ವಿಷಯಕ್ಕೆ ಹೋಗು

ಕಡಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chickpea
White and green chickpeas
Sprouted chickpea
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
C. arietinum
Binomial name
Cicer arietinum
Synonyms
  • Cicer album hort.
  • Cicer arientinium L. [Spelling variant]
  • Cicer arientinum L. [Spelling variant]
  • Cicer edessanum Bornm.
  • Cicer grossum Salisb.
  • Cicer nigrum hort.
  • Cicer physodes Rchb.
  • Cicer rotundum Alef.
  • Cicer sativum Schkuhr
  • Cicer sintenisii Bornm.
  • Ononis crotalarioides M.E.Jones

}}

Cicer arietinum noir

ಕಡಲೆ ಕಾಳು

[ಬದಲಾಯಿಸಿ]

ಕಡಲೆ (ಸೈಸರ್ ಏರೀಟಿನಮ್) ಫ಼್ಯಾಬೇಸಿಯಿ ಕುಟುಂಬ, ಫ಼್ಯಾಬಾಯ್ಡಿಯಿ ಉಪಕುಟುಂಬದ ಒಂದು ದ್ವಿದಳ ಧಾನ್ಯ ಕಾಳು. ಅದರ ಬೀಜಗಳಲ್ಲಿ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದು ಅತ್ಯಂತ ಮೊದಲು ಬೇಸಾಯ ಮಾಡಲ್ಪಟ್ಟ ಸಸ್ಯಗಳ ಪೈಕಿ ಒಂದು: ೭,೫೦೦ ವರ್ಷ ಹಳೆಯ ಅವಶೇಷಗಳು ಮಧ್ಯಪ್ರಾಚ್ಯದಲ್ಲಿ ಕಂಡುಬಂದಿವೆ. ಬಹುಸಂಖ್ಯಾತ ಶಾಕಾಹಾರಿಗಳೇ ಇರುವ ಭಾರತದಲ್ಲಿ, ಜನರ ಸಸಾರಜನಕದ (ಪ್ರೋಟೀನ್) ಪುರೈಕೆ ಮಾಡುವಲ್ಲಿ ದ್ವಿದಳ ಧಾನ್ಯಗಳಾದ ಕಡಲೆ ಮತ್ತು ತೊಗರಿಗಳ ಪಾತ್ರ ಬಹಳ ಹಿರಿದು. ಅತಿ ಪುರಾತನ ಕಾಲದಿಂದಲೂ ಬಳಕೆಯಲ್ಲಿರುವ ಕಡಲೆಯನ್ನು, ಏಷ್ಯ ಮತ್ತು ಯುರೋಪ್ ಖಂಡಗಳ ಹಲವಾರು ಭಾಗಗಳಲ್ಲಿ ಬೆಳೆಯುತ್ತಾರೆ. ಇದರ ಮೂಲಸ್ಥಾನ ಬಹುಶಃ ಮೆಡಿಟರೇನಿಯನ್ ಪ್ರದೇಶ.

ವೈಜ್ಞಾನಿಕ ನಾಮ

[ಬದಲಾಯಿಸಿ]

ಲೆಗ್ಯುಮಿನೋಸೀ ಕುಟುಂಬದ ಸೈಸರ್ ಆರಿಯಿಟಿನಮ್ ಎಂಬ ವೈಜ್ಞಾನಿಕ ಹೆಸರಿನ ವಾರ್ಷಿಕ ಸಸ್ಯ.

ಭಾರತದಲ್ಲಿ

[ಬದಲಾಯಿಸಿ]

ಮುಖ್ಯವಾಗಿ ಉತ್ತರ ಭಾರತದ ಬೆಳೆಯಾದ ಕಡಲೆಯನ್ನು ಭಾರತದ ಸು. 10 ದಶಲಕ್ಷ ಹೆಕ್ಟೇರುಗಳಷ್ಟು ಜಮೀನಿನಲ್ಲಿ ಬೆಳೆಯಲಾಗುತ್ತಿದೆ. 1967-68ನೆಯ ಸಾಲಿನಲ್ಲಿ 71,05,000 ಹೆಕ್ಟೇರುಗಳಷ್ಟು ಭೂಮಿಯಲ್ಲಿ ಬೆಳೆಯಲಾದ ಇದರ ಉತ್ಪನ್ನ ಸು. 43,09,000 ಟನ್ನುಗಳಷ್ಟಿತ್ತು. ಮೈಸೂರು ರಾಜ್ಯದಲ್ಲಿ ಕೂಡ ಕಡಲೆಗೆ ಸಾಕಷ್ಟು ಮಹತ್ತ್ವವಿದೆ. 1967-68ನೆಯ ಮೈಸೂರು ರಾಜ್ಯದಲ್ಲಿ ಕೂಡ ಕಡಲೆಯನ್ನು ಬೆಳೆದ ಪ್ರದೇಶ ಸು. 1,49,000 ಹೆಕ್ಟೇರುಗಳು ಮತ್ತು ಅದರ ಉತ್ಪನ್ನ 67,000 ಟನ್ನುಗಳು.

ಬೇಸಾಯ

[ಬದಲಾಯಿಸಿ]

ದ್ವಿದಳ ಧಾನ್ಯಗಳ ಸಸ್ಯವರ್ಗಕ್ಕೆ ಸೇರಿದ ಕಡಲೆಯನ್ನು ಬೆಳೆಯಲು ಇಂಥದೇ ಮಣ್ಣು ಬೇಕೆಂಬ ಕಟ್ಟಳೆಯೇನೂ ಇಲ್ಲವಾದರೂ ನೀರನ್ನು ಹಿಡಿದಿಡುವ ಎರೆಭೂಮಿಯಲ್ಲಿ ಹೆಚ್ಚು ಉತ್ಪನ್ನ ತೆಗೆಯಬಹುದು ಎನ್ನುವುದು ಅನುಭವಸಿದ್ಧವಾದ ಮಾತು. ಉತ್ತರ ಭಾರತದಲ್ಲಿ ಮರಳುವಿಶ್ರಿತ ಮೆಕ್ಕಲು ಮಣ್ಣಿನಲ್ಲಿ (ಅಲ್ಯೂವಿಯಲ್) ಬೆಳೆಯುತ್ತಾರೆ. ಬಿತ್ತುವಕಾಲ ಅಕ್ಟೋಬರ್-ನವೆಂಬರ್ ತಿಂಗಳು. ಚಳಿಗಾಲದ ಬೆಳೆಯಾದ್ದರಿಂದ ಮುಖ್ಯ ಬೆಳೆಯಾಗಿಯೊ ಇಲ್ಲವೆ ಬತ್ತ ರಾಗಿಗಳ ಅನಂತರ ಎರಡನೆಯ ಬೆಳೆಯಾಗಿಯೋ ಬಿತ್ತಬಹುದು. ಕರ್ನಾಟಕ ರಾಜ್ಯದಲ್ಲಿ ಇದನ್ನು ಸಾಮಾನ್ಯವಾಗಿ ಉತ್ತರ ಕರ್ಣಾಟಕದ ಕಪ್ಪು ಮಣ್ಣಿನ ಎರೆಭೂಮಿಯಲ್ಲಿ ಮಾತ್ರ ಬಿತ್ತುತ್ತಾರೆ. ಸು. 30 ಸೆಂಮೀ ಅಂತರದಲ್ಲಿ ತೂರಿಣಿ ಅಥವಾ ಸಡ್ಡೆಯ ಮೂಲಕ ಸು. 3-5 ಸೆಂಮೀ ಆಳದಲ್ಲಿ ಬಿತ್ತಿದ ಈ ಬೆಳೆ 3-3ತಿಂಗಳ ಅನಂತರ ಕಟಾವಿಗೆ ಬರುತ್ತದೆ. ಒಂದು ಎಕರೆ ಭೂಮಿಯಲ್ಲಿ ಸಂಪುರ್ಣವಾದ ಕಡಲೆ ಬೆಳೆಯನ್ನು ಬೆಳೆಯಲು ಸು. 20 ಕಿಗ್ರಾಂಗಳಷ್ಟು ಬೀಜ ಬೇಕಾಗುತ್ತದೆ. ಒಣಬೇಸಾಯಕ್ಕೆ ಅನುಕೂಲವಾದ ಬೆಳೆಯಾದ್ದರಿಂದ ಇದನ್ನು ನೀರಾವರಿಯಲ್ಲಿ ಬೆಳೆಯುವುದು ಬಹಳ ಅಪರೂಪ. ಮೊಳೆಯುವ ಸಮಯದಲ್ಲಿ ಸಾಕಷ್ಟು ನೀರು ಇದ್ದರೆ, ಮೊಳೆತ ಅನಂತರ ಅದು ಹೇಗೋ ಬೆಳೆದುಕೊಳ್ಳುತ್ತದೆ. ಇದಕ್ಕೆ ನೆಲವನ್ನು ಉತ್ತಮವಾಗಿ ತಯಾರಿಸಬೇಕೆಂಬ ಅಗತ್ಯವೂ ಇಲ್ಲ. ಸುತ್ತಲೂ ಹರಡಿಕೊಂಡು ತೀವ್ರವಾಗಿ ಬೆಳೆಯುವ ಗುಣದಿಂದಾಗಿ ಕಳೆಯನ್ನು ತೆಗೆಯದಿದ್ದರೂ ತಾನೇ ಅದನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಕಡಲೆಯ ಹೊಲಗಳಲ್ಲಿ ಕಳೆಗಳ ತೊಂದರೆ ಅಷ್ಟಾಗಿ ಕಂಡುಬರಲಾರದು. ಆದರೂ ಒಂದೆರಡು ಸಲ ಎಡೆ ಹೊಡೆಯುವುದರಿಂದ ಮಳೆಯ ನೀರನ್ನು ಸಂಗ್ರಹಿಸಿ, ಗಿಡಗಳಿಗೆ ಉಪಯೋಗವಾಗುವಂತೆ ಮಾಡಬಹುದು. ಸಾಮಾನ್ಯವಾಗಿ ಇದಕ್ಕೆ ಗೊಬ್ಬರದ ಅವಶ್ಯಕತೆ ಇಲ್ಲ. ಆದರೆ ರಂಜಕಯುಕ್ತ ಗೊಬ್ಬರಗಳನ್ನು ಹಾಕುವುದರಿಂದ ಉತ್ತಮವಾದ ಬೆಳೆ ತೆಗೆಯಬಹುದು ಎಂದು ಪ್ರಯೋಗಗಳು ತೋರಿಸಿವೆ.ಕಡಲೆಯ ಗಿಡಗಳು 0.3048-0.6096 ಮೀ ಗಳಷ್ಟು ಎತ್ತರವಾಗಿ ಬೆಳೆಯುತ್ತಿದ್ದು, ಬಹಳ ಕವಲೊಡೆಯುವ ಸಾಮಥರ್ಯ್‌ ಪಡೆದಿವೆ. ಎಲೆಗಳ ಬಣ್ಣ ನೀಲಿ ಹಸುರು. ಒಂದೇ ಪತ್ರಕಾಂಡದ ಮೇಲೆ, ಹಲವಾರು ಉಪಪತ್ರಗಳಿದ್ದು ಅವು ಅಂಡಾಕಾರವಾಗಿವೆ. ಎಲೆಗಳ ಅಂಚು ಗರಗಸದಂತೆ. ಪ್ರತಿಯೊಂದು ಉಪಪತ್ರದ ಅಳತೆ ಸು. 6 ಮಿಮೀ ಉದ್ದ ಮತ್ತು 4 ಮಿಮೀ ಅಗಲ ಇದೆ. ಎಲೆಗಳ ಕಂಕುಳಗಳಲ್ಲಿ ಕಂದು ಮತ್ತು ನೀಲಿ ಮಿಶ್ರಿತ ಬಣ್ಣದ ಒಂದೊಂದೇ ಹೂಗಳನ್ನು ಕಾಣಬಹುದು. ಕಾಯಿಗಳು ಸು. 1" ಉದ್ದವಿದ್ದು, ಒಂದು ಅಥವಾ ಎರಡು ಕಾಳುಗಳನ್ನು ಹೊಂದಿವೆ. ತಾಯಿಬೇರಿನ ಪ್ರಕಾರಕ್ಕೆ ಸೇರಿದ ಈ ಗಿಡದ ಬೇರುಗಳ ಮೇಲೆ ಚಿಕ್ಕ ಚಿಕ್ಕ ಗಂಟುಗಳನ್ನು (ನಾಡ್ಯೂಲ್) ಕಾಣಬಹುದು. ಈ ಗಂಟುಗಳಲ್ಲಿ ಇರುವ ಏಕಾಣುಜೀವಿಗಳು (ಬ್ಯಾಕ್ಟೀರಿಯ) ಹವೆಯಲ್ಲಿರುವ ಸಾರಜನಕವನ್ನು ತೆಗೆದುಕೊಂಡು. ಅದನ್ನು ಸಸ್ಯಗಳು ಸುಲಭವಾಗಿ ಹೀರಿಕೊಳ್ಳುವಂತೆ ರೂಪಾಂತರಿಸುತ್ತವೆ. ಇದರಿಂದಾಗಿ, ಕಡಲೆ ಮತ್ತು ಇತರ ದ್ವಿದಳ ಧಾನ್ಯಗಳನ್ನು ಬೆಳೆದ ಮೇಲೆ ಭೂಮಿಯ ಫಲವತ್ತು ಹೆಚ್ಚುತ್ತದೆ. ಇದನ್ನು ಧಾನ್ಯಸಸ್ಯಗಳೊಡನೆ ಮಿಶ್ರ ಬೆಳೆಯಾಗಿ ಬೆಳೆದಾಗ, ಧಾನ್ಯಗಳ ಇಳುವರಿಯನ್ನೂ ಹೆಚ್ಚಿಸಬಹುದಾದ್ದರಿಂದ, ಉತ್ತರಭಾರತದಲ್ಲಿ ಕಡಲೆಯನ್ನು ಗೋದಿ ಮತ್ತು ಜವೆಗೋದಿಗಳೊಡನೆ ಪರ್ಯಾಯ ಬೆಳೆಯಾಗಿ ಬೆಳೆಯುವ ಪದ್ಧತಿಯಿದೆ. ಕಡಲೆಯ ಗಿಡಗಳನ್ನು ಬೆಳಗಿನ ಹೊತ್ತಿನಲ್ಲಿ ಮುಟ್ಟಿದರೆ, ಕೈಗೆ ಒಂದು ರೀತಿಯ ಜಿಗುಟು ಹತ್ತುತ್ತದೆ. ಇದು ಈ ಗಿಡಗಳಿಂದ ಹೊರಬರುವ ಮ್ಯಾಲಿಕ್ ಮತ್ತು ಆಕ್ಸಾಲಿಕ್ ಆಮ್ಲಗಳಿಂದ ಉಂಟಾಗುವಂಥದು. ಗಿಡಗಳ ಮೇಲೆ ರಾತ್ರಿಯ ಹೊತ್ತು ಮಸ್ಲಿನ್ಬಟ್ಟೆಯನ್ನು ಹರವಿ ಇಟ್ಟರೆ, ಬೆಳಗ್ಗೆ ಆ ಬಟ್ಟೆಗೆ ಅಂಟಿಕೊಂಡ ಆಮ್ಲವನ್ನು ನೀರಿನಲ್ಲಿ ನೆನೆಸಿ ಬೇರ್ಪಡಿಸಬಹುದು. ಹೆಕ್ಟೇರಿಗೆ 4-41/2 ಕಿಲೊಗ್ರಾಂಗಳಷ್ಟು ದೊರೆಯಬಹುದಾದ ಈ ಆಮ್ಲಗಳ ಮಿಶ್ರಣವನ್ನು ಅಜೀರ್ಣ ಮತ್ತಿತರ ಉದರರೋಗಗಳಿಗೆ ಉಪಯೋಗಿಸುತ್ತಾರೆ.

ಪ್ರಬೇಧಗಳು

[ಬದಲಾಯಿಸಿ]
ಪ್ರತಿ 100 ಗ್ರಾಂನಲ್ಲಿ ಪೌಷ್ಟಿಕಾಂಶ (3.5 ಔನ್ಸ್)
  • ಶಕ್ತಿ 686 ಕೆಜೆ (164 kcal)
  • ಕಾರ್ಬೋಹೈಡ್ರೇಟ್ಗಳು=27,42 ಗ್ರಾಂ
  • ಸಕ್ಕರೆ =4.8 ಗ್ರಾಂ
  • ಆಹಾರದಲ್ಲಿನ ಫೈಬರ್ =7.6 ಗ್ರಾಂ
  • ಫ್ಯಾಟ್ =2.59 ಗ್ರಾಂ
  • ಸ್ಯಾಚ್ಯುರೇಟೆಡ್ =0,269 ಗ್ರಾಂ
  • ಏಕಾಪರ್ಯಾಪ್ತ =0,583 ಗ್ರಾಂ
  • ಅಪರ್ಯಾಪ್ತ =1,156 ಗ್ರಾಂ
  • ಪ್ರೋಟೀನ್ =8,86 ಗ್ರಾಂ
  • ವಿಟಮಿನ್ಸ್
  • ಒಂದು equiv ವಿಟಮಿನ್. =(0%) 1 μg
  • ಥಿಯಾಮೈನ್ (ಬಿ 1) =(10%) 0.116 ಮಿಗ್ರಾಂ
  • ಲಿಂಕಿಂಗ್ (B2) =(5%) 0.063 ಮಿಗ್ರಾಂ
  • ನಿಯಾಸಿನ್ (B3) =(4%) 0.526 ಮಿಗ್ರಾಂ
  • ಪಾಂಟೊಥೆನಿಕ್ ಆಮ್ಲ =(ಬಿ 5) (6%) 0.286 ಮಿಗ್ರಾಂ
  • ಜೀವಸತ್ವ B6 =(11%) 0.139 ಮಿಗ್ರಾಂ
  • ಫೋಲೇಟ್ =(B9) (43%) 172 μg
  • ವಿಟಮಿನ್ ಬಿ 12 =(0%) 0 μg
  • ವಿಟಮಿನ್ ಸಿ =(2%) 1.3 ಮಿಗ್ರಾಂ
  • ವಿಟಮಿನ್ ಇ =(2%) 0.35 ಮಿಗ್ರಾಂ
  • ವಿಟಮಿನ್ ಕೆ =(4%) 4 μg
  • ಮಿನರಲ್ಸ್
  • ಕ್ಯಾಲ್ಸಿಯಂ =(5%) 49 ಮಿಗ್ರಾಂ
  • ಐರನ್ (22%) =2.89 ಮಿಗ್ರಾಂ
  • ಮೆಗ್ನೀಸಿಯಮ್ =(14%) 48 ಮಿಗ್ರಾಂ
  • ರಂಜಕ =(24%) 168 ಮಿಗ್ರಾಂ
  • ಪೊಟ್ಯಾಸಿಯಮ್ =(6%) 291 ಮಿಗ್ರಾಂ
  • ಸೋಡಿಯಂ =(0%) 7 ಮಿಗ್ರಾಂ
  • ಝಿಂಕ್ =(16%) 1.53 ಮಿಗ್ರಾಂ
  • ಇತರ ಅಂಶಗಳು---
.

ಕಡಲೆಯ ಬೀಜಗಳ ಬಣ್ಣದ ಆಧಾರದ ಮೇಲೆ ನಾಲ್ಕು ಬೇರೆ ಬೇರೆ ಜಾತಿಗಳನ್ನು ಗುರುತಿಸಬಹುದು. ಕಂದು, ಹಳದಿ, ಕರಿ ಮತ್ತು ಬಿಳಿಯ ಬಣ್ಣದ ಕಡಲೆಗಳಲ್ಲಿ ಬಿಳಿಯ ಕಡಲೆಯ ಬೀಜಗಳು ದೊಡ್ಡವಾಗಿರುತ್ತವೆ. ಆದರೆ ಈ ಜಾತಿ ಎಲ್ಲ ಪ್ರದೇಶಗಳಲ್ಲಿಯೂ ಚೆನ್ನಾಗಿ ಬೆಳೆಯಲಾರದು. ನಮ್ಮ ದೇಶದ ಬೇರೆ ಬೇರೆ ಪ್ರದೇಶಗಳಿಗೆ ಅಲ್ಲಿಯ ಹವಾಗುಣ ಮತ್ತು ನೆಲದ ಗುಣಗಳನ್ನವಲಂಬಿಸಿ ಬೇರೆ ಬೇರೆ ಜಾತಿಯ ಕಡಲೆಗಳನ್ನು ಬಿತ್ತಲು ಶಿಫಾರಸು ಮಾಡಲಾಗುತ್ತದೆ. ಮಳೆಯನ್ನೇ ಸಂಪುರ್ಣವಾಗಿ ಅವಲಂಬಿಸಿ ಬೆಳೆದ ಬೆಳೆಯಿಂದ ಪ್ರತಿ ಹೆಕ್ಟೇರಿಗೆ 500-600 ಕಿಗ್ರಾಂಗಳಷ್ಟು ಕಾಳು ಮತ್ತು 800-1000 ಕಿಗ್ರಾಂಗಳಷ್ಟು ಹೊಟ್ಟು ಬರುತ್ತದೆ. ನೀರಾವರಿಯಲ್ಲಿ ತೆಗೆದುಕೊಂಡಾಗ 1,500-2,000 ಕಿಗ್ರಾಂ ಕಾಳುಗಳನ್ನು ಉತ್ಪಾದಿಸಲು ಸಾಧ್ಯ. []

ರೋಗಗಳು

[ಬದಲಾಯಿಸಿ]

ಕಡಲೆಯ ಗಿಡಗಳು ಸಿಡಿರೋಗ (ವಿಲ್ಟ್‌) ಎಂಬ ಒಂದು ರೋಗಕ್ಕೆ ತುತ್ತಾಗುವುದು ಬಹಳ. ನಮ್ಮ ರಾಜ್ಯದಲ್ಲಿ ಪ್ರಮುಖವಾಗಿ ಬೆಳೆಯುವ ಚಾಫಾ ಎಂಬ ಜಾತಿಯ ಕಡಲೆಗೆ ಈ ರೋಗವನ್ನು ತಡೆಯುವ ಸಾಮಥರ್ಯ್‌ವಿಲ್ಲ. ರೋಗ ನಿರೋಧ ಶಕ್ತಿಯಿರುವ ಜಾತಿಗಳನ್ನು ಕಂಡುಹಿಡಿಯಲು ಸಸ್ಯಶಾಸ್ತ್ರಜ್ಞರು ಬಹುವಾಗಿ ಪ್ರಯತ್ನಿಸುತ್ತಿದ್ದು, ಈಗ ಮೈಸೂರು ರಾಜ್ಯದಲ್ಲಿ ಅಣ್ಣಿಗೇರಿ ಕಡಲೆ ಎಂಬ ಒಂದು ಜಾತಿಯನ್ನು ಬಿಡುಗಡೆ ಮಾಡಲಾಗಿದೆ. ಇದು ಪ್ರಚಲಿತವಾಗಿರುವ ಇತರ ಜಾತಿಗಳಿಗಿಂತ ಶೇ. 25 ಹೆಚ್ಚು ಇಳುವರಿ ಕೊಡುವುದಲ್ಲದೆ ಸಿಡಿರೋಗವನ್ನು ಸಾಕಷ್ಟು ಮಟ್ಟಿಗೆ ಪ್ರತಿರೋಧಿಸಬಲ್ಲರು.

ಪೋಷಕಾಂಶಗಳು

[ಬದಲಾಯಿಸಿ]

ಕಡಲೆ ಬಹಳ ಪುಷ್ಟಿಕರವಾದ ಆಹಾರ. ಇದರಲ್ಲಿ 20% ರಷ್ಟು ಸಾರಜನಕ ಮತ್ತು ಶೇ. 61ರಷ್ಟು ಶರ್ಕರ ಪಿಷ್ಟಾದಿಗಳಿವೆ. ಖನಿಜ ಪದಾರ್ಥಗಳಾದ ಕ್ಯಾಲ್ಸಿಯಂ (149 ಮಿಗ್ರಾಂ/100 ಗ್ರಾಂ) ಮತ್ತು ಕಬ್ಬಿಣ (7.2 ಮಿಗ್ರಾಂ/100 ಗ್ರಾಂ)ಗಳಲ್ಲದೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಎ ಕೂಡ ಇದೆ. ಈ ಕಾಳುಗಳಲ್ಲಿರುವ ಸಸಾರಜನಕದಲ್ಲಿ ಆವಶ್ಯಕವಾಗಿರುವ ಎಲ್ಲ ಅಮೈನೊ ಆಮ್ಲಗಳು ದೊರೆಯುತ್ತಿದ್ದರೂ ಟ್ರಿಪ್ಟೋಫೇನ್ ಮತ್ತು ಗಂಧಕಯುಕ್ತ ಅಮೈನೊ ಆಮ್ಲಗಳ ಪ್ರಮಾಣ ಮಾತ್ರ ಕಡಿಮೆಯಾಗಿದೆ.

ಉಪಯೋಗಗಳು

[ಬದಲಾಯಿಸಿ]

ಕಡಲೆಯ ಉಪಯೋಗ ಬಹಳ. ಗಿಡಗಳು ಇನ್ನೂ ಚಿಕ್ಕವಾಗಿರುವಾಗಲೇ ಅವುಗಳ ಚಿಗುರನ್ನು ಮುರಿದು ತೊಪ್ಪಲು ಪಲ್ಲೆಯಾಗಿ ಇಲ್ಲವೆ ಹಾಗೆಯೇ ಒಣಗಿಸಿ ಬಿಟ್ಟು ಕೆಲವು ದಿನಗಳ ಅನಂತರ ಉಪಯೋಗಿಸುತ್ತಾರೆ. ಕಾಳುಗಳು ಇನ್ನೂ ಪುರ್ತಿಯಾಗಿ ಬಲಿಯುವುದಕ್ಕೆ ಮೊದಲೇ ತಿಂದರೂ ರುಚಿಕರವಾಗಿರುವುದಲ್ಲದೇ ಪುಷ್ಟಿಕರವಾಗಿಯೂ ಇರುತ್ತವೆ. ಒಣಗಿದ ಬೀಜಗಳನ್ನು ನೆನೆಹಾಕಿ ತಿನ್ನುವುದು ಆರೋಗ್ಯಕರ ಎಂದು ಎಲ್ಲರಿಗೂ ತಿಳಿದ ಮಾತು. ಹುರಿದು, ಹುರಿಗಾಳನ್ನಾಗಿ ತಿನ್ನುವುದಲ್ಲದೆ ಬೇಳೆಮಾಡಿ ಅಡಿಗೆ ಮಾಡುವುದೂ ಸಾಮಾನ್ಯವಾಗಿದೆ. ಕಡಲೆಯ ಹಿಟ್ಟಿನಿಂದ ಹಲವಾರು ಬಗೆಯ ಸಿಹಿ ಹಾಗೂ ಖಾರದ ತಿಂಡಿಗಳನ್ನು ತಯಾರಿಸುತ್ತಾರೆ. ಕೇವಲ ಮನುಷ್ಯರಿಗಷ್ಟೇ ಅಲ್ಲದೆ, ಕಡಲೆಯನ್ನು ಕುದುರೆ ಮೊದಲಾದ ಪ್ರಾಣಿಗಳಿಗೆ ತಿನ್ನಿಸಲೂ ಉಪಯೋಗಿಸುತ್ತಾರೆ. ಇದರ ಹೊಟ್ಟಂತೂ ದನಗಳಿಗೆ ಒಳ್ಳೆಯ ಮೇವು.

ಉಲ್ಲೇಖಗಳು

[ಬದಲಾಯಿಸಿ]
  1. "The Plant List: A Working List of All Plant Species". Archived from the original on 2017-10-02. Retrieved 2015-12-02.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಡಲೆ&oldid=1195107" ಇಂದ ಪಡೆಯಲ್ಪಟ್ಟಿದೆ