ವಿಷಯಕ್ಕೆ ಹೋಗು

ಚಾರ್ಲ್ಸ್ ಡಾರ್ವಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾರ್ಲ್ಸ್ ರಾಬರ್ಟ್ ಡಾರ್ವಿನ್
ತಮ್ಮ ೪೫ ನೇ ವಯಸ್ಸಿನಲ್ಲಿ - ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕ ಪ್ರಕಟಣೆಯ ಸಮಯದಲ್ಲಿ
ಜನನಫೆಬ್ರುವರಿ ೧೨, ೧೮೦೯
ಮೌಂಟ್ ಹೌಸ್, ಶ್ರೂವ್ಸ್‌ಬರಿ, ಶ್ರಾಪ್‍ಶೈರ್, ಇಂಗ್ಲೆಂಡ್
ಮರಣಏಪ್ರಿಲ್ ೧೯, ೧೮೮೨
ಡೌನ್ ಹೌಸ್, ಕೆಂಟ್, ಇಂಗ್ಲೆಂಡ್
ವಾಸ ಇಂಗ್ಲೆಂಡ್
ರಾಷ್ಟ್ರೀಯತೆ ಇಂಗ್ಲೆಂಡ್
ಕಾರ್ಯಕ್ಷೇತ್ರಗಳುಜೀವಶಾಸ್ತ್ರ
ಸಂಸ್ಥೆಗಳುರಾಯಲ್ ಜಿಯೊಗ್ರಾಫಿಕಲ್ ಸೊಸೈಟಿ
ಅಭ್ಯಸಿಸಿದ ಸಂಸ್ಥೆಎಡಿನ್‍ಬ್ರೊ ವಿಶ್ವವಿದ್ಯಾಲಯ
ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಡಾಕ್ಟರೆಟ್ ಸಲಹೆಗಾರರುಆಡಮ್ ಸೆಡ್ಜ್‌ವಿಕ್
ಪ್ರಸಿದ್ಧಿಗೆ ಕಾರಣಥ ಆರಿಜಿನ್ ಆಫ್ ಸ್ಪೀಶೀಸ್, ಜೀವ ವಿಕಾಸವಾದ
ಗಮನಾರ್ಹ ಪ್ರಶಸ್ತಿಗಳುಕೊಪ್ಲೆ ಪದಕ (೧೮೬೪)
Darwin in his thirties, with his son dressed in a frock sitting on his knee.
Darwin in 1842 with his eldest son, William Erasmus Darwin

ಚಾರ್ಲ್ಸ್ ರಾಬರ್ಟ್ ಡಾರ್ವಿನ್ (ಫೆಬ್ರುವರಿ ೧೨ ೧೮೦೯ಏಪ್ರಿಲ್ ೧೯ ೧೮೮೨) ಇಂಗ್ಲೆಂಡ್ ದೇಶದ ಪ್ರಸಿದ್ಧ ಜೀವವಿಜ್ಞಾನಿ. ಈತನು ೧೮೫೮ರಲ್ಲಿ ಮಂಡಿಸಿದ ಜೀವ ವಿಕಾಸವಾದವು ಆಧುನಿಕ ಜೀವವಿಜ್ಞಾನದ ಬುನಾದಿಯಾಗಿದೆ. ಎಡಿನ್‍ಬ್ರೊ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡಿಸಿದ ಇವರು ೧೮೩೧ರಿಂದ ೧೮೩೬ರ ಮಧ್ಯದಲ್ಲಿ ಎಚ್ ಎಮ್ ಎಸ್ ಬೀಗಲ್ ಹಡಗಿನಲ್ಲಿ ಭೂರಚನಶಾಸ್ತ್ರ ವಿಜ್ಞಾನಿಯಾಗಿ ಪ್ರವಾಸ ಕೈ ಗೊಂಡಾಗ ನಡೆಸಿದ ಸಂಶೊಧನೆಯಿಂದ ಮೊದಲು ಪ್ರಖ್ಯಾತರಾದರು. ಅದೇ ಸಮಯದಲ್ಲಿ ಅನೇಕ ಜೀವ ಪಳಯುಳಿಕೆಗಳನ್ನೂ ಸಂಗ್ರಹಿಸಿ, ಅನೇಕ ಜೀವವಿಧಗಳನ್ನು ವೀಕ್ಷಿಸಿದರು. ಇದೆಲ್ಲವನ್ನೂ ವಿವರಿಸಲು "ನೈಸರ್ಗಿಕ ಆಯ್ಕೆಯಿಂದ ಜೀವ ವಿಕಾಸವಾದ" ಸಿದ್ಧಾಂತವನ್ನು ೧೮೫೮ರಲ್ಲಿ ಮಂಡಿಸಿದರು. ೧೮೫೯ರಲ್ಲಿ ಈ ಸಿದ್ಧಾಂತವನ್ನು ವಿವರವಾಗಿ ಬಣ್ಣಿಸುವ ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಎಂಬ ಭವ್ಯಕೃತಿಯನ್ನು ಪ್ರಕಟಿಸಿದರು.

ಪ್ರಾರಂಭಿಕ ಜೀವನ[ಬದಲಾಯಿಸಿ]

೧೮೧೬ರಲ್ಲಿ ೭ ವರ್ಷದ ಡಾರ್ವಿನ್

ಬೀಗಲ್ ಹಡಗಿನಲ್ಲಿ ಪ್ರವಾಸ[ಬದಲಾಯಿಸಿ]

ಬೀಗಲ್ ಹಡಗಿನ ಪ್ರವಾಸ
 • ಬೀಗಲ್ ಹಡಗು ಪ್ಲೈಮೌಥ್ ಬಂದರನ್ನು ೧೮೩೧ರ ಡಿಸೆಂಬರ್ ೨೭ರಂದು ಬಿಟ್ಟು ಸುಮಾರು ೫ ವರ್ಷಗಳ ನಂತರ ೧೮೩೬ರ ಅಕ್ಟೋಬರ್ ೨ರಂದು ಹಿಂದಿರುಗಿತು. ಇಡೀ ಭೂಮಿಯನ್ನು ಸುತ್ತುವರೆದ ಈ ಪ್ರವಾಸದಲ್ಲಿ ಡಾರ್ವಿನ್ ಹೋದ ಕಡೆಗಳಲ್ಲೆಲ್ಲಾ ಅಲ್ಲಿನ ಭೂರಚನೆ ಮತ್ತು ಜೀವ ವಿಧಗಳನ್ನು ಅಧ್ಯಯನ ಮಾಡಿದರು. ಸಮುದ್ರಯಾನದಿಂದ ಅಸ್ವಸ್ಥರಾಗಿದ್ದರೂ ಈ ಅಧ್ಯಯನಗಳನ್ನು ಬಹಳ ಎಚ್ಚರಿಕೆಯಿಂದ ದಾಖಲಿಸಿದರು.
 • ನೀರಿನಲ್ಲಿ ವಾಸಿಸುವ ಬೆನ್ನೆಲುಬುಳ್ಳದ ಪ್ರಾಣಿಗಳ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಸಂಗ್ರಹಿಸಿದರು. ಭೂರಚನೆಯ ಅಧ್ಯಯನದಲ್ಲಿ ಚಾರ್ಲ್ಸ್ ಲ್ಯೆಲ್ ಅವರ "ಪ್ರಿನ್ಸಿಪಲ್ಸ್ ಆಫ್ ಜಿಯಾಲಜಿ" ಪುಸ್ತಕವನ್ನು ಹೆಚ್ಚಾಗಿ ಉಪಯೋಗಿಸಿದರು. ಪೆಟಗೋನಿಯ ಪ್ರದೇಶದಲ್ಲಿ ಇದ್ದಾಗ ಇವರು ಅಳಿದುಹೋಗಿರುವ ಸಸ್ತನಿ ಪ್ರಾಣಿಗಳ ಒಂದು ದೊಡ್ಡ ಜೀವಪಳಯುಳಿಕೆ ಪ್ರದೇಶವನ್ನು ಕಂಡುಕೊಂಡರು.
 • ಇಲ್ಲಿನ ಸಂಶೋಧನೆಗಳಿಂದ ಮತ್ತು ದಕ್ಷಿಣ ಅಮೇರಿಕದಲ್ಲಿ ಇವರು ಕಂಡ ಜೀವ ವಿಧಗಳ ಅಧ್ಯಯನದಿಂದ ಲ್ಯೆಲ್ ಅವರು ಪ್ರಸ್ತಾಪಿಸಿದ್ದ ಜೀವಿಗಳ ಉಗಮದ ಸಿದ್ಧಾಂತದಲ್ಲಿನ ದೋಶಗಳನ್ನು ಕಾಣತೊಡಗಿದರು. ಆದರೆ ಇವರ ಮೇಲೆ ಅತ್ಯಂತ ಪ್ರಭಾವ ಬೀರಿದ ಪ್ರದೇಶವೆಂದರೆ ಗ್ಯಾಲಾಪಗೊಸ್ ದ್ವೀಪಗಳು.
 • ಭೂರಚನಶಾಸ್ತ್ರದ ಮಾಪನದ ಪ್ರಕಾರ ಇತ್ತೀಚೆಗೆ ಸೃಷ್ಟಿತವಾಗಿರುವ ಈ ದ್ವೀಪಗಳಲ್ಲಿ ಅನೇಕ ಜೀವವಿಧಗಳನ್ನು ಕಂಡರು. ಈ ಜೀವವಿಧಗಳು ಪ್ರಪಂಚದ ಬೇರೆಲ್ಲೂ ಇಲ್ಲದಿದ್ದರಿಂದ, ಎಲ್ಲಾ ಜೀವವಿಧಗಳು ಒಮ್ಮೆಲೇ ಸೃಷ್ಟಿತವಾದವು ಎಂಬ ಸಿದ್ಧಾಂತದ ಬಗ್ಗೆ ತೀವ್ರ ಸಂಶಯ ಹೊಂದತೊಡಗಿದರು.

ಜೀವ ವಿಕಾಸವಾದದ ಮನವರಿಕೆ[ಬದಲಾಯಿಸಿ]

ಬೀಗಲ್ ಪ್ರವಾಸದಿಂದ ಹಿಂದಿರುಗಿದ ಸುಮಾರಿನಲ್ಲಿ ಡಾರ್ವಿನ್.
 • ಡಾರ್ವಿನ್ ಅವರು ೧೮೩೬ರ ಅಕ್ಟೋಬರ್ ನಲ್ಲಿ ಪ್ರವಾಸದಿಂದ ಹಿಂದಿರುಗಿದ ಹೊತ್ತಿಗೆ, ಇವರು ಹೆನ್ಸ್ಲೊ ಅವರಿಗೆ ಕಳುಹಿಸಿದ್ದ ಪತ್ರಗಳಿಂದ ಪ್ರಖ್ಯಾತರಾಗಿದ್ದರು. ತಂದೆಯವರ ಆರ್ಥಿಕ ಸಹಾಯದಿಂದ, ಇವರು ಪ್ರವಾಸದ ವೇಳೆಯಲ್ಲಿ ಸಂಗ್ರಹಿಸಿದ್ದ ಜೀವಿಗಳನ್ನು ಮತ್ತು ಜೀವಪಳೆಯುಳಿಕೆ ಗಳನ್ನು ಗುರುತಿಸಿ ವರ್ಗೀಕರಣ ಮಾಡಿಸತೊಡಗಿದರು. ಜೀವರಚನಶಾಸ್ತ್ರ ತಜ್ಞರಾಗಿದ್ದ ರಿಚರ್ಡ್ ಒವೆನ್ ಇದರಲ್ಲಿ ಇವರಿಗೆ ಸಹಾಯ ಮಾಡಿದರು.
 • ಪ್ರಮುಖವಾಗಿ ಇವರು ಗ್ಯಾಲಪಗೋಸ್ ದ್ವೀಪಗಳಲ್ಲಿ ಸಂಗ್ರಹಿಸಿದ್ದ ಪಕ್ಷಿಗಳು ಫಿಂಚ್ ಮತ್ತು ವ್ರೆನ್ ಕುಟುಂಬದ ೧೨ ವಿವಿಧ ಪ್ರಜಾತಿಗಳಿಗೆ ಸೇರಿರುವಂತಹವು ಎಂಬುದನ್ನು ಪಕ್ಷಿ ತಜ್ಞ ಜಾನ್ ಗೂಲ್ಡ್ ಗುರುತಿಸಿದರು. ಮಾರ್ಚ್ ಹೊತ್ತಿಗೆ ಡಾರ್ವಿನ್ ಲಂಡನ್ ನಗರಕ್ಕೆ ಸ್ಥಳಾಂತರಗೊಂಡರು. ಇಲ್ಲಿ ಚಾರ್ಲ್ಸ್ ಲ್ಯೆಲ್ ಅವರ ಸೇರಿದ್ದ ಚಿಂತಕರ ಗುಂಪೊಂದನ್ನು ಸೇರಿದರು.
 • ಅಲ್ಲಿ ಜೀವ ಪ್ರಜಾತಿಗಳ ಸೃಷ್ಟಿಯ ಬಗ್ಗೆ ಕೂಡ ಚಿಂತನ ನಡೆಯುತ್ತಿತ್ತು. ಆಗಿನ ಪ್ರಮುಖ ಚಿಂತಕರು ಎಲ್ಲಾ ಪ್ರಜಾತಿಗಳು ಒಮ್ಮೆಲೇ ಸೃಷ್ಟಿಹೊಂದಿದವು ಎಂಬ ವಾದವನ್ನು ನಂಬಿದ್ದರು. ಆದರೆ ಡಾರ್ವಿನ್ ತಮ್ಮ ಗ್ಯಾಲಪಗೋಸ್ ಪಕ್ಷಿಗಳ ವೈವಿಧ್ಯತೆಯ ಬಗ್ಗೆ ಯೋಚಿಸುತ್ತ, ಒಂದು ಪ್ರಜಾತಿ ಇತರ ಪ್ರಜಾತಿಗಳಾಗಿ ಪರಿವರ್ತನಗೊಳ್ಳಬಹುದೇನೊ ಎಂದು ಚಿಂತನೆ ಮಾಡತೊಡಗಿದರು. ಇದರ ಜೊತೆಗೆ ಇವರು ತಮ್ಮ ಪ್ರವಾಸದ ಬಗ್ಗೆ ಒಂದು ಪುಸ್ತಕವನ್ನು ಕೂಡ ಬರೆಯಲು ಪ್ರಾರಂಭಿಸಿದರು.

ಅನಾರೋಗ್ಯ ಮತ್ತು ಮದುವೆ[ಬದಲಾಯಿಸಿ]

 • ತಮ್ಮ ಐದು ವರ್ಷದ ಪ್ರವಾಸದಲ್ಲಿ ಕೂಡಿಸಿದ ಮಾಹಿತಿಯನ್ನು ಪ್ರಕಟಣೆ ಮಾಡಲು ಡಾರ್ವಿನ್ ಪ್ರಾರಂಭಿಸಿದರು. ಈ ಅಗಾಧವಾದ ಕೆಲಸವನ್ನು ಮಾಡಲು £ ೧೦೦೦ ಮೊತ್ತವನ್ನು ಸರ್ಕಾರದಿಂದ ಪಡೆದರು. ಅನೇಕ ಸಂಪುಟಗಳಲ್ಲಿ ಪ್ರಕಟವಾದ ಜುವಾ ಲಜಿ ಆಫ್ ದ ವಾಯೇಜ್ ಆಫ್ ಎಚ್.ಎಮ್.ಎಸ್. ಬೀಗಲ್ ಮೇಲೆ ತೀವ್ರವಾಗಿ ಕೆಲಸ ಮಾಡಿದರು. ಬರವಣಿಗೆ ಮುಗಿದದ್ದು ಸುಮಾರು ೧೮೩೭ರ ಜೂನ್ ೨೦ರಂದು.
 • ಇದರ ನಂತರ ಪ್ರಕಟಣೆಯ ಪೂರ್ವ ಪ್ರತಿಗಳನ್ನು ಕೂಡ ಸರಿಪಡಿಸಬೇಕಾಗಿತ್ತು. ಈ ಕೆಲಸದ ಒತ್ತಡವು ಡಾರ್ವಿನ್ ಅವರ ಆರೋಗ್ಯದ ಮೇಲೆ ಪ್ರಭಾವ ಬೀರಿತು. ಇದನ್ನು ಕಂಡ ಅವರ ವೈದ್ಯರು ಪೂರ್ಣವಾಗಿ ಕೆಲಸವನ್ನು ಸ್ಥಗಿತಗೊಳಿಸಿ, ವಿಶ್ರಾಂತಿಯನ್ನು ಪಡೆಯಲು ಆದೇಶ ನೀಡಿದರು. ವಿಶ್ರಾಂತಿಗೆ ಇವರ ತಾಯಿಯ ತವರೂರಾದ ಸ್ಟ್ರಾಟ್‌ಫೋರ್ಡ್‌ಶೈರ್ಗೆ‍ತೆರಳಿದರು. ಅಲ್ಲಿ ತಮ್ಮ ತಾಯಿಯ ಅಣ್ಣನ ಮಗಳಾದ ಎಮ್ಮಾ ವೆಡ್ಜ್‌ವುಡ್ ಅವರ ಭೇಟಿಯಾಯಿತು.
 • ವಿಶ್ರಾಂತಿಯಿಂದ ಹಿಂದಿರುಗಿ ಇವರು ಭೂರಚನಶಾಸ್ತ್ರ ಸಂಘದ ಕಾರ್ಯದರ್ಶಿ ಸ್ಥಾನವನ್ನು ಪಡೆದರು. ತಮ್ಮ ಬರವಣಿಗೆಗಳನ್ನು ಮುಂದುವರೆಸುತ್ತಾ ಇವರು ತಮ್ಮ ವಿಕಾಸವಾದದ ಬಗ್ಗೆ ಹೆಚ್ಚು ಚಿಂತನೆ ಮಾಡತೊಡಗಿದರು. ಈ ನಿಟ್ಟಿಗೆ ಅನೇಕ ಶಾಸ್ತ್ರಜ್ಞರಿಂದಲ್ಲದೆ, ರೈತರಿಂದ ಮತ್ತು ಪಕ್ಷಿ ಸಾಕುವವರಿಂದಲೂ ಮಾಹಿತಿ ಸಂಗ್ರಹಿಸತೊಡಗಿದರು.
 • ಒಮ್ಮೆ ಮೃಗಾಲಯವೊಂದರಲ್ಲಿ ಒರಾಂಗುಟಾನ್ ಒಂದನ್ನು ನೋಡಿದ ಮೇಲೆ ಈ ವಿಕಾಸವಾದದಲ್ಲಿ ಮಾನವ ಪ್ರಜಾತಿಯೂ ಸೇರುತ್ತದೆಂದು ನಂಬತೊಡಗಿದರು. ಮತ್ತೆ ಕೆಲಸದ ಒತ್ತಡದಿಂದ ಡಾರ್ವಿನ್ ಅವರು ಅಸ್ವಸ್ಥರಾದರು. ಈ ಅಸ್ವಸ್ಥ್ಯದ ಕಾರಣವನ್ನು ವೈದ್ಯರು ಕಂಡುಹಿಡಿಯಲಿಲ್ಲ. ಈ ಬಾರಿ, ಕೆಲಸವನ್ನು ಬಿಟ್ಟು ಸ್ಕಾಟ್ಲ್ಯಾಂಡ್‍ಗೆ ಹೋದರು.
ಎಮ್ಮಾ ಡಾರ್ವಿನ್
 • ನಿರಾರೋಗ್ಯದಿಂದ ಚೇತರಿಸಿಕೊಂಡು ಶ್ರೂಸ್ಬರಿಗೆ ಹಿಂದಿರುಗಿದ ಮೇಲೆ ತಮ್ಮ ಮುಂದಿನ ಜೀವನದ ಬಗ್ಗೆ ಚಿಂತಿಸತೊಡಗಿದರು. ಮದುವೆಯಾಗಲು ನಿಶ್ಚಯಿಸಿ ತಮ್ಮ ತಂದೆಯವರೊಂದಿಗೆ ಚರ್ಚಿಸಿ ಎಮ್ಮಾ ಅವರನ್ನು ಕಾಣಲು ಜುಲೈನಲ್ಲಿ ಹೋದರು. ಆದರೆ ಆಗ ಮದುವೆಯನ್ನು ಪ್ರಸ್ತಾಪಿಸುವ ಬದಲು ತಮ್ಮ ಜೀವವಿಕಾಸವಾದದ ಬಗ್ಗೆ ಚರ್ಚಿಸಿ ಹಿಂದಿರುಗಿದರು.
 • ಲಂಡನ್ನಿನಲ್ಲಿ ತಮ್ಮ ಸಂಶೋಧನೆಗಳನ್ನು ಮಂದುವರೆಸುತ್ತಾ, ಥಾಮಸ್ ಮಾಲ್ಥಸ್ ಅವರ ಜನಸಂಖ್ಯೆ ಸ್ಫೋಟದ ಬಗ್ಗೆ ಲೇಖನವನ್ನು ಕಂಡರು. ಅದರಲ್ಲಿ ಹೇಗೆ ನೈಸರ್ಗಿಕ ಸಂಪನ್ಮೂಲಗಳ ಕೊರತೆಯು ಜನಸಂಖ್ಯೆಯನ್ನು ನಿಯಂತ್ರಣ ಮಾಡುತ್ತದೆ ಎಂದು ವಿವರಿಸಲಾಗಿತ್ತು. ಡಾರ್ವಿನ್, ಈ ಕೊರತೆಯ ಕಾಲದಲ್ಲಿ ಹೆಚ್ಚು ಹೊಂದುಕೊಳ್ಳುವವರು ಉಳಿಯುವುದರಿಂದ, ಈ ಕಾಲಗಳಲ್ಲಿ ಹೊಸ ಜೀವವಿಧಗಳ ಉತ್ಪತ್ತಿಯಾಗಬಹುದೆಂಬ ಚಿಂತನೆಯನ್ನು ಹೊಂದತೊಡಗಿದರು.
 • ಹೊಸ ತಳಿಗಳನ್ನು ಉತ್ಪಾದಿಸುತ್ತಿದ್ದ ರೈತರನ್ನು ಮತ್ತು ಪ್ರಾಣಿ ಸಾಕುತ್ತಿದ್ದವರನ್ನು ಅಧ್ಯಯನ ಮಾಡಿ, ಇದೇ ರೀತಿ ಪರಿಸರಕ್ಕೆ ತಕ್ಕಂತೆ ಹೊಂದುಕೊಳ್ಳುವ ಗುಣಗಳು ಹೊಸ ತಳಿಗಳ ಉತ್ಪತ್ತಿಗೆ ಬಳಸುವುದನ್ನು ನೋಡಿದರು. ನಿಸರ್ಗವು ಗುಣಗಳನ್ನು ಗುರಿಯಿಲ್ಲದೆ ನೀಡುತ್ತದೆಂದೂ, ಪರಿಸರದ ಪರಿಸ್ಥಿತಿಗಳು ಈ ಗುಣಗಳಲ್ಲಿ ಉತ್ತಮವಾದವುಗಳನ್ನು ಆರಿಸುತ್ತದೆಂದೂ, ಈ ರೀತಿಯಲ್ಲಿ ಹೊಸ ಜೀವವಿಧಗಳು ಹುಟ್ಟುತ್ತವೆಂದೂ ಮನವರಿದರು.
 • ೧೮೩೮ರ ನವೆಂಬರ್ ೧೧ರಂದು ಮಾಯರ್‌ಗೆ ಹಿಂದಿರುಗಿ ಎಮ್ಮಾ ಅವರಿಗೆ ಮದುವೆಯನ್ನು ಪ್ರಸ್ತಾಪಿಸಿದರು. ಇದೇ ಕಾಲದಲ್ಲಿ ತಮ್ಮ ಹೊಸ ಮನವರಿಕೆಗಳನ್ನೂ ವ್ಯಕ್ತಪಡಿಸಿದರು. ಎಮ್ಮಾ, ಈ ಚಿಂತನೆಗಳು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಹೊಂದದಿದ್ದರೂ, ಡಾರ್ವಿನ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ, ಮದುವೆಗೆ ಒಪ್ಪಿಕೊಂಡರು.
 • ಲಂಡನ್‌ಗೆ ಹಿಂದಿರುಗಿ ಡಾರ್ವಿನ್ ವೈವಾಹಿಕ ಜೀವನಕ್ಕೆ ಸೂಕ್ತವಾಗುವಂತಹ ಮನೆಯೊಂದನ್ನು ಹುಡುಕಿದರು. ೧೮೩೯ರ ಜನವರಿ ೨೪ರಂದು ರಾಯಲ್ ಸೊಸೈಟಿಯ ಸದಸ್ಯರಾಗಿ ಚುನಾಯಿತರಾದರು. ಮಾಯರ್‌ಗೆ ಹಿಂದಿರುಗಿ, ಜನವರಿ ೨೯ರಂದು ಚಾರ್ಲ್ಸ್ ಡಾರ್ವಿನ್ ಮತ್ತು ಎಮ್ಮಾ ವೆಡ್ಜ್‌ವುಡ್ ವಿವಾಹಿತರಾದರು. ಕೂಡಲೆ ಲಂಡನ್‌ಗೆ ತೆರಳಿ ತಮ್ಮ ಹೊಸ ಮನೆಯಲ್ಲಿ ವೈವಾಹಿಕ ಜೀವನ ಪ್ರಾರಂಭಿಸಿದರು.

ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಪ್ರಕಟಣೆ[ಬದಲಾಯಿಸಿ]

 • ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಮೂಲ ಆಯಕಟ್ಟನ್ನು ಮನಸ್ಸಿನಲ್ಲಿ ಹೊಂದಿದ್ದೇನೆಂದು ಭಾವಿಸಿ, ಈ ಬಗ್ಗೆ ಹೆಚ್ಚು ಸಂಶೋಧನೆ ನಡೆಸತೊಡಗಿದರು. ಮುಂದಿನ ದಶಕದಲ್ಲಿ ತಮ್ಮ ಬೀಗಲ್ ಪ್ರವಾಸದ ವೈಜ್ಞಾನಿಕ ಫಲಿತಾಂಶಗಳನ್ನು ಪ್ರಕಟಣೆ ಮಾಡುವಲ್ಲಿ ನಿರತರಾಗಿದ್ದರಿಂದ ತಮ್ಮ ಸಿದ್ಧಾಂತದ ಬಗ್ಗೆ ಸಂಶೋಧನೆ ಹಿಂಬದಿಯಲ್ಲಿ ಉಳಿಯಿತು. ಮೂರು ವರ್ಷಗಳ ಕೆಲಸದ ನಂತರ ೧೮೪೨ರಲ್ಲಿ ಡಾರ್ವಿನ್ ಅವರು ಹವಳದ ಬಗ್ಗೆ ಒಂದು ದೊಡ್ಡ ಕೃತಿಯನ್ನು ಪ್ರಕಟಿಸಿದರು.
 • ಕೆಲಸಗಳ ಒತ್ತಡದಿಂದ ವಿಶ್ರಾಂತಿ ಪಡೆಯಲು ಗ್ರಾಮಾಂತರ ಪ್ರದೇಶದಲ್ಲಿನ ತಮ್ಮ ಮನೆಯಾದ ಡೌನ್ ಹೌಸ್‍ಗೆ ತೆರಳಿದರು. ೧೮೪೪ರ ಜನವರಿಯಲ್ಲಿ ತಮ್ಮ ಸಿದ್ಧಾಂತದ ಬಗ್ಗೆ ಒಂದು ಕರಡು ಪ್ರತಿಯನ್ನು ರಚಿಸಿ, ಸಸ್ಯಶಾಸ್ತ್ರಜ್ಞ ಜೊಸೆಫ್ ಡಾಲ್ಟನ್ ಹೂಕರ್ ಅವರಿಗೆ ಇದರ ಬಗ್ಗೆ ತಿಳಿಸಿದರು. ಹೂಕರ್ ಇದರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ನೀಡಿದರು.
 • ಜುಲೈ ಹೊತ್ತಿಗೆ ಈ ಕರಡು ಪ್ರತಿಯನ್ನು ೨೩೦ ಪುಟಗಳ ಪ್ರಬಂಧವಾಗಿ ಪರಿವರ್ತಿಸಿದ್ದರು. ೧೮೪೬ರಲ್ಲಿ ಡಾರ್ವಿನ್ ತಮ್ಮ ಮೂರನೆಯ ಭೂರಚನಶಾಸ್ತ್ರದ ಬಗ್ಗೆಯ ಪುಸ್ತಕವನ್ನು ರಚಿಸಿದರು. ೧೮೪೭ರಲ್ಲಿ ಹೂಕರ್ ಅವರಿಗೆ ತಮ್ಮ ಪ್ರಬಂಧವನ್ನು ಕಳುಹಿಸಿದರು ಮತ್ತು ಅವರಿಂದ ಕ್ರಿಯಾತ್ಮಕ ಪ್ರತ್ಯತ್ತರಗಳನ್ನು ಪಡೆದರು.
ಡೌನ್ ಹೌಸ್
 • ೧೮೫೧ರಲ್ಲಿ ತಮ್ಮ ಪ್ರೀತಿಯ ಮಗಳಾದ ಆನ್ನಿ ತೀವ್ರವಾಗಿ ಅಸ್ವಸ್ಥಳಾಗಿ ಮೃತಳಾದಳು. ಇದರಿಂದ ಡಾರ್ವಿನ್ ತೀವ್ರವಾಗಿ ವ್ಯಾಕುಲಗೊಂಡರು. ಇದರಿಂದ ತಮ್ಮನ್ನು ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ಬಾರ್ನಕಲ್ಸ್‍ಗಳ ಬಗ್ಗೆ ಇವರ ಅಧ್ಯಯನಕ್ಕೆ ೧೮೫೩ರಲ್ಲಿ ರಾಯಲ್ ಸೊಸೈಟಿಯ ಪದಕವನ್ನು ನೀಡಲಾಯಿತು.
 • ೧೮೫೬ರಲ್ಲಿ ಲ್ಯೆಲ್ ಅವರು ಆಲ್ಫ್ರೆಡ್ ರಸೆಲ್ ವಾಲೇಸ್ ಅವರ ಒಂದು ಲೇಖನವನ್ನು ಓದಿದರು. ಅದರಲ್ಲಿನ ವಿಚಾರಗಳು ಡಾರ್ವಿನ್ ಅವರ ಸಿದ್ಧಾಂತಗಳನ್ನು ಹೋಲುವುದನ್ನು ನೋಡಿ, ಡಾರ್ವಿನ್ ಅವರಿಗೆ ತಮ್ಮ ವಾದವನ್ನು ಮೊದಲು ಪ್ರಕಟಿಸಲು ಎಚ್ಚರಿಸಿದರು. ಆದರೆ ಡಾರ್ವಿನ್ ಇದರ ಬಗ್ಗೆ ಹೆಚ್ಚು ಚಿಂತಿಸದೆ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು.
 • ತಮ್ಮ ಸಿದ್ಧಾಂತದ ಬಗ್ಗೆ ಒಂದು ಚಿಕ್ಕ ಲೇಖನವನ್ನು ರಚಿಸಿದರೂ, ಮುಖ್ಯವಾಗಿ ಇದರ ಬಗ್ಗೆ ದೊಡ್ಡ ಪುಸ್ತಕವನ್ನು ಬರೆಯುವುದರಲ್ಲಿ ಹೆಚ್ಚು ಮಗ್ನರಾಗಿದ್ದರು. ೧೮೫೮ರ ಜೂನ್ ೧೮ರಂದು ವಾಲೇಸ್ ಅವರಿಂದ ತಮ್ಮ ವಾದವನ್ನು ಹೆಚ್ಚಾಗಿ ಹೋಲುವ ಲೇಖನವೊಂದನ್ನು ಪಡೆದರು. ಇದರಿಂದ ದಿಗಿಲುಗೊಂಡರೂ, ಇದನ್ನು ಲ್ಯೆಲ್ ಅವರಿಗೆ ಕಳುಹಿಸಿ, ವಾಲೇಸ್ ಅವರಿಗೆ ಇದನ್ನು ಪ್ರಕಟಣೆ ಮಾಡುವಲ್ಲಿ ಸಹಕರಿಸುವ ಮಾತು ನೀಡಿದರು.
 • ಮಾತುಕತೆಯ ನಂತರ ಈ ಲೇಖನವನ್ನು ತಮ್ಮ ಲೇಖನದೊಂದಿಗೆ ಲಿನ್ನಿಯನ್ ಸೊಸೈಟಿಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದರು. ತಮ್ಮ ಚಿಕ್ಕ ಮಗ ಸ್ಕಾರ್ಲೆಟ್ ಜ್ವರದಿಂದ ಮರಣ ಹೊಂದಿದರಿಂದ, ಈ ಲೇಖನಗಳನ್ನು ಲ್ಯೆಲ್ ಮತ್ತು ಹೂಕರ್ ಅವರು ಜುಲೈ ೧ರಂದು ಮಂಡಿಸಿದರು. ಈ ಪ್ರಕಟಣೆಗಳು ವಿಜ್ಞಾನಿಗಳಲ್ಲಿ ಮೊದಲಿಗೆ ಹೆಚ್ಚು ಆಸಕ್ತಿ ಉಂಟು ಮಾಡಲಿಲ್ಲ.
 • ಮುಂದಿನ ೧೩ ತಿಂಗಳುಗಳಲ್ಲಿ ಡಾರ್ವಿನ್ ತಮ್ಮ ಪುಸ್ತಕದ ರಚನೆಯ ಮೇಲೆ ಹೆಚ್ಚಾಗಿ ಕೆಲಸ ನಡೆಸಿದರು. ೧೮೫೯ನವೆಂಬರ್ ೨೨ರಂದು ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕವು ಪ್ರಕಟನೆಗೊಂಡಿತು. ಮೊದಲ ಆವತರಣಿಕೆಯ ೧,೨೫೦ ಪ್ರತಿಗಳು ಬಹಳ ಬೇಗನೆಯೇ ಮಾರಾಟಗೊಂಡವು.

ಸಿದ್ಧಾಂತದ ಬಗ್ಗೆ ಪ್ರತಿಕ್ರಿಯೆಗಳು[ಬದಲಾಯಿಸಿ]

ಡಾರ್ವಿನ್ ಅವರ ಸಿದ್ಧಾಂತವನ್ನು ವ್ಯಂಗಿಸುವ ಒಂದು ಚಿತ್ರಣ
 • ಪುಸ್ತಕದ ಪ್ರಕಟಣೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಲ್ಲಿ ಆಸಕ್ತಿ ಮೂಡಿಸಿತು. ಡಾರ್ವಿನ್ ಅಸ್ವಸ್ಥ್ಯತೆಯಿಂದ ಸಾರ್ವಜನಿಕ ವಾದಗಳಲ್ಲಿ ಭಾಗವಹಿಸದಿದ್ದರೂ, ಪ್ರತಿಕ್ರಿಯೆಗಳನ್ನು ಅನುಸರಿಸಿದರು ಮತ್ತು ಆದಷ್ಟು ಪತ್ರಮುಖೇನ ತಮ್ಮ ಸಿದ್ಧಾಂತದ ಬಗ್ಗೆ ಪ್ರಶ್ನೆಗಳನ್ನು ಉತ್ತರಿಸಿದರು. ಇಂಗ್ಲೆಂಡಿನ ಚರ್ಚು ಮತ್ತು ಇತರ ಧಾರ್ಮಿಕ ಸಂಘಟನೆಗಳು ಡಾರ್ವಿನ್ ಅವರ ವಾದಗಳಿಗೆ ವಿರೋಧ ವ್ಯಕ್ತಪಡಿಸಿದವು. ಆದರೆ ಡಾರ್ವಿನ್‌ರ ಆಪ್ತ ಮಿತ್ರರಾದ ಗ್ರೇ, ಹೂಕರ್, ಹಕ್ಸ್ಲಿ ಮತ್ತು ಲ್ಯೆಲ್ ಅವರನ್ನು ಬೆಂಬಲಿಸಿದರು.
 • ಕಾಲಕ್ರಮೇಣ ನೈಸರ್ಗಿಕ ಆಯ್ಕೆ ಸಿದ್ಧಾಂತಕ್ಕೆ ಹೆಚ್ಚು ಪುರಾವೆಯನ್ನು ನೀಡುವ ಪುಸ್ತಕಗಳು ಪ್ರಕಟಗೊಂಡವು. ಜೀವಶಾಸ್ತ್ರದ ಬುನಾದಿಯಾಗಿ ಈ ಸಿದ್ಧಾಂತವನ್ನು ವಿಜ್ಞಾನಿಗಳು ಒಪ್ಪಿಕೊಂಡರು. ಈ ಸಾಧನೆಗೆ ೧೮೬೪ರ ನವೆಂಬರ್ ೩ರಂದು ಬ್ರಿಟನ್ನಿನ ಅತ್ಯಂತ ಶ್ರೇಷ್ಠ ವೈಜ್ಞಾನಿಕ ಪ್ರಶಸ್ತಿಯಾದ ರಾಯಲ್ ಸೊಸೈಟಿಯ ಕೋಪ್ಲೆ ಪದಕವನ್ನು ಡಾರ್ವಿನ್ ಅವರಿಗೆ ನೀಡಲಾಯಿತು.

ಕೌಟುಂಬಿಕ ಜೀವನ[ಬದಲಾಯಿಸಿ]

ಚಿಕ್ಕ ವಯಸ್ಸಿನಲ್ಲಿ ಮೃತಳಾದ ಮಗಳು ಆನ್ನಿ

೧೮೩೯ರಲ್ಲಿ ವಿವಾಹವಾದ ಡಾರ್ವಿನ್ ದಂಪತಿಗಳಿಗೆ ಒಟ್ಟು ಹತ್ತು ಮಕ್ಕಳು ಹುಟ್ಟಿದರು. ಇಬ್ಬರು ಮಕ್ಕಳು ಶೈಶವ್ಯದಲ್ಲಿ ಮೃತರಾದರು. ಡಾರ್ವಿನ್ ಅವರ ಮೇಲೆ ತುಂಬ ಹೆಚ್ಚಿನ ಪ್ರಭಾವ ಬೀರಿದ್ದು ತಮ್ಮ ಎರಡನೆ ಮಗು ಮತ್ತು ಹಿರಿಯ ಮಗಳಾದ ಆನ್ನಿ ತನ್ನ ಹತ್ತನೆಯ ವರ್ಷದಲ್ಲಿ ಮೃತಳಾದದ್ದು. ಈಕೆಯನ್ನು ತುಂಬಾ ಪ್ರೀತಿಸುತ್ತಿದ್ದ ತಂದೆ, ಈ ಸಾವಿನಿಂದ ಕ್ರೈಸ್ತ ಧರ್ಮದಲ್ಲಿನ ತಮ್ಮ ನಂಬಿಕೆಯನ್ನು ಕಳೆದುಕೊಂಡರು. ಉಳಿದ ಮಕ್ಕಳಲ್ಲಿ ಅನೇಕರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಫಲರಾದರು.

ಇತರ ಬರಹಗಳು ಮತ್ತು ಜೀವನದ ಕೊನೆ[ಬದಲಾಯಿಸಿ]

೧೮೭೯ರಲ್ಲಿ ತಮ್ಮ ಇಳಿ ವಯಸ್ಸಿನಲ್ಲಿನ ಡಾರ್ವಿನ್
 • ತಮ್ಮ ಜೀವನದ ಕೊನೆಯ ೨೨ ವರ್ಷಗಳಲ್ಲಿ ಮಧ್ಯ ಮಧ್ಯ ತೀವ್ರ ಅನಾರೋಗ್ಯ ಉಂಟಾಗುತ್ತಿದ್ದರೂ, ಡಾರ್ವಿನ್ ತಮ್ಮ ಕೆಲಸವನ್ನು ಮುಂದುವರೆಸಿದರು. ಆರ್ಕಿಡ್‍ಗಳಲ್ಲಿ ಸಂತಾನೊತ್ಪತ್ತಿಗೆ ವಿಕಾಸಗೊಂಡಿರುವ ಪ್ರಕ್ರಿಯೆಗಳ ಬಗ್ಗೆ ೧೮೬೨ರಲ್ಲಿ ಒಂದು ಪುಸ್ತಕವನ್ನು ಪ್ರಕಟಿಸಿದರು. ಮುಂದೆ ಜೀವವಿಕಾಸವಾದದಲ್ಲಿ ಮಾನವನ ಸ್ಥಾನವನ್ನು ವಿವರಿಸುವ ದ ಡಿಸೆಂಟ್ ಆಫ್ ಮ್ಯಾನ್, ಅಂಡ್ ಸೆಲೆಕ್ಷನ್ ಇನ್ ರಿಲೇಷನ್ ಟು ಸೆಕ್ಸ್ (ಮನುಜನ ವಂಶವೃಕ್ಷ ಮತ್ತು ಲಿಂಗ ಆಧಾರಿತ ಆಯ್ಕೆ ಕ್ರಿಯೆ) ಪುಸ್ತಕವನ್ನು ೧೮೭೧ರಲ್ಲಿ ಪ್ರಕಟಿಸಿದರು.
 • ಇದರಲ್ಲಿ ಮಾನವನು ಹೇಗೆ ಮತ್ತೊಂದು ಪ್ರಾಣಿಯಷ್ಟೆ ಮತ್ತು ಜೀವವಿಕಾಸದಲ್ಲಿ ವಿರುದ್ಧ ಲಿಂಗವನ್ನು ಆಕರ್ಷಿಸುವುದಕ್ಕೊಸ್ಕರ ಕೆಲ ಗುಣಗಳು ಜೀವಿಗಳಲ್ಲಿ ಹೇಗೆ ಉತ್ಪಾದಿತವಾಗುತ್ತವೆ ಎಂದು ವಿವರಿಸಿದರು. ಈ ಪುಸ್ತಕಕ್ಕೆ ನಡೆಸಿದ ಸಂಶೊಧನೆಯ ಉಳಿದ ಮಾಹಿತಿಯನ್ನು ೧೮೭೨ರಲ್ಲಿ ದ ಎಕ್ಸ್ಪ್ರೆಷನ್ ಆಫ್ ಎಮೊಷನ್ಸ್ ಇನ್ ಮ್ಯಾನ್ ಅಂಡ್ ಅನಿಮಲ್ಸ್ (ಮಾನವ ಮತ್ತಿತರ ಪ್ರಾಣಿಗಳಲ್ಲಿ ಭಾವನೆಗಳ ತೋರುವಿಕೆ) ಪುಸ್ತಕದಲ್ಲಿ ಪ್ರಕಟಿಸಿದರು.
 • ಈ ಎರಡೂ ಪುಸ್ತಕಗಳು ವೈಜ್ಞಾನಿಕ ಮತ್ತು ಸಾರ್ವಜನಿಕ ಸಮುದಾಯಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದವು. ಮುಂದಿನ ಹತ್ತು ವರ್ಷಗಳಲ್ಲಿ ಡಾರ್ವಿನ್ ಸಸ್ಯಗಳ ಮೇಲೆ ಅನೇಕ ಪ್ರಯೋಗಗಳನ್ನು ನಡೆಸಿದರು. ೧೮೮೨ಏಪ್ರಿಲ್ ೧೯ರಂದು ಇವರು ಸಾವನ್ನು ಅಪ್ಪಿದರು. ಆಗಾಧ ಜನಪ್ರಿಯತೆ ಗಳಿಸಿದ್ದ ಇವರನ್ನು ರಾಜ್ಯ ಗೌರವಗಳೊಂದಿಗೆ ವೆಸ್ಟ್‌ಮಿನಿಸ್ಟರ್ ಆಬ್ಬೆಯಲ್ಲಿ ಹೂಳಲಾಯಿತು.

ಇದನ್ನೂ ನೋಡಿ[ಬದಲಾಯಿಸಿ]