ಗೃಹ ಕೈಗಾರಿಕೆಗಳು
ಪರಿಚಯ
[ಬದಲಾಯಿಸಿ]ಮನೆಯನ್ನೇ ಕೈಗಾರಿಕಾ ಸ್ಥಳವಾಗಿ ಮಾಡಿಕೊಂಡು ಮನೆಯವರೆಲ್ಲ ಕೂಡಿ ತಮ್ಮ ಬಿಡುವಿನ ಸಮಯದಲ್ಲಿ ಉತ್ಪಾದಿಸುವ ಸಾಮಾನ್ಯ ಬಳಕೆಯ ವಸ್ತುಗಳ ಉದ್ಯಮ. ಕರ್ನಾಟಕ ಗೃಹಕೈಗಾರಿಕೆಗಳು ಹಿಂದಿನಿಂದಲೂ ಪ್ರಸಿದ್ಧ. ಅವುಗಳಲ್ಲಿ ಕುಂಬಾರಿಕೆ, ನೇಯ್ಗೆ, ಬಿದಿರು ಮತ್ತು ಬೆತ್ತದ ಸಾಮಾನುಗಳ ತಯಾರಿಕೆ, ಚಾಪೆ ಹೆಣಿಗೆ, ಚರ್ಮ ವಸ್ತುಗಳ ತಯಾರಿಕೆ, ನೂಲಿಗೆ ಬಣ್ಣ ಕಟ್ಟುವುದು, ಬಟ್ಟೆ ತಯಾರಿಕೆ, ಪುಸ್ತಕಗಳನ್ನು ಹೊಲಿಯು ವುದು, ಬೀಜಗಳಿಂದ ಎಣ್ಣೆ ತೆಗೆಯುವುದು, ಚಿನ್ನಬೆಳ್ಳಿ ಮತ್ತು ಇತರ ಆಭರಣಗಳ, ಸಂಗೀತ ವಾದ್ಯಗಳ, ವ್ಯವಸಾಯೋಪಕರಣಗಳ, ಜಮಖಾನದ, ಮಣ್ಣಿನ ಪ್ರತಿಮೆಗಳ ಮತ್ತು ತಾಮ್ರಕಂಚು ಹಿತ್ತಾಳೆ ಸಾಮಾನುಗಳ ತಯಾರಿಕೆ, ಆಟದ ಸಾಮಾನು, ಅಲಂಕಾರ ವಸ್ತು, ರಬ್ಬರ್ ವಸ್ತುಗಳ ಮತ್ತು ಅಚ್ಚುಗಳ ತಯಾರಿಕೆ, ರಟ್ಟುಕಟ್ಟುವುದು, ಕಸೂತಿ ವಸ್ತುಗಳ ಉತ್ಪಾದನೆ ಮುಂತಾದ ಹಲವಾರು ಕೈಗಾರಿಕೆಗಳಿವೆ. ಅವುಗಳ ಉತ್ಪಾದನೆ ಗಳೊಂದಿಗೆ ಸಹಕರಿಸುವ ನೂರಾರು ಉಪಕೈಗಾರಿಕೆಗಳೂ ಉಂಟು. ಉದಾಹರಣೆಗೆ ಚರ್ಮೋದ್ಯೋಗಕ್ಕೆ ಬೇಕಾದ ಸುಣ್ಣ, ನೂಲಿಗೆ ಬೇಕಾಗುವ ಬಣ್ಣ ಇತ್ಯಾದಿ. ಇವು ಅಲ್ಪ ಪ್ರಮಾಣದಲ್ಲಾದರೂ ತಯಾರಾಗಬಹುದು, ಇಲ್ಲವೆ ಭಾರಿ ಉದ್ಯಮವೇ ಆಗಿರಬಹುದು. ಗೃಹ ಕೈಗಾರಿಕಾ ವಸ್ತುಗಳ ಉತ್ಪಾದನೆಯ ಜೊತೆಯಲ್ಲಿ ಇತರ ಉಪವಸ್ತುಗಳೂ ನಮಗೆ ದೊರಕುತ್ತವೆ. ಉದಾಹರಣೆಗೆ ಎಣ್ಣೆ ಉತ್ಪಾದನೆಯ ಜೊತೆಯಲ್ಲಿ ಹಿಂಡಿ, ಅಕ್ಕಿ ಕುಟ್ಟುವುದರಿಂದ ತೌಡು ಇತ್ಯಾದಿಗಳನ್ನು ಹೆಸರಿಸಬಹುದು. ಗೃಹಕೈಗಾರಿಕೆಗಳು ಇತರ ಸಹವಸ್ತುಗಳನ್ನು ಉತ್ಪಾದಿಸುವುದಲ್ಲದೆ ಹಿರಿಯ ಕೈಗಾರಿಕೋದ್ಯಮಕ್ಕೆ ಕಚ್ಚಾಮಾಲನ್ನೂ ಉಪಯುಕ್ತ ವಸ್ತುಗಳನ್ನೂ ತಯಾರಿಸಿ ರಾಜ್ಯದ ಕೈಗಾರಿಕೋದ್ಯಮದ ಬೆಳೆವಣಿಗೆಗೆ ಸಹಕಾರಿಯಾಗಿದೆ.
ಈ ಎಲ್ಲ ಉದ್ಯಮಗಳಿಗೆ ಬೇಕಾಗುವ ಪ್ರಾಕೃತಿಕ ಕಚ್ಚಾವಸ್ತುಗಳು ಕರ್ನಾಟಕದಲ್ಲಿ ಹೇರಳವಾಗಿವೆ. ಮರದ, ಬಿದಿರಿನ ಮತ್ತು ನಾರಿನ ಉದ್ಯಮಕ್ಕೆ ಕರ್ನಾಟಕದ ಕಾಡುಗಳಲ್ಲಿ ಉತ್ತಮ ಮರಗಳು, ಬಿದಿರು, ನಾರಿನ ಕತ್ತಾಳೆ ಇವು ದೊರೆಯುತ್ತವೆ. ಕಬ್ಬಿಣಕ್ಕೂ ಕೊರತೆ ಇಲ್ಲ. ಕುಂಬಾರಿಕೆಗೆ ಬೇಕಾಗುವ ಜೇಡಿ ಮತ್ತು ಇತರ ಮಣ್ಣುಗಳು ರಾಜ್ಯದ ಅನೇಕ ಕಡೆ ಹೇರಳವಾಗಿ ದೊರೆಯುವುದು. ಜೇನುಸಾಕಣೆಗೆ ವಿಶಾಲವಾದ ಕಾಡುಗಳೂ ಉದ್ಯಾನವನಗಳೂ ಇವೆ.[೧]
ಲೋಹ ಕಲಾಕೃತಿ
[ಬದಲಾಯಿಸಿ]ಪಶುಸಂಪತ್ತು ಸಮೃದ್ಧಿಯಾಗಿದ್ದು ಚರ್ಮೋದ್ಯೋಗಕ್ಕೆ ಅನುಕೂಲವಾಗಿದೆ. ನಾನಾ ತರಹದ ಎಣ್ಣೆಬೀಜಗಳು, ಉದಾಹರಣೆಗೆ ಹೊಂಗೆ, ಬೇವು, ಹರಳು, ನೆಲಗಡಲೆ, ಎಳ್ಳು, ಹುಚ್ಚೆಳ್ಳು ಇತ್ಯಾದಿಗಳು ಬೆಳೆಯುವುದರಿಂದ ತೈಲೋದ್ಯಮಕ್ಕೆ ಅನುಕೂಲವಿದೆ. ಬತ್ತ ರಾಜ್ಯದ ಒಂದು ಮುಖ್ಯ ಬೆಳೆಯಾಗಿದ್ದು ಕೊಟ್ಟಣದ ಅಕ್ಕಿ ಉದ್ಯಮ ನಡೆದುಕೊಂಡು ಹೋಗುತ್ತಿದೆ. ಕಬ್ಬು ರಾಜ್ಯದ ಇನ್ನೊಂದು ಪ್ರಮುಖ ಬೆಳೆಯಾಗಿದ್ದು, ಬೆಲ್ಲ ಮತ್ತು ಖಂಡಸಾರಿ ಉದ್ಯಮಕ್ಕೂ ಸಿಪ್ಪೆ ಕಾಗದ ತಯಾರಿಕೆಗೂ ಬರುತ್ತದೆ. ಅಖಾದ್ಯ ತೈಲಗಳ ಉತ್ಪತ್ತಿಯೂ ಸಾಕಷ್ಟು ಇದ್ದು ಈ ತೈಲಗಳನ್ನು ಸಾಬೂನು ತಯಾರಿಕೆಗೆ ಉಪಯೋಗಿಸುತ್ತಾರೆ. ಕಂಬಳಿ ತಯಾರಿಕೆಗೆ ಸಾಕಷ್ಟು ಉಣ್ಣೆಯ ಪೂರೈಕೆ ಇದೆ. ಕತ್ತಾಳೆ ಮುಂತಾದವುಗಳಿಂದ ನಾರಿನ ಉತ್ಪತ್ತಿಯಾಗುತ್ತದೆ.
ಬಣ್ಣದ ಆಟಿಕೆಗಳು
[ಬದಲಾಯಿಸಿ]ಅಂದಿನ ಮೈಸೂರು ಸರ್ಕಾರ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗೃಹಕೈಗಾರಿಕೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ 1916ರಲ್ಲಿ ಗೃಹಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿತು. ಈ ಯೋಜನೆ ನಿಧಾನಗತಿಯಲ್ಲಿ ಸಾಗಿದ್ದು 1939ರಲ್ಲಿ ಒಂದು ವ್ಯಾಪಕ ಯೋಜನೆ ಸಿದ್ಧಪಡಿಸಿ ಜಾರಿಗೊಳಿಸಲಾಯಿತು. ಇದರಂತೆ ಮಾದರಿ ಮಡಕೆಕುಡಿಕೆಗಳ ತಯಾರಿಕೆ, ಗುಂಡಿ ಮತ್ತು ಚರ್ಮ ವಸ್ತುಗಳ ತಯಾರಿಕೆ ಇವೇ ಮೊದಲಾಗಿ 17 ಬಗೆಯ ಗೃಹಕೈಗಾರಿಕೆಗಳು ಸ್ಥಾಪನೆಯಾದವು. ಜೊತೆಗೆ ರಾಜ್ಯದ ಕೆಲವು ಭಾಗಗಳಲ್ಲಿ ತರಬೇತಿ ಕೇಂದ್ರಗಳು ಸ್ಥಾಪಿತವಾದವು. ಮುಂದೆ ಕೈಗಾರಿಕೋದ್ಯಮದ ಬೆಳೆವಣಿಗೆಗೆ ಮತ್ತು ನಿರುದ್ಯೋಗ ನಿವಾರಣೆಗೆ ಗೃಹಕೈಗಾರಿಕೆಗಳ ಅಭಿವೃದ್ಧಿ ಅಗತ್ಯವೆಂಬುದನ್ನು ಮನಗಂಡು ಸರ್ಕಾರ ಕೆಲವು ಮಂಡಳಿಗಳನ್ನು ಸ್ಥಾಪಿಸಿತು. ಅವುಗಳಲ್ಲಿ ಮುಖ್ಯವಾದವು ಅಖಿಲ ಭಾರತ ಖಾದಿ ಗ್ರಾಮೋದ್ಯೋಗ ಆಯೋಗ, ಅಖಿಲ ಭಾರತ ಕೈಮಗ್ಗದ ಮಂಡಳಿ, ಅಖಿಲ ಭಾರತ ಕುಶಲ ಕೈಗಾರಿಕೆಗಳ ಮಂಡಳಿ, ಅಖಿಲ ಭಾರತ ತೆಂಗಿನ ನಾರಿನ ಕೈಗಾರಿಕಾಭಿವೃದ್ಧಿ ಮಂಡಳಿ ಮತ್ತು ಕೇಂದ್ರ ರೇಷ್ಮೆ ಮಂಡಳಿ ಇತ್ಯಾದಿ. ಇವೆಲ್ಲವೂ ರಾಜ್ಯ ಮಟ್ಟದಲ್ಲಿ ತಮ್ಮ ಮಂಡಳಿಗಳನ್ನು ಹೊಂದಿದ್ದು ಸಂಬಂಧಿಸಿದ ಕೈಗಾರಿಕಾಭಿವೃದ್ಧಿಗೆ ಶ್ರಮಿಸುತ್ತಿವೆ. ಈ ಮಂಡಳಿಗಳ ಮೂಲಕ ಸರ್ಕಾರ ಗೃಹಕೈಗಾರಿಕೆಗಳಿಗೆ ಆರ್ಥಿಕ ನೆರವನ್ನು ಸಾಲ ಮತ್ತು ಸಹಾಯಧನದ ಜೊತೆಗೆ ತಾಂತ್ರಿಕ ಸಹಾಯ ಮತ್ತು ತರಬೇತಿಸೌಲಭ್ಯಗಳನ್ನು ಒದಗಿಸಿಕೊಡುವುದರ ಮೂಲಕ ಗೃಹಕೈಗಾರಿಕೆಗಳ ಬೆಳೆವಣಿಗೆಯನ್ನು ಪ್ರೋತ್ಸಾಹಿಸುತ್ತಿದೆ.
ಪ್ರಾಚೀನ ಕಾಲದಿಂದ ಗೃಹಕೈಗಾರಿಕೆಗಳು ದೇಶದ ಆರ್ಥಿಕ ಚಟುವಟಿಕೆಯ ಮುಖ್ಯ ಅಂಗವಾಗಿದ್ದುವು. ಆದರೆ ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದ ಇತರ ಕಡೆಗಳಂತೆಯೇ ಕರ್ನಾಟಕ ರಾಜ್ಯದ ಗೃಹಕೈಗಾರಿಕೆಗಳು ಸರಿಯಾದ ಪ್ರೋತ್ಸಾಹ ದೊರಕದೆ ಥಳುಕಿನ ಇಂಗ್ಲಿಷ್ ವಸ್ತುಗಳೊಡನೆ ಸ್ಪರ್ಧಿಸಲಾರದೆ ಹಿಂದೆ ಬೀಳಬೇಕಾಯಿತು. ಸ್ವಾತಂತ್ರ್ಯಾನಂತರ ಗೃಹಕೈಗಾರಿಕೆಗಳು ಚೇತರಿಸಿಕೊಂಡವು. ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗಿಗಳಾಗಿರುವ ಮತ್ತು ಸಾಕಷ್ಟು ಉದ್ಯೋಗ ಇಲ್ಲದಿರುವ ಜನರಿಗೆ ನೆರವಾಗುವ ಉದ್ದೇಶದ ಯೋಜನೆಯಂತೆ 1950ರಲ್ಲಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಯೋಜನೆಯನ್ನು ಜಾರಿಗೊಳಿಸಿ ಅದರ ಉತ್ತಮ ಫಲಿತಾಂಶಗಳಿಂದ ಮುಂದೆ ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲಾಯಿತು. ಈ ಯೋಜನೆಯನ್ವಯ ಅಸ್ತಿತ್ವದಲ್ಲಿದ್ದ ಕೈಗಾರಿಕೆಗಳನ್ನು ವಿಸ್ತರಿಸಲು ಹಾಗೂ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಮೂಹಿಕ ಗ್ರಾಮ ಅಭಿವೃದ್ಧಿ ಸಮಿತಿಗಳನ್ನು 1952ರಲ್ಲಿ ರಚಿಸಲಾಯಿತು. ಗ್ರಾಮಾಂತರ ಕೈಗಾರಿಕಾ ಸಹಕಾರ ಸಂಸ್ಥೆಗಳನ್ನು ಪ್ರಾರಂಭಿಸಲಾಯಿತು. ಇವು ಗ್ರಾಮಾಂತರ ಪ್ರದೇಶಗಳ ಕಸಬುದಾರರಿಗೆ ಮತ್ತು ಉದ್ಯಮಗಳಿಗೆ ಬಲು ಪ್ರಯೋಜನಕಾರಿಯಾದವು. ಅನಂತರ ಈ ಕಾರ್ಯಕ್ರಮಗಳನ್ನು ಪಂಚವಾರ್ಷಿಕ ಯೋಜನೆಗಳಲ್ಲಿ ವಿಲೀನಗೊಳಿಸಲಾಯಿತು.
ಎರಡನೆಯ ಯೋಜನೆಯಲ್ಲಿ ಕೈಗಾರಿಕಾ ಕ್ಷೇತ್ರಗಳನ್ನು ನಿರ್ಮಿಸಲಾಯಿತು. ಏಕೆಂದರೆ ಗ್ರಾಮಾಂತರ ಗೃಹಕೈಗಾರಿಕೆಗಳು ಬೆಳೆದು ಸಣ್ಣ ಕೈಗಾರಿಕೆಗಳ ಮಟ್ಟಕ್ಕೆ ಬರುವುದರಿಂದ ಅವುಗಳ ಅಭಿವೃದ್ಧಿಗೆ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ರಾಮನಗರ, ಹರಿಹರ, ಬೆಳಗಾವಿ, ಮಂಗಳೂರು, ಗುಲ್ಬರ್ಗಗಳಲ್ಲಿ ಕೈಗಾರಿಕಾ ಕ್ಷೇತ್ರಗಳನ್ನು ನಿರ್ಮಾಣ ಮಾಡಲಾಯಿತು. 1959ರಲ್ಲಿ ಮೈಸೂರು ಸಣ್ಣ ಕೈಗಾರಿಕೆ ಮತ್ತು ಕರಕುಶಲ ಕಸಬುಗಳ ಮಂಡಳಿಯನ್ನು ರಚಿಸಲಾಯಿತು. ಬಲೆನೇಯ್ಗೆ, ಗಂಧದ ಕೆತ್ತನೆ, ದಂತದ ಕೆತ್ತನೆ, ಲೋಹಸಾಮಗ್ರಿ, ಮರದ ಆಟದ ಬೊಂಬೆ ತಯಾರಿಕೆ ಮುಂತಾದ ನಾನಾ ಕಸಬುಗಳು ಉಳಿದು ಕೈಗಾರಿಕೆಗಳು ಅಭಿವೃದ್ಧಿ ಹೊಂದಲು ಸರ್ಕಾರ ಹಲವಾರು ಉತ್ತೇಜನಗಳನ್ನು ಕೈಗೊಂಡಿತು. ಅವುಗಳೆಂದರೆ ಸಾಧ್ಯಾಸಾಧ್ಯತೆಯ ವರದಿ ಸಿದ್ಧಪಡಿಸಲು ಸಹಾಯ, ತೆರಿಗೆ ವಿನಾಯಿತಿ, ವ್ಯಾಪಾರ ತೆರಿಗೆ ರಿಯಾಯಿತಿ, ಆಕ್ಟ್ರಾಯ್ ರಿಯಾಯಿತಿ ಮತ್ತು ಉತ್ಪನ್ನಗಳನ್ನು ಸರ್ಕಾರ ಖರೀದಿ ಮಾಡುವುದು, ಕೈಗಾರಿಕಾ ಶಿಕ್ಷಣ ಕೇಂದ್ರಗಳನ್ನು ತೆರೆದು ಉಚಿತ ಶಿಕ್ಷಣ ಕೊಟ್ಟು ಗೃಹಕೈಗಾರಿಕೆಗಳಿಗೆ ತರಬೇತಿ ಪಡೆದ ಕುಶಲಕರ್ಮಿಗಳನ್ನು ಒದಗಿಸುವುದು ಇದರಲ್ಲಿ ಸೇರಿದೆ.
ಖಾದಿ ಗ್ರಾಮೋದ್ಯೋಗ ಮಂಡಳಿ ಗೃಹಕೈಗಾರಿಕೆಗಳ ತರಬೇತಿ ಶಿಬಿರಗಳನ್ನೂ ನಡೆಸುವುದಲ್ಲದೆ ಕೆಲವು ಕಡೆ ತರಬೇತಿ ಕೇಂದ್ರಗಳನ್ನೂ ತೆರೆದಿದೆ.
ಬಣ್ಣದ ಬುಟ್ಟಿಗಳು
[ಬದಲಾಯಿಸಿ]ಕರ್ನಾಟಕದಲ್ಲಿ ಕೈಗಾರಿಕೀಕರಣ ನಡೆದಂತೆ ಗೃಹಕೈಗಾರಿಕೆಗಳ ಸ್ವರೂಪ ಬದಲಾಯಿತು ಮತ್ತು ವಿಸ್ತರಿಸಿತು. ಈ ಬೆಳೆವಣಿಗೆಯಿಂದ ಕೆಲವು ಗೃಹಕೈಗಾರಿಕೆಗಳು ಅಭಿವೃದ್ಧಿ ಹೊಂದಿದವು. ಅವುಗಳೆಂದರೆ ಊಟದ ಎಲೆ ಹಾಗೂ ದೊನ್ನೆ ತಯಾರಿಕೆ, ಬಳಪಕಲ್ಲಿನಿಂದ ಸಾಮಾನುಗಳನ್ನು ತಯಾರಿಸುವುದು, ಹುಲ್ಲಿನಿಂದ ಹಲಗೆ, ಹಾಸುಗಳು ಹಾಗೂ ಪ್ಯಾಕಿಂಗ್ ಪದಾರ್ಥಗಳನ್ನು ತಯಾರಿಸುವುದು, ಹಿತ್ತಾಳೆ ತಾಮ್ರ ಮುಂತಾದವುಗಳಿಂದ ಗೃಹೋಪಯೋಗಿ ಪದಾರ್ಥಗಳ ತಯಾರಿಕೆ, ಜಾನುವಾರು ಮತ್ತು ಕೋಳಿ ಆಹಾರ ತಯಾರಿಕೆ, ಬ್ರೆಡ್ ತಯಾರಿಕೆ, ರುಬ್ಬಿದ ಕಾಗದದಿಂದ ಸಾಮಾನುಗಳ ತಯಾರಿಕೆ, ಮಸಾಲೆಪುಡಿ, ಉಪ್ಪಿನಕಾಯಿ, ಹಪ್ಪಳ, ಖಾರದಪುಡಿ ವಿವಿಧ ತಿನಿಸುಗಳು ಮುಂತಾದವುಗಳ ತಯಾರಿಕೆ, ಹಲ್ಲಿನ ಪುಡಿ, ತಿಲಕ, ನಕ್ಕಿ, ಸುಗಂಧ ದ್ರವ್ಯಗಳ ತಯಾರಿಕೆ, ಮೇಣದ ಮತ್ತು ಗೋಂದಿನ ಉದ್ಯಮ, ಸೀಸದಕಡ್ಡಿ, ಸ್ಲೇಟುಗಳ ತಯಾರಿಕೆ ಸೀರೆಗಳಿಗೆ ಫಾಲ್ಸ್ ಹಾಕುವುದು, ಎಂಬ್ರಾಯಿಡರಿ ಮಾಡುವುದು ಸಿದ್ಧ ಉಡುಪುಗಳ ತಯಾರಿಕೆ, ಸ್ಕ್ರೀನ್ ಪ್ರಿಂಟಿಂಗ್ ಮುಂತಾದವುಗಳೆಲ್ಲ ಗೃಹಕೈಗಾರಿಕೆ ಗಳಾಗಿ ಬೆಳೆದಿವೆ. ಇಷ್ಟಾದರೂ ರಾಜ್ಯದ ಗೃಹಕೈಗಾರಿಕೆಗಳು ಅಪೇಕ್ಷಿತ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿಲ್ಲವೆಂಬ ಮಾತಿದೆ. ಅದಕ್ಕೆ ಮುಖ್ಯ ಕಾರಣಗಳೆಂದರೆ ಬಂಡವಾಳದ ಅಭಾವ, ಕಚ್ಚಾಸಾಮಗ್ರಿಯ ಕೊರತೆ, ಉತ್ಪಾದಿಸಿದ ವಸ್ತುಗಳನ್ನು ಲಾಭದಾಯಕವಾಗಿ ಮಾರಾಟಮಾಡಲು ಆಗದಿರುವುದು, ಇತರ ಆಧುನಿಕ ತಯಾರಿಕಾ ಉದ್ಯಮಗಳೊಡನೆ ಸ್ಪರ್ಧಿಸಲು ಸಾಧ್ಯವಾಗದಿರುವುದು ಮುಂತಾದವು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿನ ವೈಫಲ್ಯವೂ ಹಿನ್ನೆಡೆಗೆ ಕಾರಣವಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಎಣ್ಣೆಬೀಜಗಳ ಸಂಗ್ರಹ ತೃಪ್ತಿದಾಯಕವಾಗಿಲ್ಲ. ಜೊತೆಗೆ ತಯಾರಿಕಾಘಟ್ಟದಲ್ಲಿ ಉತ್ಪತ್ತಿಯಾಗುವ ಇತರ ವಸ್ತುಗಳನ್ನು ದುರುಪಯೋಗಪಡಿಸಿಕೊಳ್ಳುವುದು, ಬೆಲ್ಲ ತಯಾರಿಕೆಯ ಸಮಯದಲ್ಲಿ ಕಬ್ಬಿನ ರಸ ತೆಗೆದ ಅನಂತರ ಅದರ ಸಿಪ್ಪೆಯನ್ನು ಒಲೆಗೆ ಉರುವಲಾಗಿ ಉಪಯೋಗಿಸಿ ಕಾಗದ ತಯಾರಿಕೆಗೆ ಬೇಕಾದ ಉತ್ಕೃಷ್ಟ ವಸ್ತುವನ್ನು ಹಾಳು ಮಾಡುವುದು, ಕೆಲವೊಂದು ದಂಟುಗಳನ್ನು ವ್ಯರ್ಥವಾಗಿ ಹೊರಗೆ ಹಾಕುವುದು (ಹೊಗೆಸೊಪ್ಪಿನ ದಂಟು) ಇತ್ಯಾದಿ.
ಕರ್ನಾಟಕ ಸರ್ಕಾರದ ಕೊಡುಗೆ
[ಬದಲಾಯಿಸಿ]ಆದಾಗ್ಯೂ ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಅಗ್ರಪಂಕ್ತಿಯಲ್ಲಿದೆ. ಹಿತ್ತಾಳೆ ಕುಸರಿಕೆಲಸ, ಬೀಟೆ ಮತ್ತು ಗಂಧದ ಮರ ಕುಸರಿ ಕೆಲಸ, ಕೊಂಬುಗಳ ಕೆತ್ತನೆ, ದಂತ ಕೆತ್ತನೆಗಳಲ್ಲಿ ಮುಂಚೂಣಿಯಲ್ಲಿದೆ. ಕರಕುಶಲ ವಸ್ತುಗಳ ಅಭಿವೃದ್ಧಿನಿಗಮ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಿದೆ. ರಾಜ್ಯದಲ್ಲಿ ಈಗ 2,45,826 ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳಿವೆ. ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಖಾದಿ ಮತ್ತು ಗ್ರಾಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು 1.4 ಲಕ್ಷ ಕುಶಲಕರ್ಮಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಪಾರಂಪರಿಕ ಕುಶಲ ಕಲೆಗಳನ್ನು ಪುನಶ್ಚೇತನಗೊಳಿಸಲು 1991 ಅಕ್ಟೋಬರ್ 2ರಂದು ಸರ್.ಎಂ. ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ‘ವಿಶ್ವ’ ಯೋಜನೆ ಪ್ರಾರಂಭಿಸಲಾಯಿತು. ಕಚ್ಚಾವಸ್ತುಗಳ ಅಭಾವ ನೀಗುವುದು, ಸೂಕ್ತ ಮಾರುಕಟ್ಟೆ ಒದಗಿಸುವುದು, ಯುವಕರಿಗೆ ಕರಕುಶಲ ಉದ್ಯಮದಲ್ಲಿ ತರಬೇತಿ ನೀಡುವುದು ಈ ಯೋಜನೆಯ ಗುರಿ. ಬೃಹತ್ ಉದ್ಯಮಗಳು ಮತ್ತು ತಂತ್ರಜ್ಞಾನದ ಬೆಳೆವಣಿಗೆಯಿಂದಾಗಿ ಈ ಕ್ಷೇತ್ರ ಈಗ ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ http://www.kannadaprabha.com/districts/shimoga/%E0%B2%A8%E0%B2%BF%E0%B2%B0%E0%B3%81%E0%B2%A6%E0%B3%8D%E0%B2%AF%E0%B3%8B%E0%B2%97-%E0%B2%B8%E0%B2%AE%E0%B2%B8%E0%B3%8D%E0%B2%AF%E0%B3%86-%E0%B2%A8%E0%B3%80%E0%B2%97%E0%B3%81%E0%B2%B5%E0%B2%B2%E0%B3%8D%E0%B2%B2%E0%B2%BF-%E0%B2%95%E0%B3%88%E0%B2%97%E0%B2%BE%E0%B2%B0%E0%B2%BF%E0%B2%95%E0%B2%BE-%E0%B2%B0%E0%B2%82%E0%B2%97-%E0%B2%B5%E0%B2%BF%E0%B2%AB%E0%B2%B2-%E0%B2%95%E0%B2%BE%E0%B2%97%E0%B3%8B%E0%B2%A1%E0%B3%81/127411.html