ವಿಷಯಕ್ಕೆ ಹೋಗು

ಮೆಂತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆಂತೆ ಅಥವಾ ಮೆಂತ್ಯ (ಟ್ರೈಗೋನೆಲಾ ಫೇನಮ್-ಗ್ರೇಕಮ್) ಫ್ಯಾಬೇಸೀಯೇ ಕುಟುಂಬದ ಪ್ಯಾಪಿಲಿಯೊನೇಸೀ ಉಪಕುಟುಂಬದಲ್ಲಿನ ಒಂದು ಸಸ್ಯ. ಮೆಂತೆಯನ್ನು ಸೊಪ್ಪಾಗಿ (ಎಲೆಗಳು) ಮತ್ತು ಸಂಬಾರ ಪದಾರ್ಥವಾಗಿಯೂ (ಬೀಜ) ಬಳಸಲಾಗುತ್ತದೆ.[] ಇದನ್ನು ವಿಶ್ವಾದ್ಯಂತ ಒಂದು ಅರೆ-ಶುಷ್ಕ ಬೆಳೆಯಾಗಿ ಬೆಳೆಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಪಲ್ಯದಲ್ಲಿ ಬಳಸಲಾಗುತ್ತದೆ.

ಮೆಂತೆ
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
T. foenum-graecum
Binomial name
Trigonella foenum-graecum
ಮೆಂತೆ ಸೊಪ್ಪು


ಮೆಡಿಟರೀನಿಯನ್ ಸಮುದ್ರದ ಪೂರ್ವಕರಾವಳಿ ಪ್ರದೇಶ ಹಾಗೂ ಇಥಿಯೋಪಿಯ ಇದರ ತವರು ಎನ್ನಲಾಗಿದೆ. ಭಾರತ ಮತ್ತು ಉತ್ತರ ಆಫ್ರಿಕದ ಹಲವಾರೆಡೆ ಇದನ್ನು ಸೊಪ್ಪು ತರಕಾರಿಯಾಗಿಯೂ ಮೆಡಿಟರೀನಿಯನ್ ದೇಶಗಳು, ರಷ್ಯದ ದಕ್ಷಿಣಭಾಗ, ಅಮೆರಿಕದ ಕ್ಯಾಲಿಫೋರ್ನಿಯ, ಭಾರತ ಮುಂತಾಗಿ ಹಲವು ಭಾಗಗಳಲ್ಲಿ ದನಗಳ ಮೇವಿಗಾಗಿಯೂ ಬೇಸಾಯ ಮಾಡಲಾಗುತ್ತದೆ. ಪ್ರಾಚೀನ ಗ್ರೀಸ್ ಮತ್ತು ಇಟಲಿಗಳಲ್ಲಿ ಇದನ್ನು ಔಷಧಸಸ್ಯವಾಗಿ ಬೆಳೆಸಲಾಗುತ್ತಿತ್ತು.

ಭಾರತದಲ್ಲಿ

[ಬದಲಾಯಿಸಿ]

ಭಾರತದಲ್ಲಿ ಪಂಜಾಬ್, ಉತ್ತರಪ್ರದೇಶ, ಬಿಹಾರ, ಅಸ್ಸಾಮ್, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರಗಳು ಇದರ ಬೇಸಾಯಕ್ಕೆ ಹೆಸರಾಂತಿವೆ. ಕಾಶ್ಮೀರ, ಪಂಜಾಬಿನ ಕೆಲವು ಕಡೆ, ಗಂಗಾಬಯಲಿನ ಪಶ್ಚಿಮದಲ್ಲಿ ಮೆಂತ್ಯ ಕಾಡುಸಸ್ಯವಾಗಿ ಕೂಡ ಕಾಣದೊರೆಯುತ್ತದೆ. ಭಾರತದ ಉಳಿದೆಡೆಗಳಲ್ಲಿ ವ್ಯಾಪಕವಾಗಿ ಇದರ ಕೃಷಿ ಉಂಟು.

ಸಸ್ಯ ವಿವರಣೆ

[ಬದಲಾಯಿಸಿ]

ಮೆಂತ್ಯ ಸುಮಾರು 30-60 ಸೆಂ.ಮೀ. ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಸಸ್ಯ. ಎಲೆಗಳು ಮೂರು ಪರ್ಣಗಳಿಂದ ಕೂಡಿದ ಸಂಯುಕ್ತ ಮಾದರಿಯವು. ಹೂಗಳು ದ್ವಿಲಿಂಗಿಗಳು. ಬಿಳಿ ಇಲ್ಲವೆ ನಸುಹಳದಿ ಬಣ್ಣದವು. ಅಂತ್ಯಾರಂಭಿ (ರೇಸಿಮೋಸ್) ಮಾದರಿಯ ಹೂಗೊಂಚಲುಗಳಲ್ಲಿ ಸ್ಥಿತವಾಗಿವೆ. ಕಾಯಿಗಳು 3-15 ಸೆಂ.ಮೀ. ಉದ್ದ ಇವೆ. ಒಳಗೆ 10-20 ಬೀಜಗಳುಂಟು. ಬೀಜಗಳು ಕಂದು ಬಣ್ಣದವು. ಅವುಗಳ ಮೈಮೇಲೆ ಒಂದು ಉದ್ದ ಗೆರೆಯುಂಟು. ಮೆಂತ್ಯದ ಪೈರಿಗೆ ರೋಗರುಜಿನಗಳ, ಕೀಟಪಿಡುಗುಗಳ ಕಾಟ ಅಷ್ಟಾಗಿ ಇಲ್ಲ. ಸರ್ಕೊಸ್ಪೊರ ಟ್ರಾವರ್ಸಿಯಾನ ಬೂಷ್ಟಿನಿಂದ ಉಂಟಾಗುವ ಎಲೆಮಚ್ಚೆರೋಗ, ಪೆರನಾಸ್ಪೊರ ಟ್ರಿಗೊನೆಲಿಯಿಂದ ಉಂಟಾಗುವ ತುಪ್ಪುಳರೋಗ, ಎರಿಸೈಫೆ ಪಾಲಿಗೋನೈ, ಆಯ್ಡಿಯಮ್ ಮುಂತಾದವುಗಳಿಂದ ಮೂಡುವ ಬೂದಿರೋಗ, ಯೂರೊಮೈಸಿಸ್ ಪ್ರಭೇದದಿಂದ ಉಂಟಾಗುವ ಕಾಡಿಗೆ ರೋಗ ಮುಖ್ಯವಾದವು. ಬೋರ್ಡೊ ಮಿಶ್ರಣದ ಸಿಂಪಡಿಕೆಯಿಂದ, ರೋಗನಿರೋಧಕ ತಳಿಗಳ ಅಭಿವೃದ್ಧಿಯಿಂದ ರೋಗಗಳನ್ನು ನಿಯಂತ್ರಿಸಲಾಗುತ್ತದೆ. ಕೀಟ ಪಿಡುಗುಗಳಲ್ಲಿ ಪ್ರಧಾನವಾದವು ಟೆಟ್ರನೈಕಸ್ ಎಂಬ ಉಣ್ಣೆ, ಏಫಿಸ್ ಕಾಕ್ಸಿವೊರ ಎಂಬ ಏಫಿಡ್ ಕೀಟ.

ಮೆಂತ್ಯ ಪ್ರಧಾನವಾಗಿ ಚಳಿಗಾಲದ ಬೆಳೆ. ಮಧ್ಯಮ ಪ್ರಮಾಣದ ಇಲ್ಲವೆ ಕಡಿಮೆ ಮೊತ್ತದ ಮಳೆ ಬೀಳುವ ಪ್ರದೇಶಗಳು ಇದರ ಕೃಷಿಗೆ ಉತ್ತಮ. ಇದು ಎಂಥ ಮಣ್ಣಿನಲ್ಲಾದರೂ ಬೆಳೆಯುವುದಾದರೂ ಗೋಡು ಇಲ್ಲವೆ ಜೇಡಿ ಮಿಶ್ರಿತ ಗೋಡು ಒಳ್ಳೆಯದು. ಎರೆಭೂಮಿಯಲ್ಲೂ ಚೆನ್ನಾಗಿ ಬೆಳೆಯುತ್ತದೆ. ಮೆಂತ್ಯವನ್ನು ಶುದ್ಧಬೆಳೆಯಾಗಿ ಇಲ್ಲವೆ ಹೆಸರು, ಎಳ್ಳು, ಕೊತ್ತಂಬರಿ ಮುಂತಾದವುಗಳೊಂದಿಗೆ ಅಕ್ಕಡಿ ಬೆಳೆಯಾಗಿ ಕೃಷಿ ಮಾಡುವುದಿದೆ. ಹೆಕ್ಟೇರಿಗೆ ಸುಮಾರು 20-35 ಕೆಜಿ ಬಿತ್ತನೆ ಬೀಜ ಬೇಕಾಗುತ್ತದೆ. ಸೊಪ್ಪು ತರಕಾರಿಯಾಗಿ ಬೇಕಾದರೆ ಬಿತ್ತನೆಯಾದ 20 ದಿವಸಗಳ ಅನಂತರ ಮೆಂತ್ಯವನ್ನು ಕತ್ತರಿಸಬಹುದು. ಆದರೆ ಬೀಜಕ್ಕಾಗಿ ಬೆಳೆಸಿದರೆ ಸು. 6-8 ವಾರಗಳ ತರುವಾಯ ಹೂ ಅರಳಲು ಪ್ರಾರಂಭವಾಗುತ್ತದೆ.  ಅಲ್ಲಿಂದ ಒಂದು ತಿಂಗಳ ಅನಂತರ ಬೀಜ ಪಡೆಯಬಹುದು.  ಹೆಕ್ಟೇರಿಗೆ ಸು. 15-20 ಕ್ವಿಂಟಾಲ್ ಬೀಜ ದೊರೆಯುತ್ತದೆ.

ಉಪಯೋಗಗಳು

[ಬದಲಾಯಿಸಿ]

ಮೆಂತ್ಯ ಸಂಬಾರ ವಸ್ತುವಾಗಿಯೂ ಔಷಧಿಯಾಗಿಯೂ ಬಲು ಪ್ರಸಿದ್ಧ. ಬೀಜಗಳಲ್ಲಿ ಶೇ. 26.2 ಪ್ರೋಟೀನು, 5.8 ಕೊಬ್ಬು, 7.2 ನಾರು, 44.1 ಕಾರ್ಬೊಹೈಡ್ರೇಟು ಇವೆ. ಅಲ್ಲದೆ ನಿಕೊಟಿನಿಕ್ ಆಮ್ಲ, ವಿಟಮಿನ್ `ಸಿ' ಗಣನೀಯ ಮೊತ್ತದಲ್ಲಿವೆ. ಸೊಪ್ಪು ಸಹ ಪ್ರೋಟೀನಿನ ಒಳ್ಳೆಯ ಆಗರ.

ಮೆಂತ್ಯವನ್ನು ಹಸಿಸೊಪ್ಪು ತರಕಾರಿಯಾಗಿ ಮಾತ್ರವಲ್ಲದೆ, ಬೇಯಿಸಿ ತಿನ್ನುವುದಿದೆ. ಕಾಳುಗಳನ್ನು ಆಹಾರದೊಂದಿಗೆ ಸಂಬಾರವಸ್ತುವಾಗಿ ಬಳಸುವುದು. ಮೆಂತ್ಯದಿಂದ ಚಟ್ನಿಮಾಡುವುದು, ದೋಸೆ ಹಿಟ್ಟಿನಲ್ಲಿ ಬೆರೆಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಜಿಪ್ಟಿನಲ್ಲಿ ಬ್ರೆಡ್ ತಯಾರಿಕೆಯಲ್ಲಿ ಗೋದಿ ಹಿಟ್ಟಿನೊಂದಿಗೆ ಮೆಂತ್ಯದ ಹಿಟ್ಟನ್ನು ಬೆರೆಸುತ್ತಾರೆ. ಸ್ವಿಟ್‌ಜರ್‌ಲ್ಯಾಂಡಿನಲ್ಲಿ ಗಿಣ್ಣುವಿಗೆ (ಚೀಸ್) ವಾಸನೆಕಟ್ಟಲು ಬಳಸುವುದಿದೆ. ಕಾಳುಗಳು ಜೀರ್ಣಕಾರಿ, ಶಕ್ತಿವರ್ಧಕ ಎಂದು ಹೆಸರಾಗಿವೆ. ಇವನ್ನು ಕುಟ್ಟಿ ಹುಣ್ಣುಗಳಿಗೆ ಬೆಚ್ಚಾರವಾಗಿ ಉಪಯೋಗಿಸುವುದುಂಟು. ಮೆಂತ್ಯಸೊಪ್ಪು ದನಗಳಿಗೆ, ಕುದುರೆಗಳಿಗೆ ಒಳ್ಳೆಯ ಮೇವು. ಇದಕ್ಕೆ ಕೀಟವಿಕರ್ಷಕ ಗುಣವೂ ಇದೆಯೆನ್ನಲಾಗಿದೆ.

ಮೆಂತ್ಯದ ಕಾಳು

ಔಷಧೀಯ ಗುಣಗಳು

[ಬದಲಾಯಿಸಿ]
  1. ಮೆಂತ್ಯೆಯು ಉತ್ತಮ ಜೀರ್ಣಕಾರಕವಾಗಿದೆ.
  2. ಮೊಳಕೆ ಬಂದಿರುವ ಈ ಕಾಳುಗಳು ಕೆಮ್ಮು, ದಮ್ಮುಗಳಿಗೆ ಮದ್ದಾಗಿಯೂ ಬಳಸಲಾಗುತ್ತದೆ.
  3. ಹಾಲುಣಿಸುವ ತಾಯಂದಿರಿಗೆ ಅತ್ಯುತ್ತಮ ಆಹಾರ.[]
  4. ಮಧುಮೇಹಿಗಳಿಗೂ ಇದು ಉತ್ತಮ ಔಷಧ.[]
  5. ತಲೆಕೂದಲು ಸೊಂಪಾಗಿ ಬೆಳೆಯಲು ಉಪಯುಕ್ತವಾಗಿದೆ.[]

ಮೆಂತ್ಯದ ಮತ್ತೊಂದು ಬಗೆ

[ಬದಲಾಯಿಸಿ]

ಉತ್ತರ ಭಾರತದಲ್ಲಿ ಮೆಂತ್ಯದ ಇನ್ನೊಂದು ಬಗೆಯಾದ ಕಸ್ತೂರಿ ಮೆಂತ್ಯವನ್ನು (ಕಸೂರಿ ಮೇಥಿ) ಬೆಳೆಯಲಾಗುತ್ತದೆ. ಇದಕ್ಕೂ ಸಾಮಾನ್ಯ ಮೆಂತ್ಯಕ್ಕೂ ಕೊಂಚ ವ್ಯತ್ಯಾಸಗಳುಂಟು. ಕಸ್ತೂರಿ ಮೆಂತ್ಯದ ಬೆಳೆವಣಿಗೆಯ ದರ ಕಡಿಮೆ. ಇದರ ಹೂಗಳು ಕಿತ್ತಳೆ-ಹಳದಿ ಬಣ್ಣದವು. ಇದಕ್ಕೆ ಗಾಢವಾದ ಪರಿಮಳ ಉಂಟು. ಇದನ್ನು ಪ್ರಧಾನವಾಗಿ ಸೊಪ್ಪು ತರಕಾರಿಯಾಗಿ ಬೆಳೆಯುತ್ತಾರೆ.

2017 ಮೆಂತೆಕಾಳು

ಉಲ್ಲೇಖಗಳು

[ಬದಲಾಯಿಸಿ]
  1. Debaggio, Thomas; Tucker, Arthur O. (2009). The Encyclopedia of Herbs. ISBN 9781604691344. Retrieved 10 May 2021.
  2. "Trigonella foenum-graecum information from NPGS/GRIN". www.ars-grin.gov accessdate 2008-03-13. Archived from the original on 2009-01-05. Retrieved 2014-01-14.
  3. http://www.wikihow.com/Use-Fenugreek-Seeds-to-Increase-Milk-Supply
  4. http://www.diabetes.co.uk/natural-therapies/fenugreek.html
  5. https://beautyhealthtips.in/best-natural-beauty-care-tips-with-fenugreek-seeds-or-methi-seeds/


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೆಂತೆ&oldid=1217446" ಇಂದ ಪಡೆಯಲ್ಪಟ್ಟಿದೆ