ದೇವದಾಸಿ
ದೇವಾಲಯಗಳಲ್ಲಿ ದೇವರುಗಳಿಗೆ ವಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿಯರೆಂದು ಕರೆಯಲಾಗುತ್ತಿತ್ತು. ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೋಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತನ ಮೊದಲಾದ ನಿಶ್ಚಿತ ಕಾರ್ಯಗಳನ್ನು ಮಾಡುವುದು-ಇವುಗಳ ಮೂಲಕ ದೇವರ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ. ಪ್ರಾಚೀನ ಬ್ಯಾಬಿಲೋನಿಯ, ಸೈಪ್ರೆಸ್, ಫಿನಿಷಿಯ, ಗ್ರೀಸ್, ಮೆಸಪೊಟೇಮಿಯ, ಈಜಿಪ್ಟ್, ಸಿರಿಯ ಅರೇಬಿಯ, ಮುಂತಾದ ಮಧ್ಯಪ್ರಾಚ್ಯಗಳಲ್ಲಿ ಹಾಗೂ ಆಗ್ನೇಯ ಏಷ್ಯದಲ್ಲಿ ಈ ಪದ್ಧತಿ ರೂಡಿಯಲ್ಲಿತ್ತು. ಒಂದು ಕಾಲಕ್ಕೆ ಸಮಗ್ರ ಭಾರತದಲ್ಲೆಲ್ಲ ಈ ಪದ್ಧತಿ ಪ್ರಚಾರದಲ್ಲಿದ್ದಿರಬೇಕೆಂದು ಕಾಣುತ್ತದೆ. ಉತ್ತರ ಭಾರತದಲ್ಲಿ ಇದರ ಪ್ರಚಾರ ವಿಶೇಷವಾಗಿತ್ತೆಂದು ಹೇಳಲು ಸಮರ್ಥನೀಯ ದಾಖಲೆಗಳು ಇಲ್ಲವಾಗಿವೆ.
ಮೊಹೆಂಜೊದಾರೊ ಸಂಸ್ಕøತಿಯ ಮಾತೃದೇವತೆ ಅಥವಾ ಸಂತಾನ ದೇವತೆಯ ಗುಡಿಯಲ್ಲಿ ಪುರುಷರು ಹಾಗು ಸ್ತ್ರೀಯರು ಗುಲಾಮರಾಗಿರುತ್ತಿದ್ದರೆಂದೂ ಅವರಲ್ಲಿ ಅನೇಕರು ದೇವದಾಸಿಯರೆಂದೂ ಅವರು ಗೃಹಿಣಿಯರಾಗುವ ಮುನ್ನ ಸ್ವಲ್ಪ ಕಾಲವಾದರೂ ಮಾತೃದೇವತಾ ಮಂದಿರದಲ್ಲಿ ದೇವದಾಸಿಯರಾಗಿರುವುದು ಆಗಿನ ಸಮಾಜದಲ್ಲಿ ಗೌರವ ಪ್ರತಿಷ್ಠೆಗಳ ಮಾತಾಗಿತ್ತೆಂದೂ ತಿಳಿದುಬರುತ್ತದೆ. ಮೊಹಂಜೊದಾರೊದಲ್ಲಿ ದೊರೆತಿರುವ ಸ್ತ್ರೀ ಪ್ರತಿಮೆಯೊಂದರಲ್ಲಿ ನರ್ತಕಿಯ ಲಕ್ಷಣಗಳನ್ನು ಗುರುತಿಸಲಾಗಿದೆ. ನರ್ತಕಿ ನಗ್ನಳಾಗಿದ್ದು ಒಂದು ತೋಳಿನ ತುದಿಯವರೆಗೂ ಬಳೆಗಳನ್ನು ಧರಿಸಿ ಕುತ್ತಿಗೆಯಲ್ಲಿ ಮಣಿಸರವನ್ನು ಧರಿಸಿದ್ದಾಳೆ. ತಲೆಗೂದಲು ಸಡಿಲವಾಗಿ ಇಳಿಬಿದ್ದಿವೆ. ಕಣ್ಣುಮುಚ್ಚಿಕೊಂಡು ನರ್ತಿಸುತ್ತಿರುವ ಆಕೆಯ ಮುಖದಲ್ಲಿ ಭಕ್ತಿಭಾವ ಕಂಡುಬರುತ್ತಿದೆ. ಈ ನಗ್ನ ನರ್ತಕಿ ದೇವದಾಸಿಯೇ ಹೌದೆಂದು ಇತಿಹಾಸ ಸಂಶೋಧಕರು ನಿರ್ಧರಿಸಿದ್ದಾರೆ.
ಈ ಸಂಪ್ರದಾಯ ಜೀವಂತವಾಗಿರುವ ಕಡೆಗಳಲ್ಲಿನ ಜನ ದೇವದಾಸಿಯರೊಂದಿಗೆ ಸಂಬಂಧವಿಟ್ಟುಕೊಳ್ಳುವುದು ಪುಣ್ಯದ ಕಾರ್ಯವೆಂದು ನಂಬುತ್ತಿದ್ದರು. ಈಗಲೂ ಈ ಸಂಪ್ರದಾಯ ಪಶ್ಚಿಮ ಆಫ್ರಿಕದ ಕೆಲವು ಜನಾಂಗಗಳಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಈ ಪದ್ಧತಿ ವಿರಳವಾಗಿದ್ದರೂ ಆಂದ್ರಪ್ರದೇಶದ ವಿಶಾಖಪಟ್ಟಣದ ಒಂದು ದೇವಾಲಯದಲ್ಲಿ ಮಾತ್ರ ದೇವದಾಸಿಯರು ಕಾಣ ಸಿಗುತ್ತಾರೆ. ಒರಿಸ್ಸಾದಲ್ಲಿ ಈ ಪದ್ಧತಿ ಇತ್ತೀಚೆಗೆ ಮರೆಯಾಗಿದೆ. ಪುರಿಯಲ್ಲಿ ದೇವದಾಸಿ ಪದ್ಧತಿ ಒಂದು ಕಾಲದಲ್ಲಿ ಜಾರಿಯಲ್ಲಿತ್ತೆಂದು ಫ್ರಾನ್ಸಿನ ಯಾತ್ರಿಕನ ಬರ್ವಿಯರ್‍ನ ಲಿಖಿತ ವಿವರಣೆಯಿಂದ ತಿಳಿದುಬರುತ್ತದೆ. ತೈಲಂಗ್ ದೇಶದಲ್ಲಿ ದೇವದಾಸಿಯಾಗಲಿರುವ ಕುಮಾರಿಯನ್ನು ಬಸವಾ ಎಂದೂ ಕರೆಯುತ್ತಿದ್ದರು. ಭಕ್ತಿಪಂಥದ ಪ್ರಾಬಲ್ಯದ ಕಾಲದಲ್ಲಿ ದೇವದಾಸಿ ಪದ್ಧತಿ ಉಚ್ಛ್ರಾಯ ಸ್ಥಿತಿಯನ್ನು ಪಡೆಯಿತೆಂದು ಹೇಳಬಹುದು.
ದೇವದಾಸಿ ಪದ್ಧತಿಯ ಪ್ರಾಚೀನತೆಯನ್ನು ಕುರಿತು ಅಳ್ತೇಕರ್ ಹೀಗೆ ಅಭಿಪ್ರಾಯ ಪಡುತ್ತಾರೆ. ``ಜಾತಕ ಸಾಹಿತ್ಯದಲ್ಲಿ ಈ ಸಂಪ್ರದಾಯದ ಉಲ್ಲೇಖವಿಲ್ಲ. ಗ್ರೀಕ್ ಲೇಖಕರು ಇದನ್ನು ಹೆಸರಿಸಿಲ್ಲ. ಅರ್ಥಶಾಸ್ತ್ರದಲ್ಲಿ ಗಣಿಕೆಯರ ಹೆಸರು ವಿಸ್ತಾರವಾಗಿ ಬಂದಿದ್ದರೂ ದೇವದಾಸಿಯರನ್ನು ಹೆಸರಿಸಿಲ್ಲ. ಈ ಸಂಪ್ರದಾಯ ಬಹುಶಃ ಕ್ರಿ.ಶ. ಮೂರನೆಯ ಶತಮಾನದಲ್ಲಿ ಆರಂಭವಾಗಿರಬಹುದು. ಏಕೆಂದರೆ ಉಜ್ಜಯಿನಿಯ ಮಹಾಕಾಲ ದೇವಸ್ಥಾನದಲ್ಲಿ ನರ್ತಕಿಯರಿದ್ದ ವಿಷಯವನ್ನು ಕಾಳಿದಾಸ ತನ್ನ ಮೇಘದೂತದಲ್ಲಿ ನಿರೂಪಿಸುತ್ತಾನೆ. ದೇವಪೂಜೆಯ ಸಂದರ್ಭದಲ್ಲಿ ಸಂಗೀತಕ್ಕಾಗಿ ಸ್ತ್ರೀಯರನ್ನು ನೇಮಿಸಿಕೊಳ್ಳಬೇಕೆಂದು ಹಲವು ಪುರಾಣಗಳು ಹೇಳುತ್ತವೆ. ಈ ಸ್ತ್ರೀಯರು ಸಾಮಾನ್ಯವಾಗಿ ವೇಶ್ಯೆಯರು. ಇವರನ್ನು ದೇವಸ್ಥಾನಗಳಿಗಾಗಿ ಕೊಂಡುಕೊಳ್ಳಬೇಕೆಂದು ಕೆಲವು ಪುರಾಣಗಳು ಸೂಚಿಸುವುದು ವಿಷಾದನೀಯ. ಸೂರ್ಯಲೋಕವನ್ನು ಪಡೆಯಲು ಸೂರ್ಯದೇವಸ್ಥಾನಕ್ಕೆ ಹಲವು ವೇಶ್ಯೆಯರನ್ನು ದಾನವಾಗಿ ಕೊಡುವುದೇ ಉತ್ತಮ ಮಾರ್ಗವೆನ್ನುವಷ್ಟರ ದೂರ ಹೋಗಿದೆ, ಭವಿಷ್ಯಪುರಾಣ. ಈ ಸಂಪ್ರದಾಯ ಆರನೆಯ ಶತಮಾನದಲ್ಲಿ ಹೆಚ್ಚಾಗಿ ಹರಡಿರಬೇಕು. ಹ್ಯೂಎನ್ ತ್ಸಾಂಗ್ ಮುಲ್ತಾನ್ ಎಂಬಲ್ಲಿನ ಸೂರ್ಯ ದೇವಸ್ಥಾನದಲ್ಲಿ ಗಾಯಕಿಯರನ್ನು ಕಂಡಂತೆ ಹೇಳುತ್ತಾನೆ. ಕಾಶ್ಮೀರದಲ್ಲಿ ಕ್ರಿ.ಶ. 7 ನೆಯ ಶತಮಾನದಲ್ಲಿ ಈ ಸಂಪ್ರದಾಯವಿತ್ತೆಂದು ರಾಜತರಂಗಿಣಿಯಿಂದ ತಿಳಿದುಬರುತ್ತದೆ. ಗುಜರಾತಿನ ಬಹು ಪ್ರಸಿದ್ಧವಾದ ಸೋಮನಾಥ ದೇವಾಲಯದಲ್ಲಿ ಐನೂರು ನರ್ತಕಿಯರಿದ್ದರಂತೆ ತಿಳಿದುಬರುತ್ತದೆ. ರಾಜರಾಜ ತಂಜಾವೂರಿನ ದೇವಸ್ಥಾನವನ್ನು ಕಟ್ಟಿಸಿದಾಗ (10 ನೆಯ ಶ.) ದೇವಸ್ಥಾನದ ಸೇವೆಗಾಗಿ ನಾನೂರು ನರ್ತಕಿಯರನ್ನು ಒದಗಿಸಿದ.
ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಏಳುವಿಧದ ದೇವದಾಸಿಯರ ಉಲ್ಲೇಖ ಸಿಗುತ್ತದೆ. 1 ದತ್ತಾ : ತನ್ನನ್ನು ತಾನೇ ಯಾವುದಾದರೂ ದೇವಾಲಯವೊಂದಕ್ಕೆ ಅರ್ಪಿಸಿಕೊಂಡವಳು. 2. ವಿಕ್ರೀತಾ : ದೇವಾಲಯದ ಸೇವಾಕಾರ್ಯಗಳಿಗಾಗಿ ತನ್ನನ್ನೇ ಮಾರಿಕೊಂಡವಳು. 3. ಭೃತ್ಯಾ : ತನ್ನ ಕುಟುಂಬದವರ ಪೋಷಣೆಯ ಸಲುವಾಗಿ ದೇವದಾಸಿಯಾದವಳು. 4. ಭಕ್ತಾ : ಕೇವಲ ಭಕ್ತಿಭಾವಗಳಿಂದ ಪ್ರೇರಿತಳಾಗಿ ದೇವಾಲಯವನ್ನು ಪ್ರವೇಶಿಸಿದವಳು. 5. ಹೃತಾ : ಅಪಹರಿಸಿಕೊಂಡು ತಂದ ಹೆಣ್ಣು, ದೇವಾಲಯಕ್ಕೆ ಉಡುಗೊರೆಯಾಗಿ ಬಂದವಳು. 6. ಅಲಂಕಾರಾ : ರಾಜ ಅಥವಾ ಮಂತ್ರಿ ಯಾವ ಯುವತಿಯನ್ನು ಅಪೇಕ್ಷಿತ ಪರಂಪರೆಯಲ್ಲಿ ಸಂಪೂರ್ಣ ದೀಕ್ಷಿತೆಯೆಂದು ಭಾವಿಸುತ್ತಿದ್ದರೋ ಅಂಥ ಯುವತಿಯನ್ನು ಅಲಂಕರಿಸಿ ದೇವಾಲಯಕ್ಕೆ ಒಪ್ಪಿಸಲಾಗುತ್ತಿತ್ತು; ಅಂಥವಳು. 7. ರದ್ರಗಣಿಕಾ ಅಥವಾ ಗೋಪಿಕಾ : ನಿಯಮಿತ ವೃತಿ ಅಥವಾ ವೇತನ ಪಡೆದು ನಾಟ್ಯ ಗಾಯನ ಮೊದಲಾದ ಕೆಲಸಗಳನ್ನು ನಿರ್ವಹಿಸುವವಳು.
ದೇವರನ್ನು ಜೀವಂತ ವ್ಯಕ್ತಿಯೆಂದು ಭಾವಿಸಿ ವೈಭವದಲ್ಲಿ ಬಾಳುವ ಒಬ್ಬ ವ್ಯಕ್ತಿಯ ಎಲ್ಲ ಭೋಗಗಳನ್ನೂ ದೇವರಿಗೆ ಅರ್ಪಿಸುವ ಸಂಪ್ರದಾಯ ದೇವದಾಸಿ ಪದ್ಧತಿಯ ಮೂಲವಾಗಿರಬಹುದು.
ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗ ಎಂಬ ಮಾತುಗಳು ಬರುತ್ತವೆ. ವಿಗ್ರಹದ ದೇಹಕ್ಕೆ ಸಲ್ಲುವ ಭೋಗ, ಎಂದರೆ ಸ್ನಾನ, ಗಂಧಲೇಪನ, ಧೂಪ, ದೀಪ, ಪುಷ್ಪ ಇತ್ಯಾದಿಗಳು ಅಂಗಭೋಗಗಳು. ಗರ್ಭಗುಡಿಯ ಮುಂದಿನ ರಂಗದ ಮೇಲೆ ಎಂದರೆ ದೇವತಾ ಮೂರ್ತಿಯ ಮುಂದೆ ಸುಂದರಿಯರಿಂದ ನಡೆಯುವ ಗೀತ, ನೃತ್ಯಗಳೇ ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಉಪಕರಣಗಳು ಎಂಬುದಾಗಿ ಎಂ. ಚಿದಾನಂದಮೂರ್ತಿಯವರು ಅಭಿಪ್ರಾಯಪಡುತ್ತಾರೆ. ಈ ಸಂಪ್ರದಾಯವನ್ನು ಮೊದಮೊದಲು ವಿರೋಧಿಸಿದರೂ ಒತ್ತಾಯ ಪೂರ್ವಕವಾಗಿ ಇದನ್ನು ಜಾರಿಗೆ ತಂದಿದ್ದರ ಫಲವಾಗಿ ಅವರ ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗಲಿಲ್ಲವೆಂದು ಆಳ್ತೇಕರ್ ಅವರ ಅಭಿಪ್ರಾಯ.
ದೇವಾಲಯದ ಇತರ ಸೇವಕರಿಗೆ ಕೊಡುವಂತೆ ದೇವದಾಸಿಯರಿಗೂ ನಿರ್ವಹಣಾರ್ಥವಾಗಿ ಜಮೀನನ್ನು ನೀಡಲಾಗುತ್ತಿತ್ತು. ಕಾನೂನಿನ ಮೂಲಕವೂ ಈ ಪದ್ಧತಿಗೆ ಮನ್ನಣೆ ಇತ್ತು. ಇತರ ಹಿಂದೂ ಜಾತಿಗಳಂತೆ ಅದರ ಉತ್ತರಾಧಿಕಾರ, ರೀತಿನೀತಿಗಳು, ಕಟ್ಟುಕಟ್ಟಳೆಗಳು, ಆಚಾರವಿಚಾರಗಳು, ಸಂಪ್ರದಾಯ ನಿಯಮಗಳು ನಿರ್ದಿಷ್ಟವಾಗಿದ್ದವು. ಕಾಲಾಂತರದಲ್ಲಿ ದೇವದಾಸಿ ಪದ್ಧತಿಯ ಮೂಲ ಉದ್ದೇಶ ಹಾಗೂ ಪಾವಿತ್ರ್ಯಗಳು ಸಾಮಾಜಿಕ ಪರಿಸ್ಥಿತಿಗಳ ಪ್ರಭಾವದಿಂದ ಶಿಥಿಲಗೊಂಡವು. ಹೀಗಾಗಿ ದೇವದಾಸಿಯರು ಸಾಮಾನ್ಯ ವೇಶ್ಯೆಯರೊಡನೆ ಸಮೀಕರಿಸಲ್ಪಟ್ಟರು.
ಪ್ರಾರಂಭಕಾಲದಲ್ಲಿ ರಂಗಭೋಗದ ಅಂಗವಾಗಿ ಸ್ತ್ರೀಯರೊಡನೆ ಪುರುಷರೂ ನರ್ತಿಸುತ್ತಿದ್ದರೆದು ತಿಳಿದುಬರುತ್ತದೆ. ಪುರುಷರೂ ದೇವರಿಗೆ ದಾಸರಾಗುವ ಸಂಪ್ರದಾಯ ಇಂದಿಗೂ ಬೆಳಗಾಂವಿ ಸಮಿಪದ ಸೌಂದತ್ತಿ ಎಲ್ಲಮ್ಮನ ಗುಡಿಯಲ್ಲಿ ಕಂಡುಬರುತ್ತದೆ. ಎಲ್ಲಮ್ಮನು ದೇವದಾಸಿಯರನ್ನುದೇವರ ಸೂಳಿ, ಎಲ್ಲಮ್ಮನ ಸೂಳಿ, ಬಸವಿ ಜೋಗಿತಿ (ನೋಡಿ- ಜೋಗಿತಿ-ಸಂಪ್ರದಾಯ) ಮುಂತಾಗಿ ಕರೆಯುತ್ತಾರೆ. ಪುರುಷರನ್ನೂ ಎಲ್ಲಮ್ಮನ ಜೋಗಿತಿ ಬಿಡುವ ಸಂಪ್ರದಾಯ ವೀರಶೈವ ಧರ್ಮದ `ಶರಣ ಸತಿ ಲಿಂಗ ಪತಿ' ಎಂಬ ಮಾತನ್ನು ಅತಿಶಯಗೊಳಿಸಿದ್ದರ ಪರಿಣಾಮವಾಗಿ ಹುಟ್ಟಿಕೊಂಡಿತೆಂದು ಕಾಣುತ್ತದೆ. ಎಲ್ಲಮ್ಮನ ಈ ಜೋಗಿತಿಯರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ವಿಶೇಷವಾಗಿ ಕಾಣಸಿಗುತ್ತಾರೆ. ಕರ್ನಾಟಕದ ಬಹಳಷ್ಟು ದೇವಾಲಯಗಳಲ್ಲಿ ಈ ದೇವದಾಸಿ ಪದ್ಧತಿ ಇಂದಿಗೂ ಉಳಿದುಬಂದಿದೆ. ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಮಲೆಯ ಮಾದೇಶ್ವರನಿಗೆ ಗುಡ್ಡಿ ಎಂಬ ಹೆಸರಿನ ದೇವದಾಸಿಯರಿದ್ದಾರೆ. ಉಳಿದ ದೇವರುಗಳು ದೇವದಾಸಿಯರನ್ನು ಬಸವಿ ಎಂದು ಕರೆಯುವುದು ರೂಢಿಯಲ್ಲಿದೆ. ಈ ಪದ್ಧತಿ ಕರ್ನಾಟಕದಲ್ಲಿ ಕೆಳವರ್ಗದ ಜನರಲ್ಲಿ ಇಂದಿಗೂ ಉಸಿರಾಡುತ್ತಿದೆ. ಆಂಧ್ರಪದೇಶ, ತಮಿಳುನಾಡುಗಳಲ್ಲೂ ಇದು ಉಳಿದುಬಂದಿದೆ. ತಮಿಳುನಾಡಿನ ರಾಮೇಶ್ವರ ದೇವಸ್ಥಾನದಲ್ಲಿ ಪ್ರಾತಃಕಾಲ ಅರ್ಚಕರೊಡನೆ ಒಬ್ಬ ದೇವದಾಸಿ ಬ್ರಾಹ್ಮಣಿಯಂತೆ ವಸ್ತ್ರಗಳನ್ನುಟ್ಟು ರುದ್ರಾಕ್ಷಿಗಳನ್ನು ಧರಿಸಿ ದೇವಸ್ಥಾನಕ್ಕೆ ಬರುತ್ತಾಳೆ. ಅವಳನ್ನು ತಮಿಳಿನಲ್ಲಿ ಮ¾õÉೈಕಾರೀ ಎನುತ್ತಾರೆ. ಉತ್ತರ ಕರ್ನಾಟಕ ಅಂಚಿನಲ್ಲಿರುವ ಗೋವಾದಲ್ಲಿನ ಮಂಗೇಶ ದೇವಸ್ಥಾನದಲ್ಲಿ ಆರು ಜನ ದೇವಾಸಿಯರಿದ್ದಾರೆ. ಸೋಮವಾರದ ಪೂಜೆಯ ಸಮಯದಲ್ಲಿಯೂ ಉಳಿದ ಹಬ್ಬಗಳ ಸಮಯದಲ್ಲಿಯೂ ಅವರು ದೇವಸ್ಥಾನಗಳಲ್ಲಿ ನರ್ತನ ಮಾಡುತ್ತಾರೆ. ಗೋವಾದಲ್ಲಿ ಮಲ್ಯದ ವಿಷ್ಣುದೇವಾಲಯದಲ್ಲಿಯೂ ದೇವದಾಸಿಯರಿದ್ದಾರೆ. ಇವರನ್ನು ಭಾವಿನ್ ಎಂದು ಕರೆಯುತ್ತಾರೆ. ದೇವದಾಸಿಯಾಗಲಿರುವ ಹೆಣ್ಣಿಗೂ ದೇವರಿಗೂ ಅತ್ಯಂತ ಶಾಸ್ತ್ರೀಯವಾಗಿ ವಿವಾಹವೇ ನಡೆಯುತ್ತದೆ.
ದೇವದಾಸಿ ಪದ್ಧತಿ ಯಾವ ಮಹತ್ತ್ವದ ಉದ್ದೇಶಗಳನ್ನಿಟ್ಟುಕೊಂಡು ಹುಟ್ಟಿತೋ ಆ ಉದ್ದೇಶಗಳೆಲ್ಲ ಈಗ ನಿರ್ನಾಮವಾಗಿ ಹೋಗಿವೆ. ಈಗ ಶ ವೃತ್ತಿ ತನ್ನ ಗೌರವವನ್ನು ಕಳೆದುಕೊಂಡು ವೇಶ್ಯಾವೃತ್ತಿ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ. ಕಲೆ ಹಾಗೂ ದೇವರ ಹೆಸರಿನಲ್ಲಿ ವಿಷಯಸುಖವನ್ನು ಪ್ರಧಾನ ಮಾಡಿಕೊಂಡು ಬೆಳೆದು ನಿಂತ ಈ ಪದ್ಧತಿಯನ್ನು ಜನತೆಯೇ ಮೂಲೋಚ್ಚಾಟನೆಗೊಳಿಸಲು ಸಿದ್ಧವಾಯಿತು. 1934 ರಲ್ಲಿ ಭಾರತೀಯ ದಂಡವಿಧಾನದ 373 ಮತ್ತು 375 ರ ವಿಧಿಗಳನ್ನು ದೇವದಾಸಿ ಪದ್ಧತಿಯ ಮೇಲು ಅನ್ವಯಿಸುವ ದಿಶೆಯಲ್ಲಿ ಸಂಶೋಧನೆ ನಡೆಸಿತು. 1937 ರಲ್ಲಿ ಮದ್ರಾಸ್ ವಿಧಾನ ಪರಿಷತ್ತು ದೇವದಾಸಿ ಪದ್ಧತಿಯನ್ನು ನಿರ್ಮೂಲನ ಮಾಡಲು ಸರ್ವಾನುಮತದಿಂದ ವಿಧೇಯಕವೊಂದನ್ನು ಅಂಗೀಕರಿಸಿತು. ಅದರಲ್ಲಿ ಗೌರವಾನ್ವಿತ ಸೇವದಾಸಿಯರನ್ನು ದಾಸ್ಯದಿಂದ ಮುಕ್ತಗೊಳಿಸಡುವ ಸಲಹೆ ನೀಡಲಾಯಿತು. ಆ ಬಳಿಕ ಹಿಂದೂ ದೇವಾಲಯಗಳಲ್ಲಿ ಸ್ತ್ರೀಯರನ್ನು ಸೇವೆಗಾಗಿ ಅರ್ಪಿಸುವ ಪದ್ಧತಿಯನ್ನು ಕಾನೂನಿನಿಂದ ಕೊನೆಗೊಳಿಸುವ ಕ್ರಮವನ್ನು ಕೈಗೊಳ್ಳಲಾಯಿತು. ಅಲ್ಲದೆ ದೇವದಾಸಿಯರಾಗಿ ಕೆಲಸ ಮಾಡುತ್ತಿದ್ದ ಸ್ತ್ರೀಯರಿಗೆ ವಿಧಿಸಮ್ಮತ ವಿವಾಹಕ್ಕೆ ವ್ಯವಸ್ಥೆಗಳನ್ನು ಏರ್ಪಡಿಸಿತು. ಭಾರತದ ಇತರ ಸಂಸ್ಥಾನಗಳು ಈ ಕ್ರಮವನ್ನು ಜರೂರಾಗಿ ಅನುಸರಿಸಲು ಮುಂದೆ ಬಂದವು. ಹೀಗಿದ್ದರೂ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇದರ ಚಿಹ್ನೆಗಳು ಈಗಲೂ ಉಳಿದಿವೆ. ಏಕೆಂದರೆ ಈ ಪದ್ಧತಿಗಿರುವ ಧಾರ್ಮಿಕ ಪರಿವೇಷ ಇದನ್ನು ತೊಡೆದುಹಾಕಲು ಕಷ್ಟಸಾಧ್ಯವನ್ನಾಗಿಸಿದೆ. ಮುಂಬಯಿಯಂಥ ಮಹಾ ನಗರದಲ್ಲಿರುವ ಕೆಂಪುದೀಪದ ಬಡಾವಣೆಯಲ್ಲಿ ನಡೆಸಿದ ಸಮಾಜ ಶಾಸ್ತ್ರೀಯ ಸರ್ವೇಕ್ಷಣದಿಂದ ಅಲ್ಲಿರುವ ವೇಶ್ಯೆಯರಲ್ಲಿ 1/3 ಪಾಲು ವೇಶ್ಯೆಯರು ದೇವದಾಸಿಯಾಗಿದ್ದವರೆಂದು ತಿಳಿದುಬಂದಿದೆ.