ವಿಷಯಕ್ಕೆ ಹೋಗು

ರಕ್ತ ಗರಣೆಗಟ್ಟುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಕ್ತ ಗರಣೆಗಟ್ಟುವಿಕೆ
ಜೀವಿಯಲ್ಲಿಯ ರಕ್ತ ಗರಣೆಗಟ್ಟುವಿಕೆಯ ಕ್ರಿಯಾಸರಣಿಗಳು ಥ್ರಾಂಬಿನ್ ವಹಿಸುವ ಕೇಂದ್ರ ಪಾತ್ರವನ್ನು ತೋರಿಸುತ್ತವೆ
Healthಪ್ರಯೋಜನಕಾರಿ

ರಕ್ತ ಗರಣೆಗಟ್ಟುವಿಕೆ ಎಂಬುದು ರಕ್ತವು ದ್ರವ ಸ್ಥಿತಿಯಿಂದ ಜೆಲ್ ಸ್ಥಿತಿಗೆ ಬದಲಾವಣೆಯಾಗುವ ಪ್ರಕ್ರಿಯೆ. ಇದರಿಂದ ರಕ್ತ ಗರಣೆಯ ರಚನೆಯಾಗುತ್ತದೆ. ರಕ್ತಹೆಪ್ಪುಗಟ್ಟುವಿಕೆ, ರಕ್ತ ಘನೀಕರಣ ಪರ್ಯಾಯನಾಮಗಳು (ಕ್ಲಾಟಿಂಗ್ ಆಫ್ ಬ್ಲಡ್: ಕೊಯಾಗ್ಯುಲೇಷನ್ ಆಫ್ ಬ್ಲಡ್).

ಗರಣೆಗಟ್ಟಲು ಕಾರಣಗಳು

[ಬದಲಾಯಿಸಿ]

ಹೃದಯ ಮತ್ತು ರಕ್ತನಾಳಗಳಲ್ಲಿರುವ ರಕ್ತ ದ್ರವರೂಪದಲ್ಲಿ ಇರುತ್ತದೆ. ಹೊರಬಂದಾಗ ಗರಣೆಗಟ್ಟುವುದು. ಇದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿರುವುವು ಎರಡು. ಮೊದಲನೆಯದು ಹೃದಯ ಹಾಗೂ ರಕ್ತನಾಳಗಳ ಭಿತ್ತಿಯ ಒಳಮೈ ರಕ್ತದಿಂದ ತೋಯದಂಥ ಅತಿ ನುಣುಪು ರಚನೆಯಿಂದ ಆಗಿರುವಿಕೆ. ಇದರಿಂದ ರಕ್ತ ಹೆಪ್ಪುಗಟ್ಟದೆ ದ್ರವರೂಪದಲ್ಲೇ ಇರುತ್ತದೆ. ಗಾಯದಿಂದಾಗಿ ರಕ್ತ ಹೊರಬಂದು ಗಾಯಸ್ಥಳವನ್ನು ತೇವಮಾಡುವುದರಿಂದ ಅದರ ದ್ರವವಾಗಿಯೇ ಇರುವ ಸ್ವಭಾವದ ಬದಲಾವಣೆ ಆಗಿ ಆ ಸ್ಥಳದಲ್ಲಿ ದ್ರವರಕ್ತ ಘನೀಕರಿಸುತ್ತದೆ. ಎರಡನೆಯದು, ದೇಹದಲ್ಲಿ ರಕ್ತ ಚಲಿಸುತ್ತಲೇ ಇರುವುದರಿಂದ ಘನೀಕರಣಕ್ಕೆ ಕಾಲಾವಕಾಶವಿರುವುದಿಲ್ಲ. ರಕ್ತ ಹೊರಬಂದಾಗ ಚಲಿಸದೆ ಸ್ಥಿರವಾಗಿರುವಾಗ ಉರಿಯೂತ, ಪೆಡಸಣೆ (ಅಧಿರೋಮ) ಮುಂತಾದ ಕಾರಣಗಳಿಂದ ಹೃದಯ ಹಾಗು ರಕ್ತನಾಳಗಳ ಒಳಮೈ ತರಕಲಾಗಿ ಅದನ್ನು ರಕ್ತ ಒದ್ದೆ ಮಾಡಬಲ್ಲದ್ದಾಗುತ್ತದೆ. ಜೊತೆಗೆ ಈ ಸ್ಥಿತಿಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯಾಗಬಹುದು. ರಕ್ತದಿಂದ ಒದ್ದೆ ಆಗುವ ಪ್ರಕ್ರಿಯೆಯಿಂದ ಆ ತನಕ ತಡೆಹಿಡಿಯಲ್ಪಟ್ಟಿರುವ ಒಂದು ವಿಶಿಷ್ಟ ಕ್ರಿಯಾವಿಧಾನದ ಬಿಡುಗಡೆ ಆದಂತಾಗಿ ರಕ್ತ ನಾಲ್ಕಾರು ಮಿನಿಟುಗಳಲ್ಲಿ ಘನೀಕರಿಸುವುದು ಸಾಧ್ಯವಾಗುತ್ತದೆ.

ಗರಣೆಗಟ್ಟುವುದನ್ನು ತಡೆಯುವುದು: ರಕ್ತದಿಂದ ಒದ್ದೆಯಾಗುವ ಸ್ಥಳದಲ್ಲಿ ಮಾತ್ರ ರಕ್ತದ ಕಣಿತ್ರಗಳು (ಕಿರುತಟ್ಟೆಗಳು) ಒಂದಕ್ಕೊಂದು ಅಂಟಿಕೊಂಡು ಸಣ್ಣ ದೊಡ್ಡ ಗುಂಪುಗಳಾಗುತ್ತವೆ ಮತ್ತು ಛಿದ್ರಗೊಂಡು ನಾಶವಾಗಲು ಪ್ರಾರಂಭಿಸುತ್ತದೆ.[೧] ಗಾಯದಿಂದ ರಕ್ತನಾಳದ ಮತ್ತು ಸ್ಥಳೀಯ ಇತರ ದೇಹ ಕೋಶಗಳು ನಾಶವಾಗುವುದರಿಂದ ಬಿಡುಗಡೆಯಾದ ವಸ್ತುವೂ (ಇದಕ್ಕೆ ಅಂಗಾಂಶ ಥ್ರಾಂಬೊಪ್ಲಾಸ್ಟಿನ್ ಎಂದು ಹೆಸರು) ರಕ್ತ ಹೆಪ್ಪಾಗುವಿಕೆಯ ವಿಧಾನವನ್ನು ಪ್ರಾರಂಭಿಸಬಲ್ಲದ್ದು. ವಿಧಾನ ಹೇಗೇ ಪ್ರಾರಂಭವಾದರೂ ಅನಂತರ ಮುಂದಿನ ಘನೀಕರಣ ಪ್ರಕ್ರಿಯೆಗಳು ತಾವಾಗಿಯೇ ಮುಂದುವರಿದು ಇನ್ನೊಂದೆರಡು ಮಿನಿಟುಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಪರಿಸ್ಥಿತಿ ಹೀಗಿರುವಾಗ ರಕ್ತದಿಂದ ಒದ್ದೆ ಆಗದಂತೆ ಮೇಣ ಇಲ್ಲವೇ ಎಣ್ಣೆಯಿಂದ ಸಂಸ್ಕರಿಸಿದ ಪಿಚಕಾರಿಯ ಮೂಲಕ ಹೆಚ್ಚು ಗಾಯವಾಗದಂತೆ ಜಾಗರೂಕತೆಯಿಂದ ರಕ್ತವನ್ನು ಎಳೆದು ಹಾಗೆಯೇ ಸಂಸ್ಕರಿಸಿದ ಗಾಜಿನ ಪಾತ್ರೆಯಲ್ಲಿಟ್ಟರೆ ಆ ರಕ್ತವೂ ಗರಣೆಗಟ್ಟುವುದಿಲ್ಲವೇನೋ ಎನ್ನಿಸಿದರು ವಾಸ್ತವವಾಗಿ ಅದೂ ಗರಣೆಕಟ್ಟುತ್ತದೆ. ಆದರೆ ಬಲು ತಡವಾಗಿ ಮಾತ್ರ. ಇದನ್ನು ಶೈತ್ಯೀಕರಿಸಿ ಇಟ್ಟರೆ ಗರಣೆ ಕಟ್ಟುವುದು ಇನ್ನೂ ನಿಧಾನ. ಒಂದೆರಡು ಗಂಟೆಗಳೇ ಆಗಬಹುದು. ರಕ್ತವನ್ನು 560C ನಷ್ಟು ಬೆಚ್ಚಗೆ ಮಾಡಿ ಅನಂತರ ತಣಿಯಲು ಬಿಟ್ಟರೆ ಅಂಥ ರಕ್ತ ಸಾಮಾನ್ಯವಾಗಿ ಗರಣೆಗಟ್ಟುವುದೇ ಇಲ್ಲ. ಹಾಗೆಯೇ ಸೋಡಿಯಮ್ ಸಲ್ಫೇಟ್ ಮುಂತಾದ ತಟಸ್ಥ (ನ್ಯೂಟ್ರಲ್) ಲವಣಗಳನ್ನು ಬೆರಸಿಟ್ಟರೂ ಆ ರಕ್ತ ಗರಣೆ ಕಟ್ಟುವುದಿಲ್ಲ. ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಕಿಣ್ವಗಳ ಪಾತ್ರವಿದೆ ಎಂದು ಇವೆರಡು ಪ್ರಯೋಗಗಳಿಂದಲೂ ತಿಳಿಯುತ್ತದೆ. ರಕ್ತಕ್ಕೆ ಸ್ವಲ್ಪ ಪೊಟ್ಯಾಸಿಯಮ್ ಆಕ್ಸಲೇಟ್ ಪುಡಿಯನ್ನೂ (ಇದು ವಿಷ, ಇಂಥ ರಕ್ತವನ್ನು ದೇಹದೊಳಕ್ಕೆ ಪುನಃ ಹುಗಿಸಬಾರದು), ಸೋಡಿಯಮ್ ಸಿಟ್ರೇಟ್ ಪುಡಿಯನ್ನೂ ಸೇರಿಸಿದರೂ ರಕ್ತ ಗರಣೆಕಟ್ಟದೆ ದ್ರವವಾಗಿಯೇ ಇರುತ್ತದೆ. ಈ ಪುಡಿಗಳಿಂದ ರಕ್ತದಲ್ಲಿ ನೈಸರ್ಗಿಕವಾಗಿ ಇರುವ ಕ್ಯಾಲ್ಸಿಯಮ್ ಲವಣಗಳು ಕ್ರಿಯಾವೈಫಲ್ಯಗೊಳ್ಳುವುದರಿಂದ ರಕ್ತ ಗರಣೆ ಕಟ್ಟಲಾರದೆಂದು ತಿಳಿದುಬಂದಿದೆ. ಅಂದರೆ ರಕ್ತ ಹೆಪ್ಪುಗಟ್ಟುವಿಕೆಗೆ (ನೈಸರ್ಗಿಕವಾಗಿ ರಕ್ತದಲ್ಲೆ ಇರುವ) ಕ್ಯಾಲ್ಸಿಯಮ್ ಅಯಾನ್‌ಗಳು ಅಗತ್ಯವೆನ್ನುವುದು ತಿಳಿಯುತ್ತದೆ.

ಪ್ರಯೋಗ: ಒಂದು ತೊಟ್ಟು ರಕ್ತವನ್ನು ಗಾಜಿನ ಫಲಕದ ಮೇಲೆ ಇಟ್ಟು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸುತ್ತಿದ್ದರೆ, ರಕ್ತದ ಕಣಿತ್ರಗಳು ಅಲ್ಲಲ್ಲಿ ಗುಂಪುಗಳಾಗುವುದನ್ನೂ ಶೀಘ್ರದಲ್ಲೇ ಅವು ನಶಿಸುವುದನ್ನೂ ನೋಡಬಹುದು. ಇಂಥ ಸ್ಥಳಗಳಿಂದ ತೆಳುವಾಗಿ ನೆಟ್ಟಗೆ ಸೂಜಿಯಂತಿರುವ ಎಳೆಗಳು ಉದ್ಭವಿಸಿ ಎಲ್ಲ ದಿಕ್ಕಿನಲ್ಲೂ ಚಾಚಿಕೊಳ್ಳುವುದನ್ನೂ ಅವು ನೆರೆಗುಂಪುಗಳಿಂದ ಉದ್ಭವಿಸಿದ ಎಳೆಗಳೊಡನೆ ಸೇರಿಕೊಳ್ಳುವುದನ್ನೂ ಶೀಘ್ರದಲ್ಲೇ ಗಮನಿಸಬಹುದು. ಎಳೆಗಳ ಜಾಲರಿಯಲ್ಲಿ ರಕ್ತಕಣಗಳು ಸಿಕ್ಕಿಕೊಂಡಿರುವುದನ್ನೂ ವೀಕ್ಷಿಸಬಹುದು. ಈ ಸಮಯದಲ್ಲಿ ಗಾಜಿನ ಫಲಕವನ್ನೂ ಅತ್ತಿತ್ತ ಸರಿಸಿದರೆ ರಕ್ತದ ತೊಟ್ಟು ಅಲುಗಾಡದೆ ಗಟ್ಟಿಗೊಂಡುಬಿಟ್ಟಿರುತ್ತದೆ. ಫಲಕವನ್ನು ಇನ್ನೂ 1/2 - 1 ಗಂಟೆ ಹಾಗೆಯೇ ಇಟ್ಟಿದ್ದರೆ ರಕ್ತದ ಹೆಪ್ಪು ಕುಗ್ಗಿ ಸಣ್ಣ ಗಂಟಿನಂತಾಗಿರುವುದೂ ಗಂಟಿನ ಸುತ್ತ ನೀರಿನಂತಿರುವ ದ್ರವ ಒಸರಿರುವುದೂ ಕಾಣಬರುತ್ತದೆ. ಈ ದ್ರವಕ್ಕೆ ರಕ್ತಲಸಿಕೆ (ಸೀರಮ್) ಎಂದು ಹೆಸರು. ಮೇಲಿನ ಪ್ರಯೋಗಕ್ಕೆ ಆಲ್ಕೋಹಾಲಿನಿಂದ ಶುದ್ಧಿಮಾಡಿದ ಬೆರಳನ್ನು ಅದೇ ರೀತಿ ಶುದ್ಧ ಮಾಡಿದ ಸೂಜಿಯಿಂದ ಚುಚ್ಚು ಫಲಕದ ಮೇಲೆ ರಕ್ತದ ತೊಟ್ಟನ್ನು ಪಡೆಯುವುದು ವಾಡಿಕೆ. ಹೀಗೆ ಚುಚ್ಚಿದಾಗ ರಕ್ತ ಹೊರಬಂದಾಗಿನಿಂದ ರಕ್ತದ ಘನೀಕರಣ ಅವಧಿಯನ್ನು (ಕೊಯಾಗ್ಯುಲೇಷನ್ ಟೈಮ್; ಕ್ಲಾಟಿಂಗ್ ಟೈಮ್) ಗೊತ್ತುಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಇದು 4 - 8 ಮಿನಿಟುಗಳು. ಇಷ್ಟಕ್ಕಿಂತ ಕಡಿಮೆ ಅಥವಾ ಹೆಚ್ಚಾಗಿದ್ದರೆ ತೊಂದರೆ ಉಂಟಾಗುತ್ತದೆ. ಕಡಿಮೆ ಆಗಿದ್ದರೆ ದೇಹದ ಒಳಗೇ ರಕ್ತ ಹೆಪ್ಪುಗಟ್ಟಿಕೊಳ್ಳುವ ಸಂಭವದ ಸೂಚನೆ; ಅವಧಿಯನ್ನು ಶಸ್ತ್ರಕ್ರಿಯೆಗೆ ಮುಂಚೆ ನಿರ್ಧಾರಮಾಡಿಕೊಳ್ಳುವುದಿದೆ. ಈ ಅವಧಿಯನ್ನು ನಿರ್ಧರಿಸಲು ಬೇರೆ ಬೇರೆಯ ಹಾಗೂ ನಾಜೂಕಾದ ವಿಧಾನಗಳನ್ನೂ ಅನುಸರಿಸುತ್ತಾರೆ.

೧. ರಕ್ತ ಹೆಪ್ಪುಗಟ್ಟುವುದಕ್ಕೆ ಪ್ರಾಥಮಿಕ ಕಾರಣ ರಕ್ತದ ದ್ರವಭಾಗದಲ್ಲಿ (ಪ್ಲಾಸ್ಮ) ಲೀನವಾಗಿರುವ ಫೈಬ್ರಿನೋಜೆನ್ ಎಂಬ ಪ್ರೋಟೀನು (ಸುಮಾರು 100 ಮಿಲಿ ರಕ್ತದಲ್ಲಿ 0.2 ಗ್ರಾಮ್ ನಷ್ಟಿರುತ್ತದೆ) ಫೈಬ್ರಿನ್ ಎಂಬ, ಲೀನವಾಗದ, ಪ್ರೋಟೀನಾಗಿ ರೂಪಾಂತರಗೊಳ್ಳುವುದು.[೨] ಹೆಪ್ಪುಗಟ್ಟುತ್ತಿರುವುದನ್ನು ಸೂಕ್ಷ್ಮದರ್ಶಕದ ಕೆಳಗೆ ವೀಕ್ಷಿಸುವಾಗ ಕಾಣಬರುವ ಸೂಜಿಯಂಥ ಎಳೆಗಳೇ ಫೈಬ್ರಿನ್. ರಕ್ತ ಗರಣೆಯ ಗಟ್ಟಿಯಲ್ಲಿ ಇದೂ, ರಕ್ತಕಣಗಳೂ (ರಕ್ತದ ರಚಿತವಸ್ತು ಭಾಗ, ಫಾರಮ್ ಎಲಿಮೆಂಟ್ಸ್) ಇರುತ್ತವೆ. ರಕ್ತಲಸಿಕೆ ರಕ್ತದ್ರವದ ಉಳಿದ ಘಟಕಗಳನ್ನು ಹೊಂದಿದ್ದು ಅವೆರಡಕ್ಕೂ ಇರುವ ವ್ಯತ್ಯಾಸ ಎಂದರೆ ರಕ್ತದ್ರವದಲ್ಲಿ ಫೈಬ್ರಿನೋಜೆನ್ ಇರುವುದು. ರಕ್ತಲಸಿಕೆಯಲ್ಲಿ ಅದಿಲ್ಲದಿರುವುದು ಅಷ್ಟೆ. ಗರಣೆ ಕಟ್ಟಲು ಫೈಬ್ರಿನೋಜೆನ್ ಫೈಬ್ರಿನ್ನಾಗಿ ಪರಿವರ್ತಿತವಾಗುವುದೇ ಮುಖ್ಯ ಕಾರಣವಾಗಿರುವುದರಿಂದ ರಕ್ತವಷ್ಟೇ ಅಲ್ಲದೆ ಬರಿ ರಕ್ತದ್ರವ ಕೂಡ ಗರಣೆ ಕಟ್ಟುವುದು ವ್ಯಕ್ತ.

ಇಲ್ಲಿ ಹೇಳಿರುವ ಪರಿವರ್ತನೆಗೆ ಥ್ರಾಂಬಿನ್ ಎಂಬ ಕಿಣ್ವ ಕಾರಣ. ಇದರ ಜನಕ ವಸ್ತು ಪ್ರೋಥ್ರಾಂಬಿನ್ ಎಂಬ ಪ್ರೋಟೀನು ರಕ್ತದಲ್ಲಿ ನೈಸರ್ಗಿಕವಾಗಿ ಆದರೆ, ಕಿಂಚಿತ್ತಾಗಿ (0.03%) ಇರುತ್ತದೆ. ಇದು ಥ್ರಾಂಬಿನ್ನಾಗಿ ಪರಿವರ್ತಿತವಾಗಬೇಕಾದರೆ ಥ್ರಾಂಬೊಪ್ಲಾಸ್ಟಿನ್‌ಗಳು ಮತ್ತು ಕ್ಯಾಲ್ಸಿಯಮ್ ಅಯಾನುಗಳು ಅಗತ್ಯ. ರಕ್ತದಲ್ಲಿ ನೈಸರ್ಗಿಕವಾಗಿ ಕ್ಯಾಲ್ಸಿಯಮ್ ಅಯಾನ್‌ಗಳು ಇರುವುದಾದರೂ ಥ್ರಾಂಬೊಪ್ಲಾಸ್ಟಿನ್‌ಗಳು ಇರುವುದಿಲ್ಲ. ಆದ್ದರಿಂದಲೇ ಪರಿಚಲನೆಯಲ್ಲಿ ರಕ್ತ ಗರಣೆಕಟ್ಟುವುದಿಲ್ಲ. ಗಾಯದಿಂದ ಹೊರಬಂದು ಸ್ಥಳವನ್ನು ಒದ್ದೆ ಮಾಡಿದಾಗ ಕಣಿತ್ರ ಹಾಗೂ ನಶಿಸಿದ ದೇಹಕೋಶಗಳಿಂದ ಥ್ರಾಂಬೊಪ್ಲಾಸ್ಟಿನ್‌ಗಳು ಉದ್ಭವವಾಗುವುದರಿಂದ ಹೊರಬಿದ್ದ ರಕ್ತ ಮಾತ್ರವೇ ಗರಣೆ ಕಟ್ಟಬಲ್ಲದು ಎಂಬುದು ಸ್ವಯಂವೇದ್ಯ.

ರಕ್ತಗರಣೆಯ ಘಟಕಗಳು

[ಬದಲಾಯಿಸಿ]

ಥ್ರಾಂಬೊಪ್ಲಾಸ್ಟಿನ್‌ಗಳಲ್ಲದೆ ರಕ್ತದ್ರವದಲ್ಲಿ, ದೇಹಕೋಶಗಳ ಲಯದಿಂದ ಇನ್ನೂ ಅನೇಕ ವಸ್ತುಗಳು ಬಿಡುಗಡೆಯಾಗುತ್ತವೆ ಮತ್ತು ರಕ್ತಗರಣೆ ಕಟ್ಟಲು ಇವು ಅತ್ಯಾವಶ್ಯಕ ಎಂದು ಬಲು ಹಿಂದಿನ ಕಾಲದ ವ್ಯಾಸಂಗಗಳಿಂದಲೇ ಪತ್ತೆ ಆಗಿದೆ.[೩] ಪತ್ತೆ ಆದ ಹೊಸದರಲ್ಲಿ ವಿವಿಧ ಸಂಶೋಧಕರು ಈ ಘಟಕಗಳಿಗೆ ವಿವಿಧ ಹೆಸರುಗಳನ್ನು ಇಟ್ಟಿದ್ದು ವಿವರಣೆಗಳು ಗೊಂದಲಮಯವಾಗಿದ್ದವು. ಆದ್ದರಿಂದ ಈಚೆಗೆ (1964) ಘನೀಕರಣದಲ್ಲಿ ಭಾಗವಹಿಸಿರುವ ಘಟಕಗಳೆಲ್ಲ ಅನುಕ್ರಮವಾಗಿ ಘಟಕ 1, ಘಟಕ 2, ಇತ್ಯಾದಿ ಹೆಸರಿಡಬೇಕೆಂದು ನಿರ್ಧರಿಸಲಾಗಿದೆ (ಕೊಯಾಗ್ಯುಲೇಷನ್ ಫ್ಯಾಕ್ಟರ್ 1,2 ಇತ್ಯಾದಿ). ಇದರಂತೆ:[೪]

 1. ಫೈಬ್ರಿನೊಜೆನ್ ಘಟಕ 1
 2. ಪ್ರೊಥ್ರಾಂಬಿನ್ ಘಟಕ 2
 3. ಥ್ರಾಂಭೋಪ್ಲಾಸ್ಟಿನ್ ಘಟಕ 3
 4. ಕ್ಯಾಲ್ಸಿಯಮ್ ಅಯಾನ್‌ಗಳ ಘಟಕ 4 ಇವು ಮೊದಲಿನಿಂದಲೂ ಗೊತ್ತಿದ್ದಂತೆ ರಕ್ತ ಘನೀಕರಣದಲ್ಲಿ ಭಾಗವಹಿಸುವ ಘಟಕಗಳು
 5. 5 ನೆಯ ಘಟಕಕ್ಕೆ ಆಕ್ಸಲರಿನ್ (ತ್ವರಿತಗೊಳಿಸುವ ಗ್ಲಾಬ್ಯುಲಿನ್) ಎಂಬುದು ಹಳೆ ಹೆಸರು. ಇದು ರಕ್ತದ್ರವದಲ್ಲಿ ಸಾಮಾನ್ಯವಾಗಿ ಇರುವ ಘಟಕವೇ. ಆದರೆ ಹರಿಯುತ್ತಿರುವ ರಕ್ತದಲ್ಲಿ ಇದು ಜಡಪದಾರ್ಥವಾದ ಪ್ರೊಆಕ್ಸೆಲರಿನ್ ಎಂದಾಗಿತ್ತೆಂದೂ ರಕ್ತ ಘನೀಕರಣ ಸಮಯದಲ್ಲಿ ಚುರುಕುಗೊಂಡು ಆಕ್ಸೆಲರಿನ್ ಆಗುತ್ತೆಂದೂ ಆದ್ದರಿಂದ ಇವೆರಡಕ್ಕೆ ಘಟಕ 5 ಮತ್ತು 6 ಎಂದು ಹೆಸರಿಸಬೇಕೆಂದೂ ಇತ್ತು. ಆದರೆ ಅನಂತರ ರಕ್ತದ್ರವದಲ್ಲಿ ನೈಸರ್ಗಿಕವಾಗಿರುವ 5 ನೆಯ ವಸ್ತುವೇ ಚುರುಕಾಗಿರುವುದೆಂದೂ ಅದೇ 6 ನೆಯ ಘಟಕವಾಗಿ ವರ್ತಿಸುವುದೆಂದೂ ತಿಳಿದುಬಂದು ಪ್ರೊಆಕ್ಸೆಲರಿನ್ ಎಂಬುದೂ 6 ನೆಯ ಘಟಕ ಎಂಬುದು ಕೈಬಿಡಲ್ಪಟ್ಟವು. ಪ್ರಾರಂಭವಾದ ರಕ್ತ ಘನೀಕರಣವನ್ನು 5 ನೆಯ ಘಟಕ ಅತಿತ್ವರಿತವಾಗಿ ಮುಂದುವರಿಯುವಂತೆ ಮಾಡುತ್ತದೆ. ಅಲ್ಲದೆ ಈ ಸಮಯದಲ್ಲಿ ಹೇಗೋ ಬಳಸಲ್ಪಟ್ಟು ಬಿಡುತ್ತದೆ. ಆದ್ದರಿಂದ ಗರಣೆಗಟ್ಟಿಯಲ್ಲಾಗಲಿ ರಕ್ತಲಸಿಕೆಯಲ್ಲಾಗಲಿ ಇದು ಇರುವುದಿಲ್ಲ. ಜೊತೆಗೆ ರಕ್ತವನ್ನು ಬೆಚ್ಚಗೆ ಮಾಡಿದರೆ (560 C) ಇಲ್ಲವೇ ಸಿಟ್ರೇಟ್ ಸೇರಿಸಿ ಶೈತ್ಯದಲ್ಲಿ ಸ್ವಲ್ಪಹೊತ್ತು ಇಟ್ಟಿದ್ದರೆ ತಾನಾಗಿಯೇ ನಾಶವಾಗಿ ಬಿಡುತ್ತದೆ. ಆದ್ದರಿಂದ 5 ನೆಯ ಘಟಕಕ್ಕೆ ಅಸ್ಥಾಯಿಘಟಕ (ಲೆಬೈಲ್ ಫ್ಯಾಕ್ಟರ್) ಎಂದೂ ಹೆಸರಿದೆ. ಹೀಗೆ 5 ನೆಯ ಘಟಕ ನಾಶವಾಗಿರುವ ರಕ್ತ ಗರಣೆ ಕಟ್ಟದು. ಆದರೆ ಇದಕ್ಕೆ ತೀರ ಕೊಂಚವೇ ಹೊಸ ರಕ್ತವನ್ನು ಬೆರಸಿದರೆ, ಅರ್ಥಾತ್, ಲವಲೇಶದಷ್ಟು 5 ನೆಯ ಘಟಕವನ್ನು ಸೇರಿಸಿದರೆ ಇದೂ ಮಾಮೂಲಿನಂತೆ ಹೆಪ್ಪುಗಟ್ಟಬಲ್ಲದು.
 6. 7 ನೆಯ ಘಟಕದ ಮೂಲ ಹೆಸರು ಪ್ರೊಕನ್‌ವರ್ಟಿನ್, ಎಸ್, ಪಿ, ಸಿ. ಎ., ಸಾಕ್ಷಾತ್ ಕನ್‌ವರ್‌ಟಿನ್ ಎಂದೆಲ್ಲ ವ್ಯವಹರಿಸುವುದಿತ್ತು. ಇದೂ ರಕ್ತದ್ರವದಲ್ಲಿರುವ ಆದರೆ ಸ್ಥಿರವಾದ (ಸ್ಟ್ರಾಬಲ್) ಘಟಕ.
 7. 8 ನೆಯ ಘಟಕವೆಂದರೆ ಆಂಟಿ ಹೀಮೋಫೀಲಿಕ್ ಗ್ಲಾಬ್ಯುಲಿನ್ (ಹೀಮೋಫೀಲಿಯ ರೋಗನಿವಾರಕ ಗ್ಲಾಬ್ಯುಲಿನ್; ಎ. ಎಚ್. ಜಿ.) ಎಂಬ ಪ್ರೋಟಿನ್ ವಸ್ತು. ಇದು ರಕ್ತದ್ರವದಲ್ಲಿ ಸಹಜವಾಗಿ ಇರುತ್ತದೆ. ಆದರೆ ಹೀಮೋಫೀಲಿಯ ರೋಗಿಗಳಲ್ಲಿ ಇದು ಒಂದು ವಿಶಿಷ್ಟ ರೀತಿಯ ಅನುವಂಶಿಕ ಗುಣವಾಗಿ ಆ ಜನ್ಮಲೋಪವಾಗಿರುತ್ತದೆ. ಆದ್ದರಿಂದ ಇವರ ರಕ್ತಘನೀಕರಿಸಲಾರದೆ ಅಲ್ಪ ಗಾಯಗಳಿಂದಲೂ ಅಗಾಧವಾಗಿ ಹೆಚ್ಚು ಕಾಲ ರಕ್ತಸ್ರಾವವಾಗುತ್ತಲೇ ಇರುತ್ತದೆ. ಸಹಜವಾಗಿ ಇರಬೇಕಾದ ಈ ಘಟಕ ಇದ್ದದ್ದೇ ಅದರ ವ್ಯಕ್ತಿ ಹೀಮೋಫೀಲಿಯಕ್ಕೆ ಈಡಾಗುವುದಿಲ್ಲವಾದ್ದರಿಂದ ಇದಕ್ಕ ಎ. ಚ್. ಜಿ. ಎಂದು ಹೆಸರಿಸಿದ್ದಾಗಿದೆ. ಇದೂ 5 ನೆಯ ಘಟಕದಂತೆ ರಕ್ತಗರಣೆ ಕಟ್ಟಿದಾಗ ನಾಶವಾಗಿ ಹೋಗುತ್ತದೆ. ಆದ್ದರಿಂದ ಘನೀಕರಣಾನಂತರ ವಸ್ತುಗಳಲ್ಲಿ ಇದು ಇರುವುದಿಲ್ಲ.
 8. 9 ನೆಯ ಘಟಕಕ್ಕೆ ಕ್ರಿಸ್‌ಮಸ್ ಫ್ಯಾಕ್ಟರ್ ಎಂಬ ಹೆಸರಿತ್ತು. ಕ್ರಿಸ್‌ಮಸ್ ಎಂಬ ವ್ಯಕ್ತಿಯಲ್ಲಿ ಈ ಘಟಕ ಹೇಗೋ ಲೋಪವಾಗಿದ್ದು ಹೀಮೋಫೀಲಿಯದಂಥ ರೋಗದ (ಆದರೆ ನಿಜವಾಗಿ ಹೀಮೋಫೀಲಿಯ ಅಲ್ಲದೆ) ಕಾರಣವಾಗಿದ್ದುದೆಂದು ತಿಳಿದು ಬಂದು ಈ ಘಟಕಕ್ಕೆ ಸ್ಟೂವರ್ಟ್‌ಪ್ರೋವರ್ ಫ್ಯಾಕ್ಟರ್ ಎಂದು ಹೆಸರಿತ್ತು. ಹೀಗೆಯೇ 11, 12, 13, 14ನೆಯ ಘಟಕಗಳ ಆವಿಷ್ಕಾರವೂ ಆಗಿದೆ. ಇವುಗಳೆಲ್ಲ ಪ್ರೊಥ್ರಾಂಬಿನ್ - ಥ್ರಾಂಬೊಪ್ಲಾಸ್ಟಿನ್‌ಗಳನ್ನು ಚುರುಕುಗೊಳಿಸಿ ರಕ್ತ ಬೇಗ ಗರಣೆಗಟ್ಟುವಂತೆ ಮಾಡುವುವು.

5 ನೆಯ ಮತ್ತು 8 ನೆಯ ಘಟಕಗಳನ್ನು ಬಿಟ್ಟು ಮಿಕ್ಕೆಲ್ಲವೂಗರಣೆಯಲ್ಲೊ ರಕ್ತಲಸಿಕೆಯಲ್ಲೋ ಇದ್ದೆ ಇರುವುದರಿಂದ ಅವುಗಳೆಲ್ಲ ಕಿಣ್ವಗಳಂತೆ ವರ್ತಿಸುತ್ತವೆ ಎಂದು ನಿರ್ಧರಿಸಲಾಗಿದೆ. ಒಂದು ಘಟಕ ಇನ್ನೊಂದು ಘಟಕದೊಡನೆ (ಘಟಕದ ಅಂಕಿಗೆ ಅನುಸಾರವಾಗಿ ಅಲ್ಲ) ಒಂದು ಕ್ರಮ ಅನುಸರಿಸಿ ವರ್ತಿಸುತ್ತದೆ. ಇದರಿಂದ ಹೊಸ ವಸ್ತು ಕ್ಷಣಿಕವಾಗಿ ಉತ್ಪನ್ನವಾಗಿ ಅದು ಮತ್ತೊಂದು ಘಟಕದೊಡನೆ ಕ್ರಮಶಃ ವರ್ತಿಸುತ್ತದೆ. ಕೊನೆಗೊ ಥ್ರಾಂಬೊಪ್ಲಾಸ್ಟಿನ್ ಚುರುಕಾಗಿ (ಇದಕ್ಕೆ ಹಲವು ಸೆಕೆಂಡುಗಳು, ಗರಿಷ್ಠ 2 - 3 ಮಿನಿಟುಗಳು ಬೇಕು) ಪ್ರೊಥ್ರಾಂಬಿನನ್ನು ಥ್ರಾಂಬಿನ್ನಾಗಿ ಪರಿವರ್ತಿಸುತ್ತದೆ. ಕೂಡಲೇ ಇದ ಫೈಬ್ರಿನೊಜೆನ್ನನ್ನು ಫೈಬ್ರಿನ್ನಾಗಿ ಮಾಡಿ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಇವೆಲ್ಲ ಒಟ್ಟು 4 - 6 ಮಿನಿಟುಗಳಲ್ಲಿ ಮುಗಿಯುವ ಕ್ರಿಯೆ. ಕಣಿತ್ರದ ಲಯದ ಫಲವಾದ ಥ್ರಾಂಬೊಪ್ಲಾಸ್ಟಿನ್ನಿನ ಚುರುಕುಗೊಳಿಕೆಗೆ 7ನೆಯ ಘಟಕ ಬಿಟ್ಟು ಮಿಕ್ಕೆಲ್ಲವೂ ಅಗತ್ಯವೆಂದೂ ಸಾಮಾನ್ಯ ಕೋಶಲಯದ ಫಲವಾದ ಥ್ರಾಂಬೊಪ್ಲಾಸ್ಟಿನ್ನಿನ ಚುರುಕುಗೊಳಿಕೆಗೆ 8 ಮತ್ತು 9 ನೆಯ ಘಟಕಗಳು ಬೇಕಿಲ್ಲವೆಂದೂ ತಿಳಿದಿದೆ. ಥ್ರಾಂಬೊಪ್ಲಾಸ್ಟಿನ್ನಿನ ಈ ಸಕ್ರಮ ಚುರುಕುಗೊಳಿಕೆಯ ಕೆಲವು ಹಂತಗಳಲ್ಲಿ ಕ್ಯಾಲ್ಸಿಯಮ್ ಅಯಾನುಗಳ ಅಗತ್ಯವಿದೆ ಎಂದೂ ವ್ಯಕ್ತವಾಗಿದೆ.

ರಕ್ತ ಘನೀಕರಣದಿಂದ ಉದ್ಭವಿಸುವ ರೋಗಗಳು

[ಬದಲಾಯಿಸಿ]

ವಿವಿಧ ಘಟಕಗಳ ಕೊರತೆಯಿಂದಾಗಿ ರಕ್ತ ಗರಣೆ ಕಟ್ಟುವುದು ತಡವಾಗಬಹುದು. ಗರಣೆ ಕಟ್ಟದೆ ಹೋಗಬಹುದು. ಇದರ ಪರಿಣಾಮ ರಕ್ತಸ್ರಾವವಾದಾಗ (ರಕ್ತ ಹೆಪ್ಪುಗಟ್ಟಿ ಸ್ರಾವ ನಿಂತುಕೊಳ್ಳುವುದು ಸಾಧ್ಯವಾಗದೆ) ಅದು ಹೆಚ್ಚು ಹೊತ್ತು ಮುಂದುವರಿಯುತ್ತದೆ. ಕೊರತೆ ಘಟಕಗಳನ್ನು ಪೂರೈಕೆಮಾಡಿ ಇವುಗಳನ್ನು ಚಿಕಿತ್ಸಿಸಬೇಕು. ಹೀಮೋಫೀಲಿಯ ಮತ್ತು ಕ್ರಿಸ್‌ಮಸ್ ರೋಗಗಳ ವಿಚಾರ ಈ ಹಿಂದೆ ಹೇಳಿದೆ. ಪರ್‌ಪ್ಯುರ ಎಂಬುದು ಇನ್ನೊಂದು ರೋಗ. ಇದರಲ್ಲಿ ರಕ್ತದ ಕಣಿತ್ರಗಳು ಅತಿ ಕಡಿಮೆ ಸಂಖ್ಯೆಯಲ್ಲಿ (ಒಂದು ಘನಮಿಮೀ ರಕ್ತದಲ್ಲಿ 1 ಲಕ್ಷಕ್ಕೂ ಕಡಿಮೆ) ಇರುತ್ತದೆ.[೫] ಆದ್ದರಿಂದ ಲೋಮನಾಳಗಳ ನಿರಂತರವಾದ ಮಾಮೂಲು ಜಖಮ್ಮಿನಲ್ಲಿ ಕಿಂಚಿತ್ತಾಗಿ ಒಸರಬಹುದಾದ ರಕ್ತ ವ್ಯರ್ಥವಾಗುವಷ್ಟು ಹೊರಬರುತ್ತದೆ. ಲೋಮನಾಳಗಳಿಂದಲೇ ಆಗುವ ಈ ರಕ್ತಸ್ರಾವ ಎಷ್ಟೆಂದರೂ ಕಡಿಮೆಯೇ ಆಗಿದ್ದು ಮುಖ್ಯವಾಗಿ ಚರ್ಮದ ಅಡಿಯಲ್ಲಿ ನೀಲಿ, ಹಸುರು ಮುಂತಾದ ಬಣ್ಣದ ಮಚ್ಚೆಗಳಾದಂತೆ ಕಾಣಿಸುತ್ತದೆ. ರಕ್ತಕಣಿತ್ರಗಳ ಪೂರೈಕೆಯಿಂದ ಪರ್‌ಪ್ಯುರವನ್ನು ಚಿಕಿತ್ಸಿಸುವುದಿದೆ.

ಕಾರಣಾಂತರಗಳಿಂದ ಪ್ರೋಥ್ರಾಂಬಿನ್ ಕೊರತೆ ತಲೆದೋರುವ ಸ್ಥಿತಿಗಳನ್ನು ವಿಶಿಷ್ಟವಾಗಿ ಗಮನಿಸಬೇಕು. ಸ್ವಾಭಾವಿಕವಾಗಿ ಪ್ರೋಥ್ರಾಂಬಿನ್ ಯಕೃತ್ತಿನಲ್ಲಿ ಉತ್ಪತ್ತಿ ಆಗುವ ಪ್ರೋಟೀನು. ಆದರೆ ಈ ಕ್ರಿಯೆಗೆ K ವೈಟಮಿನ್ನು ಅತ್ಯಗತ್ಯ. K ವೈಟಮಿನ್ನಿನ ಅಭಾವದಿಂದ ಪ್ರೋಥ್ರಾಂಬಿನ್ನಿನ ಉತ್ಪತ್ತಿಗೆ ಧಕ್ಕೆಯಾಗಿ, ರಕ್ತ ಘನೀಕರಿಸಲಾರದೆ ಗಾಯದಿಂದ ಅತಿಯಾಗಿ ರಕ್ತಸ್ರಾವವಾಗುವುದಿದೆ. ರಕ್ತ ನ್ಯೂನ್ಯತೆಯಿಂದ ಸಾಮಾನ್ಯವಾಗಿ K ವೈಟಮಿನ್ನಿನ ಕೊರತೆ ಉಂಟಾಗುವುದು ಅಪರೂಪವಾದರೂ ಕಾಮಾಲೆ ರೋಗದಲ್ಲಿ ಈ ಕೊರತೆ ಉಂಟಾಗುವುದು ಸಾಮಾನ್ಯ. ಏಕೆಂದರೆ ಅನೇಕ ಸಂದರ್ಭಗಳಲ್ಲಿ ಕಾಮಾಲೆ ರೋಗದಲ್ಲಿ ಪಿತ್ತರಸ ಕರುಳನ್ನು ಸೇರಲಾರದು. ಪಿತ್ತರಸದ ಅಭಾವಸ್ಥಿತಿಯಲ್ಲಿ ಆಹಾರದಲ್ಲಿರುವ K ವೈಟಮಿನ್ನು ಕರುಳಿನಲ್ಲಿ ರಕ್ತಗತವೇ ಆಗುವುದಿಲ್ಲ. ತತ್ಫಲವಾಗಿ ವೈಟಮಿನ್ ಕೊರತೆ, ಪ್ರೊಥ್ರಾಂಬಿನ್ ಕೊರತೆ ಹಾಗೂ ರಕ್ತ ಘನೀಕರಣದ ಎಡವಟ್ಟುಗಳು ಕಂಡುಬರುತ್ತವೆ.

ಅಪರೂಪವಾಗಿ ರಕ್ತ ಮಾಮೂಲಿಗಿಂತ ಬಲು ಬೇಗನೇ ಗರಣೆ ಕಟ್ಟಿಕೊಳ್ಳುವ ಸ್ವಭಾವದ್ದಾಗಿ ಇರುವ ಸಂಭವವೂ ವ್ಯಕ್ತ. ಹೀಗಿದ್ದಾಗ ಹೃದಯ ಹಾಗೂ ರಕ್ತನಾಳಗಳ ಒಳಗೇ ರಕ್ತ ಗರಣೆ ಕಟ್ಟಿಕೊಳ್ಳಬಹುದು. ಆಗ ರಕ್ತಪರಿಚಲನೆಗೆ ಅಡ್ಡಿಯಾಗಿ ಅಂಗಾಂಗಗಳ ರಕ್ತಪೂರೈಕೆಗೆ ಧಕ್ಕೆಯಾಗುತ್ತದೆ. ಗರಣೆಯ ಒಂದು ತುಣುಕು ರಕ್ತಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ದೇಹದಲ್ಲಿ ಎಲ್ಲಿಯೋ ಕಿರಿ ಅಪಧಮನಿ ಒಂದರಲ್ಲಿ ಸಿಕ್ಕಿಕೊಂಡು ಅಲ್ಲಿಂದ ಮುಂದೆ ಹೋಗಲಾರದೆ ಆ ಅಪಧಮನಿಯಲ್ಲಿ ರಕ್ತ ಹೋಗದಂತೆ ತಡೆದುಬಿಡಬಹುದು. ಹೃದಯದಲ್ಲಿ ಈ ರೀತಿ ಆದರೆ ಹೃದಯಾಘಾತವಾಗುತ್ತದೆ.[೬] ಮಿದುಳಿನಲ್ಲಿ ಈ ರೀತಿ ಆದರೆ ಪಕ್ಷಾಘಾತ ತಲೆದೋರುತ್ತದೆ. ಈ ಸ್ಥಿತಿಗಳು ಮಾರಕವೂ ಆಗುವ ಸಂಭವ ಗಣನೀಯವಾಗಿಯೇ ಇದೆ. ಬೇರೆ ಸ್ಥಳಗಳಲ್ಲೂ ಇಂಥ ಅಡಚಣೆಯಿಂದ ರಕ್ತಪೂರೈಕೆ ಆಗದ ಭಾಗ ಮೃತಿಹೊಂದುವುದು ವ್ಯಕ್ತ. ಈ ಪ್ರಮೇಯವನ್ನು ತಪ್ಪಿಸಬೇಕಾದರೆ ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯವನ್ನೇ ತಡೆಗಟ್ಟಬಹುದು. ಇದಕ್ಕಾಗಿ ಕ್ಯಾಲ್ಸಿಯಮ್ ಸಿಟ್ರೇಟನ್ನು ಔಷಧವಾಗಿ ಬಳಸುವುದಿದೆ. ಹೆಪಾರಿನ್ ಎಂಬ ರಾಸಾಯನಿಕ ಇನ್ನೊಂದು ಈ ಬಗೆಯದು.[೭] ಇದನ್ನು ಚುಚ್ಚುಮದ್ದಾಗಿ ಕೊಡಬೇಕಾಗುತ್ತದೆ.[೮] ಇದು ದೇಹದ ಅನೇಕ ಅಂಗಗಳಲ್ಲಿರುವ, ಬಹುಶಃ ರಕ್ತದಲ್ಲೂ ಇರುವ ಮಾಸ್ಟ್ ಕೋಶಗಳಲ್ಲಿ ಉತ್ಪತ್ತಿ ಆಗುತ್ತಿದ್ದು[೯] ಕಿಂಚಿತ್ತಾಗಿ ರಕ್ತಕ್ಕೆ ಬಿಡುಗಡೆ ಆಗುತ್ತಿರುವ ರಾಸಾಯನಿಕ. ಕಾರಣಾಂತರಗಳಿಂದ ಪರಿಚಲಿಸುತ್ತಿರುವ ರಕ್ತದಲ್ಲಿ ಅಕಸ್ಮಾತ್ತಾಗಿ ಕೊಂಚ ಥ್ರಾಂಬಿನ್ ಉತ್ಪತ್ತಿ ಆಗಬಹುದು. ಆಗ ಅಲ್ಲೇ ರಕ್ತ ಗರಣೆ ಕಟ್ಟಿಕೊಳ್ಳುವುದನ್ನು ಈ ಹೆಪಾರಿನ್ ಬಹುಶಃ ತಪ್ಪಿಸುತ್ತದೆ. ಅರ್ಥಾತ್, ದೇಹದಲ್ಲಿ ಸ್ವಾಭಾವಿಕವಾಗಿ ರಕ್ತಗರಣೆ ಕಟ್ಟಿಕೊಳ್ಳದಂತೆ ತಡೆದು, ಪರಿಚಲಿಸುತ್ತಿರುವ ಅನುಕೂಲವಾಗುವಂತೆ ಅದನ್ನು ದ್ರವರೂಪದಲ್ಲೇ ಇರುವಂತೆ ಕಾಪಾಡಲು ಹೆಪಾರಿನ್ನೂ ಬಹುಶಃ ಒಂದು ಕಾರಣ. ಪರಿಚಲನೆಯಲ್ಲಿ ರಕ್ತ ಗರಣೆಕಟ್ಟಕೊಂಡು ಮಾರಕವೇ ಆಗಬಹುದಾದ ತೊಂದರೆಯನ್ನೂ ನಿವಾರಿಸಲು ಬಳಸುವ ಇನ್ನೊಂದು ಔಷಧ ಡೈಕೊಮಾರಿನ್ ಎಂಬುದು. ಕೆಟ್ಟುಹೋದ ಹಸುರು ಮೇವಿನಿಂದ ಈ ವಸ್ತುವನ್ನು ಮೊದಲು ಬೇರ್ಪಡಿಸಿದ್ದು ಅನಂತರ ಇದನ್ನು ಸಂಯೋಜಿಸಲಾಗಿದೆ. ಇದನ್ನು ಕೊಟ್ಟಾಗ ದೇಹದಲ್ಲಿ ಪ್ರೊಥ್ರಾಂಬಿನ್ನಿನ ಉತ್ಪತ್ತಿ ಸ್ಥಗಿತವಾಗಿ ಥ್ರಾಂಬಿನ್ನಿನ ಉತ್ಪತ್ತಿ ತತ್ಫಲವಾಗಿ ಸ್ಥಗಿತವಾಗಿ ರಕ್ತ ಗರಣೆ ಕಟ್ಟದಂತೆ ಆಗುತ್ತದೆ. ಪ್ರೊಥ್ರಾಂಬಿನ್ನಿನ ಉತ್ಪತ್ತಿ K ವೈಟಮಿನ್ನಿನಿಂದ ಪ್ರಚೋದಿತವಾದುದು ಎಂದು ಹಿಂದೆ ಹೇಳಿದೆ. ಡೈಕೊಮಾರಿನನ್ನು ಕೊಟ್ಟಾಗ ಅದು K ವೈಟಮಿನ್ನಿಗೆ ಪ್ರತಿರೋಧಿಯಾಗಿ ವರ್ತಿಸಿ ಪ್ರೊಥ್ರಾಂಬಿನ್ನು ಉತ್ಪತ್ತಿ ಆಗದಂತೆ ಮಾಡುತ್ತದೆ. ಅಧಿಕ ಪ್ರಮಾಣದಲ್ಲಿ K ವೈಟಮಿನನ್ನು ಕೊಟ್ಟು ಡೈಕೊಮಾರಿನ್ನಿನ ಕ್ರಿಯೆ ಅನಾವಶ್ಯಕವಾದಾಗ ತಡೆಗಟ್ಟಬಹುದು.

ರಕ್ತಸ್ರಾವವಾದಾಗ ಅದು ಘನೀಕರಿಸುವ ಕಾರ್ಯಕ್ರಮಕ್ಕೆ ವಿರುದ್ಧವಾಗಿ ರಕ್ತ ಹೃದಯ, ರಕ್ತನಾಳಗಳಲ್ಲಿ ಇರುವಾಗ ಅದು ಘನೀಕರಿಸದಂಥ ಕಾರ್ಯಕ್ರಮವನ್ನು ಹೆಪಾರಿನ್ ಒದಗಿಸುತ್ತದೆ. ಇದರಿಂದ ವ್ಯಕ್ತಿಯ ಜೀವಿತಕಾಲದಲ್ಲಿ ಬಹುಶಃ ಇವೆರಡು ಕಾರ್ಯಕ್ರಮಗಳೂ ಒಂದಕ್ಕೆ ಅನುಗುಣವಾಗಿ ಇನ್ನೊಂದು ಜರುಗುತ್ತಿರುತ್ತದೆ. ಒಟ್ಟಿನಲ್ಲಿ ಪರಿಚಲಿಸುವ ರಕ್ತ ನಿರಂತವಾಗಿ ದ್ರವರೂಪದಲ್ಲಿ ಇರುವಂಥ ನೈಸರ್ಗಿಕ ಏರ್ಪಾಡಿದೆ ಎಂದು ಹೇಳಲಾಗಿದೆ. ಹಾಗೂ ಗರಣೆಕಟ್ಟಿದರೆ ಆ ಗರಣೆಯನ್ನು ಕರಗಿಸಿ ಪುನಃ ಅದನ್ನು ದ್ರವವನ್ನಾಗಿ ಮಾಡುವ ಕಾರ್ಯಕ್ಕೆ ಲೈಸಿನ್ ಎಂದು ಹೆಸರು. ಆದರೆ ಪರಿಚಲಿಸುತ್ತಿರುವ ರಕ್ತದಲ್ಲಿ ಇದು ಇರುವುದಿಲ್ಲವೆಂಬುದು ವ್ಯಕ್ತ. ಕಾರಣ ಹಾಗಿದಿದ್ದೇ ಆಗಿದ್ದರೆ ಗರಣೆ ಕಟ್ಟುವಿಕೆಯಿಂದ ರಕ್ತಸ್ರಾವ ಕೊಂಚವೇ ಕಾಲ ನಿಂತಿದ್ದು ಪುನಃ, ಬಹುಶಃ ಪೂರಕವಾಗಿ ರಕ್ತಸ್ರಾವ ಪ್ರಾರಂಭವಾಗಿ ಬಿಡುತ್ತಿತ್ತು. ಆದ್ದರಿಂದ ಥ್ರಾಂಬಿನ್ನಿನ ವಿಷಯದಲ್ಲಿ ಹೇಗೋ ಹಾಗೆಯೇ ಫೈಬ್ರಿನೊಲೈಸಿನ್ ಕೂಡ ಅಗತ್ಯವಾದಾಗ ಮಾತ್ರ ಉದ್ಭವಿಸುತ್ತದೆ. ಫೈಬ್ರಿನೋಲೈಸಿನ್ನಿನ ಜನಕವಸ್ತು ಪ್ರೋಫೈಬ್ರಿನೊಲೈಸಿನ್ ಅಥವಾ ಪ್ಲಾಸ್ಮಿನೋಜೆನ್ ಎಂಬುದು ರಕ್ತದ್ರವದಲ್ಲಿ ನೈಸರ್ಗಿಕವಾಗಿಯೇ ಇರುವ ವಸ್ತು. ಇದು ಜಡ ಗರಣೆಯನ್ನು ತಾನೇ ಕರಗಿಸಲಾರದು. ಅದರ ಫೈಬ್ರಿನೋಕೈನೇಸ್ ಅಥವಾ ಪ್ಲಾಸ್ಮೊಕೈನೇಸ್ ಎಂಬ ಕಿಣ್ವದಿಂದ ಅದು ಫೈಬ್ರಿನೊಲೈಸಿನ್ ಆಗಿ ಪರಿವರ್ತಿತವಾಗುತ್ತದೆ. ತನ್ನ ಸರದಿಯಲ್ಲಿ ಇದು ರಕ್ತಗರಣೆಯನ್ನು ದ್ರವೀಕರಿಸುತ್ತದೆ. ಥ್ರಾಂಬಿನ್ನು ಆಕಸ್ಮಾತ್ತಾಗಿ ಕಿಂಚಿತ್ ಪ್ರಮಾಣದಲ್ಲಿ ಪರಿಚಲಿಸುತ್ತಿರುವ ರಕ್ತದಲ್ಲಿ ಉತ್ಪತ್ತಿ ಆಗುವಂತೆ ಪ್ಲಾಸ್ಮಿನ್ನೂ ಉತ್ಪತ್ತಿ ಆಗುತ್ತದೆ ಮತ್ತು ಥ್ರಾಂಬಿನ್ನಿಗೆ ವಿರೋಧವಾಗಿ ವರ್ತಿಸುತ್ತದೆ. ಇವೆರಡರ ಈ ಪರಸ್ಪರ ವಿರೋಧವೂ ರಕ್ತ ಪರಿಚಲನೆ ವ್ಯೂಹದಲ್ಲಿ ದ್ರವರೂಪದಲ್ಲಿ ಇರುವುದಕ್ಕೆ ಇನ್ನೊಂದು ಕಾರಣ ಎನಿಸಿದೆ. ರಕ್ತಸ್ರಾವವಾದಾಗ ಅಗಾಧ ಪ್ರಮಾಣದಲ್ಲಿ ಥ್ರಾಂಬಿನ್ನಿನ ಉತ್ಪತ್ತಿ ಆಗುವುದರಿಂದ ಅದು ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ಹೆಪಾರಿನ್ನಾಗಲಿ ಪ್ಲಾಸ್ಮಿನ್ನಾಗಲಿ ತಡೆಯಲಾರವು.

ಉಲ್ಲೇಖಗಳು

[ಬದಲಾಯಿಸಿ]
 1. Bloom, A. L. (1990). "Physiology of blood coagulation". Haemostasis. 20 (Suppl 1): 14–29. doi:10.1159/000216159. ISSN 0301-0147. PMID 2083865. Archived from the original on 2 August 2022. Retrieved 15 October 2023.
 2. Weisel, John W.; Litvinov, Rustem I. (2017). "Fibrin Formation, Structure and Properties". Fibrous Proteins: Structures and Mechanisms. Subcellular Biochemistry. Vol. 82. pp. 405–456. doi:10.1007/978-3-319-49674-0_13. ISBN 978-3-319-49672-6. ISSN 0306-0225. PMC 5536120. PMID 28101869.
 3. Michelson, Alan D. (2006). Platelets (2nd ed.). Elsevier. pp. 3–5. ISBN 978-0-08-046586-9. OCLC 909782638. Archived from the original on 10 May 2017. Retrieved 8 February 2022.
 4.  This article incorporates text available under the CC BY 4.0 license. Betts, J Gordon; Desaix, Peter; Johnson, Eddie; Johnson, Jody E; Korol, Oksana; Kruse, Dean; Poe, Brandon; Wise, James; Womble, Mark D; Young, Kelly A (July 28, 2023). Anatomy & Physiology. Houston: OpenStax CNX. 18.5 Homeostasis. ISBN 978-1-947172-04-3.
 5. "UCSF Purpura Module" (PDF). Archived from the original (PDF) on 2013-10-02.
 6. Marieb, Elaina N. Human Anatomy and Physiology (11th ed.). Pearson.
 7. "Venous thromboembolism (VTE) | McMaster Pathophysiology Review". www.pathophys.org (in ಅಮೆರಿಕನ್ ಇಂಗ್ಲಿಷ್). 26 September 2012. Retrieved 2018-11-03.
 8. "Heparin Sodium". The American Society of Health-System Pharmacists. Archived from the original on 27 January 2016. Retrieved 1 January 2016.
 9. Guyton AC, Hall JE (2006). Textbook of Medical Physiology. Elsevier Saunders. p. 464. ISBN 978-0-7216-0240-0.

ಹೆಚ್ಚಿನ ಓದಿಗೆ

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: