ಡಮಾಸ್ಕಸ್
ಡಮಾಸ್ಕಸ್
دمشق ದಿಮಾಶ್ಕ್ | |
---|---|
Nickname: (ಅಲ್-ಫಾಯ್ಹಾ) ಸುಗಂಧದ ನಗರ | |
ದೇಶ | ಸಿರಿಯ |
ಗವರ್ನೇಟ್ (ರಾಜ್ಯ) | ಡಮಾಸ್ಕಸ್ ಗವರ್ನೇಟ್ |
ಸ್ಥಾಪನೆ | ೯೦೦೦ ಕ್ರಿಸ್ತಪೂರ್ವ |
Government | |
• ರಾಜ್ಯಪಾಲ | ಬಿಶ್ರ್ ಅಲ್ ಸಬ್ಬನ್ |
Area | |
• City | ೫೭೩ km೨ (೨೨೧ sq mi) |
• Metro | ೧,೨೦೦ km೨ (೫೦೦ sq mi) |
Elevation | ೬೦೦ m (೨,೦೦೦ ft) |
Population (೨೦೦೭) | |
• Metro | ೬೫,೦೦,೦೦೦ |
Time zone | UTC+2 (EET) |
• Summer (DST) | UTC+3 (EEST) |
Area code(s) | ಸಿರಿಯ: 963, ಡಮಾಸ್ಕಸ್: 11 |
ಡಮಾಸ್ಕಸ್ (ಅರೇಬಿಕ್: دمشق, ಸಾಮಾನ್ಯವಾಗಿ الشام ಅಶ್-ಶಾಮ್ ಎಂದೂ ಕರೆಯಲ್ಪಡುತ್ತದೆ) ಸಿರಿಯ ದೇಶ(ಸಿರಿಯನ್ ಅರಬ್ ಗಣರಾಜ್ಯ)ದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಸುಮಾರು ೪ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಬರದ ನದಿಯ ದಂಡೆಯಲ್ಲಿ ಸ್ಥಿತವಾಗಿರುವ ಈ ನಗರದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಇದು ಸಿರಿಯ ದೇಶದ ಸಾಂಸ್ಕೃತಿಕ ಹಾಗು ಆರ್ಥಿಕ ಕೇಂದ್ರವಾಗಿದೆ.
ಡಮಾಸ್ಕಸ್ ಸಿರಿಯನ್ ಅರಬ್ ಗಣರಾಜ್ಯದ ಒಂದು ಜಿಲ್ಲೆಯೂ ಹೌದು, ಡಮಾಸ್ಕಸ್ ನಗರ ಆಂಟಿ-ಲೆಬನನ್ ಪರ್ವತ ಶ್ರೇಣಿಯ ಪೂರ್ವಕ್ಕೆ, ಕಾಸ್ಯುಮ್ ಶಿಖರದ ಬುಡದಲ್ಲಿ, ಸಮುದ್ರಮಟ್ಟದಿಂದ ಸು. 2,264' ಎತ್ತರದಲ್ಲಿದೆ. ಲೆಬನನ್‍ನ ರಾಜಧಾನಿಯಾದ ಬೇರೂತ್ ನಗರ ಡಮಾಸ್ಕಸ್‍ಗೆ ವಾಯುವ್ಯದಲ್ಲಿ 57 ಮೈ. ದೂರದಲ್ಲಿದೆ. ಬಾರದ ಮತ್ತು ಆವಾಜ್ ನದಿಗಳ ಮೇಲಿರುವುದರಿಂದಲೂ ಹಲವು ಮಾರ್ಗಗಳು ಕೂಡುವ ಎಡೆಯಲ್ಲಿರುವುದರಿಂದಲೂ ಡಮಾಸ್ಕಸ್ ನಗರ ಬೆಳೆದು ಪ್ರಾಮುಖ್ಯ ಗಳಿಸಿದೆ. ಇದು ಸಿರಿಯದ ಅತ್ಯಂತ ದೊಡ್ಡ ನಗರ. ಈ ನಗರದ ಜನಸಂಖ್ಯೆ 8,35,000 (1970).
ಮೆಕ್ಕ ನಗರಕ್ಕೆ ಭೂಮಾರ್ಗವಾಗಿ ಯಾತ್ರೆ ಹೋಗುವವರು ಹಿಂದೆ ಡಮಾಸ್ಕಸ್ ಮೂಲಕವೇ ಪ್ರಯಾಣ ಮಾಡಬೇಕಾಗಿತ್ತು. ನಗರ ಬೆಳೆಯಲು ಇವರೂ ಕಾರಣ. ಇಲ್ಲಿಂದ ಲೆಬನನ್‍ನ ಬೇರೂತ್ ಮತ್ತು ಜಾರ್ಡನಿನ ಅಮ್ಮಾನ್‍ಗೆ ಸರ್ವಋತು ರಸ್ತೆಗಳಿವೆ. ಇರಾಕಿನ ಬಾಗ್ದಾದ್ ನಗರಕ್ಕೆ ಇಲ್ಲಿಂದ ಮರುಭೂಮಿಯ ಮೂಲಕ ಸಾಗುವ ದಾರಿಯಿದೆ. ಬೇರೂತ್, ಅಲೆಪ್ಪೋಗಳಿಗೂ ಜಾರ್ಡನ್ ಗಡಿಯ ಮೇಲಣ ಪಟ್ಟಣವಾದ ದಾರಕ್ಕೂ ರೈಲುಮಾರ್ಗಗಳುಂಟು. ನಗರಕ್ಕೆ ಹತ್ತಿರದಲ್ಲೇ ಅಲ ಮಜಾó ವಿಮಾನನಿಲ್ದಾಣವಿದೆ.
ಬಾರದ ನದಿಯ ಎರಡೂ ದಂಡೆಗಳ ಮೇಲೆ ಡಮಾಸ್ಕಸ್ ನಗರ ಹಬ್ಬಿದೆ. ಹಳೆಯ ನಗರ ಈ ನದಿಯ ದಕ್ಷಿಣಕ್ಕೆ ಇದೆ. ಇದರ ಸುತ್ತ ಸ್ವಲ್ಪ ದೂರ ಕೋಟೆಯನ್ನು ಕಟ್ಟಲಾಗಿದೆ. ಮುಖ್ಯ ಮಸೀದಿಗಳೂ ಪೇಟೆಗಳೂ ಇರುವುದು ಹಳೆಯ ನಗರದಲ್ಲಿ. ನದಿಯ ಉತ್ತರದಲ್ಲಿರುವ ಆಧುನಿಕ ನಗರ 1940ರಿಂದ ಈಚೆಗೆ ವಿಶೇಷವಾಗಿ ಬೆಳೆದಿದೆ. ಇಲ್ಲಿ ಭವ್ಯ ಸರ್ಕಾರಿ ಭವನಗಳೂ ಆಸ್ಪತ್ರೆಗಳೂ ಪ್ರಧಾನ ಅಂಚೆಕಚೇರಿಯೂ ಹೋಟೆಲುಗಳೂ ಕಾರ್ಖಾನೆಗಳೂ ಇವೆ. ಉತ್ತರದಲ್ಲಿರುವ ವಾಸಗೃಹಗಳು ಅತ್ಯಂತ ಆಧುನಿಕವಾದವು. ಸಿರಿಯನ್ ವಿಶ್ವವಿದ್ಯಾಲಯ ಇರುವುದು ಪಶ್ಚಿಮಭಾಗದಲ್ಲಿ 1924ರಲ್ಲಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯ ಇಡೀ ಪಶ್ಚಿಮ ಏಷ್ಯದಲ್ಲೇ ಪ್ರಮುಖವಾದ್ದು. ದ್ರಾಕ್ಷಿ, ಕಲ್ಲಂಗಡಿ, ಏಪ್ರಿಕಾಟ್ ಮುಂತಾದವುಗಳ ತೋಟಗಳ ನಡುವೆ ಬೆಳೆದಿರುವ ಡಮಾಸ್ಕಸ್ ನಗರ ಅತ್ಯಂತ ಸುಂದರವಾದ್ದು. ಭೂಸ್ವರ್ಗವೆಂದು ಇದು ಪ್ರಖ್ಯಾತವಾಗಿದೆ. ಮುಸ್ಲಿಮರಿಗೂ ಕ್ರೈಸ್ತರಿಗೂ ಇದು ಪವಿತ್ರವಾದ್ದು. ಈಜಿಪ್ಟ್ ಸಿರಿಯಗಳ ಸುಲ್ತಾನನಾಗಿದ್ದ ಅರಬ್ ವೀರ ಸಾಲದಿನನ (1138-1193) ಸಮಾಧಿ ಇಲ್ಲಿದೆ. ಸೇಂಟ್ ಪಾಲ್ ಪರಿವರ್ತನೆ ಹೊಂದಿದ್ದು ಈ ಸ್ಥಳದಲ್ಲಿ.
ಗೃಹ ಕೈಗಾರಿಕೆಗಳು
[ಬದಲಾಯಿಸಿ]ಡಮಾಸ್ಕಸ್‍ನಲ್ಲಿ ಅನೇಕ ಹಳೆಯ ಗೃಹಕೈಗಾರಿಕೆಗಳುಂಟು. ಡಮಾಸ್ಕ್, ಜಮಖಾನೆ, ಚರ್ಮ, ಚಿತ್ರ ಹದ್ದಿಸಿದ (ಇನ್ಲೇ) ಮರಗೆಲಸ, ಲೋಹಗೆಲಸ, ಉಕ್ಕು ಉಪಕರಣ ಮುಂತಾದವು ಹಳೆಯ ಸಣ್ಣ ಕೈಗಾರಿಕೆಗಳು. ಸಕ್ಕರೆ, ಗಾಜು, ಪೀಠೋಪಕರಣ, ಬೆಂಕಿಕಡ್ಡಿ, ಜವಳಿ, ಸಿಮೆಂಟ್ ಮುಂತಾದ ದೊಡ್ಡ ಕೈಗಾರಿಕೆಗಳಿವೆ. ಇಲ್ಲಿಯ ಗುಲ್ಖನ್, ಸಿಹಿ ತಿಂಡಿ, ಬರ್ಫಕೆನೆ (ಐಸ್‍ಕ್ರೀಂ) ಬಹು ಪ್ರಸಿದ್ಧ. ಇದೊಂದು ವ್ಯಾಪಾರ ಸ್ಥಳ ಕೂಡ. ಆದರೆ ವಾಣಿಜ್ಯ ದೃಷ್ಟಿಯಿಂದ ಅಲೆಪ್ಪೋ ಇದಕ್ಕಿಂತ ಹೆಚ್ಚಿನ ಪ್ರಾಮುಖ್ಯ ಗಳಿಸಿದೆ. ಗೋದಿ, ಹೊಗೆಸೊಪ್ಪು ಜಾನುವಾರು, ಚರ್ಮ, ಒಣ ಮತ್ತು ಹಸಿ ಹಣ್ಣುಗಳು ಇಲ್ಲಿಂದ ರಫ್ತಾಗುವ ಸರಕುಗಳು. ಯಂತ್ರ, ಮೋಟಾರು, ಕಬ್ಬಿಣ-ಉಕ್ಕು, ಇಂಧನ ತೈಲ, ಔಷಧ ಆಮದಾಗುತ್ತವೆ.
ಇತಿಹಾಸ
[ಬದಲಾಯಿಸಿ]ನಿರಂತರವಾಗಿ ಜನವಸತಿ ಮುಂದುವರಿದುಕೊಂಡು ಬಂದಿರುವ ಅತ್ಯಂತ ಪ್ರಾಚೀನ ನಗರ ಡಮಾಸ್ಕಸ್, ಪ್ರಮುಖ ರಾಜ್ಯವೊಂದರ ರಾಜಧಾನಿಯೆಂದು ಹಳೆಯ ಒಡಂಬಡಿಕೆಯಲ್ಲಿ ಇದರ ಉಲ್ಲೇಖವಿದೆ. ಕ್ರಿ. ಪೂ. 332ರಲ್ಲಿ ಅಲೆಕ್ಸಾಂಡರ್ ಈ ನಗರವನ್ನು ವಶಪಡಿಸಿಕೊಂಡ. ಅವನ ಮರಣದ ಅನಂತರ ಆರ್ಮೇನಿಯನರು ಇದನ್ನು ವಶಪಡಿಸಿಕೊಳ್ಳಲು ಬಹಳ ಯತ್ನಿಸಿದರು. ಕ್ರಿ.ಪೂ. 64ರಲ್ಲಿ ಇದು ರೋಮನರ ವಶವಾಯಿತು. ರೋಮನ್ ಸಾಮ್ರಾಜ್ಯದ ಕಾಲದಲ್ಲಿ (ಕ್ರಿ.ಪೂ. 63-ಕ್ರಿ.ಶ. 635) ಈ ಪಟ್ಟಣ ತುಂಬ ಉಚ್ಛ್ರಾಯಸ್ಥಿತಿಗೆ ಬಂತು. ಆ ಕಾಲದ ಕೋಟೆಯ ಗೋಡೆಯ ಮತ್ತು ಜûೂಸ್ ದೇವಮಂದಿರದ ಹಲವು ಭಾಗಗಳು ಉಳಿದಿವೆ. ರೋಂ ಸಾಮ್ರಾಜ್ಯದ ಹತ್ತು ಪ್ರಮುಖ ನಗರಗಳಲ್ಲಿ ಡಮಾಸ್ಕಸ್ ಕೂಡ ಒಂದಾಯಿತು. ಸೇಂಟ್ ಪಾಲ್ ಡಮಾಸ್ಕಸಿನವರನ್ನು ಕ್ರೈಸ್ತಧರ್ಮಾನುಯಾಯಿಗಳಾಗಿ ಮಾಡಿದ್ದ. 635ರಲ್ಲಿ ಡಮಾಸ್ಕಸ್ ಸಂಪೂರ್ಣವಾಗಿ ಅರಬ್ಬರ ವಶವಾಯಿತು. ಮುಸ್ಲಿಂ ನಗರವಾಗಿ ವಿಶ್ವಖ್ಯಾತಿ ಪಡೆಯಿತು. 375ರಲ್ಲಿ ಸಾಮ್ರಾಟ 1ನೆಯ ತೀಯೊಡೋಸಿಯಸ್ ಕಟ್ಟಿಸಿದ್ದ ಕ್ರೈಸ್ತಮಂದಿರವನ್ನು ಅರಬ್ಬರು ಮಸೀದಿಯನ್ನಾಗಿ ಪರಿವರ್ತಿಸಿದರು. 661-750ರಲ್ಲಿ ಈ ನಗರ ಉಮಯ್ಯಾದ್ ಖಲೀಫರ ಚಟುವಟಿಕೆಯ ಕೇಂದ್ರವಾಗಿತ್ತು. 750ರಲ್ಲಿ ಅಬ್ಬಾಸಿದರು ಉಮಯ್ಯಾದರ ಬಲವನ್ನು ಮುರಿದರು. ಅನಂತರ ಇದರ ಒಡೆತನ ಆಗಿಂದಾಗ್ಗೆ ಬದಲಾಗುತ್ತಿತ್ತು. 9ನೆಯ ಶತಮಾನದ ನಡುಗಾಲದವರೆಗೂ ಇದು ಈಜಿಪ್ಟನ್ನಾಳುವವರ ವಶದಲ್ಲಿತ್ತು. 1676ರಲ್ಲಿ ಇದನ್ನು ಸೆಲ್ಜುಕ್ ತುರ್ಕರು ಆಕ್ರಮಿಸಿಕೊಂಡರು. 1154ರಲ್ಲಿ ನುರೆದ್ದೀನನ ವಶಕ್ಕೆ ಬಂತು. ಅನಂತರ ಅವನ ಮಗ ಸಾಲದೀನನ ಒಡೆತನದಲ್ಲಿತ್ತು. ಈತ ಅಯ್ಯೂಬಿದ್ ವಂಶದ ಸ್ಥಾಪಕ. ಈ ಕಾಲದಲ್ಲಿ ಡಮಾಸ್ಕಸ್ ಪುರೋಭಿವೃದ್ಧಿ ಹೊಂದಿತು. ಧಾರ್ಮಿಕ ಸಾಂಸ್ಕøತಿಕ ಚಟುವಟಿಕೆಗಳು ಬೆಳೆದುವು. 1260ರಲ್ಲಿ ಮಂಗೋಲರು ಇದನ್ನು ಆಕ್ರಮಿಸಿಕೊಂಡರು. 14ನೆಯ ಶತಮಾನದಲ್ಲಿ ಇದು ತೈಮೂರನ ವಶವಾಯಿತು. 1516ರ ಅನಂತರ ಆಟೊಮನ್ ತುರ್ಕರ ಅಧೀನದಲ್ಲಿತ್ತು. ಒಂದನೆಯ ಮಹಾಯುದ್ಧದ ಅಂತ್ಯದಲ್ಲಿ ಬ್ರಿಟಿಷ್‍ರ ವಶವಾಗಿತ್ತು. 1920-1941ರಲ್ಲಿ ಸಿರಿಯ, ಲೆಬನನ್‍ಗಳು ರಾಷ್ಟ್ರಗಳ ಕೂಟದ ಪ್ರಾದೇಶಕ್ಕೆ ಅನುಗುಣವಾಗಿ ಫ್ರೆಂಚರ ಅಧೀನದಲ್ಲಿದ್ದಾಗ ಡಮಾಸ್ಕಸ್ಸೂ ಅವರ ವಶದಲ್ಲಿತ್ತು. 1946ರಲ್ಲಿ ಡಮಾಸ್ಕಸ್ ಸ್ವತಂತ್ರ ಸಿರಿಯದ ರಾಜಧಾನಿಯಾಯಿತು. 1958ರಲ್ಲಿ ಸಿರಿಯ, ಈಜಿಪ್ಟ್‍ಗಳು ಒಂದಾಗಿ ಸಂಯುಕ್ತ ಅರಬ್ ಗಣರಾಜ್ಯವಾದಾಗ ಡಮಾಸ್ಕಸ್ ಸಿರಯನ್ (ಉತ್ತರ) ಪ್ರದೇಶದ ಆಡಳಿತಕೇಂದ್ರವಾಗಿತ್ತು. ಸಂಯುಕ್ತ ಗಣರಾಜ್ಯದಿಂದ ಸಿರಿಯ ಹೊರ ಬಂದಾಗ (1961) ಮತ್ತೆ ಇದು ಸಿರಿಯದ ರಾಜಧಾನಿಯಾಯಿತು.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಡಮಾಸ್ಕಸ್ ನಗರದ ನಕ್ಷೆ Archived 2006-02-08 ವೇಬ್ಯಾಕ್ ಮೆಷಿನ್ ನಲ್ಲಿ.
Find more about ಡಮಾಸ್ಕಸ್ at Wikipedia's sister projects | |
Media from Commons | |
Travel guide from Wikivoyage | |
Database entry Q3766 on Wikidata |
- Pages using duplicate arguments in template calls
- Pages with non-numeric formatnum arguments
- Short description is different from Wikidata
- Pages using infobox settlement with possible area code list
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಏಷ್ಯಾ ಖಂಡದ ರಾಜಧಾನಿ ನಗರಗಳು
- ಏಷ್ಯಾ ಖಂಡದ ನಗರಗಳು