ವಿಷಯಕ್ಕೆ ಹೋಗು

ಆಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಣಿಸೆ ಲೇಖನಕ್ಕಾಗಿ ಇಲ್ಲಿ ನೋಡಿ.
ಸತು, ಒಂದು ವಿಶಿಷ್ಟ ಲೋಹವು, ಹೈಡ್ರೋಕ್ಲೋರಿಕ್ ಆಮ್ಲ, ಒಂದು ವಿಶಿಷ್ಟ ಆಮ್ಲದೊಂದಿಗೆ ಪ್ರತಿಕ್ರಿಯಿಸುತ್ತದೆ

ಆಮ್ಲ ಎಂದರೆ ಜಲಜನಕಅಯಾನನ್ನು ಇನ್ನೊಂದು ಸಂಯುಕ್ತಕ್ಕೆ ವರ್ಗಾಯಿಸುವ ಒಂದು ಸಂಯುಕ್ತ ವಸ್ತು. ಹೆಚ್ಚಿನ ಎಲ್ಲಾ ಆಮ್ಲಗಳು ಹುಳಿ ರುಚಿಯನ್ನು ಹೊಂದಿದ್ದು, ಸಂಪರ್ಕಕ್ಕೆ ಬಂದಲ್ಲಿ ಚರ್ಮವನ್ನು ಸುಡುತ್ತವೆ. ಹೆಚ್ಚಿನ ಲೋಹಗಳು ಆಮ್ಲಗಳಲ್ಲಿ ಕರಗುತ್ತವೆ. ನೀಲಿ ಲಿಟ್ಮಸ್‌ನ್ನು ಕೆಂಪಾಗಿಸುತ್ತದೆ. ಲೋಹಗಳು ಮೃತ್‌ಗಳು (ಅರ್ತ್ಸ್, ಅಂದರೆ ಆಕ್ಸೈಡುಗಳು) ಮುಂತಾದ ವಸ್ತುಗಳನ್ನು ವಿಲೀನಗೊಳಿಸುತ್ತವೆ. ಕ್ಷಾರಗಳು ಆಮ್ಲಗಳನ್ನು ಸ್ಥಿರಗೊಳಿಸುತ್ತವೆ. ಇದು ರಾಬರ್ಟ್ ಬಾಯಿಲ್ ಮೊಟ್ಟಮೊದಲು ನೀಡಿದ ವಿವರಣೆ (೧೬೮೦).

ವಿಶಿಷ್ಟ ಗುಣಗಳು ಮತ್ತು ವಾದಗಳು

[ಬದಲಾಯಿಸಿ]

ಮಂದ (ಡೈಲ್ಯೂಟ್) ಆಮ್ಲ ಹುಳಿ.  ಆಮ್ಲಗಳು ಸಾಮಾನ್ಯವಾಗಿ ಕಾರ್ಬೊನೇಟುಗಳೊಡನೆ ವರ್ತಿಸಿ ಕಾರ್ಬನ್ ಡೈಆಕ್ಸೈಡನ್ನುಂಟುಮಾಡುವುವು. ಲಿಟ್ಮಸ್ ಅಲ್ಲದೆ ಇತರ ಅನೇಕ ಸಾವಯವ ವರ್ಣ ದ್ರವ್ಯಗಳೂ ಆಮ್ಲಗಳಲ್ಲಿ ವಿಶಿಷ್ಟ ಬಣ್ಣವನ್ನು ಹೊಂದುವುವು. ಉದಾಹರಣೆಗೆ, ಮಿಥೈಲ್ ಆರೆಂಜ್, ಆಮ್ಲಗಳಲ್ಲಿ ಗುಲಾಬಿ ಕೆಂಪು ಬಣ್ಣವನ್ನೂ ಹೊಂದುವುದು. ಫಿನಾಲ್‌ಫ್ತಲೀನ್ ಆಮ್ಲಗಳಲ್ಲಿ ನಿರ್ವರ್ಣವಾಗಿರುವುದು.

ಆಮ್ಲಗಳ ರಚನೆಯಲ್ಲಿ ಕಂಡುಬರುವ ಕೆಲವೊಂದು ಸಾದೃಶ್ಯಗಳು ಅವುಗಳ ವಿಶಿಷ್ಟಗುಣಗಳಿಗೆ ಕಾರಣವೆಂಬ ಭಾವನೆಯನ್ನು ಮೊಟ್ಟಮೊದಲು ಪ್ರತಿಪಾದಿಸಿದವ ಲೆವಾಸಿಯೆ. ಎಲ್ಲ ಆಮ್ಲಗಳ ಅಣುಗಳಲ್ಲಿಯೂ ಆಕ್ಸಿಜನ್ನಿನ (ಆಮ್ಲಜನಕ) ಪರಮಾಣುವಿದ್ದು, ಈ ಆಕ್ಸಿಜನ್ ವಸ್ತುವಿಗೆ ಆಮ್ಲೀಯ ಗುಣವನ್ನುಂಟುಮಾಡುವುದೆಂದು ಅವನ ಭಾವನೆಯಾಗಿತ್ತು. ಅನ್ವರ್ಥಕವಾದ ಆಕ್ಸಿಜನ್ ಎಂಬ ಹೆಸರನ್ನು ಈ ಮೂಲವಸ್ತುವಿಗೆ ಲೆವಾಸಿಯೆಯೇ ಕೊಟ್ಟ. ಇದರ ಅನಂತರ ಡೇವಿ ಮ್ಯೂರಿಯಾಟಿಕ್ ಆಮ್ಲದಲ್ಲಿ (ಹೈಡ್ರೋಕ್ಲೋರಿಕಾಮ್ಲ) ಆಕ್ಸಿಜನ್ನಿನ ಅಗತ್ಯವಿಲ್ಲವೆಂದು ತೋರಿಸಿದ. ಒಂದು ವಸ್ತು ಆಮ್ಲೀಯ ಗುಣ ಹೊಂದಲು ಆಕ್ಸಿಜನ್ನಿನ ಅಗತ್ಯವಿಲ್ಲ, ಪ್ರತಿ ಆಮ್ಲದ ಅಣುವಿನಲ್ಲಿಯೂ ಇರುವ ಹೈಡ್ರೊಜನ್ ಪರಮಾಣು ವಸ್ತುವಿನ ಆಮ್ಲೀಯಗುಣಕ್ಕೆ ಕಾರಣ ಎಂಬುದು ಇವನ ಮತ. ಲೇಬೆಗ್ ಆಮ್ಲೀಯ ಗುಣವುಳ್ಳ ಅನೇಕ ಸಾವಯವ ಸಂಯುಕ್ತಗಳ ಸಂಶೋಧನೆ ಮಾಡಿ ಪ್ರತಿಯೊಂದು ಆಮ್ಲದ ಅಣುವಿನಲ್ಲಿಯೂ ಲೋಹದಿಂದ ಪಲ್ಲಟಿಸಲ್ಪಡಬಹುದಾದ ಹೈಡ್ರೊಜನ್ ಪರಮಾಣು ಒಂದಾದರೂ ಇದ್ದು, ಇದು ವಸ್ತುವಿನ ಆಮ್ಲೀಯ ಗುಣಕ್ಕೆ ಕಾರಣವೆಂದು ಪ್ರತಿಪಾದಿಸಿ ಡೇವಿಯ ಭಾವನೆಯನ್ನು ಪುಷ್ಟೀಕರಿಸಿದ.

ಪಲ್ಲಟಿಸಲ್ಪಡಬಹುದಾದ ಹೈಡ್ರೊಜನ್ ಪರಮಾಣುವನ್ನು ಅವುಗಳ ಅಣುವಿನಲ್ಲಿ ಹೊಂದಿದ ವಸ್ತುಗಳು ಆಮ್ಲಗಳು ಎಂಬ ಭಾವನೆ ಬಹುಕಾಲ ಬಳಕೆಯಲ್ಲಿತ್ತು. ಪ್ರಥಮ ಪಾಠಗಳಲ್ಲಿ ಆಮ್ಲಗಳ ಈ ವಿವರಣೆಯನ್ನು ಈಗಲೂ ನೀಡುವರು. ಆದರೆ  ಈ ವಿವರಣೆ ಆಮ್ಲಗಳ ಪ್ರಬಲತೆಗಳಲ್ಲಿ (ಸ್ಟ್ರೆಂತ್), ವೇಗವರ್ಧಕ ಸಾಮರ್ಥ್ಯದಲ್ಲಿ ಮತ್ತು ವಿದ್ಯುದ್ವಾಹಕತ್ವದಲ್ಲಿ ಕಂಡುಬರುವ ಹೆಚ್ಚಿನ ವ್ಯತ್ಯಾಸಗಳನ್ನು ವಿವರಿಸಲಾಗಲಿ ಅಥವಾ ರಚನೆಯಲ್ಲಿ ಹೈಡ್ರೊಜನ್ ಇರದ ಅಲ್ಯೂಮಿನಿಯಂ ಕ್ಲೋರೈಡ್ ಮುಂತಾದ ವಸ್ತುಗಳ ದ್ರಾವಣಗಳು ಆಮ್ಲೀಯಗುಣಗಳನ್ನು ಏಕೆ ಪ್ರದರ್ಶಿಸುವುವೆಂದು ವಿವರಿಸಲು ಸಮರ್ಥವಾಗಿಲ್ಲ. ಈಚಿನ ವರ್ಷಗಳಲ್ಲಿ ಆಮ್ಲಗಳ ವಿಷಯಗಳಲ್ಲಿ ನಮ್ಮ ಭಾವನೆಗಳು ವಿಶೇಷ ಮಾರ್ಪಾಡಾಗಿ ಅನೇಕ ಹೊಸ ಭಾವನೆಗಳು ಪ್ರತಿಪಾದಿತವಾಗಿವೆ. ಇವುಗಳಲ್ಲಿ ಮುಖ್ಯವಾದುವನ್ನು ಈ ಕೆಳಗೆ ವಿವರಿಸಿದೆ.

ಅರೇನಿಯಸ್‌ನ ವಾದ: ಈ ವಾದದ ಪ್ರಕಾರ ನೀರಿನಲ್ಲಿ ವಿಲೀನವಾದಾಗ ಹೈಡ್ರೊಜನ್ ಆಯಾನನ್ನು H+, (ಇನ್ನೂ ನಿಖರವಾಗಿ ಹೇಳುವುದಾದರೆ ಹೈಡ್ರೋನಿಯಂ ಅಯಾನ್ H3O+ ಅನ್ನು ಏಕೆಂದರೆ H+ ಆಯಾನು ಸ್ವತಂತ್ರ ಅಸ್ತಿತ್ವ ಹೊಂದಿರಲು ಸಾಧ್ಯವಿಲ್ಲದಷ್ಟು ಚಿಕ್ಕದಾಗಿರುವುದು) ಕೊಡುವ ವಸ್ತುಗಳೆಲ್ಲವೂ ಆಮ್ಲಗಳು.[][][] ಉದಾಹರಣೆಗೆ HCl  ಮತ್ತು CH3.COOHಗಳು ಆಮ್ಲಗಳು.  ನೀರಿನ ದ್ರಾವಣದಲ್ಲಿ ಇವು ಆಯಾನೀಕರಿಸಿ ಹೈಡ್ರೊಜನ್ ಆಯಾನನ್ನು ಕೊಡುವುವು.

HCI → H° + OH’ ಮತ್ತು CH3COOH → CH3COO’ + H+

ನೀರು ಆಂಫೊಟರಿಕ್ ಅಂದರೆ ಎರಡು ವರ್ಗಕ್ಕೂ (ಆಮ್ಲ - ಕ್ಷಾರ) ಸೇರಿದ ವಸ್ತು. ಇದು ಅಲ್ಪಪ್ರಮಾಣದಲ್ಲಿ ಅಯಾನೀಕರಿಸಿ ಹೈಡ್ರೊಜನ್ ಅಯಾನನ್ನೂ ಹೈಡ್ರಾಕ್ಸಿಲ್ ಅಯಾನನ್ನೂ ಕೊಡುವುದು.

H2O     →     H+ + OH

ಶುದ್ಧ ನೀರಿನಲ್ಲಿ ಹೈಡ್ರೊಜನ್ ಅಯಾನಿನ ಮತ್ತು ಹೈಡ್ರಾಕ್ಸಿಲ್ ಅಯಾನಿನ ಪ್ರಬಲತೆಗಳು (ಕಾನ್ಸೆಂಟ್ರೇಷನ್ಸ್)-ಅಂದರೆ ಒಂದು ಲೀಟರ್ ನೀರಿನಲ್ಲಿರುವ ಈ ಅಯಾನ್‌ಗಳ ಸಂಖ್ಯೆಗಳು-ಸಮಾನವಾಗಿರುವುವು. ಆಮ್ಲ ನೀರಿನಲ್ಲಿ ಹೈಡ್ರೊಜನ್ ಅಯಾನಿನ ಪ್ರಬಲತೆಯನ್ನು ಹೆಚ್ಚಿಸುವುದು; ಹೈಡ್ರಾಕ್ಸಿಲ್ ಅಯಾನಿನ ಪ್ರಬಲತೆಯನ್ನು ತಗ್ಗಿಸುವುದು. ಹೈಡ್ರೊಜನ್ ಅಯಾನ್ ಮತ್ತು ಹೈಡ್ರಾಕ್ಸಿಲ್ ಅಯಾನುಗಳು ಸಂಯೋಜಿಸಿ ನೀರಿನ ಅಣುಗಳಾಗುವುದೇ ತಟಸ್ಥೀಕರಣ (ನ್ಯೂಟ್ರಲೈಸೇಷನ್). ಲವಣದ ಉತ್ಪತ್ತಿ ಅನುಷಂಗಿಕ (ಇನ್ಸಿಡೆಂಟಲ್).

(H+ + CI) + (Na+ + OH) → H2O + (Na+ + CI)

ಈ ವಾದದ ಸಹಾಯದಿಂದ ಆಮ್ಲಗಳ ಪ್ರಬಲತೆಗಳಲ್ಲಿ ವೇಗವರ್ಧಕ ಸಾಮರ್ಥ್ಯಗಳಲ್ಲಿ ಮತ್ತು ವಿದ್ಯುದ್ವಾಹಕತ್ವದಲ್ಲಿ ಇರುವ ವ್ಯತ್ಯಾಸಗಳನ್ನು ವಿವರಿಸಬಹುದು. ಸಂಪೂರ್ಣವಾಗಿ ಅಯಾನೀಕರಿಸುವ ಆಮ್ಲಗಳು ಪ್ರಬಲ ಆಮ್ಲಗಳು. ಉದಾ: HCI, HBr, HNO3. ಇತ್ಯಾದಿ, ಅಲ್ಪ ಪ್ರಮಾಣದಲ್ಲಿ ಅಯಾನೀಕರಿಸುವ ಆಮ್ಲಗಳು ದುರ್ಬಲ ಆಮ್ಲಗಳು. ಉದಾ: CH3.COOH, H3BO4. ಸಮಾನ ಪ್ರಬಲತೆಯಲ್ಲಿ ಇರುವ ಸಮಾನ ಗಾತ್ರ ಆಮ್ಲಗಳನ್ನು ತೆಗೆದುಕೊಂಡರೆ, ಪ್ರಬಲ ಆಮ್ಲಗಳಲ್ಲಿ ಹೈಡ್ರೊಜನ್ ಅಯಾನಿನ ಪ್ರಬಲತೆ ಹೆಚ್ಚಾಗಿಯೂ ದುರ್ಬಲ ಆಮ್ಲಗಳಲ್ಲಿ ಹೈಡ್ರೊಜನ್ ಅಯಾನಿನ ಪ್ರಬಲತೆ ಕಡಿಮೆಯಾಗಿಯೂ ಇರುವುದು. ಪ್ರಬಲ ಆಮ್ಲಗಳ ವೇಗವರ್ಧಕ ಸಾಮರ್ಥ್ಯ ಕಡಿಮೆ. ಅಯಾನುಗಳು ಮಾತ್ರ ವಿದ್ಯುದ್ವಾಹಕಗಳಾದ್ದರಿಂದ ಸಂಪೂರ್ಣ ಅಯಾನೀಕರಿಸುವ ದುರ್ಬಲ ಆಮ್ಲಗಳ ವಿದ್ಯುದ್ವಾಹಕತ್ವ ಕೀಳ್ಮಟ್ಟದ್ದಾಗಿದೆ. ಜಲವಿಶ್ಲೇಷಣೆಯನ್ನೂ (ಹೈಡ್ರಾಲಿಸಿಸ್) ಇದರ ಸಹಾಯದಿಂದ ವಿವರಿಸಬಹುದು.

ಆದರೆ ಈ ವಾದ ಒಂದು ಮಿತಿಯನ್ನು ಹೊಂದಿದೆ. ಆಮ್ಲಗಳ ವರ್ತನೆಗಳ  ಕ್ಷೇತ್ರ ಇಲ್ಲಿ ನೀರಿನ ದ್ರಾವಣಗಳಿಗೆ ಮಾತ್ರ ಸೀಮಿತವಾಗಿದೆ. ದ್ರವ ಅವೋನಿಯಾ, ನಿರ್ಜಲ (ಅನ್‌ಹೈಡ್ರಸ್) ಹೈಡ್ರೊಜನ್ ಫ್ಲೊರೈಡ್, ಬೆಂಜೀನ್, ಕ್ಲೋರೋಫಾರಂ ಇತ್ಯಾದಿ ದ್ರವಗಳಲ್ಲಿ ವಿಲೀನವಾದ ಅನೇಕ ವಸ್ತುಗಳು ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರದರ್ಶಿಸುವುವು. ಅರೇನಿಯಸ್ ವಾದದಿಂದ ವಿವರಿಸಲ್ಪಡುವ ಈ ಪ್ರಾಯೋಗಿಕ ವಿಷಯಗಳನ್ನು ವಿವರಿಸುವ ಸಲುವಾಗಿ ಏಕಕಾಲದಲ್ಲಿ ಬ್ರಾನ್ಸ್‌ಟೆಡ್ ಮತ್ತು ಲೌರಿ ಎಂಬ ರಸಾಯನ ಶಾಸ್ತ್ರಜ್ಞರು ಹೊಸದೊಂದು ವಾದವನ್ನು ೧೯೨೩ರಲ್ಲಿ ಪ್ರತಿಪಾದಿಸಿದರು. ಇದನ್ನು ಪ್ರೊಟಾನಿಕ್ ಭಾವನೆ ಎನ್ನಬಹುದು.

ಪ್ರೊಟಾನಿಕ್ ಭಾವನೆ: ಈ ವಾದದ ಪ್ರಕಾರ ಪ್ರೊಟಾನನ್ನು (H+) ಕೊಡಲು ಸಮರ್ಥವಾದ ಹೈಡ್ರೊಜನ್ ಇರುವ ಯಾವ ವಸ್ತುವೇ ಆಗಲಿ ಅದು ಅಣುವಾಗಿರಲಿ, ಅಯಾನ್ ಆಗಿರಲಿ ಆಮ್ಲ.

ಆಮ್ಲ A

ಒಂದು ಆಮ್ಲದ ಪ್ರಬಲತೆ ಅದರ ಪ್ರೊಟಾನ್‌ದಾಯಕ ಸಾಮರ್ಥ್ಯಕ್ಕೆ ಅನುಗುಣವಾಗಿರುವುದು. ಉದಾಹರಣೆಗೆ, ಅಮೋನಿಯ ದ್ರಾವಣದಲ್ಲಿದ್ದಾಗ ನೀರು ಪ್ರತ್ಯಾಮ್ಲವಾಗಿಯೂ, ಹೈಡ್ರೊಜನ್ ಕ್ಲೋರೈಡ್ ನೀರಿನಲ್ಲಿದ್ದಾಗ ನೀರು ಆಮ್ಲವಾಗಿಯೂ ವರ್ತಿಸುವುದು.

H2O+NH3            NH4+ + OH ;    H2O+HCI            H3O+ + CI

ಹಾಗೆಯೇ ದ್ರಾವ್ಯವಸ್ತುವೂ ಸೊಲ್ಯುಟ್. ಅದು ವಿಲೀನವಾಗಿರುವ ದ್ರಾವಕವನ್ನು ಅವಲಂಬಿಸಿ ಆಮ್ಲವಾಗಿ ಅಥವಾ ಪ್ರತ್ಯಾಮ್ಲವಾಗಿ ವರ್ತಿಸಬಹುದು. ಯುರಿಯ CO(NH2)2 ದ್ರವ ಅಮೋನಿಯದಲ್ಲಿ ಆಮ್ಲವಾಗಿಯೂ ನಿರ್ಜಲ ಫಾರ್ಮಿಕ್ ಆಮ್ಲದಲ್ಲಿ ಪ್ರತ್ಯಾಮ್ಲವಾಗಿಯೂ ವರ್ತಿಸುವುದು.

CO(NH2)2 + NH3            NH4+CO

CO(NH2)2 + HCOOH             CO + HCOO-

ಈ ವಾದ ಹೈಡ್ರಾಕ್ಸಿ ಸಂಯುಕ್ತಗಳಲ್ಲದ ಇತರ ಸಂಯುಕ್ತಗಳನ್ನು ಪ್ರತ್ಯಾಮ್ಲಗಳ ವರ್ಗದಲ್ಲಿ ಗಣಿಸಿದರೆ ಮತ್ತು ತಟಸ್ಥೀಕರಣ ಆಮ್ಲ ಪ್ರತ್ಯಾಮ್ಲಗಳ ಒಂದು ವಿಶಿಷ್ಟ ಗುಣವೆಂದು ಭಾವಿಸಿಲ್ಲ. ಈ ಕಾರಣಗಳಿಂದ ಇದು ಅರೇನಿಯಸ್‌ನ ವಾದದ ಕೆಲವು ನ್ಯೂನತೆಗಳನ್ನು ಸರಿಪಡಿಸಿದೆ. ಹಾಗಿದ್ದರೂ ಈ ವಾದ ಸಹ ಅನ್ಯೂನವೇನಾಗಿಲ್ಲ. ಪ್ರೊಟಾನ್ ವರ್ಗಾವಣೆಯ ಮೇಲೆ ವಿಶೇಷಲಕ್ಷ್ಯ ಹೊಂದಿರುವ ಈ ವಾದದಲ್ಲಿ ಪ್ರೊಟಾನು ಭಾಗವಹಿಸದ ಇತರ ಅನೇಕ ಆಮ್ಲ ಪ್ರತ್ಯಾಮ್ಲಗಳಿಗೆ ಸ್ಥಾನವಿಲ್ಲ. ಪ್ರೊಟಾನು ಭಾಗವಹಿಸದ ಆಮ್ಲ ಪ್ರತ್ಯಾಮ್ಲ ವಸ್ತುಗಳನ್ನೂ ಗಣನೆಗೆ ತೆಗೆದುಕೊಂಡಿರುವ ಇನ್ನೊಂದು ವಾದದಲ್ಲಿ ಈ ನ್ಯೂನತೆ ಇಲ್ಲ. ಈ ವಾದವನ್ನು ದ್ರಾವಕ ವ್ಯವಸ್ಥೆಗಳ ವಾದ (ಥಿಯೊರಿ ಆಫ್ ಸಾಲ್‌ವೆಂಟ್ ಸಿಸ್ಟಮ್) ಎನ್ನುವರು.

ದ್ರಾವಕ ವ್ಯವಸ್ಥೆಗಳ ವಾದ: ಇದರ ಪ್ರಕಾರ ದ್ರಾವಕ ದ್ರಾವಕೀಯ ಧನ ಅಯಾನ್ (ಸಾಲ್ವೊಪಾಸಿಟಿವ್ ಅಯಾನ್) ಮತ್ತು ದ್ರಾವಕೀಯ ಋಣ ಅಯಾನ್‌ಗಳಾಗಿ (ಸಾಲ್ವೊನೆಗೆಟಿವ್ ಅಯಾನ್) ವಿಶ್ಲೇಷಿಸುವುದು. ಇದರ ಅರ್ಥ ಮನದಟ್ಟು ಮಾಡಲು ಕೆಲವು ಉದಾಹರಣೆಗಳನ್ನು ಕೆಳಗೆ ಕೊಟ್ಟಿದೆ.

ದ್ರಾವಕ ದ್ರಾವಕೀಯ       ದ್ರಾವಕೀಯ

  ಧನಅಯಾನ್     ಋಣಅಯಾನ್

2H2O             H3O + OH

2NH3             NH4 + NH2

3SO2           SO2.SO++ SO3-

2COCI2       COCI2.COCI+    CI

ದ್ರಾವಣದಲ್ಲಿರುವ ವಸ್ತು ದ್ರಾವಕೀಯ ಧನಯಾನಿನ ಪ್ರಬಲತೆ ಹೆಚ್ಚಿಸಿದರೆ ಆ ವಸ್ತು ಆಮ್ಲ. ಇದು ದ್ರಾವಕೀಯ ಋಣಅಯಾನಿನ ಪ್ರಬಲತೆಯನ್ನು ಹೆಚ್ಚಿಸಿದರೆ ಆ ವಸ್ತು ಪ್ರತ್ಯಾಮ್ಲ. ದ್ರವ ಅಮೋನಿಯದಲ್ಲಿ ವಿಲೀನವಾದ NH4CI ದ್ರಾವಕೀಯ ಧನಯಾನ್ ಆದ ಅಯಾನಿನ ಪ್ರಬಲತೆಯನ್ನು ಹೆಚ್ಚಿಸುವುದು. ಆದ್ದರಿಂದ ಇದು ಆಮ್ಲ. KNH2 ದ್ರಾವಕೀಯ ಋಣಅಯಾನಾದ NH2– ಅಯಾನಿನ ಪ್ರಬಲತೆ ಹೆಚ್ಚಿಸುವುದು. ಆದ್ದರಿಂದ ಇದು ಪ್ರತ್ಯಾಮ್ಲ. ದ್ರಾವಕೀಯ ಧನಅಯಾನು ಮತ್ತು ದ್ರಾವಕೀಯ ಋಣಅಯಾನುಗಳು ವರ್ತಿಸಿ ದ್ರಾವಕದ ಅಣು ಉಂಟಾಗುವುದೇ ತಟಸ್ಥೀಕರಣ. ಉದಾ:

(NH4+ + CI)  +  (K+ + NH2) → 2NH3 + (K+ + CI)

ಈ ವಾದ ಆಮ್ಲ ಪ್ರತ್ಯಾಮ್ಲಗಳು ಪ್ರೊಟಾನಿಕ್ ವ್ಯವಸ್ಥೆಗಳಿಗೆ ಮಾತ್ರ ಸೀಮಿತವಾಗಿರುವ ನ್ಯೂನತೆಯನ್ನು ಹೋಗಲಾಡಿಸಿರುವುದು. ಆದರೆ ಆಮ್ಲ ಪ್ರತ್ಯಾಮ್ಲಗಳ ವರ್ತನೆಗಳನ್ನು ದ್ರಾವಣದಲ್ಲಿ ನಡೆಯುವ ಅಯಾನಿಕ್ ವರ್ತನೆಗಳಿಗೆ ಮಾತ್ರ ಸೀಮಿತಮಾಡಿದೆ. ದ್ರಾವಣದಲ್ಲಿರುವ ಮತ್ತು ಅಯಾನ್ ವರ್ತನೆಗಳಲ್ಲದ ಅನೇಕ ಪರಿವರ್ತನೆಗಳು ಆಮ್ಲ ಪ್ರತ್ಯಾಮ್ಲಗಳ ವರ್ತನೆಗಳ ಸ್ವರೂಪವನ್ನು ಹೊಂದಿರುವುವು. ಇಂಥ ವರ್ತನೆಗಳನ್ನೂ ಆಮ್ಲ ಪ್ರತ್ಯಾಮ್ಲಗಳ ವರ್ತನೆಗಳ ವ್ಯಾಪ್ತಿಯಲ್ಲಿ ತಂದಿರುವ ಇನ್ನೊಂದು ವಾದ ಜಿ.ಎನ್. ಲೂಯಿಯಿಂದ ಪ್ರತಿಪಾದಿತವಾಗಿದೆ. ಇದಕ್ಕೆ ಲೂಯಿಯ ಎಲೆಕ್ಟ್ರಾನಿಕ್ ವಾದವೆಂದು ಹೆಸರು.

ಲೂಯಿಯ ಎಲೆಕ್ಟ್ರಾನಿಕ್ ವಾದ: ೧೯೨೩ರಲ್ಲಿ ಪ್ರತಿಪಾದಿಸಿದ ಈ ವಾದದಲ್ಲಿ ಎರಡು ಭಾಗಗಳಿವೆ. ಯಾವುದೊ ಒಂದು ವಿಶಿಷ್ಟ ಮೂಲ ವಸ್ತುವಿನ ಅಥವಾ ಅಯಾನಿನ ಅಸ್ತಿತ್ವದ ಭಾವನೆ ಆಮ್ಲ ಪ್ರತ್ಯಾಮ್ಲಗಳ ವಿವರಣೆಗೆ ಅಗತ್ಯವೆಂಬ ವಾದವನ್ನು ಇವನು ನಿರಾಕರಿಸಿದ. ಒಂದು ವಸ್ತುವನ್ನು ಆಮ್ಲ ಅಥವಾ ಪ್ರತ್ಯಾಮ್ಲವಾಗಿ ವರ್ಗೀಕರಿಸಲು ಅದು ಕೆಳಗಿನ ನಿರ್ಧಾರ ಲಕ್ಷಣಗಳನ್ನು ಹೊಂದಿರಬೇಕು. ಈ ನಿರ್ಧಾರಲಕ್ಷಣಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಪ್ರಾಯೋಗಿಕವಾಗಿ ನಿರ್ಧಾರಕಗಳು (ಫಿನಾಮೆನಲಾಜಿಕಲ್ ಕ್ರೈಟೀರಿಯಾ): ಇವು

i ಶೀಘ್ರ ತಟಸ್ಥೀಕರಣ (ರ‍್ಯಾಪಿಡ್ ನ್ಯೂಟ್ರಲೈಸೇಷನ್): ಪ್ರಚೋದಕ ಶಕ್ತಿ (ಆಕ್ಟಿವೇಷನ್ ಎನರ್ಜಿ) ಅನವಶ್ಯವಾಗುವಷ್ಟು ಶೀಘ್ರವಾಗಿ ತಟಸ್ಥೀಕರಣ ಸಂಭವಿಸುವುದು. ಉದಾ:

H3O+ + OH → 2H2O

HCI + NH3 → NH4CI

Cu2+ + 4NH3 → [Cu(NH3)4]2+

BCI3 + (C2H5)3N → (C2H5)3N:BCI3

ii ದುರ್ಬಲ ಆಮ್ಲ ಅಥವಾ ಪ್ರತ್ಯಾಮ್ಲದ ಪಲ್ಲಟನ [Cu(NH3)4]2+ ನಿಂದ ಕ್ಯುಪ್ರಿಕ ಅಯಾನನ್ನು Cu2+ ಹೈಡ್ರೊಜನ್ ಅಯಾನು H+ ಪಲ್ಲಟಿಸುವುದು. ಏಕೆಂದರೆ ಹೈಡ್ರೊಜನ್ ಅಯಾನು ಕ್ಯುಪ್ರಿಕ್ ಅಯಾನಿಗಿಂತ ಹೆಚ್ಚು ಪ್ರಬಲವಾದ ಆಮ್ಲ. ಅಸಿಟೇಟ್ ಅಯಾನನ್ನು (CH3COO-) ಹೈಡ್ರಾಕ್ಸಿಲ್ ಅಯಾನು OH- ಪಲ್ಲಟಿಸುವುದು. ಏಕೆಂದರೆ ಹೈಡ್ರಾಕ್ಸಿಲ್ ಅಯಾನು ಅಸಿಟೇಟ್ ಅಯಾನಿಗಿಂತಲೂ ಹೆಚ್ಚು ಪ್ರಬಲವಾದ ಪ್ರತ್ಯಾಮ್ಲ.

iii ಸೂಚಕಗಳನ್ನುಪಯೋಗಿಸಿ ಅನುಮಾಪನ (ಟೈಟ್ರೇಷನ್ ಯೂಸಿಂಗ್ ಇಂಡಿಕೇಟರ್ಸ್): ಮೀಥೈಲ್ ವಯೊಲೆಟಅನ್ನು ಉಪಯೋಗಿಸಿ ಆಮ್ಲ HClಅನ್ನು ಪ್ರತ್ಯಾಮ್ಲ NH3ರೊಡನೆ ನೀರಿನ ದ್ರಾವಣದಲ್ಲಿ ಅನುಮಾಪಿಸಬಹುದು. ಆಮ್ಲ BCl3ನ್ನು ಪ್ರತ್ಯಾಮ್ಲ ಫ್ರಾಲಿಕ್ ಅನ್‌ಹೈಡ್ರೈಡಿನೊಡನೆ ಕ್ಲೋರೋ ಬೆಂಜೀನಿನ ದ್ರಾವಣದಲ್ಲಿ ಅನುಮಾಪಿಸಬಹುದು. ಆಮ್ಲ AICI3C5H5N ನೊಡನೆ ಕ್ಲೋರೋಫಾರಂ ದ್ರಾವಣದಲ್ಲಿ ಅನಿಮಾಪಿಸಬಹುದು. ಪ್ರತಿ ಸಂದರ್ಭದಲ್ಲಿಯೂ ಆಮ್ಲ ಹೆಚ್ಚಿನ ಪ್ರಮಾಣದಲ್ಲಿದ್ದಾಗ ಸೂಚಕ ಹಳದಿ ಬಣ್ಣವನ್ನೂ ಪ್ರತ್ಯಾಮ್ಲ ಹೆಚ್ಚಿದ್ದಾಗ ಸೂಚಕ ನೇರಳೆ ಬಣ್ಣವನ್ನೂ ಹೊಂದಿರುವುದು.

iv ವೇಗವರ್ಧಕತ್ವ: H2SO4, HF, BF3, AICI3 ಮುಂತಾದ ಆಮ್ಲಗಳು ಮತ್ತು ಸಾವಯವ ಅಮೀನುಗಳು, ಅಮೈಡುಗಳು ಇತ್ಯಾದಿ ಪ್ರತ್ಯಾಮ್ಲಗಳು ಇವುಗಳ ಸುವಿದಿತ ವೇಗವರ್ಧಕಗುಣಗಳನ್ನು ಲೂಯಿವಾದ ಸಂಪೂರ್ಣ ಸುವ್ಯವಸ್ಥಿತಗೊಳಿಸಿದೆ.

ರಾಚನಿಕ ನಿರ್ಧಾರಕಗಳು (ಸ್ಟ್ರಕ್ಚರಲ್ ಕ್ರೈಟೀರಿಯ): ರಾಚನಿಕವಾಗಿ ಒಂದು ಜೊತೆ ಎಲೆಕ್ಟ್ರಾನನ್ನು ಕೊಡುವ ಸಾಮರ್ಥ್ಯವುಳ್ಳ ಪರಮಾಣುವನ್ನು ಹೊಂದಿರುವ ಎಲ್ಲ ವಸ್ತುಗಳೂ ಪ್ರತ್ಯಾಮ್ಲಗಳು. ಒಂದು ಜೊತೆ ಎಲೆಕ್ಟ್ರಾನನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುವ ಎಲ್ಲ ವಸ್ತುಗಳೂ ಆಮ್ಲಗಳು.[] ಈ ಪ್ರತ್ಯಾಮ್ಲ ಆಮ್ಲಗಳು ನಿರ್ದೇಶಕ ಸಹ ಸಂಯೋಜಕ ಸಾಮರ್ಥ್ಯವಿರುವ ಕೋಆರ್ಡಿನೇಟ್ ಕೋವೆಲೆಂಟ್ ಬಂಧದ ಮೂಲಕ ಸಂಯೋಜಿಸಿ ಸಂಯುಕ್ತವಾಗುವುದೇ ತಟಸ್ಥೀಕರಣ. ಇದರಿಂದಾಗಿ ಫಲಿತವಸ್ತು ಅಯಾನ್‌ಗಳಾಗಿ ವಿಶ್ಲೇಷಿಸಬಹುದು. ಅಥವಾ ಬೇರೊಂದು ರೀತಿಯಲ್ಲಿ ಪುನರ್ಯೋಜಿತವಾಗಬಹುದು. ಇಲ್ಲವೆ, ಯಾವ ವ್ಯತ್ಯಾಸವನ್ನೂ ಹೊಂದದೆ ಇರಬಹುದು. ಈ ಕೆಳಗಿನ ಕೆಲವು ಉದಾಹರಣೆಗಳು ಇದನ್ನು ವಿಶದಪಡಿಸುವುವು.

ಪ್ರತ್ಯಾಮ್ಲ  ಆಮ್ಲ  ತಟಸ್ಥೀಕರಣದಿಂದಾದ ವಸ್ತು

H2O      SO3            H2SO4(2H++SO4– –)

CaO      SO3    CaSO4(Ca+++SO4– –)

NH3          BCI3             H3N:BCI3

2NH3          Ag+               [Ag(NH3)2]+

ಲೂಯಿಯ ಎಲೆಕ್ಟ್ರಾನಿಕವಾದ ಯಾವುದೇ ಒಂದು ಮೂಲವಸ್ತುವನ್ನಾಗಲಿ ಅಥವಾ ಅಯಾನನ್ನಾಗಲಿ ಅಥವಾ ದ್ರಾವಕವನ್ನಾಗಲಿ ಅವಲಂಬಿಸಿಲ್ಲ. ಹಿಂದಿನವಾದಗಳೆಲ್ಲ ಲೂಯಿವಾದದ ಕೆಲವು ವಿಶಿಷ್ಟ ಸಂದರ್ಭಗಳು.

ಉಸನೊವಿಷ್‌ನವಾದ: ೧೯೩೯ರಲ್ಲಿ ಉಸನೊವಿಷ್ ಪ್ರತಿಪಾದಿಸಿದ ಈ ವಾದ ಲೂಯಿಯ ವಾದಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯುಳ್ಳದ್ದು. ಈ ವಾದದ ಪ್ರಕಾರ ಅನಯಾನ್‌ಗಳನ್ನು ಅಥವಾ ಎಲೆಕ್ಟ್ರಾನುಗಳನ್ನು ಕೊಡುವ ಅಥವಾ ಕ್ಯಾಟಯಾನ್‌ಗಳೊಡನೆ ಸಂಯೋಜಿಸುವ ಯಾವ ವಸ್ತುವೇ ಆಗಲಿ ಪ್ರತ್ಯಾಮ್ಲವಾಗಿರುವುದು. ಕ್ಯಾಟಯಾನ್‌ಗಳನ್ನು ಕೊಡುವ ಅಥವಾ ಅಯಾನ್ ಅಥವಾ ಎಲೆಕ್ಟ್ರಾನ್‌ಗಳೊಡನೆ ಸಂಯೋಜಿಸುವ ಯಾವ ವಸ್ತುವೇ ಆಗಲಿ ಆಮ್ಲವಾಗಿರುವುದು. ಈ ವಾದ ಇತರ ಎಲ್ಲ ವಾದಗಳ ವ್ಯಾಪ್ತಿಯಲ್ಲಿ ಬರುವ ಪರಿವರ್ತನೆಗಳನ್ನು ಒಳಗೊಂಡಿರುವುದಲ್ಲದೆ ಉತ್ಕರ್ಷಣ, ಅಪಕರ್ಷಣ, (ಆಕ್ಸಿಡೇಷನ್, ರಿಡಕ್ಷನ್) ಪರಿವರ್ತನೆಗಳೂ ಇದರಲ್ಲಿ ಅಡಕವಾಗಿವೆ. ಇದನ್ನು ಸ್ವಷ್ಟೀಕರಿಸುವ ಕೆಲವು ಉದಾಹರಣೆಗಳನ್ನು ಕೆಳಗೆ ಕೊಟ್ಟಿದೆ.

ಆಮ್ಲ ಪ್ರತ್ಯಾಮ್ಲ      ಲವಣ

SO3            Na2O        Na2SO4

Fe(CN)2      KCN          K4Fe(CN)6

CI2              Na           NaCI

ಈ ವರ್ಗೀಕರಣದ ಸಮರ್ಥನೆ: i Na2–Oವು  O2–2– ಅಯಾನನ್ನು ಕೊಡುವುದು. ಆದ್ದರಿಂದ ಇದು ಪ್ರತ್ಯಾಮ್ಲ. SO3 ಯು O2- ನೊಡನೆ ಸಂಯೋಜಿಸುವುದು. ಆದ್ದರಿಂದ ಇದು ಆಮ್ಲ.

ii  KCN ಅಯಾನ್ ಆದ CN ಅನ್ನು ಕೊಡುವುದು. ಆದ್ದರಿಂದ ಇದು ಪ್ರತ್ಯಾಮ್ಲ. ಆ್ಯನಯಾನ್ ಆದ CN ನೊಡನೆ ಈ e(CN)2 ಸಂಯೋಜಿಸುವುದು. ಆದ್ದರಿಂದ ಇದು ಆಮ್ಲ.

iii Na ಎಲೆಕ್ಟ್ರಾನನ್ನು ಕೊಡುವುದು. ಆದ್ದರಿಂದ ಇದು ಪ್ರತ್ಯಾಮ್ಲ. CI ಎಲೆಕ್ಟ್ರಾನಿನೊಡನೆ ಸಂಯೋಜಿಸುವುದು. ಆದ್ದರಿಂದ ಇದು ಆಮ್ಲ.

ಹಾಗಾಗಿ ಆಮ್ಲ ಮತ್ತು ಪ್ರತ್ಯಾಮ್ಲಗಳೆಂಬ ಪದಗಳು ನಿರಪೇಕ್ಷ ಪದಗಳಲ್ಲ. ಇವು ಸಾಪೇಕ್ಷ ಪದಗಳಾಗಿದ್ದು ಕೆಲವೊಂದು ವಿಶಿಷ್ಟ ಸನ್ನಿವೇಶಕ್ಕೆ ಸಂಬಂಧ ಹೊಂದಿರುವ ಪದಗಳು ಎನ್ನುವುದು ಸ್ಪಷ್ಟವಾಗಿರುವುದು. ಈಗ ವಿಮರ್ಶಿಸಿದ ಬೇರೆ ಬೇರೆ ವಾದಗಳು ಪರಸ್ಪರ ವಿರುದ್ಧ ವಾದಗಳಾಗಿಲ್ಲ. ಒಂದು ರೀತಿಯಲ್ಲಿ ಇವು ಪರಸ್ಪರ ಪೂರಕಗಳು. ಪ್ರತಿಯೊಂದು ವಾದವೂ ಆಯಾ ದೃಷ್ಟಿಯಿಂದ ಸರಿಯಾಗಿರುವುದು. ಉದಾಹರಣೆಗೆ, ನೀರಿನ ದ್ರಾವಣದಲ್ಲಿ ಹೈಡ್ರೊಕ್ಲೋರಿಕ್ ಆಮ್ಲ- ಸೋಡಿಯಂ ಹೈಡ್ರಾಕ್ಸೈಡ್‌ಗಳ ಅನುಮಾಪನವನ್ನು ಪರಿಶೀಲಿಸುವಾಗ ಅರೀನಿಯಸ್ ವಾದಕ್ಕಿಂತ ಮುಂದೆ ಹೋಗಬೇಕಾದುದಿಲ್ಲ. ದ್ರವ ಅಮೋನಿಯದಂಥ ಜಲೇತರ (ನಾನಾಏಕ್ವಿಯಸ್) ದ್ರಾವಕಗಳಲ್ಲಿ ನಡೆಯುವ ಪರಿವರ್ತನೆಗಳ ಪರಿಶೀಲನೆಯಲ್ಲಿ ದ್ರಾವಕ ವ್ಯವಸ್ಥೆಗಳ ವಾದವನ್ನು ಅನುಸರಿಸಬೇಕಾಗುವುದು. ಯಾವುದೇ ಒಂದು ದೃಷ್ಟಿಕೋನ ಎಲ್ಲ ಸನ್ನಿವೇಶಗಳನ್ನು ವಿವರಿಸಲು ಸಮರ್ಥವಾಗಿದೆ ಎನ್ನಲಾಗುವುದಿಲ್ಲ. ಸರ್ವಸಮನ್ವಯತೆ ಹೆಚ್ಚು ಜಟಿಲವಾಗಿರುವುದು. ವ್ಯಾಪ್ತಿ ಕಡಿಮೆಯಾಗಿದ್ದರೂ ಅನೇಕ ದೃಷ್ಟಿಕೋನಗಳು ಅವುಗಳ ಸರಳತೆಯ ಕಾರಣದಿಂದ ಕೆಲವು ವಿಶೇಷ ಸನ್ನಿವೇಶಗಳಲ್ಲಿ ಬಳಸಲಾಗದಿದ್ದರೂ ಹೆಚ್ಚು ಉಪಯುಕ್ತವಾದವು. ಒಂದೊಂದು ವಾದ ಒಂದೊಂದು ಅನ್ವಯ ಕ್ಷೇತ್ರವನ್ನು ಹೊಂದಿದ್ದು ಈ ಎಲ್ಲ ವಾದಗಳ ಮೂಲಭೂತ ಜ್ಞಾನ ಆಮ್ಲ-ಪ್ರತ್ಯಾಮ್ಲಗಳ ಪೂರ್ಣ ವಿವರಣೆಯನ್ನರಿಯಲು ಅಗತ್ಯ.

ಸಿದ್ಧಾಂತದ ಆಧಾರದ ಮೇಲೆ ಯಾವ ವಸ್ತುಗಳು ಆಮ್ಲಗಳು, ಯಾವ ವಸ್ತುಗಳು ಪ್ರತ್ಯಾಮ್ಲಗಳು ಎಂದು ನಿರ್ಣಯಿಸುವುದು ಕಷ್ಟವಾದುದಾದರೂ ಕೆಲವು ವಸ್ತುಗಳು ಆಮ್ಲಗಳೆಂದೂ ಕೆಲವು ವಸ್ತುಗಳು ಪ್ರತ್ಯಾಮ್ಲಗಳೆಂದೂ ದೀರ್ಘ ಕಾಲದಿಂದಲೂ ಸುಪರಿಚಿತವಾಗಿದೆ.

ವಿಧಗಳು

[ಬದಲಾಯಿಸಿ]

ಆಮ್ಲಗಳಲ್ಲಿ ಎರಡು ವಿಧಗಳಿವೆ. ಜೈವಿಕ ಹಾಗೂ ಅಜೈವಿಕ. ಇಂಗಾಲಪರಮಾಣುಗಳನ್ನು ಹೊಂದಿರುವ ಆಮ್ಲಗಳನ್ನು ಜೈವಿಕ ಆಮ್ಲಗಳೆಂದೂ, ಇಂಗಾಲದ ಪರಮಾಣುಗಳನ್ನು ಹೊಂದಿಲ್ಲದ ಅಮ್ಲಗಳನ್ನು ಅಜೈವಿಕ ಅಮ್ಲಗಳೆಂದೂ ಕರೆಯುತ್ತಾರೆ. ಅಜೈವಿಕ ಆಮ್ಲಗಳಿಗೆ ಉದಾಹರಣೆಯೆಂದರೆ ನೈಟ್ರಿಕ್ ಆಮ್ಲ, ಗಂಧಕಾಮ್ಲ, ರಂಜಕಾಮ್ಲ ಮುಂತಾದವುಗಳು. ಜೈವಿಕ ಆಮ್ಲಗಳಿಗೆ ಉದಾಹರಣೆ: ಸಿಟ್ರಿಕ್ ಆಮ್ಲ, ಅಮಿನೋ ಆಮ್ಲ, ಕೊಬ್ಬಿನ ಆಮ್ಲಗಳು ಮುಂತಾದವುಗಳು.

ಪ್ರಮುಖ ಆಮ್ಲಗಳು ಮತ್ತು ಉಪಯೋಗಗಳು

[ಬದಲಾಯಿಸಿ]

ಆಮ್ಲಗಳನ್ನು ಖನಿಜ ಆಮ್ಲಗಳು ಮತ್ತು ಸಾವಯವ ಆಮ್ಲಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಖನಿಜ ಆಮ್ಲಗಳ ಪೈಕಿ ಔಪಯೋಗಿಕ ದೃಷ್ಟಿಯಿಂದ ಸಲ್ಫ್ಯೂರಿಕ್ ಆಮ್ಲ (H2SO4) ಅಗ್ರಸ್ಥಾನ ಹೊಂದಿದೆ. ಫಲವತ್ಕಾರಿಗಳು (ಫರ್ಟಿಲೈಸರ್ಸ್), ರೇಯಾನ್, ನೂಲುಗಳು (ಟೆಕ್ಸ್‌ಟೈಲ್ಸ್), ವರ್ಣ ದ್ರವ್ಯಗಳು, ಸ್ಪೋಟಕಗಳು, ಸಂಶ್ಲೇಷಿತ ಶುದ್ಧಿಕಾರಕಗಳು (ಸಿಂಥೆಟಿಕ್‌ ಡಿಟರ್ಜೆಂಟ್), ಅಯಾನ್ ವಿನಿಮಯಿಗಳು, ವಿವಿಧ ನಿರವಯವ ಮತ್ತು ಸಾವಯವ ಸಂಯುಕ್ತಗಳು, ಇತ್ಯಾದಿಗಳ ತಯಾರಿಕೆಗಳಲ್ಲಿಯೂ ಪೆಟ್ರೋಲಿಯಂ ಶುದ್ಧೀಕರಣ, ಲೋಹಗಳ ಶುದ್ಧೀಕರಣ, ಅದುರುಗಳಿಂದ ಲೋಹಗಳನ್ನು ತೆಗೆಯುವುದು ಮುಂತಾದ ಕಾರ್ಯಗಳಲ್ಲಿಯೂ ಸೀಸ ಸಂಗ್ರಾಹಕಗಳಲ್ಲಿಯೂ (ಲೆಡ್‌ ಅಕ್ಯುಮ್ಯುಲೇಟರ್ಸ್) ಈ ಆಮ್ಲವನ್ನು ಆಗಾಧ ಪ್ರಮಾಣದಲ್ಲಿ ಬಳಸುವರು.[]

ಹೈಡ್ರೊಕ್ಲೋರಿಕ್ ಆಮ್ಲ (HCl) ಉಪಯುಕ್ತತೆಯಲ್ಲಿ ಎರಡನೆಯ ಸ್ಥಾನ ಹೊಂದಿದೆ.  ಉಕ್ಕಿನ ಸಾಮಾನುಗಳ ಮೇಲೆ ತವರ ಅಥವಾ ಸತುವಿನ ಲೇಪ ಕೊಡುವ ಮುಂಚೆ ಅಥವಾ ಇವುಗಳನ್ನು ಎನ್ಯಾಮೆಲ್ ಮಾಡುವ ಮುಂಚೆ, ಈ ವಸ್ತುಗಳನ್ನು ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಅದ್ದಿ, ಇವುಗಳ ಮೇಲ್ಮೈಯನ್ನು ಶುದ್ಧಗೊಳಿಸುವರು. ಇದಕ್ಕಾಗಿ ಈ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲಾಗುವುದು. ಇದನ್ನು ವಿವಿಧ ಲೋಹಗಳ ಕ್ಲೋರೈಡುಗಳ ತಯಾರಿಕೆಯಲ್ಲಿಯೂ ವರ್ಣ ದ್ರವ್ಯಗಳೂ, ಔಷಧಗಳು ಮತ್ತು ಇತರ ಅನೇಕ ವಸ್ತುಗಳ ತಯಾರಿಕೆಯಲ್ಲಿಯೂ ಉಪಯೋಗಿಸುವರು.

ನೈಟ್ರಿಕ್ ಆಮ್ಲ (HNO3) ಕೈಗಾರಿಕೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ, ಈ ಆಮ್ಲವನ್ನು ವಿಶೇಷವಾಗಿ ವರ್ಣ ದ್ರವ್ಯಗಳ ಮತ್ತು ಸ್ಫೋಟಕಗಳ ತಯಾರಿಕೆಗಳಲ್ಲಿ ಉಪಯೋಗಿಸುವರು.  ನೈಟ್ರೇಟುಗಳು ಉತ್ತಮವಾದ ಸಸಾರಜನಕ ಫಲವತ್ಕಾರಿಗಳು (ನೈಟೋಜಿನಸ್ ಫರ್ಟಿಲೈಸರ್ಸ್).

ಫಾಸ್ಫಾರಿಕ್ ಆಮ್ಲ (H3PO4) ಇನ್ನೊಂದು ಖನಿಜ ಆಮ್ಲ.  ಫಾಸ್ಫರಸ್ ಅಂಶದಲ್ಲಿ ಸಮೃದ್ಧವಾಗಿರುವ ಟ್ರಿಪಲ್ ಫಾಸ್ಫೇಟ್ ಎಂಬ ಫಾಸ್ಫಾಟಿಕ್ ಫಲವತ್ಕಾರಿಯ ತಯಾರಿಕೆಯಲ್ಲಿ ಇದನ್ನು ವಿಶೇಷವಾಗಿ ಬಳಸಬಹುದು.

ಕಾರ್ಬಾನಿಕ್ ಆಮ್ಲ (H2CO3) ದ್ರಾವಣದಲ್ಲಿ ಮಾತ್ರ ಅಸ್ತಿತ್ವವನ್ನು ಹೊಂದಿರುವ ಆಮ್ಲ. ಎಲ್ಲ ಅನಿಲ ಸಂಸ್ಕಾರಿಕ (ಏರೇಟೆಡ್) ಪಾನೀಯಗಳಲ್ಲಿಯೂ ಈ ಆಮ್ಲ ವಿಲೀನವಾಗಿರುವುದಲ್ಲದೆ[] ಇದನ್ನು ಪ್ರಮುಖ ಪ್ರತ್ಯಾಮ್ಲಗಳಲ್ಲಿ ಒಂದಾದ ವಾಷಿಂಗ್ ಸೋಡ ಅಥವಾ ಸೋಡಿಯಂ ಕಾರ್ಬೋನೇಟನ Na2CO3 ತಯಾರಿಕೆಯಲ್ಲಿ ವಿಶೇಷವಾಗಿ ಬಳಸಬಹುದು.

ಬೋರಿಕ್ ಆಮ್ಲ (H2BO3): ರೋಗಾಣುನಿರೋಧಕ ಗುಣವನ್ನು ಹೊಂದಿರುವ ಈ ಆಮ್ಲವನ್ನು ಔಷಧಾಲಯಗಳಲ್ಲಿ ಗಾಯಗಳ ಚಿಕಿತ್ಸೆಯಲ್ಲಿ ಉಪಯೋಗಿಸುವರು.

ಸಾವಯವ ಆಮ್ಲಗಳು: ಎಲ್ಲ ಸಾವಯವ ಆಮ್ಲಗಳ ಅಣುಗಳಲ್ಲಿಯೂ ಮತ್ತು ಅಸಿಟಿಕ್ ಆಮ್ಲಗಳ ಅಣುಗಳಲ್ಲಿಯೂ ಕಾರ್ಬಾಕ್ಸಿಲಿಕ್ ಗುಂಪು COOH ಇರುವುದು. ಫಾರ್ಮಿಕ್ ಆಮ್ಲ H.COOH ಮತ್ತು ಅಸಿಟಿಕ್ ಆಮ್ಲ CH3COOH ಗಳು ಅತ್ಯಂತ ಸರಳವಾದ ಎರಡು ಸಾವಯವ ಆಮ್ಲಗಳು. ಅಸಿಟಿಕ್ ಆಮ್ಲವನ್ನು ಪಾಶ್ಚಾತ್ಯ ದೇಶಗಳಲ್ಲಿ ವಿನಿಗರ್ ಎಂಬ ಹೆಸರಿನಿಂದ ಹುಳಿ ರುಚಿ ಕೊಡಲು ಆಹಾರ ಪದಾರ್ಥಗಳಲ್ಲಿ ವಿಶೇಷವಾಗಿ ಬಳಸುವರು.  ಅನೇಕ ಸಾವಯವ ಸಂಯುಕ್ತಗಳ ತಯಾರಿಕೆಯಲ್ಲಿಯೂ ಸಫೇಡು (ವೈಟ್‌ಲೆಡ್) ಎಂಬ ಪ್ರಮುಖ ಬಿಳಿಯ ಬಣ್ಣದ ತಯಾರಿಕೆಯಲ್ಲಿಯೂ ಅಸಿಟಿಕ್ ಆಮ್ಲವನ್ನು ಬಳಸುವರು. ಹೆಚ್ಚಿನ ಇಂಗಾಲ ಪರಮಾಣುಗಳು ಅಣುವಿನಲ್ಲಿರುವ ಇದೇ ಗುಂಪಿನ ಅಮ್ಲಗಳಾದ ಸ್ಟೀರಿಕ್ ಆಮ್ಲ C17H35.COOH  ಮತ್ತು ಪಾಮಿಟಿಕ್ ಆಮ್ಲ C16H32O2 ಗಳನ್ನು ಹೆಚ್ಚಿನ ಉಷ್ಣದಲ್ಲಿರುವ ಹಬೆಯ (ಸೂಪರ್‌ಹೀಟೆಡ್ ಸ್ಟೀಂ) ಸಹಾಯದಿಂದ ಕೊಬ್ಬಿನ ಜಲ ವಿಶ್ಲೇಷಣ (ಹೈಡ್ರೊಲಿಸಿಸ್) ಮಾಡಿ ತಯಾರಿಸುವರು.  ಈ ಆಮ್ಲಗಳನ್ನು ಮೇಣದ ಬತ್ತಿಯ ತಯಾರಿಕೆಯಲ್ಲಿ ಉಪಯೋಗಿಸುವರು.

ಬ್ಯುಟರಿಕ್ ಆಮ್ಲ C3H7.COOH: ಇದು ಬೆಣ್ಣೆಯಲ್ಲಿ ಗ್ಲಿಸರೀನ್ ಸಂಯುಕ್ತ ರೂಪದಲ್ಲಿರುವುದು. ಬಹಳ ಕಾಲವಿಟ್ಟ ಬೆಣ್ಣೆ ನಿಧಾನವಾಗಿ ವಿಶ್ಲೇಷಿಸಿ ಬ್ಯುಟರಿಕ್ ಆಮ್ಲವನ್ನು ಕೊಡುವುದು. ಈ ಬ್ಯುಟರಿಕ್ ಆಮ್ಲವೇ ಬಹಳ ದಿನವಿಟ್ಟ ಬೆಣ್ಣೆಯ ಕೊಳಕು ವಾಸನೆಗೆ ಕಾರಣ. ಬೆಣ್ಣೆಯನ್ನು ಅಡಿಗೆ ಸೋಡದ (NaHCO3) ದ್ರಾವಣದಿಂದ ತೊಳೆದರೆ ಈ ಆಮ್ಲ ಅದರೊಡನೆ ವರ್ತಿಸಿ ಬೆಣ್ಣೆಯ ಕೆಟ್ಟ ವಾಸನೆ ಹೋಗುವುದು.

ಡೈಕಾರ್ಬಾಕ್ಸಿಲಿಕ್ ಆಮ್ಲ ಮತ್ತು ಟ್ರೈಕಾರ್ಬಾಕ್ಸಿಲಿಕ್ ಆಮ್ಲಗಳಲ್ಲಿ ಎರಡು ಮತ್ತು ಮೂರು ಕಾರ್ಬಾಕ್ಸಿಲಿಕ್ ಗುಂಪುಗಳಿರುವುವು.  ಟಾರ್ಟಾರಿಕ್ ಆಮ್ಲ HOOC(CHOH)2COOH  ಹುಣಿಸೆಹಣ್ಣಿನಲ್ಲಿಯೂ ಸಿಟ್ರಿಕ್ ಆಮ್ಲ C(OH).COOH.CH2COOH ನಿಂಬೆ ಹಣ್ಣಿನ ಜಾತಿಯ ಹಣ್ಣುಗಳಲ್ಲಿಯೂ ಇರುವುದು. ಈ ಆಮ್ಲಗಳನ್ನು ಪಾನೀಯ ವಿಶೇಷಗಳಿಗೆ ಹುಳಿರುಚಿಕೊಡಲು ಉಪಯೋಗಿಸುವರು. ಹಣ್ಣುಗಳ ಹುಳಿಗೆ ಒಂದಲ್ಲೊಂದು ಸಾವಯವ ಆಮ್ಲ ಕಾರಣ.

ಸ್ಯಾಲಿಸಿಲಿಕ್ ಆಮ್ಲ HOC6H4CO2H: ಇದೊಂದು ಆರೋಮ್ಯಾಟಿಕ್ ಹೈಡ್ರಾಕ್ಸಿ ಆಮ್ಲ. ಇದರ ಅನೇಕ ಸಂಯುಕ್ತಗಳನ್ನು ಔಷಧಗಳಲ್ಲಿ ಉಪಯೋಗಿಸುವರು. ಇಂಥ ಸಂಯುಕ್ತಗಳಲ್ಲಿ ಒಂದಾದ ಅಸಿಟೈಲ್ ಸ್ಯಾಲಿಸಿಕ್ ಆಮ್ಲ ಸುವಿದಿತ ವೇದನಾಹಾರಿಯಾದ ಆಸ್ಪರಿನ್.

ಫ್ರ್ಯಾಲಿಕ್ ಆಮ್ಲ ಅಥವಾ ೧-೨ ಕಾರ್ಬಾಲಿಕ್ ಬೆನ್‌ಜೋಯಿಕ್ ಆಮ್ಲ HOOC.C6H4.COOH: ಇಂಡಿಗೋ ಎಂಬ ನೀಲಿ ಬಣ್ಣದ ತಯಾರಿಕೆಯಲ್ಲಿ ಇದು ಪ್ರಮುಖಪಾತ್ರ ಹೊಂದಿರುವುದು.

ಟ್ಯಾನಿಕ್ ಆಮ್ಲ ಟ್ಯಾನ್ ಮರದ ತೊಗಟೆಗಳಲ್ಲಿದ್ದು ಚರ್ಮ ಹದಮಾಡುವ ಕಾರ್ಯಕ್ಕೆ ವಿಶೇಷವಾಗಿ ಬಳಸಲ್ಪಡುವುದು.

ಫೀನಾಲ್  C6H5OH; ಇದನ್ನು ಕಾರ್ಬಾಲಿಕ್ ಆಮ್ಲವೆಂದೂ ಕರೆಯುವರು.  ಇದು ಸೋಡಿಯಂ ಹೈಡ್ರಾಕ್ಸೈಡಿನೊಡನೆ ವರ್ತಿಸಿ ಸೋಡಿಯಮ ಫೀನೆಟನ್ನು C6H5ONa ಕೊಡುವುದು. ಈ ಕ್ರಿಮಿನಾಶಕವಾಗಿ ಉಪಯೋಗಿಸುವ ಫಿನೈಲ್‌ನ ಕ್ರಿಯಾತ್ಮಕಾಂಶದ ಬಹು ಭಾಗ ಇದೇ ಆಗಿರುವುದು. ಬೇಕಲೈಟ್ ಎಂಬ ಪ್ಲಾಸ್ಟಿಕು ಫೀನಾಲ್-ಫಾರ್ಮಾಲ್ಡಿಹೈಡುಗಳ ಸಾಂದ್ರೀಕರಣ ಫಲಿತವಸ್ತು.

ಅಮೈನೊ ಆಮ್ಲಗಳು: ಸಾವಯವ ಆಮ್ಲಗಳ ಪೈಕಿ ಇನ್ನೊಂದು ಪ್ರಮುಖ ಗುಂಪು.  ಇವುಗಳ ಅಣುಗಳಲ್ಲಿ ಆಮ್ಲೀಯ ಗುಂಪಾದ COOH ಮತ್ತು ಪ್ರತ್ಯಾಮ್ಲೀಯ ಗುಂಪಾದ - NH2 ಎರಡೂ ಇದ್ದು; ಇವು ಆಮ್ಲ-ಪ್ರತ್ಯಾಮ್ಲಗಳೆರಡರ ಸ್ವಭಾವವನ್ನೂ ಹೊಂದಿರುವುವು. ಈ ಗುಂಪಿನ ಆಮ್ಲಗಳ ಪೈಕಿ ಗ್ಲೈಸಿನ್ H2N.CH2.COOH ಅತ್ಯಂತ ಸರಳವಾದುದು. ೨೧ ಅಮೈನೊ ಆಮ್ಲಗಳು ಪ್ರಾಣಿಜ-ಪ್ರೋಟೀನುಗಳ ರಚನೆಯಲ್ಲಿ ಪಾತ್ರ ವಹಿಸಿರುವುವು.[]  ಜೀವಿಯ ಸಮಸ್ತ ಜೈವಿಕ ಚಟುವಟಿಕೆಗಳೂ ಪ್ರೋಟೀನುಗಳ ಸಹಾಯದಿಂದಲೇ ನಡೆಯುತ್ತಿರುವವು.  ಅಮೈನೊ ಆಮ್ಲದ ಒಂದು ಅಣುವಿನ- NH2 ಗುಂಪು ಇನ್ನೊಂದು ಅಣುವಿನ-COOH ನೊಡನೆ ಜೊತೆಗೂಡಿ ಇವೆರಡು ಅಣುಗಳು ಒಂದಾಗುವುವು.

NH2.CH2.COOH + H2N.CH2.COOH → NH2.CH2.CO.NH.CH2COOH + H2O

ಹೀಗೆ ಜೊತೆಗೂಡಿ ಆದ ಎರಡು ಅಣುಗಳು ಪುನಃ ಇದೇ ಮಾದರಿಯಲ್ಲಿ ಜೊತೆಗೂಡುವುವು. ಈ ವಿಧವಾದ ಸಂಯೋಜನೆಯ ಆವರ್ತನದಿಂದ ಅತಿ ದೀರ್ಘ ಶ್ರೇಣಿಯ ಪ್ರೋಟಿನ್ ಅಣುಗಳಾಗುವುವು. ಪ್ರೊಟೀನ್ ಅಣುಗಳ ರಚನೆಯಲ್ಲಿರುವ ಅಮೈನೋ ಅಮ್ಲಗಳು ಅವು ಜೋಡಿಸಿರುವ ರೀತಿ, ಇವುಗಳ ವ್ಯತ್ಯಾಸಗಳು ಪ್ರೊಟೀನುಗಳ ವೈವಿಧ್ಯಕ್ಕೆ ಕಾರಣ. ಶರೀರದ ಸಮಸ್ತ ಚಟುವಟಿಕೆಗಳನ್ನೂ ನಿರ್ದೇಶಿಸುವ ಮತ್ತು ನಿಯಂತ್ರಿಸುವ ಈ ಪ್ರೊಟೀನುಗಳ ಇತ್ತೀಚಿನ ಸಂಶೋಧನೆಗಳು ಮಹತ್ತ್ವಪೂರ್ಣವಾದ ಮತ್ತು ಸ್ವಾರಸ್ಯವಾದ ಅಂಶಗಳನ್ನು ಬಯಲಿಗೆ ತಂದಿವೆ.

ಆಮ್ಲಗಳು ಅನೇಕ ರಾಸಾಯನಿಕ ಪರಿವರ್ತನೆಗಳ ವೇಗವರ್ಧಕಗಳಾಗಿರುವುವು. ನಮ್ಮ ಜೀರ್ಣಾಂಗಗಳು ಹೈಡ್ರೊಕ್ಲೋರಿಕ್ ಅಮ್ಲವನ್ನು ಉತ್ಪಾದಿಸಿ ಆಹಾರವನ್ನು ಜೀರ್ಣಿಸುತ್ತವೆ. ಅಸ್ಕೊರ್ಬಿಕ್ ಆಮ್ಲ ವಿಟಮಿನ್-ಸಿ ಯಾಗಿ ಆವಶ್ಯಕವಾಗಿದೆ. ಅಡುಗೆ ಎಣ್ಣೆಯಲ್ಲಿ ೯೪%ತನಕ ಕೊಬ್ಬಿನ ಆಮ್ಲಗಳಿದ್ದಾವೆ. ಕೊಬ್ಬಿನ ಆಮ್ಲಗಳಿಂದ ಅಮಿನೋ ಅಮ್ಲಗಳು ಉತ್ಪನ್ನವಾಗುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Petrucci, R. H.; Harwood, R. S.; Herring, F. G. (2002). General Chemistry: Principles and Modern Applications (8th ed.). Prentice Hall. p. 146. ISBN 0-13-014329-4.
  2. Otoxby, D. W.; Gillis, H. P.; Butler, L. J. (2015). Principles of Modern Chemistry (8th ed.). Brooks Cole. p. 617. ISBN 978-1305079113.
  3. Ebbing, Darrell; Gammon, Steven D. (2016-01-01). General Chemistry (in ಇಂಗ್ಲಿಷ್) (11th ed.). Cengage Learning. ISBN 9781305887299.
  4. IUPAC Gold Book - acid
  5. "The Top 10 Industrial Chemicals - For Dummies". dummies.com. Retrieved 2016-02-05.
  6. McMillin, John R.; Tracy, Gene A.; Harvill, William A.; Credle, William S. Jr. (8 December 1981), Method of and apparatus for making and dispensing a carbonated beverage utilizing propellant carbon dioxide gas for carbonating, retrieved 2016-02-06
  7. Barrett, G. C.; Elmore, D. T. (June 2012). 8 - Biological roles of amino acids and peptides - University Publishing Online. doi:10.1017/CBO9781139163828. ISBN 9780521462921.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಆಮ್ಲ&oldid=1239656" ಇಂದ ಪಡೆಯಲ್ಪಟ್ಟಿದೆ