ಕಥಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಥಕ್ ಬಹು ಪ್ರಾಚೀನ ಕಾಲದಿಂದ ಭಾರತದಲ್ಲಿನ ದೇವಾಲಯಗಳಲ್ಲಿ ದೇವತಾ ಪ್ರೀತ್ಯರ್ಥವಾಗಿ ದೇವದಾಸಿಯರಿಂದ ನೆರವೇರುತ್ತಿದ್ದ ನೃತ್ಯಕ್ಕೆ ಕಥಕ್ ಎಂದೂ ಅಂಥ ನೃತ್ಯವನ್ನು ಕಲಿಸಿಕೊಡುತ್ತಿದ್ದ ಒಂದು ವರ್ಗದ ಬ್ರಾಹ್ಮಣ ಉಪಾಧ್ಯಾಯರಿಗೆ ಕಥಕ ಅಥವ ಕಥಿಕ ಎಂದೂ ಹೆಸರಿದೆ. ಉತ್ತರ ಹಿಂದೂಸ್ತಾನದಲ್ಲಿನ ಲಖ್ನೋ ಮತ್ತು ಜಯಪುರಗಳಲ್ಲಿ ಈ ನೃತ್ಯ ಕ್ರಮೇಣ ಅಭಿವೃದ್ಧಿಗೆ ಬಂದು ಪುಜ್ಯಸ್ಥಾನವನ್ನು ಪಡೆಯಿತಲ್ಲದೆ ಒಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆಯಿತು.

ಮುಸ್ಲಿಂ ಆಡಳಿತದಲ್ಲಿ[ಬದಲಾಯಿಸಿ]

ಉತ್ತರ ಹಿಂದೂಸ್ಥಾನದಲ್ಲಿ ಮುಸ್ಲಿಮರ ಆಡಳಿತ ಬಂದ ಮೇಲೆ ದೇವಾಲಯಗಳಲ್ಲಿ ನರ್ತಿಸುವ ದೇವದಾಸಿಯರು ಕಥಕ್ ನೃತ್ಯವನ್ನು ಅನುಮೋದಿಸದಿರುವಂಥ ಪರಿಸ್ಥಿತಿ ಒದಗಿ ಈ ಕಲೆಗೆ ಕಳಂಕ ಬಂತು. ಅಲ್ಲದೆ ಆಗಿನ ಕಾಲದಲ್ಲಿ ಸತತ ಯುದ್ಧ, ಹೋರಾಟಗಳಿದ್ದ ಕಾರಣ ಈ ಕಲೆ ಕ್ಷೀಣವಾಗುತ್ತ ಬಂತು. ಆದರೂ ಅಂದಿನ ಕಥಕರು ತಮ್ಮ ಕಲೆಯನ್ನು ಕಾಪಾಡಿಕೊಂಡು ಬರಲು ಬಹುವಾಗಿ ಶ್ರಮಿಸಿದರು.[೧] ಕ್ರಮೇಣ ಸುಖ ಸೌಂದರ್ಯ ವಿಲಾಸಿಗಳಾದ ನವಾಬರು, ದೊರೆಗಳು ಮತ್ತು ಶ್ರೀಮಂತರು, ತಮ್ಮ ವಿನೋದಕ್ಕಾಗಿಯೂ ತಮ್ಮ ಮನೆತನಗಳ ಶುಭ ಸಂತೋಷ ಸಮಾರಂಭಗಳಲ್ಲಿಯೂ ಈ ಕಥಕರನ್ನು ಆಹ್ವಾನಿಸಿ ನೃತ್ಯ ಕಾರ್ಯಕ್ರಮಗಳನ್ನು ಜರುಗಿಸಲು ಆರಂಭಿಸಿದರು. ಕಾಲ ಸರಿದಂತೆ ಕೆಲವು ಕಥಕರು ದೊಡ್ಡ ದೊಡ್ಡ ಪಟ್ಟಣಗಳಲ್ಲಿರುವ ರಾಜರ, ನವಾಬರ ಆಸ್ಥಾನಗಳನ್ನು ಸೇರಿ, ಅಲ್ಲಿ ಅವರ ಆಸ್ಥಾನ ನರ್ತಕರಾಗಿ ನೇಮಕಗೊಂಡರು. ಈ ಕಾರಣದಿಂದ ಕಥಕ್ ಔಧ ದೇಶದ ನವಾಬರ ಮತ್ತು ರಾಜಸ್ಥಾನದ ರಾಜರ ಆಶ್ರಯ ಪಡೆಯಿತು. ಸುಪ್ರಸಿದ್ಧ ಕಥಕರಾದ ಪ್ರಕಾಶ್ಜೀ ಮತ್ತು ಕುಟುಂಬದವರು ನವಾಬ್ ಅಸಾಫ್-ಉದ್-ದೌಲನ ಆಡಳಿತದಲ್ಲಿ ಲಖ್ನೋವಿನಲ್ಲಿ ಬಂದು ನೆಲಸಿದರು. ಈ ಶ್ರೇಷ್ಠ ಕಲಾವಿದರ ಪೈಕಿ ಮಹಾರಾಜ ಬಿಂದಾದಿನ್ ಕಥಕ್ ನೃತ್ಯದಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಗಳಿಸಿ ಇಡೀ ಭಾರತದಲ್ಲಿ ಪ್ರಖ್ಯಾತಿ ಪಡೆದು ಹೆಸರುವಾಸಿಯಾದ. ಮಹಾರಾಜ್ ಬಿಂದಾದಿನ್ ನವಾಬ್ ವಜೀದ್ ಆಲಿಷಹನ ಸಮಕಾಲೀನ. ಈತ ತನ್ನ ನೃತ್ಯದಲ್ಲಿ ಕಲಾಕೌಶಲವನ್ನೂ ಲಾಲಿತ್ಯವನ್ನೂ ಆಧ್ಯಾತ್ಮಿಕತೆಯ ತುತ್ತತುದಿ ಮುಟ್ಟುವ ಅಭಿನಯವನ್ನೂ ಪ್ರದರ್ಶಿಸುತ್ತಿದ್ದ. ಈ ಮಹಾಪುರುಷ ಪ್ರ.ಶ. 1918ರಲ್ಲಿ ದೈವಾಧೀನನಾದ. ಅಂದಿನಿಂದ ಕಥಕ್ ನೃತ್ಯದ ಹೊಣೆಗಾರಿಕೆ ಬಿಂದಾದಿನನ ಸೋದರಳಿಯ ದಿವಂಗತ ಅಚ್ಚನ್ ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಶಂಭು ಮಹಾರಾಜ್ ಹಾಗೂ ಬಿಂದಾದಿನನ ಪ್ರೀತಿಯ ಶಿಷ್ಯ ಜಯಪುರದ ದಿವಂಗತ ಪಂಡಿತ ಜಯಲಾಲ್ಜೀ ಮತ್ತು ಅವನ ಸೋದರ ಪಂಡಿತ್ ಸುಂದರ ಪ್ರಸಾದ್ ಇವರ ಪಾಲಿಗೆ ಸೇರಿತು. ಇಂಥ ಸಾಂಪ್ರದಾಯಿಕ ಕಲಾಕಾರರ ದುಡಿಮೆಯಿಂದಲೂ ಮತ್ತು ದಿವಂಗತೆ ಮೆಡಾಮ್ ಮೇನಕಾ, ದಿವಂಗತ ರಾಯಗಢದ ಮಹಾರಾಜ ಇವರಿಂದಲೂ ಕಥಕ್ ನೃತ್ಯ ಭಾರತದಲ್ಲಿ ಒಂದು ಅತಿ ಶ್ರೇಷ್ಠ ಶಾಸ್ತ್ರೀಯ ನೃತ್ಯವಾಗಿ ಪ್ರಖ್ಯಾತಿಗೆ ಬಂತು. ಆಧುನಿಕ ಭಾರತದಲ್ಲಿ ಕಾಣುವ ಕಥಕ್ ಕಾರ್ಯಕ್ರಮಗಳು ಅನೇಕ ಕಲಾವಂತರ ಮತ್ತು ನಾಟ್ಯಾಚಾರ್ಯರ ವ್ಯಕ್ತಿತ್ವದಿಂದಲೂ ಕಲ್ಪನಾಶಕ್ತಿಯಿಂದಲೂ ಅನೇಕ ರೂಪಗಳನ್ನು ತಾಳಿವೆ. ದೇವಸ್ಥಾನಗಳಿಂದ ಹೊರ ಬಂದಿರುವ ಈ ಸಂಪ್ರದಾಯ ಮೂಲಶಾಸ್ತ್ರದಲ್ಲಿ ಒಂದೇ ಆಗಿದ್ದರೂ ಇಂಥವರ ವೈಶಿಷ್ಟ್ಯದಿಂದ ಮಾರ್ಪಾಡುಗಳನ್ನು ಹೊಂದಿ ಅತಿ ಆಕರ್ಷಣೀಯವಾಗಿ ಪ್ರಸಿದ್ಧವಾಗಿದೆ. ಪರಕೀಯರಾದ ಮುಸ್ಲಿಮರ ಮತ್ತು ಬ್ರಿಟಿಷರ ಆಡಳಿತದಿಂದಾಗಿ ವೇಷಭೂಷಣಗಳಲ್ಲಿ, ಪಾರಿಭಾಷಿಕ ಶಬ್ದಗಳಲ್ಲಿ ಮತ್ತು ಪ್ರಾಯೋಗಿಕ ಪದ್ಧತಿಗಳಲ್ಲಿ ಅನೇಕ ಬದಲಾವಣೆಗಳು ಆಗಿವೆ. ದೇಶದಲ್ಲಿ ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಘಟನೆಗಳಾಗಿದ್ದರೂ ಕಥಕ್ ನೃತ್ಯ ಅದರ ಸಂಪ್ರದಾಯವನ್ನು ಕಾಪಾಡಿಕೊಂಡು ಬಂದಿದೆ.[೨]

ಪ್ರಯೋಗ[ಬದಲಾಯಿಸಿ]

ಭರತನಾಟ್ಯದಲ್ಲಿದ್ದಂತೆ ಕಥಕ್ನಲ್ಲಿಯೂ ನೃತ್ತ, ನೃತ್ಯ ಮತ್ತು ನಾಟ್ಯಗಳೆಂಬ ವಿಭಾಗಗಳಿವೆ.

ನೃತ್ತ[ಬದಲಾಯಿಸಿ]

ಕಥಕ್ಕಾರ್ಯಕ್ರಮದಲ್ಲಿ ಮೊಟ್ಟ ಮೊದಲು ನೃತ್ತ ಬರುತ್ತದೆ. ನೃತ್ತವೆಂದರೆ ಭಾವರಹಿತವಾದ, ತಾಳಲಯ ವೈಚಿತ್ರ್ಯವನ್ನು ತೋರ್ಪಡಿಸುವ ಕ್ರಮ. ಭರತನಾಟ್ಯದ ಜತಿಗಳಂತೆ ಕಥಕ್ನಲ್ಲಿ ಬೋಲ್ಗಳೆಂಬ ನೃತ್ಯ ಕೃತಿಗಳಿವೆ. ಈ ಬೋಲುಗಳನ್ನು ಅವುಗಳ ರೂಪ ವೈಶಿಷ್ಟ್ಯಗಳ ಪ್ರಕಾರ ಹೀಗೆ ವಿಂಗಡಿಸಬಹುದು.

 1. ಗಣೇಶವಂದನ : ಇದರಲ್ಲಿ ಬೋಲ್ಗಳೊಂದಿಗೆ ಶ್ರೀ ವಿಘ್ನೇಶ್ವರನ ಪ್ರಾರ್ಥನಾ ರೂಪದ ಶಬ್ದಗಳಿವೆ. ಈ ನೃತ್ಯವನ್ನು ಹಳೆಯ ಕಾಲದ ಕಥಕರು ಪ್ರಥಮ ಕಾರ್ಯಕ್ರಮವಾಗಿ ಪ್ರದರ್ಶಿಸುತ್ತಿದ್ದರು. ಈಗ ಇದು ಅಷ್ಟು ರೂಢಿಯಲ್ಲಿಲ್ಲ.
 2. ಆಮದ್ : ಇದು ಪ್ರವೇಶ ಎಂಬ ಅರ್ಥವುಳ್ಳ ಉರ್ದು ಶಬ್ದ. ಇದರಲ್ಲಿ ನಟವರಿ ಬೋಲ್ಗಳನ್ನೂ ಕೆಲವು ಸಲ ಪಖಾವಜ್ ಅಥವಾ ಪರಿಮೇಲು ಬೋಲುಗಳನ್ನೂ ಸೇರಿಸಿ ನರ್ತಿಸುತ್ತಾರೆ. ಆಮದಿಗೆ ಬರಿ ತಬಲ ಇರಬೇಕೆಂದು ಕೆಲವರ ದೃಢ ಅಭಿಪ್ರಾಯ.
 3. ಥಾಟ್ : ಸಹಜವಾಗಿ ಥಾಟ್ ಎಂಬುದು ಒಂದು ಅಲಂಕಾರ ಅಥವಾ ಮನೋಹರವಾದ ವಿನ್ಯಾಸ. ಇದನ್ನು ಮಾಡುವಾಗ ನರ್ತಕ ಮೊದಲು ತನ್ನ ಅವಯವಗಳನ್ನು ವಿಳಂಬ ಕಾಲದಲ್ಲಿ ತಾಳಬದ್ಧವಾಗಿ ಚಲಿಸುತ್ತಾನೆ. ಕಣ್ಣು, ಹುಬ್ಬು, ಕತ್ತು, ಭುಜ, ಕೈ, ಎದೆ, ಮಣಿಕಟ್ಟು ಮುಂತಾದ ಅವಯವಗಳು ಇಂಪಾದ ಲಲಿತವಾದ ಸಾಂಗತ್ಯದಿಂದ ಚಲಿಸುತ್ತವೆ. ನೋಡಲು ಇದು ಸರಳವಾಗಿ ಕಂಡು ಬಂದರೂ ನಿರ್ವಹಿಸಲು ಕಠಿಣ ಸಾಧನೆಯ ಅಗತ್ಯವಿದೆ.
 4. . ನಟವರಿ : ನಟವರ್ ಎಂಬ ಶಬ್ದ ಶ್ರೀ ಕೃಷ್ಣ ಪರಮಾತ್ಮನ ಒಂದು ಸಾರ್ಥಕ ನಾಮಧೇಯ; ಇದಕ್ಕೆ ನರ್ತಕರಲ್ಲಿ ಅತಿ ಶ್ರೇಷ್ಠನೆಂಬ ಅರ್ಥವಿದೆ. ಬಾಲಕೃಷ್ಣ ಕಾಳೀಯಸರ್ಪದ ತಲೆಯ ಮೇಲೆ ನರ್ತಿಸುವಾಗ ತಾ-ತೈ-ತತ್ ಎಂಬ ಶಬ್ದಗಳು ಬಂದುವೆಂದು ಕೆಲವರು ಹೇಳುತ್ತಾರೆ. ಅದೇ ಕಾರಣದಿಂದಲೋ ಏನೋ ಅನೇಕ ಕಥಕ ನಾಟ್ಯಾಚಾರ್ಯರು ತಾ ಥೈ ತತ್, ಧಿಗಿ, ಧಿಗಿ, ತ್ರಾಂ ತಿಗ್ಧ ಮುಂತಾದ ಶಬ್ದಗಳಿರುವ ಬೋಲುಗಳನ್ನು ನಟವರಿ ಬೋಲುಗಳಿಂದ ಪ್ರಕಟಿಸಿದ್ದಾರೆ.
 5. ಪರಮೇಲು : ಪರ ಎಂದರೆ ಇತರ ಮತ್ತು ಮೇಲ ಎಂದರೆ ಮಿಲನ. ಇವುಗಳಿಂದ ಉಂಟಾಗುವ ಶಬ್ದವೇ ಪರಮೇಲು. ಅಂದರೆ ಅನೇಕ ತಾಡನೆ ವಾದ್ಯಗಳಿಂದ ಬರುವ ಶಬ್ದಗಳ ಸಂಯೋಜನದಿಂದ ಉದ್ಭವಿಸುವ ನೃತ್ಯವೇ ಪರಮೇಲು. ಆದರೂ ಈ ಪರಮೇಲು ಬೋಲುಗಳಲ್ಲಿ ನಗ್ಗಿ, ತ್ತರಿ ಕುಶುಝನಕ್, ಧಿಲ್ಲಾಂಗ, ಝಗ-ಝಗ, ದಿವಾಂಗ, ಝಂಗರ, ಥುಡುಂಗ ಮುಂತಾದ ಸಾಂಪ್ರದಾಯಿಕವಾದ ಹಲವು ಶಬ್ದಗಳೂ ಉಪಯೋಗಿಸಲ್ಪಟ್ಟಿವೆ.
 6. ಪರನ್ : ಪಖಾವಜ್ ಎಂಬ ತಾಡನ ವಾದ್ಯದಿಂದ ಉಂಟಾಗುವ ಬೋಲುಗಳಿಗೆ ಪರನ್ ಎಂದು ಹೆಸರು. ಪರನ್ ಶಬ್ದ ಪಥನ್ ಅಥವಾ ಪದಾಂತ (ಅಂದರೆ ಬಾಯಿಪಾಠದ ಕಥನವೆಂಬ ಅರ್ಥವುಳ್ಳ) ಶಬ್ದಗಳಿಂದ ಬಂದಿರಬಹುದು. ಅಸಂಖ್ಯಾತ ವಿಧದ ಪರನ್ಗಳು ಈಗಿನ ರೂಢಿಗೆ ಬಂದಿವೆ. ಇವುಗಳಲ್ಲಿ ಅತಿ ಸ್ವಾರಸ್ಯವಾದ ಪರನ್ಗಳೆಂದರೆ ಲಯ ವೈಚಿತ್ರ್ಯಗಳನ್ನು ಪ್ರಕಟಿಸುವ 5 ವಿಧವಾದ ಯತಿಗಳು : 1 ಸಮ ಅಂದರೆ ಸರಳ 2 ಗೋಪುಚ್ಛ ಅಂದರೆ ಗೋವಿನ ಬಾಲದ ಹಾಗೆ ಮೊದಲು ವಿಸ್ತಾರವಾಗಿ ವಿಳಂಬ ಕಾಲದಲ್ಲಿದ್ದು ಅನಂತರ ಬಾಲದ ಹಾಗೆ ನೀಳವಾಗಿ ತೀವ್ರ ಗತಿಯಿಂದ ಜಟಿಲ ಲಯದಲ್ಲಿ ಕೊನೆಗೊಳ್ಳುವುದು. 3 ಸ್ರೋತ್ಗತಯಿ ಅಂದರೆ ಮೊದಲು ಅತಿ ರಭಸದಿಂದ ಭೋರ್ಗರೆಯುತ್ತ ನದಿಯ ಹಾಗೆ ಆರಂಭವಾಗಿ ವಿಳಂಬವಾಗಿ ಶಾಂತವಾಗಿ ಕೊನೆಗಾಣುವುದು. 4 ಮೃದುಂಗ ಅಂದರೆ ಮೃದಂಗದಂತೆ ಎರಡು ಕೊನೆಗಳೂ ಚೂಪಾಗಿದ್ದು ಮಧ್ಯೆ ವಿಶಾಲವಾಗಿರುವುದು. 5 ಪಿಪೀಲಕ ಅಥವಾ ಡಮರು ಅಂದರೆ ಇರುವೆಯಂತೆ ಅಥವಾ ಡಮರಿನಂತೆ ಎರಡು ಕೊನೆಗಳಲ್ಲಿ ಅಗಲವಾಗಿದ್ದು ಮಧ್ಯೆ ಸೂಕ್ಷ್ಮ ಅಥವಾ ಅತಿ ಸಣ್ಣದಾಗಿರುವುದು.
 7. ಕ್ರಮಾಲಯ : ಈ ನೃತ್ತದಲ್ಲಿ ನರ್ತಕರು ತಾಥೈ ಥೈ ತತ್ ಎಂಬ ಶಬ್ದಗಳಿಂದ ಕೂಡಿರುವ ತ್ರಿತಾಳಕ್ಕೆ ಸರಿಯಾಗಿ ಹೆಜ್ಜೆ ವಿನ್ಯಾಸದಿಂದ ತತ್ಕಾರಗಳನ್ನು ಮಾಡಿಸಿ ಬೇರೆ ಬೇರೆ ತಾಳಲಯ ವೈಚಿತ್ರ್ಯಗಳನ್ನು ತೋರಿ ಕೊನೆಗೆ ಅತಿ ವೇಗದಿಂದ ಹೆಜ್ಜೆ ವಿನ್ಯಾಸಗಳನ್ನು ಪ್ರದರ್ಶಿಸುತ್ತಾರೆ. ಇದು ನಟವರಿಯ ಒಂದು ವಿಭಾಗವೆಂಬುದರಲ್ಲಿ ಸಂದೇಹವಿಲ್ಲ.
 8. ಸಂಗೀತ : ಈ ಪಾರಿಭಾಷಿಕ ಶಬ್ದದ ವಿಚಾರವಾಗಿ ಅನೇಕ ಅಭಿಪ್ರಾಯಗಳಿವೆ. ಆದರೆ ಸಾಧಾರಣವಾಗಿ ನಟವರಿ, ಪರಿಮೇಲು ಮತ್ತು ಪರನ್ ಬೋಲುಗಳನ್ನು ರಾಗ ಸ್ವರಗಳಿಂದ ಸಂಗೀತ ರೂಪದಲ್ಲಿ ಹೇಳಿದರೆ ಅದು ಸಂಗೀತ ಎನಿಸಿ ಕೊಳ್ಳುವುದು. ಬೋಲುಗಳನ್ನು ರಾಗವಾಗಿ ತಾಳ ಲಯಬದ್ಧವಾಗಿ ಹೇಳುವುದೇ ಕಥಕಿನ ಸಂಗೀತವಾಗುತ್ತದೆ.
 9. ಕವಿತ : ಇದು ತಾಳಕ್ಕೆ ಸರಿಯಾಗಿ ಹಾಡುವ ಕವಿತೆ. ಇದಕ್ಕೆ ಸಾಮಾನ್ಯವಾಗಿ ನಟವರಿ ಬೋಲುಗಳನ್ನು ಜೋಡಿಸುತ್ತಾರೆ. ಕವಿತೆಯ ಅರ್ಥವನ್ನು ಹಲವಾರು ಹಸ್ತಮುದ್ರೆಗಳಿಂದ ಪ್ರದರ್ಶಿಸಿ ಕಾಲುಗಳಿಂದ ತಾಳಲಯಬದ್ಧವಾದ ಹೆಜ್ಜೆಗಳಿಂದ ಪ್ರಕಟಿಸುತ್ತಾರೆ. ಕವಿತದಲ್ಲಿ ಅಭಿನಯವಿದ್ದರೂ ಇದನ್ನು ನೃತ್ತದಲ್ಲಿ ಸೇರಿಸುತ್ತಾರೆ. ಕಾರಣ ಇದರಲ್ಲಿ ತಾಳ ವೈಶ್ಟಿಷ್ಯವೇ ಪ್ರಾಮುಖ್ಯ ಪಡೆದಿದೆ. ಅಂದರೆ ಇದು ನೃತ್ತಕ್ಕೂ ನೃತ್ಯಕ್ಕೂ ಇರುವ ಒಂದು ಸಂಕಲನ ಅಥವಾ ಸಂಬಂಧ ಎನ್ನಬಹುದು.

ನೃತ್ಯ[ಬದಲಾಯಿಸಿ]

State of 'sam' performed by Manisha Gulyani
Performinng Kathak at Kathak Kendra

ಕಥಕ್‍ನ ಎರಡನೆಯ ಭಾಗವಾದ ನೃತ್ಯದಲ್ಲಿ ಎರಡು ವಿಭಾಗಗಳಿವೆ. ಮೊದಲನೆಯದಾಗಿ ಗತ್ಕರಿ ಮತ್ತು ಎರಡನೆಯದಾಗಿ ಅರ್ಥಭಾವ್ ಅಥವಾ ಭಾವ್ಬತಾನಾ. ಗತ್ ಎಂಬ ಶಬ್ದ ಗತಿ (ನಡೆ) ಎಂಬ ಅರ್ಥವುಳ್ಳ ಸಂಸ್ಕೃತ ಶಬ್ದದಿಂದ ಬಂದಿದೆ. ಗತ್ಕರಿಯಲ್ಲಿ ಭಾವವನ್ನು ಹಾಡಿಗೆ ಸರಿಯಾಗಿ ಅಥವಾ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪ್ರದರ್ಶಿಸುವುದಿಲ್ಲ. ಅಂದರೆ ಇದು ಒಂದು ಮೂಕಾಭಿನಯ. ಗತ್ಕರಿಯನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ :

 1. ಗತ್ನಿಕಾಸ್. ಇದರಲ್ಲಿ ನೃತ್ತಕ್ಕೆ ಪ್ರಾಧಾನ್ಯವಿದ್ದುದರಿಂದ ತಾಳಲಯ ಅಧಿಕವಾದರೂ ಭಾವ ಸ್ವಲ್ಪಮಟ್ಟಿಗೆ ಪ್ರದರ್ಶಿತವಾಗುತ್ತದೆ. ಅಂತೆಯೇ ಇದನ್ನು ನೃತ್ಯ ರೂಪವೆನ್ನಬಹುದು.
 2. ಗತ್ ಭಾವ್. ಈ ಗತ್ನಲ್ಲಿ ಯಾವುದಾದರೂ ಒಂದು ಭಾವ ಅಥವಾ ರಸ ಪ್ರದರ್ಶಿತವಾಗುತ್ತದೆ.
 3. ಗತ್ ಪ್ರಸಂಗ ಅಥವಾ ಛೋಟಿ ಗತ್. ಇದರಲ್ಲಿ ಶ್ರೀ ಕೃಷ್ಣಪರಮಾತ್ಮನ ಲೀಲೆಗಳನ್ನು ಸಂಕ್ಷಿಪ್ತವಾಗಿ ಅಭಿನಯಿಸುತ್ತಾರೆ.
 4. ಗತ್ ಲೀಲಾ ಅಥವಾ ಬಡೀ ಗತ್-ಇದರಲ್ಲಿ ಭಾರತೀಯ ಪುರಾಣಗಳಿಂದ ಆಯ್ದ ಪ್ರಸಂಗಗಳನ್ನು ವಿವರವಾಗಿ ಅಭಿನಯಿಸುತ್ತಾರೆ.

ಎರಡನೆಯದಾದ ಅರ್ಥಭಾವ್ ಅಥವಾ ಭಾವಬತಾನಾವೇ ಕಥಕಿನ ಮುಖ್ಯ ಅಭಿನಯ. ದ್ರುಪದ್, ಠುಮ್ರಿ, ಭಜನ್, ದಾದರಾ, ಅಥವಾ ಘಜಲ್ ಮುಂತಾದ ಕೃತಿಗಳನ್ನು ಹಾಡುವಾಗ ಅದರಲ್ಲಿರುವ ಅರ್ಥವನ್ನು ಸೂಕ್ಷ್ಮವಾಗಿಯೂ ಕೂಲಂಕಷವಾಗಿಯೂ ಚಾತುರ್ಯದಿಂದಲೂ ಕಲಾಕಾರರು ಪ್ರಕಟಿಸುತ್ತಾರೆ. ಮಹಾರಾಜ್ ಬಿಂದಾದಿನ್ ಈ ಅಭಿನಯವಿದ್ಯೆಯಲ್ಲಿ ಅತಿ ನಿಪುಣನಾಗಿದ್ದ. ಪ್ರಸಿದ್ಧ ಕಲಾಕಾರರು ಈ ಭಾಷಾಭಿನಯದಲ್ಲಿ ತಮ್ಮನ್ನು ತಾವೇ ಮರೆತು ಅಭಿನಯ ವಿಷಯದಲ್ಲಿ ಲೀನರಾಗುತ್ತಾರೆ. ದ್ರುಪದ್ ಕೃತಿಗಳು ಶಾಸ್ತ್ರೀಯ ಹಿಂದೂಸ್ತಾನೀ ಸಂಗೀತದ ಒಂದು ಮುಖ್ಯ ಅಂಶ. ಇವನ್ನು ಹಿಂದೆ ಅಭಿನಯಕ್ಕೆ ಅಳವಡಿಸಿಕೊಳ್ಳುತ್ತಿದ್ದರು. ಠುಮ್ರಿಗಳಲ್ಲಿ ಶೃಂಗಾರರಸಕ್ಕೆ ಪ್ರಾಧಾನ್ಯವಿದೆ. ಅಲ್ಲದೆ ಇದರ ಹಾಡುವಿಕೆಯಲ್ಲಿ ಪ್ರತ್ಯೇಕ ವೈಶಿಷ್ಟವಿದೆ. ಈ ಶೈಲಿಯನ್ನು ಲಖ್ನೋದಲ್ಲಿ ನವಾಬನಾಗಿದ್ದ ವಜೀದ್ ಆಲಿಖಾನ್ ಕಲ್ಪಿಸಿದ. ಭಜನ್ಗಳನ್ನು ಭಾರತದ ಅನೇಕ ಭಕ್ತರು, ದಾಸರು ಕಲ್ಪಿಸಿದ ಕಾರಣ ಇವುಗಳಲ್ಲಿ ಭಕ್ತಿಭಾವವೇ ಮುಖ್ಯವಾಗಿದೆ. ಕೊನೆಯದಾಗಿ ಘಜ಼ಲ್ಗಳು ಉರ್ದು ಭಾಷೆಯ ಬೇರೆ ಬೇರೆ ತಾಳಗಳಲ್ಲಿ ರಚಿಸಿದ ಕವನಗಳು.

ನಾಟ್ಯ (ನೃತ್ಯನಾಟಕ)[ಬದಲಾಯಿಸಿ]

ಹಿಂದಿನ ಕಥಕ್ ಸಂಪ್ರದಾಯದಲ್ಲಿ ನಾಟ್ಯ ಇದ್ದಿರಬಹುದು. ನವಾಬ್ ವಜೀದ್ ಆಲಿಖಾನ್ ರಚಿಸಿದ ಇಂದ್ರಸಭೆಯನ್ನು ನೃತ್ಯ ನಾಟಕಗಳಿಗೆ ಉಪಯೋಗಿಸುತ್ತಿದ್ದ ವಿಷಯ ತಿಳಿದಿದೆ. ಈಗಲೂ ಪ್ರಚಲಿತವಿರುವ ಬೃಂದಾವನದ ರಾಸಲೀಲೆ ಒಂದು ಕಥಕ್ ರೂಪಿನ ನೃತ್ಯನಾಟಕ. ಆಧುನಿಕ ಭಾರತದಲ್ಲಿ, ಮುಖ್ಯವಾಗಿ ಉತ್ತರ ಹಿಂದೂಸ್ಥಾನದಲ್ಲಿ ಕಥಕ್ ಸಂಪ್ರದಾಯಕ್ಕೆ ಬಹಳ ಉತ್ತೇಜನವಿದೆ. ಅನೇಕ ಕಲಾವಿದರು ಈ ಶಾಸ್ತ್ರೀಯ ನೃತ್ಯದಲ್ಲಿ ಕಲಾಪ್ರೌಢಿಮೆಯನ್ನು ಗಳಿಸಿ ಪ್ರಶಂಸೆ ಪಡೆದು ತಮಗೂ ಕಲೆಗೂ ದೇಶಕ್ಕೂ ಕೀರ್ತಿತಂದಿದ್ದಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಕಥಕ್&oldid=1164194" ಇಂದ ಪಡೆಯಲ್ಪಟ್ಟಿದೆ