆಯ ಮೇಲೆ ನಿಂತಿರುವಂತೆ ಅವನನ್ನು ತೋರಿಸಬೇಕೆಂದು ವಿಠ್ಠಲನ ಆದೇಶಿತ ಮೂರ್ತಿಶಿಲ್ಪವು ನಿರ್ಧಾರವಾಗಿ ಹೇಳಿದೆ.
ಆದರೆ, ವಾರಕರೀ ಕವಿ-ಸಂತನಾದ ತುಕಾರಾಮ್ ಒಂದು ಬೇರೆ ವ್ಯುತ್ಪತ್ತಿಯನ್ನು ಪ್ರಸ್ತಾಪಿಸಿದನು—ವಿಠ್ಠಲವೆಂಬುದು ವಿಠ್ಠ (ಅಜ್ಞಾನ) ಮತ್ತು ಲಾ (ಸ್ವೀಕರಿಸುವವನು) ಶಬ್ದಗಳು ಕೂಡಿ ಆಗಿದೆಯೆಂದು, ಹೀಗೆ ಇದರ ಅರ್ಥ 'ತಿಳಿವಳಿಕೆ ಇಲ್ಲದ ಮುಗ್ಧ ಜನರನ್ನು ಸ್ವೀಕರಿಸುವವನು' ಎಂದಾಗುತ್ತದೆ.[೩] ವಿಠ್ಠು ಎಂಬುದು ಮರಾಠಿಯಿಂದ ಒಪ್ಪಿ ಅಳವಡಿಸಿಕೊಳ್ಳಲಾದ ವಿಷ್ಣು ಎಂಬ ಹೆಸರಿನ ಒಂದು ಕನ್ನಡ ಅಶುದ್ಧಿ ಶಬ್ದವೆಂದು (ಕರಪ್ಷನ್) ಇನ್ನೊಂದು ಬೇರೆ ಸಾಧ್ಯತೆಯನ್ನು ಇತಿಹಾಸಕಾರ ರಾಮಕೃಷ್ಣ ಗೋಪಾಲ್ ಭಂಡಾರ್‌ಕರ್ ನೀಡುತ್ತಾರೆ. ಪ್ರತ್ಯಯಗಳಾದ -ಲಾ ಮತ್ತು -ಬಾ ಗಳನ್ನು (ಮರಾಠಿಯಲ್ಲಿ 'ತಂದೆ' ಎಂದಾಗುತ್ತದೆ) ಗೌರವಾದರಕ್ಕಾಗಿ ಜೋಡಿಸಲಾಯಿತು, ಮತ್ತು ವಿಠ್ಠಲ ಹಾಗೂ ವಿಠೋಬಾ ಹೆಸರುಗಳ ಸೃಷ್ಟಿಯಾಯಿತು.[೪] ವಿಷ್ಣು ಶಬ್ದದ ವಿಠ್ಠು ಎಂಬ ಈ ಅಶುದ್ಧಿ, ೮ನೇ ಶತಮಾನದಿಂದೀಚೆಗೆ ಪ್ರಮಾಣೀಕರಿಸಲಾದ, ಮರಾಠಿ ಮತ್ತು ಕನ್ನಡ ಜನರ ಸಂಸ್ಕೃತ ಷ್ಣ ವನ್ನು ಠ್ಠ ಎಂದು ಉಚ್ಚರಿಸುವ ಪ್ರವೃತ್ತಿಯ ಕಾರಣದಿಂದಾಗಿರಬಹುದು.[೫]
ಡೆಕ್ಕನ್ ಕಾಲೇಜಿನ ಸಂಶೋಧನಾ ವಿದ್ವಾಂಸ ಎಮ್. ಎಸ್. ಮಾಟೆಯವರ ಪ್ರಕಾರ, ಒಬ್ಬ ಚಾರಿತ್ರಿಕ ವ್ಯಕ್ತಿಯೆಂದು ಭಾವಿಸಲಾಗಿರುವ ಪುಂಡಲೀಕನು ಬಿಟ್ಟೀದೇವ ಎಂಬ ಉಪನಾಮವುಳ್ಳ ಹೊಯ್ಸಳ ರಾಜನಾದ ವಿಷ್ಣುವರ್ಧನನನ್ನು ವಿಷ್ಣುವಿಗೆ ಸಮರ್ಪಿತ ಪಂಢರಪುರ ದೇವಸ್ಥಾನವನ್ನು ನಿರ್ಮಿಸುವಂತೆ ಒಪ್ಪಿಸಲು ಕಾರಣವಾಗಿದ್ದನು. ಆ ದೇವರನ್ನು ಅನಂತರ, ಬಿಟ್ಟೀದೇವ, ಅಂದರೆ ಕಟ್ಟಡವನ್ನು ಕಟ್ಟಿದ -ರಾಜ, ಎಂಬ ಹೆಸರಿನ ಒಂದು ನಿಷ್ಪನ್ನವಾದ, ವಿಠ್ಠಲ ಎಂದು ಹೆಸರಿಸಲಾಯಿತು.[೬] ಹೆಸರಿನ ಇತರ ರೂಪಾಂತರಗಳು, ವಿಠುರಾಯ (ರಾಜ ವಿಠ್ಠಲ), ಮತ್ತು ವಿಠಾಯಿ (ತಾಯಿ ವಿಠ್ಠಲ) ಗಳನ್ನು ಒಳಗೊಂಡಿವೆ. ಗುಜರಾತ್‌ನ ಜನರು ವಿಠ್ಠಲ ಎಂಬ ಹೆಸರಿಗೆ ಅಂತ್ಯಪ್ರತ್ಯಯ -ನಾಥ (ಸ್ವಾಮಿ) ಸೇರಿಸುತ್ತಾರೆ, ಮತ್ತು ಇದರಿಂದಾಗಿ ವಿಠ್ಠಲ - ನಾಥ ಎಂಬ ಹೆಸರಿನ ಸೃಷ್ಟಿಯಾಗುತ್ತದೆ.[೭]
ಸಂಸ್ಕೃತದಲ್ಲಿ 'ಶ್ವೇತವರ್ಣದ ದೇವರು' ಎಂಬ ಅರ್ಥಸೂಚಿಸುವ, ಪಾಂಡುರಂಗ ಅಥವಾ ಪಾಂಡರಂಗ ವಿಠ್ಠಲನಿಗೆ ಇನ್ನೊಂದು ಜನಪ್ರಿಯ ಗುಣವಾಚಕವಾಗಿದೆ. ಈ ಹೆಸರನ್ನು ರುದ್ರನ (ಶಿವ) ಒಂದು ಗುಣವಾಚಕವಾಗಿ ಸಹ ಬಳಸಲಾಗುತ್ತದೆಂದು ಜೈನ ಲೇಖಕ ಮತ್ತು ಸಂತನಾದ ಹೇಮಚಂದ್ರನು (ಕ್ರಿ.ಶ ೧೦೮೯–೧೧೭೨) ಗಮನಿಸುತ್ತಾನೆ. ವಿಠ್ಠಲನನ್ನು ಕಪ್ಪು ವರ್ಣದಲ್ಲಿ ಚಿತ್ರಿಸಲಾಗುತ್ತದಾದರೂ, ಅವನನ್ನು ಒಬ್ಬ "ಶ್ವೇತವರ್ಣದ ದೇವರು" ಎಂದು ಕರೆಯಲಾಗುತ್ತದೆ. ಪಾಂಡುರಂಗ ಎನ್ನುವುದು, ಇಂದಿಗೂ ಅವನ ದೇವಸ್ಥಾನವಿರುವ, ಪಂಢರಪುರದಲ್ಲಿ ಆರಾಧಿಸಲಾದ ಶಿವನ ಸ್ವರೂಪಕ್ಕೆ ಒಂದು ಗುಣವಾಚಕವಾಗಿರಬಹುದೆಂದು ಪ್ರಸ್ತಾಪಿಸುತ್ತಾ, ಈ ವಿರೋಧಾಭಾಸವನ್ನು ಭಂಡಾರ್‌ಕರ್ ವಿವರಿಸುತ್ತಾರೆ. ನಂತರ, ವಿಠ್ಠಲನ ಭಕ್ತಗಣದ ಹೆಚ್ಚುತ್ತಿರುವ ಜನಪ್ರಿಯತೆಯು ವಿಠ್ಠಲನಿಗೂ ವರ್ಗಾಯಿಸಿತು.[೮] ವಿಠ್ಠಲನು ಪ್ರಾರಂಭದಲ್ಲಿ ಒಬ್ಬ ಶೈವ ದೇವರಾಗಿರಬಹುದೆಂದು ಮತ್ತು ನಂತರವಷ್ಟೇ ವಿಷ್ಣುವಿನೊಂದಿಗೆ ಗುರುತಿಸಲ್ಪಟ್ಟನೆಂದು ಇನ್ನೊಂದು ವಾದವು ಸೂಚಿಸುತ್ತದೆ, ಮತ್ತು ಈ ಪ್ರಕಾರವಾಗಿ ವಿಠ್ಠಲನಿಗೆ ಪಾಂಡುರಂಗ ಶಬ್ದದ ಪ್ರಯೋಗವನ್ನು ವಿವರಿಸುತ್ತದೆ.[೯] ಆದರೆ, ಪಂಢರಪುರದ ಹಿಂದಿನ ಹೆಸರನ್ನು ಉಲ್ಲೇಖಿಸುತ್ತಾ, ಪಾಂಡುರಂಗ ಎನುವುದು ಪಾಂಡರಗ ದ (ಪಾಂಡರ್ಗ ಸ್ಥಳದ) ಒಂದು ಸಂಸ್ಕೃತೀಕರಿಸಿದ ರೂಪವೆಂದು ಕ್ರುಕ್ ಪ್ರಸ್ತಾಪಿಸಿದರು.[೨] ಇನ್ನೊಂದು ಹೆಸರಾದ ಪಂಢರೀನಾಥ ಎಂಬುದೂ ಪಂಢರಿಯ ಸ್ವಾಮಿ (ಪಂಢರಪುರದ ಮತ್ತೊಂದು ರೂಪಾಂತರ) ಎಂದು ವಿಠ್ಠಲನನ್ನು ನಿರ್ದೇಶಿಸುತ್ತದೆ. ಕೊನೆಯದಾಗಿ, ವಿಠ್ಠಲನನ್ನು ವಿಷ್ಣುವಿನ ಪಂಥದ ಪ್ರಾತಿನಿಧಿಕ ಹೆಸರುಗಳಾದ, ಜಾತಿ ವಿಶಿಷ್ಟವಾದ ವೈಷ್ಣವ ನಾಮಧೇಯಗಳಾದ ಹರಿ ಮತ್ತು ನಾರಾಯಣ ಎಂದೂ ನಿರ್ದೇಶಿಸಲಾಗುತ್ತದೆ.[೧೦]
ಉಗಮ ಮತ್ತು ಬೆಳವಣಿಗೆ
[ಬದಲಾಯಿಸಿ]ವಿಠ್ಠಲನ ಆರಾಧನೆಯ ಐತಿಹಾಸಿಕ ಬೆಳವಣಿಗೆಯ ಪುನರ್‌ನಿರ್ಮಾಣವನ್ನು ಬಹಳಷ್ಟು ಪರಿಶೀಲಿಸಲಾಗಿದೆ. ವಿಶೇಷವಾಗಿ, ಅತ್ಯಂತ ಮುಂಚಿನ ಹಂತಗಳು ಮತ್ತು ಒಬ್ಬ ವಿಶಿಷ್ಟ ದೇವರಾಗಿ ಅವನನ್ನು ಗುರುತಿಸಲ್ಪಟ್ಟ ಘಟ್ಟದ ವಿಷಯವಾಗಿಯೂ ಹಲವು ಪರ್ಯಾಯ ಸಿದ್ಧಾಂತಗಳನ್ನು ಪ್ರಸ್ತಾಪಿಸಲಾಗಿದೆ. ೮ನೇ ಶತಮಾನದ ಆದಿ ಶಂಕರಾಚಾರ್ಯರಿಗೆ ಹೊಂದಿಸಲಾದ ಒಂದು ಸ್ತುತಿಗೀತೆಯಾದ ಪಾಂಡುರಂಗ-ಶತಕ-ಸ್ತೋತ್ರವು, ವಿಠ್ಠಲನ ಆರಾಧನೆಯು ಒಂದು ಮುಂಚಿನ ಕಾಲಮಾನದಲ್ಲಿ ಆಗಲೇ ಅಸ್ತಿತ್ವದಲ್ಲಿದ್ದಿರಬಹುದೆಂದು ಸೂಚಿಸುತ್ತದೆ.[೧೧]
ಅ ಸೋಶಿಯಲ್ ಹಿಸ್ಟರಿ ಆಫ಼್ ದ ಡೆಕ್ಕನ್ನ,[೯] ಲೇಖಕರಾದ ರಿಚರ್ಡ್ ಮ್ಯಾಕ್ಸ್‌ವೆಲ್ ಈಟನ್‌ರ ಪ್ರಕಾರ, ವಿಠ್ಠಲನು ಪ್ರಾರಂಭದಲ್ಲಿ ಒಬ್ಬ ಗ್ರಾಮೀಣ ದೇವರಾಗಿ ೬ನೇ ಶತಮಾನದಷ್ಟು ಹಿಂದೆಯೇ ಆರಾಧಿಸಲಾಗುತಿದ್ದನು. ವಿಠ್ಠಲನ ಸೊಂಟದ ಮೇಲೆ ಕೈಯಿಟ್ಟುಕೊಂಡ ಮೂರ್ತಿಶಿಲ್ಪವು, ಈಗ ಕೃಷ್ಣನ ಜೊತೆಗೂ ಸಂಬಂಧಿಸಲಾದ, ಬಿಹಾರದ ಆಹಿರರ ರಾಸು-ದೇವರಾದ ಬೀರ್ ಕುವರ್‌ಗೆ ಹೋಲುತ್ತದೆ.[೧೨] ಬಹುತೇಕ ಇತರ ಗ್ರಾಮೀಣ ದೇವರುಗಳಂತೆ, ವಿಠ್ಠಲನನ್ನು ಸಂಭವನೀಯವಾಗಿ ನಂತರ ಶೈವ ಮಂದಿರದಲ್ಲಿ ಸಮ್ಮಿಲಿತಗೊಳಿಸಲಾಯಿತು ಮತ್ತು ಶಿವನೊಂದಿಗೆ ಗುರುತಿಸಲಾಯಿತು. ಪಂಢರಪುರದ ದೇವಸ್ಥಾನವು ಶೈವ ದೇವಾಲಯಗಳಿಂದ (ಅತ್ಯಂತ ಗಮನಾರ್ಹವಾಗಿ ಭಕ್ತ ಪುಂಡಲೀಕನದೇ) ಸುತ್ತುವರಿಯಲ್ಪಟಿದೆ ಮತ್ತು ಶಿವನ ಸಂಕೇತವಾದ ಲಿಂಗವು ವಿಠ್ಠಲನ ಮುಕುಟಭೂಷಣವಾಗಿದೆಯೆಂಬ ಸಂಗತಿಗಳಿಂದ ಇದು ಸಮರ್ಥಿತವಾಗಿದೆ. ಆದರೆ, ೧೩ನೇ ಶತಮಾನದಲ್ಲಿ, ನಾಮದೇವ್, ಏಕನಾಥ್ ಮತ್ತು ತುಕಾರಾಮ್‌ರಂತಹ ಕವಿ-ಸಂತರು ವಿಠ್ಠಲನನ್ನು ವಿಷ್ಣುವಿನೊಂದಿಗೆ ಗುರುತಿಸಿದರು.[೯]
ಕ್ರಿ.ಶ. ೧೦೦೦ರ ಕಾಲಕ್ಕೆ ಸ್ವಲ್ಪ ಮುಂಚೆ ವಿಠ್ಠಲ ಆರಾಧನೆಯು ಕರ್ನಾಟಕದಿಂದ ಹಿಂದೆ ಶೈವ ನಗರವಾಗಿದ್ದ ಪಂಢರಪುರಕ್ಕೆ ಸ್ಥಳಾಂತರವಾಯಿತೆಂದು ವಾಶಿಂಗ್‌ಟನ್ ವಿಶ್ವವಿದ್ಯಾಲಯದ ಕ್ರಿಸ್ಚನ್ ನೊವೆಟ್‌ಜ಼್ಕೆ ಸೂಚಿಸುತ್ತಾರೆ; ಆದರೆ ಕೃಷ್ಣಾರಾಧನೆಯ ಮಹಾನುಭಾವ ಪಂಥದ ಸಂಭವನೀಯ ಪ್ರಭಾವದಲ್ಲಿ, ಪಟ್ಟಣವು ಒಂದು ವೈಷ್ಣವ ಯಾತ್ರಾ ಕೇಂದ್ರವಾಗಿ ರೂಪಾಂತರಗೊಂಡಿತು. ಈ ಸಲಹೆಯು ಪಟ್ಟಣದಲ್ಲಿನ ಶೈವ ಆರಾಧನೆಯ ಸಮಕಾಲೀನ ಅಲ್ಪಾವಶೇಷಗಳೊಂದಿಗೆ ಸಮಂಜಸವಾಗಿದೆ.[೧೩]
ವಿಠ್ಠಲ ಆರಾಧನೆಯು ಇನ್ನೂ ಹಳೆಯ—"ವೈದಿಕ ಅಥವಾ ವೈದಿಕಪೂರ್ವ" ಕಾಲದ್ದಾಗಿರಬಹುದೆಂದು ತಮ್ಮ ಪುಸ್ತಕ ಶ್ರೀ ವಿಠ್ಠಲ: ಏಕ್ ಮಹಾಸಮನ್ವಯಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಧಾರ್ಮಿಕ ಚರಿತ್ರಕಾರ ಆರ್.ಸೀ. ಢೇರೇ ಅಭಿಪ್ರಾಯ ಪಡುತ್ತಾರೆ, ಮತು ಈ ಕಾರಣದಿಂದ ಕೃಷ್ಣನ ಆರಾಧನೆಯನ್ನು ಹಿಂದಿನ ದಿನಾಂಕಕ್ಕೆ ದಾಖಲಿಸಬಹುದು.[೧೪] ಈ ಸಿದ್ಧಾಂತದ ಪ್ರಕಾರ, ವಿಠ್ಠಲ ಎಂಬುವನು ತಮ್ಮ ರಾಸುಗಳನ್ನು ರಕ್ಷಿಸಲು ಪ್ರಾಣಗಳನ್ನು ಅರ್ಪಿಸಿದ ವಿವಿಧ ಸ್ಥಳೀಯ ಶೂರರ ಒಂದು ಸಂಯುಕ್ತ ರೂಪ. ಪ್ರಾರಂಭದಲ್ಲಿ ಅವನು ರಾಸುಗಳನ್ನು ಹೊಂದಿದ್ದ ಮಹಾರಾಷ್ಟ್ರದ ಒಂದು ಜಾತಿಯಾದ ಧನಗರರಿಂದ ಆರಾಧಿಸಲ್ಪಟ್ಟನು. ದನಗಾಹಿ ವಂಶವಾದ ಯಾದವ ರಾಜವಂಶದ ಏಳಿಗೆಯು, ಹಲವುವೇಳೆ ಒಬ್ಬ ಕುರಿಗಾಹಿಯಾಗಿ ಚಿತ್ರಿಸಲಾಗುವ, ಕೃಷ್ಣನಾಗಿ ವಿಠ್ಠಲನ ವೈಭವೀಕರಣಕ್ಕೆ ದಾರಿ ತೋರಿರಬಹುದು. ವಿಠ್ಠಲನ ಈ ವೈಷ್ಣವೀಕರಣವು ಮೊದಲಿನ ಶೈವ ಪುಂಡರೀಕ ದೇವಸ್ಥಾನವು, ದಂತಕಥೆಯ ಪ್ರಕಾರ ವಿಠ್ಠಲನನ್ನು ಪಂಢರಪುರಕ್ಕೆ ಕರೆತಂದ ಭಕ್ತ ಪುಂಡಲೀಕನ ವೈಷ್ಣವ ದೇವಸ್ಥಾನವಾಗಿ ಪರಿವರ್ತನೆಯಾಗುವಲ್ಲಿ ಪರಿಣಮಿಸಿತು.[೧೫] ವಿಠ್ಠಲನನ್ನು ಬೌದ್ಧಧರ್ಮದಲ್ಲಿ ಸಮ್ಮಿಲಿತಗೊಳಿಸುವ ಒಂದು ಪ್ರಯತ್ನವಾಗಿರಬಹುದು; ಹಿಂದೂ ಧರ್ಮದಲ್ಲಿ ಇಂದು ಇಬ್ಬರನ್ನೂ ವಿಷ್ಣುವಿನ ಒಂದು ರೂಪವೆಂದು ಕಾಣಲಾಗುತ್ತದೆ.[೧೬]
ಕೃಷ್ಣ-ವಿಷ್ಣುವಾಗಿ ವೈಷ್ಣವ ಸಂಪ್ರದಾಯದಲ್ಲಿ ಸಾದೃಶೀಕರಣದ ಹೊರತಾಗಿಯೂ, ಗೋಪಿಯರೊಡನೆ ಸರಸದಂತಹ ಕೃಷ್ಣನ ಕಾಮಪ್ರಚೋದಕ ಸೂಚ್ಯಾರ್ಥಗಳನ್ನು ವಿಠ್ಠಲನು ಪಡೆಯುವುದಿಲ್ಲ. "ಅನುಕಂಪ, ತನ್ನ ಮಕ್ಕಳಿಗಾಗಿ ತಾಯಿಯ ಪ್ರೀತಿಗೆ ಹೋಲಿಸಬಹುದಾದ ತನ್ನ ಭಕ್ತರ ಪ್ರತಿ ಒಂದು ಅಳೆಯಲಾಗದ ಪ್ರೀತಿ ಮತ್ತು ಅಂತಃಕರಣ ... ತನ್ನ ದೂರದಲ್ಲಿರುವ ಕರುವಿಗಾಗಿ ಒಂದು ಹಸು ಹಂಬಲಿಸುವ ರೀತಿಯಲ್ಲಿ ತನ್ನ ಭಕ್ತರ ಸಾನ್ನಿಧ್ಯಕ್ಕಾಗಿ ಹಂಬಲ"ಕ್ಕೆ ವಿಠ್ಠಲನನ್ನು ಹೆಚ್ಚಾಗಿ ಸಂಬಂಧಿಸಲಾಗುತ್ತದೆ.[೧೭]
ನಂತರ ಅವನ ರೂಪನಾದ ಕೃಷ್ಣನಾಗಿ ವಿಷ್ಣುವಿನೊಂದಿಗೆ ಗುರುತಿಸಲಾದ, ವಿಠ್ಠಲನ ಆಕೃತಿಯು ಒಂದು ವೀರಗಲ್ಲು ಎಂದು ಮತ್ತು ಪುಂಡಲೀಕನು ಪೌರಾಣಿಕ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಪೂಜಾರಾಧನೆಯನ್ನು ಹೆಚ್ಚು ಆದರ್ಶೀಕರಿಸಿದ ಭಕ್ತಿ ಆರಾಧನೆಯಾಗಿ—"ಜಾತಿ ಭೇದ ಮತ್ತು ಸಾಂಸ್ಥಾನಿಕ ಪೌರೋಹಿತ್ಯವನ್ನು ಇಲ್ಲವಾಗಿಸುವ ಅಂತರಂಗದ ಆರಾಧನೆ ..." ಪರಿವರ್ತಿಸಿದನೆಂದು ದ ಕಲ್ಟ್ ಆಫ಼್ ವಿಠೋಬಾದ ಲೇಖಕರಾದ ಜೀ. ಏ. ಡೇಲೋರಿ ಪ್ರಸ್ತಾಪಿಸುತ್ತಾರೆ.[೧೮] (ಹಿಂದೂ ಧರ್ಮದ ಪ್ರಾಚೀನ, ಧಾರ್ಮಿಕ ಸಂಸ್ಕಾರಗಳಿಗೆ ಸಂಬಂಧಿಸಲಾದ) "ಅಸ್ತಿತ್ವದಲ್ಲಿದ್ದ ಬ್ರಾಹ್ಮಣ ದೇವರ ಸಮೂಹಕ್ಕೆ ಒಂದು ಪರ್ಯಾಯ"ವಾಗಿ ವಿಠ್ಠಲನು ಹೊರಹೊಮ್ಮಿದನೆಂದು ಭಾರತ ಇತಿಹಾಸ ಅಧ್ಯಯನಕಾರರಾದ ಡಾ. ತಿಲಕ್ ಸೂಚಿಸುತ್ತಾರೆ. ವಿಠ್ಠಲನ ಹೊರ ಹೊಮ್ಮಿಕೆಯು ಒಬ್ಬ "ಹೊಸ ನಮೂನೆಯ ಸಾಮಾನ್ಯ ಭಕ್ತ"ನಾದ ವಾರಕರೀಯ ಉದಯಕ್ಕೆ ಸಹವರ್ತಿಯಾಗಿತ್ತು. ಒಂದೆಡೆ ಕಟ್ಟುನಿಟ್ಟಿನ ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಆರಾಧನೆ ಮತ್ತು ಬ್ರಾಹ್ಮಣರ ಹಿಡಿತದಿಂದ ವಿಷ್ಣು ಮತ್ತು ಶಿವರಿಬ್ಬರೂ ಸೀಮಿತವಾಗಿದ್ದರು, ಮತ್ತು ಇನ್ನೊಂದೆಡೆ "ಕೆಳದರ್ಜೆಯವರ ದೇವರಾದ" ವಿಠ್ಠಲನು "ಹೆಚ್ಚೆಚ್ಚು ಮಾನವೀಯನಾದನು." ವಿಠ್ಠಲನನ್ನು ಹಲವುವೇಳೆ ಬಡವರ ಮತ್ತು ಗತಿಯಿಲ್ಲದವರ ಸಂರಕ್ಷಕನೆಂದು ಪ್ರಶಂಸಿಸಲಾಗುತ್ತದೆ.[೧೯] ಜೈನ ದಿಗಂಬರ ಸಂಪ್ರದಾಯದಲ್ಲಿನ ಸಂತರ ಆಕೃತಿಗಳಂತೆ ಪಂಢರಪುರದ ವಿಠ್ಠಲನ ಆಕೃತಿಯು ದಿಗಂಬರವಾಗಿರುವುದರಿಂದ ('ನಗ್ನ', ಅಕ್ಷರಶಃ 'ಆಕಾಶಾಚ್ಛಾದಿತ'), ವಿಠ್ಠಲನು ಒಬ್ಬ ಜೈನ ಸಂತನೆಂದು ಇನ್ನೊಂದು ಸಿದ್ಧಾಂತ ಸೂಚಿಸುತ್ತದೆ.[೨೦]
ಪಂಢರಪುರದ ದೇವಸ್ಥಾನ ಮತ್ತು ಶಾಸನಗಳು
[ಬದಲಾಯಿಸಿ]ವಿಠ್ಠಲನ ಚರಿತ್ರೆಯ ಸಂಪ್ರದಾಯಬದ್ಧ ಪರಿಶೀಲನೆಯು ಹಲವುವೇಳೆ, ಅತ್ಯಂತ ಮೊದಲಿನ ವಿಠ್ಠಲ ದೇವಸ್ಥಾನವೆಂದು ನಂಬಲಾದ, ಪಂಢರಪುರದಲ್ಲಿನ ಮುಖ್ಯ ದೇವಸ್ಥಾನದ ಕಾಲಮಾನ ನಿರ್ಧಾರದ (ಡೇಟಿಂಗ್) ವಿಚಾರದೊಂದಿಗೆ ಆರಂಭವಾಗುತ್ತದೆ.[೨೧] ದೇವಸ್ಥಾನದ ಅತ್ಯಂತ ಹಳೆಯ ಭಾಗ ಯಾದವರ ಕಾಲವಾದ ೧೨ನೇ ಮತ್ತು ೧೩ನೇ ಶತಮಾನದಷ್ಟು ಪ್ರಾಚೀನವಾಗಿದೆ. ದೇವಸ್ಥಾನದ ವಿಸ್ತರಣೆಯು ಯಾವ ಸಂದರ್ಭದಲ್ಲೂ ನಿಂತಿಲ್ಲವಾದರೂ, ದೇವಸ್ಥಾನದ ಬಹುತೇಕ ಭಾಗ ೧೭ನೇ ಶತಮಾನದಲ್ಲಿ ಕಟ್ಟಲ್ಪಟ್ಟಿದೆಯೆಂದು ನಂಬಲಾಗಿದೆ.[೨೨] ದೇವಸ್ಥಾನವನ್ನು ಮೊದಲನೆಯದಾಗಿ ಸ್ಥಾಪಿಸಲಾದ ದಿನಾಂಕವು ಭಂಡಾರ್‌ಕರ್‌ರವರಿಗೆ ಅಸ್ಪಷ್ಟವಾಗಿದೆ, ಆದರೆ ೧೩ನೇ ಶತಮಾನದ ವೇಳೆಗೆ ಅದು ಅಸ್ತಿತ್ವದಲ್ಲಿತ್ತೆಂದು ಸೂಚಿಸಲು ಸ್ಪಷ್ಟವಾದ ಸಾಕ್ಷಿಯಿದೆಯೆಂದು ಅವರು ಒತ್ತಿಹೇಳುತ್ತಾರೆ.[೪] ಎಸ್. ಜೀ. ತುಲ್‌ಪುಲೇಯವರ ಪ್ರಕಾರ, ದೇವಸ್ಥಾನವು ೧೧೮೯ರಷ್ಟು ಮುಂಚೆಯೇ ಅಸ್ತಿತ್ವದಲ್ಲಿತ್ತು.[೨೨] ವಾಸ್ತವವಾಗಿ, ೧೧೮೯ರ ಕಾಲಮಾನದ್ದೆಂದು ನಿರ್ಧರಿಸಲಾದ ಒಂದು ಕಟ್ಟಡವು ದೇವಸ್ಥಾನವು ಈಗಿರುವ ಸ್ಥಳದಲ್ಲಿ ಒಂದು ಸಣ್ಣ ವಿಠ್ಠಲನ ದೇವಸ್ಥಾನದ ಸ್ಥಾಪನೆಯನ್ನು ದಾಖಲಿಸುತ್ತದೆ; ಈ ರೀತಿಯಾಗಿ, ವಿಠ್ಠಲನ ಆರಾಧನೆಯು ೧೧೮೯ಕ್ಕಿಂತ ಹಿಂದಿನ ದಿನಾಂಕದ್ದೆಂದು ತುಲ್‌ಪುಲೇ ನಿರ್ಧರಿಸುತ್ತಾರೆ.[೨೩]
ಹೊಯ್ಸಳ ರಾಜನಾದ ಸೋಮೇಶ್ವರನು "ವಿಠ್ಠಲನ" ಭೋಗದ (ಭೋಜನ ಕಾಣಿಕೆ) ಖರ್ಚುವೆಚ್ಚಗಳಿಗಾಗಿ ಒಂದು ಗ್ರಾಮವನ್ನು ದಾನ ಮಾಡಿದನೆಂದು ಈಗಿರುವ ವಿಠ್ಠಲನ ದೇವಸ್ಥಾನದ ಒಂದು ಎತ್ತರದ ತೊಲೆಯ ಮೇಲೆ ದೊರೆತ ೧೨೩೭ರ ಕಾಲಮಾನದ ಒಂದು ಶಿಲಾ ಶಾಸನವು ಹೇಳುತ್ತದೆ.[೭][೨೪] ೧೨೪೯ರ ಕಾಲಮಾನದ ಒಂದು ತಾಮ್ರದ ಫಲಕದ ಮೇಲಿನ ಒಂದು ಶಾಸನವು ಯಾದವ ರಾಜನಾದ ಕೃಷ್ಣನು ವಿಷ್ಣುವಿನ ಸನ್ನಿಧಿಯಲ್ಲಿ ತನ್ನ ಒಬ್ಬ ಸೈನ್ಯಾಧಿಕಾರಿಗೆ ಭೀಮರಥಿ ನದಿಯ ದಡದ ಮೇಲಿನ ಪೌಂಡ್ರಿಕಕ್ಷೇತ್ರ ಗ್ರಾಮವನ್ನು (ಪುಂಡರೀಕನ ಕ್ಷೇತ್ರ) ನೀಡುತ್ತಿರುವುದನ್ನು ದಾಖಲಿಸುತ್ತದೆ.[೪] ಪಂಢರಪುರದಲ್ಲಿನ ಇನ್ನೊಂದು ಶಿಲಾ ಶಾಸನವು ಯಾವುದರಿಂದ "ದೇವತೆಗಳ ಸಹಿತ ಜನರು ಮತ್ತು ವಿಠ್ಠಲ ತೃಪ್ತಿಗೊಂಡರು" ಎನ್ನಲಾದ ಪಾಂಡುರಂಗಪುರದಲ್ಲಿನ ಒಂದು ಯಜ್ಞವನ್ನು ನಿರೂಪಿಸುತ್ತದೆ.[೮] ಹೀಗೆ ೧೩ನೇ ಶತಮಾನದಿಂದ ನಗರವು ಪಾಂಡುರಂಗನ ನಗರವೆಂದು ಪರಿಚಿತವಾಗಿದೆ. ದೇವಸ್ಥಾನದೊಳಗಿನ ಒಂದು ಶಿಲಾ ಶಾಸನವು ೧೨೭೨–೭೭ರ ವರೆಗೆ ವಿವಿಧ ದಾನಿಗಳಿಂದ, ಗಮನಾರ್ಹವಾಗಿ ಯಾದವ ರಾಜ ರಾಮಚಂದ್ರನ ಮಂತ್ರಿ ಹೇಮಾದ್ರಿಯು, ದೇವಸ್ಥಾನಕ್ಕೆ ಮಾಡಿದ ದಾನಗಳನ್ನು ದಾಖಲಿಸುತ್ತದೆ.[೭]
ವಿಠ್ಠಲ ಹಾಗೂ ರಖುಮಾಯಿಯರನ್ನು ಉಲ್ಲೇಖಿಸುವ ಆಳಂದಿಯಲ್ಲಿ ದೊರೆತ ಒಂದು ಶಾಸನವು ವಿಠ್ಠಲನಿಗೆ ಸಂಬಂಧಿಸಿದ ಅತ್ಯಂತ ಹಳೆಯದ್ದೆಂದು ರಾನಡೆ ನಂಬುತ್ತಾರೆ ಮತ್ತು ಅದನ್ನು ೧೨೦೯ರ ಕಾಲಮಾನದ್ದೆಂದು ನಿರ್ಧರಿಸುತ್ತಾರೆ.[೨೫] ಆದರೆ, ೫೧೬ರ ಕಾಲಮಾನದ ಒಂದು ರಾಷ್ಟ್ರಕೂಟರ ತಾಮ್ರ ಫಲಕ ಶಾಸನದ ಮೇಲೆ ಪಾಂಡರಂಗ ಎಂಬ ಹೆಸರು ಕಂಡಿದೆ. ಇದನ್ನು ಉದಾಹರಿಸುತ್ತಾ, ೬ನೇ ಶತಮಾನದ ವೇಳೆಗೆ ವಿಠ್ಠಲನ ಭಕ್ತಗಣವು ಚೆನ್ನಾಗಿ ಊರ್ಜಿತವಾಗಿತ್ತೆಂದು ಪಾಂಡೆ ನಿರ್ಣಯಿಸುತ್ತಾರೆ.[೨೬]
ಕೇಂದ್ರ ವಿಗ್ರಹ
[ಬದಲಾಯಿಸಿ]ಪಂಢರಪುರದಲ್ಲಿ ವಿಠ್ಠಲನ ಕೇಂದ್ರ ಮೂರ್ತಿಯ ಭೌತಿಕ ವೈಶಿಷ್ಟ್ಯಗಳು ಮತ್ತು ಅದರ ವಿವಿಧ ಪಠ್ಯ ಉಲ್ಲೇಖಗಳು ವಿಠ್ಠಲಾರಾಧನೆಗೆ ಸಂಬಂಧಿಸಿದ ಸಿದ್ಧಾಂತಗಳಿಗೆ ಸ್ಫೂರ್ತಿ ನೀಡಿವೆ. ಪಂಢರಪುರದಲ್ಲಿ ಎರಡು ಪ್ರತ್ಯೇಕ ಮೂರ್ತಿಗಳು—ತೀರ್ಥ ಮತ್ತು ಕ್ಷೇತ್ರ ವರ್ಗಗಳ ಒಂದೊಂದು ಅಸ್ತಿತ್ವದಲ್ಲಿದ್ದಿರಲೇಬೇಕೆಂದು ಸ್ಕಂದ ಪುರಾಣದಲ್ಲಿನ ಪುಂಡಲೀಕನ ದಂತಕಥೆಯ (ಕೆಳಗೆ ದಂತಕಥೆ ನೋಡಿ) ಒಂದು ಆವೃತ್ತಿಯಿಂದ ಸ್ಯಾಂಡ್ ತೀರ್ಮಾನಿಸುತ್ತಾರೆ. ಮುಂಚಿನದು, ಉದ್ದೇಶಪೂರ್ವಕವಾಗಿ ಒಂದು ಪವಿತ್ರ ಜಲರಾಶಿಯ (ತೀರ್ಥ), ಈ ಸಂದರ್ಭದಲ್ಲಿ ಪಶ್ಚಿಮ ದಿಕ್ಕಿಗಿರುವ ಭೀಮಾ ನದೀ ಪಾತ್ರದ ಮೇಲೆ ಪುಂಡಲೀಕನ ದೇವಸ್ಥಾನದ ಹತ್ತಿರ, ಸ್ಥಾಪಿಸಲಾದ ಒಂದು ಮೂರ್ತಿಯು, ಒಂದು ತೀರ್ಥ ಮೂರ್ತಿಯಾಗಿತ್ತು. ಸ್ಯಾಂಡ್‌ರವರ ಪ್ರಕಾರ, ನಂತರದ, ಧಾರ್ಮಿಕ ಶಕ್ತಿಯ ಒಂದು ಸ್ಥಳದಲ್ಲಿ (ಕ್ಷೇತ್ರ), ಈ ಸಂದರ್ಭದಲ್ಲಿ ಪೂರ್ವದಿಕ್ಕಿಗಿರುವ, ಸುಮಾರು ೧೧೮೯ರಿಂದ ನಿಂತಿರುವ ಈಗಿನ ದೇವಸ್ಥಾನವಿರುವ ಗುಡ್ಡದ ಮೇಲೆ ನೆಲೆಗೊಂಡ ಮೂರ್ತಿಯು ಒಂದು ಕ್ಷೇತ್ರ ಮೂರ್ತಿಯಾಗಿತ್ತು. ಈ ಪ್ರಕಾರವಾಗಿ, ವಿಠ್ಠಲನ ಆರಾಧನೆಯು ದೇವಸ್ಥಾನಕ್ಕಿಂತಲೂ ಹಿಂದಿನದಿರಬಹುದೆಂದು ಸ್ಯಾಂಡ್ ಪ್ರಸ್ತಾಪಿಸುತ್ತಾರೆ.[೨೭]
ಹೇಮಾದಪಂಥಿ ಶೈಲಿಯ ವಾಸ್ತುಶಿಲ್ಪದಲ್ಲಿ ದೇವಸ್ಥಾನವನ್ನು ೧೩ನೇ ಶತಮಾನದಲ್ಲಿ ನಿರ್ಮಿಸಲಾಗಿರಬಹುದಾದರೂ, ವಿಠ್ಠಲನ ವಿಗ್ರಹವು ಒಂದು ಮುಂಚಿನ ಶೈಲಿಯಲ್ಲಿದೆ ಹಾಗಾಗಿ ಅದು ಪಂಢರಪುರದಲ್ಲಿ ಅಸ್ತಿತ್ವದಲ್ಲಿದ್ದ ಒಂದು ಮೊದಲಿನ, ಚಿಕ್ಕ ದೇವಸ್ಥಾನದ ಜಾಗದಲ್ಲಿ ಕೆತ್ತಲ್ಪಟ್ಟಿರಬಹುದೆಂದು ಡೇಲೋರಿ ಸೂಚಿಸುತ್ತಾರೆ. ವಿಗ್ರಹದ ಕಾರ್ಯಕೌಶಲವು ಯಾದವ (೧೧೭೫–೧೩೧೮), ಅನ್ಹಿವಾದ್ ಚಾಳುಕ್ಯ (೯೪೩–೧೨೧೦) ಮತ್ತು ಅಜ್ಮೇರ್ ಚೌಹಾಣರ (೬೮೫–೧೧೯೩) ಕಾಲದ ಶೈಲಿಗಳಿಗಿಂತಲೂ ಮುಂಚಿನದಾಗಿದೆ. ಯಾವುದೇ ಬೇರೆ ಅಸ್ತಿತ್ವದಲ್ಲಿರುವ ವಿಷ್ಣು ದೇವಸ್ಥಾನವು ಪಂಢರಪುರದ ವಿಠ್ಠಲನಂತಹ ಮೂರ್ತಿಶಿಲ್ಪವನ್ನು ಹೊಂದಿಲ್ಲವಾದರೂ, ಪಂಢರಪುರದ ವಿಗ್ರಹ ಮತ್ತು ಮೂರನೇ ಶತಮಾನದ ಉದಯಗಿರಿ ಗುಹೆಗಳಲ್ಲಿನ ಸೊಂಟದ ಮೇಲೆ ಕೈಯಿಟ್ಟುಕೊಂಡಿರುವ ವಿಷ್ಣುವಿನ ಆಕೃತಿಗಳ ಮಧ್ಯೆ ಹೋಲಿಕೆಗಳನ್ನು ಡೇಲೋರಿ ಕಾಣುತ್ತಾರೆ, ಆದರೆ ಅವು ಬೇರೆ ಶಿಲ್ಪಕಲಾ ಪರಂಪರೆಗಳದ್ದಾಗಿವೆಯೆಂದು ಸ್ಪಷ್ಟಪಡಿಸುತ್ತಾರೆ.[೭]
ಪುಂಡಲೀಕ
[ಬದಲಾಯಿಸಿ]ಭಕ್ತ ಪುಂಡಲೀಕ, ಇಟ್ಟಿಗೆಯನ್ನು ಎಸೆದವನು (ಕೆಳಗೆ ದಂತಕಥೆ ನೋಡಿ), ವಿಠ್ಠಲನ ದಂತಕಥೆಗಳಲ್ಲಿ ಒಬ್ಬ ಮುಖ್ಯ ಪಾತ್ರವಾಗಿದ್ದಾನೆ. ಅವನನ್ನು ಸಾಮಾನ್ಯವಾಗಿ ವಿಠ್ಠಲ-ಕೇಂದ್ರೀಕೃತ ವಾರಕರೀ ಆರಾಧನಾ-ಪದ್ಧತಿಯ ಸ್ಥಾಪನೆ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಒಬ್ಬ ಚಾರಿತ್ರಿಕ ವ್ಯಕ್ತಿಯೆಂದು ಗ್ರಹಿಸಲಾಗುತ್ತದೆ.[೨೮] ಪುಂಡಲೀಕನನ್ನು ವಾರಕರೀ ಪಂಥದ ಸಂಸ್ಥಾಪಕ ಮತ್ತು ಈ ಆರಾಧನಾ-ಪದ್ಧತಿಯನ್ನು ಮರಾಠ ನಾಡಿನಲ್ಲಿ ಹರಡಿದವನೆಂದು ರಾಮಕೃಷ್ಣ ಗೋಪಾಲ್ ಭಂಡಾರ್‌ಕರ್ ಪರಿಗಣಿಸುತ್ತಾರೆ.[೨೯] ಇನ್ನೂ ಮುಂದುವರಿಯುತ್ತಾ, ವಾರಕರೀ ಸಂಪ್ರದಾಯವು ಜೈನ ಮತ್ತು ಬೌದ್ಧ ನೀತಿಸೂತ್ರಗಳ ಒಂದು ಸಂಯೋಜನವಾಗಿರುವುದರಿಂದ, ಮತ್ತು ವಿಠ್ಠಲನನ್ನು ಬುದ್ಧನ ರೂಪದಲ್ಲಿ ವಿಷ್ಣುವೆಂದು ಕಾಣಲಾಗುವುದರಿಂದ, ಅವನು ಒಬ್ಬ ಜೈನ ಅಥವಾ ಒಬ್ಬ ಬೌದ್ಧಧರ್ಮೀಯನಾಗಿದ್ದಿರಬಹುದೆಂದು ಸ್ಟೀವನ್‌ಸನ್ (೧೮೪೩) ಸೂಚಿಸುತ್ತಾರೆ.[೩೦] ಫ಼್ರೇಜ಼ರ್, ಎಡ್ವರ್ಡ್ಸ್ ಮತ್ತು ಪೀ.ಆರ್. ಭಂಡಾರ್‌ಕರ್ (೧೯೨೨) ಎಲ್ಲರೂ, ಪುಂಡಲೀಕನು ಶಿವ ಮತ್ತು ವಿಷ್ಣುವನ್ನು ಒಂದಾಗಿಸಲು ಪ್ರಯತ್ನಿಸಿದನೆಂದು, ಮತ್ತು ಈ ಪಂಥವು ಕರ್ನಾಟಕದಲ್ಲಿ ಉಗಮವಾಯಿತೆಂದು ಸೂಚಿಸುತ್ತಾರೆ.[೩೧] ಒಬ್ಬ ಕನ್ನಡ ಸಂತನಾದ ಪುಂಡಲೀಕನು ವಾರಕರೀ ಪಂಥದ ಏಕಮಾತ್ರ ಸಂಸ್ಥಾಪಕನಷ್ಟೇ ಅಲ್ಲದೆ ಮೊದಲ ದೊಡ್ಡ ಭಕ್ತ ಅಥವಾ ಪಂಢರಪುರ ದೇವಾಲಯದ ಮೊದಲ ಉನ್ನತ ಅರ್ಚಕನೆಂದು ಸಹ ರಾನಡೆ (೧೯೩೩) ಭಾವಿಸುತ್ತಾರೆ.[೩೨] ಅರ್ಚಕ ಸಿದ್ಧಾಂತವನ್ನು ಉಪಾಧ್ಯಾಯ ಬೆಂಬಲಿಸುತ್ತಾರೆ ಆದರೆ ಕನ್ನಡ ಮೂಲದವನೆಂಬ ಸಿದ್ಧಾಂತವನ್ನು ನಿರಾಕರಿಸುತ್ತಾರೆ.[೩೧] ಎಮ್. ಎಸ್. ಮಾಟೆಯವರ ಪ್ರಕಾರ, ಪುಂಡಲೀಕನು ಹೊಯ್ಸಳ ರಾಜನಾದ ವಿಷ್ಣುವರ್ಧನನನ್ನು ವಿಷ್ಣುವಿಗೆ ಸಮರ್ಪಿತ ಪಂಢರಪುರ ದೇವಸ್ಥಾನವನ್ನು ನಿರ್ಮಿಸುವಂತೆ ಒಪ್ಪಿಸಲು ಕಾರಣವಾಗಿದ್ದನು, ಮತ್ತು ಹಾಗಾಗಿ ಅವನು ೧೨ನೇ ಶತಮಾನದ ಪ್ರಾರಂಭದ ಕಾಲಮಾನದವನೆಂದು ಹೇಳಬಹುದು.[೬] ರೇಸಾಯ್ಡ್ (೧೯೬೫), ಧನ್‌ಪಾಲ್‌ವರ್ (೧೯೭೨), ಮತ್ತು ವೋಡ್‌ವೀಲ್ (೧೯೭೪) ರಂತಹ ಇತರ ವಿದ್ವಾಂಸರು, ಒಟ್ಟಾರೆ ಪುಂಡಲೀಕನ ಐತಿಹಾಸಿಕತೆಯನ್ನೇ ಪ್ರಶ್ನಿಸಿದ್ದಾರೆ, ಮತ್ತು ಅವನನ್ನು ಒಬ್ಬ ಕಾಲ್ಪನಿಕ ವ್ಯಕ್ತಿಯೆಂದು ತಳ್ಳಿಹಾಕಿದ್ದಾರೆ.[೩೩]
ಗುರುತುಗಳು
[ಬದಲಾಯಿಸಿ]ಮುಖ್ಯವಾಗಿ, ವಿಠ್ಠಲನಿಗೆ ಸಂಬಂಧಿಸಿರುವ ಮೂರು ಹಿಂದೂ ದೇವತೆಗಳಿದ್ದಾರೆ: ವಿಷ್ಣು, ಕೃಷ್ಣ ಮತ್ತು ಶಿವ. ವಿಷ್ಣುವಿನ ಒಂಬತ್ತನೇ ಅವತಾರವಾಗಿ ಬುದ್ಧನ ಹಿಂದೂ ದೈವೀಕರಣಕ್ಕೆ ಸಮಂಜಸವಾಗಿ ಗೌತಮ ಬುದ್ಧನನ್ನೂ ವಿಠ್ಠಲನೊಂದಿಗೆ ಸಂಬಂಧಿಸಲಾಗುತ್ತದೆ. ಆದರೆ, ವಿಠ್ಠಲನನ್ನು ಕೃಷ್ಣನಿಗೆ ಸಂಬಂಧಿಸುವ ದಂತಕಥೆಗಳು ಮತ್ತು ಪತ್ನಿಯರ ಹೊರತಾಗಿಯೂ, ವಿಠ್ಠಲನನ್ನು ವಿಷ್ಣುವಿನದೇ ಸ್ವರೂಪವೆಂದು (ಮೂಲ) [೩೪] ವಾರಕರೀಯರು ಪರಿಗಣಿಸುತ್ತಾರೆ, ಕೃಷ್ಣನಂತೆ ವಿಷ್ಣುವಿನ ಒಂದು ಅವತಾರವೆಂದಲ್ಲ (ಅಭಿವ್ಯಕ್ತಿ) [೩೫]. ಆದರೆ, ೧೩ನೇ ಶತಮಾನದಲ್ಲಿ ಒಂದು ಕೃಷ್ಣಾರಾಧನಾ ಪಂಥವಾಗಿ ಉದಯವಾದ ಮಹಾನುಭಾವ ಪಂಥದವರು ಸಹ ವಿಠ್ಠಲನು ಕೃಷ್ಣನೆಂಬ ವಿಚಾರವನ್ನು ತಳ್ಳಿಹಾಕಿದರಲ್ಲದೇ ವಿಠ್ಠಲನನ್ನು ಮೇಲಿಂದ ಮೇಲೆ ನಿಂದಿಸಿದರು.[೩೬]
ಆದರೆ ಕೆಲವು ಸಂಪ್ರದಾಯಗಳಲ್ಲಿ, ವಿಠ್ಠಲನನ್ನು ಶಿವನ ಒಂದು ಸ್ವರೂಪವಾಗಿಯೂ ಆರಾಧಿಸಲಾಗುತ್ತದೆ. ಧನಗರರು ವಿಠ್ಠಲನನ್ನು ವಿರೋಬಾ ದೇವರ ಒಬ್ಬ ಸೋದರನೆಂದು ಇಂದಿಗೂ ಪರಿಗಣಿಸುತ್ತಾರೆ, ಮತ್ತು ವಿಠ್ಠಲನನ್ನು ಒಬ್ಬ ವೈಷ್ಣವ ದೇವರ ಬದಲು ಒಬ್ಬ ಶೈವ ದೇವರಾಗಿ ಕಾಣುತ್ತಾರೆ.[೩೭] ವಿಷ್ಣು-ಶಿವ ಅಂದರೆ ಪ್ರಭುವನ್ನು (ಭಾಗವತ ಅಂದರೆ ಪ್ರಭು, ಸ್ವಾಮಿ) ಆರಾಧಿಸುವ ಭಾಗವತ ಪಂಥದಿಂದ ಸ್ಥಾಪಿತವಾದ ಪಂಢರಪುರದ ದೇವಸ್ಥಾನವು ವಿಷ್ಣು-ಶಿವರ ಒಂದು ಸಂಯುಕ್ತ ರಚನೆಯೆಂದು ಅಂಡರ್‌ಹಿಲ್ ಪ್ರಸ್ತಾಪಿಸುತ್ತಾರೆ.[೩೮] ಆದರೆ, ಪಂಢರಪುರ ದೇವಸ್ಥಾನದ ಮುಖ್ಯ ಅರ್ಚಕರಾದ ಬಡ್ವಾ ವಂಶದ ಬ್ರಾಹ್ಮಣರಿಗೆ ವಿಠ್ಠಲ ವಿಷ್ಣುವೂ ಅಲ್ಲ ಶಿವನೂ ಅಲ್ಲ, ವಿಠ್ಠಲ ವಿಠ್ಠಲನೇ.[೩೯] ಇದರ ಹೊರತಾಗಿಯೂ, ದೇವಸ್ಥಾನದ ಕೆಲವು ಅರ್ಚಕರು ವಿಠ್ಠಲ ವಿಗ್ರಹದ ಎದೆಯ ಮೇಲಿನ ಗುರುತುಗಳನ್ನು, ವಿಠ್ಠಲನು ಕೃಷ್ಣನ ತನ್ನ ರೂಪದಲ್ಲಿ ವಿಷ್ಣುವಾಗಿದ್ದಾನೆ ಎಂಬುದಕ್ಕೆ ಪ್ರಮಾಣವೆಂದು ತೋರಿಸುತ್ತಾರೆ.[೭]
ವಿಷ್ಣುವಿನ ಒಂಬತ್ತನೇ ಅವತಾರವೆಂದು ಚಿತ್ರಿಸಲಾದಾಗ, ಮಹಾರಾಷ್ಟ್ರದಲ್ಲಿ ಕೆಲವು ದೇವಸ್ಥಾನ ಶಿಲ್ಪಗಳು ಮತ್ತು ಪಂಚಾಂಗಗಳಲ್ಲಿ ವಿಠ್ಠಲನ ವಿಗ್ರಹವು ಬುದ್ಧನ ಸಾಂಪ್ರದಾಯಿಕ ಚಿತ್ರಣದ ಬದಲಾಗಿ ಬರುತ್ತದೆ. ೧೭ನೇ ಶತಮಾನದಲ್ಲಿ, ಮರಾಠ ಕಲಾವಿದರು ವಿಷ್ಣುವಿನ ಅವತಾರಗಳನ್ನು ತೋರಿಸುವ ಒಂದು ಹಲಗೆಯ ಮೇಲೆ ಬುದ್ಧನ ಸ್ಥಾನದಲ್ಲಿ ಪಂಢರಪುರದ ವಿಠ್ಠಲನ ಒಂದು ಚಿತ್ರವನ್ನು ಕೆತ್ತಿದರು. ಇದನ್ನು ಜುನ್ನರ್‌ನ ಶಿವ್‌ನೇರ್ ಗುಹೆಗಳಲ್ಲಿ ಕಾಣಬಹುದು.[೪೦] ಅವರು ವಿಠ್ಠಲನನ್ನು ಒಂಬತ್ತನೇ ಅವತಾರ—ಅರ್ಥಾತ್ ವಿಷ್ಣುವಿನ ಬುದ್ಧಾವತಾರವೆಂದು ಪರಿಗಣಿಸುವುದರಿಂದ, ಸ್ಟೀವನ್‌ಸನ್, ವಿಠ್ಠಲನ ಭಕ್ತರನ್ನು ಬೌದ್ಧ ವೈಷ್ಣವರೆಂದು ಕರೆಯುವಷ್ಟರ ಮಟ್ಟಿಗೆ ಮುಂದೆ ಹೋಗುತ್ತಾರೆ.[೪೧] ಕವಿ-ಸಂತರು ವಿಠ್ಠಲನನ್ನು ಬುದ್ಧನ ಒಂದು ಸ್ವರೂಪವೆಂದು ಕೊಂಡಾಡಿದರು.[೪೨] ಪಂಢರಪುರದಲ್ಲಿನ ವಿಠ್ಠಲನ ವಿಗ್ರಹವು ವಾಸ್ತವವಾಗಿ ಬುದ್ಧನ ವಿಗ್ರಹವೆಂದು ಭಾರತದ ಒಬ್ಬ ರಾಜಕೀಯ ಮುಖಂಡರು ಮತ್ತು ಬೌದ್ಧ ಮತಾಂತರಿಗಳಾದ ಬೀ. ಆರ್. ಅಂಬೇಡ್ಕರ್ ಸೂಚಿಸಿದರು.[೪೩]
ಮೂರ್ತಿಶಿಲ್ಪ
[ಬದಲಾಯಿಸಿ]ಸಾಮಾನ್ಯವಾಗಿ ಎಲ್ಲ ವಿಠ್ಠಲ ವಿಗ್ರಹಗಳು ಪಂಢರಪುರದಲ್ಲಿನ ಅವನ ಕೇಂದ್ರ ವಿಗ್ರಹವನ್ನು ಆಧರಿಸಿ ರೂಪಿಸಲಾಗಿವೆ. ಪಂಢರಪುರ ವಿಗ್ರಹವು ೩ ಅಡಿ ೯ ಅಂಗುಲ (೧.೧ ಮೀಟರು) ಎತ್ತರವಿರುವ ಒಂದು ಕಪ್ಪುಶಿಲಾ ಶಿಲ್ಪವಾಗಿದೆ. ಅವನನ್ನು ಒಬ್ಬ ಗಾಢಬಣ್ಣದ, ಹಲವುವೇಳೆ ಕಪ್ಪು ಬಣ್ಣದ ಬಾಲಕನನ್ನಾಗಿ ಚಿತ್ರಿಸಲಾಗುತ್ತದೆ. ಕವಿ-ಸಂತರು ಅವನನ್ನು ಒಬ್ಬ "ಗಾಢ ವರ್ಣದ ಪರಬ್ರಹ್ಮನೆಂದು" ಕರೆದಿದ್ದಾರೆ.[೪೪] ಅವನು ಶಿವನ ಪ್ರತೀಕವಾದ ಲಿಂಗವೆಂದು ಅರ್ಥವಿವರಣೆ ಮಾಡಲಾದ ಎತ್ತರದ, ಶಂಕುವಿನಾಕಾರದ ತಲೆಯುಡಿಗೆ ಅಥವಾ ಒಂದು ಮುಕುಟವನ್ನು ಧರಿಸುತ್ತಾನೆ. ಹೀಗೆ, ಜ಼ೆಲಿಯಟ್‌ರವರ ಪ್ರಕಾರ, ವಿಠ್ಠಲನು ಶಿವ ಮತ್ತು ವಿಷ್ಣು ಇಬ್ಬರನ್ನೂ ಪ್ರತಿನಿಧಿಸುತ್ತಾನೆ.[೪೫] ವೈಷ್ಣವ ಸಂಪ್ರದಾಯದ ಪ್ರಕಾರ ವಿಷ್ಣುವಿನ ಮೊದಲ ಮತ್ತು ಅಗ್ರಗಣ್ಯ ಭಕ್ತನಾದ, ಶಿವನನ್ನು ವಿಠ್ಠಲನು (ವಿಷ್ಣು) ತನ್ನ ಸ್ವಂತ ತಲೆಯ ಮೇಲೆ ಹೊರುತ್ತಾನೆಂದು ಮೊದಲನೇ ವಾರಕರೀ ಕವಿ-ಸಂತನಾದ ಜ್ಞಾನೇಶ್ವರನು (೧೩ನೇ ಶತಮಾನ) ಹೇಳುತ್ತಾನೆ.[೪೬]
ಸೊಂಟದ ಮೇಲೆ ಕೈಯಿಟ್ಟುಕೊಂಡು ಭಕ್ತ ಪುಂಡಲೀಕನಿಂದ ಎಸೆಯಲ್ಪಟ್ಟ ಇಟ್ಟಿಗೆಯ ಮೇಲೆ ನಿಂತಿರುವಂತೆ ವಿಠ್ಠಲನನ್ನು ತೋರಿಸಲಾಗುತ್ತದೆ. ಅವನು, ಪುರಾಣೋಕ್ತ ಕೌಸ್ತುಭ ಮಣಿಯನ್ನು ಹುದುಗಿಸಿದ, ತುಳಸಿ ಮಣಿಗಳ ಒಂದು ಕಂಠಹಾರ, ಮತ್ತು ಕವಿ-ಸಂತ ತುಕಾರಾಮನು ವಿಷ್ಣುವಿನ ಮೂರ್ತಿಶಿಲ್ಪಕ್ಕೆ ಸಂಬಂಧಿಸುವ ಮಕರ ಕುಂಡಲವನ್ನು (ಮತ್ಸ್ಯಾಕಾರದ ಕರ್ಣಾಭರಣ) ಧರಿಸುತ್ತಾನೆ. ಪಂಢರಪುರದ ವಿಠ್ಠಲನು, ವಿಷ್ಣುವಿಗೆ ಸಂಬಂಧಿಸಲಾದ ಚಿಹ್ನೆಗಳಾದ, ತನ್ನ ಎಡಗೈಯಲ್ಲಿ ಒಂದು ಶಂಖ ಮತ್ತು ತನ್ನ ಬಲಗೈಯಲ್ಲಿ ಒಂದು ಚಕ್ರ ಅಥವಾ ತಾವರೆ ಹೂವನ್ನು ಹಿಡಿಯುತ್ತಾನೆ. ಕೆಲವು ವಿಗ್ರಹಗಳು ವಿಠ್ಠಲನ ಬಲಗೈಯು ಸಾಂಪ್ರದಾಯಿಕವಾಗಿ ಒಂದು ಆಶೀರ್ವಾದವೆಂದು ತಪ್ಪಾಗಿ ತಿಳಿದುಕೊಳ್ಳಲಾದ ಒಂದು ಕೈಸನ್ನೆಯನ್ನು ಮಾಡುತ್ತಿರುವಂತೆ ಚಿತ್ರಿಸುತ್ತವೆ; ಕೇಂದ್ರ ವಿಗ್ರಹದಲ್ಲಿ ಆಶೀರ್ವಾದದ ಯಾವುದೇ ಕೈಸನ್ನೆಯು ಕಾಣಿಸುವುದಿಲ್ಲ.[೨][೭]
ಪಂಢರಪುರದ ವಿಗ್ರಹವು ದಿಗಂಬರವಾಗಿ ಇರುತ್ತದೆ, ಅಥವಾ ಜನನಾಂಗಗಳ ಆಕಾರವು ಕಾಣುವ ಸೊಂಟವನ್ನು ಸುತ್ತಿದ ಒಂದು ಮಡಿಕೆಯುಳ್ಳ ಮತ್ತು ಪಾದಗಳಿಗೆ ವಿಸ್ತರಿಸುವ (ನೀಳುಡುಪು) ಒಂದು ಕೌಪೀನದಿಂದ ತೊಡಿಸಲ್ಪಟ್ಟಿರುತ್ತದೆ.[೨][೭] ಇತರ ವಿಗ್ರಹಗಳು ಮತ್ತು ಚಿತ್ರಗಳು ಅವನನ್ನು ವಸ್ತ್ರಧರಿತನಾಗಿ ಚಿತ್ರಿಸುತ್ತವೆ, ಸಾಮಾನ್ಯವಾಗಿ, ಪಂಢರಪುರದ ಅರ್ಚಕರು ಅವನಿಗೆ ಉಡುಪು ತೊಡಿಸುವ ವಿಧಾನದಂತೆ, ಪೀತಾಂಬರದಿಂದ (ಒಂದು ಹಳದಿಬಣ್ಣದ ಪಂಚೆ), ಮತ್ತು ಬಗೆಬಗೆಯ ಚಿನ್ನದ ಆಭರಣಗಳಿಂದ. ಪಂಢರಪುರದ ವಿಗ್ರಹವು ಎಡ ವಕ್ಷಸ್ಥಲದ ಮೇಲೆ, ಸಾಮಾನ್ಯವಾಗಿ ವಿಷ್ಣು ಮತ್ತು ಕೃಷ್ಣ ವಿಗ್ರಹಗಳ ವಕ್ಷಸ್ಥಲದ ಮೇಲೆ ಕಾಣಿಸುವ, ಶ್ವೇತರೋಮದ ಒಂದು ಸುರುಳೆಯೆಂದು ಹೇಳಲಾದ ಶ್ರೀವತ್ಸಲಾಂಛನವನ್ನು ಹೊಂದಿದೆ.[೪೭] ಬಲ ವಕ್ಷಸ್ಥಲದ ಮೇಲಿನ ಶ್ರೀನಿಕೇತನವೆಂದು ಕರೆಯಲಾದ ಒಂದು ವರ್ತುಲಾಕಾರದ ಮಚ್ಚೆ, ಮೇಖಲ (ಒಂದು ಮೂರು ದಾರಗಳ ಸೊಂಟಪಟ್ಟಿ), ಕಾಲುಗಳ ನಡುವೆ ನೆಲದಲ್ಲಿ ನಾಟಿದ ಒಂದು ಉದ್ದವಾದ ದಂಡ (ಕಠಿ), ಮತ್ತು ಮೊಣಕೈಗಳ ಮೇಲೆ ಜೋಡಿ ಬಳೆ ಹಾಗೂ ಮುತ್ತಿನ ಕಡಗಗಳು ವಿಗ್ರಹದ ಘನತೆಯನ್ನು ಹೆಚ್ಚಿಸಿವೆ.[೭]
ಪತ್ನಿಯರು
[ಬದಲಾಯಿಸಿ]ಸಾಮಾನ್ಯವಾಗಿ ವಿಠ್ಠಲನನ್ನು ಅವನ ಎಡಭಾಗದಲ್ಲಿ ಅವನ ಮುಖ್ಯ ಪತ್ನಿ, ರಖುಮಾಯಿ ಇರುವಂತೆ ಚಿತ್ರಿಸಲಾಗುತ್ತದೆ. ರಖುಮಾಯಿ (ಅಥವಾ ರಖಮಾಯಿ) ಅಕ್ಷರಶಃ 'ತಾಯಿ ರುಕ್ಮಿಣಿ' ಎಂಬ ಅರ್ಥಸೂಚಿಸುತ್ತದೆ. ಸಾಂಪ್ರದಾಯಿಕವಾಗಿ ರುಕ್ಮಿಣಿಯನ್ನು ಕೃಷ್ಣನ ಪತ್ನಿಯಾಗಿ ನೋಡಲಾಗುತ್ತದೆ. ಹಿಂದೂಗಳು ಸಾಮಾನ್ಯವಾಗಿ ಕೃಷ್ಣನನ್ನು ವಿಷ್ಣುವಿನ ಒಂದು ರೂಪವೆಂದು ಪರಿಗಣಿಸುತ್ತಾರೆ, ಹಾಗಾಗಿ ಅವನ ಪತ್ನಿಯನ್ನು ಲಕ್ಷ್ಮಿಯ ಒಂದು ರೂಪವೆಂದು. ರಖುಮಾಯಿಯನ್ನು ಸೊಂಟದ ಮೇಲೆ ಕೈಯಿಟ್ಟುಕೊಂಡಿರುವ ಭಂಗಿಯಲ್ಲಿ, ಒಂದು ಇಟ್ಟಿಗೆಯ ಮೇಲೆ ನಿಂತಿರುವಂತೆ ಚಿತ್ರಿಸಲಾಗುತ್ತದೆ. ಅವಳು ಪಂಢರಪುರ ದೇವಸ್ಥಾನದ ಸಂಕೀರ್ಣದಲ್ಲಿ ಒಂದು ಸ್ವತಂತ್ರವಾದ ಗರ್ಭಗುಡಿಯನ್ನು ಹೊಂದಿದ್ದಾಳೆ. ಘುರ್ಯೇಯವರ ಪ್ರಕಾರ, ಮಹಾರಾಷ್ಟ್ರ ರಾಜ್ಯದ ವಿದರ್ಭ ಪ್ರಾಂತದ ಒಬ್ಬ ರಾಜಕುಮಾರಿಯಾದ ರುಕ್ಮಿಣಿಯನ್ನು ಆ ಪ್ರಾಂತಕ್ಕೆ ಅವಳ ಸಂಬಂಧವಿದ್ದ ಕಾರಣ ರಾಧೆಯ ಬದಲಾಗಿ ಮುಖ್ಯ ಪತ್ನಿಯ ಸ್ಥಾನಕ್ಕೆ ಏರಿಸಲಾಯಿತು.[೪೮] ಧನಗರ ಸಂಪ್ರದಾಯದ ಪ್ರಕಾರ, ರುಖುಮಾಯಿಯು ಸಮುದಾಯದಿಂದ ಪದ್ಮಾವತಿ ಅಥವಾ ಪದುಬಾಯಿಯ ರೂಪದಲ್ಲಿ, ವಿಶೇಷವಾಗಿ ಸಮುದಾಯ ಮತ್ತು ರಾಸುಗಳ ಒಬ್ಬ ಸಂರಕ್ಷಕಿಯೆಂದು ಆರಾಧಿಸಲ್ಪಡುತ್ತಾಳೆ.[೯] ವಿಠ್ಠಲನು ತನ್ನ ಪತ್ನಿಯಿಂದ ಆವಾಹಿಸಿಕೊಂಡ ಒಂದು ಶಾಪ ಮತ್ತು ಸಂಸಾರದಿಂದ ಅವನ ನಿರ್ಲಿಪ್ತತೆಯ ಪರಿಣಾಮವೆಂದು, ವಿಠ್ಠಲ ಮತ್ತು ಪದುಬಾಯಿಯರಿಗೆ ಪ್ರತ್ಯೇಕ ದೇವಸ್ಥಾನಗಳ ಹಿಂದಿರುವ ಕಾರಣವನ್ನು ಧನಗರರ ಜಾನಪದವು ತಿಳಿಸುತ್ತದೆ.[೪೯] ರಖುಮಾಯಿಯ ಜೊತೆಗೆ, ಇನ್ನಿಬ್ಬರು ಪತ್ನಿಯರಾದ ಸತ್ಯಭಾಮ ಮತ್ತು ರಾಹಿಯರನ್ನೂ (ರಾಧಾ ಶಬ್ದದಿಂದ ವ್ಯುತ್ಪನ್ನವಾದ) ಆರಾಧಿಸಲಾಗುತ್ತದೆ. ಹಿಂದೂ ಪುರಾಣದಲ್ಲಿ ಎಲ್ಲ ಮೂವರನ್ನು ಕೃಷ್ಣನ ಪತ್ನಿಯರೆಂದು ಪರಿಗಣಿಸಲಾಗುತ್ತದೆ.[೪೮]
ಆರಾಧನೆ
[ಬದಲಾಯಿಸಿ]ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ವಿಠ್ಠಲನು ಒಬ್ಬ ಜನಪ್ರಿಯ ದೇವರು; ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳಲ್ಲೂ ಭಕ್ತರು ಇದ್ದಾರೆ, ಆದರೆ ಅದೇ ಸಂಖ್ಯೆಯಲ್ಲಿಲ್ಲ.[೧೬] ಬಹುತೇಕ ಮರಾಠಿಗರಿಂದ ವಿಠ್ಠಲನನ್ನು ಆರಾಧಿಸಲಾಗುತ್ತದೆ ಮತ್ತು ಪ್ರೀತಿ ಗೌರವಗಳಿಂದ ಕಾಣಲಾಗುತ್ತದೆ, ಆದರೆ ಅವನು ಒಬ್ಬ ಕುಲದೇವರಾಗಿ ಜನಪ್ರಿಯನಾಗಿಲ್ಲ.[೫೦] ತನ್ನ ಪತ್ನಿ ರಖುಮಾಯಿಗೆ ಒಂದು ಪ್ರತ್ಯೇಕವಾದ ಜೊತೆ ದೇವಾಲಯವನ್ನು ಒಳಗೊಂಡ ವಿಠ್ಠಲನ ಮುಖ್ಯ ದೇವಾಲಯವು ಪಂಢರಪುರದಲ್ಲಿ ನೆಲೆಗೊಂಡಿದೆ. ಈ ಪ್ರಸಂಗದಲ್ಲಿ, ಪಂಢರಪುರವನ್ನು ಭಕ್ತರಿಂದ "ಭೂವೈಕುಂಠ"ವೆಂದು ಪ್ರೀತಿಯಿಂದ ಕರೆಯಲಾಗುತ್ತದೆ.[೫೧] ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ತೆಲಂಗಾಣ ಪ್ರಾಂತಗಳಾದ್ಯಂತ ಭಕ್ತರು ಪಂಢರಪುರದ ವಿಠ್ಠಲನ ಕೇಂದ್ರ ದೇವಾಲಯಕ್ಕೆ ಜ್ಞಾನೇಶ್ವರನ (೧೩ನೇ ಶತಮಾನ) ಕಾಲದಿಂದ ಭೇಟಿಕೊಟ್ಟಿದ್ದಾರೆ.[೧೧]
ಮಹಾರಾಷ್ಟ್ರದಲ್ಲಿ ವಿಠ್ಠಲನ ಆರಾಧನೆಯ ಮೇಲೆ ಎರಡು ವಿಶಿಷ್ಟ ಸಂಪ್ರದಾಯಗಳು ಕೇಂದ್ರೀಕರಿಸುತ್ತವೆ: ಬಡ್ವಾ ವಂಶದ ಬ್ರಾಹ್ಮಣ ಅರ್ಚಕರಿಂದ ದೇವಸ್ಥಾನದ ಒಳಗೆ ವಿಧಿವತ್ತಾದ ಪೂಜೆ; ಮತ್ತು ವಾರಕರೀಯರಿಂದ ಅಮೂರ್ತ ಆರಾಧನೆ.[೫೨] ವಿಧಿವತ್ತಾದ ಪೂಜೆಯು ಐದು ದಿನನಿತ್ಯದ ವಿಧಿಗಳನ್ನು ಒಳಗೊಳ್ಳುತ್ತದೆ. ಮೊದಲಿಗೆ, ಸುಮಾರು ಬೆಳಿಗ್ಗೆ ೩ ಗಂಟೆಗೆ, ದೇವರನ್ನು ಎಬ್ಬಿಸುವ ಒಂದು ಆರತಿ, ಕಾಕಡಾರತಿಯೆಂದು ಕರೆಯಲ್ಪಡುತ್ತದೆ. ಆಮೇಲೆ ಪಂಚಾಮೃತಪೂಜೆ, ಪಂಚಾಮೃತವೆಂದು ಕರೆಯಲಾಗುವ ಐದು (ಪಂಚ) ಸಿಹಿ ಪದಾರ್ಥಗಳಿಂದಾಗುವ ಒಂದು ಸ್ನಾನವನ್ನು ಒಳಗೊಳ್ಳುವ ಒಂದು ಪೂಜೆ ನಡೆಯುತ್ತದೆ. ಆಮೇಲೆ ಪ್ರಾತಃಕಾಲದ ನಿವೇದನೆಗಳನ್ನು ಸ್ವೀಕರಿಸಲು ವಿಗ್ರಹಕ್ಕೆ ಉಡುಪು ತೊಡಿಸಲಾಗುತ್ತದೆ. ಮೂರನೆಯ ವಿಧಿಯು ಮತ್ತೊಮ್ಮೆ ಉಡುಪು ತೊಡಿಸುವ ಮತ್ತು ಮಧ್ಯಾಹ್ನದ ಭೋಜನವನ್ನು ಒಳಗೊಳ್ಳುವ ಇನ್ನೊಂದು ಪೂಜೆ. ಇದನ್ನು ಮಧ್ಯಾಹ್ನಪೂಜೆ ಎಂದು ಗುರುತಿಸಲಾಗುತ್ತದೆ. ಅಪರಾಹ್ನದ ನಿವೇದನೆಗಳ ನಂತರ ಸೂರ್ಯಾಸ್ತಕ್ಕೆ ಸಂಜೆಯ ಭೋಜನಕ್ಕಾಗಿ ಅಪರಾಹ್ನಪೂಜೆ ಎಂದು ತಿಳಿಯಲಾಗುವ ಒಂದು ನಾಲ್ಕನೇ ವಿಧಿಯು ನಡೆಯುತ್ತದೆ. ಅಂತಿಮ ವಿಧಿಯಾದ ಶೆರಾರತಿಯು ದೇವರನ್ನು ಶಯನಕ್ಕೆ ಆಹ್ವಾನಿಸುವ ಒಂದು ಆರತಿ.[೫೩] ಪಂಢರಪುರದ ಮುಖ್ಯ ದೇವಸ್ಥಾನದಲ್ಲಿನ ವಿಧಿಗಳ ಜೊತೆಗೆ, ವಿಠ್ಠಲನಿಗೆ ಸಮರ್ಪಿತವಾದ ಹರಿದಾಸ ಸಂಪ್ರದಾಯಗಳು ಕರ್ನಾಟಕದಲ್ಲಿ ಪ್ರವರ್ಧಮಾನವಾಗಿವೆ.
ವಾರಕರೀ ಪಂಥ
[ಬದಲಾಯಿಸಿ]ವಾರಕರೀ ಪಂಥ ಅಥವಾ ವಾರಕರೀ ಸಂಪ್ರದಾಯವು ಭಾರತದಲ್ಲಿ ಒಂದು ಅತ್ಯಂತ ಪ್ರತಿಷ್ಠಿತ ವೈಷ್ಣವ ಪಂಥವಾಗಿದೆ.[೫೪] ಇದು ವಿಠ್ಠಲನ ಆರಾಧನೆಯ ಮೇಲೆ ಕೇಂದ್ರೀಕರಿಸಿದ ಮತ್ತು ಸಾಂಪ್ರದಾಯಿಕ ಭಾಗವತ ಧರ್ಮವನ್ನು ಆಧರಿಸಿದ ಒಂದು ಏಕದೇವತಾವಾದಿ, ಭಕ್ತಿ ಪಂಥವಾಗಿದೆ.[೩೯] ಈ ಪಂಥವು ಒಂದು "ಶೈವ-ವೈಷ್ಣವ ಸಮನ್ವಯ" ಮತ್ತು "ಇತರ ಧರ್ಮಗಳ ಒಂದು ಅನಿರ್ಬಂಧಿತ ಮಿಶ್ರಣವನ್ನು ಒಳಗೊಂಡಿರುವ ನಾಮಮಾತ್ರದ ವೈಷ್ಣವ ಸಂಪ್ರದಾಯ"ವಾಗಿದೆ.[೧೩] ಇದು ಕರ್ನಾಟಕದಲ್ಲಿ ಉತ್ಪತ್ತಿಯಾಗಿ ಮಹಾರಾಷ್ಟ್ರಕ್ಕೆ ಸ್ಥಳಾಂತರವಾಗಿದೆಯೆಂದು ನಂಬಲಾಗಿದೆ. ಈ ಕೊನೆಯ ಸಿದ್ಧಾಂತವು ಮೊಟ್ಟ ಮೊದಲ ಕವಿ-ಸಂತನಾದ ಜ್ಞಾನೇಶ್ವರನ ಗ್ರಂಥದಲ್ಲಿ ವಿಠ್ಠಲನ "ಕನ್ನಡ" (ಕರ್ನಾಟಕದವನು) ಎಂಬ ಒಂದು ಉಲ್ಲೇಖವನ್ನು ಆಧರಿಸಿದೆ. ಆದರೆ, ಈ ಶಬ್ದವನ್ನು "ತಿಳಿದುಕೊಳ್ಳಲು ಕಠಿಣನಾದವ" ಎಂದೂ ವ್ಯಾಖ್ಯಾನ ಮಾಡಬಹುದು.[೪೪] ವಾರಕರೀಯರು ಮತ್ತು, ಪುಂಡಲೀಕನು ಒಬ್ಬ ಚಾರಿತ್ರಿಕ ವ್ಯಕ್ತಿಯೆಂದು ನಂಬುವ, ವಿದ್ವಾಂಸರು ಅವನನ್ನು ವಿಠ್ಠಲನ ಭಕ್ತಗಣದ ಸಂಸ್ಥಾಪಕನೆಂದೂ ಪರಿಗಣಿಸುತ್ತಾರೆ. ಇದು "ಹೇ ಹರಿ ವಿಠ್ಠಲ, ಪುಂಡಲೀಕನಿಗೆ ವರ ನೀಡಿದವನೇ!" ಎಂದು ಅರ್ಥಸೂಚಿಸುವ ಪ್ರಾರ್ಥನಾವಿಧಿಯ ಕರೆಯಾದ ಪುಂಡಲೀಕವರದ ಹರಿ ವಿಠ್ಠಲ!ದಿಂದ ಸಮರ್ಥಿತವಾಗಿದೆ.[೫೫] ಆದರೆ, ಜ಼ೆಲಿಯಟ್‌ರವರ ಪ್ರಕಾರ, ಈ ಪಂಥವು ಒಬ್ಬ ಬ್ರಾಹ್ಮಣ ಕವಿ ಮತ್ತು ದಾರ್ಶನಿಕನಾಗಿದ್ದ ಮತ್ತು ೧೨೭೫–೧೨೯೬ರ ಅವಧಿಯಲ್ಲಿ ಪ್ರವರ್ಧಮಾನವಾಗಿದ್ದ ಜ್ಞಾನೇಶ್ವರನಿಂದ ಪ್ರಾರಂಭಿಸಲ್ಪಟ್ಟಿತು.[೫೬] ಅಲ್ಲದೆ "ಜ್ಞಾನೇಶ್ವರನು ಅಡಿಗಲ್ಲನ್ನು ನಿಲ್ಲಿಸಿದನು" ಎಂದು ಅರ್ಥಸೂಚಿಸುವ ಜ್ಞಾನದೇವ ರಚಿಲಾ ಪಾಯಾ ಎಂಬ ಹೇಳಿಕೆಯು ಅವನದೇ ಎಂದು ವಾರಕರೀಯರು ನಂಬುತ್ತಾರೆ.[೫೭]
ಒಬ್ಬ ಶೂದ್ರ ದರ್ಜಿಯಾಗಿದ್ದ ನಾಮದೇವನು (ಸುಮಾರು ೧೨೭೦–೧೩೫೦) ಅಭಂಗಗಳೆಂದು (ಅಕ್ಷರಶಃ 'ಸತತವಾದ') ಕರೆಯಲಾಗುವ ವಿಠ್ಠಲನನ್ನು ಸ್ತುತಿಸುವ ಲಘು ಮರಾಠಿ ಭಕ್ತಿ ಕವನಗಳನ್ನು ರಚಿಸಿದನು, ಮತ್ತು ತನ್ನ ಸ್ವಾಮಿಯ ಕೀರ್ತಿಯನ್ನು ಸ್ತುತಿಸಲು ಕರೆ-ಮತ್ತು-ಪ್ರತಿಕ್ರಿಯೆಯ (ಕಾಲ್-ಅಂಡ್-ರೆಸ್ಪಾನ್ಸ್) ಕೀರ್ತನೆ (ಅಕ್ಷರಶಃ 'ಪುನರಾವರ್ತಿಸುವ') ಎಂಬ ಗೀತ ಪ್ರಕಾರವನ್ನು ಬಳಸಿದನು. ಈ ಸಂಗೀತ ನಿವೇದನೆಯ ಸಾರ್ವಜನಿಕ ಪ್ರದರ್ಶನವು ಸಂಪ್ರದಾಯಬದ್ಧ ಬ್ರಾಹ್ಮಣ ಹಿಂದೂ ಧರ್ಮದಲ್ಲಿ ನಿಷೇಧಿಸಲಾಗಿದ್ದ ಸ್ತ್ರೀಯರು, ಶೂದ್ರರು ಮತ್ತು ಜಾತಿಭ್ರಷ್ಟ "ಅಸ್ಪೃಶ್ಯರನ್ನು" ಸ್ವೀಕರಿಸಿದ ವಿಠ್ಠಲ ಮತದ ಪ್ರಸಾರಕ್ಕೆ ದಾರಿ ತೋರಿತು. ಮುಸ್ಲಿಮ್ ಆಳ್ವಿಕೆಯ ಕಾಲದಲ್ಲಿ, ಈ ಮತವು ಜಡತೆಯನ್ನು ಎದುರಿಸಿತು. ಆದರೆ, ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ, ದಖ್ಖನ ಪ್ರಾಂತದಲ್ಲಿ ಯುದ್ಧಗಳೆದ್ದಾಗ, ಅಲ್ಲಿನ ಜನರ ಬೆಂಬಲ ಗಳಿಸುವ ಉದ್ದೇಶದಿಂದ ಮುಸ್ಲಿಮ್ ಪ್ರಭುಗಳು ಮಹಾರಾಷ್ಟ್ರದ ಮತಗಳನ್ನು ಅಂಗೀಕರಿಸಬೇಕಾಯಿತು. ಈ ಅವಧಿಯಲ್ಲಿ, ಏಕನಾಥನು (ಸುಮಾರು ೧೫೩೩–೯೯) ವಾರಕರೀ ಸಂಪ್ರದಾಯವನ್ನು ಪುನಶ್ಚೇತನಗೊಳಿಸಿದನು. ಶಿವಾಜಿಯ ಆಧಿಪತ್ಯದಲ್ಲಿ ಮರಾಠ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ, ಒಬ್ಬ ಶೂದ್ರ ದಿನಸಿ ವ್ಯಾಪಾರಿಯಾದ ತುಕಾರಾಮನು (ಸುಮಾರು ೧೫೬೮–೧೬೫೦) ವಿಠ್ಠಲ-ಕೇಂದ್ರೀಕೃತ ಸಂಪ್ರದಾಯವನ್ನು ಮಹಾರಾಷ್ಟ್ರ ಪ್ರಾಂತದಾದ್ಯಂತ ಮತ್ತಷ್ಟು ಪ್ರಸಾರಮಾಡಿದನು.[೫೮]
ಈ ಎಲ್ಲ ಕವಿ-ಸಂತರು, ಮತ್ತು ನಾಮದೇವನ ಪರಿಚಾರಿಕೆಯಾಗಿದ್ದ ಜನಾಬಾಯಿಯಂತಹ ಇತರರು, ವಿಠ್ಠಲನಿಗೆ ಸಮರ್ಪಿಸಿದ ಕವನಗಳನ್ನು ರಚಿಸಿದರು. ಈ ಮರಾಠಿ ಕವನಗಳು ನಿರ್ಮಲ ಭಕ್ತಿಯನ್ನು ಪ್ರತಿಪಾದಿಸುತ್ತವೆ ಮತ್ತು ಬಹುಮಟ್ಟಿಗೆ ವಿಠ್ಠಲನನ್ನು ಒಬ್ಬ ತಂದೆಯೆಂದು, ಅಥವಾ ಸ್ತ್ರೀ ಸಂನ್ಯಾಸಿನಿ ಜನಾಬಾಯಿಯ ಕವನಗಳ ಸಂಬಂಧದಲ್ಲಿ ಒಬ್ಬ ತಾಯಿಯೆಂದು (ವಿಠಾಬಾಯಿ) ನಿರ್ದೇಶಿಸುತ್ತವೆ.[೫೯] ಜನಾಬಾಯಿಯಂತಹ ಮಹಿಳೆಯರಷ್ಟೇ ಅಲ್ಲದೇ, ಬೇರೆ ಜಾತಿಗಳು ಮತ್ತು ಹಿನ್ನೆಲೆಗಳ ವಿಸ್ತಾರವಾದ ವೈವಿಧ್ಯದ ಜನರೂ ವಿಠ್ಠಲನನ್ನು ಸ್ತುತಿಸುವ ಅಭಂಗಗಳನ್ನು ರಚಿಸಿದರು: ವಿಸೋಬಾ ಖೇಚರ (ಒಬ್ಬ ಸಾಂಪ್ರದಾಯಿಕ ಶೈವ ಮತ್ತು ನಾಮದೇವನ ಗುರುವಾಗಿದ್ದವನು), ಸೇನಾ ಕ್ಷೌರಿಕ, ನರಹರಿ ಸೋನಗಾರ, ಸಾವಟಾ ಮಾಲಿ, ಗೋರಾ ಕುಂಭಾರ, ನಾಟ್ಯಬಾಲೆಯಾದ ಕಾನ್ಹೋಪಾತ್ರಾ, "ಅಸ್ಪೃಶ್ಯ" ಮಹಾರನಾಗಿದ್ದ ಚೋಖಾಮೇಲಾ, ಮತ್ತು ಮುಸಲಮಾನನಾದ ಶೇಖ್ ಮುಹಮ್ಮದ್ (೧೫೬೦–೧೬೫೦) ಕೂಡ.[೬೦][೬೧] ಶೈವ ಅಥವಾ ವೈಷ್ಣವನಾಗಿ ಹುಟ್ಟಿದವರು ಯಾರೇ ಆಗಲಿ ಮತ್ತು ವಿಠ್ಠಲನನ್ನು ತನ್ನ ಮಾಯಾ-ಬಾಪ್ (ತಾಯಿ-ತಂದೆ) ಎಂದು ಮತ್ತು ಪಂಢರಪುರವನ್ನು ತನ್ನ ಮಾಹೇರ್ (ತವರು) ಎಂದು ಪರಿಗಣಿಸುವ ಪ್ರತಿಯೊಬ್ಬನನ್ನೂ ಜಾತಿಯ ಪ್ರತಿಬಂಧಗಳನ್ನು ಲೆಕ್ಕಿಸದೆ ಆ ಪಂಥದಿಂದ ಒಬ್ಬ ವಾರಕರೀಯೆಂದು ಒಪ್ಪಿಕೊಳ್ಳಲಾಗುತ್ತದೆ.[೫೫] ವಾರಕರೀಯರು ಹಲವುವೇಳೆ ವಿಠ್ಠಲ ಜಪವನ್ನು (ಒಂದು ದೇವರ ನಾಮದ ಚಿಂತನಶೀಲ ಪುನರುಕ್ತಿ) ಅಭ್ಯಾಸ ಮಾಡುತ್ತಾರೆ, ಮತ್ತು ಪ್ರತಿ ತಿಂಗಳ ಏಕಾದಶಿಯಂದು ಉಪವಾಸವನ್ನು ಆಚರಿಸುತ್ತಾರೆ.[೬೨]
ಹರಿದಾಸ ಪಂಥ
[ಬದಲಾಯಿಸಿ]ಹರಿದಾಸ ಹರಿಯ ದಾಸವೆಂಬ ಅರ್ಥಸೂಚಿಸುತ್ತದೆ. ಹರಿದಾಸ ಸಂಪ್ರದಾಯದ ಪ್ರಕಾರ, ಹರಿದಾಸ-ಕೂಟ ಎಂದೂ ಪರಿಚಿತವಾಗಿರುವ ಅವರ ಸಂಪ್ರದಾಯವು ಅಚಲಾನಂದ ವಿಠ್ಠಲರಿಂದ (ಸುಮಾರು ೮೮೮) ಪ್ರಾರಂಭಿಸಲಾಯಿತು. ಅದು ವಿಠ್ಠಲನ ಮೇಲೆ ಕೇಂದ್ರೀಕರಿಸುವ ವೈಷ್ಣವ ಸಂಪ್ರದಾಯದಲ್ಲಿನ ಒಂದು ಪ್ರತ್ಯೇಕವಾದ ಶಾಖೆಯಾಗಿದೆ.[೬೩] ವಾರಕರೀಯರನ್ನು ಸಾಮಾನ್ಯವಾಗಿ ಮಹಾರಾಷ್ಟ್ರದೊಂದಿಗೆ ಸಂಬಂಧಿಸಲಾದರೆ, ಹರಿದಾಸರನ್ನು ಸಾಮಾನ್ಯವಾಗಿ ಕರ್ನಾಟಕದೊಂದಿಗೆ ಸಂಬಂಧಿಸಲಾಗುತ್ತದೆ. ವಿಠ್ಠಲನ ಆರಾಧನೆಯು ಮೊದಲು ಕರ್ನಾಟಕದಲ್ಲಿ ಕಾಣಿಸಿಕೊಂಡಿತು, ಮತ್ತು ನಂತರವಷ್ಟೇ ಮಹಾರಾಷ್ಟ್ರಕ್ಕೆ ಸ್ಥಳಾಂತರವಾಯಿತೆಂದು ವಿದ್ವಾಂಸರಾದ ಶರ್ಮಾರವರು ಪರಿಗಣಿಸುತ್ತಾರೆ. ಮೇಲೆ "ವಾರಕರೀ ಪಂಥ" ವಿಭಾಗದಲ್ಲಿ ಹೇಳಲಾದ ಜ್ಞಾನೇಶ್ವರನಿಂದಾದ ಉಲ್ಲೇಖದ ಆಧಾರದ ಮೇಲೆ ಅವರು ಇದನ್ನು ಪ್ರತಿಪಾದಿಸುತ್ತಾರೆ.[೬೪] ಈ ಸ್ಥಳ ಬದಲಾವಣೆಗಾಗಿ ವಿಜಯನಗರ ಸಾಮ್ರಾಜ್ಯದ ಅರಸ ಕೃಷ್ಣದೇವರಾಯನ ರಾಜಗುರುಗಳಾದ ವ್ಯಾಸತೀರ್ಥರಿಗೆ (೧೪೭೮–೧೫೩೯) ಲುಟ್ಗನ್‌ಡಾರ್ಫ಼್ ಮನ್ನಣೆ ನೀಡುತ್ತಾರೆ. ಈ ಕಾಲದಲ್ಲಿ ವಿಠ್ಠಲನು ರಾಜವಂಶದ ಪ್ರೋತ್ಸಾಹವನ್ನು ಪಡೆದನು. ಜೊತೆಗೆ ಕೃಷ್ಣದೇವರಾಯನನ್ನು ಆವಾಗಿನ ರಾಜಧಾನಿಯಾಗಿದ್ದ ವಿಜಯನಗರದ (ಇಂದಿನ ಹಂಪಿ) ವಿಠ್ಠಲ ದೇವಾಲಯದ ಕಟ್ಟಡಕ್ಕೂ ಮನ್ನಣೆ ನೀಡಲಾಗುತ್ತದೆ.[೬೫]
ಹರಿದಾಸರು ಪಂಢರಪುರದ ದೇವಸ್ಥಾನವನ್ನು ಮತ್ತು ಹಂಪಿಯದನ್ನೂ ಪವಿತ್ರವೆಂದು ಪರಿಗಣಿಸುತ್ತಾರೆ, ಮತ್ತು ವಿಠ್ಠಲನನ್ನು ಕೃಷ್ಣನ ಸ್ವರೂಪಗಳೊಂದಿಗೆ ಆರಾಧಿಸುತ್ತಾರೆ.[೬೬] ಹರಿದಾಸ ಸಾಹಿತ್ಯವು ಸಾಮಾನ್ಯವಾಗಿ ವಿಠ್ಠಲ ಮತ್ತು ಕೃಷ್ಣನಿಗೆ ಸಮರ್ಪಿಸಿದ ಸಂಕೀರ್ತನೆಗೆ ಸಂಬಂಧಿಸಿರುತ್ತದೆ. ವಿಜಯ ವಿಠ್ಠಲ, ಗೋಪಾಲ ವಿಠ್ಠಲ, ಜಗನ್ನಾಥ ವಿಠ್ಠಲ, ವೇಣುಗೋಪಾಲ ವಿಠ್ಠಲ ಮತ್ತು ಮೋಹನ ವಿಠ್ಠಲರಂತಹ ಹರಿದಾಸ ಕವಿಗಳು ಭಕ್ತಿಯ ಒಂದು ನಿಲುವಿನ ದ್ಯೋತಕವಾಗಿ "ವಿಠ್ಠಲ"ದಿಂದ ಅಂತ್ಯಗೊಳ್ಳುವ ಕಾವ್ಯನಾಮಗಳನ್ನು ಸ್ವೀಕರಿಸಿದರು.[೬೭] "ಕರ್ನಾಟಕ ಸಂಗೀತದ" ಜನಕರು ಮತ್ತು ಹರಿದಾಸ ಕವಿಗಳಾಗಿದ್ದ ಪುರಂದರ ದಾಸ ಅಥವಾ ಪುರಂದರ ವಿಠ್ಠಲರು (೧೪೮೪–೧೫೬೪) ಹಲವುವೇಳೆ ತಮ್ಮ ಕನ್ನಡ ಗೀತರಚನೆಗಳನ್ನು ವಿಠ್ಠಲನ ಒಂದು ವಂದನೆಯೊಂದಿಗೆ ಪೂರ್ಣಗೊಳಿಸುತ್ತಿದ್ದರು.[೬೮][೬೯]
ಉತ್ಸವಗಳು
[ಬದಲಾಯಿಸಿ]ವಿಠ್ಠಲನಿಗೆ ಸಂಬಂಧಿಸಿರುವ ಉತ್ಸವಗಳು ಮುಖ್ಯವಾಗಿ ವಾರಕರೀಯರ ಅರ್ಧ ವಾರ್ಷಿಕ ಯಾತ್ರೆಗಳಿಗೆ ಸರಿಹೊಂದುತ್ತವೆ. ಅನುಕ್ರಮವಾಗಿ ಕವಿ-ಸಂತ ಜ್ಞಾನೇಶ್ವರ ಮತ್ತು ತುಕಾರಾಮರಿಗೆ ನಿಕಟವಾಗಿ ಸಂಬಂಧಿಸಿರುವ ಪಟ್ಟಣಗಳಾದ ಆಳಂದಿ ಮತ್ತು ದೇಹೂದಿಂದ ಪಂಢರಪುರ ದೇವಸ್ಥಾನಕ್ಕೆ ಯಾತ್ರಿಕರು ಪ್ರಯಾಣ ಮಾಡುತ್ತಾರೆ. ದಾರಿಯುದ್ದಕ್ಕೂ, ಕವಿ-ಸಂತರ ಪಲ್ಲಕ್ಕಿಯನ್ನು ಒಯ್ಯುತ್ತಲೇ ಅವರು ವಿಠ್ಠಲನಿಗೆ ಸಮರ್ಪಿಸಿದ ಅಭಂಗಗಳನ್ನು ಹಾಡುತ್ತಾರೆ ಮತ್ತು ಅವನ ನಾಮವನ್ನು ಪುನರಾವರ್ತಿಸುತ್ತಾರೆ. ವಾರಕರೀಯರು ವಿಧಿವತ್ತಾದ ಪೂಜೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ಕೇವಲ ದೇವರ ದರ್ಶನವನ್ನು ಮಾಡುತ್ತಾರೆ. ಅರ್ಚಕರಿಂದ ವಿಧಿವತ್ತಾದ ಪೂಜೆಯು ವಾರಕರೀಯರು ಯಾತ್ರೆಗಳಲ್ಲಿ ದೊಡ್ಡ ಸಂಖ್ಯೆಗಳಲ್ಲಿ ಪಾಲ್ಗೊಳ್ಳುವ ಆಶಾಢ (ಜೂನ್–ಜುಲೈ) ಮತ್ತು ಕಾರ್ತಿಕದ (ಅಕ್ಟೋಬರ್–ನವೆಂಬರ್) ಏಕಾದಶಿಗಳ ಆಜೂ ಬಾಜಿನ ಐದು ದಿನಗಳಿಗೆ ಸೀಮಿತವಾಗಿರುತ್ತದೆ. ಮಾಘ ಮತ್ತು ಚೈತ್ರ ಮಾಸಗಳ ಇತರ ಎರಡು ಏಕಾದಶಿಗಳಂದೂ ವಾರಕರೀಯರು ಸಣ್ಣ ಸಂಖ್ಯೆಗಳಲ್ಲಿ ದೇವಸ್ಥಾನಕ್ಕೆ ಭೇಟಿಕೊಡುತ್ತಾರೆ.[೫೨]
ಚಾಂದ್ರಮಾನದ ಆಶಾಢ ಮಾಸದ ಶಯನೀ ಏಕಾದಶಿ, ವರ್ಧಿಸುವ ಚಂದ್ರನ ೧೧ನೇ ದಿವಸದಂದಿನ, ಯಾತ್ರೆಗಾಗಿ ಸುಮಾರು ೬,೦೦,೦೦೦ ವಾರಕರೀಯರು ಪಂಢರಪುರಕ್ಕೆ ಪ್ರಯಾಣ ಮಾಡುತ್ತಾರೆ.[೭೦] ಶಯನೀ ಏಕಾದಶಿ ಮತ್ತು ಪ್ರಬೋಧಿನಿ ಏಕಾದಶಿ (ಕಾರ್ತಿಕದ ವರ್ಧಿಸುವ ಭಾಗದಲ್ಲಿ) ಎರಡೂ ವಿಷ್ಣುವಿನ ಪುರಾಣಕ್ಕೆ ಸಂಬಂಧಿಸಿವೆ. ವಿಷ್ಣುವು ಕ್ಷೀರಸಾಗರದಲ್ಲಿ ಶೇಷನಾಗನ ಬೆನ್ನಿನ ಮೇಲೆ ನಿದ್ರಿಸುತ್ತಾನೆಂದು ಹಿಂದೂಗಳು ನಂಬುತ್ತಾರೆ. ಅವನ ನಿದ್ರೆಯು ಶಯನೀ ಏಕಾದಶಿಯಂದು (ಅಕ್ಷರಶಃ 'ಶಯನದ ಏಕಾದಶಿ') ಪ್ರಾರಂಭವಾಗುತ್ತದೆ ಮತ್ತು ಅವನು ತನ್ನ ನಿದ್ರೆಯಿಂದ ಅಂತಿಮವಾಗಿ ನಾಲ್ಕು ತಿಂಗಳ ನಂತರ ಪ್ರಬೋಧಿನಿ ಏಕಾದಶಿಯಂದು ಏಳುತ್ತಾನೆ. ಆಶಾಢ ಮತ್ತು ಕಾರ್ತಿಕದಲ್ಲಿನ ಉತ್ಸವಗಳು ಆ ಮಾಸಗಳ ಹುಣ್ಣಿಮೆಗಳವರೆಗೆ ಮುಂದುವರಿಯುತ್ತವೆ ಮತ್ತು ಪಂಜುಬೆಳಕಿನ ಮೆರವಣಿಗೆಗಳೊಂದಿಗೆ ಮುಕ್ತಾಯವಾಗುತ್ತವೆ.[೭][೫೩] ೧೧ನೇ ಶತಮಾನದ ಕಾಲಮಾನದ್ದೆಂದು ನಿರ್ಧರಿಸಲಾಗಿರುವ ಶಾಸನಗಳು ಪಂಢರಪುರಕ್ಕೆ ಹೊರಡುವ ಏಕಾದಶಿ ಯಾತ್ರೆಗಳನ್ನು ಉಲ್ಲೇಖಿಸುತ್ತವೆ.[೨೧] ಶಯನೀ ಏಕಾದಶಿ ಮತ್ತು ಪ್ರಬೋಧಿನಿ ಏಕಾದಶಿಗಳಂದು, ಮುಖ್ಯಮಂತ್ರಿ ಅಥವಾ ಮಹಾರಾಷ್ಟ್ರ ಸರ್ಕಾರದ ಒಬ್ಬ ಮಂತ್ರಿಗಳು ಮಹಾರಾಷ್ಟ್ರ ಸರ್ಕಾರದ ಪರ ಪೂಜೆಯ ಧಾರ್ಮಿಕ ಸಂಸ್ಕಾರಗಳನ್ನು ನೆರವೇರಿಸುತ್ತಾರೆ. ಪೂಜೆಯ ಈ ಪ್ರಕಾರವನ್ನು ಸರ್ಕಾರಿ ಮಹಾಪೂಜೆ ಎಂದು ತಿಳಿಯಲಾಗುತ್ತದೆ.[೭]
ನಾಲ್ಕು ಏಕಾದಶಿಗಳಲ್ಲದೇ, ದಸರಾದ ರಾತ್ರಿಯಂದು ಪಂಢರಪುರದಲ್ಲಿ ಒಂದು ಜಾತ್ರೆಯನ್ನು ನಡೆಸಲಾಗುತ್ತದೆ, ಮತ್ತು ಅಂದು ಭಕ್ತರು ವಿಠ್ಠಲನ ಎದುರು ಒಂದು ದೊಡ್ಡ ಹಾಸುಗಲ್ಲಿನ (ರಂಗ ಶಿಲೆ) ಮೇಲೆ ಪಂಜುಬೆಳಕು ಮೆರವಣಿಗೆಗಳೊಂದಿಗೆ ನರ್ತಿಸುತ್ತಾರೆ.[೩೮] ಪಂಢರಪುರ ದೇವಸ್ಥಾನದಲ್ಲಿನ ಇತರ ಆಚರಣೆಗಳು, ದೇವರ ಪಾದಗಳ ಮೇಲೆ ಗುಲಾಲನ್ನು (ಕೆಂಪು ಬಣ್ಣದ ಪುಡಿ) ಎರಚಲಾಗುವ ರಂಗ ಪಂಚಮಿ, ಮತ್ತು ಒಂಬತ್ತು ದಿನಗಳವರೆಗೆ ಭಕ್ತರು ವಿಠ್ಠಲನ ಎದುರು ನರ್ತಿಸುವ ಹಾಗೂ ಹಾಡುವ ಕೃಷ್ಣನ ಜನ್ಮದಿನವಾದ ಕೃಷ್ಣ ಜನ್ಮಾಷ್ಟಮಿಗಳನ್ನು ಒಳಗೊಂಡಿವೆ.[೭೧] ಇತರ ಧಾರ್ಮಿಕ ದಿನಗಳು, ವೈಷ್ಣವ ಸಂಪ್ರದಾಯದಲ್ಲಿ ಪವಿತ್ರವೆಂದು ಪರಿಗಣಿಸಲಾದ ಬುಧವಾರಗಳು, ಶನಿವಾರಗಳು ಮತ್ತು ಬೇರೆ ಎಲ್ಲ ಏಕಾದಶಿಗಳನ್ನು ಒಳಗೊಂಡಿವೆ.[೨]
ಭಕ್ತಿ ಗ್ರಂಥಗಳು
[ಬದಲಾಯಿಸಿ]ವಿಠ್ಠಲನಿಗೆ ಸಮರ್ಪಿಸಿದ ಭಕ್ತಿ ಗ್ರಂಥಗಳನ್ನು ವಾರಕರೀ ಸಂಪ್ರದಾಯ, ಬ್ರಾಹ್ಮಣ ಸಂಪ್ರದಾಯ ಮತ್ತು ರೇಸಾಯ್ಡ್‌ರಿಂದ ಒಂದು "ಮೂರನೆಯ ಸಂಪ್ರದಾಯವೆಂದು" ಕರೆಯಲಾಗಿರುವ, ವಾರಕರೀ ಹಾಗೂ ಬ್ರಾಹ್ಮಣ ಅಂಶಗಳು ಎರಡನ್ನೂ ಒಳಗೊಂಡ ಸಂಪ್ರದಾಯಗಳೆಂದು ವರ್ಗೀಕರಿಸಬಹುದು. ವಾರಕರೀ ಪಠ್ಯಗಳನ್ನು ಮರಾಠಿಯಲ್ಲಿ, ಬ್ರಾಹ್ಮಣ ಪಠ್ಯಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದೆ, ಮತ್ತು "ಮೂರನೆಯ ಸಂಪ್ರದಾಯದ" ಬರವಣಿಗೆಗಳು ಬ್ರಾಹ್ಮಣರಿಂದ ಬರೆಯಲಾದ ಮರಾಠಿ ಪಠ್ಯಗಳಾಗಿವೆ.
ಮಹೀಪತಿಯ ಭಕ್ತಲೀಲಾಮೃತ ಹಾಗೂ ಭಕ್ತವಿಜಯ, ಬಹಿನಾಬಾಯಿಯ ಪುಂಡಲೀಕ-ಮಹಾತ್ಮ್ಯ, ಮತ್ತು ನಾಮದೇವನ ಒಂದು ಉದ್ದವಾದ ಅಭಂಗವು ವಾರಕರೀ ಪಠ್ಯಗಳಾಗಿವೆ. ಇವೆಲ್ಲ ಪಠ್ಯಗಳು ಪುಂಡಲೀಕನ ದಂತಕಥೆಯನ್ನು ವರ್ಣಿಸುತ್ತವೆ. ಬ್ರಾಹ್ಮಣ ಪಠ್ಯಗಳು, (೯೦೦ ಶ್ಲೋಕಗಳನ್ನು ಒಳಗೊಂಡಿರುವ) ಸ್ಕಂದ ಪುರಾಣದ ಪಾಂಡುರಂಗ-ಮಹಾತ್ಮ್ಯ ಹಾಗೂ (೧,೨೦೦ ಶ್ಲೋಕಗಳನ್ನು ಒಳಗೊಂಡಿರುವ) ಪದ್ಮ ಪುರಾಣದ ಪಾಂಡುರಂಗ-ಮಹಾತ್ಮ್ಯದ ಎರಡು ಬೇರೆ ಆವೃತ್ತಿಗಳು, ಪದ್ಮ ಪುರಾಣದ್ದೇ ಆದ ಭೀಮ-ಮಹಾತ್ಮ್ಯ, ಮತ್ತು ವಿಷ್ಣು ಪುರಾಣದಲ್ಲಿ ಕಾಣಿಸುವ ಪಾಂಡುರಂಗ-ಮಹಾತ್ಮ್ಯ ಎಂದೇ ಪುನಃ ಕರೆಯಾಲಾದ ಒಂದು ಮೂರನೆಯ ಭಕ್ತಿ ಗ್ರಂಥವನ್ನು ಒಳಗೊಂಡಿವೆ.[೭೨][೭೩][೭೪] "ಮೂರನೆಯ ಸಂಪ್ರದಾಯವು" ಎರಡು ಗ್ರಂಥಗಳಲ್ಲಿ ಕಾಣಿಸುತ್ತದೆ: (೭೫೦ ಶ್ಲೋಕಗಳನ್ನು ಒಳಗೊಂಡಿರುವ) ಶ್ರೀಧರ ಬ್ರಾಹ್ಮಣನ ಪಾಂಡುರಂಗ-ಮಹಾತ್ಮ್ಯ, ಮತ್ತು (೧೮೧ ಶ್ಲೋಕಗಳನ್ನು ಒಳಗೊಂಡಿರುವ) ಪ್ರಹ್ಲಾದ ಮಹಾರಾಜನಿಂದ ಬರೆಯಲ್ಪಟ್ಟ ಅದೇ ಹೆಸರಿನ ಬೇರೊಂದು ಗ್ರಂಥ.[೭೫][೭೬]
ಮೇಲಿನವುಗಳ ಜೊತೆಗೆ, ಹಲವು ಅಭಂಗಗಳು, ಹಲವು ಸ್ತುತಿಗಳು (ಕೊಂಡಾಟದ ಗೀತೆಗಳು) ಮತ್ತು ಹರಿದಾಸ ಸಂಪ್ರದಾಯದಿಂದ ಉತ್ಪತ್ತಿಯಾದ ಕೆಲವು, ಸ್ತೋತ್ರಗಳಿವೆ. ಆದಿ ಶಂಕರಾಚಾರ್ಯರಿಗೆ ಹೊಂದಿಸಲಾದ "ಪಾಂಡುರಂಗಾಷ್ಟಕ" ಅಥವಾ "ಪಾಂಡುರಂಗಸ್ತೋತ್ರ" ಇವುಗಳಲ್ಲಿ ಅತ್ಯಂತ ಪರಿಚಿತವಾದದ್ದು, ಆದರೆ ಈ ಉಪಾಧಿಯನ್ನು ಪ್ರಶ್ನಿಸಲಾಗಿದೆ.[೭೨] ನಾಮದೇವ್ ಅಥವಾ ಜ್ಞಾನೇಶ್ವರನಿಗೆ ಹೊಂದಿಸಲಾದ, ಆದರೆ ಸಂಭವನೀಯವಾಗಿ ಅನೇಕ ಕವಿ-ಸಂತರ ಬರಹಗಳ ಒಂದು ಸಂಕಲನವಾದ, "ತೀರ್ಥಾವಳಿ-ಗಾಥಾ" ಎಂದು ಕರೆಯಲಾದ ಒಂದು ಪಠ್ಯವೂ ವಾರಕರೀ ಮತ ಮತ್ತು ವಿಠ್ಠಲ ಉಪಾಸನೆಯ ಪ್ರಸಾರದ ಮೇಲೆ ಕೇಂದ್ರೀಕರಿಸುತ್ತದೆ.[೧೭][೭೭] ಇತರ ಭಕ್ತಿ ಕೃತಿಗಳು, ನಾಮದೇವನ "ಯುಗೇ ಅಠ್ಠಾವೀಸಾ ವಿಟೇವಾರೀ ಉಭಾ" ಮತ್ತು "ಏ ಹೇ ವಿಠ್ಠಲ ಮಾಝೇ ಮೌಳಿ ರೇ"ಗಳಂತಹ ಆರತಿಗಳನ್ನು ಒಳಗೊಂಡಿವೆ. ಈ ಆರತಿಗಳು ಹಳದಿಬಣ್ಣದ ವಸ್ತ್ರವನ್ನು ಧರಿಸುವ ಮತ್ತು ಗರುಡ (ವಿಷ್ಣುವಿನ ವಾಹನ) ಹಾಗೂ ಹನುಮಂತನಿಂದ (ವಿಷ್ಣುವಿನ ಒಂದು ಅವತಾರನಾದ ರಾಮನ ಭಕ್ತನಾದ ಕಪಿ ದೇವತೆ) ಸೇವೆಗೊಳ್ಳುವ ವಿಠ್ಠಲನನ್ನು ಸ್ತುತಿಸುತ್ತವೆ. ಅಂತಿಮವಾಗಿ, ತೆಲುಗು ಕವಿಯಾಗಿದ್ದ ತೆನಾಲಿ ರಾಮಕೃಷ್ಣನು (೧೬ನೇ ಶತಮಾನ) ತನ್ನ ಕವನ ಪಾಂಡುರಂಗ-ಮಹಾತ್ಮ್ಯಮುದಲ್ಲಿ ವಿಠ್ಠಲನನ್ನು ಪಾಂಡುರಂಗನೆಂದು ನಿರ್ದೇಶಿಸುತ್ತಾನೆ: "(ಹೇ ಪಾರ್ವತಿ), ಪುಂಡರೀಕ ಮತ್ತು ಕ್ಷೇತ್ರಪಾಲರ (ಕಾಳ-ಭೈರವ) ಸೇವೆಯನ್ನು ಸ್ವೀಕರಿಸುವವಳೇ, ಭಕ್ತರ ಸಲುವಾಗಿ ಒಂದು ಗೂಢ ಶರೀರವನ್ನು ಧರಿಸಿ ಕಲ್ಪವೃಕ್ಷ ಆಗುವವಳೇ , ಅವರ ಬಯಕೆಗಳನ್ನು ನೆರವೇರಿಸುವವಳೇ, ಪಾಂಡುರಂಗ ದೇವರು ಆ ದೇವಾಲಯದಲ್ಲಿ ನೆಲಸಿರುತ್ತಾನೆ."[೪೪]
ದೇವಸ್ಥಾನಗಳು
[ಬದಲಾಯಿಸಿ]ಮಹಾರಾಷ್ಟ್ರದಲ್ಲಿ ಅನೇಕ ವಿಠ್ಠಲ ದೇವಸ್ಥಾನಗಳಿವೆ,[೭೮] ಮತ್ತು ಕರ್ನಾಟಕ, ತಮಿಳು ನಾಡು ಹಾಗೂ ಆಂಧ್ರ ಪ್ರದೇಶಗಳಲ್ಲಿ ಕೆಲವಿವೆ. ಆದರೆ, ಪಂಢರಪುರದಲ್ಲಿನ ವಿಠ್ಠಲನ ದೇವಸ್ಥಾನ ಆರಾಧನೆಯ ಮುಖ್ಯ ಕೇಂದ್ರವಾಗಿದೆ. ದೇವಸ್ಥಾನದ ಸ್ಥಾಪನೆಯ ದಿನಾಂಕ ವಿವಾದಕ್ಕೊಳಗಾಗಿದೆ, ಆದರೆ ೧೩ನೇ ಶತಮಾನದಲ್ಲಿ ಜ್ಞಾನೇಶ್ವರನ ಕಾಲದಲ್ಲಿ ಅದು ಅಸ್ತಿತ್ವದಲ್ಲಿತ್ತೆಂದು ಸ್ಪಷ್ಟವಾಗಿದೆ. ವಿಠ್ಠಲ ಮತ್ತು ಅವನ ಪತ್ನಿಯರಾದ ರುಕ್ಮಿಣಿ, ಸತ್ಯಭಾಮ ಹಾಗೂ ರಾಧೆಯರಲ್ಲದೆ ಇತರ ವೈಷ್ಣವ ದೇವತೆಗಳನ್ನೂ ಪೂಜಿಸಲಾಗುತ್ತದೆ. ಇವು, ವಿಷ್ಣುವಿನ ಒಬ್ಬ ಸ್ವರೂಪನಾದ ವೆಂಕಟೇಶ್ವರ, ವಿಷ್ಣುವಿನ ಪತ್ನಿ ಲಕ್ಷ್ಮಿಯ ಒಬ್ಬ ಸ್ವರೂಪಳಾದ ಮಹಾಲಕ್ಷ್ಮಿ, ಗರುಡ ಮತ್ತು ಹನುಮಂತರನ್ನು (ಹಿಂದಿನ ವಿಭಾಗ ನೋಡಿ) ಒಳಗೊಂಡಿವೆ. ವಿವೇಕ ಹಾಗೂ ಶುಭಾರಂಭಗಳ ಆನೆ ತಲೆಯುಳ್ಳ ದೇವರಾದ ಗಣೇಶ, ಶಿವನ ಒಬ್ಬ ಸ್ವರೂಪನಾದ ಖಂಡೋಬಾ ಮತ್ತು ಶಿವನ ಪತ್ನಿ ಪಾರ್ವತಿಯ ಒಬ್ಬ ಸ್ವರೂಪಳಾದ ಅನ್ನಪೂರ್ಣೆಯರಂತಹ ಶೈವ ದೇವತೆಗಳನ್ನೂ ಪೂಜಿಸಲಾಗುತ್ತದೆ. ನಾಮದೇವ್, ಚೋಖಾಮೇಲಾ ಹಾಗೂ ಜನಾಬಾಯಿಯರಂತಹ ಸಂತರ, ಮತ್ತು ಪುಂಡಲೀಕ ಹಾಗೂ ಕಾನ್ಹೋಪಾತ್ರಾರಂತಹ ಭಕ್ತರ ಸಮಾಧಿಗಳು (ಸ್ಮಾರಕ) ದೇವಸ್ಥಾನ ಮತ್ತು ಅದರ ಸುತ್ತಮುತ್ತ ಇವೆ.[೭೯][೮೦] ಮಹಾರಾಷ್ಟ್ರದಲ್ಲಿನ ಇತರ ಪ್ರಮುಖ ದೇವಾಲಯಗಳು, ವರ್ಷದ ಎಲ್ಲ ಏಕಾದಶಿಗಳಂದು ಭೇಟಿಕಾರರ ಗಮನಸೆಳೆಯುವ ತುಕಾರಾಮರ ಹುಟ್ಟೂರಾದ ದೇಹೂದಲ್ಲಿನ ದೇವಸ್ಥಾನ, ಘಡ್ಗೇ ಬೋವಾನ ಸ್ಮರಣಾರ್ಥ ಮಾಘ ಮಾಸದಲ್ಲಿ ಶುಕ್ಲಪಕ್ಷದ ಐದನೇ ದಿವಸದಂದು ಒಂದು ಜಾತ್ರೆಯನ್ನು ನಡೆಸಲಾಗುವ ಕೋಲೇಯಲ್ಲಿನ (ಸಾತಾರಾ) ದೇವಸ್ಥಾನ, ಶಯನೀ ಏಕಾದಶಿ ಮತ್ತು ಪ್ರಬೋಧಿನಿ ಏಕಾದಶಿಗಳಂದು ಜಾತ್ರೆಯನ್ನು ನಡೆಸಲಾಗುವ ಕೊಲ್ಹಾಪುರ್ ಹಾಗೂ ರಾಜಾಪುರ್‌ಗಳಲ್ಲಿ,[೮೧][೮೨] ಮತ್ತು ಕಡೆಯದಾಗಿ ಶಾಹದ್‌ನ ಬಿರ್ಲಾ ಮಂದಿರದಲ್ಲಿ ನೆಲೆಗೊಂಡಿವೆ.
ವಿಜಯನಗರ ಮತ್ತು ಮರಾಠರ ಆಳ್ವಿಕೆಯ ಕಾಲದಲ್ಲಿ ದಕ್ಷಿಣ ಭಾರತಕ್ಕೆ ವಿಠೋಬಾನನ್ನು ಪರಿಚಯಿಸಲಾಯಿತು.[೮೩] ದಕ್ಷಿಣ ಭಾರತದಲ್ಲಿ ಅವನನ್ನು ಸಾಮಾನ್ಯವಾಗಿ ವಿಠ್ಠಲನೆಂದು ಗುರುತಿಸಲಾಗುತ್ತದೆ. ಹಂಪಿ ದೇವಸ್ಥಾನವು (ಮೇಲೆ ಉಲ್ಲೇಖಿಸಲಾಗಿದೆ) ಒಂದು ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಮಹಾರಾಷ್ಟ್ರದ ಹೊರಗಿರುವ ವಿಠ್ಠಲನ ದೇವಸ್ಥಾನಗಳ ಪೈಕಿ ಅತ್ಯಂತ ಪ್ರಮುಖವಾದದ್ದಾಗಿದೆ. ೧೫ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಸ್ಥಾನವು, ವಿಜಯನಗರದ ದೊರೆ ಕೃಷ್ಣದೇವರಾಯನು "ತನ್ನ ಸ್ವಂತ ಸ್ಥಾನಮಾನವನ್ನು ಹೆಚ್ಚಿಸಲು"[೮೪] ಪಡೆದ ಕಾರಣದಿಂದ ಅಥವಾ ವಿಗ್ರಹವನ್ನು ಮುಸ್ಲಿಮ್ ದಾಳಿಕಾರರ ಸುಲಿಗೆಯಿಂದ ರಕ್ಷಿಸುವ ಕಾರಣಕ್ಕಾಗಿ, ಪಂಢರಪುರದ ಕೇಂದ್ರ ವಿಗ್ರಹಕ್ಕೆ ವಸತಿ ಮಾಡಿಕೊಟ್ಟಿತ್ತೆಂದು ನಂಬಲಾಗಿದೆ.[೮೫] ಅದನ್ನು ನಂತರ ಕವಿ-ಸಂತ ಏಕನಾಥನ ಮುತ್ತಜ್ಜನಾದ ಭಾನುದಾಸನಿಂದ (೧೪೪೮–೧೫೧೩) ಪಂಢರಪುರಕ್ಕೆ ಮರಳಿಸಲಾಯಿತು. ಇಂದು, ಈ ದೇವಸ್ಥಾನವು ಯಾವುದೇ ಕೇಂದ್ರ ವಿಗ್ರಹವನ್ನು ಹೊಂದಿಲ್ಲವಾದರೂ,[೮೪][೮೫] ೧೫೧೬ರಿಂದ ೧೫೬೫ರವರೆಗಿನ ಅವಧಿಯಲ್ಲಿ, ಮೂಲ ರಾಷ್ಟ್ರ ದೇವರಾದ ವಿರೂಪಾಕ್ಷನ (ಶಿವನ ಒಬ್ಬ ಸ್ವರೂಪ) ಸಮ್ಮುಖದಲ್ಲಿ ಆಚರಣೆಗೆ ತರಲಾಗುತ್ತಿದ್ದ ಬಹುತೇಕ ಪ್ರಮುಖ ವ್ಯವಹಾರಗಳನ್ನು ವಿಠ್ಠಲನ ಕೇಂದ್ರ ವಿಗ್ರಹದ ಸಮ್ಮುಖದಲ್ಲಿ ಹೊರಡಿಸಲಾಗುತ್ತಿತ್ತು.[೮೬] ಮಧ್ವಾಚಾರ್ಯರ ಎಂಟು ಮಠಗಳ ಪೈಕಿ ಮೂರು ಮಠಗಳು, ಶಿರೂರು, ಪೇಜಾವರ ಮತ್ತು ಪುತ್ತಿಗೆ ಮಠಗಳು, ವಿಠ್ಠಲನನ್ನು ತಮ್ಮ ಅಧಿಕೃತ ದೇವರನ್ನಾಗಿ ಸ್ವೀಕರಿಸಿವೆ.[೮೭][೮೮] ಕರ್ನಾಟಕದ ಮುಳಬಾಗಿಲಿನಲ್ಲಿ ಒಂದು ವಿಠ್ಠಲೇಶ್ವರ ದೇವಸ್ಥಾನವಿದೆ. ತಮಿಳು ನಾಡಿನಲ್ಲಿ, ವಿಠ್ಠಲ ದೇವಸ್ಥಾನಗಳು ಶ್ರೀರಂಗಂ, ತಿರುನೆಲ್ವೇಲಿ ಜಿಲ್ಲೆಯ ವಿಠ್ಠಲಪುರಂ, ಹಾಗೂ ತೆನ್ನಂಗೂರ್‌ಗಳಲ್ಲಿವೆ, ಜೊತೆಗೆ ಕಂಚಿಯಲ್ಲೂ ವಿಗ್ರಹಗಳು ಕಾಣಿಸುತ್ತವೆ.[೮೩]
ದಂತಕಥೆ
[ಬದಲಾಯಿಸಿ]ವಿಠ್ಠಲನಿಗೆ ಸಂಬಂಧಿಸಿದ ದಂತಕಥೆಗಳು ಸಾಮಾನ್ಯವಾಗಿ ಅವನ ಭಕ್ತ ಪುಂಡಲೀಕನ ಮೇಲೆ ಅಥವಾ ವಾರಕರೀ ಮತದ ಕವಿ-ಸಂತರ ಒಬ್ಬ ಸಂರಕ್ಷಕನಾಗಿ ವಿಠ್ಠಲನ ಪಾತ್ರದ ಮೇಲೆ ಕೇಂದ್ರೀಕರಿಸುತ್ತವೆ. ಮೇಲೆ ಭಕ್ತಿ ಗ್ರಂಥಗಳು ವಿಭಾಗದಲ್ಲಿ ಚರ್ಚಿಸಿದಂತೆ, ಪುಂಡಲೀಕ ದಂತಕಥೆಯು ಸಂಸ್ಕೃತ ಧರ್ಮಗ್ರಂಥಗಳಾದ ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಕಾಣುತ್ತದೆ. ಅದನ್ನು ಮರಾಠಿ ಪಠ್ಯಗಳಾದ ಶ್ರೀಧರ ಬ್ರಾಹ್ಮಣನ ಕೃತಿಯಾದ ಪಾಂಡುರಂಗ-ಮಹಾತ್ಮ್ಯ, ಪ್ರಹ್ಲಾದ ಮಹಾರಾಜ ರಚಿತ ಅದೇ ಹೆಸರಿನ ಇನ್ನೊಂದು ಗ್ರಂಥ ಮತ್ತು ವಿವಿಧ ಕವಿ-ಸಂತರ ಅಭಂಗಗಳಲ್ಲೂ ದಾಖಲಿಸಲಾಗಿದೆ.
ಪುಂಡಲೀಕನ ದಂತಕಥೆಯ ಮೂರು ಆವೃತ್ತಿಗಳಿವೆ, ಇವುಗಳಲ್ಲಿ ಎರಡನ್ನು ಸ್ಕಂದ ಪುರಾಣದ (೧.೩೪–೬೭) ಪಠ್ಯ ರೂಪಾಂತರಗಳೆಂದು ಪ್ರಮಾಣೀಕರಿಸಲಾಗಿದೆ. ಮೊದಲಿನದರ ಪ್ರಕಾರ, ಸಂನ್ಯಾಸಿ ಪುಂಡರೀಕನು (ಪುಂಡಲೀಕ) ವಿಷ್ಣುವಿನ ಒಬ್ಬ ಭಕ್ತ ಮತ್ತು ತನ್ನನ್ನು ತನ್ನ ತಂದೆ ತಾಯಿಯರ ಸೇವೆಗೆ ಸಮರ್ಪಿಸಿದವನೆಂದು ವರ್ಣಿಸಲಾಗಿದೆ. ಭಗವಂತನಾದ ವಿಷ್ಣುವಿನ ಒಂದು ಸ್ವರೂಪ ಗೋಪಾಲಕೃಷ್ಣನು ಒಬ್ಬ ಗೊಲ್ಲನ ರೂಪದಲ್ಲಿ ತನ್ನ ಹುಲ್ಲು ಮೇಯುವ ಹಸುಗಳ ಸಂಗಡ ಗೋವರ್ಧನದಿಂದ ಪುಂಡರೀಕನನ್ನು ಭೇಟಿಯಾಗಲು ಬರುತ್ತಾನೆ. ಕೃಷ್ಣನನ್ನು ದಿಗಂಬರ ರೂಪದಲ್ಲಿರುವಂತೆ, ಮಕರ ಕುಂಡಲ, ಶ್ರೀವತ್ಸ ಚಿಹ್ನೆ (ಮೇಲೆ ವಿವರಿಸಲಾಗಿದೆ),[೪೭] ನವಿಲು ಗರಿಗಳ ಒಂದು ತಲೆಯುಡಿಗೆಗಳನ್ನು ಧರಿಸಿರುವಂತೆ, ತನ್ನ ಕೈಗಳನ್ನು ತನ್ನ ಸೊಂಟದ ಮೇಲಿಟ್ಟುಕೊಂಡಂತೆ ಮತ್ತು ಬೆತ್ತವನ್ನು ತನ್ನ ತೊಡೆಗಳ ನಡುವೆ ಇಟ್ಟುಕೊಂಡಿರುವಂತೆ ವರ್ಣಿಸಲಾಗಿದೆ. ಪುಂಡರೀಕನು ಕೃಷ್ಣನನ್ನು ಇದೇ ರೂಪದಲ್ಲಿ ಭೀಮಾ ನದಿಯ ದಡದ ಮೇಲಿರುವಂತೆ ಕೇಳಿಕೊಳುತ್ತಾನೆ. ಕೃಷ್ಣನ ಸಾನ್ನಿಧ್ಯವು ಸ್ಥಳವನ್ನು ಒಂದು ತೀರ್ಥ ಮತ್ತು ಕ್ಷೇತ್ರವನ್ನಾಗಿ ಮಾಡುತ್ತದೆಂದು ಅವನು ನಂಬುತ್ತಾನೆ.[೮೯] ಈ ಸ್ಥಳವನ್ನು ಭೀಮಾ ನದಿಯ ದಡದ ಮೇಲಿರುವ ಇಂದಿನ ದಿನದ ಪಂಢರಪುರವೆಂದು ಗುರುತಿಸಲಾಗಿದೆ. ಕೃಷ್ಣನ ವರ್ಣನೆಯು ವಿಠ್ಠಲನ ಪಂಢರಪುರ ವಿಗ್ರಹದ ಗುರುತುಗಳನ್ನು ಹೋಲುತ್ತದೆ.[೯೦]
ದಂತಕಥೆಯ ಎರಡನೆಯ ಆವೃತ್ತಿಯು ಪುಂಡಲೀಕನ ಮುಂದೆ ವಿಠ್ಠಲನು ಐದು ವರ್ಷದ ಬಾಲ ಕೃಷ್ಣನಾಗಿ ಗೋಚರವಾದನೆಂದು ವರ್ಣಿಸುತ್ತದೆ. ಈ ಆವೃತ್ತಿಯು ಎರಡೂ ಪುರಾಣಗಳು, ಪ್ರಹ್ಲಾದ ಮಹಾರಾಜನ, ಮತ್ತು ಕವಿ-ಸಂತರ, ಗಮನಾರ್ಹವಾಗಿ ತುಕಾರಾಮನ, ಹಸ್ತಲಿಖಿತ ಪ್ರತಿಗಳಲ್ಲಿ ಕಾಣಿಸುತ್ತದೆ.[೯೧] ಪುಂಡಲೀಕ ದಂತಕಥೆಯ ಉಳಿದ ಆವೃತ್ತಿಯು ಶ್ರೀಧರ ಮತ್ತು ಒಂದು ಪರಿಷ್ಕರಣದ ರೂಪದಲ್ಲಿ ಪದ್ಮ ಪುರಾಣದಲ್ಲಿ ಕಾಣಿಸುತ್ತದೆ. ತನ್ನ ಹೆಂಡತಿಯ ಪ್ರೀತಿಯಲ್ಲಿ ಭ್ರಮಿತನಾಗಿದ್ದ ಒಬ್ಬ ಬ್ರಾಹ್ಮಣನಾದ ಪುಂಡಲೀಕನು ತನ್ನ ವಯಸ್ಸಾದ ತಂದೆ ತಾಯಿಗಳನ್ನು ಕಡೆಗಣಿಸಿದನು. ಋಷಿ ಕುಕ್ಕುಟರನ್ನು ಭೇಟಿಯಾದ ತರುವಾಯ, ಪುಂಡಲೀಕನು ಬದಲಾದನು ಮತ್ತು ತನ್ನ ಜೀವನವನ್ನು ತನ್ನ ವಯಸ್ಸಾದ ತಂದೆ ತಾಯಿಯರ ಸೇವೆಗಾಗಿ ಅರ್ಪಿಸಿದನು. ಏತನ್ಮಧ್ಯೆ, ಕೃಷ್ಣನ ಕಾವಾಡಿಗಿತ್ತಿ-ಪ್ರಿಯತಮೆಯಾದ ರಾಧೆಯು ಕೃಷ್ಣನ ರಾಜ್ಯವಾದ ದ್ವಾರಕೆಗೆ ಬಂದಳು, ಮತ್ತು ಅವನ ತೊಡೆಯ ಮೇಲೆ ಕುಳಿತುಕೊಂಡಳು. ರಾಧೆಯು ಕೃಷ್ಣನ ಪ್ರಧಾನ ಅರಸಿಯಾದ ರುಕ್ಮಿಣಿಯನ್ನು ಗೌರವಿಸಲಿಲ್ಲ, ಮತ್ತು ಕೃಷ್ಣನೂ ಸಹ ರಾಧೆಯು ಈ ಅವಮಾನಕ್ಕೆ ಜವಾಬ್ದಾರಳೆಂದು ಭಾವಿಸಲಿಲ್ಲ. ಮನನೊಂದ ರುಕ್ಮಿಣಿಯು ಕೃಷ್ಣನನ್ನು ತೊರೆದಳು ಮತ್ತು ಪಂಢರಪುರದ ಹತ್ತಿರದ ದಂಡೀವನಕ್ಕೆ ಹೋದಳು. ರುಕ್ಮಿಣಿಯ ನಿರ್ಗಮನದಿಂದ ದುಃಖಿತನಾದ ಕೃಷ್ಣನು ತನ್ನ ಅರಸಿಗಾಗಿ ಹುಡುಕಿದನು ಮತ್ತು ಅಂತಿಮವಾಗಿ ಅವಳನ್ನು ದಂಡೀವನದಲ್ಲಿ, ಪುಂಡಲೀಕನ ಮನೆಯ ಹತ್ತಿರ ಅವಳು ವಿಶ್ರಮಿಸುತ್ತಿರುವಾಗ ಕಂಡುಹಿಡಿದನು. ಸ್ವಲ್ಪ ಮನವೊಲಿಕೆಯ ಬಳಿಕ ರುಕ್ಮಿಣಿಯು ಸಮಾಧಾನಗೊಂಡಳು. ಆಮೇಲೆ ಕೃಷ್ಣನು ಪುಂಡಲೀಕನನ್ನು ಭೇಟಿಯಾದನು ಮತ್ತು ಅವನು ತನ್ನ ತಂದೆ ತಾಯಿಯರ ಸೇವೆಮಾಡುವಾಗ ಕಂಡನು. ಪುಂಡಲೀಕನು ಕೃಷ್ಣನು ವಿಶ್ರಮಿಸಲು ಹೊರಗೆ ಒಂದು ಇಟ್ಟಿಗೆಯನ್ನು ಎಸೆದನು. ಕೃಷ್ಣನು ಆ ಇಟ್ಟಿಗೆಯ ಮೇಲೆ ನಿಂತು ಪುಂಡಲೀಕನಿಗಾಗಿ ಕಾದನು. ತನ್ನ ಸೇವೆಗಳನ್ನು ಪೂರ್ಣಗೊಳಿಸಿದ ಬಳಿಕ, ಇಟ್ಟಿಗೆಯ ಮೇಲೆ ತನ್ನ ಸ್ವಾಮಿಯು ವಿಠ್ಠಲನ ರೂಪದಲ್ಲಿ ರಖುಮಾಯಿ ರೂಪದ ರುಕ್ಮಿಣಿಯೊಂದಿಗೆ ಇರಬೇಕೆಂದು, ಮತ್ತು ತನ್ನ ಭಕ್ತರನ್ನು ಸದಾ ಹರಸಬೇಕೆಂದು ಪುಂಡಲೀಕನು ಕೇಳಿಕೊಂಡನು.[೧೧][೨೯][೭೬][೮೯]
ಒಬ್ಬ ಸಾಮಾನ್ಯ, ಒಬ್ಬ ಜಾತಿಭ್ರಷ್ಟ ಮಹಾರ್ "ಅಸ್ಪೃಶ್ಯ" ಅಥವಾ ಒಬ್ಬ ಬ್ರಾಹ್ಮಣ ಭಿಕ್ಷುಕನ ರೂಪದಲ್ಲಿ ತನ್ನ ಭಕ್ತರ ನೆರವಿಗೆ ಬಂದ ವಿಠ್ಠಲನನ್ನು ಇತರ ದಂತಕಥೆಗಳು ವರ್ಣಿಸುತ್ತವೆ.[೯೨] ಮಹೀಪತಿಯು ತನ್ನ ಗ್ರಂಥ ಪಾಂಡುರಂಗಸ್ತೋತ್ರದಲ್ಲಿ, ವಿಠ್ಠಲನು ಜನಾಬಾಯಿಯಂತಹ ಸ್ತ್ರೀ ಸಂತರಿಗೆ ಮನೆ ಗುಡಿಸುವುದು ಮತ್ತು ಅಕ್ಕಿ ಕುಟ್ಟುವಂತಹ ಅವರ ದೈನಂದಿನದ ಮನೆಗೆಲಸದಲ್ಲಿ ಹೇಗೆ ಸಹಾಯ ಮಾಡಿದನೆಂದು ನಿರೂಪಿಸುತ್ತಾನೆ.[೯೩] ವಿಠ್ಠಲನು ಸೇನಾ ಕ್ಷೌರಿಕನ ನೆರವಿಗೆ ಹೇಗೆ ಬಂದನೆಂಬುದನ್ನು ಅವನು ನಿರೂಪಿಸುತ್ತಾನೆ. ರಾಜನ ಆಜ್ಞೆಗಳ ಹೊರತಾಗಿಯೂ ಅರಮನೆಗೆ ಬರದೇ ಇದ್ದುದಕ್ಕೆ ಸೇನಾನನ್ನು ಬಂಧಿಸುವಂತೆ ಬೀದರ್‌ನ ರಾಜನು ಆದೇಶಿಸಿದ್ದನು. ತನ್ನ ವಿಠ್ಠಲನ ಪ್ರಾರ್ಥನೆಯಲ್ಲಿ ಸೇನಾನು ತಲ್ಲೀನವಾಗಿದ್ದರಿಂದ, ರಾಜನ ಸೇವೆಮಾಡಲು ವಿಠ್ಠಲನೇ ಸೇನಾನ ರೂಪದಲ್ಲಿ ಅರಮನೆಗೆ ಹೋದನು, ಮತ್ತು ಹೀಗೆ ಸೇನಾ ಪಾರಾದನು.[೯೪] ಇನ್ನೊಂದು ಕಥೆಯು ಬರಗಾಲದಲ್ಲಿ ಜನರಿಗೆ ಧಾನ್ಯಗಳನ್ನು ಹಂಚುತ್ತಿದ್ದ ರಾಜವಂಶದ ಧಾನ್ಯದ ಗೋದಾಮಿನ ನಿರ್ವಾಹಕನಾದ ಒಬ್ಬ ಸಂತ ದಾಮಾಜಿಗೆ ಸಂಬಂಧಿಸಿದೆ. ಧಾನ್ಯಕ್ಕೆ ಸಲ್ಲಿಸಲು ಚಿನ್ನವಿರುವ ಒಂದು ಚೀಲದೊಂದಿಗೆ ಒಬ್ಬ ಜಾತಿಭ್ರಷ್ಟನ ರೂಪದಲ್ಲಿ ವಿಠ್ಠಲನು ಬಂದನು.[೯೫] ವಿಠ್ಠಲನ ನಾಮವನ್ನು ಹಾಡುತ್ತಿದ್ದಾಗ ಗೋರಾನಿಂದ ಜೇಡಿಮಣ್ಣಿನಲ್ಲಿ ತುಳಿಯಲ್ಪಟ್ಟಿದ್ದ ಗೋರಾ ಕುಂಭಾರನ ಮಗುವನ್ನು ವಿಠ್ಠಲನು ಹೇಗೆ ಸಚೇತನಗೊಳಿಸಿದನೆಂದು ಮತ್ತೊಂದು ಕಥೆಯು ನಿರೂಪಿಸುತ್ತದೆ.[೯೬]
ಟಿಪ್ಪಣಿಗಳು
[ಬದಲಾಯಿಸಿ]- ↑ Novetzke (2005) pp. 115–16
- ↑ ೨.೦ ೨.೧ ೨.೨ ೨.೩ ೨.೪ Crooke (2003) pp. 607–08
- ↑ Pande (2008) p. 449
- ↑ ೪.೦ ೪.೧ ೪.೨ Bhandarkar (1995) p. 124
- ↑ Tagare in Mahipati: Abbott, Godbole (1988) p. xxxvi
- ↑ ೬.೦ ೬.೧ Sand (1990) p. 38
- ↑ ೭.೦೦ ೭.೦೧ ೭.೦೨ ೭.೦೩ ೭.೦೪ ೭.೦೫ ೭.೦೬ ೭.೦೭ ೭.೦೮ ೭.೦೯ ಟೆಂಪ್ಲೇಟು:ಅಂತರಜಾಲ ಆಧಾರ
- ↑ ೮.೦ ೮.೧ Bhandarkar (1995) p. 125
- ↑ ೯.೦ ೯.೧ ೯.೨ ೯.೩ Eaton (2005) pp. 139–40
- ↑ Zelliot (1988) p. 170
- ↑ ೧೧.೦ ೧೧.೧ ೧೧.೨ Pande (2008) p. 508
- ↑ For Bir Kuar, Tagare in Mahipati: Abbott, Godbole (1988) p. xxxiv
- ↑ ೧೩.೦ ೧೩.೧ Novetzke (2005) p. 116
- ↑ Dhere p. 62
- ↑ Sand (1990) p. 40
- ↑ ೧೬.೦ ೧೬.೧ Kelkar (2001) p. 4179
- ↑ ೧೭.೦ ೧೭.೧ Vaudeville as quoted in Schomer, McLeod (1987) pp. 223–24
- ↑ Deleury as quoted in Sand (1990) p. 38
- ↑ Tilak (2006) pp. 243–46
- ↑ Stevenson (1843) pp. 5–6
- ↑ ೨೧.೦ ೨೧.೧ Karve (1968) pp. 188–89
- ↑ ೨೨.೦ ೨೨.೧ Zelliot, Eleanor in Mokashi (1987) p. 35
- ↑ Shima (1988) p. 184
- ↑ Gokhale (1985) pp. 42–52
- ↑ Ranade (1933) p. 183
- ↑ Pande (2008) pp. 449, 508
- ↑ Sand (1990) pp. 43, 58
- ↑ Sand (1990) p. 35
- ↑ ೨೯.೦ ೨೯.೧ Bhandarkar (1995) pp. 125–26
- ↑ Stevenson (1843) p. 66
- ↑ ೩೧.೦ ೩೧.೧ Sand (1990) p. 37
- ↑ Ranade (1933) pp. 183–84
- ↑ Sand (1990) pp. 39–40
- ↑ Monier Williams (2008 revision) p. 1276 Archived 2019-01-15 ವೇಬ್ಯಾಕ್ ಮೆಷಿನ್ ನಲ್ಲಿ..
- ↑ Zelliot, Eleanor in Mokashi (1987) p. 37
- ↑ Novetzke p. 117
- ↑ Zelliot (1988) p. 114
- ↑ ೩೮.೦ ೩೮.೧ Underhill (1991) p. 171
- ↑ ೩೯.೦ ೩೯.೧ Raeside, I. M. P. (1965) p. 82. Cited in Sand (1990) p. 33
- ↑ ಟೆಂಪ್ಲೇಟು:ಅಂತರಜಾಲ ಆಧಾರ
- ↑ Stevenson (1843) p. 64
- ↑ Tagare in Mahipati: Abbott, Godbole (1988) p. xxxiv
- ↑ Keer (2005) p. 482
- ↑ ೪೪.೦ ೪೪.೧ ೪೪.೨ Pande (2008) p. 448
- ↑ Zelliot, Eleanor in Mokashi (1987) pp. 35–36
- ↑ Ranade (1933) p. 41
- ↑ ೪೭.೦ ೪೭.೧ Monier-Williams (2008 version) p.1110
- ↑ ೪೮.೦ ೪೮.೧ Pillai (1997) pp. 366–67
- ↑ Pande (2008) p. 447
- ↑ Karve (1968) p. 183
- ↑ Tagare in Mahipati: Abbott, Godbole (1987) p. xxxv
- ↑ ೫೨.೦ ೫೨.೧ Engblom, Philip C. in Mokashi (1987) pp. 7–10, 15
- ↑ ೫೩.೦ ೫೩.೧ Shima (1988) p. 188
- ↑ Flood (1996) p. 135
- ↑ ೫೫.೦ ೫೫.೧ anon. (1987) pp. 966–68
- ↑ Zelliot, Eleanor in Mokashi (1990) p. 38
- ↑ Pawar p. 350
- ↑ Shima (1988) pp. 184–86
- ↑ Flood (1996) pp. 142–44
- ↑ Zelliot, Eleanor in Mokashi (1987) p. 40
- ↑ see Pawar pp. 350-62 for a review of Varkari literature
- ↑ Tagare in Mahipati: Abbott, Godbole (1988) p. xxxvii
- ↑ Flood (2003) pp. 252–53
- ↑ Sharma (2000) pp. 514–16
- ↑ Lutgendorf (2007) pp. 69, 70, 72
- ↑ Rao (1966) pp. 7–8
- ↑ Rao (1966) p. 28
- ↑ Iyer (2006) p. 93
- ↑ Kiehnle (1997) p. 39
- ↑ Engblom, Philip C. in Mokashi (1987) p. 2
- ↑ Shima (1988) p. 189
- ↑ ೭೨.೦ ೭೨.೧ Sand (1990) p. 56
- ↑ Sand (1990) p. 33
- ↑ For the complete English translation of Bhaktavijaya, which narrates the legend of Pundalik and also tells stories of reported interactions between the saints and Vithoba, see Stories of Indian Saints (1988) by Mahīpati, Justin Edwards Abbott, and Narhar R. Godbole.
- ↑ Sand (1990) p. 34
- ↑ ೭೬.೦ ೭೬.೧ For a complete Marathi text and English translation of Panduranga-Mahatmya by Sridhara see Raeside (1965) pp. 81-100
- ↑ Novetzke (2005) p. 120
- ↑ Singh (2004) p. 13
- ↑ Shima (1988) pp. 189–96
- ↑ Pande (2008) pp. 445–48
- ↑ Underhill (1991) pp. 165–66, 172
- ↑ ಟೆಂಪ್ಲೇಟು:ಅಂತರಜಾಲ ಆಧಾರ
- ↑ ೮೩.೦ ೮೩.೧ T. Padmaja (2002) pp. 92, 108, 121–22, fig 87
- ↑ ೮೪.೦ ೮೪.೧ Eleanor Zelliot in Mokashi (1987) p. 42
- ↑ ೮೫.೦ ೮೫.೧ Ranade (1933) p. 213
- ↑ Eaton (2005) p. 83
- ↑ Sharma (2000) p. 612
- ↑ Rao (2002) pp. 54–55
- ↑ ೮೯.೦ ೮೯.೧ Sand (1990) pp. 41–42
- ↑ Bakker (1990) p. 78
- ↑ Sand (1990) p. 50
- ↑ Eleanor Zelliot in Mokashi (1987) p. 35
- ↑ Tilak (2006) p. 247
- ↑ For complete tale, see Mahipati pp. 22-27
- ↑ For complete story, see Mahipati pp. 85-99
- ↑ For the complete legend, see Mahipati pp. 286-289
ಆಧಾರ ಗ್ರಂಥಗಳು
[ಬದಲಾಯಿಸಿ]- anonymous poet cited in (1987). [[೧]] ("Devolutional Literature - Marathi")}}. [[]] (Encyclopaedia of Indian literature)}}. 1, Sahitya Akademi. ISBN 8126018038, https://books.google.com/books?id=ObFCT5_taSgC&pg=PA966&dq=Vitthala&as_brr=3&sig=hivGSC1cTGWYEdIpJ-YadsBbbb4#PPA966,M1. Retrieved on ೨೦ ಸೆಪ್ಟೆಂಬರ್ ೨೦೦೮.
- ಟೆಂಪ್ಲೇಟು:ಅಂತರಜಾಲ ಆಧಾರ
- Bhandarkar, Ramakrishna Gopal [1913] (1995). Vaiṣṇavism, Śaivism, and Minor Religious Systems. Asian Educational Services, 124–27. ISBN 812060122X.
- Crooke, W. (2003). [[೨]] ("Pandharpur")}}. in Hastings, James. [[]] ([[:Encyclopedia of Religion and Ethics:|Encyclopedia of Religion and Ethics]])}}. 18, Kessinger Publishing. pp. 607-8. ISBN 0766136957, https://books.google.com/books?id=ltJI5KhFTRUC&pg=PA602&dq=Vithoba&lr=&as_brr=3&sig=ZWYdbWFNwCLMftuRbFPXFmriPws#PPA602,M1. Retrieved on ೨೦ ಸೆಪ್ಟೆಂಬರ್ ೨೦೦೮.
- Dhere, R.C. (1984). Sri Vitthal: Ek Mahasamanvaya (in Marathi). Pune: Shrividya Prakashan.
- Eaton, Richard Maxwell (2005). A Social History of the Deccan, 1300–1761: Eight Indian Lives. Cambridge University Press, 139–40. ISBN 0521254841. Retrieved on 2008-09-20.
- Flood, Gavin D. (1996). An Introduction to Hinduism. Cambridge University Press, 135, 142–4. ISBN 0521438780.
- Flood, Gavin D. (2003). The Blackwell Companion to Hinduism. Blackwell Publishing, 252–53. ISBN 0631215352, 9780631215356. Retrieved on 2008-09-20.
- Gokhale, Shobana (1985). "The Pandharpur Stone inscription of the Yadava king Mahadeva Sake 1192", in Deo, Shantaram Bhalchandra; Dhavalikar, Madhukar Keshav: Studies in Indian Archaeology, 238 pages, Popular Prakashan, 42–52. ISBN 0861320883, 9780861320882. Retrieved on 2008-09-20.
- Iyer, Panchapakesa A.S. [2006] (2006). Karnataka Sangeeta Sastra. Chennai: Zion Printers.
- Karve, Irawati (1968). "Ch.7: Religion and Gods of Maharashtra", Maharashtra – Land and Its People (pdf), Maharashtra State Gazetteer. Retrieved on 2008-09-20.
- Keer, Dhanajay [1954] (2005). Dr. Ambedkar: Life and Mission. Popular Prakashan, 482. ISBN 8171542379. Retrieved on 2008-09-20.
- Kelkar, Ashok R. (2001). [[೩]] ("Sri-Vitthal: Ek Mahasamanvay (Marathi) by R.C. Dhere")}}. [[]] (Encyclopaedia of Indian literature)}}. 5, Sahitya Akademi. pp. p. 4179, https://books.google.com/books?id=KnPoYxrRfc0C&pg=PA4179&dq=vithoba&as_brr=3&sig=0WHJ4sGcLGYNiZDwjR9YHwDA75k#PPA4180,M1. Retrieved on ೨೦ ಸೆಪ್ಟೆಂಬರ್ ೨೦೦೮.
- Kiehnle, Catharina (1997). Songs on Yoga: Texts and Teachings of the Mahārāṣṭrian Nāths. Franz Steiner Verlag, 17. ISBN 3515069224. Retrieved on 2008-09-20.
- Lutgendorf, Philip (2007). Hanuman's Tale: The Messages of a Divine Monkey. Oxford University Press US, 69, 70, 72. ISBN 0195309219, 9780195309218. Retrieved on 2008-09-20.
- Mahīpati; Abbott, Justin Edwards; Godbole, Narhar R.; Tagare, Ganesh Vasudeo (1988). Stories of Indian Saints: An English Translation of Mahipati's Marathi Bhaktavijaya. Motilal Banarsidass. ISBN 8120804694.
- Mokashi, Digambar Balkrishna; Engblom, Philip C. (1987). Palkhi: a pilgrimage to Pandharpur - translated from the Marathi book Pālakhī. Albany: State University of New York Press, 34–50 and 263–278. ISBN 0887064612.
- Monier-Williams, Monier (2008). Sanskrit-English Dictionary. Universität zu Köln.
- Novetzke, Christian Lee; Beck, Guy L. (2005). "A Family Affair: Krishna comes to Pandharpur and makes Himself at Home", Alternative Krishnas: Regional and Vernacular Variations on a Hindu Deity. SUNY Press, 113–138. ISBN 0791464156.
- Pande, Dr Suruchi (August 2008). "[[೪]] (The Vithoba of Pandharpur)}}" (pdf). Prabuddha Bharata (Advaita Ashrama: the Ramakrishna Order started by Swami Vivekananda) 113 (8): 444–9. ISSN 0032-6178, http://www.advaitaashrama.org/pb_archive/2008/PB_2008_August.pdf. Retrieved on ೨೯ ಅಕ್ಟೋಬರ್ ೨೦೦೮.
- Pande, Dr Suruchi (September 2008). "[[೫]] (The Vithoba of Pandharpur)}}" (pdf). Prabuddha Bharata (Advaita Ashrama: the Ramakrishna Order started by Swami Vivekananda) 113 (9): 504–8. ISSN 0032-6178, http://www.advaitaashrama.org/pb_archive/2008/PB_2008_September.pdf. Retrieved on ೨೯ ಅಕ್ಟೋಬರ್ ೨೦೦೮.
- Pande, Dr Suruchi (October 2008). "[[೬]] (The Vithoba of Pandharpur)}}" (pdf). Prabuddha Bharata (Advaita Ashrama: the Ramakrishna Order started by Swami Vivekananda) 113 (10): 553–8. ISSN 0032-6178, http://www.advaitaashrama.org/pb_forms/Prabuddha_Bharata_October08.pdf. Retrieved on ೨೯ ಅಕ್ಟೋಬರ್ ೨೦೦೮.
- Pawar, G. M. (1997). [[೭]] ("Medieval Marathi Literature")}}. in Panicker K. Ayyappa. [[]] (Medieval Indian Literature: An Anthology)}}. 1, Sahitya Akademi. ISBN 8126003650, http://books.google.co.in/books?id=KYLpvaKJIMEC&printsec=frontcover&source=gbs_summary_r&cad=0#PRA1-PA341,M1. Retrieved on ೧೭ ಡಿಸೆಂಬರ್ ೨೦೦೮.
- Pillai, S. Devadas (1997). Indian Sociology Through Ghurye, a Dictionary. Popular Prakashan, 366–7. ISBN 8171548075. Retrieved on 2008-09-20.
- Raeside, I. M. P. (1965). "[[೮]] (The "Pāṇḍuranga-Māhātmya" of Śrīdhar)}}". Bulletin of the School of Oriental and African Studies (Cambridge University Press on behalf of School of Oriental and African Studies, University of London) 28 (1): 81–100. ISSN 0041-977X, http://www.jstor.org/stable/611710. Retrieved on ೪ ಡಿಸೆಂಬರ್ ೨೦೦೮.
- Ranade, Ramchandra Dattatraya (1933). Indian Mysticism: Mysticism in Maharashtra (PDF), History of Indian Philosophy 7, Aryabhushan Press.
- Rao, Mysore Venkata Krishna (1966). Purandara and the Haridasa Movement. Karnatak University.
- Rao, Vasudeva (2002). Living Traditions in Contemporary Contexts: The Madhva Matha of Udupi. Orient Longman, 54–5. ISBN 812502297X, 9788125022978. Retrieved on 2008-09-20.
- Sand, Erick Reenberg (1990). "The Legend of Puṇḍarīka: The Founder of Pandharpur", in Bakker, Hans: The History of Sacred Places in India as Reflected in Traditional Literature. Leiden: E. J. Brill, 33–61. ISBN 9004093184.
- Schomer, Karine; McLeod, W. H. (1987). Vaudeville in The Sants: Studies in a Devotional Tradition of India. Motilal Banarsidass Publ, 223–24. ISBN 8120802772. Retrieved on 2008-09-20.
- Sharma, B.N.K. (2000). History of the Dvaita School of Vedanta and Its Literature. Blackwell Publishing, 514–16. ISBN 8120815750, 9788120815759. Retrieved on 2008-09-20.
- Shima Iwao (June-September 1988). "[[೯]] (The Vithoba Faith of Maharashtra: The Vithoba Temple of Pandharpur and Its Mythological Structure)}}" (pdf). Japanese Journal of Religious Studies (Nanzan Institute for Religion and Culture) 15 (2-3): 183–197. ISSN 0304-1042, http://www.ic.nanzan-u.ac.jp/SHUBUNKEN/publications/jjrs/pdf/276.pdf. Retrieved on ೨೧ ಸೆಪ್ಟೆಂಬರ್ ೨೦೦೮.
- Singh, Kumar Suresh; Mehta, B.V. (2004). People of India: Maharashtra. Anthropological Survey of India, 11–3. ISBN 8179911004, 9788179911006.
- Stevenson, Rev. J (1843). "[[೧೦]] (On the Intermixture of Buddhism with Brahmanism in the religion of the Hindus of the Dekhan)}}". The Journal of the Royal Asiatic Society of Great Britain and Ireland (London: periodical Royal Asiatic Society of Great Britain and Ireland) 7: 1–8. ISSN 1356-1863, https://books.google.com/books?id=Wq4IAAAAQAAJ&pg=PA64&dq=Vitthal&lr=&as_brr=3#PPA64,M1. Retrieved on ೪ ನವೆಂಬರ್ ೨೦೦೮.
- Stevenson, Rev. J (1843). "[[೧೧]] (An Account of Bauddho-Vaishnavas of Vithal-Bhaktas of Dakhan)}}". The Journal of the Royal Asiatic Society of Great Britain and Ireland (London: periodical Royal Asiatic Society of Great Britain and Ireland) 7: 64–73. ISSN 1356-1863, https://books.google.com/books?id=Wq4IAAAAQAAJ&pg=PA64&dq=Vitthal&lr=&as_brr=3#PPA64,M1. Retrieved on ೪ ನವೆಂಬರ್ ೨೦೦೮.
- Tilak, Dr. Shrinivas (2006). "Emergence of Vitthala:divine advocate of the subaltern", Understanding Karma: In Light of Paul Ricoeur's Philosophical Anthropology. International Centre for Cultural Studies. ISBN 8187420200, 9788187420200.
- T. Padmaja (2002). Temples of Kr̥ṣṇa in South India: History, Art, and Traditions in Tamilnāḍu. Abhinav Publications, 92, 108, 121–22, fig 87. ISBN 8170173981, 9788170173984. Retrieved on 2008-09-20.
- Underhill, M.M. [1921] (1991). The Hindu Religious Year, Originally published: Calcutta: Association Press, Asian Educational Services. ISBN 8120605233.
- Zelliot, Eleanor (1988). The Experience of Hinduism: Essays on Religion in Maharashtra. SUNY Press, 170. ISBN 0887066623. Retrieved on 2008-09-20.
ಹೆಚ್ಚಿನ ವಾಚನ
[ಬದಲಾಯಿಸಿ]- Deleury, G. A. (1960). The cult of Vithoba, Pune: Deccan College, Postgraduate and Research Institute (Original from the University of Michigan), Magis Books.
- Dhond, M. V. (2001). Aisa vitevara deva kothe! (in Marathi). Rajhans Prakashan.
- Tulpule, S. G. (1979). Classical Marathi Literature: A History of Indian Literature 9. Wiesbaden: Otto Harrassowitz.
ಬಾಹ್ಯ ಸಂಪರ್ಕ ಕೊಂಡಿಗಳು
[ಬದಲಾಯಿಸಿ]- ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನ, ಪಂಢರಪುರದ ಅಧಿಕೃತ ಅಂತರಜಾಲ ತಾಣ
- ಪಂಢರಪುರ ದೇವಸ್ಥಾನದ ಬಗ್ಗೆ ಲೇಖನ
- ಶ್ರೀ ಹರಿ ವಿಠ್ಠಲ ಬಗ್ಗೆ ಮಾಹಿತಿ Archived 2023-10-09 ವೇಬ್ಯಾಕ್ ಮೆಷಿನ್ ನಲ್ಲಿ.
- ಹರಿದಾಸ ಚಳವಳಿ Archived 2009-02-18 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]
ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ | |
---|---|
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ | |
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ | |
ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ |