ಮೆಡಿಟರೇನಿಯನ್ ಸಮುದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆಡಿಟರೇನಿಯನ್ ಸಮುದ್ರದ ಉಪಗ್ರಹ ಚಿತ್ರ.

ಮೆಡಿಟರೇನಿಯನ್ ಸಮುದ್ರ -ಯುರೋಪ್ ಮತ್ತು ಆಫ್ರಿಕ ಖಂಡಗಳ ನಡುವೆ ಇರುವ ಭೂಮಧ್ಯ ಸಮುದ್ರ. ಇದು ಅಟ್ಲಾಂಟಿಕ್ ಮಹಾಸಾಗರಕ್ಕೆ ಸಂಪರ್ಕ ಹೊಂದಿದ್ದು, ಮೆಡಿಟರೇನಿಯನ್ ಪ್ರದೇಶದಿಂದ ಆವೃತವಾಗಿದೆ. ಇದು ಬಹುಮಟ್ಟಿಗೆ ಭೂಭಾಗದಿಂದ ಆವೃತ ಗೊಂಡಿದೆ: ಉತ್ತರದಲ್ಲಿ ಅನಟೋಲಿಯ ಮತ್ತು ಯುರೋಪ್, ದಕ್ಷಿಣದಲ್ಲಿ ಆಫ್ರಿಕ ಮತ್ತು ಪೂರ್ವದಲ್ಲಿ ಲೇವಾಂತ್ ಪ್ರದೇಶಗಳಿವೆ. ತಾಂತ್ರಿಕವಾಗಿ ಈ ಸಮುದ್ರವು ಅಟ್ಲಾಂಟಿಕ್ ಮಹಾಸಾಗರದ ಒಂದು ಭಾಗವಾಗಿದ್ದರೂ ಸಹ ಇದನ್ನು ಒಂದು ಪ್ರತ್ಯೇಕ ಜಲಸಮೂಹವಾಗಿ ಗುರುತಿಸಲಾಗುತ್ತದೆ. ಮೆಡಿಟರೇನಿಯನ್ ಎಂಬ ಪದವು ಲ್ಯಾಟಿನ್ ಭಾಷೆಯ ಮೆಡಿಟೆರೇನಿಯಸ್ ಎಂಬ ಪದದಿಂದ ಬಂದಿದೆ. ಮೆಡಿಟೆರೇನಿಯಸ್ ಎಂದರೆ "ಭೂಮಿಯ ಮಧ್ಯದಲ್ಲಿ" ಎಂದು ಅರ್ಥ..[೧].

ಅಟ್ಲಾಂಟಿಕ್ ಸಾಗರದ ಒಂದು ಭಾಗ ಚಾಚಿಕೊಂಡಿರುವಂತೆ ಕಾಣುತ್ತದೆ. ಈ ಸಮುದ್ರ ಯುರೋಪಿಯನ್ ನಾಗರಿಕತೆಯ ತೊಟ್ಟಿಲು ಎನಿಸಿದ್ದು ಪಾಶ್ಚಾತ್ಯ ಸಂಸ್ಕøತಿ ಮತ್ತು ನಾಗರಿಕತೆಗಳ ಹುಟ್ಟು ಹಾಗೂ ಬೆಳೆವಣಿಗೆಗೆ ಕಾರಣವಾಗಿದೆ ಎನ್ನಬಹುದು. ಇಲ್ಲಿಯ ಕ್ರಾಂತಿಕಾರಕ ಸಂಸ್ಕøತಿ ಸಮುದ್ರದಾಚೆಯ ಭೂಪ್ರದೇಶಗಳಲ್ಲಿ ಹರಡಲು ಈ ಜಲಭಾಗ ಕಾರಣವಾಯಿತು. ಮೆಡಿಟರೇನಿಯನ್ ಇತಿಹಾಸದಲ್ಲಿ ಈ ಸಮುದ್ರ ತನ್ನ ತೀರದಿಂದ ತೀರಕ್ಕೆ ಹೊಸ ವಿಚಾರಗಳನ್ನು ಸಂಸ್ಕøತಿಯನ್ನು ಪ್ರಚಾರಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದೆ.

ಸನ್ನಿವೇಶ ಮತ್ತು ವಿಸ್ತೀರ್ಣ[ಬದಲಾಯಿಸಿ]

ಮೆಡಿಟರೇನಿಯನ್ ಸಮುದ್ರ ಉತ್ತರದಲ್ಲಿ ಯುರೋಪ್, ದಕ್ಷಿಣದಲ್ಲಿ ಆಫ್ರಿಕ, ಪೂರ್ವದಲ್ಲಿ ಏಷ್ಯ ಮೈನರ್ ಮತ್ತು ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರಗಳಿಂದ ಸುತ್ತುವರಿದಿದೆ. ಪೂರ್ವಪಶ್ಚಿಮವಾಗಿ ಇದರ ಉದ್ದ 3.540 ಕಿಮೀ. ಉತ್ತರ ದಕ್ಷಿಣವಾಗಿ ಇದರ ಅಗಲ 970 ಕಿಮೀ (ಈ ಅಂತರ ಲಿಬಿಯ ಮತ್ತು ಯುಗೊಸ್ಲಾವಿಯ ನಡುವಿನದು). ಮರ್ಮೊರ ಮತ್ತು ಕಪ್ಪುಸಮುದ್ರ ಬಿಟ್ಟು ಮೆಡಿಟರೇನಿಯನ್ ಸಮುದ್ರದ ಒಟ್ಟು ವಿಸ್ತೀರ್ಣ ಸುಮಾರು 2,510,000 ಚ.ಕಿಮೀ.

ಭೂವಿಜ್ಞಾನಿಗಳ ಹೇಳಿಕೆಯಂತೆ ಈ ಸಮುದ್ರ ಬಲುಹಿಂದೆ ಭೂಮಿಯ ಅರ್ಧಭಾಗ ಆವರಿಸಿದ್ದ ಟೆತಿಸ್ ಎಂಬ ಸಮುದ್ರದ ಉಳಿಕೆಯೆನ್ನುವರು. ಈ ಸಮುದ್ರದ ಆಂತರಿಕ ರಚನೆ, ಆಕಾರ ಹಾಗೂ ಇದನ್ನು ಸುತ್ತುವರಿದಿರುವ ಪರ್ವತಗಳು ಇತ್ಯಾದಿ ಅಂಶಗಳನ್ನು ಯುರೇಷಿಯ ಆಫ್ರಿಕಖಂಡಗಳ ಪರಿಚ್ಛಿನ್ನ ಹಾಗೂ ಹಿಂಜರಿತ ಕ್ರಿಯೆಗಳಿಂದ ನಿರ್ಧರಿಸಿದೆ. ಟರ್ಷಿಯರಿ ಯುಗದಲ್ಲಿ ಉಂಟಾದ ಈ ಖಂಡಗಳ ಒಳಮುಖ ಚಲನೆ ಆಲ್ಪೈನ್ ಪರ್ವತಶ್ರೇಣಿಯ ಉಗಮಕ್ಕೆ ನಾಂದಿಯಾಯಿತು. ಈ ಆಲ್ಪೈನ್ ಪರ್ವತ ಟೆತಿಸ್ ಸಮುದ್ರದಲ್ಲಿ ಶೇಖರವಾದ ಗಸಿಯಿಂದ ಕೂಡಿದೆಯೆನ್ನುವರು. ಇಲ್ಲಿಯ ಭೂಭಾಗಗಳ ಪರಸ್ಪರ ಮಡಿಕೆಯಿಂದ ತಗ್ಗಾದ ಪ್ರದೇಶ ಹಾಗೂ ಕುಸಿದುಬಿದ್ದ ಭಾಗಗಳು ಸಮುದ್ರದ ಒಳಭಾಗದಲ್ಲಿ ಅಗಾಧ ಪ್ರದೇಶವನ್ನುಂಟುಮಾಡಿವೆ. ಇತ್ತೀಚೆಗೆ ಈ ಸಮುದ್ರ ಹೆಚ್ಚು ಅಗಲವಾಗಿ ಆಕಾರ ಬದಲಾಯಿಸಿದೆ. ಈ ಪ್ರದೇಶದ ಭೂಭಾಗಗಳ ಪರಸ್ಪರ ಸಮಾಂತರ ಚಲನೆಯಿಂದ ಏಡ್ರಿಯಾಟಿಕ್ ಸಮುದ್ರ ಉಂಟಾಯಿತೆನ್ನುವರು. ಸಮುದ್ರದ ಮಧ್ಯಭಾಗದಲ್ಲಿ ಭೂಕಂಪನ ಮತ್ತು ಜ್ವಾಲಾಮುಖಿಗಳ ಶ್ರೇಣಿ ಅಸ್ತಿತ್ವದಲ್ಲಿದ್ದು ಆಂತರಿಕ ಭೂ ಚಟುವಟಿಕೆ ಇನ್ನೂ ಮುಂದುವರಿಯುತ್ತಿದೆಯೆಂದು ನಂಬಲಾಗಿದೆ.

ಜಲಾಂತರ್ಗತ ಪರ್ವತ ಶ್ರೇಣಿಯೊಂದು ಪಶ್ಚಿಮ ಸಿಸಿಲಿ ಮತ್ತು ಟ್ಯುನೀಷಿಯ ನಡುವೆ ಅಡ್ಡಲಾಗಿದ್ದು ಸಮುದ್ರವನ್ನು ಪೂರ್ವ ಮತ್ತು ಪಶ್ಚಿಮದೆಂದು ಎರಡಾಗಿ ಭಾಗಿಸಿದೆ. ಪೂರ್ವಪ್ರದೇಶ ಪಶ್ಚಿಮ ಪ್ರದೇಶಕ್ಕಿಂತ ಆಳವಾಗಿದೆ. ಇಲ್ಲಿ ಸಮುದ್ರದ ಆಳ 1.501 ಮೀಟರ್‍ಗಳಿಂದ 5.150 ಮೀಟರ್‍ಗಳವರೆಗಿದೆ.

ಪೂರ್ವ ಮೆಡಿಟರೇನಿಯನ್ ಒಳಭಾಗದಲ್ಲಿ ನೂರಾರು ಸಣ್ಣ ಸಣ್ಣ ತಗ್ಗಾದ ಭಾಗಗಳು ಕಂಡುಬರುತ್ತವೆ. ಈ ಭಾಗದ ಏಡ್ರಿಯಾಟಿಕ್ ಸಮುದ್ರ ಪ್ರದೇಶದಲ್ಲೂ ಅನೇಕ ತಗ್ಗಾದ ಪ್ರದೇಶಗಳಿವೆ. ಪೂರ್ವ ಮೆಡಿಟರೇನಿಯನ್ ಸಮುದ್ರದ ಆಳ ದಕ್ಷಿಣದಿಂದ ಉತ್ತರಕ್ಕೆ ಹೋದಂತೆ ಕಡಿಮೆಯಾಗುವುದು. ಈ ಭಾಗದ ಏಡ್ರಿಯಾಟಿಕ್ ಸಮುದ್ರವನ್ನು ಬಿಟ್ಟು ಉಳಿದ ಭಾಗಗಳಲ್ಲಿ ಹೆಚ್ಚು ಆಳವಿದ್ದು ಕಡಿದಾದ ಖಂಡಾವರಣ ಪ್ರದೇಶವಿದೆ. ಈ ಭಾಗದ ವಾಯುಗುಣ ಬೇಸಗೆ ಕಾಲದಲ್ಲಿ ಉತ್ತರದಿಂದ ಬೀಸುವ ಮಾರುತಗಳು ಏಜಿಯನ್ ಭಾಗಕ್ಕೆ ತಂಪು ತರುತ್ತವೆ. ಈ ಸಮುದ್ರದ ಮಧ್ಯಭಾಗ ಹೆಚ್ಚು ಆಳವಿಲ್ಲದ ಏಡ್ರಿಯಾಟಿಕ್ ಮತ್ತು ಅಧಿಕ ಆಳದಿಂದ ಕೂಡಿದ ಅಯೋನಿಯನ್ ಸಮುದ್ರ ಪ್ರದೇಶಗಳಿಂದ ಕೂಡಿದೆ. ಈ ಮಧ್ಯಭಾಗ ದಕ್ಷಿಣ ಆಫ್ರಿಕದಿಂದ ಬೀಸುವ ಹೆಚ್ಚು ಶಾಖದಿಂದ ಕೂಡಿದ ಸಿರಾಕೋ ಮಾರುತಗಳ ಮತ್ತು ಉತ್ತರದ ಏಡ್ರಿಯಾಟಿಕ್‍ನಿಂದ ಬೀಸುವ ಬೋರಾ ಎಂಬ ಮಾರುತಗಳ ಪ್ರಭಾವಕ್ಕೊಳಗಾಗಿದೆ.

ಮೆಡಿಟರೇನಿಯನ್ ಸಮುದ್ರದ ಪಶ್ಚಿಮಭಾಗದಲ್ಲಿ ಜಿûಬ್ರಾಲ್ಟರ್, ಸಿಸಿಲಿ, ಇಟಲಿ ಮತ್ತು ಅದಕ್ಕೆ ಸೇರಿದ ಪ್ರದೇಶಗಳು ನೇಪಲ್ಸ್, ಕಾರ್ಸಿಕ, ಸಾರ್ಡೀನಿಯ, ಸ್ಪೇನ್ ಮತ್ತು ಬಾಲಿಯರಿಕ್ ದ್ವೀಪಗಳು ಇವೆ. ವಾಯವ್ಯ ದಿಕ್ಕಿನ ಗಲ್ಫ್ ಆಫ್ ಲಯನ್ಸ್ ಪ್ರದೇಶದಲ್ಲಿ ಬೀಸುವ ಚಳಿಗಾಲದ ಚಂಡಮಾರುತದಿಂದಾಗಿ ಹಾನಿಯಾಗುವುದುಂಟು.

ಈ ಸಮುದ್ರದ ತಳ ಮಂದದ ಕಂದುಬಣ್ಣದ ಗಸಿಯಿಂದ ಕೂಡಿದೆ. ಈ ಗಸಿಯ ಬಹುಪಾಲು ತಿಳಿಯಮಣ್ಣಿನಿಂದ ಕೂಡಿದ್ದು ಶೇಕಡಾ 50ರಷ್ಟು ಕ್ಯಾಲ್ಸಿಯಂ ಕಾರ್ಬೋನೇಟ್ ಆಗಿದೆ. ಕಾರಣವೇನೆಂದರೆ ಈ ಸಮುದ್ರ ಸೇರುವ ನದಿಗಳ ಉಗಮ ಸ್ಥಾನದಿಂದ ಸಮುದ್ರ ಸೇರುವ ದೂರ ಬಹಳ ಕಡಿಮೆ ಇರುವುದರಿಂದ ನದಿಗಳು ತಮ್ಮೊಡನೆ ತಂದ ಗಸಿಯನ್ನೆಲ್ಲ ಸಮುದ್ರದ ತಳಭಾಗದಲ್ಲಿಯೇ ಶೇಖರಿಸುತ್ತವೆ. ಆದರೆ ನೈಲ್, ಪೋ ನದಿಗಳು ಇದಕ್ಕೆ ಹೊರತಾಗಿವೆ.

ಲವಣತೆ[ಬದಲಾಯಿಸಿ]

ಮೆಡಿಟರೇನಿಯನ್ ಸಮುದ್ರದಿಂದ ನೀರು ಹೆಚ್ಚು ಪ್ರಮಾಣದಲ್ಲಿ ಆವಿಯಾಗುವುದರಿಂದ ಜಲದಲ್ಲಿಯ ಲವಣಾಂಶ ಅಟ್ಲಾಂಟಿಕ್ ಸಾಗರ ಮತ್ತು ಕಪ್ಪು ಸಮುದ್ರಕ್ಕಿಂತ ಅಧಿಕವಾಗಿರುತ್ತದೆ. ಲವಣತೆಯ ಪ್ರಮಾಣ ಸಮುದ್ರದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹೋದಂತೆ ಅಧಿಕವಾಗುತ್ತ ಹೋಗುತ್ತದೆ. ಸಾಮಾನ್ಯವಾಗಿ ಮಳೆಗಾಲ ಕಡಿಮೆಯಾದಂತೆ ಲವಣತೆ ಹೆಚ್ಚಾಗುತ್ತದೆಯಲ್ಲದೆ ನದಿಯ ನೀರು ಬಂದು ಸೇರುವ ಜಾಗದಲ್ಲಿ ಕಡಿಮೆ ಇರುತ್ತದೆ.

ನೀರಿನ ಸಮತೋಲನ[ಬದಲಾಯಿಸಿ]

ಸಮುದ್ರದ ನೀರಿನ ಬಾಷ್ಟೀಕರಣ, ಮಳೆ ಮತ್ತು ಜಿóಬ್ರಾಲ್ಟರ್ ಜಲಸಂಧಿ ಮೂಲಕ ಅಟ್ಲಾಂಟಿಕ್ ಸಾಗರದಿಂದ ಮೆಡಿಟರೇನಿಯನ್ ಸಮುದ್ರದೊಳಕ್ಕೆ ಹರಿಯುವ ನೀರು - ಇವು ಈ ಸಮುದ್ರದ ನೀರಿನ ಸಮತೋಲನ ಕಾರ್ಯದಲ್ಲಿ ಪ್ರಮುಖಪಾತ್ರ ವಹಿಸಿದೆ. ಸಾಮಾನ್ಯವಾಗಿ ಸಮುದ್ರಕ್ಕೆ ಸೇರುವ ನೀರಿನ ಪ್ರಮಾಣ ನಷ್ಟವಾಗುವ ನೀರಿನ ಪ್ರಮಾಣಕ್ಕಿಂತ ಅಧಿಕವಾಗಿರುತ್ತದೆ. ಇದರಿಂದಾಗಿ ನೀರಿನ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದನ್ನು ನಿವಾರಿಸಲು ಅಟ್ಲಾಂಟಿಕ್ ಸಾಗರದಿಂದ ಜಿóಬ್ರಾಲ್ಟರ್ ಜಲಸಂಧಿ ಮೂಲಕ ಮೆಡಿಟರೇನಿಯನ್ ಸಮುದ್ರಕ್ಕೆ ಮೇಲ್ ಪ್ರವಾಹ ಮೆಡಿಟರೇನಿಯನ್ ಸಮುದ್ರದಿಂದ ಅಟ್ಲಾಂಟಿಕ್ ಸಾಗರಕ್ಕೆ ಒಳಪ್ರವಾಹ ಹರಿಯುತ್ತಲೇ ಇರುತ್ತವೆ. ಈ ಬಗೆಯಲ್ಲಿ ಮೆಡಿಟರೇನಿಯನ್ ಸಮುದ್ರದ ಜಲ ಸಮತೋಲನವಾಗುತ್ತಲೇ ಇರುತ್ತದೆ.

ಹವಾಗುಣ[ಬದಲಾಯಿಸಿ]

ಈ ಸಮುದ್ರದ ಮೇಲ್ಪದರದ ಉಷ್ಣತೆ ಋತುಮಾನಕ್ಕೆ ತಕ್ಕಂತೆ ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ಮೇಲ್ಮಟ್ಟದಲ್ಲಿ 16(ಅ ಇರುತ್ತದೆ. ಬೇಸಗೆಯಲ್ಲಿ ಮೇಲಿನ ಉಷ್ಣತೆ 27(ಅ ಮುಟ್ಟುವುದೂ ಇದೆ. ಚಳಿಗಾಲದಲ್ಲಿ 4(ಅ ಇಳಿಯುವುದೂ ಉಂಟು. ಸಮುದ್ರ ಮಧ್ಯಪ್ರದೇಶದ ಒಳಗಡೆ ಮತ್ತು ತಳದಲ್ಲಿ ವರ್ಷವಿಡೀ ಉಷ್ಣತೆ 13(ಅ ಯಿಂದ 15(ಅ ವರೆಗೆ ಇರುತ್ತದೆ.

ಚಳಿಗಾಲದಲ್ಲಿ ಈ ಸಮುದ್ರದ ಮೇಲಿನ ಗಾಳಿ ಬೆಚ್ಚಗಿದ್ದು ಕಡಿಮೆ ಒತ್ತಡ ಪ್ರದೇಶವಾಗಿ ಮಾರ್ಪಾಡಾಗುತ್ತದೆ. ಇದಕ್ಕೆ ವಿರುದ್ಧವಾಗಿ ಭೂಪ್ರದೇಶದಿಂದ ಹೆಚ್ಚು ಒತ್ತಡವುಳ್ಳ ಗಾಳಿ ಸಮುದ್ರದ ಕಡೆಗೆ ನುಗ್ಗುತ್ತದೆ. ಬೇಸಗೆಯಲ್ಲಿ ಸಮುದ್ರದ ಮೇಲಿನ ಪ್ರದೇಶ ಹೆಚ್ಚು ಒತ್ತಡದಿಂದ ಕೂಡಿದ್ದು ಸುತ್ತಲಿನ ಭೂ ಪ್ರದೇಶದಲ್ಲಿ ಕಡಿಮೆ ಒತ್ತಡವಿರುತ್ತದೆ. ಆಗ ಸಮುದ್ರದ ಮೇಲಿನ ಗಾಳಿ ಭೂಪ್ರದೇಶದ ಕಡೆಗೆ ಬೀಸುತ್ತದೆ. ಈ ಪ್ರದೇಶದ ವಾರ್ಷಿಕ ಮಳೆ ಪ್ರಮಾಣ ಪಶ್ಚಿಮದಿಂದ ಪರ್ವಕ್ಕೆ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಹೋದಂತೆ ಕಡಿಮೆಯಾಗುತ್ತದೆ. ಉದಾಹರಣೆಗೆ ಸಮುದ್ರದ ಉತ್ತರಭಾಗದ ಡಾಲ್ಮೆಷೀಯ ತೀರದ ಬಳಿ ವಾರ್ಷಿಕ ಮಳೆಯ ಪ್ರಮಾಣ ಸುಮಾರು 457 ಸೆಂಮೀ ಆದರೆ ದಕ್ಷಿಣದ ಸಹರ ಮರುಭೂಮಿಯ ಬಳಿ ಸುಮಾರು 20 ಮಿಮೀ. ಈ ಸಮುದ್ರತೀರದ ಸ್ಪೇನ್, ಇಟಲಿ ಮತ್ತು ಗ್ರೀಸ್ ದೇಶಗಳಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ. ಇದಕ್ಕೆ ಪ್ರತಿಯಾಗಿ ಇಟಲಿಯ ಉತ್ತರಭಾಗ, ಯೂಗೋಸ್ಲಾವಿಯದ ಮಧ್ಯಭಾಗಗಳಲ್ಲಿ ಬೇಸಗೆಯಲ್ಲಿ ಹೆಚ್ಚು ಪರಿಸರಣ ಮಳೆಯಾಗುತ್ತದೆ. ಈ ಎರಡು ಕಾಲಗಳ ಮಧ್ಯೆ ವಸಂತ ಮತ್ತು ಶರದೃತುವಿನಲ್ಲಿ ಮೆಡಿಟರೇನಿಯನ್ ಪ್ರದೇಶದಲ್ಲಿ ಹೆಚ್ಚು ಮಳೆಯಾಗುವುದು.

ಮೆಡಿಟರೇನಿಯನ್ ಪ್ರದೇಶದಲ್ಲಿ ಚಳಿಗಾಲದ ಉಷ್ಣತೆ ಅತಿ ಕಡಿಮೆ ಆಗುವುದಿಲ್ಲ. ಆದರೆ ಯೂಗೋಸ್ಲಾವಿಯ ಮತ್ತು ಟರ್ಕಿಯ ಒಳನಾಡುಗಳು ಪೂರ್ವ ಯುರೋಪಿನಿಂದ ಬೀಸುವ ಚಳಿಗಾಳಿಗೆ ಸಿಕ್ಕಿ ವಿಪರೀತ ಚಳಿಯನ್ನು ಅನುಭವಿಸುತ್ತವೆ, ಸಮುದ್ರತೀರದ ನಾಡುಗಳಲ್ಲಿ ತೀರಕ್ಕಿಂತ ಒಳನಾಡಿನಲ್ಲಿ ಚಳಿ ಅಧಿಕ ಮತ್ತು ಪೂರ್ವತೀರಗಳಲ್ಲಿ ಪಶ್ಚಿಮತೀರಗಳಿಗಿಂತ ಇನ್ನೂ ಹೆಚ್ಚು ಚಳಿಯಿರುತ್ತದೆ. ಬೇಸಗೆಯಲ್ಲಿ ಉಷ್ಣತೆ ಭೂಪ್ರದೇಶದ ಮೇಲೆ ಅಧಿಕವಿದ್ದು ಆಫ್ರಿಕ ತೀರದಲ್ಲಿ ಪೂರ್ವಕ್ಕೆ ಚಲಿಸಿದಂತೆ ಅಧಿಕ ಶಾಖ ಪ್ರಸರಿಸುತ್ತದೆ. ಏಷ್ಯದ ಬೇಸಗೆ ಒಣ ಮಾರುತ ಎಸ್ಟಿಯನ್ ಪೂರ್ವ ಮೆಡಿಟರೇನಿಯನ್ನಿನಲ್ಲಿ ಬೀಸಿ ಆ ಪ್ರದೇಶ ಒಣಹವೆಯಿಂದ ಕೂಡಿರುವಂತೆ ಮಾಡುತ್ತದೆ. ಸಿರಾಕೋ ಒಣಮಾರುತ ಮೆಡಿಟರೇನಿಯನ್ ದಕ್ಷಿಣ ಮತ್ತು ಪೂರ್ವದಲ್ಲಿ ಆರಂಭವಾಗಿ ಉತ್ತರ ತೀರಕ್ಕೆ ಬೀಸುತ್ತದೆ. ಈ ಬಗೆಯ ವಿವಿಧ ಮಾರುತಗಳಿಂದ ಮೆಡಿಟರೇನಿಯನ್ ಪ್ರದೇಶದಲ್ಲಿ ಆಗಾಗ ಮಳೆಯಾಗುತ್ತದೆ.

1953ರಲ್ಲಿ ಏಕಾಂಗಿಯಾಗಿ ದೋಣಿಯಲ್ಲಿ ಒಂದು ಸುತ್ತು ವಿಶ್ವಪರ್ಯಟನೆ ಮಾಡಿದ ಅಮೆರಿಕದ ನಾವಿಕ ಕಾರ್ಲ್ ಪೀಟರ್‍ಸನ್ ಕ್ರೀಟ್ ಮತ್ತು ಮಾಲ್ಟ ನಡುವೆ ಕಂಡುಬಂದ ವಿಶಿಷ್ಟಬಗೆಯ ಹವೆಯ ಪರಿಸ್ಥಿತಿ ಅಟ್ಲಾಂಟಿಕ್ ಸಾಗರ, ಪೆಸಿಫಿಕ್ ಮತ್ತು ಹಿಂದುಮಹಾಸಾಗರಗಳಲ್ಲೆಲ್ಲೂ ಕಾಣಲಿಲ್ಲ ಎಂದಿದ್ದಾನೆ. ವಸಂತಋತು ಮತ್ತು ಬೇಸಗೆ ಕಾಲಗಳಲ್ಲಿ ತಂಗಾಳಿ ಬೀಸುವುದರಿಂದ ಮೆಡಿಟರೇನಿಯನ್ ಸಮುದ್ರ ಶಾಂತವಾಗಿರುತ್ತದೆ. ಹೆಚ್ಚು ಉಬ್ಬರವಿಳಿತಗಳ ಅಬ್ಬರವಿರುವುದಿಲ್ಲ. ಇಲ್ಲಿಯ ಪರಮಾವಧಿ ಏರಿಳಿತಗಳೆಂದರೆ : ಕೇವಲ 30.4 ಸೆಂಮೀ ಮಾತ್ರ. ಈ ಸಮುದ್ರ ಸಾಗರಪ್ರವಾಹಗಳನ್ನು ಹೊಂದಿದೆ. ಈ ಸಮುದ್ರದ ಮೇಲ್ಮೈಜಲ ಹೆಚ್ಚು ಆವಿಯಾಗುವಿಕೆಯಿಂದ ಉಂಟಾಗುವ ನಷ್ಟವನ್ನು ತುಂಬಲು ಎರಡು ಸಾಗರ ಪ್ರವಾಹಗಳಿವೆ. ಅವು ಜಿóಬ್ರಾಲ್ಟರ್ ಜಲಸಂಧಿಯ ಮೂಲಕ ಅಟ್ಲಾಂಟಿಕ್ ಸಾಗರದಿಂದ ಹರಿದು ಬರುವ ಪ್ರವಾಹ ಮತ್ತು ಕಪ್ಪು ಸಮುದ್ರದಿಂದ ಹರಿದುಬರುವ ಪ್ರವಾಹ. ಹೊರಗಿನಿಂದ ಹೊಸ ತಿಳಿನೀರಿನ ಉಷ್ಣಪ್ರವಾಹ ಮೇಲ್ಭಾಗದಲ್ಲಿ ಹರಿದು ಒಳಬಂದತೆಲ್ಲ ಹೆಚ್ಚು ಸಾಂದ್ರತೆ ಮತ್ತು ಲವಣತೆಯಿಂದ ಕೂಡಿದ ಭಾರವಾದ ತಣ್ಣೀರು ಆಳದಲ್ಲಿ ಹೊರಕ್ಕೆ ಹರಿಯುವುದರಿಂದ ಮೆಸಿನಾ ಮುಂತಾದ ರೇವುಗಳಲ್ಲಿ ಸಾಮಾನ್ಯ ಉಬ್ಬರವುಂಟಾಗುವುದು. ಹೆಚ್ಚು ಉಬ್ಬರವಿಳಿತಗಳ ಆರ್ಭಟದಿಂದ ಮುಕ್ತವಾಗಿರುವ ಮೆಡಿಟರೇನಿಯನ್ ಸಮುದ್ರ ನೌಕಾಯಾನಕ್ಕೆ ಸುಲಲಿತವಾಗಿದೆ.

ಈ ಸಮುದ್ರದ ಸುತ್ತಲೂ ಬೆಳೆದ ಅನೇಕ ಸಂಸ್ಕøತಿ ಮತ್ತು ನಾಗರಿಕತೆಗಳ ಜನನಕ್ಕೆ ಇದರ ಸುಲಭ ನೌಕಯಾನ, ಅಲ್ಪ ಚಳಿಗಾಲ ಮತ್ತು ಸಮಧಾತು ದೀರ್ಘ ಬೇಸಗೆಯಿಂದ ಕೂಡಿದ ಆಹ್ಲಾದಕರ ವಾಯುಗುಣ ಕಾರಣವಾಗಿದೆಯೆನ್ನಬಹುದು.

ಮೀನುಗಾರಿಕೆ[ಬದಲಾಯಿಸಿ]

ತೀರದ ಮೀನುಗಾರಿಕೆ ಈ ಸಮುದ್ರ ಸುತ್ತಲಿನ ಅನೇಕ ದೇಶಗಳ ಆರ್ಥಿಕಾಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಕೆಲವು ಕಡೆ ದೋಣಿಗಳ ಆಕಾರ ಇನ್ನೂ ಸಾಂಪ್ರದಾಯಿಕವಾಗಿಯೇ ಉಳಿದಿದೆ. ಕೆಲವು ಕಡೆ ದೋಣಿಗಳ ಆಕಾರ ಇನ್ನೂ ಸಾಂಪ್ರದಾಯಿಕವಾಗಿಯೇ ಉಳಿದಿದೆ. ಸಿಸಿಲಿಯ ನೈಋತ್ಯತೀರದ ತೆರೆದ ಸಾಂಪ್ರದಾಯಿಕ ಹರಿಗೋಲುಗಳು ಪ್ರತಿ ಬೇಸಗೆಯಲ್ಲೂ ಉತ್ತರ ಆಫ್ರಿಕ ತೀರದ ಕಡೆಗೆ ಹಾದು ಹೋಗುವುವು. 2000 ವರ್ಷಗಳ ಅವಧಿಯಲ್ಲೂ ಈ ದೋಣಿಗಳ ರೂಪದಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ.

ಮೆಡಿಟರೇನಿಯನ್ ಚರಿತ್ರೆ[ಬದಲಾಯಿಸಿ]

ಅದರ ಸುತ್ತಲ ದೇಶಗಳ ಹುಟ್ಟು, ಬೆಳೆವಣಿಗೆ, ಯುದ್ಧ(ಅವುಗಳ ನಾಶ ಮತ್ತು ಹೊಸ ಸಂಸ್ಕøತಿಯ ಹುಟ್ಟುಗಳ ವಿಷಯವೇ ಆಗಿದೆ. ಮೊದಲನೆಯದಾಗಿ ರೋಮನ್ನರಿಗಿಂತ ಮೊದಲು ಕಡಲ ತಡಿಯ ಕಾರ್ತೇಜ್ (ಪ್ರಾಚೀನ ಗ್ರೀಸ್) ರಾಜ್ಯಗಳ ವಿಕಾಸವನ್ನು ಕಾಣಬಹುದು. ಅದೇ ಕಾಲದಲ್ಲಿ ಮೆಡಿಟರೇನಿಯನ್ ತೀರದಲ್ಲಿ ಮತ್ತು ಅಟ್ಲಾಂಟಿಕ್ ಸಾಗರ ತೀರದಲ್ಲಿ ಅನೇಕ ವ್ಯಾಪಾರ ಕೇಂದ್ರಗಳು ಬೆಳೆದು ಅವುಗಳಲ್ಲಿಯೇ ಪೈಪೋಟಿ ಪ್ರಾರಂಭವಾಯಿತು. ಕ್ರಿ. ಪೂ. ಮೂರನೆಯ ಶತಮಾನದಲ್ಲಿ ಈ ಸಮುದ್ರತೀರದ ಭೂಪ್ರದೇಶಗಳನ್ನು ಒಂದೇ ಆಡಳಿತಕ್ಕೆ ಒಳಪಡಿಸಿದವರು ರೋಮನ್ನರು. ಜಿನೋವ ಮತ್ತು ವೆನಿಸ್ ನಗರಗಳು ಪ್ರಸಿದ್ಧಿಗೆ ಬಂದುವು. ಈ ರೋಮನ್ ಸಾಮ್ರಾಜ್ಯ ಕ್ರಿ.ಶ. 4ರಿಂದ 11ನೆಯ ಶತಮಾನದಲ್ಲಿ ಜರ್ಮನ್ನರ ದಾಳಿಗೆ ತುತ್ತಾಯಿತು. ಇದೇ ವೇಳೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳು, ಉತ್ತರ ಆಫ್ರಿಕ, ಸ್ಪೇನ್ ಹಾಗೂ ಸಿಸಿಲಿಯ ಮೇಲೆ ಅರಬ್ಬರು ದಾಳಿ ನಡೆಸಿದರು. ಈ ವೇಳೆಯಲ್ಲಿ ಮೆಡಿಟರೇನಿಯನ್ ತೀರಪ್ರದೇಶಗಳಲ್ಲಿ ವ್ಯಾಪಾರ ನಿಂತು, ಅಟ್ಲಾಂಟಿಕ್ ತೀರಪ್ರದೇಶದಲ್ಲಿ ಈ ವ್ಯಾಪಾರ ಕೇಂದ್ರಿಕೃತವಾಯಿತು. ಈ ಮಧ್ಯೆ ಕ್ರಿ. ಶ. 800ರಲ್ಲಿ ಯುರೋಪ್ ಖಂಡದ ಏಕಾಡಳಿತದ ಸಂಘಟನಾಕಾರ್ಯ ನಡೆಯಿತು.

ಕ್ರಿ. ಶ. 11ನೆಯ ಶತಮಾನದ ವೇಳೆಗೆ ಒಳಜಗಳಗಳ ಕಾರಣದಿಂದ ಅರಬ್ ಸಾಮ್ರಾಜ್ಯ ಕ್ಷೀಣಿಸುತ್ತ ಬಂದಿತು. ಧರ್ಮಯುದ್ಧ ತಲೆದೋರಿ ಮೆಡಿಟರೇನಿಯನ್ ತೀರದ ಬಂದರುಗಳಾದ ಕಾನ್‍ಸ್ಟಾಂಟಿನೋಪಲ್, ಬಾರ್ಸಿಲೋನ, ಇಟಲಿಯ ವಾಣಿಜ್ಯ ಕೇಂದ್ರಗಳು ವ್ಯಾಪಾರದಲ್ಲಿ ಮೊದಲಿನ ಸ್ಥಾನವನ್ನು ಮತ್ತೆ ಪಡೆದುಕೊಂಡವು. 15ನೆಯ ಶತಮಾನದ ಆಟೋಮನ್ ತುರ್ಕರ ಏಳಿಗೆ ಮೆಡಿಟರೇನಿಯನ್ ಪ್ರದೇಶದಲ್ಲಿ ಒಂದು ಆಘಾತವನ್ನು ತಂದೊಡ್ಡಿತು. ಇದೇ ಸಮಯಕ್ಕೆ ಆಫ್ರಿಕದ ಕೇಪ್ ಆಫ್ ಗುಡ್ ಹೋಪ್ ಮಾರ್ಗವಾಗಿ ಆಗ್ನೇಯ ಏಷ್ಯ ರಾಷ್ಟ್ರಗಳಿಗೆ ಕಂಡುಹಿಡಿದ ಜಲಮಾರ್ಗ ಯುರೋಪಿನ ವ್ಯಾಪಾರಾಭಿವೃದ್ಧಿಗೆ ಅನುಕೂಲವಾಯಿತು.

ಸಮುದ್ರಮಾರ್ಗ , ಕೈಗಾರಿಕಾಭಿವೃದ್ಧಿ ಮತ್ತು ರಾಜಕೀಯ[ಬದಲಾಯಿಸಿ]

1869ರಲ್ಲಿ ಸೂಯೆಜ್ ಕಾಲುವೆಯ ಆರಂಭ, ವಾಯವ್ಯ ಯುರೋಪಿನ ಕೈಗಾರಿಕಾಭಿವೃದ್ಧಿಗೆ ಉತ್ತರ ಆಫ್ರಿಕದ ರಾಷ್ಟ್ರಗಳಲ್ಲಿ ಫ್ರೆಂಚರ ವ್ಯಾಪಾರ ಮಳಿಗೆಗಳ ಆರಂಭಕ್ಕೆ ಎಡೆಮಾಡಿಕೊಟ್ಟಿತ್ತಲ್ಲದೇ ಯುರೋಪ್ ಹಾಗೂ ಏಷ್ಯ ಖಂಡಗಳ ಮಧ್ಯೆ ಹೆಚ್ಚು ಸಂಪರ್ಕ ಬೆಳೆಯಲು ಕಾರಣವಾಯಿತು.

ಮೆಡಿಟರೇನಿಯನ್ ಸಮುದ್ರಮಾರ್ಗ ವಸ್ತು ಸಾಗಣೆಯಲ್ಲಿ ಎಷ್ಟೇ ಪ್ರಮುಖವಾದರೂ ಇದರ ಸುತ್ತಲ ಪ್ರದೇಶಗಳು ಸಾಕಷ್ಟು ಕೈಗಾರಿಕಾಭಿವೃದ್ಧಿ ಸಾಧಿಸಲಾಗಿಲ್ಲ. ವಾಯವ್ಯ ಯುರೋಪ್ ರಾಷ್ಟ್ರಗಳ ನೇರ ಹಾಗೂ ಪರಸ್ಪರ ಸ್ಪರ್ಧೆ ಮೆಡಿಟರೇನಿಯನ್ ಪ್ರದೇಶಗಳು ತಮ್ಮ ಪ್ರಾಚೀನ ಕಸುಬಾದ ವ್ಯವಸಾಯದಲ್ಲಿಯೇ ಉಳಿಯುವಂತೆ ಮಾಡಿದುವು. ಕ್ರಿ.ಶ.18ನೆಯ ಶತಮಾನದಿಂದ ಎರಡನೆಯ ಮಹಾಯುದ್ಧ ಕಾಲದ ತನಕ ಮೆಡಿಟರೇನಿಯನ್ ಪ್ರದೇಶದ ಪ್ರಮುಖ ಬಂದರುಗಳು ಬ್ರಿಟಿಷರ ಆಡಳಿತಕ್ಕೆ ಸೇರಿದ್ದುವು. ಹಾಗೆಯೇ ಎರಡನೆಯ ಮಹಾಯುದ್ಧ ಕಾಲದಲ್ಲಿ ಅಮೆರಿಕನ್ನರು ಅನೇಕ ಆಫ್ರಿಕನ್ ರಾಷ್ಟ್ರಗಳನ್ನು ತಮ್ಮ ವಶಪಡಿಸಿಕೊಂಡರು. ಈ ರೀತಿಯ ಅಮೆರಿಕನ್ನರ ಆಗಮನ ಯುರೋಪ್ ರಾಷ್ಟ್ರಗಳಿಗೆ ಮೆಡಿಟರೇನಿಯನ್ ಪ್ರದೇಶದ ಮೇಲಿದ್ದ ಒಡೆತನಕ್ಕೆ ಅಡ್ಡಿಯುಂಟಾಯಿತು. ತದನಂತರ ಅಮೆರಿಕ ಸಂಯುಕ್ತ ಸಂಸ್ಥಾನ ಮೆಡಿಟರೇನಿಯನ್ ಪ್ರದೇಶದ ಒಡೆತನವನ್ನು ಪಡೆಯುವುದರಲ್ಲಿ ಮುಂದಾಯಿತು. ಇದಾದ ಬಳಿಕ ಅಮೆರಿಕ ಸಂಯುಕ್ತಸಂಸ್ಥಾನ ಇನ್ನೂ ಮುನ್ನುಗ್ಗಿ ಮಧ್ಯಪ್ರಾಚ್ಯ ರಾಷ್ಟ್ರಗಳ ಎಣ್ಣೆಯ ಒಡೆತನವನ್ನು ಪಡೆದು ಯುರೋಪ್ ರಾಷ್ಟ್ರಗಳಾಗಲಿ ಮತ್ತು ರಷ್ಯ ದೇಶವಾಗಲಿ ಈ ಪ್ರದೇಶಗಳ ಪ್ರಾಬಲ್ಯ ಪಡೆಯದಂತೆ ಅಡ್ಡಿಯುಂಟುಮಾಡಿತು. ಇಂದು ಮೆಡಿಟರೇನಿಯನ್ ಸಮುದ್ರದ ಸುತ್ತಲೂ ರಾಷ್ಟ್ರೀಯ ಹಾಗೂ ರಾಜಕೀಯ ಪ್ರಜ್ಞೆ ಎಚ್ಚೆತ್ತ ಅನೇಕ ರಾಷ್ಟ್ರಗಳು ತಲೆ ಎತ್ತಿವೆ. ಅವುಗಳಲ್ಲಿ ಇಸ್ರೇಲ್, ಅರಬ್ ಗಣರಾಜ್ಯಗಳು ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಪಾಶ್ಚಾತ್ಯರ ಪ್ರಜಾಪ್ರಭುತ್ವ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಪಾಶ್ಚಾತ್ಯ ಸಂಸ್ಕøತಿ ಈ ದೇಶಗಳ ಮೇಲೆ ಪ್ರಭಾವಬೀರಿ ಅವುಗಳ ಮುಖವಾಡವನ್ನೆ ಬದಲಾಯಿಸಿದೆ. ಫ್ರೆಂಚರು ಮೆಡಿಟರೇನಿಯನ್ ಗೆಳೆಯರ ಸಂಘ ಮತ್ತು ಮೆಡಿಟರೇನಿಯನ್ ವಿಶ್ವವಿದ್ಯಾಲಯ ಸ್ಥಾಪಿಸಿಕೊಂಡಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "How did mediterranean sea get its name?". Yahoo Inc. approx. 06 May 2008. Archived from the original on 27 ಜುಲೈ 2011. Retrieved 06 January, 2009. {{cite web}}: Check date values in: |accessdate= and |date= (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: