ಭಾರತೀಯ ಸಂಸ್ಕೃತಿ
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು. ಭಾರತದ ಶ್ರೇಷ್ಠ ಧಾರ್ಮಿಕ ಆಚರಣೆಗಳು, ಭಾಷೆಗಳು, ಪದ್ಧತಿ ಮತ್ತು ಸಂಪ್ರದಾಯಗಳು ಕಳೆದ ಐದು ಸಾವಿರ ವರ್ಷಗಳಿಂದ ಇದರ ಅನನ್ಯತೆಗೆ ಸಾಕ್ಷಿಯಾಗಿವೆ. ವಿವಿಧ ಧರ್ಮಗಳು ಮತ್ತು ಸಂಪ್ರದಾಯಗಳ ಸಂಯೋಜನೆಯಾಗಿರುವ ಭಾರತೀಯ ಸಂಸ್ಕೃತಿ ವಿಶ್ವದ ಇನ್ನಿತರ ಸಂಸ್ಕೃತಿಗಳ ಮೇಲೂ ತನ್ನ ಪ್ರಭಾವ ಬೀರಿದೆ.
ಧರ್ಮ
ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳಿಗೆ ಭಾರತ ಜನ್ಮ ಭೂಮಿಯಾಗಿದೆ.[೨] ವಿಶ್ವದಲ್ಲಿ ಅಬ್ರಹಾಮ್ ಧರ್ಮಗಳ ನಂತರದ ಅತ್ಯಂತ ಮಹತ್ವದ ಸ್ಥಾನ ಭಾರತೀಯ ಧರ್ಮಗಳದ್ದಾಗಿದೆ. ಇಂದು ಹಿಂದೂ ಧರ್ಮ ವಿಶ್ವದಲ್ಲೇ ೩ನೇ ಅತಿ ದೊಡ್ಡ ಧರ್ಮವಾಗಿದ್ದು, ಬೌದ್ಧಧರ್ಮ ನಾಲ್ಕನೇ ಸ್ಥಾನದಲ್ಲಿದೆ. ಈ ಎರಡೂ ಧರ್ಮದ ಒಟ್ಟು ಅನುಯಾಯಿಗಳು ೧.೪ ಶತಕೋಟಿಯನ್ನೂ ಮೀರುತ್ತಾರೆ. ಗಾಢ ಧರ್ಮ ನಿಷ್ಠ ಸಮುದಾಯಗಳು ಮತ್ತು ಸಂಸ್ಕೃತಿಯನ್ನು ಹೊಂದಿರುವ ಭಾರತ ವಿಶ್ವದಲ್ಲೇ ಅತ್ಯಂತ ಧಾರ್ಮಿಕ ವೈವಿಧ್ಯತೆಯುಳ್ಳ ದೇಶವಾಗಿದೆ. ಇಲ್ಲಿನ ಬಹುತೇಕ ಜನರ ಬದುಕಿನಲ್ಲಿ ಇಂದಿಗೂ ಧರ್ಮ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇಲ್ಲಿನ ಸುಮಾರು ೮೦.೪%ಗಿಂತ ಹೆಚ್ಚಿನ ಜನರು ಹಿಂದೂ ಧರ್ಮದವರು ಆಗಿದ್ದಾರೆ. ಇಸ್ಲಾಂ ಧರ್ಮವನ್ನು ಸುಮಾರು ೧೩.೪% ಭಾರತೀಯರು ಪಾಲಿಸುತ್ತಾರೆ.[೩] ಸಿಖ್ ಧರ್ಮ ಜೈನ ಧರ್ಮ ಮತ್ತು ವಿಶೇಷವಾಗಿ ಬೌದ್ಧ ಧರ್ಮೀಯರು ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿಶ್ವದ ನಾನಾ ಭಾಗಗಳಲ್ಲಿ ತಮ್ಮ ಪ್ರಭಾವ ಬೀರಿದ್ದಾರೆ. ವಿಶ್ವದೆಲ್ಲೆಡೆ ಇರುವ ಕ್ರೈಸ್ತ, ಝೋರಾಷ್ಟ್ರಿಯನ್, ಯಹೂದ್ಯ ಮತ್ತು ಬಹಾಯಿ ಮತಗಳ ಅನುಯಾಯಿಗಳ ಸಂಖ್ಯೆ ವಿರಳವಾದರೂ ಆ ಮತಗಳು ತಮ್ಮದೇ ಆದ ವರ್ಚಸ್ಸನ್ನು ಹೊಂದಿವೆ. ಭಾರತೀಯರ ಬದುಕಿನಲ್ಲಿ ಧರ್ಮ ಮಹತ್ವದ ಪಾತ್ರ ವಹಿಸಿದ್ದರೂ, ಅನ್ಯ ನಂಬಿಕೆಗಳಿಗೆ ತಾವು ಸಹಿಷ್ಣುಗಳೆಂಬ ಸ್ವಯಂ ಘೋಷಣೆಯೊಂದಿಗೆ ನಾಸ್ತಿಕರು ಮತ್ತು ಆಜ್ಞೇಯತಾವಾದಿಗಳೂ ಕೂಡ ಒಟ್ಟಿಗೆ ಬದುಕುತ್ತಿದ್ದಾರೆ.
ಸಮಾಜ
ಸ್ಥೂಲ ಪರಿಚಯ
ಮೇಕರ್‌ರ ಅಭಿಮತ. ಇಲ್ಲಿನ ಮಕ್ಕಳಿಗೆ ಬಾಲ್ಯದಿಂದಲೇ ಅವರ ಕರ್ತವ್ಯ ಮತ್ತು ಸ್ಥಾನಮಾನ ತಿಳಿಸಿಕೊಡುವ ಕಾರ್ಯ ಆರಂಭವಾಗುತ್ತದೆ ಎಂದು ಅವರು ಹೇಳುತ್ತಾರೆ.[೪] ದೇವರು ಅಥವಾ ಯಾವುದೇ ಅತೀತ ಶಕ್ತಿ ಬದುಕನ್ನು ನಿರ್ಧರಿಸುತ್ತದೆ ಎನ್ನುವ ಇವರ ನಂಬಿಕೆ ಇದನ್ನು ಮತ್ತಷ್ಟು ಬಲಪಡಿಸಿದೆ.[೪] ಧರ್ಮದಂತಹ ಹಲವು ವಿಭಿನ್ನತೆಗಳು ಸಂಸ್ಕೃತಿಯನ್ನು ಹೋಳು ಮಾಡಿದೆ.
ಕೌಟುಂಬಿಕ ವ್ಯವಸ್ಥೆ
ಭಾರತ ಹಲವು ಶತಮಾನಗಳಿಂದ ಅವಿಭಕ್ತ ಕುಟುಂಬ ವ್ಯವಸ್ಥೆ ಎಂಬ ರೂಢಿಗತ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ತಂದೆ-ತಾಯಿ, ಅವರ ಮಕ್ಕಳು,ಮಕ್ಕಳ ಪತ್ನಿಯರು, ಮೊಮ್ಮಕ್ಕಳು, ಮರಿಮಕ್ಕಳು. ಪೀಳಿಗೆಗಳು ಹೀಗೆ ಬೆಳೆಯುತ್ತಾ ಹೋಗುವ ಈ ವ್ಯವಸ್ಥೆಯಲ್ಲಿ ಒಂದೇ ಕುಟುಂಬದಲ್ಲಿ ಹಲವು ಪೀಳಿಗೆಯ ಜನ ಒಟ್ಟಿಗೇ ವಾಸಿಸುತ್ತಾರೆ. ಕುಟುಂಬದ ಅತ್ಯಂತ ಹಿರಿಯ ವ್ಯಕ್ತಿ, ಸಾಮಾನ್ಯವಾಗಿ ಪುರುಷ ಈ ಅವಿಭಕ್ತ ಕುಟುಂಬದ ಮುಖ್ಯಸ್ಥ. ಇವನು ಕುಟುಂಬದ ಒಳಗೆ ಬಹಳ ಮುಖ್ಯವಾದ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುವವನೂ, ನೀತಿ-ನಿಯಮಗಳನ್ನು ರೂಪಿಸುವವನೂ ಆಗಿರುತ್ತಾನೆ. ಕುಟುಂಬದ ಇತರ ಸದಸ್ಯರೆಲ್ಲರೂ ಇದಕ್ಕೆ ಬದ್ಧರಾಗಿರುತ್ತಾರೆ. ನಿಯೋಜಿತ ವಿವಾಹ, ಭಾರತೀಯ ಸಮಾಜದಲ್ಲಿ ಶತ ಶತಮಾನಗಳಿಂದಲೂ ಅಸ್ಥಿತ್ವದಲ್ಲಿರುವ ಸಂಪ್ರದಾಯವಾಗಿದೆ. ಇಂದಿಗೂ ಕೂಡ ಬಹುಸಂಖ್ಯಾತ ಭಾರತೀಯರು ನಿಯೋಜಿತ ರೀತಿಯಲ್ಲೇ ವಿವಾಹವಾಗಲು ಬಯಸುತ್ತಾರೆ. ವಧೂ-ವರರ ಪೋಷಕರೂ ಮತ್ತು ಕುಟುಂಬದ ಗೌರವಾನ್ವಿತ ವ್ಯಕ್ತಿಗಳೂ ಈ ವಿವಾಹವನ್ನು ನಿಶ್ಚಯಿಸುತ್ತಾರಾದರೂ, ವಧೂ-ವರರ ಅಭಿಪ್ರಾಯವನ್ನೂ ಕೇಳಲಾಗುತ್ತದೆ.[೫] ವಧೂ-ವರರ ವಯಸ್ಸು, ಎತ್ತರ, ವೈಯಕ್ತಿಕ ಘನತೆ ಮತ್ತು ಅಭಿರುಚಿಗಳು, ಕೌಟುಂಬಿಕ ಹಿನ್ನೆಲೆ (ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನ), ಜಾತಿ ಮತ್ತು ಜಾತಕ ಹೊಂದಾಣಿಕೆ ಮುಂತಾದ ವಿಚಾರಗಳು ಒಪ್ಪಿಗೆಯಾದ ನಂತರವಷ್ಟೇ ನಿಯೋಜಿತ ವಿವಾಹಗಳು ನಿರ್ಧಾರವಾಗುತ್ತವೆ. "ಈ ವಿದ್ಯಮಾನದ ಅರ್ಥವನ್ನು ಆಧರಿಸಿ ಈ ಅಭಿಪ್ರಾಯಗಳನ್ನು ವರ್ಗೀಕರಿಸಬಹುದು: ಸಂಪ್ರದಾಯವಾದಿಗಳಿಗೆ, ಹೆಚ್ಚುತ್ತಿರುವ ವಿಚ್ಛೇದನದ ಪ್ರಮಾಣ ಸಾಮಾಜಿಕ ಅಧಃಪತನದ ಮುನ್ಸೂಚನೆ ಎನಿಸಿದರೆ, ಕೆಲವು ಆಧುನಿಕರು ಇದು ಸ್ತ್ರೀ ಸಬಲೀಕರಣದ ಹೊಸ ಹೆಜ್ಜೆ ಎಂದು ವಾದಿಸುತ್ತಾರೆ. ಬಾಲ್ಯ ವಿವಾಹವನ್ನು ೧೮೬೦ರಲ್ಲೇ ಕಾನೂನು ಬಾಹಿರ ಎಂದು ಕಾಯಿದೆ ರಚಿಸಲಾಗಿದ್ದರೂ, ಭಾರತದ ಕೆಲವು ಗ್ರಾಮೀಣ ಭಾಗಗಳಲ್ಲಿ ಇದು ಈಗಲೂ ಚಾಲ್ತಿಯಲ್ಲಿದೆ.[೬] UNICEFನ "ಸ್ಟೇಟ್ ಆಫ್ ದಿ ವರ್ಲ್ಡ್ ಚಿಲ್ಡ್ರನ್-2009" (=ವಿಶ್ವ ಮಕ್ಕಳ ಸ್ಥಿತಿಗತಿ-2009) ವರದಿಯ ಪ್ರಕಾರ, ೨೦ರಿಂದ ೨೪ರ ವಯೋಮಾನದ ೪೭%ನಷ್ಟು ಭಾರತೀಯ ಮಹಿಳೆಯರು ಕಾನೂನುಬದ್ಧ ವಯಸ್ಸಾದ ೧೮ ವರ್ಷಕ್ಕಿಂತ ಮೊದಲೇ ವಿವಾಹವೆಂಬ ವಿಧಿಗೆ ಒಳಗಾಗುತ್ತಾರೆ. ಇದು ಗ್ರಾಮೀಣ ಭಾಗದಲ್ಲಿ ೫೬%ನಷ್ಟಿದೆ.[೭] ಅಷ್ಟೇ ಅಲ್ಲದೆ ವಿಶ್ವದಲ್ಲಿ ನಡೆಯುವ ಬಾಲ್ಯ ವಿವಾಹಗಳಲ್ಲಿ ೪೦%ನಷ್ಟು ಭಾರತದಲ್ಲೇ ಸಂಭವಿಸುತ್ತದೆ ಎಂದು ಈ ವರದಿ ಹೇಳುತ್ತದೆ.[೮] ಭಾರತೀಯರ ಹೆಸರುಗಳು ವೈವಿಧ್ಯಮಯ ಹಿನ್ನೆಲೆ ಹೊಂದಿದ್ದು, ನಾಮಕರಣ ಮಹೋತ್ಸವಗಳ ವಿಧಾನವೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಭಾರತೀಯರ ಹೆಸರುಗಳಲ್ಲಿ ಧರ್ಮ ಮತ್ತು ಜಾತಿಯ ಪ್ರಭಾವ ಸಾಕಷ್ಟಿದೆ. ಅಲ್ಲದೆ ಇಲ್ಲಿನ ಹೆಸರುಗಳು ಸಾಮಾನ್ಯವಾಗಿ ಧರ್ಮ ಇಲ್ಲವೇ ಮಹಾಕಾವ್ಯಗಳಿಂದ ಆಯ್ದುಕೊಳ್ಳಲಾಗಿದೆ. ಭಾರತೀಯರು ವ್ಯಾಪಕ ವೈವಿಧ್ಯಮಯ ಭಾಷೆಗಳನ್ನು ಮಾತನಾಡುತ್ತಾರೆ. ಸ್ತ್ರೀ ಪುರುಷರಿಬ್ಬರೂ ಕಾನೂನಿನ ದೃಷ್ಟಿಯಲ್ಲಿ ಸರಿಸಮಾನರಾಗಿದ್ದರೂ ಮತ್ತು ಲಿಂಗ ಸಮಾನತೆಯ ಧೋರಣೆ ಗಮನಾರ್ಹವಾಗಿದ್ದರೂ ಭಾರತೀಯ ಸಮಾಜದಲ್ಲಿ ಇಂದಿಗೂ ಸ್ತ್ರೀ ಪುರುಷರಿಬ್ಬರೂ ಭಿನ್ನವಾದ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸಮಾಜದಲ್ಲಿ ಬಹುತೇಕ ಮಹಿಳೆಯರನ್ನು ಗೃಹಕೃತ್ಯ ಮತ್ತು ಪ್ರತಿಫಲವಿಲ್ಲದ ಸಮುದಾಯ ಸೇವಾಕಾರ್ಯಗಳಿಗಷ್ಟೇ ಸೀಮಿತಗೊಳಿಸಲಾಗಿದೆ.[೪] ಇಂಥ ಅಲ್ಪ ಭಾಗೀದಾರಿಕೆಗೆ ಹಲವಾರು ತಾತ್ವಿಕ ಮತ್ತು ಐತಿಹಾಸಿಕ ಕಾರಣಗಳಿವೆ. ಇಲ್ಲಿ ಮಹಿಳೆಯರು ಮತ್ತು ಅವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಿಂಬಿಸಲು ಸುದ್ದಿ ಮಾಧ್ಯಮಗಳು ನೀಡುವ ಸಮಯ ಕೇವಲ ೭-೧೪%ಮಾತ್ರ.[೪] ಬಹುತೇಕ ಭಾರತೀಯ ಕುಟುಂಬಗಳಲ್ಲಿ ಮಹಿಳೆಗೆ ತನ್ನದೇ ಹೆಸರಿನಲ್ಲಿ ಯಾವುದೇ ಆಸ್ತಿ-ಪಾಸ್ತಿ ಇರುವುದಿಲ್ಲ. ಮಹಿಳಾ ಸಬಲೀಕರಣಕ್ಕಾಗಿ ರೂಪಿಸಲಾಗಿರುವ ಕಾನೂನುಗಳು ಸಮರ್ಪಕವಾಗಿ ಜಾರಿಯಾಗದ ಕಾರಣ ಆಸ್ತಿ-ಪಾಸ್ತಿಯಲ್ಲಿ ಅವಳಿಗೆ ಸಲ್ಲಬೇಕಾದ ಭಾಗ ಸಲ್ಲುತ್ತಿಲ್ಲ.[೯] ಹಲವು ಕುಟುಂಬಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು ಪೌಷ್ಟಿಕಾಂಶದ ವಿಚಾರದಲ್ಲಿ ತಾರತಮ್ಯಕ್ಕೆ ಈಡಾಗಿದ್ದಾರೆ. ಹೀಗಾಗಿ ಇವರು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.[೧೦] ಇವರು ಇಂದಿಗೂ ಆದಾಯ ಮತ್ತು ಔದ್ಯೋಗಿಕ ಸ್ಥಾನಮಾನಗಳಲ್ಲಿ ಪುರುಷರಿಗಿಂತ ಹಿಂದೆ ಬಿದ್ದಿದ್ದಾರೆ. ಫೆಮಿನಾ , ಗೃಹಶೋಭಾ ಮತ್ತು ವುಮನ್ಸ್ ಎರಾ ಇಲ್ಲಿನ ಜನಪ್ರಿಯ ಮತ್ತು ಪ್ರಭಾವಿ ಮಹಿಳಾ ನಿಯತಕಾಲಿಕಗಳು.
ಪ್ರಾಣಿ ವೈವಿಧ್ಯ
ವೈವಿಧ್ಯಮಯ ಮತ್ತು ಸಮೃದ್ಧ ಪ್ರಾಣಿ ಪ್ರಭೇಧವೂ ಕೂಡ ಭಾರತಿಯ ಸಂಸ್ಕೃತಿಯ ಮೇಲೆ ತನ್ನ ಗಾಢ ಪ್ರಭಾವ ಬೀರಿದೆ. ಕಾಡಿಗೆ ಭಾರತದಲ್ಲಿರುವ ಬಹಳ ಸಾಮಾನ್ಯ ಮತ್ತು ಜನಪ್ರಿಯ ಹೆಸರೆಂದರೆ ಜಂಗಲ್. ವಸಾಹತುವಾದಿ ಬ್ರಿಟಿಷ್‌ರು ಈ ಪದವನ್ನು ಇಂಗ್ಲಿಷ್ ಭಾಷೆಗೆ ಸೇರಿಸಿಕೊಂಡರು. ರುದ್‌ಯಾರ್ಡ್ ಕಿಪ್ಲಿಂಗ್ ಬರೆದ ದಿ ಜಂಗಲ್ ಬುಕ್ ಎನ್ನುವ ಹೆಸರಿನ ಪುಸ್ತಕದಿಂದಾಗಿ ಈ ಪದ ಸಾಕಷ್ಟು ಜನಪ್ರಿಯವಾಯಿತು. ಪಂಚತಂತ್ರ ಮತ್ತು ಜಾತಕ ಕಥೆಗಳು ಸೇರಿದಂತೆ ಅಸಂಖ್ಯಾತ ನೀತಿಕಥೆಗಳ ಅಥವಾ ಕಲ್ಪಿತ ಕಥೆಗಳಿಗೆ ಭಾರತದ ಪ್ರಾಣಿ ಪ್ರಪಂಚ ಕಥಾ ವಸ್ತುವನ್ನು ಒದಗಿಸಿದೆ. ಹಿಂದೂ ಧರ್ಮದಲ್ಲಿ ಹಸು ಅಹಿಂಸೆಯ ಪ್ರತೀಕ , ಇದನ್ನು ಮಾತೃದೇವತೆ ಎಂದೂ ಕರೆಯಲಾಗಿದೆ. ಹಸುವಿಗೆ ಕಾಮಧೇನು ಎನ್ನುವ ಹೆಸರಿದೆ, ಉತ್ತಮ ಭವಿಷ್ಯ ಮತ್ತು ಸಂಪತ್ತಿನ ಸಂಕೇತವಾದ ಹಸುವಿಗೆ ಇಲ್ಲಿ ಪೂಜ್ಯ ಸ್ಥಾನ. ಈ ಕಾರಣದಿಂದಾಗಿ ಹಿಂದೂ ಸಂಸ್ಕೃತಿಯು ಹಸುವನ್ನು ಪವಿತ್ರವೆಂದು ಪರಿಗಣಿಸಿದೆ. ಹಸುವಿಗೆ ಮೇವು ಹಾಕುವುದೂ ದೇವರ ಪೂಜೆಯ ಒಂದು ವಿಧಾನ ಎಂದು ಬಗೆಯಲಾಗಿದೆ.
ನಮಸ್ತೆ
ನಮಸ್ತೆ , ನಮಸ್ಕಾರ್ ಅಥವಾ ನಮಸ್ಕಾರಮ್ ಎನ್ನುವ ಪದಗಳು ವಿನಯಪೂರ್ವಕ ಅಥವಾ ಗೌರವ ಸಂಬೋಧನೆಯ ಪ್ರತೀಕಗಳಾಗಿ ಭಾರತ ಉಪಖಂಡದ ಜನರ ಆಡುಮಾತಿನಲ್ಲಿ ಬಳಕೆಯಾಗುತ್ತಿದೆ. ನಮಸ್ಕಾರ್ ಪದ ನಮಸ್ತೆ ಪದಕ್ಕಿಂತ ಹೆಚ್ಚು ಔಪಚಾರಿಕವಾದದ್ದು. ಆದರೆ ಈ ಎರಡೂ ಪದಗಳು ವಿನಮ್ರ ಗೌರವವನ್ನು ಸೂಚಿಸುತ್ತವೆ. ಹಿಂದೂ, ಜೈನ ಮತ್ತು ಬೌದ್ಧ ಸಮುದಾದಯಕ್ಕೆ ಸೇರಿದ ಭಾರತ ಮತ್ತು ನೇಪಾಳದ ಜನ ಈ ಪದಗಳನ್ನು ಅತ್ಯಂತ ಸರ್ವೇಸಾಮಾನ್ಯವಾಗಿ ಬಳಸುತ್ತಾರೆ. ಭಾರತ ಉಪಖಂಡದಾಚೆಗೂ ಕೆಲವರು ಇವನ್ನು ಬಳಸುವುದುಂಟು. ಭಾರತ ಮತ್ತು ನೇಪಾಳಿ ಸಂಸ್ಕೃತಿಯಲ್ಲಿ, ಲಖಿತ ಪತ್ರವ್ಯವಹಾರದ ಆರಂಭದಲ್ಲಿ ಅಥವಾ ಆಡುಭಾಷೆಯ ಮೊದಲ ನುಡಿಯಾಗಿ ನಮಸ್ಕಾರ್ ಅಥವಾ ನಮಸ್ಕಾರ ಪದ ಬಳಕೆಯಾಗುತ್ತದೆ. ಎರಡೂ ಕೈಗಳು ಒಟ್ಟಿಗೆ ಬಂಧಿಸಿರುವ ಚಿಹ್ನೆ ನಿರ್ಗಮನದ ಭಾವನೆಯನ್ನು ಮೌನವಾಗಿ ಸೂಚಿಸುತ್ತದೆ. "ನನ್ನಲ್ಲಿರುವ ಪ್ರಕಾಶ ನಿನ್ನಲ್ಲಿರುವ ಪ್ರಭೆಯನ್ನು ಬೆಳಗುತ್ತದೆ" ಎಂಬ ಅರ್ಥದಲ್ಲಿ ಯೋಗ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮಧ್ಯೆ ನಮಸ್ತೆ ಪದ ಪರಸ್ಪರ ವಿನಿಮಯವಾಗುತ್ತದೆ. "ನಾನು ನಿನಗೆ ಬಾಗುತ್ತೇನೆ ಅಥವಾ ಶರಣಾಗುತ್ತೇನೆ" ಎಂಬುದೇ ಇದರ ಪದಶಃ ಅರ್ಥ. ತಲೆಬಾಗು, ಪ್ರಣಾಮ, ಪೂಜ್ಯ ವಂದನೆ, ಮತ್ತು ಗೌರವ (te): ಎಂಬೆಲ್ಲ ಅರ್ಥ ಕೊಡುವ ನಮಸ್ಕಾರ ನಮಸ್ ಎಂಬ ಸಂಸ್ಕೃತ ಪದದಿಂದ ನಿಷ್ಪನ್ನ ಹೊಂದಿದೆ.
ಹಬ್ಬಗಳು
ವಿವಿಧ ಧರ್ಮಗಳ ಬೀಡಾಗಿರುವ ಭಾರತದ್ದು ವೈವಿಧ್ಯಮಯ ಸಂಸ್ಕೃತಿ. ವಿವಿಧ ಧರ್ಮಗಳ ಹಲವು ಹಬ್ಬ-ಹರಿದಿನಗಳನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಸ್ವಾತಂತ್ಯ್ರ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿ, ಇವು ಭಾರತದ ಘೋಷಿತ ರಾಷ್ಟ್ರೀಯ ಹಬ್ಬಗಳು. ಇವುಗಳನ್ನು ಶ್ರದ್ಧೆ ಮತ್ತು ಉತ್ಸಾಹದಿಂದ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದಲ್ಲದೆ ಹಲವು ರಾಜ್ಯಗಳು ಚಾಲ್ತಿಯಲ್ಲಿರುವ ಅಲ್ಲಿನ ಭಾಷೆ ಮತ್ತು ಧರ್ಮವನ್ನು ಅನುಸರಿಸಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿವಿಧ ಸ್ಥಳೀಯ ಹಬ್ಬಗಳನ್ನೂ ಆಚರಿಸುತ್ತವೆ. ದೀಪಾವಳಿ , ಗಣೇಶ ಚತುರ್ಥಿ , ದುರ್ಗಾ ಪೂಜಾ, ಹೋಳಿ , ರಕ್ಷಾಬಂಧನ ಮತ್ತು ದಸರಾ -ಇವು ಇಲ್ಲಿನ ಜನಪ್ರಿಯ ಹಿಂದೂ ಧಾರ್ಮದ ಹಬ್ಬಗಳು. ಸಂಕ್ರಾಂತಿ , ಪೊಂಗಲ್ ಮತ್ತು ಓಣಮ್ ಹಬ್ಬಗಳು ಸಮೃದ್ಧತೆಯ ಸಂಕೇತವಾಗಿ ಸುಗ್ಗಿಯ ಹಬ್ಬಗಳೆಂದು ಆಚರಿಸಲ್ಪಡುತ್ತವೆ. ವಿವಿಧ ಧರ್ಮೀಯರು ಆಚರಿಸುವ ಕೆಲವು ನಿರ್ದಿಷ್ಟ ಹಬ್ಬಗಳು ಭಾರತದಲ್ಲುಂಟು. ಮಹತ್ವದ ಹಬ್ಬವೆನಿಸಿರುವ ದೀಪಾವಳಿಯನ್ನು ಹಿಂದೂ, ಸಿಖ್, ಜೈನ ಧರ್ಮೀಯರು ಆಚರಿಸಿದರೆ, ಬುದ್ಧ ಪೂರ್ಣಿಮೆಯನ್ನು ಜೈನ ಮತ್ತು ಬೌದ್ಧರು ಆಚರಿಸುತ್ತಾರೆ. ಮುಸ್ಲಿಂ ಹಬ್ಬಗಳಾದ ಈದ್-ಉಲ್-ಫಿತರ್ , ಈದ್ ಅಲ್-ಅಧಾ ಮತ್ತು ರಂಜಾನ್ ಹಬ್ಬಗಳನ್ನು ಭಾರತದಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ಭಾರತದ ಪೂರ್ವ ದಿಕ್ಕಿನ ಗಡಿರಾಜ್ಯವಾದ ಅರುಣಾಚಲ ಪ್ರದೇಶದ ಜೈರೋ ಕಣಿವೆಯ ಅಪಾಟಾನಿಸ್ ಬುಡಕಟ್ಟು ಜನ ಆಚರಿಸುವ ದ್ರೀ ಹಬ್ಬ ಭಾರತದ ಬುಡಕಟ್ಟು ಜನರ ಹಬ್ಬಗಳಲ್ಲೊಂದಾಗಿದ್ದು, ಭಾರತೀಯ ಸಂಸ್ಕೃತಿಗೆ ಮತ್ತಷ್ಟು ಮೆರಗು ನೀಡಿದೆ.
ಆಹಾರ ಪದ್ಧತಿ
ವಿಭಿನ್ನ ಗಿಡಮೂಲಿಕೆ ಮತ್ತು ಸಾಂಬಾರ ಪದಾರ್ಥಗಳ ಸುಸಂಸ್ಕೃತ ಮತ್ತು ಚತುರ ಬಳಕೆಯನ್ನು ಆಧರಿಸಿ ವೈವಿಧ್ಯಮಯ ಭಾರತೀಯ ಆಹಾರ ಪದ್ಧತಿಯ ವೈಶಿಷ್ಟ್ಯಗಳು ನಿರ್ಧಾರವಾಗಿವೆ. ಬಗೆ ಬಗೆಯ ಆಹಾರಗಳು ಮತ್ತು ಅವುಗಳ ತಯಾರಿಕಾ ತಂತ್ರಗಳನ್ನು ಆಧರಿಸಿ ಈ ಆಹಾರ ಪದ್ಧತಿಗಳ ವೈಶಿಷ್ಟ್ಯ ನಿರ್ಧಾರವಾಗುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಸಸ್ಯಾಹಾರ ಮಹತ್ವಪೂರ್ಣ ಭಾಗವಾಗಿದ್ದರೂ, ಕೋಳಿ, ಮೇಕೆ, ಕುರಿ, ಮೀನು, ಮತ್ತು ಇತರ ಮಾಂಸಾಹಾರವೂ ಕೂಡ ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಸೇರಿದೆ. ಭಾರತೀಯ ಸಂಸ್ಕೃತಿಯಲ್ಲಿ ಆಹಾರ ಪದ್ಧತಿಯ ಪಾತ್ರ ಪ್ರಮುಖವಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಮತ್ತು ಇಲ್ಲಿನ ಹಬ್ಬಗಳಲ್ಲಿ ಅದು ಮಹತ್ವದ ಸಂಗತಿ. ಭಾರತೀಯ ಆಹಾರ ಪದ್ಧತಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತಾ, ಜನಾಂಗೀಯ ವೈವಿಧ್ಯತೆಯಿಂದ ತುಂಬಿರುವ ಉಪಖಂಡದ ವಿಭಿನ್ನ ಜನಸಮುದಾಯಗಳನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಪಾಕಶಾಸ್ತ್ರವನ್ನು ಸಾಮಾನ್ಯವಾಗಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಆಹಾರಗಳೆಂದು ಐದು ಭಾಗ ಗಳಾಗಿ ವರ್ಗೀಕರಿಸಬಹುದು. ಈ ವೈವಿಧ್ಯತೆಯನ್ನು ಹೊರತುಪಡಿಸಿ ಕೆಲವು ಅನನ್ಯ ಐಕ್ಯತೆಯ ಎಳೆಗಳೂ ಹೊರಚಿಮ್ಮಿವೆ. ವಿವಿಧ ಸಾಂಬಾರ ಪದಾರ್ಥಗಳ ಬಳಕೆ ಅಡುಗೆ ತಯಾರಿಕೆಯ ಅವಿಭಾಜ್ಯ ಅಂಗವಾಗಿದ್ದು, ಊಟದ ಸ್ವಾದ ಮತ್ತು ರುಚಿ ಹೆಚ್ಚಿಸುವ ಉದ್ದೇಶದಿಂದ ಮತ್ತು ಅನನ್ಯ ರುಚಿ ಮತ್ತು ಕಂಪನ್ನು ಸೃಷ್ಟಿಸಲು ಸಾಂಬಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಇತಿಹಾಸದುದ್ದಕ್ಕೂ ಭಾರತಕ್ಕೆ ಆಗಮಿಸಿದ ಪರ್ಷಿಯನ್ನರು, ಮೊಘಲರು, ಮತ್ತು ಯೂರೋಪಿನ ವಸಾಹತುವಾದಿಗಳೂ ಸೇರಿದಂತೆ ಹಲವು ವಿದೇಶಿ ಸಂಸ್ಕೃತಿಗಳ ಗಾಢ ಪ್ರಭಾವಕ್ಕೆ ಭಾರತೀಯ ಪಾಕಶಾಸ್ತ್ರ ಪದ್ಧತಿಯು ಒಳಗಾಗಿದೆ. ತಂದೂರ್ (ಕೆಂಡದಲ್ಲಿ ಸುಟ್ಟ ಇಲ್ಲವೇ ಬೇಯಿಸಿದ ಭಕ್ಷ್ಯಗಳು) ಆಹಾರ ಪದ್ಧತಿಯ ಜನ್ಯ ಸ್ಥಾನ ಕೇಂದ್ರ ಏಷ್ಯಾ ಆದರೂ, ಭಾರತೀಯ ಆಹಾರ ಸಾಮಗ್ರಿಗಳನ್ನು ಸೇರಿಸಿ ಸಿದ್ಧಪಡಿಸಿದಚಿಕನ್ ಟಿಕ್ಕಾ ರೀತಿಯ ತಂದೂರಿ ಆಹಾರಗಳು ವ್ಯಾಪಕ ಜನಪ್ರಿಯತೆ ಗಳಿಸಿವೆ. ಇಡೀ ವಿಶ್ವದಲ್ಲೇ ಅತ್ಯಂತ ಜನಪ್ರಿಯತೆ ಗಳಿಸಿರುವುದರಲ್ಲಿ ಭಾರತೀಯ ಪಾಕಶಾಸ್ತ್ರ ಪದ್ಧತಿಯೂ ಒಂದು. ಭಾರತೀಯ ಸಾಂಬಾರ ಪದಾರ್ಥ ಮತ್ತು ಗಿಡಮೂಲಿಕೆಗಳು ಐತಿಹಾಸಿಕವಾಗಿ ಅತಿ ಹೆಚ್ಚು ಬೇಡಿಕೆ ಹೊಂದಿದ್ದ ವ್ಯಾಪಾರೋದ್ದೇಶಿತ ಸರಕುಗಳಾಗಿತ್ತು. ಯುರೋಪ್ ಮತ್ತು ಭಾರತದ ನಡುವೆ ನಡೆಯುತ್ತಿದ್ದ ಸಾಂಬಾರ ಪದಾರ್ಥಗಳ ವಹಿವಾಟು ಅರಬ್ ವ್ಯಾಪಾರಿಗಳ ಏಳಿಗೆಗೆ ಕಾರಣವಾಯಿತಲ್ಲದೆ, ಅವರು ಪ್ರಬಲರಾಗಲು ಅವಕಾಶ ನೀಡಿತು. ಇಷ್ಟೇ ಅಲ್ಲದೆ ವಾಸ್ಕೋ ಡ ಗಾಮ ಮತ್ತು ಕ್ರಿಸ್ಟೋಪರ್ ಕೊಲಂಬಸ್‌ರಂತಹ ಯುರೋಪಿನ ಅನ್ವೇಷಣೆಕಾರರು ಭಾರತದೊಂದಿಗೆ ಹೊಸ ವ್ಯಾಪಾರಿ ಮಾರ್ಗಗಳನ್ನು ಅನ್ವೇಷಿಸಲು ಪ್ರೇರಣೆ ನೀಡಿತು. ಇದೇ ಮುಂದೆ ಅನ್ವೇಷಣಾ ಯುಗ ಕ್ಕೂ ನಾಂದಿಯಾಯಿತು.[೧೧] ಏಷ್ಯದಾದ್ಯಂತ ಜನಪ್ರಿಯವಾಗಿರುವ ಭಾರತ ಮೂಲದ ಕರಿ(=ಸಾರು) ಯಿಂದಾಗಿ ಇಲ್ಲಿನ ಆಹಾರ ಬಹುತೇಕ ಸಂದರ್ಭದಲ್ಲಿ "ಪ್ಯಾನ್-ಏಷಿಯನ್" (ಸಮಗ್ರ ಏಷ್ಯ) ಆಹಾರವೆಂದೇ ಕರೆಯಲ್ಪಡುತ್ತದೆ.[೧೨]
ಉಡುಗೆ-ತೊಡುಗೆ
ಸೀರೆ ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆ, ಇದರ ಜೊತೆಗೆ ಗಾಘ್ರ ಚೋಲಿ(ಲೆಹೆಂಗ)ಯನ್ನೂ ಕೂಡ ಸಾಕಷ್ಟು ಮಹಿಳೆಯರು ಬಳಸುತ್ತಾರೆ. ಧೋತಿ, ಪಂಚೆ, ವೇಷ್ಟಿ ಅಥವಾ ಕುರ್ತಾ ಇವು ಪುರುಷರ ಸಾಂಪ್ರದಾಯಿಕ ತೊಡುಗೆಗಳು. ವಾರ್ಷಿಕ ಫ್ಯಾಷನ್ ಮೇಳಗಳನ್ನು ಆಯೋಜಿಸುವ ದೆಹಲಿ ಭಾರತದ ಫ್ಯಾಷನ್ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿದೆ. ಭಾರತದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಉಡುಗೆಗಳನ್ನು ಈಗಲೂ ಬಹುತೇಕ ಜನರು ಧರಿಸುತ್ತಾರೆ. ದೆಹಲಿ, ಮುಂಬಯಿ, ಚೆನ್ನೈ ಅಹಮದಾಬಾದ್ ಮತ್ತು ಪುಣೆ- ಈ ನಗರಗಳು ಜನ ಖರೀದಿ ನಡೆಸುವ ಮೆಚ್ಚಿನ ಸ್ಥಳಗಳು. ದಕ್ಷಿಣ ಭಾರತದಲ್ಲಿ ಪುರುಷರು, ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಧೋತಿ ಎಂದು ಕರೆಯಲಾಗುವ ಬಿಳಿಬಟ್ಟೆಯನ್ನು ಧರಿಸುತ್ತಾರೆ. ಧೋತಿಯ ಮೇಲೆ ಪುರುಷರು ಷರ್ಟ್‌ಗಳು, ಟಿ-ಷರ್ಟ್‌ಗಳು ಅಥವಾ ಇನ್ನಾವುದೋ ಮೇಲುಡುಗೆ ಧರಿಸುತ್ತಾರೆ. ವಿವಿಧ ನಮೂನೆಗಳ ವಿನ್ಯಾಸಗಳನ್ನುಳ್ಳ ವರ್ಣಮಯ ಸೀರೆಯನ್ನು ಉಡುವ ಮಹಿಳೆಯರು. ಇದಕ್ಕೆ ಹೊಂದುವಂಥ ಸರಳವಾದ ಆದರೆ ಬಣ್ಣ ಬಣ್ಣದ ಕುಪ್ಪಸವನ್ನು ಧರಿಸುತ್ತಾರೆ. ಕುಪ್ಪಸ ಮಹಿಳೆಯರು ಮತ್ತು ಯುವತಿಯರ ಮೇಲುಡುಪು. ಚಿಕ್ಕ ಹುಡುಗಿಯರು ಪಾವಡ ವನ್ನು ಧರಿಸುತ್ತಾರೆ. ಪಾವಡ , ಕುಪ್ಪಸದ ಕೆಳಗೆ ಧರಿಸುವ ಉದ್ದನೆಯ ಸ್ಕರ್ಟ್. ಎರಡೂ ವಸ್ತ್ರಗಳನ್ನು ಬೆಡಗಿನಿಂದ ಸಿಂಗರಿಸಿರುತ್ತಾರೆ. ಮಹಿಳೆಯರ ಅಲಂಕಾರ ಪರಿಕರದಲ್ಲಿ ಬಿಂದಿಯೂ ಸೇರಿದೆ. ಕೆಂಪು ಕುಂಕುಮ (=ಸಿಂಧೂರ)ವನ್ನು ವಿವಾಹಿತ ಮಹಿಳೆಯರು ಹಣೆಗೆ ಹಚ್ಚುವುದು ಮೊದಲಿದ್ದ ಭಾರತೀಯ ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಅವಿವಾಹಿತರೂ ಧರಿಸುತ್ತಿದ್ದು, ಇದು ಮಹಿಳೆಯರ ಆಧುನಿಕ ಅಲಂಕಾರದ ಒಂದು ಭಾಗವಾಗಿ ಮಾರ್ಪಟ್ಟಿದೆ. ಮಹಿಳೆಯರು ಧರಿಸುವ ಈ ಬಿಂದಿ ಅವರ 3ನೇ ಕಣ್ಣು ಎಂದೇ ಕೆಲವರಿಂದ ಪರಿಗಣಿಸಲ್ಪಟ್ಟಿದೆ. ಸಾಮಾನ್ಯ ಕಣ್ಣಿಗೆ ಕಾಣದ್ದು ಈ 3ನೇ ಕಣ್ಣಿಗೆ ಕಾಣುತ್ತದೆ ಮತ್ತು ಸೂರ್ಯನ ಹಾಗೂ ಇತರೆ ಬಾಹ್ಯ ಶಕ್ತಿಗಳಿಂದ ಧರಿಸಿರುವವರ ಮಿದುಳಿನ ರಕ್ಷಣೆಗೆ ಇದು ನೆರವಾಗುತ್ತದೆ ಎನ್ನುವ ನಂಬಿಕೆಯೂ ಇದೆ.[೧೩]ಭಾರತ ಉಪಖಂಡ ಮತ್ತು ಪಾಶ್ಚಿಮಾತ್ಯ ಉಡುಗೆ ತೊಡುಗೆ ಮಿಳಿತಗೊಂಡು ಇಂಡೋ-ವೆಸ್ಟ್ರನ್ ವಸ್ತ್ರಶೈಲಿ ರೂಪುಗೊಂಡಿದೆ. ಚೂಡಿದಾರ, ದುಪಟ್ಟ, ಗಮ್ಚಾ, ಕುರ್ತಾ, ಮುಂಡುಮ್ ನೆರಿಯಾತುಮ್, ಶೇರ‍್ವಾನಿ, ಉತ್ತರೀಯಗಳು ಭಾರತದ ಇತರೆ ವೇಷಭೂಷಣಗಳು.
ಸಾಹಿತ್ಯ
ಇತಿಹಾಸ
(/(ಪ್ರಾಚೀನ ಭಾರತೀಯ ಸಾಹಿತ್ಯ ಪ್ರಸಾರವಾದದ್ದು ಮೌಖಿಕವಾಗಿ. ಭಾರತದ ಮೊಟ್ಟ ಮೊದಲಸಂಸ್ಕೃತ ಸಾಹಿತ್ಯ ಋಗ್ವೇದ ವರ್ಷ 1500 ರಿಂದ 1200 (BCE) ಮಧ್ಯೆ ರಚನೆಯಾಗಿರಬಹುದಾದ,[[ಋಗ್ವೇದ ಮಂತ್ರ(=ಪವಿತ್ರ ಶ್ಲೋಕ)ಗಳನ್ನು ಒಳಗೊಂಡಿದೆ. ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಮೊದಲ (BCE) ಸಹಸ್ರಮಾನದ ಅಂತ್ಯದಲ್ಲಿ ರಚನೆಯಾಗಿರಬಹುದು ಎಂಬುದೊಂದು ಅಂದಾಜು. ಪ್ರಾಚೀನ ಸಂಸ್ಕೃತ ಸಾಹಿತ್ಯ ಮೊದಲ (CE)ಸಹಸ್ರಮಾನದ ಆರಂಭಿಕ ಶತಮಾನಗಳಲ್ಲಿ ಸಮೃದ್ಧವಾಗಿ ಬೆಳೆಯಿತು. ತಮಿಳಿನ ಸಂಗಮ್ ಸಾಹಿತ್ಯ|ಋಗ್ವೇದ ಮಂತ್ರ(=ಪವಿತ್ರ ಶ್ಲೋಕ)ಗಳನ್ನು ಒಳಗೊಂಡಿದೆ. ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಮೊದಲ (BCE) ಸಹಸ್ರಮಾನದ ಅಂತ್ಯದಲ್ಲಿ ರಚನೆಯಾಗಿರಬಹುದು ಎಂಬುದೊಂದು ಅಂದಾಜು.)/) ಪ್ರಾಚೀನ ಸಂಸ್ಕೃತ ಸಾಹಿತ್ಯ ಮೊದಲ (CE)ಸಹಸ್ರಮಾನದ ಆರಂಭಿಕ ಶತಮಾನಗಳಲ್ಲಿ ಸಮೃದ್ಧವಾಗಿ ಬೆಳೆಯಿತು. ತಮಿಳಿನ ಸಂಗಮ್ ಸಾಹಿತ್ಯ]] ಇದೇ ಹಂತದಲ್ಲಿ ರಚನೆಯಾಯಿತು. ಮಧ್ಯಕಾಲೀನ ಅವಧಿಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಹಿತ್ಯ ಕೃಷಿ ಆರಂಭವಾಯಿತು. ಕನ್ನಡದಲ್ಲಿ 9ನೇ ಶತಮಾನದಲ್ಲೂ, ತೆಲುಗಿನಲ್ಲಿ 11ನೇ ಶತಮಾನದಲ್ಲೂ ಮೊದಲ ಸಾಹಿತ್ಯ ಕೃತಿಗಳು ರಚನೆಯಾದವು. ಅದೇ ರೀತಿ 12ನೇ ಶತಮಾನದಲ್ಲಿ ಮೊದಲ ಮಲಯಾಳಂ ಭಾಷಾ ಸಾಹಿತ್ಯ ಕಾಣಿಸಿಕೊಂಡಿತು.[೧೫] ಬಂಗಾಳಿ, ಮರಾಠಿ, ಹಿಂದಿಯ ಉಪಭಾಷೆಗಳು ಹಾಗೂ ಪರ್ಷಿಯನ್ ಮತ್ತು ಉರ್ದು ಭಾಷೆಗಳಲ್ಲಿ ಮೊದಲ ಸಾಹಿತ್ಯ ಕಾರ್ಯಗಳು ಇದೇ ಅವಧಿಯಲ್ಲಿ ಕಾಣಿಸಿಕೊಂಡವು. ರವೀಂದ್ರನಾಥ ಟಾಗೋರ್, ರಾಮ್‌ಧಾರಿ ಸಿಂಗ್ ’ದಿನಕರ್’, ಸುಬ್ರಮಣಿಯ ಭಾರತಿ, ಕುವೆಂಪು, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಮೈಕೇಲ್ ಮಧುಸೂದನ ದತ್, ಮುನ್ಷಿ ಪ್ರೇಮಚಂದ್, ಮಹಮ್ಮದ್ ಇಕ್ಬಾಲ್ ಮತ್ತು ದೇವಕಿ ನಂದನ್ ಖತ್ರಿ ಇವರು ಭಾರತ ಕಂಡ ಅತ್ಯಂತ ಮಹತ್ವದ ಸಾಹಿತಿಗಳು. ಗಿರೀಶ್ ಕಾರ್ನಾಡ್, ಆಗ್ಯೇಯ, ನಿರ್ಮಲ್ ವರ್ಮ, ಕಮಲೇಶ್ವರ್, ವೈಕೋಮ್ ಮಹಮ್ಮದ್ ಬಷೀರ್, ಇಂದಿರಾ ಗೋಸ್ವಾಮಿ, ಮಹಾಶ್ವೇತಾ ದೇವಿ, ಅಮೃತಾ ಪ್ರೀತಮ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಖುರ್ರಾತುಲೇನ್ ಹೈದರ‍್ ಮತ್ತು ತಕಾಝಿ ಶಿವಶಂಕರ ಪಿಳ್ಳೈ ಹಾಗೂ ಇನ್ನೂ ಮುಂತಾದವರು ಸಮಕಾಲೀನ ಭಾರತದಲ್ಲಿ ಹೆಚ್ಚಿನ ಪ್ರಶಂಸೆಗೆ ಮತ್ತು ಮಹತ್ವದ ಚರ್ಚೆಗೊಳಗಾಗಿರುವ ಪ್ರಮುಖ ಸಾಹಿತಿಗಳು. ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್ ಆಧುನಿಕ ಭಾರತದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸುವ ಸೇವೆಯನ್ನು ಪರಿಗಣಿಸಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಗಳಾಗಿವೆ. ಕನ್ನಡ ಭಾಷೆಗೆ ದೇಶದಲ್ಲೇ ಅತಿ ಹೆಚ್ಚಿನ ೮ ಜ್ಞಾನಪೀಠ ಪ್ರಶಸ್ತಿಗಳು ಲಭ್ಯವಾಗಿವೆ. (ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯ್ಯ್ಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾನಾ೯ಡ್, ಚಂದ್ರಶೇಖರ ಕಂಬಾರ) ಅದೇ ರೀತಿ ಹಿಂದಿಗೆ ಆರು, ಬಂಗಾಳಿಗೆ ಐದು, ಮಲಯಾಳಂ ಸಾಹಿತ್ಯಕ್ಕೆ ನಾಲ್ಕು ಹಾಗೂ ಮರಾಠಿ, ಗುಜರಾತಿ, ಉರ್ದು ಮತ್ತು ಒರಿಯಾ ಸಾಹಿತ್ಯಕ್ಕೆ ತಲಾ ಮೂರು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ.[೧೬]
ಕಾವ್ಯ
ಋಗ್ವೇದ ಕಾಲದಿಂದಲೂ ಭಾರತ ಕಾವ್ಯ ಮತ್ತು ಗದ್ಯದ ಬಲಿಷ್ಠ ಪರಂಪರೆಯನ್ನು ಹೊಂದಿದೆ. ಕಾವ್ಯ ಎಂಬ ಸಾಹಿತ್ಯ ಪ್ರಕಾರ ಸಂಗೀತ ಸಂಪ್ರದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಧಾರ್ಮಿಕ ಜಾಗೃತಿಗಾಗಿ ಪ್ರಮುಖ ಅಸ್ತ್ರವಾಗಿಯೂ ಇದನ್ನು ಬಳಸಲಾಗಿದೆ. ಲೇಖಕರು ಮತ್ತು ತತ್ವಜ್ಞಾನಿಗಳು ಸಾಮಾನ್ಯವಾಗಿ ಪ್ರತಿಭಾವಂತ ಕವಿಗಳೂ ಆಗಿರುತ್ತಾರೆ. ಆಧುನಿಕ ಯುಗದಲ್ಲಿ, ಅಂದರೆ ಭಾರತ ಸ್ವಾತಂತ್ಯ್ರ ಚಳವಳಿಯ ಸಂದರ್ಭದಲ್ಲಿ ಕಾವ್ಯ ರಾಷ್ಟ್ರೀಯತೆಯ ಅಹಿಂಸಾ ಅಸ್ತ್ರವಾಗಿ ಬಹಳ ಮಹತ್ವದ ಪಾತ್ರ ವಹಿಸಿತ್ತು. ಆಧುನಿಕ ಕಾಲದಲ್ಲಿ ರವೀಂದ್ರನಾಥ ಟಾಗೋರ್ ಮತ್ತು K. S. ನರಸಿಂಹಸ್ವಾಮಿ ಅವರ ಕಾವ್ಯದಲ್ಲಿ ಈ ಸಂಪ್ರದಾಯಕ್ಕೆ ಅತ್ಯುತ್ತಮ ಉದಾಹರಣೆಗಳು ದೊರೆಯುತ್ತವೆ. ಅದೇರೀತಿ ಮಧ್ಯಕಾಲೀನ ಅವಧಿಯ ಬಸವಣ್ಣನ (ವಚನಗಳು ), ಕಬೀರ್ ಮತ್ತು ಪುರಂದರದಾಸರ (ಪದಗಳು ಅಥವಾ ದೇವರ ನಾಮಗಳು ) ಕೀರ್ತನೆಗಳು ಮತ್ತು ಪ್ರಾಚೀನ ಕಾಲದ ಮಹಾಕಾವ್ಯಗಳಲ್ಲೂ ಇದಕ್ಕೆ ಕುರುಹುಗಳು ಕಾಣಸಿಗುತ್ತವೆ. ಟಾಗೋರರ ಗೀತಾಂಜಲಿ ಭಾರತ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳನ್ನು ಒದಗಿಸಿರುವುದು ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಮಹಾ ಕಾವ್ಯಗಳು
ರಾಮಾಯಣ ಮತ್ತು ಮಹಾಭಾರತಗಳು ಭಾರತದ ಅತ್ಯಂತ ಪ್ರಾಚೀನ ಮತ್ತು ಇಂದಿಗೂ ಅತ್ಯಂತ ಜನಪ್ರಿಯ ಮಹಾಕಾವ್ಯಗಳು. ಥಾಯ್ಲೆಂಡ್, ಮಲೇಷ್ಯಾ ಮತ್ತು ಇಂಡೊನೇಷ್ಯಾಗಳು ಇವುಗಳ ವಿವಿಧ ಆವೃತ್ತಿಗಳನ್ನು ಹೊಂದಿದ್ದು ಅವುಗಳನ್ನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳ ಮಹಾಕಾವ್ಯ ಎಂದು ಬಣ್ಣಿಸಿವೆ. ಇವುಗಳ ಜೊತೆಗೆ ಪ್ರಾಚೀನ ತಮಿಳು ಭಾಷೆಯಲ್ಲಿ ಶಿಲಪ್ಪದಿಗಾರಂ, ಮಣಿಮೇಗಲೈ, ಸಿವಕ ಚಿಂತಾಮಣಿ, ತಿರುಟಕ್ಕತೇವರ್, ಕುಂದಲಕೇಸಿ ಎಂಬ ಐದು ಮಹಾಕಾವ್ಯಗಳಿವೆ. ರಾಮಾಯಣ, ಮಹಾಭಾರತಗಳ ಪ್ರಾದೇಶಿಕ ಅವತರಿಣಿಕೆಗಳು ನೂರಾರಿವೆ. ಇವು ಮಹಾಕಾವ್ಯದ ವಸ್ತು ಹೊಂದಿದ್ದರೂ ಮಹಾಕಾವ್ಯಗಳಲ್ಲ. ಅವುಗಳೆಂದರೆ, ತಮಿಳಿನ ಕಂಬ ರಾಮಾಯಣ, ಕನ್ನಡದಲ್ಲಿ ಆದಿಕವಿ ಪಂಪ ಬರೆದ ಪಂಪ ಭಾರತ, ಕುಮಾರ ವಾಲ್ಮೀಕಿ ಬರೆದ ತೊರವೆ ರಾಮಾಯಣ ಮತ್ತು ಕುಮಾರವ್ಯಾಸ ವಿರಚಿತ ಕರ್ನಾಟ ಭಾರತ ಕಥಾ ಮಂಜರಿ, ಹಿಂದಿಯ ರಾಮಚರಿತಮಾನಸ, ಮಲಯಾಳಂನ ಆಧ್ಯಾತ್ಮರಾಮಾಯಣಮ್ ಇನ್ನೂ ಮುಂತಾದವು.
ಪ್ರದರ್ಶಕ ಕಲೆಗಳು
ಸಂಗೀತ
ವೈವಿಧ್ಯಮಯ ಧಾರ್ಮಿಕ ಸಂಗೀತ, ಜಾನಪದ ಸಂಗೀತ, ಸುಗಮ ಸಂಗೀತ ಹಾಗೂ ಪಾಪ್ ಮತ್ತು ಶಾಸ್ತ್ರೀಯ ಪ್ರಕಾರಗಳು ಭಾರತದ ಸಂಗೀತ ಪ್ರಕಾರಗಳಾಗಿವೆ. ಗೇಯಗಣಗಳನ್ನುಳ್ಳ ಸಾಮವೇದ ದ ಮಂತ್ರಗಳು ಸಂರಕ್ಷಿಸಲಾಗಿರುವ ಅತ್ಯಂತ ಪ್ರಾಚೀನ ಭಾರತೀಯ ಸಂಗೀತದ ಉದಾಹರಣೆ.ಕೆಲವು ನಿರ್ದಿಷ್ಟವಾದ ಶ್ರೌತ ಯಜ್ಞಾದಿಗಳಲ್ಲಿ ಈಗಲೂ ಇವುಗಳನ್ನು ಹಾಡಿನಂತೆ ಹೇಳಲಾಗುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆ ಮೇಲೆ ಹಿಂದೂ ಗ್ರಂಥಗಳ ಗಾಢ ಪ್ರಭಾವವಿದೆ. ಈ ಪರಂಪರೆ ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತ ಎಂಬ ಎರಡು ವಿಭಿನ್ನ ಶೈಲಿಗಳನ್ನು ಒಂಗೊಂಡಿದೆ. ಭಾರತೀಯ ಶಾಸ್ತ್ರೀಯ ಸಂಗೀತ ಹಲವು ಮಧುರವಾದ ರಾಗಗಳಿಗೆ ಜನಪ್ರಿಯವಾಗಿದೆ. ಈ ಸಂಗೀತ ಪ್ರಕಾರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕಾಲಾಂತರದಲ್ಲಿ ಬೆಳವಣಿಗೆ ಹೊಂದಿದೆ. ಇದು ದಾರ್ಮಿಕ ಪ್ರೇರಣೆ, ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಶುದ್ಧ ಮನರಂಜನೆಯ ಸಾಧನವಾಗಿ ಬಹುಕಾಲದಿಂದಲೂ ಬಳಕೆಯಾಗಿದೆ. ದಾಸಶ್ರೇಷ್ಠ ಪುರರಂದರ ದಾಸರನ್ನು ಕರ್ನಾಟಿಕ್ ಸಂಗೀತ ಪಿತಾಮಹ ರೆಂದು ಪರಿಗಣಿಸಲಾಗಿದೆ.[೧೭][೧೮][೧೯] ಇವರು ಪುರಂದರ ವಿಠ್ಠಲ ಎಂಬ ಅಂಕಿತನಾಮದೊಂದಿಗೆ ತಮ್ಮ ಕೀರ್ತನೆಗಳನ್ನು ಮುಗಿಸುತ್ತಿದ್ದರು. ಪುರಂದರ ದಾಸರು ಕನ್ನಡ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದು, ಸುಮಾರು 475,000 ಕೀರ್ತನೆಗಳನ್ನು ಬರೆದಿದ್ದಾರೆಂದು ನಂಬಲಾಗಿದೆ.[೨೦] ಆದರೆ ಸುಮಾರು 1000 ಕೀರ್ತನೆಗಳು ಮಾತ್ರ ಇಂದು ನಮಗೆ ಗೊತ್ತಿದೆ.[೧೭][೨೧]
ನೃತ್ಯ
ಭಾರತೀಯ ನೃತ್ಯ ಪ್ರಕಾರದಲ್ಲೂ ಜಾನಪದ ಮತ್ತು ಶಾಸ್ತ್ರೀಯ ಎಂಬ ಎರಡು ಪ್ರಭೇದಗಳಿದ್ದು ಅವು ವಿವಿಧ ರೂಪದಲ್ಲಿ ಮೈದಾಳಿವೆ. ಪಂಚಾಬ್ನ ಭಾಂಗ್ರಾ ,ಅಸ್ಸಾಂನ ಬಿಹು , ಜಾರ್ಖಂಡ್ ಮತ್ತು ಒರಿಸ್ಸಾದ ಛೌ , ರಾಜಾಸ್ತಾನ್ನ ಘೂಮರ್ , ಗುಜರಾತ್ನ ದಾಂಡಿಯಾ ಮತ್ತು ಗರ್ಬ , ಕರ್ನಾಟಕದ ಯಕ್ಷಗಾನ , ಮಹಾರಾಷ್ಟ್ರದ ಲಾವಣಿ ಮತ್ತು ಗೋವಾದ ದೇಖ್‌ನಿ -ಇವು ಭಾರತದ ಜನಪ್ರಿಯ ಜಾನಪದ ನೃತ್ಯ ಪ್ರಕಾರಗಳಲ್ಲಿ ಕೆಲವು. ನಿರೂಪಣಾ ತಂತ್ರ ಮತ್ತು ಪೌರಾಣಿಕ ಅಂಶಗಳನ್ನು ಒಳಗೊಂಡಿರುವ ಭಾರತದ ಎಂಟು ನೃತ್ಯ ರೂಪಗಳಿಗೆ ಭಾರತದ ರಾಷ್ಟ್ರೀಯ ಸಂಗೀತ, ನೃತ್ಯ ಮತ್ತು ನಾಟಕ ಅಕಾಡೆಮಿ ಶಾಸ್ತ್ರೀಯ ನೃತ್ಯದ ಸ್ಥಾನಮಾನ ನೀಡಿದೆ. ಅವುಗಳೆಂದರೆ: ತಮಿಳುನಾಡಿನ ಭರತನಾಟ್ಯಂ , ಉತ್ತರ ಪ್ರದೇಶದ ಕಥಕ್ , ಕೇರಳದ ಕಥಕ್ಕಳಿ ಮತ್ತು ಮೋಹಿನಿಆಟ್ಟಂ , ಆಂಧ್ರ ಪ್ರದೇಶದ ಕೂಚುಪುಡಿ , ಮಣಿಪುರದ ಮಣಿಪುರಿ , ಒರಿಸ್ಸಾದ ಒಡಿಸ್ಸಿ ಮತ್ತು ಅಸ್ಸಾಂನ ಸಾತ್ರಿಯಾ .[೨೨][೨೩] ವಿಶ್ವದ ಅಂತ್ಯಂತ ಪುರಾತನ ಸಮರಕಲೆ ಎಂದು ಪರಿಗಣಿತವಾಗಿರುವುದುಕಲಾರಿಪ್ಪಯಟ್ಟು ಅಥವಾ ಸಂಕ್ಷಿಪ್ತವಾಗಿ ಕಲಾರಿ. ಮಲ್ಲಪುರಾಣ ಎಂಬ ಕೃತಿಯಲ್ಲಿ ಇದನ್ನು ಪಠ್ಯ ರೂಪದಲ್ಲಿ ಸಂರಕ್ಷಿಸವಾಗಿದೆ. ಬೌದ್ಧ ಧರ್ಮ ಭಾರತದಿಂದ ಚೀನಾಕ್ಕೆ ಹೋಗಿರುವ ಹಾಗೆ, ಕಲಾರಿ ಮತ್ತು ನಂತರ ಬಂದ ಇತರೆ ಸಮರ ಕಲೆಗಳೂ ಕೂಡ ಕಾಲಾನಂತರದಲ್ಲಿ ಚೀನಾಕ್ಕೆ ಪ್ರಯಾಣಿಸಿರಬಹುದೆಂಬುದು ಕೆಲವರ ಅಭಿಮತ. ಇದೇ ನೃತ್ಯ ಪ್ರಕಾರ ಮುಂದೆ ಚೀನಾದಲ್ಲಿ ಕುಂಗ್-ಫು ಎಂಬ ವಿಶ್ವ ಪ್ರಸಿದ್ಧ ಸಮರ ಕಲೆಯಾಗಿ ಅಭಿವೃದ್ಧಿ ಹೊಂದಿರಬಹುದೆಂಬುದು ಕೆಲವರ ವಾದ. ಗಟ್ಕ, ಪೆಹಲ್‌ವಾನಿ ಮತ್ತು ಮಲ್ಲ-ಯುದ್ಧಎಂಬುವು ನಂತರ ಬೆಳವಣಿಗೆಯಾದ ಇತರ ಸಮರ ಕಲೆಗಳಾಗಿವೆ. ಇವುಗಳ ಮತ್ತಷ್ಟು ಜನಪ್ರಿಯ ಪ್ರಕಾರಗಳೂ ಅಸ್ಥಿತ್ವದಲ್ಲಿವೆ.
ನಾಟಕ ಮತ್ತು ರಂಗ ಭೂಮಿ
ನೃತ್ಯ ಮತ್ತು ಸಂಗೀತದಂತೆಯೇ ಭಾರತೀಯ ನಾಟಕ ಮತ್ತು ರಂಗಕಲೆಗಳು ದೀರ್ಘ ಇತಿಹಾಸವನ್ನು ಹೊಂದಿವೆ. ಭಾಸನ ನಾಟಕಗಳ ನಂತರ ಕಾಳಿದಾಸನ ಶಾಕುಂತಲ ಮತ್ತು ಮೇಘದೂತ ನಾಟಕಗಳು ಭಾರತದ ಅತ್ಯಂತ ಪ್ರಾಚೀನ ನಾಟಕಗಳಲ್ಲಿ ಕೆಲವು. ಸುಮಾರು 2000 ವರ್ಷಗಳಷ್ಟು ಹಳೆಯದಾದ ಕೇರಳದ ಕುಟ್ಟಿಯಾಟ್ಟಂ ರಂಗಕಲೆ ಈಗ ಅಸ್ಥಿತ್ವದಲ್ಲಿರುವ ವಿಶ್ವದಲ್ಲೇ ಅತ್ಯಂತ ಹಳೆಯದಾದ ನಾಟಕ ಸಂಪ್ರದಾಯಗಳಲ್ಲೊಂದು. ನಾಟ್ಯ ಶಾಸ್ತ್ರವನ್ನು ಇದು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಭಾಸನ ನಾಟಕಗಳು ಈ ಪ್ರಕಾರದಲ್ಲಿ ಬಹಳಷ್ಟು ಜನಪ್ರಿಯ. ನಾಟ್ಯಾಚಾರ್ಯ (ದಿವಂಗತ) ಪದ್ಮಶ್ರೀ ಮಾಣಿ ಮಾಧವ ಚಾಕ್ಯಾರ್- ಈ ಕಲಾ ಪ್ರಕಾರ ಮತ್ತು ಅಭಿಯನ ದಲ್ಲಿ ಅನನ್ಯ ಮತ್ತು ಅಸಾಧಾರಣ ಪ್ರತಿಭೆ. ವಿನಾಶದಂಚಿಗೆ ಬಂದಿದ್ದ ಶತಮಾನದಷ್ಟು ಹಳೆಯದಾದ ನಾಟಕ ಸಂಪ್ರದಾಯವನ್ನು ಪುಜರುಜ್ಜೀವನಗೊಳಿಸಿದರು. ರಸಾಭಿನಯ ಪ್ರಾವೀಣ್ಯತೆಗೆ ಇವರು ಹೆಸರುವಾಸಿಯಾಗಿದ್ದರು. ಇವರು ಕಾಳಿದಾಸನ ಅಭಿಜ್ಞಾನ ಶಾಕುಂತಲ, ವಿಕ್ರಮೋರ್ವಶೀಯ ಮತ್ತು ಮಾಳವಿಕಾಗ್ನಿಮಿತ್ರ ; ಭಾಸನ ಸ್ವಪ್ನವಾಸವದತ್ತ ಮತ್ತು ಪಂಚರಾತ್ರ; ಹರ್ಷನ ನಾಗಾನಂದ ಮುಂತಾದ ನಾಟಕಗಳನ್ನು ಕುಟ್ಟಿಯಾಟ್ಟಮ್ ರಂಗ ಪ್ರಕಾರಕ್ಕೆ ಅಳವಡಿಸಿ ಪ್ರದರ್ಶಿಸಿದ್ದರು.[೨೪][೨೫] ಭಾರತದ ಬಹುಪಾಲು ಭಾಷಾಶಾಸ್ತ್ರೀಯ ವಲಯದಲ್ಲಿ ಜಾನಪದ ನಾಟಕ ಸಂಪ್ರದಾಯ ಜನಾದರಣೀಯವಾಗಿದೆ. ಇದರ ಜೊತೆಗೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ತೊಗಲು ಗೊಂಬೆಯಾಟ ಎಂಬ ಶ್ರೀಮಂತ ರಂಗ ಸಂಪ್ರದಾಯವಿದ್ದು ಇದರ ಪ್ರಾಚೀನತೆ ಕನಿಷ್ಟ ಎರಡನೇ ಶತಮಾನಕ್ಕೆ (BCE)ಹೋಗುತ್ತದೆ. (ಪಾಣಿನಿಗೆ ಪತಂಜಲಿ ಮಹರ್ಷಿ ಬರೆದ ಭಾಷ್ಯದಲ್ಲಿ ಇದರ ಉಲ್ಲೇಖವಿದೆ.) ನಗರ ಪ್ರದೇಶಗಳಲ್ಲಿ ಹಲವಾರು ರಂಗ ತಂಡಗಳು ಯಶಸ್ವಿಯಾಗಿ ನಾಟಕ ಪ್ರದರ್ಶನ ನೀಡುತ್ತಿವೆ. ಈ ಸಂಪ್ರದಾಯಕ್ಕೆ ಗುಬ್ಬಿ ವೀರಣ್ಣ,[೨೬] ಉತ್ಪಾಲ್ ದತ್, ಕ್ವಾಝ ಅಹಮದ್ ಅಬ್ಬಾಸ್, K. V. ಸುಬ್ಬಣ್ಣನಂಥವರು ಚಾಲನೆ ನೀಡಿದ್ದರು. ಇತ್ತೀಚೆಗೆ ನಂದಿಕರ್, ಮಯ್ಸೂರಿನ್ ರಂಗಾಯಣ್ ನೀನಾಸಂ ಮತ್ತು ಪೃಥ್ವಿ ಥಿಯೇಟರ್‌ಎಂಬ ಕೆಲವು ರಂಗ ತಂಡಗಳು ಈ ಸಂಪ್ರದಾಯವನ್ನು ಮುಂದುವರಿಸುತ್ತಿವೆ. (ಬೆಂಗಳೂರಿನ ಬೆನಕ, ಸಂಕೇತ್, ಕಲಾಗಂಗೋತ್ರಿ, ನಟರಂಗ, ಪ್ರಯೋಗರಂಗ ಮುಂತಾದವು)
ದೃಶ್ಯಕಲೆ
ಚಿತ್ರಕಲೆ
ಭಾರತೀಯ ಚಿತ್ರಕಲೆಯ ಮೊದಲ ಹೆಜ್ಜೆ ಗುರುತುಗಳನ್ನು ಪ್ರಾಗೈತಿಹಾಸಿಕ ಕಾಲದಲ್ಲಿ ಬಂಡೆಗಳ ಮೇಲೆ ಕೆತ್ತಲಾಗಿರುವ ಚಿತ್ರಗಳಲ್ಲಿ ಗುರ್ತಿಸಬಹುದು. ಪೆಟ್ರೋಗ್ಲಿಪ್ ಅಥವಾ ಕಲ್ಲಿನ ಕೆತ್ತನೆಗಳು ಭೀಮ್‌ಬೇಟ್ಕ ಎಂಬ ಸ್ಥಳದಲ್ಲಿ ದೊರೆತಿದ್ದು, ಇವುಗಳಲ್ಲಿ ಕೆಲವು ಶಿಲಾಯುಗಷ್ಟು ಪುರಾತನದ್ದಾಗಿವೆ. ಡರಾಗ್‌ನ ಪುರಾತನ ಪಠ್ಯ ಸಿದ್ಧಾಂತ ಮತ್ತು ಉಪಾಖ್ಯಾನ ರೂಪದ ವಿಚಾರಗಳು, ಮನೆಯ ಪ್ರವೇಶ ದ್ವಾರ ಮತ್ತು ಅತಿಥಿಗಳು ತಂಗುವ ಕೊಠಡಿಯ ಒಳಾಂಗಣವನ್ನು ಚಿತ್ರಗಳಿಂದ ಅಲಂಕರಿಸುವುದು ಆಗಿನ ಕಾಲದಲ್ಲಿ ಸಾಮಾನ್ಯ ಮನೆಗೆಲಸವಾಗಿತ್ತು ಎಂದು ತಿಳಿಸುತ್ತವೆ. ಅಜಂತ, ಬಾಗ್, ಎಲ್ಲೋರ ಮತ್ತು ಸಿಟ್ಟನವಾಸಲ್‌ನ ಗುಹಾಚಿತ್ರಗಳು ಮತ್ತು ದೇವಾಲಯ ಚಿತ್ರಗಳು ಆಗಿನ ಜನರ ಪ್ರಕೃತಿ ಪ್ರೀತಿಯನ್ನು ರುಜುವಾತಾಗಿ ನಿಂತಿವೆ. ಭಾರತದ ಅತ್ಯಂತ ಆರಂಭಿಕ ಮತ್ತು ಮಧ್ಯಕಾಲೀನ ಕಲೆ ಹಿಂದೂ, ಬೌದ್ಧ ಮತ್ತು ಜೈನರಿಂದ ಅಭಿವ್ಯಕ್ತಗೊಂಡಿದೆ. ಹೊಸದಾಗಿ ಮಾಡಲಾದ ವರ್ಣಮಯ ಮನೆಯ ಹೊರಾಂಗಣ ಅಲಂಕಾರ (ರಂಗೋಲಿ) ಇಂದಿಗೂ ಭಾರತೀಯರ ಮನೆಯ ಹೊಸಲಿನಿಂದ ಹೊರಗೆ ಅಡಿಯಿಟ್ಟರೆ ಕಾಣುವ ಸಾಮಾನ್ಯ ದೃಶ್ಯ. ರಾಜ ರವಿ ವರ್ಮ ಮಧ್ಯಕಾಲೀನ ಭಾರತದ ಶ್ರೇಷ್ಠ ಪ್ರಾಚೀನ ಚಿತ್ರಕಾರರಲ್ಲೊಬ್ಬ. ಮಧುಬನಿ ಚಿತ್ರಕಲೆ, ಮೈಸೂರು ಚಿತ್ರಕಲೆ, ರಜಪೂತ ಚಿತ್ರಕಲೆ, ತಂಜಾವೂರು ಚಿತ್ರಕಲೆ, ಮೊಘಲ್ ಚಿತ್ರಕಲೆ-ಇವು ಭಾರತೀಯ ಚಿತ್ರಕಲೆಯ ಕೆಲವು ಗಮನಾರ್ಹ ಪ್ರಕಾರಗಳು. ಅದೇ ರೀತಿ ನಂದಲಾಲ್ ಬೋಸ್, M. F. ಹುಸೇನ್, S. H. ರಾಝಾ, ಗೀತಾ ವಧೇರಿ, ಜೈಮಿನಿ ರಾಯ್ ಮತ್ತು B.ವೆಂಕಟಪ್ಪ[೨೭] ಕೆಲವು ಆಧುನಿಕ ಚಿತ್ರ ಕಲಾವಿದರು. ಆಧುನಿಕ ಚಿತ್ರಕಾರರಲ್ಲಿ ಅತುಲ್ ದೋಡಿಯಾ, ಬೋಸ್ ಕೃಷ್ಣಮಾಚಾರಿ ದೇವಜ್ಯೋತಿ ರೇ ಮತ್ತು ಶಿಬು ನಟೇಶನ್ ಮುಂತಾದ ಕೆಲವರು ಭಾರತೀಯ ಚಿತ್ರಕಲೆಯಲ್ಲಿ ನವಯುಗದ ಹರಿಕಾರರು. ಇದೇ ವೇಳೆ ವಿಶ್ವ ಚಿತ್ರಕಲಾ ಕ್ಷೇತ್ರ ಭಾರತೀಯ ಶಾಸ್ತ್ರೀಯ ಕಲೆಯೊಂದಿಗೆ ಮಿಲನಗೊಳ್ಳುತ್ತಿದೆ. ಈ ಆಧುನಿಕ ಚಿತ್ರ ಕಲಾವಿದರು ಅಂತರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ. ಮುಂಬಯಿನಲ್ಲಿರುವ ಜಹಾಂಗೀರ್ ಆರ್ಟ್ ಗ್ಯಾಲರಿ ಮತ್ತು ಮೈಸೂರು ಅರಮನೆ ಭಾರತೀಯ ಚಿತ್ರ ಕಲೆಯ ಉತ್ಕೃಷ್ಟ ಮಾದರಿಗಳನ್ನು ಪ್ರದರ್ಶಿಸಿವೆ.
ಶಿಲ್ಪ ಕಲೆ
ಭಾರತದಲ್ಲಿ ಶಿಲ್ಪಕಲೆಯ ಪ್ರಾಚೀನತೆ ಸಿಂಧೂ ಕಣಿವೆ ನಾಗರಿಕತೆಗೆ ಹೋಗುತ್ತದೆ. ಅಲ್ಲಿ ದೊರೆತಿರುವ ಕಲ್ಲಿನ ಮತ್ತು ಕಂಚಿನ ಶಿಲ್ಪಗಳು ಈ ಅಮಶವನ್ನು ಪುಷ್ಟೀಕರಿಸುತ್ತದೆ. ಹಿಂದೂ, ಬೌದ್ಧ, ಮತ್ತು ಜೈನ ಧರ್ಮಗಳು ಮತ್ತಷ್ಟು ಬೆಳವಣಿಗೆಯಾದಂತೆ, ಭಾರತ ಅತ್ಯಂತ ಜಟಿಲವಾದ ಕಂಚಿನ ಶಿಲ್ಪಗಳನ್ನು ಮತ್ತು ದೇವಾಲಯದ ಕೆತ್ತನೆಗಳನ್ನು ನಿರ್ಮಿಸಿತು. ಅಜಂತ, ಎಲ್ಲೋರ ಗಳಲ್ಲಿರುವಂತೆ ಬೃಹತ್ ಗುಹಾ ದೇವಾಲಯಗಳನ್ನು ಇಟ್ಟಿಗೆ ಆಥವಾ ಇನ್ನಾವುದೇ ನಿರ್ಮಾಣ ಸಾಮಗ್ರಿ ಬಳಸಿ ನಿರ್ಮಿಸಿಲ್ಲ. ಬದಲಾಗಿ ಬೃಹತ್ ಗಾತ್ರದ ಅಖಂಡ ಬಂಡೆಗಳನ್ನು ಕೊರೆದು ಈ ಚಿತ್ತಾಕರ್ಷಕ ದೇಗುಲಗಳನ್ನು ನಿರ್ಮಿಸಲಾಗಿದೆ. ಭಾರತದ ವಾಯವ್ಯ ಭಾಗದಲ್ಲಿ ಗಾರೆ, ಪದರ ಶಿಲೆ, ಅಥವಾ ಜೇಡಿ ಮಣ್ಣುಗಳಲ್ಲಿ ರಚಿಸಲಾಗಿರುವ ಶಿಲ್ಪಗಳು, ಭಾರತದ ಮತ್ತು ಹೆಲೆನೆಸ್ಟಿಕ್ ಶೈಲಿಯ ಬಲವಾದ ಸಂಯೋಜನೆಯನ್ನು ಪ್ರದರ್ಶಿಸುತ್ತವೆ, ಅಥವಾ ಬಹುಶಃ ಗ್ರೀಕೋ-ರೋಮನ್ ಸಂಸ್ಕೃತಿಯ ಪ್ರಭಾವವನ್ನೂ ಇವು ತೋರ್ಪಡಿಸುತ್ತಿವೆ. ಮಥುರಾದ ನಸುಗೆಂಪು ಬಣ್ಣದ ಮರಳು ಶಿಲೆಯ ಶಿಲ್ಪಗಳು ಬಹುತೇಕ ಇದೇ ಕಾಲದಲ್ಲಿ ರಚನೆಯಾದವು. ಗುಪ್ತರ ಕಾಲದಲ್ಲಿ (4ರಿಂದ 6ನೇ ಶತಮಾನ) ಶಿಲ್ಪ ಕಲೆಗಾರಿಕೆ ಉತ್ತುಂಗಕ್ಕೇರಿತು. ಈ ಕಾಲದ ಶಿಲ್ಪ ಕೃತಿಗಳು ಸೂಕ್ಷ್ಮ ವಿನ್ಯಾಸವನ್ನೂ, ನೈಪುಣ್ಯತೆಯನ್ನೂ ಪಡೆದವು. ಈ ಶೈಲಿಗಳು ಮತ್ತು ಭಾರತದ ಇತರೆ ಭಾಗದ ಶೈಲಿಗಳು ಭಾರತೀಯ ಶಾಸ್ತ್ರೀಯ ಕಲೆಯ ಉದಯಕ್ಕೆ ನೆರವಾಯಿತು. ಅಲ್ಲದೆ ಇದೇ ಶೈಲಿಗಳು ಆಗ್ನೇಯ, ಕೇಂದ್ರೀಯ ಮತ್ತು ಪೂರ್ವ ಏಷ್ಯಾದಲ್ಲಿ ವಿಕಸನಗೊಂಡು ಬೌದ್ಧ ಮತ್ತು ಹಿಂದೂ ಶಿಲ್ಪ ಕಲೆಗೆ ಅಮೂಲ್ಯ ಕೊಡುಗೆ ಸಲ್ಲಿಸಿದವು.
ವಾಸ್ತು ಶಿಲ್ಪ
ಭಾರತೀಯ ವಾಸ್ತು ಶಿಲ್ಪ ಕಲೆ, ದೇಶ ಮತ್ತು ಕಾಲದ ಬಹುಮುಖೀ ಅಭಿವ್ಯಕ್ತಿಗಳನ್ನು ಹೊಂದಿದೆ, ಅಲ್ಲದೆ ನಿರಂತರವಾಗಿ ಹೊಸ ಮಾದರಿಯಗಳನ್ನು ಅಳವಡಿಸಿಕೊಳ್ಳುತ್ತಲೇ ಬಂದಿದೆ. ಇದರ ಪರಿಣಾಮ ಹಲವು ಅಮೋಘ ವಾಸ್ತುಕೃತಿಗಳು ನಿರ್ಮಾಣಗೊಂಡವು. ಈ ನಿರ್ಮಾಣ ಇತಿಹಾಸದುದ್ದಕ್ಕೂ ಸ್ವಲ್ಪಮಟ್ಟಿಗೆ ತನ್ನ ನಿರಂತರತೆಯನ್ನು ಉಳಿಸಿಕೊಂಡಿತ್ತು. ಭಾರತೀಯ ವಾಸ್ತುಶಿಲ್ಪದ ಮೂಲ ಸಿಂಧೂ ಕಣಿವೆ ನಾಗರೀಕತೆಯಲ್ಲಿ (2600-1900 BCE) ಕಂಡುಬಂದಿದೆ.ಅತ್ಯುತ್ತಮವಾಗಿ ಯೋಜಿಸಿ ನಿರ್ಮಿಸಿದ ಮನೆ ಹಾಗೂ ನಗರಗಳಲ್ಲಿ ಇದು ಸುವ್ಯಕ್ತ. ಈ ನಗರಗಳ ರಚನೆ ಹಾಗೂ ಬಡಾವಣೆಯ ವಿನ್ಯಾಸಗಳಲ್ಲಿ ಧರ್ಮ ಮತ್ತು ಪ್ರಭುತ್ವಗಳು ಮಹತ್ವದ ಪಾತ್ರ ವಹಿಸಿದಂತೆ ಕಂಡುಬರುವುದಿಲ್ಲ. ಮೌರ್ಯ ಮತ್ತು ಗುಪ್ತ ಸಾಮ್ರಾಜ್ಯ ಹಾಗೂ ಅವರ ಉತ್ತರಾಧಿಕಾರಿಗಳ ಆಳ್ವಿಕೆಯ ಕಾಲದಲ್ಲಿ ಅಜಂತಾ ಎಲ್ಲೋರಗುಹೆಗಳು ಮತ್ತು ಸಾಂಚಿಸ್ತೂಪವೂ ಸೇರಿದಂತೆ ಹಲವು ಬೌದ್ಧ ವಾಸ್ತು ಸಂಕೀರ್ಣಗಳು ನಿರ್ಮಾಣಗೊಂಡವು. ಆನಂತರ ದಕ್ಷಿಣ ಭಾರತದಲ್ಲಿ ಹಲವು ಹಿಂದೂ ದೇವಾಲಯಗಳು ನಿರ್ಮಾಣಗೊಂಡವು. ಅವುಗಳೆಂದರೆ, ಬೇಲೂರಿನ ಚೆನ್ನಕೇಶವ ದೇವಾಲಯ , ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ, ಸೋಮನಾಥಪುರದ ಕೇಶವ ದೇವಾಲಯ, ತಂಜಾವೂರಿನ ಬೃಹದೇಶ್ವರ ದೇವಾಲಯ, ಕೊನಾರ್ಕ್‌ನಲ್ಲಿರುವ ಸೂರ್ಯ ದೇವಾಲಯ, ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯ, ಹಾಗೂ ಭಟ್ಟಿಪ್ರೊಲುವಿನಲ್ಲಿರುವ ಬುದ್ಧ ಸ್ತೂಪ (ಚಿನ್ನ ಲಂಜ ದಿಬ್ಬ ಮತ್ತು ವಿಕ್ರಮಾರ್ಕ ಕೋಟ ದಿಬ್ಬ) ಆಂಗ್‌ಕೋರ್ ವಾಟ್, ಬೋರೋಬುದೂರ್ ಮತ್ತು ಇತರೆ ಬೌದ್ಧ ಹಾಗೂ ಹಿಂದೂ ದೇವಾಲಯಗಳು, ಶೈಲಿಯಲ್ಲಿ ಭಾರತೀಯ ಪಾರಂಪರಿಕ ಹಿಂದೂ ಕಟ್ಟಡಗಳನ್ನು ಬಹುತೇಕ ಹೋಲುತ್ತಿದ್ದು, ಆಗ್ನೇಯ ಏಷ್ಯಾದ ವಾಸ್ತುಶಿಲ್ಪದ ಮೇಲೆ ಭಾರತೀಯ ವಾಸ್ತುಶಿಲ್ಪದ ಗಾಢ ಪ್ರಭಾವವನ್ನು ಎತ್ತಿ ತೋರಿಸುತ್ತವೆ.
ಭಾರತದಲ್ಲಿ ಬಳಕೆಯಲ್ಲಿದ್ದ ವಾಸ್ತು ಶಾಸ್ತ್ರದ ಪಾರಂಪರಿಕ ಶೈಲಿ ಫೆಂಗ್ ಶು ಶೈಲಿಯ ಭಾರತೀಯ ರೂಪವಾಗಿತ್ತು. ಇದು ಇಲ್ಲಿನ ನಗರ ಯೋಜನೆ, ವಾಸ್ತುಶಿಲ್ಪ ಮತ್ತು ದಕ್ಷತೆಯ ಮೇಲೆ ತನ್ನ ಪ್ರಭಾವ ಬೀರಿದೆ. ಯಾವ ಶೈಲಿ ಮೊದಲಿನದುದು ಎಂಬುದು ಇನ್ನೂ ಅಸ್ಪಷ್ಟವಾಗಿದೆ, ಆದರೆ ಎರಡರ ನಡುವೆ ಸಾಮ್ಯತೆಗಳಿರುವುದಂತೂ ಸುಸ್ಪಷ್ಟ. ಫೆಂಗ್ ಶು ಶೈಲಿ ಸಾಮಾನ್ಯವಾಗಿ ವಿಶ್ವದಾದ್ಯಂತ ಬಳಸಲಾಗುತ್ತಿದೆ. ತಾತ್ವಿಕವಾಗಿ ವಾಸ್ತು ಮತ್ತು ಫೆಂಗ್ ಶುಗಳ ನಡುವೆ ಸಾಮ್ಯತೆ ಇದ್ದರೂ, ವಾಸ್ತು, ಮನೆಯಲ್ಲಿ ಶಕ್ತಿಯ (ಸಂಸ್ಕೃತ ದಲ್ಲಿ ಜೀವಶಕ್ತಿ ಅಥವಾ ಪ್ರಾಣ ಮತ್ತು ಚೈನೀಸ್‌ನಲ್ಲಿ ಚಿ ಜಾಪನೀಸ್‌ನಲ್ಲಿಕಿ) ಹರಿವನ್ನು ಸಮನ್ವಯಗೊಳಿಸಲು ಪ್ರಯತ್ನಿಸುತ್ತದೆ. ಮನೆಬಳಕೆಯ ಯಾವ ಯಾವ ವಸ್ತುಗಳನ್ನು ಯಲ್ಲೆಲ್ಲಿ ಇಡಬೇಕು, ಯಾವ ಕೊಠಡಿ ಯಾವ ದಿಕ್ಕಿನಲ್ಲಿರಬೇಕು, ಎಂಬ ವಿವರಗಳ ವಿಚಾರದಲ್ಲಿ ಇದು ಫೆಂಗ್ ಶುಗಿಂತ ಭಿನ್ನವಾಗುತ್ತದೆ. ಪಶ್ಚಿಮದ ಇಸ್ಲಾಮಿಕ್ ಶೈಲಿಯನ್ನು ಭಾರತೀಯ ವಾಸ್ತು ಶೈಲಿ ಅಳವಡಿಸಿಕೊಳ್ಳುವ ಮೂಲಕ, ಹೊಸ ಧರ್ಮವೊಂದರ ಸಂಪ್ರದಾಯವನ್ನು ಆಹ್ವಾನಿಸಿದಂತಾಯಿತು. ಫತೇಪುರ್ ಸಿಕ್ರಿ, ತಾಜ್ ಮಹಲ್, ಗೋಲ ಗುಮ್ಮಟ, ಕುತುಬ್ ಮಿನಾರ್, ದೆಹಲಿಯ ಕೆಂಪುಕೋಟೆ ಮುಂತಾದವು ಈ ಯುಗದ ರಚನೆಗಳು. ಇವು ಆಗಾಗ್ಗೆ ರೂಢಿಗತ ಮಾದರಿಯ ಸಂಕೇತಗಳಂತೆ ಬಳಕೆಯಾಗಿವೆ. ಇಂಡೋ-ಸಾರ್ಸೆನಿಕ್ ಶೈಲಿಯ ಬೆಳವಣಿಗೆ, ಮತ್ತು ಯುರೋಪಿಯನ್ ಗೋಥಿಕ್ ಶೈಲಿಗಳಂತಹ ಇತರೆ ಹಲವು ಶೈಲಿಗಳ ಸಮ್ಮಿಶ್ರಣಕ್ಕೆ ಬ್ರಿಟಿಷ್ ಸಾಮ್ರಾಜ್ಯದ ವಸಾಹತು ಆಳ್ವಿಕೆ ಸಾಕ್ಷಿಯಾಗಿತ್ತು. ವಿಕ್ಟೋರಿಯಾ ಮೆಮೊರಿಯಲ್ ಅಥವಾ ವಿಕ್ಟೋರಿಯಾ ಟಿರ್ಮಿನಸ್ ಗಳು ಇದಕ್ಕೆ ಗಮನಾರ್ಹ ಉದಾಹರಣೆಗಳು. ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಬೌದ್ಧಧರ್ಮದ ವ್ಯಾಪಕವಾಗಿ ಪ್ರಸರಣವು ಭಾರತೀಯ ವಾಸ್ತು ಶೈಲಿಯು ಪೌರಸ್ತ್ಯ ಮತ್ತು ಆಗ್ನೇಯ ಏಷ್ಯಾದ ವಾಸ್ತು ಶೈಲಿಯನ್ನು ಪ್ರಭಾವಿಸಿದೆ. ದೇವಾಲಯದ ಮುಂದಿನ ಎತ್ತರದ ಭಾಗ ಅಥವಾ ಸ್ತೂಪ, ದೇವಾಲಯದ ಶೃಂಗ ಅಥವಾ ಶಿಖರ, ದೇವಾಲಯದ ಗೋಪುರ ಅಥವಾ ಪಗೋಡ ಮತ್ತು ದೇವಾಲಯದ ದ್ವಾರ ಅಥವಾ ತೋರಣ ಮುಂತಾದ ಭಾರತೀಯ ವಾಸ್ತುಶೈಲಿಯ ಅಸಂಖ್ಯಾತ ಲಕ್ಷಣಗಳು ಏಷಿಯನ್ ಸಂಸ್ಕೃತಿಯ ಜನಪ್ರಿಯ ಸಂಕೇತಗಳಾಗಿವೆ. ಈ ಲಕ್ಷಣಗಳು ಪೂರ್ವ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ವಾಸ್ತುರಚನೆಗಳಲ್ಲಿ ಅತಿ ಹೆಚ್ಚು ಬಳಕೆಯಾಗಿರುವುದನ್ನು ಕಾಣಬಹುದು. ದೇವಾಲಯದ ಕೇಂದ್ರೀಯ ಶೃಂಗ ಕೆಲವೊಮ್ಮೆ ವಿಮಾನಂ ಎಂದು ಕರೆಯಲ್ಪಡುತ್ತದೆ. ದಕ್ಷಿಣ ಭಾರತದ ದೇವಾಲಯಗಳ ದ್ವಾರ ಅಥವಾ ಗೋಪುರ ತನ್ನ ಸಂಕೀರ್ಣತೆ ಮತ್ತು ಭವ್ಯತೆಗೆ ಹೆಸರುವಾಸಿಯಾಗಿದೆ. ಭಾರತದ ಸಮಕಾಲೀನ ವಾಸ್ತುಶಿಲ್ಪ ಹಲವಾರು ಶೈಲಿಗಳ ಸಮ್ಮಿಶ್ರಣವಾಗಿದೆ. ನಗರಗಳು ಅತ್ಯಂತ ದಟ್ಟವಾದ ಕಟ್ಟಡಗಳಿಂದಲೂ ಮತ್ತು ಜನ ನಿಬಿಡತೆಯಿಂದಲೂ ತುಂಬಿ ತುಳುಕುತ್ತಿವೆ. ಮುಂಬಯಿನ ನಾರಿಮನ್ ಪಾಯಿಂಟ್ ತನ್ನ ಆರ್ಟ್ ಡೆಕೋ ಮಾದರಿಯ ಕಟ್ಟಡಗಳಿಗೆ ಸುಪ್ರಸಿದ್ಧವಾಗಿದೆ. ಲೋಟಸ್ ಟೆಂಪಲ್(ಕಮಾಲಾಕೃತಿಯ ದೇವಾಲಯ) ಮತ್ತು ಚಂಡೀಘಡದಂತಹ ಯೋಜಿತ ನಗರ ನಿರ್ಮಾಣ ಭಾರತದ ಆಧುನಿಕ ನಗರ ವಾಸ್ತುರಚನೆಯ ಇತ್ತೀಚಿನ ಗಮನಾರ್ಹ ನಿರ್ಮಾಣಗಳಾಗಿವೆ.
ವಿಹಾರ ಮತ್ತು ಕ್ರೀಡೆ
ವಿಹಾರ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಭಾರತದ ಹಲವಾರು ಕ್ರೀಡೆಗಳು ವಿಕಾಸ ಹೊಂದಿವೆ. ಎಂದು ಕರೆಯುವ ಪೌರಸ್ತ್ಯ ಆಧುನಿಕ ಮಾರ್ಷಲ್ ಆರ್ಟ್ಸ್ ಎಂಬುದು ಭಾರತದ ಪ್ರಾಚೀನ ಕ್ರೀಡೆ ಎಂದೂ, ಸಮರ ಕಲೆಗಳು ವಿದೇಶಗಳಿಗೆ ಪ್ರಸಾರವಾಗಿ ಅಲ್ಲಿ ವಿವಿಧ ಮಾರ್ಪಾಡುಗಳಿಗೆ ಒಳಗಾಗಿ ಅಲ್ಲಿ ಬಳಕೆಯಾಗುತ್ತಿದೆ ಎಂಬುದು ಕೆಲವರ ನಂಬಿಕೆ. ದೇಶದ ಬಹುತೇಕ ಭಾಗಗಳಲ್ಲಿ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಆಡುವ ಕಬಡ್ಡಿ ಮತ್ತು ಗಿಲ್ಲಿ-ದಂಡಗಳು ಸಾಂಪ್ರದಾಯಿಕ ದೇಶೀಯ ಕ್ರೀಡೆಗಳು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ಪರಿಚಯಿಸಲಾದ ಫೀಲ್ಡ್ ಹಾಕಿ, ಫುಟ್‌ಬಾಲ್ (ಸಾಕರ್) ಹಾಗೂ ವಿಶೇಷವಾಗಿ ಕ್ರಿಕೆಟ್ ಮುಂತಾದ ಕೆಲವು ಕ್ರೀಡೆಗಳು ಈಗ ಸಾಕಷ್ಟು ಜನಪ್ರಿಯವಾಗಿವೆ. ಫೀಲ್ಡ್ ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾಗಿದ್ದರೂ, ಕ್ರಿಕೆಟ್ ಭಾರತದಲ್ಲಿ ಮಾತ್ರವಲ್ಲಿ ಇಡೀ ಉಪಖಂಡದಲ್ಲೇ ಅತ್ಯಂತ ಜನಪ್ರಿಯ ಕ್ರೀಡೆ. ಇದು ಮನರಂಜನೆಯ ಬಹುಮುಖ್ಯ ಮಾಧ್ಯಮವಾಗಿಯೂ ವೃತ್ತಿಪರವಾಗಿಯೂ ಅಭಿವೃದ್ಧಿಗೊಂಡಿದೆ. ಕ್ರಿಕೆಟ್ ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಾಜತಾಂತ್ರಿಕ ಸಂಬಂಧ ವೃದ್ದಿಗೂ ಬಳಕೆಯಾಗಿದೆ. ಎರಡೂ ದೇಶಗಳ ಕ್ರಿಕೆಟ್ ತಂಡಗಳು ವಾರ್ಷಿಕವಾಗಿ ಕ್ರಿಕೆಟ್ ಮೈದಾನದಲ್ಲಿ ಎದುರುಬದರಾಗುತ್ತವೆ. ಈ ಸ್ಪರ್ಧೆಗಳು ಎರಡೂ ತಂಡಗಳ ವೀಕ್ಷಕರನ್ನು ಸ್ವಲ್ಪ ಭಾವೋದ್ರಿಕ್ತರನ್ನಾಗಿ ಮಾಡುವುದು ಸಾಮಾನ್ಯ. ಪೋಲೋಕೂಡ ಇಲ್ಲಿನ ಜನಪ್ರಿಯ ಕ್ರೀಡೆ. ,ಚದುರಂಗ(=ಚೆಸ್) ಹಾವು ಏಣಿ ಆಟ, ಇಸ್ಪೀಟ್ ಆಟ, ಕೇರಮ್, ಬ್ಯಾಡ್‌ಮಿಂಟನ್ ಗಳು ಜನಪ್ರಿಯ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು. ವಿಶ್ವ ಪ್ರಸಿದ್ಧ ಚೆಸ್ ಕ್ರೀಡೆ ಹುಟ್ಟಿದ್ದು ಭಾರತದಲ್ಲಿ. ಶಕ್ತಿಯುತವೂ ಮತ್ತು ವೇಗೋತ್ಕರ್ಷವಾದ ಕ್ರೀಡೆಗಳೂ ಕೂಡ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದಿವೆ. ವ್ಯಾಯಾಮಕ್ಕಾಗಿ ಬಳಸುತ್ತಿದ್ದ ತೂಕ, ಆಟದ ಗೋಲಿ ಮತ್ತು ಪಗಡೆಯಾಟದಲ್ಲಿ ಉಪಯೋಗಿಸುತ್ತಿದ್ದ ದಾಳ-ಇವೆಲ್ಲಕ್ಕೂ ಪ್ರಾಚೀನ ಭಾರತದಲ್ಲಿ ಕಲ್ಲುಗಳನ್ನು ಬಳಸಲಾಗುತ್ತಿತ್ತು. ಪ್ರಾಚೀನ ಭಾರತದಲ್ಲಿ ಜನರು ದ್ವಿಚಕ್ರ ರಥದ ಓಟ, ಬಿಲ್ಲು, ಕುದುರೆ ಸವಾರಿ, ಯುದ್ಧ ತಂತ್ರಗಳು, ಕುಸ್ತಿ, ಭಾರ ಎತ್ತುವ ಸ್ಪರ್ಧೆ, ಬೇಟೆ, ಈಜು ಮತ್ತು ಓಟದ ಸ್ಪರ್ಧೆ ಮುಂತಾದ ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದರು.
ಜನಪ್ರಿಯ ಮಾಧ್ಯಮ
ದೂರದರ್ಶನ
ದೆಹಲಿಯಲ್ಲಿ 1959ರಲ್ಲಿ ಶಿಕ್ಷಣೋದ್ಧೇಶದ ಪ್ರಾಯೋಗಿಕ ಸಿಗ್ನಲ್ ಪ್ರಸಾರ ಮಾಡುವುದರೊಂದಿಗೆ ಭಾರತದಲ್ಲಿ ದೂರದರ್ಶನ ಸೇವೆ ಆರಂಭವಾಯಿತು.[೨೯] ಭಾರತೀಯ ಕಿರುತೆರೆ ಪ್ರದರ್ಶನ ಆರಂಭಗೊಂಡಿದ್ದು 1970ರ ದಶಕದ ಮಧ್ಯಾವಧಿಯಲ್ಲಿ. ಆ ಸಮಯದಲ್ಲಿ ದೂರ್‌ದರ್ಶನ್ ಎನ್ನುವ ಸರ್ಕಾರಿ ಒಡೆತನದ ಒಂದೇ ಒಂದು ರಾಷ್ಟ್ರೀಯ ಚಾನೆಲ್ ಕಾರ್ಯಾಚರಣೆ ನಡೆಸುತ್ತಿತ್ತು. 1982ರಲ್ಲಿ ದೆಹಲಿಯಲ್ಲಿ ನಡೆದ ಏಷಿಯನ್ ಗೇಮ್ಸ್‌ನೊಂದಿಗೆ ಭಾರತೀಯ ದೂರದರ್ಶನ ಪ್ರಸಾರದಲ್ಲಿ ಕ್ರಾಂತಿಯಾಯಿತು. ಅದೇ ವರ್ಷ ಭಾರತ ದೂರದರ್ಶನ ಪ್ರಸಾರವನ್ನು ವರ್ಣದಲ್ಲಿ ನೋಡಿತು. ರಾಮಾಯಣ ಮತ್ತು ಮಹಾಭಾರತಸರಣಿಗಳು ಆ ಕಾಲದಲ್ಲಿ ಪ್ರಸಾರವಾದ ಅತ್ಯಂತ ಜನಪ್ರಿಯ ಟಿವಿ ಕಾರ್ಯಕ್ರಮಗಳು. 1980ರ ದಶಕದ ಉತ್ತರಾರ್ಧದ ವೇಳೆಗೆ ಜನರು ಹೆಚ್ಚು ಹೆಚ್ಚು ಸ್ವಂತ ಟಿವಿ ಖರೀದಿಸಲು ಆರಂಭಿಸಿದರು. ದೇಶದಲ್ಲಿ ಒಂದೇ ಒಂದು ಟಿವಿ ಚಾನೆಲ್ ಇದ್ದರೂ, ದೂರದರ್ಶನ ಕಾರ್ಯಕ್ರಮಗಳು ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗಿ ಪೂರಣತಾ ಬಿಂದುವನ್ನು ತಲಪಿತು. ಹೀಗಾಗಿ ಸರ್ಕಾರ ಮತ್ತೊಂದು ಚಾನೆಲ್ ಆರಂಭಿಸಿ, ದಿನದ ಅರ್ಧ ಭಾಗ ರಾಷ್ಟ್ರೀಯ ಪ್ರಸಾರವನ್ನೂ ಉಳಿದರ್ಧ ಭಾಗ ಆಯಾ ಪ್ರದೇಶಗಳಲ್ಲಿ ಪ್ರಾದೇಶಿಕ ಪ್ರಸಾರಕ್ಕೂ ಚಾಲನೆ ನೀಡಿತು. DD 2 ಎನ್ನಲಾಗಿದ್ದ ಈ ಚಾನೆಲ್ ಅನ್ನು ನಂತರ DD ಮೆಟ್ರೋ ಎಂದು ಬದಲಾಯಿಸಲಾಯಿತು. ಎರಡೂ ಚಾನೆಲ್‌ಗಳು ಭೌಮಿಕವಾಗಿ (ಆಂಟೆನಾಗಳ ಮೂಲಕ) ಪ್ರಸಾರವಾಗುತ್ತಿದ್ದವು. 1991ರಲ್ಲಿ ಸರ್ಕಾರ ದೂರದರ್ಶನ ಕ್ಷೇತ್ರವನ್ನು ಉದಾರೀಕರಣಗೊಳಿಸಿ ಕೇಬಲ್ ಟೆಲಿವಿಷನ್ ಪ್ರಸಾರಕ್ಕೆ ಮಾರುಕಟ್ಟೆಯನ್ನು ಮುಕ್ತಗೊಳಿಸಿತು. ಅಲ್ಲಿಯವರೆಗೂ ಲಭ್ಯವಿದ್ದ ಚಾನೆಲ್‌ಗಳ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳವಾಯಿತು. ಇಂದು ಭಾರತೀಯ ಬೆಳ್ಳಿ ತೆರೆ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಎಲ್ಲ ರಾಜ್ಯಗಳಲ್ಲೂ ಸಾವಿರಾರು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಕಿರುತೆರೆ ನೂರಾರು ಜನಪ್ರಿಯ ನಟರನ್ನು ಸೃಷ್ಟಿಸಿದ್ದು, ಇವರಲ್ಲಿ ಕೆಲವರು ರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಖ್ಯಾತರಾಗಿದ್ದಾರೆ. ಗೃಹ ಅಥವಾ ಕುಟುಂಬ ಕೇಂದ್ರಿತ TV ಧಾರಾವಾಹಿಗಳು, ಗೃಹಿಣಿಯರು ಮತ್ತು ಉದ್ಯೋಗಸ್ಥ ಮಹಿಳೆಯರಲ್ಲಿ ವಿಪರೀತ ಜನಪ್ರಿಯವಾಗಿವೆ. ಜೊತೆಗೆ ಎಲ್ಲ ವರ್ಗದ ಪುರುಷರಲ್ಲೂ ಇವು ಜನಪ್ರಿಯತೆ ಗಳಿಸಿವೆ. ಕೆಲವು ನಟರು ಇವುಗಳನ್ನು ಬಾಲಿವುಡ್‌ನಲ್ಲಿ ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ. ಪಾಶ್ಚಾತ್ಯ TV ಉದ್ಯಮದ ಹಾಗೆ ಭಾರತೀಯ TV ಕ್ಷೇತ್ರ ಕೂಡ ಒಂದೇ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಚಾನೆಲ್‌ಗಳನ್ನು ಹೊಂದಿದೆ. ಉದಾಹರಣೆಗೆ, ಕಾರ್ಟೂನ್ ನೆಟ್‌ವರ್ಕ್, ನಿಕೆಲೋಡಿಯನ್ ಮತ್ತು MTV ಇಂಡಿಯಾ
ಚಲನಚಿತ್ರ
ಭಾರತದಲ್ಲಿ ಮುಂಬಯಿ ಮೂಲದ ಹಿಂದಿ ಚಿತ್ರೋದ್ಯಮ ಬಾಲಿವುಡ್ ಎಂಬ ಅನೌಪಚಾರಿಕ ಹೆಸರಿನಲ್ಲಿ ಜನಪ್ರಿಯವಾಗಿದೆ. ಬಾಲಿವುಡ್ ಮತ್ತು ಇತರೆ ಸಿನಿಮಾ ಕೇಂದ್ರಗಳು (ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು ಮತ್ತು ತೆಲುಗು) ವಿಸ್ತಾರವಾದ ಭಾರತೀಯ ಸಿನಿಮಾ ಉದ್ಯಮವನ್ನು ಮತ್ತಷ್ಟು ವೈವಿಧ್ಯಮಯಗೊಳಿಸಿವೆ. ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಮತ್ತು ಮಾರಾಟವಾಗುವ ಟಿಕೆಟ್‌ಗಳ ಆಧಾರದ ಮೇಲೆ ಭಾರತೀಯ ಚಿತ್ರೋದ್ಯಮ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಚಿತ್ರಗಳು ನಿರ್ಮಾಣವಾಗುವ ಚಿತ್ಯೋದ್ಯಮ ಎಂದು ಪರಿಗಣಿತವಾಗಿದೆ. ವಿಮರ್ಶಕರ ಅಪಾರ ಪ್ರಶಂಸೆಗೊಳಗಾದ ವಿಶ್ವಪ್ರಸಿದ್ಧ ಸಿನಿಮಾ ನಿರ್ದೇಶಕ-ನಿರ್ಮಾಪಕರನ್ನು ಭಾರತ ರೂಪಿಸಿದೆ. ಸತ್ಯಜಿತ್ ರೇ, ರಿತ್ವಿಕ್ ಘಟಕ್, ಗುರುದತ್, K. ವಿಶ್ವನಾಥ್, ಆದೂರ‍್ ಗೋಪಾಲಕೃಷ್ಣನ್, ಗಿರೀಶ್ ಕಾಸರವಳ್ಳಿ, ಶೇಖರ‍್ ಕಪೂರ್, ಹೃಶಿಕೇಶ್ ಮುಖರ್ಜೀ, ಶಂಕರ್ ನಾಗ್, ಗಿರೀಶ್ ಕಾರ್ನಾಡ್, G. V. ಐಯ್ಯರ್, ಮುಂತಾದವರನ್ನು ವಿಮರ್ಶಕರು ಕೊಂಡಾಡಿದವರಲ್ಲಿ ಕೆಲವರು.(ನೋಡಿ ಭಾರತದ ಚಿತ್ರ ನಿರ್ದೇಶಕರು)). ಇತ್ತೀಚಿನ ವರ್ಷಗಳಲ್ಲಿ ಆರ್ಥಿಕತೆ ಬೆಳೆದಂತೆಯೂ,ಜಾಗತಿಕ ಮಟ್ಟದ ಚಲನಚಿತ್ರಗಳಿಗೆ ನಾವು ಹತ್ತಿರವಾದಂತೆಯೂ, ವೀಕ್ಷಕರ ಅಭಿರುಚಿ ಮತ್ತು ಚಿತ್ರದ ಕಥಾವಸ್ತು ಮತ್ತು ನಿರ್ಮಾಣ ತಂತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ದೇಶದ ಬಹುತೇಕ ನಗರಗಳಲ್ಲಿ ನಾಯಿಕೊಡೆಗಳಂತೆ ಮೇಲೆದ್ದಿರುವ ಮಲ್ಟಿಫ್ಲೆಕ್ಸ್‌ಗಳು (=ವಾಣಿಜ್ಯ ಸಂಕೀರ್ಣಗಳು) ಸಿನಿಮಾ ಉದ್ಯಮದ ಆದಾಯ ಗಳಿಕೆಯ ಮಾದರಿಯನ್ನು ಬದಲಾಯಿಸಿವೆ.
ಇದನ್ನೂ ನೋಡಿ
- ದಕ್ಷಿಣ ಏಷ್ಯಾ ಜನಾಂಗೀಯ ಗುಂಪುಗಳು
- ಭಾರತೀಯ ಊಟ ಅಥವಾ ಭೋಜನದ ರೀತಿನೀತಿಗಳು
- ರಾಜ್ಯವಾರು ಭಾರತೀಯರ ಪಟ್ಟಿಗಳು
- ಭಾರತೀಯ ಧರ್ಮಗಳು
ಆಕರಗಳು
- ↑ ಔಟ್‌ಸೋರ್ಸಿಂಗ್ ಟು ಇಂಡಿಯಾ ಬೈ ಮಾರ್ಕ್ ಕೊಬಾಯಾಶಿ-ಹಿಲರಿ
- ↑ ಫೈಂಡಿಗ್ ಲಾಸ್ಟ್ - ನಿಕ್ಕಿ ಸ್ಟ್ಯಾಫೋರ್ಡ್
- ↑ "Religions Muslim" (PDF). Registrat General and Census Commissioner, India. Archived from the original (PDF) on 2006-05-23. Retrieved 2006-06-01.
- ↑ ೪.೦ ೪.೧ ೪.೨ ೪.೩ Eugene M. Makar (2007). An American's Guide to Doing Business in India.
- ↑ http://www.jamaica-gleaner.com/gleaner/20050215/life/life1.html Archived 2008-12-04 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರೇಮ ಮತ್ತು ನಿಯೋಜಿತ ವಿವಾಹಗಳು, ಕೀಶ ಷೇಕ್ಸ್‌ಪಿಯರ್
- ↑ BBC News | SOUTH ASIA | ಚೈಲ್ಡ್ ಮಾರಿಯೇಜಸ್ ಟಾರ್ಗೆಟೆಡ್ ಇನ್ ಇಂಡಿಯಾ
- ↑ "ಆರ್ಕೈವ್ ನಕಲು" (PDF). Archived from the original (PDF) on 2009-06-19. Retrieved 2009-11-27.
- ↑ "ಆರ್ಕೈವ್ ನಕಲು". Archived from the original on 2009-01-27. Retrieved 2009-11-27.
- ↑ Carol S. Coonrod (1998). "Chronic Hunger and the Status of Women in India". Archived from the original on 2014-09-10. Retrieved 2006-12-24.
{{cite web}}
: Unknown parameter|month=
ignored (help) - ↑ ಉಲ್ಲೇಖ ದೋಷ: Invalid
<ref>
tag; no text was provided for refs namedun_women_free_equal
- ↑ Louise Marie M. Cornillez (Spring 1999). "The History of the Spice Trade in India".
- ↑ "Meatless Monday: There's No Curry in India". Archived from the original on 2009-04-16. Retrieved 2009-11-27.
- ↑ ಕಾಮತ್ಸ್ ಪೋಟ್‌ಪುರ್ರಿ: ದಿ ಸಿಗ್ನಿಫಿಕೆನ್ಸ್ ಆಫ್ ದಿ ಹೋಲಿ ಡಾಟ್ (ಬಿಂದಿ)
- ↑ http://almaz.com/nobel/literature/1913a.html
- ↑ "ಕನ್ನಡ ಲಿಟರೇಚರ್," ಬ್ರಿಟಾನಿಕ ವಿಶ್ವಕೋಶ , 2008. ಉಕ್ತಿ: "ದಿ ಅರ್ಲಿಯೆಸ್ಟ್ ಲಿಟರರಿ ವರ್ಕ್ ಈಸ್ ದಿ ಕವಿರಾಜಮಾರ್ಗ(c. AD 850), ಅ ಟ್ರೀಟೈಸ್ ಆನ್ ಪೊಯೆಟಿಕ್ಸ್ ಬೇಸ್ಡ್ ಆನ್ ಅ ಸ್ಯಾನ್‌ಸ್ಕ್ರಿಟ್ ಮಾಡೆಲ್."
- ↑ "ನಾರಾಯಣ್, ಕೇಳ್ಕರ್ ಅಂಡ್ ಶಾಸ್ತ್ರಿ ಚೂಸನ್ ಫಾರ್ ಜೊಸೆಫ್ ಅವಾರ್ಡ್", ಆಲ್ ಇಂಡಿಯಾ ರೇಡಿಯೋ , ನವೆಂಬರ್ 22, 2008.
- ↑ ೧೭.೦ ೧೭.೧ Dr. Jytosna Kamat. "Purandara Dasa". Kamats Potpourri. Retrieved 2006-12-31.
- ↑ Madhusudana Rao CR. "Sri Purandara Dasaru". Dvaita Home Page. Archived from the original on 2006-11-30. Retrieved 2006-12-31.
- ↑ S. Sowmya, K. N. Shashikiran. "History of Music". Srishti's Carnatica Private Limited. Retrieved 2006-12-31.
- ↑ "ಆರ್ಕೈವ್ ನಕಲು". Archived from the original on 2006-11-30. Retrieved 2009-11-27.
- ↑ Madhusudana Rao CR. "Sri Purandara Dasaru". Dvaita Home Page (www.dviata.org). Archived from the original on 2006-11-30. Retrieved 2006-12-31.
- ↑ "ಸೌಥ್ ಏಷಿಯನ್ ಆರ್ಟ್ಸ್: ಟೆಕ್ನಿಕ್ಸ್ ಅಂಡ್ ಟೈಪ್ಸ್ ಆಫ್ ಕ್ಲಾಸಿಕಲ್ ಡ್ಯಾನ್ಸ್"
- ↑ ""ಇಂಡಿಯನ್ ಡ್ಯಾನ್ಸ್ ವಿಡಿಯೋಸ್: ಭರತನಾಟ್ಯಂ, ಕಥಕ್, ಭಾಂಗ್ರ, ಗರ್ಬ, ಬಾಲಿವುಡ್ ಅಂಡ್ ವೇರಿಯಸ್ ಪೋಕ್ ಡ್ಯಾನ್ಸ್"". Archived from the original on 2009-08-20. Retrieved 2009-11-27.
- ↑ K. A. Chandrahasan, ಇನ್ ಪರ್ಸ್ಯೂಟ್ ಆಫ್ ಎಕ್ಸೆಲೆನ್ಸ್ (ಪ್ರದರ್ಶನ ಕಲೆಗಳು), "ದಿ ಹಿಂದ", ಭಾನುವಾರ ಮಾರ್ಚ್ 26, 1989 Archived 2012-11-13 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಮಣಿ ಮಾಧವ ಚಕ್ಯರ್: ದಿ ಮಾಸ್ಟರ್ ಅಟ್ ವರ್ಕ್ (ಇಂಗ್ಲಿಷ್ ಚಿತ್ರ), ಕವಳಮ್ N. ಪಣಿಕರ್, ಸಂಗೀತ ನಾಟಕ ಅಕ್ಯಾಡೆಮಿ, ನವ ದೆಹಲಿ, 1994
- ↑ ಕಾಮತ್ (2003), ಪುಟ 282
- ↑ ಕಾಮತ್(2003), ಪುಟ 283
- ↑ ಉಮಾಯಿದ್ ಭವನ್ ಅರಮನೆ, ಜೋಧ್‌ಪುರದಲ್ಲಿ ಉಮಾಯಿದ್ ಭವನ ಜನಪ್ರಿಯ ಅರಮನೆ ತಂಗುದಾಣ
- ↑ "A Snapshot of Indian Television History". Indian Television Dot Com Pvt Ltd. Retrieved 2006-06-01.
ಹೆಚ್ಚಿನ ಓದಿಗಾಗಿ
- Nilakanta Sastri, K.A. (2002) [1955]. A history of South India from prehistoric times to the fall of Vijayanagar. New Delhi: Indian Branch, Oxford University Press. ISBN 0-19-560686-8.
- Narasimhacharya, R (1988) [1988]. History of Kannada Literature. New Delhi, Madras: Asian Educational Services. ISBN 81-206-0303-6.
- Rice, B.L. (2001) [1897]. Mysore Gazatteer Compiled for Government-vol 1. New Delhi, Madras: Asian Educational Services. ISBN 81-206-0977-8.
- Kamath, Suryanath U. (2001) [1980]. A concise history of Karnataka: from pre-historic times to the present. Bangalore: Jupiter books. OCLC 7796041. LCCN 809-5179.
- ವರ್ಮ, ಪವನ್ K . ಬೀಯಿಂಗ್ ಇಂಡಿಯನ್: ಇನ್‌ಸೈಡ್ ದಿ ರಿಯಲ್ ಇಂಡಿಯಾ . (ISBN 0-434-01391-9)
- ಟುಲ್ಲಿ, ಮಾರ್ಕ್. ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯಾ . (ISBN 0-14-010480-1)
- ನೈಪಾಲ್, V.S. India: A Million Mutinies Now [89] ಜರ್ಮನಿ (ISBN 0-7493-9920-1)
- ಗ್ರಿಹಾಲ್ಟ್, ನಿಕಿ. ಇಂಡಿಯಾ - ಕಲ್ಚರ್ ಸ್ಮಾರ್ಟ್ !: ಅ ಕ್ವಿಕ್ ಗೈಡ್ ಟು ಕಸ್ಟಮ್ಸ್ ಅಂಡ್ ಎಟಿಕೆಟ್. (ISBN 1-85733-305-5)
- ಮಂಜಾರಿ ಉಯಿಲ್, ಫಾರಿನ್ ಇನ್‌ಫ್ಲೂಯೆನ್ಸ್ ಆನ್ ಇಂಡಿಯನ್ ಕಲ್ಚರ್ (c.600 BC ಯಿಂದ AD 320ರವರೆಗೆ) , (ISBN 81-88629-60-X)