ಜ್ಞಾನೇಶ್ವರ
ಸಂತ ಜ್ಞಾನೇಶ್ವರ : - (೧೨೭೫- ೧೨೯೬) (ಜ್ಞಾನದೇವ ಎಂದೂ ಕರೆಯುವುದುಂಟು) ಹದಿಮೂರನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮೊದಲು ಭಕ್ತಿ ಚಳುವಳಿಯನ್ನು ಪ್ರಾರಂಭ ಮಾಡಿದ ಸಂತ ಕವಿ. ಸಮಾಜದಿಂದ ಬಹಿಷ್ಕೃತವಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಜ್ಞಾನೇಶ್ವರ ಭಕ್ತಿಮಾರ್ಗದ ಭಾಗವತ ಸಂಪ್ರದಾಯದ ಪ್ರತಿಪಾದಕರಲ್ಲಿ ಪ್ರಮುಖನು. ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರಿ ಎಂದು ಮನೆಮಾತಾಗಿರುವ ಭಾವಾರ್ಥದೀಪಿಕಾ ಎಂಬ ಭಗವದ್ಗೀತೆಯ ಭಾಷ್ಯವನ್ನು ಬರೆದವನು. ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಜ್ಞಾನೇಶ್ವರ ಸಜೀವ ಸಮಾಧಿಯಿಂದ ದೇಹತ್ಯಾಗ ಮಾಡಿದ.
ಕೌಟುಂಬಿಕ ಹಿನ್ನೆಲೆ ಮತ್ತು ಬಾಲ್ಯ
[ಬದಲಾಯಿಸಿ]ವಿಠ್ಠಲಪಂತ ಮತ್ತು ರುಕ್ಮಿಣಿಬಾಯಿ ಕುಲಕರ್ಣಿ ಎಂಬ ಧರ್ಮಭೀರು ದಂಪತಿಗಳ ನಾಲ್ಕು ಮಕ್ಕಳಲ್ಲಿ ಎರಡನೆಯವನಾಗಿ ಜ್ಞಾನದೇವ ಪೈಠಣದ ಹತ್ತಿರದ. ಗೋದಾವರಿ ನದಿ ತೀರದ, ಅಪೆಗಾಂವ್ ಎಂಬ ಹಳ್ಳಿಯಲ್ಲಿ ಜನಿಸಿದ.
ಚಿಕ್ಕವಯಸ್ಸಿನಲ್ಲಿಯೇ ವೇದ ಶಾಸ್ತ್ರಗಳನ್ನು ಅಭ್ಯಾಸಮಾಡಿ ವಿದ್ವತ್ತನ್ನು ಸಂಪಾದಿಸಿದ್ದ ವಿಠ್ಠಲಪಂತ, ಲೌಕಿಕ ವಿಷಯಗಳಲ್ಲಿ ನಿರಾಸಕ್ತಿಯಿಂದಿದ್ದು, ಧರ್ಮಪರಾಯಣನಾಗಿ ಸದಾ ತೀರ್ಥಯಾತ್ರೆಯಲ್ಲಿರುತ್ತಿದ್ದ. ಅಂತಹ ಒಂದು ಯಾತ್ರೆಯ ಸಂದರ್ಭದಲ್ಲಿ ಅವನು ಪುಣೆಯಿಂದ ೩೦ ಕಿ.ಮೀದೂರದ ಆಳಂದಿ ಎಂಬಲ್ಲಿ ಹನುಮಾನ್ ದೇವಾಲಯದಲ್ಲಿ ತಂಗಿದ. ಈ ಯುವಕನ್ನು ನೋಡಿದ ಸಿದ್ಧೋಪಂತ ಎಂಬ ಬ್ರಾಹ್ಮಣನು ತನ್ನ ಮಗಳು ರುಕ್ಮಿಣಿಗೆ ಇವನೇ ತಕ್ಕ ವರ ಎಂದು ನಿರ್ಧರಿಸಿದ. ಲೌಕಿಕ ವ್ಯವಹಾರಗಳಲ್ಲಿ ಆಸಕ್ತಿಯಿಲ್ಲದ ವಿಠ್ಠಲಪಂತನು ಈ ಕೋರಿಕೆಯನ್ನು ಮನ್ನಿಸಲು ನಿರಾಕರಿಸಿದರೂ, ನಂತರ, ದರ್ಶನವೊಂದರಲ್ಲಿ ಕೇಳಿದ ಸೂಚನೆಯ ಪ್ರಕಾರ ಮದುವೆಯಾಗಲು ಒಪ್ಪಿದ.
ಮದುವೆಯ ನಂತರ ವಿಠ್ಠಲಪಂತ ಸ್ವಲ್ಪಕಾಲ ಆಳಂದಿಯಲ್ಲಿ ತಂಗಿದ. ಕೌಟುಂಬಿಕ ವ್ಯವಹಾರಗಳಲ್ಲಿ ಅವನ ನಿರಾಸಕ್ತಿಯನ್ನು ಗಮನಿಸಿದ ಅವನ ಮಾವ, ಅವನ ಊರಾದ ಅಪೆಗಾಂವ್ ಗ್ರಾಮಕ್ಕೆ ಕರೆದೊಯ್ದನು. ಅವನ ತಂದೆ ತಾಯಿಯರು ಅವನನ್ನು ಕಂಡು ಬಹಳ ಸಂತೋಷಪಟ್ಟರೂ, ಕೆಲಕಾಲದಲ್ಲಿಯೇ ಅವರಿಬ್ಬರೂ ಮೃತರಾದದ್ದರಿಂದ, ಸಂಸಾರದ ಪೂರ್ಣ ಜವಾಬ್ದಾರಿ ವಿಠ್ಠಲಪಂತನ ಮೇಲೆ ಬಿತ್ತು. ಮೊದಲೇ ಸಾಂಸಾರಿಕ ವಿಷಯಗಳಲ್ಲಿ ವಿರಕ್ತನಾದ ವಿಠ್ಠಲಪಂತ ಈ ಹೊರೆಯನ್ನು ಹೊರಲಾರದೆ ತತ್ತರಿಸಿದ. ಅವನ ಮಾವ ಸಿದ್ಧೋಪಂತನು ಅವನನ್ನು ಮತ್ತೆ ಆಳಂದಿಗೆ ಕರೆದುಕೊಂಡು ಹೋದನು. ಇದರಿಂದ ಯಾವುದೇ ಬದಲಾವಣೆಯಾಗದೆ, ಒಂದು ದಿನ ನದಿಗೆ ಸ್ನಾನಕ್ಕೆ ಹೋದ ವಿಠ್ಠಲಪಂತನು ಮನೆಗೆ ವಾಪಸಾಗದೇ, ವಾರಾಣಸಿಗೆ ಹೋಗಿಬಿಟ್ಟನು.
ವಾರಾಣಸಿಯಲ್ಲಿ ವಿಠ್ಠಲಪಂತನಿಗೆ ರಮಾನಂದಸ್ವಾಮಿ ಎಂಬ ಸಂತನ ದರ್ಶನವಾಯಿತು. ತನ್ನ ವಿವಾಹವಾದ ವಿಷಯವನ್ನು ಮರೆಮಾಚಿದ ವಿಠ್ಠಲಪಂತನು, ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಸನ್ಯಾಸ ದೀಕ್ಷೆಕೊಡುವಂತೆ ಬೇಡಿದನು. ಶಾಸ್ತ್ರಗಳ ಪ್ರಕಾರ, ಪತ್ನಿಯ ಅನುಮತಿಯಲ್ಲದೆ ಪತಿ ಸನ್ಯಾಸದೀಕ್ಷೆಯನ್ನು ತೆಗೆದುಕೊಳ್ಳುವಂತಿರಲಿಲ್ಲ. ಮೃತರಿಗೆ ಮಾಡುವ ಕರ್ಮಗಳನ್ನೂ ಸನ್ಯಾಸದೀಕ್ಷೆಯನ್ನು ಅಂಗವಾಗಿ ಮಾಡಬೇಕಾಗುತ್ತದೆ. ಅವನ ಎಲ್ಲಾ ನಂಟುಗಳೂ ಹೋಗಿ, ಅವನಿಗೆ ಹೊಸ ಹೆಸರನ್ನೂ ಹೊಸ ಹುಟ್ಟನ್ನೂ ಕೊಡಲಾಗುವುದು. ಅದರಂತೆ ವಿಠ್ಠಲಪಂತ ಸನ್ಯಾಸಿಯಾಗಿ ಚೈತನ್ಯಾಶ್ರಮ ಎಂಬ ನಾಮಧಾರಣೆ ಮಾಡಿದ.
ನಂತರ, ಹೀಗೆಯೇ ತೀರ್ಥಯಾತ್ರೆಗೆ ಹೋದ ರಮಾನಂದ ಸ್ವಾಮಿಯು ಯೋಗಾಯೋಗದಿಂದ ಆಳಂದಿಯಲ್ಲಿ ತಂಗಿದ. ಗಂಡನ ನಿರ್ಗಮನದ ನಂತರ, ತನ್ನ ದುಃಖವನ್ನು ಮರೆಯಲು ಸಂಪೂರ್ಣ ಧಾರ್ಮಿಕ ಕ್ರಿಯೆಗಳಲ್ಲಿ ಮುಳುಗಿದ್ದ ರುಕ್ಮಿಣಿಯು, ರಮಾನಂದಸ್ವಾಮಿಯನ್ನು ಭೇಟಿಯಾಗಿ ನಮಸ್ಕರಿಸಿದಳು. ರಮಾನಂದ ಸ್ವಾಮಿಯು ಅವಳಿಗೆ "ಪುತ್ರವತೀಭವ" (ನಿನಗೆ ಮಕ್ಕಳಾಗಲಿ) ಎಂದು ಆಶೀರ್ವಾದ ಮಾಡಿದ. ಇದನ್ನು ಕೇಳಿ ನಕ್ಕ ರುಕ್ಮಿಣೀಬಾಯಿಯನ್ನು ವಿಚಾರಿಸಿದ ರಮಾನಂದಸ್ವಾಮಿಗೆ ಆಕೆ ತನ್ನ ಗಂಡ ತನ್ನನ್ನು ತೊರೆದ ಬಗ್ಯೆ ಹೇಳಿದಳು. ಹೆಚ್ಚು ಹೆಚ್ಚು ವಿಚಾರಣೆ ಮಾಡಿದಂತೆ ಅವಳ ಗಂಡನ ವಿವರಗಳು ಚೈತನ್ಯಾಶ್ರಮನೊಂದಿಗೆ ಹೋಲುವುದು ಗಮನಕ್ಕೆ ಬಂತು. ಶಾಸ್ತ್ರದ ಪ್ರಕಾರ, ಸನ್ಯಾಸದೀಕ್ಷೆ ಕೊಟ್ಟ ಅವನಿಗೂ ದೋಷ ಅಂಟಿಕೊಂಡಿತು. ತಕ್ಷಣವೇ ವಾರಾಣಸಿಗೆ ಹಿಂತಿರುಗಿದ ರಮಾನಂದ ಸ್ವಾಮಿಯು ಚೈತನ್ಯಾಶ್ರಮನನ್ನು ಗದರಿಸಲು, ಆತ ತಪ್ಪೊಪ್ಪಿಕೊಂಡ. ರಮಾನಂದ ಸ್ವಾಮಿಯು ಅವನಿಗೆ ತಕ್ಷಣವೇ ವಾಪಸು ಹೋಗಿ ಹೆಂಡತಿಯೊಂದಿಗೆ ಸಂಸಾರ ಮಾಡುವಂತೆ ಆಜ್ಞಾಪಿಸಿದನು.
ಅದರಂತೆ ಆತ ಆಳಂದಿಗೆ ಹಿಂದಿರುಗಿ ಸಂಸಾರವನ್ನು ಪುನಃ ಪ್ರಾರಂಭಿಸಿದರೂ, ಅಲ್ಲಿಯ ಸಮಾಜ, ಸನ್ಯಾಸಿಯು ಸಂಸಾರ ಮಾಡುವ ಈ ಕಂಡುಕೇಳರಿಯದ ಪರಿಯನ್ನು ನೋಡಿ ಕೋಪಗೊಂಡು ಅವನ ಕುಟುಂಬವನ್ನು ಬಹಿಷ್ಕರಿಸಿತು. ವಿಠ್ಠಲಪಂತನು ಸಂಪೂರ್ಣ ವೇದಶಾಸ್ತ್ರಗಳ ವ್ಯಾಸಂಗದಲ್ಲಿ ಮುಳುಗಿದನು. ಕಾಲಕ್ರಮೇ ಈ ದಂಪತಿಗಳಿಗೆ ನಾಲ್ಕು ಮಕ್ಕಳಾದರು. ೧೨೭೩ರಲ್ಲಿ ನಿವೃತ್ತಿ, ೧೨೭೫ರಲ್ಲಿ ಜ್ಞಾನದೇವ, ೧೨೭೭ರಲ್ಲಿ ಸೋಪಾನ ಎಂಬ ಮೂವರು ಗಂಡು ಮಕ್ಕಳು ಮತ್ತು ೧೨೭೯ರಲ್ಲಿ ಮುಕ್ತಾಬಾಯಿ ಎಂಬ ಹೆಣ್ಣು ಮಗು. ಏಳು ವರ್ಷದವನಾದ ನಿವೃತ್ತಿಗೆ ಉಪನಯನ ಮಾಡುವುದಕ್ಕಾಗಿ ವಿಠ್ಠಲಪಂತನ ಕೋರಿಕೆಯನ್ನು ಅಲ್ಲಿಯ ಸ್ಥಳೀಯ ಬ್ರಾಹ್ಮಣರು ತಿರಸ್ಕರಿಸಿದರು.
ಇದರಿಂದ ಅತ್ಯಂತ ವ್ಯಥಿತನಾದ ವಿಠ್ಠಲಪಂತನು, ನಾಸಿಕದ ಹತ್ತಿರದ ತ್ರ್ಯಂಬಕೇಶ್ವರಕ್ಕೆ ಹೋಗಿ ಅಲ್ಲಿ ಶಿವದೇವಾಲಯದಲ್ಲಿ ಕುಟುಂಬದೊಂದಿಗೆ ಪೂಜೆಯನ್ನು ಕೈಗೊಂಡನು. ತ್ರ್ಯಂಬಕೇಶ್ವರ ಶಿವ ಹನ್ನರೆಡು ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಪ್ರಸಿದ್ಧವಾಗಿದೆ. ಅಲ್ಲಿ ಒಮ್ಮೆ ದೇವರಿಗೆ ಪ್ರದಕ್ಷಿಣೆ ಹಾಕುತ್ತಿರುವಾಗ ಒಂದು ಹುಲಿ ಅವರಿಗೆ ಎದುರಾಯಿತು (ಆ ಕಾಲದಲ್ಲಿ ಅಲ್ಲೆಲ್ಲಾ ದಟ್ಟ ಕಾಡುಗಳ್ಳಿದ್ದವು) ಮನೆಮಂದಿಯೆಲ್ಲಾ ಭಯಭೀತರಾಗಿ ಚಲ್ಲಾಪಿಲ್ಲಿಯಾಗಿ ಓಡಿದರು. ನಿವೃತ್ತಿಯು ಓಡುತ್ತಾ, ಒಂಭತ್ತು ನಾಥರುಗಳಲ್ಲಿ ಒಬ್ಬರಾಗಿದ್ದ ಗಹಿನಿನಾಥರು, ಸದ್ಯ ವಾಸವಾಗಿದ್ದ ಅಂಜನಿ ಗುಡ್ಡದ ಗುಹೆಯೊಂದನ್ನು ಹೊಕ್ಕನು. ಈ ಬಾಲಕನಿಂದ ಆರ್ಷಿತರಾದ ಗಹಿನಿನಾಥರು, ಅವನ ಸಣ್ಣವಯಸ್ಸನ್ನೂ ಲೆಕ್ಕಿಸದೆ, ಸನ್ಯಾಸದೀಕ್ಷೆ ಕೊಟ್ಟು, ಅವನಿಗೆ "ರಾಮಕೃಷ್ಣ ಹರಿ" ಮಂತ್ರವನ್ನು ಅನುಗ್ರಹಿಸಿದರು. ಹಾಗೂ ಶ್ರೀಕೃಷ್ಣ ಭಕ್ತಿಯನ್ನು ಪ್ರಸಾರ ಮಾಡುವಂತೆ ಆಜ್ಞಾಪಿಸಿದರು. ಅಂದಿನಿಂದ ನಿವೃತ್ತಿಯು ನಿವೃತ್ತಿನಾಥನಾದನು.
ವೇದಾಭ್ಯಾಸ
[ಬದಲಾಯಿಸಿ]ನಾಲ್ಕೂ ಮಕ್ಕಳು ಧಾರ್ಮಿಕ ಮನೋಭಾವದವರೂ, ಬುದ್ಧಿವಂತರೂ ಆಗಿದ್ದರು. ಅವರು ವೇದ, ಶಾಸ್ತ್ರಗಳನ್ನು, ತಮ್ಮ ತಂದೆಯೇ ಗುರುವಾಗಿ, ಅಭ್ಯಾಸ ಮಾಡಿದರೂ, ಸಾಮಾಜಿಕ ಬಹಿಷ್ಕಾರದ ಕಾರಣ ಬಾಕಿ ಬ್ರಾಹ್ಮಣ ಮಕ್ಕಳೊಂದಿಗೆ ಪಾಠಶಾಲೆಗಳಲ್ಲಿ ಕಲಿಯುವ ಅವಕಾಶದಿಂದ ವಂಚಿತರಾದರು. ಇದರಿಂದ ಅತ್ಯಂತ ದುಃಖಿತನಾದ ವಿಠ್ಠಲಪಂತನು, ಪ್ರಾಯಶ್ಚಿತ್ತದ ಬಗ್ಯೆ ವಿಚಾರಿಸಲು, ಇದಕ್ಕೆ ಮರಣದ ಹೊರು ಬೇರೆ ಪ್ರಾಯಶ್ಚಿತ್ತವಿಲ್ಲ ಎಂಬ ತೀರ್ಪು ಕೊಟ್ಟರು. ಸಂಪೂರ್ಣ ಹತಾಶರಾದ ವಿಠ್ಠಲಪಂತ ಮತ್ತು ರುಕ್ಮಿಣಿಬಾಯಿಯು ಮಕ್ಕಳನ್ನು ಬಿಟ್ಟು, ಪ್ರಯಾಗಕ್ಕೆ ತೆರಳಿ, ಅಲ್ಲಿ ಗಂಗಾ ನದಿಯಲ್ಲಿ ದೇಹತ್ಯಾಗ ಮಾಡಿದರು.
ಇತ್ತ ಅನಾಥ ಮಕ್ಕಳು ಭಿಕ್ಷೆ ಬೇಡುತ್ತಾ, ಕರುಣಾಳುಗಳು ಕೊಟ್ಟದ್ದನ್ನು ಬೇಯಿಸಿ ತಿನ್ನುತ್ತಾ, ಬೆಳೆದರು. ಕಾಲಕ್ರಮೇಣ ಈ ಮಕ್ಕಳೂ, ತಮ್ಮನ್ನು ಬ್ರಾಹ್ಮಣ ಸಮುದಾಯದಲ್ಲಿ ಸೇರಿಸಿಕೊಳ್ಳುವಂತೆಯೂ, ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಿದ್ಧರೆಂದೂ, ಪೈಠಣದ ಬ್ರಾಹ್ಮಣ ಸಮುದಾಯಕ್ಕೆ ಬೇಡಿಕೊಂಡರು. ಆದರೆ ಇದನ್ನು ಸಮುದಾಯವು ತಿರಸ್ಕರಿಸಿತು. ಆದರೂ, ಈ ಮಕ್ಕಳ ವಿಧೇಯ ನಡವಳಿಕೆಯಿಂದ ಸಂತುಷ್ಟರಾಗಿಮ ಬಾಕಿ ಬ್ರಾಹ್ಮಣರೊಂದಿಗೆ ಸಹಜೀವನ ಮಾಡಲು, ಮದುವೆಯಾಗಬಾರದು ಮತ್ತು ಮಕ್ಕಳಾಗಬಾರದು ಎಂಬ ಕರಾರಿನ ಮೇಲೆ, ಅನುಮತಿ ನೀಡಿದರು. ಇದು 1287ರಲ್ಲಿ, ಆಗ ಜ್ಞಾನದೇವನಿಗೆ ಹನ್ನೆರಡು ವರ್ಷ ವಯಸ್ಸು.
ಇದೇ ಸಮಯದಲ್ಲಿ ನಿವೃತ್ತಿನಾಥನು ಜ್ಞಾನದೇವನಿಗೆ ನಾಥಸಂಪ್ರದಾಯದ ದೀಕ್ಷಯನ್ನು ಕೊಟ್ಟು, ಅವನಿಗೆ ಭಗವದ್ಗೀತೆಯ ಮೇಲೆ ಭಾಷ್ಯವನ್ನು ಬರೆಯಲು ಸೂಚಿಸಿದನು. ಹದಿನಾಲ್ಕು ವರ್ಷದ ಗುರು ಹನ್ನೆರಡು ವರ್ಷದ ಶಿಷ್ಯನಿಗೆ ದೀಕ್ಷೆ ಕೊಟ್ಟು, ಬರೆಸಿದ ಭಾಷ್ಯ ಮುಂದೆ ಅನೇಕ ಪೀಳಿಗೆಗಳ ಜನರಿಗೆ ದಾರಿದೀಪವಾಯಿತು. ಅಲ್ಲಿಂದ ಮಕ್ಕಳು, ಪ್ರವರಾ ನದಿಯ ದಂಡೆಯ ಮೇಲಿನ, ನಗರ್ ಜಿಲ್ಲೆಯ, ನೆವಾಸೆ ಎಂಬ ಹಳ್ಳಿಗೆ ವಲಸೆ ಹೋದರು. ಅಲ್ಲಿ ಜ್ಞಾನದೇವನು ಭಗವದ್ಗೀತೆಯ ಭಾಷ್ಯವನ್ನು ಬರೆಯುವ ಕಾರ್ಯವನ್ನು ಪ್ರಾರಂಭಿಸಿದನು. ನಾಥ ಪಂಥದ ಹಾಗೂ ಭಕ್ತಿ ಪಂಥದ ಅನುಯಾಯಿಗಳಿಗೆ ಪ್ರವಚನವನ್ನೂ ಕೊಡುತ್ತಿದ್ದ. ಸಚ್ಚಿದಾನಂದಬಾಬಾ ಎಂಬ ಒಬ್ಬ ಭಕ್ತ ಜ್ಞಾನದೇವನ ಪ್ವಚನವನ್ನು ಬರಹರೂಪದಲ್ಲಿ ಇಳಿಸತೊಡಗಿದ. ಅವನ ಶ್ರೋತೃಗಳಲ್ಲಿ ಸಂತ ನಾಮದೇವನೂ ಒಬ್ಬನಾಗಿದ್ದ. ಸಣ್ಣ ವಯಸ್ಸಿನಲ್ಲಿಯೇ, ನಾಮದೇವ ಅರ್ಪಿಸಿದ ನೈವೇದ್ಯವನ್ನು ಪಂಢರಪುರದ ವಿಠೋಬಾ ದೇವರು, ತಿಂದಿದ್ದ ಎಂಬ ಪವಾಡದಿಂದ ನಾಮದೇವ ಪ್ರಸಿದ್ಧನಾಗಿದ್ದ. ಇದಕ್ಕೂ ಮೊದಲು ಪಂಢರಪುರದಲ್ಲಿ ಪರಸ್ಪರ ಭೇಟಿಯಾಗಿ ಅವರಿಬ್ಬರೂ ಗೆಳೆಯರಾಗಿದ್ದರು.
ಜ್ಷಾನೇಶ್ವರಿ
[ಬದಲಾಯಿಸಿ]ಮೇಲೆ ಹೇಳಿದ ಸಚ್ಚಿದಾನಂದಬಾಬಾನ ಬಗ್ಗೆಯೂ ಒಂದು ಐತಿಹ್ಯವಿದೆ. ನಿವೃತ್ತಿನಾಥ ಮತ್ತವನ ಒಡಹುಟ್ಟಿದವರು ನೆವಾಸೆ ಗ್ರಾಮಕ್ಕೆ ಆಗಮಿಸಿದಾಗ, ಸಚ್ಚಿದಾನಂದಬಾಬಾ ಮರಣ ಹೊಂದಿದ್ದು, ಅವನ ಶರೀರವನ್ನು ಅಂತ್ಯಕ್ರಿಯೆಗಾಗಿ ಕೊಂಡೊಯ್ಯಲಾಗುತ್ತಿತ್ತು. ಇವರೊಂದಿಗೆ ಸತಿಯಾಗಿ ಗಂಡನ ಚಟ್ಟವೇರಬಯಸಿದ್ದ ಅವನ ಹೆಂಡತಿ ಸೌದಾಮಿನಿಯೂ ಇದ್ದಳು. ಅಷ್ಟರಲ್ಲಿ, ಸಂತನೊಬ್ಬ ಈ ಹಳ್ಳಿಗೆ ಬಂದಿರುವುದಾಗಿಯೂ, ಅವನ ಆಶೀರ್ವಾದ ತೆಗೆದುಕೊಂಡೇ, ಸತಿ ಹೋಗುವುದು ಒಳ್ಳೆಯದು ಎಂದು ಯಾರೋ ಸೂಚಿಸಿದರು. ಧ್ಯಾನಸ್ಥನಾಗಿ ಮರವೊಂದರ ಬುಡದಲ್ಲಿ ಕುಳಿತಿದ್ದ ಜ್ಞಾನದೇವ ಆಕೆಯ ಕಣ್ಣಿಗೆ ಬಿದ್ದ. ಆಕೆ ಅವನಿಗೆ ನಮಸ್ಕರಿಸಿದಾಗ, ಜ್ಞಾನದೇವ "ಅಖಂಡ ಸೌಭಾಗ್ಯವತಿ ಭವ" (ಚಿರಕಾಲ ಮುತ್ತೈದೆಯಾಗಿರು) ಎಂದು ಆಶೀರ್ವದಿಸಿದ. ಧ್ಯಾನದಿಂದ ಹೊರಬಂದ ಮೇಲೆ ಆಗಿದ್ದ ಅಚಾತುರ್ಯವನ್ನು ಮನಗಂಡ ಜ್ಞಾನದೇವ, ದೇವರನ್ನು ಮತ್ತು ಗುರುಗಳ ಅನುಗ್ರಹವನ್ನು ಕೋರಿ, ತನ್ನ ಶಕ್ತಿಯಿಂದ ಸಚ್ಚಿದಾನಂದಬಾಬಾನನ್ನು ಮರಳಿ ಬದುಕಿಸಿದ. ಪುನರ್ಜನ್ಮ ಪಡೆದ ಬಾಬಾ ಜ್ಞಾನದೇವನ ಅಜೀವ ಭಕ್ತನಾಗಿ ಉಳಿದ.
೧೨೮೭ರಲ್ಲಿ, ತನ್ನ ಹನ್ನೆರಡನೆಯ ವಯಸ್ಸಿನಲ್ಲಿ, ಭಾವಾರ್ಥದೀಪಿಕಾ ಎಂಬ ಹೆಸರಿನ ಭಾಷ್ಯವನ್ನು ಬರೆಯಲು ಜ್ಞಾನದೇವ ಪ್ರಾರಂಭ ಮಾಡಿದ. ಎರಡೂವರೆ ವರ್ಷದ ನಂತರ, ೧೨೯೦ರಲ್ಲಿ ಅದನ್ನು ಪೂರೈಸಿದ. ಅಷ್ಟರಲ್ಲಿ ನಾಮದೇವನೊಂದಿಗೆ ಅವನ ಗೆಳೆತನ ಗಾಢವಾಗಿತ್ತು. ನಾಥಪಂಥ ಪ್ರತಿಪಾದಿಸುವ ಯೋಗಮಾರ್ಗವನ್ನು ಅನುಸರಿಸುವುದು ಸಾಮಾನ್ಯಜನರಿಗೆ ಅಸಾಧ್ಯವೆಂದು ಅವನಿಕೆ ಮನವರಿಕೆಯಾಗಿತ್ತು. ಯಾವುದೇ ಜಾತಿ, ಮತ, ಲಿಂಗವೇ ಇರಲಿ, ಜನಗಳಿಗೆ ಮೋಕ್ಷಸಾಧನೆಗೆ ಭಕ್ತಿಮಾರ್ಗದ ಅವಶ್ಯಕತೆಯಿದೆ ಎಂದೂ ಅವನಿಗೆ ಅರಿವಾಗಿತ್ತು. ಬಹುಶಃ ಅವನು, ಆಗ ಶೂದ್ರರೆಂದು ಪರಿಗಣಿಸಲಾದ ಸಿಂಪಿಗ ಜಾತಿಯವನಾದ, ನಾಮದೇವನಿಂದ ಪ್ರಭಾವಿತನಾಗಿರಲಿಕ್ಕೂ ಸಾಕು.
ಭಾವಾರ್ಥದೀಪಿಕೆ ಮುಗಿದ ಮೇಲೆ, ಜ್ಞಾನದೇವನು, ಬಹುಶಃ ನಾಮದೇವನ ಪ್ರಭಾವದಿಂದ, ವಾರಕರಿ ಪಂಥವನ್ನು ಸೇರಿ, ಅದರ ಮುಂದಾಳುವಾದ. ಪಂಢರಪುರದ ವಿಠ್ಠಲನ ಭಕ್ತರಾದ ವಾರಕರಿ ಪಂಥದವರು, ವರ್ಷಕ್ಕೆರಡು ಬಾರಿ, ಆಷಾಢೀ ಏಕಾದಶಿ ಮತ್ತು ಕಾರ್ತೀಕ ಏಕಾದಶಿ, ಪಂಢರಪುರದ ದರ್ಶನ ಮಾಡುತ್ತಾರೆ. ಪಂಢರಪುರದ ವಿಠ್ಠಲನ ವಿಶೇಷವೆಂದರೆ, ಮೂಲತಃ ಶ್ರೀಕೃಷ್ಣನ ರೂಪವಾಗಿದ್ದರೂ, ಮೂರ್ತಿಯ ತಲೆಯಲ್ಲಿರುವ ಕಿರೀಟದಲ್ಲಿ ಶಿವಲಿಂಗವಿದೆ. ಈ ಕಾರಣದಿಂದಾಗಿ ಈ ಕ್ಷೇತ್ರ ಶೈವ, ವೈಷ್ಣವರಿಬ್ಬರಿಗೂ ಪೂಜ್ಯವಾಗಿದೆ. ಮೂಲತಃ ಕರ್ನಾಟಕದಲ್ಲಿದ್ದ ಈ ಮೂರ್ತಿಯನ್ನು ನಂತರ ಪಂಢರಪುರಕ್ಕೆ ತರಲಾಯಿತು. ಜ್ಞಾನದೇವ ಭಕ್ತರಿಗಾಗಿ ಗೇಯರೂಪದಲ್ಲಿರುವ ಅಮೃತಾನುಭವ ಎಂಬ ಭಕ್ತಿ, ಅಲೌಕಿಕ ವಿಷಯಗಳಬಗೆಗಿನ ಗ್ರಂಥವನ್ನು ಬರೆದ. ಮುಂದೆ ಭಾವಾರ್ಥದೇಪಿಕಾ ಗ್ರಂಥವು ಜ್ಞಾನೇಶ್ವರೀ ಎಂದು ಪ್ರಸಿದ್ಧವಾಯಿತು. ಜ್ಞಾನೇಶ್ವರೀ ಮತ್ತು ಅಮೃತಾನುಭವ ಗ್ರಂಥಗಳು ಇಂದಿಗೂ ವಾರಕರಿ ಪಂಥದವರಿಗೆ ಪೂಜ್ಯವಾಗಿವೆ.
ನಂತರ ನಾಮದೇವ, ಸಾವತಾ ಮಾಳಿ ಮತ್ತು ಇನ್ನೂ ಅನೇಕ ಭಕ್ತಿಮಾರ್ಗದ ಅನುಯಾಯಿಗಳೊಂದಿಗೆ, ಜ್ಞಾನದೇವ ಉತ್ತರ, ಪೂರ್ವ ಮತ್ತು ಪಶ್ಚಿಮ ಭಾರತದ ತೀರ್ಥ ಕ್ಷೇತ್ರಗಳ ಯಾತ್ರೆ ಪ್ರಾರಂಭಿಸಿದ. ೧೨೯೬ರಲ್ಲಿ, ಯಾತ್ರೆಯಿಂದ ಮರಳಿದ ನಂತರ, ಜ್ಞಾನದೇವ, ಸಮಾಧಿಯಲ್ಲಿ ದೇಹತ್ಯಾಗ ಮಾಡುವ ಇಚ್ಛೆಯನ್ನು ಪ್ರಕಟಪಡಿಸಿದ. ಅದಕ್ಕಾಗಿ ಕಾರ್ತೀಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯನ್ನು ಆರಿಸಿದ. ಭಜನೆಗಳ ನಡುವೆ, ತನ್ನ ಅಣ್ಣ, ತಂಗಿಯರನ್ನೂ, ನಾಮದೇವ ಮೊದಲಾದ ಆತ್ಮೀಯ ಗೆಳೆಯರನ್ನೂ ಆಲಂಗಿಸಿದ ಜ್ಞಾನದೇವ, ನೆರೆದಿದ್ದ ಜನಜಂಗುಳಿ ಕಣ್ಣೀರು ಹಾಕುತ್ತಿದ್ದಂತೆ, ಸಮಾಧಿಯನ್ನೇರಿ, ಯೋಗಮುದ್ರೆಯಲ್ಲಿ ಕುಳಿತು ದೇಹತ್ಯಾಗ ಮಾಡಿದ. ಸಮಾಧಿಯನ್ನು ಕಲ್ಲುಗಳಿಂದ ಮುಚ್ಚಲಾಯಿತು. ಆಗ ಜ್ಞಾನದೇವನ ವಯಸ್ಸು ಕೇವಲ ೨೧.
ಕೃತಿಗಳು
[ಬದಲಾಯಿಸಿ]ಸಂತ ಜ್ಞಾನೇಶ್ವರನ ಕೃತಿಗಳಲ್ಲಿ ವಿದ್ವತ್ತೂ, ಕಾವ್ಯ ಸೌಂದರ್ಯವೂ ಕಾಣಬರುತ್ತದೆ. ಅವನ ಮಹತ್ವದ ಕೃತಿಗಳೆಂದರೆ:
- ಭಾವಾರ್ಥ ದೀಪಿಕಾ ಅಥವಾ ಜ್ಞಾನೇಶ್ವರಿ: ಭಗವದ್ಗೀತೆಯ ಮೇಲಿನ ಭಾಷ್ಯ. ಮರಾಠಿಯಲ್ಲಿದೆ. ಭಾಗವತ ಪಂಥದವರ (ಅಥವಾ ವಾರಕರಿ ಪಂಥದವರ) ಮೂರು ಮುಖ್ಯ ಗ್ರಂಥಗಳಲ್ಲಿ ಒಂದು.
- ಸರಿಸುಮಾರು ಒಂದು ಸಾವಿರ ಅಭಂಗಗಳು (ಮರಾಠೀ ಭಕ್ತಿಗೀತೆಗಳು) - ಇವುಗಳಲ್ಲಿ ೨೮ ಹರಿಪಥವೆಂದು ಪ್ರಸಿದ್ಧವಾಗಿವೆ.
- ಅಮೃತಾನುಭವ (ಆಥವಾ ಚಿದ್ವಿಲಾಸವಾದ) - ತನ್ನ ತತ್ವವನ್ನು ವಿವರಿಸಿರುವ ಗ್ರಂಥ.
ಸಮಾಜದ ಮೇಲೆ ಪ್ರಭಾವ
[ಬದಲಾಯಿಸಿ]ಜ್ಞಾನೇಶ್ವರ ಮತ್ತು ಅವನ ಒಡಹುಟ್ಟಿದವರ ಕೃತಿಗಳ ಪ್ರಭಾವ ಮರಾಠಿ ಸಂಸ್ಕೃತಿಯ ಮೇಲೆ ಇಂದಿಗೂ ಕಾಣಬರುತ್ತದೆ. ಜ್ಞಾನೇಶ್ವರನ ಜೀವನ ಮತ್ತು ಕೃತಿಗಳ ಬಗೆಗಿನ ಕಥೆಗಳು ಇಂದಿಗೂ ಮಹಾರಾಷ್ಟ್ರದಲ್ಲಿ ಮನೆಮಾತಾಗಿವೆ. ಶ್ರೀಕೃಷ್ಣನ ದಿವ್ಯಜ್ಞಾನವನ್ನು (ಭಗವದ್ಗೀತೆ) ಸರಳೀಕೃತ ರೂಪದಲ್ಲಿ ಜ್ಞಾನೇಶ್ವರಿಯ ಮೂಲಕ ಜನಸಾಮಾನ್ಯರಿಗೆ ಅವರದೇ ಭಾಷೆಯಾದ ಮರಾಠಿಯಲ್ಲಿ ತಿಳಿದುಕೊಳ್ಳಲು ಅನುವು ಮಾಡಿದ ಜ್ಞಾನೇಶ್ವರನನ್ನು ಸಾಕ್ಷಾತ್ ದೇವರಂತೆ ಪೂಜಿಸುವವರೂ ಅನೇಕರಿದ್ದಾರೆ. ಜ್ಞಾನೇಶ್ವರನ ಕೃತಿಗಳ ಭಾಗಗಳನ್ನು ಮಹಾರಾಷ್ಟ್ರದ ಮಕ್ಕಳು ಪಠ್ಯಪುಸ್ತಕಗಳಲ್ಲಿ ಅಭ್ಯಾಸಮಾಡುತ್ತಾರೆ. ಜ್ಞಾನೇಶ್ವರ ಮತ್ತು ಅವನ ತಂಗಿ ಮುಕ್ತಾ ರಚಿಸಿದ ಗೀತೆಗಳು ಮಹಾರಾಷ್ಟ್ರದಲ್ಲಿ ಜನಪ್ರಿಯವಾಗಿವೆ. ನಾಮದೇವನೊಂದಿಗೆ, ಜ್ಞಾನೇಶ್ವರ ಜನಪ್ರಿಯಗೊಳಿಸಿದ ವಾರಕರಿ ಪಂಥ ೭೦೦ ವರ್ಷಗಳ ನಂತರ, ಇಂದೂ ಸಜೀವವಾಗಿವೆ.
ಒಡಹುಟ್ಟಿದವರು
[ಬದಲಾಯಿಸಿ]ಅಣ್ಣ ನಿವೃತ್ತಿನಾಥ ನಾಥ ಪಂಥದ ಮುಖ್ಯಗುರುಗಳಲ್ಲಿ ಒಬ್ಬ. ಜ್ಞಾನೇಶ್ವರ ತನ್ನ ಅಣ್ಣನನ್ನು ಗುರುವೆಂದು ಒಪ್ಪಿಕೊಂಡಿದ್ದ. ಜ್ಞಾನೇಶ್ವರನ ಸಮಾಧಿಯ ನಂತರ ನಿವೃತ್ತಿನಾಥ, ತಂಗಿ ಮುಕ್ತಾನೊಂದಿಗೆ ತಾಪಿ ನದಿಯಗುಂಟ ಯಾತ್ರೆ ಹೊರಟ. ಅಲ್ಲಿ ಮಳೆ ಗಾಳಿಗಳ ಹೊಡೆತಕ್ಕ ಸಿಕ್ಕರು. ಮುಕ್ತಾ ಈ ಹೊಡೆತದಲ್ಲಿ ಸುಳಿವೇ ಇಲ್ಲದಂತೆ ಕಾಣೆಯಾದಳು. ನಿವೃತ್ತಿನಾಥ ತ್ರ್ಯಂಬಕೇಶ್ವರದಲ್ಲಿ ಸಮಾಧಿಯೇರಿದ.
ಜ್ಞಾನದೇವನ ತಮ್ಮ ಸೋಪಾನದೇವ ಪುಣೆಯ ಹತ್ತಿರದ ಸಾಸ್ವಡ್ ಎಂಬಲ್ಲಿ ಸಮಾಧಿ ಹೊಂದಿದ.
ಮುಕ್ತಾ: ( ಮುಕ್ತಾಯಿ, ಮುಕ್ತಾಬಾಯಿ ಎಂದೂ ಕರೆಯುವುದುಂಟು): ತನ್ನ ಸರಳ ಮತ್ತು ನೇರ ವಿಚಾರಧಾರೆಗಾಗಿ ಪ್ರಸಿದ್ಧಳಾಗಿದ್ದಾಳೆ.
ಈ ನಾಲ್ವರ ಹೆಸರುಗಳು ಮುಕ್ತಿ-ನಿರ್ವಾನದ ಮಾರ್ಗವನ್ನು ಸೂಚಿಸುತ್ತವೆ. ನಿವೃತ್ತಿ ಎಂದರೆ ಪ್ರಾಪಂಚಿಕ ವಿಷಯಗಳಿಂದ ಕಳಚಿಕೊಳ್ಳುವುದು. ನಂತರ ಜ್ಞಾನಶೋಧನೆ. ಜ್ಞಾನವೆಂಬ ಸೋಪಾನ (ಮೆಟ್ಟಿಲುಗಳು) ಮುಕ್ತಿ (ಮೋಕ್ಷ) ಪ್ರಾಪ್ತಿಯಾಗುತ್ತದೆ.
ಪವಾಡಗಳು
[ಬದಲಾಯಿಸಿ]ಭಾಗವತ ಸಂಪ್ರದಾಯದ ಅನುಯಾಯಿಗಳ ಪ್ರಕಾರ ಜ್ಞಾನದೇವನ ಜೀವನದಲ್ಲಿ ಅನೇಕ ಪವಾಡಗಳಿತ್ತು. ಈ ಘಟನೆಗಳು ಅನೇಕ ಗ್ರಂಥಗಳಲ್ಲಿ ಉಲ್ಲೇಖವಾಗಿವೆ. ಅವುಗಳಲ್ಲಿ ಕೆಲವೆಂದರೆ ತನ್ನ ಕಾದ ಬೆನ್ನಿನ ಮೇಲೆ ಮಂಡಿಗೆ (ಮರಾಠಿಯಲ್ಲಿ ಮಾಂಡೆ) ಮಾಡಿದ್ದು, ಗೋಡೆಯನ್ನು ಸರಿಯುವಂತೆ ಮಾಡಿದ್ದು ಮತ್ತು ಎತ್ತಿನಿಂದ ವೇದಘೋಷ ಮಾಡಿಸಿದ್ದು. ವೈಚಾರಿಕತೆ ಇವೆಲ್ಲವನ್ನೂ ಅಲ್ಲಗೆಳೆಯುತ್ತದೆ. ಆದರೂ, ಯೋಗಗ್ರಂಥಗಳ ಪ್ರಕಾರ, ಒಂದು ಮಟ್ಟವನ್ನು ಮುಟ್ಟಿದವರಿಗೆ ಇವೆಲ್ಲವೂ ಸಾದ್ಯ ಎನ್ನಲಾಗಿದೆ. ಆದರೂ ಇವು ಯಾವುದಕ್ಕೂ ಸಾಕ್ಷ್ಯಾಧಾರಗಳಿಲ್ಲ.
ಗ್ರಂಥ ಋಣ
[ಬದಲಾಯಿಸಿ]John Noyce, Gyaneshwara: a Western-language bibliography (Melbourne: Noyce Publishing, 1995) M. V. Dhond "Dnyaneshwari: Swarup, Tatvadnyan ani Kavya" (Majestic Book Stall, 1980) R.D.Ranade, Mysticism in Maharashtra: Indian mysticism (Poona, 1933; reprint: Delhi: Motilal Banarsidass, 1982) ISBN 8120805755 B.P.Bahirat, The Philosophy of Jnanadeva (Bombay: Popular Prakashan, 1956) ISBN 8171547370 P.V.Bobde (trans), Garland of Divine Flowers: selected devotional lyrics of Saint Jnanesvara (Delhi: Motilal Banarsidass, 1987) ISBN 8120803906