ವಿಷಯಕ್ಕೆ ಹೋಗು

ಸಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏಕದಳ (ಎಡ) ಮತ್ತು ದ್ವಿದಳ (ಬಲ) ಸಸಿಗಳು

ಸಸಿ ಬೀಜದ ಸಸ್ಯ ಭ್ರೂಣದಿಂದ ಬೆಳೆಯುತ್ತಿರುವ ಒಂದು ಎಳೆಯ ಸಸ್ಯ ಬೀಜಕ. ಸಸಿ ಬೆಳವಣಿಗೆ ಬೀಜಅಂಕುರಣದಿಂದ ಆರಂಭಗೊಳ್ಳುತ್ತದೆ. ಒಂದು ಪ್ರಾತಿನಿಧಿಕ ಎಳೆ ಸಸಿ ಮೂರು ಮುಖ್ಯ ಭಾಗಗಳನ್ನು ಹೊಂದಿರುತ್ತದೆ: ಮೂಲಾಂಕುರ (ಭ್ರೂಣ ಬೇರು), ಹೈಪೊಕಾಟಿಲ್ (ಭ್ರೂಣ ಕಾಂಡ), ಮತ್ತು ಅಂಕುರ ಪರ್ಣಗಳು (ಬೀಜದಳಗಳು). ಹೂಬಿಡುವ ಸಸ್ಯಗಳ ಎರಡು ವರ್ಗಗಳನ್ನು ಅವುಗಳ ಬೀಜದಳಗಳ ಸಂಖ್ಯೆಯಿಂದ ವಿಂಗಡಿಸಲಾಗುತ್ತದೆ: ಏಕದಳ ಸಸ್ಯಗಳು ಒಂದು ಅಲಗಿನಾಕಾರದ ಬೀಜದಳವನ್ನು ಹೊಂದಿರುತ್ತವೆ, ಮತ್ತು ದ್ವಿದಳ ಸಸ್ಯಗಳು ಎರಡು ದುಂಡಗಿನ ಬೀಜದಳಗಳನ್ನು ಹೊಂದಿರುತ್ತವೆ. ನಗ್ನ ಬೀಜಕಾರಿಗಳು ಹೆಚ್ಚು ವೈವಿಧ್ಯಮಯವಾಗಿರುತ್ತವೆ. ಉದಾಹರಣೆಗೆ, ಪೀತದಾರು ಮರದ ಸಸಿಗಳು ಎಂಟರವರೆಗೆ ಅಂಕುರ ಪರ್ಣಗಳನ್ನು ಹೊಂದಿರುತ್ತವೆ. ಕೆಲವು ಹೂಬಿಡುವ ಸಸ್ಯಗಳ ಸಸಿಗಳು ಯಾವುದೇ ಅಂಕುರ ಪರ್ಣಗಳನ್ನು ಹೊಂದಿರುವುದಿಲ್ಲ. ಇವನ್ನು ಬೀಜದಳರಹಿತ ಸಸ್ಯಗಳೆಂದು ಕರೆಯಲಾಗುತ್ತದೆ.

ಬೀಜಗರ್ಭವು ಸಸ್ಯದ ಮೊದಲ ನೈಜ ಎಲೆಗಳನ್ನು ಹೊರುವ ಕುಡಿಯಾಗಿ ಬೆಳೆಯುವ ಬೀಜ ಭ್ರೂಣದ ಭಾಗ. ಬಹುತೇಕ ಬೀಜಗಳಲ್ಲಿ, ಉದಾಹರಣೆಗೆ ಸೂರ್ಯಕಾಂತಿಯಲ್ಲಿ, ಬೀಜಗರ್ಭವು ಯಾವುದೇ ಎಲೆ ರಚನೆಯಿರದ ಒಂದು ಶಂಕುವಿನಾಕಾರದ ರಚನೆ. ಬೀಜಗರ್ಭದ ಬೆಳವಣಿಗೆ ಬೀಜದಳಗಳು ನೆಲದ ಮೇಲೆ ಬೆಳೆಯುವವರೆಗೆ ಆಗುವುದಿಲ್ಲ. ಇದಕ್ಕೆ ಅಧಿಭೂಮಿ ಅಂಕುರಣ ಎಂದು ಕರೆಯಲಾಗುತ್ತದೆ. ಆದರೆ, ಚಪ್ಪರದವರೆಯಂತಹ ಬೀಜಗಳಲ್ಲಿ, ಎಲೆ ರಚನೆ ಬೀಜದಲ್ಲಿನ ಬೀಜಗರ್ಭದ ಮೇಲೆ ಗೋಚರಿಸುತ್ತದೆ. ಬೀಜಗರ್ಭ ಮಣ್ಣಿನಿಂದ ಮೇಲಕ್ಕೆ ಬೆಳೆದು, ಆದರೆ ಬೀಜದಳಗಳು ಮೇಲ್ಮೈ ಕೆಳಗೆ ಉಳಿದು, ಈ ಬೀಜಗಳು ಅಭಿವೃದ್ಧಿಹೊಂದುತ್ತವೆ. ಇದನ್ನು ನೆಲದಡಿಯ ಅಂಕುರಣ ಎಂದು ಕರೆಯಲಾಗುತ್ತದೆ.

"https://kn.wikipedia.org/w/index.php?title=ಸಸಿ&oldid=750732" ಇಂದ ಪಡೆಯಲ್ಪಟ್ಟಿದೆ