ವಿಷಯಕ್ಕೆ ಹೋಗು

ಸರೀಸೃಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರೀಸೃಪಗಳು
Temporal range: PennsylvanianPresent, 312–0 Ma
ಸಿನಾಯ್ ಅಗಾಮಾಟೋಕೇ ಗೆಕೊಕೊಮೊಡೊ ಡ್ರ್ಯಾಗನ್ಟೂವಟಾರಕಾಳಿಂಗ ಸರ್ಪಪೂರ್ವದ ಹಸಿರು ಮಾಂಬಾಅಮೇರಿಕದ ನೆಗಳೆಗೇವಿಯಾಲಿಸ್ಸಮುದ್ರವಾಸಿ ಮೊಸಳೆಫ಼್ಲಾರಿಡಾದ ಪೆಟ್ಟಿಗೆ ಕಡಲಾಮೆಗಲಾಪಗೋಸ್ ಆಮೆಹಸಿರು ಕಡಲಾಮೆ
ಮೇಲಿನಿಂದ ಕೆಳಕ್ಕಿನ ಕ್ರಮದಲ್ಲಿ, ಸಾರಿಯನ್ ಏಕಮೂಲ ವರ್ಗದ ಅನುಸಾರ ಪಟ್ಟಿಮಾಡಲಾದ ಸರೀಸೃಪಗಳು: ಆರು ಲೆಪಿಡೊಸಾರ್‌ಗಳು ಮತ್ತು ಆರು ಆರ್ಕೆಲೊಸಾರ್‌ಗಳು.
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ಏಕಮೂಲ ವರ್ಗ: Amniota
ವರ್ಗ: ರೆಪ್ಟೀಲಿಯಾ
Laurenti, 1768
ಅಸ್ತಿತ್ವದಲ್ಲಿರುವ ಗುಂಪುಗಳು
  • ಲೆಪಿಡೊಸಾರಿಯಾ (ಲೆಪಿಡೊಸಾರ್‌ಗಳು)
    • ರಿಂಕೊಸೆಫ಼ಾಲಿಯಾ (ಟೂವಟಾರ ಮತ್ತು ಸಂಬಂಧಿಗಳು)
    • ಸ್ಕ್ವಮಾಟಾ (ಹಲ್ಲಿಗಳು, ಹಾವುಗಳು ಮತ್ತು ಹುಳು ಹಲ್ಲಿಗಳು)
  • ಆರ್ಕೆಲೊಸಾರಿಯಾ
    • ಟೆಸ್ಟುಡೈನೀಸ್ (ಕಡಲಾಮೆಗಳು)
    • ಆರ್ಕೊಸಾರಿಯಾ (ಆರ್ಕೊಸಾರ್‌ಗಳು)
      • ಕ್ರಾಕಡಿಲಿಯಾ (ಮೊಸಳೆ ಜಾತಿ ಪ್ರಾಣಿಗಳು)
      • ಡೈನೊಸಾರಿಯಾ (ಡೈನೊಸಾರ್‌ಗಳು)
        • ಏವೀಸ್ (ಪಕ್ಷಿಗಳು)

ಸರೀಸೃಪ ಅಥವಾ ಉರಗಗಳು ಪ್ರಾಣಿ ಪ್ರಪಂಚದಲ್ಲಿ ದ್ವಿಚರಿಗಳು ಮತ್ತು ಹಕ್ಕಿಗಳಿಗೂ, ಸಸ್ತನಿಗಳಿಗೂ ನಡುವಿನ ಶೀತರಕ್ತದ ಕಶೇರುಕಗಳು. ಇದು ಬೆನ್ನೆಲುಬುಳ್ಳ ಜೀವಿಗಳ ಐದು ಮುಖ್ಯ ವರ್ಗಗಳಲ್ಲೊಂದು.

ರೆಪ್ಟೀಲಿಯಾ ಎಂದು ಕರೆಯಲ್ಪಡುವ ಈ ವರ್ಗದಲ್ಲಿ ಐದು ಗಣಗಳಿವೆ. ಈ ಗಣಗಳೆಂದರೆ ಕೀಲೋನಿಯಾ, ಕ್ರೊಕೊಡೈಲಿಯಾ, ಒಫಿಡಿಯಾ, ರಿಂಕೋಸಿಫಾಲಿಯಾ ಮತ್ತು ಲೇಸರ್‌ಟೀಲಿಯಾ. ಕೀಲೋನಿಯಾದಲ್ಲಿ ಎಲ್ಲ ಆಮೆಗಳು, ಕಡಲಾಮೆಗಳು ಮತ್ತು ಕಲ್ಲಾಮೆಗಳು ಬರುತ್ತವೆ. ಕ್ರೊಕೊಡೈಲಿಯಾದಲ್ಲಿ ಮೊಸಳೆಗಳು ಬರುತ್ತವೆ. ಕೇಮ್ಯಾನ್, ಮಗ್ಗರ್, ಆ್ಯಲಿಗೇಟರ್, ಘರಿಯಾಲ್, ಇತ್ಯಾದಿ ಇಪ್ಪತ್ಮೂರು ಜಾತಿಯ ಮೊಸಳೆಗಳನ್ನು ಇಂದು ಗುರುತಿಸಲಾಗಿದೆ.

ಉರಗದ ವಿಕಾಸವಾಗಿದ್ದು ದ್ವಿಚರಿಗಳಿಂದ. ಅವು ಮೊದಲ ಬಾರಿಗೆ ನೀರನ್ನು ಬಿಟ್ಟು ಭೂಮಿಯ ಮೇಲೆ ವಾಸಿಸಿ ವಾತಾವರಣದ ಶುಷ್ಕ ಗಾಳಿಯ ಸಹಾಯದಿಂದ ಉಸಿರಾಡುವ ಶಕ್ತಿಯನ್ನು ಬೆಳೆಸಿಕೊಂಡವು. ಆದರೆ ಮೊಟ್ಟೆಗಳನ್ನಿಡಲು ಅವು ನೀರನ್ನು ಆಶ್ರಯಿಸಬೇಕಾಗಿತ್ತು. ಕೆಲವು ದ್ವಿಚರಿಗಳು ದಿಟ್ಟತನದ ಮತ್ತೊಂದು ಹೆಜ್ಜೆಯನ್ನಿಟ್ಟು ಅಜೀವಪರ್ಯಂತ ನೆಲದ ಮೇಲೆ ವಾಸಿಸುವ ಶಕ್ತಿಯನ್ನು ಪ್ರದರ್ಶಿಸಿದವು. ಇವುಗಳಿಂದ ವಿಕಸಿಸಿದ ಪ್ರಾಣಿವರ್ಗವೇ ಉರಗಗಳು.

ಸರೀಸೃಪಗಳು

ಚರಿತ್ರೆ

[ಬದಲಾಯಿಸಿ]

ಸರೀಸೃಪಗಳ ಕಾಲ ಬಹುಶಃ ೨೫ ಕೋಟಿ ವರ್ಷಗಳ ಹಿಂದೆ ಪೇಲಿಯೋಜ಼ೋಯಿಕ್ ಯುಗದ ಕೊನೆಯ ಕಲ್ಪದಲ್ಲಿ ಪ್ರಾರಂಭವಾಯಿತು. ಆರಂಭ ಸರಳ, ಆದರೆ ಮುಂದೆ ಆ ವರ್ಗದಿಂದ (ಕ್ಲಾಸ್) ಸರ್ವತೋಮುಖವಾಗಿ ವಿಕಸಿಸಿದ ಉಪವರ್ಗ, ಗಣ, ಕುಟುಂಬ ಮತ್ತು ಜಾತಿಗಳು ಅವುಗಳ ದೇಹರಚನೆಯ ವೈಶಿಷ್ಟ್ಯ. ಮಿಕ್ಕೆಲ್ಲ ಪ್ರಾಣಿಗಳಿಗಿಂತ ಭಿನ್ನವಾದ ಬೃಹದಾಕಾರದ ಇವು ಸೃಷ್ಟಿಯಲ್ಲೇ ಬಲು ಕುತೂಹಲಕಾರಿ ಘಟನೆಗಳು. ಉರಗಗಳು ಬಾಳಿ ಮೆರೆದ ಭೂಚರಿತ್ರೆಯ ಮೀಸೊಝೋಯಿಕ್ ಯುಗದಲ್ಲಿ (೨೨೫-೬೫ ದ.ಲ.ವ. ಪ್ರಾಚೀನಾವಧಿ) ಅವು ಸಕಲ ಭೂಪ್ರದೇಶವನ್ನೂ ಆಕ್ರಮಿಸಿದ್ದವು.[] ಇಷ್ಟು ಮಾತ್ರವಲ್ಲ, ನದಿಗಳು, ಸರೋವರಗಳು, ವಾಯುಮಂಡಲ ಇವೆಲ್ಲವೂ ಉರಗಗಳ ಆವಾಸ ಸ್ಥಾನಗಳಾಗಿದ್ದವು. ಕೆಲವು ಸಸ್ಯಾಹಾರಿಗಳಾದರೆ ಮತ್ತೆ ಕೆಲವು ಅತಿಕ್ರೂರಿಗಳಾದ ಮಾಂಸಾಹಾರಿಗಳು;[] ಮಾಂಸಾಹಾರಿಗಳ ಹಾವಳಿಯನ್ನು ತಡೆಯಲಾರದೆ ಆತ್ಮ ಸಂರಕ್ಷಣೆಗಾಗಿ ಚಿತ್ರವಿಚಿತ್ರವಾದ ರಕ್ಷಾಕವಚಗಳನ್ನು ಬೆಳೆಸಿಕೊಂಡ ಉರಗಗಳು ಕೆಲವಾದರೆ, ಪುಷ್ಕಳವಾಗಿ ಬೆಳೆದಿದ್ದ ಸಸ್ಯವರ್ಗಗಳನ್ನು ತಿಂದು ಕೊಬ್ಬಿ ಬೃಹದಾಕಾರವಾಗಿ ಬೆಳೆದವು ಮತ್ತೆ ಕೆಲವು; ಕೆಲವು ದ್ವಿಪಾದಿಗಳಾದರೆ ಮತ್ತೆ ಕೆಲವು ಚತುಷ್ಪಾದಿಗಳು; ಭೂಮಿಯ ಮೇಲೆ ವೇಗವಾದ ಚಲನೆಗೆ ದೇಹದ ರಚನೆಯನ್ನು ಅಳವಡಿಸಿಕೊಂಡವು ಕೆಲವಾದರೆ ಮತ್ತೆ ಕೆಲವು ನೀರಿನಲ್ಲಿ ಈಜಲು, ಗಾಳಿಯಲ್ಲಿ ಹಾರಾಡಲು ಅನುಕೂಲಿಸುವಂತೆ ದೇಹವನ್ನು ಹೊಂದಿಸಿಕೊಂಡಂಥವು. ಈ ರೀತಿ ಬಹುಶಾಖೋಪಶಾಖೆಯಾಗಿ ವಿಸ್ತರಿಸುತ್ತಿದ್ದ ಸರೀಸೃಪದ ಕಾಂಡದಿಂದಲೇ ಇಂದಿನ ಸಸ್ತನಿ ಪ್ರಾಣಿಗಳು, ಪಕ್ಷಿಗಳ ಶಾಖೆಗಳು ವಿಕಸಿಸಿವೆ.[] (ಈ ಸಸ್ತನಿ ಶಾಖೆಯ ಅಂತ್ಯದಲ್ಲಿ ನಿಂತಿರುವ ಪ್ರಾಣಿ ಎಂದರೆ ಮನುಷ್ಯ). ದೇಹ ರಚನೆಯ ವೈಶಿಷ್ಟ್ಯದೊಂದಿಗೆ ಸಂಖ್ಯಾಪ್ರಾಬಲ್ಯವೂ ಸೇರಿ ಇವು ಪ್ರಪಂಚದ ಮೂಲೆಮೂಲೆಗಳಲ್ಲೂ ವ್ಯಾಪಿಸಿ ನಿರಂಕುಶಪ್ರಭುಗಳಾಗಿ ಮೆರೆದ ಕಾಲವನ್ನು (ಭೂಚರಿತ್ರೆಯ ಮಧ್ಯ ಜೀವಕಲ್ಪ) ಉರಗಗಳ ಸುವರ್ಣಯುಗ ಎಂದು ಕರೆಯಲಾಗಿದೆ. ವಿಸ್ಮಯ ಹುಟ್ಟಿಸುವಂಥ ಬೃಹದಾಕಾರದ ಅನೇಕಾನೇಕ ಉರಗಗಳು ನಿಸರ್ಗದ ಹೊಡೆತ ಹಾಗೂ ಬದಲಾವಣೆಗಳೊಂದಿಗೆ ಹೆಜ್ಜೆಯಿಡಲಾಗದೇ ಅಳಿದುಹೋದುವು. ಅತಿಪರಾಕ್ರಮಿಗಳು ಗತವಂಶಿಗಳಾದುವು. ಈ ಭವ್ಯ ಪೂರ್ವಜರ ಸಂತತಿಗೆ ಸೇರಿದ್ದು ಇಂದಿಗೂ ಉಳಿದಿರುವ ಉರಗಗಳು ಕೇವಲ ಕೆಲವೇ ಆದರೂ ಅವು ಸಾಕಷ್ಟು ಕೂತೂಹಲಕಾರಿಗಳಾಗಿವೆ.

ಆಮ್ನಿಯೋಟ

[ಬದಲಾಯಿಸಿ]

ಆಮ್ನಿಯೋಟಾ ಎಂದರೆ ಉರಗ, ಪಕ್ಷಿ ಮತ್ತು ಸಸ್ತನಿ ಪ್ರಾಣಿಗಳ ಒಟ್ಟು ಹೆಸರು. ಈ ವರ್ಗಗಳ ಪ್ರಾಣಿಗಳ ಭ್ರೂಣಗಳನ್ನು ಆವರಿಸಿ ಆಮ್ನಿಯಾನ್ ಮತ್ತು ಆಲಂಟಾಯ್ಸ್‌ ಎಂಬ ಎರಡು ಮುಖ್ಯ ಭ್ರೂಣ ಪಟಲಗಳಿವೆ. ಮೊದಲಿನದು ಭ್ರೂಣಕ್ಕೆ ಒಂದು ಕೃತಕ ಜಲಾಶಯವನ್ನು ಒದಗಿಸುವುದು; ಎರಡನೆಯದು ಅದರ ಉಸಿರಾಟಕ್ಕೆ ನೆರವಾಗುತ್ತದೆ.[][][][] ದ್ವಿಚರಿಗಳಿಂದ ಆಮ್ನಿಯೋಟ ವಿಕಸಿಸಿತು. ಇದರ ಕಾಂಡದಿಂದ ಎರಡು ಕಾಂಡಗಳು ಮುಖ್ಯವಾಗಿ ಕವಲೊಡೆದುವು:

  1. ಥೀರಾಪ್ಸಿಡ: ಇದು ಉರಗವರ್ಗದ ಸೈನಾಪ್ಸಿಡ ಉಪವರ್ಗದ ಗಣ (ಆರ್ಡರ್). ಈ ಶಾಖೆಯಿಂದ ಸಸ್ತನಿ ಪ್ರಾಣಿಗಳ ಲಕ್ಷಣಗಳಿದ್ದ ಉರಗಗಳು ಮತ್ತು ಸಸ್ತನಿ ಪ್ರಾಣಿಗಳು ವಿಕಸಿಸಿದವು.
  2. ಸೌರಾಪ್ಸಿಡಾ: ಈ ಶಾಖೆಯಿಂದ ಉರಗಗಳು ಮತ್ತು ಪಕ್ಷಿಗಳು ರೂಪುಗೊಂಡವು.[]

ಸರೀಸೃಪಗಳ ಗುಣಲಕ್ಷಣಗಳು

[ಬದಲಾಯಿಸಿ]

ಉರಗವರ್ಗದ ಪ್ರಾಣಿಗಳಿಗೆ ಈ ಕೆಳಗಿನ ವಿಶಿಷ್ಟ ಗುಣಲಕ್ಷಣಗಳಿವೆ:

  • ಅವು ಶೀತರಕ್ತದ ಪ್ರಾಣಿಗಳು ಮತ್ತು ಹೆಚ್ಚಿನವು ಭೂವಾಸಿ ಚತುಷ್ಪಾದಿಗಳು.
  • ದೇಹದ ಹೊರಹೊದಿಕೆಯಲ್ಲಿ ರಕ್ಷಣೆ ಕೊಡುವ ಗಟ್ಟಿಯಾದ ಹುರುಪೆಗಳಿವೆ. ಇವು ಪ್ರಾಣಿಯ ಹೊರಚರ್ಮದಿಂದಾದ ರಚನೆಗಳು.
  • ಕೆಲವು ವೇಳೆ ಹುರುಪೆಗಳ ಕೆಳಗೆ ಗಟ್ಟಿಯಾದ ಮೂಳೆ ಫಲಕಗಳು ರೂಪುಗೊಂಡಿರುತ್ತವೆ.
  • ಹುರುಪೆಗಳಿಲ್ಲದಿದ್ದರೆ ಹೊರಚರ್ಮ ಗಟ್ಟಿಯಾದ ಚಿಪ್ಪುಗಳ ಹೊದಿಕೆಯಂತಿರುವುದು.
  • ಚರ್ಮಗಳಲ್ಲಿ ಗ್ರಂಥಿಗಳು ಇಲ್ಲ.
  • ಬಲವಾದ ಕಶೇರುಮಣಿಗಳು, ಚೆನ್ನಾಗಿ ಬೆಳೆದ ಎದೆಯ ಮೂಳೆ, ಕಡೆಯಪಕ್ಷ ಎರಡು ಪಕ್ಕೆಲುಬುಗಳು, ದಪ್ಪವಾದ ಭುಜಪಟ್ಟಿ ಮತ್ತು ಸೊಂಟ ಪಟ್ಟಿಗಳು ಮತ್ತು ಐದು ಬೆರಳುಗಳುಳ್ಳ ಬಲವಾದ ಎರಡು ಜೊತೆ ಕೈಕಾಲುಗಳು ಇವಿಷ್ಟರಿಂದ ಕೂಡಿದ ದೃಢರಚನೆಯ ಅಸ್ಥಿಪಂಜರವಿದೆ.
  • ರೂಪವೈವಿಧ್ಯವಿರುವ ತಲೆಬುರುಡೆ ಮೊದಲನೆಯ ಅಟ್ಲಾಸ್ ಕಶೇರುಮಣಿಗೆ ಒಂದೇ ಒಂದು ಎಲುಬಿನ ಗೋಳದಿಂದ (ಕೋಂಡೈಲ್) ಸೇರಿದೆ.[]
  • ಸಾಮಾನ್ಯವಾಗಿ ಹಲ್ಲುಗಳು ಸರಳ ಮತ್ತು ಮೊನಚಾಗಿರುತ್ತವೆ. ಅವು ಆಹಾರಾಭ್ಯಾಸಕ್ಕೆ ತಕ್ಕಂತೆ ಮಾರ್ಪಾಡಾಗಿರುತ್ತವೆ.
  • ಶ್ವಾಸಕೋಶಗಳು ಉಸಿರಾಟದ ಅಂಗಗಳು. ಕಿವಿರುಗಳ ಸುಳಿವೇ ಇಲ್ಲ. ಭ್ರೂಣಾವಸ್ಥೆಯಲ್ಲಿ ಕಿವಿರಿನ ರಂಧ್ರವಿದ್ದರೂ ಅದು ಉಸಿರಾಟದಲ್ಲಿ ನೆರವಾಗುವುದಿಲ್ಲ. ಶ್ವಾಸೋಚ್ಭ್ವಾಸ ಕ್ರಿಯೆ ಪಕ್ಕೆಲುಬುಗಳ ಚಲನೆಯಿಂದ ನಡೆಯುತ್ತದೆ.
  • ಹೃತ್ಕುಕ್ಷಿ ಅಪೂರ್ಣ ಮತ್ತು ಎರಡು ಭಾಗಗಳಾಗಿ ವಿಂಗಡಣೆಗೊಂಡಿದೆ. ಮೊಸಳೆಗಳ ಜಾತಿಯಲ್ಲಿ ಮಾತ್ರ ಇದು ಪೂರ್ಣವಾಗಿ ಎಡ ಮತ್ತು ಬಲಹೃತ್ಕುಕ್ಷಿಗಳಾಗಿ ಕಾಣುತ್ತದೆ.
  • ಮಿದುಳಿನ ಉತ್ತಮಮಸ್ತಿಷ್ಕದ ಗೋಳಗಳು ದ್ವಿಚರಿಗಳಿಗಿಂತ ಹೆಚ್ಚು ಕ್ರಿಯಾಪೂರ್ಣವಾಗಿವೆ. ಹಾವುಗಳ ಹೊರತು ಮಿಕ್ಕ ಉರಗಗಳಲ್ಲಿ ಹನ್ನೆರಡು ಜೊತೆ ಮಿದುಳಿನ ನರಗಳಿವೆ (ಕ್ರೇನಿಯಲ್ ನರ್ವ್ಸ್‌).[೧೦]
  • ಜೀರ್ಣಾಂಗದ ಕೊಳವೆ, ಶುದ್ಧೀಕರಣಾಂಗ ಮತ್ತು ಜನನೇಂದ್ರಿಯಗಳು ಒಟ್ಟುಗೂಡಿ ಕ್ಲೋಯಕ ಎಂಬ ಭಾಗವಾಗಿ ಅದೇ ಹೆಸರಿನ ರಂಧ್ರದಿಂದ ಹೊರತೆರೆಯುತ್ತವೆ.
  • ಉರಗಗಳು ಭೂಮಿಯ ಮೇಲೆ ದಪ್ಪವಾದ ಮೊಟ್ಟೆಗಳನ್ನಿಡುತ್ತವೆ. ಇವುಗಳಲ್ಲಿ ಭ್ರೂಣದ ಬೆಳೆವಣಿಗೆಗೆ ಬೇಕಾದ ತತ್ತಿಯ ಹಳದಿಭಂಡಾರ (ಯೋಕ್) ಹೆಚ್ಚು ಪ್ರಮಾಣದಲ್ಲಿರುವುದು. ಮೊಟ್ಟೆಗಳು ಸಚ್ಛಿದ್ರವಾದ ಸುಣ್ಣದ ಚಿಪ್ಪಿನಿಂದ ಸುರಕ್ಷಿತವಾಗಿರುತ್ತವೆ.
  • ಭ್ರೂಣವನ್ನು ಎರಡು ಗರ್ಭಸಂರಕ್ಷಣಾ ಪಟಲಗಳು (ಆಮ್ನಿಯಾನ್ ಮತ್ತು ಅಲಂಟಾಯ್ಸ್‌) ಆವರಿಸಿವೆ. ಅಲಂಟಾಯ್ಸ್‌ ಪಟಲ ಭ್ರೂಣದ ಉಸಿರಾಟದಲ್ಲಿ ನೆರವಾಗುವುದು.

ಉರಗಗಳ ತಲೆಬುರುಡೆಗಳ ಅಭ್ಯಾಸದಿಂದ ಈ ವರ್ಗದ ವಿಕಸನ ಹಂತಗಳನ್ನು ಅರ್ಥಮಾಡಿಕೊಳ್ಳಬಹುದು. ತಲೆಬುರುಡೆ ಎರಡು ಮುಖ್ಯ ಕೆಲಸಗಳನ್ನು ಸಾಧಿಸುತ್ತದೆ:

  1. ಜ್ಞಾನೇಂದ್ರಿಯಗಳ ರಕ್ಷಣೆ
  2. ಕೆಳದವಡೆಯ ಚಲನೆಗೆ ಸಹಾಯವಾದ ಮಾಂಸಖಂಡಗಳನ್ನು ಮತ್ತು ಬುರುಡೆಯನ್ನು ಬೆನ್ನೆಲುಬಿಗೆ ಸೇರಿಸುವ ಮಾಂಸಖಂಡಗಳನ್ನೂ ಬಂಧಿಸಿಡುವುದು.

ಮಾಂಸಖಂಡಗಳ ಕೆಲಸದ ಶ್ರಮವನ್ನು ತಡೆದುಕೊಳ್ಳಲು ತಲೆಬುರುಡೆ ಸಾಕಷ್ಟು ಬಲವಾಗಿರಬೇಕು. ಆದರೆ ಒಟ್ಟು ಭಾಗ ಮಿತಿಯಲ್ಲೂ ಇರಬೇಕು-ಬಲಿಷ್ಠ ಮತ್ತು ಹಗುರ ಗುಣಗಳ ಸಮತೋಲನ. ಬಹುಶಃ ಇವೆರಡು ಕಾರಣಗಳು ತಲೆಬುರುಡೆಯ ವಿಕಾಸಕ್ಕೆ ಪ್ರೇರಣೆ ಕೊಟ್ಟಿರಬಹುದು. ಮಿದುಳು ಚಿಕ್ಕದಾಗಿರುವುದರಿಂದ ಬುರುಡೆಯ ಗಾತ್ರ ಚಿಕ್ಕದು. ಆದರೆ ಕಪಾಲಪ್ರದೇಶದ ಮೂಳೆಗಳು ದವಡೆಗಳ ಯಶಸ್ವಿ ಚಲನೆಯನ್ನು ಉಂಟುಮಾಡುವ ಮಾಂಸಖಂಡಗಳ ಅಳವಡಿಕೆಗೆ ಸ್ಥಳಾವಕಾಶ ಕೊಟ್ಟು ಬಲಿಷ್ಠವಾಗಿರಬೇಕು; ಜೊತೆಯಲ್ಲೇ ಹಗುರವಾಗಿರಲೂಬೇಕು. ಈ ಕಾರಣದಿಂದಲೇ, ಬುರುಡೆಯ ಚಾವಣಿ ಮತ್ತು ಪಾರ್ಶ್ವಗಳ ಕೆಲವು ಮೂಳೆಗಳು ಬಲಿಷ್ಠವಾಗಿ ಜೋಡಣೆಗೊಂಡಿದ್ದರೂ ಅವುಗಳ ಮಧ್ಯೆ ಕೆಲವು ಬೃಹದ್ರಂಧ್ರಗಳು (ಟೆಂಪೊರಲ್ ಫಾಸ್ಸಾ) ಇರುವಂತೆ ಏರ್ಪಾಡಾಗಿದೆ. ಬೃಹದ್ರಂಧ್ರಗಳು ಮಾಂಸಖಂಡಗಳ ಅಳವಡಿಕೆಗೆ ಸ್ಥಳಾವಕಾಶ ಮಾಡಿಕೊಟ್ಟುವಲ್ಲದೆ ಬುರುಡೆ ಹಗುರವಾಗುವಂತೆಯೂ ಮಾಡಿದವು.

ತಲೆಬುರುಡೆಯ ಕಪಾಲಭಾಗದ ಎಲುಬುಗಳ ರಚನೆ ಮತ್ತು ಅಲ್ಲಿರುವ ಬೃಹದ್ರಂಧ್ರಗಳ ಆಧಾರದ ಮೇಲೆ ಉರಗಗಳನ್ನು ವರ್ಗೀಕರಿಸುವುದು ವಾಡಿಕೆ. ಆದಿ ಉರಗಗಳ ಕಪಾಲದ ಎಲುಬುಗಳು ಒತ್ತಾಗಿ ಜೋಡಿಸಿಕೊಂಡಿದ್ದವು. ಆಹಾರವನ್ನು ಅಗಿಯಲು ಕೆಳದವಡೆಯ ಚಲನೆ ಅನಿವಾರ್ಯವಾದಾಗ ಅದರ ಚಲನೆಗೆ ಸಹಾಯಕಾರಿಯಾದ ಮಾಂಸಖಂಡಗಳು ವಿಕಸಿಸಿದವು. ಇವುಗಳ ಸಂಕುಚನೆ ಮತ್ತು ವಿಕಸನೆಗೆ ಅನುಕೂಲವಾಗುವಂತೆ ಕಪಾಲದ ಎರಡು ಪಕ್ಕಗಳ ಎಲುಬುಗಳ ಜೋಡಣೆಯಲ್ಲಿ ಮಾರ್ಪಾಡಾಗಿ ಒಂದೊಂದು ಪಾರ್ಶ್ವದಲ್ಲೂ ಒಂದು ಅಥವಾ ಎರಡು ಬೃಹದ್ರಂಧ್ರಗಳು ಕಾಣಿಸಿಕೊಂಡವು. ಈ ವಿಕಸನವನ್ನು ಗಮನಿಸಿ ಉರಗ ವರ್ಗವನ್ನು ಈ ಕೆಳಗಿನ ಆರು ಉಪವರ್ಗಗಳಾಗಿ ವರ್ಗೀಕರಿಸಿದೆ: ಅನಾಪ್ಸಿಡ, ಸೈನಾಪ್ಸಿಡ, ಯೂರಾಪ್ಸಿಡ, ಲೆಪಿಡೋಸಾರಿಯ, ಆರ್ಕಿಯೋಸಾರಿಯ, ಪ್ಯಾರಾಪ್ಸಿಡ.[೧೧][೧೨]

ಅನಾಪ್ಸಿಡ ಉಪವರ್ಗ

[ಬದಲಾಯಿಸಿ]

ಇವು ಕಪಾಲದಲ್ಲಿ ರಂಧ್ರವಿಲ್ಲದ ಉರಗಗಳು. ಆದಿಯಲ್ಲಿ ಕಾಣಿಸಿಕೊಂಡಂಥವು. ಇವುಗಳ ಕಪಾಲದ ಎಲುಬುಗಳು ಎಲ್ಲೆಡೆಯಲ್ಲೂ ಒತ್ತಾಗಿ ಸೇರಿಕೊಂಡಿದ್ದು ದ್ವಿಚರಿಗಳ ಕಪಾಲವನ್ನು ಹೋಲುತ್ತಿದ್ದವು. ಈ ಉಪವರ್ಗದ ಒಂದು ಗಣ (ಆರ್ಡರ್) ಅಳಿದು ಹೋದ ಕಾಟಿಲೋಸಾರಿಯ. ಆದಿ ಉರಗಗಳು ಈ ಗಣದವು. ಇವು ಪರ್ಮಿಯನ್ ಕಲ್ಪದ (೨೮೦-೨೨೫ ದ.ಲ.ವ. ಪ್ರಾಚೀನ) ಆದಿ ಭಾಗದಲ್ಲಿ ಕಾಣಿಸಿಕೊಂಡು ಟ್ರಯಾಸಿಕ್ ಕಲ್ಪದ (೨೨೫-೧೯೦ ದ.ಲ.ವ. ಪ್ರಾಚೀನ) ವರೆಗೆ ಬಾಳಿದವು. ಇನ್ನೊಂದು ಗಣ ಕಿಲೋನಿಯ. ಆಮೆಗಳು ಮತ್ತು ಕಡಲಾಮೆಗಳು ಈ ಗಣದವು. ಟ್ರಯಾಸಿಕ್ ಕಲ್ಪದಲ್ಲಿ ಕಾಣಿಸಿಕೊಂಡ ಇವು ಇಂದಿನವರೆಗೂ ಬಾಳಿವೆ. ಮಿಕ್ಕಾವ ಉಪವರ್ಗದಲ್ಲೂ ಕಾಣಿಸದ ವೈಚಿತ್ರ್ಯ ಇವುಗಳ ಎಲುಬಿನ ರಚನೆಯಲ್ಲಿ ಕಾಣಿಸುತ್ತದೆ.

ಸೈನಾಪ್ಸಿಡ ಉಪವರ್ಗ

[ಬದಲಾಯಿಸಿ]

ಕಪಾಲದ ಎರಡು ಪಕ್ಕಗಳಲ್ಲೂ ಒಂದೊಂದು ಬೃಹದ್ರಂಧ್ರ ಇದೆ. ಸೈನಾಪ್ಸಿಡದಲ್ಲಿ ಎರಡು ಗುಣಗಳಿವೆ. ಪೆಲಿಕೋಸಾರಿಯ ಮತ್ತು ಥೀರಾಪ್ಸಿಡ. ಪೆಲಿಕೋಸಾರಿಯಗಳು ಕಾಟಲೋಸಾರಿಯಗಳೊಡನೆ ಬಾಳಿದವು. ಇದಕ್ಕಿಂತ ಹೆಚ್ಚು ಪರಿಷ್ಕರಿಸಿದ ಗಣ ಥೀರಾಫ್ಸಿಡ. ಇವು ಪರ್ಮಿಯನ್ ಕಲ್ಪದ ಮಧ್ಯಭಾಗದಲ್ಲಿ ಕಾಣಿಸಿಕೊಂಡು ಜೂರಾಸಿಕ್ ಕಲ್ಪದ (190-135 ದ.ಲ.ವ. ಪ್ರಾಚೀನ) ವರೆಗೆ ಬಾಳಿದುವು. ಈ ಗಣದ ಅನೇಕ ಗುಂಪುಗಳಲ್ಲಿ ಸಸ್ತನಿ ಪ್ರಾಣಿಗಳ ಕಪಾಲದ ಲಕ್ಷಣಗಳು ಮಜಲು ಮಜಲಾಗಿ ಕಾಣಿಸಿಕೊಂಡವು. ಇದರಿಂದಲೇ ಈಗಿನ ಸಸ್ತನಿಗಳ ವಂಶಜರನ್ನು ಥೀರಾಪ್ಸಿಡ ಎಂದು ಪರಿಗಣಿಸಲಾಗಿದೆ.

ಯೂರ್ಯಾಪ್ಸಿಡ ಉಪವರ್ಗ

[ಬದಲಾಯಿಸಿ]

ಬೃಹದ್ರಂಧ್ರ ಒಂದೇ, ಸ್ಥಾನ ಬೇರೆ. ಇದರಲ್ಲಿ ಹಲವಾರು ದ್ವಿಚರಿಗಳು ಸೇರಿವೆ. ಪ್ರೊಟೊರೊಸಾರಿಯ ಮತ್ತು ಸೌರಾಪ್ಟೆರಿಜಿಯ ಗಣಗಳು ಈ ಉಪವರ್ಗದವು.

ಲೆಪಿಡೋಸಾರಿಯ ಮತ್ತು ಆರ್ಕೋಸಾರಿಯ ಉಪವರ್ಗಗಳು

[ಬದಲಾಯಿಸಿ]

ಇವೆರಡೂ ಕೂಡಿದ ಗುಂಪೇ ಡೈಆಪ್ಸಿಡ. ಇದನ್ನು ಉರಗಕಾಂಡದ ಮಧ್ಯಶಾಖೆಯೆಂದೂ ಇವರ ಎರಡು ಮುಖ್ಯ ಉಪಶಾಖೆಗಳು ಲೆಪಿಡೋಸಾರಿಯ ಮತ್ತು ಆರ್ಕೋಸಾರಿಯಗಳೆಂದೂ ಪರಿಗಣಿಸಲಾಗಿದೆ. ಅನಾಪ್ಸಿಡ ಮತ್ತು ಸೈನಾಪ್ಸಿಡಗಳನ್ನು ಬಿಟ್ಟರೆ ಅನೇಕ ಉರಗಗಳ ಕಪಾಲದ ಒಂದೊಂದು ಪಕ್ಕದಲ್ಲಿಯೂ ಎರಡು ಬೃಹದ್ರಂಧ್ರಗಳಿದ್ದುವು. ಆದ್ದರಿಂದಲೇ ಡೈಆಪ್ಸಿಡ ಎಂಬ ಹೆಸರು ಬಂದಿದೆ. ಲೆಪಿಡೋಸಾರಿಯ ಉಪವರ್ಗದಲ್ಲಿ ಮೂರು ಗಣಗಳಿವೆ: ಯೂಸೊಕಿಯ, ರ್‍ಹಿಂಕೋಸಿಫಾಲಿಯ ಮತ್ತು ಸ್ಕ್ವಮಾಟ. ಮೊದಲು ರೂಪುಗೊಂಡದ್ದು ಯೂಸೊಕಿಯ ಗಣ. ಚಿಕ್ಕ ಪ್ರಾಣಿ, ನೋಡಲು ಹಲ್ಲಿಯಂತೆ, ಗುಣಲಕ್ಷಣಗಳೂ ಬಹುಶಃ ಅದರಂತೆಯೇ ಇದ್ದಿರಬಹುದು. ಟ್ರಯಾಸಿಕ್ ಮತ್ತು ಕ್ರಿಟೇಷಿಯನ್ ಕಲ್ಪಗಳಲ್ಲಿ ಮೊಸಳೆಗಳಂತೆ ತೋರುತ್ತಿದ್ದ ಪ್ರಾಣಿಗಳನ್ನೊಳಗೊಂಡಂತೆ ಹಲವಾರು ಉರಗಗಳನ್ನು ಈ ಗಣದಲ್ಲಿ ಸೇರಿಸಲಾಗಿದೆ. ಟ್ರಯಾಸಿಕ್ ಕಲ್ಪದಲ್ಲಿ ಮೈದಳೆದ ರ್‍ಹಿಂಕೋಸೆಫಾಲಿಯ ಗಣದ ಜೀವಂತ ಉಳಿಕೆಯೇ ನ್ಯೂಜಿಲೆಂಡಿನ ಟ್ವಾಟರಾ (ಸ್ಪೆನೊಡನ್). ಉಳಿದ ಎಲ್ಲ ಪ್ರಭೇದಗಳೂ ಕ್ರಿಟೇಷಿಯನ್ ಕಲ್ಪದಲ್ಲಿ ಗತಿಸಿ ಹೋದುವು. ಸ್ಕ್ವಮಾಟ ಗಣ ಲೆಪಿಡೋಸಾರಿಯ ಉಪವರ್ಗದಲ್ಲಿ ತಲೆದೋರಿದ ಅಂತಿಮ ಗಣ. ಹಲ್ಲಿ ಮತ್ತು ಹಾವುಗಳು ಇದರಲ್ಲಿ ಯಶಸ್ವಿಯಾಗಿ ಬದುಕಿ ಬೆಳೆದು ಬಾಳಿದ ಪ್ರಾಣಿಗಳು.

ಆರ್ಕಿಯೋಸಾರಿಯದ ಆದಿ ಗಣ ಥೀಕೋಡಾಂಶಿಯ. ಇದರ ಕೆಲವು ಪ್ರಭೇದಗಳ ಕಪಾಲ ರಚನೆ ಇಂದಿನ ಪಕ್ಷಿಗಳ ಕಪಾಲವನ್ನು ಹೋಲುತ್ತಿತ್ತು. ಇವು ದ್ವಿಪಾದಿಗಳ ಲಕ್ಷಣಗಳೆಡೆಗೆ ವಿಕಸಿಸುತ್ತಿದ್ದುವು. ದವಡೆಗಳಲ್ಲಿದ್ದ ಗುಣಿಗಳಲ್ಲಿ ಹಲ್ಲುಗಳು ಜೋಡಣೆಗೊಂಡಿದ್ದುವು. (ಥೀಕೋಡಾಂಟ್ ಎಂದರೆ ಗುಣಿಗಳಲ್ಲಿ ಜೋಡಣೆಗೊಂಡ ಹಲ್ಲುಗಳು ಎಂದರ್ಥ). ಆರ್ಕಿಯೋಸಾರಿಯ ಉಪವರ್ಗದ ಕ್ರಕೆಡೀಲಿಯ ಗಣಕ್ಕೆ ಮೊಸಳೆಗಳು ಮತ್ತು ನೆಗಳೆಗಳು ಸೇರಿವೆ. ಜೂರಾಸಿಕ್ ಕಲ್ಪದ ಆದಿ ಭಾಗದಲ್ಲಿ ಕಾಣಿಸಿಕೊಂಡ ಈ ಗಣ ಇಲ್ಲಿಯವರೆಗೆ ಬಾಳಿದೆ. ಭೂಮಿಯಿಂದ ನೀರಿಗೆ ಹಿಂತಿರುಗಿದ ಉರಗಗಳಲ್ಲಿ ಇದೂ ಒಂದು. ಜಲಚರಿಗಳನ್ನು ತಿಂದು ಜೀವಿಸಲು ಅನುಕೂಲವಾಗುವಂತೆ ಇದು ದೇಹವನ್ನೇನೋ ಅಳವಡಿಸಿಕೊಂಡಿತು. ಆದರೆ ಇತರ ಉರಗಗಳಿಗಿರುವಂತೆ ಶ್ವಾಸಕೋಶವೇ ಇದರ ಶ್ವಾಸಾಂಗ. ಆರ್ಕಿಯೋಸಾರಿಯದ ಮತ್ತೆರಡು ಪ್ರಮುಖ ಗಣಗಳು ಸೌರಿಶ್ಚಿಯ ಮತ್ತು ಆರ್ನಿತಿಶ್ಚಿಯ. ಸೌರಿಶ್ಚಿಯ ಗಣ ಟ್ರಯಾಸಿಕ್ ಕಲ್ಪದ ಅಂತ್ಯಭಾಗದಿಂದ ಕ್ರಿಟೇಷಿಯಸ್ ಕಲ್ಪದ ಅಂತ್ಯದವರೆಗೂ ಬಾಳಿದರೆ ಆರ್ನಿತಿಶ್ಚಿಯ ಗಣ ಜೂರಾಸಿಕ್ ಕಲ್ಪದ ಮಧ್ಯಭಾಗದಿಂದ ಕ್ರಿಟೇಷಿಯಸ್ ಕಲ್ಪದ ಅಂತ್ಯದವರೆಗೆ ಬಾಳಿತು. ಇವೆರಡು ಗಣಗಳ ಕುಟುಂಬಗಳನ್ನು ಒಂದಾಗಿ ಪರಿಗಣಿಸಿ ದೈತ್ಯೋರಗಗಳು ಅಥವಾ ಹೆಗ್ಗೌಳಿಗಳು (ಡೈನೋಸಾರ್ಸ್‌) ಎಂದು ಕರೆಯಲಾಗಿತ್ತು. ಆದರೆ ಈ ಎರಡು ಗಣಗಳು ಥಿಕೋಡಾಂಶಿಯ ಗಣದಿಂದ ಪ್ರತ್ಯೇಕವಾಗಿ ವಿಕಸಿಸಿದಂಥವು ಎಂದು ಹೇಳಲಾಗಿದೆ.

ದ್ವಿಮುಖ ಬೆಳೆವಣಿಗೆಗೆ ಅವುಗಳ ನಡುಕಟ್ಟಿನ ಅಥವಾ ಸೊಂಟಪಟ್ಟಿಯ ರಚನೆ, ಸ್ವಭಾವ ಮತ್ತು ದವಡೆಯ ರಚನೆಯಲ್ಲಿನ ಭಿನ್ನತೆ ಆಧಾರವಾಗಿದೆ. ಸೌರಿಶ್ಚಿಯ ಗಣದಲ್ಲಿ ಹಲ್ಲಿಯಲ್ಲಿರುವಂಥ ಸೊಂಟಪಟ್ಟಿ ಇದ್ದುದರಿಂದ ಉರಗಗಳನ್ನು ಹಲ್ಲಿ ನಡುಕಟ್ಟಿನ ದೈತ್ಯೋರಗಗಳು (ಲಿಜ಼ರ್ಡ್ ಹಿಪ್ಡ್‌ ಡೈನೋಸಾರ್ಸ್‌) ಎಂದೂ ಆರ್ನಿತಿಶ್ಚಿಯ ಗಣದಲ್ಲಿ ಪಕ್ಷಿಗಳ ವಿಕಸನಕ್ಕೆ ಅನುಕೂಲವಾದ ಸೊಂಟಪಟ್ಟಿ ಇದ್ದುದರಿಂದ ಅವನ್ನು ಪಕ್ಷಿಗಳ ಸೊಂಟಪಟ್ಟಿಯ ದೈತ್ಯೋರಗಗಳು ಎಂದೂ ಕರೆಯಲಾಗಿದೆ. ಕೆಲವು ಸೌರಿಶ್ಚಿಯಗಳು ಚತುಷ್ಪಾದಿಗಳಾಗಿ ಬೃಹದಾಕಾರವಾಗಿ ಬೆಳೆದು ಸಸ್ಯಾಹಾರಿಗಳಾದವು. ದ್ವಿಪಾದಿಗಳು ಮಾಂಸಾಹಾರಿಗಳಾದುವು. ಆರ್ನಿತಿಶ್ಚಿಯದ ಕುಟುಂಬಗಳು ದ್ವಿಪಾದಿಗಳಾದರೂ ಮಾಂಸಾಹಾರಿಗಳಾಗಲಿಲ್ಲ. ಆರ್ಕಿಯೋಸಾರಿಯದ ಐದನೆಯ ಗಣ ಟಿರೋಸಾರಿಯ. ಇದು ಜೂರಾಸಿಕ್ ಕಲ್ಪದ ಆದಿಭಾಗದಲ್ಲಿ ಕಾಣಿಸಿಕೊಂಡು ಕ್ರಿಟೇಷಿಯಸ್ ಕಲ್ಪದವರೆಗೂ ಬಾಳಿತು.

ಪ್ಯಾರಾಪ್ಸಿಡ ಉಪವರ್ಗ

[ಬದಲಾಯಿಸಿ]

ಈವರೆಗೆ ಬರೆದಿರುವ ಉಪವರ್ಗಗಳಿಗೆ ಸೇರಿಸಲಾಗದ ಇತರ ಉರಗ ಗಣಗಳಲ್ಲಿ ಮುಖ್ಯವಾದವು ಮೂರು: ಪ್ರೋಟೋಸಾರಿಯ, ಪ್ಲಿಸಿಯೋಸಾರಿಯ ಮತ್ತು ಇಕ್ತಿಯೋಸಾರಿಯ. ಅನಾಪ್ಸಿಡ ಉರಗಗಳಂತೆ ಕಪಾಲದ ಪ್ರತಿಯೊಂದು ಪಾರ್ಶ್ವದಲ್ಲಿ ಒಂದು ರಂಧ್ರವಿದ್ದರೂ ಆ ರಂಧ್ರದ ಎಲುಬಿನ ಆಯಕಟ್ಟುಗಳು ಬೇರೆಯಾಗಿದ್ದುವು. ಇದರಿಂದ ಈ ಮೇಲಿನ ಮೂರು ಗಣಗಳನ್ನು ಒಟ್ಟಾಗಿ ಪ್ಯಾರಾಪ್ಸಿಡ ಉರಗಗಳು ಎಂದು ಕರೆಯಲಾಗಿದೆ. ಇವು ಟ್ರಿಯಾಸಿಕ್ ಕಲ್ಪದ ಮಧ್ಯಭಾಗದಲ್ಲಿ ಕಾಣಿಸಿಕೊಂಡು ಕ್ರಿಟೇಷಿಯಸ್ ಕಲ್ಪದ ಅಂತ್ಯದವರೆಗೆ ಬಾಳಿದುವು. ಭೂಮಿಯಿಂದ ಸಮುದ್ರಕ್ಕೆ ಮರಳಿದ ಈ ಗಣಗಳ ಪ್ರಾಣಿಗಳು ತಮ್ಮ ದೇಹರಚನೆಯನ್ನು ಮತ್ಸ್ಯವರ್ಗದ ಪ್ರಾಣಿಗಳಂತೆ ರೂಪಿಸಿಕೊಂಡುವು. ಇವುಗಳಲ್ಲಿ ಹೆಚ್ಚು ಪರಿಷ್ಕರಿಸಿದ ಕುಟುಂಬಗಳು ಬಾಲದ ಸಹಾಯದಿಂದ ಚಲನೆ, ಬೆನ್ನಿನ ರೆಕ್ಕೆ ಮತ್ತು ನಾಲ್ಕು ಕಾಲುಗಳಿಂದ ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವ ಶಕ್ತಿ ಪಡೆದಿದ್ದುವು. ಇವು ಮೀನನ್ನು ಹೆಚ್ಚು ಹೋಲುತ್ತಿದ್ದವು.

ಅಳಿದ ಉರಗಗಳು

[ಬದಲಾಯಿಸಿ]

ಮಧ್ಯ ಜೀವಯುಗದಲ್ಲಿ ಮೆರೆದ ಅಸಂಖ್ಯಾತ ಉರಗಗಳಲ್ಲಿ 90% ನಶಿಸಿಹೋದುವೆಂದು ಹೇಳಬಹುದು. ಇವುಗಳಲ್ಲಿ ಬಹಳ ಮುಖ್ಯವಾದವು-ನೆಲವಾಸಿ ದೈತ್ಯೋರಗಗಳು (ಡೈನೋಸಾರ್ಸ್‌), ತಿಮಿಂಗಿಲವನ್ನು ಹೋಲುತ್ತಿದ್ದ ಜಲವಾಸಿಗಳಾದ ಮತ್ಸ್ಯೋರಗಗಳು ಮತ್ತು ವಾಯುಮಂಡಲವನ್ನು ಆಕ್ರಮಿಸಿದ್ದ ಪಕ್ಷಿಗಳನ್ನು ಹೋಲುತ್ತಿದ್ದ ಹಾರುವ ಟೀರೋಡ್ಯಾಕ್ಟೈಲ ಉರಗಗಳು. ಕಾಟಿಲೋಸಾರಿಯ ಗಣದ ಉರಗಗಳು ಅತ್ಯಂತ ಆದಿಯಲ್ಲಿ ಪ್ರಾರಂಭವಾದುವು. ಇವು ಹೋಲುತ್ತಿದ್ದುದು ಹೆಚ್ಚಾಗಿ ದ್ವಿಚರಿಗಳನ್ನು. ಉದರದ ಮೇಲಿನ ಚಲನೆಗೆ ಇವು ಮೊದಲಬಾರಿಗೆ ಪೀಠಿಕೆ ಹಾಕಿದುವು. ಇವುಗಳ ಕಪಾಲ ದ್ವಿಚರಿಗಳ ಕಪಾಲಕ್ಕಿಂತ ಹೆಚ್ಚು ಪರಿಷ್ಕಾರಗೊಂಡಿತ್ತು. ಅಲ್ಲಿ ಮೇಲ್ಛಾವಣಿಯ ಎಲುಬುಗಳು (ರೂಟ್ ಬೋನ್ಸ್‌) ಪೂರ್ಣವಾಗಿದ್ದುವು. ಈ ಪ್ರಾಣಿಗಳು ಸುಮಾರು ೧'-೭' ವರೆಗೆ ಬೆಳೆದುವು. ಸೈಮೂರಿಯ ಕುಟುಂಬ ಕಾಟಿಲೋಸಾರಿಯ ಗಣದಲ್ಲಿ ಅತ್ಯಂತ ಪುರಾತನವಾದದ್ದು. ಇದು ಬಹುಶಃ ೩೦ ಕೋಟಿ ವರ್ಷಗಳ ಹಿಂದೆ ಕಾಣಿಸಿಕೊಂಡಿತು. ಇದರ ಅನೇಕ ಪಳೆಯುಳಿಕೆಗಳು ಉತ್ತರ ಅಮೆರಿಕ, ರಷ್ಯ ಮತ್ತು ಆಫ್ರಿಕಗಳಲ್ಲಿ ಸಿಕ್ಕಿರುವುದರಿಂದ ಆ ಪ್ರದೇಶಗಳಲ್ಲಿ ಇವು ಹೇರಳವಾಗಿದ್ದುವೆಂದು ಹೇಳಬಹುದು. ಸೈಮೂರಿಯ ದ್ವಿಚರಿಗಳನ್ನು ಹೋಲುತ್ತಿತ್ತು. ಅದರ ಬಾಯಲ್ಲಿ ಮೊನಚಾದ ಹಲ್ಲುಗಳಿದ್ದುವು. ಕಾಟಿಲೋಸಾರಿಯ ಗಣದಿಂದ ಮುಂದಕ್ಕೆ ಬಹುಶಃ ಸ್ಪಷ್ಟವಾದ ಎರಡು ಕವಲುಗಳು ಕಾಣಿಸಿಕೊಂಡವು: ಕಾಪ್ಟೋರ್‍ಹೈನಸ್, ಡೈಡೆಕ್ಟೋಮಾರ್ಫ. ಮೊದಲಿನ ಕುಟುಂಬದ ಪ್ರಾಣಿಗಳಲ್ಲಿ ಮುಂದೆ ವಿಕಸಿಸಿದ ಸೈನಾಪ್ಸಿಡ ಉರಗಗಳ ಕೆಲವು ಲಕ್ಷಣಗಳಿದ್ದುವು. ಎರಡನೆಯವುಗಳಲ್ಲಿ ಡೈಆಪ್ಸಿಡ ಉರಗಗಳ ಕಡೆಗೆ ವಿಕಸನಗೊಳ್ಳುವ ಸ್ಪಷ್ಟ ಲಕ್ಷಣಗಳಿದ್ದುವು.

ಮುಂದಿನ ಐದು ಕೋಟಿ ವರ್ಷಗಳಲ್ಲಿ ವಿವಿಧ ಜಾತಿಯ ಉರಗಗಳು ವಿಕಸಿಸಿದುವು. ಸೈನಾಪ್ಸಿಡ ಉರಗಗಳ ಆದಿಗಣ ಪೆಲಿಕೋಸಾರಿಯ. ಇದು ಪರ್ಮಿಯನ್ ಕಲ್ಪದ ಆದಿಭಾಗದಲ್ಲಿ ಕಾಣಿಸಿಕೊಂಡಿತು (೨೮೩ ದ.ಲ.ವ. ಪ್ರಾಚೀನ ಕಾಲ). ಇದರಲ್ಲಿ ಡೈಮಿಟ್ರಿಡಾನ್ ಎಂಬ ಜಾತಿ (ಜೀನಸ್) ಬಹಳ ಮುಖ್ಯವಾದದ್ದು. ಇದಕ್ಕೆ ಎದೆಗೂಡಿತ್ತು. ಪ್ರಾಣಿಯ ಉದ್ದ ೧೦'-೧೨'. ಇದರ ಬೆನ್ನೆಲುಬಿನ ಮುಳ್ಳುಗಳು ಬಹಳ ಉದ್ದವಾಗಿದ್ದುವು. ಅವನ್ನು ಚರ್ಮ ಆವರಿಸಿ ಅದು ನೋಡಲು ಹಡಗಿನ ಪಟದಂತೆ ಕಾಣಿಸುತ್ತಿತ್ತು. ಪ್ರಾಣಿಯ ಕಾಲುಗಳು ಮಾತ್ರ ಚಿಕ್ಕವಾಗಿಯೇ ಇದ್ದುವು. ಆನಂತರ ವಿಕಸಿಸಿದ ಪೆಲಿಕೋಸಾರಿಯ ಗಣದ ಪ್ರಾಣಿಗಳ ಹಲ್ಲಿನ ರಚನೆಯಲ್ಲಿ ಕ್ರಮೇಣ ರೂಪಭೇದ ಕಂಡುಬರಲು ಪ್ರಾರಂಭಿಸಿತು.

ಸೈನಾಪ್ಸಿಡ ಉರಗಗಳ ಎರಡನೆಯ ಗಣ ಪರ್ಮಿಯನ್ ಕಲ್ಪದ ಮಧ್ಯಭಾಗದಲ್ಲಿ ಕಾಣಿಸಿಕೊಂಡ ಥೀರೋಡಾಂಶಿಯ ಅಥವಾ ಥೀರಾಪ್ಸಿಡ. ಹೆಚ್ಚು ಪರಿಷ್ಕರಿಸಿದ ಈ ಗಣದ ಉರಗಗಳು ಇಂದಿನ ಸಸ್ತನಿಗಳ ಪೂರ್ವಜರು ಎಂದು ನಿಸ್ಸಂದೇಹವಾಗಿ ಹೇಳಬಹುದು. ಅವುಗಳ ಪಳೆಯುಳಿಕೆಗಳು ಆಫ್ರಿಕ,ದಕ್ಷಿಣ ಅಮೆರಿಕ ಮತ್ತು ರಷ್ಯಗಳಲ್ಲಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಅನೇಕವು ಮಾಂಸಾಹಾರಿ ಅಥವಾ ಕೀಟಾಹಾರಿಗಳಾಗಿದ್ದುವು. ಕೆಲವು ಸಸ್ಯಾಹಾರಿಗಳು ಇದ್ದಿರಬಹುದು. ಒಂದಡಿ ಉದ್ದದ ಜಾತಿಯಿಂದ ಇಂದಿನ ಸಿಂಹದ ಗಾತ್ರದವರೆಗೆ ಬೆಳೆದ ಅನೇಕ ಜಾತಿಗಳಿದ್ದವು. ಹಲ್ಲುಗಳಲ್ಲಿ ಬಾಚೀಹಲ್ಲು, ಕೋರೆಹಲ್ಲು ಮತ್ತು ದವಡೆಹಲ್ಲುಗಳೆಂಬ ರೂಪಭೇದಗಳು ಕಾಣಿಸಿಕೊಂಡುವು. ಕ್ರಮೇಣ ಕಪಾಲದ ಎಲುಬುಗಳ ಸಂಖ್ಯೆ ಕಡಿಮೆಯಾಗುತ್ತ ಸಸ್ತನಿ ಕಪಾಲ ರಚನೆಯಂತೆ ರೂಪುಗೊಂಡುವು. ಭುಜಪಟ್ಟಿ ಮತ್ತು ಸೊಂಟಪಟ್ಟಿಗಳು ರಚನೆಯಲ್ಲಿ ಸಸ್ತನಿಗಳಿಗಿರುವಂತೆಯೇ ರೂಪುಗೊಂಡುವು. ಸುಮಾರು ಟ್ರಯಾಸಿಕ್ ಕಲ್ಪದ ಅಂತ್ಯಭಾಗದ ವೇಳೆಗೆ ಸಸ್ತನಿಗಳನ್ನು ಹೋಲುವ ಉರಗಗಳು ಕಾಣಸಿಕೊಂಡವು. ಇವು ಯಾವುವೂ ಇಂದು ಉಳಿದಿಲ್ಲ.

ಕಾಟಲೋಸಾರಿಯ ಗಣದ ಪ್ರತ್ಯೇಕವಾದ ಕವಲಿನಿಂದ ವಿಕಸಿಸಿದ ಉರಗಗಳ ಚರಿತ್ರೆ ಬೇರೆಯೇ ಇದೆ. ಅವು ಡೈಆಪ್ಸಿಡ ಉರಗಗಳು. ಇವುಗಳಲ್ಲಿ ಥೀಕೋಡಾಂಶಿಯ ಗಣದ ಉರಗಗಳು ಬಹಳ ಮುಖ್ಯವಾದವು. ಇವು ಮಾಂಸಾಹಾರಿಗಳು. ಸಾಲ್ಟೋಪಸ್ ಎಂಬ ಜೀವಿ ಈ ಗಣದ ಒಂದು ವಿಶಿಷ್ಟ ಮಾದರಿ. ಬಹಳ ಬಲಿಷ್ಟವೂ ಉದ್ದವೂ ಆಗಿದ್ದ ಹಿಂಗಾಲುಗಳು ಓಡಲು ಸಹಾಯಕವಾಗಿದ್ದರೆ ಮೊಟಕಾದ ಮುಂಗಾಲುಗಳು ಆಹಾರವನ್ನು ಬಾಚಿಕೊಳ್ಳಲೂ ಹಿಡಿದುಕೊಳ್ಳಲೂ ಕೈಗಳಂತೆ ಸಹಾಯಕವಾಗಿದ್ದವು. ಇದರ ದೇಹ ಹಲ್ಲಿಯ ದೇಹದಂತೆ. ತಲೆ ಮೊಸಳೆಯ ತಲೆಯಂತೆ. ಉದ್ದವಾದ ಬಾಲವೂ ಇತ್ತು. ಇಂಥ ಪ್ರಾಣಿಗಳೇ ಮುಂದೆ ಕಾಣಿಸಿಕೊಂಡ ದೈತ್ಯೋರಗ ಮತ್ತು ವಾಯುಮಂಡಲದ ಟಿರೋಡ್ಯಾಕ್ಟೈಲ್ ಉರಗಗಳ ಪೂರ್ವಜರಾಗಿರಬೇಕು. ಥೀಕೊಡಾಂಶಿಯದ ಒಂದು ಉಪಗಣ (ಸಬ್ ಆರ್ಡರ್) ಫೈಟೋಸಾರ್ಸ್‌. ಇವು ಪೂರ್ವಜರಂತೆ ನಾಲ್ಕು ಕಾಲುಗಳ ಮೇಲೆ ನಡೆದುವು. ಇಂದಿನ ಮೊಸಳೆಗಳನ್ನು ಇವು ಹೋಲುತ್ತಿದ್ದುವು. ಉದ್ದ ೨೫'. ಫೈಟೋಸಾರ್ಸ್‌ ನೀರಿನಲ್ಲಿ ಅತ್ಯಂತ ಕ್ರೂರ ಪ್ರಾಣಿಗಳು. ಮೊಸಳೆಗಳಲ್ಲಿ ನಾಸಿಕರಂಧ್ರಗಳು ಮುಸುಡಿಯ ತುದಿಯಲ್ಲಿದ್ದರೆ ಫೈಟೋಸಾರ್ಸ್‌ಗಳಲ್ಲಿ ನಾಸಿಕರಂಧ್ರಗಳು ತಲೆಯ ಮೇಲ್ಭಾಗದಲ್ಲಿದ್ದುವು.

ಥೀಕೋಡಾಂಟ್ ಗಣದಿಂದ ಎರಡು ಸ್ಪಷ್ಟವಾದ ಶಾಖೆಗಳು ಉದ್ಭವಿಸಿದುವು. ಆ ಶಾಖೆಗಳ ವಿಂಗಡಣೆಗೆ ಮುಖ್ಯ ಆಧಾರವೆಂದರೆ ಅವುಗಲ ಸೊಂಟಪಟ್ಟಿಯ ರಚನೆ ಮತ್ತು ವ್ಯತ್ಯಾಸ. ಒಂದು ಶಾಖೆ ಹಲ್ಲಿಗಳ ಸೊಂಟಪಟ್ಟಿಯುಳ್ಳ ಸೌರಿಶ್ಚಿಯ ಗಣ ಮತ್ತೊಂದು ಶಾಖೆ ಪಕ್ಷಿಗಳ ಸೊಂಟಪಟ್ಟಿಯುಳ್ಳ ಆರ್ನಿತಿಶ್ಚಿಯ ಗಣ. ಈ ಎರಡು ಗಣದ ಜೀವಿಗಳನ್ನೂ ಒಟ್ಟಾಗಿ ಡೈನೋಸಾರಿಯ ಎಂಬ ಗಣಕ್ಕೆ ಜೋಡಿಸಿ ಅವನ್ನು ಡೈನೋಸಾರ್ಸ್‌ ಎಂದು ಕರೆಯಲಾಗಿತ್ತು. ಆದರೆ ಆ ಎರಡು ಶಾಖೆಗಳ ಜೀವಿಗಳ ಕಪಾಲ ಮತ್ತು ಸೊಂಟಪಟ್ಟಿಯ ರಚನೆಗಳಲ್ಲಿ ವ್ಯತ್ಯಾಸವಿದ್ದುವು.

ಡೈನೊಸಾರುಗಳು

[ಬದಲಾಯಿಸಿ]

ಇವನ್ನು ಸಾಮಾನ್ಯವಾಗಿ ನಾಲ್ಕು ಉಪಗಣಗಳಾಗಿ ವಿಂಗಡಿಸಬಹುದು:

  1. ಮಾಂಸಾಹಾರಿ ದ್ವಿಪಾದಿ ಡೈನೊಸಾರುಗಳು ಅಥವಾ ಥೀರೊಪೋಡ.
  2. ಬೃಹದಾಕಾರದ ಚತುಷ್ಪಾದಿ ದೈತ್ಯೋರಗಗಳು ಅಥವಾ ಸೌರೊಪೊಡ.
  3. ಬೃಹದಾಕಾರದ ಸಸ್ಯಾಹಾರಿ ಚತುಷ್ಪಾದಿ ದೈತ್ಯೋರಗಗಳು ಅಥವಾ ಆರ್ನಿತೋಪೊಡ.
  4. ಕವಚಧಾರಿಯಾದ ದೈತ್ಯೋರಗಗಳು.

ಥೀರೊಪೊಡ ಮತ್ತು ಸೌರೊಪೊಡಗಳನ್ನು ಸೌರಿಶ್ಚಿಯ ಗಣಕ್ಕೆ (ಆರ್ಡರ್) ಸೇರಿಸಿದೆ. ಮಿಕ್ಕ ಎರಡು ಬಗೆಗಳನ್ನು ಆರ್ನಿತಿಶ್ಚಿಯ ಗಣಕ್ಕೆ ಸೇರಿಸಿದೆ. ಇವೆರಡೂ ದ್ವಿಪಾದಿಗಳು. ಆದರೆ ಮಾಂಸಾಹಾರಿ ಥೀರೊಪೊಡಗಳಿಗೂ ಮತ್ತು ಸಸ್ಯಾಹಾರಿ ಆರ್ನಿತೋಪೊಡಗಳಿಗೂ ಯಾವ ಹತ್ತಿರದ ಸಂಬಂಧವೂ ಇರುವುದಿಲ್ಲ. ಅವು ಎರಡು ನಿರ್ದಿಷ್ಟ ಗಣಗಳಿಗೆ ಸೇರಿವೆ.

ಎಷ್ಟು ಜಾತಿಯ ದೈತ್ಯೋರಗಗಳಿದ್ದುವೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದುವರೆಗೆ ದೊರೆತಿರುವ ಪಳೆಯುಳಿಕೆಗಳು ನೂರಾರು ಬಗೆಯವು. ಅವುಗಳ ಸಂಖ್ಯೆ ಬಹುಶಃ 5,000 ಜಾತಿಗಳಿಗೂ ಹೆಚ್ಚು ಇತ್ತೆಂದು ಹೇಳಬಹುದು. ಪಳೆಯುಳಿಕೆಗಳು, ಇಂದಿನ ಸರೀಸೃಪಗಳ ರಚನೆ ಮತ್ತು ಸ್ವಭಾವ ಇವುಗಳ ಆಧಾರದ ಮೇಲೆ ದೈತ್ಯೋರಗಗಳ ವಿಷಯವಾಗಿ ಊಹಿಸಬಹುದು. ವಸ್ತುಸಂಗ್ರಹಾಲಯಗಳ ಕಲಾಕಾರರು ದೈತ್ಯೋರಗಗಳ ಮಾದರಿಗಳನ್ನು ವೈಜ್ಞಾನಿಕ ಸಂಶೋಧನೆಗಳ ಮೇಲೆ ಆಧರಿಸಿ ರಚಿಸಿದ್ದಾರೆ. ಪ್ರಾರಂಭದಲ್ಲಿ ಕಾಣಿಸಿಕೊಂಡ ದೈತ್ಯೋರಗಗಳು 2'-3'ಗಳಷ್ಟು ಚಿಕ್ಕದಾಗಿದ್ದರೂ ಅವು ದ್ವಿಪಾದಿಗಳು. ಅವು ಅತಿವೇಗವಾಗಿ ಚಲಿಸಿ ಇತರ ಸಣ್ಣ ಸಣ್ಣ ಉರಗಗಳನ್ನು ಬೇಟೆಯಾಡಿ ತಿನ್ನುತ್ತಿದ್ದವು. ಜೀವನ ಸಂಗ್ರಾಮದಲ್ಲಿ ಗೆದ್ದ ದೈತ್ಯೋರಗಗಳು ಸರ್ವತೋಮುಖವಾಗಿ ವಿಕಸಿಸಲು ಪ್ರಾರಂಭಿಸಿದುವು.

ಸೌರಿಶ್ಚಿಯ ಗಣದ ದೈತ್ಯೋರಗಗಳು

[ಬದಲಾಯಿಸಿ]

ಈ ಗಣದ ಎರಡು ಉಪಗಣಗಳಲ್ಲಿ ಒಂದು ದ್ವಿಪಾದಿ ಮಾಂಸಾಹಾರಿ ಥೀರೊಪೊಡಗಳು. ಮತ್ತೊಂದು ಸಸ್ಯಾಹಾರಿ ಸೌರೊಪೊಡಗಳು. ಮೊದಲಿನವು ಆದಿ ಅಥವಾ ಪುರಾತನವಾದ ಡೈನೊಸಾರುಗಳೆಂದು ಪ್ರಸಿದ್ಧವಾಗಿವೆ. ಇವು ತಮ್ಮ ಪೂರ್ವಜರಂತೆ ದ್ವಿಪಾದಿಗಳಾಗಿ ಮಾಂಸಾಹಾರಿಗಳಾಗಿದ್ದುವು. ಇವುಗಳಲ್ಲಿ ಅಲ್ಲೋಸಾರಸ್ ಜಾತಿ (ಜೀನಸ್) ಮತ್ತು ಟೈರಾನೊಸಾರಸ್ ಕುಲಗಳು ಬಹಳ ಸಮೃದ್ಧಿಯಾಗಿ ಬೆಳೆದುವು. ಅವೆಲ್ಲವೂ ರಾಕ್ಷಸ ಪ್ರವೃತ್ತಿಯ ಅತಿ ಬಲಿಷ್ಠವಾದ ಮಾಂಸಾಹಾರಿ ದೈತ್ಯೋರಗಗಳು. ಇತರ ಸರೀಸೃಪಗಳಿಗೆ ಇವು ಅತಿ ಉಪದ್ರವಕಾರಿಗಳಾಗಿದ್ದುವು. ಅಲ್ಲೋಸಾರಸ್ ಕುಲದ ಪ್ರಾಣಿಗಳ ಉದ್ದ 30'-50'. ಅವಕ್ಕೆ ಘನ ಮತ್ತು ತೂಕವಾದ ಮೂಳೆಗಳಿದ್ದುದರಿಂದ ಒಟ್ಟು ತೂಕ ಹಲವಾರು ಟನ್ನಿನಷ್ಟೇ ಇತ್ತು. ಈ ಗಾತ್ರಕ್ಕೆ ಹೋಲಿಸುವಾಗ ಅದರ ತಲೆ ಸ್ವಲ್ಪ ಚಿಕ್ಕದೆನಿಸಿದರೂ ವಾಸ್ತವವಾಗಿ ಅದು ಇತರ ಉರಗಗಳ ತಲೆಗಿಂತ ದೊಡ್ಡದಾಗಿತ್ತು. ಬಲವಾದ ದವಡೆ, ಉದ್ದ ಮತ್ತು ಮೊನಚಾದ ಹಲ್ಲುಗಳು, ಕೈಯ ಮೊದಲ ಮೂರು ಬೆರಳುಗಳಲ್ಲಿ ಅಗಲ ಮತ್ತು ಚೂಪು ನಖಗಳು, ಸ್ಥೂಲ ಶರೀರವನ್ನು ಹೊರಲು ಬಲಿಷ್ಠವಾದ ದಪ್ಪಕಾಲುಗಳು-ಇಷ್ಟು ಈ ಪ್ರಾಣಿಯ ವೈಶಿಷ್ಟ್ಯ. ಇವು ದೈತ್ಯೋರಗಗಳನ್ನು ನಿರ್ಲಕ್ಷ್ಯದಿಂದ ಕೊಂದು ತಿನ್ನುತ್ತಿದ್ದುವು. ಇದುವರೆಗೆ ಜೀವಿಸಿದ ಮಾಂಸಾಹಾರಿಗಳಲ್ಲೆಲ್ಲ ಅತ್ಯಂತ ಭೀಕರ ಮತ್ತು ಬಲಿಷ್ಠ ಪ್ರಾಣಿಯೆಂದರೆ ಮುಂದೆ ಕೆಲವು ಕೋಟಿ ವರ್ಷಗಳ ತರುವಾಯ ಕಾಣಿಸಿಕೊಂಡ ಟೈರಾನೊಸಾರ್ ಅಥವಾ ಕ್ರೂರೋರಗ. ಹಲ್ಲಿಗಳ ನಿರಂಕುಶ ಪ್ರಭು ಎಂದು ಈ ಶಬ್ದದ ಅರ್ಥ. ಇದು ಅಲ್ಲೋಸಾರನ್ನು ಹೋಲುತ್ತಿತ್ತು. ಇದರ ಉದ್ದ ತಲೆಯಿಂದ ಬಾಲದವರೆಗೆ 50'. ತೂಕ 8-10 ಟನ್. ಇದು ನಿಂತಾಗ 18'-20' ಎತ್ತರವಾಗಿತ್ತು. ದೈತ್ಯೋರಗಗಳಿಗೂ ಇದು ಮೃತ್ಯುಪ್ರಾಯವಾಗಿತ್ತು. ಇಂದಿನ ಉಷ್ಟ್ರಪಕ್ಷಿಯನ್ನು ಹೋಲುವ ದೈತ್ಯೋರಗಗಳೂ ಕೂಡ ಥೀರೊಪೊಡ ಉಪಗಣಕ್ಕೆ ಸೇರಿದವು. ಅವುಗಳಲ್ಲಿ ಓವಿರಾಪ್ಟರ್ ಎಂಬ ಜೀವಿ ಸಾಧುಪ್ರಾಣಿಯಾಗಿತ್ತು. ಅದು ಇತರ ಉರಗಗಳ ಮೊಟ್ಟೆಗಳನ್ನು ಕದ್ದು ತಿನ್ನುತ್ತಿದ್ದರಿಂದ ಅದಕ್ಕೆ ಮೊಟ್ಟೆಕಳ್ಳ (ಎಗ್ ಸ್ಟೀಲರ್) ಎಂಬ ಹೆಸರು ಇತ್ತು.

ಸೌರೊಪೊಡ ಉಪಗಣದ ದೈತ್ಯೋರಗಗಳು ಭೂತಾಕಾರವಾಗಿ ಬೆಳೆದುವು. ಇವುಗಳಲ್ಲಿ ಮುಖ್ಯವಾದ ಜಾತಿಗಳು (ಜಿನಸ್) ಬ್ರಾಂಟೋಸಾರಸ್, ಬ್ರಾಕಿಯೋಸಾರಸ್ ಮತ್ತು ಡಿಪ್ಲೋಡೋಕಸ್, ಅವೆಲ್ಲ ಸಸ್ಯಾಹಾರಿಗಳು. ಬ್ರಾಂಟೋಸಾರಸ್ ಇವುಗಳಲ್ಲಿ ಬಹಳ ಮುಖ್ಯವಾದದ್ದು. ಹೆಸರಿನ ಅರ್ಥ ಗುಡುಗು ಹಲ್ಲಿ. ಇದರ ಉದ್ದ ತಲೆಯಿಂದ ಬಾಲದವರೆಗೆ 70'-80'. ಬಾಲದಷ್ಟೇ ಉದ್ದವಾದ ಬಳುಕುವ ಕತ್ತು ಇದಕ್ಕಿತ್ತು. ಸುಮಾರು 60,000 ಪೌಂಡ್ ತೂಕದ ಈ ಪ್ರಾಣಿ ಬಹುಶಃ ಆರು ಆನೆಗಳ ಗಾತ್ರಕ್ಕೆ ಸಮವಾಗಿತ್ತು. ಆದರೆ ಅತಿ ಚಿಕ್ಕದಾದ ತಲೆ, ನಿರ್ಬಲವಾದ ದವಡೆ ಮತ್ತು ಹಲ್ಲುಗಳು ಅದರ ಭೂತಾಕೃತಿಗೆ ಸ್ವಲ್ಪವೂ ತಾಳೆಯಾಗುತ್ತಿರಲಿಲ್ಲ. ನೀರಿನಲ್ಲಿನ ಮೃದು ಸಸ್ಯಗಳನ್ನು ತಿನ್ನಲು ಮಾತ್ರ ಆ ಹಲ್ಲುಗಳು ಸಹಕಾರಿಯಾಗಿದ್ದುವು. ಮಾಂಸಾಹಾರಿಗಳಿಂದ ತಪ್ಪಿಸಿಕೊಳ್ಳಲು ಇವು ನೀರಿಗೆ ಹೋಗುತ್ತಿದ್ದಿರಬಹುದು. ಇವುಗಳ ಅವಶೇಷಗಳು ಉತ್ತರ ಅಮೆರಿಕದಲ್ಲಿ ಸಿಕ್ಕಿವೆ. ಅಮೆರಿಕದ ಪಳೆಯುಳಿಕೆಗಳ ತಜ್ಞನಾದ ಆರ್.ಬಿ.ಬರ್ಡ್ ಮತ್ತು ಆತನ ವಿದ್ಯಾರ್ಥಿಗಳು ಸೌರಾಪೊಡದ ಕಾಲಿನ ಗುರುತುಗಳಿರುವ ಶಿಲೆಗಳನ್ನು ಕಂಡುಹಿಡಿದರು. ಅದೇ ಸ್ಥಳದಲ್ಲಿ ಮಾಂಸಾಹಾರಿ ಥೀರೊಪೊಡಗಳ ಮೂರು ಬೆರಳಿನ ಕಾಲುಗುರುತುಗಳುಳ್ಳ ಕಲ್ಲುಗಳೂ ದೊರೆತುವು. ಇದರಿಂದ ಮಾಂಸಾಹಾರಿ ಟೈರಾನೋಸಾರುಗಳು ಈ ಸಸ್ಯಾಹಾರಿಗಳನ್ನು ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತಿದ್ದಿರಬೇಕೆಂಬ ತೀರ್ಮಾನಕ್ಕೆ ಅವರು ಬಂದರು; ದೈತ್ಯೋರಗಗಳಲ್ಲೆಲ್ಲ ಬ್ರಾಕಿಯೋಸಾರಸ್ ಅತಿ ದೊಡ್ಡದು ಮತ್ತು ತೂಕವಾದದ್ದು. ಇದರ ತೂಕ ಸುಮಾರು ಒಂದು ಲಕ್ಷ ಪೌಂಡ್ ಇದ್ದಿರಬಹುದು. ಮಾಂಸಾಹಾರಿಗಳಿಂದ ತಪ್ಪಿಸಿಕೊಳ್ಳುವುದಿರಲಿ, ತಮ್ಮ ದೇಹವನ್ನು ಭೂಮಿಯ ಮೇಲೆ ಎಳೆಯುವುದೂ ಇವುಗಳಿಗೆ ಪ್ರಯಾಸಕರ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ತಮ್ಮ ಜೀವಮಾನದ ಹೆಚ್ಚುಭಾಗವನ್ನು ಇವು ನೀರಿನಲ್ಲೇ ಕಳೆಯುತ್ತಿದ್ದುವು. ಆಳವಾದ ನೀರಿಗೆ ಇಳಿದರೂ ಉದ್ದವಾದ ಮುಂಗಾಲುಗಳ ಮತ್ತು ಕತ್ತಿನ ನೆರವಿನಿಂದ ತಮ್ಮ ತಲೆಯನ್ನು ನೀರಿನ ಮೇಲೆ ಎತ್ತಿಟ್ಟುಕೊಳ್ಳುತ್ತಿದ್ದುವು. ತಲೆಯ ಮೇಲ್ಭಾಗದಲ್ಲಿ ಒಂದು ಗುಮ್ಮಟದಂಥ ಪ್ರದೇಶವಿತ್ತು. ಅದರಲ್ಲಿ ನಾಸಿಕ ರಂಧ್ರಗಳಿದ್ದುವು. ನೀರಿನಲ್ಲಿ ಅಡಗಿದ್ದರೂ ರಂಧ್ರಗಳ ನೆರವಿನಿಂದ ಉಸಿರಾಡಲು ಸಾಧ್ಯವಾಗುತ್ತಿತ್ತು. 87½' ಉದ್ದವಿದ್ದ ಡಿಪ್ಲೋಡೋಕಸುಗಳು ತಮ್ಮ ಇತರ ಸಂಬಂಧಿಗಳಿಗಿಂತ ಕೃಶ ಮತ್ತು ಹಗರುವಾಗಿದ್ದವು. ಈ ಪ್ರಾಣಿಯ ಮಿದುಳು ಬಲು ಕಿರಿದು. ಅದರ ಸೊಂಟಪಟ್ಟಿಯ ಭಾಗದಲ್ಲಿ ಕಾಲುಗಳಿಗೆ ಹೋಗುವ ಮಿದುಳುಬಳ್ಳಿಯ ನರಗಳು ಒಟ್ಟುಗೂಡಿ ಆ ಪ್ರಾಣಿಯ ಮಿದುಳಿಗಿಂತ ಅನೇಕಪಾಲು ದೊಡ್ಡವಾದ ನರಗಳ ವಸ್ತುವನ್ನು ನಿರ್ಮಿಸಿದ್ದುವು. ಇದನ್ನು ಎರಡನೆಯ ಮಿದುಳು ಎಂದು ಕರೆಯಬಹುದು. ಇದಕ್ಕೆ ಜ್ಞಾನವಾಹಕ ಗ್ರಹಣಶಕ್ತಿ (ಸೆನ್ಸರಿ ಪರ್ಸೆಪ್ಷನ್) ಇರದಿದ್ದರೂ ಬಹುಶಃ ಇದು ಸ್ಥೂಲವಾದ ಹಿಂಗಾಲುಗಳ ಚಲನೆಗೆ ಸಹಾಯಕವಾಗಿದ್ದಿರಬಹುದು. ಸೌರೊಪೊಡ ದೈತ್ಯೋರಗಗಳ ಅಸ್ಥಿಪಂಜರದ ರಚನೆಯನ್ನು ಪ್ರಕೃತಿಯ ಒಂದು ಅದ್ಭುತ ವಿಶ್ವಕರ್ಮಾಕೃತಿ (ವಾಸ್ತುಶಿಲ್ಪ) ಎಂದು ಪರಿಗಣಿಸಲಾಗಿದೆ. ಇಷ್ಟಾದರೂ ನೀರಿನಲ್ಲಿ ಆಸರೆ ಪಡೆಯದಿದ್ದರೆ ಇವು ಅಲ್ಲೋಸಾರ್ ಮತ್ತು ಟೈರಾನೋಸಾರುಗಳ ಕ್ರೌರ್ಯಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದುವು. ಕೋಟ್ಯಂತರ ವರ್ಷಗಳ ಅನಂತರ ಭೂಮಿಯ ಮೇಲಿನ ನೀರು ಬತ್ತುತ್ತ ಬಂದಂತೆ ಇವುಗಳ ಜೀವನ ಕಷ್ಟವಾಗುತ್ತ ಬಂದು ಅವು ಭೂಮಿಯ ಮೇಲೆ ಜೀವಿಸಲಾರದೆ ಹೋದುವು.

ಪಕ್ಷಿಸೊಂಟಪಟ್ಟಿಯ ಆರ್ನಿತಿಶ್ಚಿಯ ಗಣದ ದೈತ್ಯೋರಗಗಳು

[ಬದಲಾಯಿಸಿ]

ಸ್ಟೀಗೋಸಾರಸ್ ಆರ್ನಿತಿಶ್ಚಿಯ ಗಣದ ಉಪಗಣ. ಇದು ಸಸ್ಯಾಹಾರಿ ಮತ್ತು ಚತುಷ್ಪಾದಿ. ಬೆನ್ನಿನ ಮೇಲೆ ತಲೆಯಿಂದ ಬಾಲದವರೆಗೆ ಹಾಳೆಹಾಳೆಯಾಗಿ ಎದ್ದುನಿಂತ ಒಂದು ಸಾಲು ಚಿಪ್ಪುಗಳು ಮತ್ತು ಬಾಲದಮೇಲೆ ಇದ್ದ ನಾಲ್ಕು ದೊಡ್ಡ ಸಲಾಕಿಗಳಂಥ ಮುಳ್ಳುಗಳೂ ಆತ್ಮಸಂರಕ್ಷಣೆಯ ಸಾಧನವಾಗಿದ್ದವು. ಆಂಕೈಲೋಸಾರಸಿನ 20' ಉದ್ದದ ದೇಹವನ್ನು ಸಂಪೂರ್ಣವಾಗಿ ರಕ್ಷಣಾಕವಚಗಳು ಮುಚ್ಚಿದ್ದುವು. ಮುಳ್ಳುಗಳಿಂದ ಕೂಡಿದ ಬಲಿಷ್ಠವಾದ ಬಾಲ ಅದರ ಒಂದು ಪ್ರಬಲ ಆಯುಧವಾಗಿತ್ತು. ಕಾಂಪ್ಟೋಸಾರಸ್ ತಮ್ಮ ಪೂರ್ವಜರಾದ ಥೀಕೋಡಾಂಟುಗಳಂತೆ ದ್ವಿಪಾದಿಗಳು. ಇವು ಅನಂತರ ಕಾಣಿಸಿಕೊಂಡ ಬಾತು ಕೊಕ್ಕಿನ ಮೂತಿಯ (ಡಕ್-ಬಿಲ್ಡ್‌ ಡೈನೋಸಾರ್ಸ್‌) ದೈತ್ಯೋರಗಗಳ ಪೂರ್ವಜಗಳು. 40' ಉದ್ದದ ಅನಾಟೋಸಾರಸ್ ಇಂಥ ಒಂದು ಬಾತುಕೊಕ್ಕಿನ ದೈತ್ಯೋರಗ. ಅದರ ಮುಸುಡು ಬಾತುಕೋಳಿಯ ಕೊಕ್ಕಿನಂತಿತ್ತು. ಪ್ರತಿಯೊಂದು ಸಾಲಿನಲ್ಲೂ ನೂರಾರು ಹಲ್ಲುಗಳಿದ್ದುವು. ಬಹುಶಃ ಕಾಂಪ್ಟೋಸಾರಸಿನಿಂದ ವಿಕಸಿಸಿದ ಇಗ್ವಾನೊಡಾನ್ 25'-30' ವರೆಗೆ ಬೆಳೆದ ದ್ವಿಪಾದಿ ಸಸ್ಯಾಹಾರಿ ದೈತ್ಯೋರಗ. ಮೊಟ್ಟಮೊದಲು ದೊರೆತ ಇದರ ಪಳೆಯುಳಿಕೆಗಳು ವಿಜ್ಞಾನಿಗಳಿಗೆ ದೈತ್ಯೋರಗಗಳ ಪೂರ್ಣರೂಪ ಗಾತ್ರಗಳನ್ನು ಕಲ್ಪಿಸಿಕೊಳ್ಳಲು ನೆರವಾದವು. ಇಂದು ಬದುಕಿರುವ ಇಗ್ವಾನ ಜಾತಿಯ ಹಲ್ಲಿಯ ಬೃಹತ್ ಸ್ವರೂಪ ಇದಾಗಿರಬೇಕು ಎಂಬ ತಪ್ಪು ತಿಳಿವಳಿಕೆಯ ಮೇಲೆ ಅದನ್ನು ಇಗ್ವಾನೊಡಾನ್ ಎಂದು ಕರೆಯಲಾಯಿತು. ಇದರ ಪಳೆಯುಳಿಕೆಗಳು ಮೊದಲು ದೊರೆತದ್ದು ಇಂಗ್ಲೆಂಡಿನಲ್ಲಿ. ಅನಂತರ 1878 ರಲ್ಲಿ ಬೆಲ್ಜಿಯಂನ ಕಲ್ಲಿದ್ದಲ ಗಣಿಯಲ್ಲಿ 30 ಪೂರ್ಣ ಪಳೆಯುಳಿಕೆಗಳು ಸಿಕ್ಕಿವೆ. ಸಸ್ಯಾಹಾರಿಯಾದರೂ ಈ ದ್ವಿಪಾದಿಗೆ ಹರಿತವಾದ ಹೆಬ್ಬೆರಳಿನ ತುದಿಯಲ್ಲಿದ್ದ ಚೂಪಾದ ಮುಳ್ಳು ರಕ್ಷಣಾಯುಧವಾಗಿತ್ತು. ಕೊಂಬಿನ ದೈತ್ಯೋರಗಗಳಲ್ಲಿ ಇಂದಿನ ಗೇಂಡಾ ಮೃಗವನ್ನು (ಖಡ್ಗಮೃಗ, ರೈನೋಸಾರಸ್) ಹೋಲುತ್ತಿದ್ದ ಟ್ರೈಸೆರಟಾಪ್ಸ್‌ ಬಹಳ ಮುಖ್ಯವಾದದ್ದು. ಉತ್ತರ ಅಮೆರಿಕದಲ್ಲಿ ಹೇರಳವಾಗಿತ್ತು. ಇದರ ತಲೆಯ ಅಗಲ 7' ಗಳಷ್ಟು. ಆತ್ಮಸಂರಕ್ಷಣೆಗೆ ಸಾಧನವಾಗಿ ಮೂರು ಕೊಂಬುಗಳಿದ್ದವು; 3' ಉದ್ದದ ಎರಡು ಕೊಂಬುಗಳು ಎರಡು ಕಣ್ಣುಗಳ ಮೇಲೆ; ಮತ್ತೊಂದು ಸ್ವಲ್ಪ ಚಿಕ್ಕದು ಮೂಗಿನ ಮೇಲೆ. ಬಹುಶಃ ಅಲ್ಲೋಸಾರಸ್ ಮತ್ತು ಟೈರಾನೋಸಾರಿನಂಥ ಭೀಕರ ಮಾಂಸಾಹಾರಿಗಳೊಡನೆ ಸೆಣಸಿ ಕಾದಾಡಿ ಕೆಲವು ವೇಳೆ ಜಯಶಾಲಿಯಾದ ದೈತ್ಯೋರಗವೆಂದರೆ ಟ್ರೈಸೆರಟಾಪ್ಸ್‌ ಎಂದು ಊಹಿಸಲಾಗಿದೆ.

ಥೀಕೋಡಾಂಟಿನ ಸಾಲ್ಟೋಪಸ್ ಎಂಬ ಜೀವಿಯ ವಿಷಯ ಈಗಾಗಲೇ ಹೇಳಿದೆ. ಅಂಥ ಕೆಲವು ಜೀವಿಗಳು ಬಹುಶಃ ವಾಯು ಮಂಡಲವನ್ನು ಆಕ್ರಮಿಸಲು ತೊಡಗಿದುವು. ಅವುಗಳಿಂದ ವಿಕಸಿಸಿದ ಗಣವನ್ನು ಟೀರೊಡ್ಯಾಕ್ವೈಲ ಅಥವಾ ಪಕ್ಷಾಂಗುಲೀಯ ಎಂದು ಕರೆಯಲಾಗಿದೆ. ಇದು ಜೂರಾಸಿಕ್ ಮತ್ತು ಕ್ರಿಟೇಷಿಯಸ್ ಕಲ್ಪಗಳಲ್ಲಿ ಹೇರಳವಾಗಿತು. ಇದರ ಮುಂಗಾಲುಗಳು ಇಂದಿನ ಬಾವಲಿಗಳಿಗಿರುವಂತೆ ರೆಕ್ಕೆಗಳಾಗಿ ರೂಪಗೊಂಡಿತ್ತು. ಆದರೆ ಪಕ್ಕಗಳಲ್ಲಿರಲಿಲ್ಲ. ಬಾಲ ಬಹಳ ಉದ್ದ. ತುದಿಯಲ್ಲಿ ಇದರ ಆಕಾರ ಮೀನಿನ ಈಜುರೆಕ್ಕೆಯಂತೆ ಇದನ್ನು ವಾಯುಮಂಡಲದ ಹಾರುವ ಪೆಡಂಭೂತ ಎಂದು ಕರೆಯಬಹುದು. ಇದು ಮಾಂಸಾಹಾರಿ ಪ್ರಾಣಿ. ಇದರಲ್ಲಿ ಮೊದಮೊದಲು ವಿಕಸಿಸಿದವು ಕೇವಲ ಗುಬ್ಬಚ್ಚಿಯಷ್ಟು ಚಿಕ್ಕದಾಗಿದ್ದುವು. ಉದ್ದವಾದ ದವಡೆ. ಅದರ ತುಂಬ ಹಲ್ಲುಗಳು; ಇವು ನೋಡಲು ಅಸಹ್ಯವಾಗಿದ್ದುವು. ಕ್ರಮೇಣ ಇವುಗಳ ಗಾತ್ರ ಇಂದಿನ ಪುಟ್ಟ ವಿಮಾನದಷ್ಟು ಬೆಳೆಯಿತು. ಅತಿ ದೊಡ್ಡದಾದ ಜೀವಿ ರೆಕ್ಕೆಗಳನ್ನು ಹರಡಿದಾಗ ಅದು ಸುಮಾರು 28' ಗಳಷ್ಟು ಅಗಲವಾಗಿ ವ್ಯಾಪಿಸುತ್ತಿತ್ತು. ರಾಂಪೊರಿಂಕಾಯ್ಡಿಯ ಎಂಬ ಕುಟುಂಬದ ರಾಂಪೋರಿಂಕಸ್ ಮತ್ತು ಡೈಮಾರ್ಫೊಡಾನ್ ಎಂಬುವ ಹಾರುವ ಜಾತಿಗಳಿಗೆ ಉದ್ದನೆಯ ಬಾಲವಿತ್ತು; ಅದರ ತುದಿ ಮೀನಿನ ಈಜುರೆಕ್ಕೆಯಂತಿತ್ತು. ಟಿರೋಡ್ಯಾಕ್ಟೈಲಾಯ್ಡಿಯಾ ಎಂಬ ಜಾತಿಯ ಜೀವಿಗಳಲ್ಲಿ ಬಾಲ ಮೊಟಕು. ಅದೇ ಜಾತಿಯ ಟೀರೊಡ್ಯಾಕ್ಟೈಲಸ್ ಪ್ರಭೇದದ ಉರಗಗಳಿಗೆ ಹಲ್ಲುಗಳು ಇರಲಿಲ್ಲ.

ಅಂದು ಭೂಮಿಯ ಮೇಲೆ ಬಾಳುತ್ತಿದ್ದ ಮಹಾಕ್ರೂರಿ ದೈತ್ಯೋರಗಗಳ ಉಪದ್ರವವನ್ನು ತಾಳಲಾರದೆ ಬಹುಶಃ ಕೆಲವು ಉರಗಗಳು ತಮ್ಮ ಪೂರ್ವಜರಂತೆ ಪುನಃ ನೀರಿಗೆ ಮರಳಿರಬಹುದು. ಇವನ್ನು ಮತ್ಸ್ಯೋರಗಗಳು ಎಂದು ಕರೆಯಬಹುದು. ಜಲಜೀವನಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ತಮ್ಮ ದೇಹವನ್ನು ಅಳವಡಿಸಿಕೊಂಡ ಇವನ್ನು ಎರಡು ಗಣಗಳಿಗೆ ಸೇರಿಸಲಾಗಿದೆ. ಅವು ಪ್ಲೀಸಿಯೋಸಾರಿಯ ಮತ್ತು ಇಕ್ತಿಯೋಸಾರಿಯ. ಈ ಎರಡು ಗಣಗಳ ಜೀವಿಗಳ ಕಪಾಲದಲ್ಲಿ ಪ್ರತಿಯೊಂದು ಪಾರ್ಶ್ವದಲ್ಲೂ ಸೈನಾಪ್ಸಿಡದಂತೆ ಒಂದೊಂದು ಬೃಹದ್ರಂಧ್ರವಿದ್ದರೂ ಅದರ ಎಲುಬಿನ ಆಯಕಟ್ಟಿನಲ್ಲಿ ವ್ಯತ್ಯಾಸವಿದ್ದುದರಿಂದ ಅದನ್ನು ಸೈನಾಪ್ಸಿಡಕ್ಕೆ ಸೇರಿಸಲಾಗುವುದಿಲ್ಲ. ಈ ಕಾರಣದಿಂದ ಆ ಗಣದ ಉರಗಗಳನ್ನು ಪ್ಯಾರಾಪ್ಸಿಡ ಉರಗಗಳು ಎಂದು ಪರಿಗಣಿಸಲಾಗಿದೆ. ಇದೇ ಕಾರಣದ ಮೇಲೆ ನೆಲದ ಮೇಲೆ ವಾಸಿಸುತ್ತಿದ್ದ ಚಿಕ್ಕ ಹಲ್ಲಿಯಂಥ ದೇಹದ ಅರಿಯೋಸೆಲಿಸನ್ನು ಒಳಗೊಂಡ ಪ್ರೋಟೋಸಾರಿಯ ಗಣವನ್ನು ಪ್ಯಾರಾಪ್ಸಿಡ ಉಪವರ್ಗಕ್ಕೆ ಸೇರಿಸಲಾಗಿದೆ. ಪ್ಯಾರಾಪ್ಸಿಡಗಳು ಉರಗದ ಯಾವ ಶಾಖೆಯಿಂದ ವಿಕಸಿಸಿದುವು ಎಂಬುದು ವಿವಾದಾಸ್ಪದ. ಬಹುಶಃ ಕಾಟಿಲೋಸಾರಿಯದಿಂದ ವಿಕಸಿಸಿದ ಡೈಆಪ್ಸಿಡ ಶಾಖೆಯಿಂದ ಆದಿಯಲ್ಲೇ ಕವಲಾಗಿ ಇವು ವಿಕಸಿಸಿರಬಹುದು ಎಂದು ಊಹಿಸಿದೆ. ಸಮುದ್ರವಾಸಿಗಳಾದ ಸ್ಪಿಸಿಯೋಸಾರಿಯ ಮತ್ತು ಇಕ್ತಿಯೋಸಾರಿಯ ಗಣಗಳ ಮತ್ಸ್ಯೋರಗಗಳ ವಂಶಜರು ಪ್ರೋಟೋಸಾರಿಯ ಗಣದ ಜೀವಿಗಳು ಎಂದೂ ಊಹಿಸಲಾಗಿದೆ. ಮತ್ಸ್ಯೋರಗಗಳಲ್ಲಿ ಕೆಲವು ದ್ವಿಚರಿಗಳಾಗಿದ್ದುವು. ಅವನ್ನು ಸೌರಾಫ್ಟೆರಿಗಿಯ ಎಂಬ ಗಣಕ್ಕೆ ಸೇರಿಸಿದೆ. ಪ್ಲಿಸಿಯೋಸಾರಿಯ ಉಪವರ್ಗದ ಜೀವಿಗಳು ಸಮುದ್ರವಾಸಿಗಳು. ಅವುಗಳ ಆಮೆಯಂಥ ದೇಹಕ್ಕೆ ಉದ್ದವಾದ ಕತ್ತು ಮತ್ತು ದೇಹದ ಗಾತ್ರಕ್ಕೆ ಸ್ವಲ್ಪವೂ ಹೊಂದದ ಚಿಕ್ಕತಲೆ ಮೊಟಕಾದ ಬಾಲಗಳಿದ್ದವು. ಕಾಲುಗಳು ಈಜಲು ಸಹಾಯಕವಾಗಿ ಜಲಪಾದಗಳಾಗಿ ರೂಪಾಂತರಗೊಂಡಿದ್ದವು. ಕೆಲವು ಜಾತಿಗಳು 40' ಗಳಷ್ಟು ಉದ್ದ ಬೆಳೆದಿದ್ದುವು. ಇಕ್ತಿಯೊಸಾರಿಯ ಗಣದ ಮತ್ಸ್ಯೋರಗಗಳು ಜಲವಾಸಕ್ಕೆ ಇನ್ನಷ್ಟು ಚೆನ್ನಾಗಿ ಹೊಂದಿಕೊಂಡು ಟ್ರಿಯಾಸಿಕ್ ಕಲ್ಪದಿಂದ ಜೂರಾಸಿಕ್ ಕಲ್ಪದವರೆಗೆ ಬಾಳಿದವು. ಇವು ಮೀನನ್ನು ಹೋಲುತ್ತಿದ್ದವು. ಉದ್ದ 30'-40' ಗಳಷ್ಟು. ಇಂಗ್ಲೆಂಡ್ ದೇಶದ ಒಬ್ಬ ಬಾಲಕಿಗೆ ಇದರ ಒಂದು ಪಳೆಯುಳಿಕೆ 1811ರಲ್ಲಿ ಸಿಕ್ಕಿತು. ಇಂಥವು ಈಚೆಗೆ ಭೂಮಿಯ ಎಲ್ಲ ಭಾಗಗಳಲ್ಲೂ ದೊರೆತಿವೆ. ಈ ಕಾರಣದಿಂದಲೇ ಇವು ಆ ಯುಗದಲ್ಲಿ ಸಮುದ್ರದಲ್ಲಿ ಹೇರಳವಾಗಿ ಲೀಲಾಜಾಲವಾಗಿ ಬಾಳಿರಬೇಕು ಎಂದು ಊಹಿಸಲಾಗಿದೆ.

ಹೀಗೆ ಭೂಮಿಯ ಮೇಲಿನ ದೈತ್ಯೋರಗಗಳು, ಸಮುದ್ರದ ಪೈಶಾಚಿಕ ಮತ್ಸ್ಯೋರಗಗಳು ಮತ್ತು ವಾಯುಮಂಡಲದ ಪೆಡಂಭೂತಗಳು-ಈ ಪ್ರಾಣಿಗಳಿಂದ ತುಂಬಿದ ಭೂಮಂಡಲ ಅತಿ ಭಯಂಕರವೂ ಅದ್ಭುತವೂ ಇದ್ದಿರಬೇಕು. ಆದರೆ 12 ಕೋಟಿ ವರ್ಷಗಳ ಕಾಲ ಸತತವಾಗಿ ನಿರಂಕುಶ ಪ್ರಭುಗಳಾಗಿ ಮೆರೆದ ಈ ಮಹಾಪ್ರಾಣಿಗಳು ಮುಂದೊಂದು ದಿವಸ ನಿಶ್ಶೇಷವಾದುವು. ಇದಕ್ಕೆ ಕಾರಣಗಳು ಇನ್ನೂ ಗೂಢವಾಗಿಯೇ ಉಳಿದಿವೆ. ಈ ವಿಷಯದ ಬಗ್ಗೆ ವಿಜ್ಞಾನಿಗಳು ಊಹಾಪೋಹಗಳನ್ನು ಮಾಡುತ್ತಲೇ ಇದ್ದಾರೆ. ವಾತಾವರಣದಲ್ಲಿ ಬದಲಾವಣೆಯಾಗುತ್ತ ಬಂತು; ಗಾಳಿ ತಂಪಾಗಿ ಶೀತಲಗಾಳಿ ಬೀಸಲು ಪ್ರಾರಂಭಿಸಿತ್ತು; ಕ್ರಮೇಣ ಜೌಗುಪ್ರದೇಶಗಳು ಬತ್ತುತ್ತಬಂದುವು; ಅನೇಕ ಹೊಸವರ್ಗದ ಸಸ್ಯಗಳು ಕಾಣಿಸಿಕೊಂಡವು; ಶೀತರಕ್ತದ ಉರಗಗಳಲ್ಲಿ ಅನೇಕ ಪ್ರಭೇದಗಳು ಅದರಲ್ಲೂ ದೈತ್ಯೋರಗ, ಮತ್ಸ್ಯೋರಗ ಮತ್ತು ಹಾರುವ ಪೆಡಂಭೂತಗಳು ಈ ಶೀತಲ ಹವೆಯನ್ನು ತಾಳಲಾರದೆ ಗತಿಸಿಹೋಗಿರಬಹುದು. ಸಮುದ್ರದ ಶೈತ್ಯವೂ ಹೆಚ್ಚಿ ಮತ್ಸ್ಯೋರಗಗಳು ಅವಸಾನಗೊಂಡುವು. ಸಸ್ಯಾಹಾರಿ ದೈತ್ಯೋರಗಗಳಿಗೆ ಹೊಸಬಗೆಯ ಸಸ್ಯಾಹಾರ ಒಗ್ಗಲಿಲ್ಲ. ಹೀಗೆ ಉಂಟಾದ ಅಹಾರಭಾವದಿಂದ ಅವು ಮಡಿದಿರಬಹುದು. ಅದರ ಪರಿಣಾಮವಾಗಿ ಅವನ್ನು ತಿಂದು ಜೀವಿಸುತ್ತಿದ್ದ ಮಾಂಸಾಹಾರೀ ದೈತ್ಯೋರಗಗಳಿಗೂ ಆಹಾರದ ಕೊರತೆ ಪ್ರಾರಂಭವಾಯಿತು. ಇದರಿಂದ ಕ್ರಮೇಣ ಅವೂ ಅವಸಾನ ಹೊಂದಿರಬಹುದು ಎಂಬುದು ಒಂದು ವಾದ.

ಸ್ವೀಕಾರಾರ್ಹವಾದ ಇನ್ನೊಂದು ತರ್ಕಸರಣಿ ಇದೆ. ಈ ದೈತ್ಯಜೀವಿಗಳಿಗೆ ತಮ್ಮ ಭೂತಾಕಾರದ ಮೊಟ್ಟೆಗಳನ್ನು ಯಾವ ಮರೆಯಲ್ಲಾಗಲೀ ಅಥವಾ ರಕ್ಷಣೆಯಲ್ಲಾಗಲೀ ಇಡಲು ಸಾಧ್ಯವಾಗುತ್ತಿರಲಿಲ್ಲ. ನೆಲದ ಮೇಲೆಯೇ ಅವನ್ನು ಇಡುತ್ತಿದ್ದವು. ಚಿಕ್ಕ ಸರೀಸೃಪಗಳೂ ಮತ್ತು ಆ ವೇಳೆಗೆ ವಿಕಸಿಸುತ್ತಿದ್ದ ಆದಿ ಸಸ್ತನಿಗಳೂ ಈ ಮೊಟ್ಟೆಗಳನ್ನು ನಾಶಪಡಿಸಿರಬಹುದು. ಡಾಕ್ಟರ್ ಮೋರಿಯವರ ಕೌತುಕವಾದ ಊಹೆಯೊಂದಿದೆ. ಒಂದು ಬಗೆಯ ಅಸಾಧಾರಣವಾದ ಸಾಂಕ್ರಾಮಿಕ ಜಾಡ್ಯಕ್ಕೆ ಈ ದೈತ್ಯೋರಗಗಳು ಬಲಿಯಾಗಿ ನಿಶ್ಶೇಷವಾಗಿ ಅಳಿದವು; ಸಾಂಕ್ರಾಮಿಕ ರೋಗಗಳನ್ನುಂಟುಮಾಡುವ ಜೀವಾಣುಗಳು ಪ್ರಾರಂಭದಲ್ಲಿ ಸ್ವತಂತ್ರ ಜೀವಿಗಳಾಗಿದ್ದು ಉರಗಗಳು ಉನ್ನತ ಸ್ಥಿತಿಗೆ ತಲಪುವ ವೇಳೆಗೆ ಬಹುಶಃ ಪರತಂತ್ರಜೀವಿಗಳಾಗಿ ಪರಿಣಮಿಸಿ ಈ ದೈತ್ಯೋರಗಗಳ ವಿಪತ್ತಿಗೆ ಕಾರಣವಾಗಿರಬಹುದು ಎಂಬುದು ಅದರ ಸಾರ. ಇದು ನಿಜವಾದ ಪಕ್ಷದಲ್ಲಿ, ಇತರ ಉರಗ ಮತ್ತು ಅನೇಕ ಇತರ ವರ್ಗದ ಪ್ರಾಣಿಗಳು ಈ ವಿಪತ್ತಿನಿಂದ ಹೇಗೆ ಪಾರಾದುವು ಎಂಬ ಪ್ರಶ್ನೆ ಏಳುತ್ತದೆ. ಮೇಲೆ ಹೇಳಿದ ವಿಪತ್ತುಗಳು ಇದ್ದರೂ ಅವನ್ನು ಎದುರಿಸಿ ಉಳಿದಿರುವ ಸಣ್ಣ ಸಣ್ಣ ಉರಗಗಳನ್ನು ಗಮನಿಸಿದರೆ ಆ ದೈತ್ಯೋರಗಗಳ ವಿನಾಶಕ್ಕೆ ಕಾರಣ ಇಂಥಾದ್ದೇ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಬಹುಶಃ ಮೇಲೆ ಹೇಳಿದ ಎಲ್ಲ ಊಹೆಗಳ ಮೊತ್ತ ಇದ್ದರೂ ಇರಬಹುದು. ದೈತ್ಯೋರಗಗಳ ವಿಷಯವಾಗಿ ಊಹಾಪೋಹಗಳಲ್ಲದೇ ಕೆಲವು ತಪ್ಪು ಕಲ್ಪನೆಗಳೂ ಇರುವುದುಂಟು. ಮೊದಲನೆಯದಾಗಿ ದೈತ್ಯೋರಗ ಒಂದು ಬೃಹತ್ ಸ್ವರೂಪದ ಸರೀಸೃಪ ಮಾತ್ರ ಎಂದು. ಕೇವಲ ಕೋಳಿ ಮರಿಯಷ್ಟು ಚಿಕ್ಕದಾದ ದೈತ್ಯೋರಗವೂ ಕೂಡ ಇದ್ದದಲ್ಲದೇ ಅನೇಕ ದೈತ್ಯೋರಗಗಳ ಉದ್ದ 6'-8' ವರೆಗೆ ಮಾತ್ರ ಇತ್ತು. ಎರಡನೆಯ ತಪ್ಪು ಕೆಲವು ಚಿತ್ರಕಾರರ ಕಾಲ್ಪನಿಕ ಚಿತ್ರಗಳಿಂದ ಮೂಡಿದೆ. ಆದಿಮಾನವ ದೈತ್ಯೋರಗಗಳ ಎದುರು ಹೋರಾಡುತ್ತಿರುವ ಚಿತ್ರಗಳು ಅನೇಕ ಇವೆ. ಏಳು ಕೋಟಿ ವರ್ಷಗಳ ಹಿಂದೆಯೇ ದೈತ್ಯೋರಗಗಳು ಕಣ್ಮರೆಯಾದವು. ಆ ವೇಳೆಗೆ ಮಾನವ ಇನ್ನೂ ವಿಕಸಿಸಿಯೇ ಇರಲಿಲ್ಲ. ಮಾನವನ ಹತ್ತಿರದ ಪೂರ್ವಜರು ಕೇವಲ 10 ಲಕ್ಷ ವರ್ಷಗಳ ಹಿಂದೆ ಇದ್ದಿರಬಹುದು ಎಂದು ಊಹಿಸಲಾಗಿದೆ.

ಇಂದು ಉಳಿದಿರುವ ಸರೀಸೃಪಗಳು

[ಬದಲಾಯಿಸಿ]

ಇವನ್ನು ನಾಲ್ಕು ಮುಖ್ಯ ಗಣಗಳಿಗೆ ಸೇರಿಸಲಾಗಿದೆ- ಕ್ರಾಕಡಿಲಿಯ, ರಿಂಕೋಕಿಫೇಲಿಯ, ಸ್ಕ್ವಮಾಟ, ಕೀಲೋನಿಯ.

ಕ್ರಾಕಡಿಲಿಯ ಗಣ

[ಬದಲಾಯಿಸಿ]

ಇದು ಡೈಆಪ್ಸಿಡ ಉರಗಗಳ ಆರ್ಕೊಸೌರಿಯ ಉಪವರ್ಗಕ್ಕೆ ಸೇರಿದೆ. ನೆಗಳೆಗಳು, ಮೊಸಳೆಗಳು ಈ ಗಣದ ಪ್ರಾಣಿಗಳು. ಕ್ರಾಕಡಿಲಿಯದ ಪಳೆಯುಳಿಕೆಗಳು ಮಧ್ಯಜೀವಯುಗದ ಜೂರಾಸಿಕ್ ಮತ್ತು ಕ್ರಿಟೇಷಿಯಸ್ ಕಲ್ಪಗಳ ಶಿಲೆಗಳಲ್ಲಿ ಸಿಕ್ಕಿವೆ. ಇವು ಜೂರಾಸಿಕ್ ಕಲ್ಪದ ಆರಂಭದಲ್ಲಿ ವಿಕಸಿಸಿ ಇಲ್ಲಿಯವರೆಗೂ ಬಾಳಿ ಬೆಳೆದಿವೆ. ಸುಮಾರು 16 ಕೋಟಿ ವರ್ಷಗಳಿಂದಲೂ ಇವುಗಳ ದೇಹರಚನೆಯಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ ಎಂದು ಕೆಲವು ತಜ್ಞರ ಅಭಿಪ್ರಾಯ. ಉಷ್ಣವಲಯದಲ್ಲಿ ಇವು ಸಾಮಾನ್ಯ. ಶೀತಲ ನೀರಿರುವಲ್ಲಿ ಕಾಣಿಸವು. ಅನಾದಿಕಾಲದಲ್ಲಿ ಮೊಸಳೆಗಳು ಪ್ರಪಂಚದ ಎಲ್ಲ ಭಾಗಗಳಲ್ಲೂ ಹರಡಿದ್ದುವು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯ ಇದೆ. ಇಂಗ್ಲೆಂಡ್ ದೇಶದಲ್ಲಿ ಈಗ ಮೊಸಳೆಗಳ ಗಣ ಇಲ್ಲದಿದ್ದರೂ ಹಿಂದೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಅದರ ಪಳಯುಳಿಕೆಗಳು ಸಿಕ್ಕಿವೆ.[೧೩] ಆಫ್ರಿಕ, ಬ್ರೆಜ಼ಿಲ್ ಮತ್ತು ದಕ್ಷಿಣ ಏಷ್ಯದ ನದಿ ಜೌಗು ಪ್ರದೇಶಗಳಲ್ಲೂ ಅವು ಸಮೃದ್ಧಿಯಾಗಿ ಬಾಳಿವೆ. ಅದರಲ್ಲೂ ಆಫ್ರಿಕದ ನದಿಗಳಲ್ಲಿಯೂ, ದಕ್ಷಿಣ ಅಮೆರಿಕದ ಅಮೆಝಾನ್ ನದಿಗಳಲ್ಲಿಯೂ ಮೊಸಳೆಗಳ ಹಿಂಡುಗಳನ್ನು ವಿಪುಲವಾಗಿ ಕಾಣಬಹುದು. ಸಮಶೀತೋಷ್ಣವಲಯದ ಅನೇಕ ಪ್ರದೇಶಗಳಲ್ಲಿಯೂ ಚೀನ, ಆಸ್ಟ್ರೇಲಿಯ ಮತ್ತು ಮಧ್ಯ ಅಮೆರಿಕಗಳಲ್ಲೂ ಇವು ಸಾಕಷ್ಟು ಸಂಖ್ಯೆಯಲ್ಲಿವೆ.

ಮೊಸಳೆಗಳಲ್ಲಿ ನಾಲ್ಕು ಪ್ರಭೇದಗಳಿವೆ

  1. ಅಮೆರಿಕ ಮತ್ತು ವೆಸ್ಟ್‌ ಇಂಡೀಸಿನ ಕೈಮನ್.
  2. ಉತ್ತರ ಅಮೆರಿಕದ ಮತ್ತು ಚೀನದ ನದಿಗಳಲ್ಲಿರುವ ಅಲಿಗೇಟರ್ ಅಥವಾ ನೆಗಳೆಗಳು.
  3. ಭಾರತ, ಆಸ್ಟ್ರೇಲಿಯ ಮತ್ತು ಆಫ್ರಿಕಗಳ ಮೊಸಳೆ (ಕ್ರೊಕೋಡೈಲ್ಸ್‌).
  4. ಭಾರತದ ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳಲ್ಲಿ ವಾಸಿಸುವ ಗೇವಿಯಲ್ ಅಥವಾ ಘಾರಿಯಲ್ಲುಗಳು.

ಮೊಸಳೆಗಳ ತಲೆಯ ಆಕಾರದಲ್ಲಿ ಭಿನ್ನತೆ ಇದೆ. ಗೇವಿಯಲ್ ಪ್ರಭೇದದ ಕೊಕ್ಕಿನಂತಿರುವ ಮುಸುಡಿಯಿಂದ ಹಿಡಿದು ನೆಗಳೆಗಳ ಗುಂಡಾದ ಮೊಟಕಿನ ಮುಸುಡಿಯವರೆಗೆ ಈ ಭಿನ್ನತೆಯನ್ನು ಮಜಲು ಮಜಲಾಗಿ ಕಾಣಬಹುದು. ಗೇವಿಯಲ್ಲುಗಳಿಗೆ ಮುಸುಡು ಪಕ್ಷಿಯ ಕೊಕ್ಕಿನ ಆಕಾರದಲ್ಲಿದೆ. ಇದು ಬಲು ಉದ್ದ. ಮೊಸಳೆಗಳ ತಲೆ ತ್ರಿಕೋನಾಕಾರವಾಗಿದೆ, ಮುಸುಡಿನ ಮುಂಭಾಗ ಚೂಪು, ಕೈಮನ್‍ಗಳ ತಲೆ ಹೆಚ್ಚು ಗುಂಡಾಕಾರವಾಗಿದೆ. ಮುಸುಡು ಮೊಂಡಾದ ತ್ರಿಕೋನಾಕಾರದಲ್ಲಿದೆ. ನೆಗಳೆಗಳಲ್ಲಿ ಎರಡು ಉಪಪ್ರಭೇದಗಳಿವೆ; ಒಂದರ ವಾಸ ಅಮೆರಿಕದ ನದಿಗಳಲ್ಲಿ, ಇನ್ನೊಂದರದು ಚೀನ ದೇಶದ ನದಿಗಳಲ್ಲಿ.[೧೪][೧೫] ಭಾರತ ದೇಶದಲ್ಲಿರುವ ಮೊಸಳೆಗಳ ಪ್ರಭೇದಗಳು ಕ್ರಕಡೈಲಸ್ ಪೊರೋಸಸ್ ಮತ್ತು ಕ್ರಕಡೈಲಸ್ ಪಲೂಸ್ಟ್ರಿಸ್.[೧೬] ಇವು ನದೀಮುಖಗಳಲ್ಲಿನ ಜೌಗುಪ್ರದೇಶಗಳಲ್ಲಿವೆ. ಗೇವಿಯಲ್ ಪ್ರಭೇದದ ಗೇವಿಯಾಲಸ್ ಗ್ಯಾಂಜಿಟಿಕಸ್ ಎಂಬುದು ಗಂಗಾ ಮತ್ತು ಬ್ರಹ್ಮಪುತ್ರಾ ನದಿಗಳಲ್ಲಿವೆ.[೧೭][೧೮][೧೯] ಉಪ್ಪಿನ ಜೌಗು ಪ್ರದೇಶಗಳಲ್ಲಿ ವಾಸಿಸುವ ಮೊಸಳೆಗಳನ್ನು ಅಳಿವೆ ಮೊಸಳೆಗಳು (ಎಸ್ಟೂಯರೀನ್ ಕ್ರೊಕೋಡೈಲ್ಸ್‌) ಎಂದು ಕರೆಯುವುದು ವಾಡಿಕೆ. ಭಾರತ, ಸಿಲೋನ್, ದಕ್ಷಿಣ ಚೀನ ಮತ್ತು ಉತ್ತರ ಆಸ್ಟ್ರೇಲಿಯ ದೇಶಗಳಲ್ಲಿ ಇವು ವ್ಯಾಪಿಸಿವೆ.[೨೦][೨೧][೨೨] ಇವು ಅತಿಕ್ರೂರಿ ಮೊಸಳೆಗಳು.

ಕೈಮನ್ ಮತ್ತು ನೆಗಳೆಗಳು ಒಂದನ್ನೊಂದು ಬಹುವಾಗಿ ಹೋಲುತ್ತವೆ. ಅವುಗಳ ಸ್ವಭಾವವೂ ಅಷ್ಟೆ. ಅವೆರಡೂ ಮಾಂಸಾಹಾರಿ ಪ್ರಾಣಿಗಳು. ನದಿಯ ನೀರು ಬತ್ತಿದಂತೆ ಸಮುದ್ರಕ್ಕೆ ವಲಸೆ ಹೋಗುವ ಈ ಪ್ರಾಣಿಗಳು ನೀರು ಹೆಚ್ಚು ಬತ್ತದೆ ಇರುವ ಸಮಯಗಳಲ್ಲಿ ನೀರಿನ ತಳಭಾಗದ ಮಣ್ಣಿನಲ್ಲಿಯೇ ಹುದುಗಿಕೊಂಡಿದ್ದು ಪುನಃ ನೀರಿಗಾಗಿ ಕಾಯಬಲ್ಲವು.[೨೩] ಮೊಸಳೆಗಳಿಗೆ ಹಿಂಗಾಲುಗಳಲ್ಲಿ ಅರ್ಧ ಜಾಲಪಾದವಿದ್ದರೆ ನೆಗಳೆಗಳಿಗೆ ಪೂರ್ಣ ಜಾಲಪಾದವಿದೆ. ಮೊಸಳೆಗಳಿಗೆ ಉಪ್ಪಿನ ಜೌಗು ಪ್ರದೇಶಗಳೇ ಹೆಚ್ಚು ಇಷ್ಟ. ಕೆಲವು ವೇಳೆ ಸಮುದ್ರಕ್ಕೂ ಈಜಿಕೊಂಡು ಹೋಗುತ್ತವೆ. ಆದರೆ ನೆಗಳೆಗಳಿಗೇ ಸಿಹಿನೀರೇ ಹೆಚ್ಚು ಪ್ರಿಯವಾದದ್ದು. ಸಾಮಾನ್ಯವಾಗಿ ನೆಗಳೆಗಳು ನಿರುಪದ್ರವಿಗಳು, ಭಾರತದ ಕ್ರಕಡೈಲಸ್ ಪೊರೊಸಸ್ ಮತ್ತು ಮಲೇಶಿಯ, ಆಫ್ರಿಕಗಳ ಕ್ರಕಡೈಲಸ್ ಕ್ರೊಟಕಸ್ ಇವುಗಳಿಂದ ಮನುಷ್ಯನ ಪ್ರಾಣಕ್ಕೆ ಆಗುತ್ತಿರುವ ಹಾನಿ ಅಪಾರವಾದದ್ದು.[೨೪] ಆದ್ದರಿಂದ ಇವನ್ನು ನರಭಕ್ಷಕಗಳೆಂದು ಕರೆಯುವುದು ವಾಡಿಕೆ. ದಕ್ಷಿಣ ಏಷ್ಯದ ಕೆಲವು ಮೊಸಳೆಗಳೂ ನರಭಕ್ಷಕಗಳು. ನೀರನ್ನು ಕುಡಿಯುಲು ಬರುವ ಕಾಡುಕೋಣ, ದನಕರುಗಳು, ಕುದುರೆಗಳು ಮತ್ತು ಸ್ನಾನಕ್ಕಾಗಿ ಇಳಿಯುವ ಜನರು ಈ ನರಭಕ್ಷಕಗಳಿಗೆ ಬಲಿಯಾಗಿರುವ ಸಂದರ್ಭಗಳು ಸಾವಿರಾರು. ಗೇವಿಯಲ್, ನೆಗಳೆ, ಮೊಸಳೆ ಇವುಗಳ ಕೆಲವು ಪ್ರಭೇದಗಳು ನೀರಿನಲ್ಲಿರುವ ಮೀನು, ಕಡಲಾಮೆ, ಹಕ್ಕಿ, ಏಡಿ ಮುಂತಾದುವನ್ನು ತಿಂದು ಜೀವಿಸುತ್ತವೆ.[೨೫][೨೬][೨೭][೨೮] ನೀರಿನಲ್ಲಿದ್ದಾಗ ಇವು ಅತಿ ಭಯಂಕರಿಗಳು. ಆದರೆ ನೆಲದ ಮೇಲೆ ಬಿದ್ದಾಗ ಏನೂ ಕೈಲಾಗದವು.

ದೊಡ್ಡ ನದೀಮುಖಗಳ ಜೌಗುಪ್ರದೇಶಗಳಲ್ಲಿ ವಾಸಿಸುವ ಮೊಸಳೆಗಳು (ಅಳಿವೆ ಮೊಸಳೆಗಳು) ಬಹಳ ಹಳೆಯ ಬುಡಕಟ್ಟಿಗೆ ಸೇರಿದಂಥವು. ಇವು ಸುಮಾರು 30' ಉದ್ದ ಬೆಳೆಯಬಲ್ಲವು. ಆಯುರ್ಮಾನ 200 ವರ್ಷಗಳೇ ಇರಬಹುದು.[೨೯] 20' ಉದ್ದದ ಗೇವಿಯಲ್ ಜಾತಿ ಮೊಸಳೆಗಳ ಪೂರ್ವಜರು ಸುಮಾರು 60' ಉದ್ದ ಬೆಳೆಯುತ್ತಿದ್ದುವೆಂದು ಊಹಿಸಲಾಗಿದೆ. ಅವುಗಳ ನಾಲ್ಕು ಕಾಲುಗಳು ಭೂಮಿಯ ಮೇಲೆ ಮತ್ತು ನೀರಿನ ತಳದಲ್ಲಿ ನಡೆಯಲು ಸಹಕಾರಿಯಾಗಿವೆ. ಆದರೆ ನೀರಿನಲ್ಲಿ ಈಜಲು ಸಹಾಯಕವಾಗಿಲ್ಲ. ಈಜುವಾಗ ಕಾಲುಗಳನ್ನು ದೇಹದ ಪಕ್ಕಕ್ಕೆ ಒತ್ತಿಡುತ್ತವೆ. ಜಾಲಪಾದವಿರುವ ಹಿಂಗಾಲುಗಳು ಮತ್ತು ಬಲಿಷ್ಠವಾದ ದೊಡ್ಡ ಬಾಲ ಈ ಪ್ರಾಣಿಗೆ ನೀರಿನಲ್ಲಿ ಸಮತೋಲನದಿಂದ ನಿಧಾನವಾಗಿ ಚಲಿಸಲು ಸಹಕಾರಿಗಳು. ಬೇರೆ ಪ್ರಾಣಿಗಳನ್ನು ಬಡಿದು ನುಚ್ಚು ನೂರು ಮಾಡಲು ಬಾಲವನ್ನು ಖಡ್ಗಾಯುಧದಂತೆ ಉಪಯೋಗಿಸಿಕೊಳ್ಳುವುದಿದೆ. ಇದರ ತಲೆ ಸದೃಢವಾದ ಎಲುಬುಗಳಿಂದ ಕೂಡಿದೆ. ಆದರೂ ಮಿದುಳಿನ ಗಾತ್ರ ದೇಹದ ಗಾತ್ರದೊಡನೆ ಹೋಲಿಸುವಾಗ ಬಲು ಚಿಕ್ಕದು. ಎಲುಬುತಟ್ಟೆಗಳಿಂದಾದ ಹುರುಪೆಗಳ ಕವಚ ಈ ಪ್ರಾಣಿಗಳ ವಿಶೇಷ ಲಕ್ಷಣ. ಸಾಮಾನ್ಯ ಆಯುಧಗಳು ಕವಚವನ್ನು ಭೇದಿಸಿ ದೇಹವನ್ನು ನಾಟಲಾರವು. ಅದರ ಕತ್ತಿನ ಕಶೇರುಮಣಿಗಳು ಭದ್ರವಾಗಿ ಜೋಡಿಕೊಂಡಿರುವುದರಿಂದ ಮೊಸಳೆಗೆ ಕತ್ತನ್ನು ಪಕ್ಕನೆ ತಿರುಗಿಸಲು ಸಾಧ್ಯವಿಲ್ಲ. ಮೊಸಳೆಯನ್ನು ಎದುರಿಸಬೇಕಾಗುವ ಮನುಷ್ಯರೂ ಪ್ರಾಣಿಗಳೂ ಅದರ ಈ ದೌರ್ಬಲ್ಯವನ್ನು ತಮ್ಮ ಆತ್ಮರಕ್ಷಣೆಗೋಸ್ಕರ ಚೆನ್ನಾಗಿ ಬಳಸಿಕೊಳ್ಳುವುದಿದೆ. ಮೊಸಳೆಯ ಎದುರಿನಿಂದ ಫಕ್ಕನೆ ಮಗ್ಗುಲಿಗೆ ಜಾರುವುದೊಂದೇ ಕ್ಷಿಪ್ರ ಉಪಾಯ. ಮೊಸಳೆಗಿರುವ ಅತಿ ಸಾಮರ್ಥ್ಯದ ಎರಡು ದವಡೆಗಳು, ಅವುಗಳ ತುಂಬ ಇರುವ ಎರಡು ಸಾಲು ಬಲವಾದ ಮತ್ತು ಚೂಪಾದ ಹಲ್ಲುಗಳು ಇವು ಇದರ ಮುಸುಡನ್ನು ಅತಿ ಭಯಾನಕವಾದ ಶಸ್ತ್ರಾಗಾರವನ್ನಾಗಿ ಮಾಡಿವೆ. ಇದರ ಬಾಯಿಗೆ ಸಿಕ್ಕಿದ ಪ್ರಾಣಿ ಇಕ್ಕುಳದಲ್ಲಿ ಸಿಕ್ಕಿಕೊಂಡಂತೆಯೇ ಸರಿ. ಕಣ್ಣುಗಳು ಮತ್ತು ನಾಸಿಕ ರಂಧ್ರಗಳು ತಲೆಯ ಒಂದು ಉಬ್ಬಿದ ಭಾಗದಲ್ಲಿವೆ. ಪ್ರತಿಯೊಂದು ಕಣ್ಣಿನ ಹಿಂದೆಯೂ ಕಿವಿಯ ರಂಧ್ರವಿದೆ. ಇದನ್ನು ಮುಚ್ಚಿ ತೆರೆಯಬಲ್ಲ ಎಲುಬಿನ ಕವಾಟವಿದೆ. ನಾಸಿಕರಂಧ್ರಗಳಿಗೂ ಕವಾಟದ ವ್ಯವಸ್ಥೆಯಿದೆ. ಒಳನಾಸಿಕ ರಂಧ್ರಗಳು ಗಂಟಲಿನ ಮೇಲ್ಭಾಗದಲ್ಲಿವೆ. ಮೊಸಳೆ ನೀರಿನಲ್ಲಿ ಮುಳುಗಿದಾಗ ನಾಸಿಕ ರಂಧ್ರಗಳು ಸ್ವಲ್ಪ ನೀರಿನ ಮೇಲ್ಮಟ್ಟದಲ್ಲಿರುತ್ತವೆ. ಆಗ ಶ್ವಾಸರಂಧ್ರದ ಭಾಗ (ಗ್ಲಾಟಿಸ್) ಮುಂದಕ್ಕೆ ಚಾಚಿ ಒಳಗಿನ ನಾಸಿಕರಂಧ್ರಕ್ಕೆ ಅಂಟಿಕೊಳ್ಳುತ್ತದೆ; ಇದರಿಂದ ಹೊರಗಿನಿಂದ ಗಾಳಿ ಸತತವಾಗಿ ಶ್ವಾಸಕೋಶಗಳಿಗೆ ಹೋಗಲು ಸಹಾಯಕವಾಗುವುದು. ಆ ಕಾರಣದಿಂದಲೇ ನೀರಿನಲ್ಲಿ ದೇಹ ಮುಳುಗಿದ್ದಾಗಲೂ ದೊಡ್ಡ ಪ್ರಾಣಿಗಳನ್ನು ಬಾಯಲ್ಲಿ ಹಿಡಿದಿರುವಾಗಲೂ ಉಸಿರಾಟ ಅವಿರತವಾಗಿ ಸಾಗುವುದು. ನೀರಿನ ಮೇಲೆ ತಲೆಯಿಟ್ಟಾಗ ಮಾತ್ರ ನಾಸಿಕರಂಧ್ರಗಳು ತೆರೆಯುತ್ತವೆ. ನೀರಿನಲ್ಲಿ ಮುಳುಗಿದ್ದರೂ ತೆರೆದ ಬಾಯಿಯ ಮೂಲಕ ನೀರು ನುಗ್ಗಲು ಅವಕಾಶವಿಲ್ಲ.[೩೦][೩೧] ಸದಾ ನೀರಿನಲ್ಲಿ ಮುಳುಗಿಕೊಂಡೇ ಮೊಸಳೆ ಜೀವಿಸಲಾರದು.[೩೨] ಕೆಲವು ವೇಳೆ ಅದು ನೀರಿನಲ್ಲಿ ಅಡಗಿರಬಹುದು. ಆದರೆ ಹೆಚ್ಚು ವೇಳೆಯನ್ನು ಬಂಡೆಗಳು ಮತ್ತು ದಡಗಳ ಮೇಲೆ ಕಳೆಯುತ್ತವೆ. ಬಿಸಿಲಿನ ಅಲ್ಪ ಶಾಖ ಅದಕ್ಕೆ ಬಹಳ ಹಿತಕರ.

ಮೊಸಳೆಯ ಜಠರದ ಒಳಭಾಗ ಬಲವಾದ ಮಾಂಸಖಂಡಗಳಿಂದ ರಚನೆಗೊಂಡಿವೆ. ಇದಲ್ಲದೆ ಸಾಮಾನ್ಯವಾಗಿ ಈ ಭಾಗದಲ್ಲಿ ಒಂದು ಅಂಗುಲದಷ್ಟು ದಪ್ಪದ ಹಲವಾರು ಕಲ್ಲುಗಳೂ ಇವೆ. ಹೃದಯದಲ್ಲಿ ಹೃತ್ಕುಕ್ಷಿ ಪೂರ್ಣವಾಗಿ ಎಡ ಮತ್ತು ಬಲಭಾಗಗಳಾಗಿ ವಿಭಾಗವಾಗಿದೆ.[೩೩] ಇದು ಶುದ್ಧ ಮತ್ತು ಅಶುದ್ಧ ರಕ್ತಗಳನ್ನು ಬೇರ್ಪಡಿಸಲು ಸಹಕಾರಿ. ಆದರೂ ಪ್ರತಿಯೊಂದು ಹೃತ್ಕುಕ್ಷಿಯಿಂದ ಹೊರಡುವ ಒಂದೊಂದು ಆಯೋರ್ಟ ರಕ್ತನಾಳ (ಮಹಾ ಅಪಧಮನಿಗಳು-ಆರ್ಟರೀಸ್) ಹೃದಯದ ಹಿಂಭಾಗದಲ್ಲಿ ಒಂದುಗೂಡಿ ಊರ್ಧ್ವ ಆಯೋರ್ಟ ರಕ್ತನಾಳಗಳಾಗುವುದರಿಂದ ಶುದ್ಧ ಮತ್ತು ಅಶುದ್ಧ ರಕ್ತಗಳು ಬೆರೆತು ದೇಹದ ಮುಂಡಭಾಗಕ್ಕೆ ಮಿಶ್ರರಕ್ತ ಹರಿಯುತ್ತದೆ. ಬಲ ಅಯೋರ್ಟದಲ್ಲಿ ಶುದ್ಧ ರಕ್ತವೂ ಎಡ ಅಯೋರ್ಟದಲ್ಲಿ ಅಶುದ್ಧ ರಕ್ತವೂ ಹರಿಯುತ್ತದೆ. ಬಲ ಅಯೋರ್ಟ ನಾಳದಿಂದ ಅದರ ಪ್ರಾರಂಭದಲ್ಲಿ ತಲೆಯ ಭಾಗಕ್ಕೆ ಕವಲುಗಳು ಹೊರಡುವುದರಿಂದ ಶುದ್ಧರಕ್ತ ತಲೆಯಭಾಗಕ್ಕೆ ಹರಿಯುತ್ತದೆ. ಶುದ್ಧರಕ್ತ ದೇಹದ ವಿವಿಧಭಾಗಗಳಿಗೂ ಅಶುದ್ಧ ರಕ್ತ ಶುದ್ಧಿಯಾಗಲು ಶ್ವಾಸಕೋಶಗಳಿಗೂ ಹರಿಯುವಂತೆ ಪ್ರಕೃತಿ ಏರ್ಪಡಿಸುವ ಒಂದು ಪ್ರಯೋಗದಲ್ಲಿ ಇದು ಒಂದು ಸ್ಪಷ್ಟವಾದ ಹೆಜ್ಜೆ ಎಂದು ಹೇಳಬಹುದು. ಮುಂದೆ ವಿಕಸಿಸಿದ ಪಕ್ಷಿಗಳು ಮತ್ತು ಸಸ್ತನಿ ಪ್ರಾಣಿಗಳಲ್ಲಿ ಈ ಪ್ರಯತ್ನ ಸಫಲವಾಯಿತು. ಮೊಸಳೆಯ ಪ್ರತಿಯೊಂದು ಶ್ವಾಸಕೋಶವೂ ಸಸ್ತನಿ ಪ್ರಾಣಿಗಳಲ್ಲಿರುವಂತೆ ಎರಡು ಪ್ಲೋರಾ ಪರೆಗಳಿಂದ ಆವರಿಸಲ್ಪಟ್ಟಿದೆ. ಕೆಳದವಡೆಯ ಅಂಚಿನಲ್ಲಿ ಮತ್ತು ಕ್ಲೋಯಕ ರಂಧ್ರದ ಅಕ್ಕಪಕ್ಕಗಳಲ್ಲಿ ಚರ್ಮದ ಗ್ರಂಥಿಗಳಿವೆ. ಇವು ಹೊರ ಚೆಲ್ಲುವ ದ್ರವದ ವಾಸನೆ ಕಸ್ತೂರಿಯಂತೆ. ಸಂತಾನೋತ್ಪತ್ತಿಯ ಕಾಲದಲ್ಲಿ ಇದರ ಉತ್ಪತ್ತಿ ಹೆಚ್ಚು. ಬಹುಶಃ ಗಂಡುಹೆಣ್ಣು ಪರಸ್ಪರ ಹತ್ತಿರ ಬರಲು ಈ ವಾಸನೆ ಕಾರಣವಾಗಿರಬಹುದು. ಇತರ ಪ್ರಾಣಿಗಳನ್ನು ಬೇಟೆಯಾಡುವಾಗಲೂ ಈ ದ್ರವ ಹೆಚ್ಚು ಉತ್ಪತ್ತಿಯಾಗುವುದು ಕಂಡುಬಂದಿದೆ.

ಸಂತಾನೋತ್ಪತ್ತಿ: ಮೊಸಳೆಗಳು ಅಂಡಜಗಳು. ಒಂದು ಬಾರಿಗೆ 20-100 ಮೊಟ್ಟೆಗಳನ್ನಿಡುವುವು. ಬೇಸಿಗೆ ಸಮೀಪಿಸುತ್ತಿದ್ದಂತೆ ಕೆಲವು ಜಾತಿಯ ಮೊಸಳೆಗಳು ನೀರಿನ ತಳದ ಮರಳಿನಲ್ಲಿ ಗುಣಿಗಳನ್ನು ತೋಡಿ ಅಲ್ಲಿ ಮೊಟ್ಟೆಗಳನ್ನಿಟ್ಟು ಅನಂತರ ಮರಳು ಸೊಪ್ಪು ಸೊದೆಗಳಿಂದ ಗುಣಿಗಳನ್ನು ಮುಚ್ಚುತ್ತವೆ. ಇದರಿಂದ ಮೊಟ್ಟೆಗಳ ಬೆಳೆವಣಿಗೆಗೆ ಬೇಕಾದ ಶಾಖ ದೊರೆಯುವುದು. ಹೆಣ್ಣು ಮೊಸಳೆ ಆ ಜಾಗವನ್ನು ಆಗಿಂದಾಗ್ಗೆ ಕಣ್ಣಿನಲ್ಲಿ ಕಣ್ಣಿಟ್ಟು ಕಾಯುವುದಲ್ಲದೆ ಕೆಲವು ವೇಳೆ ಮೊಟ್ಟೆಗಳು ಒಡೆದು ಮರಿಗಳಾಗುವವರೆಗೂ ಅಲ್ಲಿ ಅಜ್ಞಾತವಾಸ ಸಹ ಮಾಡಬಲ್ಲದು. ಎರಡು ತಿಂಗಳುಗಳ ಅವಧಿಯಲ್ಲಿ ಮೊಟ್ಟೆಗಳು ಬಲಿತು ಒಳಗಿರುವ ಮರಿಗಳು ಧ್ವನಿಗೈಯುವುವೆಂದೂ ತಾಯಿ ಮೊಸಳೆ ಬಹುಶಃ ಆ ಧ್ವನಿಯನ್ನು ಕೇಳಿ ಗುಣಿಗಳ ಮೇಲಿನ ಮುಚ್ಚಿಕೆಗಳನ್ನು ಸಡಿಲಿಸುತ್ತವೆ ಎಂದೂ ಕೆಲವರ ಅಭಿಪ್ರಾಯ.[೩೪] ಮೊಟ್ಟೆಗಳಲ್ಲಿರುವ ಮರಿಗಳು ಕತ್ತರಿಸುವ ಆಯುಧವನ್ನು ಹೋಲುವ ತಮ್ಮ ಮೂತಿಯ ತುದಿಯಿಂದ ಮೊಟ್ಟೆಯ ಚಿಪ್ಪನ್ನು ಒಡೆದು ಹೊರಬರುತ್ತವೆ. ಆಗ ತಾಯಿ ಮೊಸಳೆ ಅವನ್ನು ನೀರಿನೆಡೆಗೆ ಕರೆದೊಯ್ಯುತ್ತವೆ.

ಮೊಸಳೆ ಚರ್ಮ: ಮೊಸಳೆ ಚರ್ಮ ಸಾಮಾನ್ಯವಾಗಿ 4'-8' ಅಗಲ ಮತ್ತು 10'-20' ಉದ್ದವಾಗಿರುವುದು. ಇದನ್ನು ಹದಮಾಡಿ ಪೆಟ್ಟಿಗೆಗಳ ರಕ್ಷಣೆಗಾಗಿ ಉಪಯೋಗಿಸುವುದಿದೆ. ದುಡ್ಡಿನ ಚೀಲ, ಸೊಂಟದಪಟ್ಟಿಗಳು, ಜೋಡುಗಳು ಮುಂತಾದ ವಸ್ತುಗಳನ್ನು ತಯಾರಿಸುತ್ತಾರೆ. ಮೊಸಳೆ ಕೊಬ್ಬು ಮೀನೆಣ್ಣೆಯಂತಹ ಔಷಧಿಗಳಿಗೆ ಉಪಯುಕ್ತ.

ರಿಂಕೋಕೆಫೇಲಿಯ ಗಣ

[ಬದಲಾಯಿಸಿ]

ಇದು ಡೈಆಪ್ಸಿಡದ ಇನ್ನೊಂದು ಗಣ. ಬಲು ಪುರಾತನವಾದದ್ದು. ಇದರಲ್ಲಿ ಉಳಿದಿರುವ ಒಂದೇ ಪ್ರಭೇದವೆಂದರೆ ಸ್ಪಿನೇಡಾನ್ ಪಂಕ್ಟೇಟಿಸ್ (ಟೂವಟಾರ). ಬಾಲಾವಸ್ಥೆಯಲ್ಲಿ ಮೇಲ್ದವಡೆ, ಕೆಳದವಡೆಗಳಲ್ಲಲ್ಲದೆ ಮೇಲಿನ ವಸಡಿನಲ್ಲಿಯೂ ಹಲ್ಲುಗಳಿರುತ್ತವೆ. ಪ್ರಾಣಿ ಬೆಳೆದಂತೆ ಕ್ರಮೇಣ ಹಲ್ಲುಗಳು ಸವೆದು ಪ್ರೌಢವಾಗುವುದರಲ್ಲಿ ಎಲ್ಲ ಹಲ್ಲುಗಳನ್ನೂ ಕಳೆದುಕೊಳ್ಳುತ್ತದೆ. ಇದರಿಂದಲೇ ಕೊಕ್ಕಿನ ಗೌಳಿ (ಹಲ್ಲಿ) ಎಂದು ಇದನ್ನು ಕರೆಯುತ್ತಾರೆ. ತಲೆಯ ಮೇಲ್ಭಾಗದಲ್ಲಿ ಮೂರನೆಯ ಕಣ್ಣಿದೆ. ಅದು ಈಗ ಕೆಲಸಮಾಡದಿದ್ದರೂ ಹಿಂದಿನ ಅಳಿದ ಉರಗಗಳ ಬುರುಡೆಯಲ್ಲಿ ಈ ರೀತಿಯ ಕಣ್ಣಿದ್ದು, ಮಿಕ್ಕೆರಡು ಕಣ್ಣುಗಳೊಡನೆ ಸಹಕರಿಸುತ್ತಿದ್ದಿರಬಹುದೆಂಬ ಊಹೆಗೆ ಬೆಂಬಲ ನೀಡುವಂತಿದೆ. ಈ ಪ್ರಾಣಿ ಕೋಟ್ಯಂತರ ವರ್ಷಗಳಿಂದ ಬಾಳಿದೆ. ಆದರೆ ಇದರಲ್ಲಿ ಅಂದಿನಿಂದ ಇಂದಿನವರೆಗೂ ಯಾವ ಬದಲಾವಣೆಯೂ ಆಗಿಲ್ಲ. ಉರಗಗಳಲ್ಲಿ ಒಂಟಿಯಾಗಿ ನಿಂತಿದ್ದರೂ ಈಗ ಬಾಳುತ್ತಿರುವ ಹಲ್ಲಿವರ್ಗದ ಅನೇಕ ಉರಗಗಳು ಬಹುಃ ಟೂವಟಾರ ಪ್ರಾಣಿಯ ಜಾತಿಯಿಂದ ಪ್ರಭೇದಗೊಂಡಿರಬೇಕೆಂದು ಉಹಿಸಲಾಗಿದೆ.

ಸ್ಕ್ವಮಾಟ ಗಣ

[ಬದಲಾಯಿಸಿ]

ಡೈಆಪ್ಸಿಡ ಉರಗಗಳ ಲೆಪಿಡೋಸಾರಿಯ ಉಪವರ್ಗಕ್ಕೆ ಸೇರಿದೆ. ಸ್ಕ್ವಮಾಟವನ್ನು ಎರಡು ಉಪಗಣಗಳಾಗಿ ವಿಭಾಗಿಸಿದೆ. ಲ್ಯಾಸರ್‌ಟೇಲಿಯ ಮತ್ತು ಒಫಿಡಿಯ. ಲ್ಯಾಸರ್‌ಟೇಲಿಯ ಉಪಗಣದಲ್ಲಿ ಹಲ್ಲಿಗಳು, ನೆಗಳೆಗಳು, ಊಸರವಳ್ಳಿ, ಗೆಕೊ (ಮನೆಯ ಹಲ್ಲಿ), ಓತಿ ಮುಂತಾದವು ಇವೆ. ಇವನ್ನು ಈ ಕೆಳಗಿನ ವಂಶಗಳಾಗಿ ವಿಭಾಗಿಸಿದೆ; 1. ಗೆಕೊನಿಡೆ, 2 ಅಗಾಮಿಡೆ, 3. ಕೆಮೆಲಿಯೊನಿಡೆ, 4. ಸಿನ್ಸಿಡೆ, 5. ಲ್ಯಾಸರಟಿಡೆ, 6. ಆಂಗ್ವಿಡೆ 7. ವರಾನಿಡೆ.

ಲ್ಯಾಸರ್‌ಟೀಲಿಯ ಉಪಗಣ: ಲ್ಯಾಸರ್‌ಟೀಲಿಯ ಉಪಗಣದ ಪ್ರಾಣಿಗಳ ಲಕ್ಷಣಗಳು ಹೀಗಿವೆ. ದೇಹ ಪೂರ್ಣವಾಗಿ ಹುರುಪೆಗಳಿಂದ ಆವೃತವಾಗಿದೆ. ಕೆಲವು ಜಾತಿಗಳ ವಿನಾ ಮಿಕ್ಕವಲ್ಲಿ ಹಿಂಗಾಲು ಮತ್ತು ಮುಂಗಾಲುಗಳು ಚೆನ್ನಾಗಿ ಬೆಳೆದಿವೆ.[೩೫] ಎದೆಯಲ್ಲಿ ಎದೆಯ ಮೂಳೆ ಇದೆ. ಬೆನ್ನೆಲುಬಿನ ಕಶೇರುಮಣಿಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಇದೆ. ಕಶೇರುಮಣಿಗಳನ್ನು ಬೆನ್ನೆಲುಬಿನ ಕತ್ತಿನಭಾಗ (ಸೆರ್ವೈಕಲ್), ಎದೆಯಭಾಗ (ತೊರಾಸಿಕ್), ಉದರಭಾಗ (ಲಂಬಾರ್) ಕಟಿಭಾಗ (ಸೇಕ್ರಲ್) ಮತ್ತು ಬಾಲದ ಭಾಗಗಳಾಗಿ (ಕಾಡಲ್) ವಿಂಗಡಿಸಬಹುದು. ಎದೆಯ ಮೂಳೆಗಳ ಸಂಖ್ಯೆ ಹೆಚ್ಚು. ಕತ್ತಿನ ಭಾಗದ ಕಶೇರುಮಣಿಗಳು ಕತ್ತಿನ ಪಕ್ಕೆಲುಬುಗಳನ್ನೂ ಎದೆಯಭಾಗದ ಕಶೇರುಮಣಿಗಳು ಎದೆಯ ಪಕ್ಕೆಲುಬುಗಳನ್ನೂ ಹೊಂದಿವೆ. ಇದರ ಬಾಯಿಯನ್ನು ಹಾವಿನ ಬಾಯಿಯಂತೆ ಅಗಲಿಸಲು ಸಾಧ್ಯವಿಲ್ಲ. ಹೊರಕಿವಿಯ ರಂಧ್ರಗಳೂ ಚಲಿಸಬಲ್ಲ ಕಣ್ಣಿನ ಗುಡ್ಡೆಗಳೂ ಇವೆ. ಕೆಲವು ಬಾಲದ ಭಾಗವನ್ನು ಸುಲಭವಾಗಿ ಬೇರ್ಪಡಿಸಬಲ್ಲವು. ಕತ್ತಿರಿಸಿದ ಬಾಲ ಮತ್ತು ಕಾಲುಗಳ ಭಾಗಗಳನ್ನು ಪುನಃ ಸೃಷ್ಟಿಸಿಕೊಳ್ಳಬಲ್ಲವು. ಲಾಲಾಗ್ರಂಥಿಗಳು ಬಾಯಿಯ ಕೆಳಭಾಗದಲ್ಲಿವೆ. ಶ್ವಾಸಕೋಶಗಳು ಉದ್ದ ಮತ್ತು ಅಂಡಾಕಾರವಾಗಿವೆ. ಶ್ವಾಸೋಚ್ಛ್ವಾಸಕ್ರಿಯೆ ಪಕ್ಕೆಲುಬುಗಳ ನೆರವಿನಿಂದ ನಡೆಯುವುದು. ಊಸರವಳ್ಳಿ ಮತ್ತು ಗೆಕೊಗಳಲ್ಲಿ ಶ್ವಾಸಕೋಶಗಳು ಗಾಳಿಯ ಚೀಲಗಳಾಗಿ ವಿಸ್ತರಿಸಿವೆ. ಇವು ಪಕ್ಷಿಗಳ ಶ್ವಾಸಕೋಶಗಳೊಳಗಿನ ಗಾಳಿಯ ಗೂಡುಗಳನ್ನು ಸೂಚಿಸುತ್ತವೆ.

ಒಫಿಡಿಯ ಉಪಗಣ: ಹಾವುಗಳನ್ನು ಒಫಿಡಿಯ ಉಪಗಣಕ್ಕೆ ಸೇರಿಸಲಾಗಿದೆ. ಈ ಪ್ರಾಣಿಗಳನ್ನು ಅವಯವಗಳಿಲ್ಲದ (ವಿದೌಟ್ ಲಿಂಬ್ಸ್‌) ಸ್ಕ್ವಮಾಟ ಎಂದು ಕರೆಯುವುದುಂಟು. ಒಫಿಡಿಯವನ್ನು ಒಂದು ಗಣವೆಂದೇ ಕರೆಯುವುದೂ ಇದೆ. ಒಫಿಡಿಯ ಗಣದ ಪ್ರಾಣಿಗಳ ಲಕ್ಷಣಗಳು ಹೀಗಿವೆ. ಇವು ಕಶೇರುಕಗಳು. ಚರ್ಮ ಹುರುಪೆಗಳಿಂದ ಆವೃತವಾಗಿವೆ. ಹೊರಚರ್ಮದ ಭಾಗ ಪದೇ ಪದೇ ಕಳಚಲ್ಪಡುವುದು. ಪೊರೆ ಬಿಡುವುದು ಎಂದು ಇದರ ಹೆಸರು. ವರ್ಷಕ್ಕೆ 5-6 ಸಲ ಪೊರೆಬಿಡಬಲ್ಲ ಹಾವುಗಳೂ ಉಂಟು. ಆದ್ದರಿಂದ ಪೊರೆ ಸತತವಾಗಿ ಬೆಳೆಯಬಲ್ಲುದು; ಬಾಯಿ ವಿಶಾಲವಾಗಿ ಹಿಗ್ಗುವಂತಿದೆ.[೩೬] ಕಣ್ಣಿಗೆ ರೆಪ್ಪೆಯಿಲ್ಲ. ಬದಲು ಪಾರದರ್ಶಕ ಹುರುಪೆಯುಂಟು. ಇದೂ ಪೊರೆ ಬಿಡುವಾಗ ಬಿದ್ದುಹೋಗಿ ಹೊಸ ಹುರುಪೆ ಬೆಳೆಯುತ್ತದೆ. ಹೊರಕಿವಿಯಾಗಲೀ ಕಿವಿಯ ತಮಟೆಯಾಗಲೀ ಇಲ್ಲದಿದ್ದರೂ ಸಹ ಒಳಕಿವಿಯುಂಟು. ಗ್ರಹಿಸಿದ ಶಬ್ದಕಂಪನಗಳು ಒಳಕಿವಿಯನ್ನು ಸೇರುತ್ತವೆ.[೩೭] ಮುಂದೂಡಬಲ್ಲ ಮತ್ತು ಹಿಂದಕ್ಕೆ ಎಳೆದುಕೊಳ್ಳಬಹುದಾದ ತುದಿಸೀಳಿದ ನಾಲಗೆ ಹಾವಿನ ವಿಶೇಷವಾದ ಸ್ಪರ್ಶೇಂದ್ರಿಯ.[೩೮] ಸ್ವತಃ ಮೂಸಿನೋಡದಿದ್ದರೂ ವಾಸನೆಯಿರುವ ಕಣಗಳನ್ನು ಬಾಯೊಳಕ್ಕೆ ಎಳೆದುಕೊಂಡು ಅವು ಘ್ರಾಣೇಂದ್ರಿಯಗಳ ಸಂಪರ್ಕ ಹೊಂದುವಂತೆ ಮಾಡುತ್ತವೆ.[೩೮] ಯಾವ ಅನುಬಂಧಗಳೂ (ಅಪೆಂಡೇಜಸ್) ಇಲ್ಲದ ಇದರ ದೇಹ ಹಗ್ಗದಂತಿದ್ದು ಉದ್ದವಾಗಿದೆ. ರುಂಡ, ಮುಂಡ, ಬಾಲಗಳಿಗೆ ಪರಸ್ಪರ ನಿರ್ದಿಷ್ಟವಾದ ಎಲ್ಲೆಗಳು ಇಲ್ಲ. ಇದು ಕೊರಕಲು ಹಳ್ಳಗಳಲ್ಲಿ, ಕಲ್ಲುಗಳ ಸಂದಿಯಲ್ಲಿ ಚಲಿಸಲು ಸಹಾಯಕವಾದ ದೇಹದ ಒಂದು ಹೊದಿಕೆ. ಕಿರಿದಾದ ಉದ್ದವಾದ ದೇಹಕ್ಕೆ ಅನುಗುಣವಾಗಿ ಒಳಭಾಗದ ಅಂಗಗಳೂ ಕೂಡ ಬದಲಾವಣೆಗಳನ್ನು ಹೊಂದಿವೆ. ಸಾಮಾನ್ಯವಾಗಿ ಒಂದು ಶ್ವಾಸಕೋಶ, ಅದರಲ್ಲೂ ಎಡಶ್ವಾಸಕೋಶ ಮತ್ತೊಂದಕ್ಕಿಂತ ಬಹಳ ಕಿರಿದು. ಕೆಲವುವೇಳೆ ಒಂದೇ ಒಂದು ಶ್ವಾಸಕೋಶ ಇರುವುದೂ ಉಂಟು.[೩೯] ಪಿತ್ತಕೋಶ ಬಲು ಉದ್ದ. ಮೂತ್ರಪಿಂಡಗಳು ಎದುರುಬದಿರಾಗಿರುವುದಿಲ್ಲ. ಬೆನ್ನೆಲುಬಿನ ಕಶೇರುಮಣಿಗಳ ಸಂಖ್ಯೆ ಬಲು ಹೆಚ್ಚು. ಪ್ರತಿಯೊಂದು ಕಶೇರುಮಣಿಗೂ ಒಂದು ಜತೆ ಪಕ್ಕೆಲುಬು ಜೋಡಿಸಲ್ಪಟ್ಟಿರುವುದರಿಂದ, ಪಕ್ಕೆಲುಬುಗಳ ಸಂಖ್ಯೆಯೂ ಹೆಚ್ಚು. ಉದರಭಾಗದಲ್ಲಿ ಅಗಲವಾದ ಉದರ ಫಲಕಗಳಿವೆ. ಈ ಫಲಕಗಳು ಚಾವಣಿಯ ಹೆಂಚುಗಳಂತೆ ಜೋಡಿಸಲ್ಪಟ್ಟಿವೆ. ಪ್ರತಿಯೊಂದು ಫಲಕಕ್ಕೂ ಅದರ ಮುಂಭಾಗದಲ್ಲಿ ಒಂದೊಂದು ಜೊತೆ ಪಕ್ಕೆಲುಬು ಸ್ನಾಯುಗಳ ಸಹಾಯದಿಂದ ಚಲಿಸುವ ರೀತಿಯಲ್ಲಿ ಸೇರಿಸಲ್ಪಟ್ಟಿವೆ. ಇದರಿಂದ ಎದೆಯ ಗೂಡು ಮಾಯವಾಗಿದೆ. ಒಂದೇ ಪಾರ್ಶ್ವದ ಅನುಕ್ರಮವಾದ ಪಕ್ಕೆಲುಬುಗಳ ನಡುವೆ ಇರುವ ಸ್ನಾಯುಗಳ (ಇಂಟರ್‌ಕೋಸ್ಟಲ್ ಮಸಲ್ಸ್‌) ಸಂಕುಚನೆ, ವಿಕಸನೆಗಳಿಂದ ಪಕ್ಕೆಲುಬುಗಳು ಚಲಿಸಲು ಪ್ರಾರಂಭಿಸುತ್ತವೆ. ಪಕ್ಕೆಲುಬುಗಳು ಮುಂದಕ್ಕೆ ಸರಿದಾಗ ಫಲಕದ ಮುಂದಿನ ಅಂಚು ಮೇಲಕ್ಕೆ ಬರುವುದು; ಹಿಂದಕ್ಕೆ ಚಲಿಸಿದಾಗ ಫಲಕದ ಹಿಂದಿನ ಅಂಚು ನೆಲದ ಏರುತಗ್ಗುಗಳನ್ನು ಬಿಗಿಯಾಗಿ ಅಪ್ಪಿಕೊಳ್ಳುವುದು. ಅನಂತರ ಸ್ನಾಯುಗಳ ಸಂಕುಚನೆ ಮತ್ತು ವಿಕಸನೆಗಳಿಂದ ದೇಹದ ಹಿಂಭಾಗ ಮುಂದಕ್ಕೆ ಎಳೆಯಲ್ಪಡುವುದು.[೪೦] ಈ ಚಲನೆಗೆ ಬಾಲವೂ ಸಹಾಯ ಮಾಡುತ್ತದೆ. ಉದರ ಫಲಕಗಳ ಚಲನೆಯ ವೈಚಿತ್ರ್ಯವೇ ಅದು ಡೊಂಕುಡೊಂಕಾಗಿ ಹರಿಯಲು ಕಾರಣ. ಮರ ಹತ್ತುವ ಹಾವುಗಳಲ್ಲಿ ಉದರ ಫಲಕಗಳು ದೋಣಿಯ ತಳಭಾಗದಂತೆ ಜೋಡಿಸಲ್ಪಟ್ಟಿರುತ್ತವೆ. ಇದರಿಂದಲೇ ಅವು ನೇರವಾಗಿ ಮರವನ್ನು ಹತ್ತಬಲ್ಲವು.[೪೧] ನೀರಿನಲ್ಲಿ ವಾಸಿಸುವ ಹಾವುಗಳಿಗೆ ಉದರಫಲಕಗಳ ಅಗತ್ಯವಿಲ್ಲ.

ತನ್ನ ದೇಹದ ಗಾತ್ರಕ್ಕಿಂತಲೂ ದೊಡ್ಡ ಗಾತ್ರದ ಪ್ರಾಣಿಗಳನ್ನು ಹಾವು ನುಂಗಬಲ್ಲುದೆಂಬುದು ನಿಜಕ್ಕೂ ಒಂದು ಆಶ್ಚರ್ಯವಾದ ಸಂಗತಿ. ಇದರ ಗುಟ್ಟು ಅದರ ದೇಹದ ಅಸ್ಥಿಪಂಜರದ ಜೋಡಣೆಯಲ್ಲಿದೆ. ಆಹಾರವನ್ನು ನುಂಗಲು ದೇಹರಚನೆಯಲ್ಲಿರುವ ಹೊಂದಿಕೆಗಳು ಹೀಗಿವೆ:

  1. ದವಡೆಯ ಮೂಳೆಗಳ ಅಂಚಿನಲ್ಲಿ ಮೂರು ಪಂಕ್ತಿಯ ಅನೇಕ ಚೂಪಾದ ಮತ್ತು ಹಿಮ್ಮುಖವಾಗಿ ಬಗ್ಗಿರುವ ಹಲ್ಲುಗಳಿವೆ.
  2. ಈ ಹಲ್ಲುಗಳು ಮುರಿದರೆ ಹೊಸ ಹಲ್ಲುಗಳು ಹುಟ್ಟುತ್ತವೆ.[೪೨]
  3. ಕೆಳದವಡೆ ನೇರವಾಗಿ ಮೇಲ್ದವಡೆಗೆ ಜೊಡಿಸಿಕೊಂಡಿಲ್ಲ. ಬದಲು ತಲೆಯ ಬರುಡೆಗೆ ಅಂಟಿರುವ ಕ್ವಾಡ್ರೇಟ್ ಮೂಳೆಗೆ ಜೋಡಿಸಿಕೊಂಡಿದೆ. ಈ ಜೋಡಣೆಯಿಂದ ದವಡೆ ಕೆಳಕ್ಕೂ ಮುಂದಕ್ಕೂ ಚಲಿಸಿ ಬಾಯಿಯ ಮುಂಭಾಗದಷ್ಟೇ ಅಗಲವಾಗಿ ಹಿಂಭಾಗದಲ್ಲಿಯೂ ತೆರೆಯಬಲ್ಲುದು.
  4. ಕೆಳದವಡೆಯ ಎರಡು ಭಾಗಗಳು ಮುಂಭಾಗದಲ್ಲಿ ಸೇರಿಲ್ಲ; ಆದರೆ ಸ್ಥಿತಿಸ್ಥಾಪಕಶಕ್ತಿಯುಳ್ಳ ಅಸ್ಥಿಬಂಧದ ತಂತುವಿನಿಂದ (ಲಿಗಮೆಂಟ್) ಜೋಡಣೆಗೊಂಡಿದೆ. ಇದರಿಂದ ಕೆಳದವಡೆಯ ಎರಡು ಭಾಗಗಳೂ ಪರ್ಯಾಯವಾಗಿ ಹಿಂದಕ್ಕೂ ಮುಂದಕ್ಕೂ ಚಲಿಸಬಲ್ಲವು.
  5. ಆಹಾರವನ್ನು ನುಂಗುವಾಗ ಕೆಳದವಡೆಯ ಒಂದು ಭಾಗವನ್ನು ಮೊದಲು ಮುಂದಕ್ಕೆ ಚಾಚಿ ಬೇಟೆಯ ಪ್ರಾಣಿಯ ದೇಹವನ್ನು ಬಲವಾಗಿ ಹಿಡಿದು ಬಾಯಿಯೊಳಕ್ಕೆ ಎಳೆಯುತ್ತದೆ. ಅಷ್ಟರಲ್ಲಿ ದವಡೆಯ ಮತ್ತೊಂದು ಭಾಗವನ್ನು ಮುಂದಕ್ಕೆ ಎಸೆದು ಪ್ರಾಣಿಯ ಮತ್ತೊಂದು ಭಾಗವನ್ನು ಹಿಡಿಯುತ್ತದೆ. ದವಡೆಯ ಭಾಗಗಳ ಈ ಪರ್ಯಾಯ ಚಲನೆಯನ್ನು ಬಾವಿಯಿಂದ ನೀರು ಸೇದುವಾಗ ರಾಟೆಯಿಂದ ಹಗ್ಗವನ್ನೆಳೆಯುವ ಕೈಗಳ ಚಲನೆಗೆ ಹೋಲಿಸಬಹುದು.
  6. ಉಸಿರಾಟದ ಕ್ರಮದಲ್ಲಿ ಮಾರ್ಪಾಡುಗಳು ಏರ್ಪಟ್ಟಿವೆ. ದೊಡ್ಡಪ್ರಾಣಿಯನ್ನು ನುಂಗಲು ಸ್ವಲ್ಪ ಸಮಯ ಹಿಡಿಯುವುದರಿಂದ ಆ ವೇಳೆಯಲ್ಲಿ ನಾಸಿಕ ರಂಧ್ರಗಳ ಮೂಲಕ ಗಾಳಿ ಪ್ರವೇಶಿಸಲು ಸಾಧ್ಯವಾಗದೇ ಉಸಿರಾಟಕ್ಕೆ ತೊಂದರೆಯಾಗಬಹುದು. ಆದ್ದರಿಂದ ಇಂಥ ಸಂದರ್ಭಗಳಲ್ಲಿ ಶ್ವಾಸನಾಳದ ರಂಧ್ರವನ್ನು ಕೆಳದವಡೆಯ ಎರಡು ಭಾಗಗಳ ಮಧ್ಯೆ ನೂಕಿ ಗಾಳಿಯನ್ನು ನೇರವಾಗಿ ಶ್ವಾಸಕೋಶಗಳೊಳಕ್ಕೆ ತೆಗೆದುಕೊಳ್ಳುತ್ತದೆ.
  7. ಗಂಟಲು, ಅನ್ನನಾಳ ಮತ್ತು ಜಠರಗಳು ಮಿತಿ ಮೀರಿ ಹಿಗ್ಗಬಲ್ಲವು. ಅವುಗಳಿಗೆ ವಿಶೇಷ ಸ್ಥಿತಿಸ್ಥಾಪಕಶಕ್ತಿ ಇದೆ. ಅಷ್ಟು ಹೆಚ್ಚು ಪರಿಮಾಣದ ಆಹಾರವನ್ನು ಅರಗಿಸಿಕೊಳ್ಳಲು ಸಹಾಯಕವಾಗುವಂತೆ ಜೀರ್ಣರಸಗಳು ಅತಿ ತೀಕ್ಷ್ಣವಾಗಿವೆ.
  8. ಎದೆಯ ಮೂಳೆ, ಭುಜ ಮತ್ತು ಸೊಂಟಪಟ್ಟಿಗಳು ಇಲ್ಲ. ಅಲ್ಲದೆ ಸುಲಭವಾಗಿ ಬಾಗುವಂಥ ಪಕ್ಕೆಲುಬುಗಳು ಇವೆ. ಈ ಅಸ್ಥಿಪಂಜರದ ರಚನೆಯಿಂದ ದೇಹ ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಹಿಗ್ಗಬಲ್ಲದು.
  9. ಆಹಾರವನ್ನು ನುಂಗುವಾಗ ತನ್ನ ಮೃದುವಾದ ತೆಳುವಾದ ಸೀಳಿರುವ ನಾಲಗೆಯ ಹಿಂದಿರುವ ರಕ್ಷಾಕವಚದೊಳಕ್ಕೆ ಎಳೆದುಕೊಳ್ಳುವ ಸಾಮರ್ಥ್ಯವಿದೆ.

ಹಾವುಗಳು ದೀರ್ಘಕಾಲ ಆಹಾರವಿಲ್ಲದೇ ಜೀವಿಸಬಲ್ಲವು. ಅದರಲ್ಲೂ ಸೆರೆಯಲ್ಲಿಟ್ಟ ಹಾವುಗಳಿಗೆ ಹಸಿವೆಯ ತೀಕ್ಷ್ಣತೆ ಬಲು ಕಡಿಮೆ. ನ್ಯೂಯಾರ್ಕಿನ ಪ್ರಾಣಿ ರಕ್ಷಣಾ ಉದ್ಯಾನಕ್ಕೆ ತಂದಿದ್ದ ದೈತ್ಯ ಹೆಬ್ಬಾವೊಂದು ಎರಡು ವರ್ಷಗಳ ದೀರ್ಘ ಕಾಲ ನಿರಶನದಲ್ಲಿದ್ದುದರ ನಿದರ್ಶನವಿದೆ. ಚಳಿಗಾಲದಲ್ಲಿ ಹಾವುಗಳು ಆಹಾರವಿಲ್ಲದೇ ದೀರ್ಘನಿದ್ರೆಯಲ್ಲಿರಬಲ್ಲುವು.

ವಿಷದ ಹಾವುಗಳಲ್ಲಿ ಲಾಲಾಗ್ರಂಥಿಗಳು ಅತ್ಯಂತ ಮಾರಕವಾದ ವಿಷವನ್ನು ಉತ್ಪತ್ತಿ ಮಾಡಬಲ್ಲ ಗ್ರಂಥಿಗಳು.[೪೩] ಮೇಲ್ದವಡೆಯ ಎರಡು ಪಕ್ಕಗಳಲ್ಲೂ ಚೀಲಗಳಂತೆ ಕಾಣುವ ಎರಡು ವಿಷದ ಗ್ರಂಥಿಗಳಿವೆ.[೪೪] ಇವುಗಳಿಗೆ ಸೇರಿರುವಂತೆ ಬಾಗಿರುವ ವಿಷದ ಹಲ್ಲುಗಳಿವೆ. ಇವುಗಳ ಉದ್ದಕ್ಕೂ ಮೇಲ್ಭಾಗದಲ್ಲಾಗಲೀ ಒಳಗಾಗಲೀ ಕಾಲುವೆ ಇದೆ.[೪೫][೪೬] ಸಾಮಾನ್ಯವಾಗಿ ಬಗ್ಗಿ ನಿಂತಿರುವ ಈ ಹಲ್ಲುಗಳು ಬೇಟೆಯ ಪ್ರಾಣಿ ಸಿಕ್ಕಾಗ ನೇರವಾಗಿ ನಿಂತು ಅದಕ್ಕೆ ಹೊಡೆಯುವುದು. ಇದರಿಂದ ಮೇಲ್ದವಡೆಯ ಎಲುಬುಗಳು ಚಲಿಸಿ ವಿಷದ ಚೀಲವನ್ನು ಒತ್ತುತ್ತವೆ. ಕೂಡಲೆ ವೈದ್ಯರ ಪಿಚಕಾರಿಯಂತೆ ಕಾಲುವೆಯ ಮೂಲಕ ವಿಷ ಪ್ರಾಣಿಯ ಮಾಂಸಖಂಡದೊಳಗೆ ನುಗ್ಗುತ್ತದೆ. ರೆಪ್ಪೆ ಬಡಿಯುವುದರೊಳಗೆ ಇಷ್ಟು ಚಲನೆಗಳೂ ನಡೆದುಹೋಗಿರುತ್ತವೆ. ವಿಷ ರಕ್ತಪ್ರವಾಹವನ್ನು ಸೇರಿ ನರವ್ಯೂಹ, ಹೃದಯ ಮತ್ತು ಶ್ವಾಸಾಂಗಗಳನ್ನು ದುರ್ಬಲಗೊಳಿಸಿ ಕ್ರಮೇಣ ಪ್ರಾಣಿಯ ಸಾವಿಗೆ ಕಾರಣವಾಗುತ್ತವೆ.[೪೬]

ಕಿಲೋನಿಯ ಗಣ

[ಬದಲಾಯಿಸಿ]

ಅನಾಪ್ಸಿಡಾ ಉರಗಗಳ ಒಂದು ಗಣ. ನೆಲ ಮತ್ತು ಸಿಹಿನೀರಿನ ಆಮೆಗಳನ್ನೂ, ಸಮುದ್ರದ ಕಡಲಾಮೆಗಳನ್ನೂ ಇದಕ್ಕೆ ಸೇರಿಸಿದೆ. ಈಗ ಉಳಿದಿರುವ ಸರೀಸೃಪಗಳ ಪೈಕಿ ಬಹಳ ಪ್ರಾಚೀನವಾದ ಪ್ರಾಣಿಗಳು ಈ ಆಮೆಗಳು. ಇವು ಅನಾಪ್ಸಿಡದ ಯಾವ ಶಾಖೆಯಿಂದ ವಿಕಸಿಸಿದವು; ಮತ್ತು ಇವುಗಳ ಪೂರ್ವಜರು ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಕಪಾಲದ ಎಲುಬುಗಳಲ್ಲಿ ರಂಧ್ರವಿಲ್ಲದೆ ಒತ್ತಾಗಿ ಜೋಡಿಸಿರುವುದು ಆದಿ ಉರಗಗಳ ಒಂದು ಲಕ್ಷಣ. ಈ ಕಾರಣದಿಂದಲೇ ಇದರ ಪೂರ್ವಜರು 20 ಕೋಟಿ ವರ್ಷಗಳ ಹಿಂದೆ ಅಂದರೆ ದೈತ್ಯೋರಗಗಳು ಕಾಣಿಸುವ ಮೊದಲೇ ಭೂಮಿಯ ಮೆಲೆ ಜನಿಸಿರಬಹುದು ಎಂದು ಅನೇಕರ ಅಬಿಪ್ರಾಯ. ಬಲಿಷ್ಠವಾದ ದೈತ್ಯೋರಗಗಳು ಬಾಳಲಾರದೇ ಲಯವಾದರೂ ಕೊನೆಯ ಪಕ್ಷ 15 ಕೋಟಿ ವರ್ಷಗಳಿಂದ ಆಮೆಯ ಕುಲ ಹೆಚ್ಚು ಬದಲಾವಣೆ ಇಲ್ಲದೆ ಬದುಕಿರುವುದು ಒಂದು ಆಶ್ಚರ್ಯ. ಈ ದೀರ್ಘಕಾಲದ ಉಳಿವಿಗೆ ಬಹುಶಃ ಆಮೆಯ ವಿಶಿಷ್ಟವಾದ ಅಸ್ಥಿಪಂಜರವೇ ಒಂದು ಕಾರಣವಿರಬಹುದು.

ಸಾಮಾನ್ಯವಾಗಿ ಭೂಮಿಯ ಆಮೆಗಳನ್ನು ಟಾರ್ಟಾಯ್ಸ್ ಎಂದೂ, ಗಟ್ಟಿಚಿಪ್ಪಿನ ಸಿಹಿ ನೀರಿನ ಆಮೆಗಳನ್ನು ಟೆರ್ರಾಪಿನ್ ಎಂದೂ ಸಮುದ್ರದಲ್ಲಿ ಮತ್ತು ಸಮುದ್ರದ ತೀರದಲ್ಲಿ ವಾಸಿಸುವ ಆಮೆಗಳನ್ನು ಟರ್ಟಲ್ಸ್‌ ಅಥವಾ ಕಡಲಾಮೆಗಳೆಂದೂ ಉರಗ ಶಾಸ್ತ್ರಜ್ಞನೆನಿಸಿದ ರೇಮಾಂಡ್ ಡಿಟ್ಮಾರ್ಸ್‌ ವರ್ಗೀಕರಿಸಿದ್ದಾರೆ.

ರಕ್ತಪರಿಚಲನೆ ಮತ್ತು ಹೃದಯ

[ಬದಲಾಯಿಸಿ]

ಸರೀಸೃಪಗಳ ಹೃದಯದಲ್ಲಿ ಹೃತ್ಕರ್ಣ ಎರಡು ವಿಭಾಗವಾಗಿದೆ. ಪ್ರಪ್ರಥಮವಾಗಿ ಹೃತ್ಕುಕ್ಷಿಯಲ್ಲಿ ಅಪೂರ್ಣ ಅಡ್ಡ ಭಿತ್ತಿಯೊಂದು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಹೃತ್ಕುಕ್ಷಿ ಅಪೂರ್ಣವಾಗಿ ಬಲ ಮತ್ತು ಎಡಭಾಗಗಳಾಗಿ ವಿಭಾಗವಾಗಿದೆ. ಅಯೋರ್ಟ ಮತ್ತು ಕೋನಸ್‌ಗಳು ಬುಡಭಾಗದಲ್ಲೇ ಬೇರೆಯಾಗುವುದರುಂದ ಪಲ್ಮನರಿ ಅಪಧಮನಿ ಹೃದಯದಿಂದ ಪ್ರತ್ಯೇಕ ಧಮನಿಯಾಗಿಯೇ ಹೊರಡುತ್ತದೆ. ಆಯೋರ್ಟದ ಎರಡು ಕವಲುಗಳು ಕೋನಸಿನ ಬುಡದಲ್ಲೇ ಬೇರೆಯಾಗುತ್ತವೆ. ಆದ್ದರಿಂದ ಮೂರು ಅಪಧಮನಿಗಳು ಹೃದಯದಿಂದಲೇ ಹೊರಡುತ್ತವೆ. ಎಲ್ಲ ಅಪಧಮನಿಗಳ ಬುಡದಲ್ಲಿ ಕವಾಟಗಳಿವೆ. ಸೈನಸ್ ವಿನೋಸಸ್ ಸಣ್ಣದಾಗಿದೆ. ಇದು ಬಲ ಹೃತ್ಕರ್ಣದ ಹತ್ತಿರವಿದ್ದು ಅದಕ್ಕೆ ತಾಗಿಕೊಂಡಿದೆ.

ಸಾರಾಂಶ

[ಬದಲಾಯಿಸಿ]

ಕಶೇರುಕಗಳನ್ನೆಲ್ಲ ಒಟ್ಟಾಗಿ ನೋಡಿದರೆ ಉರಗಗಳು ಅವುಗಳ ಮಧ್ಯದ ಸಮೂಹದಲ್ಲಿವೆ ಎಂದು ಹೇಳಬಹುದು. ಕಣ್ಮರೆಯಾದ ಕೆಲವು ಆದಿ ಉರಗಗಳು ಹಲವು ಆದಿ ದ್ವಿಚರಿಗಳಿಗೆ ನಿಕಟ ಸಂಬಂಧವನ್ನು ತೋರಿಸುತ್ತದೆ. ಮತ್ತೆ ಕೆಲವು ಉರಗಗಳಲ್ಲಿರುವ ಗುಣಲಕ್ಷಣಗಳು ಪುನಃ ಪಕ್ಷಿಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಂಡಿರುವುದರಿಂದ ಪಕ್ಷಿಗಳು ಆದಿ ಥೀಕೋಡಾಂಟ್ಸ್‌ ಉರಗಗಳ ಕಾಂಡದಿಂದ ವಿಕಸಿಸಿದುವು ಎಂಬ ವಾದವನ್ನು ಸಮರ್ಥಿಸುತ್ತವೆ. ಸಸ್ತನಿಗಳು ಕೂಡ ಬಹುಶಃ ಉರಗದ ಕಾಂಡದ ಹೆಚ್ಚು ಮುಂದುವರಿದ ಆದಿಭಾಗದ ಥೀರಾಪ್ಸಿಡ್ ಕ್ರಮದಿಂದ ವಿಕಸಿಸಿದವು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಈ ಮೇಲೆ ಹೇಳಿದ ಕಾರಣಗಳಿಂದಲೇ ಉರಗಗಳು ಜೀವವಿಜ್ಞಾನಿಯ ಕುತೂಹಲವನ್ನು ಹೆಚ್ಚು ಕೆರಳಿಸಿವೆ ಎಂದು ಹೇಳಬಹುದು. ಒಂದು ಸಾಮಾನ್ಯ ಬಿಂದುವಿನಿಂದ ಪ್ರಾರಂಭವಾದ ಪ್ರಾಣಿವರ್ಗ ವಿವಿಧ ವಾತಾವರಣಗಳ ಅಗತ್ಯಗಳಿಗೆ ಅನುಗುಣವಾಗಿ ತನ್ನ ದೇಹವನ್ನು ಅಳವಡಿಸಿಕೊಳ್ಳುತ್ತ ಹೋಗುತ್ತದೆ. ಇದರಿಂದ ನಾನಾ ಬಗೆಯ ಪ್ರಾಣಿಗಳು ಉಂಟಾಗುವುದು ಕಂಡುಬರುತ್ತದೆ. ಈ ಒಂದು ನಿಯಮವನ್ನು ಆಸ್‍ಬಾರ್ನ್‌ ಎಂಬ ವಿಜ್ಞಾನಿ ಮೊದಲ ಬಾರಿಗೆ ಹೊಂದಾಣಿಕೆಯ ವಿಕಿರಣ (ಅಡಾಪ್ಟಿವ್ ರೇಡಿಯೇಷನ್) ಎಂಬುದಾಗಿ ಕರೆದ. ಆತ ಉರಗವರ್ಗದ ಪ್ರಾಣಿಗಳ ವಿಕಸನದ ಆಧಾರದ ಮೇಲೆಯೇ ಈ ವಾದವನ್ನು ಪ್ರತಿಪಾದಿಸಿದ್ದು. ಆದಿ ಉರಗಗಳು ಜೀವನ ಸಂಗ್ರಾಮದಲ್ಲಿ ಗೆದ್ದು ಬದುಕಲು ಅನೇಕ ಮಾರ್ಗಗಳನ್ನು ಹಿಡಿದವು. ಟಿರೋಸಾರುಗಳಂಥವು ವಾಯುಮಂಡಲದ ಜೀವನಕ್ಕೂ, ಇಕ್ತಿಯೋಸಾರಿನಂಥವು ಜಲಜೀವನಕ್ಕೂ, ಸೌರಾಪೊಡ ದೈತ್ಯೋರಗಗಳಂಥವು ದ್ವಿಚರಿ ಜೀವನಕ್ಕೂ, ಹಾವಿನಂಥ ಕೆಲವು ಬಿಲ ಮತ್ತು ಕೊರಕಲುಗಳ ಜೀವನಕ್ಕೂ ಮತ್ತೆ ಕೆಲವು ವೃಕ್ಷ ಜೀವನಕ್ಕೂ ತಕ್ಕಂತೆ ದೇಹವನ್ನು ಅಳವಡಿಸಿಕೊಂಡುವು. ಇವೆಲ್ಲ ಸಂದರ್ಭಗಳಲ್ಲೂ ಉಂಟಾಗಿರುವ ಮಾರ್ಪಾಡುಗಳು ಆ ಪ್ರಾಣಿಯ ಚಲನೆಗೆ ಸಂಬಂಧವಾದುದು ಎಂಬುದು ಒಂದು ಗಮನಾರ್ಹವಾದ ವಿಷಯ.

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Colbert, Edwin H. (1969). Evolution of the Vertebrates (2nd ed.). New York, NY: John Wiley and Sons Inc. ISBN 978-0-471-16466-1.
  • Landberg, Tobias; Mailhot, Jeffrey; Brainerd, Elizabeth (2003). "Lung ventilation during treadmill locomotion in a terrestrial turtle, Terrapene carolina". Journal of Experimental Biology. 206 (19): 3391–3404. doi:10.1242/jeb.00553. PMID 12939371.
  • Pianka, Eric; Vitt, Laurie (2003). Lizards: Windows to the evolution of diversity. University of California Press. pp. 116–118. ISBN 978-0-520-23401-7.
  • Pough, Harvey; Janis, Christine; Heiser, John (2005). Vertebrate Life. Pearson Prentice Hall. ISBN 978-0-13-145310-4.

ಉಲ್ಲೇಖಗಳು

[ಬದಲಾಯಿಸಿ]
  1. Sahney, S.; Benton, M.J.; Ferry, P.A. (2010). "Links between global taxonomic diversity, ecological diversity and the expansion of vertebrates on land". Biology Letters. 6 (4): 544–547. doi:10.1098/rsbl.2009.1024. PMC 2936204. PMID 20106856.
  2. Sahney, S. & Benton, M.J. (2008). "Recovery from the most profound mass extinction of all time". Proceedings of the Royal Society B. 275 (1636): 759–765. doi:10.1098/rspb.2007.1370. PMC 2596898. PMID 18198148.
  3. Colbert, E.H. & Morales, M. (2001): Colbert's Evolution of the Vertebrates: A History of the Backboned Animals Through Time. 4th edition. John Wiley & Sons, Inc, New York — ISBN 978-0-471-38461-8.
  4. Benton, Michael J. (1997). Vertebrate Palaeontology. London: Chapman & Hall. pp. 105–109. ISBN 978-0-412-73810-4.
  5. Cieri, R.L., Hatch, S.T., Capano, J.G. et al. (2020). Locomotor rib kinematics in two species of lizards and a new hypothesis for the evolution of aspiration breathing in amniotes. Sci Rep 10. 7739. https://doi.org/10.1038/s41598-020-64140-y
  6. Janis, C. M., Napoli, J. G., & Warren, D. E. (2020). Palaeophysiology of pH regulation in tetrapods. Philosophical Transactions of the Royal Society B: Biological Sciences, 375 (1793), 20190131. https://doi.org/10.1098/rstb.2019.0131
  7. Hickman, Cleveland P. Jr (17 October 2016). Integrated principles of zoology (Seventeenth ed.). McGraw-Hill. pp. 563–567. ISBN 978-1-259-56231-0.
  8. Gauthier, J.A. (1994). "The diversification of the amniotes". In Prothero, D.R.; Schoch, R.M. (eds.). Major Features of Vertebrate Evolution. Vol. 7. Knoxville, TN: The Paleontological Society. pp. 129–159. doi:10.1017/S247526300000129X. {{cite book}}: |journal= ignored (help)
  9. Lydekker, Richard (1896). Reptiles and Fishes. The Royal Natural History. London, UK: Frederick Warne & Son. pp. 2–3. Retrieved March 25, 2016.
  10. "de beste bron van informatie over cultural institution. Deze website is te koop!". Curator.org. Archived from the original on September 17, 2009. Retrieved March 16, 2010.
  11. Benton, Michael J. (2005). Vertebrate Palaeontology (3rd ed.). Oxford, UK: Blackwell Science. ISBN 978-0-632-05637-8. Archived from the original on 2008-10-19. Retrieved 2015-02-15.
  12. Benton, Michael J. (2014). Vertebrate Palaeontology (4th ed.). Oxford, UK: Blackwell Science. ISBN 978-0-632-05637-8.
  13. Martin, Jeremy E.; Benton, Michael J. (2008). "Crown Clades in Vertebrate Nomenclature: Correcting the Definition of Crocodylia". Systematic Biology. 57 (1): 173–181. doi:10.1080/10635150801910469. PMID 18300130.
  14. "The IUCN Red List of Threatened Species". IUCN Red List of Threatened Species. Retrieved 2018-10-25.
  15. "The IUCN Red List of Threatened Species". IUCN Red List of Threatened Species. Retrieved 2018-10-25.
  16. Concise Encyclopaedia Of India. p. 46.
  17. Yadav, S. K.; Nawab, A. & Afifullah Khan, A. (2013). "Conserving the Critically Endangered Gharial Gavialis gangeticus in Hastinapur Wildlife Sanctuary, Uttar Pradesh: Promoting better coexistence for conservation" (PDF). World Crocodile Conference. Proceedings of the 22nd Working Meeting of the IUCN-SSC Crocodile Specialist Group. Gland: IUCN Crocodile Specialist Group. pp. 78−82.
  18. "An endangered apex predator returns to the Ganga River". World Wildlife Fund (in ಇಂಗ್ಲಿಷ್). Retrieved 15 August 2023.
  19. Saikia, B. P. (2010). "Indian Gharial (Gavialis gangeticus): Status, ecology and conservation". In Singaravelan, N. (ed.). Rare Animals of India. Sharjah: Bentham Science Publishers. pp. 76–100. ISBN 9781608054855.
  20. Amarasinghe, A. T.; Madawala, M. B.; Karunarathna, D. S.; Manolis, S. C.; de Silva, A. & Sommerlad, R. (2015). "Human-crocodile conflict and conservation implications of saltwater crocodiles Crocodylus porosus (Reptilia: Crocodylia: Crocodylidae) in Sri Lanka". Journal of Threatened Taxa. 7 (5): 7111–7130. doi:10.11609/JoTT.o4159.7111-30.
  21. Messel, H. & Vorlicek, G. C. (1986). "Population-Dynamics and Status of Crocodylus porosus in the Tidal Waterways of Northern Australia". Wildlife Research. 13 (1): 71–111. doi:10.1071/WR9860071.
  22. Read, M. A.; Miller, J. D.; Bell, I. P. & Felton, A. (2005). "The distribution and abundance of the estuarine crocodile, Crocodylus porosus, in Queensland" (PDF). Wildlife Research. 31 (5): 527–534. doi:10.1071/WR02025.
  23. Dundee, H. A., and D. A. Rossman. 1989. The Amphibians and Reptiles of Louisiana. Baton Rouge: Louisiana State University Press.
  24. "Crocodilian Attacks". IUCN Crocodile Specialist Group (iucncsg.org). Retrieved 3 February 2013.
  25. Stevenson, C. & Whitaker, R. (2010). "Gharial Gavialis gangeticus" (PDF). In Manolis, S. C. & Stevenson, C. (eds.). Crocodiles. Status Survey and Conservation Action Plan (Third ed.). Darwin: Crocodile Specialist Group. pp. 139–143.
  26. Wolfe, J. L., D. K. Bradshaw, and R. H. Chabreck. 1987. Alligator feeding habits: New data and a review. Northeast Gulf Science 9: 1–8.
  27. Gabrey, S. W. 2005. Impacts of the coypu removal program on the diet of American alligators (Alligator mississippiensis) in south Louisiana. Report to Louisiana Department of Wildlife and Fisheries, New Orleans.
  28. Whitaker, R. & Whitaker, Z. (1989). "Ecology of the mugger crocodile" (PDF). Crocodiles, their ecology, management, and conservation. Gland: IUCN Crocodile Specialist Group. pp. 276–296.{{cite book}}: CS1 maint: multiple names: authors list (link)
  29. "UNEP-WCMC – Estuarine Crocodile". Archived from the original on 14 ಆಗಸ್ಟ್ 2001. Retrieved 25 ಜುಲೈ 2013.
  30. Grigg and Gans, pp. 326–327.
  31. Kelly, pp. 70–75.
  32. "AquaFacts: Crocodilians". Vancouver Aquarium. Archived from the original on 16 ಫೆಬ್ರವರಿ 2018. Retrieved 16 February 2018.
  33. Grigg and Gans, pp. 331–332.
  34. Gans, Carl (1996). "An Overview of Parental Care among the Reptilia". Advances in the Study of Behavior. 25: 153. doi:10.1016/s0065-3454(08)60332-0. ISBN 9780120045259.
  35. McDiarmid, Roy W. (2012). "Reptile Diversity and Natural History: An Overview". In McDiarmid, Roy W.; et al. (eds.). Reptile Biodiversity: Standard Methods for Inventory and Monitoring. University of California Press. p. 13. ISBN 978-0520266711.
  36. Behler & King 1979, p. 581.
  37. Bagla P (April 23, 2002). "India's Snake Charmers Fade, Blaming Eco-Laws, TV". National Geographic News. Archived from the original on December 18, 2007. Retrieved November 26, 2007.
  38. ೩೮.೦ ೩೮.೧ Cogger & Zweifel 1992, p. 180.
  39. Mader D (June 1995). "Reptilian Anatomy". Reptiles. 3 (2): 84–93.
  40. Cogger & Zweifel 1992, p. 175.
  41. Astley HC, Jayne BC (November 2007). "Effects of perch diameter and incline on the kinematics, performance and modes of arboreal locomotion of corn snakes (Elaphe guttata)". The Journal of Experimental Biology. 210 (Pt 21): 3862–72. doi:10.1242/jeb.009050. PMID 17951427.
  42. Gaete M, Tucker AS (2013). "Organized emergence of multiple-generations of teeth in snakes is dysregulated by activation of Wnt/beta-catenin signalling". PLOS ONE. 8 (9): e74484. Bibcode:2013PLoSO...874484G. doi:10.1371/journal.pone.0074484. PMC 3760860. PMID 24019968.
  43. Oliveira, Ana L.; Viegas, Matilde F.; da Silva, Saulo L.; Soares, Andreimar M.; Ramos, Maria J.; Fernandes, Pedro A. (July 2022). "The chemistry of snake venom and its medicinal potential". Nature Reviews Chemistry (in ಇಂಗ್ಲಿಷ್). 6 (7): 451–469. doi:10.1038/s41570-022-00393-7. ISSN 2397-3358. PMC 9185726. PMID 35702592.
  44. Freiberg & Walls 1984, p. 123.
  45. Mehrtens, J. M. (1987). Living Snakes of the World in Color. New York: Sterling Publishers. ISBN 0-8069-6460-X.
  46. ೪೬.೦ ೪೬.೧ Freiberg & Walls 1984, p. 125.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸರೀಸೃಪ&oldid=1203446" ಇಂದ ಪಡೆಯಲ್ಪಟ್ಟಿದೆ