ಉಪ್ಪು ನೇರಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mulberry
Morus nigra
Scientific classification
Kingdom:
(unranked):
(unranked):
Eudicots
(unranked):
Order:
Family:
Tribe:
Genus:
Morus

Species

See text.

ಉಪ್ಪು ನೇರಳೆ: ಮೊರೇಸಿ ಕುಟುಂಬದ ಒಂದು ಜಾತಿ (ಜೀನಸ್) (ಮೊರಸ್ ಇಂಡಿಕ). ಹಿಪ್ಪು ನೇರಳೆ ಎಂಬ ಹೆಸರೂ ಬಳಕೆಯಲ್ಲಿದೆ. ಮರ ಅಥವಾ ಪೊದೆಸಸ್ಯವಾಗಿ ಉಷ್ಣವಲಯ ಹಾಗು ಸಮಶೀತೋಷ್ಣವಲಯದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಇವುಗಳಲ್ಲಿ ಕೆಲವುಗಳ ಎಲೆಯನ್ನು ರೇಷ್ಮೆ ಹುಳುಗಳಿಗೆ ಆಹಾರವಾಗಿ ಹಾಕುತ್ತಾರೆ. ಕೆಲವನ್ನು ಹಣ್ಣಿಗಾಗಿ ಅಥವಾ ಮರಮುಟ್ಟಿಗಾಗಿ ಬೆಳೆಸುತ್ತಾರೆ. ರೇಷ್ಮೆ ವ್ಯವಸಾಯದಲ್ಲಿ ಬಳಕೆಯಲ್ಲಿರುವ ಈ ಸಸ್ಯಜಾತಿಗಳಲ್ಲಿ ಅನೇಕವು ಜಪಾನ್ ಮತ್ತು ಚೀನದಿಂದ ಬಂದವು. ಉಪ್ಪುನೇರಳೆ ಪ್ರತಿ ವರ್ಷ ಎಲೆ ಉದುರುವ ಜಾತಿಗೆ ಸೇರಿದ ಗಿಡ ಅಥವಾ ಪೊದೆ, ಭಾರತದಲ್ಲಿ ಹಿಮಾಲಯ ತಪ್ಪಲಿನಲ್ಲಿ 7,000 ಎತ್ತರದ ಪ್ರದೇಶದಿಂದ ಹಿಡಿದು ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಅಸ್ಸಾಂ, ದಕ್ಷಿಣ ಭಾರತದಲ್ಲಿ ಕರ್ನಾಟಕ ಮುಂತಾದೆಡೆ ಇದರ ಕೃಷಿ ಬಳಕೆಯಲ್ಲಿದೆ. ರಸ್ತೆ ಅಂಚಿನಲ್ಲಿ ಅಲಂಕಾರಕ್ಕಾಗಿ ದೇಶದ ಎಲ್ಲ ಭಾಗಗಳಲ್ಲೂ ಬೆಳೆಸುತ್ತಾರೆ. ತೀವ್ರ ಚಳಿಯನ್ನು ಇದು ಸಹಿಸಬಲ್ಲದು. ಆದರೆ ಬಿರುಗಾಳಿಯ ಅವಾಂತರ ತಡೆಯಲಾರದು. ಭಾರತದಲ್ಲಿ ಉಪ್ಪು ನೇರಳೆ ಬೆಳೆಯ ವಿಸ್ತೀರ್ಣ ಸುಮಾರು 2 ಲಕ್ಷ ಎಕರೆಗಳು. ಇದರ 90%ರಷ್ಟು ಭಾಗ ಮೈಸೂರಿನಲ್ಲಿದೆ. ಇದು ಬಹುವಾಗಿ ಹೊಲದ ಬೆಳೆ. ಗಿಡಗಳಿಂದ ವರ್ಷಕ್ಕೆ ಎರಡು ಮೂರುಬಾರಿ ಸೊಪ್ಪನ್ನು ಕೊಯ್ದು ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸುತ್ತಾರೆ.

Mulberry fruit in Libya

ಮಣ್ಣು ಮತ್ತು ಹವಾಗುಣ[ಬದಲಾಯಿಸಿ]

ಉಪ್ಪುನೇರಳೆ ಬೆಳೆಯನ್ನು ನೀರು ನಿಲ್ಲದೆ ಬಸಿಯುವ ಎಲ್ಲ ಭೂಮಿಗಳಲ್ಲೂ ತೆಗೆಯುವುದು ಸಾಧ್ಯ. ಜೌಗು ಭೂಮಿಗಳಲ್ಲಿ ಬೆಳೆಬರುವುದಿಲ್ಲ. ಮರಳುಭೂಮಿ, ಗೋಡು ನೆಲ ಇಲ್ಲವೇ ಎರೆಭೂಮಿ ಮುಂತಾದ ಯಾವುದೇ ಮಣ್ಣಿನ ಪರಿಸ್ಥಿತಿಯಲ್ಲೂ ಬರುತ್ತದೆ. ಮಳೆ ಚೆನ್ನಾಗಿ ವರ್ಷವೆಲ್ಲ ಸುರಿದರೆ ಅನುಕೂಲ. ಇಲ್ಲದಿದ್ದಲ್ಲಿ ನೀರು ಹಾಯಿಸುವುದು ಅವಶ್ಯಕ. ಮುಖ್ಯ ಮಳೆಗಳೆಲ್ಲವೂ ಮುಗಿದ ಅನಂತರ ನೆಲ ಅಗೆತ ಮಾಡಿಯೊ ಇಲ್ಲವೆ ಉತ್ತೊ 12"-18" ಆಳದವರೆಗಗೆ ಸಡಿಲ ಮಾಡಬೇಕು. ಹೆಂಟೆಗಳನ್ನು ಪುಡಿಮಾಡಿ ಭೂಮಿಯ ಹದ ಕುದುರಿಸಬೇಕು. ಈ ಸಮಯದಲ್ಲಿ ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಸೇರಿಸಬಹುದು. ಹೆಚ್ಚಿಗೆ ಗೊಬ್ಬರ ಕೊಟ್ಟಷ್ಟೂ ಭೂಮಿ ಸೆಜ್ಜೆಗೆ ಬರುತ್ತದೆ.

ಬಿತ್ತನೆ[ಬದಲಾಯಿಸಿ]

ಬೀಜ ಬಿತ್ತಿ ಇಲ್ಲವೇ ತುಂಡುಗಳನ್ನು ನೆಟ್ಟು, ಇಲ್ಲವೇ ಕಸಿಕೊಂಬೆ ಅಥವಾ ಕಣ್ಣುಗಳನ್ನು ನೆಟ್ಟು ಬೆಳೆಸಬಹುದು. ಬಿತ್ತನೆ ಬೀಜವನ್ನು ಒಂದು ತಿಂಗಳೊಳಗೆ ನೆರಳು ಮಾಡಿರುವ ಸಸಿಪಾತಿಗಳಲ್ಲಿ ಹಾಕುತ್ತಾರೆ. ಬೀಜ ಬಲುಸೂಕ್ಷ್ಮ. ಒಂದು ಔನ್ಸ್‌ ತೂಕದಲ್ಲಿ 12,000-14,000 ಬೀಜಗಳು ದೊರೆಯುತ್ತವೆ. ಅವುಗಳ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ. ರೋಗ ನಿರೋಧದ ದೃಷ್ಟಿಯಿಂದ ಬೀಜಕ್ಕೆ ಕರ್ಪುರದ ನೀರು ಚಿಮುಕಿಸುವುದು ರೂಢ. ಬೀಜವನ್ನು ಪಾತಿಯಲ್ಲಿ ಬಿತ್ತಿದ ಮೇಲೆ, ತೆಳುವಾಗಿ ಬೂದಿ ಮತ್ತು ಮಣ್ಣನ್ನು ಎರಚುತ್ತಾರೆ. ಪಾತಿಗೆ ಆಗಾಗ ನೀರು ಹಾಕಿ ತೇವವನ್ನು ಹದವಾದ ಮಟ್ಟದಲ್ಲಿ ಉಳಿಸುವುದು ಅಗತ್ಯ. ಬೀಜ 10-15 ದಿವಸಗಳಲ್ಲಿ ಮೊಳೆಯುತ್ತದೆ. ಸಸಿ ¼"- 1/2 " ಬೆಳೆದಾಗ ಪಾತಿ ವಿರಳವಾಗುವಂತೆ ಹೆಚ್ಚಿಗೆ ಸಸಿಗಳನ್ನು ಕಿತ್ತುಹಾಕಿ ಬೇಕಾದಷ್ಟನ್ನು ಮಾತ್ರ ಉಳಿಸುತ್ತಾರೆ. ಪೊದೆ ಬೆಳೆಸುವುದಕ್ಕೆ ನಾಟಿ ಮಾಡುವುದಾದರೆ 4"-6" ಉದ್ದದ ಸಸಿಗಳನ್ನು ಉಪಯೋಗಿಸುತ್ತಾರೆ. ಮರಗಳನ್ನು ಬೆಳೆಸುವುದಾದರೆ 4" ಎತ್ತರ ಬೆಳೆದ ಅನಂತರ ಸಸಿಗಳನ್ನು ರೆಂಬೆ ಕತ್ತರಿಸಿ ಗುಣಿಗಳಲ್ಲಿ ನೆಡುತ್ತಾರೆ. ಮುಡಿ ಉಪ್ಪುನೇರಳೆ ಪೊದೆಗಳ ರೆಂಬೆಗಳನ್ನು ವರ್ಷ ವರ್ಷ ಸವರುತ್ತಾರೆ. ಸವರಿದ ರೆಂಬೆಗಳಿಂದ 3 ಕಣ್ಣುಳ್ಳ 9"-12" ಉದ್ದದ ತುಂಡುಗಳನ್ನು ವಿಂಗಡಿಸಿ ಅವು ಹಸಿಯಾಗಿರು ವಾಗಲೇ ನೆಡುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಇಂಥ ತುಂಡುಗಳನ್ನು ಕಂತೆ ಕಟ್ಟಿ ಮಣ್ಣಿನಲ್ಲಿ ಹುಗಿದು ಕಣ್ಣುಗಳಿಂದ ಮೊಳಕೆ ಬಂದ ಅನಂತರ ನಾಟಿ ಮಾಡುವುದು ವಾಡಿಕೆ. ಕಸಿಮಾಡಿದ ಸಸಿಗಳನ್ನು ನಾಟಿ ಮಾಡಿ ಉಪ್ಪುನೇರಳೆ ತೋಟ ಬೆಳೆಸುವುದು ಒಂದು ವಿಧ. ಉತ್ತಮ ರೀತಿಯ ಸಸಿಗಳಿಂದ ಬೇರಿನ ಕಸಿ ಒದಗಿಸಿಕೊಂಡು ಎಬ್ಬಿಸಿದ ಉಪ್ಪುನೇರಳೆ ಉತ್ಕೃಷ್ಟವಾದ ಸೊಪ್ಪನ್ನು ಕೊಡುತ್ತದೆ.

ಸಂತಾನಾಭಿವೃದ್ಧಿ[ಬದಲಾಯಿಸಿ]

ಮೈಸೂರಿನಲ್ಲಿ ಬಹುಭಾಗ ಉಪ್ಪುನೇರಳೆ ಹೊಲದ ಬೆಳೆ. ನೀರಾವರಿ ಕೇವಲ 15% ಅಂಶ ಮಾತ್ರ ಬಿತ್ತನೆಗೆ ತುಂಡುಗಳ ಬಳಕೆಯೇ ಸಾಮಾನ್ಯ. ತುಂಡುಗಳನ್ನು ನೇಗಿಲು ಸಾಲಿನಲ್ಲಿ ಇಲ್ಲವೇ ಗುಣಿಗಳಲ್ಲಿ ಹೂಳುತ್ತಾರೆ. ನೀರಾವರಿ ಸೌಕರ್ಯವಿದ್ದೆಡೆಯಲ್ಲಿ ಸಾಲಿನಲ್ಲಿ ಹೂಳುವುದು ವಾಡಿಕೆ. ಹೊಲದಲ್ಲಿ ನೆಡುವಾಗ 30". ಅಂತರದಲ್ಲಿ 9" ಆಳ 12" ವ್ಯಾಸವುಳ್ಳ ಗುಣಿಗಳಲ್ಲಿ ತುಂಡುಗಳನ್ನು ಇಡುವುದು ಬಳಕೆಯಲ್ಲಿರುವ ಕ್ರಮ. ಸಾಲುಗಳ ಮಧ್ಯದ ಅಂತರ 30". ಮುಂಗಾರು ಮಳೆ ಪ್ರಾರಂಭದಲ್ಲಿ ಜುಲೈ ತಿಂಗಳು ಬಿತ್ತನೆ ಮಾಡುವುದಕ್ಕೆ ಅನುಕೂಲವಾದ ಸಮಯ. ನೀರಾವರಿ ಸೌಲಭ್ಯ ಕಡಿಮೆ ಇರುವ ಸಂದರ್ಭದಲ್ಲಿ ಸಾಲಿನಲ್ಲಿ ಗುಣಿಗಳ ಮಧ್ಯದ ಅಂತರ 18" ಇರುತ್ತದೆ. ಪ್ರತಿ ಗುಣಿಯಲ್ಲೂ 3 ತುಂಡುಗಳನ್ನು ನೆಡುತ್ತಾರೆ. ಬೇಕಾದ ಮಟ್ಟದ ತೇವವನ್ನು ಉಳಿಸಿಕೊಳ್ಳಲು ನೀರು ಹೊತ್ತುಹಾಕುವುದು ಅವಶ್ಯಕ. ಈ ರೀತಿ ನೆಟ್ಟಾಗ ಒಂದು ಎಕರೆಗೆ 30,000-40,000 ಬಿತ್ತನೆ ತುಂಡುಗಳು ಬೇಕಾಗುತ್ತವೆ. ನೀರಾವರಿ ಅನುಕೂಲವಿದ್ದಾಗ ಸಾಲು ನಾಟಿ ಉತ್ತಮ. ಏಪ್ರಿಲ್-ಮೇ ತಿಂಗಳುಗಳಲ್ಲಿ ಪ್ರತಿ ಗುಣಿಯಲ್ಲೂ ಒಂದೊಂದು ಜೋಡಿ ತುಂಡನ್ನು ನೆಡುತ್ತಾರೆ. ಗುಣಿಗಳ ಮಧ್ಯ ಒಂದಕ್ಕೆ 70,000ಕ್ಕೂ ಹೆಚ್ಚು ಬಿತ್ತನೆಗಳು ಬೇಕಾಗುತ್ತದೆ. ಕೆಲವಡೆ 8-10 ಉಪ್ಪು ನೇರಳೆ ತುಂಡುಗಳನ್ನು ಕಂತೆ ಮಾಡಿ 3' ಅಂತರದಲ್ಲಿ ನೆಡುತ್ತಾರೆ. ಹೊಲದಲ್ಲಿ ಇವನ್ನು ಪುರ್ತಿ ಮಣ್ಣಿನಲ್ಲಿ ಓರೆಯಾಗಿಟ್ಟು ಹೂಳುತ್ತಾರೆ. ತೇವ ಸಾಕಷ್ಟು ಇರುವೆಡೆ ಸ್ವಲ್ಪ ಭಾಗ ಹೊರಬಂದಿರುತ್ತದೆ. ಈ ರೀತಿಯ ನಾಟಿ ಮಳೆಗಾಲದ ಪ್ರಾರಂಭದಲ್ಲೇ ಆಗಬೇಕು. ತುಂಡುಗಳು ಬೇರು ಬಿಟ್ಟು ಕೃಷಿಮಾಡಿ ನೀರು ಕೊಟ್ಟಂತೆ ಗಿಡ 6 ವಾರದೊಳಗೆ 2'-3' ಎತ್ತರ ಬೆಳೆಯುತ್ತದೆ. ಗಿಡ 3'-5' ಎತ್ತರ ಬೆಳೆದ ಮೇಲೆ ನೀರು ಹಾಕುವುದನ್ನು ನಿಲ್ಲಿಸುತ್ತಾರೆ. ನೀರಾವರಿ ಇದ್ದರೆ ವಾರಕ್ಕೆರಡು ಬಾರಿ ನೀರುಹಾಯಿಸುವುದು ಸಾಮಾನ್ಯ. ಆಗಾಗ್ಗೆ ಮಧ್ಯಂತರ ಸಾಗುವಳಿ ಮಾಡಿ ಕಳೆ ಕೀಳುವುದು ಅಗತ್ಯ. ಸಸಿಮಾಡಿ ಉಪ್ಪುನೇರಳೆ ಬೆಳೆಸುವುದು ದುಬಾರಿಯಾದರೂ ಎಲೆ ಇಳುವರಿ ಹೆಚ್ಚು: ಹಾಗೆಯೇ ಗುಣವೂ ಉತ್ತಮ. ಈ ಕಾರಣದಿಂದ ಸಸಿಯಿಂದ ಬೆಳೆಸಿದ ತೋಟಗಳು ಇತ್ತೀಚಿನ ದಿವಸಗಳಲ್ಲಿ ಹೆಚ್ಚಾಗುತ್ತಿವೆ. ಸಸಿಗಳನ್ನು ಪಾತಿಯಲ್ಲಿ ಬೆಳೆಸಿ 4"-6" ಎತ್ತರ ಬಂದಾಗ ಗುಳಿಗಳಿಗೆ ಸಾಗಿಸುತ್ತಾರೆ. ಗುಳಿಗಳ ಮಧ್ಯದ ಅಂತರ 2"-2.5'. ಉಪ್ಪು ನೇರಳೆ ಪೋದೆಗಳನ್ನು ಬೀಜ ಬಿತ್ತಿ ನೇರವಾಗಿ ಬೆಳೆಸುವುದು ಸಾಧ್ಯ. ಇವು ಕಸಿ ಮಾಡಿದ ಸಸಿಯಿಂದ ಬೆಳೆಸಿದ ಗಿಡಕ್ಕಿಂತ ಹೆಚ್ಚು ಬೇರು ಬಿಡುವುದು ಕಂಡುಬಂದಿದೆ. ಜಪಾನಿನಲ್ಲಿ ಈ ರೀತಿಯ ಕೃಷಿ ವ್ಯಾಪಕ, ಭಾರತದಲ್ಲೂ ಇದರ ಅನುಸರಣೆಯಿಂದ ಇಳುವರಿ ಹೆಚ್ಚಿಸುವ ಕೆಲಸ ನಡೆದಿದೆ. ಜಪಾನಿನಿಂದ ಆಮದುಮಾಡಿದ ಕಸಿ ಕೊಂಬೆಯನ್ನು ಸ್ಥಳೀಯ ಉಪ್ಪು ನೇರಳೆ ಗಿಡದೊಡನೆ ಸೇರಿಸಿ ತಳಿ ವೃದ್ಧಿ ಮಾಡುವ ಪ್ರಯತ್ನ ಸಹ ನಡೆಯುತ್ತಿದೆ. ಉಪ್ಪುನೇರಳೆ ಮರವನ್ನೂ ಪೊದೆಯಂತೆ ತುಂಡನ್ನು ನೆಟ್ಟು ಬೆಳೆಸಬಹುದು. ಗಿಡ ನೇರವಾಗಿ ಲಂಬವಾಗಿರುವಂತೆ ರೆಂಬೆಗಳನ್ನು ಕತ್ತರಿಸಿ ಬೆಳೆಸಿ ಒಂದು ವರ್ಷದ ಅನಂತರ ಗುಳಿಗಳಲ್ಲಿ ನೆಡುತ್ತಾರೆ. ಉಪ್ಪುನೇರಳೆ ಮರವನ್ನು ಪಾತಿಯಲ್ಲಿ ಬೆಳೆಸಿದ ಸಸಿಯಿಂದ ಎಬ್ಬಿಸುವುದು ಅನುಕೂಲ. ಮೊದಲನೆಯ ಪಾತಿಯಿಂದ ಸಸಿ 4' ಬೆಳೆದ ಮೇಲೆ ಇನ್ನೊಂದು ಪಾತಿಗೆ ಸಾಗಿಸಿ ಅಲ್ಲಿ 6' ಎತ್ತರಕ್ಕೆ ಬೆಳೆಸಿ ಪಕ್ಕದ ರೆಂಬೆಗಳನ್ನು ಕಡಿದು ಹೊಲದ ಗುಳಿಗಳನ್ನು ಸಾಗಿಸುತ್ತಾರೆ.

A silkworm, Bombyx mori, feeding on a mulberry tree

ಗಿಡ ಸವರುವುದು ಮತ್ತು ಎಲೆಕೊಯ್ಲು[ಬದಲಾಯಿಸಿ]

ಕಾಲಕಾಲಕ್ಕೆ ಪೈರಿನಿಂದ ಎಲೆ ಬಿಡಿಸಿಕೊಳ್ಳುವುದರಲ್ಲಿ ಉಪ್ಪುನೇರಳೆ ಮರವನ್ನು ಮತ್ತು ಪೊದೆಯನ್ನು ನಿಯತಕಾಲಕ್ಕೆ ಸವರುವುದು ಅತ್ಯಾವಶ್ಯಕ. ಸುಮಾರು 10 ವಾರದ ಹೊತ್ತಿಗೆ ನೀರು ಕೊರತೆ ಇಲ್ಲದಿದ್ದರೆ ಗಿಡ 3'-4' ಎತ್ತರ ಬೆಳೆಯುತ್ತದೆ. ಆಗ ಮೊದಲ ಬಾರಿಗೆ ಎಲೆ ಕೊಯ್ಯುವುದು ಸಾಧ್ಯ. ಹೊಲದ ಬೆಳೆಯಾದರೆ 4 ತಿಂಗಳಲ್ಲಿ ಎಲೆ ಕೊಯ್ಲಿಗೆ ಬರುತ್ತದೆ. ವರ್ಷಕ್ಕೆ 8-10 ಸಲ ಎಲೆ ಬಿಡಿಸಿಕೊಳ್ಳಬಹುದು. ಪ್ರತಿ ವರ್ಷ ಗಿಡವನ್ನು ನೆಲದ ಮಟ್ಟಕ್ಕೆ ಕತ್ತರಿಸುತ್ತಾರೆ. ರೇಷ್ಮೆ ಹುಳ ಬೆಳೆಸುವ ಕಾಲಕ್ಕೆ ಮೊದಲು ಗಿಡ ಸವರುವುದು ವಾಡಿಕೆ. ಪ್ರತಿಸಾರಿ ಗಿಡ ಸವರಿದ ಮೇಲೆ ಭೂಮಿ ಕೃಷಿಮಾಡಿ ಗೊಬ್ಬರ ಕೊಡುತ್ತ್ತಾರೆ. ಕುಡಿ ಒಡೆದು ಸಮೃದ್ಧಿಯಾಗಿ ಎಲೆ ಹೊರ ಬರುತ್ತದೆ. 5-6 ವಾರಗಳಲ್ಲಿ ಎಲೆ ಕೊಯ್ಯುವುದು ಸಾಧ್ಯ. ಎಲೆ ಬಿಡಿಸುವುದಕ್ಕೆ ಯುಕ್ತ ಸಮಯ ಸಂಜೆ. ಕೊಯ್ದ ಎಲೆಯನ್ನು ಸಡಿಲವಾಗಿ ಗುಡ್ಡೆ ಮಾಡುತ್ತಾರೆ. ಅವಶ್ಯವಿದ್ದರೆ ನೆನೆÀಸಿದ ಗೋಣಿ ಇಲ್ಲವೆ ಬಟ್ಟೆ ತೂಗುಹಾಕಿ ಕೋಣೆ ಶಾಖ ಏರುವುದನ್ನು ತಡೆಯುತ್ತಾರೆ. ಉಪ್ಪುನೇರಳೆ ಪೊದೆ 10-15 ವರ್ಷ ಫಲ ಕೊಡುತ್ತದೆ. ಅನಂತರ ಅದನ್ನು ತೆಗೆದು ಹೊಸಗಿಡ ನೆಡಬೇಕು. ಹಾಗೆ ಮಾಡುವುದಕ್ಕೆ ಮುಂಚೆ ಒಂದೆರಡು ರಾಗಿ ಅಥವಾ ಜೋಳದ ಬೆಳೆ ತೆಗೆದುಕೊಂಡರೆ ಒಳ್ಳೆಯದು.

ಇಳುವರಿ[ಬದಲಾಯಿಸಿ]

ಉಪ್ಪುನೇರಳೆ ಸೊಪ್ಪಿನ ಇಳುವರಿ ಮಣ್ಣಿನ ಗುಣ, ನೀರಿನ ಸೌಕರ್ಯ, ಗೊಬ್ಬರ, ಸಾಗುವಳಿ ಇವುಗಳನ್ನು ಅವಲಂಬಿಸಿದೆ. ಮೈಸೂರಿನಲ್ಲಿ ಹೊಲದ ಬೆಳೆಯ ಅವಧಿ ಒಂದು ವರ್ಷ. ಇಲ್ಲಿ ಎಕರೆ ಒಂದಕ್ಕೆ ಇಳುವರಿ 4000-7000ಪೌಂಡುಗಳು. ನೀರಾವರಿ ಇದ್ದಲ್ಲಿ 10,000-14,000 ಪೌಂಡುಗಳು.

ಜಾತಿಗಳು[ಬದಲಾಯಿಸಿ]

ಅನೇಕ ಜಾತಿಯ ಉಪ್ಪುನೇರಳೆ ಕೃಷಿಯಲ್ಲಿವೆ. ಜಪಾನಿನಲ್ಲಿ 7,000 ಜಾತಿಗಳಿದದ್ದು ಅವುಗಳಲ್ಲಿ ಸುಮಾರು 21ನ್ನು ವ್ಯಾಪಕವಾಗಿ ಬೆಳೆಸುತ್ತಾರೆ. ಭಾರತದಲ್ಲಿ ರೇಷ್ಮೆ ಹುಳುಗಳಿಗೆ ತಿನ್ನಿಸುವುದಕ್ಕೆ ಮಲ್ಟಿ ಕ್ಯಾಲಿಸ್ ಎಂಬ ಚೀನೀಜಾತಿಯ ಉಪ್ಪು ನೇರಳೆ ವ್ಯಾಪಕವಾಗಿ ಕೃಷಿಯಲ್ಲಿದೆ. ಆಟ್ರೋ-ಪರ್-ಪ್ಯುರಿಯ ಎಂಬ ಇನ್ನೊಂದು ಜಾತಿಯ ಚೀನೀ ತಳಿ ಸಹ ಹಲವೆಡೆ ಬಳಕೆಯಲ್ಲಿದೆ. ಇದನ್ನು ರಸ್ತೆ ಮತ್ತು ಜಮೀನಿನ ಅಂಚುಗಳಲ್ಲಿ ಬೆಳೆಸುವುದು ಸಾಮಾನ್ಯ. ಮೈಸೂರಿನಲ್ಲಿ ತಳಿ ಅಭಿವೃದ್ದಿ ಕೆಲಸ ಅಷ್ಟಾಗಿ ಆಗಿಲ್ಲ. ಬಂಗಾಳದಲ್ಲಿ ಹೊರತಂದ KM-1, ಸ್ಥಳೀಯ ತಳಿಗಳಿಗಿಂತ ಹೆಚ್ಚು ಇಳುವರಿ ಕೊಡುವುದು ಕಂಡುಬಂದಿದೆ. ಕೊಳ್ಳೆಗಾಲದ ಪ್ರದೇಶದಲ್ಲಿ ಇದನ್ನು ಕಸಿ ಮಡುವುದಕ್ಕೆ ಉಪಯೋಗಿಸುತ್ತಾರೆ. ಮೈಸೂರಿನಲ್ಲಿ ಹೊರತಂದ S-I ಮತ್ತು S-Vತಳಿಗಳು ಹೆಚ್ಚು ಇಳುವರಿ ಕೊಡುವುದು ಕಂಡುಬಂದಿದೆ.

ಗೊಬ್ಬರ[ಬದಲಾಯಿಸಿ]

ಮೇಲೆ ಹೆಳಿದಂತೆ ಉಳುಮೆ ಮಾಡುವಾಗ ಮಣ್ಣಿನ ಸೆಪ್ಪೆ ಕಾಪಾಡಿ ಫಲವತ್ತನ್ನು ಉಳಿಸುವ ದೃಷ್ಟಿಯಿಂದ ಎಕರೆಗೆ 15-20 ಗಡಿ ಕೊಟ್ಟಿಗೆ ಗೊಬ್ಬರ ಕೊಡುವುದು ಅಗತ್ಯ. ಇದರ ಜೊತೆಗೆ ಸುಮಾರು ವರ್ಷಕ್ಕೆ 60 ಪೌಂಡ್ ಸಾರಜನಕ ಒದಗುವಷ್ಟು ಅಮೊನಿಯಂ ಸಲ್ಫೇಟ್ ಇಲ್ಲವೆ ಯಾಲ್ಸಿಯಂ ಅಮೊನಿಯಂ ನೈಟ್ರೇಟ್ ಕೊಡಬಹುದು. ತಲಾ 20 ಪೌಂಡ್ ರಂಜಕ ಮತ್ತು ಪೊಟ್ಯಾಷ್ ಸಹ ಕೊಡುವುದು ಅಗತ್ಯ. ಗೊಬ್ಬರಗಳನ್ನು ಸಮಭಾಗ ಮಾಡಿ ಸೇರಿಸಬೇಕು. ನೀರಾವರಿ ಬೆಳೆಗೆ ವರ್ಷಕ್ಕೆ 150 ಪೌಂಡ್ ಸಾರಜನಕ, 50 ಪೌಂಡ್ ರಂಜಕ, 150 ಪೌಂಡ್ ಪೊಟ್ಯಾಷ್ ಸಮಭಾಗ ಮಾಡಿ ಪ್ರತಿಸಾರಿ ಎಲೆಕೊಯ್ದ ಮೇಲೆ ಕೊಡುವುದು ಅಗತ್ಯ. ರೋಗ ರುಜಿನಗಳು: ಎಲೆಗಳನ್ನು ಬೂದಿರೋಗ ತೀವ್ರವಾಗಿ ನಾಶಪಡಿಸುತ್ತದೆ. ಎಲೆಗಳ ತಳಭಾಗದಲ್ಲಿ ಒಂದು ರೀತಿಯ ಬಿಳಿಪುಡಿ ಶೇಖರಣೆಯಾಗಿ ಎಲೆ ವಿಕಾರವಾಗಿ ಮುದುರಿಕೊಂಡು ಒಣಗಿ ಸತ್ತುಹೋಗುತ್ತದೆ. ಗಂಧಕದ ಪುಡಿಯನ್ನು ಎಕರೆಯೊಂದಕ್ಕೆ 15 ಪೌಂಡಿನಂತೆ ಸಿಂಪಡಿಸಿ ರೋಗವನ್ನು ತಡೆಗಟ್ಟುವುದು ಸಾಧ್ಯ. ದುಕೆರೋಗ ಇನ್ನೊಂದು ಉಪದ್ರವ. ಕೋನಾಕಾರದ ಕೆಂಪು ಚುಕ್ಕೆ ಪ್ರಾರಂಭವಾಗಿ ಗಂಟು ರೂಪುಗೊಂಡು ಎಲೆ ಉದುರಿಹೋಗುತ್ತದೆ. ಬೋರ್ಡೋ ದ್ರಾವಣ ಸಿಂಪಡಿಸಿ ಈ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಮತ್ತೊಂದು ರೋಗ ಕಾಂಡದ ಕೊಳೆ. ಈ ಶಿಲೀಂದ್ರ ಕಾಂಡ ಮತ್ತು ರೆಂಬೆಗಳಿಗೆ ತಗಲಿ ಅವು ಒಣಗುತ್ತವೆ. ಇಂಥ ಭಾಗಗಳನ್ನು ಕತ್ತರಿಸಿ ರೋಗ ಹರಡುವುದುನ್ನು ತಪ್ಪಿಸುವುದು ಸಾಧ್ಯ. ಷೊನಿಯ ಎಂಬುದು ಉಪ್ಪುನೇರಳೆಗೆ ಬರುವ ಒಂದು ರೋಗ. ತುಕ್ಕು ಹಿಡಿದಂಥ ಕಂದು ಮಚ್ಚೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಇಂಥ ಎಲೆಗಳಿಂದ ರೇಷ್ಮೆ ಹುಳುಗಳಿಗೆ ನಂಜಾಗುತ್ತದೆ.

ಪೀಡೆಗಳು[ಬದಲಾಯಿಸಿ]

ಉಪ್ಪುನೇರಳೆಗೆ ತುಕ್ರ ಎಂಬ ರೀತಿಯ ರೋಗ ಕೆಲವೆಡೆ ಕಾಣಿಸಿಕೊಳ್ಳುತ್ತದೆ. ಇದರ ಲಕ್ಷಣ, ಸುರುಳಿ ಸುತ್ತಿ ಮುದುರಿಕೊಂಡ ಎಲೆಗಳು. ಇದು ಅಗ್ರ ಕುಡಿಗಳಲ್ಲಿ ಗೆಣ್ಣಿನ ಮಧ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಕ ಕಾಂಡದಿಂದ ಮತ್ತು ಎಲೆ ತೊಟ್ಟಿನಿಂದ ಸಸ್ಯ ರಸ ಹೀರುವ ಒಂದು ಹುಳ. ನಿಕೋಟಿನ್ ಸಲ್ಫೇಟ್ ಸಿಂಪಡಿಕೆಯಿಂದ ಇದರ ಹಾವಳಿ ತಗ್ಗಿಸಬಹುದು. ಉದ್ದನೆ ಮೀಸೆ ದುಂಬಿ ಅಥವಾ ಕಾಂಡದ ಸುತ್ತ ಕೊರೆಯುವ ದುಂಬಿ ಉಪ್ಪು ನೇರಳೆಗೆ ಬೀಳುವ ಉಪದ್ರವಕಾರಿ ಕೀಟ. ಇದು ಬುಡದಲ್ಲಿ ಕಾಂಡವನ್ನು ಕೊರೆದು ಗಿಡವನ್ನು ಸಾಯಿಸುತ್ತದೆ. ಷಲ್ಕ ಕೀಟಗಳು (ಸ್ಕೇಲ್ಇನ್ಸೆಕ್ಟ್‌್ಸ) ಗಿಡದಿಂದ ರಸವನ್ನು ಹೀರಿ ತೊಂದರೆ ಉಂಟುಮಾಡುತ್ತವೆ. ಸೋಪಿನ ನೀರನ್ನು ಸಿಂಪಡಿಸಿ ಇವುಗಳ ಹಾವಳಿಯನ್ನು ಕಡಿಮೆಮಾಡಬಹುದು. ಕೊರೆಯುವ ಹುಳುಗಳು, ಚಿಪ್ಪಿನ ಹುಳುಗಳು, ಸಸ್ಯ ಹೇನುಗಳು, ನುಸಿ ಮುಂತಾದುವೂ ಉಪದ್ರವಕಾರಿ ಕೀಟಗಳು.

ರಾಸಾಯನಿಕ ರಚನೆ ಮತ್ತು ಉಪಯೋಗ[ಬದಲಾಯಿಸಿ]

Raw mulberries
Nutritional value per 100 g (3.5 oz)
ಆಹಾರ ಚೈತನ್ಯ 179.912 kJ (43.000 kcal)
ಶರ್ಕರ ಪಿಷ್ಟ 9.8
- ಸಕ್ಕರೆ 8.1
- ಆಹಾರ ನಾರು 1.7
ಕೊಬ್ಬು 0.39
Protein 1.44
ನೀರು 87.68 g
Vitamin A equiv. 1 μg (0%)
Thiamine (vit. B1) 0.029 mg (3%)
Riboflavin (vit. B2) 0.101 mg (8%)
Niacin (vit. B3) 0.62 mg (4%)
Vitamin B6 0.05 mg (4%)
Folate (vit. B9) 6 μg (2%)
Vitamin C 36.4 mg (44%)
ವಿಟಮಿನ್ ಇ 0.87 mg (6%)
ವಿಟಮಿನ್ ಕೆ 7.8 μg (7%)
ಕ್ಯಾಲ್ಸಿಯಂ 39 mg (4%)
ಕಬ್ಬಿಣ ಸತ್ವ 1.85 mg (14%)
ಮೆಗ್ನೇಸಿಯಂ 18 mg (5%)
ರಂಜಕ 38 mg (5%)
ಪೊಟಾಸಿಯಂ 194 mg (4%)
ಸೋಡಿಯಂ 10 mg (1%)
ಸತು 0.12 mg (1%)
Link to United States Department of Agriculture Database entry
Percentages are roughly approximated
using US recommendations for adults.
Source: USDA Nutrient Database

ಉಪ್ಪುನೇರಳೆ ಎಲೆಗಳನ್ನು ಮುಖ್ಯವಾಗಿ ರೇಷ್ಮೆಹುಳುಗಳಿಗೆ ಆಹಾರವಾಗಿ ಬಳಸುತ್ತಾರೆ. ಸೊಂಪಾಗಿ ಬೆಳೆದ ಎಲೆಗಳು ಹುಳುಗಳಿಗೆ ಉತ್ತಮ ಆಹಾರ, ಒಣ ಎಲೆಯಲ್ಲಿನ ವಿವಿಧ ವಸ್ತುಗಳ ಶೇಕಡ ಅಂಶ ಹೀಗಿರುತ್ತದೆ. ಪ್ರೋಟೀನ್:10.00-39.0, ಕರಗುವ ಶರ್ಕರ ಪಿಷ್ಟಾದಿಗಳು: 7.6-26.0 ಖನಿಜಾಂಶ: 8.0-17.0 ಸುಣ್ಣ: 0.7-2.7, ಕಬ್ಬಿಣ: 0.05-0.12, ರೇಷ್ಮೆಹುಳುಗಳಿಗೆ ಈ ಎಲೆಗಳು ಹೆಚ್ಚು ಅಪೇಕ್ಷಣೀಯ ಆಹಾರವಾಗುವುದಕ್ಕೆ ಕಾರಕ ಅಂಶಗಳು (i) ಸಿಟ್ರಾಲ್, ಲಿನಿಲೈಲ್ ಅಸಿಟೇಟ್, ಲಿನಲಾಲ್, ಟರ್ಪಿನೈಲ್ ಅಸಿಟೇಟ್ ಮತ್ತು ಹೆಕ್ಸನಾಲ್ ಇವು ಆಕರ್ಷಕ ಸಂಯುಕ್ತ ವಸ್ತುಗಳು. ಹುಳುಗಳು ಇವುಗಳಿಂದ ಆಕರ್ಷಿತವಾಗುತ್ತವೆ; (ii) ಃ-ಸಿಸ್ಟೋಸ್ಟೆರಾಲ್ ಮತ್ತು ಉಳಿದ ಕೆಲವು ಸ್ಟೆರಾಲ್ ವಸ್ತುಗಳು ಹುಳುಗಳು ಎಲೆಯನ್ನು ಕತ್ತರಿಸುವ ಕ್ರಿಯೆಯನ್ನು ಪ್ರಚೋದಿಸುತ್ತವೆ; (iii) ಮಿಥೈಲ್ ಆಲ್ಕೊಹಾಲಿನಲ್ಲಿ ಕರಗದಿರುವ ಮತ್ತು ನೀರಿನಲ್ಲಿ ಕರಗುವ ಎಲೆಗಳ ಭಾಗ ಹುಳುಗಳು ಎಲೆಯನ್ನು ಬಿಡುವಿಲ್ಲದೆ ತಿನ್ನುವ ಕ್ರಿಯೆಯನ್ನು ಪ್ರಚೋದಿಸುತ್ತದೆ. ಉಪ್ಪುನೇರಳೆ ಎಲೆಯನ್ನು ಕೆಲವು ವೇಳೆ ತರಕಾರಿಯಾಗಿ ಬಳಸುತ್ತಾರೆ. ದನಗಳಿಗೂ ಇದು ಉತ್ತಮವಾದ ಮೇವು. ಹಸುಗಳಿಗೆ ಇದನ್ನು ಮೇವಾಗಿ ನೀಡಿದಾಗ ಹಾಲು ವೃದ್ಧಿಯಾಗುವುದು ಕಂಡುಬಂದಿದೆ. ಹಣ್ಣನ್ನು ಹಾಗೆಯೇ ತಿನ್ನಬಹುದು. ರಸತೆಗೆದು ವಿವಿಧ ಪಾನೀಯಗಳನ್ನೂ ಮಾದಕದ್ರವ್ಯಗಳನ್ನೂ ತಯಾರಿಸುತ್ತಾರೆ. ಬೀಜದಿಂದ ಬಣ್ಣಗಳಿಗೆ ಬಳಸಬಹುದಾದ ಒಂದು ರೀತಿಯ ಎಣ್ಣೆ ತೆಗೆಯಬಹುದು, ಉಪ್ಪು ನೇರಳೆ ಮರ ಆವಿ ಕ್ರಿಯೆಗೆ ಒಳಪಡಿಸಿದ ಅನಂತರ ಹೆಚ್ಚಿನ ಮಟ್ಟದ ಸ್ಥಿತಿಸ್ಥಾಪಕ ಗುಣವನ್ನು ಪಡೆಕೊಳ್ಳುತ್ತದೆ. ಕ್ರಿಕೆಟ್, ಟೆನ್ನಿಸ್, ಹಾಕಿ ಮುಂತಾದ ಬ್ಯಾಟುಗಳ ತಯಾರಿಕೆಗೆ ಈ ಮರ ಬಹು ಉಪಯೋಗಕರ.

ಉಲ್ಲೇಖಗಳು[ಬದಲಾಯಿಸಿ]

  1. "Morus L." Germplasm Resources Information Network. United States Department of Agriculture. 2009-01-16. Archived from the original on 2013-05-10. Retrieved 2009-03-11.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: