ರೇಷ್ಮೆ ಹುಳು ಸಾಕಣೆ
ರೇಷ್ಮೆ ಕೃಷಿ, ಅಥವಾ ರೇಷ್ಮೆ ವ್ಯವಸಾಯ ಎಂದರೆ ರೇಷ್ಮೆಯನ್ನು ಉತ್ಪಾದಿಸಲು ರೇಷ್ಮೆ ಹುಳುಗಳನ್ನು ಬೆಳೆಸುವುದು. ರೇಷ್ಮೆ ಹುಳುಗಳಲ್ಲಿ ಹಲವಾರು ವಾಣಿಜ್ಯ ಪ್ರಭೇದಗಳಿದ್ದರೂ, ಬಾಂಬಿಕ್ಸ್ ಮೋರಿ (ದೇಶೀಯ ರೇಷ್ಮೆ ಮರಿಗಳ ಕಂಬಳಿ ಹುಳು) ರೇಷ್ಮೆ ಹುಳುಗಳನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ತೀವ್ರವಾಗಿ ಅಧ್ಯಯನ ಮಾಡಲಾಗಿದೆ. ನವಶಿಲಾಯುಗದ ಅವಧಿಯ ಹಿಂದೆಯೇ ಚೀನಾದಲ್ಲಿ ರೇಷ್ಮೆ ಉತ್ಪಾದಿಸಲ್ಪಟ್ಟಿದೆ ಎಂದು ನಂಬಲಾಗಿತ್ತು.ಬ್ರೆಜಿಲ್, ಚೀನಾ, ಫ್ರಾನ್ಸ್, ಭಾರತ, ಇಟಲಿ, ಜಪಾನ್, ಕೊರಿಯಾ ಮತ್ತು ರಷ್ಯಾದ ದೇಶಗಳಲ್ಲಿ ರೇಷ್ಮೆ ವ್ಯವಸಾಯ ಒಂದು ಪ್ರಮುಖ ಗೃಹ ಕೈಗಾರಿಕೆಯಾಗಿದೆ. ಇಂದು, ಚೀನಾ ಮತ್ತು ಭಾರತ ಎರಡು ಪ್ರಮುಖ ಉತ್ಪಾದಕರಾಗಿದ್ದು, ವಿಶ್ವದ ವಾರ್ಷಿಕ ಉತ್ಪಾದನೆಯು 60% ಕ್ಕಿಂತ ಹೆಚ್ಚು ಇವುಗಳಲ್ಲಿ ಆಗುತ್ತದೆ.
ಇತಿಹಾಸ
[ಬದಲಾಯಿಸಿ]"ಕನ್‍ಫ್ಯೂಷಿಯಸ್" ಪಠ್ಯದ ಪ್ರಕಾರ, ರೇಷ್ಮೆ ಉತ್ಪಾದನೆಯ ಆವಿಷ್ಕಾರವು ಕ್ರಿ.ಪೂ. 2700 ರಷ್ಟು ಪ್ರಾಚೀನವಾಗಿದೆ. ಆದರೂ ಪುರಾತತ್ತ್ವ ಶಾಸ್ತ್ರದ ದಾಖಲೆಗಳು ಯಾಂಗ್‌ಶಾವೊ ಅವಧಿಯಲ್ಲಿ (ಕ್ರಿ.ಪೂ 5000–3000) ರೇಷ್ಮೆ ಕೃಷಿ ಇದ್ದದ್ದನ್ನು ಸೂಚಿಸುತ್ತವೆ.[೧] 1977 ರಲ್ಲಿ, 5400–5500 ವರ್ಷಗಳ ಹಿಂದೆ ರಚಿಸಲ್ಪಟ್ಟ ಪಿಂಗಾಣಿ ತುಂಡನ್ನು ರೇಷ್ಮೆ ಹುಳುವಿನ ಹಾಗೆ ಕಾಣುವಂತೆ ವಿನ್ಯಾಸಗೊಳಿಸಲಾಗಿತ್ತು. ಇದು ಹೆಬೈನ ನ್ಯಾನ್‌ಕುನ್‌ನಲ್ಲಿ ಪತ್ತೆಯಾಯಿತು. ಇದು ರೇಷ್ಮೆ ಕೃಷಿಯ ಆರಂಭಿಕ ಪುರಾವೆಗಳನ್ನು ಒದಗಿಸುತ್ತದೆ.[೨] ಅಲ್ಲದೆ, ಕ್ರಿ.ಪೂ 2450–2000 ರಷ್ಟು ಹಿಂದಿನ ಸಿಂಧೂ ನಾಗರೀಕತೆಯ ತಾಣಗಳಲ್ಲಿ ಕಂಡುಬರುವ ಪುರಾತತ್ತ್ವ ಶಾಸ್ತ್ರ ಸಂಬಂಧಿ ರೇಷ್ಮೆ ನಾರಿನ ಎಚ್ಚರಿಕೆಯ ವಿಶ್ಲೇಷಣೆಯಿಂದ, ದಕ್ಷಿಣ ಏಷ್ಯಾದ ವಿಶಾಲ ಪ್ರದೇಶದಲ್ಲಿ ರೇಷ್ಮೆ ಬಳಸಲಾಗುತ್ತಿತ್ತು ಎಂದು ನಂಬಲಾಗಿದೆ.[೩][೪] ಕ್ರಿ.ಶ. 1 ನೇ ಶತಮಾನದ ಮೊದಲಾರ್ಧದ ಹೊತ್ತಿಗೆ, ಇದು ರೇಷ್ಮೆ ಮಾರ್ಗದ ಉದ್ದಕ್ಕೂ ಹಲವಾರು ಸಂವಹನಗಳಿಂದ ಪ್ರಾಚೀನ ಖೋಟಾನ್‍ನ್ನು ತಲುಪಿತ್ತು.[೫] ಕ್ರಿ.ಶ. 140 ರ ಹೊತ್ತಿಗೆ, ಈ ಅಭ್ಯಾಸವನ್ನು ಭಾರತದಲ್ಲಿ ಸ್ಥಾಪಿಸಲಾಗಿತ್ತು.[೬] ಕ್ರಿ.ಶ 6 ನೇ ಶತಮಾನದಲ್ಲಿ, ಬೈಜಾಂಟೈನ್ ಸಾಮ್ರಾಜ್ಯದೊಳಗೆ ರೇಷ್ಮೆ ಹುಳು ಮೊಟ್ಟೆಗಳ ಕಳ್ಳಸಾಗಣೆಯು ಮೆಡಿಟರೇನಿಯನ್‌ನಲ್ಲಿ ಅದರ ಸ್ಥಾಪನೆಗೆ ಕಾರಣವಾಯಿತು. ಬೈಜಾಂಟೈನ್ ಸಾಮ್ರಾಜ್ಯದಲ್ಲಿ ಇದು ಶತಮಾನಗಳವರೆಗೆ (ಬೈಜಾಂಟೈನ್ ರೇಷ್ಮೆ) ಏಕಸ್ವಾಮ್ಯವಾಗಿ ಉಳಿಯಿತು. 1147 ರಲ್ಲಿ, ಎರಡನೇ ಕ್ರುಸೇಡ್ ಸಮಯದಲ್ಲಿ, ಸಿಸಿಲಿಯ ರೋಜರ್ II (1095–1154) ಬೈಜಾಂಟೈನ್ ರೇಷ್ಮೆ ಉತ್ಪಾದನೆಯ ಎರಡು ಪ್ರಮುಖ ಕೇಂದ್ರಗಳಾದ ಕೊರಿಂತ್ ಮತ್ತು ಥೀಬ್ಸ್ ಮೇಲೆ ದಾಳಿ ಮಾಡಿದನು, ನೇಕಾರರು ಮತ್ತು ಅವರ ಉಪಕರಣಗಳನ್ನು ಸೆರೆಹಿಡಿದು ಪಲೆರ್ಮೊ ಮತ್ತು ಕ್ಯಾಲಬ್ರಿಯಾದಲ್ಲಿ ತನ್ನದೇ ಆದ ರೇಷ್ಮೆ ಕಾರ್ಖಾನೆಗಳನ್ನು ಸ್ಥಾಪಿಸಿದನು,[೭] ಮತ್ತು ಉದ್ಯಮವನ್ನು ಪಶ್ಚಿಮ ಯುರೋಪಿಗೆ ಹರಡಿದನು.
ಹುಳು ಸಾಕಾಣಿಕೆ ಮನೆ
[ಬದಲಾಯಿಸಿ]ಹುಳು ಸಾಕಾಣಿಕೆಗೆ ಪ್ರತ್ಯೇಕ ಮನೆ ಇರುವುದು ಸೂಕ್ತ. ಮಾದರಿ ಹುಳು ಸಾಕಣಿಕೆ ಮನೆಯು ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು:
- ಸೋಂಕು ನಿವಾರಣೆಗೆ ಸೂಕ್ತವಾಗಿರಬೇಕು ಮತ್ತು ನೆಲ ಗೋಡೆಗಳು ನುಣುಪಾಗಿರಬೇಕು
- ವಾಸದ ಮನೆಯಿಂದ ಸಾಕಾಣಿಕೆ ಮನೆ ಪ್ರತ್ಯೇಕವಾಗಿರಬೇಕು
- ತೋಟದಿಂದ ತುಂಬಾ ದೂರದಲ್ಲಿರಬಾರದು
- ಹುಳುಗಳ ಬೆಳವಣಿಗೆಗೆ ಬೇಕಾದ ವಾತಾವರಣವನ್ನು ಒದಗಿಸಲು ಅನುಕೂಲವಿರುವಂತೆ ಬಾಗಿಲು-ಕಿಟಕಿಗಳನ್ನು ಹೊಂದಿರಬೇಕು
- ಸಾಕಾಣಿಕೆ ಮನೆಯಲ್ಲಿ, ಕಿಟಕಿ-ಬಾಗಿಲುಗಳು ಉತ್ತರ-ದಕ್ಷಿಣಕ್ಕೆ ಇದ್ದು ಮನೆಯ ಉದ್ದ ಪೂರ್ವ-ಪಶ್ಚಿಮಕ್ಕೆ ಇರಬೇಕು
- ಸಾಕಾಣಿಕೆ ಮನೆಯ ಸುತ್ತಲು-ನೆರಳು ಉಂಟುಮಾಡುವಂತೆ ಗಿಡ-ಮರಗಳನ್ನು ಬೆಳೆಸಬೇಕು
- ಸೊಪ್ಪು ಶೇಖರಿಸಲು, ಪ್ರತ್ಯೇಕ ಕೊಠಡಿಯಿರಬೇಕು
- ಚಾಕಿ ಹುಳು-ಸಾಕಾಣಿಕೆಗೆ ಪ್ರತ್ಯೇಕ ಕೊಠಡಿಯಿದ್ದರೆ ಉತ್ತಮ
ಸೋಂಕು ನಿವಾರಣೆ
[ಬದಲಾಯಿಸಿ]- ಪ್ರತಿ ಬೆಳೆಯ ಮುನ್ನ ಮತ್ತು ಗೂಡು ಮಾರಾಟವಾದ ನಂತರ ಕಡ್ಡಾಯವಾಗಿ ಸೋಂಕು ನಿವಾರಣೆ ಮಾಡಬೇಕು.
- ಪ್ರತಿ ಬೆಳೆಯ ನಂತರ ಉಪಯೋಗಿಸಿದ ಎಲ್ಲಾ ಸಾಮಗ್ರಿಗಳನ್ನು, ಸಾಕಾಣಿಕೆ ಕೊಠಡಿಯನ್ನು ಕಸ ಸಹಿತ ಯಥಾ ಸ್ಥಿತಿಯಲ್ಲಿ ಪರಿಣಾಮಕಾರಿಯಾಗಿ ಸೋಂಕು ನಿವಾರಣೆ ಮಾಡಬೇಕು.
ರೇಷ್ಮೆ ಮೊಟ್ಟೆಗಳ ಪರಿಪಾಕಿಸುವಿಕೆ
[ಬದಲಾಯಿಸಿ]ರೋಗರಹಿತ ರೇಷ್ಮೆ ಮೊಟ್ಟೆಗಳನ್ನು ಬಿತ್ತನೆ ಕೋಠಿಯಿಂದ ಖರೀದಿಸಬೇಕು. ತಂಪಾದ ವೇಳೆಯಲ್ಲಿ ಸಂಜೆ ನಾಲ್ಕು ಗಂಟೆಯ ನಂತರ ಸಾಕಾಣಿಕೆ ಮಾಡಬೇಕು.
- ಸಾಗಾಣಿಕೆ ಸಮಯದಲ್ಲಿ ತೀಕ್ಷ್ಣ ನೇರ ಬಿಸಿಲು, ಮಳೆ ಇತ್ಯಾದಿಗಳಿಂದ ಮೊಟ್ಟೆಗಳಿಗೆ ಹಾನಿಯಾಗಲಾರದಂತೆ ಎಚ್ಚರ ಅವಶ್ಯ. ತೇವಾಂಶ ಕಡಿಮೆಯಾಗಿರಬಾರದು.
- ಮೊಟ್ಟೆ ಹಾಳೆಗಳನ್ನು ಒತ್ತೊತ್ತಾಗಿಟ್ಟು, ಗಾಳಿ ಸಂಚಾರವಿಲ್ಲದ ಪ್ಲಾಸ್ಟಿಕ್ ಚೀಲದಲ್ಲಿ ಅಥವಾ ತರಕಾರಿ ಚೀಲದಲ್ಲಿ ಇನ್ನಿತರ ವಸ್ತಗಳ ಜೊತೆಗೆ ಅಥವಾ ಬಟ್ಟೆಯಲ್ಲಿ ಸುತ್ತಿಕೊಂಡು ಸಾಕಾಣಿಕೆ ಮಾಡಬಾರದು.
- ಕೀಟ ನಾಶಕಗಳ ಜೊತೆ, ಮೊಟ್ಟೆಗಳನ್ನು ಸಾಗಾಣಿಕೆ ಮಾಡಬಾರದು.
- ವಾಹನದಲ್ಲಿ ಪ್ರಯಾಣಿಸುವಾಗ `ಇಂಜಿನ್' ಪಕ್ಕದಲ್ಲಿ ಇಟ್ಟುಕೊಂಡು ಪ್ರಯಾಣ ಮಾಡಬಾರದು.
- ಮೊಟ್ಟೆಗಳನ್ನು ತಂದ ನಂತರ ಶೇ.2ರ ಫಾರ‍್ಮಾಲಿನ್ ದ್ರಾವಕದಲ್ಲಿ 5-10ನಿಮಿಷ ಕಾಲ ಅದ್ದಿ, 1/2 ಗಂಟೆ ನೆರಳಿನಲ್ಲಿ ಆರಲು ಬಿಡುವುದರಿಂದ ಮೊಟ್ಟೆಗಳ ಮೇಲಿರುವ ರೋಗಾಣುಗಳು ಇದ್ದಲ್ಲಿ ನಾಶವಾಗುವವು.
- ಪರಿಪಾಕಿಸುವ ಸಮಯದಲ್ಲಿ ಅಗತ್ಯವಾದ ಉಷ್ಣಾಂಶ ಮತ್ತು ತೇವಾಂಶವಿರುವಂತೆ ನೋಡಿಕೊಳ್ಳಬೇಕು. (ಉಷ್ಣಾಂಶ - ೨೪-೨೮0C, ತೇವಾಂಶ - ೮೦%)
ಕಪ್ಪು ಪೆಟ್ಟಿಗೆ ವಿಧಾನ
[ಬದಲಾಯಿಸಿ]ತೆಳುವಾದ ಕಾಗದದಲ್ಲಿ ಪ್ಯಾಕೆಟ್‌ನಂತೆ ಮೊಟ್ಟೆ ಹಾಳೆಗಳನ್ನು ಸುತ್ತಿ ಅವನ್ನು ಪುನಃ ಕಪ್ಪು ಪೆಟ್ಟಿಗೆಯಲ್ಲಿಡಬೇಕು.
- ಚಾಕಿಯಾಗದ ದಿನದಂದು ಮೊಟ್ಟೆಗಳನ್ನು ಕಪ್ಪು ಪೆಟ್ಟಿಗೆಯಿಂದ ಹೊರತೆಗೆದು ಬೆಳಿಗ್ಗೆ ಮಂದವಾದ ಬೆಳಕಿಗೆ ಎರಡು ಗಂಟೆಗಳ ಕಾಲ ಇಟ್ಟಲ್ಲಿ ಶೇ. 90-95 ಚಾಕಿಯಾಗುವುದು. ಯಾವುದೇ ಕಾರಣಕ್ಕೂ ನೇರ ಸೂರ್ಯನ ಬೆಳಕಿಗೆ ಇಡಬಾರದು.
ಮೊಟ್ಟೆಗಳ ಹಂತ | ಕಪ್ಪು ಪೆಟ್ಟಿಗೆಯಲ್ಲಿ ಇಡುವ ಅವಧಿ | ಬೆಳಕಿಗೆ ತೆರೆದಿಡುವ ದಿನ |
---|---|---|
ಶೇ. ೫೦ ಕ್ಕಿಂತ ಕಡಿಮೆ ಕಪ್ಪು ಚುಕ್ಕೆ | ೩ ದಿನಗಳು | ನಾಲ್ಕನೇಯ ದಿನ |
ಶೇ. ೫೦ ಕ್ಕಿಂತ ಹೆಚ್ಚು ಕಪ್ಪು ಚುಕ್ಕೆ | ೨ ದಿನಗಳು | ಮೂರನೇ ದಿನ |
ಶೇ. ೫೦ ಕ್ಕಿಂತ ಕಡಿಮೆ ಬೂದು ಬಣ್ಣ | ೨ ದಿನಗಳು | ಮೂರನೇ ದಿನ |
ಶೇ. ೫೦ ಕ್ಕಿಂತ ಹೆಚ್ಚು ಬೂದು ಬಣ್ಣ | ಒಂದು ದಿನ | ಎರಡನೇ ದಿನ |
ಚಾಕಿ ಸಾಕಾಣಿಕೆ
[ಬದಲಾಯಿಸಿ]ಚಾಕಿ ಸಾಕಣೆ ಅತೀ ಸೂಕ್ಷ್ಮವಾದ ಮತ್ತು ಮುಖ್ಯ ಅಂಶ. ಗೂಡಿನ ಗುಣಮಟ್ಟ ಮತ್ತು ಒಟ್ಟು ಇಳುವರಿ ಸಂಪೂರ್ಣವಾಗಿ ಸಮರ್ಪಕ ಚಾಕಿ ಸಾಕಾಣಿಕೆ ಮೇಲೆ ಅವಲಂಬಿಸಿದೆ. ಚಾಕಿ ಮಾಡುವ ಮುನ್ನ ಸೋಂಕು ನಿವಾರಣೆ, ಮೊಟ್ಟೆ ಪರಿಸಾಕಣೆಗೆ ಅಲ್ಲದೇ ಇನ್ನಿತರ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು.
- ಚಾಕಿ ಕಟ್ಟುವುದನ್ನು ಬೆಳಗಿನ 10 ಗಂಟೆಯ ಒಳಗೆ ಮಾಡುವುದು ಸೂಕ್ತ. ನಿಗದಿತ ಸಮಯದ ನಂತರ ಚಾಕಿ ಕಟ್ಟಬಾರದು.
- ಸೊಪ್ಪನ್ನು ಕಂದು, ಚಿಕ್ಕದಾಗಿ ಚೌಕಾಕಾರದಲ್ಲಿ ಕತ್ತರಿಸಿ ಹುಳುಗಳಿಗೆ ನೀಡಬೇಕು.
- ಆಯಾ ಹಂತಕ್ಕೆ ಅನುಗುಣವಾಗಿ ಮೇಲಿನ ಕೋಷ್ಟಕದಲ್ಲಿ ತಿಳಿಸಿದಂತೆ, ನಿಗದಿತ ಪ್ರಮಾಣದಲ್ಲಿ ಸೊಪ್ಪನ್ನು ನೀಡುವುದು ಅವಶ್ಯ. ಹುಳುಗಳ ಗಾತ್ರಕ್ಕೆ ಅನುಗುಣವಾಗಿ ಸೊಪ್ಪನ್ನು ಚೌಕಾಕಾರವಾಗಿ ಕತ್ತರಿಸಿ ದಿನಕ್ಕೆ ನಾಲ್ಕು ಬಾರಿ ನೀಡಬೇಕು ಮತ್ತು ಸ್ಥಳಾವಕಾಶ ಒದಗಿಸಬೇಕು.
- ಬೆಳಿಗ್ಗೆ ಮತ್ತು ಸಾಯಂಕಾಲದ ತಂಪು ಹೊತ್ತಿನಲ್ಲಿ ಸೊಪ್ಪು ತರಬೇಕು.
- ಚಾಕಿ ಹುಳುಗಳಿಗೆ ಬೇಕಾಗಿರುವ ಅಧಿಕ ಉಷ್ಣಾಂಶ ಮತ್ತು ತೇವಾಂಶ ಕೊಠಡಿಯಲ್ಲಿರುವಂತೆ ನೋಡಿಕೊಳ್ಳಬೇಕು.
- ಚಾಕಿ ಹುಳು ಸಾಕಾಣಿಕೆಯನ್ನು ಮರದ ತಟ್ಟೆಗಳಲ್ಲಿ ಮಾಡುವುದು ಸೂಕ್ತ. ಇಲ್ಲವಾದಲ್ಲಿ ಬಿದಿರಿನ ತಟ್ಟೆಗಳಲ್ಲಿ ಮಾಡಬಹುದು. ಪ್ರತಿ ತಟ್ಟೆಯಲ್ಲಿ ಕೇವಲ 25 ಮೊಟ್ಟೆಗಳನ್ನು ಮಾತ್ರ ಚಾಕಿ ಕಟ್ಟಬೇಕು. ಕಾರಣ ರೋಗ ಹರಡದಂತೆ ಕಾಪಾಡಬಹುದು. ಚಾಕಿ ಕಟ್ಟಿದ 25 ಮೊಟ್ಟೆಗಳ ಮರಿಗಳನ್ನು ಎರಡನೇ ಹಂತದ ಕೊನೆಯವರೆಗೆ ಅದೇ ತಟ್ಟೆಯಲ್ಲಿ ಮುಂದುವರಿಸಬೇಕು.
- ಮೊದಲ ಹಂತದಲ್ಲಿ ಹಾಸಿಗೆ ಬದಲಾಯಿಸಬಾರದು. ಎರಡನೇ ಹಂತದ ಅವಧಿಯಲ್ಲಿ ಜ್ವರದಿಂದ ಎದ್ದ ಹುಳುಗಳಿಗೆ 1-2 ಸೊಪ್ಪು ಕೊಟ್ಟ ನಂತರ ಮತ್ತು ಎರಡನೇ ಜ್ವರಕ್ಕೆ ಹೋಗುವ ಮೊದಲು (2 ಸೊಪ್ಪು ಮೊದಲು), ಮತ್ತು ಮೂರನೇ ಹಂತದಲ್ಲಿ ಪ್ರತಿದಿನ ಹಾಸಿಗೆ ಬದಲಾಯಿಸಬೇಕು. ಕಸ ತೆಗೆಯಲು ಬಲೆಗಳನ್ನು ಉಪಯೋಗಿಸಬೇಕು.
- ಜ್ವರಕ್ಕೆ ಕೂಡುವ, ಸಮಯದಲ್ಲಿ ಮೇಲೆ ಮುಚ್ಚಿದ ಮೇಣದ ಕಾಗದ ಮತ್ತು ಫೋಮ್ ರಬ್ಬರನ್ನು ತೆಗೆಯಬೇಕು. ಪ್ರತಿಸಾರಿ ಹುಳುಗಳು ಜ್ವರದಲ್ಲಿರುವಾಗ ಸುಣ್ಣದ ಪುಡಿಯನ್ನು ಉದುರಿಸಿ ಹಾಸಿಗೆ ಒಣದಾಗಿರುವಂತೆ ನೋಡಿಕೊಳ್ಳಬೇಕು.
- ಹುಳುಗಳು ಜ್ವರದಲ್ಲಿರುವಾಗ ಪದೇ ಪದೇ ಕದಲಿಸಬಾರದು.
- ಶೇ. 90ರಷ್ಟು ಹುಳುಗಳು ಜ್ವರದಿಂದ ಎದ್ದ ನಂತರವೇ ಸೊಪ್ಪು ಕೊಡಬೇಕು.
- ಮುಂಜಾಗ್ರತೆ ಕ್ರಮವಾಗಿ ರೋಗಗಳನ್ನು ತಡೆಯಲು ಹಾಸಿಗೆ ಸೋಂಕು ನಿವಾರಕಗಳನ್ನು ಜ್ವರದಿಂದ ಎದ್ದ ನಂತರ ಶಿಫಾರಸ್ಸಿನಂತೆ ಉಪಯೋಗಿಸಬೇಕು.
- ಬರಿಗೈಯಿಂದ ಚಾಕಿ ಹುಳುಗಳನ್ನು ಯಾವುದೇ ಕಾರಣದಿಂದ ಮುಟ್ಟಬಾರದು.
- ಮೇಲಿನ ಕೋಷ್ಟಕದಲ್ಲಿರುವಂತೆ, ಆಯಾ ಹಂತಕ್ಕೆ ತಕ್ಕಂತೆ ಹಾಸಿಗೆಯ ಸ್ಥಳಾವಕಾಶವನ್ನು ಹೆಚ್ಚಿಸುತ್ತಿರಬೇಕು. ಒತ್ತೊತ್ತಾಗಿ ಗಾಳಿಯಾಡದಂತೆ ಹುಳುಗಳನ್ನು ಇಟ್ಟಿದ್ದೆ ಆದಲ್ಲಿ ಬೇಗನೇ ರೋಗಗಳಿಗೆ ತುತ್ತಾಗಿ ಬೆಳೆ ಹಾನಿಯಾಗುವುದು.
- ರೈತರು ಚಾಕಿಯನ್ನು ಚಾಕಿ ಸಾಕಾಣಿಕೆ ಕೇಂದ್ರದಿಂದ ತರುವ ಸಂದರ್ಭಗಳಲ್ಲಿ, ಆರೋಗ್ಯವಂತ ಚಾಕಿಯನ್ನು ಎರಡನೇ ಜ್ವರದ ನಂತರ 1-2 ಸೊಪ್ಪು ಕೊಟ್ಟ ನಂತರ ತಂಪಾದ ವೇಳೆಯಲ್ಲಿ ಸಮೀಪದ ಕೇಂದ್ರದಿಂದ ತರಬೇಕು.
ಬೆಳೆದ ಹುಳು ಸಾಕಾಣಿಕೆ
[ಬದಲಾಯಿಸಿ]- ಐದನೇ ಹಂತದ ಮೂರನೇ ದಿನದಿಂದ ಬಲಿಕೆ ಸೊಪ್ಪನ್ನು ಕೊಡಬೇಕು.
- ಮಣ್ಣು ಮಿಶ್ರಿತ ರೋಗ ತಗುಲಿದ, ಹಣ್ಣಾದ ಸೊಪ್ಪನ್ನು ನೀಡಬಾರದು.
- ನಾಲ್ಕನೇ ಹಂತದಲ್ಲಿ ಒಂದು ಎಲೆಯನ್ನು ಅರ್ಧದಂತೆ ಕತ್ತರಿಸಿದ ಎಲೆಯನ್ನು ನೀಡಬೇಕು.
- 4ನೇ/5ನೇ ಹಂತದಲ್ಲಿ ಪ್ರತಿ ದಿನವು ಹಾಸಿಗೆಯನ್ನು ಬದಲಾಯಿಸಬೇಕು. ಅಲ್ಲದೇ ಕಸ ಬದಲಾಯಿಸುವ ಬೆಲೆಗಳನ್ನು ಉಪಯೋಗಿಸಬೇಕು.
ಹುಳುವಿನ ಹಂತ | ಸ್ಥಳಾವಕಾಶ (೩ ೧/೨ ಅಡಿ ತಟ್ಟೆಗಳು) | ಸೊಪ್ಪಿನ ಪ್ರಮಾಣ | ಉಷ್ಣಾಂಶ (ಸೆ) | ತೇವಾಂಶ (%) |
---|---|---|---|---|
ಮೊದಲನೇ ಹಂತ | ೨ | ೨.೫-೩ ಕೆ.ಜಿ. | ೨೭-೨೮ | ೮೫-೯೦ |
ಎರಡನೇ ಹಂತ | ೨-೫ | ೧೦ ಕೆ.ಜಿ. | ೨೭-೨೮ | ೮೫-೯೦ |
ಮೂರನೇ ಹಂತ | ೫-೧೦ | ೫೦ ಕೆ.ಜಿ. | ೨೫-೨೬ | ೭೫-೮೦ |
ನಾಲ್ಕನೇ ಹಂತ | ೧೦-೨೦ | ೧೦೦-೧೨೫ ಕೆ.ಜಿ. | ೨೪-೨೫ | ೭೦-೭೫ |
ಐದನೇ ಹಂತ | ೨೦-೪೦ | ೮೦೦-೯೦೦ ಕೆ.ಜಿ. | ೨೩-೨೪ | ೬೫-೭೦ |
- ಬೆಳೆದ ಹುಳುಗಳಿಗೆ ಬೇಕಾದ ಉಷ್ಣಾಂಶ ಮತ್ತು ತೇವಾಂಶ ಕೋಷ್ಠಕದಲ್ಲಿರುವಂತೆ ಒದಗಿಸಬೇಕು.
- ಪ್ರೌಢ ಹುಳುಗಳಿಗೆ ಸಮರ್ಪಕ, ನಿಗದಿತ ಪ್ರಮಾಣದಲ್ಲಿ ಸೊಪ್ಪು ನೀಡಬೇಕು. ಅತಿ ಹೆಚ್ಚಿನ ಸೊಪ್ಪು ನೀಡಬಾರದು.
- ದಟ್ಟವಾಗಿ ಹುಳು ಸಾಕಾಣಿಕೆ ಮಾಡಬಾರದು. ಇದರಿಂದ ರೋಗಗಳು ಬರುವ ಸಂಭವ ಹೆಚ್ಚು ಹುಳುಗಳನ್ನು ಅತಿ ವಿರಳವಾಗಿರುವುದರಿಂದ ಸೊಪ್ಪು ವ್ಯರ್ಥವಾಗುತ್ತದೆ.
- ಮುಂಜಾಗ್ರತಾ ಕ್ರಮವಾಗಿ ಮೂರು ಮತ್ತು ನಾಲ್ಕನೇ ಜ್ವರದಿಂದ ಎದ್ದ ನಂತರ, ಮೂರು/ನಾಲ್ಕನೇ ದಿನ ಸೊಪ್ಪು ಕೊಡುವ ಮುನ್ನ ಹಾಸಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸಿ ಅರ್ಧ ಗಂಟೆ ಕಾಲ ಪೇಪರಿನಿಂದ ಮುಚ್ಚಿ ನಂತರ ಸೊಪ್ಪು ಕೊಡಬೇಕು.
- ಪ್ರೌಢ ಹುಳು ಸಾಕಾಣಿಕೆಯಲ್ಲಿ ಮೂರನೇ ಹಂತದಿಂದ ಶಿಫಾರಸ್ಸಿನಂತೆ ಊರು ಹುಳು ನಿಯಂತ್ರಣಕ್ಕೆ ಊದಿ ಪುಡಿಯನ್ನು ಉಪಯೋಗಿಸಬೇಕು.
- ಅವಶ್ಯಕತೆಯಿದ್ದಲ್ಲಿ ದಿನ ಬಿಟ್ಟು ದಿನ ಅಥವಾ ಪ್ರತಿದಿನ ಕಸ ತೆಗೆದ ನಂತರ ಸೋಂಕು ನಿವಾರಕಗಳನ್ನು ಉಪಯೋಗಿಸಬೇಕು.
- ಕೀಟನಾಶಕ/ಇತರ ವಿಷಯುಕ್ತ ರಸಾಯನಿಕಗಳನ್ನು ಸಿಂಪಡಿಸಿದ ಸೊಪ್ಪನ್ನು ಸುರಕ್ಷಿತ ಕಾಲಾವಧಿ ಮೊದಲು ಕೊಡಬಾರದು. ಸಂಶಯವಿದ್ದಲ್ಲಿ, ಸ್ವಲ್ಪ ಹುಳುಗಳಿಗೆ ನೀಡಿ ಪರೀಕ್ಷಿಸಿ, ಹಾನಿ ಇಲ್ಲದಿದ್ದಲ್ಲಿ ನೀಡಬೇಕು.
- ಬೀಡಿ, ಸಿಗರೇಟು ಹೊಗೆಯು ರೇಷ್ಮೆ ಹುಳುಗಳಿಗೆ ಹಾನಿಕಾರಕ. ಆದ್ದರಿಂದ ಸಾಕಾಣಿಕೆ ಮನೆಯಲ್ಲಿ ಸೇದಬಾರದು.
ರೋಗಪೀಡಿತ ಹುಳುಗಳ ನಿರ್ವಹಣೆ
[ಬದಲಾಯಿಸಿ]- ರೋಗಪೀಡಿತ ಹುಳುಗಳನ್ನು ತಟ್ಟೆಗಳಿಂದ ಸಂಗ್ರಹಿಸಿ ಫರ‍್ಟಾಲಿನ್/ಬ್ಲೀಚಿಂಗ್ ಪುಡಿ/ ಸುಣ್ಣದಲ್ಲಿ ಶೇಖರಿಸಬೇಕು.
- ಈ ಹುಳುಗಳನ್ನು ಹುಳು ಮನೆಯ ಸುತ್ತಮುತ್ತ ಬಿಸಾಕಬಾರದು.
- ಇಂತಹ ಹುಳುಗಳನ್ನು ಸುಟ್ಟು ಇಲ್ಲವೆ ಹೂತು ಹಾಕಬೇಕು.
ರೆಂಬೆ ಪದ್ಧತಿ - ದೊಡ್ಡ ಹುಳು ಸಾಕಾಣಿಕೆ
[ಬದಲಾಯಿಸಿ]- ಮೂರನೇ ಅಥವಾ ನಾಲ್ಕನೇ ಹಂತದ ಹುಳುಗಳನ್ನು ರೆಂಬೆಗಳಿಂದ ಬೆಳೆಸಬಹುದು. ಈ ವಿಧಾನದಲ್ಲಿ ದಡೇವು, ತಟ್ಟೆಗಳ ಬದಲಾಗಿ ಮೇಜುಗಳ ಮೇಲೆ ಹುಳು ಸಾಕಾಣಿಕೆ ಮಾಡಬೇಕು. ಒಂದು ಮೇಜಿನ (5X35 ಅಡಿ) ಮೇಲೆ ಸುಮಾರು 50 ಮೊಟ್ಟೆ (20,000 ಹುಳು)ಗಳನ್ನು ಮೇಯಿಸಬಹುದು.
- ರೆಂಬೆಗಳನ್ನು ಎರಡರಿಂದ ಮೂರು ಕಣ್ಣುಗಳನ್ನು ಬಿಟ್ಟು ಕಾಂಡ ಸೀಳದಂತೆ ಕತ್ತರಿಸಿ 20 ರಿಂದ 30 ಕೆ.ಜಿ. ತೂಕದಂತೆ ಸಂಗ್ರಹಿಸಿಡಬೇಕು. ಒದ್ದೆ ಗೋಣಿ ಚೀಲದಿಂದ ತೇವಾಂಶ ಕಾಪಾಡಬೇಕು.
- 4 ಮತ್ತು 5ನೇ ಹಂತದ ಹುಳುಗಳಿಗೆ ಬೇಕಾಗಿದ್ದಲ್ಲಿ ದಿನಕ್ಕೆ 3-4 ಬಾರಿ ಸೊಪ್ಪು ಕೊಟ್ಟು, ಬೆಳವಣಿಗೆಗೆ ತಕ್ಕಂತೆ ಸ್ಥಳಾವಕಾಶ ಒದಗಿಸಬೇಕು.
- ಹುಳುಗಳು ಜ್ವರದಲ್ಲಿದಾಗ (ಶೇ.90ರಷ್ಟು) ರೆಂಬೆಗಳನ್ನು ಕೊಡುವುದನ್ನು ನಿಲ್ಲಿಸಿ, ಹಾಸಿಗೆ ಒಣಗುವಂತೆ, ಸುಣ್ಣದ ಪುಡಿ ಧೂಳೀಕರಿಸಬೇಕು.
- ಈ ಪದ್ಧತಿಯಲ್ಲಿ ಬೆಳೆದ ಹುಳುಗಳ ಸಾಕಾಣಿಕೆಯ 12-13ದಿನಗಳ ಅವಧಿಯಲ್ಲಿ, ನಾಲ್ಕನೇ ಜ್ವರದಿಂದ ಎದ್ದ ಮೇಲೆ ಕಸ ತೆಗೆಯಬೇಕು.
- ಹುಳುಗಳು ಜ್ವರದಿಂದ ಎದ್ದ ಮೇಲೆ ಹಾಸಿಗೆ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡಿ, ಅರ್ಧ ಗಂಟೆ ನಂತರ ಸೊಪ್ಪು ನೀಡಬೇಕು.
- ಊರು ಹಾವಳಿ ತಡೆಯಲು, 3,4,5ನೇ ಹಂತದಲ್ಲಿ ಕೋಷ್ಠಕದಲ್ಲಿ ತಿಳಿಸಿರುವಂತೆ ಊದೆ ಪುಡಿಯನ್ನು ಎಲ್ಲಾ ಹುಳುಗಳ ಮೇಲೆ ಒಂದು ಪದರು ಬೀಳುವಂತೆ ಸಿಂಪಡಿಸಬೇಕು.
ಹುಳುವಿನ ಹಂತ | ತಟ್ಟೆಯ ಸಂಖ್ಯೆ (ಸ್ಥಳಾವಕಾಶ ಚ.ಅ.) | ಒಟ್ಟು ಪ್ರಮಾಣ ಗ್ರಾಂ |
---|---|---|
ಚಾಕಿ ಹಂತದಲ್ಲಿ | ೨ (೪) | ೨೦ |
ಮೊದಲ ಜ್ವರದಿಂದ ಎದ್ದ ನಂತರ | ೨ (೧೫) | ೫೦ |
ಎರಡನೆ ಜ್ವರದಿಂದ ಎದ್ದ ನಂತರ | ೪ (೧೫) | ೧೨೦ |
ಮೂರನೇ ಜ್ವರದ ನಂತರ | ೮ (೯೦) | ೩೨೦ |
ನಾಲ್ಕನೇ ಜ್ವರದ ನಂತರ | ೧೫ (೧೮೦) | ೭೫೦ |
ಐದನೇ ಹಂತದ ೩/೪ ನೇ ದಿನ | ೨೫ (೨೭೦) | ೧೫೦೦ |
ಒಟ್ಟು | ೨೭೦೦ ಗ್ರಾಂ | |
ನೂರು ಮೊಟ್ಟೆಗಳಿಗೆ = ೨.೭ ರಿಂದ ೩ ಕೆ.ಜಿ. |
ಹಣ್ಣು ಹುಳುಗಳ ನಿರ್ವಹಣೆ
[ಬದಲಾಯಿಸಿ]ಹಣ್ಣು ಹುಳುಗಳು ಸೊಪ್ಪು ತಿನ್ನುವುದನ್ನು ನಿಲ್ಲಿಸಿ, ತಲೆಯೆತ್ತಿ, ಗೂಡನ್ನು ಕಟ್ಟಲು ಜಾಗ ಹುಡುಕಾಡುತ್ತವೆ. ಈ ಹಂತದಲ್ಲಿ ಅಲಕ್ಷ್ಯತನ ತೋರಿದಲ್ಲಿ ಹುಳುಗಳು ತಟ್ಟೆಯಲ್ಲಿಯೆ ರೇಷ್ಮೆ ಎಳೆಗಳನ್ನು ಬಿಡಲು ಪ್ರಾರಂಭಿಸುವುದರಿಂದ ರೇಷ್ಮೆಯು ವ್ಯರ್ಥವಾಗುವುದು. ಮಾದರಿ ಹಣ್ಣು ಹುಳು ಕಾಣಿಸಿಕೊಂಡ ಮೇಲೆ ಸೊಪ್ಪನ್ನು ಕತ್ತರಿಸಿ ತೆಳುವಾಗಿ ಕೊಡಬೇಕು. ಇಲ್ಲವಾದಲ್ಲಿ ಹುಳುಗಳು ಸೊಪ್ಪಿನ ಕೆಳಗೆ ಅವಿತುಕೊಂಡು ಅಲ್ಲಿಯೇ ಗೂಡು ಕಟ್ಟಲಾರಂಭಿಸುತ್ತವೆ. ಇದರಿಂದ ಗೂಡಿನ ಗುಣಮಟ್ಟ ಕಡಿಮೆಯಾಗಿ ಹೆಚ್ಚಿನ ಬೆಲೆ ಸಿಗುವುದಿಲ್ಲ.
- ಸ್ವಚ್ಛಗೊಳಿಸಿ ಸೋಂಕು ನಿವಾರಣೆ ಮಾಡಿದಂತಹ ಚಂದ್ರಿಕೆಗಳಲ್ಲಿ ಉಪಯೋಗಿಸಬೇಕು. ಇವುಗಳನ್ನು ಓರೆಯಾಗಿ ನಿಲ್ಲಿಸಬೇಕು.
- ಸರಿಯಾಗಿ ಹಣ್ಣಾದ ಹುಳುಗಳನ್ನು ಆಯ್ದು 6X4 ಅಡಿ ಚಂದ್ರಿಕೆಗಳ ಮೇಲೆ ಅಂದಾಜು 900-1000 ಹುಳುಗಳನ್ನು ಬಿಡಬೇಕು. ಮಳೆಗಾಲದಲ್ಲಿ ಸ್ವಲ್ಪಮಟ್ಟಿಗೆ ತೆಳುವಾಗಿ ಬಿಡುವುದು ಸೂಕ್ತ.
- ಚಂದ್ರಿಕೆಗಳನ್ನು ಇಡುವ ಕೊಠಡಿಯಲ್ಲಿ, ಸಾಕಷ್ಟು ಗಾಳಿ ಸಂಚಾರ ಇರಬೇಕು. ಇಲ್ಲವಾದಲ್ಲಿ ಕೊಠಡಿಯಲ್ಲಿ ತೇವಾಂಶ ಹೆಚ್ಚಾಗಿ ನೂಲು ಬಚ್ಚಾಣಿಕೆಯು ಕಡಿಮೆಯಾಗಿ ಗೂಡಿನ ಬೆಲೆ ಕಡಿಮೆಯಾಗುವುದು.
- ಚಂದ್ರಿಕೆಯ ಮೇಲೆ ರೋಗಗ್ರಸ್ಥ ಅಥವಾ ಸತ್ತ ಹುಳು ಕಂಡು ಬಂದಲ್ಲಿ ಅವುಗಳನ್ನು ಕೂಡಲೇ ಸಂಗ್ರಹಿಸಿ ಸುಡಬೇಕು ಇಲ್ಲವೇ ಹೂತು ಹಾಕಬೇಕು.
- ಗೂಡು ಕಟ್ಟುವಾಗ ಕೊಠಡಿಯಲ್ಲಿ ಒಂದೇ ಸಮನಾದ ಮಂದ ಬೆಳಕು ಒಳ್ಳೆಯದು.
- ಗೂಡು ಕಟ್ಟುವ ಸ್ಥಳದಲ್ಲಿ ನಿಗಧಿತ ಉಷ್ಣಾಂಶ ಮತ್ತು ತೇವಾಂಶವಿರಬೇಕು. (ಉಷ್ಣಾಂಶ - ೨೫-೨೬0C, ತೇವಾಂಶ - ೬೫-೭೦%)
- ಪೂರ್ಣವಾಗಿ ಹಣ್ಣಾಗದ ಹುಳುಗಳನ್ನು ಚಂದ್ರಿಕೆಯ ಮೇಲೆ ಬಿಡಬಾರದು. ಅವುಗಳು ಮಾತ್ರ ಮತ್ತು ಹಿಕ್ಕೆಗಳು ಕಟ್ಟಿದ ಗೂಡುಗಳ ಮೇಲೆ ಬಿದ್ದು ಕಳಪೆ ಗೂಡುಗಳ ಸಂಖ್ಯೆ ಹೆಚ್ಚಾಗುವುದು.
ಗೂಡು ಬಿಡಿಸುವುದು
[ಬದಲಾಯಿಸಿ]ಗೂಡುಗಳನ್ನು ಕೋಶಾವಸ್ಥೆಯಲ್ಲಿಯೇ ಬಿಡಿಸಿದರೆ, ಕರಗಿದ ಗೂಡುಗಳ ಸಂಖ್ಯೆ ಕಡಿಮೆಯಾಗುವುದು. ಕಾರಣ 5,6ನೇ ದಿನ ಬಿಡಿಸಿ ಒಳ್ಳೆಯ ಗೂಡುಗಳನ್ನು ಮಾತ್ರ ಮಾರಾಟ ಮಾಡಬೇಕು.
- ನಿಗದಿತ ಸಮಯದ ನಂತರ ಗೂಡುಗಳನ್ನು ಬಿಡಿಸಿದರೆ ತೂಕದಲ್ಲಿ ಕಡಿಮೆಯಾಗುತ್ತದೆ.
- ಗೂಡು ಬಿಡಿಸುವ ಮೊದಲೆ, ಚಂದ್ರಿಕೆಯಲ್ಲಿಯ ಜೆಲ್ಲಿ ಗೂಡು ಮೊದಲು ತೆಗೆಯಬೇಕು. ಇಲ್ಲವಾದಲ್ಲಿ ಇವುಗಳಲ್ಲಿಯ ಸತ್ತ ಹುಳುಗಳ ರಸ ಒಳ್ಳೆಯ ಗೂಡುಗಳ ಮೇಲೆ ಬಿದ್ದು ಗೂಡುಗಳ ಗುಣಮಟ್ಟ ಕಡಿಮೆಯಾಗುವುದು.
- ಬಿಡಿಸಿದ ಗೂಡುಗಳನ್ನು ಒತ್ತೊತ್ತಾಗಿ ಇಡದೇ, ಗಾಳಿಯಾಡುವಂತೆ ತಟ್ಟೆಯಲ್ಲಿ ಹರಡಿ ಇರುವೆ, ಇತ್ಯಾದಿಗಳಿಂದ ಕಾಪಾಡಬೇಕು.
- ಗೂಡುಗಳನ್ನು ಮಾರುಕಟ್ಟೆಗೆ ಸಾಗಿಸುವಾಗ ಒತ್ತೊತ್ತಾಗಿ ಚೀಲಗಳಲ್ಲಿ ತುಂಬದೆ, ಹಗುರವಾಗಿ ಗಾಳಿಯಾಡುವಂತೆ ರಂಧ್ರವಿರುವ ಚೀಲಗಳಲ್ಲಿ ಸಾಗಿಸಬೇಕು.
- ಗೂಡುಗಳನ್ನು ಮಾರುಕಟ್ಟೆಗೆ ಸಾಗಿಸುವಾಗ ಸೀರೆ ಮಳೆ, ಬಿಸಿಲುಗಳಿಂದ ಕಾಪಾಡಬೇಕು.
- ಗೂಡುಗಳನ್ನು ಸಾಗಿಸುವಾಗ ಅಥವಾ ಕೆಳಗೆ ಇಳಿಸುವಾಗ ನೆಲಕ್ಕೆ ಅಪ್ಪಳಿಸಬಾರದು. ಇದರಿಂದ ಗೂಡಿನ ಒಳಗಿರುವ ಕೋಶಗಳಿಗೆ ಧಕ್ಕೆ / ಹಾನಿಯಾಗುವುದು.
ಊರು ನೊಣ ಮತ್ತು ನಿಯಂತ್ರಣ ಕ್ರಮಗಳು
[ಬದಲಾಯಿಸಿ]- ಊಜಿ ಬಲೆಯನ್ನು ಬಾಗಿಲು, ಕಿಟಕಿ ಮತ್ತು ದಡೆವುಗಳಿಗೆ ಅಳವಡಿಸಬೇಕು.
- ಊಜಿ ನೊಣ ಸೊಪ್ಪಿನ ಜೊತೆ ಸಾಕಾಣಿಕೆ ಮನೆ ಒಳಗೆ ಬರದಂತೆ ಜಾಗ್ರತೆ ವಹಿಸಬೇಕು.
- ಊಜಿಗೆ ತುತ್ತಾದ ಹುಳುಗಳನ್ನು ಅಂಗಳದಲ್ಲಿ ಬಿಸಾಕದೆ ನಾಶಪಡಿಸಬೇಕು.
- ರೂಢಿಯಲ್ಲಿರುವ ಊಜಿನಾಶಕಗಳಾದ ಊಜಿಪುಡಿ ಇತ್ಯಾದಿಗಳಿಂದ ನಿಗದಿತ ಕ್ರಮದಲ್ಲಿ ಊಜಿ ಹಾವಳಿ ತಡೆಯಬೇಕು.
- ಊಜಿ ಪುಡಿ ಉಪಯೋಗಿಸಿದ ಸಮಯದಲ್ಲಿ ಉಳಿಕೆ ಹಾಸಿಗೆಯನ್ನು ದನಕರುಗಳಿಗೆ ನೀಡಬಾರದು.
ಹುಳುವಿನ ಹಂತ | ಬಳಸುವ ವಿಧಾನ | ಬೇಕಾಗುವ ಪ್ರಮಾಣ |
---|---|---|
ಮೂರನೇ ಹಂತ | ಎರಡನೇ ದಿನ | ೨೯೦ ಗ್ರಾಂ |
ನಾಲ್ಕನೆಯ ಹಂತ | ಎರಡು ಮತ್ತು ನಾಲ್ಕನೇ ದಿನ | ೧೦೮೦ ಗ್ರಾಂ |
ಐದನೆಯ ಹಂತ | ಎರಡು, ನಾಲ್ಕು ಮತ್ತು ಆರನೆಯ ದಿನ | ೩೨೪೦ ಗ್ರಾಂ |
ನೂರು ಮೊಟ್ಟೆ= | ತಟ್ಟೆ ಪದ್ಧತಿ = ೪ ಕೆ.ಜಿ.
ರೆಂಬೆ ಪದ್ಧತಿ = ೫ ಕೆ.ಜಿ. |
ಉತ್ಪಾದನೆ
[ಬದಲಾಯಿಸಿ]ರೇಷ್ಮೆ ಹುಳುಗಳಿಗೆ ಹಿಪ್ಪುನೇರಳೆ ಎಲೆಗಳನ್ನು ನೀಡಲಾಗುತ್ತದೆ, ಮತ್ತು ನಾಲ್ಕನೆಯ ಪೊರೆ ಕಳೆತದ ನಂತರ, ಅವುಗಳು ತಮ್ಮ ಬಳಿ ಇರಿಸಿದ ರೆಂಬೆಯನ್ನು ಹತ್ತಿ ತಮ್ಮ ರೇಷ್ಮೆ ಗೂಡುಗಳನ್ನು ಸುತ್ತುತ್ತವೆ. ರೇಷ್ಮೆ ಎನ್ನುವುದು ಫೈಬ್ರೊಯಿನ್ ಪ್ರೋಟೀನ್ ಅನ್ನು ಒಳಗೊಂಡಿರುವ ನಿರಂತರ ತಂತು. ಪ್ರತಿ ಹುಳುವಿನ ತಲೆಯಲ್ಲಿರುವ ಎರಡು ಲಾಲಾರಸ ಗ್ರಂಥಿಗಳಿಂದ ಸ್ರವಿಸಲ್ಪಡುತ್ತದೆ ಮತ್ತು ಸಿರಿಸಿನ್ ಎಂಬ ಅಂಟು ಈ ತಂತುಗಳನ್ನು ಬಂಧಿಸುತ್ತದೆ. ರೇಷ್ಮೆಗೂಡುಗಳನ್ನು ಬಿಸಿನೀರಿನಲ್ಲಿ ಇರಿಸುವ ಮೂಲಕ ಸೆರಿಸಿನ್ ಅನ್ನು ತೆಗೆದುಹಾಕಲಾಗುತ್ತದೆ, ಇದು ರೇಷ್ಮೆ ತಂತುಗಳನ್ನು ಮುಕ್ತಗೊಳಿಸುತ್ತದೆ ಮತ್ತು ಅವುಗಳನ್ನು ರಾಟೆಗೆ ಸುತ್ತಲು ಸಿದ್ಧಗೊಳಿಸುತ್ತದೆ. ಇದನ್ನು ಡೀಗಮಿಂಗ್ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ.[೮] ಬಿಸಿನೀರಿನಲ್ಲಿ ಮುಳುಗಿಸುವುದರಿಂದ ರೇಷ್ಮೆ ಹುಳು ಪ್ಯೂಪ ಸಾಯುತ್ತದೆ. ಒಂಟಿ ತಂತುಗಳನ್ನು ಒಟ್ಟುಗೂಡಿಸಿ ದಾರವನ್ನು ರೂಪಿಸಲಾಗುತ್ತದೆ, ಇದನ್ನು ಹಲವಾರು ನಿಯಂತ್ರಕಗಳ ಮೂಲಕ ಬಿಗಿತಕ್ಕೆ ಒಳಪಡಿಸಲಾಗುತ್ತದೆ ಮತ್ತು ರಾಟೆಗಳ ಮೇಲೆ ಸುತ್ತಲಾಗುತ್ತದೆ. ಎಳೆಗಳನ್ನು ನೂಲು ರೂಪಿಸಲು ಒತ್ತಬಹುದು. ಒಣಗಿದ ನಂತರ, ಕಚ್ಚಾ ರೇಷ್ಮೆಯನ್ನು ಗುಣಮಟ್ಟಕ್ಕೆ ಅನುಗುಣವಾಗಿ ಪ್ಯಾಕ್ ಮಾಡಲಾಗುತ್ತದೆ.
ಉತ್ಪಾದನೆಯ ಹಂತಗಳು
[ಬದಲಾಯಿಸಿ]- ಹಿಪ್ಪುನೇರಳೆ ಎಲೆಗಳ ಆಹಾರವನ್ನು ಲಾರ್ವಾಗಳಿಗೆ ನೀಡಲಾಗುತ್ತದೆ.
- ಹಲವಾರು ಬಾರಿ ಬೆಳೆದು ಪೊರೆ ಕಳಚಿದ ನಂತರ, ರೇಷ್ಮೆ ಹುಳು ರೇಷ್ಮೆ ನಾರುಗಳನ್ನು ಹೊರಹಾಕಿ ತನ್ನನ್ನು ಹಿಡಿದಿಟ್ಟುಕೊಳ್ಳಲು ಬಲೆಯನ್ನು ರೂಪಿಸುತ್ತದೆ.
- ಇದು '8' ಆಕೃತಿಯಂತೆ ಅಕ್ಕಪಕ್ಕಕ್ಕೆ ತಿರುಗುತ್ತದೆ, ರೇಷ್ಮೆಯನ್ನು ರೂಪಿಸುವ ಲಾಲಾರಸವನ್ನು ವಿತರಿಸುತ್ತದೆ.
- ರೇಷ್ಮೆ ಗಾಳಿಯನ್ನು ಸಂಪರ್ಕಿಸಿದಾಗ ಗಟ್ಟಿಯಾಗುತ್ತದೆ.
- ರೇಷ್ಮೆ ಹುಳು ಸರಿಸುಮಾರು ಒಂದು ಮೈಲಿ ತಂತು ಸುತ್ತುತ್ತದೆ ಮತ್ತು ಸುಮಾರು ಎರಡು ಅಥವಾ ಮೂರು ದಿನಗಳಲ್ಲಿ ಗೂಡಿನೊಳಗೆ ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಪ್ರತಿ ಗೂಡಿನಲ್ಲಿ ಬಳಸಬಹುದಾದ ಗುಣಮಟ್ಟದ ರೇಷ್ಮೆಯ ಪ್ರಮಾಣವು ಚಿಕ್ಕದಾಗಿದೆ. ಪರಿಣಾಮವಾಗಿ, ಒಂದು ಪೌಂಡ್ ಕಚ್ಚಾ ರೇಷ್ಮೆ ಉತ್ಪಾದಿಸಲು ಸುಮಾರು 2,500 ರೇಷ್ಮೆ ಹುಳುಗಳು ಬೇಕಾಗುತ್ತವೆ.[೯]
- ಅಖಂಡ ರೇಷ್ಮೆಗೂಡುಗಳನ್ನು ಕುದಿಸಿದಾಗ, ರೇಷ್ಮೆ ಹುಳು ಪ್ಯೂಪ ಸಾಯುತ್ತದೆ.
- ತಂತುಗಳ ಹೊರ ತುದಿಯನ್ನು ಕಂಡುಹಿಡಿಯಲು ಹಾನಿಯಾಗದ ಗೂಡನ್ನು ಉಜ್ಜುವ ಮೂಲಕ ರೇಷ್ಮೆಯನ್ನು ಪಡೆಯಲಾಗುತ್ತದೆ.
- ರೇಷ್ಮೆ ತಂತುಗಳನ್ನು ನಂತರ ರಾಟೆಯ ಮೇಲೆ ಸುತ್ತಲಾಗುತ್ತದೆ. ಒಂದು ರೇಷ್ಮೆಗೂಡು ಸುಮಾರು 1,000 ಗಜದಷ್ಟು ರೇಷ್ಮೆ ತಂತುಗಳನ್ನು ಹೊಂದಿರುತ್ತದೆ. ಈ ಹಂತದಲ್ಲಿ ರೇಷ್ಮೆಯನ್ನು ಕಚ್ಚಾ ರೇಷ್ಮೆ ಎಂದು ಕರೆಯಲಾಗುತ್ತದೆ. ಒಂದು ದಾರವು 48 ಪ್ರತ್ಯೇಕ ರೇಷ್ಮೆ ತಂತುಗಳನ್ನು ಒಳಗೊಂಡಿರುತ್ತದೆ.
ಮಹಾತ್ಮ ಗಾಂಧಿಯವರು "ಯಾವುದೇ ಜೀವಿಗಳಿಗೆ ನೋವುಂಟು ಮಾಡಬಾರದು" ಎಂಬ ಅಹಿಂಸಾ ತತ್ತ್ವಶಾಸ್ತ್ರದ ಆಧಾರದ ಮೇಲೆ ರೇಷ್ಮೆ ಉತ್ಪಾದನೆಯನ್ನು ಟೀಕಿಸಿದರು. ಅವರು "ಅಹಿಂಸಾ ರೇಷ್ಮೆ" ಯನ್ನು ಉತ್ತೇಜಿಸಿದರು, ಕಾಡು ಮತ್ತು ಅರೆವನ್ಯ ರೇಷ್ಮೆ ಚಿಟ್ಟೆಗಳ ಗೂಡುಗಳಿಂದ ತಯಾರಿಸಿದ ರೇಷ್ಮೆ ಮತ್ತು ಕಾಡು ರೇಷ್ಮೆಯನ್ನು ಸಂಗ್ರಹಿಸಲು ಪ್ಯೂಪಾವನ್ನು ಕುದಿಸದೆ ತಯಾರಿಸಲಾಗುತ್ತದೆ.[೧೦][೧೧] ಹ್ಯೂಮನ್ ಲೀಗ್ ತಮ್ಮ ಆರಂಭಿಕ ಏಕಗೀತೆ "ಬೀಯಿಂಗ್ ಬಾಯ್ಲ್‌ಡ್" ನಲ್ಲಿ ರೇಷ್ಮೆ ಕೃಷಿಯನ್ನು ಟೀಕಿಸಿದರು. 21 ನೇ ಶತಮಾನದ ಆರಂಭದಲ್ಲಿ, ಪೆಟಾ ಎಂಬ ಸಂಘಟನೆಯು ರೇಷ್ಮೆಯ ವಿರುದ್ಧವೂ ಪ್ರಚಾರ ಮಾಡಿದೆ.[೧೨]
ಉಲ್ಲೇಖಗಳು
[ಬದಲಾಯಿಸಿ]- ↑ Barber, E. J. W. (1992). Prehistoric textiles: the development of cloth in the Neolithic and Bronze Ages with special reference to the Aegean (reprint, illustrated ed.). Princeton University Press. p. 31. ISBN 978-0-691-00224-8. Retrieved 6 November 2010.
- ↑ "2015-10-29240509.html". Archived from the original on 8 February 2018. Retrieved 7 February 2018.
1977年在石家庄长安区南村镇南杨庄出土的5400-5500年前的陶质蚕蛹,是仿照家蚕蛹烧制的陶器,这是目前发现的人类饲养家蚕的最古老的文物证据。
- ↑ Good, I. L.; Kenoyer, J. M.; Meadow, R. H. (June 2009). "New Evidence for Early Silk in the Indus Civilization". Archaeometry. 51 (3): 457–466. doi:10.1111/j.1475-4754.2008.00454.x.
- ↑ Vainker, Shelagh (2004). Chinese Silk: A Cultural History. Rutgers University Press. p. 20. ISBN 0813534461.
- ↑ Hill, John E. 2003. "Annotated Translation of the Chapter on the Western Regions according to the Hou Hanshu." 2nd Draft Edition. Appendix A.
- ↑ "History of Sericulture" (PDF). Government of Andhra Pradesh (India) – Department of Sericulture. Archived from the original (PDF) on 21 July 2011. Retrieved 7 November 2010.
- ↑ Muthesius, "Silk in the Medieval World", p. 331.
- ↑ Bezzina, Neville. "Silk Production Process". Sense of Nature Research. Archived from the original on 29 June 2012.
- ↑ "Silk Making: How to Make Silk". TexereSilk.com. Retrieved 25 May 2014.
- ↑ Radhakrishnan, S., ed. (1968). Mahatma Gandhi: 100 years. New Delhi: Gandhi Peace Foundation. p. 349. Retrieved 19 April 2013.
- ↑ Parekh, Dhimant (11 September 2008). "Ahimsa Silk: Silk Saree without killing a single silkworm". The Better India. Vikara Services Pvt Ltd. Retrieved 19 April 2013.
- ↑ "Down and Silk: Birds and Insects Exploited for Fabric". PETA. 19 March 2004. Retrieved 6 January 2007.