ಮೆಣಸಿನಕಾಯಿ
ಮೆಣಸಿನಕಾಯಿಯು ಅಥವಾ ಹಸಿ ಮೆಣಸು ಸೊಲ್ಯಾನೇಸಿಯಿಯ ಸದಸ್ಯರಾದ ಕ್ಯಾಪ್ಸಿಕಮ್ ಜಾತಿಯ ಸಸ್ಯಗಳ ಹಣ್ಣು. ಕ್ಯಾಪ್ಸೇಯಸಿನ್ ಮತ್ತು ಹಲವು ಸಂಬಂಧಿತ ರಾಸಾಯನಿಕಗಳು, ಒಟ್ಟಾಗಿ ಕ್ಯಾಪ್ಸೇಯಸಿನಾಯ್ಡ್‌ಗಳು ಎಂದು ಕರೆಯಲಾದ ವಸ್ತುಗಳು, ಮೆಣಸಿನಕಾಯಿಗಳನ್ನು ಸೇವಿಸಿದಾಗ ಅಥವಾ ಬಾಹ್ಯವಾಗಿ ಲೇಪಿಸಿದಾಗ ಮೆಣಸಿನಕಾಯಿಗಳಿಗೆ ಅವುಗಳ ತೀಕ್ಷ್ಣತೆ ನೀಡುವ ವಸ್ತುಗಳು. ಮೆಣಸಿನಕಾಯಿಗಳು ಅಮೇರಿಕಾಗಳಲ್ಲಿ ಹುಟ್ಟಿಕೊಂಡವು.[೧][೨][೩]
ಭಾರತದ ಸಂಬಾರ ಉತ್ಪನ್ನಗಳಲ್ಲಿ ಮೆಣಸಿನಕಾಯಿ ಅತ್ಯಂತ ಪ್ರಮುಖವಾಗಿದೆ. ತರಕಾರಿಯಾಗಿಯೂ ಜನಪ್ರಿಯವಾಗಿದೆ. ಇದು ಮೂಲತಃ ಬ್ರೆಜಿಲ್ ದೇಶದ ಸಸ್ಯವಾಗಿದೆ. ಭಾರತಕ್ಕೆ ಇದನ್ನು ಪರಿಚಯಿಸಿದವರು 16ನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸರು.[೪] ಸಾಮಾನ್ಯವಾಗಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಬೆಳೆಯಲಾಗುತ್ತದೆ. ಸದ್ಯ ೮ ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದ್ದು, ಮೆಣಸಿನಕಾಯಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ಗಳನ್ನು ಕಂಡುಹಿಡಿದ ಸ್ವಲ್ಪ ಸಮಯದಲ್ಲೇ ಮೆಣಸಿನಕಾಯಿ ಪ್ರಪಂಚದ ಉಷ್ಣವಲಯ ಪ್ರದೇಶಗಳಲ್ಲೆಲ್ಲ ಹರಡುವಂತಾಗಿ ಬಲುಬೇಗ ವಿವಿಧ ವಾತಾವರಣಗಳಿಗೆ ಹೊಂದಿಕೊಂಡು ಬೆಳೆಯತೊಡಗಿ ಪ್ರಪಂಚದಾದ್ಯಂತ ಪಸರಿಸಿದೆ. ಉಷ್ಣದೇಶಗಳಲ್ಲಂತೂ ಇದು ಬಲು ಪರಿಚಿತ ಸಂಬಾರವಸ್ತುವೆನಿಸಿದೆ. ಭಾರತದಲ್ಲಿ ಮೆಣಸಿನಕಾಯಿ ಪ್ರವೇಶಿಸುವ ಮೊದಲು ಭಾರತೀಯರು ಸಂಬಾರಪದಾರ್ಥವಾಗಿ ಬಳಸುತ್ತಿದ್ದುದು ಕಾಳುಮೆಣಸನ್ನು.
ಸೊಲನೇಸೀ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಕ್ಯಾಪ್ಸಿಕಮ್. ಇದರಲ್ಲಿ ಆನ್ಯುಯಮ್ ಮತ್ತು ಫ್ರೂಟಿಸೆನ್ಸ್ ಎಂಬ ಎರಡು ಮುಖ್ಯ ಪ್ರಭೇದಗಳುಂಟು.
ಪೋಷಕಾಂಶಗಳು
[ಬದಲಾಯಿಸಿ]೧೦೦ ಗ್ರಾಂ ಹಸಿಮೆಣಸಿನಕಾಯಿಯಲ್ಲಿ ದೊರೆಯುವ ಪೋಷಕಾಂಶಗಳು
ತೇವಾಂಶ | ೮.೮ | ಗ್ರಾಂ |
ಮೇದಸ್ಸು | ೦.೪ | ಗ್ರಾಂ |
ನಾರಿನಾಂಶ | ೧.೫ | ಗ್ರಾಂ |
ಕಾರ್ಬೋಹೈಡ್ರೇಟ್ | ೮.೮ | ಗ್ರಾಂ |
ಮೆಗ್ನೀಷಿಯಂ | ೩ | ಮಿಲಿಗ್ರಾಂ |
ಪೊಟ್ಯಾಷಿಯಂ | ೩೨೨ | ಮಿಲಿಗ್ರಾಂ |
ಕಬ್ಬಿಣ | ೧ | ಮಿಲಿಗ್ರಾಂ |
ಸಕ್ಕರೆ | ೫.೩ | ಗ್ರಾಂ |
ಪ್ರೋಟೀನ್ | ೧.೯ | ಗ್ರಾಂ |
ಸಸ್ಯ ವಿವರಣೆ
[ಬದಲಾಯಿಸಿ]ಮೆಣಸಿನಕಾಯಿ ಗಿಡ ಮೂಲಿಕೆಯಾಗಿಯೂ ಪೊದೆರೂಪದಲ್ಲೂ ಬೆಳೆಯುತ್ತದೆ. ಆನ್ಯುಯಮ್ ಪ್ರಭೇದ ಏಕವಾರ್ಷಿಕ ಬಗೆಯದು. ಇದರಲ್ಲಿ ಹೂಗಳು ಒಂಟೊಂಟಿಯಾಗಿ ಎಲೆಗಳ ಕಕ್ಷಗಳಲ್ಲಿ ಅರಳುತ್ತವೆ. ಫ್ರೂಟಿಸೆನ್ಸ್ ಪ್ರಭೇದ ಬಹು ವಾರ್ಷಿಕ ರೀತಿಯದು. ಹೂಗಳು ಅರಳುವುದು ಗೊಂಚಲುಗಳಲ್ಲಿ, ಎಲೆಗಳ ಕಕ್ಷಗಳಲ್ಲಿ. ಇವುಗಳ ಪೈಕಿ ಬಹುಶಃ ಹೆಚ್ಚು ಆರ್ಥಿಕ ಪ್ರಾಮುಖ್ಯವಿರುವುದು ಮೊದಲನೆಯದಕ್ಕೆ. ಬಹಳ ಕಾಲದಿಂದ ಕೃಷಿಯಲ್ಲಿರುವುದರಿಂದ ಇದರಲ್ಲಿ ಅನೇಕ ರೂಪಭೇದಗಳನ್ನು ಕಾಣಬಹುದು.
ಫ್ರೂಟಿಸೆನ್ಸ್ ಪ್ರಭೇದದ ಕಾಯಿಗಳು ವಿಪರೀತ ಖಾರ ಗುಣವುಳ್ಳವು. ಇದರ ಕಾಯಿಗಳು ಚಿಕ್ಕಗಾತ್ರದವು, ಮೇಲ್ಮುಖವಾಗಿ ಸ್ಥಿತಗೊಂಡಿರುವುವು : ಕೇಯೆನ್ ಪೆಪರ್ಸ್, ಟಬಸ್ಕೊ ಪೆಪರ್ಸ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಇವು ಹೆಚ್ಚಾಗಿ ಸಂಬಾರವಸ್ತುವಾಗಿ ಬಳಕೆಯಲ್ಲಿದೆ.
ತಳಿಗಳು ಮತ್ತು ಬಗೆಗಳು
[ಬದಲಾಯಿಸಿ]ಕಾಯಿಗಳ ಗಾತ್ರದಲ್ಲೂ ಆಕಾರದಲ್ಲೂ ಬಲಿತ ಮೇಲೆ ಹಣ್ಣುಗಳು ತಳೆಯುವ ಬಣ್ಣದಲ್ಲೂ ಖಾರದ ತೀಕ್ಷ್ಣತೆಯಲ್ಲೂ ಗಮನಾರ್ಹ ವ್ಯತ್ಯಾಸಗಳಿದ್ದು ಇವುಗಳ ಆಧಾರದ ಮೇಲೆ ಮೆಣಸಿನಕಾಯಿ ತಳಿಗಳಿಗೆ ವಿವಿಧ ಹೆಸರುಗಳನ್ನು ಕೊಡಲಾಗಿದೆ. ಉದಾಹರಣೆಗೆ ಅಂಗೀಕಸಿಕಾಯಿ, ಡಬ್ಬಗಾಯಿ, ಗಿಡ್ಡಗಾಯಿ, ಬಳ್ಗಳಿಗಾಯಿ, ಬಿಳಿಗಾಯಿ ಇತ್ಯಾದಿ. ಬೆಳೆಯುವ ಪ್ರದೇಶಗಳ ಆಧಾರದ ಮೇಲೂ ಮೆಣಸಿನಕಾಯಿಗೆ ಬೇರೆ ಬೇರೆ ಹೆಸರುಗಳುಂಟು. ಉದಾಹರಣೆಗೆ ನೇಪಾಳ, ಸ್ಪ್ಯಾನಿಷ್, ಅಮೆರಿಕ, ಬಲ್ಗೇರಿಯನ್, ಹಂಗೇರಿಯನ್, ಮೊರಾಕನ್, ಯೂಗೋಸ್ಲಾವಿಯನ್ ಇತ್ಯಾದಿ. ಭಾರತದಲ್ಲೂ ಬ್ಯಾಡಗಿ, ಗುಂಟೂರು ಮೊದಲಾದ ಹಲವಾರು ಬಗೆಗಳುಂಟು. ಆನ್ಯುಯಮ್ ಬಗೆಯ ಮೆಣಸಿನಕಾಯಿಯಲ್ಲಿ ಬಲು ಮುಖ್ಯವಾಗಿ ಖಾರಕ್ಕಾಗಿ ಬಳಸುವ ಉದ್ದನೆಯ ಕಾಯುಳ್ಳ ಬಗೆ ಮತ್ತು ತರಕಾರಿಯಾಗಿ ಬಳಸುವ ಗುಂಡನೆಯ ಕಾಯುಳ್ಳ ಬಗೆ ಎಂಬ ಎರಡು ಗುಂಪುಗಳುಂಟು. ತರಕಾರಿಯಾಗಿ ಬಳಕೆಯಾಗುವ ಮೆಣಸಿನಕಾಯಿ ದಪ್ಪ ಮತ್ತು ದೊಡ್ಡಮೆಣಸಿನಕಾಯಿ ಎಂದು ಪ್ರಸಿದ್ಧವಾಗಿದೆ. ಇದರಲ್ಲಿ ಖಾರದ ಅಂಶ ಬಲು ಕಡಿಮೆ ಅಥವಾ ಇಲ್ಲವೇ ಇಲ್ಲ. ವಾಣಿಜ್ಯಕ್ಷೇತ್ರದಲ್ಲಿ ಪಪ್ರಿಕ, ಚಿಲೀಸ್, ರೆಡ್‌ಪೆಪರ್ಸ್, ಕೇಯನ್, ಕ್ಯಾಪ್ಸಿಕಮ್, ಸ್ವೀಟ್ ಪೆಪರ್ಸ್, ಪಮಿಯೆಂಟೊ ಎಂಬ ಹೆಸರುಗಳಿಂದ ಇವು ಪರಿಚಿತವಾಗಿವೆ.
ಕೃಷಿ
[ಬದಲಾಯಿಸಿ]ಮೆಣಸಿನಕಾಯಿ ಬೆಳೆಗೆ ಸುಮಾರು ೧೦ರಿಂದ ೩೦ ಸೆ.ಉಷ್ಣಾಂಶ ಅಗತ್ಯವಿದೆ. ಮೆಣಸಿನಕಾಯಿಯನ್ನು ಮಳೆ ಆಶ್ರಯ ಬೆಳೆಯಾಗಿ ಕೃಷಿ ಮಾಡುವುದೇ ರೂಢಿ. ಕೆಲವೆಡೆ ನೀರಾವರಿ ಬೇಸಾಯ ಮಾಡುವುದು ಉಂಟು. ಇದರ ಬೆಳವಣಿಗೆಗೆ ಸರಾಸರಿ ೬೦ ರಿಂದ ೧೨೫ ಸೆ.ಮೀ ಮಳೆ ಸಾಕಾಗುತ್ತದೆ. ಈ ಬೆಳೆಗೆ ಅತಿ ಶುಷ್ಕ ಮತ್ತು ಅತಿ ತೇವ ಪರಿಸ್ಥಿತಿಗಳೆರಡೂ ಮಾರಕ. ಕಪ್ಪು, ಮೆಕ್ಕಲು ಹಾಗೂ ಮರಳು ಮಿಶ್ರಿತ ಮೆಕ್ಕಲು ಮಣ್ಣು ಮೆಣಸಿನಕಾಯಿ ಬೆಳೆಗೆ ಹೆಚ್ಚು ಸೂಕ್ತ. ವಿವಿಧ ಬಗೆಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಕೆಂಪುಗೋಡು ಒಳ್ಳೆಯದು. ಇದು ಚಳಿಗಾಲದ ಬೆಳೆಯಾಗಿದ್ದು, ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಬಿತ್ತನೆ ಮಾಡಿ ಜೂನ್-ಜುಲೈನಲ್ಲಿ ಫಸಲು ಪಡೆಯಲಾಗುತ್ತದೆ. ಹಸಿರು ಮೆಣಸಿನಕಾಯಿಯನ್ನೇ ಬಳಸಲಾಗುತ್ತದಾದರೂ, ಬಲಿತ ಕೆಂಪು ಕಾಯಿಗಳನ್ನು ಒಣಗಿಸಲಾಗುತ್ತದೆ. ನಂತರ ಪುಡಿ ಮಾಡಿ ಬಳಸಲಾಗುತ್ತದೆ.
ಶುದ್ಧಬೆಳೆಯಾಗಿಯೊ ಬೆಳ್ಳುಳ್ಳಿಯೊಂದಿಗೆ ಅಕ್ಕಡಿ ಬೆಳೆಯಾಗಿಯೂ ಬೆಳೆಯುವುದಿದೆ. ಬೀಜಗಳನ್ನು ಒಟ್ಟು ಪಾತಿಯಲ್ಲಿ ನೆಟ್ಟು ಸಸಿಪಡೆದು ಅನಂತರ ಸಸಿಗಳನ್ನು ಬೇಕೆಂದ ಕಡೆ ನಾಟಿ ಮಾಡಲಾಗುತ್ತದೆ.
ಗಿಡಗಳು 2 1/2 - 3 1/2 ತಿಂಗಳ ವಯಸ್ಸಿನವಾದ ಅನಂತರ ಹೂ ಬಿಡಲು ಆರಂಭಿಸಿ ಸುಮಾರು ಮೂರು ತಿಂಗಳ ಕಾಲ ಹೂ ಧರಿಸಿರುವುವು. ಕಾಯಿ ಕಚ್ಚಿ ಅವು ಬಲಿಯಲಾರಂಭಿಸಿದ ಮೇಲೆ 3 - 4 ತಿಂಗಳ ಕಾಲ, 6 ರಿಂದ 10 ಸಲ 5, 10 ಅಥವಾ 20 ದಿವಸಗಳ ಅಂತರವಿಟ್ಟು ಕಾಯಿ ಬಿಡಿಸಲಾಗುತ್ತದೆ.
ಮೆಣಸಿನ ಗಿಡಕ್ಕೆ ತಗಲುವ ರೋಗರುಜಿನಗಳಲ್ಲಿ ಮುಖ್ಯವಾದವು ಇಂತಿವೆ: (1) ಸ್ಕಿರ್ಟೊತ್ರಿಪ್ಸ್ ಡಾಸರ್ದಾಲಿಸ್ ಎಂಬ ಕೀಟದಿಂದ (ಥ್ರಿಪ್ಸ್) ಹರಡುವ ವೈರಸ್ ರೋಗ - ಎಲೆಮುರುಟು. ಗಿಡದ ಬೆಳವಣಿಗೆ ಕುಂಠಿತಗೊಳ್ಳುವುದು, ಎಲೆಗಳು ಮುರುಟಿಕೊಳ್ಳುವುದು, ರೆಂಬೆಗಳ ತುದಿಗಳು ಅಂಟುದ್ರವದಿಂದ ಆವೃತವಾಗುವುದು ಈ ರೋಗದ ಲಕ್ಷಣಗಳು. (2) ಕೊಲೆಟೊಟ್ರೈಕಮ್ ಕ್ಯಾಪ್ಸಿಸಿ ಎಂಬ ಬೂಷ್ಟಿನಿಂದ ಉಂಟಾಗುವ ಕಾಯಿಗಳ ಕೊಳೆರೋಗ. (3) ಕೊಲೆಟೊ ಟ್ರೈಕಮ್ ನೈಗ್ರಮ್ ಎಂಬ ಬೂಷ್ಟಿನಿಂದ ಬರುವ ಆಂತ್ರಾಕ್ನೋಸ್ ರೋಗ.
ಹಂಚಿಕೆ ಮತ್ತು ಉತ್ಪಾದನೆ
[ಬದಲಾಯಿಸಿ]- ಭಾರತ ಪ್ರಪಂಚದ ಒಟ್ಟು ಉತ್ಪಾದನೆಯ ಶೇ.50ರಷ್ಟು ಮೆಣಸಿನಕಾಯಿ ಉತ್ಪಾದಿಸುತ್ತದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ,ಮಧ್ಯಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ವಾರ್ಷಿಕ 1325.3ಸಾವಿರ ಟನ್ ಮೆಣಸಿನಕಾಯಿ ಉತ್ಪಾದಿಸಲಾಗುತ್ತದೆ. ಬೆಳೆಯುವ ಇತರ ರಾಜ್ಯಗಳೆಂದರೆ ಪಂಜಾಬ್ ಮತ್ತು ಬಿಹಾರ.
- ಆಂಧ್ರಪ್ರದೇಶ:ದೇಶದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ರಾಜ್ಯ. ಮೆಣಸಿನಕಾಯಿ ಬೆಳೆಯುವ ಒಟ್ಟು ಕ್ಷೇತ್ರದ ಶೇ.26.4ರಷ್ಟನ್ನು ಒಳಗೊಂಡಿದ್ದು, ದೇಶದ ಒಟ್ಟು ಉತ್ಪಾದನೆಯ ಶೇ.57.8ರಷ್ಟು ಪಾಲು ಹೊಂದಿದೆ.
- ಕರ್ನಾಟಕ: ಭಾರತದ ಎರಡನೆಯ ಅತಿ ಮುಖ್ಯ ಮೆಣಸಿನಕಾಯಿ ಉತ್ಪಾದಕ ರಾಜ್ಯ. ಮೆಣಸಿನಕಾಯಿ ಬೆಳೆಯುವ ದೇಶದ ಒಟ್ಟು ಕ್ಷೇತ್ರದ ಶೇ.೧೭ರಷ್ಟನ್ನು ಹೊಂದಿದ್ದು, ಒಟ್ಟು ಉತ್ಪಾದನೆಯ ಶೇ.೧೨.೪ರಷ್ಟು ಪಾಲು ಹೊಂದಿದೆ. ಉತ್ತರ ಹಾಗೂ ಅರೆಮಲೆನಾಡಿನ ಜಿಲ್ಲೆಗಳು ಇದರ ಉತ್ಪಾದನೆಗೆ ಹೆಸರಾಗಿವೆ. ಧಾರವಾಡ ಜಿಲ್ಲೆಯ ಬ್ಯಾಡಗಿ ತಾಲೂಕು ಮೆಣಸಿನಕಾಯಿ ಬೆಳೆಗೆ ಪ್ರಸಿದ್ದಿ ಪಡೆದಿದೆ. ಬ್ಯಾಡಗಿ ಮೆಣಸಿನಕಾಯಿ ಪ್ರಸಿದ್ಧವಾದುದು.
- ರಫ್ತು: ಭಾರತ ಪ್ರಪಂಚದಲ್ಲಿ ಅತಿಹೆಚ್ಚು ಮೆಣಸಿನಕಾಯಿ ಉತ್ಪಾದಿಸುವುದು ಮಾತ್ರವಲ್ಲದೇ ಇದರ ರಫ್ತಿನಲ್ಲಿಯೂ ಮೊದಲ ಸ್ಥಾನದಲ್ಲಿದೆ. ವಿವಿಧ ಪ್ರಮಾಣದ ಖಾರ ಹೊಂದಿರುವ ಮೆಣಸಿನಕಾಯಿಯನ್ನು ಅಧಿಕ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಮೆಣಸಿನಕಾಯಿ ಪುಡಿಯನ್ನೂ ರಫ್ತು ಮಾಡಲಾಗುತ್ತದೆ. ಶ್ರೀಲಂಕಾ, ಬಾಂಗ್ಲಾದೇಶ, ದ.ಕೊರಿಯ, ಅಮೆರಿಕ, ಜರ್ಮನಿ, ಜಪಾನ್, ಮಧ್ಯ ಏಷ್ಯಾ ಹಾಗೂ ಪೌರಾತ್ಯರಾಷ್ಟ್ರಗಳು ಭಾರತದ ಮೆಣಸಿನಕಾಯಿಯ ಮುಖ್ಯ ಮಾರುಕಟ್ಟೆಗಳಾಗಿವೆ. ಭಾರತ ಪ್ರತಿ ವರ್ಷ ಸುಮಾರು ೫೨ ಸಾ.ಟನ್ ಮೆಣಸಿನಕಾಯಿ ರಫ್ತು ಮಾಡುತ್ತದೆ.
ಬ್ಯಾಡಗಿ ಮೆಣಸಿನಕಾಯಿ ಬಣ್ಣಕ್ಕೆ
[ಬದಲಾಯಿಸಿ]- ನೈಸರ್ಗಿಕ ಬಣ್ಣ ತಯಾರಿಕೆಯಲ್ಲಿ ಮೆಣಸು ಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲೂ ಬ್ಯಾಡಗಿ ಮೆಣಸು ಬಣ್ಣ ತಯಾರಿಕೆಯ ಉದ್ದೇಶಕ್ಕೆ ಹೆಚ್ಚು ರಫ್ತಾಗುತ್ತದೆ.
- ಬಣ್ಣ ತಯಾರಿಕೆ ಹೀಗೆ:
- ‘ಕ್ಯಾಪ್ಸಾಇಸಿನ್’ ಘಾಟಿಗೆ ಮತ್ತು ‘ಪ್ಯಾಪ್ರಿಕ’ ಮೆಣಸಿನ ಬಣ್ಣಕ್ಕೆ ಕಾರಣವಾಗುವ ಅಂಶಗಳು. ಮೆಣಸಿನಲ್ಲಿ ‘ಒಲಿಯೊರೆಸಿನ್’ ಎಂಬ ಅಂಶವಿದೆ. ಮೆಣಸಿಗೆ ಸೂಕ್ತ ದ್ರಾವಣ ಬಳಸಿ ಅದರಲ್ಲಿರುವ ಒಲಿಯೊರೆಸಿನ್ ಅಂಶವನ್ನು ಹೊರ ತೆಗೆಯುತ್ತಾರೆ. ಮೆಣಸಿನಲ್ಲಿ ಅಷ್ಟೇ ಅಲ್ಲದೆ ಟೊಮೆಟೊ, ಕಾಳುಮೆಣಸು, ಚೆಂಡು ಹೂ, ಅರಿಶಿಣ, ಶುಂಠಿ, ಏಲಕ್ಕಿ ಮುಂತಾದವುಗಳಲ್ಲಿ ವಿವಿಧ ಪ್ರಮಾಣದಲ್ಲಿ ಒಲಿಯೊರೆಸಿನ್ ಇರುತ್ತದೆ. ಸೂಕ್ತ ರಾಸಾಯನಿಕ ದ್ರಾವಣ ಬಳಸಿ ಒಲಿಯೊರೆಸಿನ್ ತೆಗೆದು, ಶುದ್ಧೀಕರಿಸಲಾಗುತ್ತದೆ. ನಂತರ ಆಯಾ ದೇಶಗಳ ಆಹಾರ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.
ಬಣ್ಣಗಳ ಬಳಕೆ
[ಬದಲಾಯಿಸಿ]- ಆಹಾರ ಸಂರಕ್ಷಕಗಳು, ಸಿದ್ಧ ಆಹಾರ ತಯಾರಿಕಾ ಉದ್ಯಮ, ಪಾನೀಯ, ಸಾಸ್, ಸಿಹಿ ತಿನಿಸು, ಔಷಧ ತಯಾರಿಕೆ ಸೇರಿದಂತೆ ಮತ್ತಿತರೆ ಉದ್ಯಮದಲ್ಲಿ ಬಳಸಲಾಗುತ್ತದೆ. ಬಳಕೆಗೆ ಕಾರಣವೇನೆಂದರೆ, ಆಹಾರ ತಯಾರಿಕೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಒಲಿಯೊರೆಸಿನ್ ಬಳಸಿದರೂ ಹೆಚ್ಚು ಪ್ರಮಾಣದಲ್ಲಿ ಮೆಣಸಿನಷ್ಟೇ ರುಚಿ, ಘಾಟು, ಖಾರದಂಶ ಎಲ್ಲವೂ ದೊರೆಯುತ್ತದೆ. ಅಲ್ಲದೆ, ಒಲಿಯೊರೆಸಿನ್ ಬೇಗ ಕೆಡುವುದಿಲ್ಲ. ಇದರ ಸಾಗಣಿಕೆ ಮತ್ತು ಸಂಗ್ರಹಣೆ ಸುಲಭ.
ಮೆಣಸಿನ ವಹಿವಾಟು
[ಬದಲಾಯಿಸಿ]- ವಿಶ್ವದ ಒಟ್ಟು ಒಲಿಯೊರೆಸಿನ್ ತಯಾರಿಕೆಯಲ್ಲಿ ಭಾರತದ ಪಾಲು ಬರೋಬ್ಬರಿ ಶೇಕಡ 70. ಭಾರತದ ಒಲಿಯೊರೆಸಿನ್ ವಹಿವಾಟು ₹600 ಕೋಟಿಗೂ ಹೆಚ್ಚು. ಚೀನಾ, ಅಮೆರಿಕ, ಬ್ರೆಜಿಲ್, ಶ್ರೀಲಂಕಾ, ದಕ್ಷಿಣ ಆಫ್ರಿಕ, ಲ್ಯಾಟಿನ್ ಅಮೆರಿಕ ದೇಶಗಳು ಒಲಿಯೊರೆಸಿನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಇತರ ದೇಶಗಳು. ಬ್ಯಾಡಗಿ ಮೆಣಸಿನ ಮಾರುಕಟ್ಟೆ ಜೊತೆಗೆ ಕೇರಳದ ಕೊಚ್ಚಿಯಲ್ಲಿ ಇರುವ ಮೆಣಸಿನ ಫಾರ್ಮ್‌ಗಳು ದೇಶದ ಮುಂಚೂಣಿ ಮೆಣಸು ಉತ್ಪಾದನಾ ಕ್ಷೇತ್ರಗಳು.
- ಒಲಿಯೊರೆಸಿನ್ ಅಂಶವು ಬ್ಯಾಡಗಿ ಮೆಣಸಿನಲ್ಲಿ ಹೆಚ್ಚು ಲಭ್ಯವಿದೆ. ಇದಕ್ಕೆ ಬ್ಯಾಡಗಿ ಮೆಣಸು ಬೆಳೆಯುವ ಗದಗ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳ ಮಣ್ಣು, ನೀರು, ವಾತಾವರಣ ಪೂರಕವಾಗಿದೆ. ಬ್ಯಾಡಗಿ ಮೆಣಸನ್ನು ದೇಶದ ಎಲ್ಲ ಭಾಗಗಳಲ್ಲಿ ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ಬ್ಯಾಡಗಿ ಮೆಣಸಿಗೆ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚು. ಮಳೆ ಆಧಾರಿತ ಕೃಷಿ ಪ್ರದೇಶದಲ್ಲಿ ಬೆಳೆ ಕುಂಠಿತವಾದರೆ ಮಾತ್ರ ಇಳುವರಿ ಕಡಿಮೆ ಆಗುತ್ತದೆ. ಆದರೂ ಚೀನಾಕ್ಕೆ ಬ್ಯಾಡಗಿ ಮೆಣಸು ರಫ್ತು ವಿಚಾರದಲ್ಲಿ ಭಾರತ ಪ್ರಬಲ ಪೈಪೋಟಿ ಒಡ್ಡುತ್ತಿದೆ.
- ಮನೆ ಅಗತ್ಯಕ್ಕೂ ಬಳಸಬಹುದು:
- ಮನೆಯಲ್ಲಿ ದಿನನಿತ್ಯದ ಆಹಾರ ತಯಾರಿಕೆಗೆ, ಮಸಾಲೆ ಪುಡಿ ತಯಾರಿಕೆಗೆ ಒಲಿಯೊರೆಸಿನ್ ಬಳಸಬಹುದು. ಆದರೆ ಅತಿ ಕಡಿಮೆ ಪ್ರಮಾಣದಲ್ಲಿ ಬಳಸಬೇಕು.ಮಾರುಕಟ್ಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ಒಲಿಯೊರೆಸಿನ್ ಲಭ್ಯವಿಲ್ಲ. ಅಲ್ಲದೆ, ಜನರಲ್ಲಿ ಒಲಿಯೊರೆಸಿನ್ ಬಳಕೆಯ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಹಾಗಾಗಿ ಒಲಿಯೊರೆಸಿನ್ ಬಳಕೆ ಮನೆಗಳಿಗಿಂತ ವಿವಿಧ ಉದ್ಯಮಗಳಲ್ಲಿಯೇ ಹೆಚ್ಚು.[೫]
ಉಪಯೋಗಗಳು
[ಬದಲಾಯಿಸಿ]ಮೆಣಸಿನಕಾಯಿ ಬಹು ಜನಪ್ರಿಯ ಸಂಬಾರ ವಸ್ತು. ಭಾರತದಲ್ಲಿ, ಏಷ್ಯದ ಹಲವಾರು ದೇಶಗಳಲ್ಲಿ ಇದು ಆಹಾರದ ಪ್ರಧಾನ ಅಂಶವಾಗಿದೆ; ಹಸಿಯಾಗಿಯೊ ಬೇಯಿಸಿಯೊ ಒಂದಲ್ಲ ಒಂದು ಬಗೆಯಲ್ಲಿ ಇದರ ಬಳಕೆ ಉಂಟು. ಪಲ್ಯ, ಸಾರು, ಸಾಂಬಾರು, ಉಪ್ಪಿನಕಾಯಿ ಹೀಗೆ ಹಲವು ರೂಪಗಳಲ್ಲಿ ಇದು ಉಪಯೋಗವಾಗುತ್ತದೆ. ಒಣಗಿದ ಖಾರದ ಪುಡಿ ರೂಪದಲ್ಲಿ ಮಸಾಲೆಗಳ ತಯಾರಿಕೆಯಲ್ಲಿ ಇದರ ಬಳಕೆ ಇದೆ. ಮೆಣಸಿನ ಕಾಯಿಯ ಖಾರದ ರುಚಿಗೆ ಕಾರಣ ಇದರಲ್ಲಿರುವ ಕ್ಯಾಪ್ಸಿಸಿನ್ ಎಂಬ ರಾಸಾಯನಿಕ.[೬][೭] ಮೆಣಸಿನ ಘಾಟಿಗೂ ಇದೇ ಕಾರಣ. ಕಾಯಿಗಳು ಬಲಿತಂತೆ, ಒಣಗಿದಂತೆ ಕೆಂಪು ಬಣ್ಣ ಬರಲು ಕಾರಣ ಕ್ಯಾಪ್ಸೆಂತಿನ್, ಕ್ಯಾಪ್ಸೊರೂಬಿನ್, ಜಿಯಾಕ್ಸಾಂತಿನ್, ಕ್ರಿಪ್ಟೊಕ್ಸಾಂತಿನ್, ಆಲ್ಫ ಮತ್ತು ಬೀಟ ಕ್ಯಾರೊಟಿನ್ ಎಂಬ ಸಂಯುಕ್ತಗಳು. ಜೊತೆಗೆ ಮೆಣಸಿನಕಾಯಿ `ಸಿ' ವಿಟಮಿನ್ನಿನ ಒಳ್ಳೆಯ ಆಕರ ಕೂಡ. ತಳಿಯನ್ನವಲಂಬಿಸಿ ಈ ವಿಟಮಿನ್ನಿನ ಮೊತ್ತ ಪ್ರತಿ 100 ಗ್ರಾಮಿಗೆ 50 - 280 ಮಿಗ್ರಾಂ ಇದೆ. ಹಾಗೆಯೇ ವಿಟಮಿನ್ `ಎ' ಕೂಡ ಗಣನೀಯ ಪ್ರಮಾಣದಲ್ಲಿದೆ.
ಮೆಣಸಿನಕಾಯಿಗೆ ಔಷಧೀಯ ಗುಣಗಳೂ ಉಂಟು. ಜೀರ್ಣಕಾರಿ ಎನಿಸಿಕೊಂಡಿರುವ ಇದನ್ನು ಅಜೀರ್ಣದ ಕೆಲವು ಬಗೆಗಳ ಚಿಕಿತ್ಸೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಹಲವು ರೀತಿಯ ಕೀಲುನೋವುಗಳ ಉಪಶಮನಕ್ಕೂ ಇದರ ಬಳಕೆ ಉಂಟು. ಗಂಟಲು ನೋವಿಗೆ ಉಪಯೋಗಿಸುವ ಕೆಲವು ಔಷಧಿಗಳಲ್ಲಿ ಇದನ್ನು ಸೇರಿಸುವುದಿದೆ.
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Mishan, Ligaya. "How The Chili Became Hot". The New York Times. Retrieved 1 October 2022.
- ↑ Pickersgill B (December 1971). "Relationships Between Weedy and Cultivated Forms in Some Species of Chili Peppers (Genus Capsicum)". Evolution; International Journal of Organic Evolution. 25 (4): 683–691. doi:10.1111/j.1558-5646.1971.tb01926.x. PMID 28564789. S2CID 205772121.
- ↑ Katherine C, Christine H (16 December 2014). "A Systematic Approach to Species-Level Identification of Chile Pepper (Capsicum spp.) Seeds: Establishing the Groundwork for Tracking the Domestication and Movement of Chile Peppers through the Americas and Beyond". Economic Botany. 68 (3). New York Botanical Garden Press: 316–336. doi:10.1007/s12231-014-9279-2. JSTOR 43305668. S2CID 36556206. Retrieved 11 February 2022.
- ↑ Raj NM, Peter KV, Nybe EV (1 January 2007). Spices. New India Publishing. pp. 107–. ISBN 978-81-89422-44-8.
- ↑ "ನೈಸರ್ಗಿಕ ಬಣ್ಣ;ಇದು;ಮೆಣಸಿನ ಬಣ್ಣ;ನಾಗರಾಜ ಕೆ.ಎಲ್;10 Dec, 2016". Archived from the original on 2016-12-10. Retrieved 2016-12-10.
- ↑ Kosuge S, Inagaki Y, Okumura H (1961). "Studies on the pungent principles of red pepper. Part VIII. On the chemical constitutions of the pungent principles". Nippon Nogeikagaku Kaishi (in English). 35: 923–927. doi:10.1271/nogeikagaku1924.35.10_923.
{{cite journal}}
: CS1 maint: unrecognized language (link) Chem. Abstr. 1964, 60, 9827g. - ↑ Kosuge S, Inagaki Y (1962). "Studies on the pungent principles of red pepper. Part XI. Determination and contents of the two pungent". J. Agric. Chem. Soc. Japan (in Japanese). 36: 251–254.
{{cite journal}}
: CS1 maint: unrecognized language (link)
ಹೊರಗಿನ ಕೊಂಡಿಗಳು
[ಬದಲಾಯಿಸಿ]- Plant Cultures: Chilli pepper botany, history and uses
- The Chile Pepper Institute of New Mexico State University
- Capsicums: Innovative Uses of an Ancient Crop
- Chilli: La especia del Nuevo Mundo (Article from Germán Octavio López Riquelme about biology, nutrition, culture and medical topics. In Spanish)
- The Hot Pepper List List of chili pepper varieties ordered by heat rating in Scoville Heat Units (SHU)