ಪ್ರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೋಗ, ಭಾರತಿಯ ವೈದ್ಯಶಾಸ್ತ್ರ ಮತ್ತು ಸಮರಕಲೆಗಳು ಸೇರಿದಂತೆ ಹಿಂದೂ ತತ್ವಶಾಸ್ತ್ರದಲ್ಲಿ, ಪ್ರಾಣವು (ಜೀವಶಕ್ತಿಗೆ ಸಂಸ್ಕೃತ ಪದ) ಎಲ್ಲ ಬ್ರಹ್ಮಾಂಡಶಕ್ತಿಯನ್ನು ಒಳಗೊಳ್ಳುತ್ತದೆ ಮತ್ತು ಎಲ್ಲ ಮಟ್ಟಗಳಲ್ಲಿ ಬ್ರಹ್ಮಾಂಡವನ್ನು ವ್ಯಾಪಿಸುತ್ತದೆ. ಇದು ನಿರ್ಜೀವ ವಸ್ತುಗಳಲ್ಲಿ ಇರುವ ಶಕ್ತಿಗಳನ್ನೂ ಒಳಗೊಳ್ಳುತ್ತದೆ. ಹಿಂದೂ ಸಾಹಿತ್ಯದಲ್ಲಿ, ಪ್ರಾಣವು ಸೂರ್ಯನಿಂದ ಹುಟ್ಟಿಕೊಳ್ಳುತ್ತದೆಂದು ಮತ್ತು ಬ್ರಹ್ಮಾಂಡದ ಘಟಕಗಳನ್ನು ಜೋಡಿಸುತ್ತದೆಂದು ಕೆಲವೊಮ್ಮೆ ವರ್ಣಿಸಲಾಗುತ್ತದೆ.[೧] ಈ ಜೀವಶಕ್ತಿಯನ್ನು ಪ್ರಾಚೀನ ವೇದಗಳು ಮತ್ತು ಉಪನಿಷತ್ತುಗಳಲ್ಲಿ ಸ್ಪಷ್ಟವಾಗಿ ಆವಾಹಿಸಿ ವಿವರಿಸಲಾಗಿದೆ.

ಜೀವಿಗಳಲ್ಲಿ, ಈ ವಿಶ್ವಶಕ್ತಿಯು ವಾಯುಗಳು ಎಂದು ಕರೆಯಲ್ಪಡುವ ಐದು ಬಗೆಯ ಪ್ರಾಣಗಳ ಮೂಲಕ ಎಲ್ಲ ಶಾರೀರಿಕ ಕ್ರಿಯೆಗಳಿಗೆ ಜವಾಬ್ದಾರವಾಗಿದೆ ಎಂದು ಪರಿಗಣಿಸಲಾಗಿದೆ. ಆಯುರ್ವೇದ, ತಂತ್ರ ಮತ್ತು ಟಿಬೇಟ್‍ನ ವೈದ್ಯಶಾಸ್ತ್ರ ಈ ಮೂರೂ ಪ್ರಾಣ ವಾಯುವನು ಮೂಲಭೂತ ವಾಯು ಮತ್ತು ಇದರಿಂದ ಇತರ ಎಲ್ಲ ವಾಯುಗಳು ಹುಟ್ಟಿಕೊಳ್ಳುತ್ತವೆಂದು ವರ್ಣಿಸುತ್ತವೆ.

ಪ್ರಾಚೀನ ಪರಿಕಲ್ಪನೆಯಾದ ಪ್ರಾಣವನ್ನು ಉಪನಿಷತ್ತುಗಳು ಮತ್ತು ವೇದಗಳು ಸೇರಿದಂತೆ ಮುಂಚಿನ ಅನೇಕ ಹಿಂದೂ ಪಠ್ಯಗಳಲ್ಲಿ ವರ್ಣಿಸಲಾಗಿದೆ. ಪ್ರಾಣದ ಅತ್ಯಂತ ಮುಂಚಿನ ಉಲ್ಲೇಖಗಳಲ್ಲಿ ಒಂದು ಛಾಂದೋಗ್ಯ ಉಪನಿಷತ್‍ನಲ್ಲಿ ಮಾಡಲಾಗಿದೆ, ಆದರೆ ಕಠ, ಮುಂಡಕ ಮತ್ತು ಪ್ರಶ್ನೋಪನಿಷತ್ ಸೇರಿದಂತೆ ಅನೇಕ ಇತರ ಉಪನಿಷತ್ತುಗಳೂ ಈ ಪರಿಕಲ್ಪನೆಯನ್ನು ಬಳಸಿಕೊಳ್ಳುತ್ತವೆ. ಈ ಪರಿಕಲ್ಪನೆಯನ್ನು ಬಹಳ ವಿವರವಾಗಿ ಹಠ ಯೋಗ, ತಂತ್ರ ಮತ್ತು ಆಯುರ್ವೇದದ ಅಭ್ಯಾಸಗಳು ಮತ್ತು ಸಾಹಿತ್ಯದಲ್ಲಿ ಹೇಳಲಾಗಿದೆ.

ವಾಯುಗಳ ಮೂಲಕ ಪ್ರಾಣವನ್ನು ವಿಂಗಡಿಸುವುದು ಒಂದು ರೀತಿಯಾಗಿದೆ. ಸಂಸ್ಕೃತದಲ್ಲಿ ವಾಯು ಎಂದರೆ ಗಾಳಿ, ಮತ್ತು ಈ ಪದವನ್ನು ಹಿಂದೂ ತತ್ವಶಾಸ್ತ್ರದಲ್ಲಿ ವಿವಿಧ ಸಂದರ್ಭಗಳಲ್ಲಿ ಬಳಸಲಾಗಿದೆ. ಪ್ರಾಣವು ಮೂಲಭೂತ ವಾಯು ಎಂದು ಪರಿಗಣಿಸಲಾಗಿದೆ ಮತ್ತು ಇದರಿಂದ ಎಲ್ಲ ಇತರ ವಾಯುಗಳು ಹುಟ್ಟಿಕೊಳ್ಳುತ್ತವೆ. ಇತರ ವಾಯುಗಳೆಂದರೆ ಅಪಾನ, ಉದಾನ, ಸಮಾನ ಮತ್ತು ವ್ಯಾನ. ಇವನ್ನು ಪ್ರಾಣವಾಯುಗಳೆಂದು ಕರೆಯಲಾಗುತ್ತದೆ. ಹೃದಯದ ಬಡಿತ ಮತ್ತು ಉಸಿರಾಟ ಪ್ರಾಣವಾಯುವಿನ ಕಾರ್ಯಭಾರವಾಗಿದೆ. ಪ್ರಾಣವು ಉಸಿರಿನ ಮೂಲಕ ಶರೀರವನ್ನು ಪ್ರವೇಶಿಸುತ್ತದೆ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಪ್ರತಿ ಜೀವಕೋಶಕ್ಕೆ ಕಳಿಸಲ್ಪಡುತ್ತದೆ. ಶ್ವಾಸಕೋಶಗಳು ಮತ್ತು ವಿಸರ್ಜನಾ ವ್ಯವಸ್ಥೆಯ ಮೂಲಕ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕುವುದು ಅಪಾನವಾಯುವಿನ ಕಾರ್ಯಭಾರವಾಗಿದೆ. ಧ್ವನಿ ಉಪಕರಣದ ಮೂಲಕ ಧ್ವನಿ ಉತ್ಪಾದನೆಯು ಉದಾನವಾಯುವಿನ ಕಾರ್ಯಭಾರವಾಗಿದೆ, ಉದಾ. ಮಾತಾಡುವುದು, ಹಾಡುವುದು, ನಗುವುದು ಮತ್ತು ಅಳುವುದು. ಜೊತೆಗೆ ಇದು ಜೀವಿಯ ಉದ್ದೇಶಕ್ಕೆ ಅನುಗುಣವಾದ ಧ್ವನಿಗಳನ್ನು ಉತ್ಪಾದಿಸಲು ಅಗತ್ಯವಾದ ಜಾಗೃತ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಉದಾನವು ಉನ್ನತ ಕೇಂದ್ರಗಳಿಗೆ ದೇಹದ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Swami Satyananda Saraswati (September 1981). "Prana: the Universal Life Force". Yoga Magazine. Bihar School of Yoga. Archived from the original on 27 ಮೇ 2015. Retrieved 31 July 2015.
"https://kn.wikipedia.org/w/index.php?title=ಪ್ರಾಣ&oldid=1056544" ಇಂದ ಪಡೆಯಲ್ಪಟ್ಟಿದೆ