ಡಿವೋನಿಯನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿವೋನಿಯನ್ - ಪೇಲಿಯೊಜೋಯಿಕ್ ಯುಗದ (ಪ್ರಾಗ್ಚೀವ ಯುಗ) ನಾಲ್ಕನೆಯ ಅವಧಿ. ಇದರ ಕಾಲ ಸುಮಾರು 400 ದಶಲಕ್ಷ ವರ್ಷ ಪ್ರಾಚೀನದಿಂದ 350 ದ.ಲ.ವ. ಪ್ರಾಚೀನದ ವರೆಗೆ ಇತ್ತು. ಈ ಕಲ್ಪದ ಇಕ್ಕೆಲಗಳಲ್ಲಿ ಸೈಲೂರಿಯನ್ (440-400 ದ.ಲ.ವ. ಪ್ರಾಚೀನ) ಹಾಗೂ ಕಾರ್ಬಾನಿಫೆರಸ್ (350-280 ದ.ಲ.ವ. ಪ್ರಾಚೀನ) ಕಲ್ಪಗಳು ಇದ್ದುವು.

ಕೆಂಪು ಮರಳು ಶಿಲೆಗಳು[ಬದಲಾಯಿಸಿ]

ಡಿವೋನಿಯನ್ ರೂಪಗಳ ಪೈಕಿ ಅತ್ಯುತ್ತಮವಾಗಿ ಪ್ರಕಾಶಕ್ಕೆ ಬಂದಿರುವಂಥವು ಪ್ರಾಯಶಃ ವೇಲ್ಸ್, ಉತ್ತರ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವಾಯುವ್ಯ ಸೋವಿಯೆತ್ ಒಕ್ಕೂಟದ ಹಳೆ ಕೆಂಪು ಮರಳೂ ಶಿಲೆಗಳು. ಇವು ಕಾರ್ಬಾನಿಫೆರಸ್ ಕಲ್ಪದ ಶಿಲಾಸ್ತೋಮಗಳ ಕೆಳಗೆ ನಿಕ್ಷೇಪಗೊಂಡಂಥವು; ಮೇಲೆ ನಿಕ್ಷೇಪಗೊಂಡಂಥವುಗಳಿಗೆ ಹೊಸ ಕೆಂಪು ಮರಳು ಶಿಲೆಗಳು ಎಂದು ಹೆಸರು. ವೇಲ್ಸ್-ಬೆಲ್ಜಿಯಮ್ ದಿಬ್ಬ ಕೆಲೆಡೋನಿಯನ್ ಪರ್ವತ ಸ್ತೋಮಗಳ ದಕ್ಷಿಣ ಸರಹದ್ದು. ಇದು ಪೂರ್ವ-ಪಶ್ಚಿಮಾಭಿಮುಖವಾಗಿದೆ. ಇದರ ದಕ್ಷಿಣಕ್ಕೆ ಡಿವೋನಿಯನ್ ಸಾಗರ ನಿಕ್ಷೇಪಗಳು ಹೊರಹೊಮ್ಮಿವೆ. ಇವೇ ಡಿವೋನಿಯನ್ ಶಿಲಾಸ್ತೋಮಗಳು. ವೇಲ್ಸ್‍ನಿಂದ ಬೆಲ್ಜಿಯಮ್ ವರೆಗೂ ಈ ಸ್ತೋಮಗಳಿಗೆ ಒಂದೇ ರೀತಿಯ ಶಿಲಾಸಂಯೋಜನೆ ಇರುವುದರಿಂದ ಈ ಪ್ರದೇಶದಲ್ಲೆಲ್ಲ ಒಂದೇ ರೀತಿಯ ಶಿಲಾಸಂಯೋಜನೆ ವ್ಯಾಪಿಸಿತ್ತು ಎಂದು ತಿಳಿಯುವುದು.

ಹಳೆ ಕೆಂಪು ಮರಳು ಶಿಲೆಗಳು : ಸ್ಕಾಟ್ಲೆಂಡಿನ ಕೆಲೆಡೋನಿಯನ್ ಮತ್ತು ವೇಲ್ಸ್ ಸರೋವರಗಳಲ್ಲಿ ಕೆಂಪು ಮರಳು ಶಿಲೆ ಸೈಲೋರಿಯನ್ ಮತ್ತು ಕಾರ್ಬಾನಿಫೆರಸ್ ಕಲ್ಪಗಳ ಸಾಗರ ಶಿಲೆಗಳ ಮಧ್ಯೆ ನಿಕ್ಷೇಪಗೊಂಡಿದೆ. ಸೈಲೂರಿಯನ್ ಮತ್ತು ಕೆಂಪು ಮರಳು ಶಿಲೆಗಳ ಮಧ್ಯೆ ಅಥವಾ ಕೆಂಪು ಮರಳು ಶಿಲೆ ಮತ್ತು ಕಾರ್ಬಾನಿಫೆರಸ್ ಶಿಲೆಗಳ ಮಧ್ಯೆ ಅನನುರೂಪ್ಯತೆ ಕಂಡುಬರುವುದಿಲ್ಲ. ವೇಲ್ಸ್ ಪ್ರದೇಶದ ಕೆಂಪು ಮರಳುಶಿಲೆಗಳು ಸೂಕ್ಷ್ಮ ಮರಳು ಕಣಗಳಿಂದ ಕೂಡಿವೆ. ಅವುಗಳ ತಳಭಾಗದಲ್ಲಿ ಸಾಗರವಾಸಿ ಜೀವಿಗಳ ಅವಶೇಷಗಳೂ ಸರೋವರವಾಸಿ ಮತ್ಸ್ಯಗಳ ಅವಶೇಷಗಳೂ ಒಟ್ಟಿಗೆ ಸಿಗುತ್ತವೆ. ಆದ್ದರಿಂದ ಈ ಸರೋವರಕ್ಕೆ ಪ್ರಾರಂಭದಲ್ಲಿ ಸಮುದ್ರ ಸಂಪರ್ಕ ಇದ್ದಿರಬೇಕೆಂದೂ ಸಂಪರ್ಕ ಕಡಿದುಬಿದ್ದ ಬಳಿಕ ಪೂರ್ಣವಾಗಿ ಸರೋವರ ಸನ್ನಿವೇಶ ಉಂಟಾಗಿರಬೇಕೆಂದೂ ತಿಳಿಯಬಹುದಾಗಿದೆ. ಇವೆರಡು ಪ್ರದೇಶಗಳ ಕೆಂಪು ಮರಳು ಶಿಲೆಗಳನ್ನು ಕೆಳಭಾಗ ಮತ್ತು ಮೇಲ್ಭಾಗ ಎಂದು ವಿಭಜಿಸಬಹುದು. ಇವೆರಡರ ಮಧ್ಯೆ ಅನುರೂಪ ಸಂಪರ್ಕ ಕಂಡುಬರುತ್ತದೆ. ಇವುಗಳಲ್ಲಿ ಇರುವ ಮತ್ಸ್ಯಗಳ ಅವಶೇಷಗಳಿಗೆ ಸ್ವಂತ ವೈಶಿಷ್ಟ್ಯ ಉಂಟು. ಇವು ಆ ಎರಡು ಭಾಗಗಳ ನಡುವೆ ಪ್ರತಿನಿಧಿಸಲ್ಪಡದಿರುವ ಮಧ್ಯಾಂತರ ಕಾಲವನ್ನೂ ಸೂಚಿಸುತ್ತವೆ.

ಕೆಲೆಡೋನಿಯನ್ ಸರೋವರಕ್ಕೆ ಉತ್ತರದಲ್ಲಿದ್ದ ಆರ್ಕಡಿ ಸರೋವರದಲ್ಲಿಯೂ ಕೆಂಪು ಮರಳು ಶಿಲೆಗಳು ನಿಕ್ಷೇಪಗೊಂಡಿವೆ. ಇವು ಪೂರ್ಣವಾಗಿ ಭೂಜಲಜ ಶಿಲೆಗಳು. ಇವನ್ನೂ ಕೆಳ ಮತ್ತು ಮೇಲ್ಭಾಗಗಳಾಗಿ ವಿಭಜಿಸಬಹುದು. ಮೇಲ್ಭಾಗದಲ್ಲಿ ಸಿಕ್ಕುವ ಮತ್ಸ್ಯಾವಶೇಷಗಳು ಕೆಲೆಡೋನಿಯನ್ ಮತ್ತು ವೇಲ್ಸ್ ಪ್ರದೇಶಗಳ ಮೇಲ್ಭಾಗದಲ್ಲಿ ಸಿಕ್ಕುವ ಮತ್ಸ್ಯಾವಶೇಷಗಳನ್ನು ಹೋಲುತ್ತವೆ. ಆದರೆ ಕೆಳಭಾಗದಲ್ಲಿರುವಂಥವು ಕೆಲೆಡೋನಿಯನ್-ವೇಲ್ಸ್ ಪ್ರದೇಶಗಳ ಕೆಳಭಾಗದ ಮತ್ಸ್ಯಾವಶೇಷಗಳನ್ನು ಹೋಲುವುದಿಲ್ಲ. ಆ ಪ್ರದೇಶಗಳ ಕೆಳ ಮತ್ತು ಮೇಲ್ಭಾಗದ ಮತ್ಸ್ಯಾವಶೇಷಗಳ ಮಧ್ಯಾವಸ್ಥೆಯನ್ನು ಸೂಚಿಸುತ್ತವೆ. ಆದ್ದರಿಂದ ಮರ್ಚಿಸನ್‍ನು ಹಳೆ ಕೆಂಪು ಮರಳು ಶಿಲೆಗಳನ್ನು ಕೆಳ, ಮಧ್ಯ ಮತ್ತು ಮೇಲ್ಭಾಗಗಳಾಗಿ ವಿಭಜಿಸಿ ಆರ್ಕಡಿಯಲ್ಲಿ ಮಧ್ಯ ಮತ್ತು ಮೇಲ್ಭಾಗಗಳೂ ಕೆಲೆಡೋನಿಯನ್ ಮತ್ತು ವೇಲ್ಸ್‍ನಲ್ಲಿ ಕೆಳ ಮತ್ತು ಮೇಲ್ಭಾಗಗಳೂ ಪ್ರತಿನಿಧಿಸಲ್ಪಟ್ಟಿವೆ ಎಂಬು ನಿರ್ಧರಿಸಿದ್ದಾನೆ.

ಡಿವೋನಿಯನ್ ಶಿಲಾಸ್ತೋಮಗಳು[ಬದಲಾಯಿಸಿ]

ಕಾರ್ನ್‍ವಾಲ್ ಮತ್ತು ಡಿವೋನ್‍ಷೈರ್ ಪ್ರಾಂತಗಳಲ್ಲಿ ಸಾಗರನಿಕ್ಷೇಪಗಳು ಹೊರಹೊಮ್ಮಿವೆ. ಇವು ಮಡಿಕೆಗಳಾಗಿ ಕಲಕಿಕೊಂಡಿರುವುದರಿಂದಲೂ ಇವುಗಳಲ್ಲಿ ಸಸ್ಯಾವಶೇಷಗಳು ಅತಿ ವಿರಳವಾಗಿರುವುದರಿಂದಲೂ ಇವನ್ನು ಬಲುಕಾಲದ ವರೆಗೆ ಕೇಂಬ್ರಿಯನ್ ಕಲ್ಪದ ಶಿಲೆಗಳೆಂದೇ ಭಾವಿಸಲಾಗಿತ್ತು. ಲ್ಯಾನ್ಸ್‍ಡೇಲ್ ಎಂಬಾತ ಇವುಗಳಲ್ಲಿರುವ ಹವಳಗಳು ಸೈಲೂರಿಯನ್ ಮತ್ತು ಕಾರ್ಬಾನಿಫೆರಸ್ ಕಲ್ಪಗಳ ಮಧ್ಯಕಾಲವನ್ನು ಸೂಚಿಸುತ್ತವೆ ಎಂಬುದನ್ನು ತೋರಿಸಿ, ಈ ಶಿಲೆಗಳು ಕೆಂಪು ಮರಳು ಶಿಲೆಗಳ ಸಮಕಾಲೀನ ಶಿಲೆಗಳೆಂದು ದೃಢಪಡಿಸಿದ. ಮರ್ಚಿಸನ್ ಮತ್ತು ಸೆಡ್ಜ್‍ವಿಕ್‍ರವರು ಈ ಅಭಿಪ್ರಾಯವನ್ನು ಒಪ್ಪಿಕೊಂಡು, ಇವನ್ನು ಡಿವೋನಿಯನ್ ಶಿಲಾಸ್ತೋಮಗಳು (ಡಿವೋನ್‍ಷೈರಿನಲ್ಲಿ ಉತ್ತಮ ರೀತಿಯಲ್ಲಿ ಹೊರ ಕಾಣಿಸಿರುವುದರಿಂದ) ಎಂದು ಕರೆದರು. ಈ ಶಿಲಾಸ್ತೋಮದಲ್ಲಿ ಮುಖ್ಯವಾಗಿ ಗ್ರೇವೇಕ್ ಶಿಲೆಯೇ ಪ್ರಧಾನವಾಗಿದೆ. ಜೇಡುಶಿಲೆ, ಸುಣ್ಣಶಿಲೆ ಮತ್ತು ಜ್ವಾಲಾಮುಖಿಜ ಶಿಲೆಗಳೂ ಇವೆ.

ಡಿವೋನಿಯನ್ ಶಿಲಾಸ್ತೋಮದಲ್ಲಿ ಶಿಲೆ ನಿಕ್ಷೇಪಗಳೂ ಆಳಪ್ರದೇಶದ ನಿಕ್ಷೇಪಗಳೂ ಇವೆ. ತೀರ ನಿಕ್ಷೇಪಗಳಲ್ಲಿ ಮರಳಿನ ಅಂಶ ಹೆಚ್ಚು. ಅವು ಉತ್ತರ ಡಿವೋನ್‍ಷೈರಿನಲ್ಲಿ ನಿಕ್ಷೇಪಗೊಂಡಿವೆ. ಆಳಪ್ರದೇಶದ ನಿಕ್ಷೇಪಗಳು ಡಿವೋನ್‍ಷೈರಿನ ದಕ್ಷಿಣಭಾಗದಲ್ಲಿ ನಿಕ್ಷೇಪಗೊಂಡಿವೆ. ಇವುಗಳಲ್ಲಿ ಸುಣ್ಣದ ಅಂಶವೇ ಹೆಚ್ಚು. ಈ ಎರಡು ಬಗೆಯ ನಿಕ್ಷೇಪಗಳಲ್ಲಿರುವ ಅವಶೇಷಗಳು ಸ್ವಾಭಾವಿಕವಾಗಿ ಭಿನ್ನ ರೀತಿಯವು. ಸಾಗರ ನಿಕ್ಷೇಪಗಳ ಮಧ್ಯೆ ಮೂರು ಅಂತರಗಳಲ್ಲಿ ಹಳೆ ಕೆಂಪು ಮರಳು ಶಿಲೆಯ ಪದರಗಳು ನಿಕ್ಷೇಪಗೊಂಡಿವೆ. ಇವು ಅನುಕ್ರಮವಾಗಿ ಸೀಗನಿಯನ್ (ಕೆಳ), ಕೌವಿನಿಯನ್(ಮಧ್ಯ) ಮತ್ತು ಪೆಮ್ಮೆನಿಯನ್ (ಮೇಲೆ) ಕಾಲದವು. ಆದ್ದರಿಂದ ಡಿವೋನಿಯನ್ ಶಿಲಾಸ್ತೋಮದ ಎರಡು ನಿಕ್ಷೇಪ ಮುಖಗಳನ್ನು ಪರಸ್ಪರ ಹೋಲಿಸಲು ಸಾಧ್ಯವಾಗಿದೆ. ಯೂರೋಪ್ ಖಂಡದಲ್ಲಿ ಫ್ರಾನ್ಸ್, ಬೆಲ್ಜಿಯಮ್, ರ್ಹೈನ್ ಲ್ಯಾಂಡ್, ಜರ್ಮನಿ ಮುಂತಾದ ಕಡೆ ಡಿವೋನಿಯನ್ ಶಿಲಾಸ್ತೋಮಗಳ ಅತ್ಯುತ್ತಮ ರೀತಿಯಲ್ಲಿ ರೂಪುಗೊಂಡಿವೆ. ಅವು ಅಷ್ಟು ಕಲಕಿಕೊಂಡೂ ಇಲ್ಲ. ಆದ್ದರಿಂದ ಅವನ್ನು ಮಾದರಿ ಶಿಲಾಸ್ತೋಮಗಳಾಗಿ ಪರಿಗಣಿಸಲಾಗಿದೆ. ಬೆಲ್ಜಿಯಮ್ ಮತ್ತು ಈ ಫೆಲ್ ಪ್ರಾಂತಗಳ ಶಿಲಾವಿಭಜನೆ ಈ ರೀತಿ ಇದೆ :

ಮೇಲ್ಭಾಗ    ಪೆಮ್ಮೆನಿಯನ್ 
		 ಫ್ರಾಸ್ನಿಯನ್ 
ಮಧ್ಯಭಾಗ   ಗಿವೆಟಿಯನ್ 
		 ಈಫೆಲಿಯನ್-ಕೌವಿನಿಯನ್ 
ಕೆಳಭಾಗ    ಕಾಬ್ಲೆನ್ಜಿಯನ್  	ಎಮ್ಸಿಯನ್ 
		 ಗೆಡಿನ್ನಿಯನ್  	ಸೀಗನಿಯನ್ 

ಉತ್ತರ ಅಮೆರಿಕ[ಬದಲಾಯಿಸಿ]

ಇಲ್ಲಿ ಡಿವೋನಿಯನ್ ಕಲ್ಪದ ಪ್ರಾರಂಭ ಶಾಂತ ವಾತಾವರಣದಲ್ಲಿ ಆಯಿತು. ಆಪಲೇಚಿಯನ್ ಪರ್ವತಸ್ತೋಮಗಳನ್ನು ಬಿಟ್ಟರೆ ಭೂ ಮೇಲ್ಮೈಲಕ್ಷಣ ಸಮತಲವಾಗಿತ್ತು. ಡಿವೋನಿಯನ್ ಕಲ್ಪದ ಆದಿಯಲ್ಲಿ ಅಟ್ಲಾಂಟಿಕ್ ಸಾಗರ ಅಪಲೇಚಿಯನ್ ಪರ್ವತಗಳ ಪಶ್ಚಿಮದ ತಗ್ಗು ಪ್ರದೇಶವನ್ನು ಆಕ್ರಮಿಸಿತು. ಮೊದಲನೆಯ ಹಂತದಲ್ಲಿ ನ್ಯೂಫೌಂಡ್‍ಲೆಂಡಿನಿಂದ ನ್ಯೂಯಾರ್ಕ್ ವರೆಗೆ ಆಕ್ರಮಿಸಿ ಡಿವೋನಿಯನ್ ಮಧ್ಯ ಕಾಲದಲ್ಲಿ ಮಿಸ್ಸಿಸಿಪಿಯವರೆಗೆ ವ್ಯಾಪಿಸಿತು. ಈ ಕಾಲದಲ್ಲಿಯೇ ಉತ್ತರದಿಂದ ಆರ್ಕ್‍ಟಿಕ್ ಸಾಗರ ಕೆನಡದ ಭಾಗವನ್ನೂ ಪೆಸಿಫಿಕ್ ಸಾಗರ ದಕ್ಷಿಣ ಭಾಗವನ್ನೂ ಆಕ್ರಮಿಸಿ ಅವೆರಡೂ ಯೂಟಾ ಮತ್ತು ನವೇಡ ಹತ್ತಿರ ಸಂಧಿಸಿದುವು. ಹೀಗೆ ಮಧ್ಯ ಡಿವೋನಿಯನ್ ಕೆಳಕಲ್ಪದಲ್ಲಿ ಆಪಲೇಚಿಯನ್ ಪ್ರದೇಶದಲ್ಲಿ ಮಾತ್ರವಲ್ಲದೆ ಪಶ್ಚಿಮದಲ್ಲಿ ಮಿಚಿಗನ್ ಮತ್ತು ಕಾರ್ಡಿಲೆರಾನ್ ಪ್ರದೇಶಗಳಲ್ಲಿ ನಿಕ್ಷೇಪ ಕಾರ್ಯ ನಡೆಯಿತು. ಈ ಪ್ರದೇಶಗಳ ನಡುವೆ ಪರಸ್ಪರ ಸಂಪರ್ಕ ಇರಲಿಲ್ಲವಾದ್ದರಿಂದಲೂ ಇವು ಬೇರೆ ಜೀವಿಪ್ರಾಂತಗಳಿಗೆ ಸೇರಿದವುಗಳಾದ್ದರಿಂದಲೂ ಶಿಲಾಸಂಯೋಜನೆ ಮತ್ತು ಜೀವ್ಯವಶೇಷಗಳಲ್ಲಿ ಭಿನ್ನತೆ ಉಂಟು.

ಮಧ್ಯ ಡಿವೋನಿಯನ್ ಕಲ್ಪದಲ್ಲಿ ಆಪಲೇಚಿಯನ್ ಪ್ರದೇಶದಲ್ಲಿ ಆಗಾಧವಾದ ಭೂಚಲನೆ ಆಗಿ ಅದರ ಪರಿಣಾಮವಾಗಿ ಆಕೆಡಿಯನ್ ಪರ್ವತಸ್ತೋಮಗಳ ಉದಯವಾಯಿತು. ಇವು ಆಪಲೇಚಿಯನ್ ಪರ್ವತಗಳ ಎರಡನೆಯ ತಲೆಮಾರಿನ ಪರ್ವತಗಳು. ಈ ಅವಧಿಯಲ್ಲಿ ಹೆಚ್ಚು ಪ್ರಮಾಣದ ಶಿಲಾರಸ ಹೊರಹೊಮ್ಮಿ ಕ್ವಿಬೆಕ್‍ನ ದಕ್ಷಿಣ ಭಾಗ, ಗಾಸ್ಪ್, ನ್ಯೂ ಬ್ರನ್ಸ್‍ವಿಕ್ ಮತ್ತು ಮೇನ್ ಪ್ರಾಂತಗಳನ್ನು ಆವರಿಸಿಕೊಂಡಿತು. ಮೇನ್ ಮತ್ತು ಇತರೆಡೆಗಳಲ್ಲಿ ಶಿಲಾರಸದ ಹೊರಹೊಮ್ಮುವಿಕೆಗೆ ಸಂಬಂಧಿಸಿದ ಡೈಕುಗಳು ಇವೆ. ಆಕೆಡಿಯನ್ ಪರ್ವತೋದಯ ಆ ಪ್ರದೇಶದ ನದಿಗಳಿಗೆ ಹೊಸ ಜೀವ ತುಂಬಿದಂತಾಯಿತು. ಅವು ಮೆಕ್ಕಲನ್ನು ತಂದು ಆಪಲೇಚಿಯನ್ ತಗ್ಗುಪ್ರದೇಶವನ್ನು ಮುಚ್ಚಿ ನದೀಮುಖಜ ಭೂಮಿಗಳನ್ನು ಸ್ಥಾಪಿಸಿದುವು. ಇಂಥವುಗಳಲ್ಲಿ ನ್ಯೂಯಾರ್ಕ್ ಮತ್ತು ಪೆನ್ಸಿಲ್ವೇನಿಯ ಪ್ರದೇಶಗಳಲ್ಲಿರುವ ಕ್ಯಾಟಸ್ಕಿಲ್ ಮುಖಜಭೂಮಿ ಒಂದು. ಉತ್ತರ ಅಮೆರಿಕದ ಡಿವೋನಿಯನ್ ಶಿಲಾಸ್ತೋಮ ನ್ಯೂಯಾರ್ಕ್ ಪ್ರಾಂತದಲ್ಲಿ ಉತ್ತಮವಾಗಿ ನಿಕ್ಷೇಪಗೊಂಡಿದೆ. ಇದು ಆ ಖಂಡಕ್ಕೆ ಮಾದರಿ ಶಿಲಾಸ್ತೋಮ. ಇದನ್ನು ಜೀವ್ಯವಶೇಷಗಳ ಆಧಾರದ ಮೇಲೆ ಮೂರು ಭಾಗಗಳನ್ನಾಗಿ ವಿಭಜಿಸಿ ಆ ಭಾಗಗಳನ್ನು ಯೂರೋಪಿನ ಶಿಲಾಸ್ತೋಮದ ಮೂರು ಭಾಗಗಳಿಗೆ ಅನುಕ್ರಮವಾಗಿ ಹೊಂದಿಸಿದ್ದಾರೆ.

ಇಂಡಿಯ[ಬದಲಾಯಿಸಿ]

ಇಲ್ಲಿ ಸ್ಪತಿ, ಕುಮಾವ್, ಕಾಶ್ಮೀರದ ಲಿಡಾರ್ ಕಣಿವೆ ಮುಂತಾದ ಕಡೆಗಳಲ್ಲಿ ಸೈಲೂರಿಯನ್ ಕಲ್ಪದ ಪೆಂಟಮೀರಸ್ ಒಬ್ಲಾಂಗ ಪದರಗಳ ಮೇಲೆ ಅನುರೂಪ್ಯತೆಯಿಂದ ಸುಮಾರು 500' ಯಿಂದ 1500' ದಪ್ಪದ ಬಿಳಿ ಬೆಣಚು ಶಿಲೆ ನಿಕ್ಷೇಪಗೊಂಡಿವೆ. ಇದರ ಮೇಲೆ ಕಾರ್ಬಾನಿಫೆರಸ್ ಕಲ್ಪದ ಆದಿಕಾಲದ ಶಿಲೆಗಳು ನಿಕ್ಷೇಪಗೊಂಡಿವೆ. ಈ ಬೆಣಚುಶಿಲೆಗಳು ಸ್ಪಿತಿ ಹತ್ತಿರದ ಮತ್ ಕಣಿವೆಯಲ್ಲಿ ಪ್ರಮುಖವಾಗಿ ಹೊರಹೊಮ್ಮಿರುವುದರಿಂದ ಇವಕ್ಕೆ ಮೆತ್ ಬೆಣಚುಶಿಲೆಗಳು ಎಂದು ಹೆಸರಿಡಲಾಗಿದೆ. ಇವುಗಳಲ್ಲಿ ಜೀವ್ಯವಶೇಷಗಳಿಲ್ಲ. ಇವು ಸೆಲ್ಯೂರಿಯನ್ ಕಲ್ಪದ ಅಂತ್ಯಭಾಗವನ್ನೂ ಇಡೀ ಡಿವೋನಿಯನ್ ಕಲ್ಪವನ್ನೂ ಪ್ರತಿನಿಧಿಸುತ್ತವೆ. ಚಿತ್ರಾಲ್ ಮತ್ತು ಬರ್ಮದಲ್ಲಿ ಡಿವೋನಿಯನ್ ಕಲ್ಪವನ್ನು ಸುಣ್ಣಶಿಲೆಗಳು ಪ್ರತಿನಿಧಿಸುತ್ತವೆ. ಈ ಶಿಲಾಸ್ತೋಮಗಳಲ್ಲಿ ಆ ಕಾಲದ ಜೀವರಾಶಿ ಯಥೇಚ್ಛವಾಗಿ ಕಾದಿರಿಸಲ್ಪಟ್ಟಿದೆ.

ಡಿವೋನಿಯನ್ ಕಲ್ಪದ ಜೀವರಾಶಿ[ಬದಲಾಯಿಸಿ]

ಡಿವೋನಿಯನ್ ಕಲ್ಪದ ಜೀವರಾಶಿಯಲ್ಲಿ ಸೈಲೂರಿಯನ್ ಜೀವರಾಶಿಯ ಛಾಯೆ ಕಾಣಿಸಿದರೂ ನವೀನತೆ ಎದ್ದು ತೋರುತ್ತದೆ. ಸೈಲೂರಿಯನ್ ಜೀವರಾಶಿಯ ಪ್ರಮುಖ ಜೀವಿಗುಂಪುಗಳೂ ಸೈಲೂರಿಯನ್ ಕಲ್ಪದ ಅಂತ್ಯದಲ್ಲಿ ಪೂರ್ಣವಾಗಿ ವಂಶನಷ್ಟ ಹೊಂದಿದುವು. ಇನ್ನೂ ಕೆಲವು ತೀವ್ರ ಇಳಿಮುಖವಾಗಿ ಪ್ರಾಮುಖ್ಯವನ್ನು ಕಳೆದುಕೊಂಡವು. ಕೆಲವು ಜೀವಿಗುಂಪುಗಳು ಪರಿವರ್ಧಿಸಿ ಪ್ರಮುಖಸ್ಥಾನವನ್ನು ಗಳಿಸಿಕೊಂಡಿರುವುದೂ ವ್ಯಕ್ತವಾಗುತ್ತದೆ. ಸೈಲೂರಿಯನ್ ಕಲ್ಪದಲ್ಲಿ ನಾನಾಕಡೆಗಳಲ್ಲಿ ನೆಲೆಸಿ ಎಲ್ಲ ಗುಂಪುಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿದ್ದ ಗ್ರಾಪ್ಟೊಲೈಟುಗಳು ಡಿವೋನಿಯನ್ ಪ್ರಾರಂಭಕ್ಕೆ ಮುಂಚೆ ಹೇಳ ಹೆಸರಿಲ್ಲದಂತೆ ಆದುವು. ಟ್ರೈಲೊಬೈಟ್‍ಗಳು ಗಣನೀಯ ಪರಿವರ್ಥನೆಯಿಲ್ಲದೆ ಉಳಿದವಾದರೂ ಅವುಗಳ ಸಂಖ್ಯೆ ಬಲುಮಿತಿಗೊಂಡಿತು. ಟ್ರಾಟಾಸ್ಪಿಸ್ ಮತ್ತು ಹೆಮಿಯಾರ್ಗಿಸ್ ಎಂಬ ಜಾತಿಯ ಟ್ರೈಲೊಬೈಟುಗಳು ಮುಳ್ಳುಗಳನ್ನು ಪಡೆದು ಭಯಂಕರವಾಗಿ ಕಾಣುತ್ತಿದ್ದುವು. ಇವು ಟ್ರೈಲೊಬೈಟುಗಳ ಅವನತಿಯ ಸ್ಪಷ್ಟ ಕುರುಹು. ಸೈಲೂರಿಯನ್ ಕಲ್ಪದಿಂದ ಡಿವೋನಿಯನ್ ಕಲ್ಪಕ್ಕೆ ಮುಂದುವರಿದವುಗಳಲ್ಲಿ ಫೆಕಾಪ್ಸ್ ಮತ್ತು ಟ್ರೈಮೆರೊಕೆಪಲಸ್ ಮುಖ್ಯವಾದವು. ಹೊಮೊಲೊನೊಟಸ್ ಜಾತಿ ಬಹುಸಂಖ್ಯೆಯಿಂದ ಕೂಡಿತ್ತು. ದಪ್ಪರುಂಡದ ಹಾರ್ಪೆಸ್ ಮತ್ತು ದೊಡ್ಡ ಕಿಬ್ಬೊಟ್ಟೆಯ ಬ್ರಾಂಟೆಸ್ ಈ ಕಾಲದ ವಿಶಿಷ್ಟ ಟ್ರೈಲೊಬೈಟ್‍ಗಳು, ಸಾಗರದ ನೀರು ಸ್ವಚ್ಛವಾಗಿದ್ದ ಕಡೆಗಳಲ್ಲೆಲ್ಲ ಹವಳಗಳು ದಿಬ್ಬಗಳನ್ನು ರಚಿಸಿರುತ್ತವೆ. ಸ್ಟ್ರೊಮಟೊಪೋರ, ಬ್ರಯೋಜೋವ ಮತ್ತು ಕ್ರೈನಾಯಿಡ್ ಜಾತಿಯ ಪ್ರಾಣಿಗಳ ಕೊಡುಗೆಯೂ ಇಂಥ ದಿಬ್ಬಗಳಿಗೆ ಗಣನೀಯ ಪರಮಾಣದಲ್ಲಿದೆ. ಹವಳ ದಿಬ್ಬಗಳಲ್ಲಿ ಫೆವೊಸೈಟಿಸ್, ಅಸೆರ್ವುಲೇರಿಯ, ಸಯತೋಫಿಲ್ಲಮ್ ಪ್ರಿಸ್ಮೆಟೋಫಿಲ್ಲ ಮತ್ತು ಫಿಲಿಪ್ಸಾಸ್ಟ್ರಿಯಗಳ ಅವಶೇಷಗಳು ಹೇರಳವಾಗಿವೆ. ಜಫ್ರಾಂಟಿಸ್, ಸಿಸ್ಟಿಫಿಲ್ಲಮ್, ಹೆಲಿಯೊ ಫಿಲ್ಲಮ್ ಮತ್ತು ಕ್ಯಾಲ್ಸಿಯೋಲ ಸ್ಯಾಂಡಲೈನ-ಇವು ಆ ಕಾಲದಲ್ಲಿದ್ದ ರೂಗೋಸ ಹವಳಗಳು. ಕೊನೆಯದು ಮಧ್ಯ ಡಿವೋನಿಯನ್ ಶಿಲೆಗಳ ವೈಶಿಷ್ಟ್ಯ ಅವಶೇಷ. ಡಿವೋನಿಯನ್ ಕಲ್ಪದಲ್ಲಿ ಸಿಸ್ಟಿಡ್‍ಗಳು ಅವನತಿಗೊಂಡವು. ಆದರೆ ಎಕಿನಾಯಿಡ್, ಕ್ರೈನಾಯಿಡ್ ಮತ್ತು ಬ್ಲಾಸ್ಟಾಯಿಡ್‍ಗಳು ಉನ್ನತಿಯ ತುದಿ ಮುಟ್ಟಿದುವು. ಅಥಿರಿಸ್ ಮತ್ತು ಸ್ಟಿರಿಫೆರ್‍ಗಳು, ಅದರಲ್ಲಿಯೂ ಸ್ಪಿರಿಫೆರ್‍ಗಳು, ಹೆಚ್ಚು ಸಂಖ್ಯೆಯಲ್ಲಿದ್ದುವು. ಟೆರಿಬ್ರಾಟ್ಯುಲ ಮೊದಲ ಬಾರಿಗೆ ಕಾಣಿಸಿಕೊಂಡಿತು. ಕಪ್ಪೆಚಿಪ್ಪು ಪ್ರಾಣಿಗಳೂ ಕಿಫಾಲೊಪೊಡ ಜಾತಿಯ ಪ್ರಾಣಿಗಳೂ ಅಭಿವೃದ್ಧಿಮಾರ್ಗದಲ್ಲಿ ನಡೆದವು. ಮೆಗಲೊಡಾನ್ ಮತ್ತು ಟಿರಿನ ಜಾತಿಯ ಕಪ್ಪೆಚಿಪ್ಪುಗಳ ಪ್ರಾಣಿಗಳು ಹೇರಳವಾಗಿದ್ದುವು. ಆರ್ಥೊಸೆರಾಸ್, ಸಿರ್ಟೊಸೆರಾಸ್, ಬ್ರ್ಯಾಕ್ಟರೈಟಿಸ್, ನಾಟಿಲಸ್-ಇವು ಈ ಕಲ್ಪದ ಕಿಫಾಲೊಪೊಡ ವರ್ಗದ ಪ್ರಾಣಿಗಳು. ಗೋನಿಯ ಟೈಟಿಸ್ ಮೊದಲ ಬಾರಿಗೆ ಕಾಣಿಸಿದುದು ಕಿಫಾಲೊಪೋಡ ಜಾತಿಯ ಬೆಳೆವಣಿಗೆಯಲ್ಲಿ ಒಂದು ಮುಖ್ಯ ಹೆಜ್ಜೆ. ಆಸ್ಟ್ರಕೋಡ ಜಾತಿಯ ಪ್ರಾಣಿಗಳೂ ಹೆಚ್ಚಾಗಿದ್ದು ಎಂಟೊಮಿಸ್ ಒಂದು ವಿಶಿಷ್ಟ ಅವಶೇಷವಾಗಿದೆ. ನದಿ ಕೊಳಗಳಲ್ಲಿ ಯೂರಿಪ್ಟರಿಸ್ ಎಂಬ ಚೇಳು ಜಾತಿಯ ಪ್ರಾಣಿಗಳು ನೆಲೆಸಿದ್ದುವು. ಅವು ಬಲು ದೊಡ್ಡವಾಗಿದ್ದವು. ಮತ್ಸ್ಯಗಳೂ ಹೇರಳವಾಗಿದ್ದುವು. ಇವೆಲ್ಲ ವಂಶನಷ್ಟ ಹೊಂದಿದ ಆಸ್ಟ್ರಕೊಡರ್ಮ್ ಎಂಬ ಮತ್ಸ್ಯ ಜಾತಿಗೆ ಸೇರಿದಂಥವು. ಭೂಮಿ ಮೊದಲ ಬಾರಿಗೆ ಸಸ್ಯ ಹೊದಿಕೆಯನ್ನು ಪಡೆದಿತ್ತು. ಈ ಸಸ್ಯಗಳು ಬೇರು ಎಲೆಗಳಿಲ್ಲದೆ ವಿಕಾಸಪಥದಲ್ಲಿ ಬಲು ಕೆಳದರ್ಜೆಗೆ ಸೇರಿದ ಸಿಲೊಪೈಟೀಲಿಸ್ ಸಸ್ಯ ಗುಂಪಿಗೆ ಸೇರಿದಂಥವು. ರೈನಿಯ, ಹಾರ್ನಿಯ ಮತ್ತು ಆಸ್ಟೆರೊಕ್ಸೈಲಾನ್ ಇವುಗಳಲ್ಲಿ ಮುಖ್ಯವಾದವು.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: