ವಿಷಯಕ್ಕೆ ಹೋಗು

ವಾಸ್ಕೋ ಡ ಗಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{

ವಾಸ್ಕೋ ಡ ಗಾಮ
ಜನನ೧೪೬೦ ಅಥವಾ ೧೪೬೯
Sines, Portugal or Vidigueira, Alentejo, Kingdom of Portugal
ಮರಣ೨೩ ಡಿಸೆಂಬರ್ ೧೫೨೪ (ಪ್ರಾಯ ೫೪-೬೪)
ಕೊಚ್ಚಿ, ಭಾರತ.
ವೃತ್ತಿಅನ್ವೇಷಕ,

ವಾಸ್ಕೋ ಡ ಗಾಮ (c. ೧೪೬೦ ಅಥಮಾ ೧೪೬೯ – ೨೪ ಡಿಸೆಂಬರ್ ೧೫೨೪) ಪೋರ್ಚುಗೀಸ್ ನಾವಿಕ. ಭಾರತಕ್ಕೆ ಪ್ರಥಮಬಾರಿಗೆ ನೇರವಾಗಿ ಯುರೋಪಿನಿಂದ ಬಂದ ಹಡಗಿನ ಮುಖ್ಯ ನಾವಿಕನಾಗಿದ್ದನು.ಅಲ್ಪಕಾಲ ಭಾರತದಲ್ಲಿ ಪೋರ್ಚುಗೀಸ್ ವಸಾಹತಿನ ವೈಸರಾಯ್ ಆಗಿದ್ದನು.

ವಾಸ್ಕೊ ಡ ಗಾಮನ ಪ್ರಥಮ ಯಾನದ ಪಥ (೧೪೯೭-೧೪೯೯)
ವಾಸ್ಕೋ ಡ ಗಾಮ ಕಲ್ಲಿಕೋಟೆಯಲ್ಲಿ ಬಂದಿಳಿದ ಕ್ಷಣ ಕಲ್ಲಿಕೋಟೆ,ಮೇ ೨೦, ೧೪೯೮.

ಜನನ, ಆಲೇಂತೇಜೂ ಪ್ರಾಂತದ ಸ್ಪೆನ್ಸನಲ್ಲಿ. ಗಾಮನ ಬಾಲ್ಯದ ಬಗ್ಗೆ ವಿವರಗಳು ತಿಳಿದುಬಂದಿಲ್ಲ. 1492ರಲ್ಲಿ ಕೆಲವು ಫ್ರೆಂಚ್ ಹಡಗುಗಳನ್ನು ವಶಪಡಿಸಿಕೊಳ್ಳುವ ಸೈನ್ಯಕಾರ್ಯಾಚರಣೆಯಲ್ಲಿ ಈತ ಪಾತ್ರವಹಿಸಿದ್ದ. ಗುಡ್ಹೋಪ್ ಭೂಶಿರವನ್ನು ಕಂಡುಹಿಡಿದ ಬಾರ್ತಲೋಮ್ಯು ಡೀಯಷನ ಕಾರ್ಯವನ್ನು ಮುಂದುವರಿಸಿ ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿಯುವ ಕಾರ್ಯದಲ್ಲಿ ಪೋರ್ಚುಗಲ್ ದೊರೆ ಎರಡನೆಯ ಜಾನನಿಂದ ನಿಯುಕ್ತನಾದ. ಈ ಅನ್ವೇಷಣ ಯಾತ್ರೆ 1497ರ ಜುಲೈ 8 ರಂದು ಲಿಸ್ಬನಿನಿಂದ ಹೊರಟಿತು. ಗಾಮನ ವಶದಲ್ಲಿ ನಾಲ್ಕು ಹಡಗುಗಳಿದ್ದವು. ಇವನ ಯಾತ್ರೆ ಕ್ಯಾನರೀ ದ್ವೀಪಗಳನ್ನು ತಲುಪಿದ್ದು ಜುಲೈ 15 ರಂದು. ನಾವಿಕರ ತಂಡ ಆ ತಿಂಗಳ 26ರಂದು ಕೇಪ್ವರ್ಡ್ ದ್ವೀಪಗಳನ್ನು ತಲುಪಿತು. ಆಗಸ್ಟ್ 3 ರವರೆಗೂ ಅಲ್ಲೇ ತಂಗಿದ್ದು, ಗಿನೀ ಕೊಲ್ಲಿಯ ಪ್ರವಾಹಕ್ಕೆ ಸಿಲುಕದಂತೆ ದಕ್ಷಿಣ ಅಟ್ಲಾಂಟಿಕ್ ಮೂಲಕ ಬಳಸು ದಾರಿಯಲ್ಲಿ, ಗುಡ್ಹೋಪ್ ಭೂಶಿರದ ಕಡೆಗೆ ಸಾಗಿ, ನವೆಂಬರ್ 7 ರಂದು ಸೇಂಟ್ ಹೆಲೀನಾ ಕೊಲ್ಲಿ ಸೇರಿತು. ನವೆಂಬರ್ 16ರ ವರೆಗೂ ಅಲ್ಲೇ ಇದ್ದು ಅನಂತರ ಮುಂದುವರಿದ ಪ್ರಯಾಣ ಪ್ರತಿಕೂಲ ಮಾರುತಗಳಿಂದಾಗಿ ತಡವಾಗಿ ಗುಡ್ಹೋಪ್ ಭೂಶಿರವನ್ನು ಬಳಸಿ ಮಾಸೆಲ್ ಕೊಲ್ಲಿ ತಲುಪಿ, ಡಿಸೆಂಬರ್ 8ರಂದು ಅಲ್ಲಿಂದ ಹೊರಟು 25 ರಂದು ನಟ್ಯಾಲ್ ತೀರವನ್ನು ಸೇರಿತು. ಮರುವರ್ಷದ ಮಾರ್ಚ್ 2ರಂದು ಮೋಂಬಿಕ್ ತಲುಪಿತು. ಗಾಮ ಮತ್ತು ಇವನ ಸಹಪ್ರಯಾಣಿಕರು ಮುಸ್ಲಿಮರೆಂದು ನಂಬಿ ಅಲ್ಲಿನ ಸುಲ್ತಾನ ಗಾಮನಿಗೆ ಇಬ್ಬರು ಚಾಲಕರ ನೆರವು ನೀಡಿದ. ಪೋರ್ಚುಗೀಸರು ಕ್ರೈಸ್ತರೆಂಬುದನ್ನು ತಿಳಿದು ಆ ಚಾಲಕರಲ್ಲೊಬ್ಬ ಇವರನ್ನು ತ್ಯಜಿಸಿದ. ಗಾಮ ಮೊಂಬಾಸವನ್ನು ತಲುಪಿದ್ದು ಏಪ್ರಿಲ್ 7ರಂದು. ಮಲಿಂಡಿಯಲ್ಲಿ ತಂಗಿ, ಕಲ್ಲಿಕೋಟೆಗೆ ಹಾದಿ ಗೊತ್ತಿದ್ದ ಚಾಲಕನೊಬ್ಬನ ನೆರವಿನಿಂದ ಈತ ಯಾನ ಮುಂದುವರಿಸಿದ. 23 ದಿನಗಳ ಕಾಲ ಹಿಂದೂಸಾಗರದಲ್ಲಿ ಸಾಗಿದ ಮೇಲೆ ಘಟ್ಟಗಳು ಕಾಣಿಸಿದುವು.17ಮೇ1498 ರಂದು ಗಾಮ ಕಲ್ಲಿಕೋಟೆ ತಲುಪಿದ. ಭಾರತವನ್ನು ತಲುಪಿದ್ದರ ಕುರುಹಾಗಿ ಗಾಮ ಅಲ್ಲೊಂದು ಶಿಲಾಸ್ತಂಭ ನೆಟ್ಟ. ಅಲ್ಲಿಯ ಜಾಮೊರಿನ್ ದೊರೆಯಿಂದ ಗಾಮನಿಗೆ ಸ್ವಾಗತ ದೊರಕಿತು. ಆದರೆ ಅಲ್ಲಿಯ ಕೆಲವು ಮುಸ್ಲಿಂ ವ್ಯಾಪಾರಿಗಳ ವಿರೋಧದಿಂದಾಗಿ ದೊರೆಯೊಂದಿಗೆ ಯಾವ ಒಪ್ಪಂದವನ್ನೂ ಇವನಿಗೆ ಮಾಡಿಕೊಳ್ಳಲಾಗಲಿಲ್ಲ.

ಆಗಸಸ್ಟ್ ತಿಂಗಳ ಕೊನೆಯಲ್ಲಿ ಗಾಮ ಭಾರತದಿಂದ ಹಿಂದಕ್ಕೆ ಹೊರಟ. ಅಂಜೆದಿವ ದ್ವೀಪಕ್ಕೆ ಹೋಗಿ ಅಲ್ಲಿಂದ ಮಲಿಂಡಿಗೆ ಪ್ರಯಾಣ ಬೆಳೆಸಿದ. ಮಾರುತಗಳು ಅನುಕೂಲಪ್ರದವಾಗಿರಲಿಲ್ಲವಾದ್ದರಿಂದ ಅರಬ್ಬೀ ಸಮುದ್ರವನ್ನು ದಾಟಲು ಇವನಿಗೆ ಮೂರು ತಿಂಗಳುಗಳ ಕಾಲ ಬೇಕಾಯಿತು. ನಾವಿಕರಲ್ಲಿ ಅನೇಕರು ಕಾಯಿಲೆಯಿಂದ ಸತ್ತರು. ಮರುವರ್ಷ ಮಾರ್ಚ್ ತಿಂಗಳಲ್ಲಿ ಗುಡ್ಹೋಪ್ ಭೂಶಿರವನ್ನು ಬಳಸಿ ಮುಂದುವರಿಯುವಾಗ ಬಿರುಗಾಳಿಯಿಂದ ತೊಂದರೆಯಾಯಿತು. ಉಳಿದಿದ್ದ ಎರಡು ಹಡಗುಗಳೂ ಪರಸ್ಪರ ಬೇರ್ಪಟ್ಟವು. ಗಾಮ ಟರ್ಸೇಯಿರ ದ್ವೀಪವನ್ನು ತಲುಪಿ ತನ್ನ ಹಡಗನ್ನು ಲಿಸ್ಬನಿಗೆ ಮುಂದಾಗಿ ಕಳಿಸಿದ. ಅವನು ಲಿಸ್ಬನ್ ತಲಪಿದ್ದು ಸೆಪ್ಟೆಂಬರ್ 9ರಂದು. ಟರ್ಸೇಯಿರದಲ್ಲಿ ತೀರಿಕೊಂಡಿದ್ದ ಸೋದರನಿಗಾಗಿ ಶೋಕವನ್ನಾಚರಿಸಿ ಸೆಪ್ಟೆಂಬರ್ 18ರಂದು ಗಾಮ ವಿಜಯ ಮೆರೆವಣಿಗೆಯಲ್ಲಿ ಲಿಸ್ಬನ್ ಪ್ರವೇಶಿಸಿದ. ದೊರೆ 1ನೆಯ ಮ್ಯಾನ್ಯುಯೆಲ್ ಇವನಿಗೆ ಡಾಂ ಎಂಬ ಬಿರುದನ್ನೂ ವರ್ಷಾಶನವನ್ನೂ ನೆಲದ ಉಂಬಳಿಯನ್ನೂ ಕೊಟ್ಟು ಗೌರವಿಸಿದ.

ಅನಂತರ ದೊರೆಯ ಆದೇಶದಂತೆ ಕವ್ರಾಲ್ ಎಂಬುವನು ಭಾರತಕ್ಕೆ ಬಂದು ಕಲ್ಲಿಕೋಟೆಯಲ್ಲಿ ಕೋಠಿಯೊಂದನ್ನು ಸ್ಥಾಪಿಸಿದ. ಅಲ್ಲಿ ಉಳಿದಿದ್ದ ಪೋರ್ಚುಗೀಸರು ಕವ್ರಾಲನ ನಿರ್ಗಮನಾನಂತರ ಕೊಲೆಗೆ ಈಡಾದರು. ಇದಕ್ಕೆ ಪ್ರತೀಕಾರ ಮಾಡಬೇಕೆಂಬ ಸೂಚನೆಯೊಂದಿಗೆ ದೊರೆ ಗಾಮನನ್ನು ಮತ್ತೆ ಭಾರತಕ್ಕೆ ಕಳುಹಿಸಿದ. ಇವನಿಗೆ ಭಾರತ ಸಮುದ್ರದ ಅಡ್ಮಿರಲ್ ಎಂಬ ಬಿರುದು ದತ್ತವಾಯಿತು. ದೊರೆ ಇವನಿಗೆ ಹಲವಾರು ವ್ಯಾಪಾರ ಸವಲತ್ತುಗಳನ್ನೂ ನೀಡಿದ. ಗಾಮ ಭಾರತವನ್ನು ತಲುಪಿ ದೊಡನೆಯೇ ಕಲ್ಲಿಕೋಟೆಯನ್ನು ಉಡಾಯಿಸಿ, ಭಾರತದ ಯುದ್ಧನೌಕೆಗಳನ್ನು ನಿರ್ನಾಮ ಮಾಡಿದ. ಅನಂತರ ಕೊಚ್ಚಿಗೆ ಹೋಗಿ ಅಲ್ಲಿ ತನ್ನ ದೇಶಕ್ಕೆ ಅನುಕೂಲವಾದ ವ್ಯಾಪಾರ ಒಪ್ಪಂದ ಮಾಡಿಕೊಂಡು ಸ್ವದೇಶಕ್ಕೆ ಹಿಂದಿರುಗಿದ (1503). ಇವನ ವ್ಯಾಪಾರದಿಂದಾಗಿ ಗಾಮ ಪೋರ್ಚುಗಲಿನಲ್ಲಿಯೇ ಅತ್ಯಂತ ಶ್ರೀಮಂತನಾದ. ಇವನು ಅನಂತರ ವಿಶ್ರಾಂತ ಜೀವನ ನಡೆಸಿದರೂ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ದೊರೆಗೆ ಸಲಹೆ ನೀಡುತ್ತಿದ್ದ. 1519ರಲ್ಲಿ ಇವನಿಗೆ ವಿಡಿಗೈರಿರದ ಕೌಂಟ್ ಪದವಿ ದೊರಕಿತು. 1524ರಲ್ಲಿ ಈತ ಭಾರತದ ವೈಸ್ರಾಯ್ ಆದ. ಇವನು ನಿಧನನಾದ 1524ರ ಡಿಸೆಂಬರ್ 24ರಂದು ಈತ ನಿಧನ ಹೊಂದಿದ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]