ಪಳೆಯುಳಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂರು ಸಣ್ಣ ಸಾಲಿಗ್ರಾಮ ಪಳೆಯುಳಿಕೆಗಳು; ಪ್ರತಿಯೊಂದೂ ಸರಿಸುಮಾರಾಗಿ 1.5 ಸೆಂ.ಮೀ.ಯಷ್ಟು ಅಗಲವಾಗಿವೆ.
ಅಟಾಹ್‌ನ ಗ್ರೀನ್‌ ರಿವರ್‌ ಸ್ತರಕ್ಕೆ ಸೇರಿದ ಪ್ರಿಸ್ಕಾಕ್ಯಾರಾ ಲಿಯೋಪ್ಸ್‌ ಎಂಬ ಈಯಸೀನ್‌‌ ಕಾಲದ ಪಳೆಯುಳಿಕೆ ಮೀನು
ಶಿಲಾರೂಪದ ಮರಅಂತರ್‌‌ಖನಿಜ ನಿಕ್ಷೇಪಣ ಪ್ರಕ್ರಿಯೆಯಲ್ಲಿ ಮರ ಮತ್ತು ತೊಗಟೆಯ ಆಂತರಿಕ ರಚನೆಯನ್ನು ಕಾಯ್ದುಕೊಂಡುಹೋಗಲಾಗುತ್ತದೆ.

ಪಳೆಯುಳಿಕೆಗಳು ('ಫಾಸಿಲ್ಸ್‌‌' ಎಂಬ ಪದವು ಲ್ಯಾಟಿನ್‌‌ ಭಾಷೆಯ ಫಾಸಸ್‌ ಎಂಬ ಪದದಿಂದ ಬಂದಿದ್ದು, ಅಕ್ಷರಶಃ ಇದು "ಅಗೆಯುವಿಕೆಗೆ ಒಳಗಾಗಿರುವ" ಎಂಬ ಅರ್ಥವನ್ನು ನೀಡುತ್ತದೆ) ಪ್ರಾಚೀನ ಕಾಲಕ್ಕೆ ಅಥವಾ ತೀರಾ ಹಿಂದಿನ ಕಾಲಕ್ಕೆ ಸೇರಿರುವ ಪ್ರಾಣಿಗಳು, ಸಸ್ಯಗಳು, ಮತ್ತು ಇತರ ಜೀವಿಗಳ ಸಂರಕ್ಷಿಸಲ್ಪಟ್ಟ ಅವಶೇಷಗಳು ಅಥವಾ ಕುರುಹುಗಳು ಆಗಿವೆ. ಆವಿಷ್ಕರಿಸಲ್ಪಟ್ಟ ಮತ್ತು ಆವಿಷ್ಕರಿಸಲ್ಪಡದ ಎರಡೂ ಪ್ರಕಾರಗಳಿಗೆ ಸೇರಿದ ಪಳೆಯುಳಿಕೆಗಳ ಪೂರ್ಣತೆ, ಮತ್ತು ಜೀವ್ಯವಶೇಷಗಳುಳ್ಳ (ಪಳೆಯುಳಿಕೆಯನ್ನು-ಒಳಗೊಂಡಿರುವ) ಬಂಡೆಯ ಸ್ತರಗಳು ಮತ್ತು ಸಂಚಿತ ಪದರಗಳಲ್ಲಿನ (ಸ್ತರಶ್ರೇಣಿಗಳು) ಅವುಗಳ ಇರಿಸುವಿಕೆಯು ಪಳೆಯುಳಿಕೆಯ ದಾಖಲೆ ಎಂದು ಕರೆಸಿಕೊಳ್ಳುತ್ತದೆ. ಭೂವೈಜ್ಞಾನಿಕ ಕಾಲದ ಉದ್ದಗಲಕ್ಕೂ ಇದ್ದ ಪಳೆಯುಳಿಕೆಗಳ ಅಧ್ಯಯನ, ಅವು ಹೇಗೆ ರೂಪುಗೊಂಡವು, ಮತ್ತು ವರ್ಗಗಳ (ಜೀವಿವಿಕಾಸದ) ನಡುವಿನ ವಿಕಸನೀಯ ಸಂಬಂಧಗಳ ಸ್ವರೂಪವೆಂಥದು ಇವೇ ಮೊದಲಾದ ವಿಷಯಗಳು, ಪ್ರಾಗ್ಜೀವಶಾಸ್ತ್ರ ವಿಜ್ಞಾನದ ಕೆಲವೊಂದು ಅತ್ಯಂತ ಪ್ರಮುಖ ಕಾರ್ಯಚಟುವಟಿಕೆಗಳಾಗಿವೆ. ಇಂಥದೊಂದು ಸಂರಕ್ಷಿಸಲ್ಪಟ್ಟ ಮಾದರಿಯು ಒಂದು ವೇಳೆ ಒಂದಷ್ಟು ಕನಿಷ್ಟ ವಯಸ್ಸಿಗಿಂತಲೂ ಹಳೆಯದಾಗಿದ್ದಲ್ಲಿ, ಅದು ಒಂದು "ಪಳೆಯುಳಿಕೆ" ಎಂದು ಕರೆಸಿಕೊಳ್ಳುತ್ತದೆ; ಮತ್ತು ಈ ಕನಿಷ್ಟ ವಯಸ್ಸು ಬಹುತೇಕ ವೇಳೆ 10,000 ವರ್ಷಗಳಷ್ಟು ಹಿಂದಿರುವ ಇಚ್ಛಾನುಸಾರವಾದ ದಿನಾಂಕವಾಗಿರುತ್ತದೆ.[೧]

ಆದ್ದರಿಂದ, ಹಾಲಸೀನ್‌ ಕಲ್ಪದ ಕಾಲದ ಪ್ರಾರಂಭದಲ್ಲಿನ ಅತ್ಯಂತ ಕಿರಿಯ ಪಳೆಯುಳಿಕೆಯಿಂದ ಮೊದಲ್ಗೊಂಡು, ಹಲವಾರು ಶತಕೋಟಿ ವರ್ಷಗಳಷ್ಟು ಹಳೆಯದಾದ ಆರ್ಕಿಯನ್‌ ಯುಗದ ಮಹಾಕಲ್ಪಕ್ಕೆ ಸೇರಿದ ಅತ್ಯಂತ ಹಳೆಯ ಪಳೆಯುಳಿಕೆಯವರೆಗೆ, ಪಳೆಯುಳಿಕೆಗಳ ವಯಸ್ಸಿನ ವ್ಯಾಪ್ತಿಯಿರುತ್ತದೆ. ಕೆಲವೊಂದು ಬಂಡೆಯ ಸ್ತರಶ್ರೇಣಿಗಳೊಂದಿಗೆ ನಿರ್ದಿಷ್ಟ ಪಳೆಯುಳಿಕೆಗಳು ಸಂಬಂಧಹೊಂದಿದ್ದವು ಎಂಬ ವೀಕ್ಷಣೆಗಳು, 19ನೇ ಶತಮಾನದಲ್ಲಿ ಆರಂಭಿಕ ಭೂವಿಜ್ಞಾನಿಗಳು ಒಂದು ಭೂವೈಜ್ಞಾನಿಕ ಕಾಲಪ್ರಮಾಣವನ್ನು ಗುರುತಿಸುವುದಕ್ಕೆ ಕಾರಣವಾದವು. 20ನೇ ಶತಮಾನದ ಆರಂಭದಲ್ಲಿ ಕಂಡುಬಂದ ರೇಡಿಯೋಮಾಪನದ ಕಾಲನಿರ್ಣಯ ಕೌಶಲಗಳ ಅಭಿವೃದ್ಧಿಯು, ಹಲವಾರು ಸ್ತರಶ್ರೇಣಿಗಳ ಸಂಖ್ಯಾತ್ಮಕ ಅಥವಾ "ಪರಿಪೂರ್ಣ" ವಯಸ್ಸನ್ನು ಮತ್ತು ಅದು ಒಳಗೊಂಡಿದ್ದ ಪಳೆಯುಳಿಕೆಗಳನ್ನು ತನ್ಮೂಲಕ ನಿರ್ಣಯಿಸುವಲ್ಲಿ ಭೂವಿಜ್ಞಾನಿಗಳಿಗೆ ಅವಕಾಶ ನೀಡಿತು.

ಈಗಲೂ ಇರುವ ಜೀವಿಗಳ ರೀತಿಯಲ್ಲಿ, ಅತಿ ಸೂಕ್ಷ್ಮವಾದ ಗಾತ್ರದಿಂದ ಮೊದಲ್ಗೊಂಡು ದೈತ್ಯಗಾತ್ರದವರೆಗೆ ಪಳೆಯುಳಿಕೆಗಳ ಗಾತ್ರವು ಬದಲಾಗುತ್ತಾ ಹೋಗುತ್ತದೆ; ಏಕ ಬ್ಯಾಕ್ಟೀರಿಯಾ ಜೀವಕೋಶಗಳು [೨] ಹೊಂದಿರುವ ಒಂದು ಮೈಕ್ರೋಮೀಟರು ವ್ಯಾಸದ ಗಾತ್ರದಿಂದ, ಡೈನೋಸರ್‌‌‌ಗಳಂಥ ದೈತ್ಯಗಾತ್ರದ ಜೀವಿಗಳವರೆಗೆ ಮತ್ತು ಅನೇಕ ಮೀಟರುಗಳಷ್ಟು ಉದ್ದವಿದ್ದು ಅನೇಕ ಟನ್ನುಗಳವರೆಗೆ ತೂಗುವ ಮರಗಳ ಗಾತ್ರದವರೆಗೆ ಪಳೆಯುಳಿಕೆಗಳ ಗಾತ್ರವು ಬದಲಾಗುತ್ತಾ ಹೋಗುತ್ತದೆ. ಇತ್ತೀಚೆಗಷ್ಟೇ ಸತ್ತ ಜೀವಿಯ ಕೇವಲ ಭಾಗವೊಂದನ್ನು ಒಂದು ಪಳೆಯುಳಿಕೆಯು ಸಾಮಾನ್ಯವಾಗಿ ಸಂರಕ್ಷಿಸುತ್ತದೆ; ಆ ಭಾಗವು ಸಾಮಾನ್ಯವಾಗಿ ಜೀವಿತಕಾಲದಲ್ಲಿ ಆಂಶಿಕವಾಗಿ ಖನಿಜೀಕರಿಸಲ್ಪಟ್ಟಿದ್ದ ಭಾಗವಾಗಿದ್ದು, ಕಶೇರುಕಗಳ ಮೂಳೆಗಳು ಮತ್ತು ಹಲ್ಲುಗಳು ಅಥವಾ ಅಕಶೇರುಕಗಳ ಕೈಟಿನ್‌‌‌‌‌ಯುಕ್ತ ಅಥವಾ ಸುಣ್ಣಯುಕ್ತ ಹೊರಕವಚಗಳು ಇದಕ್ಕೆ ಉದಾಹರಣೆಗಳಾಗಿರುತ್ತವೆ. ಮೃದು ಅಂಗಾಂಶಗಳ ಸಂರಕ್ಷಣೆಯು ಪಳೆಯುಳಿಕೆಯ ದಾಖಲೆಯಲ್ಲಿ ಅಪರೂಪವಾಗಿರುತ್ತದೆ. ಜೀವಿಯೊಂದು ತನ್ನ ಜೀವಿತಕಾಲದಲ್ಲಿ ಬಿಟ್ಟುಹೋಗಿದ್ದ ಗುರುತುಗಳನ್ನೂ ಸಹ ಪಳೆಯುಳಿಕೆಗಳು ಒಳಗೊಂಡಿರಬಹುದು; ಸರೀಸೃಪವೊಂದರ ಪಾದದ ಗುರುತು ಅಥವಾ ಹಿಕ್ಕೆಗಳು (ಪಳೆಯುಳಿಕೆಗಳಾಗಿರುವ ಹಿಕ್ಕೆಗಳು) ಈ ಗುಂಪಿಗೆ ಸೇರುತ್ತವೆ. ಈ ಬಗೆಯ ಪಳೆಯುಳಿಕೆಗಳನ್ನು ಶರೀರದ ಪಳೆಯುಳಿಕೆಗಳು ಎಂಬುದಕ್ಕೆ ತದ್ವಿರುದ್ಧವಾಗಿ, ಕುರುಹಿನ ಪಳೆಯುಳಿಕೆಗಳು (ಅಥವಾ ಹೆಜ್ಜೆಗುರುತಿನ ಪಳೆಯುಳಿಕೆಗಳು ) ಎಂದು ಕರೆಯಲಾಗುತ್ತದೆ. ಅಂತಿಮವಾಗಿ, ಕಣ್ಣಿಗೆ ಕಾಣದ ಆದರೆ ಜೀವರಾಸಾಯನಿಕ ಸಂಕೇತಗಳ ಸ್ವರೂಪದಲ್ಲಿ ಪತ್ತೆಹಚ್ಚಬಹುದಾದ ಕೆಲವೊಂದು ಗುರುತುಕಾರಕಗಳನ್ನು ಗತಜೀವನವು ಬಿಟ್ಟುಹೋಗುತ್ತದೆ; ಇಂಥವುಗಳನ್ನು ರಾಸಾಯನಿಕ ಪಳೆಯುಳಿಕೆಗಳು ಅಥವಾ ಜೈವಿಕ ಗುರುತುಕಾರಕಗಳು ಎಂದು ಕರೆಯಲಾಗುತ್ತದೆ.

ಅಸಾಧಾರಣವಾದ ಪಳೆಯುಳಿಕೆಯಾಗುವಿಕೆಯ ಸ್ಥಳಗಳು[ಬದಲಾಯಿಸಿ]

ಅಸಾಧಾರಣವಾದ ಸಂರಕ್ಷಣಾ ವ್ಯವಸ್ಥೆಯೊಂದಿಗಿನ, ಕೆಲವೊಮ್ಮೆ ಸಂರಕ್ಷಿಸಲ್ಪಟ್ಟ ಮೃದು ಅಂಗಾಂಶಗಳನ್ನು ಒಳಗೊಂಡಿರುವ ಪಳೆಯುಳಿಕೆ ತಾಣಗಳನ್ನು, ಲಾಗರ್‌ಸ್ಟಾಟೆ ತಾಣಗಳು (ಶೇಖರಣಾ ಸ್ಥಳಗಳು) ಎಂದು ಕರೆಯಲಾಗುತ್ತದೆ. ಕನಿಷ್ಟತಮ ಬ್ಯಾಕ್ಟೀರಿಯಾವನ್ನು ಹೊಂದಿರುವ ಮತ್ತು ಆ ಕಾರಣಕ್ಕಾಗಿಯೇ ವಿಘಟನೆಯು ವಿಳಂಬಗೊಳ್ಳಲು ಕಾರಣವಾಗಿರುವ, ಆಮ್ಲಜನಕದ ಕೊರತೆಯ ಒಂದು ಪರಿಸರದಲ್ಲಿನ ಸತ್ತದೇಹದ ಹೂಳುವಿಕೆಯಿಂದಾಗಿ ಈ ಸ್ತರಗಳು ರೂಪುಗೊಂಡಿರುವ ಸಾಧ್ಯತೆಗಳಿರುತ್ತವೆ. ಕ್ಯಾಂಬ್ರಿಯನ್‌‌ ಅವಧಿಯಿಂದ ವರ್ತಮಾನದ ಕಾಲದವರೆಗಿನ ಭೂವೈಜ್ಞಾನಿಕ ಕಾಲದಲ್ಲಿ ಲಾಗರ್‌ಸ್ಟಾಟೆ ತಾಣಗಳು ಹಬ್ಬುತ್ತವೆ. ವಿಶ್ವಾದ್ಯಂತದ ನಿಖರತೆಗೆ-ಸಮೀಪದ, ಪಳೆಯುಳಿಕೆಯಾಗುವಿಕೆಯ ಕೆಲವೊಂದು ಅತ್ಯುತ್ತಮ ಉದಾಹರಣೆಗಳು ಹೀಗಿವೆ: ಕ್ಯಾಂಬ್ರಿಯನ್‌‌ ಅವಧಿಯ ಮಾವೋಟಿಯಾನ್‌ಷಾನ್‌‌ ಜೇಡಿ ಪದರಗಲ್ಲುಗಳು ಮತ್ತು ಬರ್ಗೆಸ್‌ ಜೇಡಿ ಪದರಗಲ್ಲು, ಡಿವೋನಿಯನ್‌ ಭೂಸ್ತರದ ಹನ್ಸ್‌ರುಕ್‌ ಸ್ಲೇಟುಕಲ್ಲುಗಳು, ಜುರಾಸಿಕ್‌‌ ಅವಧಿಯ ಸೊಲ್ನ್‌ಹೋಫೆನ್‌‌ ಸುಣ್ಣದ ಕಲ್ಲು, ಹಾಗೂ ಕಾರ್ಬನಿಫರಸ್‌ ಕಾಲದ ಮೆಝಾನ್‌‌ ಕೊಲ್ಲಿ ತಾಣಗಳು.

ಅತ್ಯಂತ ಹಿಂದಿನ ಜೀವ್ಯವಶೇಷಗಳುಳ್ಳ ತಾಣಗಳು[ಬದಲಾಯಿಸಿ]

ಬೊಲಿವಿಯಾ, ದಕ್ಷಿಣ ಅಮೆರಿಕಾಗಳಿಗೆ ಸೇರಿದ ಕೆಳಗಿನ ವರ್ಗದ ಜೀವ ಪ್ರಾರಂಭಿಕ ಸ್ಟ್ರೊಮ್ಯಾಟೊಲೈಟ್‌‌ಗಳು

ಸ್ಟ್ರೊಮ್ಯಾಟೊಲೈಟ್‌‌ಗಳು ಭೂಮಿಯ ಅತ್ಯಂತ ಹಳೆಯ ಪಳೆಯುಳಿಕೆಗಳಾಗಿದ್ದು, ಸಂಚಯ ಮತ್ತು ಇತರ ಅವಕ್ಷೇಪಕಗಳು ಪದರದ ಮೇಲೆ ಪದರದಂತೆ ಜೋಡಿಸಲ್ಪಟ್ಟಿದ್ದರಿಂದ ರೂಪುಗೊಂಡಿರುವ ಬಂಡೆಯನ್ನು ಇವು ಒಳಗೊಂಡಿರುತ್ತವೆ.[೩] ಈಗ-ಅಪರೂಪದ್ದಾಗಿರುವ (ಆದರೆ ಜೀವಂತವಾಗಿರುವ) ಸ್ಟ್ರೊಮ್ಯಾಟೊಲೈಟ್‌ಗಳ ಅಧ್ಯಯನಗಳನ್ನು (ನಿರ್ದಿಷ್ಟವಾಗಿ ಹೇಳುವುದಾದರೆ, ಕೆಲವೊಂದು ನೀಲಿ-ಹಸಿರು ಬ್ಯಾಕ್ಟೀರಿಯಾವನ್ನು) ಆಧರಿಸಿ ಹೇಳುವುದಾದರೆ, ಸಂಚಯಗಳನ್ನು ಸೆಳೆಯಬಲ್ಲ ತಮ್ಮ ಸಾಮರ್ಥ್ಯದ ಮೂಲಕ ಸೂಕ್ಷ್ಮಜೀವಿಗಳ ದಪ್ಪ ಪದರಗಳು ಸ್ಟ್ರೊಮ್ಯಾಟೋಲೈಟಿಕ್‌‌ ಪಳೆಯುಳಿಕೆಯ ರಚನೆಗಳ ಬೆಳವಣಿಗೆಗೆ ಜೀವಜನ್ಯವಾದ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಿರುವುದು ಕಂಡುಬರುತ್ತದೆ. ಆದಾಗ್ಯೂ, ಸ್ಟ್ರೊಮ್ಯಾಟೋಲೈಟಿಕ್‌‌ ಬೆಳವಣಿಗೆಗೆ ಸಂಬಂಧಿಸಿದಂತಿರುವ ಅಜೀವಕ ಕಾರ್ಯವಿಧಾನಗಳೂ ಸಹ ತಿಳಿದುಬಂದಿದ್ದು, ನಿರ್ದಿಷ್ಟ ಸ್ತರಗಳ ಜೈವಿಕ ಉತ್ಪತ್ತಿಗೆ ಸಂಬಂಧಿಸಿದಂತಿರುವ, ದಶಕಗಳಷ್ಟು ಸುದೀರ್ಘವಾದ ಮತ್ತು ಕೆಲವೊಮ್ಮೆ-ವಿವಾದಾಸ್ಪದವಾದ ವೈಜ್ಞಾನಿಕ ಚರ್ಚೆಗೆ ಅವು ಕಾರಣವಾಗಿವೆ; ಅದರಲ್ಲೂ ವಿಶೇಷವಾಗಿ ಕೆಳಗಿನ ಮಹಾಕಲ್ಪದಿಂದ ಮಧ್ಯದ ಆರ್ಕಿಯನ್‌ ಯುಗದ ಮಹಾಕಲ್ಪದವರೆಗಿನ ನಿರ್ದಿಷ್ಟ ಸ್ತರಗಳಿಗೆ ಇದು ಹೆಚ್ಚು ಅನ್ವಯಿಸುತ್ತದೆ.

ಆರ್ಕಿಯನ್‌ ಯುಗದ ಅಂತ್ಯದಿಂದ ಮಧ್ಯದ ಜೀವ ಪ್ರಾರಂಭಿಕ ಮಹಾಕಲ್ಪದವರೆಗಿನ ಸ್ಟ್ರೊಮ್ಯಾಟೊಲೈಟ್‌ಗಳು ಸಯನೊಬ್ಯಾಕ್ಟೀರಿಯಾದ (ಹಿಂದೆ ಇವು ನೀಲಿ-ಹಸಿರು "ಪಾಚಿಗಳು" ಎಂದು ಕರೆಯಲ್ಪಡುತ್ತಿದ್ದವು) ಭಾರೀ ಸಮುದಾಯಗಳಿಂದ ಬಹುತೇಕವಾಗಿ ರೂಪುಗೊಂಡವು ಎಂಬುದು ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಅವುಗಳ ದ್ಯುತಿಸಂಶ್ಲೇಷಕ ಚಯಾಪಚಯ ಕ್ರಿಯೆಯ ಆಮ್ಲಜನಕ ಉಪೋತ್ಪನ್ನವು, ಮೊದಲಿಗೆ ಭೂಮಿಯ ಭಾರೀ ಬಣ್ಣಬಣ್ಣದ ಪಟ್ಟಿಯ ಕಬ್ಬಿಣ ಸ್ತರಗಳನ್ನು ಹಾಗೂ ತರುವಾಯದಲ್ಲಿ ಆಮ್ಲಜನಕದಿಂದ ತುಂಬಿದ ಭೂಮಿಯ ವಾತಾವರಣವನ್ನು ಉಂಟುಮಾಡಿತು ಎಂಬುದೂ ಸಹ ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ.

ಇದು ಅತ್ಯಂತ ಅಪರೂಪವಾಗಿದೆಯಾದರೂ, ಜೀವಕೋಶಗಳನ್ನು ಹೋಲುವ ಸೂಕ್ಷ್ಮರಚನೆಗಳು ಸ್ಟ್ರೊಮ್ಯಾಟೊಲೈಟ್‌ಗಳ ಒಳಗೆ ಕೆಲವೊಮ್ಮೆ ಕಂಡುಬರುತ್ತವೆ; ಆದರೆ ಇವೂ ಸಹ ವೈಜ್ಞಾನಿಕ ಚರ್ಚೆಯ ಮೂಲವಾಗಿವೆ. ಹೇರಳವಾದ ಸೂಕ್ಷ್ಮಪಳೆಯುಳಿಕೆಗಳನ್ನು ಗನ್‌ಫ್ಲಿಂಟ್‌ ಚಕಮಕಿಯಂಥ ಬೆಣಚುಕಲ್ಲು ಒಳಗೊಂಡಿದ್ದು, ಈ ಸೂಕ್ಷ್ಮಪಳೆಯುಳಿಕೆಗಳು 2.0 ಗಿಗಾ ವರ್ಷದ ಸೂಕ್ಷ್ಮಜೀವಿಗಳ ಒಂದು ವೈವಿಧ್ಯಮಯ ಒಕ್ಕೂಟ ಎಂಬುದಾಗಿ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿವೆ.[೪]

ಇದಕ್ಕೆ ವ್ಯತಿರಿಕ್ತವಾಗಿ, ಪಶ್ಚಿಮದ ಆಸ್ಟ್ರೇಲಿಯಾದಲ್ಲಿನ 3.4 ಗಿಗಾ ವರ್ಷದ ವ್ಯಾರವೂನಾ ಸಮೂಹಕ್ಕೆ ಸೇರಿದ, ಸಾಮಾನ್ಯವಾಗಿ ಭಾವಿಸಲಾದ ಪಳೆಯುಳಿಕೆಯ ಸಯನೊಬ್ಯಾಕ್ಟೀರಿಯಾ ಜೀವಕೋಶಗಳು ವಿವಾದದಲ್ಲಿವೆ; ಅಜೀವಕ ಪ್ರಕ್ರಿಯೆಗಳನ್ನು ತಳ್ಳಿಹಾಕಲು ಆಗದಿರುವುದೇ ಇದಕ್ಕೆ ಕಾರಣ.[೫] ವ್ಯಾರವೂನಾ ಸೂಕ್ಷ್ಮರಚನೆಗಳು ಸಯನೊಬ್ಯಾಕ್ಟೀರಿಯಾ ಆಗಿವೆ ಎಂಬುದರ ದೃಢೀಕರಣವು, ನಮ್ಮ ಅರ್ಥೈಸಿಕೊಳ್ಳುವಿಕೆಯ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ; ಅಂದರೆ, ಪ್ರಮುಖ ವಿಕಸನೀಯ ಮೈಲಿಗಲ್ಲುಗಳನ್ನು ಕಾಲದ ವ್ಯಾಪ್ತಿಯಲ್ಲಿ ಮತ್ತಷ್ಟು ಹಿಂದಕ್ಕೆ ತಳ್ಳುವ ಮೂಲಕ, ಆರಂಭಿಕ ಜೀವವು ಹೇಗೆ ಮತ್ತು ಯಾವಾಗ ವೈವಿಧ್ಯಗೊಳಿಸಲ್ಪಟ್ಟಿತು ಎಂಬ ಅಂಶದ ಮೇಲೆ ಇದು ಬೆಳಕು ಚೆಲ್ಲುತ್ತದೆ. ಈ ಅತ್ಯಂತ ಹಳೆಯ ಪಳೆಯುಳಿಕೆಗಳ ಮುಂದುವರಿದ ಅಧ್ಯಯನವು, ಪೂರಕವಾಗುವ ಜಾತಿವಿಕಾಸದ ಆಣ್ವಿಕ ಮಾದರಿಗಳ ವ್ಯತ್ಯಾಸಗಳನ್ನು ನಿರ್ಣಯಿಸುವಲ್ಲಿ ಸರ್ವೋತ್ಕೃಷ್ಟವಾಗಿದೆ.

ಪಳೆಯುಳಿಕೆ ದಾಖಲೆಯ ಅರ್ಥವಿವರಣೆಯಲ್ಲಿನ ಬೆಳವಣಿಗೆಗಳು[ಬದಲಾಯಿಸಿ]

ಸಿಲ್ಯುರಿಯನ್‌ ಆರ್ಥೊಸೆರಾಸ್‌ ಪಳೆಯುಳಿಕೆ

ಇತಿಹಾಸದ ದಾಖಲಿಸುವಿಕೆಯು ಪ್ರಾರಂಭವಾದಂದಿನಿಂದ, ಮತ್ತು ಪ್ರಾಯಶಃ ಅದಕ್ಕಿಂತ ಮುಂಚೆ, ಜನರು ಪಳೆಯುಳಿಕೆಗಳನ್ನು ಗಮನಿಸಿದ್ದಾರೆ ಮತ್ತು ಒಟ್ಟುಗೂಡಿಸಿದ್ದಾರೆ; ಜೀವಿವಿಜ್ಞಾನದ ಜೀವಿಗಳ ಅವಶೇಷಗಳನ್ನು ಪಲ್ಲಟಗೊಳಿಸಿರುವ, ಅಥವಾ ಅವುಗಳ ಬಾಹ್ಯಸ್ವರೂಪವನ್ನು ಸಂರಕ್ಷಿಸಿರುವ ಬಂಡೆ ಮತ್ತು ಖನಿಜಗಳ ತುಣುಕುಗಳೂ ಈ ಪಳೆಯುಳಿಕೆಗಳಲ್ಲಿ ಸೇರಿವೆ. ಸ್ವತಃ ಪಳೆಯುಳಿಕೆಗಳು, ಮತ್ತು ಭೂಮಿಯ ಬಂಡೆಯ ಸ್ತರಶ್ರೇಣಿಗಳ ಸರಣಿಯೊಳಗಿನ ಅವುಗಳ ಸಂಭವಿಸುವಿಕೆಯ ಪೂರ್ಣತೆಯು, ಪಳೆಯುಳಿಕೆ ದಾಖಲೆ ಎಂಬುದಾಗಿ ಉಲ್ಲೇಖಿಸಲ್ಪಟ್ಟಿವೆ.

ವಿಕಸನದ ಅಧ್ಯಯನಕ್ಕೆ ಸುಸಂಬದ್ಧವಾಗಿರುವ ದತ್ತಾಂಶದ ಆರಂಭಿಕ ಮೂಲಗಳ ಪೈಕಿ ಪಳೆಯುಳಿಕೆ ದಾಖಲೆಯು ಒಂದಾಗಿತ್ತು, ಮತ್ತು ಭೂಮಿಯ ಮೇಲಿನ ಜೀವರಾಶಿಯ ಇತಿಹಾಸಕ್ಕೆ ಸುಸಂಬದ್ಧವಾಗಿರುವುದನ್ನು ಅದು ಮುಂದುವರಿಸಿಕೊಂಡುಬಂದಿದೆ. ವಿಕಸನದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಮತ್ತು ನಿರ್ದಿಷ್ಟ ಜಾತಿಗಳು ವಿಕಸನ ಹೊಂದಲು ಅನುಸರಿಸಿದ ಮಾರ್ಗವನ್ನು ಅರಿಯುವ ಸಲುವಾಗಿ ಪ್ರಾಗ್ಜೀವವಿಜ್ಞಾನಿಗಳು ಪಳೆಯುಳಿಕೆ ದಾಖಲೆಯನ್ನು ಪರೀಕ್ಷಿಸುತ್ತಾರೆ.

ವಿವರಣೆಗಳು[ಬದಲಾಯಿಸಿ]

ಪಳೆಯುಳಿಕೆ ಸೀಗಡಿ (ಕ್ರಿಟೇಷಿಯಾ ಅವಧಿ)
ಸೈಪ್ರಸ್‌ನ ಪ್ಲಯೋಸಿನ್‌ ಕಾಲಕ್ಕೆ ಸೇರಿದ ಗ್ಯಾಸ್ಟ್ರಾಪಡ ವರ್ಗದ ಒಂದು ಪಳೆಯುಳಿಕೆ ಮೃದ್ವಂಗಿ. ಸೆರ್ಪುಲಿಡ್‌ ಹುಳುವೊಂದನ್ನು ಸೇರಿಸಲಾಗಿದೆ.

ಪಳೆಯುಳಿಕೆಗಳು ಎಂದರೇನು ಮತ್ತು ಅವುಗಳು ಎಲ್ಲಿ, ಹೇಗೆ ಕಂಡುಹಿಡಿಯಲ್ಪಟ್ಟು ಬೆಳಕಿಗೆ ಬಂದವು ಎಂಬುದನ್ನು ವಿವರಿಸಲು ಇತಿಹಾಸದ ಉದ್ದಗಲಕ್ಕೂ ಹಲವಾರು ವಿವರಣೆಗಳು ಮಂಡಿಸಲ್ಪಟ್ಟಿವೆ. ಇವುಗಳ ಪೈಕಿಯ ಅನೇಕ ವಿವರಣೆಗಳು, ಜಾನಪದ ಕಥೆಗಳು ಅಥವಾ ಪುರಾಣಗಳನ್ನು ಆಧರಿಸಿದ್ದವು. ಚೀನಾದಲ್ಲಿ, ಹೋಮೋ ಎರೆಕ್ಟಸ್‌‌ ನ್ನು ಒಳಗೊಂಡಂತೆ ಪ್ರಾಚೀನ ಸಸ್ತನಿಗಳ ಪಳೆಯುಳಿಕೆ ಮೂಳೆಗಳನ್ನು “ಡ್ರ್ಯಾಗನ್‌‌ ಮೂಳೆಗಳು” ಎಂಬುದಾಗಿ ಅನೇಕವೇಳೆ ತಪ್ಪಾಗಿ ಗ್ರಹಿಸಲಾಗಿತ್ತು ಮತ್ತು ಅವನ್ನು ಔಷಧಿ ಹಾಗೂ ಕಾಮೋತ್ತೇಜಕಗಳಾಗಿ ಬಳಸಲಾಗಿತ್ತು. ಪಾಶ್ಚಾತ್ಯ ಪ್ರಪಂಚದಲ್ಲಿ, ಪರ್ವತ ಪಾರ್ಶ್ವಗಳ ಮೇಲ್ಭಾಗದಲ್ಲಿ ಕಂಡುಬಂದ ಪಳೆಯುಳಿಕೆಯಾಗಿಸಲ್ಪಟ್ಟ ಸಮುದ್ರ ಜೀವಿಗಳ ಅಸ್ತಿತ್ವವನ್ನು, ಬೈಲಿನಲ್ಲಿರುವ ಜಲಪ್ರಳಯದ ಪುರಾವೆಯೆಂಬಂತೆ ಪರಿಗಣಿಸಲಾಯಿತು.

ಬಂಡೆಗಳಿಂದ ಪಡೆಯಲಾದ ಪಳೆಯುಳಿಕೆ ಕಪ್ಪೆಚಿಪ್ಪುಗಳು ಸಮುದ್ರತೀರದಲ್ಲಿ ಕಂಡುಬಂದ ಕಪ್ಪೆಚಿಪ್ಪುಗಳನ್ನು ಹೋಲುವಂತಿದ್ದವು, ಹಾಗೂ ಸದರಿ ಪಳೆಯುಳಿಕೆಗಳು ಹಿಂದೊಮ್ಮೆ ಜೀವಂತವಾಗಿದ್ದ ಪ್ರಾಣಿಗಳಾಗಿದ್ದುದನ್ನು ಸೂಚಿಸುತ್ತವೆ ಎಂಬುದನ್ನು ಗ್ರೀಕ್‌‌ ವಿದ್ವಾಂಸ ಅರಿಸ್ಟಾಟಲ್‌‌ ಅರಿತುಕೊಂಡ. ಪಳೆಯುಳಿಕೆಗಳು ಪ್ರಾಚೀನ ಜೀವದ ಅವಶೇಷಗಳಾಗಿದ್ದವು ಎಂಬ ಅರಿಸ್ಟಾಟಲ್‌‌ನ ಅಭಿಪ್ರಾಯವನ್ನು ಲಿಯೋನಾರ್ಡೊ ಡಾ ವಿನ್ಸಿ ಅನುಮೋದಿಸಿದ.[೬] 1027ರಲ್ಲಿ, ಇಬ್ನ್‌ ಸಿನಾ ಎಂಬ ಹೆಸರಿನ ಪರ್ಷಿಯಾದ ಭೂವಿಜ್ಞಾನಿಯು (ಯುರೋಪ್‌‌ನಲ್ಲಿ ಇವನು ಅವಿಸೆನ್ನಾ ಎಂದು ಚಿರಪರಿಚಿತನಾಗಿದ್ದ), ಪಳೆಯುಳಿಕೆಗಳ ಕಲ್ಲಾಗಿರುವಿಕೆಯು ಹೇಗೆ ಸಂಭವಿಸಿತು ಎಂಬುದನ್ನು ದಿ ಬುಕ್‌ ಆಫ್‌ ಹೀಲಿಂಗ್‌‌ ಎಂಬ ಕೃತಿಯಲ್ಲಿ ವಿವರಿಸಿದ. ಆದಾಗ್ಯೂ, ಪಳೆಯುಳಿಕೆಗಳು ಸಾವಯವ ಅವಶೇಷಗಳಾಗಿವೆ ಎಂಬ ವಿವರಣೆಯನ್ನು ಅವನು ತಿರಸ್ಕರಿಸಿದ.[೭] ಅರಿಸ್ಟಾಟಲ್‌‌ ಹಿಂದೆ ಇದನ್ನು ಆವಿಯುಕ್ತ ಬಾಷ್ಪೀಕರಣಗಳ ಪರಿಭಾಷೆಯಲ್ಲಿ ವಿವರಿಸಿದ್ದ; ಇದನ್ನು ಕಲ್ಲಾಗಿಸುವ ದ್ರವಗಳ ಸಿದ್ಧಾಂತವಾಗಿ (ಸ್ಯೂಕಸ್‌ ಲ್ಯಾಪಿಡಿಫಿಕ್ಟಸ್‌‌ ) ಇಬ್ನ್‌ ಸಿನಾ ಮಾರ್ಪಡಿಸಿದ. ಈ ಸಿದ್ಧಾಂತವನ್ನು 14ನೇ ಶತಮಾನದಲ್ಲಿ ಸ್ಯಾಕ್ಸನಿಯ ಆಲ್ಬರ್ಟ್‌ ವಿಸ್ತರಿಸಿದ ಮತ್ತು 16ನೇ ಶತಮಾನದ ವೇಳೆಗೆ ಬಹುಪಾಲು ಪ್ರಕೃತಿ ಶಾಸ್ತ್ರಜ್ಞರು ಒಂದಷ್ಟು ಸ್ವರೂಪದಲ್ಲಿ ಇದನ್ನು ಅಂಗೀಕರಿಸಿದರು.[೮] ಸಸ್ಯಗಳು ಮತ್ತು ಪ್ರಾಣಿಗಳ ಕಲ್ಲಾಗುವಿಕೆಯಿಂದ ಪಳೆಯುಳಿಕೆಗಳು ಹುಟ್ಟುವುದಕ್ಕೆ ಸಂಬಂಧಿಸಿದಂತೆ, ಇಬ್ನ್‌ ಸಿನಾ ಈ ಕೆಳಗಿನ ವಿವರಣೆಯನ್ನು ನೀಡಿದ:

If what is said concerning the petrifaction of animals and plants is true, the cause of this (phenomenon) is a powerful mineralizing and petrifying virtue which arises in certain stony spots, or emanates suddenly from the earth during earthquake and subsidences, and petrifies whatever comes into contact with it. As a matter of fact, the petrifaction of the bodies of plants and animals is not more extraordinary than the transformation of waters.[೯]

ನವೋದಯ ಕಾಲದ ಅವಧಿಯಲ್ಲಿ ಪಳೆಯುಳಿಕೆಗಳ ಕುರಿತಾದ ಹೆಚ್ಚು ವೈಜ್ಞಾನಿಕ ದೃಷ್ಟಿಕೋನಗಳು ಹೊರಹೊಮ್ಮಿದವು. ಉದಾಹರಣೆಗೆ, ಪಳೆಯುಳಿಕೆಗಳ ಮೂಲಗಳಿಗೆ ಸಂಬಂಧಿಸಿದಂತೆ ಬೈಬಲಿನ ಪ್ರವಾಹ ನಿರೂಪಣೆಯನ್ನು ಒಂದು ವಿವರಣೆಯಾಗಿ ಬಳಸುವುದರಲ್ಲಿದ್ದ ಅಸಾಂಗತ್ಯಗಳನ್ನು ಲಿಯೋನಾರ್ಡೊ ಡಾ ವಿನ್ಸಿ ಗಮನಿಸಿದ:

"If the Deluge had carried the shells for distances of three and four hundred miles from the sea it would have carried them mixed with various other natural objects all heaped up together; but even at such distances from the sea we see the oysters all together and also the shellfish and the cuttlefish and all the other shells which congregate together, found all together dead; and the solitary shells are found apart from one another as we see them every day on the sea-shores.

And we find oysters together in very large families, among which some may be seen with their shells still joined together, indicating that they were left there by the sea and that they were still living when the strait of Gibraltar was cut through. In the mountains of Parma and Piacenza multitudes of shells and corals with holes may be seen still sticking to the rocks..."[೧೦]

ಇಂಗ್ಲಿಷ್‌ ಕಾಲುವೆಯ ಓರ್ವ ಎಂಜಿನಿಯರ್‌‌ ಆಗಿದ್ದ ವಿಲಿಯಂ ಸ್ಮಿತ್‌‌ (1769-1839) ಎಂಬಾತ, ವಿಭಿನ್ನ ಕಾಲಾವಧಿಗೆ ಸೇರಿದ ಬಂಡೆಗಳು (ಅಧಿನಿವೇಶನದ ನಿಯಮದ ಆಧಾರದ ಮೇಲೆ) ಪಳೆಯುಳಿಕೆಗಳ ವಿಭಿನ್ನ ಸಂಯೋಜನೆಗಳನ್ನು ಸಂರಕ್ಷಿಸಿರುವುದನ್ನು ವೀಕ್ಷಿಸಿದ; ಅಷ್ಟೇ ಅಲ್ಲ, ಒಂದು ನಿಯತವಾದ ಮತ್ತು ನಿರ್ಣಯಿಸಬಹುದಾದ ಕ್ರಮದಲ್ಲಿ ಈ ಸಂಯೋಜನೆಗಳು ಅನುಸರಿಸಿಕೊಂಡು ಬಂದಿರುವುದನ್ನೂ ಅವನು ಗಮನಿಸಿದ. ಅವನು ಕಂಡುಕೊಂಡ ಪ್ರಕಾರ, ದೂರದ ತಾಣಗಳಿಗೆ ಸೇರಿದ ಬಂಡೆಗಳ ನಡುವೆ, ಅವು ಹೊಂದಿರುವ ಪಳೆಯುಳಿಕೆಗಳನ್ನು ಆಧರಿಸಿ, ಪರಸ್ಪರ ಸಂಬಂಧವನ್ನು ಕಲ್ಪಿಸಲು ಸಾಧ್ಯವಿತ್ತು. ಇದಕ್ಕೆ ಆತ ಪ್ರಾಣಿಕೋಟಿಗೆ ಸಂಬಂಧಿಸಿದ ಅನುಕ್ರಮದ ತತ್ತ್ವ ಎಂಬುದಾಗಿ ಹೆಸರಿಸಿದ.

ಚಾರ್ಲ್ಸ್‌‌ ಡಾರ್ವಿನ್‌‌‌‌ಗೂ ಮೊದಲಿಗನಾಗಿ ಬಂದಿದ್ದ ಸ್ಮಿತ್‌‌ಗೆ ಜೀವಿವಿಜ್ಞಾನದ ವಿಕಸನದ ಅರಿವಿರಲಿಲ್ಲ ಮತ್ತು ಪ್ರಾಣಿಕೋಟಿಗೆ ಸಂಬಂಧಿಸಿದ ಅನುಕ್ರಮವು ಏಕೆ ಸಂಭವಿಸಿತು ಎಂಬುದೂ ಅವನಿಗೆ ಗೊತ್ತಿರಲಿಲ್ಲ. ಪ್ರಾಣಿಕೋಟಿಗೆ ಸಂಬಂಧಿಸಿದ ಅನುಕ್ರಮವು ಏಕೆ ಅಸ್ತಿತ್ವದಲ್ಲಿದೆ ಎಂಬುದನ್ನು ಜೀವಿವಿಜ್ಞಾನದ ವಿಕಸನವು ವಿವರಿಸುತ್ತದೆ: ವಿಭಿನ್ನ ಜೀವಿಗಳು ವಿಕಸನ ಹೊಂದಿ, ಬದಲಾವಣೆ ಹೊಂದಿ, ನಶಿಸಿದಂತೆ, ತಮ್ಮ ಪಳೆಯುಳಿಕೆಗಳನ್ನು ಉಳಿಸಿ ಹೋಗುತ್ತವೆ. ಜೀವಿವಿಜ್ಞಾನದ ವಿಕಸನವು ಸಂಭವಿಸಿತ್ತು ಎಂಬುದಕ್ಕೆ ಸಂಬಂಧಿಸಿದಂತೆ ಡಾರ್ವಿನ್‌ನಿಂದ ಉಲ್ಲೇಖಿಸಲ್ಪಟ್ಟಿದ್ದ ಪುರಾವೆಯ ಪ್ರಧಾನ ತುಣುಕುಗಳ ಪೈಕಿ, ಪ್ರಾಣಿಕೋಟಿಯ ಅನುಕ್ರಮವು ಒಂದಾಗಿತ್ತು.

ಇದೇ ಸಂದರ್ಭದಲ್ಲಿ ಜಾರ್ಜಸ್‌ ಕ್ಯುವಿಯರ್‌‌ ಎಂಬಾತ, ತಾನು ಪರೀಕ್ಷಿಸಿದ ಪ್ರಾಣಿ ಪಳೆಯುಳಿಕೆಗಳ ಪೈಕಿ ಎಲ್ಲವೂ ಅಲ್ಲದಿದ್ದರೂ ಅವುಗಳಲ್ಲಿ ಬಹುಭಾಗವು, ಈಗ ಅಸ್ತಿತ್ವದಲ್ಲಿಲ್ಲದ ಜಾತಿಗಳ ಅವಶೇಷಗಳಾಗಿದ್ದವು ಎಂದು ನಂಬಿದ. ಮಹೋತ್ಪಾತವಾದ ಎಂದು ಕರೆಯಲ್ಪಡುವ ಭೂವೈಜ್ಞಾನಿಕ ಪಂಥದ ಚಿಂತನೆಯ ಓರ್ವ ಸಕ್ರಿಯ ಪ್ರತಿಪಾದಕನಾಗುವಲ್ಲಿ ಇದು ಕ್ಯುವಿಯರ್‌ಗೆ ದಾರಿಮಾಡಿಕೊಟ್ಟಿತು. ಜೀವಂತ ಮತ್ತು ಪಳೆಯುಳಿಕೆ ಆನೆಗಳ ಕುರಿತಾಗಿ 1796ರಲ್ಲಿ ಆತ ಮಂಡಿಸಿದ ಪ್ರೌಢಪ್ರಬಂಧದ ಅಂತ್ಯಭಾಗದಲ್ಲಿ ಆತ ಹೀಗೆ ಬರೆದ:

ಈ ಎಲ್ಲಾ ವಾಸ್ತವಾಂಶಗಳು ತಮ್ಮ ತಮ್ಮ ನಡುವೆ ಸುಸಂಗತವಾಗಿವೆ, ಮತ್ತು ಇವನ್ನು ಯಾವುದೇ ವರದಿಯೂ ವಿರೋಧಿಸಿಲ್ಲ; ನಮಗೂ ಹಿಂದೆ ಪ್ರಪಂಚವೊಂದರ ಅಸ್ತಿತ್ವವಿತ್ತು ಮತ್ತು ಅದು ಒಂದು ಬಗೆಯ ಮಹಾದುರಂತದಿಂದ ನಾಶವಾಯಿತು ಎಂಬುದನ್ನು ಈ ಅಂಶಗಳು ಸಾಬೀತುಮಾಡುವಂತೆ ತೋರುತ್ತವೆ. [೧೧]

ಜೀವಿವಿಜ್ಞಾನದ ವಿವರಣೆಗಳು[ಬದಲಾಯಿಸಿ]

ಜೀವಂತ ಜಾತಿಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಆರಂಭಿಕ ಪ್ರಕೃತಿ ಶಾಸ್ತ್ರಜ್ಞರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದಾಗಿ, ಇಂದಿಗೂ ಬಳಕೆಯಲ್ಲಿರುವ ಶ್ರೇಣಿ ವ್ಯವಸ್ಥೆಯ ವರ್ಗೀಕರಣ ಪದ್ಧತಿಯೊಂದನ್ನು ಲಿನ್ನಿಯಸ್‌ ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಬದುಕಿರುವ ಜೀವಿಗಳಲ್ಲಿನ ಜೀವನದ ಮಹಾವೃಕ್ಷದ ಶ್ರೇಣಿ-ವ್ಯವಸ್ಥೆಯ ರಚನೆಯನ್ನು, ಅಂದು ಅತ್ಯಂತ ವಿರಳವಾಗಿದ್ದ ಪಳೆಯುಳಿಕೆ ದಾಖಲೆಯೊಂದಿಗೆ ಸಂಬಂಧ ಕಲ್ಪಿಸುವಲ್ಲಿ, ಡಾರ್ವಿನ್‌‌ ಮತ್ತು ಅವನ ಸಮಕಾಲೀನರು ಮೊದಲಿಗರಾಗಿದ್ದರು. ಮಾರ್ಪಡಿಸುವಿಕೆ, ಅಥವಾ ವಿಕಸನದೊಂದಿಗಿನ ಸಂತತಿಯ ಪ್ರಕ್ರಿಯೆಯೊಂದನ್ನು ಡಾರ್ವಿನ್‌‌ ಸ್ಫುಟವಾದ ರೀತಿಯಲ್ಲಿ ವಿವರಿಸಿದ; ಇದರ ಅನುಸಾರ, ಜೀವಿಗಳು ಸ್ವಾಭಾವಿಕವಾದ ಮತ್ತು ಬದಲಾಗುವ ಪರಿಸರೀಯ ಒತ್ತಡಗಳಿಗೆ ಹೊಂದಿಕೊಳ್ಳುತ್ತವೆ, ಅಥವಾ ಅವು ನಾಶವಾಗುತ್ತವೆ.

ಜುರಾಸಿಕ್‌‌ ಅವಧಿಗೆ (ಅಂದಾಜು 210 ದಶಲಕ್ಷ ವರ್ಷಗಳು) ಸೇರಿದ್ದೆಂದು ಕಾಲನಿರ್ಣಯ ಮಾಡಲಾದ ಅರ್ಜೆಂಟೀನಾದ ಪೆಟಗೋನಿಯಾದ ಅರುವಾಕ್ಯಾರಿಯಾ ಜಾತಿಯ ಶಿಲಾರೂಪದ ಶಂಕು.

ಆನ್‌ ದಿ ಆರಿಜನ್‌ ಆಫ್‌ ಸ್ಪೀಷೀಸ್‌ ಬೈ ಮೀನ್ಸ್‌ ಆಫ್‌ ನ್ಯಾಚುರಲ್‌ ಸೆಲೆಕ್ಷನ್‌, ಆರ್‌‌ ದಿ ಪ್ರಿಸರ್ವೇಷನ್‌ ಆಫ್‌ ಫೇವರ್ಡ್‌ ರೇಸಸ್‌ ಇನ್‌ ದಿ ಸ್ಟ್ರಗಲ್‌ ಫಾರ್‌ ಲೈಫ್‌ ಎಂಬ ಸುದೀರ್ಘ ಶೀರ್ಷಿಕೆಯುಳ್ಳ ಕೃತಿಯನ್ನು ಚಾರ್ಲ್ಸ್‌‌ ಡಾರ್ವಿನ್‌ ಬರೆದಾಗ, ಅತ್ಯಂತ ಹಳೆಯ ಪ್ರಾಣಿ ಪಳೆಯುಳಿಕೆಗಳು ಕ್ಯಾಂಬ್ರಿಯನ್‌‌ ಅವಧಿಗೆ ಸೇರಿದವಾಗಿದ್ದವು; ಕ್ಯಾಂಬ್ರಿಯನ್‌‌ ಅವಧಿ ಎಂಬುದು ಸುಮಾರು 540 ದಶಲಕ್ಷ ವರ್ಷಗಳಷ್ಟು ಹಳೆಯ ಕಾಲ ಎಂಬುದು ಈಗ ತಿಳಿದಿರುವ ವಿಷಯವಾಗಿದೆ. ಹಳೆಯದಾದ ಪಳೆಯುಳಿಕೆಗಳ ಗೈರುಹಾಜರಿಯಿಂದಾಗಿ, ತನ್ನ ಸಿದ್ಧಾಂತಗಳ ಸಿಂಧುತ್ವಕ್ಕೆ ಸಂಬಂಧಿಸಿದ ಸೂಚ್ಯಾರ್ಥಗಳ ಕುರಿತು ಡಾರ್ವಿನ್‌‌ ವ್ಯಾಕುಲಗೊಂಡಿದ್ದನಾದರೂ, ಇಂಥ ಪಳೆಯುಳಿಕೆಗಳು ಕಂಡುಬರುತ್ತವೆ ಎಂಬ ಭರವಸೆಯನ್ನು ಅವನು ವ್ಯಕ್ತಪಡಿಸಿದ್ದ: "ಪ್ರಪಂಚದ ಕೇವಲ ಒಂದು ಸಣ್ಣ ಭಾಗವಷ್ಟೇ ನಿಖರತೆಯೊಂದಿಗೆ ಅರಿಯಲ್ಪಟ್ಟಿದೆ" ಎಂದು ಅವನು ಬರೆದಿದ್ದ ಟಿಪ್ಪಣಿಯು ಇದಕ್ಕೆ ಸಾಕ್ಷಿಯಾಗಿತ್ತು. ಅತ್ಯಂತ ಹಳೆಯದೆಂದು ತಿಳಿಯಲ್ಪಟ್ಟಿದ್ದ ಕ್ಯಾಂಬ್ರಿಯನ್‌ ಅವಧಿಯ ಜೀವ್ಯವಶೇಷಗಳುಳ್ಳ ಸ್ತರಶ್ರೇಣಿಗಳಲ್ಲಿ, ಅನೇಕ ಸಮೂಹಗಳ (ಅಂದರೆ ಪ್ರಧಾನ ವಿಭಾಗಗಳ) ಹಠಾತ್‌‌ ಗೋಚರಿಸುವಿಕೆಯ ಕುರಿತೂ ಡಾರ್ವಿನ್‌‌ ಆಲೋಚಿಸಿದ.[೧೨]

ಮುಂದಿನ ಆವಿಷ್ಕಾರಗಳು[ಬದಲಾಯಿಸಿ]

ಡಾರ್ವಿನ್‌‌ನ ಕಾಲದಿಂದಲೂ, ವರ್ತಮಾನ ಕಾಲಕ್ಕೆ ಮುಂಚಿನ 2.3 ಮತ್ತು 3.5 ಶತಕೋಟಿ ವರ್ಷಗಳ ನಡುವಿನ ಅವಧಿಗೆ ಪಳೆಯುಳಿಕೆ ದಾಖಲೆಯು ಹಿಂದಕ್ಕೆ ತಳ್ಳಲ್ಪಟ್ಟಿದೆ.[೧೩] ಈ ಪೂರ್ವಕ್ಯಾಂಬ್ರಿಯನ್‌‌ ಪಳೆಯುಳಿಕೆಗಳ ಪೈಕಿ ಬಹುಭಾಗವು ಅತಿ ಸೂಕ್ಷ್ಮವಾದ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಪಳೆಯುಳಿಕೆಗಳಿಂದ ಕೂಡಿದೆ. ಆದಾಗ್ಯೂ, ಈಗ ತಿಳಿದಿರುವ ಸ್ಥೂಲದೃಷ್ಟಿಗೋಚರ ಪಳೆಯುಳಿಕೆಗಳು ಜೀವ ಪ್ರಾರಂಭಿಕ ಅವಧಿಯ ಅಂತ್ಯಭಾಗಕ್ಕೆ ಸೇರಿದವಾಗಿವೆ. 575 ದಶಲಕ್ಷ ವರ್ಷಗಳಷ್ಟು ಹಿಂದಕ್ಕೆ ನಮ್ಮನ್ನು ಕರೆದೊಯ್ಯುವ ಎಡಿಯಾಕಾರನ್‌‌ ಜೀವಿಸಮೂಹವು (ವೆಂಡಿಯನ್‌‌ ಜೀವಿಸಮೂಹ ಎಂದೂ ಇದನ್ನು ಕರೆಯಲಾಗುತ್ತದೆ), ಆರಂಭದಲ್ಲಿದ್ದ ಬಹುಕೋಶೀಯ ಯೂಕ್ಯಾರಿಯೋಟ್‌‌‌‌ಗಳ, ಸಮೃದ್ಧವಾಗಿ ವೈವಿಧ್ಯಮಯವಾಗಿರುವ ಒಂದು ಜೋಡಣೆಯನ್ನು ಒಟ್ಟಾಗಿ ರೂಪಿಸುತ್ತದೆ.

ಪಳೆಯುಳಿಕೆ ದಾಖಲೆ ಮತ್ತು ಪ್ರಾಣಿಕೋಟಿಯ ಅನುಕ್ರಮವು ಜೈವಿಕ ಶ್ರೇಣಿವ್ಯವಸ್ಥೆಯ ವಿಜ್ಞಾನದ ಆಧಾರವಾಗಿದೆ ಅಥವಾ ಬಂಡೆಗಳು ಹೊಂದಿರುವ ಪಳೆಯುಳಿಕೆಗಳನ್ನಾಧರಿಸಿ ಅವುಗಳ ವಯಸ್ಸನ್ನು ನಿರ್ಣಯಿಸುವ ಆಧಾರವಾಗಿದೆ. ಭೂವಿಜ್ಞಾನದ ಮೊದಲ 150 ವರ್ಷಗಳ ಅವಧಿಯಲ್ಲಿ, ಬಂಡೆಗಳ ತುಲನಾತ್ಮಕ ವಯಸ್ಸನ್ನು ನಿರ್ಣಯಿಸುವುದಕ್ಕೆ ಸಂಬಂಧಿಸಿದಂತೆ, ಜೈವಿಕ ಶ್ರೇಣಿವ್ಯವಸ್ಥೆ ಮತ್ತು ಅಧಿನಿವೇಶನಗಳು ಮಾತ್ರವೇ ಏಕೈಕ ವಿಧಾನಗಳಾಗಿದ್ದವು. ಆರಂಭಿಕ ಪ್ರಾಗ್ಜೀವವಿಜ್ಞಾನಿಗಳು ಮತ್ತು ಮೋಡಪದರಗಳ ಲೇಖಕರಿಂದ ನಿರ್ಣಯಿಸಲ್ಪಟ್ಟಂತೆ, ಬಂಡೆ ಸ್ತರಶ್ರೇಣಿಗಳ ತುಲನಾತ್ಮಕ ವಯಸ್ಸುಗಳನ್ನು ಆಧರಿಸಿ ಭೂವಿಜ್ಞಾನದ ಕಾಲಮಾಪಕವನ್ನು ಅಭಿವೃದ್ಧಿಪಡಿಸಲಾಯಿತು.

ಪಳೆಯುಳಿಕೆಗಳಿಂದ ಪಡೆಯಲಾದ ತುಲನಾತ್ಮಕ ವಯಸ್ಸುಗಳನ್ನು ಪರಿಶೀಲಿಸಲು ಮತ್ತು ಅನೇಕ ಪಳೆಯುಳಿಕೆಗಳಿಗೆ ಸಂಬಂಧಿಸಿದಂತೆ ಪರಿಪೂರ್ಣ ವಯಸ್ಸುಗಳ ಮಾಹಿತಿಯನ್ನು ಒದಗಿಸಲು, ಇಪ್ಪತ್ತನೇ ಶತಮಾನದ ಆರಂಭಿಕ ವರ್ಷಗಳಿಂದೀಚೆಗೆ ರೇಡಿಯೋಮಾಪನದ ಕಾಲನಿರ್ಣಯದಂಥ ಪರಿಪೂರ್ಣ ಕಾಲನಿರ್ಣಯ ವಿಧಾನಗಳನ್ನು ಬಳಸಲಾಗುತ್ತಿದೆ. ರೇಡಿಯೋಮಾಪನದ ಕಾಲನಿರ್ಣಯದಲ್ಲಿ ಪೊಟಾಷಿಯಂ/ಆರ್ಗಾನ್‌‌, ಆರ್ಗಾನ್‌‌/ಆರ್ಗಾನ್‌‌, ಯುರೇನಿಯಂ ಸರಣಿ, ಮತ್ತು, ತೀರಾ ಇತ್ತೀಚಿನ ಪಳೆಯುಳಿಕೆಗಳಿಗೆ ಸಂಬಂಧಿಸಿದಂತೆ ಇಂಗಾಲ-14 ಕಾಲನಿರ್ಣಯ ವಿಧಾನಗಳು ಸೇರಿವೆ. ಅತ್ಯಂತ ಹಿಂದಿನದೆಂದು ತಿಳಿದುಬಂದಿರುವ ಸ್ಟ್ರೊಮ್ಯಾಟೊಲೈಟ್‌‌ಗಳು 3.4 ಶತಕೋಟಿಗೂ ಹೆಚ್ಚಿನ ವರ್ಷಗಳಷ್ಟು ಹಳೆಯವು ಎಂಬುದನ್ನು ರೇಡಿಯೋಮಾಪನದ ಕಾಲನಿರ್ಣಯವು ತೋರಿಸಿಕೊಟ್ಟಿದೆ. ಸ್ಥಳೀಯ ಭೂವಿಜ್ಞಾನ ಮತ್ತು ಸನ್ನಿವೇಶವನ್ನು ಆಧರಿಸಿ, ಹಲವಾರು ಕಾಲನಿರ್ಣಯ ವಿಧಾನಗಳು ಬಳಸಲ್ಪಟ್ಟಿವೆ ಮತ್ತು ಇಂದಿಗೂ ಬಳಸಲ್ಪಡುತ್ತಿವೆ; ಈ ಕಾಲನಿರ್ಣಯ ವಿಧಾನಗಳು ಒದಗಿಸುವ ಫಲಿತಾಂಶಗಳ ಕುರಿತು ಒಂದಷ್ಟು ಅಭಿಪ್ರಾಯ ಭೇದಗಳು ಅಲ್ಲಲ್ಲಿ ಕಂಡುಬರುತ್ತವೆಯಾದರೂ, ಒಂದು ಅತ್ಯಂತ ಹಳೆಯದೆನಿಸಿದ ಭೂಮಿಯ ವಯಸ್ಸು ಸರಿಸುಮಾರಾಗಿ 4.6 ಶತಕೋಟಿ ವರ್ಷಗಳೆಂಬ ಪುರಾವೆಯನ್ನು ಸರಿಸುಮಾರು ಎಲ್ಲ ವಿಧಾನಗಳೂ ಒದಗಿಸುತ್ತವೆ.

ಆಧುನಿಕ ದೃಷ್ಟಿಕೋನ[ಬದಲಾಯಿಸಿ]

"ಪಳೆಯುಳಿಕೆ ದಾಖಲೆಯು ಜೀವದ ವಿಕಸನದ ಮಹಾಕಾವ್ಯವಾಗಿದ್ದು, ನಾಲ್ಕು ಶತಕೋಟಿ ವರ್ಷಗಳ ನಂತರ ಅದು ಬಹಿರಂಗಗೊಂಡಿದೆ; ಸ್ವಾಭಾವಿಕ ಆಯ್ಕೆಯ ಅನುಸಾರವಾಗಿ ಪರಿಸರೀಯ ಸ್ಥಿತಿಗತಿಗಳು ಮತ್ತು ಅನುವಂಶಿಕ ಸಾಮರ್ಥ್ಯಗಳು ಪಾರಸ್ಪರಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರಿಂದಾಗಿ ಇದು ಸಾಧ್ಯವಾಗಿದೆ."[೧೪] ಭೂಮಿಯ ಹವಾಮಾನ, ಭೂರಚನಾಧ್ಯಯನ, ವಾತಾವರಣ, ಸಾಗರಗಳು, ಮತ್ತು ಮರುಕಳಿಸುವ ವಿಪತ್ತುಗಳು ಎಲ್ಲಾ ಜೀವಿಗಳ ಮೇಲೆ ಪ್ರಧಾನವಾದ ಆಯ್ದ ಒತ್ತಡಗಳನ್ನು ಆಹ್ವಾನಿಸಿದವು; ಇವಕ್ಕೆ ಈ ಎಲ್ಲಾ ಜೀವಿಗಳು ಹೊಂದಿಕೊಂಡವು, ಇಲ್ಲವೇ ತಮ್ಮ ಸಂತತಿಗಳನ್ನು ಉಳಿಸಿ ಅಥವಾ ಉಳಿಸದೆಯೇ ಅವು ನಾಶವಾದವು. ಜೀವದ ವಂಶವೃಕ್ಷವನ್ನು ಅಥವಾ ಮಹಾವೃಕ್ಷವನ್ನು ಹೊರಗೆಡಹುವುದರ ಅಂತಶ್ಯಾಸ್ತ್ರೀಯ ಹೊಣೆಗಾರಿಕೆಯನ್ನು ಹಂಚಿಕೊಳ್ಳುವ ದೃಷ್ಟಿಯಿಂದ, ಆಧುನಿಕ ಪ್ರಾಗ್ಜೀವಶಾಸ್ತ್ರವು ವಿಕಸನೀಯ ಜೀವಶಾಸ್ತ್ರದೊಂದಿಗೆ ಸೇರಿಕೊಂಡಿದೆ; ಜೀವಕೋಶ ರಚನೆ ಮತ್ತು ಕಾರ್ಯಚಟುವಟಿಕೆಗಳು ವಿಕಸನ ಹೊಂದಿದ ಪೂರ್ವಕ್ಯಾಂಬ್ರಿಯನ್‌ ಕಾಲದ ಅತಿ ಸೂಕ್ಷ್ಮವಾದ ಜೀವನಕ್ಕೆ, ಜೀವದ ಮಹಾವೃಕ್ಷವು ಕಾಲದಲ್ಲಿ ಹಿಂದಕ್ಕೆ ಅನಿವಾರ್ಯವಾಗಿ ಕರೆದುಕೊಂಡು ಹೋಗುತ್ತದೆ. ಜೀವ ಪ್ರಾರಂಭಿಕದಲ್ಲಿ ಆಳವಾಗಿರುವ ಮತ್ತು ಆರ್ಕಿಯನ್‌ ಯುಗದಲ್ಲಿ ಇನ್ನೂ ಆಳವಾಗಿರುವ ಭೂಮಿಯ ಕಾಲವು, "ಅತಿ ಸೂಕ್ಷ್ಮವಾದ ಪಳೆಯುಳಿಕೆಗಳು ಮತ್ತು ಸೂಕ್ಷ್ಮವಾದ ರಾಸಾಯನಿಕ ಸಂಕೇತಗಳಿಂದ ಮಾತ್ರವೇ ಮರುಎಣಿಕೆ ಮಾಡಲ್ಪಡುತ್ತದೆ."[೧೫] ಜೀವಿಗಳ ನಡುವಿನ ಜೀವಿವರ್ಗೀಕರಣ ಶಾಸ್ತ್ರ ಮತ್ತು ವಿಕಸನೀಯ ಅಂತರಗಳನ್ನು ಅಂಕಿ-ಅಂಶದ ಸೀಮಿತ ಭರವಸೆಯೊಂದಿಗೆ ನಿರ್ಣಯಿಸಲು, ಆಣ್ವಿಕ ಜೀವಶಾಸ್ತ್ರಜ್ಞರು ಜಾತಿವಿಕಾಸದದ ಸಿದ್ಧಾಂತಗಳನ್ನು ಬಳಸಿಕೊಂಡು ಪ್ರೋಟೀನು ಅಮೈನೋ ಆಮ್ಲ ಅಥವಾ ನ್ಯೂಕ್ಲಿಯೋಟೈಡ್‌ ಸರಣಿಯ ಸಮಾನರೂಪತೆಯನ್ನು (ಅಂದರೆ ಹೋಲಿಕೆಯನ್ನು) ಹೋಲಿಸಬಲ್ಲರು. ಮತ್ತೊಂದೆಡೆ, ಜೀವದ ಮಹಾವೃಕ್ಷದಲ್ಲಿ ಯಾವಾಗ ಮತ್ತು ಯಾವ ಜೀವಿಯಲ್ಲಿ ಕವಲೊಡೆಯುವಿಕೆಯು ಸಂಭವಿಸಿತು ಎಂಬುದನ್ನು, ಪಳೆಯುಳಿಕೆಗಳ ಅಧ್ಯಯನವು ಹೆಚ್ಚು ನಿರ್ದಿಷ್ಟವಾಗಿ ಬೆರಳುಮಾಡಿ ತೋರಿಸಬಲ್ಲದು. ಭೂಮಿಯ ಮೇಲಿನ ಆಳವಾದ ಕಾಲದ ಅವಧಿಯಲ್ಲಿನ ಜೀವದ ಮತ್ತು ಅದರ ವಿಕಸನದ ಗೋಚರಿಸುವಿಕೆಯ ಕುರಿತು, ವಿಜ್ಞಾನವು ಈಗಲೂ ಹೊಂದಿರುವ ಮಸುಕಾದ ದೃಷ್ಟಿಕೋನದ ಸ್ಪಷ್ಟೀಕರಣದಲ್ಲಿ, ಆಧುನಿಕ ಜಾತಿವಿಕಾಸದ ಅಧ್ಯಯನ ಮತ್ತು ಪ್ರಾಗ್ಜೀವಶಾಸ್ತ್ರ ಇವುಗಳು ಒಟ್ಟಾಗಿ ಕೆಲಸಮಾಡುತ್ತಿವೆ.[೧೬]

ಫ್ಯಾಕೋಪಿಡ್‌ ಟ್ರೈಲೊಬೈಟ್‌ ಎಲ್‌ಡ್ರೆಡ್ಜಿಯೋಪ್ಸ್‌ ರಾನಾ ಕ್ರಾಸಿಟ್ಯುಬರ್‌‌ಕ್ಯುಲೇಟಾ; ಈ ಕುಲಕ್ಕೆ ನೈಲ್ಸ್‌ ಎಲ್‌ಡ್ರೆಡ್ಜ್‌‌ ಹೆಸರನ್ನು ಇಡಲಾಯಿತು.
ಅಟಾಹ್‌ನ ಮೌಂಟ್‌ ಕಾರ್ಮೆಲ್‌ ಜಂಕ್ಷನ್‌ನಲ್ಲಿನ, ಮಧ್ಯ ಜುರಾಸಿಕ್‌ ಅವಧಿಯ ಕಾರ್ಮೆಲ್‌ ಸ್ತರದಿಂದ ಪಡೆಯಲಾದ ಕ್ರಿನಾಯ್ಡ್‌ ಕಲಮ್ನಾಲ್ಸ್‌ (ಐಸೋಕ್ರೈನಸ್‌ ನಿಕೊಲೆಟಿ).ಪ್ರಮಾಣ ಮಿ.ಮೀ.ಗಳಲ್ಲಿ.

ಫ್ಯಾಕಾಪ್ಸ್‌ ಟ್ರೈಲೊಬೈಟ್‌ ಕುಲದ ಕುರಿತಾದ ನೈಲ್ಸ್‌ ಎಲ್‌ಡ್ರೆಡ್ಜ್‌‌‌ನ ಅಧ್ಯಯನವು ಊಹಾಸಿದ್ಧಾಂತವೊಂದನ್ನು ಬೆಂಬಲಿಸಿತು; ಟ್ರೈಲೊಬೈಟ್‌ನ ಕಣ್ಣು ಮಸೂರಗಳ ಜೋಡಣೆಗೆ ಆದ ಮಾರ್ಪಡುಗಳು ಡಿವೋನಿಯನ್‌ ಭೂಸ್ತರದ ರಚನೆಯ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಬಿಟ್ಟುಬಿಟ್ಟು ಮುಂದುವರಿದವು ಎಂಬುದು ಸದರಿ ಊಹಾಸಿದ್ಧಾಂತವಾಗಿತ್ತು.[೧೭] ಮಸೂರ ಬದಲಾವಣೆಗಳ ಪರಿಣಾಮಗಳು ಪಳೆಯುಳಿಕೆಯಾಗಿಸಲ್ಪಟ್ಟವೇ ಹೊರತು, ಕ್ಷಿಪ್ರವಾಗಿ ಸಂಭವಿಸುವ ವಿಕಸನದ ಪ್ರಕ್ರಿಯೆಯಲ್ಲ ಎಂಬುದು ಫ್ಯಾಕಾಪ್ಸ್‌ ಪಳೆಯುಳಿಕೆ ದಾಖಲೆಯ ಕುರಿತಾದ ಎಲ್‌ಡ್ರೆಡ್ಜ್‌‌ನ ಅರ್ಥವಿವರಣೆಯಾಗಿತ್ತು. ಸ್ಟೀಫನ್‌‌ ಜೇ ಗೌಲ್ಡ್‌ ಮತ್ತು ನೈಲ್ಸ್‌ ಎಲ್‌ಡ್ರೆಡ್ಜ್‌‌ ಎಂಬಿಬ್ಬರು 1971ರಲ್ಲಿ ಪ್ರಾಧಾನ್ಯತೆ ನೀಡಿದ ಸಮತೋಲನದ ಮೇಲೆ ಮೂಲ ಪ್ರಬಂಧವನ್ನು ಪ್ರಕಟಿಸುವಲ್ಲಿ, ಇದು ಮತ್ತು ಇತರ ದತ್ತಾಂಶವು ಕಾರಣವಾದವು.

ಆಧುನಿಕ ಬೆಳವಣಿಗೆಯ ಉದಾಹರಣೆ[ಬದಲಾಯಿಸಿ]

ಆರಂಭಿಕ ಕ್ಯಾಂಬ್ರಿಯನ್‌‌ ಅವಧಿಯ, ದ್ವಿಪಾರ್ಶ್ವ ಸಮ್ಮಿತಿಯ ಪ್ರಾಣಿಯ ಭ್ರೂಣಕ್ಕೆ ಸಂಬಂಧಿಸಿದ ಸೂಕ್ಷ್ಮಪಳೆಯುಳಿಕೆಗಳಿಗೆ, ಸಿಂಕ್ರೊಟ್ರೊನ್‌‌ ಕ್ಷ-ಕಿರಣದ ಟೊಮೊಗ್ರಾಫಿಕ್‌‌ ಕೌಶಲಗಳನ್ನು ಅನ್ವಯಿಸಿರುವುದು ಆಧುನಿಕ ಪ್ರಾಗ್ಜೀವ ವೈಜ್ಞಾನಿಕ ಪ್ರಗತಿಯ ಒಂದು ಉದಾಹರಣೆಯಾಗಿದ್ದು, ಅದು ಮೆಟಜೋವಗಳ ಅತ್ಯಂತ ಆರಂಭಿಕ ಹಂತಗಳಲ್ಲಿನ ಅವುಗಳ ವಿಕಸನದ ಕುರಿತು ಹೊಸ ಒಳನೋಟಗಳನ್ನು ಇತ್ತೀಚಿಗೆ ನೀಡಿದೆ. ಹಿಂದೆ ಪಡೆಯಲಾಗದಿದ್ದ ಮೂರು-ಆಯಾಮದ ವಿಶ್ಲೇಷಣೆಯನ್ನು ಪಳೆಯುಳಿಕೆಯಾಗುವಿಕೆಯ ಮಿತಿಗಳಲ್ಲಿ ತಲಲೇಖನ ಕೌಶಲವು ಒದಗಿಸುತ್ತದೆ. ಎರಡು ನಿಗೂಢವಾದ ದ್ವಿಪಾರ್ಶ್ವ ಸಮ್ಮಿತಿಯ ಪ್ರಾಣಿಗಳ ಪಳೆಯುಳಿಕೆಗಳಾದ, ಹುಳುವಿನ-ರೀತಿಯಲ್ಲಿರುವ ಮಾರ್ಕುಯೆಲಿಯಾ ಮತ್ತು ಒಂದು ಆದಿಮ ಪ್ರೋಟೋಸ್ಟೋಮ್‌‌ ಎಂದು ಸಾಮಾನ್ಯವಾಗಿ ಭಾವಿಸಲಾದ ಸ್ಯೂಡೋಆಯ್ಡಸ್‌ ಇವುಗಳು, ಜೀವಾಂಕುರ ಪದರದ ಭ್ರೂಣೀಯ ಅಭಿವೃದ್ಧಿಯ ಕುರಿತು ಒಂದು ಇಣುಕು ನೋಟವನ್ನು ಒದಗಿಸುತ್ತವೆ. ಜೀವ ಪ್ರಾರಂಭಿಕ ಅವಧಿಯ ಅಂತ್ಯದ ವೇಳೆಗೆ ಆಗಿತ್ತೆಂದು ಭಾವಿಸಲಾದುದಕ್ಕಿಂತ ಸಾಕಷ್ಟು ಹಿಂದೆಯೇ ಆದ ಸಂಧಿಪದಿಗಳ ಬೆಳವಣಿಗೆಯ ಕೆಲವೊಂದು ಅಂಶಗಳ ಹೊರಹೊಮ್ಮುವಿಕೆಯನ್ನು, 543-ದಶಲಕ್ಷ-ವರ್ಷಗಳಷ್ಟು-ಹಳೆಯದಾದ ಈ ಭ್ರೂಣಗಳು ಬೆಂಬಲಿಸುತ್ತವೆ. ಚೀನಾ ಮತ್ತು ಸೈಬೀರಿಯಾಗಳಿಗೆ ಸೇರಿದ ಸಂರಕ್ಷಿಸಲ್ಪಟ್ಟ ಭ್ರೂಣಗಳು ಕ್ಷಿಪ್ರ ಮರುಸಂಯೋಜನಾಶೀಲ ಫಾಸ್ಫೇಟೀಕರಣಕ್ಕೆ ಈಡಾಗಿ, ಜೀವಕೋಶ ರಚನೆಗಳನ್ನು ಒಳಗೊಂಡಂತೆ ಗಾಢವಾದ ಸಂರಕ್ಷಣೆಗೆ ಒಳಗಾದವು. ಭೂಮಿಯ ಮೇಲಿನ ಜೀವದ ಹೊರಹೊಮ್ಮುವಿಕೆ ಮತ್ತು ಅಭಿವೃದ್ಧಿಯ ಕುರಿತಾದ, ಅನ್ಯತಾ ಪಡೆಯಲಾಗದಿದ್ದ ಮಾಹಿತಿಯನ್ನು, ಪಳೆಯುಳಿಕೆ ದಾಖಲೆಯಿಂದ ಸಂಕೇತ ಭಾಷೆಯಲ್ಲಿರಿಸಲ್ಪಟ್ಟ ಜ್ಞಾನವು ಹೇಗೆ ನೀಡುತ್ತಾ ಬಂದಿತು ಎಂಬುದಕ್ಕೆ ಈ ಸಂಶೋಧನೆಯು ಒಂದು ಗಮನಾರ್ಹ ಉದಾಹರಣೆಯಾಗಿದೆ. ಉದಾಹರಣೆಗೆ, ಸಂಶೋಧನೆಯು ಸೂಚಿಸುವ ಪ್ರಕಾರ, ಮಾರ್ಕುಯೆಲಿಯಾ ವು ಪ್ರಿಯಾಪುಲಿಡ್‌ ಹುಳುಗಳೆಡೆಗೆ ಅತ್ಯಂತ ನಿಕಟವಾದ ಆಕರ್ಷಣೆಯನ್ನು ಹೊಂದಿದೆ, ಮತ್ತು ಪ್ರಿಯಾಪುಲಿಡಾ, ನೆಮೆಟೊಡಾ ಮತ್ತು ಆರ್ತ್ರೊಪೊಡಾಗಳ ವಿಕಸನದ ಕವಲೊಡೆಯುವಿಕೆಗೆ ಹೊಂದಿಕೊಂಡಂತಿದೆ.[೧೮]

ಪಳೆಯುಳಿಕೆಗಳ ವಿರಳತೆ[ಬದಲಾಯಿಸಿ]

ಮೆಗಲಾಡನ್‌ ಮತ್ತು ಕಾರ್ಕರೋಡಾಂಟೋಸಾರಸ್‌ ಹಲ್ಲುಗಳು. ಎರಡನೆಯದು ಸಹರಾ ಮರುಭೂಮಿಯಲ್ಲಿ ಕಂಡುಬಂದಿತು.

ಪಳೆಯುಳಿಕೆಯಾಗುವಿಕೆ ಎಂಬುದು ಅಸಾಧಾರಣವಾದ ರೀತಿಯಲ್ಲಿ ಅಪರೂಪವಾಗಿರುವ ಒಂದು ಸಂಭವಿಸುವಿಕೆಯಾಗಿದೆ; ಏಕೆಂದರೆ, ಹಿಂದೆ-ಜೀವಿಸುತ್ತಿದ್ದ ಜೀವಿಗಳ ಬಹುಪಾಲು ಅಂಗಭಾಗಗಳು ಸಾವಿನ ನಂತರ ಸಾಕಷ್ಟು ಶೀಘ್ರವಾಗಿ ಕೊಳೆಯುವ ಪ್ರವೃತ್ತಿಯನ್ನು ಹೊಂದಿರುತ್ತವೆ. ಜೀವಿಯೊಂದು ಪಳೆಯುಳಿಕೆಯಾಗಬೇಕೆಂದರೆ, ಅದರ ಅವಶೇಷಗಳು ಎಷ್ಟು ಸಾಧ್ಯವೋ ಅಷ್ಟು ಬೇಗ ಸಂಚಯದಿಂದ ಆವರಿಸಲ್ಪಡಬೇಕಾಗಿರುವುದು ಸಾಮಾನ್ಯವಾಗಿ ಅಗತ್ಯವಾಗಿರುತ್ತದೆ. ಆದಾಗ್ಯೂ ಇದಕ್ಕೆ ಒಂದಷ್ಟು ವಿನಾಯಿತಿಗಳೂ ಇವೆ; ಒಂದು ವೇಳೆ ಜೀವಿಯೊಂದು ಶೀತಾವರಣದಲ್ಲಿ ರಕ್ಷಿಸಲ್ಪಟ್ಟರೆ, ಒಣಗಿಸಲ್ಪಟ್ಟರೆ, ಅಥವಾ ಆಮ್ಲಜನಕದ ಕೊರತೆಯ (ಆಮ್ಲಜನಕ-ಮುಕ್ತ) ಪರಿಸರವೊಂದರಲ್ಲಿ ಅದು ನೆಲೆಗೊಳ್ಳಲು ಅವಕಾಶವಾದರೆ ಅದು ಪಳೆಯುಳಿಕೆಯಾಗಲು ಸಾಧ್ಯವಿದೆ. ಹಲವಾರು ವಿಭಿನ್ನ ಬಗೆಯ ಪಳೆಯುಳಿಕೆಗಳು ಮತ್ತು ಪಳೆಯುಳಿಕೆಯಾಗುವಿಕೆಯ ಪ್ರಕ್ರಿಯೆಗಳು ಅಸ್ತಿತ್ವದಲ್ಲಿವೆ.

ಪಳೆಯುಳಿಕೆಯ ಪ್ರಕ್ರಿಯೆಗಳು ಮತ್ತು ಸರಳ ಲೆಕ್ಕಾಚಾರದ ಅವಕಾಶದ ಸಂಯೋಜಿತ ಪರಿಣಾಮದಿಂದಾಗಿ, ಗಡುಸಾದ ಶರೀರಭಾಗಗಳನ್ನು ಹೊಂದಿರುವ ಜೀವಿಗಳಿಗೆ ಅನುಕೂಲಮಾಡಿಕೊಡುವ ಪ್ರವೃತ್ತಿಯನ್ನು ಪಳೆಯುಳಿಕೆಯಾಗುವಿಕೆಯು ಹೊಂದಿರುತ್ತದೆ; ಇವು ವ್ಯಾಪಕವಾಗಿ ಹಬ್ಬಿಕೊಂಡಿದ್ದ, ಮತ್ತು ನಶಿಸಿಹೋಗುವುದಕ್ಕೆ ಮುಂಚಿತವಾಗಿ ಒಂದು ಸುದೀರ್ಘ ಅವಧಿಯವರೆಗೆ ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿದ್ದ ಜೀವಿಗಳಾಗಿರುತ್ತವೆ. ಮತ್ತೊಂದೆಡೆ, ಸಣ್ಣದಾಗಿರುವ, ಮೃದು ದೇಹವನ್ನೊಳಗೊಂಡ, ಭೌಗೋಳಿಕವಾಗಿ ನಿರ್ಬಂಧಿಸಲ್ಪಟ್ಟ ಮತ್ತು ಭೂವೈಜ್ಞಾನಿಕವಾಗಿ ಅಲ್ಪಕಾಲಿಕವಾಗಿರುವ ಜೀವಿಗಳ ಪಳೆಯುಳಿಕೆಗಳನ್ನು ಕಂಡುಕೊಳ್ಳುವುದು ಅತ್ಯಂತ ಅಸಾಮಾನ್ಯವಾದ ವಿಷಯವಾಗಿದೆ; ಏಕೆಂದರೆ ಅವು ಬಹಳ ವಿರಳವಾಗಿರುತ್ತವೆ ಮತ್ತು ಅವುಗಳ ಸಂರಕ್ಷಣೆಯ ಸಂಭಾವ್ಯತೆಯು ಕಡಿಮೆ ಮಟ್ಟದ್ದಾಗಿರುತ್ತದೆ.

ದೊಡ್ಡದಾದ ಮಾದರಿಗಳು (ಬೃಹತ್‌‌ ಪಳೆಯುಳಿಕೆಗಳು) ಹೆಚ್ಚು ಬಾರಿ ವೀಕ್ಷಿಸಲ್ಪಟ್ಟ, ಅಗೆಯಲ್ಪಟ್ಟ ಮತ್ತು ಪ್ರದರ್ಶಿಸಲ್ಪಟ್ಟವುಗಳಾಗಿರುತ್ತವೆಯಾದರೂ, ಅತಿ ಸೂಕ್ಷ್ಮವಾದ ಅವಶೇಷಗಳು (ಸೂಕ್ಷ್ಮಪಳೆಯುಳಿಕೆಗಳು) ಪಳೆಯುಳಿಕೆಯ ದಾಖಲೆಯಲ್ಲಿ ವಾಸ್ತವವಾಗಿ ತುಂಬಾ ಹೆಚ್ಚು ಸಾಮಾನ್ಯವಾಗಿರುತ್ತವೆ.

ಪಳೆಯುಳಿಕೆ ದಾಖಲೆಯೊಳಗಿನ ಪರಿವರ್ತನೆಯ ಜಾತಿಗಳ ವಿರಳತೆಯಿಂದ ಕೆಲವೊಬ್ಬ ಪ್ರಾಸಂಗಿಕ ವೀಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಈ ವಿರಳತೆಗೆ ಸಂಬಂಧಿಸಿದ ಸಾಂಪ್ರದಾಯಿಕ ವಿವರಣೆಯು ಡಾರ್ವಿನ್‌‌ನಿಂದ ನೀಡಲ್ಪಟ್ಟಿತು. ಈ ಕುರಿತು ಅವನು ಮಾತನಾಡುತ್ತಾ, "ಭೂವೈಜ್ಞಾನಿಕ ದಾಖಲೆಯ ಪರಮೋಚ್ಚ ಅಸಮಗ್ರತೆಯು" ಪರಿವರ್ತನೆಯ ಜಾತಿಗಳ ಅಲ್ಪಾವಧಿ ಮತ್ತು ಕಿರಿದಾದ ಭೌಗೋಳಿಕ ವ್ಯಾಪ್ತಿಯೊಂದಿಗೆ ಸೇರಿಕೊಂಡು, ಇಂಥ ಅನೇಕ ಪಳೆಯುಳಿಕೆಗಳನ್ನು ಕಂಡುಕೊಳ್ಳಬಹುದು ಎಂಬುದನ್ನೇ ಅಸಂಭವವಾಗಿಸಿವೆ ಎಂದು ತಿಳಿಸಿದ. ಸರಳವಾಗಿ ಹೇಳುವುದಾದರೆ, ಪಳೆಯುಳಿಕೆಯಾಗುವಿಕೆಯು ಸಂಭವಿಸುವುದಕ್ಕೆ ಕಾರಣವಾಗುವ ಸ್ಥಿತಿಗತಿಗಳು ಸಾಕಷ್ಟು ಅಪರೂಪವಾಗಿರುತ್ತವೆ; ಮತ್ತು ಯಾವುದೇ ಒಂದು ನಿರ್ದಿಷ್ಟ ಜೀವಿಯು ಪಳೆಯುಳಿಕೆಯೊಂದನ್ನು ಬಿಟ್ಟುಹೋಗುತ್ತದೆ ಎಂಬುದು ಅತೀವವಾಗಿ ಅಸಂಭವವಾಗಿರುತ್ತದೆ. ಪಳೆಯುಳಿಕೆಯ ದಾಖಲೆಯಲ್ಲಿನ ಸ್ಥಗನ ಮತ್ತು ಹಠಾತ್‌‌ ಗೋಚರಿಸುವಿಕೆಯ ಮಾದರಿಯನ್ನು ವಿವರಿಸಲೆಂದು, ಎಲ್‌ಡ್ರೆಡ್ಜ್‌‌ ಮತ್ತು ಗೌಲ್ಡ್‌ ಎಂಬಿಬ್ಬರು ಪ್ರಾಧಾನ್ಯತೆ ನೀಡಿದ ಸಮತೋಲನದ ಕುರಿತಾದ ತಮ್ಮ ಸಿದ್ಧಾಂತವನ್ನು ಆಂಶಿಕವಾಗಿ ಅಭಿವೃದ್ಧಿಪಡಿಸಿದರು. ಮೇಲಾಗಿ, ಅತಿ ಕಟ್ಟುನಿಟ್ಟಾದ ಅರ್ಥದಲ್ಲಿ ಹೇಳುವುದಾದರೆ, ಸರಿಸುಮಾರಾಗಿ ಎಲ್ಲಾ ಪಳೆಯುಳಿಕೆಗಳೂ "ಸಂಕ್ರಮಣ ಕಾಲದವಾಗಿವೆ"; ಯಾವುದೇ ನಿರ್ದಿಷ್ಟ ಪಳೆಯುಳಿಕೆಯು ವಿಕಸನದ ಪಥವೊಂದರ ಪರಿಪೂರ್ಣ ಸಮಾಪ್ತಿಯನ್ನು ಪ್ರತಿನಿಧಿಸುವುದೇ ಇದಕ್ಕೆ ಕಾರಣವಾಗಿದೆ.

ಸಂರಕ್ಷಣೆಯ ಬಗೆಗಳು[ಬದಲಾಯಿಸಿ]

ಅಂತರ್‌‌ಖನಿಜ ನಿಕ್ಷೇಪಣ[ಬದಲಾಯಿಸಿ]

ಅಸಾಫಸ್‌ ಕೊವಲೆವ್ಸ್‌ಕೀ; ಒಂದು ಸಂಪೂರ್ಣವಾಗಿ ಖನಿಜೀಕರಿಸಲ್ಪಟ್ಟ ಟ್ರೈಲೊಬೈಟ್‌.

ಅಂತರ್‌‌ಖನಿಜ ನಿಕ್ಷೇಪಣವು ಹೂಳುವಿಕೆಯ ನಂತರ ಸಂಭವಿಸುತ್ತದೆ; ಜೀವಿಯೊಂದರ ಒಳಗಿನ ಖಾಲಿ ಜಾಗಗಳು (ಬದುಕಿದ್ದಾಗ ದ್ರವ ಅಥವಾ ಅನಿಲದಿಂದ ತುಂಬಿಸಲ್ಪಟ್ಟಿದ್ದ ಜಾಗಗಳು) ಖನಿಜ-ಸಮೃದ್ಧ ಅಂತರ್ಜಲದಿಂದ ತುಂಬಿಸಲ್ಪಡುತ್ತವೆ ಮತ್ತು ಅಂತರ್ಜಲದಿಂದ ಖನಿಜಗಳು ಅವಕ್ಷೇಪಿಸುತ್ತವೆ, ಹೀಗಾಗಿ ಖಾಲಿ ಜಾಗಗಳು ಆಕ್ರಮಿಸಿಕೊಳ್ಳಲ್ಪಡುತ್ತವೆ. ಸಸ್ಯ ಜೀವಕೋಶವೊಂದರ ಕೋಶಭಿತ್ತಿಯೊಳಗಿನ ಜಾಗದಂಥ ಅತ್ಯಂತ ಸಣ್ಣ ಜಾಗಗಳಲ್ಲಿ ಈ ಪ್ರಕ್ರಿಯೆಯು ಸಂಭವಿಸಬಲ್ಲದು. ಸಣ್ಣ ಪ್ರಮಾಣದ ಅಂತರ್‌‌ಖನಿಜ ನಿಕ್ಷೇಪಣವು ಅತ್ಯಂತ ವಿವರವಾದ ಪಳೆಯುಳಿಕೆಗಳನ್ನು ಉಂಟುಮಾಡಬಲ್ಲದು. ಅಂತರ್‌‌ಖನಿಜ ನಿಕ್ಷೇಪಣವು ಸಂಭವಿಸಬೇಕೆಂದರೆ, ಜೀವಿಯೊಂದರ ಸಾವು ಸಂಭವಿಸುತ್ತಿದ್ದಂತೆಯೇ ಅಥವಾ ಅದರ ಆರಂಭಿಕ ಕೊಳೆಯುವ ಪ್ರಕ್ರಿಯೆಯು ಆರಂಭವಾಗುತ್ತಿದ್ದಂತೆಯೇ, ಅದನ್ನು ಸಂಚಯವು ಆವರಿಸಿಕೊಳ್ಳಬೇಕು. ಹೀಗೆ ಆವರಿಸಲ್ಪಟ್ಟಾಗ ಅವಶೇಷಗಳು ಯಾವ ಮಟ್ಟದಲ್ಲಿ ಕೊಳೆಯುತ್ತವೆಯೋ, ಅದು ಪಳೆಯುಳಿಕೆಯ ನಂತರದ ವಿವರಗಳನ್ನು ನಿರ್ಣಯಿಸುತ್ತದೆ. ಕೆಲವೊಂದು ಪಳೆಯುಳಿಕೆಗಳು ಕೇವಲ ಅಸ್ತಿಪಂಜರದ ಅವಶೇಷಗಳು ಅಥವಾ ಹಲ್ಲುಗಳನ್ನು ಒಳಗೊಂಡಿರುತ್ತವೆ; ಇತರ ಪಳೆಯುಳಿಕೆಗಳು ಚರ್ಮ, ಗರಿಗಳು ಅಥವಾ ಕೆಲವೊಮ್ಮೆ ಮೃದು ಅಂಗಾಂಶಗಳ ಕುರುಹುಗಳನ್ನು ಹೊಂದಿರುತ್ತವೆ. ಇದು ಡಯಾಜೆನೆಸಿಸ್‌‌‌ನ ಒಂದು ಸ್ವರೂಪವಾಗಿದೆ.

ಓಹಿಯೋದ ಕೆಳಗಿನ ಕಾರ್ಬನಿಫರಸ್‌ ಕಾಲದ ಲೋಗನ್‌ ಸ್ತರದಿಂದ ಪಡೆಯಲಾದ ಎರಡು ಚಿಪ್ಪುಗಳ ಮೃದ್ವಂಗಿಯೊಂದರ ಬಾಹ್ಯ ಅಚ್ಚು.
ಪುನರ್‌ ಸ್ಫಟಿಕೀಕರಿಸಲ್ಪಟ್ಟ ಸ್ಕ್ಲೀರಾಕ್ಟೀನಿಯಾದ ಹವಳ (ಅರಗೊನೈಟ್‌ನಿಂದ ಕ್ಯಾಲ್ಸೈಟಿಗೆ); ದಕ್ಷಿಣದ ಇಸ್ರೇಲಿನ ಜುರಾಸಿಕ್‌ ಅವಧಿಗೆ ಸೇರಿದ್ದು.

ಎರಕದ ಅಚ್ಚುಗಳು ಮತ್ತು ಕಾರಣೆ ಅಚ್ಚುಗಳು[ಬದಲಾಯಿಸಿ]

ಕೆಲವೊಂದು ನಿದರ್ಶನಗಳಲ್ಲಿ, ಜೀವಿಯ ಮೂಲ ಅವಶೇಷಗಳು ಸಂಪೂರ್ಣವಾಗಿ ಕರಗಿಹೋಗಿರುತ್ತವೆ ಅಥವಾ ಅನ್ಯಥಾ ನಾಶವಾಗಿರುತ್ತವೆ. ಬಂಡೆಯಲ್ಲಿ ಜೀವಿಯೊಂದರ-ಆಕಾರದ ರಂಧ್ರವಷ್ಟೇ ಉಳಿಸಲ್ಪಟ್ಟಿದ್ದರೆ, ಅದನ್ನು ಒಂದು ಬಾಹ್ಯ ಅಚ್ಚು ಎಂದು ಕರೆಯಲಾಗುತ್ತದೆ. ಒಂದುವೇಳೆ ಈ ರಂಧ್ರವು ನಂತರದಲ್ಲಿ ಇತರ ಖನಿಜಗಳಿಂದ ತುಂಬಿಸಲ್ಪಟ್ಟರೆ, ಅದನ್ನು ಒಂದು ಎರಕದ ಅಚ್ಚು ಎಂದು ಕರೆಯಲಾಗುತ್ತದೆ. ಎರಡು ಚಿಪ್ಪುಗಳ ಮೃದ್ವಂಗಿಯೊಂದರ ಅಥವಾ ಒಂದು ಬಸವನ ಹುಳುವಿನ ಒಳಭಾಗದಂಥ, ಜೀವಿಯೊಂದರ ಆಂತರಿಕ ಕುಹರವನ್ನು ಸಂಚಯಗಳು ಅಥವಾ ಖನಿಜಗಳು ತುಂಬಿಕೊಂಡಾಗ, ಒಂದು ಆಂತರಿಕ ಅಚ್ಚು ರೂಪುಗೊಳ್ಳುತ್ತದೆ.

ಬದಲಿಸುವಿಕೆ ಮತ್ತು ಪುನರ್‌‌ ಸ್ಫಟಿಕೀಕರಣ[ಬದಲಾಯಿಸಿ]

ಚಿಪ್ಪು, ಮೂಳೆ ಅಥವಾ ಇತರ ಅಂಗಾಂಶವು ಮತ್ತೊಂದು ಖನಿಜದಿಂದ ಪಲ್ಲಟಗೊಳಿಸಲ್ಪಟ್ಟಾಗ, ಬದಲಿಸುವಿಕೆ ಯು ಸಂಭವಿಸುತ್ತದೆ. ಕೆಲವೊಂದು ನಿದರ್ಶನಗಳಲ್ಲಿ, ಮೂಲ ಚಿಪ್ಪಿನ ಖನಿಜದ ಬದಲಿಸುವಿಕೆಯು ಎಷ್ಟು ಕ್ರಮೇಣವಾಗಿ ಮತ್ತು ಎಷ್ಟೊಂದು ನವಿರಾದ ಪ್ರಮಾಣಗಳಲ್ಲಿ ಸಂಭವಿಸುತ್ತದೆಯೆಂದರೆ, ಮೂಲ ದ್ರವ್ಯದ ಒಟ್ಟು ನಷ್ಟದ ಹೊರತಾಗಿಯೂ ಸೂಕ್ಷ್ಮರಚನೆಯ ಲಕ್ಷಣಗಳು ಸಂರಕ್ಷಿಸಲ್ಪಡುತ್ತವೆ. ಅರಗೊನೈಟ್‌‌‌‌ನಿಂದ ಕ್ಯಾಲ್ಸೈಟಿನ ಕಡೆಗಿರುವಂಥ ಒಂದು ವಿಭಿನ್ನವಾದ ಸ್ಫಟಿಕದ ಸ್ವರೂಪದಲ್ಲಿ ಮೂಲ ಅಸ್ತಿಪಂಜರದ ಸಂಯುಕ್ತಗಳು ಇನ್ನೂ ಇರುವಾಗ, ಒಂದು ಚಿಪ್ಪು ಪುನರ್‌ ಸ್ಫಟಿಕೀಕರಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

ಅಡಕಗೊಳಿಸುವಿಕೆ ಪಳೆಯುಳಿಕೆಗಳು[ಬದಲಾಯಿಸಿ]

ಜರೀಗಿಡಗಳ ಪಳೆಯುಳಿಕೆಗಳಂಥ ಅಡಕಗೊಳಿಸಿದ ಪಳೆಯುಳಿಕೆಗಳು, ಜೀವಿಯ ಅಂಗಾಂಶಗಳನ್ನು ರೂಪಿಸುವ ಸಂಕೀರ್ಣ ಸಾವಯವ ಕಣಗಳ ರಾಸಾಯನಿಕ ಅಪಕರ್ಷಣದ ಫಲವಾಗಿರುತ್ತವೆ. ಈ ನಿದರ್ಶನದಲ್ಲಿ, ಪಳೆಯುಳಿಕೆಯು ಮೂಲದ್ರವ್ಯವನ್ನು ಹೊಂದಿರುತ್ತದೆಯಾದರೂ ಅದು ಭೂರಾಸಾಯನಿಕವಾಗಿ ಮಾರ್ಪಡಿಸಿದ ಒಂದು ಸ್ಥಿತಿಯಲ್ಲಿರುತ್ತದೆ. ಇಂಗಾಲಯುಕ್ತ ಪೊರೆ ಅಥವಾ ಇಂಗಾಲಯುಕ್ತ ಹೊದಿಕೆಯೊಂದು ಅನೇಕವೇಳೆ ಉಳಿದುಕೊಳ್ಳುವ ಅಂಶವಾಗಿರುತ್ತದೆ. ಈ ರಾಸಾಯನಿಕ ಬದಲಾವಣೆಯು ಡಯಾಜೆನೆಸಿಸ್‌‌‌ನ ಒಂದು ಅಭಿವ್ಯಕ್ತಿಯಾಗಿರುತ್ತದೆ.

ಬಯೋಇಮ್ಯುರೇಷನ್‌‌[ಬದಲಾಯಿಸಿ]

ಶೈವಲಜೀವಿಯ ಅಸ್ಥಿಪಂಜರದಲ್ಲಿ ಬಯೋಇಮ್ಯುರೇಷನ್‌ ಪ್ರಕ್ರಿಯೆಯ ಮೂಲಕ ಸಂರಕ್ಷಿಸಲ್ಪಟ್ಟ, ಒಂದು ಮೃದು-ದೇಹವನ್ನೊಳಗೊಂಡ ಜೀವಿಯನ್ನು ಮೇಲಿನ ಆರ್ಡವಿಷಿಯನ್‌ ಅವಧಿಯ ಶೈವಲಜೀವಿಯಲ್ಲಿನ ನಕ್ಷತ್ರದ-ಆಕಾರದ ರಂಧ್ರಗಳು (ಕ್ಯಾಟೆಲ್ಲೊಕೌಲಾ ವಲ್ಲಾಟಾ) ಪ್ರತಿನಿಧಿಸುತ್ತವೆ.[೧೯]

ಬಯೋಇಮ್ಯುರೇಷನ್‌‌ ಎಂಬುದು ಸಂರಕ್ಷಣೆಯ ಒಂದು ಬಗೆಯಾಗಿದ್ದು, ಇದರಲ್ಲಿ ಅಸ್ತಿಪಂಜರದ ಜೀವಿಯೊಂದು ಮಿತಿಮೀರಿ ಬೆಳೆಯುತ್ತದೆ ಅಥವಾ ಮತ್ತೊಂದು ಜೀವಿಯನ್ನು ಅನ್ಯಥಾ ಅಂತರ್ಗತಗೊಳಿಸಿ, ಅದನ್ನು ಅಥವಾ ಅದರ ಒಂದು ಗುರುತನ್ನು ಅಸ್ಥಿಪಂಜರದೊಳಗೆ ಸಂರಕ್ಷಿಸುತ್ತದೆ.[೨೦] ಸಾಮಾನ್ಯವಾಗಿ ಇದು, ಒಂದು ಶೈವಲಜೀವಿ ಅಥವಾ ಒಂದು ಸಿಂಪಿಯಂಥ ಒಂದು ಆಸನ್ನ (ಅಚಲ) ಅಸ್ತಿಪಂಜರದ ಜೀವಿಯಾಗಿದ್ದು, ಒಂದು ತಲಾಧಾರದ ಉದ್ದಕ್ಕೂ ಅದು ಬೆಳೆಯುತ್ತದೆ ಮತ್ತು ಅಚಲವಾಗಿರುವ ಇತರ ಹೆಕ್ಕಳಿಗೆಗಟ್ಟುಗಗಳನ್ನು ಆವರಿಸುತ್ತದೆ. ಬಯೋಇಮ್ಯುರೇಷನ್‌ ಸಂರಕ್ಷಣೆಗೆ ಒಳಗಾದ ಜೀವಿಯು ಕೆಲವೊಮ್ಮೆ ಮೃದು-ದೇಹವನ್ನೊಳಗೊಂಡಿರುತ್ತದೆ ಮತ್ತು ಬಾಹ್ಯ ಅಚ್ಚಿನ ಒಂದು ಬಗೆಯಾಗಿ ಅದು ಆಗ ಋಣಾತ್ಮಕ ಪರಿಹಾರದಲ್ಲಿ ಸಂರಕ್ಷಿಸಲ್ಪಟ್ಟಿರುತ್ತದೆ. ಮೇಲುಮೇಲಕ್ಕೆ ಬೆಳೆಯುವ, ಸಜೀವಾಗಿರುವ ಅಸ್ತಿಪಂಜರದ ಜೀವಿಯೊಂದರ ಮೇಲ್ಭಾಗದಲ್ಲಿ ಜೀವಿಯೊಂದು ನೆಲೆಗೊಳ್ಳುವ ನಿದರ್ಶನಗಳೂ ಸಹ ಇದ್ದು, ಸದರಿ ನೆಲಸಿಗ ಜೀವಿಯು ಅದರ ಅಸ್ಥಿಪಂಜರದಲ್ಲಿ ಸಂರಕ್ಷಿಸಲ್ಪಡುತ್ತದೆ. ಬಯೋಇಮ್ಯುರೇಷನ್‌‌ ಸಂರಕ್ಷಣಾ ವಿಧಾನವು ಆರ್ಡವಿಷಿಯನ್‌ ಅವಧಿ[೨೧] ಯಿಂದ ಮೊದಲ್ಗೊಂಡು ಇತ್ತೀಚಿನ ಅವಧಿಯವರೆಗೂ ಪಳೆಯುಳಿಕೆ ದಾಖಲೆಯಲ್ಲಿ ಗ್ರಹಿಸಲ್ಪಟ್ಟಿರುವ ವಿಷಯವಾಗಿದೆ.[೨೦]

ಒಟ್ಟಾರೆಯಾಗಿ ಹೇಳುವುದಾದರೆ, ವಿಭಿನ್ನ ಬಗೆಯ ಅಂಗಾಂಶಗಳಿಗೆ ಸಂಬಂಧಿಸಿದಂತೆ ಮತ್ತು ವಿಭಿನ್ನ ಬಗೆಯ ಸ್ಥಿತಿಗತಿಗಳ ಅಡಿಯಲ್ಲಿ, ಪಳೆಯುಳಿಕೆಯಾಗುವಿಕೆಯ ಪ್ರಕ್ರಿಯೆಗಳು ವಿಭಿನ್ನವಾಗಿ ಮುಂದುವರಿಯುತ್ತವೆ.

ಕುರುಹಿನ ಪಳೆಯುಳಿಕೆಗಳು[ಬದಲಾಯಿಸಿ]

ಸಮೆದಜಾಡುಗಳು, ಬಿಲಗಳು, ಜೈವಿಕ ಸವಕಳಿ, ಮೊಟ್ಟೆಗಳು ಮತ್ತು ಮೊಟ್ಟೆಚಿಪ್ಪುಗಳು, ಗೂಡುಗಳು, ಹಿಕ್ಕೆಗಳು ಮತ್ತು ಇತರ ಬಗೆಯ ಗುರುತುಗಳ ಅವಶೇಷಗಳನ್ನು ಕುರುಹಿನ ಪಳೆಯುಳಿಕೆಗಳು ಎಂದು ಕರೆಯಲಾಗುತ್ತದೆ. ಕಾರ್ಪೊಲೈಟ್ಸ್‌ ಎಂದು ಕರೆಯಲ್ಪಡುವ ಪಳೆಯುಳಿಕೆಯಾಗಿಸಲ್ಪಟ್ಟ ಹಿಕ್ಕೆಗಳು, ಪ್ರಾಣಿಗಳ ಪೋಷಣೆಯ ವರ್ತನೆಯ ಕುರಿತಾದ ಒಳನೋಟವನ್ನು ನೀಡಬಲ್ಲದು; ಆದ್ದರಿಂದ ಇದು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿರಲು ಸಾಧ್ಯವಿದೆ.

ಸೂಕ್ಷ್ಮಪಳೆಯುಳಿಕೆಗಳು[ಬದಲಾಯಿಸಿ]

ಸುಮಾರು 1 ಮಿ.ಮೀ.ಯಷ್ಟಿರುವ ಸೂಕ್ಷ್ಮಪಳೆಯುಳಿಕೆಗಳು.

'ಸೂಕ್ಷ್ಮಪಳೆಯುಳಿಕೆ' ಎಂಬುದು ಪಳೆಯುಳಿಕೆಯಾಗಿಸಲ್ಪಟ್ಟ ಸಸ್ಯಗಳು ಮತ್ತು ಪ್ರಾಣಿಗಳಿಗೆ ಅನ್ವಯಿಸಲಾದ ಒಂದು ವಿವರಣಾತ್ಮಕ ಶಬ್ದವಾಗಿದ್ದು, ಬರಿಯ ಕಣ್ಣಿನಿಂದ ವಿಶ್ಲೇಷಿಸಲ್ಪಡಬಲ್ಲ ಪಳೆಯುಳಿಕೆಯ ಮಟ್ಟಕ್ಕೆ ಸಮನಾದ ಅಥವಾ ಅದಕ್ಕಿಂತ ಕೆಳಗಿರುವ ಗಾತ್ರವನ್ನು ಸದರಿ ಸಸ್ಯಗಳು ಮತ್ತು ಪ್ರಾಣಿಗಳು ಹೊಂದಿರುತ್ತವೆ. "ಸೂಕ್ಷ್ಮ" ಮತ್ತು "ಬೃಹತ್‌‌" ಪಳೆಯುಳಿಕೆಗಳ ನಡುವೆ ಸಾಮಾನ್ಯವಾಗಿ ಅನ್ವಯಿಸಲಾಗುವ ಒಂದು ಕವಲುಹಾದಿ ಬಿಂದುವು 1 ಮಿ.ಮೀ.ಯಷ್ಟಿದ್ದರೂ, ಇದು ಕೇವಲ ಒಂದು ಅಂದಾಜು ಮಾರ್ಗದರ್ಶಿಯಾಗಿದೆ. ಸೂಕ್ಷ್ಮಪಳೆಯುಳಿಕೆಗಳು ಸ್ವತಃ ತಮ್ಮ ಗುಂಪಲ್ಲೇ ಪರಿಪೂರ್ಣ (ಅಥವಾ ಪರಿಪೂರ್ಣತೆಗೆ-ಸಮೀಪವಿರುವ) ಜೀವಿಗಳಾಗಿರಬಹುದು (ಕಡಲಿನ ಪ್ಲಾಂಕ್ಟರ್‌‌ಗಳು ಫೊರಾಮಿನಿಫೆರಾ ಮತ್ತು ಕೊಕೊಲಿಥೋಫೋರ್‌‌‌ಗಳ ರೀತಿಯವು) ಅಥವಾ ದೊಡ್ಡದಾದ ಪ್ರಾಣಿಗಳು ಅಥವಾ ಸಸ್ಯಗಳ ಅಂಗಭಾಗಗಳಾಗಿರಬಹುದು (ಸಣ್ಣ ಹಲ್ಲುಗಳು ಅಥವಾ ಬೀಜಕಗಳ ರೀತಿಯವು). ಪ್ರಾಚೀನ ಹವಾಮಾನ ಮಾಹಿತಿಯ ಒಂದು ಭಂಡಾರವಾಗಿ ಸೂಕ್ಷ್ಮಪಳೆಯುಳಿಕೆಗಳು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿವೆ; ಅಷ್ಟೇ ಅಲ್ಲ, ಬಂಡೆಯ ಘಟಕಗಳ ಪರಸ್ಪರ ಸಂಬಂಧದಲ್ಲಿ ನೆರವಾಗಲೆಂದು ಜೈವಿಕ ಮೋಡಪದರಗಳ ಲೇಖಕರು ಇದನ್ನು ಸಾಮಾನ್ಯವಾಗಿ ಬಳಸುತ್ತಾರೆ.

ರಾಳದ ಪಳೆಯುಳಿಕೆಗಳು[ಬದಲಾಯಿಸಿ]

20-16 ದಶಲಕ್ಷ ವರ್ಷಗಳ ಹಿಂದಿನ ಅವಧಿಗೆ ಸೇರಿದ, ಡೊಮಿನಿಕನ್‌ ಆಂಬರಿನಲ್ಲಿ ಪತ್ತೆಹಚ್ಚಲಾದ ಲೆಪ್ಟೋಫಿನಸ್‌ ಪಿಟ್‌ಫೀಲ್ಡೇ.

ಪಳೆಯುಳಿಕೆ ರಾಳ (ಆಡುಮಾತಿನಲ್ಲಿ ಆಂಬರು ಎಂಬುದಾಗಿ ಇದನ್ನು ಕರೆಯಲಾಗುತ್ತದೆ) ಎಂಬುದು ಒಂದು ಸ್ವಾಭಾವಿಕ ಪಾಲಿಮರ್‌‌ ಆಗಿದ್ದು, ಪ್ರಪಂಚದಾದ್ಯಂತದ ಅನೇಕ ಬಗೆಯ ಸ್ತರಶ್ರೇಣಿಗಳಲ್ಲಷ್ಟೇ ಅಲ್ಲದೇ, ಆರ್ಕ್ಟಿಕ್‌‌ ವಲಯದಲ್ಲೂ ಸಹ ಅದು ಕಂಡುಬರುತ್ತದೆ. ಅತ್ಯಂತ ಹಳೆಯ ಪಳೆಯುಳಿಕೆ ರಾಳವು ತ್ರಿಸ್ತರದ ಮೆಸೋಜೋಯಿಕ್‌ ಅವಧಿಗೆ ಸೇರಿದೆಯಾದರೂ, ಬಹುಪಾಲು ಪಳೆಯುಳಿಕೆ ರಾಳಗಳು ತೃತೀಯಕ ಅವಧಿಗೆ ಸೇರಿದವಾಗಿವೆ. ನಿರ್ದಿಷ್ಟ ಸಸ್ಯಗಳಿಂದ ಆಗುವ ರಾಳದ ವಿಸರ್ಜನೆಯು, ಕೀಟಗಳಿಂದ ಸಂರಕ್ಷಣೆ ಮಾಡಿಕೊಳ್ಳಲೆಂದು ಮತ್ತು ಹಾನಿಕರ ಧಾತುಗಳಿಂದ ಆದ ಗಾಯಗಳನ್ನು ಮುಚ್ಚುವ ಸಲುವಾಗಿ ಅವು ಹೊರಹೊಮ್ಮಿಸುವ ಒಂದು ವಿಕಸನೀಯ ಹೊಂದಾವಣೆ ಅಥವಾ ಮಾರ್ಪಾಡು ಎಂಬುದಾಗಿ ಭಾವಿಸಲಾಗಿತ್ತು. ಜಿಗುಟಾದ ರಾಳದಿಂದ ಹಿಡಿಯಲ್ಪಟ್ಟಿದ್ದ, ಅಂತರ್ನಿವೇಶನಗಳು ಎಂದು ಕರೆಯಲ್ಪಡುವ ಇತರ ಪಳೆಯುಳಿಕೆಗಳನ್ನು ಪಳೆಯುಳಿಕೆ ರಾಳವು ಅನೇಕವೇಳೆ ಒಳಗೊಂಡಿರುತ್ತದೆ. ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಇತರ ಸಸ್ಯಗಳು, ಮತ್ತು ಪ್ರಾಣಿಗಳು ಇವುಗಳಲ್ಲಿ ಸೇರಿವೆ. ಪ್ರಾಣಿ ಅಂತರ್ನಿವೇಶನಗಳು ಸಾಮಾನ್ಯವಾಗಿ ಸಣ್ಣ ಅಕಶೇರುಕಗಳು, ಅದರಲ್ಲೂ ಪ್ರಧಾನವಾಗಿ, ಕೀಟಗಳು ಮತ್ತು ಜೇಡಗಳಂಥ ಸಂಧಿಪದಿಗಳಾಗಿರುತ್ತವೆ ಮತ್ತು ಕೇವಲ ಅತ್ಯಂತ ಅಪರೂಪವಾಗಿ ಒಂದು ಸಣ್ಣ ಹಲ್ಲಿಯಂಥ ಒಂದು ಕಶೇರುಕವಾಗಿರುತ್ತವೆ. DNAಯ ಸಣ್ಣ ತುಣುಕುಗಳನ್ನು ಒಳಗೊಂಡಂತೆ, ಅಂತರ್ನಿವೇಶನಗಳ ಸಂರಕ್ಷಣೆಯು ಗಾಢವಾಗಿರಲು ಸಾಧ್ಯವಿದೆ.

ಮಿಥ್ಯಾ-ಪಳೆಯುಳಿಕೆಗಳು[ಬದಲಾಯಿಸಿ]

ಜರ್ಮನಿಯ ಸೊಲ್ನ್‌ಹೋಫೆನ್‌ಗೆ ಸೇರಿದ ಒಂದು ಸುಣ್ಣದ ಕಲ್ಲಿನ ತಳಹದಿಯ ಸಮತಲದ ಮೇಲೆ ಕಂಡುಬಂದ ಮ್ಯಾಂಗನೀಸ್‌ ಸಸ್ಯಾಂಕಿತ ಶಿಲೆಗಳು.ಅಳತೆ ಮಿ.ಮೀ.ನಲ್ಲಿದೆ.

ಮಿಥ್ಯಾ-ಪಳೆಯುಳಿಕೆಗಳು ಬಂಡೆಗಳಲ್ಲಿನ ಗೋಚರಿಸುವ ಮಾದರಿಗಳಾಗಿದ್ದು, ಅವು ಜೀವಿವಿಜ್ಞಾನದ ಪ್ರಕ್ರಿಯೆಗಳಿಗಿಂತ ಹೆಚ್ಚಾಗಿ ಸ್ವಾಭಾವಿಕವಾಗಿ ಸಂಭವಿಸುವ ಭೂವಿಜ್ಞಾನದ ಪ್ರಕ್ರಿಯೆಗಳಿಂದ ಉಂಟಾಗಿರುತ್ತವೆ. ನಿಜವಾದ ಪಳೆಯುಳಿಕೆಗಳು ಎಂಬ ರೀತಿಯಲ್ಲಿ ಅವು ಸುಲಭವಾಗಿ ತಪ್ಪಾಗಿ ಗ್ರಹಿಸಲ್ಪಡುತ್ತವೆ. ಸಸ್ಯಾಂಕಿತ ಶಿಲೆಗಳಂಥ ಕೆಲವೊಂದು ಮಿಥ್ಯಾ-ಪಳೆಯುಳಿಕೆಗಳು, ಜಿನುಗುವ ಖನಿಜಗಳಿಂದ ತುಂಬಿಸಲ್ಪಡುವ, ಬಂಡೆಯಲ್ಲಿ ಸ್ವಾಭಾವಿಕವಾಗಿ ಸಂಭವಿಸುವ ಬಿರುಕುಗಳಿಂದ ರೂಪಿಸಲ್ಪಡುತ್ತವೆ. ಮಿಥ್ಯಾ-ಪಳೆಯುಳಿಕೆಗಳ ಇತರ ಬಗೆಗಳಲ್ಲಿ ಅಂಡಾಕಾರದ ಅದಿರು (ಕಬ್ಬಿಣ ಅದಿರಿನಲ್ಲಿ ದುಂಡನೆಯ ಆಕಾರಗಳಲ್ಲಿರುತ್ತವೆ) ಮತ್ತು ಪಾಚಿ ಅಥವಾ ಗಿಡದ ಎಲೆಗಳಂತೆ ಕಾಣಿಸುವ ಪಾಚಿ ಅಗೇಟುಗಳು ಸೇರಿವೆ. ಕೆಲವೊಂದು ಸಂಚಿತ ಸ್ತರಶ್ರೇಣಿಗಳಲ್ಲಿ ಕಂಡುಬರುವ ಶಿಲೆಯ ನಡುವಿನ ಖನಿಜದ ಗಟ್ಟಿಗಳು, ಗೋಳಾಕಾರದ ಅಥವಾ ಅಂಡಾಕಾರದ-ಆಕಾರದ ಗಂಟುಗಳನ್ನು ಹಿಂದೊಮ್ಮೆ ಡೈನೋಸರ್‌‌ ಮೊಟ್ಟೆಗಳು ಎಂಬುದಾಗಿ ಭಾವಿಸಲಾಗಿತ್ತು, ಮತ್ತು ಇವು ಪಳೆಯುಳಿಕೆಗಳಾಗಿಯೂ ಅನೇಕವೇಳೆ ತಪ್ಪಾಗಿ ಗ್ರಹಿಸಲ್ಪಟ್ಟಿವೆ.

ಕೆನಡಾದ ಮ್ಯಾಕ್‌ಅಬೀ, B.C.ಯ ಜಿಂಕೊ ಬಿಲೋಬಾ ಎಂಬ ಈಯಸೀನ್‌‌ ಕಾಲದ ಪಳೆಯುಳಿಕೆ.

ಜೀವಂತವಿರುವ ಪಳೆಯುಳಿಕೆಗಳು[ಬದಲಾಯಿಸಿ]

ಜೀವಂತವಿರುವ ಪಳೆಯುಳಿಕೆ ಎಂಬುದು, ಕೇವಲ ಪಳೆಯುಳಿಕೆಗಳಿಗೆ ಸೇರಿದ ಒಂದು ಜಾತಿಯಾಗಿ ಮಾತ್ರವೇ ಹಿಂದೆ ಅರಿಯಲ್ಪಟ್ಟಿರುವುದನ್ನು ನಿಕಟವಾಗಿ ಹೋಲುವ ಅಥವಾ ಸ್ಪಷ್ಟವಾಗಿ ಅದರ ತದ್ರೂಪವಾಗಿರುವ ಯಾವುದೇ ಜೀವಂತ ಜಾತಿಗೆ ಬಳಸಲಾಗುವ ಒಂದು ಅನೌಪಚಾರಿಕ ಶಬ್ದವಾಗಿದೆ- ಅಂದರೆ, ಒಂದು ರೀತಿಯಲ್ಲಿ ಇದು ಪ್ರಾಚೀನ ಪಳೆಯುಳಿಕೆಗೆ "ಜೀವ ಬಂದಂಥ" ನಿದರ್ಶನವಾಗಿದೆ.

ಇದು ಇವುಗಳಲ್ಲಿ ಒಂದಾಗಿರಲು ಸಾಧ್ಯವಿದೆ: (a) ಹಾಲೆ-ರೆಕ್ಕೆಯನ್ನೊಳಗೊಂಡ ಸೀಲಕ್ಯಾಂತ್‌‌, ಆದಿಮ ಮಾನೊಪ್ಲಾಕೊಫೋರಾದ ಮೃದ್ವಂಗಿ, ಮತ್ತು ಚೀನೀ ಜಿಂಕೋ ಮರದಂಥ ಜೀವಂತ ಪ್ರತಿನಿಧಿಗಳು ಆವಿಷ್ಕರಿಸಲ್ಪಡುವವರೆಗೂ ಪಳೆಯುಳಿಕೆಗಳಿಗೆ ಸೇರಿದವೆಂದು ಮಾತ್ರವೇ ಅರಿಯಲ್ಪಟ್ಟಿದ್ದ ಒಂದು ಜಾತಿ ಅಥವಾ ವರ್ಗ; ಅಥವಾ (b) ಹೊಸ ಕೆಲೆಡೋನಿಯಾದ ಕಾಗು, ಅಥವಾ ಸೂರ್ಯ-ಕಿರಿನಾರಾಯಣಿಯಂಥ ಯಾವುದೇ ನಿಕಟ ಸಂಬಂಧಿಕರಿಲ್ಲದ ಒಂದು ಏಕೈಕ ಜೀವಂತ ಜಾತಿ; ಅಥವಾ (c) ಯಾವುದೇ ಇತರ ನಿಕಟ-ಸಂಬಂಧಿಕರನ್ನು ಹೊಂದಿಲ್ಲದ, ನಿಕಟವಾಗಿ-ಸಂಬಂಧಿಸಿರುವ ಜಾತಿಗಳ ಒಂದು ಸಣ್ಣ ಸಮೂಹ, ಅಂದರೆ, ಆಮ್ಲಜನಕ-ಉತ್ಪಾದಿಸುವ, ಆದಿಕಾಲದಲ್ಲಿದ್ದ ಸ್ಟ್ರೊಮ್ಯಾಟೊಲೈಟ್‌‌, ಸಂಧಿರಹಿತ ದೀಪಚಿಪ್ಪು ಲಿಂಗ್ಯುಲಾ, ಅನೇಕ-ಕೋಣೆಗಳುಳ್ಳ ಮುತ್ತಿನ ಚಿಪ್ಪುಳ್ಳ ನಾಟಿಲಸ್‌ , ಬೇರಿಲ್ಲದ ತಂತಿಕೂರ್ಚದ ಜರೀಗಿಡ, ರಕ್ಷಾಕವಚವಿರುವ ಲಾಳದ ಏಡಿ, ಮತ್ತು ಪಳೆಯುಳಿಕೆಯ ದಾಖಲೆಯಲ್ಲಿ ಹಿಂದೊಮ್ಮೆ ಒಂದು ದೊಡ್ಡ ಮತ್ತು ವ್ಯಾಪಕ ಸಮೂಹವಾಗಿದ್ದರ ಏಕೈಕ ಬದುಕುಳಿದಿರುವ ಜೀವಿಗಳಾದ, ಡೈನೋಸರ್‌‌-ರೀತಿಯ ಟೂವಟಾರ ಇವೆಲ್ಲವೂ ಈ ಗುಂಪಿಗೆ ಸೇರುತ್ತವೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal

  • ಬಯೋಎರೋಷನ್
  • ಪಳೆಯುಳಿಕೆ ಹಿಕ್ಕೆ
  • ಗುಪ್ತವಾಗಿರುವ ಬೀಜಕಗಳು
  • ಎಲ್ವಿಸ್‌ ವರ್ಗ
  • ಪಳೆಯುಳಿಕೆ ಸಂಗ್ರಹಿಸುವಿಕೆ
  • ಪ್ರಾಗ್ಜೀವಶಾಸ್ತ್ರದ ಇತಿಹಾಸ
  • ಪಳೆಯುಳಿಕೆ ಹೆಜ್ಜೆಶಾಸ್ತ್ರ
  • ಲಜಾರಸ್‌ ವರ್ಗ
  • ಪಳೆಯುಳಿಕೆ ದಾಖಲೆಯಲ್ಲಿ ಪ್ರತಿನಿಧಿಸಲ್ಪಟ್ಟಿರುವ ಈಗಲೂ ಇರುವ ಪ್ರಾಣಿ ಕುಲಗಳ ಪಟ್ಟಿ
  • ಪಳೆಯುಳಿಕೆ ತಾಣಗಳ ಪಟ್ಟಿ
  • ಪಳೆಯುಳಿಕೆಗಳ ಪಟ್ಟಿ
  • ಪರಿವರ್ತನೆಯ ಪಳೆಯುಳಿಕೆಗಳ ಪಟ್ಟಿ
  • ಪ್ರಾಚೀನ ಜೀವಶಾಸ್ತ್ರ
  • ಪ್ರಾಚೀನ ಸಸ್ಯಶಾಸ್ತ್ರ
  • ಕಲ್ಲಾಗಿಸುವಿಕೆ
  • ಷಾರ್ಕ್‌ ಹಲ್ಲುಗಳು
  • ಉಪಪಳೆಯುಳಿಕೆ
  • ಟ್ಯಾಫಾನಮಿ
  • ಕುರುಹು ಪಳೆಯುಳಿಕೆ
  • ಪಳೆಯುಳಿಕೆ ವ್ಯಾಪಾರ

ಉಲ್ಲೇಖಗಳು[ಬದಲಾಯಿಸಿ]

  1. ಫ್ರೀಕ್ವೆಂಟ್ಲಿ ಆಸ್ಕ್‌ಡ್‌ ಕ್ವೆಶ್ಚನ್ಸ್‌ ಎಬೌಟ್‌ ಪ್ಯಾಲಿಯಂಟಾಲಜಿ. ಸ್ಯಾನ್‌ ಡೀಗೊ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಮ್‌.
  2. Westall, Frances (2001). "Early Archean fossil bacteria and biofilms in hydrothermally-influenced sediments from the Barberton greenstone belt, South Africa". Precambrian Research. 106 (1–2): 93–116. doi:10.1016/S0301-9268(00)00127-3. {{cite journal}}: Unknown parameter |coauthors= ignored (|author= suggested) (help)[ಶಾಶ್ವತವಾಗಿ ಮಡಿದ ಕೊಂಡಿ]
  3. "Stromatolites, the Oldest Fossils". Retrieved 2007-03-04.
  4. ‌‌ನೋಲ್, A. H., ಬಾರ್ಘಾರ್ನ್‌, E.S, ಆವ್ರಾಮಿಕ್‌‌, S.M,. (1978). ನ್ಯೂ ಆರ್ಗಾನಿಸಮ್ಸ್‌ ಫ್ರಮ್‌ ದಿ ಆಫೆಬಿಯನ್‌ ಗನ್‌ಫ್ಲಿಂಟ್‌ ಐರನ್‌ ಫಾರ್ಮೇಷನ್‌. ಜರ್ನಲ್‌ ಆಫ್‌ ಪ್ಯಾಲಿಯಂಟಾಲಜಿ(52), 1074-1082.
  5. ಲೋವೆ, D. R. (1994). ಏಬಯಲಾಜಿಕಲ್‌ ಆರಿಜನ್‌ ಆಫ್‌ ಡಿಸ್ಕ್ರೈಬ್ಡ್‌ ಸ್ಟ್ರೊಮ್ಯಾಟೋಲೈಟ್ಸ್‌ ಓಲ್ಡರ್‌ ದ್ಯಾನ್‌ 3.2 Ga. ಜಿಯಾಲಜಿ, 22, 387-390
  6. ಕಾರಿಲೇಟಿಂಗ್‌ ಅರ್ತ್‌'ಸ್‌ ಹಿಸ್ಟರಿ, ಪಾಲ್‌‌ R. ಜಾಂಕೆ
  7. ಇನ್‌ಟ್ಯೂಟ್‌ ಟೈಮ್‌ಲೈನ್‌ - ಫಾಸಿಲ್ಸ್‌ (ಸಬ್ಜೆಕ್ಟ್‌: ಸೈನ್ಸ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ)
  8. Rudwick, M. J. S. (1985). The Meaning of Fossils: Episodes in the History of Palaeontology. University of Chicago Press. p. 24. ISBN 0226731030.
  9. Alistair Cameron Crombie (1990). Science, optics, and music in medieval and early modern thought. Continuum International Publishing Group. pp. 108–109. ISBN 0907628796.
  10. da Vinci, Leonardo (1938/1956). The Notebooks of Leonardo Da Vinci. London: Reynal & Hitchcock. p. 335. ISBN (OCLC) 67650193. {{cite book}}: Check |isbn= value: invalid character (help); Check date values in: |date= (help)
  11. ಜಾರ್ಜಸ್ ಕ್ಯುವಿಯರ್‌‌ - ಫಾಸಿಲ್‌ ಡಿಸ್ಕವರೀಸ್‌ Archived 2014-05-25 ವೇಬ್ಯಾಕ್ ಮೆಷಿನ್ ನಲ್ಲಿ.
  12. ‌‌ಡಾರ್ವಿನ್, C (1859) ಆನ್‌ ದಿ ಆರಿಜನ್‌ ಆಫ್‌ ಸ್ಪೀಷೀಸ್‌. ಅಧ್ಯಾಯ 10: ಆನ್‌ ದಿ ಇಂಪರ್ಫೆಕ್ಷನ್‌ ಆಫ್‌ ದಿ ಜಿಯಲಾಜಿಕಲ್‌ ರೆಕಾರ್ಡ್‌.
  13. ‌ಸ್ಕೋಫ್ JW (1999) ಕ್ರಾಡಲ್‌ ಆಫ್‌ ಲೈಫ್‌: ದಿ ಡಿಸ್ಕವರಿ ಆಫ್‌ ದಿ ಅರ್ತ್‌'ಸ್‌ ಅರ್ಲಿಯೆಸ್ಟ್‌ ಫಾಸಿಲ್ಸ್‌, ಪ್ರಿನ್ಸ್‌‌ಟನ್‌ ಯೂನಿವರ್ಸಿಟಿ ಪ್ರೆಸ್‌, ಪ್ರಿನ್ಸ್‌‌ಟನ್‌, NJ.
  14. "The Virtual Fossil Museum - Fossils Across Geological Time and Evolution". Retrieved 2007-03-04.
  15. ನೋಲ್‌‌, A, (2003) ಲೈಫ್‌ ಆನ್‌ ಎ ಯಂಗ್‌ ಪ್ಲಾನೆಟ್‌. ಪ್ರಿನ್ಸೆಟಾನ್ ಯೂನಿವರ್ಸಿಟಿ ಪ್ರೆಸ್, NJ
  16. ಪಾಲ್‌‌ CRC ಮತ್ತು ಡೊನೊವಾನ್‌‌ SK, (1998) ಆನ್‌ ಓವರ್‌ವ್ಯೂ ಆಫ್‌ ದಿ ಕಂಪ್ಲೀಟ್‌ನೆಸ್‌ ಆಫ್‌ ದಿ ಫಾಸಿಲ್‌ ರೆಕಾರ್ಡ್‌; ಇದರಲ್ಲಿರುವಂಥದ್ದು:- ದಿ ಅಡಿಕ್ವೆಸಿ ಆಫ್‌ ದಿ ಫಾಸಿಲ್‌ ರೆಕಾರ್ಡ್‌ (ಪಾಲ್‌‌ CRC ಮತ್ತು ಡೊನೊವಾನ್‌‌ SK ಸಂಪಾದಕರು). 111-131 (ಜಾನ್‌‌ ವೈಲೆ, ನ್ಯೂಯಾರ್ಕ್‌).
  17. ಫೋರ್ಟೆ R, ಟ್ರೈಲೊಬೈಟ್‌!: ಐವಿಟ್ನೆಸ್‌ ಟು ಎವಲ್ಯೂಷನ್‌. ಆಲ್‌ಫ್ರೆಡ್‌ A. ಕ್ನೋಫ್‌, ನ್ಯೂಯಾರ್ಕ್‌, 2000.
  18. ಡೊನೊಘ್ವೆ, PCJ, ಬೆಂಗ್‌ಸ್ಟನ್‌‌, S, ಡೊಂಗ್‌‌, X, ಗೋಸ್ಟ್‌ಲಿಂಗ್‌‌ NJ, ಹಲ್ಡ್‌ಗ್ರೆನ್‌, T, ಕನ್ನಿಂಗ್‌‌ಹ್ಯಾಮ್‌‌, JA, ಯಿನ್‌‌, C, ಯುವೆ, Z, ಪೆಂಗ್‌‌, F ಮತ್ತು ಸ್ಟಾಂಪನೊನಿ, M (2006) ಸಿಂಕ್ರೊಟ್ರೊನ್‌‌ X-ರೇ ಟೊಮೊಗ್ರಾಫಿಕ್‌‌ ಮೈಕ್ರೊಸ್ಕೋಪಿ ಆಫ್‌ ಫಾಸಿಲ್‌ ಎಂಬ್ರಿಯೋಸ್‌. ನೇಚರ್‌‌ 442, 680-683
  19. ಪಾಮರ್‌‌, TJ, ಮತ್ತು ವಿಲ್ಸನ್‌‌, MA (1988) ಪ್ಯಾರಾಸಿಟಿಸಂ ಆಫ್‌ ಆರ್ಡವಿಷಿಯನ್‌ ಬ್ರಯೋಜೋವನ್ಸ್‌ ಅಂಡ್‌ ದಿ ಆರಿಜನ್‌ ಆಫ್‌ ಸ್ಯೂಡೋಬೋರಿಂಗ್ಸ್‌. ಪ್ಯಾಲಿಯಂಟಾಲಜಿ 31,939-949
  20. ೨೦.೦ ೨೦.೧ ‌‌ಟೇಲರ್, PD. (1990) ಪ್ರಿಸರ್ವೇಷನ್‌ ಆಫ್‌ ಸಾಫ್ಟ್‌-ಬಾಯಿಲ್ಡ್‌ ಅಂಡ್‌ ಅದರ್‌ ಆರ್ಗ್ಯಾನಿಸಮ್ಸ್‌ ಬೈ ಬಯೋ-ಇಮ್ಯುರೇಷನ್‌: ಎ ರಿವ್ಯೂ. ಪ್ಯಾಲಿಯಂಟಾಲಜಿ 33,1-17
  21. ‌‌ವಿಲ್ಸನ್, MA, ಪಾಮರ್‌‌, TJ ಮತ್ತು ಟೇಲರ್‌‌, PD (1994) ಅರ್ಲಿಯೆಸ್ಟ್‌ ಪ್ರಿಸರ್ವೇಷನ್‌ ಆಫ್‌ ಸಾಫ್ಟ್‌-ಬಾಡೀಡ್‌ ಫಾಸಿಲ್ಸ್‌ ಬೈ ಎಪಿಬಯಾಂಟ್‌ ಬಯೋ-ಇಮ್ಯುರೇಷನ್‌: ಅಪ್ಪರ್‌ ಓರ್ಡೊವಿಸಿಯನ್‌‌ ಆಫ್‌ ಕೆಂಟುಕಿ. ಲೆಥಿಯಾ 27, 269-270

ಹೆಚ್ಚಿನ ಓದಿಗಾಗಿ[ಬದಲಾಯಿಸಿ]


ಬಾಹ್ಯ ಕೊಂಡಿಗಳು[ಬದಲಾಯಿಸಿ]