ವಿಷಯಕ್ಕೆ ಹೋಗು

ರೇಷ್ಮೆಹುಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bombyx mori
ಜೋಡಿಯಾದ ಗಂಡು (ಮೇಲೆ), ಹೆಣ್ಣು (ಕೆಳಗೆ)
Fifth instar worm
ಐದನೇ ಅಂತರಾಕಾರ
Conservation status
Domesticated
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಆರ್ಥ್ರೊಪೋಡಾ
ವರ್ಗ: ಇನ್ಸೆಕ್ಟಾ
ಗಣ: ಲೆಪಿಡಾಪ್ಟೆರಾ
ಕುಟುಂಬ: ಬಾಂಬಿಸಿಡೇ
ಕುಲ: ಬಾಂಬಿಕ್ಸ್
ಪ್ರಜಾತಿ:
B. mori
Binomial name
Bombyx mori
Synonyms
  • Phalaena mori Linnaeus, 1758
  • Bombyx arracanensis Moore & Hutton, 1862
  • Bombyx brunnea Grünberg, 1911
  • Bombyx croesi Moore & Hutton, 1862
  • Bombyx fortunatus Moore & Hutton, 1862
  • Bombyx meridionalis Wood-Mason, 1886
  • Bombyx sinensis Moore & Hutton, 1862
  • Bombyx textor Moore & Hutton, 1862

ರೇಷ್ಮೆಹುಳುವು ಪಳಗಿಸಿದ ರೇಷ್ಮೆಚಿಟ್ಟೆಯಾದ ಬಾಂಬಿಕ್ಸ್ ಮೋರಿಯ ಲಾರ್ವ ಅಥವಾ ಕಂಬಳಿಹುಳು.[][] ಇದು ರೇಷ್ಮೆಯ ಪ್ರಧಾನ ಉತ್ಪಾದಕವಾಗಿರುವುದರಿಂದ ಆರ್ಥಿಕವಾಗಿ ಮುಖ್ಯವಾದ ಕೀಟವಾಗಿದೆ. ಬಿಳಿ ಹಿಪ್ಪನೇರಿಳೆ ಎಲೆಗಳು ರೇಷ್ಮೆಹುಳುವಿನ ಇಷ್ಟದ ಆಹಾರವಾಗಿದೆ. ಆದರೆ ಇವು ಇತರ ಹಿಪ್ಪನೇರಿಳೆ ಸಸ್ಯಗಳನ್ನು ಮತ್ತು ಓಸೇಜ್ ಕಿತ್ತಳೆಯನ್ನು ಕೂಡ ತಿನ್ನಬಹುದು. ಆಯ್ದ ಸಂತಾನವೃದ್ಧಿಯ ಸಹಸ್ರಮಾನಗಳ ಪರಿಣಾಮವಾಗಿ, ಪಳಗಿಸಿದ ರೇಷ್ಮೆಚಿಟ್ಟೆಗಳು ಸಂತಾನೋತ್ಪತ್ತಿಗಾಗಿ ಮಾನವರ ಮೇಲೆ ನಿಕಟವಾಗಿ ಅವಲಂಬಿಸಿವೆ. ಬಾಂಬಿಕ್ಸ್ ಮೀಯಾಂಡಿರೈನ ಎಂಬುದು ಕಾಡು ಪ್ರಭೇದ. ಈ ಪ್ರಭೇದದಿಂದ ಬಾಂಬಿಕ್ಸ್ ಮೋರಿ ವಿಕಾಸಗೊಂಡಿರುವುದಾಗಿ ಊಹೆ. ಕಾಡು ರೇಷ್ಮೆಚಿಟ್ಟೆಗಳು ತಮ್ಮ ದೇಶೀಕೃತ ಸೋದರಸಂಬಂಧಿಗಳಿಗಿಂತ ಭಿನ್ನವಾಗಿವೆ ಏಕೆಂದರೆ ಅವನ್ನು ಆಯ್ದು ಉತ್ಪನ್ನಮಾಡಲಾಗಿಲ್ಲ; ಅವುಗಳಿಂದ ರೇಷ್ಮೆ ಉತ್ಪಾದನೆಯಲ್ಲಿ ಅಷ್ಟು ವಾಣಿಜ್ಯಿಕವಾಗಿ ಅಭಿವೃದ್ಧಿ ಸಾಧ್ಯವಾಗಿಲ್ಲ. ನವುರಾದ ರೇಷ್ಮೆಎಳೆಗಳನ್ನು ಸೃಷ್ಟಿಸುವ ಬಾಂಬಿಕ್ಸ್ ಮೋರಿ ಕೀಟವನ್ನು ಮನುಷ್ಯ ಹಲವು ಶತಮಾನಗಳ ಹಿಂದಿನಿಂದಲೇ ತನ್ನ ವಶಕ್ಕೆ ತೆಗೆದುಕೊಂಡು ಪ್ರಪಂಚದ ವಿವಿಧ ಭಾಗಗಳಲ್ಲಿ ರೇಷ್ಮೆಕೃಷಿ ಮಾಡುತ್ತಿದ್ದಾನೆ.

ಕಚ್ಚಾ ರೇಷ್ಮೆಯ ಉತ್ಪಾದನೆಗಾಗಿ ರೇಷ್ಮೆಹುಳುಗಳನ್ನು ಬೆಳೆಸುವ ಅಭ್ಯಾಸವಾದ ರೇಷ್ಮೆಕೃಷಿಯು ಚೀನಾದಲ್ಲಿ ಕನಿಷ್ಠಪಕ್ಷ ೫,೦೦೦ ವರ್ಷಗಳಿಂದ ನಡೆಯುತ್ತಿದೆ.[] ಅಲ್ಲಿಂದ ಅದು ಭಾರತ, ಕೊರಿಯಾ, ಜಪಾನ್ ಮತ್ತು ಪಶ್ಚಿಮ ದೇಶಗಳಿಗೆ ಹರಡಿತು.

ದೇಹರಚನೆ

[ಬದಲಾಯಿಸಿ]
ವಯಸ್ಕ ರೇಷ್ಮೆಪತಂಗ

ಪ್ರೌಢಕೀಟದ (ಚಿಟ್ಟೆ) ರೆಕ್ಕೆಗಳು 40-50 ಮಿಮೀನಷ್ಟು ಉದ್ದವಾಗಿರುವುವು. ಮೈ ಮೇಲೆಲ್ಲ ಶಲ್ಕಗಳಿವೆ. ಪತಂಗಗಳು ಪ್ರೌಢಾವಸ್ಥೆಯಲ್ಲಿ ಆಹಾರ ಸೇವಿಸಲಾರವು ಮತ್ತು ಹಾರಲಾರವು. ರಚನೆಯಲ್ಲಿ ಇವು ಇನ್ನಿತರ ಕೀಟಗಳನ್ನು ಹೋಲುತ್ತವೆ. ತಲೆಯ ಮುಂಭಾಗದಲ್ಲಿ ಎರಡು ಕುಡಿಮೀಸೆಗಳುಂಟು. ಗಂಡಿನ ಕುಡಿಮೀಸೆಯಲ್ಲಿ ಹೆಣ್ಣಿನ ಕುಡಿಮೀಸೆಯಲ್ಲಿರುವುದಕ್ಕಿಂತಲೂ ಹೆಚ್ಚಿನ ಕವಲುಗಳಿದ್ದು ಕುಂಚದಂತಿರುತ್ತವೆ. ಒಂದು ಜೊತೆ ಸಂಕೀರ್ಣ ಕಣ್ಣುಗಳಿರುವುದಾದರೂ ದೃಷ್ಟಿಸಾಮರ್ಥ್ಯ ಇಲ್ಲ. ವದನಾಂಗಗಳ ಬೆಳೆವಣಿಗೆಯೂ ಅಪೂರ್ಣ. ಗಾತ್ರದಲ್ಲಿ ಹೆಣ್ಣಿಗಿಂತ ಗಂಡು ಚಿಕ್ಕದು. ಗಂಡಿನ ಹಿಂಭಾಗದಲ್ಲಿ ಎರಡು ಕೊಂಡಿಯಾಕಾರದ ಹಿಡಿಕೆಗಳಿವೆ. ಇವು ಹೆಣ್ಣುಗಂಡಿನ ಮಿಲನಕ್ಕೆ ಸಹಾಯಕ. ಗೂಡಿನಿಂದ ಹೊರಬಂದ ಪತಂಗಗಳು ಕೂಡಲೇ ಪ್ರಣಯವನ್ನಾರಂಭಿಸಿ ಜೊತೆಗೂಡುತ್ತವೆ. ದಿವಸಗಟ್ಟಲೆ ಇವು ಸಂಭೋಗ ನಡೆಸಬಲ್ಲವು. ಆದರೆ ನಾಲ್ಕು ಗಂಟೆಗಳ ಬಳಿಕ ಅವನ್ನು ಬೇರ್ಪಡಿಸಿ ಹೆಣ್ಣಿಗೆ ಮೊಟ್ಟೆಯಿಡಲು ಅವಕಾಶ ಮಾಡಿಕೊಡಲಾಗುತ್ತದೆ. ಗಂಡು ಹೆಣ್ಣು ಪತಂಗಗಳು ಒಂದುಗೂಡಿದ ಬಳಿಕ ಹೆಣ್ಣುಪತಂಗ 400-500 ಮೊಟ್ಟೆಗಳನ್ನಿಡುತ್ತದೆ. ಸುಮಾರು 10 ದಿನಗಳಲ್ಲಿ ಮೊಟ್ಟೆಯೊಡೆದು ಮರಿಹುಳು (ಲಾರ್ವ) ಹೊರಬರುತ್ತದೆ. ಮೊಟ್ಟೆ ಅವಸ್ಥೆಯ ಅವಧಿಯಲ್ಲಿ ಉಷ್ಣತೆ 21-260ಸೆ. ಲಾರ್ವ ತನ್ನ ಜೀವಿತಾವಧಿಯಲ್ಲಿ ಅಧಿಕ ಪರಿಮಾಣದಲ್ಲಿ ಹಿಪ್ಪುನೇರಿಳೆ ಎಲೆಯನ್ನು ತಿನ್ನುತ್ತದೆ. ಅದು 30-45 ದಿವಸಗಳ ಅವಧಿಯಲ್ಲಿ ನಾಲ್ಕು ಬಾರಿ ಪೊರೆಕಳಚಿಕೊಂಡು ಐದು ಹಂತಗಳಲ್ಲಿ ಬೆಳೆದು ಗರಿಷ್ಠ 75 ಮಿಮೀ ಉದ್ದಕ್ಕೆ ಬೆಳೆಯುತ್ತದೆ. ಲಾರ್ವಕ್ಕೆ ತನ್ನದೇ ಗುಣಾತ್ಮಕವಾದ ಬಾಲದ ಕೊಂಡಿ ಇರುತ್ತದೆ. ಐದನೆಯ ಹಂತದ ಕೊನೆಯಲ್ಲಿ ಎಲೆ ತಿನ್ನುವುದನ್ನು ಬಿಟ್ಟು ಬಿಳಿ ಇಲ್ಲವೆ ಹಳದಿ ಅಥವಾ ಹಸುರು ಬಣ್ಣದ ಒಂದೇ ರೇಷ್ಮೆ ಎಳೆಯಿಂದ ಗೂಡು ಕಟ್ಟಲು ಪ್ರಾರಂಭಿಸುತ್ತದೆ. ರೇಷ್ಮೆಎಳೆಯ ತಿರುಳಿನ ಭಾಗ ಫೈಬ್ರಾಯಿನ್ ಎಂಬ ಪ್ರೋಟೀನ್‍ನಿಂದಲೂ, ಹೊರಕವಚ ಮೇಣದಂತಹ ಸೆರಸಿನ್ ಎಂಬ ಪ್ರೋಟೀನಿನಿಂದಲೂ ರಚಿತವಾಗಿರುತ್ತದೆ. ಹುಳುವಿನ ಸೂಕ್ಷ್ಮ ಮತ್ತು ಪ್ರಮುಖವಾದ ಅವಧಿಯಲ್ಲಿ ರೇಷ್ಮೆಗೂಡು (ಕಕೂನ್) ರಕ್ಷಣೆ ಒದಗಿಸುತ್ತದೆ. ಸಾಮಾನ್ಯವಾಗಿ, ರೇಷ್ಮೆಎಳೆ 700-1000 ಮೀಟರ್ ಉದ್ದವಾಗಿರುತ್ತದೆ. ಗೂಡಿನಲ್ಲಿ ಲಾರ್ವ ಕೋಶವಾಗಿ (ಪ್ಯೂಪ) ಪರಿವರ್ತನೆ ಹೊಂದುತ್ತದೆ. ಈ ಕೋಶ ಹಲವು ದಿವಸಗಳ ಬಳಿಕ ಪತಂಗವಾಗಿ ರೂಪ ಪರಿವರ್ತನೆಗೊಂಡು ಸಾಮಾನ್ಯವಾಗಿ ಸೂರ್ಯೋದಯದ ವೇಳೆ ಗೂಡಿನಿಂದ ಹೊರಬರುತ್ತದೆ.

ನೀರಾವಿ ಅಥವಾ ಬಿಸಿಗಾಳಿಯಿಂದ ಗೂಡಿನಲ್ಲಿರುವ ಡಿಂಬವನ್ನು ಸಾಯಿಸಿ ರೇಷ್ಮೆಎಳೆಯನ್ನು ಬೇರ್ಪಡಿಸಿ ವಾಣಿಜ್ಯೋಪಯೋಗಕ್ಕೆ ಬಳಸಿಕೊಳ್ಳಲಾಗುವುದು. ದೈತ್ಯಾಕಾರದ ರೇಷ್ಮಪತಂಗ ಸಾಟುರಿನಿಡೀ ಕುಟುಂಬಕ್ಕೆ ಸೇರಿದೆ.

ರೇಷ್ಮೆ ಪತಂಗಗಳಲ್ಲಿ ನಾಲ್ಕು ವಿಧಗಳಿವೆ : ಹಿಪ್ಪುನೇರಳೆ, ಟಸ್ಸಾರ್, ಎರಿ ಮತ್ತು ಮೂಗಾ. ಪ್ರಪಂಚದಲ್ಲಿ ಭಾರತವೊಂದೇ ಈ ನಾಲ್ಕೂ ಬಗೆಯ ರೇಷ್ಮೆಯನ್ನು ಉತ್ಪಾದಿಸುತ್ತಿದೆ.

ಅಡಿಟಿಪ್ಪಣಿಗಳು

[ಬದಲಾಯಿಸಿ]
  1. Britannica, The Editors of Encyclopaedia. "silkworm moth". Encyclopedia Britannica, 3 Aug. 2023, https://www.britannica.com/animal/silkworm-moth. Accessed 17 October 2023.
  2. "Silkworm." New World Encyclopedia, . 7 Oct 2022, 23:22 UTC. 16 Oct 2023, 16:07 <https://www.newworldencyclopedia.org/p/index.php?title=Silkworm&oldid=1081464>.
  3. E. J. W. Barber (1992). Prehistoric Textiles: the Development of Cloth in the Neolithic and Bronze Ages with Special Reference to the Aegean. Princeton University Press. p. 31. ISBN 978-0-691-00224-8.

ಹೆಚ್ಚಿನ ಓದಿಗೆ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: