ವಿಷಯಕ್ಕೆ ಹೋಗು

ತಾಷ್ಕೆಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಟಾಶ್ಕೆಂಟ್ ಇಂದ ಪುನರ್ನಿರ್ದೇಶಿತ)
ತಾಷ್ಕೆಂಟ್
ತಾಷ್ಕೆಂಟ್ ನಗರದ ಆಕಾಶನೋಟ
ತಾಷ್ಕೆಂಟ್ ನಗರದ ಆಕಾಶನೋಟ
ದೇಶ ಉಜ್ಬೇಕಿಸ್ಥಾನ್
ಪ್ರಾಂತ್ಯತಾಷ್ಕೆಂಟ್ ಪ್ರಾಂತ್ಯ
ಸ್ಥಾಪನೆ೫ರಿಂದ ೩ನೆಯ ಬಿ.ಸಿ ಶತಮಾನ
Population
 (೨೦೦೬)
 • Total೧೯,೬೭,೮೭೯
ಸಮಯ ವಲಯಯುಟಿಸಿ+5 ( )
ಜಾಲತಾಣhttp://www.tashvil.gov.uz/

ತಾಷ್ಕೆಂಟ್ (ಉಜ್ಬೇಕ್ ಭಾಷೆ:Toshkent, Тошкент ರಷ್ಯನ್ ಭಾಷೆ:Ташкент) ಉಜ್ಬೇಕಿಸ್ಥಾನ್ ದೇಶದ ರಾಜಧಾನಿ ನಗರ. ಈ ನಗರದ ಜನಸಂಖ್ಯೆ ಸುಮಾರು ೨.೧ ದಶಲಕ್ಷ.

ಭೌಗೋಳಿಕ ಸ್ಥಾನ

[ಬದಲಾಯಿಸಿ]

ಇದು ಟಿಯೆನ್- ಷಾನ್ ಪರ್ವತದ ವಾಯವ್ಯ ಅಂಚಿನಲ್ಲಿ, ಸಿರ್- ದಾರ್ಯಾ ನದಿಯ ನಡುದಂಡೆಯ ಪ್ರದೇಶದಲ್ಲಿದೆ. ಇದರ ಹೆಚ್ಚು ಭಾಗ ಸಿರ್- ದಾರ್ಯಾ. ಆಂಗ್ರೆನ್ ಮತ್ತು ಚಿರ್‍ಚೀಕ್ ನದಿಗಳಿಂದಾದ ಮೈದಾನ. ಸಿರ್- ದಾರ್ಯಾ ಈ ಪ್ರದೇಶದ ನೈಋತ್ಯ ಎಲ್ಲೆಯಲ್ಲಿದೆ. ಇದರ ಈಶಾನ್ಯಭಾಗ ಪರ್ವತಮಯ. ಅಲ್ಲಿ 14,144 ಅಡಿ (4,311 ಮೀ.) ವರೆಗೂ ಎತ್ತರವಾಗಿರುವ ಶಿಖರಗಳುಂಟು. ನೈಋತ್ಯ ಭಾಗ ಮೈದಾನ. ಇಲ್ಲಿಯದು ಖಂಡಾಂತರ ವಾಯುಗುಣ. ಚಳಿಗಾಲ ತೀವ್ರವಲ್ಲ; ಬೇಸಗೆ ಬಲಿ ದೀರ್ಘ, ಶುಷ್ಕ, ತೀವ್ರ ಉಷ್ಣತೆಯಿಂದ ಕೂಡಿದ್ದು. ವಾರ್ಷಿಕ ಅವಪಾತ 300 ರಿಂದ 700 ಮಿಮೀ. ವರೆಗೆ (12"-28") ಸ್ಥಳಾನುಗುಣವಾಗಿ ವ್ಯತ್ಯಾಸವಾಗುತ್ತದೆ.

ವ್ಯವಸಾಯ

[ಬದಲಾಯಿಸಿ]

ಈ ಪ್ರದೇಶದಲ್ಲಿ ಒಟ್ಟು 1,55,000 ಹೆಕ್ಟೇರ್‍ಗಳಷ್ಟು ನೆಲ ವ್ಯವಸಾಯಕ್ಕೆ ಒಳಪಟ್ಟಿದೆ. ಪ್ರಮುಖ ಬೆಳೆಗಳು ಹತ್ತಿ, ಸೆಣಬು, ತರಕಾರಿ, ಹಣ್ಣು ಮತ್ತು ನಾರು. ಉಜ್‍ಬೆಕ್‍ನ ಒಟ್ಟು ಹತ್ತಿಯಲ್ಲಿ ಶೇ. 20ರಷ್ಟು ಇಲ್ಲಿ ಬೆಳೆಯುತ್ತದೆ. ಪರ್ವತ ಪಾಶ್ರ್ವಗಳಲ್ಲೂ ಅಡಿಬೆಟ್ಟಗಳಲ್ಲೂ ರೇಷ್ಮೆ ಸಾಕಣೆ ಮತ್ತು ಪಶುಪಾಲನೆ ನಡೆಯುತ್ತವೆ. ಮರುಭೂಮಿ ಮತ್ತು ಅರೆಮರುಭೂಮಿ ಪ್ರದೇಶಗಳಲ್ಲಿ ಕುರಿ ಸಾಕುತ್ತಾರೆ.

ಕೈಗಾರಿಕೆ

[ಬದಲಾಯಿಸಿ]

ಇದು ಕೈಗಾರಿಕೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ. ತಾಷ್ಕೆಂಟ್ ನಗರದಲ್ಲಿರುವ ಯಂತ್ರ ನಿರ್ಮಾಣ, ಆಹಾರ ಸಂಸ್ಕರಣ ಮುಂತಾದ ಅನೇಕ ಕೈಗಾರಿಕೆಗಳ ಜೊತೆಗೆ ಈ ಆಬ್ಲಾಸ್ಟಿನಲ್ಲಿ ಗಣಿಗಾರಿಕೆಯೂ ಬೆಳೆದಿದೆ. ಆಂಗ್ರೆನ್‍ನಲ್ಲಿ ಕಲ್ಲಿದ್ದಲನ್ನೂ ಕಾಸ್ಟುಲಾಕ್‍ನಲ್ಲಿ ಚಿನ್ನವನ್ನೂ ತೆಗೆಯುತ್ತಾರೆ. ಕುರಾಮ ಪರ್ವತಗಳಲ್ಲಿ ತಾಮ್ರ, ಸೀಸ, ಸತು ಮುಂತಾದವು ಸಿಗುತ್ತವೆ. ಆಲ್ಮಾಲಿಕ್ ಕಬ್ಬಿಣೇತರ ಲೋಹ ಕೈಗಾರಿಕೆಗಳ ಕೇಂದ್ರ. ಬೆಕಾಬಾದ್‍ದಲ್ಲಿ ಉಕ್ಕಿನ ಕಾರ್ಖಾನೆಯಿದೆ. ಚಿರ್‍ಚೀಕ್ ಯಂತ್ರ ಕೈಗಾರಿಕಾ ಕೇಂದ್ರ. ಯಾಂಗಿಯೂಲ್‍ನಲ್ಲಿ ಲಘು ಕೈಗಾರಿಕೆಗಳು ಬೆಳೆದಿವೆ. ಚಿರ್‍ಚೀಕ್ ನದಿಯ ಮೇಲೆ ಹಲವು ಜಲವಿದ್ಯುದಾಗಾರಗಳಿವೆ.

ತಾಷ್ಕೆಂಟ್ ಅಬ್ಲಾಸ್ಟಿನಲ್ಲಿ ಒಳ್ಳೆಯ ರಸ್ತೆ ವ್ಯವಸ್ಥೆಯುಂಟು. ತಾಷ್ಕೆಂಟ್-ಟರ್ಮೆಜ್ ಮತ್ತು ತಾಷ್ಕೆಂಟ್-ದುಷಾನ್ಬೆ ಹೆದ್ದಾರಿಗಳು ಮುಖ್ಯವಾದವು, ಮಾಸ್ಕೋ-ತಾಷ್ಕೆಂಟ್ — ಕ್ರಾಸ್ನೊವಾಡ್‍ಸ್ಕ್ ರೈಲುಮಾರ್ಗ ಈ ಅಬ್ಲಾಸ್ಟಿನ ಮೂಲಕ ಹಾದುಹೋಗುತ್ತದೆ. ತಾಷ್ಕೆಂಟ್ ನಿಂದ ಚಿರ್‍ಚೀಕ್ ಮತ್ತು ಆಂಗ್ರೆನ್‍ಗೂ ರೈಲುಮಾರ್ಗಗಳಿವೆ.

ಈ ಅಬ್ಲಾಸ್ಟನ್ನು 12 ರಯಾನ್‍ಗಳಾಗಿ ವಿಭಾಗಿಸಲಾಗಿದೆ. ಇದರ ಜನಸಂಖ್ಯೆ 28,65,000 (1970), ಜನರಲ್ಲಿ ಸೇ. 40 ರಷ್ಟು ಮಂದಿ ಉeóïಬೆಕರು, 30% ರಷ್ಯನರು, ಉಳಿದವರು ತಾತಾರರು, ಕeóÁಕರು, ಕೊರಿಯನರು, ಉಕ್ರೇನಿಯರು, ಯೆಹೂದ್ಯರು ಮತ್ತು ತದ್‍ಜಿûಕರು. ಇಲ್ಲಿಯ ಮುಖ್ಯ ನಗರಗಳು ತಾಷ್ಕೆಂಟ್, ಚಿರ್‍ಚೀಕ್ (1,08,000), ಆಂಗ್ರೆನ್ (94,000), ಯಂಗೀಯೂಲ್ (56,000) ಮತ್ತು ಬೇಕಬಾದ್ (60,000) .

ತಾಷ್ಕೆಂಟ್ ನಗರ

[ಬದಲಾಯಿಸಿ]

ಈ ಅಬ್ಲಾಸ್ಟಿನ ಆಡಳಿತ ಕೇಂದ್ರ. ಜನಸಂಖ್ಯೆ 2,309,300.[]. ಇದು ಉ. ಅ. 41o 20' ಮತ್ತು ಪೂ.ರೇ 69o 18' ಮೇಲೆ ಚಿರ್‍ಚೀಕ್ ಕಣಿವೆಯಲ್ಲಿ, ಚಟ್ಕಲ್ ಪರ್ವತಗಳ ಪಶ್ಚಿಮದಲ್ಲಿ 450-480 ಮೀ. (1,475'-1,575' ) ಎತ್ತರದಲ್ಲಿದೆ. ಚಿರ್‍ಚೀಕ್ ನದಿಯ ಅನೇಕ ಕಾಲುವೆಗಳು ಈ ನಗರದ ಮೂಲಕ ಹಾದುಹೋಗಿವೆ.

ಇತಿಹಾಸ

[ಬದಲಾಯಿಸಿ]

ಕ್ರಿ . ಪೂ. 2 ಅಥವಾ 1 ನೆಯ ಶತಮಾನದಿಂದಲೇ ಈ ನಗರ ಬೆಳೆದು ಬಂದಿರಬೇಕು. ಹಿಂದೆ ಇದಕ್ಕೆ, ದ್ಸಾದ್ಸ್ಹ್ , ಚಾಚ್‍ಕೆಂಟ್, ಷಾಷ್‍ಕೆಂಟ್, ಬಿನ್‍ಕೆಂಟ್ ಎಂಬ ಹೆಸರುಗಳಿದ್ದುವು. ತಾಷ್ಕೆಂಟ್ ಎಂಬ ಹೆಸರು ಮೊಟ್ಟ ಮೊದಲಿಗೆ 11ನೆಯ ಶತಮಾನದಲ್ಲಿ ಬಳಕೆಯಾಯಿತು. ಉಜ್‍ಬೆಕ್ ಭಾóಷೆಯಲ್ಲಿ ತಾಷ್ಕೆಂಟ್ ಎಂದರೆ ಕಲ್ಲುಹಳ್ಳಿ ಎಂದು ಅರ್ಥ. ಯೂರೋಪ್ ಮತ್ತು ಪೂರ್ವದೇಶಗಳ ಕಾರವಾನ್ ಮಾರ್ಗದಲ್ಲಿ ಒಂದು ಮುಖ್ಯ ವ್ಯಾಪಾರಕೇಂದ್ರವಾಗಿದ್ದ ತಾಷ್ಕೆಂಟನ್ನು ಅರಬರು 8ನೆಯ ಶತಮಾನದಲ್ಲಿ ಆಕ್ರಮಿಸಿಕೊಂಡರು. ಅನಂತರ ಇದು ಮುಸ್ಲಿಮರ ಆಳ್ವಿಕೆಯಲ್ಲಿದ್ದು 13 ನೆಯ ಶತಮಾನದ ಆದಿಯಲ್ಲಿ ಮಂಗೋಲರ ವಶವಾಯಿತು. ಅನಂತರ ಇದನ್ನು ತಿಮೂರಿದರೂ ಷಯಬಾನಿದರೂ ಆಳಿದರು. ಆಮೇಲೆ ಸ್ವಲ್ಪ ಕಾಲ ಸ್ವತಂತ್ರವಾಗಿದ್ದಮೇಲೆ ಇದು 1814ರಲ್ಲಿ ಕೋಕಾಂಡ್‍ನ ಖಾನನ ವಶವಾಯಿತು, 1865 ರಲ್ಲಿ ರಷ್ಯನರು ಇದನ್ನು ಹಿಡಿದುಕೊಂಡರು. ಆಗ ಇದು 70,000 ಜನಸಂಖ್ಯೆಯುಳ್ಳ ಕೋಟೆ ಪಟ್ಟಣವಾಗಿತ್ತು. ರಷ್ಯದೊಂದಿಗೆ ಇದು ವಿಫÀುಲವಾಗಿ ವ್ಯಾಪಾರ ನಡೆಸುತ್ತಿತ್ತು. 1867ರಲ್ಲಿ ಇದು ತುರ್ಕಿಸ್ತಾನದ ಗವರ್ನರ್- ಜನರಲನ ಆಡಳಿತ ಕೇಂದ್ರವಾಗಿತ್ತು. ಹಳೆಯ ನಗರದ ಪಕ್ಕದಲ್ಲಿ ಹೊಸ ನಗರವೊಂದು ಬೆಳೆಯತೊಡಗಿತು. 1917ರಲ್ಲಿ ಇದರ ಮೇಲೆ ಸೋವಿಯೆತ್ ಆಡಳಿತ ಏರ್ಪಟ್ಟಿತು. ಇದು ತುರ್ಕಿಸ್ತಾನ್ ಸ್ವಯಮಾಡಳಿತ ಸೋವಿಯೆತ್ ಸಮಾಜವಾದಿ ಗಣರಾಜ್ಯದ ರಾಜಧಾನಿಯಾಯಿತು. 1924ರಲ್ಲಿ ಆ ಗಣರಾಜ್ಯವನ್ನು ವಿಭಾಗಿಸಿದಾಗ ಉಜ್‍ಬೆಕ್ ಸೋವಿಯೆತ್ ಸಮಾಜವಾದಿ ಗಣರಾಜ್ಯಕ್ಕೆ ಸಾಮರ್‍ಕಾಂದ್ ರಾಜಧಾನಿಯಾಯಿತು. ಮತ್ತೆ ತಾಷ್ಕೆಂಟ್‍ಗೆ ರಾಜಧಾನಿ ವರ್ಗವಾದ್ದು 1930ರಲ್ಲಿ.

ಸಾಂಸ್ಕೃತಿಕ

[ಬದಲಾಯಿಸಿ]

ತಾಷ್ಕೆಂಟ್ ಸೋವಿಯೆತ್ ಮಧ್ಯ ಏಷ್ಯದ ಆರ್ಥಿಕ ಸಾಂಸ್ಕøತಿಕ ಕೇಂದ್ರ. ಇಲ್ಲಿಯ ಬಹುತೇಕ ಕೈಗಾರಿಕೆಗಳು ಹತ್ತಿಗೆ ಸಂಬಂಧಿಸಿದವು. ಕೃಷಿ ಯಂತ್ರಗಳೂ ಜವಳಿ ಯಂತ್ರಗಳೂ ಜವಳಿಯೂ ಇಲ್ಲಿ ತಯಾರಾಗುತ್ತವೆ. ನಗರದಲ್ಲಿ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳೂ ಸಂಶೋಧನ ಸಂಸ್ಥೆಗಳೂ ಇವೆ. 1920ರಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯ ಮತ್ತು 1943ರಲ್ಲಿ ಆರಂಭವಾದ ಉಜ್‍ಬೆಕ್ ವಿಜ್ಞಾನ ಅಕಾಡೆಮಿಯ ಹಲವಾರು ಸಂಸ್ಥೆಗಳು ಮುಖ್ಯವಾದವು. ನವೋಯ್ ಸಾರ್ವಜನಿಕ ಗ್ರಂಥಾಲಯ, ಉಜ್‍ಬೆಕ್ ಮತ್ತು ರಷ್ಯನ್ ಭಾಷೆಗಳ ಒಂಬತ್ತು ರಂಗಮಂದಿರಗಳು, ಕಲಾ ಪ್ರಾಸಾದ, ವಸ್ತುಸಂಗ್ರಹಾಲಯಗಳು, ಉದ್ಯಾನಗಳು ಮತ್ತು ಕ್ರೀಡಾಗಾರಗಳು ಇವೆ. 1966ರಲ್ಲಿ ಸಂಭವಿಸಿದ ಭೂಕಂಪನ ಅನಂತರ ನಗರವನ್ನು ಬಹಳಮಟ್ಟಿಗೆ ಪುನರ್ನಿರ್ಮಿಸಲಾಗಿದೆ. ಆ ಭೂಕಂಪದಲ್ಲಿ ಮೂರು ಲಕ್ಷ ಜನ ನಿರ್ವಸಿತರಾದರು. ಲೆನಿನ್ ವಸ್ತುಸಂಗ್ರಹಾಲಯ ಒಂದು ಆಧುನಿಕ ಭವನ. 15,16ನೆಯ ಶತಮಾನಗಳ ಹಲವು ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲಾಗಿದೆ.

ಜನಸಂಖ್ಯಾ ವಿವರ

[ಬದಲಾಯಿಸಿ]

ನಗರದ ಜನರಲ್ಲಿ ಸೇ. 41ರಷ್ಟು ಮಂದಿ ರಷ್ಯನರು, 37% ಉಜ್ಬೇಕರು ; ಉಳಿದವರು ತಾತಾರರು, ಯೆಹೂದ್ಯರು, ಉಕ್ರೇನಿಯನರು. ಟ್ರಾನ್ಸ್-ಕ್ಯಾಸ್ಪಿಯನ್ ರೈಲುಮಾರ್ಗದೊಂದಿಗೆ ತಾಷ್ಕೆಂಟ್ ಸಂಪರ್ಕ ಹೊಂದಿದೆ. ಇಲ್ಲೊಂದು ವಿಮಾನ ನಿಲ್ದಾಣವುಂಟು. ಹಲವು ರಸ್ತೆಗಳು ಇದರ ಮೂಲಕ ಹಾದುಹೋಗುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. "Official website portal of Tashkent City". Tashkent.uz. 2013-11-18. Archived from the original on 2014-10-12. Retrieved 2017-03-26.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: