ಕಿವಿರುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಲಚರಗಳಲ್ಲಿ ಅನಿಲವಿನಿಮಯಕ್ಕಾಗಿ ಇರುವ ವಿಶಿಷ್ಟ ಬಗೆಯ ಉಸಿರಾಟದ ಅಂಗಾಂಗಳು (ಗಿಲ್ಸ್). ಇವುಗಳಲ್ಲಿ ಹೊರಮೈ ಪದರ ಅತಿ ತೆಳುವಾಗಿದ್ದು ಅದರ ಮೂಲಕ ಅನಿಲ ವಿನಿಮಯ ನಡೆಯುತ್ತದೆ. ನೀರಿನಲ್ಲಿ ಬೆರೆತಿರುವ ಆಮ್ಲಜನಕ ಈ ಪದರದ ಮೂಲಕ ಹಾದು ರಕ್ತದೊಡನೆ ಬೆರೆಯುತ್ತದೆ. ರಕ್ತದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಈ ಪದರದ ಮೂಲಕ ಹೊರ ಹಾದು ನೀರಿನೊಂದಿಗೆ ಬೆರೆಯುತ್ತದೆ. ಇದು ಸೂಕ್ಷ್ಮಾಭಿಸರಣೆಗೆ (ಆಸ್ಮಾಸಿಸ್) ಅನುಗುಣವಾಗಿ ನಡೆಯುತ್ತದೆ. ಅನಿಲವಿನಿಮಯಕ್ಕೆ ಸಹಾಯಕವಾಗುವಂತೆ ಕಿವಿರುಗಳು ಅಗಲವಾದ ತಟ್ಟೆಗಳಂತೆಯೋ ನೇರವಾದ ಗರಿಗಳಂತೆಯೋ ಉದ್ದವಾದ ತಂತುಗಳಂತೆಯೊ ರೂಪುಗೊಂಡಿದ್ದು ಸಾಕಷ್ಟು ವಿನಿಮಯಾವಕಾಶವಿರುತ್ತದೆ. ಅಕಶೇರುಕ ಜಲಚರಗಳಾದ ವಲಯವಂತಗಳು (ಅನೆಲಿಡ), ಕಠಿಣ ಚರ್ಮಿಗಳು (ಕ್ರಸ್ಟೇಸಿಯ), ಜಲಕೀಟಗಳು, ಮೃದ್ವಂಗಿಗಳು (ಮೊಲಸ್ಕ) ಮತ್ತು ಕಂಟಕಚರ್ಮಿ (ಎಕಿನೊಡರ್ಮೇಟ) ಹಾಗೂ ಕಶೇರುಕಗಳಾದ ಮೀನು ಮತ್ತು ಕೆಲವು ದ್ವಿಚರಿಗಳಲ್ಲಿ (ಆಂಫಿಬಿಯ) ಕಿವಿರಗಳನ್ನು ಕಾಣಬಹುದು.

ಶ್ವಾಸಾಂಗ[ಬದಲಾಯಿಸಿ]

ಹಲವಾರು ಆದಿ ಜಲಜೀವಿಗಳಲ್ಲಿ ಹೊರಮೈ ಚರ್ಮವೇ ಶ್ವಾಸಾಂಗ. ಇದರ ಮೂಲಕವೇ ಅನಿಲವಿನಿಮಯ ನಡೆಯುತ್ತದೆ. ಆದರೆ ವಿಕಾಸದ ಹಂತದಲ್ಲಿ ಪ್ರಾಣಿಗಳಲ್ಲಿ ಅನಿಲವಿನಿಮಯಕ್ಕಾಗಿ ವಿಶೇಷ ಶ್ವಾಸಾಂಗಗಳು ಇವೆ. ವಿನಿಮಯ ನಡೆಯುವ ಜಾಗ ಶ್ವಾಸಾಂಗದಲ್ಲಿ ಕೇಂದ್ರಿಕೃತವಾಗಿದೆ. ಹೀಗೆ ಕೇಂದ್ರೀಕೃತವಾದ ವಿನಿನಮಯಾಂಗಗಳೇ ಕಿವಿರುಗಳು. ಇವು ಸಾಮಾನ್ಯವಾಗಿ ಅಗಲವಾದ ಫಲಕಗಳಂತೆಯೋ ಅತಿ ಸೂಕ್ಷವಾಗಿ ಕೇಸರಗಳ ಗಂಟಿನಂತೆಯೋ ಇರುತ್ತವೆ. ಸಂದಿಪದಿಗಳಲ್ಲಿ, ಅದರಲ್ಲಿಯೂ ಕೀಟವರ್ಗದಲ್ಲಿ ಕೆಲವು ಕೀಟಗಳು ತಮ್ಮ ಪ್ರೌಢಾವಸ್ಥೆಯಲ್ಲಿ ಶ್ವಾಸನಾಳಗಳ ಮೂಲಕ ಉಸಿರಾಡಿದರೂ ಡಿಂಭಾವಸ್ಥೆಯಲ್ಲಿ ಸಣ್ಣ ತಂತುವಿನಂತಿರುವ ಕಿವಿರುಗಳ ಸಹಾಯದಿಂದ ಉಸಿರಾಡುತ್ತದೆ. ಈ ಕಿವಿರುಗಳೊಂದಿಗೆ ರಕ್ತನಾಳಗಳ ಸಂಪರ್ಕ ಉಂಟು. ಕಠಿಣಚರ್ಮಿಗಳ ಕಿವಿರುಗಳು ಎದೆಯ ಭಾಗದ ಉಪಾಂಗಗಳಿಗೆ ಹೊಂದಿಕೊಂಡಿವೆ. ಇವು ದೇಹದಿಂದ ಹೊರ ಚಾಚಿಕೊಂಡಿದ್ದು ಹೊರಮೈಯಲ್ಲಿರುವ ಪದರಗಳೆಲ್ಲವೂ-ಈ ಕಿವಿರಿನಲ್ಲಿವೆ. ಕಿವಿರುಗಳ ಹೊರಭಾಗದಲ್ಲಿ ದೇಹಕ್ಕೆ ಹೊಂದಿಕೊಂಡಿರುವಂತೆ ತೆಳುವಾದ ಕೈಟಿನ್ ಪದರವಿದೆ. ಇದರ ಕೆಳಗೆ ಎಪಿತೀಲಿಯಲ್ ಪದರವಿದೆ. ಇದರ ಕೆಳಗೆ ಸಂಯೋಜಕ ಅಂಗಾಂಶವಿದೆ. ಇದರಲ್ಲಿ ರಕ್ತಪರಿಚಲನೆಗಾಗಿ ರಕ್ತನಾಳಗಳು ಮತ್ತು ಗ್ರಂಥಿಗಳಿವೆ. ಕಿವಿರುಗಳನ್ನೆಲ್ಲ ಮೇಲಿಂದ ಮುಚ್ಚುವಂತೆ ಕಿವಿರುಮುಚ್ಚಳ ಅಥವಾ ರಕ್ಷಣಾಚಿಪ್ಪು ಇದೆ.[೧]

ಕಂಟಕಚರ್ಮಿಗಳು[ಬದಲಾಯಿಸಿ]

ಕಂಟಕಚರ್ಮಿಗಳು ಮತ್ತೊಂದು ಜಲಚರಗಳ ಗುಂಪು. ಇವುಗಳಲ್ಲಿಯೂ ಉಸಿರಾಡುವಿಕೆ ಕಿವಿರುಗಳ ಮೂಲಕ ನಡೆಯುತ್ತದೆ. ಬಾಯಿಗೆ ವಿರುದ್ಧವಾದ ಮೇಲುಮೈಯಲ್ಲಿ ಸಣ್ಣ ಸಣ್ಣ ರಂಧ್ರಗಳಿವೆ. ಇವುಗಳ ಮೂಲಕ ಚರ್ಮಕಿವಿರುಗಳು (ಡರ್ಮಲ್ ಬ್ರಾಂಕಿಯೆ) ಹೊರ ಚಾಚಿರುತ್ತವೆ. ಇವು ಚಿಕ್ಕದಾಗಿದ್ದು ಇವುಗಳಲ್ಲಿ ಹೊರಚರ್ಮದ ಎಲ್ಲ ಪದರಗಳೂ ಇವೆ. ಚರ್ಮಕಿವಿರುಗಳು ಅನಿಲವಿನಿಮಯ ಕಾರ್ಯವನ್ನು ನಿರ್ವಹಿಸುತ್ತವೆ. ಈ ರೀತಿಯ ಧರ್ಮ ಕಿವಿರುಗಳನ್ನು ನಕ್ಷತ್ರಮೀನು (ಸ್ಟಾರ್ ಫಿಶ್), ಕಡಲಕುಡಿಕೆ(ಸೀ ಅರ್ಚಿನ್)ಗಳಲ್ಲಿ ನೋಡಬಹುದು. ಸಮುದ್ರ ಸೌತೆಯಲ್ಲಿ (ಸೀ ಕುಕುಂಬರ್) ಗುದದ್ವಾರಕ್ಕೆ ಅಂಟಿರುವಂತೆ ಕವಲೊಡೆದ ಎರಡು ಶ್ವಾಸವೃಕ್ಷಗಳಿವೆ. ಇವು ಟೊಳ್ಳಾಗಿದ್ದು ದೇಹದ ಮುಂಭಾಗದ ವರೆಗೂ ಹರಡಿಕೊಂಡಿವೆ. ಶ್ವಾಸವೃಕ್ಷಗಳ ಕವಲುಗಳ ಕೊನೆಯಲ್ಲಿ ಉಬ್ಬಿದ ಭಾಗಗಳು (ಅಂಪುಲೆ) ಇವೆ. ಸಮುದ್ರದ ನೀರು ಗುದದ್ವಾರದ ಮೂಲಕ ಒಳಹೊಕ್ಕು ಈ ಶ್ವಾಸವೃಕ್ಷವನ್ನು ತಲುಪುತ್ತದೆ.ಮೃದ್ವಂಗಿಗಳಲ್ಲಿಯೂ ಉಸಿರಾಡುವಿಕೆ ಕಿವಿರುಗಳ ಮೂಲಕವೇ ನಡೆಯುತ್ತದೆ. ಇಲ್ಲಿ ಕಿವಿರುಗಳು ಬಾಳೆಯ ಎಲೆಯಂತಿದ್ದು, ದೇಹದ ಭಾಗಗಳಿಗೂ ಮ್ಯಾಂಟಲ್‍ಗೂ ಮಧ್ಯೆ ಇರುವ ಮ್ಯಾಂಟಲ್ ಕುಹರದಲ್ಲಿ ಅಡಕವಾಗಿವೆ. ಇವು ದೇಹದಿಂದ ಹೊರಚಾಚಿವೆ. ಇವುಗಳಲ್ಲಿ ದೇಹದ ಎಲ್ಲ ಪದರಗಳೂ ಇರುವುದಲ್ಲದೆ ರಕ್ತನಾಳಗಳ ಸಂಪರ್ಕವೂ ಇದೆ. ಮ್ಯಾಂಟಲ್ ಕುಹರದ ಒಳಗೆ ಬರುವ ನೀರಿನಲ್ಲಿರುವ ಆಮ್ಲಜನಕವನ್ನು ಉಪಯೋಗಿಸಿಕೊಂಡು ಅನಿಲವಿನಿಮಯ ಕ್ರಿಯೆ ನಡೆಯುತ್ತದೆ.

ಆದಿಕಶೇರುಕಗಳಲ್ಲಿ ಕಿವಿರುಗಳು[ಬದಲಾಯಿಸಿ]

ಆದಿಕಶೇರುಕಗಳಲ್ಲಿ ಕಿವಿರುಗಳು ಗಂಟಲಿನ ಇಬ್ಬದಿಯಲ್ಲಿಯೂ ಇವೆ. ಗಂಟಲಿನ (ಫ್ಯಾರಿಂಕ್ಸ್) ಎರಡು ಪಕ್ಕದಲ್ಲಿಯೂ ಕಿವಿರು ರಂಧ್ರಗಳಿವೆ. ಆದಿಕಶೇರುಕ ಬೆಲನೊಗ್ಲಾಸಸ್‍ನಲ್ಲಿ U -ಆಕಾರದ ಕಿವಿರು ರಂಧ್ರಗಳಿವೆ. ಇವು ಕಿವಿರು ಕೋಶಕ್ಕೆ ಸಂಬಂಧ ಕಲ್ಪಿಸುತ್ತವೆ. ಕಿವಿರು ರಂಧ್ರ, ಕಿವಿರು ಕೋಶಗಳು ಒಂದರ ಹಿಂದೆ ಒಂದು ಇವೆ. ಕಿವಿರು ಕೋಶದ ಅಂಚಿನಲ್ಲಿ ಮಡಿಚಿಕೊಂಡಂತೆ ಕಿವಿರುಗಳಿವೆ. ನೀರು ಬಾಯಿಯ ಮೂಲಕ ಹರಿದು. ಗಂಟಲಿಗೆ ಹೋಗಿ ಕಿವಿರು ಕೋಶಗಳ ಮೂಲಕ ಹೊರಕ್ಕೆ ಹರಿಯುವಾಗ ಕಿವಿರುಗಳಲ್ಲಿ ಅನಿಲವಿನಿಮಯ ಕ್ರಿಯೆ ನಡೆಯುತ್ತದೆ.ಕಡಲಚಿಲುಮೆ(ಸೀ ಸ್ಕ್ವಿರ್ಟ್)ಗಳಲ್ಲಿ ದೊಡ್ಡದಾದ ಚೀಲದಂತಿರುವ ಗಂಟಲಿನ ಭಾಗವಿದೆ. ಇದಕ್ಕೆ ಜಲ ಶ್ವಾಸಾಂಗ ಕುಹರ ಎಂದು ಹೆಸರು. ಇದರಲ್ಲಿ ಒಂದರ ಮೇಲೊಂದು ಸಾಲಾಗಿ ಅಳವಡಿಸಿರುವ ಕಿವಿರು ರಂಧ್ರಗಳಿವೆ. ಇವುಗಳ ಮೈಮೇಲೆ ಲೋಮಾಂಗಗಳಿವೆ. ಕಿವಿರು ರಂಧ್ರಗಳ ಮೇಲೆ ಜಲಶ್ವಾಸಾಂಗ ಪದರಗಳು (ಬ್ರಾಂಕಿಯಲ್ ಲ್ಯಾಮೆಲೆ) ಇದ್ದು ಇವು ಅನಿಲವಿನಿಮಯ ಕಾರ್ಯವನ್ನು ಮಾಡುತ್ತವೆ.[೨]

ಪೆಟ್ರೋಮೈಜಾóನ್  ದವಡೆ[ಬದಲಾಯಿಸಿ]

ಮೀನನ್ನು ಹೋಲುವ ಪೆಟ್ರೋಮೈಜಾóನ್ ಎಂಬ ದವಡೆ ಇಲ್ಲದ ಕಶೇರುಕ ಜಲಚರದ ಗಂಟಲಿನ ಭಾಗದಲ್ಲಿ ದೇಹದ ಇಬ್ಬದಿಯಲ್ಲಿಯೂ 7 ಕಿವಿರು ರಂಧ್ರಗಳಿವೆ. ಪ್ರೌಢಾವಸ್ಥೆಯಲ್ಲಿ ಕಿವಿರು ರಂಧ್ರಗಳಿಗೂ ಅನ್ನನಾಳದ ಕೆಳಗೆ ಇರುವ ಶ್ವಾಸನಾಳಕ್ಕೂ ಸಂಪರ್ಕವಿದೆ. ಈ ಪ್ರಾಣಿಗಳಲ್ಲಿ ಕಿವಿರು ಕೋಶಗಳು ದ್ವಿಪೀನ ಮಸೂರದಂತಿದ್ದು ಅವುಗಳ ಒಳಮೈಯಲ್ಲಿ ಕಿವಿರು ಫಲಕಗಳು ಇರುತ್ತವೆ. ಇವೇ ಅನಿಲವಿನಿಮಯ ಕ್ರಿಯೆಯಲ್ಲಿ ಭಾಗವಹಿಸುವ ಪ್ರಮುಖ ಅಂಗಗಳು. ಇದೇ ಗುಂಪಿಗೆ ಸೇರಿದ, ಮಣ್ಣಿನಲ್ಲಿ ಹುದುಗಿ ಜೀವಿಸುವ ಮಿಕ್ಸೀನ್ ಎಂಬ ಜಲಚರದಲ್ಲಿ, ಅನ್ನನಾಳದ ಭಾಗದೊಂದಿಗೆ ನೇರವಾದ ಸಂಪರ್ಕ ಹೊಂದಿದ ಕಿವಿರು ಕೋಶಗಳಿವೆ.

ಎಲ್ಯಾಸ್ಮೊಬ್ರಾಂಕ್ ಅಥವಾ ಮೃದ್ವಸ್ಥಿ ಮೀನು[ಬದಲಾಯಿಸಿ]

ಎಲ್ಯಾಸ್ಮೊಬ್ರಾಂಕ್ ಅಥವಾ ಮೃದ್ವಸ್ಥಿ ಮೀನುಗಳಲ್ಲಿ ಕತ್ತಿನ ಭಾಗದಲ್ಲಿ ಇಬ್ಬದಿಯಲ್ಲಿಯೂ ಐದು ಬಿಡಿಬಿಡಿಯಾದ ಕಿವಿರು ರಂಧ್ರಗಳಿವೆ. ಮೊದಲ ನಾಲ್ಕು ಕಿವಿರುಕೋಶಗಳಲ್ಲಿ ಇಬ್ಬದಿಯಲ್ಲಿಯೂ ಕಿವಿರು ತಂತುಗಳು ಇವೆ. ಇವಕ್ಕೆ ಪೂರ್ಣ ಕಿವಿರುಗಳೆಂದು (ಹೋಲೊಬ್ರಾಂಕ್) ಹೆಸರು. ಕೊನೆಯ ಕಿವಿರುಕೋಶದಲ್ಲಿ ಮುಂಬದಿಯ ಅಂಚಿನಲ್ಲಿ ಮಾತ್ರ ಕಿವಿರು ತಂತುಗಳಿವೆ. ಇದನ್ನು ಅರ್ಧ ಕಿವಿರೆಂದು (ಹೆಮಿಬ್ರಾಂಕ್) ಕರೆಯಲಾಗುತ್ತದೆ. ಕಿವಿರುಗಳಿಗೆ ಮತ್ತು ಕಿವಿರುಕೋಶಗಳಿಗೆ ಮೃದ್ವಸ್ಥಿ ಪಂಜರದ ಆಸರೆಯಿದೆ. ಕಿವಿರುಮುಚ್ಚಳಗಳಿಲ್ಲ. ಕಿವಿರುಕೋಶಗಳು ಕಿವಿರುರಂಧ್ರದ ಮೂಲಕ ಹೊರಕ್ಕೆ ಸಂಪರ್ಕ ಪಡೆದಿದೆ.

ಟೀಲಿಯಾಸ್ಟಿಯೈ ಅಥವಾ ಎಲುಬು ಮೀನು[ಬದಲಾಯಿಸಿ]

ಟೀಲಿಯಾಸ್ಟಿಯೈ ಅಥವಾ ಎಲುಬು ಮೀನುಗಳಲ್ಲಿ ಕತ್ತಿನ ಭಾಗದಲ್ಲಿ ದೇಹದ ಇಬ್ಬದಿಯಲ್ಲಿ ನಾಲ್ಕು ಕಿವಿರುಗಳಿವೆ. ಇವು ನಾಲ್ಕು ಜಲಶ್ವಾಸಾಂಗ ಕಮಾನುಗಳ (ಬ್ರಾಂಕಿಯಲ್ ಆರ್ಚಸ್) ಮೇಲೆ ಜೋಡಣೆಗೊಂಡಿವೆ. ಪ್ರತಿ ಕಿವಿರಿಗೂ ಎರಡು ಕವಲಿದ್ದು ಒಂದೊಂದರಲ್ಲೂ ಹಲವಾರು ಕಿವಿರು ತಂತುಗಳಿವೆ. ಕಿವಿರಿಗೆ ಶುದ್ದ ರಕ್ತನಾಳದ ಮತ್ತು ಮಲಿನ ರಕ್ತನಾಳದ ಶಾಖೆಗಳಿವೆ. ಇವುಗಳಿಗೆ ಕಿವಿರಿನಲ್ಲಿ ಉಪಶಾಖೆಗಳಿವೆ. ಕಿವಿರುಗಳನ್ನು ಮುಚ್ಚಿರುವಂತೆ ಹಿಂದೆ ಮತ್ತು ಕೆಳಗೆ ಮಾತ್ರ ತೆರೆದಿರುವ ಕಿವಿರು ಮುಚ್ಚಳವಿದೆ. ಕಿವಿರುಗಳ ಶಾಖೆಗಳ ಮಧ್ಯೆ ಅಂತರ ಜಲಶ್ವಾಸಾಂಗ ಪೊರೆ (ಇಂಟರ್‍ಬ್ರಾಂಕಿಯಲ್ ಸೆಪ್ಟಮ್) ಇಲ್ಲ. ಆದರೆ ಗಂಟಲಿನ ಭಾಗಕ್ಕೆ ಹೊಂದಿಕೊಂಡಿರುವಂತೆ ಬಾಚಣಿಗೆಯಂತಿರುವ ಕಿವಿರುಹಲುವೆ ಇದೆ. ಬಾಯಿಯ ಮೂಲಕ ಹರಿದು ಬರುವ ನೀರು ತನ್ನ ಜೊತೆಯಲ್ಲಿ ಆಮ್ಲಜನಕದೊಂದಿಗೆ ಆಹಾರ ವಸ್ತುಗಳನ್ನು ತರುತ್ತದೆ. ಕಿವಿರುಹಲುವೆ ಆಹಾರ ವಸ್ತುಗಳು ಕಿವಿರುಕೋಶಕ್ಕೆ ಹೋಗದಂತೆ ತಡೆದು ಆಮ್ಲಜನಕ ಕರಗಿರುವ ನೀರನ್ನು ಮಾತ್ರ ಕಿವಿರುಕೋಶಕ್ಕೆ ಬಿಡುತ್ತದೆ. ಒಳಕಿವಿರುಮುಚ್ಚಳ ತನ್ನ ಮುಚ್ಚುವಿಕೆ ತೆರೆಯುವಿಕೆಯಿಂದ ಕಿವಿರುಕೋಶದೊಳಕ್ಕೆ ನೀರು ಹರಿಯುವುದನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ಮೀನಿನಲ್ಲಿ ಉಸಿರಾಡುವಿಕೆ ಕಿವಿರು ಮುಚ್ಚಳದ ಚಲನೆಯನ್ನು ಅನುಸರಿಸುತ್ತದೆ.

ದ್ವಿಚರಿಗಳು[ಬದಲಾಯಿಸಿ]

ದ್ವಿಚರಿಗಳು ತಮ್ಮ ಪ್ರೌಢಾವಸ್ಥೆಯಲ್ಲಿ ಶ್ವಾಸಕೋಶಗಳಿಂದ ಉಸಿರಾಡಿದರೂ ಡಿಂಭಾವಸ್ಥೆಯಲ್ಲಿ ಕಿವಿರುಗಳ ಮೂಲಕವೇ ಉಸಿರಾಡುತ್ತವೆ. ಕಪ್ಪೆಯಲ್ಲಿನ ಗೊದಮೊಟ್ಟೆಯಲ್ಲಿ ಪ್ರಾರಂಭದಲ್ಲಿ ಕತ್ತಿನ ಇಕ್ಕೆಡೆಯಲ್ಲಿಯೂ ದೇಹದಿಂದ ಮೂರು ಹೊರಕಿವಿರುಗಳಿವೆ, ಹೊರಕಿವಿರುಗಳ ಸ್ಥಾನವನ್ನು ಪಡೆಯುತ್ತವೆ. ಬೆಳವಣಿಗೆ ಮುಂದುವರಿದಂತೆ ಈ ಒಳಕಿವಿರು-ಕಿವಿರುರಂಧ್ರ ಬದಲಾಗಿ ಗಂಟಲಿನ ಹಿಂಬದಿಯಿಂದ ಎರಡು ತೆಳುವಾದ ಕೋಶಗಳು ಬೆಳೆದು ಶ್ವಾಸಕೋಶಗಳಾಗುತ್ತವೆ. ಕ್ರಮೇಣ ಶ್ವಾಸಕೋಶಗಳಿಗೆ ರಕ್ತನಾಳಗಳ ಸಂಪರ್ಕ ಬೆಳೆದು ಅವು ಗಾಳಿಯಲ್ಲಿನ ಆಮ್ಲಜನಕವನ್ನು ಸ್ವೀಕರಿಸುವ ಶ್ವಾಸಾಂಗಗಳಾಗುತ್ತವೆ. ಆದರೆ ಯೂರೋಡಿಲ ಗಣಕ್ಕೆ ಸೇರಿದ ಕೆಲವು ದ್ವಿಚರಿಗಳಲ್ಲಿ ಪ್ರೌಢಾವಸ್ಥೆಯಲ್ಲಿಯೂ ಹೊರ ಕಿವಿರುಗಳೇ ಶ್ವಾಸಾಂಗಗಳು. ಈ ಗಣದ ಟ್ರೈಟಾನ್, ಪ್ರೋಟಿಯಸ್ ಮತ್ತು ಸೈರನ್‍ಗಳಲ್ಲಿ ಪ್ರೌಢಾವಸ್ಥೆಯಲ್ಲಿಯೂ ಡಿಂಭದಲ್ಲಿರುವಂತೆ ಶಾಶ್ವತವಾದ ಹೊರಕಿವಿರುಗಳಿವೆ. ಕ್ರಿಪ್ಟೋಬ್ರಾಂಕಸ್ ಮತ್ತು ಆಂಫಿಯೂಮಗಳಲ್ಲಿ ಪ್ರೌಢಾವಸ್ಥೆಯಲ್ಲಿಯೂ ಕಿವಿರು ರಂಧ್ರಗಳು ಇರುತ್ತವೆ.


ಜೀವಿಗಳ ಅಗತ್ಯ ಕಾರ್ಯವಾದ ಉಸಿರಾಡುವಿಕೆ[ಬದಲಾಯಿಸಿ]

ಹೀಗೆ ಜೀವಿಗಳ ಅಗತ್ಯ ಕಾರ್ಯವಾದ ಉಸಿರಾಡುವಿಕೆ ಎಲ್ಲ ಜಲಚರಗಳಲ್ಲಿಯೂ ಕಿವಿರುಗಳು ಅಥವಾ ಇವುಗಳಿಂದ ಮಾರ್ಪಾಡಾದ ಅಂಗಗಳಿಂದ ನಡೆಯುತ್ತದೆ. ಅಕಶೇರುಕಗಳಲ್ಲಿಯೂ ಕಶೇರುಕಗಳಲ್ಲಿಯೂ ಕಿವಿರುಗಳ ರೂಪವೈವಿಧ್ಯವನ್ನು ಕಾಣಬಹುದು. ಅಕಶೇರುಕಗಳಲ್ಲಿ ದೇಹದ ಹೊರಚರ್ಮದ ಭಾಗ ಕಿವಿರಾಗಿ ಮಾರ್ಪಟ್ಟಿದ್ದರೆ ಕಶೇರುಕಗಳಲ್ಲಿ ಕಿವಿರು, ಗಂಟಲಿನ ಭಾಗದಲ್ಲಿ ಹೊರಚಾಚಿದ್ದು ಗಂಟಲಿನಲ್ಲಿರುವ ಅಂಗಾಂಶಗಳನ್ನು ಮತ್ತು ಪದರಗಳನ್ನು ತೋರುತ್ತದೆ. ಇವುಗಳಿಗೆ ರಕ್ತನಾಳಗಳ ಸಂಪರ್ಕವಿದ್ದು ರಕ್ತದಲ್ಲಿನ ಕಾರ್ಬನ್ ಡೈ ಆಕ್ಸೈಡ್ ನೀರಿನ್ಲಲಿರುವ ಆಮ್ಲಜನಕದೊಂದಿಗೆ ಪರಸ್ಪರ ವಿನಿಮಯವಾಗುತ್ತದೆ. ಕಶೇರುಕಗಳ ವಿಕಾಸವಾದಂತೆ ಕಿವಿರುಗಳ ಸಂಖ್ಯೆ ಕಡಿಮೆಯಾಗಿ ಮೃದ್ವಸ್ಥಿ ಮೀನಿನಲ್ಲಿ ಐದು, ಎಲುಬು ಮೀನಿನಲ್ಲಿ ನಾಲ್ಕು ಮತ್ತು ಕೆಲವು ಪ್ರೌಢ ದ್ವಿಚರಿಗಳು ಮತ್ತು ಮಿಕ್ಕ ದ್ವಿಚರಿ ಮರಿ ಅಥವಾ ಗೊದಮೊಟ್ಟೆಯಲ್ಲಿ ಮೂರು ಕಿವಿರುಗಳಿವೆ. ಸರೀಸೃಪ, ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಪ್ರೌಢಾವಸ್ಥೆಯಲ್ಲಿ ಉಸಿರಾಟಕ್ಕೆ ಶ್ವಾಸಕೋಶಗಳಿದ್ದರೂ ಭ್ರೂಣಾವಸ್ಥೆಯಲ್ಲಿ ಕಿವಿರು ರಂಧ್ರಗಳು ಕಂಡುಬರುತ್ತವೆ. ಇದರಿಂದ ಈ ಪ್ರಾಣಿಗಳು ಕಿವಿರುಗಳನ್ನುಳ್ಳ ಪೂರ್ವಜ ಪ್ರಾಣಿಗಳಿಂದ ವಿಕಾಸಗೊಂಡಿರುವುದಕ್ಕೆ ಸಾಕ್ಷಿ ಒದಗಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: