ನ್ಯುಮೋನಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಸ್ಪಿರೇಶನ್ ನ್ಯುಮೋನಿಯ
ಸಾಂಕ್ರಾಮಿಕ ನ್ಯುಮೋನಿಯಾದ ಮುಖ್ಯ ಲಕ್ಷಣಗಳು
ನ್ಯುಮೋನಿಯ

ನ್ಯುಮೋನಿಯ ಪುಪ್ಫುಸದ ಉರಿಯೂತದೊಂದಿಗೆ ಅದರ ವಾಯುಕುಹರಗಳಲ್ಲಿ ದ್ರವತುಂಬಿಕೊಂಡು ಉಸಿರಾಟದ ಕ್ರಿಯಾಪಾತ್ರಕ್ಕೆ ಧಕ್ಕೆಯುಂಟಾಗಿರುವ ರೋಗಸ್ಥಿತಿ. ಪುಪ್ಫುಸಗಳಲ್ಲಿ ಕಾಣಬರುವ ಕೇವಲ ಉರಿಯೂತಸ್ಥಿತಿಗೆ ನ್ಯುಮೊನೈಟಿಸ್ ಎಂದು ಹೆಸರು. ರೋಗಾಣುಗಳ ಸೋಂಕಿನಿಂದ ಇಲ್ಲವೆ ಬೇರೆ ಕಾರಣಗಳಿಂದ ನ್ಯುಮೋನಿಯ ಉಂಟಾಗಬಹುದು. ರೋಗಸ್ಥಿತಿ ಪುಪ್ಫುಸದ ಒಂದು ಹಾಲೆಗೆ ಮೀಸಲಾಗಿರಬಹುದು; ಒಂದೇ ಪುಪ್ಫುಸವನ್ನು ಪೂರ್ತಿ ಆವರಿಸಿರಬಹುದು; ಇಲ್ಲವೆ ಎರಡರಲ್ಲೂ ಕಂಡುಬರಬಹುದು. ಈ ಕೊನೆಯ ಸ್ಥಿತಿಯೇ ಜನಸಾಮಾನ್ಯರ ಭಾಷೆಯಲ್ಲಿ ಡಬ್ಬಲ್ ನ್ಯುಮೋನಿಯ. ಪುಪ್ಫುಸಗಳ ಒಳಗೆ ಇರುವ ಶ್ವಾಸನಾಳದ ಕವಲುಗಳು ಮತ್ತು ಅವುಗಳ ನೆರೆಯಲ್ಲಿರುವ ಪುಪ್ಫುಸಭಾಗ ರೋಗಗ್ರಸ್ತವಾಗಿರುವ ಸ್ಥಿತಿಗೆ ಬ್ರಾನ್‍ಕೋನ್ಯುಮೋನಿಯ ಎಂದು ಹೆಸರು.[೧] ಪ್ರೌಢಾವಸ್ಥೆಯಲ್ಲಿ ನ್ಯುಮೋನಿಯವೂ ಬಾಲ್ಯ ಮತ್ತು ತಾರುಣ್ಯಾವಸ್ಥೆಗಳಲ್ಲಿ ಬ್ರಾನ್ಕೊನ್ಯುಮೋನಿಯವೂ ಹೆಚ್ಚು ಸಾಮಾನ್ಯವಾಗಿ ಕಂಡುಬಂದರೂ ಒಂದೇ ವ್ಯಕ್ತಿಯಲ್ಲಿ ಎರಡು ರೋಗಸ್ಥಿತಿಗಳೂ ವ್ಯಕ್ತವಾಗುವುದು ಉಂಟು. ಶ್ವಾಸಮಂಡಲದಲ್ಲಿ ಮೊದಲೇ ಇದ್ದ ರೋಗಾಣುಗಳಿಂದ ಉಂಟಾಗುವ ನ್ಯುಮೋನಿಯಕ್ಕೆ ದ್ವಿತೀಯಕ (ಸೆಕೆಂಡರಿ) ನ್ಯುಮೋನಿಯ ಎಂದು ಹೆಸರು. ಲಕ್ವ, ಗುಂಡಿಗೆ ರೋಗಗಳು, ರಕ್ತಕೊರತೆ, ಸಿಹಿಮೂತ್ರ, ಧಮನಿಪೆಡಸಣೆ ಮುಂತಾದ ದೀರ್ಘಕಾಲಿಕ ಮತ್ತು ಹಾಸಿಗೆ ಹಿಡಿಸುವ ರೋಗಗಳಿಂದ ಹಾಗೂ ಮುಪ್ಪಿನಿಂದ ವ್ಯಕ್ತಿಗಳ ರೋಗರೋಧಕ ಸಾಮಥ್ರ್ಯ ಕುಗ್ಗಿರುವ ಸ್ಥಿತಿಗಳಲ್ಲಿ ಅವರು ನ್ಯುಮೋನಿಯಕ್ಕೆ ಸುಲಭವಾಗಿ ತುತ್ತಾಗುವರು.[೨]

ಇತಿಹಾಸ[ಬದಲಾಯಿಸಿ]

ಕ್ರಿ.ಪೂ. 400 ರಷ್ಟು ಹಿಂದೆಯೇ ಇದ್ದ ಗ್ರೀಕ್‍ ವೈದ್ಯ ಹಿಪ್ಟೊಕ್ರೇಟಸ್ ನ್ಯುಮೊನಿಯ ರೋಗದ ವಿಶಿಷ್ಟ ಲಕ್ಷಣಗಳನ್ನು ಗುರುತಿಸಿದ್ದ. ಆದರೆ ಪುಪ್ಫುಸದ ಹೊರಪೊರೆಯ ಉರಿಯೂತಕ್ಕೂ (ಪ್ಲೂರಿಸಿ) ನ್ಯುಮೋನಿಯಕ್ಕೂ ಇದ್ದ ಖಚಿತ ವ್ಯತ್ಯಾಸ ಸುಮಾರು 18ನೆಯ ಶತಮಾನದ ತನಕ ತಿಳಿದಿರಲಿಲ್ಲ. ಸೆಲ್ಸಸ್ ಮತ್ತಿತರರು ವ್ಯತ್ಯಾಸಗಳನ್ನು ಗಮನಿಸಿದ್ದರು ನಿಜ. ಆದರೆ ಎದೆಯನ್ನು ಬೆರಳಿನಿಂದ ಅಲ್ಲಲ್ಲಿ ಬಡಿದು ಶಬ್ದವನ್ನು ಅಲಿಸುವುದು (ಪರ್ಕಶನ್) ನ್ಯುಮೋನಿಯದ ಖಚಿತ ನಿದಾನಕ್ಕೆ ಬಲು ಉಪಯುಕ್ತ ಎಂದು 0761ರಲ್ಲಿ ಆಯೆ ಬ್ರಗರ್ ತೋರಿಸಿದ. 19ನೆಯ ಶತಮಾನದ ಪ್ರಾರಂಭದಲ್ಲಿ ರೀನೆ ಲ್ಯಾನೆಕ್ ಉಪಜ್ಞಿಸಿದ ಶ್ರವಣನಳಿಕೆಯಿಂದ (ಸ್ಟೆತಸ್ಕೋಪ್) ನ್ಯುಮೋನಿಯವನ್ನೂ ಒಳಗೊಂಡಂತೆ ಎದೆಗೂಡಿನ ಅನೇಕ ರೋಗಗಳ ಪತ್ತೆ ಇನ್ನೂ ಸುಲಭವಾಯಿತು. ಎಕ್ಸ್‌-ಕಿರಣ(ಎಕ್ಸ್‌ರೇ) ಪರೀಕ್ಷಾವಿಧಾನದ ಸೌಲಭ್ಯ ದೊರಕಿದ ಮೇಲಂತೂ ನ್ಯುಮೋನಿಯದ ನಿಧಾನ ಖಚಿತವಾದಂತಾಯಿತು. ಸುಮಾರು 1940ರ ತನಕ ನ್ಯುಮೋನಿಯ ತೀವ್ರ ಹಾಗೂ ಮಾರಕರೋಗವೆನ್ನಿಸಿತ್ತು. ಅಸ್ಪತ್ರೆಗಳಲ್ಲಿ ನ್ಯುಮೋನಿಯ ರೋಗಗಳಿಗಾಗಿಯೇ ಬೇರೆ ಚಿಕಿತ್ಸಾ ಕೋಣೆಯನ್ನು ಮೀಸಲಾಗಿರಿಸಿ ವಿಶಿಷ್ಟ ಶುಶ್ರೂಷೆಯನ್ನು ಒದಗಿಸುತ್ತಿದ್ದರು. ಅಷ್ಟಾದರೂ ರೋಗದಿಂದ ಬಲು ಮಂದಿ ಸಾಯುತ್ತಿದ್ದರು. ಅಪ್ಪಿತಪ್ಪಿ ಉಳಿದವರು ವರ್ಷಗಟ್ಟಲೆ ತೊಡಕುಗಳಿಂದ ನರಳಿ ಸೊರಗುತ್ತಿದ್ದರು. ಈಗಲೂ ದುರ್ಬಲರು, ಹಸುಗೂಸುಗಳು ಹಾಗೂ ಮುಪ್ಪಿನವರು ಇಂಥವರಲ್ಲಿ ನ್ಯುಮೋನಿಯ ಭಯಕಾರಕ ರೋಗವಾಗಿಯೇ ಇದೆ.

ನ್ಯಮೋನಿಯ ಲಕ್ಷಣ[ಬದಲಾಯಿಸಿ]

  1. ನ್ಯುಮೋನಿಯಕ್ಕೆ ಅತ್ಯಂತ ಸಾಮಾನ್ಯ ಕಾರಣ ನ್ಯೂಮೊಕಾಕೈಗಳೆಂಬ ಏಕಾಣುಗಳ ಸೋಂಕು. ಇವು ಕವಚ ಹೊಂದಿರುವ ಹಾಗೂ ಗ್ರಾಮ್‍ಧನಲಕ್ಷಣವುಳ್ಳ ಜೋಡಿ ಅಣುಗಳು (ಡಿಪ್ಲೊಕಾಕೈ). ಇವುಗಳಲ್ಲಿ ಲಸಿಕೆಯ (ಸೀರಮ್) ಪ್ರತಿಕ್ರಿಯೆಯಂತೆ 75 ಬಗೆಗಳನ್ನು ಗುರುತಿಸಬಹುದು. ಇವುಗಳಿಂದ ಉಂಟಾದ ನ್ಯುಮೋನಿಯ ಒಂದು ಕೂರುರೋಗ. ನ್ಯುಮೊಕಾಕೈಗಳು ಸಾಧಾರಣವಾಗಿ ಅನೇಕರ ಮೂಗು, ಬಾಯಿ, ಗಂಟಲುಗಳಲ್ಲಿ ನಿರುಪದ್ರವಿಗಳಾಗಿ ನೆಲಸಿರುತ್ತವೆ. ನೆಗಡಿ, ಶೀತ, ಅನಾರೋಗ್ಯಗಳಿಂದ ದೇಹದ ರೋಗ ನಿರೋಧಕ ಸಾಮಥ್ರ್ಯ ಕುಗ್ಗಿದಾಗ ಇವು ಪುಪ್ಫುಸಗಳಿಗೆ ಹರಡಿ ನ್ಯುಮೋನಿಯವನ್ನು ಉಂಟುಮಾಡುತ್ತವೆ. ರೋಗದಲ್ಲಿ ನಾಲ್ಕು ಹಂತಗಳನ್ನು ಗುರುತಿಸಬಹುದು: ಪುಪ್ಫುಸದ ಅರಕ್ತತೆ (ಕನ್‍ಜೆಶ್ಯನ್), ಕೆಂಪುಬಣ್ಣದ ಯಕೃತ್ತಿನಂತೆ ಕಾಣುವಿಕೆ (ರೆಡ್‍ಹೆಪಟೈಸೇಷನ್), ಬೂದು ಬಣ್ಣದ ಯಕೃತ್ತಿನಂತೆ ಕಾಣುವಿಕೆ (ಗ್ರೇ ಹೆಪಟೈಸೇಷನ್) ಮತ್ತು ಕೊನೆಯ ಹಂತ. ಕೊನೆಯ ಹಂತ ಹಠಾತ್ ಮರಣವಾಗಿ ಪರಿಣಮಿಸಬಹುದು. ಇಲ್ಲವೇ ಅಷ್ಟೇ ಹಠಾತ್ತಾಗಿ ಗುಣಮುಖವಾಗಿ ಪರಿವರ್ತಿತವಾಗಬಹುದು. (ರೆಸಲ್ಯೂಷನ್).[೩]
  2. ಅರಕ್ತತೆಯ ಹಂತದಲ್ಲಿ ಪುಪ್ಫುಸದ ಧಮನಿಗಳು ಹಾಗೂ ಲೋಮನಾಳಗಳಲ್ಲಿ ರಕ್ತ ತುಂಬಿಕೊಂಡು ವಾಯುಕುಹರಗಳು ಕಿರಿದಾಗಿ ಹೋಗಿದ್ದರೂ ಅವುಗಳಲ್ಲಿ ಇನ್ನೂ ವಾಯು ಇರುತ್ತದೆ. ಮುಂದಿನ ಎರಡು ಹಂತಗಳಲ್ಲಿ ವಾಯುಕುಹರಗಳಲ್ಲಿ ದ್ರವತುಂಬಿ ಅವು ಬಿಗಿತುಕೊಂಡಿರುತ್ತವೆ. ಅಂಥ ಪುಪ್ಫುಸದ ಕೊಯ್ತ ಬರೀ ಕಣ್ಣಿಗೆ ಯಕೃತ್ತಿನ ಕೊಯ್ತದಂತೆ ಕಾಣುತ್ತದೆ. ಕೆಂಪು ಹಂತದಲ್ಲಿ ವಾಯು ಕುಹರಗಳನ್ನು ತುಂಬಿರುವ ದ್ರವವನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಪ್ರಧಾನವಾಗಿ ಕೆಂಪು ಕಣಗಳನ್ನೂ ತಂತುಗಳನ್ನೂ ಕಬಳಿಸುವ ಕೆಲವು ಜೀವಾಣುಗಳನ್ನೂ (ಮ್ಯಾಕ್ರೊಫೇಜೀಸ್) ವರ್ಣರಹಿತ ರಕ್ತ ಕಣಗಳನ್ನೂ ಕಾಣಬಹುದು. ಬೂದು ಹಂತದಲ್ಲಿ ಕಬಳಿಸುವ ಜೀವಾಣು ಮತ್ತು ವರ್ಣರಹಿತಕಣಗಳೇ ಪ್ರಧಾನ. ನಾಲ್ಕನೆಯ ಹಂತ ಗುಣಮುಖವಾಗಿ ಪರಿಣಮಿಸುವ ಸಂದರ್ಭಗಳಲ್ಲಿ ಕಬಳಿಸುವ ಜೀವಾಣುಗಳು ವಾಯುಕುಹರದಲ್ಲಿ ತುಂಬಿಕೊಂಡಿರುವ ಕಣಗಳನ್ನು ಕಬಳಿಸುವುದರಿಂದಲೂ ಕಫದ ಮೂಲಕ ದ್ರವ ಹೊರಬೀಳುವುದರಿಂದಲೂ ಪುಪ್ಫುಸ ಸಹಜಸ್ಥಿತಿಗೆ ಮರಳುವಂತಾಗುತ್ತದೆ. ಕೆಲವು ವೇಳೆ ಮೊದಲ ಹಂತದ ಲಕ್ಷಣಗಳು ರೋಗ ಎದೆಗೆ ಸಂಬಂಧಪಟ್ಟಿದೆಂಬುದನ್ನು ಸೂಚಿಸುವುದೇ ಇಲ್ಲ. ಪ್ರಾರಂಭದ ತಲೆನೋವು ಹಾಗೂ ಅವ್ಯಕ್ತ ದುರ್ಬಲತೆಗಳನ್ನು ಕೆಲವು ಗಂಟೆಗಳಲ್ಲೆ ನಡುಕ, ಚಳಿ, ಅತಿಯಾದ ಜ್ವರ (104º-105ºಈ) ಮುಂತಾದ ತೊಂದರೆಗಳು ಹಿಂಬಾಲಿಸುತ್ತವೆ. ಕೆಮ್ಮಿದಾಗ ರೋಗದ ಕಡೆಯ ಪಕ್ಕೆ ನೋಯುವುದಕ್ಕೆ ಪ್ರಾರಂಭವಾದ ಮೇಲೆಯೇ ಇದು ಎದೆರೋಗವೆಂಬುದು ರೋಗಿಗೆ ಮನದಟ್ಟಾಗುತ್ತದೆ. ಆದರೆ ನೆಗಡಿ ಕೆಮ್ಮು ಗಂಟಲು ಉರಿಗಳಿಂದ ಪ್ರಾರಂಭವಾಗಿ ನಡುಕ ಚಳಿಗಳುಂಟಾಗಿ ಸರ್ರನೆ ಜ್ವರವೇರಿ ಕೆಮ್ಮಿದಾಗ ಎದೆನೋಯುವುದೇ ಸಾಮಾನ್ಯವಾಗಿ ನ್ಯುಮೋನಿಯದ ವಿಶಿಷ್ಟವಾದ ಸೂಚಕ. ಒಣಗೆಮ್ಮು, ಬೇಗ ಬೇಗ ಉಸಿರು ಹತ್ತಿಬರುವಿಕೆ (ರ್ಯಾಪಿಡ್ ಶ್ಯಾಲ್ಲೊಬ್ರೀತಿಂಗ್), ಉಸಿರಾಟ ಕಷ್ಟವಾಗುವುದು (ಡಿಸ್ನಿಯ), ತಳಮಳಿಕೆ, ದೇಹ ವಿಶಿಷ್ಟವಾಗಿ ನೀಲಿಗಟ್ಟಿರುವಿಕೆ-ಇವು ನ್ಯುಮೋನಿಯದ ಮುಂದಿನ ಲಕ್ಷಣಗಳು. ಅನಂತರ ಕೆಮ್ಮಿದಾಗ ಅಂಟುಲೋಳೆಯಂಥ ಕಫ ಬರುವುದಕ್ಕೆ ಪ್ರಾರಂಭವಾಗುವುದು.
  3. ಮೊದಮೊದಲು ವಿಶಿಷ್ಟ ಬಣ್ಣವಿಲ್ಲದಿದ್ದರೂ ಅಮೇಲೆ ಕಫ ತುಕ್ಕು ಬಣ್ಣದ ಛಾಯೆ ತಳೆಯುತ್ತದೆ. ಈ ಲಕ್ಷಣ ಇರುವ ಕಫದಿಂದಲೇ ಅನೇಕ ವೇಳೆ ನ್ಯುಮೋನಿಯವನ್ನು ಸುಲಭವಾಗಿ ಗುರುತಿಸಬಹುದು. ರೋಗಹತ್ತಿರುವ ಭಾಗದ ಎದೆಯ ಮೇಲೆ ಬೆರಳಿನಿಂದ ಬಡಿದರೆ ಮರದ ತುಂಡಿನ ಮೇಲೆ ಬಡಿದಂತೆ ಶಬ್ದವಾಗುವುದು. ಶ್ರವಣನಳಿಕೆಯಲ್ಲಿ ಕೇಳಿದರೆ ಅ ಭಾಗದಿಂದ ಪರಪರೆ ಎಂಬ ಶಬ್ದ ಕೇಳಿಬರುವುದು. ಮುಂದೆ ಇದೇ ಜೋರಾಗಿ ಗುಳುಗುಳು ಶಬ್ದದಂತೆಯೇ ಆಗಬಹುದು. ಚಿಕಿತ್ಸೆ ದೊರೆಯದಿದ್ದಲ್ಲಿ ಸುಮಾರು ಎಂಟು ದಿವಸಗಳ ತರುವಾಯ ಜ್ವರ ನಾಲ್ಕನೆಯ ಘಟ್ಟ ತಲಪಿ ಇತ್ತಲೋ ಅತ್ತಲೊ ಎನ್ನುವುದು ಹಠಾತ್ತಾಗಿ ನಿರ್ಣಯವಾಗುತ್ತದೆ. ಸುಖಾಂತವಾಗುವ ರೋಗಿಗಳಲ್ಲಿ ಮುಂದಿನ ಹನ್ನೆರಡು ಗಂಟೆಗಳಲ್ಲೆ ಜ್ವರ ಇಳಿದು ಆಶ್ಚರ್ಯವಾಗುವಂತೆ ರೋಗಿಯ ತೊಂದರೆಗಳೆಲ್ಲ ಶಮನವಾಗುತ್ತವೆ. ಈ ಕಾಲವನ್ನು ಗಂಡಕಾಲ (ಕ್ರೈಸಿಸ್) ಎಂದು ಕರೆಯಲಾಗಿದೆ. 1940ರಿಂದ ಈಚೆಗೆ ಪರಿಣಾಮಕಾರಿಯಾದ ಸಲ್ಛ ಗುಂಪಿನ ರಾಸಾಯನಿಕ ಚಿಕಿತ್ಸಕಗಳ ಹಾಗೂ ಪ್ರತಿಜೈವಿಕ ಮದ್ದುಗಳ ಬಳಕೆಯಿಂದ ನ್ಯುಮೋನಿಯದ ವಿವಿಧ ಘಟ್ಟಗಳು, ವಿಶೇಷವಾಗಿ ಕೊನೆಯ ಘಟ್ಟ, ಕಾಣಬರುವುದು ಅಪರೂಪವಾಗಿವೆ. ಅಪವಾದವೆನ್ನುವಂತೆ ಕೆಲವು ವೇಳೆ ಜ್ವರ ಹಂತಹಂತವಾಗಿ ಇಳಿದು ರೋಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಾನೆ. ವಿಶಿಷ್ಟ ಚಿಕಿತ್ಸೆ ದೊರೆಯದಿದ್ದರೆ ಸಾವಿನ ದರ ದೃಢಕಾಯ ಯುವಕರಲ್ಲೂ 15-30%ರಷ್ಟಿರುತ್ತದೆ.

ನ್ಯುಮೋನಿಯದಿಂದಾಗುವ ಅಪಾಯಗಳು[ಬದಲಾಯಿಸಿ]

ಕೆಲವು ವೇಳೆ ನ್ಯುಮೋನಿಯ ಪೂರ್ತಿಯಾಗಿ ವಾಸಿ ಆಗದೆ ತೊಡಕುಗಳು ಉಂಟಾಗುವುವು. 3%-5% ರೋಗಿಗಳಲ್ಲಿ ಎದೆಗೂಡಿನಲ್ಲಿ ಪುಪ್ಫುಸದ ಹೊರಗೆ ಕೀವು ಸೇರಬಹುದು. ಇದಕ್ಕೆ ಎಂಪೈಯೀಮ ಎಂದು ಹೆಸರು. ಪುಪ್ಫುಸ ಸಹಜಸ್ಥಿತಿಗೆ ಮರಳದೆ ನಾರುಗಟ್ಟಿ ನಿಷ್ಟ್ರಯೋಜಕವಾಗಬಹುದು. ಗುಂಡಿಗೆಯ ಸ್ನಾಯು ಅಥವಾ ಮೇಲುಪೊರೆ, ಉದರದ ಅಂಗಗಳ ಮೇಲು ಪೊರೆ ಮಿದುಳಿನ ಮೇಲು ಪೊರೆ, ಕೀಲುಗಳು, ಮೂತ್ರಪಿಂಡ ಇವುಗಳಿಗೆ ಸೋಂಕಿನಿಂದ ಇಲ್ಲವೇ ರೋಗಾಣುವಿನ ವಿಷದಿಂದ ಉರಿಯೂತ ಬರುವುದೂ ಇದೆ. ವಿಷದಿಂದ ಕಾಮಾಲೆ ಕೂಡ ಕಂಡುಬರಬಹುದು.

ಚಿಕಿತ್ಸೆ[ಬದಲಾಯಿಸಿ]

ಮೇಲೆ ಹೇಳಿದ ವಿಶಿಷ್ಟ ಚಿಕಿತ್ಸಕಗಳು ತಿಳಿಯದಿದ್ದ ಕಾಲದಲ್ಲಿ ರೋಗಕ್ಕೆ ಕೇವಲ ಲಾಕ್ಷಣಿಕ ಚಿಕಿತ್ಸೆ ಮತ್ತು ಅರೈಕೆ. ಶುಶ್ರೂಷೆ ಮುಂತಾದ ಸಂಭಾಳಿಸುವ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಅನಂತರ ರೋಗಾಣುರೋಧಕ ಲಸಿಕೆಗಳ ಬಳಕೆ ಪ್ರಾರಂಭವಾಯಿತು. ಆದರೆ ಇದು ನ್ಯುಮೊಕಾಕಸ್ಸಿನಲ್ಲಿ ರೋಗಕ್ಕೆ ಯಾವ ಬಗೆಯ ಏಕಾಣು ಕಾರಣವಾಗಿದೆ ಎಂದು ಕಷ್ಟಪಟ್ಟು ಪತ್ತೆಮಾಡಿ ಅದಕ್ಕೆ ವಿರೋಧವಾದ ಏಕಾಣು ಕಾರಣವಾಗಿದೆ ಎಂದು ಕಷ್ಟಪಟ್ಟು ಪತ್ತೆಮಾಡಿ ಅದಕ್ಕೆ ವಿರೋಧವಾದ ವಿಶಿಷ್ಟ ಲಸಿಕೆಯನ್ನೇ ಆಯ್ದು ಚುಚ್ಚುಮದ್ದಾಗಿ ಕೊಡಬೇಕಾಗಿದ್ದ ತಾಪತ್ರಯದ ವಿಧಾನವಾಗಿದ್ದುದರಿಂದ ವ್ಯಾಪಕವಾಗಿ ಊರ್ಜಿತಗೊಳ್ಳಲಿಲ್ಲ. ಈಚೆಗೆ ಸಲ್ಛ ಹಾಗೂ ಪ್ರತಿಜೈವಿಕ ಮದ್ದುಗಳು ಬಳಕೆಗೆ ಬಂದು ಲಸಿಕೆ ಚಿಕಿತ್ಸೆ ಮೂಲೆಗೆ ಬಿದ್ದಂತಾಗಿದೆ. ರೋಗಿ ನೀಲಿಗಟ್ಟಿ ಉಸಿರಾಟ ಕಷ್ಟವಾಗಿರುವ ಸಂದರ್ಭಗಳಲ್ಲಿ ಈಗಲೂ ಅಕ್ಸಿಜನ್ನನ್ನು ಉಸಿರಾಡಿಸಿ ರೋಗಿಗೆ ಆರಾಮವನ್ನು ಒದಗಿಸಬೇಕಾಗುವುದು. ಲಘು ಅಹಾರ ಮತ್ತು ಸಾಕಷ್ಟು ದ್ರವಗಳ ಅವಶ್ಯಕತೆಯೂ ಇದ್ದೇ ಇದೆ. ಹೀಗೆ ಈಚೆಗೆ ನ್ಯುಮೋನಿಯ ಹೆದರಬೇಕಾದ ರೋಗ ಎನ್ನಿಸದಿದ್ದರೂ ಅಪರೂಪವಾಗಿ ರೋಗಾಣುಗಳು ವಿಶಿಷ್ಟ ಚಿಕಿತ್ಸೆಕಗಳಿಗೆ ಮಣಿಯದೆ ಹೋಗುವ ಸಂದರ್ಭ ಉಂಟು. ಅಂಥ ಸಮಯದಲ್ಲಿ ತಕ್ಕ ಲಸಿಕೆಯೇ ಗತಿ.

ಕಾರಣಗಳು[ಬದಲಾಯಿಸಿ]

  1. ಹಿಮೋಲಿಟಿಕ್ ಸ್ಟ್ರೆಪ್ಟೊಕಾಕಸ್ಸಿನಿಂದ ಉಂಟಾದ ನ್ಯುಮೋನಿಯಕ್ಕೆ ಪ್ರಾರಂಭ ಕಾರಣ ಗಂಟಲು ನೋವು, ಸೋಂಕು ಸಾಮಾನ್ಯವಾಗಿ ಎರಡು ಕಡೆ ಪುಪ್ಫುಸಗಳ ಬುಡಗಳಿಗೂ ಹರಡಿ ಅಲ್ಲಿ ಕೀವುಗೂಡಬಹುದು. ಈ ತೀವ್ರರೋಗಕ್ಕೆ ಚಿಕಿತ್ಸೆ ಮಾಡದಿದ್ದಲ್ಲಿ ಸಾವು ಖಂಡಿತವಾದರೂ ಸಲ್ಛಮದ್ದುಗಳಿಗೂ, ಪೆನಿಸಿಲಿನ್ ಮುಂತಾದವನ್ನು ಪ್ರಯೋಗಿಸಿ ರೋಗಿಯನ್ನು ಉಳಿಸಬಹುದು. ಫ್ರೀಡ್ಲಾಂಡರನ ಬ್ಯಾಸಿಲಸ್ಸಿನ ಸೋಂಕಿನಿಂದ ಉದ್ಭವಿಸಿದ ನ್ಯುಮೋನಿಯ ಅಪರೂಪವಾದರೂ ಮಾರಕವಾಗಿ ಪರಿಣಮಿಸುವುದು ಉಂಟು. ಸಲ್ಛ ಮದ್ದುಗಳಿಗೂ ಪೆನಿಸಿಲಿನ್ನಿಗೂ ಈ ರೋಗಾಣುಗಳು ಜಗ್ಗುವುದಿಲ್ಲ. ಆದರೆ ಸ್ಟ್ರೆಪ್ಟೊಮೈಸಿನ್ನಿಗೆ ಮಣಿಯುತ್ತವೆ. ಜರೂರು ಸ್ಥಿತಿಯಲ್ಲಿ ರೋಗವನ್ನು ಪತ್ತೆಮಾಡಿ ಹೀಗೆ ಚಿಕಿತ್ಸಿವುದು ಕಷ್ಟ. ಚಿಕಿತ್ಸೆ ಇಲ್ಲದೆ ಕೂರುಹಂತದಿಂದ (ಅಕ್ಯೂಟ್‍ಸ್ಟೇಜ್) ಪಾರಾದವರಲ್ಲಿ ಮುಂದಿನ ಚಿಕಿತ್ಸೆಯಿಂದ ಪರಿಣಾಮ ಕಂಡುಬರುವುದಿಲ್ಲ. ಅವರ ಪುಪ್ಫುಸದ ರೋಗಗ್ರಸ್ತಭಾಗದಲ್ಲಿ ನಾರೆಳೆಗಳು ಕಂಡು ಬಂದು ಅವುಗಳ ಕುಗ್ಗುವಿಕೆಯಿಂದ ಅ ಭಾಗ ನಿಷ್ಕ್ರಿಯೆಗೊಳ್ಳುತ್ತದೆ. ಸ್ಟಫಿಲೊಕಾಕಸ್ಸಿನಿಂದ ಏಳುವ ನ್ಯುಮೋನಿಯ ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚು ಸಾಮಾನ್ಯ. ಶೀತ, ನೆಗಡಿ, ಕೆಮ್ಮು, ಗಂಟಲುರಿ ಮುಂತಾದ ಸ್ಥಿತಿಗಳಿಂದ ಪ್ರಾರಂಭವಾಗಿ ಸೋಂಕು ಫುಪ್ಫುಸಕ್ಕೆ ಹರಡುತ್ತದೆ. ಅ ವೇಳೆ ಚಳಿ ನಡುಕಜ್ವರ ಹಾಗೂ ಕೀವುಗೂಡಿದ ಕಫ ಇರುವುವು. ಪುಪ್ಫುಸಗಳಲ್ಲಿ ಕುರುಗಳುಂಟಾಗಿ ಎದೆಗೂಡಿನಲ್ಲಿ ಕೀವು ಸೇರುವುದು ಸಾಮಾನ್ಯ. ಸರಿಯಾದ ಸಲ್ಛ ಮದ್ದನೊಡನದ ಪೆನಿಸಿಲಿನ್ ಕೊಡುವುದು ಇದಕ್ಕೆ ಯುಕ್ತ ಚಿಕಿತ್ಸೆ. ಚಿಕಿತ್ಸೆ ಇಲ್ಲವಾದರೆ ಇಬ್ಬರಲ್ಲಿ ಒಬ್ಬನಿಗೆ ಇದು ಮಾರಕವಾಗಿ ಪರಿಣಮಿಸುತ್ತದೆ. ಪ್ಲೇಗ್ ರೋಗಾಣುವಿನಿಂದ ಉಂಟಾದ ನ್ಯುಮೋನಿಯ ತೀವ್ರ ಮಾರಕರೋಗ, ಕ್ಷಯ, ನೆರಡಿರೋಗ ಇವುಗಳ ಕಾರಣಗಳಾದ ಏಕಾಣುಗಳೂ ನ್ಯುಮೋನಿಯವನ್ನು ಉಂಟುಮಾಡಬಲ್ಲವು.
  2. ಇನ್‍ಫ್ಲೂಎನ್‍ಜಾ ವಿಷಾಣುವಿನಿಂದ ನ್ಯುಮೋನಿಯ ಉಂಟಾಗಬಹುದು. ಇನ್‍ಫ್ಲೂಎನ್‍ಜಾದ ವ್ಯಾಪಕ ಸಾಂಕ್ರಾಮಿಕಗಳಲ್ಲಿ (ಪ್ಯಾನ್‍ಡೆಮಿಕ್) ಹೀಗಾಗುವುದು ಸಾಮಾನ್ಯ. ಇನ್‍ಫ್ಲೂಎನ್‍ಜ ಜ್ವರ ಕಾದ ನಾಲ್ಕು ದಿವಸಗಳ ಬಳಿಕ ಫುಪ್ಫುಸಗಳಲ್ಲಿ ಉರಿಯೂತ ಕಂಡುಬರುತ್ತದೆ. ಈ ಸ್ಥಿತಿ ಮೊದಲಿನಿಂದಲೇ ಉಲ್ಬಣಿಸಿ ತೀವ್ರತರಗೊಂಡು ಮಾರಕವಾಗಿ ಪರಿಣಮಿಸುವ ಸಂದರ್ಭಗಳು ಅಪರೂಪವಲ್ಲ. ಇನ್‍ಫ್ಲೂಎನ್‍ಜಾ ವಿಷಾಣುವಿನೊಂದಿಗೆ ಅನೇಕ ಬಗೆಯ ಏಕಾಣುಗಳು ದ್ವಿತೀಯಕ ಕಾರಕಗಳಾಗಿದ್ದು ನ್ಯುಮೋನಿಯದ ಲಕ್ಷಣ ಆಯಾ ಏಕಾಣುಕೃತ ನ್ಯುಮೋನಿಯದ ವೈಶಿಷ್ಟ್ಯ ಉಳ್ಳದಾಗಿರುತ್ತದೆ. ಇಂಥ ನ್ಯುಮೋನಿಯದಲ್ಲಿ ತಳಮಳಕ್ಕಿಂತಲೂ ಹೆಚ್ಚಾಗಿ ಒಂದು ರೀತಿಯ ಉದಾಸೀನತೆ, ಉಸಿರು ಹತ್ತಿಹತ್ತಿ ಬರುವುದು (ಶ್ಯಾಲೊರ್ಯಾಪಿಡ್ ಬ್ರೀತಿಂಗ್), ಮುಖ ನೀಲಿಗಟ್ಟುವುದು ಕಂಡುಬರುತ್ತವೆ. ಎಷ್ಟೊ ವೇಳೆ ರೋಗ ಉಲ್ಬಣಿಸಿದರೂ ಜ್ವರ ಕೊಂಚವೇ ಇರಬಹುದು. ರೋಗದಿಂದ ಮೃತರಾಗುವವರ ಸಂಖ್ಯೆ ಹೆಚ್ಚೇ ಆಗಿದ್ದರೂ (30%-40%) ಇದು ದೇಶ ಕಾಲ ಸಂದರ್ಭಗಳಿಗೆ ಅನುಸಾರವಾಗಿರುವುದು. ಗುಣವಾದವರಲ್ಲಿ ಜ್ವರ 10 ದಿವಸಗಳಾದ ಬಳಿಕ ನಿಂತರೂ ದುರ್ಬಲತೆ ಬಲು ಕಾಲ ಮುಂದುವರಿಯುವುದು.
  3. ಅಪರೂಪವಾಗಿ ದಡಾರದ ವಿಷಕಣಗಳಿಂದಲೂ ನ್ಯುಮೋನಿಯ ಉದ್ಭವಿಸಬಹುದು. ಸಿಟ್ಟಕೋಸಿಸ್ ಎಂಬ ಗಿಳಿಯ ನ್ಯುಮೋನಿಯದ ಸೋಂಕೂ ಮಾನವನಿಗೆ ಹತ್ತಿ ಅನೇಕ ವೇಳೆ ಮಾರಕ ನ್ಯುಮೋನಿಯವಾಗುವುದು ಉಂಟು. ಇದಲ್ಲದೆ ಅನೇಕ ಸಣ್ಣಪುಟ್ಟ ಅವ್ಯಕ್ತ ಸಾಂಕ್ರಾಮಿಕ ಸಂದರ್ಭಗಳಲ್ಲಿ ಪುಪ್ಫುಸಗಳಲ್ಲಿ ನ್ಯುಮೋನಿಯ ಮಾದರಿ ಉರಿಯೂತ ಉಂಟಾಗಿರುವುದನ್ನು ಎಕ್ಸ್‍ಕಿರಣ ಪರೀಕ್ಷೆಯಿಂದ ಅರಿಯಬಹುದು. ಮಲೇರಿಯದ ವಿಷಾಣು, ಆಮಶಂಕೆಯನ್ನು ಉಂಟುಮಾಡುವ ಅಮೀಬ, ಜಂತುಹುಳು, ಬೂಷ್ಟು ಇವುಗಳ ಸೋಂಕು ಉಂಟಾದಾಗ ನ್ಯುಮೋನಿಯ ಉದ್ಭವಿಸಬಹುದು. ದೂಳು, ಕೆರಳಿಕೆಯನ್ನು ಉಂಟುಮಾಡುವ ರಾಸಾಯನಿಕಗಳ ಬಾಷ್ಪದಂಥ ವಿಷಾನಿಲಗಳು, ದೇಹಕ್ಕೆ ಒಗ್ಗದ ಹೊರವಸ್ತುಕಣಗಳು ಇವುಗಳ ಉಸಿರಾಟದಿಂದಲೂ ನ್ಯುಮೋನಿಯ ಉಂಟಾಗಬಹುದು. ಇಂಥ ಸಂದರ್ಭಗಳಲ್ಲಿ ರೋಗನಿದಾನ ಸುಲಭವಲ್ಲ.

ವರ್ಗೀರಣಕ್ಕೆ ಒಳಪಡದ ನ್ಯುಮೋನಿಯ[ಬದಲಾಯಿಸಿ]

ಇವಲ್ಲದೆ ವರ್ಗೀ ಕರಿಸಲಾಗದ ಬಗೆಬಗೆಯ ಕಾರಣಗಳಿಂದ ಏಳುವ ನ್ಯುಮೋನಿಯವೂ ಉಂಟು. ಇವುಗಳ ಪೈಕಿ ಅನೇಕವುಗಳಲ್ಲಿ ಪುಪ್ಫುಸದ ರೋಗಗ್ರಸ್ತ ಭಾಗ ಊದಿ ಕೈಬಿಟ್ಟ ಬಲೂನಿನಂತೆ ಕುಗ್ಗಿಹೋಗುತ್ತದೆ. ಇದಕ್ಕೆ ಅಟಿಲೇ ಕ್ಟೇಸಿಸ್ ಎಂದು ಹೆಸರು. ಪುಪ್ಫುಸದ ಒಂದು ಭಾಗಕ್ಕೆ ಪೂರೈಕೆ ಆಗುವ ಶ್ವಾಶನಾಳದ ಕವಲಿನಲ್ಲಿ ಉದ್ಭವವಾದ ಗಟ್ಟಿಲೋಳೆಯಿಂದ ಆ ಕವಲು ಅಡಚಣೆಗೊಂಡಂತಾಗಿ ಉಸಿರಾಡಿದಾಗ ವಾಯು ಪುಪ್ಫುಸದ ಆ ಭಾಗಕ್ಕೆ ತಲುಪದಿರುವುದು ಮತ್ತು ಅದರಲ್ಲಿ ಮೊದಲೇ ಇದ್ದ ವಾಯು ಶೀಘ್ರದಲ್ಲೇ ಬಳಸಲ್ಟಟ್ಟು ಪುಪ್ಫುಸದ ಆ ಭಾಗದಲ್ಲಿ ವಾಯುವೇ ಇಲ್ಲದಂತೆ ಆಗುವುದು. ಅಟಿಲೆಕ್ಟೇಸಿಸ್ಸಿಗೆ ಕಾರಣ. ಫುಪ್ಫುಸದ ಈ ಭಾಗದಲ್ಲಿ ತಾನಾಗಿಯೇ ಅಥವಾ ಸೋಂಕಿನಿಂದ ಉರಿಯೂತ ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ಫುಪ್ಫುಸಗಳ ಎಕ್ಸ್ ಕಿರಣ ಪರೀಕ್ಷೆಯಿಂದ ಮಾತ್ರ ತಿಳಿಯಬಹುದಾಗಿದೆ. ಆದರೆ ಉರಿಯೂತವಾಗಲಿ ಸೋಂಕಾಗಲಿ ಇಲ್ಲಿ ಪ್ರಧಾನವಾಗಿ ಗಣಿಸಬೇಕಾದ ಸ್ಥಿತಿ ಅಲ್ಲ. ಉಸಿರಾಟದ ತಾಂತ್ರಿಕತೆಗೆ ಧಕ್ಕೆ ಆಗಿರುವ ಈ ಸ್ಥಿತಿಯಲ್ಲಿ ಉಸಿರಾಟ ಸೌಲಭ್ಯ ಪುನಃ ದೊರೆಯುವಂತೆಯೂ ಅಡಚಣೆ ಮಾಡಿರುವ ಲೋಳೆ ದ್ರವವಾಗಿ ಹೊರಬರುವಂತೆಯೂ ಚಿಕಿತ್ಸೆ ಮಾಡಬೇಕಾಗುತ್ತದೆ. ಇಂಥ ಸ್ಥಿತಿ ಈ ಕೆಳಗಿನ ಮೂರು ಸಂದರ್ಭಗಳಲ್ಲಿ ಕಾಣಬರುವುದು:

  1. ದೀರ್ಘಕಾಲಿಕ ಹಾಗೂ ದುರ್ಬಲಗೊಳಿಸುವ ರೋಗಗಳಿಂದ ಹಾಸಿಗೆ ಹಿಡಿದಿರುವವರಲ್ಲಿ ಪುಪ್ಫುಸಗಳ ತಳಭಾಗಗಳಲ್ಲಿ ಆರಕ್ತತೆ ಉಂಟಾಗಿ (ಹೈಪೊಸ್ಟ್ಯಾಟಿಕ್ ಕನ್‍ಜೆಶ್ಯನ್) ಉರಿಯೂತವೆದ್ದು ಅಟಿಲೆಕ್ಟೇಸಿಸ್ ಕಂಡು ಬರಬಹುದು.
  2. ಯಾವುದೇ ಶಸ್ತ್ರಕ್ರಿಯೆ ಆದಮೇಲೆ ಕಾರಣಾಂತರದಿಂದ ಪುಪ್ಫುಸದ ವ್ಯಾಪಕ ಭಾಗಗಳಲ್ಲಿ ರಕ್ತಗರಣೆ ಕಟ್ಟಿಕೊಂಡು ಕೊನೆಗೆ ಅಲ್ಲೆಲ್ಲ ಅಟಿಲೆಕ್ಟೇಸಿಸ್ ಕಂಡುಬರಬಹುದು.
  3. ನೆಗಡಿ, ಶೀತ, ಕೆಮ್ಮು ಮುಂತಾದವುಗಳಿಂದ ಶ್ವಾಸಮಂಡಲದ ಮೇಲು ಭಾಗದಲ್ಲಿ ಕಂಡುಬರುವ ರೋಗಾವಸ್ಥೆ ಯಾವುದೇ ಒಂದು ಶ್ವಾಸನಾಳಕ್ಕೆ ಹರಡಿ ಅಲ್ಲಿ ಅಡಚಣೆಯನ್ನು ಉಂಟುಮಾಡಿ ಆ ಭಾಗದ ಫುಪ್ಫುಸದಲ್ಲಿ ಅಟಿಲೆಕ್ಟೇಸಿಸ್ ಕಂಡು ಬರುವಂತೆ ಮಾಡುವುದು.

ಬಾಹ್ಯ ಸಂಪರ್ಕ[ಬದಲಾಯಿಸಿ]

  1. http://www.who.int/life-course/news/events/2017-world-pneumonia-day/en/

ಉಲ್ಲೇಖ[ಬದಲಾಯಿಸಿ]

  1. https://web.archive.org/web/20160206141327/http://www.nhlbi.nih.gov/health/health-topics/topics/pnu/names
  2. https://books.google.co.in/books?id=4Xlyaipv3dIC&pg=PA242&redir_esc=y#v=onepage&q&f=false
  3. https://www.nhlbi.nih.gov/health/health-topics/topics/pnu/atrisk
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: