ರಕ್ತ
ರಕ್ತ ಎಂಬುದು ಮನುಷ್ಯ ಹಾಗೂ ಇನ್ನಿತರ ಕಶೇರುಕಗಳ (ವರ್ಟಿಬ್ರೇಟ್ಸ್) ದೇಹದಲ್ಲಿಯ ಪ್ರಮುಖ ರಕ್ತನಾಳ ವ್ಯವಸ್ಥೆಯಲ್ಲಿ (ವಾಸ್ಕುಲರ್ ಸಿಸ್ಟಮ್) ಪರಿಚಲಿಸುವ, ಕೆಂಪುಬಣ್ಣದ ದ್ರವ (ಬ್ಲಡ್). ನೆತ್ತರು, ರುಧಿರ, ಪರ್ಯಾಯನಾಮಗಳು. ರಕ್ತವು ದೇಹದಲ್ಲಿ ಜೀವಕಣಗಳನ್ನು ಹೊತ್ತೊಯುತ್ತದೆ. ರಕ್ತವೇ ಎಲ್ಲಾ ಜೀವಿಗಳ ಪೋಷಕ ಶಕ್ತಿ. ಇದು ಒಂದು ಅಮೂಲ್ಯ ಜೀವದ್ರವ. ಅದಕ್ಕೆ ರಕ್ತವನ್ನು ಒಂದು ವಿಶಿಷ್ಟ ವರ್ಗಕ್ಕೆ ಸೇರಿದ, "ಸಂಯೋಜಕ ಊತಕ" ಎನ್ನುತ್ತಾರೆ.[೧] ರಕ್ತದ ಬಹುಮುಖಿ ಮಹತ್ವವನ್ನು ಸರಿಯಾಗಿ ತಜ್ಞರಿಂದ ಅರಿತು, ಸಮತೋಲನದ ಆಹಾರವನ್ನು ಸೇವಿಸಿ, ಕಾಯಿಲೆಗಳಿಗೆ ದಾಸರಾಗುವುದನ್ನು ಕಡಿಮೆಮಾಡಬಹುದು.
ಕಾರಣಾಂತರಗಳಿಂದ ದೇಹದ ಒಳಗೆ ಇಲ್ಲವೆ ಹೊರಗೆ ಎಲ್ಲಿ ಗಾಯವಾದರೂ ರಕ್ತ ಹೊರಬರುತ್ತದೆ. ಎಲ್ಲ ಕಶೇರುಕಗಳ ದೇಹದಲ್ಲೂ ಅನಿಲಿಡ ವಂಶಕ್ಕೆ ಸೇರಿದ ಎರೆಹುಳು, ಜಿಗಣೆ ಮತ್ತು ಇನ್ನಿತರ ಸಮುದ್ರವಾಸಿ ಹುಳುಗಳು ಹಾಗೂ ಅವುಗಳಿಗಿಂತ ಮೇಲ್ದರ್ಜೆಯ ಅಕಶೇರುಕಗಳ ದೇಹದಲ್ಲೂ ರಕ್ತ ಇದೆ. ಕೆಲವು ಹುಳುಗಳಲ್ಲಿ ರಕ್ತ ಮಾಸಲು - ಹಸರು ಬಣ್ಣಕ್ಕೂ ಕೆಲವೊಂದು ಚಿಪ್ಪುಪ್ರಾಣಿಗಳು ಹಾಗೂ ಸಂಧಿಪದಿಗಳಲ್ಲಿ ತಿಳಿನೀಲಿ ಬಣ್ಣಕ್ಕೂ ಇರುವುದುಂಟು. ಮನುಷ್ಯನ ವಿಚಾರವಾಗಿ ಹೇಳುವುದಾದರೆ ಕಣಗಳೂ (ಸೆಲ್ಸ್) ಕಣೀತ್ರಗಳೂ (ಕಿರುತಟ್ಟೆಗಳು; ಪ್ಲೇಟ್ಲೆಟ್ಸ್) ನಿಲಂಬಿತಗೊಂಡಿರುವ (ಸಸ್ಪೆಂಡೆಡ್) ರಕ್ತದ್ರವದಿಂದ (ಜೀವಿರಸ; ಪ್ಲಾಸ್ಮ) ಈ ದ್ರವ ಕೂಡಿದೆ. ಕ್ಷಾರೀಯ ಗುಣವುಳ್ಳದ್ದು ಈ ದ್ರವ. ಸಾಪೇಕ್ಷ ಸಾಂದ್ರತೆ 1.050 - 1.060.
ಸ್ಥೂಲ ಪರಿಚಯ
[ಬದಲಾಯಿಸಿ]ಸಾಮ್ಯಾನ್ಯವಾಗಿ ಮನುಷ್ಯರ ದೇಹದಲ್ಲಿ 5 - 6 ಲೀಟರುಗಳಷ್ಟು ರಕ್ತ ಇರುತ್ತದೆ.[೨] ಈ ವಿಷಯ ಶಿರಚ್ಛೇದನ ಮಾಡಿದ ಅಪರಾಧಿಗಳಲ್ಲಿ ರಕ್ತದ ನೇರ ಅಳತೆಯಿಂದ ಸುಮಾರು 200 ವರ್ಷಗಳಿಗೆ ಹಿಂದೆಯೇ ತಿಳಿದು ಬಂದಿತ್ತು. ವಿವಿಧ ಪ್ರಯೋಗಗಳಿಂದ ಅಪ್ರತ್ಯಕ್ಷವಾಗಿ ಮಾಪನ ಮಾಡಿ ದೇಹತೂಕದ 1/12 ರಷ್ಟು ರಕ್ತ ಇರುತ್ತದೆಂದು ನಿರ್ಧರಿಸಲಾಗಿದೆ. ರಕ್ತಪ್ರಮಾಣ ದೇಹತೂಕವನ್ನು ಅನುಸರಿಸಿರುವುದಕ್ಕಿಂತ ಹೆಚ್ಚು ಕರಾರುವಾಕ್ಕಾಗಿ ದೇಹದ ಮೇಲ್ಮೈ ಅಳತೆಯನ್ನು ಅನುಸರಿಸಿದೆ ಎಂದೂ ಗೊತ್ತಾಗಿದೆ. ಸಸ್ತನಿಗಳಲ್ಲೆಲ್ಲ ಸಾಮಾನ್ಯವಾಗಿ ಮನುಷ್ಯನಲ್ಲಿರುವಂತೆ ದೇಹತೂಕದ ಸುಮಾರು 1/12 ರಷ್ಟು ರಕ್ತ ಇರುತ್ತದೆ ಎನ್ನಬಹುದು. ಪಕ್ಷಿಗಳಲ್ಲಿ ದೇಹತೂಕದ 1/10 ರಷ್ಟು ರಕ್ತ ಇರುವುದೂ ಮೀನುಗಳಲ್ಲಿ ದೇಹತೂಕದ ಕೇವಲ ಶೇ. 2-3 ರಷ್ಟು ಅವುಗಳ ಮರಿಗಳಲ್ಲಿ (ಲಾರ್ವ) ಶೇ. 40 ರಷ್ಟೂ ರಕ್ತ ಇರುವುದು ತಿಳಿದಿದೆ. ಅತ್ಯಂತ ಹೆಚ್ಚಾಗಿ ಇರುವುದು ಶಂಖದ ಹುಳು ಜಾತಿಯಲ್ಲಿ. ಇವುಗಳಲ್ಲಿ ದೇಹದ ಘನಗಾತ್ರದ ಶೇ. 90 ಭಾಗ ರಕ್ತವೇ.
ದೇಹದಲ್ಲಿ ರಕ್ತ ಸ್ವಸ್ಥಾನದಲ್ಲಿರುವಾಗ (ಹೃದಯ ಹಾಗೂ ರಕ್ತನಾಳಗಳ ಒಳಗೆ) ಅದು ಸದಾ ದ್ರವರೂಪದಲ್ಲಿರುವುದು ಒಂದು ವೈಶಿಷ್ಟ್ಯ. ಆದರೆ ದೇಹದಿಂದ ಹೊರಬಂದ ರಕ್ತ ನಾಲ್ಕಾರು ಮಿನಿಟುಗಳಲ್ಲಿ ಗರಣೆ ಕಟ್ಟಿ ಘನೀಕರಿಸುವುದು ಅದರ ಇನ್ನೊಂದು ಗುಣಗಳೂ ಅಗತ್ಯ. ಸಾಧಾರಣವಾಗಿ ದೇಹದ ಯಾವ ಭಾಗದಲ್ಲಿ ಗಾಯವಾದರೂ ರಕ್ತಸ್ರಾವವಾಗುವುದರಿಂದ ಅದು ದೇಹದ ಎಲ್ಲೆಡೆಯೂ ಇರುತ್ತದೆ ಎಂಬುದು ಸ್ಪಷ್ಟ. ಗಾಯವಾದಾಗ ರಕ್ತನಾಳಗಳು ಛಿದ್ರಗೊಂಡು ಒಳಗೆ ಹರಿಯುತ್ತಿರುವ ರಕ್ತ ಹೊರಬರುವುದೆಂಬುದು ಎಲ್ಲರಿಗೂ ತಿಳಿದ ವಿಷಯ. ನಾಳಗಳಲ್ಲಿ ರಕ್ತ ಹರಿಯುತ್ತಿರಬೇಕಾದರೆ ಅದು ದ್ರವರೂಪದಿಂದ ಇರಬೇಕಾದುದು ಅಗತ್ಯವೆನ್ನುವುದು ಸ್ಪಷ್ಟ. ಏಕೆಂದರೆ ರಕ್ತ ಅಲ್ಲೆ ಗರಣೆ ಕಟ್ಟಿಕೊಳ್ಳುವಂತಿದ್ದರೆ ಅದು ಪ್ರವಹಿಸುವುದಕ್ಕೆ ಅಡಚಣೆ ಆಗುವುದು ವಿಶಾದ. ಆದರೆ ಗಾಯವಾಗಿ ನಾಳದಿಂದ ಹೊರಬಂದ ರಕ್ತ ಗರಣೆಗಟ್ಟಿಕೊಳ್ಳಬೇಕಾದುದೇ ಅಪೇಕ್ಷಣೀಯ. ಗರಣೆಯಿಂದ ರಕ್ತನಾಳದ ಗಾಯ ಮುಚ್ಚಿಕೊಂಡು ಮರಣಾಂತಕವಾಗಿ ರಕ್ತ ನಷ್ಟವಾಗುವುದು ತಪ್ಪುತ್ತದೆ.
ಪಿಚಕಾರಿಯ ಮೂಲಕ ಮನುಷ್ಯ ರಕ್ತವನ್ನು ತೆಗೆದು ಒಂದು ಪ್ರನಾಳದಲ್ಲಿಟ್ಟರೆ ಅದು ನಾಲ್ಕಾರು ಮಿನಿಟುಗಳಲ್ಲಿ ಗಟ್ಟಿಯಾಗುತ್ತದೆ. ಆದರೆ ಅದಕ್ಕೆ ಕೊಂಚ ಪೊಟ್ಯಾಸಿಯಮ್ ಆಕ್ಸಲೇಟ್ ಪುಡಿಯನ್ನು ಸೇರಿಸಿದರೆ ರಕ್ತ ದ್ರವರೂಪದಲ್ಲೇ ಇರುತ್ತದೆ. ಪ್ರನಾಳವನ್ನು ಹಾಗೆಯೇ ಇಟ್ಟಿದ್ದರೆ ಸುಮಾರು 1/2 - 1 ಗಂಟೆಯೊಳಗೆ ರಕ್ತ ಅದರ ಅರ್ಧಕ್ಕಿಂತ ಕಡಿಮೆಯಾಗಿ (ಸುಮಾರು 45%) ತಳದ ಕೆಂಪು ಗಷ್ಟಾಗಿಯೂ, ಅರ್ಧಕ್ಕಿಂತ ಹೆಚ್ಚಾಗಿ (ಸುಮಾರು 55%) ಗಷ್ಟಿನ ಮೇಲೆ ತಿಳೀ ಹಳದಿ ಬಣ್ಣದ ದ್ರವವಾಗಿಯೂ ಬೇರ್ಪಡುತ್ತದೆ. ದ್ರವಕ್ಕೆ ರಕ್ತದ್ರವ (ಪ್ಲಾಸ್ಮ) ಎಂದು ಹೆಸರು. ತಳದ ಗಷ್ಟನ್ನು ಗುಂಡುಸೂಜಿಯ ತಲೆಯಷ್ಟು ತೆಗೆದು 0.9% ಸೋಡಿಯಮ್ ಕ್ಲೋರೈಡ್ ದ್ರಾವಣದ ತೊಟ್ಟಿನಲ್ಲಿಟ್ಟು ಸೂಕ್ಷ್ಮದರ್ಶಕದ ಮೂಲಕ ನೋಡಿದರೆ ವಿಶಿಷ್ಟರಚನೆಯ ಘಟಕಗಳಿಂದಾಗಿರುವುದು (ಫಾರಮ್ಡ್ ಎಲಿಮೆಂಟ್ಸ್) ವ್ಯಕ್ತವಾಗುತ್ತದೆ.
ರಕ್ತನಾಳಗಳಲ್ಲಿ ಇರುವ ರಕ್ತದ್ರವ, ದೇಹದೊಳಗೆ ಎಲ್ಲೆಲ್ಲೂ ಕಂಡೂ ಕಾಣಿಸದಂತೆಯೂ ಇರುವ ಅಂಗಾಂಶದ್ರವ (ಟಿಷ್ಯೂ ಫ್ಲೂಯಿಡ್), ಇವೆರಡರ ನಡುವೆ ವಸ್ತು ವಿನಿಮಯ (ನೀರು, ಅನಿಲಗಳೂ ಸೇರಿದಂತೆ) ನಿರಂತರವೂ ಜರುಗುತ್ತಲೇ ಇದು ದೇಹದ ಎಲ್ಲ ಕೋಶಗಳಿಗೂ ಆಹಾರ ಸರಬರಾಜಾಗಿ ಅವುಗಳಿಂದ ತಯಾರಾದ ಉಪಯುಕ್ತ ಹಾಗೂ ವಿಸರ್ಜನವಸ್ತುಗಳು ರಕ್ತದ್ರವವನ್ನು ಸೇರುತ್ತದೆ. ಅಧಿಕ ವಮನ, ಭೇಧಿ, ಅಧಿಕವಾಗಿ ಬೆವರುವಿಕೆ, ಚುಚ್ಚುವುದರ ಮೂಲಕ ದ್ರವದುಂಬಿಕೆ, ಮೂತ್ರಪಿಂಡ ರೋಗ ಇತ್ಯಾದಿಗಳಿಂದ ಅಂಗಾಂಶದ್ರವದ ಮೊತ್ತದಲ್ಲಿ ಹೆಚ್ಚು ಕಡಿಮೆ ಆದಾಗ ಅನುಗುಣವಾಗಿ ರಕ್ತದ ಘಟಕಗಳಲ್ಲೂ ವ್ಯತ್ಯಾಸ ಕಂಡುಬರುತ್ತದೆ. ರಕ್ತಸ್ರಾವವಾದಾಗಲೂ ವ್ಯತ್ಯಾಸವಾಗುವುದು ವ್ಯಕ್ತ. ಇಂಥ ವ್ಯತ್ಯಾಸಗಳಿಂದ ರಕ್ತದ ಒತ್ತಡದಲ್ಲಿ ಏರುಪೇರು, ಮತ್ತಿತರ ತೊಂದರೆಗಳೂ ಉಂಟಾಗುತ್ತವೆ. ಆದ್ದರಿಂದ ಒಟ್ಟು ರಕ್ತ ಹಾಗೂ ಘಟಕಗಳ ಘನಗಾತ್ರ ಹೆಚ್ಚುಕಡಿಮೆ ಆಗದಂತೆ ವಿಶಿಷ್ಟ ನಿಯಂತ್ರಣ ಕ್ರಮಗಳು ದೇಹದಲ್ಲಿ ಏರ್ಪಟ್ಟಿವೆ. ನೀರಡಿಕೆ, ಮೂತ್ರೋತ್ಪಾದನೆ ಹಾಗೂ ಅದರ ಘನಸಾಂದ್ರತೆಯಲ್ಲಿ ಹೆಚ್ಚು ಕಡಿಮೆಗಳಾಗುವುದು ಇವೆಲ್ಲ ಮುಖ್ಯ ನಿಯಂತ್ರಣ ಕ್ರಮಗಳು.
ರಕ್ತ ಪರಿಚಲನೆ
[ಬದಲಾಯಿಸಿ]ಕಶೇರುಕಗಳ ರಕ್ತನಾಳಗಳಲ್ಲಿ ರಕ್ತ ಹರಿಯುತ್ತಲೇ ಇರುವುದಕ್ಕೆ ಕಾರಣ ಎಂದರೆ ತಾನಾಗಿಯೇ ಕ್ರಮಬದ್ಧವಾಗಿ ಮಿಡಿಯುತ್ತ ರಕ್ತವನ್ನು ರೇಚಿಸುತ್ತಲೇ (ಪಂಪ್) ಇರುವ ಹೃದಯ. ಮನುಷ್ಯನಲ್ಲಿ ಹೃದಯ ಎಂಬುದು ಮಿನಿಟಿಗೆ ಸುಮಾರು 70 ಬಾರಿ ಮಿಡಿಯುವ, ನಾಲ್ಕು ಕುಹರಗಳ ಒಂದು ರೇಚಕ (ಫ಼ೋರ್ ಚೇಂಬರ್ಡ್ ಪಂಪ್). ಮೇಲಿನ ಎರಡು ಕುಹರಗಳು ಎಡಬಲ ಹೃತ್ಕರ್ಣಗಳು (ಏಟ್ರಿಯ). ಇದಕ್ಕೆ ಅನುಕ್ರಮವಾಗಿ ಫುಪ್ಪುಸಗಳಿಂದ ಮತ್ತು ದೇಹದ ಇತರ ಎಡೆಗಳಿಂದ ದೊಡ್ಡ ರಕ್ತನಾಳಗಳ ಮೂಲಕ ಸತತವಾಗಿ ಹರಿದು ಬಂದು ತುಂಬಿಕೊಳ್ಳುವ ರಕ್ತವನ್ನು ಇವು ತಮ್ಮ ಅಡಿಯಲ್ಲಿ ಇರುವ ಎಡಬಲ ಹೃತ್ಕುಕ್ಷಿಗಳೂ ಏಕಕಾಲಿಕವಾಗಿ ಸಂಕುಚಿಸಿ ತಮ್ಮಿಂದ ಹೊರಡುವ ರಕ್ತನಾಳಗಳೊಳಕ್ಕೆ ರಕ್ತವನ್ನು ದಬ್ಬುತ್ತದೆ. ಬಲಹೃತ್ಕುಕ್ಷಿಯಿಂದ ಹೊರಡುವುದು ಫುಪ್ಪುಸ ಧಮನಿ (ಪಲ್ಮನರಿ ಆರ್ಟರಿ). ಇದು ತನ್ನ ಎಡಬಲ ಕವಲುಗಳ ಮೂಲಕ ಆಯಾ ಕಡೆಯ ಫುಪ್ಪುಸಗಳಿಗೆ ರಕ್ತವನ್ನು ಒಯ್ಯುತ್ತದೆ. ಅಲ್ಲಿಂದ ಫುಪ್ಪುಸ ಅಭಿಧಮನಿಗಳು (ಪಲ್ಮನರಿ ವೇಯ್ನ್ಸ್) ಎಂಬ ನಾಲ್ಕು ರಕ್ತನಾಳಗಳ ಮೂಲಕ ಪ್ರವಹಿಸುತ್ತದೆ. ಅಯೋರ್ಟ ಛತ್ರಿಕೋಲಿನ ಹಿಡಿಯುವಂತೆ ಕಮಾನಾಗಿ ಪ್ರಾರಂಭವಾಗಿ ಬೆನ್ನುಮೂಳೆಯ ಮುಂದೆ ನೇರವಾಗಿ ಸೊಂಟದವರೆಗೆ ಇಳಿದು ಅಲ್ಲಿ ಎರಡು ಕವಲಾಗಿ ಎಡಬಲ ಕಿಬ್ಬೊಟ್ಟೆ ಭಾಗಗಳಿಗೂ ಇಳಿಯುತ್ತಿರುವ ನೇರ ಭಾಗದಿಂದಲೂ ಉದ್ಭವಿಸುವ ಕವಲುಗಳು ತಲೆ, ಕೈಗಳು, ಎದೆ ಹಾಗೂ ಉದರದ ಎಲ್ಲ ಅಂಗಗಳಿಗೆ ರಕ್ತಪೂರೈಕೆ ಮಾಡುತ್ತವೆ. ದೇಹದ ಕೆಳಭಾಗದಿಂದ ಹಿಂದಿರುಗುವ ರಕ್ತ ಉನ್ನತ ಮಹಾಭಿಧಮನಿ (ಇನ್ಫೀರಿಯರ್ ವೀನಕೇವ) ಎಂಬ ದೊಡ್ಡ ರಕ್ತನಾಳದ ಮೂಲಕವೂ, ತಲೆ, ಕೈಗಳು ಹಾಗೂ ಮುಂಡದ ಮೇಲುಭಾಗದಿಂದ ವಾಪಸಾಗುವ ರಕ್ತ ಉನ್ನತ ಮಹಾಭಿದಮನಿ (ಸುಪೀರಿಯರ್ ವೀನಕೇವ) ಎಂಬ ದೊಡ್ಡ ರಕ್ತನಾಳದ ಮೂಲಕವೂ ಬಲಹೃತ್ಕರ್ಣವನ್ನು ಸೇರುತ್ತದೆ. ಬಲಹೃತ್ಕುಕ್ಷಿಗಳ ನಡುವೆ, ಎಡಹೃತ್ಕರ್ಣ ಹೃತ್ಕುಕ್ಷಿಗಳ ನಡುವೆ, ಬಲಹೃತ್ಕುಕ್ಷಿ ಫುಪ್ಪುಸಧಮನಿ ಇವುಗಳ ನಡುವೆ ಮತ್ತು ಎಡಹೃತ್ಕುಕ್ಷಿ ಮಹಾಪಧಮನಿ ನಡುವೆ ಒಮ್ಮುಖವಾಗಿ ಮಾತ್ರ ತೆರೆದುಕೊಳ್ಳುವ ಕವಾಟಗಳಿವೆ (ವಾಲ್ವ್). ಹೃತ್ಕುಕ್ಷಿಗಳಿಂದ ರೇಚಿಸಲ್ಪಟ್ಟ ರಕ್ತ ಫುಪ್ಪುಸಧಮನಿ ಮತ್ತು ಮಹಾಪಧಮನಿಗಳಿಗೆ ಹರಿದುಹೋಗಬಲ್ಲದೇ ವಿನಾ ಆಯಾ ಹೃತ್ಕರ್ಣಗಳಿಗೆ ಹಿಂದಕ್ಕೆ ಹರಿದುಹೋಗಲಾರದು. ಹೃತ್ಕರ್ಣ ಹೃತ್ಕುಕ್ಷಿಗಳ ನಡುವಣ ಕವಾಟಗಳು ಇದಕ್ಕೆ ಆಸ್ಪದ ಕೊಡುವುದಿಲ್ಲ. ಅಂತೆಯೇ ರಕ್ತದಿಂದ ಹಿಗ್ಗಿಸಲ್ಪಟ್ಟಿರುವ ಫುಪ್ಪುಸಧಮನಿ ಮತ್ತು ಮಹಾಪಧಮನಿಗಳು ತಮ್ಮ ಸ್ಥಿತಿಸ್ಥಾಪಕಸಾಮರ್ಥ್ಯದಿಂದ ಸಹಜಸ್ಥಿತಿಗೆ ಬಂದಾಗ ಅವುಗಳೊಳಗಿನ ರಕ್ತ ಆಯಾ ಹೃತ್ಕುಕ್ಷಿಗಳಿಗೆ ಹಿಂದಿರುಗಲು ಅವುಗಳ ನಡುವೆ ಇರುವ ಕವಾಟಗಳು ಅವಕಾಶ ಮಾಡಿಕೊಡುವುದಿಲ್ಲ. ಆದ್ದರಿಂದ ರಕ್ತ ಫುಪ್ಪುಸಧಮನಿಗಳು ಮತ್ತು ಮಹಾಪಧಮನಿಗಳಲ್ಲಿ ಇನ್ನೂ ಮುಂದಕ್ಕೇ ಹರಿದು ಹೋಗಬೇಕು. ಹೀಗೆ ಮುಂದುಮುಂದಕ್ಕೆ ತಳ್ಳಿಸಿಕೊಂಡೇ ರಕ್ತ ಅವುಗಳ ಅಂತ್ಯ ಕವಲುಗಳ ಮೂಲಕ ಕ್ರಮವಾಗಿ ಫುಪ್ಪಸಗಳ ಮತ್ತು ದೇಹದ ಇತರ ಎಲ್ಲ ಭಾಗಗಳ ಮೂಲೆ ಮೂಲೆಗಳನ್ನೂ ತಲುಪುತ್ತದೆ. ಪ್ರವಾಹ ಮುಂದುವರಿದು ರಕ್ತ ಅಂತಿಮವಾಗಿ ಹೃದಯವನ್ನೇ ಪುನಃ ಸೇರುತ್ತದೆ. ಚಕ್ರಾಕಾರವಾದ ಈ ರಕ್ತಚಲನೆಗೆ ರಕ್ತಪರಿಚಲನೆ (ಬ್ಲಡ್ ಸರ್ಕ್ಯುಲೇಷನ್) ಎಂದು ಹೆಸರು. ಇಲ್ಲಿ 2 ಪ್ರದಕ್ಷಿಣೆಗಳನ್ನು ಗಮನಿಸಬಹುದು. ಎಡಹೃತ್ಕುಕ್ಷಿಯಿಂದ ರೇಚಿಸಲ್ಪಟ್ಟ ರಕ್ತ ದೇಹದ ಎಲ್ಲ ಮೂಲೆಗಳಿಗೂ ಪೂರೈಕೆ ಆಗಿ ಮತ್ತೆ ಬಲಹೃತ್ಕರ್ಣವನ್ನು ಸೇರುವುದೆ ಒಂದು; ಬಲಹೃತ್ಕುಕ್ಷಿಯಿಂದ ರೇಚಿಸಲ್ಪಟ್ಟ ರಕ್ತ ಪುಪ್ಪಸಗಳಲ್ಲಿ ಮಾತ್ರ ಪರಿಚಲಿಸುತ್ತ ಪುನಃ ಎಡಹೃತ್ಕರ್ಣವನ್ನು ಸೇರುವುದು ಇನ್ನೊಂದು. ಹೃದಯದಿಂದ ಆಚೆಗೆ ರಕ್ತವನ್ನು ಒಯ್ಯುವ ರಕ್ತನಾಳಗಳಿಗೆಲ್ಲ ಅಪಧಮನಿಗಳೆಂದೂ (ಆರ್ಟರೀಸ್), ದೇಹದ ನಾನಾ ಮೂಲೆಗಳಿಂದಲೂ ರಕ್ತವನ್ನು ವಾಪಸ್ಸು ಹೃದಯಕ್ಕೆ ಒಯ್ಯುವ ರಕ್ತನಾಳಗಳಿಗೆಲ್ಲ ಅಭಿಧಮನಿಗಳೆಂದೂ (ವೇಯ್ನ್) ಹೆಸರು. ಒಂದು ನಿರ್ದಿಷ್ಟ ಅಂಗ ಇಲ್ಲೇ ದೇಹ ಭಾಗಕ್ಕೆ ಯುಕ್ತ ಅಪಧಮನಿಯ ಮೂಲಕ ರಕ್ತಪೂರೈಕೆ ಆಗುವುದು ಮಾಮೂಲು. ಅನೇಕ ಕಡೆಗಳಲ್ಲಿ ಒಂದೆ ದೇಹಭಾಗಕ್ಕೆ 2 - 3 ಅಪಧಮನಿಗಳು ರಕ್ತಪೂರೈಕೆ ಮಾಡುವುದೂ ಇದೆ. ಅಪಧಮನಿಯೊಂದು ಪದೇ ಪದೇ ಕವಲಾಗುತ್ತ ಸುಮಾರು 1 ಮಿಮೀ ವ್ಯಾಸದಷ್ಟು ಸಣ್ಣದಾದ ಕಿರಿ ಅಪಧಮನಿಗಳು (ಆರ್ಟಿರಿಯೋಲ್ಸ್) ಎಂದಾಗುತ್ತದೆ. ಮಾತ್ರವಲ್ಲದೆ ರಕ್ತವನ್ನು ನಿರ್ದಿಷ್ಟಕ್ಷೇತ್ರದ ಉದ್ದ, ಅಗಲ ಮತ್ತು ಗಾತ್ರಕ್ಕೂ ತಲುಪಿಸುತ್ತದೆ ಕೂಡ. ಪ್ರತಿಯೊಂದು ಕಿರಿ ಅಪಧಮನಿ ಮುಂದೆ ಇನ್ನೂ ಸಣ್ಣ ಶಾಖೆಗಳಾಗಿ ಅಂತಿಮವಾಗಿ ಬರೀ ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮರಕ್ತನಾಳಗಳಾಗುತ್ತದೆ. ಈ ನಾಳಗಳಿಗೆ ಲೋಮನಾಳಗಳು (ಕ್ಯಾಪಿಲ್ಲೆರೀಸ್) ಎಂದು ಹೆಸರು. ಇವೂ ಕವಲೊಡೆಯುವುದಾದರೂ ಕವಲುಗಳು ಸಣ್ಣವಾಗದೆ ಮತ್ತು ಬೇರೆ ಕವಲುಗಳೊಡನೆ ಸೇರಿಕೊಳ್ಳುತ್ತ ಪುನಃ ಒಡೆಯುತ್ತ ಒಂದು ಬಲೆ ಅಥವಾ ಜಾಲರಿಯಂತಾಗುತ್ತದೆ (ಲೋಮನಾಳದ ಜಾಲರಿಗಳು - ಕ್ಯಾಪಿಲ್ಲೆರಿ ಪ್ಲೆಕ್ಸಸ್ ಅಥವಾ ನೆಟ್ವರ್ಕ್). ಆ ಕ್ಷೇತ್ರದ ಕೋಶಗಳೆಲ್ಲದರ ನಿಕಟಸಂಪರ್ಕ ಪಡೆದಿರುತ್ತದೆ. ಲೋಮನಾಳಗಳ ವ್ಯಾಸ ಅತಿ ಕಿರಿದು. ಮಿಲಿಮೀಟರಿನ ಸಾವಿರ ಭಾಗಗಳಲ್ಲಿ 3-30 ಭಾಗಗಳಷ್ಟಿರಬಹುದು (0.001 ಮಿಮೀ 1μ) ಇವುಗಳ ಭಿತ್ತಿಯೂ ಅತಿ ತೆಳುವೇ. ಈ ಭಿತ್ತಿಯ ಮೂಲಕ ಲೋಮನಾಳಗಳೊಳಗಿರುವ ರಕ್ತ ಮತ್ತು ಕೋಶಗಳ ಆವರಣ ದ್ರವ (ಇಂಟರ್ಸೆಲ್ಯುಲರ್ ಅಥವಾ ಇನ್ಟರ್ಸ್ಟೀಷಿಯಲ್ ಪ್ಲೂಯಿಡ್, ಟಿಷ್ಯೂ ಪ್ಲೂಯಿಡ್) ಇವುಗಳ ನಡುವೆ ವಸ್ತುಗಳ ವಿನಿಮಯ ಜರುಗುತ್ತದೆ.
ಎಡಹೃತ್ಕುಕ್ಷಿಯಿಂದ ಹೊರಬೀಳುವ ರಕ್ತದಲ್ಲಿ ಆಹಾರಾಂಶಗಳು, ಆಕ್ಸಿಜನ್, ಹಾರ್ಮೋನುಗಳು ಮತ್ತಿತರ ಉಪಯುಕ್ತ ವಸ್ತುಗಳೂ ದೇಹದಿಂದ ವಿಸರ್ಜಿತವಾಗಬೇಕಾದ ಯೂರಿಯ ಮುಂತಾದ ವಸ್ತುಗಳೂ ಹೇರಳವಾಗಿ ಇರುತ್ತವೆ. ದೇಹದ ವಿವಿಧ ಭಾಗಗಳಲ್ಲಿ ಮಹಾಪಧಮನಿಯ ಅಂತ್ಯಕಿರಿಗವಲುಗಳಿಂದ ಉದ್ಭವಿಸುವ ಲೋಮನಾಳ ಜಾಲರಿಗಳ ರಕ್ತದಲ್ಲಿಯೂ ಈ ವಸ್ತುಗಳು ಏನೂ ವ್ಯತ್ಯಾಸವಾಗದೆ ಇದ್ದು ದೇಹಕೋಶಗಳಿಗೆಲ್ಲ ಆಹಾರಾಂಶಗಳು ಆಕ್ಸಿಜನ್ನೂ ಸರಬರಾಜಾಗುತ್ತದೆ. ಹಾರ್ಮೊನುಗಳು ಮತ್ತಿತರ ಉಪಯುಕ್ತ ವಸ್ತುಗಳೂ ಹೀಗೆಯೇ ಎಲ್ಲಾ ಕೋಶಗಳನ್ನು ತಲಪಿದರೂ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಹೀರಲ್ಪಟ್ಟು ಕಾರ್ಯೋನ್ಮುಖವಾಗುತ್ತವೆ. ಇತರ ನಿರ್ದಿಷ್ಟ ಸ್ಥಳಗಳಲ್ಲಿ ಇಂಥ ವಸ್ತುಗಳನ್ನು ರಕ್ತವೇ ಹೀರಿಕೊಂಡುಬಿಡುವುದೂ ಉಂಟು. ಎಲ್ಲೆಡೆಯೂ (ಮೂತ್ರಜನಕಾಂಗಗಳನ್ನು ಬಿಟ್ಟು) ಉತ್ಪತ್ತಿ ಆ ವಿಸರ್ಜನಾ ವಸ್ತುಗಳು ರಕ್ತದಿಂದ ಹೀರಲ್ಪಡುತ್ತದೆ. ಹಾಗೆಯೇ ಎಲ್ಲಾ ಕಡೆಗಳಲ್ಲೂ ಉತ್ಪತ್ತಿ ಅಗುತ್ತಲೇ ಇರುವ ಕಾರ್ಬನ್ ಡೈ ಆಕ್ಸೈಡನ್ನು ಈ ಲೋಮನಾಳ ಜಾಲರಿಗಳ ರಕ್ತ ಹೀರಿಕೊಳ್ಳುತ್ತದೆ. ಲೋಮನಾಳ ಜಾಲರಿಗಳಿಂದ ಹಿಂದಿರುಗುವ ರಕ್ತದಲ್ಲಿ ಆಕ್ಸಿಜನ್ ಕಡಿಮೆ ಆಗಿಯೂ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿಯೂ ಹಾಗೆಯೇ ಆಹಾರಾಂಶ ಸ್ವಲ್ಪ ಕಡಿಮೆ ಆಗಿಯೂ ವಿಸರ್ಜಿತ ವಸ್ತುಗಳು ಹೆಚ್ಚಾಗಿಯೂ ಇರುವುದು ವ್ಯಕ್ತ; ಆದರೆ ಆಹಾರಪಚನ ಕಾಲದಲ್ಲಿ ಕರುಳಿನಿಂದ ಹಿಂದಿರುಗುವ ರಕ್ತ ಆಹಾರಾಂಶಗಳನ್ನು ಹೀರಿಕೊಂಡಿರುವುದರಿಂದ ಅದರಲ್ಲಿ ಆಹಾರಾಂಶ ಮೊದಲಿಗಿಂತಲೂ ಹೆಚ್ಚಾಗಿಯೇ ಇರುತ್ತೆನ್ನುವುದು ವಾಸ್ತವದ ಸಂಗತಿ. ಮೂತ್ರಜನಕಾಂಗಗಳಿಂದ ಹಿಂದಿರುಗುವ ರಕ್ತದಲ್ಲಿ ವಿಸರ್ಜನೆ ಆಗತಕ್ಕ ವಸ್ತುಗಳು ಮೊದಲೇ ವಿಲೆ ಆಗಿರುವುದರಿಂದ, ಅವು ಬಲು ಕಡಿಮೆ ಪ್ರಮಾಣದಲ್ಲಿರುತ್ತವೆ.
ದೇಹದ ಬೇರೆ ಬೇರ ಕಡೆಗಳಲ್ಲಿ ಸಾಮಾನ್ಯವಾಗಿ ಮತ್ತು ವಿಶಿಷ್ಟವಾಗಿ ವಸ್ತುವಿನಿಮಯ ಆದ ಮೇಲೆ ರಕ್ತ ವಾಪಸ್ಸು ಹೃದಯದ ಬಲ ಹೃತ್ಕರ್ಣವನ್ನು ಬಂದುಸೇರುತ್ತದೆ. ಅನಂತರ ಈ ರಕ್ತ ಬಲಹೃತ್ಕುಕ್ಷಿಯ ರೇಚನದಿಂದ ಫುಪ್ಪುಸಗಳಿಗೆ ಒಯ್ಯಲ್ಪಡುವುದೂ ಉಂಟು. ಫುಪ್ಪುಸಗಳಲ್ಲಿ ಈ ರಕ್ತ ಕಾರ್ಬನ್ ಡೈ ಆಕ್ಸೈಡನ್ನು ಕಳೆದುಕೊಂಡು ಬದಲಾಗಿ ಆಕ್ಸಿಜನ್ನನ್ನು ಹೀರಿಕೊಳ್ಳುತ್ತದೆ. ಇದು ಪುನಃ ಹೃದಯದ ಎಡಭಾಗವನ್ನು ಹೊಕ್ಕು ಪುನಃ ರೇಚಿಸಲ್ಪಟ್ಟು ಮಹಾಪಧಮನಿಯ ಮೂಲಕ ಮುಂದಿನ ಪ್ರದಕ್ಷಿಣೆಯನ್ನು ಪ್ರಾರಂಭಿಸುತ್ತದೆ. ಒಟ್ಟಿನಲ್ಲಿ ಪರಿಚಲಿಸುತ್ತಿರುವ ರಕ್ತದಲ್ಲಿ ಸದಾಕಾಲವೂ ಆಕ್ಸಿಜನ್, ಕಾರ್ಬನ್ ಡೈ ಆಕ್ಸೈಡ್, ಆಹಾರಾಂಶಗಳು, ವಿಸರ್ಜನವಾಗಬೇಕಾದ ಅಂಶಗಳು, ಹಾರ್ಮೋನುಗಳು ಮತ್ತಿತರ ಉಪಯುಕ್ತ ವಸ್ತುಗಳು ಎಲ್ಲವೂ ಇದ್ದೇ ಇರುತ್ತವೆ. ನಿರ್ದಿಷ್ಟ ಸ್ಥಳಗಳಲ್ಲಿ ಇವು ದೇಹಕೋಶಗಳಿಗೆ ಒದಗಿಯೋ ದೇಹಕೋಶಗಳಿಂದ ದತ್ತವಾಗಿಯೊ ಫುಪ್ಪುಸಗಳಲ್ಲಿ ಹೀರಿಕೆ - ಬಿಡುಗಡೆಗಳಾಗಿಯೊ ಮೂತ್ರಜನಕಾಂಗಗಳಲ್ಲಿ ವಿಸರ್ಜಿತವಾಗಿಯೊ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ. ಈ ವಿನಿಮಯ ರಕ್ತದ ಒಂದು ಪ್ರಮುಖ ಕ್ರಿಯೆ. ಇದು ಜರುಗಲೆಂದೇ ರಕ್ತ ಪರಿಚಲಿಸುತ್ತಲೇ ಇರಬೇಕಾದ ಅಗತ್ಯವಿದೆ. ರಕ್ತಪರಿಚಲನೆಯಿಂದ ದೇಹದ ವಿವಿಧ ಭಾಗಗಳ ಸ್ಥಿತಿಯಲ್ಲಿ ಏರುಪೇರುಗಳು ಸರಿತೂಗಲ್ಪಟ್ಟು ದೇಹ ಸಹಜಸ್ಥಿತಿಗೆ ಮರಳುವುದು ಸಾಧ್ಯ. ದೇಹ ಉಷ್ಣತೆಯ ಸಮತೋಲ, ದೇಹದ ಸಹಜಪ್ರತ್ಯಾಮ್ಲೀಯತೆಯ (ನಾರ್ಮಲ್ ಆಲ್ಕಲೈನ್ ಕಂಡೀಷನ್ - ಸಾಮಾನ್ಯವಾಗಿ ಇದು pH 7.4 ರಷ್ಟು ಇರುತ್ತದೆ.[೩][೪]) ಸಮತೋಲ, ದೇಹಕೋಶಗಳು, ಕೋಶಾವರಣದ್ರವ, ರಕ್ತ ಈ ಮೂರು ನೀರಿನ ಅಂಶದ ಸಮತೋಲ. ಇವು ರಕ್ತಪರಿಚಲನೆಯಿಂದಲೇ ಮುಖ್ಯವಾಗಿ ಸಾಧಿಸಲ್ಪಡತಕ್ಕಂಥವು.
ವಿವಿಧ ಪ್ರಾಣಿಗಳಲ್ಲಿ ರಕ್ತದ ಘನಗಾತ್ರ ಹಾಗೂ ದೇಹದ ಘನಗಾತ್ರವನ್ನೂ ಪರಸ್ಪರ ಹೋಲಿಸಿದಾಗ ರಕ್ತದ ಪ್ರಮಾಣ ಕಡಿಮೆ ಆಗಿದ್ದರೆ ಅದು ಪ್ರಾಣಿದೇಹದಲ್ಲಿ ವೇಗವಾಗಿ ಪರಿಚಲಿಸುತ್ತಿರಬೇಕೆಂಬುದು ವೇದ್ಯ. ಆದರೆ ರಕ್ತದ ಘನಗಾತ್ರ ಹೆಚ್ಚಾಗಿಯೇ ಇದ್ದರೆ ಅದು ನಿಧಾನವಾಗಿಯೇ ಪರಿಚಲಿಸುತ್ತ ದೇಹದ ಎಲ್ಲೆಡೆಗಳನ್ನೂ ತಲುಪಲು ಸಾಧ್ಯ. ಹೀಗಾಗಿ ಕೀಟಗಳಲ್ಲಿ (ದೇಹದ 25% ರಕ್ತ) ರಕ್ತದ ಒಂದು ಪ್ರದಕ್ಷಿಣೆಗೆ 30 - 35 ಮಿನಿಟುಗಳೇ ಆಗುತ್ತವೆ. ಆದರೆ ದೇಹತೂಕಕ್ಕೆ ಹೋಲಿಸಿದರೆ ರಕ್ತದ ಪ್ರಮಾಣ ಕಡಿಮೆಯೇ ಆಗಿರುವ (ಸುಮಾರು 8%) ಮನುಷ್ಯರಲ್ಲಿ ಪರಿಚಲನೆಯ ಕಾಲ 20 - 25 ಸೆಕೆಂಡುಗಳಷ್ಟಿರುತ್ತದೆ. ನಾಯಿಗಳಲ್ಲಿ ಪರಿಚಲನೆಯ ಕಾಲ ಸುಮಾರು 16 ಸೆಕೆಂಡುಗಳಷ್ಟೂ, ಮೊಲಗಳಲ್ಲಿ ಕೇವಲ 7.5 ಸೆಕೆಂಡುಗಳಷ್ಟೂ ಎಂಬುದು ತಿಳಿದಿದೆ.
ರಕ್ತಪರಿಚಲನೆಗೆ ಕಾರಣವಾದ ಹೃದಯದ ಮಿಡಿತದ ವೇಗ ಸಾಮಾನ್ಯವಾಗಿ ಪ್ರಾಣಿಯ ಚಟುವಟಿಕೆಯನ್ನು ಅನುಸರಿಸಿದೆ. ಸಾಮಾನ್ಯ ಚಟುವಟಿಕೆಯ ಮನುಷ್ಯರಲ್ಲಿ ಹೃದಯ ಮಿನಿಟಿಗೆ ಸುಮಾರು 70 ಬಾರಿ ಮಿಡಿಯುವುದಾದರೂ ಹೆಚ್ಚಿನ ಚಟುವಟಿಕೆಯವರೇ ಆದ ಮಕ್ಕಳಲ್ಲಿ 80 - 90 ಬಾರಿಗೂ ಮೀರಿದ ಮಿಡಿತದ ವೇಗ ಇರುತ್ತದೆ. ಅಂತೆಯೇ ದೇಹಕ್ರಿಯೆಗಳು ತ್ವರಿತವಾಗಿ ಜರುಗುತ್ತಿರುವ ಕಾಲಗಳಲ್ಲಿ (ಉದಾರಹರಣೆಗೆ ವ್ಯಾಯಾಮ, ಜ್ವರ) ಮಿಡಿತದ ವೇಗ ಹೆಚ್ಚಾಗಿರುತ್ತದೆ. ಬದಲು ತೀರ ಜಡವ್ಯಕ್ತಿಗಳಲ್ಲಿ ಹೃದಯದ ಮಿಡಿತದ ವೇಗ 60ಕ್ಕೂ ಕಡಿಮೆ ಇರಬಹುದು. ಅಂತೆಯೇ ದೀರ್ಘಕಾಲಿಕ ಅಂಗಸಾಧನೆಯಲ್ಲಿ ನಿರತರಾದ ಮಲ್ಲರಲ್ಲಿ ಅವರ ವಿಶ್ರಾಂತಿ ಅವಧಿ ಸಾಪೇಕ್ಷವಾಗಿ ಜಡಾವಧಿಯಾಗಿರುವುದರಿಂದ ಅವರ ಹೃದಯಮಿಡಿತದ ವೇಗವೂ ಸಾಮಾನ್ಯವಾಗಿ 60 ಕ್ಕಿಂತ ಕಡಿಮೆಯೇ ಇರುತ್ತದೆ. ಅತಿ ದೊಡ್ಡ, ಅದರ ಮಂದ ಚಟುವಟಿಕೆಯದ್ದು ಎನಿಸುವ ತಿಮಿಂಗಲದಲ್ಲಿ ಹೃದಯ ಮಿನಿಟಿಗೆ ಕೇವಲ 7 ಬಾರಿ ಮಿಡಿಯುತ್ತದೆ ಎಂದು ಗೊತ್ತಾಗಿದೆ. ಆನೆಗಳಲ್ಲಿ ಇದು 46 ರಷ್ಟು ಇರುತ್ತದೆ. ಚಟುವಟಿಕೆಯೇ ಪ್ರಧಾವಾಗಿರುವ ಬೆಕ್ಕಿನಲ್ಲಿ ಹೃದಯಮಿಡಿತದ ವೇಗ ಮಿನಿಟಿಗೆ 240 ಸಾರಿ ಇರಬಹುದು ಎನ್ನಲಾಗಿದೆ. ಅತ್ಯಂತ ಚಟುವಟಿಕೆಯಿದ್ದು ಎನಿಸುವ ಝೇಂಕಾರ ಪಕ್ಷಿಯಲ್ಲಿ (ಹಮ್ಮಿಂಗ್ ಬರ್ಡ್) ಹೃದಯ ಮಿನಿಟಿಗೆ 1000ಕ್ಕೂ ಮೇಲ್ಪಟ್ಟು ಮಿಡಿಯುತ್ತೆಂದು ಗೊತ್ತಾಗಿದೆ.
ರಕ್ತ ಮತ್ತು ಅದರ ಘಟಕಗಳು
[ಬದಲಾಯಿಸಿ]ಮನುಷ್ಯ ದೇಹದ ಒಟ್ಟು ರಕ್ತದ ಸುಮಾರು 5 ಲೀಟರುಗಳಷ್ಟು ರಕ್ತದ್ರವ ಇದೆ. ಇವು ಸುಮಾರು ರಚಿತಘಟಕಗಳೂ 2.75 ಲೀಟರುಗಳಷ್ಟು ರಕ್ತದ್ರವವೂ ಇದೆ. ಇವು ಸುಮಾರು ಇಷ್ಟೇ ಪ್ರಮಾಣದಲ್ಲಿ ದೇಹದಲ್ಲಿ ಇರುವುದು ಅಗತ್ಯ. ಹೆಚ್ಚು ಕಡಿಮೆ ಆದರೆ ಅದು ಅನಾರೋಗ್ಯ ಸ್ಥಿತಿಯ ಸೂಚಕವೇ ಸರಿ. ರಕ್ತವು ಪ್ಲಾಸ್ಮ ಎಂಬ ಜೀವರಸದಿಂದ ಕೂಡಿದ್ದು, ಅದರಲ್ಲಿ ವ್ಯವಸ್ಥಿತ ಪ್ರಮಾಣದಲ್ಲಿ:[೫][೬]
- ಕೆಂಪು ರಕ್ತಕಣಗಳು - ಸೂಕ್ಷ್ಮದರ್ಶಕದಿಂದ ನೋಡಿದಾಗ ಎಲ್ಲೆಲ್ಲೂ ದುಂಡನೆಯ ಮಾಸಲು ಕೆಂಪುಬಣ್ಣದ ಸಣ್ಣ ಕಣಗಳಿರುವುದು ಗೋಚರವಾಗುತ್ತದೆ. ಇವು ರಕ್ತದ ಕೆಂಪು ಕಣಗಳು (ರೆಡ್ಬ್ಲಡ್ ಕಾರ್ಪಸಲ್ಸ್; ಆರ್.ಬಿ.ಸಿ.). ಇವು ದೇಹದ ಕೋಶಗಳಿಗೆ ಆಮ್ಲಜನಕವನ್ನು ಒದಗಿಸಿ ಅವುಗಳಿಂದ ಕಾರ್ಬನ್ ಡೈ ಆಕ್ಸೈಡ್ನ್ನು ಹೊತ್ತೊಯ್ಯುತ್ತವೆ.
- ಬಿಳಿರಕ್ತಕಣಗಳು - ಕೆಂಪುರಕ್ತಕಣಗಳ ನಡುವೆ ಎಲ್ಲೊ ಅಲ್ಲೊಂದು ಇಲ್ಲೊಂದು ಅವುಗಳಿಗಿಂತ ಸ್ವಲ್ಪ ದೊಡ್ಡದಾದ ಬಣ್ಣವಿಲ್ಲದ ಕಣಗಳೂ ಕಾಣಿಸುತ್ತವೆ. ಇವು ವರ್ಣರಹಿತ ಕಣಗಳು (ಹ್ವೈಟ್ ಬ್ಲಡ್ ಕಾರ್ಪಸಲ್ಸ್ ; ಡಬ್ಲ್ಯೂ. ಬಿ.ಸಿ.). ಇವು ಸಾಮಾನ್ಯವಾಗಿ ದೇಹವನ್ನು ವಿಷಾಣುಗಳ ಧಾಳಿಯಿಂದ ರಕ್ಷಿಸುತ್ತವೆ.
- ಪ್ಲೇಟ್ಲೆಟ್ - ಜೊತೆಗೆ ಅಲ್ಲಲ್ಲಿ ಕೆಂಪುಕಣಗಳ 1/4 ಭಾಗಕ್ಕಿಂತಲೂ ಕಿರಿದಾಗಿರುವ, ರವೆಯಂಥ ರಚನೆಗಳು ಗುಂಪುಗುಂಪಾಗಿ ಕಾಣಿಸುತ್ತದೆ. ಇವುಗಳಿಗೆ ರಕ್ತದ ಕಣಿತ್ರಗಳೆಂದು (ಬ್ಲಡ್ ಪ್ಲೇಟ್ ಲೆಟ್ಸ್) ಹೆಸರು. ರಕ್ತಸ್ರಾವ ಸ್ತಂಭನದಲ್ಲಿ ಇವು ಮುಖ್ಯಪಾತ್ರ ವಹಿಸುತ್ತದೆ.
ಪ್ಲಾಸ್ಮಾ
[ಬದಲಾಯಿಸಿ]- ಪ್ಲಾಸ್ಮ ಶೇ. ೯೧-೯೨% ರಷ್ಟು ನೀರಿನಿಂದಾಗಿದ್ದು,[೭] ಉಳಿದ ಭಾಗ ಘನವಸ್ತುಗಳಿಂದಾಗಿದೆ. ಸಸಾರಜನಕ, ಯೂರಿಯ, ಆಸಿಡ್, ಕ್ರಿಯಾಟಿನಿನ್, ಅಮೋನಿಯಾ, ಅಮೈನೋ ಆಮ್ಲ, ಗ್ಜಾಂಥಿನ್, ಪದಾರ್ಥಗಳು, ಶೇಕಡ ೭.೫% ರಷ್ಟು.
- ಇನ್ನುಳಿದದ್ದು, ಸೋಡಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಮೆಗ್ನೀಶಿಯಮ್, ರಂಜಕ, ಮೊದಲಾದ, ನಿರವಯವ ಪದಾರ್ಥಗಳು. ಪಿಷ್ಟ, ಅಂದರೆ ಮುಖ್ಯವಾಗಿ ಗ್ಲೂಕೋಸ್, ಕೊಬ್ಬು, ಅಂದರೆ, ಕೊಲೆಸ್ಟರಾಲ್, ಟ್ರೈಗ್ಲಿಸರೈಡ್, ನಾನಾ ತರಹದ ಹಾರ್ಮೋನ್ಗಳು, ಕಿಣ್ವಗಳು, ಪ್ರತಿರೋಧಕಗಳು, ಗ್ಜಾಂಥೋಫಿಲಿನ್, ಕೆರೋಟಿನ್ ಮುಂತಾದ ಬಣ್ಣಬರಿಸುವ ಪದಾರ್ಥಗಳು.
- ಸೋಡಿಯಮ್, ಪೊಟ್ಯಾಸಿಯಮ್ ಲವಣಾಂಶಗಳು ನಿಖರ ಪ್ರಮಾಣದಲ್ಲಿಲ್ಲದಿದ್ದರೆ ಕಾಯಿಲೆ ಖಂಡಿತ. ರಕ್ತದ ವಿಶಿಷ್ಟ ಗುರುತ್ವಾಕರ್ಷಣೆ ೧.೦೪೮ ರಿಂದ, ೧.೦೬೬ ಇರುತ್ತದೆ. ದೇಹದ ನೀರಿನ ಅಂಶ ಕಡಿಮೆಯದಂತೆ ಇದರ ಪ್ರಮಾಣ ಕಡಿಮೆಯಾಗುತ್ತದೆ.
ಕೆಂಪು ರಕ್ತ ಕಣಗಳು
[ಬದಲಾಯಿಸಿ]- ಕೆಂಪುರಕ್ತ ಕಣಗಳು ಸುಮಾರು ೨೦ ಬಗೆಯ ಬ್ಲಡ್ ಗ್ರೂಪ್ಗಳನ್ನು ಹೊಂದಿದ್ದು, ಎ, ಬಿ, ಎಬಿ ಹಾಗೂ ಓ ಅವುಗಳಲ್ಲಿ ಮುಖ್ಯವಾದವು. ಹಿಮೋಗ್ಲೋಬಿನ್ ಅಂಶ ತೀರಾ ಕುಸಿದರೆ, (೧೮ ಗ್ರಾಮ್ ಇರಬೇಕು) ಮೂರ್ನಾಲ್ಕು ಆದಾಗ, ರೋಗಿಗೆ ರಕ್ತವನ್ನು ಮರುಪೂರಣ ಮಾಡಬೇಕಾಗುತ್ತದೆ.
- ಇದರಿಂದಾಗಿ ರೋಗಿಗಾಗುವ ಆಘಾತ (ಶಾಕ್) ಹಾಗೂ ರಕ್ತನಾಳಗಳ ಕುಸಿತವನ್ನು ತಪ್ಪಿಸಬಹುದು. ರಕ್ತದಲ್ಲಿ ಒಂದು ಬಿಳಿರಕ್ತಕಣಕ್ಕೆದುರಾಗಿ ೭೦೦ ಕೆಂಪುರಕ್ತ ಕಣಗಳಿರುತ್ತವೆ. ಅಂದರೆ, ೧:೭೦೦ ಅನುಪಾತದಲ್ಲಿರುತ್ತವೆ.
ರಕ್ತದ ಕಾರ್ಯಗಳು
[ಬದಲಾಯಿಸಿ]- ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ಎಲ್ಲಾ ಅಂಗಾಂಶಗಳಿಗೂ, ಇಂಗಾಲದ ಡೈ ಆಕ್ಸೈಡನ್ನು ದೇಹದ ಎಲ್ಲಾ ಅಂಗಗಳಿಂದ ಶ್ವಾಸಕೋಶಕ್ಕೂ ತರುವ ಕೆಲಸಮಾಡುತ್ತವೆ. ಪಚನಗೊಂಡ ಆಹಾರ ಪದಾರ್ಥಗಳನ್ನು ಕರುಳಿನಿಂದ ಅಂಗಾಂಗಗಳಿಗೆ ಒದಗಿಸುತ್ತದೆ.[೮]
- ತಿಂದ ಆಹಾರದಲ್ಲಿರುವ ವಿಟಮಿನ್ ಶಕ್ತಿ, ಕೊಬ್ಬಿನಂಶ ಹಾಗೂ ದೇಹದಲ್ಲೇ ಉತ್ಪತ್ತಿಯಾಗುವ ಹಾರ್ಮೋನ್ಗಳನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸಲು ಸಹಾಯಮಾಡುತ್ತವೆ. ದೇಹಕ್ಕೆ ಬೇಡವಾದ ವಸ್ತುಗಳನ್ನು ಅಂಗಾಂಶಗಳಿಂದ ಪಡೆದು, ಮೂತ್ರಪಿಂಡ, ಶ್ವಾಸಕೋಶ, ಹಾಗೂ ಕರುಳಿನ ಮುಖಾಂತರ ದೇಹದಿಂದ ಹೊರದೂಡುತ್ತದೆ.
- ದೇಹಕ್ಕೆ ಅತ್ಯವಶ್ಯಕವಾದ, ನೀರಿನ, ಆಮ್ಲ-ಪ್ರತ್ಯಾಮ್ಲ, ಹಾಗೂ ಚರಾಣುಗಳ ಸಮತೋಲನದೊಂದಿಗೆ, ದೇಹದ ಉಷ್ಣತೆಯನ್ನು ೯೮.೪-೯೮.೬ ಫ್ಯಾರನ್ಹೀಟ್ (೩೭ ಡಿಗ್ರಿ ಸೆಲ್ಸಿಯಸ್) ನಲ್ಲಿರುವಂತೆ ಕಾಪಾಡುತ್ತದೆ. ದೇಹದ ಸಿಪಾಯಿಯಾಗಿ ರಕ್ಷಣೆ ಮಾಡುವುದಲ್ಲದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
- ರಕ್ತದಲ್ಲಿ ಪ್ರೋಟೀನ್ಗಳಿವೆ. ಫೈಬ್ರಿನೋಜನ್, ಪ್ರೋಥ್ರಾಂಬಿನ್ಗಳು, ರಕ್ತ ಹೆಪ್ಪುಗಟ್ಟಲು ಸಹಾಯಮಾಡುತ್ತವೆ. ಆಲ್ಬುಮಿನ್ ರಕ್ತ ಹಾಗೂ ಉಳಿದ ಅಂಗಾಂಗಗಳ ನಡುವಿನ ಉಚ್ಚಾಲನಿಕ ಒತ್ತಡವನ್ನು ಕಾಪಾಡುತ್ತದೆ. ರಕ್ತದ ಸ್ನಿಗ್ಧತೆಯನ್ನು ಇದು ಕಾಪಾಡುತ್ತದೆ. ದೇಹದ ರಕ್ತದೊತ್ತಡ ನಿಯಂತ್ರಣಕ್ಕೆ ಅತ್ಯಾವಶ್ಯಕ.
- ಬಿಳಿ ರಕ್ತಕಣಗಳು ಟ್ರೈಫೋನ್ಸ್ ಎಂಬ ವಸ್ತುವನ್ನು ರಕ್ತದಲ್ಲಿನ ಪ್ರೋಟೀನ್ ಜೊತೆಗೂಡಿ ತಯಾರಿಸುತ್ತವೆ. ಇದು ಅಂಗಾಂಗಗಳ ಬೆಳವಣಿಗೆಗೂ ಪೋಷಣೆಗೂ ಅತ್ಯಗತ್ಯ. ಗಾಮಾಗ್ಲಾಬ್ಯುಲಿನ್ ಪ್ರತಿರೋಧಕ ವಸ್ತುವನ್ನು ತಯಾರಿಸಿ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತವೆ. ರಕ್ತದಲ್ಲಿ ಸುಮಾರು ೧೩ ಹೆಪ್ಪುಗಟ್ಟಿಸುವ ಅಂಶಗಳಿವೆ. ರಕ್ತಸ್ರಾವವಾದೊಡನೆಯೇ ಕಾರ್ಯೋನ್ಮುಖವಾಗುತ್ತವೆ.
- ರಕ್ತವನ್ನು ಹೆಪ್ಪುಗಟ್ಟಿಸಿ ಅಪಾಯವನ್ನು ತಪ್ಪಿಸುತ್ತವೆ. ರಕ್ತ ಸುರಿಯುವುದು ಸುಮಾರು ೧ ರಿಂದ ೬ ನಿಮಿಷಗಳಲ್ಲಿ. ಹೆಪ್ಪುಗಟ್ಟಲು ತಗಲುವ ವೇಳೆ ೪- ೧೦ ನಿಮಿಷಗಳು. ಫೈಬ್ರಿನೋಜಿನ್, ಪ್ರೋಥ್ರಾಂಬಿನ್, ಥ್ರಾಂಬೋಪ್ಲಾಸ್ಟಿನ್, ಆಂಟಿ ಹಿಮೋಫಿಲಿಕ್ ಫ್ಯಾಕ್ಟರ್, ಹೇಗ್ಮನ್ ಫ್ಯಾಕ್ಟರ್, ಪಿಟಿಸಿ, ಮುಂತಾದವುಗಳು, ಮುಖ್ಯವಾದ ರಕ್ತ ಹೆಪ್ಪುಗಟ್ಟುವ ಅಂಶಗಳು.
- ಇವುಗಳ ಕೊರತೆಯಾದರೆ ಕುಸುಮರೋಗಕ್ಕೆ (ಹೀಮೋಫಿಲಿಯ) ಬಲಿಯಾಗಬೇಕಾಗುತ್ತದೆ. ಸಣ್ಣ ಗಾಯವಾದರೂ ಚರ್ಮದ ಕೆಳಗೆ, ಕೀಲುಗಳಲ್ಲಿ ರಕ್ತ ತುಂಬಿಕೊಂಡು ಅಸಾಧ್ಯ ನೋವನ್ನುಂಟುಮಾಡುತ್ತವೆ. ರಕ್ತನಾಳದಲ್ಲಿ ರಕ್ತ ದ್ರವರೂಪದಲ್ಲೇ ಇದ್ದು ಹೆಪ್ಪುಗಟ್ಟಿವುದಿಲ್ಲವೇಕೆ ಎಂಬ ಸಂಶಯ ಬರುವುದು ಸಹಜ.
- ರಕ್ತನಾಳದ ಒಳಪದರದಲ್ಲಿ ಯಾವುದೇ ಏಟು ಬೀಳದಿದ್ದರೆ, ರಕ್ತ ಹೆಪ್ಪುಗಟ್ಟುವುದಿಲ್ಲ. ಥ್ರಾಂಬಿನ್ ಅಂಶ ಇಲ್ಲಿ ಕಡಿಮೆಪ್ರಮಾಣದಲ್ಲಿ ಉತ್ಪತ್ತಿಯಾಗುವುದರಿಂದ ಹೆಪ್ಪುಗಟ್ಟುವ ಮಧ್ಯವರ್ತಿಗಳನ್ನು ಆರ್ ಇ ಜೀವಕೋಶಗಳು ತಕ್ಷಣ ತೆಗೆದುಬಿಡುತ್ತವೆ.
- ಅಲ್ಲದೆ, ರಕ್ತದಲ್ಲಿರುವ "ಹಿಪಾರಿನ್" ಅಂಶ, ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳದೊಳಗಿನ ರಕ್ತ ಯಾವುದೇ ಕಾರಣಕ್ಕೂ ಹೆಪ್ಪುಗಟ್ಟಲೇಬಾರದು. ತಕ್ಷಣ ಹೃದಯ ಸ್ತಂಭನವಾಗುತ್ತದೆ. ಇದೇ ಕ್ರಿಯೆ ಮೆದುಳಿನ ರಕ್ತನಾಳದಲ್ಲಾದರೆ, ಲಕ್ವ ಹೊಡೆಯುತ್ತದೆ.
ದೇಹದಲ್ಲಿ ರಕ್ತದ ಪ್ರಮಾಣ ಮತ್ತು ಎಲುಬುಮಜ್ಜೆ
[ಬದಲಾಯಿಸಿ]- ಸುಮಾರು ೭೦ ಕಿ. ತೂಗುವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ಸುಮಾರು ೫ ಲೀಟರ್ ನಷ್ಟು ರಕ್ತವಿರುತ್ತದೆ. (ಒಟ್ಟುತೂಕದ ಶೇ. ೯%) ಎಲುಬಿನ ಮಜ್ಜೆ ರಕ್ತ ತಯಾರಿಸುವ ಕಾರ್ಖಾನೆಯಾಗಿದೆ. ಇದು ದೇಹದ ಮೂಳೆಯೊಳಗಿನ ಟೊಳ್ಳುಭಾಗದಲ್ಲಿ ಅಡಗಿ ಕುಳಿತಿರುತ್ತದೆ. ಹುಟ್ಟುವಾಗ ಸುಮಾರು ೭೦ ಮಿ. ಲೀಟರ್ ತೂಗುವ ಮಜ್ಜೆ, ವಯಸ್ಕರಲ್ಲಿ ಸುಮಾರು ೪ ಲೀಟರ್ನಷ್ಟಾಗುತ್ತದೆ.
ಮಜ್ಜೆಯಲ್ಲಿನ ಎರಡು ವಿಧಗಳು
[ಬದಲಾಯಿಸಿ]ಕೆಂಪುಮಜ್ಜೆ
[ಬದಲಾಯಿಸಿ]- ಇಲ್ಲಿ ಕೆಂಪುರಕ್ತಕಣಗಳು ತಯಾರಾಗುತ್ತವೆ. ಭ್ರೂಣಾವಸ್ಥೆಯಲ್ಲಿ ಎಲ್ಲಾ ಮೂಳೆಗಳೂ ಕೆಂಪು ಮಜ್ಜೆಯನ್ನು ಹೊಂದಿದ್ದು, ವಯಸ್ಸಾದಂತೆ ಕಡಿಮೆಯಾಗುತ್ತಾ ಹೋಗುತ್ತವೆ. ಕಾಲಿನ ಉದ್ದನೆಯ ಮೂಳೆಗಳ ತುದಿಯಲ್ಲಿ, ಎದೆ ಮೂಳೆಗಳಲ್ಲಿ, ಪಕ್ಕೆಲುಬಿನ ಮೂಳೆಗಳಲ್ಲಿ, ತಲೆಬುರುಡೆ ಮೂಳೆಗಳಲ್ಲಿ, ಹಾಗೂ ಪೃಷ್ಠದ ಮೂಳೆಗಳಲ್ಲಿ ಮಾತ್ರ ಕಾಣಸಿಗುತ್ತವೆ.
- ಉಳಿದವು ಹಳದಿ ಮಜ್ಜೆಯಾಗಿ ಮಾರ್ಪಾಟಾಗಿ ಕೆಲಸಕ್ಕೆ ಬಾರದಂತಾಗುತ್ತವೆ. ೭೦ ನೆಯ ವಯಸ್ಸಿನಲ್ಲಿ ಸುಮಾರು ೭೦ ರಿಂದ ೮೦ ರಷ್ಟು ಭಾಗ ಹಳದಿ ಮಜ್ಜೆಯಾಗಿ, ರಕ್ತ ತಯಾರಿಕೆ ಕುಂಟುತ್ತಾ ಸಾಗುತ್ತದೆ.
ಹಳದಿಮಜ್ಜೆ
[ಬದಲಾಯಿಸಿ]- ಮೂಳೆಗಳ ಕೆಂಪು ಮಜ್ಜೆಯಿಂದಾಗಿ, ಮೂತ್ರಪಿಂಡ ತಯಾರಿಸುವ, ಎರಿತ್ರೋಪಾಯಿಟಿನ್ ಎಂಬ ಹಾರ್ಮೋನ್ನ ಉತ್ತೇಜನದಿಂದ, ಉತ್ಪತ್ತಿಯಾಗುವ ಕೆಂಪು ರಕ್ತ ಕಣಗಳು ಕೆಂಪಾಗಿ ಕಾಣಲು ಅದರಲ್ಲಿ ಹುದುಗಿಕೊಂಡಿರುವ ಹಿಮೋಗ್ಲೋಬಿನ್ ಕಾರಣ. ಕೆಂಪುರಕ್ತ ಕಣಗಳು ಸುಮಾರು ೪ ತಿಂಗಳು ಬದುಕುತ್ತವೆ.
- ಹಿಮೋಗ್ಲೋಬಿನ್ ೯೬%, ಗ್ಲೋಬಿನ್ ಎಂಬ ಪ್ರೋಟೀನ್ನಿಂದ ಆಗಿದ್ದು, ಉಳಿದ ೪% ಹೀಮ್ ಎಂಬ ಕಬ್ಬಿಣದಂಶದ ಜೊತೆ ಸೇರಿಕೊಂಡಿದೆ. ಈ ವರ್ಣಕ ಆಮ್ಲಜನಕದ ಜೊತೆಗೆ ಬಹು ಸುಲಭವಾಗಿ ಬೆರೆತು, ಅಷ್ಟೇ ಸುಲಭವಾಗಿ ಬಿಟ್ಟುಕೊಡುವ ಸ್ವಭಾವ ಹೊಂದಿದೆ.
- ೧೦೦ ಮಿ. ಲೀಟರ್ ನೀರು, ಒಂದು ಮಿಲಿಲೀಟರ್ನ ಮೂರನೆಯ ಒಂದು ಭಾಗದಷ್ಟು ಆಮ್ಲಜನಕವನ್ನು ಹೀರಿದರೆ, ಹಿಮೊಗ್ಲೋಬಿನ್ ೨೦ ಮಿಲಿಲೀಟರ್ನಷ್ಟು ಹೀರುವ ಶಕ್ತಿ ಪಡೆದಿದೆ (ಅಂದರೆ ೬೦% ಹೆಚ್ಚು). ಈ ಗುಣದಿಂದಾಗಿಯೇ ಮಾನವದೇಹಕ್ಕೆ ಅತ್ಯವಶ್ಯಕವಾದ ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೂ ತಲುಪಿಸುವ ವಾಹನದಂತೆ ಕಾರ್ಯನಿರ್ವಹಿಸುತ್ತದೆ.
ರಕ್ತಹೀನತೆ
[ಬದಲಾಯಿಸಿ]- ರಕ್ತ ಸುಮಾರು ೧.೨ ಲೀಟರ್ ನಷ್ಟು ಆಮ್ಲಜನಕವನ್ನು ಸಾಗಿಸುತ್ತದೆ. ರಕ್ತದಲ್ಲಿ ಸುಮಾರು ೩ ಗ್ರಾಮ್ ನಷ್ಟು ಕಬ್ಬಿಣ, ಹಿಮೋಗ್ಲೋಬಿನ್ ರೂಪದಲ್ಲಿದೆ. ಪುರುಷರಲ್ಲಿ ೧೩.೫ ಗ್ರಾಮ್, ಹಾಗೂ ಸ್ತ್ರೀಯರು ಮತ್ತು ಮಕ್ಕಳಲ್ಲಿ ೧೧.೫ ರಿಂದ ೧೬.೪ ಗ್ರಾಮ್ ನಷ್ಟಿರುತ್ತದೆ.
- ಹಿಮೋಗ್ಲೋಬಿನ್ನ್ನು ಕಾಪಾಡಲು ಒಳ್ಳೆಯ ಪ್ರೋಟೀನ್ಯುಕ್ತ ಹಾಗೂ ೧೫ ರಿಂದ ೨೦ ಮಿ. ಗ್ರಾಮ್ ಕಬ್ಬಿಣಾಂಶವನ್ನು ಒದಗಿಸುವ ಆಹಾರವನ್ನು ಸೇವಿಸಬೇಕು. ಹಿಮೋಗ್ಲೋಬಿನ್ ಕೊರತೆಯಿಂದ ಬರುವ ಕಾಯಿಲೆಯನ್ನು ರಕ್ತಹೀನತೆ ಅಥವಾ ಅನೀಮಿಯ ಎನ್ನುತ್ತೇವೆ. ಈ ಕೊರತೆಗೆಗೆ ಕಾರಣಗಳು ಹಲವು.
- ರಕ್ತಕಣಗಳಲ್ಲಿನ ಉತ್ಪತ್ತಿಯ ಕೊರತೆ.
- ಉತ್ಪತ್ತಿಯಾದ ಜೀವಕೋಶದಲ್ಲಿನ ಗುಣಮಟ್ಟದ ನ್ಯೂನತೆಯಿಂದಿರಬಹುದು.
- ಮೂಲವ್ಯಾಧಿ, ಇಲ್ಲವೇ ಹೊಟ್ಟೆಯಲ್ಲಿರುವ ಹುಳುಗಳಿಂದಾಗಿರಬಹುದು.
ರಕ್ತಹೀನತೆಯ ಸಾಮಾನ್ಯ ಲಕ್ಷಣಗಳು
[ಬದಲಾಯಿಸಿ]- ಆಯಾಸ, ನಿರುತ್ಸಾಹ, ಸ್ವಲ್ಪ ಕೆಲಸಮಾಡಿದರೂ ಏದುಸಿರು ಬರುವುದು.
- ಎದೆಬಡಿತ ಹೆಚ್ಚಾಗಿ, ದಬ-ದಬಗುಟ್ಟುವುದು
- ಹಸಿವು ಮಾಯವಾಗಿ, ತಲೆಸುತ್ತುವುದು.
- ಕಣ್ಣು ಮಂಜಾಗುವುದು
- ನಿದ್ರೆ ಬಾರದೆ ಕಾಲುಗಳು ಪದೇ ಪದೇ ಜೋಮುಹಿಡಿಯುವುದು.
- ಕಾಲುಗಳು ಊದಿಕೊಂಡು, ಹೃದಯ ದೊಡ್ಡದಾಗಿ ಸಾವು ಸಂಭವಿಸುವ ಅಪಾಯವಿದೆ.
- ಬಾಯಿಯ ಮೂಲೆಗಳು ಸೀಳಿಕೊಳ್ಳುವುದು. ಬಾಯಿ ಹುಣ್ಣಾಗುವುದು.
- ಕೈಕಾಲಿನ ಉಗುರುಗಳು ಚಮಚದಂತೆ ಗುಳಿಬೀಳುವುದು.
- ಪೈಕ ಎನ್ನುವ ವಿಚಿತ್ರ ಬಯಕೆಯಾಗುವುದು. ಇಲ್ಲಿ ರೋಗಿ, ಇದ್ದಿಲು, ಮಣ್ಣು, ಗೋಡೆಯ ಸುಣ್ಣ ಇಲ್ಲವೇ ಒಂದೇ ಬಗೆಯ ತರಕಾರಿಗಳನ್ನು ಮಿತಿಮೀರಿ ತಿನ್ನುತ್ತಲೇ ಇರುವುದು. ಸಾಮನ್ಯವಾದ ಕುರುಹುಗಳು.
ಪಾಲಿಸೈಥೆಮಿಯ ವೆರಾ
[ಬದಲಾಯಿಸಿ]ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ೧೮ ಗ್ರಾಮ್ ಮೀರಿದರೂ, ಅದು ದೇಹಕ್ಕೆ ಒಳ್ಳೆಯದಲ್ಲ. ಅಪಾಯಕಾರಿ. ಈ ಸ್ಥಿತಿಯನ್ನು ಪಾಲಿಸೈಥೆಮಿಯ ವೀರ ಎನ್ನುತ್ತೇವೆ. ಈ ಕೊರತೆ ಸಾಮಾನ್ಯವಾಗಿ, ೪೦ ವರ್ಷದ ಮೇಲಿನ ಪ್ರಾಯದ ಜನರಲ್ಲಿ ಕಾಣಿಸಿಕೊಳ್ಳುವುದು ಸ್ವಾಭಾವಿಕ. ಇದರ ಲಕ್ಷಣಗಳನ್ನು ಸ್ಥೂಲವಾಗಿ ದಾಖಲಿಸಬಹುದು
- ನಿರುತ್ಸಾಹ,
- ಏಕಾಗ್ರತೆಯ ಕೊರತೆ,
- ತಲೆನೋವು, ತಲೆಸುತ್ತು,
- ಜ್ಞಾನ ತಪ್ಪುವುದು,
- ಮೈಕಡಿತ,
- ಅಜೀರ್ಣ,
- ರಕ್ತನಾಳಗಳ ತೊಂದರೆಯಿಂದಾಗಿ, ಕಾಲುಗಳು ಅನೇಕಬಾರಿ, ಜೋಮುಹಿಡಿಯುವುದು, ಇವೇ ಮುಂತಾದ ರೋಗಲಕ್ಷಣಗಳು ತಲೆದೋರುತ್ತವೆ.
ರಕ್ತಪರೀಕ್ಷೆ (ನ್ಯಾಯಾಲಯಕ್ಕೆ ಸಂಬಂಧಿಸಿದಂತೆ)
[ಬದಲಾಯಿಸಿ]ವ್ಯಕ್ತಿ, ಬಟ್ಟೆ, ಸುಟ್ಟ ವಸ್ತುಗಳು, ಆಯುಧಗಳು ಇತ್ಯಾದಿಗಳ ಮೇಲೆ ಕೆಂಪು ಅಥವಾ ಹಸುರು ಕಲೆಗಳಿರಬಹುದು. ಇವು ರಕ್ತಕಲೆಗಳೇ ಆಗಿದ್ದರೆ ಮನುಷ್ಯ ರಕ್ತಕಲೆಗಳೇ ಎಂದು ತನಿಖಿಸಬೇಕಾಗುತ್ತದೆ. ಇದನ್ನು ರಾಸಾಯನಿಕ ಕ್ರಮ, ಸೂಕ್ಷ್ಮದರ್ಶಕ ಪರೀಕ್ಷೆ ಮತ್ತು ರೋಹಿತದರ್ಶಕ (ಸ್ಪೆಕ್ಟ್ರಾಸ್ಕೋಪ್) ಸಾರಕ್ಕೆ ಬೆನ್ಸಿಡೀನನ್ನೂ ಹೈಡ್ರೋಜನ್ ಪರಾಕ್ಸೈಡನ್ನೂ ಬೆರೆಸಿ ನೀಲಿ ಬಣ್ಣ ಫಲಿಸುತ್ತದೆಯೇ ನೋಡುವುದು ಮೊದಲನೆಯದು. ಕಲೆಯ ಸಾರಕ್ಕೆ ಕಿಂಚಿತ್ ಉಪ್ಪನ್ನೂ ಗ್ಲೇಸಿಯಲ್ ಅಸೆಟಿಕ್ ಆಮ್ಲವನ್ನೂ ಗಾಜಿನ ಫಲಕದ ಮೇಲೆಯೇ ಸೇರಿಸಿ ತೆಳುಗಾಜನ್ನು (ಕವರ್ ಗ್ಲಾಸ್) ಮುಚ್ಚಿ ಗುಳ್ಳೆಬರುವ ತನಕವೂ ಕಾಸಿ ಆರಿಸಿ ಸೂಕ್ಷ್ಮದರ್ಶಕದ ಕೆಳಗಿಟ್ಟು ನೋಡಿದಾಗ ತುಕ್ಕಿನ ಬಣ್ಣದ ವಿಶಿಷ್ಟ ಆಕಾರದ ಹರಳುಗಳು (ಕ್ರಿಸ್ಟಲ್) ಕಾಣಬರುತ್ತವೆಯೇ ಎಂದು ನೋಡುವುದು ಎರಡನೆಯದು. ಕಲೆಯ ಸಾರವನ್ನು ರೋಹಿತದರ್ಶಕದ ಮೂಲಕ ನೊಡುತ್ತ ನೈಸರ್ಗಿಕ ರೋಹಿತದಲ್ಲಿ ಕಾಣುವ D ಮತ್ತು E ಎಂಬ ಗೆರೆಗಳ ಮಧ್ಯೆ ಎರಡು ಹೆಚ್ಚುವರಿ ಮಸುಕು ಗೆರೆಗಳು ಕಾಣಿಸುತ್ತವೆಯೇ ಎಂದು ನೋಡುವುದು ಮೂರನೆಯದು. ಇವೆಲ್ಲ ಕಲೆ ರಕ್ತದ್ದೇ ಎಂದು ಮಾತ್ರ ತಿಳಿಸಬಲ್ಲವು. ಮನುಷ್ಯ ರಕ್ತ ಲಸಿಕೆಯ ಪ್ರತಿವಸ್ತುವಿನ (ಆಂಟಿಬಾಡಿ) ಜೊತೆ ಕಲೆಯ ಸಾರವನ್ನು ಸೇರಿಸಿದಾಗ ಅವು ಬೆರೆಯುವ ಸ್ಥಳದಲ್ಲಿ ಬಗ್ಗಡದಂತೆ ಕಂಡುಬಂದರೆ ಕಲೆಯ ಸಾರ ಮನುಷ್ಯ ರಕ್ತದ್ದೇ ಎಂದು ನಿರ್ಧರಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Krause, William J. (2005). Krause's Essential Human Histology for Medical Students (in ಇಂಗ್ಲಿಷ್) (3rd ed.). Universal-Publishers. p. 67. ISBN 978-1-58112-468-2. Archived from the original on 26 April 2023. Retrieved 21 June 2022.
- ↑ Elert G (2012). "Volume of Blood in a Human". The Physics Factbook. Archived from the original on 3 November 2012. Retrieved 2012-11-01.
- ↑ Waugh A, Grant A (2007). "2". Anatomy and Physiology in Health and Illness (Tenth ed.). Churchill Livingstone Elsevier. p. 22. ISBN 978-0-443-10102-1.
- ↑ Acid–Base Regulation and Disorders at Merck Manual of Diagnosis and Therapy Professional Edition
- ↑ "Definition of red blood cell". National Cancer Institute (in ಇಂಗ್ಲಿಷ್). 2011-02-02. Archived from the original on 25 April 2022. Retrieved 2022-04-28.
- ↑ "Composition of the Blood | SEER Training". training.seer.cancer.gov. Archived from the original on 16 October 2020. Retrieved 30 December 2020.
- ↑ The Franklin Institute Inc. "Blood – The Human Heart". Archived from the original on 5 March 2009. Retrieved 19 March 2009.
- ↑ "Definition of BLOOD". Merriam-Webster. Archived from the original on 23 March 2017. Retrieved 4 March 2017.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Blood Groups and Red Cell Antigens. Free online book at NCBI Bookshelf ID: NBK2261
- Blood on In Our Time at the BBC. (listen now)