ವಿಷಯಕ್ಕೆ ಹೋಗು

ಪತಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೃತಶಿಲೆಯ ನೆಲದ ಮೇಲೆ ಒಂದು ಚಿಟ್ಟೆ

ಪತಂಗಗಳು ಲೆಪಿಡಾಪ್ಟೆರಾ(Lepidoptera) ಶ್ರೇಣಿಯ ಸದಸ್ಯರಾದ ಚಿಟ್ಟೆಗಳ ಗುಂಪಿಗೆ ಸೇರುತ್ತವೆ. ಪತಂಗ ಮತ್ತು ಚಿಟ್ಟೆ ಕೀಟ ಪ್ರಭೇಧದ ಕೇಂದ್ರಬಿಂದುಗಳಾಗಿದ್ದು, ಸುಂದರ ಬಣ್ಣ ಮತ್ತು ಆಕಾರಗಳಿಂದ ಕೂಡಿದ್ದು ಆಕರ್ಷಣೀಯವಾಗಿ ಜನರ ಕಣ್ಣಿಗೆ ಕಾಣುತ್ತವೆ. ಜಗತ್ತಿನಾದ್ಯಂತ ಸರಿಸುಮಾರು ೧,೬೦,೦೦೦ ವರ್ಗಗಳ ಪತಂಗಗಳನ್ನು ಗುರುತಿಸಿದ್ದಾರೆ.[೧] ಅದರಲ್ಲಿ ಹಲವು ವರ್ಗಗಳನ್ನು ಇನ್ನೂ ಹೆಸರಿಸಿಲ್ಲ. ಪತಂಗಗಳು ಬಹುತೇಕ ನಿಶಾಚರಿಗಳಾಗಿದ್ದು, ಕೆಲವು ಕ್ರೆಪುಸ್ಕ್ಯುಲಾರ್(ಮುಂಜಾನೆ ಮತ್ತು ಮುಸ್ಸಂಜೆ) ಮತ್ತು ಕೆಲವು ದಿನಚರಿಗಳಾಗಿವೆ.

ಚಿಟ್ಟೆ ಮತ್ತು ಪತಂಗದ ನಡುವಿನ ವ್ಯತ್ಯಾಸ[ಬದಲಾಯಿಸಿ]

ಚಿಟ್ಟೆಗಳು ಮತ್ತು ಪತಂಗಗಳನ್ನು ಗುರುತಿಸಲು ನಿಯಮಗಳನ್ನು ಸ್ಥಾಪಿಸಿಲ್ಲವಾದರೂ, ಒಂದು ಸುಲಭ ಮಾರ್ಗವೆಂದರೆ ಅದರ ಸ್ಪರ್ಶತಂತುಗಳನ್ನು(antennae) ನೋಡುವುದು. ಚಿಟ್ಟೆಗಳ ಸ್ಪರ್ಶತಂತುಗಳು ಸಣ್ಣದಾಗಿದ್ದು, ಅದರ ಅಂಚಿನಲ್ಲಿ ಒಂದು ಗೋಳವಿರುತ್ತದೆ. ಪತಂಗದ ಸ್ಪರ್ಶತಂತು ಹಲವು ವಿಧದಲ್ಲಿ ಇರುತ್ತವೆ ಮತ್ತು ಅದರ ಅಂಚಿನಲ್ಲಿ ಗೋಳವಿರುವುದಿಲ್ಲ. ಅವುಗಳ ವಿಂಗಡನೆ, ಈ ತತ್ವದ ಸಹಾಯದಿಂದ ಪಡೆದುಕೊಳ್ಳಬಹುದು.

ಕಂಬಳಿಹುಳ[ಬದಲಾಯಿಸಿ]

ಕಂಬಳಿಹುಳುಗಳ ಮೈಕಟ್ಟು ಮೃದುವಾಗಿದ್ದು, ಇವು ಅತಿವೇಗವಾಗಿ ಬೆಳೆಯಬಲ್ಲದು. ತಲೆಯ ಭಾಗ ದೃಢವಾಗಿದ್ದು, ದವಡೆಗಳು(mandibles) ದೃಢವಾಗಿರುತ್ತದೆ, ಇದು ಎಲೆಗಳನ್ನು ಅರೆದು ತಿನ್ನಲು ಸಹಾಯವಾಗುತ್ತದೆ. ಈ ದವಡೆಯ ಹಿಂದೆಯೇ, ರೇಷ್ಮೆಯನ್ನು ಉತ್ಪಾದಿಸುವಂತಹ ಸ್ಪಿನ್ನೆರ್ಟ್ಸ್(spinnerts) ಎನ್ನುವ ಅಂಗಗಳು ಇರುತ್ತವೆ, ಈ ಅಂಗಗಳು ಅವುಗಳಿಗೆ ಪ್ರೌಢಾವಸ್ಥೆಗೆ ತಲುಪಿದ ಮೇಲೆ ಕೋಶವನ್ನು ನಿರ್ಮಿಸಲು ಸಹಾಯ ಮಾಡುತ್ತವೆ. ೯೦ ಪ್ರತಿಷತ ಕಂಬಳಿ ಹುಳಗಳು ಸಸ್ಯಹಾರಿ, ಅದರ ಮೂಲ ಆಹಾರ ಎಲೆಗಳು. ಕೆಲವು ಕಂಬಳಿ ಹುಳಗಳು ಚಿಕ್ಕ ಪುಟ್ಟ ಹುಳಗಳನ್ನು ತಿನ್ನುತ್ತವೆ ಹಾಗು ಕೆಲವು ಜಾತಿಯ ಕಂಬಳಿ ಹುಳಗಳು ಸ್ವಜಾತಿ ಭಕ್ಷಕ.

ಇತಿಹಾಸ[ಬದಲಾಯಿಸಿ]

ಪತಂಗಗಳು, ಚಿಟ್ಟೆಗಳಿಗೂ ಮುನ್ನ ವಿಕಸಿತಗೊಂಡಿವೆ, ೧೯೦ ಮಿಲಿಯನ್ ವರ್ಷಗಳ ಹಿಂದಿನ ಪಳೆಯುಳಿಕೆಗಳು ದೊರಕಿವೆ. ಹೂವಿನ ಗಿಡಗಳ ಜೊತೆಗೆ ಇವುಗಳು ವಿಕಸಿತಗೊಂಡಿವೆ, ಯಾಕೆಂದರೆ ಹಲವು ಪತಂಗಗಳು, ಚಿಟ್ಟೆಗಳು ಹೂವಿನ ಮಕರಂದದ ಮೇಲೆ ಆಹಾರಕ್ಕೆ ಅವಲಂಬಿತವಾಗಿದೆ.

ವಾಣಿಜ್ಯ ಪ್ರಾಮುಖ್ಯತೆ[ಬದಲಾಯಿಸಿ]

ರೇಷ್ಮೆ ಹುಳು (Bombyx mori)
ಚೈನೀಸ್ ಓಕ್ ಪತಂಗ

ಕೆಲವು ಪತಂಗಗಳು ವಾಣಿಜ್ಯ ದೃಷ್ಠಿಯಿಂದ ಪ್ರಾಮುಖ್ಯತೆಯನ್ನು ಪಡೆದಿದೆ, ಅದರಲ್ಲಿ ರೇಷ್ಮೆ ಹುಳು ಮತ್ತು ಅದರ ಕೃಷಿ ಪ್ರಮುಖವಾದುದು. ಬೊಂಬೈಕ್ಸ್ ಮೊರಿ (Bombyx mori) ಎಂಬ ಹುಳವನ್ನು ಈ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಅದರ ಕೋಶವನ್ನು ಉಪಯೋಗಿಸಿ ರೇಷ್ಮೆಯನ್ನು ಉತ್ಪಾದಿಸಲಾಗುತ್ತದೆ. ಇದಲ್ಲದೆ ಐಲ್ಯಾನ್ತಸ್ ಪತಂಗ(ailanthus), ಚೈನೀಸ್ ಓಕ್ ಪತಂಗ(Chinese oak moth) ಮತ್ತು ಅಸ್ಸಾಮ್ ಸಿಲ್ಕ್ ಪತಂಗ(Assam silk moth) ಇವುಗಳನ್ನು ಕೂಡ ರೇಷ್ಮೆ ಕೃಷಿಗೆ ಉಪಯೋಗಿಸಲಾಗುತ್ತದೆ. ಕಂಬಳಿಹುಳಗಳನ್ನು ಆಹಾರವಾಗಿಯೂ ಉಪಯೋಗಿಸುತ್ತಾರೆ, ಆಫ್ರಿಕದಲ್ಲಿ ಪ್ರಮುಖವಾಗಿ ಉಪಯೋಗಿಸುತ್ತಾರೆ, ಇದು ಪ್ರಮುಖ ಪೋಶಕಾಂಶಗಳ ಮೂಲವಾಗಿದೆ. ಆಫ್ರಿಕ ಖಂಡದ ಕಾಂಗೋ ದೇಶ ಒಂದರಲ್ಲೇ ೩೦ ಪ್ರಭೇದದ ಪತಂಗಗಳನ್ನು ಆಹಾರಕ್ಕಾಗಿಯೆ ಬೆಳಸುತ್ತಾರೆ.

ಆಹಾರ ಚಕ್ರದಲ್ಲಿ ಪ್ರಾಮುಖ್ಯತೆ[ಬದಲಾಯಿಸಿ]

ಟೈಗರ್ ಪತಂಗ

ಹಲವು ನಿಶಾಚರಿಗಳು ಪತಂಗಗಳನ್ನು ತಿನ್ನುತ್ತವೆ. ಇದರಲ್ಲಿ ಬಾವಲಿ, ಕೆಲವು ವರ್ಗದ ಗೂಬೆಗಳು ಮತ್ತು ಹಕ್ಕಿಗಳು ಪ್ರಮುಖವಾದುದು. ಕೆಲವು ವರ್ಗದ ಹಲ್ಲಿಗಳು, ಬೆಕ್ಕು, ನಾಯಿ ಮತ್ತು ಹೆಗ್ಗಣಗಳಿಗೆ ಪತಂಗಗಳು ಆಹಾರವಾಗುತ್ತವೆ. ಬಾವಲಿಗಳು ಬೇಟೆಯಾಡುವಾಗ ಶ್ರವಣಾತೀತ ಧ್ವನಿಯನ್ನು ಹೊರ ಹೊಮ್ಮಿಸುತ್ತವೆ, ಪತಂಗಗಳು ಈ ಧ್ವನಿಯನ್ನು ಗ್ರಹಿಸಿ, ಹಾರುವ ದಿಕ್ಕನ್ನು ಬದಲಾಯಿಸಿ, ಬಾವಲಿಗಳಿಂದ ತಪ್ಪಿಸಿಕೊಳ್ಳುತ್ತವೆ ಎಂಬ ಪುರಾವೆಗಳು ದೊರಕಿವೆ. ಶ್ರವಣಾತೀತ ಕಂಪನಾಂಕಗಳು ಪ್ರತಿಫಲವಾಗಿ ಪತಂಗಗಳು ಅವು ಹಾರುವ ಎತ್ತರದಿಂದ ತಕ್ಷಣ ಒಂದಷ್ಟು ಇಂಚು ಕೆಳಗೆ ಹೋಗಿ ಬಾವಲಿಯ ಆಕ್ರಮಣದಿಂದ ತಪ್ಪಿಸಿಕೊಳುತ್ತದೆ. ಟೈಗರ್ ಪತಂಗ(Tiger moth) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಚಿಟಿಕೆ ಹೊಡೆಯುವ ಹಾಗೆ ಸದ್ದು ಮಾಡಿ, ಅದರ ಕಂಪನಾಂಕಗಳಿಗೆ ಹಾನಿ ಮಾಡಿ ಬಾವಲಿಯನ್ನು ಗೊಂದಲಕ್ಕೀಡು ಮಾಡುತ್ತದೆ.

ಉಲ್ಲೇಖ[ಬದಲಾಯಿಸಿ]

  1. "Moths". Smithsonian Institution. Retrieved 2012-01-12.
"https://kn.wikipedia.org/w/index.php?title=ಪತಂಗ&oldid=1040929" ಇಂದ ಪಡೆಯಲ್ಪಟ್ಟಿದೆ