ವಿಷಯಕ್ಕೆ ಹೋಗು

ಕಂಬಳಿಹುಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Caterpillar of Papilio machaon
The saddleback caterpillar has urticating hair and aposematic colouring.

ಕಂಬಳಿಹುಳು ಪತಂಗ ಮತ್ತು ಚಿಟ್ಟೆಗಳ ಡಿಂಭಸ್ಥಿತಿ. ಲೆಪಿಡಾಪ್ಟರಗಣದ ಕೀಟಗಳ ಲಾರ್ವಗಳು.ಇವುಗಳು ಸಾಮಾನ್ಯವಾಗಿ ಸಸ್ಯಾಹಾರಿಗಳು. ಹೊಟ್ಟೆಬಾಕ ಜೀವಿಗಳಾದ ಇವುಗಳು ಕೃಷಿ ನಾಶಕ್ಕೆ ಕಾರಣವಾಗುವುದುಂಟು.

ಕಂಬಳಿ ಹುಳು : ಪತಂಗ, ಚಿಟ್ಟೆ ಮುಂತಾದ ಸಂಧಿಪದಿವಂಶದ ಲೆಪಿಡಾಪ್ಟೀರ ಗಣಕ್ಕೆ ಸೇರಿದ ಕೀಟಗಳ ಡಿಂಭಗಳ ಸಾಮಾನ್ಯ ಹೆಸರು (ಕ್ಯಾಟರ್ಪಿಲರ್). ಆದರೆ ಹೆಸರು ಸೂಚಿಸುವಂತೆ ಎಲ್ಲ ಹುಳುಗಳ ಮೈಮೇಲೂ ಕಂಬಳಿಯಂಥ ಕವಚ ಇರಬೇಕಾದುದಿಲ್ಲ. ಈ ಹುಳುವಿನ ದೇಹವನ್ನು ತಲೆ, ಎದೆಯ ಭಾಗ ಮತ್ತು ಉದರ ಭಾಗ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು; ಎದೆಯ ಭಾಗದಲ್ಲಿ ಮೂರು ಜೊತೆ ಸಂಧಿಪಾದಗಳಿವೆ. ಅವುಗಳ ತುದಿಯಲ್ಲಿ ಕೊಂಡಿಗಳಿವೆ. ಉದರಭಾಗದಲ್ಲಿ ಸಾಮಾನ್ಯವಾಗಿ ಐದು ಜೊತೆ ಪಾದಗಳಿವೆ. ಕೆಲವೊಮ್ಮೆ ಅವುಗಳ ಸಂಖ್ಯೆ ಒಂದು ಪ್ರಭೇದದಿಂದ ಮತ್ತೊಂದಕ್ಕೆ ವ್ಯತ್ಯಾಸವಾಗುವುದುಂಟು. ಕಾಲುಗಳು ದಪ್ಪ ಮತ್ತು ದುಂಡು. ಇವುಗಳ ತುದಿಯಲ್ಲಿ ಬಾಗಿದ ಮುಳ್ಳುಗಳಂಥ ರಚನೆಗಳಿವೆ. ಚಲಿಸುವಾಗ ಈ ಮುಳ್ಳುಗಳು ಭದ್ರವಾಗಿ ಹಿಡಿದುಕೊಳ್ಳಲು ಸಹಾಯಕ.

ಕಂಬಳಿಹುಳುವಿನ ತಲೆಯನ್ನು ಗಟ್ಟಿಯಾದ ಕ್ಯೂಟಿಕಲ್ ಕವಚ ಆವರಿಸಿದೆ. ತಲೆಯ ಇಕ್ಕೆಲದಲ್ಲಿ ಆರು ಸರಳಾಕ್ಷಿಗಳು, ತುದಿಯಲ್ಲಿ ಒಂದು ಜೊತೆ ತುಂಡಾಗಿರುವ ಕುಡಿಮೀಸೆಗಳು ಇವೆ. ದವಡೆ ಗಟ್ಟಿಯಾಗಿ ಶಕ್ತಿಯುತವಾಗಿದೆ. ಮ್ಯಾಕ್ಸಿಲ ಅತಿ ಚಿಕ್ಕವಾಗಿರುವುದರಿಂದ ಕಾಣುವುದಿಲ್ಲ. ಕೆಳತುಟಿಯ ಭಾಗಕ್ಕೆ ರೇಷ್ಮೆಯ ದಾರವನ್ನು ಉತ್ಪತ್ತಿ ಮಾಡುವ ಗ್ರಂಥಿಗಳ ನಾಳಗಳು ಬಂದು ಕೊನೆಗೊಂಡಿವೆ. ಈ ಗ್ರಂಥಿಗಳು ಮಾರ್ಪಡಾಗಿರುವ ಲಾಲಾಗ್ರಂಥಿಗಳು. ರೇಷ್ಮೆಗ್ರಂಥಿಗಳಲ್ಲಿ ಉತ್ಪತ್ತಿ ಹೊಂದಿದ ರಸದಿಂದ ರೇಷ್ಮೆಯಂಥ ದಾರಗಳನ್ನು ಈ ಹುಳುಗಳು ನೂಲುತ್ತವೆ. ಈ ದಾರ ಕೋಶ ತಯಾರಿಕೆಗೆ ಅಗತ್ಯ. ಅನೇಕ ಕಂಬಳಿಹುಳುಗಳಲ್ಲಿ ಈ ಗ್ರಂಥಿಗಳು ಉದ್ದವಾಗಿರುತ್ತವೆ. ರೇಷ್ಮೆ ಚಿಟ್ಟೆಗಳ ಕಂಬಳಿಹುಳುಗಳಲ್ಲಿ ಈ ಗ್ರಂಥಿಗಳು ಮಿಕ್ಕ ಜಾತಿಯ ಕಂಬಳಿಹುಳುವಿನ ಪಕ್ಕೆಗಳಲ್ಲಿ ಒಂಬತ್ತು ಜೊತೆ ಉಸಿರಾಡುವ ರಂಧ್ರಗಳಿವೆ. ಇವುಗಳಿಗೆ ಸ್ಪೈರಕಲ್ಲುಗಳೆಂದು ಹೆಸರು. ಸ್ಪೈರಕಲ್ಲುಗಳು ಚಿಕ್ಕ ಚುಕ್ಕೆಗಳಂತಿರುತ್ತವೆ. ಕಂಬಳಿಹುಳಗಳು ರಕ್ಷಣೆಗಾಗಿ ನಾನಾ ಹೊಂದಾಣಿಕೆಯ ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ಶರೀರದ ರಚನೆ ಮತ್ತು ಅವುಗಳ ನಡತೆಯಲ್ಲಿ ಈ ಹೊಂದಿಕೆಗಳನ್ನು ಕಾಣಬಹುದು. ಹುಲಿ ಪತಂಗಗಳ ಕಂಬಳಿಹುಳುವಿನ ಶರೀರದ ಮೇಲೆ ಒತ್ತಾಗಿರುವ ರೋಮಗಳಿವೆ. ವೇಪೋರರ್ ಪತಂಗಗಳ ಕಂಬಳಿಹುಳುವಿನ ಶರೀರದ ಮೇಲಿರುವ ರೋಮಗಳು ಗುಂಪು ಗುಂಪಾಗಿದ್ದು ಕುಂಚಗಳಂತೆ ಕಾಣುತ್ತವೆ. ಕೆಲವು ಕಂಬಳಿಹುಳುಗಳಲ್ಲಿ ಈ ರೋಮಗಳು ಸೂಜಿಯಂತೆ ಚೂಪಾಗಿ ಗಟ್ಟಿಯಾಗಿರುತ್ತವೆ. ಇವು ಮುಟ್ಟಿದ ತತ್ಕ್ಷಣ ಚುಚ್ಚಿಕೊಂಡು ಮುಟ್ಟಿದವರ ಮೈಭಾಗದಲ್ಲಿ ಉರಿ ಮತ್ತು ನೋವನ್ನುಂಟು ಮಾಡುತ್ತವೆ. ಇದಕ್ಕೆ ಕಂಬಳಿಹುಳು ಸುರಿಸುವ ವಿಷಪದಾರ್ಥವೇ ಕಾರಣ. ದಕ್ಷಿಣ ಅಮೆರಿಕ ಮತ್ತು ಉಷ್ಣವಲಯಗಳಲ್ಲಿರುವ ಕೆಲವು ಕಂಬಳಿಹುಳುಗಳ ಮೈಮೇಲೆ ನಳಿಕೆಯ ರೂಪದ ಚೂಪಾದ ವಿಷದ ಮುಳ್ಳುಗಳೇ ಇವೆ. ಇವುಗಳ ಬುಡದಲ್ಲಿ ವಿಷೋತ್ಪಾದಕ ಗ್ರಂಥಿಗಳಿವೆ. ಇವುಗಳ ಮುಳ್ಳುಗಳೇನಾದರೂ ಚುಚ್ಚಿಕೊಂಡರೆ ನಂಜೇರುತ್ತದೆ. ಉರಿ ಮತ್ತು ನೋವು ಇದರ ಮುಖ್ಯ ಲಕ್ಷಣ. ನೋಟೊಡಾಂಟಿಡ್ ಜಾತಿಯ ಕಂಬಳಿಹುಳು ಮುಟ್ಟಿದ ತತ್ಕ್ಷಣ ಫಾರ್ಕಿಕ್ ಆಮ್ಲವನ್ನು ಉಗುಳುತ್ತದೆ. ಕೆಲವು ಕಂಬಳಿಹುಳುಗಳ ಶರೀರದ್ರವವೂ ವಿಷಪೂರಿತವಾಗಿರುತ್ತದೆ.

ಕೆಲವು ಚಿಟ್ಟೆಗಳ ಕಂಬಳಿಹುಳುಗಳ ಮೇಲೆ ವಿಷವಿಲ್ಲದ ಮುಳ್ಳಿನ ರಚನೆಗಳಿರುತ್ತವೆ. ವನೆಸ್ಸ ಪ್ರಭೇದ ಮತ್ತು ಸಮ್ರಾಟ ಪತಂಗಗಳ ಕಂಬಳಿಹುಳುಗಳಲ್ಲಿ ಈ ರೀತಿಯ ರೋಮಗಳನ್ನು ಕಾಣಬಹುದು. ಕೆಲವು ಪತಂಗಗಳ ಕಂಬಳಿಹುಳುವಿನ ತಲೆಯ ಮುಂದೆ ಒಂದು ಕೋಡಿನಂಥ ರಚನೆ ಇರುತ್ತದೆ. ಮತ್ತೆ ಕೆಲವು ಕಂಬಳಿ ಹುಳುಗಳ ಶರೀರದ ಮೇಲೆ ರೋಮಗಳೇ ಇರುವುದಿಲ್ಲ. ಇಂಥವುಗಳ ಶರೀರ ಅತಿ ಮೃದುವಾಗಿರುತ್ತದೆ.

ಬಹುಪಾಲು ಜಾತಿಯ ಕಂಬಳಿಹುಳುಗಳು ರಕ್ಷಣೆಗೋಸ್ಕರ ರಾತ್ರಿ ವೇಳೆ ಮಾತ್ರ ಹೊರಬರುತ್ತವೆ. ಹಗಲಿನಲ್ಲಿ ಎಲೆ, ಕಲ್ಲು, ಮರದ ತೊಗಟೆಗಳಡಿಯಲ್ಲಿ ನಿದ್ರಿಸುತ್ತವೆ. ಕಂಬಳಿಹುಳುಗಳ ಬಣ್ಣದಲ್ಲೂ ವೈವಿಧ್ಯವುಂಟು. ಕೆಲವು ಕಣ್ಣಿಗೆ ರಂಜಿಸುವಂಥ ಬಣ್ಣಗಳಿಂದ ಕೂಡಿವೆ; ಮತ್ತೆ ಕೆಲವು ಹುಳುಗಳ ಬಣ್ಣ ಭಯಂಕರ. ಎಲೆ, ತೊಗಟೆ ಮುಂತಾದ ಪದಾರ್ಥಗಳನ್ನು ಇವು ಅನುಕರಿಸುವುದೂ ಉಂಟು. ಕಂಬಳಿಹುಳುಗಳು ಬಹುತೇಕ ಸಸ್ಯಾಹಾರಿಗಳು. ಇವುಗಳಿಂದ ಬಹಳವಾಗಿ ಸಸ್ಯಹಾನಿಯಾಗುತ್ತದೆ. ಕೇವಲ ಕೆಲವೇ ಜಾತಿಯ ಕಂಬಳಿಹುಳುಗಳು ಮಾತ್ರ ಮಾಂಸಾಹಾರಿಗಳು. ಲೈಸೀನ ಅರಿಯಾನ್ ಚಿಟ್ಟೆಗಳ ಕಂಬಳಿಹುಳುಗಳು ಇರುವೆ ಗೂಡುಗಳಿಗೆ ಮುತ್ತಿಗೆ ಹಾಕಿ ಅವುಗಳ ಮರಿಗಳನ್ನು ತಿನ್ನುತ್ತವೆ. ಉತ್ತರ ಅಮೆರಿಕದ ಫೆನಿಸೆಕ ಟ್ರಾಕ್ವೀನಿಯಸ್ ಎಂಬ ಪ್ರಭೇದದವು ಸಸ್ಯತಿಗಣೆಗಳನ್ನು ತಿನ್ನುತ್ತವೆ. ತಮ್ಮ ಜಾತಿಯ ಹುಳುಗಳನ್ನೇ ತಿನ್ನುವ ಜಾತಿಗಳೂ ಉಂಟು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: