ವಿಷಯಕ್ಕೆ ಹೋಗು

ಖನಿಜ ನಿಕ್ಷೇಪಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖನಿಜ ನಿಕ್ಷೇಪಗಳು ಎಂದರೆ ಶಿಲೆಯಲ್ಲಿ ಸಾಕಷ್ಟು ಮೊತ್ತದಲ್ಲಿ ಉಪಯುಕ್ತ ಖನಿಜವಿದ್ದು ಹೆಚ್ಚು ಶ್ರಮವಿಲ್ಲದೆ ಅದನ್ನು ಒಪ್ಪಮಾಡಿ ಪಡೆಯಲು ಸಾಧ್ಯವಾಗುವ ಸಂಚಯನಗಳು (ಮಿನರಲ್ ಡಿಪಾಸಿಟ್ಸ್).[]

ವರ್ಗೀಕರಣ

[ಬದಲಾಯಿಸಿ]

ಇಂಥ ಖನಿಜ ಲೋಹ ಖನಿಜವಾಗಿಯೋ ಅಲೋಹ ಖನಿಜವಾಗಿಯೋ ಇರಬಹುದು. ಪ್ರಕೃತಿಯಲ್ಲಿ ಉಂಟಾಗುವ ಕೆಲವು ಚಟುವಟಿಕೆಗಳಿಂದ ಅನುಕೂಲಕರವಾದ ಸನ್ನಿವೇಶವುಂಟಾಗಿ ಶಿಲೆಯಲ್ಲಿನ ಖನಿಜ ಸಾರೀಕರಣಗೊಂಡು ಲಾಭದಾಯಕವಾದ ನಿಕ್ಷೇಪವೆನಿಸುತ್ತದೆ. ಈ ಕ್ರಿಯೆ ರಾಸಾಯನಿಕ ಇಲ್ಲವೇ ಭೌತ ಇಲ್ಲವೇ ಯಾಂತ್ರಿಕ ರೀತಿಯದಾಗಿರಬಹುದು. ಅಲ್ಲದೆ ಶಿಲೆಯ ಜನನ ಕಾಲದಲ್ಲೋ ಬಳಿಕವೋ ಈ ಬಗೆಯ ಕಾರ್ಯಾಚರಣೆಗಳು ತಲೆದೋರಬಹುದು. ಹೀಗೆ ನಿಕ್ಷೇಪಗಳು ಜನಿಸಿದ ಕಾಲ ಮತ್ತು ರೀತಿಗೆ ಅನುಗುಣವಾಗಿ ಅವನ್ನು ಸಹಜನ್ಯ (ಸಿಂಜೆನೆಟಿಕ್) ನಿಕ್ಷೇಪಗಳೆಂದೂ, ಅನುಜನ್ಯ (ಎಪಿಜೆನೆಟಿಕ್) ನಿಕ್ಷೇಪಗಳೆಂದೂ ವರ್ಗೀಕರಿಸಲಾಗಿದೆ. ಮಾತೃ ಶಿಲಾದ್ರವದ ಸ್ಛಟಿಕೀಕರಣದಿಂದಾದ ಖನಿಜ ಸಂಕೀರ್ಣಗಳು (mineral complex), ಅಗ್ನಿಶಿಲೆಗಳಲ್ಲಿರುವ ಪೆಗ್ಮಟೈಟ್ ಸ್ವರೂಪಗಳು, ಪವನ (ಎಲೂವಿಯಲ್) ನಿಕ್ಷೇಪಗಳು, ಮೆಕ್ಕಲು ನಿಕ್ಷೇಪಗಳು, ಶೇಷ ನಿಕ್ಷೇಪಗಳು (residual deposits), ಇಮರು ನಿಕ್ಷೇಪಗಳು (evaporite deposits) ಮುಂತಾದವನ್ನು ಮೊದಲ ವರ್ಗದಲ್ಲೂ, ಕಾವು ನೀರಿನಿಂದಾದ (hydrothermal) ಎಳೆಗಳು, ಕಾಯಾಂತರ ನಿಕ್ಷೇಪಗಳು, ಸಂಸ್ಪರ್ಶ ರೂಪಾಂತರ ನಿಕ್ಷೇಪಗಳು (contact metamorphism deposits), ಹಲವು ಪೆಗ್ಮಟೈಟ್ ಡೈಕ್ ಮತ್ತು ಸಿಲ್ ಮುಂತಾದವನ್ನು ಎರಡನೆಯ ವರ್ಗದಲ್ಲೂ ಅಳವಡಿಸಲಾಗಿದೆ. ಆದರೆ ಕೆಲವು ನಿಕ್ಷೇಪಗಳ, ಅದರಲ್ಲೂ ಹೆಚ್ಚಿನ ರೂಪಾಂತರಕ್ಕೆ ಒಳಗಾಗಿರುವ ಖನಿಜ ನಿಕ್ಷೇಪಗಳ ಮೂಲ ಸ್ವರೂಪವನ್ನು ಪತ್ತೆ ಮಾಡುವುದು ಬಹು ಕಷ್ಟ. ಈಚಿನ ವರ್ಷಗಳಲ್ಲಿ ಈ ನಿಕ್ಷೇಪಗಳಲ್ಲಿ ಹುದುಗಿರುವ ಐಸೊಟೋಪುಗಳ ಪರಿಮಾಣಗಳನ್ನು ನಿರ್ಧರಿಸುವುದರ ಮೂಲಕ ಅವುಗಳ ಜನನ ಸಮಸ್ಯೆಗಳನ್ನು ಅರಿಯುವ ಪ್ರಯತ್ನಗಳು ನಡೆದಿವೆ.

ಖನಿಜ ನಿಕ್ಷೇಪಗಳು ತಳೆದಿರುವ ಸ್ವರೂಪಗಳು ಹಲವಾರು. ಇವು ಬಹುಮಟ್ಟಿಗೆ ಶಿಲೆಗಳ ರಚನೆ ಹಾಗೂ ರಾಸಾಯನಿಕ ಸಂಯೋಜನೆಗಳಿಂದ ಪ್ರಭಾವಿತಗೊಂಡಿರುತ್ತವೆ. ನಿಕ್ಷೇಪಗಳಿಗೂ, ನಾಡಶಿಲೆಗಳಿಗೂ ಇರುವ ಸಂಬಂಧವನ್ನು ಆಧರಿಸಿ ಮೂರು ಪ್ರಮುಖ ರೀತಿಯ ಸ್ವರೂಪಗಳನ್ನು ಗುರುತಿಸಲಾಗಿದೆ. ಇವು:

  1. ಸಂಗತ (ಕನ್ಕಾರ್ಡೆಂಟ್). ಸಂಗತ ಸ್ವರೂಪಗಳು ಸಾಮಾನ್ಯವಾಗಿ ನಾಡಶಿಲೆಯ ರಚನೆಯನ್ನು ಅನುಸರಿಸಿರುತ್ತವೆ. ಇವುಗಳಲ್ಲಿ ಮುಖ್ಯವಾದವು ಬೃಹತ್ ಫಲಕಗಳು (large sheets), ಸ್ತರೀಸ್ವರೂಪದ ಸಿರಗಳು (veins) ಹಾಗೂ ಎಳೆಗಳು, ಕುದುರೆ ಜೀನಿನಾಕಾರದ ಸ್ವರೂಪಗಳು, ಮಸೂರಾಕಾರ ಮತ್ತು ತಟ್ಟೆಯಂತೆ ಚಪ್ಪಟೆಯಾಗಿರುವ ನಿಕ್ಷೇಪಗಳು.
  2. ಅಸಂಗತ (ಡಿಸ್ಕಾರ್ಡೆಂಟ್). ಅಸಂಗತ ಸ್ವರೂಪಗಳು ನಾಡಶಿಲೆಯ ರಚನೆಯನ್ನು ಅಡ್ಡಹಾಯುತ್ತವೆ. ಎಳೆಗಳು, ನಳಿಕೆಗಳು, ಸಿರಗಳು, ಇವುಗಳಲ್ಲಿ ಮುಖ್ಯವಾದವು.
  3. ಸಂಸ್ಪರ್ಶ (ಕಾಂಡೇಕ್ಟ್) ಸ್ವರೂಪಗಳು. ಸಂಸ್ಪರ್ಶ ಸ್ವರೂಪಗಳಲ್ಲಿ ಫಲಕಗಳು, ಸ್ತರಗಳು, ಹಾಗೂ ಮಟ್ಟಸವಾದ ಮಸೂರಾಕಾರದ ಸ್ವರೂಪಗಳನ್ನು ಗುರುತಿಸಬಹುದು.

ಖನಿಜ ನಿಕ್ಷೇಪಗಳ ಉತ್ಪತ್ತಿಯಲ್ಲಿ ಸಹ ನಾಡಶಿಲೆಗಳ ರಚನೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಖನಿಜಗಳ ಸಾರೀಕರಣದಲ್ಲಂತೂ ಇವುಗಳ ಪ್ರಭಾವವನ್ನು ಕಡೆಗಣಿಸುವಂತಿಲ್ಲ. ಕಾಯಾಂತರದಿಂದುಟಾಗುವ ನಿಕ್ಷೇಪಗಳಲ್ಲಿ (metamorphic deposits) ಜನ್ಮಜಾತ ಶಿಲೆಯ ರಚನೆ ಬಹು ಪ್ರಧಾನವಾದ ಅಂಶ. ಖನಿಜ ದ್ರವಗಳ ಸ್ರವಿಸುವಿಕೆ ಇದನ್ನೇ ಅವಲಂಬಿಸಿದೆ. ಈ ಕಾರಣದಿಂದ ಶಿಲಾಬಿರುಕುಗಳು, ಸೀಳುಗಳು, ಕುಳಿಗಳು, ಸ್ತರಭಂಗಗಳು, ಅಂತರಸ್ತರ ಜಾಡುಗಳು, ಮಡಿಕೆಗಳು, ಈ ಬಗೆಯ ಶಿಲಾರಚನೆಗಳಲ್ಲಿ ಉತ್ತಮ ನಿಕ್ಷೇಪಗಳನ್ನು ಕಾಣಬಹುದು.

ಮಾತೃಶಿಲಾದ್ರವದಿಂದ ಉಂಟಾದ ನಿಕ್ಷೇಪಗಳು: ಮಾತೃ ಶಿಲಾದ್ರವ ಎಲ್ಲ ಖನಿಜಗಳಿಗೂ ಮೂಲ. ಇದರಲ್ಲಿ ಅಡಕವಾಗಿರುವ ಖನಿಜಾಂಶಗಳು ಶಿಲಾದ್ರವ ಆರಿ ತಣ್ಣಗಾಗುತ್ತಿರುವ ವಿವಿಧ ಹಂತಗಳಲ್ಲಿ ಬೇರ್ಪಟ್ಟು ಸೂಕ್ತ ಸ್ಥಳಗಳಲ್ಲಿ ಶೇಖರಗೊಂಡು ನಿಕ್ಷೇಪಗಳೆನಿಸುತ್ತವೆ. ಭೂಮಿಯ ಹೊರಚಿಪ್ಪಿನಲ್ಲಿರುವ ವಿವಿಧ ಖನಿಜಗಳ ಸರಾಸರಿ ಮೊತ್ತದೊಡನೆ ನಿಕ್ಷೇಪದಲ್ಲಿರುವ ಖನಿಜಗಳ ಮೊತ್ತವನ್ನು ಹೋಲಿಸಿದಲ್ಲಿ ಸಾರೀಕರಣ ಕ್ರಿಯೆಯ ಮಟ್ಟವನ್ನು ಊಹಿಸಬಹುದು.

ಸಾರೀಕರಣ ಕ್ರಿಯೆಯಲ್ಲಿ ಮಾತೃಶಿಲಾದ್ರವದ ವ್ಯತ್ಯಾಸಾತ್ಮಕ ಕ್ರಿಯೆ ಹಾಗೂ ಅನಿಲ ಕಾರ್ಯಚರಣೆ ಬಹು ಪ್ರಧಾನವಾದವು. ಅನಿಲಗಳು ಮಾತೃ ದ್ರವದಲ್ಲಿರುವ ಲೋಹಾಂಶಗಳನ್ನು ತಮ್ಮೊಡನೆ ಹೊತ್ತು ಹೊರತೆಗೆದು ಅಕ್ಕಪಕ್ಕದ ಶಿಲೆಗಳಲ್ಲಿ ಶೇಖರಿಸುತ್ತವೆ. ಅಲ್ಪ ಸಿಲಿಕಾಂಶದಿಂದ ಕೂಡಿರುವ ಅತಿಬೇಸಿಕ್ (ultrabasic magma) ಮತ್ತು ಬೇಸಿಕ್ ಶಿಲಾದ್ರವಗಳು ಸ್ಛಟಿಕೀಕರಣಗೊಂಡಾಗ ಲೋಹ ಸಂಬಂಧವಾದ ಆಕ್ಸೈಡುಗಳು ಮತ್ತು ಸಲ್ಫೈಡುಗಳು ಅವುಗಳಿಂದ ಬೇರ್ಪಟ್ಟು ಗುರುತ್ವಾಕರ್ಷಣೆಗೊಳಗಾಗಿ ಪದರುಗಳಾಗಿಯೋ, ವಿಶಿಷ್ಟ ಆಕಾರವಿಲ್ಲದ ಮುದ್ದೆಗಳಾಗಿಯೋ ಶಿಲೆಯ ನಾನಾ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅನೇಕ ಶಿಲಾ ಸ್ವರೂಪಗಳಲ್ಲಿ ಕಾಣಬರುವ ನಿಕಲ್, ತಾಮ್ರ, ಪ್ಲಾಟಿನಂ, ಟೈಟಾನಿಫೆರಸ್ ಮ್ಯಾಗ್ನಟೈಟ್ ಮತ್ತು ಕ್ರೋಮೈಟ್ ಪದರಗಳು, ಸ್ತರಗಳು ಹೀಗೆ ಉಂಟಾದ ನಿಕ್ಷೇಪಗಳು. ಅನೇಕ ತಾಮ್ರ-ನಿಕಲ್-ಕಬ್ಬಿಣ ಸಲ್ಫೈಡುಗಳ ಬೃಹತ್ ನಿಕ್ಷೇಪಗಳ ಜನನ ಅಗ್ನಿಶಿಲೆಗಳೊಡನೆ ನಿಕಟ ಸಂಬಂಧವನ್ನು ಹೊಂದಿರುತ್ತದೆ. ಅಧಿಕ ಸಿಲಿಕಾಂಶದ ಕ್ಷಾರೀಯ ಶಿಲಾದ್ರವಗಳ ಆರುವಿಕೆ ಮುಂದುವರಿದಂತೆ ಹೆಚ್ಚು ಖನಿಜದ ಹರಳುಗಳು ಹೊರ ಬಂದು ಶೇಷದ್ರವಗಳಲ್ಲಿ CO2, B, Fl, Cl, H2O ಮತ್ತು S ಮೊದಲಾದ ರಾಸಾಯನಿಕ ವಸ್ತುಗಳ ಪ್ರಮಾಣವೂ ಹೆಚ್ಚುತ್ತ ಹೋಗುತ್ತದೆ. ಕೆಲವು ಅಗ್ನಿಶಿಲೆಗಳಲ್ಲಿ ಈ ತೆರನಾದ ಖನಿಜಕಾರಕಗಳು ಆಧಿಕ ಮೊತ್ತದಲ್ಲಿರುವ ಪೆಗ್ಮಟೈಟ್ ಸಿರಗಳು ಹಾಗೂ ಮಜ್ಜೆಗಳಿಂದ ಕೂಡಿರುವ ಜಾಡುಗಳನ್ನೇ ನೋಡಬಹುದು. ಮತ್ತೆ ಕೆಲವು ವೇಳೆ ಸಾಕಷ್ಟು ನೀರು ನೀರಾಗಿರುವ ಪೆಗ್ಮಟೈಟ್ ದ್ರವ ಅಕ್ಕಪಕ್ಕದ ನಾಡಶಿಲೆಗಳಲ್ಲಿ ಸುಲಭವಾಗಿ ಪ್ರವಹಿಸಿ ಮಸೂರಾಕಾರದ ಡೈಕ್ ಮತ್ತು ಸಿಲ್‌ಗಳನ್ನು ರೂಪಿಸುತ್ತದೆ. ಲಿಥಿಯಂ, ಟಾಂಟಲಮ್, ಬೆರಿಲಿಯಂ, ಸೀಸಿಯಂ, ಯುರೇನಿಯಮ್ ಮುಂತಾದ ಅಣು ಖನಿಜಗಳು, ಮೈಕ (ಅಭ್ರಕ), ಟೂರ್ಮಲೀನ್, ರತ್ನಪಡಿ ಖನಿಜಗಳು, ಪೊಟ್ಯಾಸಿಯಂ ಫೆಲ್ಡ್‌ಸ್ಪಾರ್ (ಸುದ್ದೆಮಣ್ಣಿನ ಮೂಲ) ಮತ್ತು ಕೆಲವು ಅಪರೂಪ ಖನಿಜಗಳ ಭಂಡಾರಗಳೇ ಹೀಗುಂಟಾಗುವ ಪೆಗ್ಮಟೈಟುಗಳು.

ಕಾವುನೀರು ನಿಕ್ಷೇಪಗಳು: ಮಧ್ಯವರ್ತಿ ಮಿತಸಿಲಿಕಾಂಶದಿಂದ ಕೂಡಿದ ಶಿಲಾದ್ರವಗಳು ಸ್ಛಟಿಕೀಕರಣಗೊಳ್ಳುವ ಸಮಯದಲ್ಲಿ ಖನಿಜಪೂರಿತ ದ್ರವಗಳು ಮಾತೃದ್ರವದ ಕುಹರದಿಂದ ಆಗಾಗ ಅಥವಾ ನಿರಂತರವಾಗಿ ಹೊರಹೊಮ್ಮುತ್ತಿರುವ ಸಂದರ್ಭಗಳಲ್ಲಿ ತಲೆದೋರುವ ಖನಿಜೀಕರಣ ಕ್ರಿಯೆಯ (ಮಿನರಲೈಜ಼ೇಷನ್) ಸ್ವರೂಪ ಮತ್ತೊಂದು ತೆರನಾದುದು. ಈ ವೇಳೆಗಾಗಲೇ ರೂಪುಗೊಂಡಿರುವ ಶಿಲಾಸ್ವರೂಪದ ಹೊರವಲಯ ಹಾಗೂ ಅದರ ಸುತ್ತಮುತ್ತಲ ನಾಡಶಿಲೆಗಳಲ್ಲಿರುವ ರಂಧ್ರ, ಬಿರುಕು, ಸೀಳು, ಸ್ತರಭಂಗ ಜಾಡುಗಳಲ್ಲಿ ಮಾತೃದ್ರವದಿಂದ ಹೊರಹೊಮ್ಮುವ ಖನಿಜಪೂರಿತ ದ್ರವಗಳು ಸ್ರವಿಸಿ ಕ್ರಮೇಣ ಕಡಿಮೆ ಒತ್ತಡವಿರುವ ಸ್ತರಗಳತ್ತ ಪ್ರವಹಿಸುತ್ತವೆ. ಈ ಬಗೆಯ ಕಾವುನೀರಿನ (ಹೈಡ್ರೊಥರ್ಮಲ್) ಘಟಕಗಳಿಂದ ಪ್ರಕ್ಷೇಪಿತ ಹೊಂದುವ ಅಮೂಲ್ಯ ಖನಿಜಗಳ ಶೇಖರಣೆ ಇತರ ಸನ್ನಿವೇಶ ಲಕ್ಷಣಗಳನ್ನೂ ಅವಲಂಬಿಸಿದೆ. ದ್ರವಗಳಲ್ಲಿ ಇರಬಹುದಾದ ಸರಳವಾದ ಒತ್ತಡ-ಉಷ್ಣ ಸನ್ನಿವೇಶಗಳು ಹಾಗೂ ಅವು ಪ್ರವಹಿಸುವ ಶಿಲಾದ್ವಾರಗಳ ಭಿತ್ತಿಶಿಲೆಗಳೊಡನೆ ಅವುಗಳ ಕ್ಲಿಷ್ಟ ರೀತಿಯ ಪ್ರತಿಕ್ರಿಯೆಗಳು ಖನಿಜ ನಿಕ್ಷೇಪಗಳ ಜನನದಲ್ಲಿ ಬಹು ಮುಖ್ಯವೆನಿಸಿವೆ. ಹೀಗೆಯೇ ಬೃಹತ್ ರೂಪಾಂತರ ಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ತಲೆದೋರಬಹುದಾದ ಅಸಮತೋಲನಗಳು ಶಿಲೆಗಳಲ್ಲಿರುವ ಮಿತಸ್ಥಾಯಿ ಖನಿಜಗಳನ್ನು ವಿಮುಕ್ತಗೊಳಿಸುತ್ತವೆ. ಹೀಗೆ ಹೊರಬಿದ್ದ ಖನಿಜಾಂಶಗಳು ಶಿಲೆಯಲ್ಲಿ ಹುದುಗಿರುವ ದ್ರವದೊಡನೆ ವಿಲೀನಗೊಂಡು ಸೂಕ್ತ ಸನ್ನಿವೇಶಗಳಲ್ಲಿ ಪ್ರಕ್ಷೇಪಿತಗೊಂಡು ಖನಿಜ ನಿಕ್ಷೇಪಗಳಿಗೆ ಕಾರಣವೆನಿಸಬಹುದು. ಈ ಬಗೆಯ ದ್ರವಗಳನ್ನು ಮೂಲದ್ರವದಿಂದ ಹೊಮ್ಮುವ ಕಾವುನೀರಿನ ದ್ರವಗಳೊಡನೆ ಬೇರ್ಪಡಿಸಲು ಸಾಧ್ಯವಿಲ್ಲ.

ಭಾರ ಲೋಹಗಳ ಜನನ: ಕಾವುನೀರಿನಿಂದ ಉಂಟಾಗುವ ನಿಕ್ಷೇಪಗಳಲ್ಲಿರುವ ಭಾರ ಲೋಹಗಳ ಜನನದ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಎಷ್ಟರ ಮಟ್ಟಿಗೆ ಇವು ಮಾತೃದ್ರವ ಮೂಲವಾದವು ಅಥವಾ ಯಾವ ಮೊತ್ತದಲ್ಲಿ ಅಕ್ಕಪಕ್ಕ ಶಿಲೆಗಳೊಡನೆ ನಡೆದ ಕಾರ್ಯಾಚರಣೆಯಿಂದುಂಟಾದವು ಎಂಬೀ ಅಂಶಗಳನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕೆಲವು ಖನಿಜ ನಿಕ್ಷೇಪಗಳಿಗೂ ಅವು ಸಾಮಾನ್ಯವಾಗಿ ಹುದುಗಿರುವ ನಾಡಶಿಲೆಗಳ ಭಿತ್ತಿಗಳಿಗೂ ಇರುವ ನಿಕಟ ಸಂಬಂಧದ ಆಧಾರದ ಮೇಲೆ ಮೂಲಸ್ತರ (ಸೋರ್ಸ್ ಬೆಡ್) ತತ್ತ್ವವನ್ನು ಪ್ರತಿಪಾದಿಸಲಾಗಿದೆ. ಹಸಿರು ಶಿಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕ್ವಾರ್ಟ್ಸ್-ಕಾರ್ಬೊನೇಟ್-ಬೋರ್ನೈಟ್ ಎಳೆಗಳು ಇದಕ್ಕೆ ಉತ್ತಮ ಉದಾಹರಣೆ. ಬೆಸಾಲ್ಟ್ ಲಾವಸ್ತರಗಳ ರೂಪಾಂತರಕ್ಕೂ, ಇವುಗಳ ಜನನಕ್ಕೂ ನಿಕಟ ಸಂಬಂಧವನ್ನು ಕಲ್ಪಿಸಲಾಗಿದೆ. ಹೀಗೆಯೇ ಬೆಸಾಲ್ಟ್-ಆಂಡಿಸೈಟ್ ಲಾವಗಳಿಗೆ ಸಂಬಂಧಿಸಿದ ಹಾಗೆ ಕ್ವಾರ್ಟ್ಸ್-ಪೈರೈಟ್-ಪಿರ‍್ಹೊಟೈಟ್-ಚಾಲ್ಕೊಪೈರೈಟ್-ಆರ್ಸಿನೊಪೈರೈಟ್-ಚಿನ್ನ ಈ ಖನಿಜಗಳ ಎಳೆಗಳು ಜನಿಸಿರಬಹುದು.

ವಿವಿಧ ಖನಿಜಗಳ ಸ್ಥಿರತೆ ಮತ್ತು ಖನಿಜ ಸಮೂಹಗಳ ಆಧಾರದ ಮೇಲೆ ಉಂಟಾಗಿರುವ ಖನಿಜ ವಲಯಗಳು ಒಂದು ಬಗೆಯ ಆದರೆ ಅಷ್ಟು ನಿಖರವಲ್ಲದ ಭೂ ಉಷ್ಣಮಾಪಿಗಳು (ಜಿಯಲಾಜಿಕಲ್ ಥರ್ಮೋಮೀಟರ್ಸ್) ಎನಿಸಿವೆ. ಇವು ಕಾವುನೀರಿನಿಂದಾದ ನಿಕ್ಷೇಪಗಳ ಜನನಕ್ಕೆ ಸಂಬಂಧಿಸಿದ ಉಷ್ಣತೆ ಹಾಗೂ ಒತ್ತಡಗಳನ್ನು ಸೂಚಿಸುತ್ತವೆ. ಅಂತಸ್ಸರಣಗಳ ಅಕ್ಕಪಕ್ಕದ ಭಿತ್ತಿ ಶಿಲಾವಲಯಗಳು ಹಾಗೂ ಅವುಗಳಿಗೆ ಅತ್ಯಂತ ಸಮೀಪವಾಗಿರುವ ನಾಡಶಿಲೆಗಳಲ್ಲಿ ಅಧಿಕ ಉಷ್ಣತೆಯಿಂದಾಗುವ ಲಕ್ಷಣಗಳನ್ನು ನಿರ್ದಿಷ್ಟವಾಗಿ ಗುರುತಿಸಬಹುದು. ಈ ಕಾರಣದಿಂದಲೇ ಅಧಿಕ ಉಷ್ಣತೆಯ ಕ್ವಾರ್ಟ್ಸ್ ಪ್ರಭೇದದ ಎಳೆಗಳನ್ನು ನಾಡಶಿಲೆಯ ಬಿರುಕುಗಳಲ್ಲಿ ನೋಡಲು ಸಾಧ್ಯ. ಅಲ್ಲದೆ ಅಕ್ಕಪಕ್ಕದ ಶಿಲೆಗಳಲ್ಲಿ ಗ್ರೀಸೆನೀಕರಣದ (greisenization) ಪ್ರಭಾವವನ್ನು ಕೂಡ ಸುಲಭವಾಗಿ ಗುರುತಿಸಬಹುದು. ಈ ಕ್ರಿಯೆಯಿಂದಾದ ಫೆಲ್ಡ್‌ಸ್ಪಾರುಗಳು, ಅಭ್ರಕ, ಟೋಪಾಜ಼್, ಕ್ಯಾಸ್ಸಿಟರೈಟ್, ಷೀಲೈಟ್, ವುಲ್ಫ್ರಮೈಟ್, ಬೆರಿಲ್, ಮಾಲಿಬ್ಡನೈಟ್, ಬಿಸ್ಮತ್ ಮತ್ತು ಬಿಸ್ಮತಿನೈಟ್ ಮೊದಲಾದ ಖನಿಜ ಸಮೂಹಗಳು ಕಾಣಬರುವುದು ಬಹು ಸಾಮಾನ್ಯ.

ಅನೇಕ ಸಂದರ್ಭಗಳಲ್ಲಿ ಸಂಸ್ಪರ್ಶ ರೂಪಾಂತರ ಹಾಗೂ ಖನಿಜೀಕರಣ ಕ್ರಿಯೆ ಅನುಕ್ರಮವಾಗಿ ತಲೆದೋರಿ ಏಕರೀತಿಯ ಬದಲಾವಣೆಗಳಿಗೆ ಕಾರಣವಾಗಿವೆ. ಇವು ತಲೆದೋರುವ ಪ್ರದೇಶಗಳಲ್ಲಿ ಸುಣ್ಣಶಿಲೆಯಿದ್ದಲ್ಲಿ ಟ್ಯಾಕ್ಟೈಟುಗಳು ಮತ್ತು ಕರಣಗಂತಿಗಳಿರುತ್ತವೆ. ಅಲ್ಲದೆ ಖನಿಜ ನಿಕ್ಷೇಪಗಳ ಹೊರವಲಯದುದ್ದಕ್ಕೂ ನಾಡಶಿಲೆಗಳು ವಿವಿಧ ದರ್ಜೆಯ ಕಾಯಾಂತರಕ್ಕೆ ಒಳಗಾಗಿರುತ್ತವೆ. ಈ ಸಂಸ್ಪರ್ಶ ಜಾಡಿನಲ್ಲಿ ನಾಡಶಿಲಾಛಿದ್ರಗಳಿಂದ ಕೂಡಿದ ಖನಿಜದ ಎಳೆಗಳಿಂದ ಹಿಡಿದು ಯಾವ ಬಗೆಯ ಮೂಲ ನಾಮಾವಶೇಷವೂ ಇರದಂತೆ ಸುಪೂರ್ಣವಾಗಿ ಕಾಯಾಂತರಗೊಂಡಿರುವ ನಾಡಶಿಲಾ ಸ್ವರೂಪಗಳಿರುತ್ತವೆ.

ಮೀಸೊಥರ್ಮಲ್ ಮತ್ತು ಎಪಿಥರ್ಮಲ್ ನಿಕ್ಷೇಪಗಳು: ಅಗ್ನಿಶಿಲಾ ಸ್ವರೂಪದಿಂದ ದೂರ ಸರಿದಂತೆ ಕಾವು ನೀರಿನಿಂದಾದ ಖನಿಜದ ಎಳೆಗಳಲ್ಲೂ, ಕಾಯಾಂತರಗೊಂಡಿರುವ ಶಿಲಾಭಾಗಗಳ ಖನಿಜ ಸಮೂಹಗಳಲ್ಲೂ ಕ್ರಮೇಣ ಕ್ಷೀಣಿಸುವ ಒತ್ತಡ, ಉಷ್ಣಗಳಿಗೆ ಅನುಗುಣವಾದ ಬದಲಾವಣೆಗಳನ್ನು ಗುರುತಿಸಬಹುದು. ಮಿತೋಷ್ಣ ಸನ್ನಿವೇಶದಲ್ಲಿ ಉಂಟಾದ ಖನಿಜ ನಿಕ್ಷೇಪಗಳಲ್ಲಿ ಸಲ್ಫೈಡುಗಳು, ಸಲ್ಛಾರ್ಸಿನೈಡುಗಳು ಮತ್ತು ಟೆಲ್ಯುರೈಡುಗಳಿದ್ದು ಅವನ್ನು ಮಿತೋಷ್ಣ (ಮೀಸೊಥರ್ಮಲ್) ನಿಕ್ಷೇಪಗಳು ಎಂದು ಕರೆಯಲಾಗಿದೆ.[] ಕಡಿಮೆ ಉಷ್ಣ ಸನ್ನಿವೇಶದಲ್ಲಿ ಕಾವುನೀರಿನಿಂದಾಗುವ (ಎಪಿಥರ್ಮಲ್) ಕನಿಷ್ಠ ಉಷ್ಣ ನಿಕ್ಷೇಪಗಳಲ್ಲಿ ಆರ್ಸೆನಿಕ್, ಆಂಟಿಮೊನಿ ಹಾಗೂ ಮರ್ಕ್ಯುರಿ ಸಲ್ಫೈಡ್ ಖನಿಜಗಳನ್ನು ಗುರುತಿಸಬಹುದು.[] ಕೆಲವು ಅನುಕೂಲಕರವಾದ ಸನ್ನಿವೇಶಗಳಲ್ಲಿ ಖನಿಜಪೂರಿತ ದ್ರವಗಳು ಬಿಸಿನೀರಿನ ಚಿಲುಮೆಗಳಂತೆ ಹೊರಹೊಮ್ಮಲೂಬಹುದು. ಆಗ ಚಿಲುಮೆಯ ಸುತ್ತ ಖನಿಜ ನಿಕ್ಷೇಪಗಳನ್ನು ನೋಡಬಹುದು. ಇವೇ ಟ್ಯೂಫ ನಿಕ್ಷೇಪಗಳು. ಲಾವ ಪ್ರವಾಹಗಳಿಂದಲೂ ಗಂಧಕವೇ ಮೊದಲಾದ ಬಾಷ್ಪೀಕಾರಕ ಖನಿಜಗಳು ಹೊರಹೊಮ್ಮುವ ಸೂಕ್ತ ಸ್ಥಳಗಳಲ್ಲಿ ಶೇಖರಗೊಂಡು ಉಪಯುಕ್ತ ಖನಿಜ ನಿಕ್ಷೇಪಗಳೆನಿಸಿವೆ.

ಶೇಷ ನಿಕ್ಷೇಪಗಳು: ಅತ್ಯಂತ ಸರಳವಾದವೇ ಶೇಷ ನಿಕ್ಷೇಪಗಳು. ಇವು ರೂಪುಗೊಂಡ ರೀತಿ ಮೂಲ ನಿಕ್ಷೇಪಗಳಂತೆ ಕ್ಲಿಷ್ಟವಲ್ಲ. ಮಾತೃಶಿಲೆ ಶಿಥಿಲಗೊಂಡಾಗ ಅದರಲ್ಲಿನ ಖನಿಜಗಳು ನುಚ್ಚುನೂರಾಗಿ ಕಣಗಳ ಅಥವಾ ದೂಳಿನ ರೂಪದಲ್ಲಿ ಹೊರ ಬರುತ್ತವೆ. ಹೀಗೆ ಬೇರ್ಪಟ್ಟ ಖನಿಜಾಂಶಗಳನ್ನು ಬೀಸುವ ಗಾಳಿ ಅಥವಾ ಹರಿವ ನೀರು ಹೋಗಿ ದೂರ ಸಾಗಿಸುತ್ತವೆ. ಆದರೆ ಈ ಕ್ರಿಯೆಯನ್ನು ಮೆಟ್ಟಿ ಅಲ್ಲೇ ಉಳಿಯುವ ಖನಿಜ ಕಣಗಳು ಕ್ರಮೇಣ ಶೇಖರಗೊಂಡು ಉತ್ತಮ ನಿಕ್ಷೇಪವಾಗುತ್ತವೆ.

ವಜ್ರ, ಕೆಂಪು, ಪಚ್ಚೆ ಮೊದಲಾದ ಅಮೂಲ್ಯ ಖನಿಜಗಳೂ, ಕ್ರೋಮೈಟ್ ಮುಂತಾದ ಉಪಯುಕ್ತ ಖನಿಜಗಳೂ ಈ ಬಗೆಯ ನಿಕ್ಷೇಪಗಳಲ್ಲಿರುವುದು ಕಂಡು ಬಂದಿದೆ. ಕೆಲವು ವೇಳೆ ಜೋರಾಗಿ ಬೀಸುವ ಗಾಳಿಯೋ ವೇಗವಾಗಿ ಪ್ರವಹಿಸುವ ನೀರೋ ಈ ಖನಿಜಗಳನ್ನು ಬೇರೆಡೆಗೆ ಸಾಗಿಸಿ ನದಿ, ಸರೋವರ, ಸಮುದ್ರಗಳ ಕರೆಗಳಲ್ಲೋ ತಳದಲ್ಲೋ ಶೇಖರಿಸಿ ಉಪಯುಕ್ತ ನಿಕ್ಷೇಪಗಳನ್ನು ರೂಪಿಸುವುದೂ ಉಂಟು. ಇವೇ ಮೆಕ್ಕಲು ಅಥವಾ ಗರಸು ನಿಕ್ಷೇಪಗಳು. ಜಲಾಶಯಗಳ ಅಲೆಗಳು ಸಹ ಖನಿಜ ಸಾರೀಕರಣದಲ್ಲಿ ಸಹಕರಿಸುವುದುಂಟು. ಒಟ್ಟಿನಲ್ಲಿ ಪ್ರಕೃತಿ ನಮಗಾಗಿ ಇವನ್ನು ಜಾಲಿಸಿ ಒಪ್ಪ ಮಾಡಿ ಸಿದ್ಧಪಡಿಸಿರುತ್ತದೆ. ಹೀಗೆ ಉಂಟಾದ ಚಿನ್ನ, ಪ್ಲಾಟಿನಂ, ಜಿರ್ಕಾನ್, ರೂಟೈಲ್, ಇಲ್ಮೆನೈಟ್, ಮಾನಜೈಟ್ ನಿಕ್ಷೇಪಗಳನ್ನು ಪ್ರಪಂಚದ ಹಲವಾರು ಪ್ರದೇಶಗಳಲ್ಲಿ ಕಾಣಬಹುದು. ಕೇರಳದ ಸಮುದ್ರದ ಕರಾವಳಿಯಲ್ಲಿರುವ ಅತ್ಯುತ್ತಮ ಮಾನಜೈಟ್ ಮರಳು ನಿಕ್ಷೇಪಗಳು ಈ ವರ್ಗಕ್ಕೊಂದು ಉತ್ತಮ ಉದಾಹರಣೆ.[]

ಪವನ ನಿಕ್ಷೇಪಗಳು: ಒಮ್ಮೊಮ್ಮೆ ಗಾಳಿ ಸಹ ಇದೇ ರೀತಿಯ ನಿಕ್ಷೇಪಗಳಿಗೆ ಕಾರಣವಾಗುವುದುಂಟು. ಅವುಗಳಿಗೆ ಪವನ ನಿಕ್ಷೇಪಗಳೆಂದು ಹೆಸರು. ಉಷ್ಣವಲಯದ ಪ್ರದೇಶಗಳಲ್ಲಿ ಅಧಿಕ ತೇವಾಂಶದಿಂದ ಕೂಡಿದ ವಾಯುವಿನ ಕಾರ್ಯಾಚರಣೆಯಿಂದ ಶಿಲೆಗಳಲ್ಲಿನ ಅಲ್ಯುಮಿನಂ, ಕಬ್ಬಿಣ, ನಿಕಲ್, ಮ್ಯಾಂಗನೀಸ್, ಕೋಬಾಲ್ಟ್ ಮುಂತಾದ ಖನಿಜಗಳು ರಾಸಾಯನಿಕ ಕ್ರಿಯೆಗಳಿಗೆ ಒಳಗಾಗಿ ಕರಗದ ಹೈಡ್ರಾಕ್ಸೈಡುಗಳಾಗಿ ಮಾರ್ಪಡುತ್ತವೆ. ಇದರೊಡನೆ ಸುಲಭವಾಗಿ ಕರಗುವ ಕ್ಷಾರೀಯಗಳು, ಸಿಲಿಕ, ಮುಂತಾದುವು ಶಿಲೆಯಿಂದ ಹರಿದು ಹೊರಬರುವ ಕಾರಣ ಅಲ್ಲೇ ಉಳಿಯುವ ಹೈಡ್ರಾಕ್ಸೈಡ್ ಖನಿಜಗಳ ನಿಕ್ಷೇಪ ರೂಪುಗೊಳ್ಳುತ್ತದೆ. ಕರ್ನಾಟಕದ ಪಶ್ಚಿಮ ಕರಾವಳಿ, ತಮಿಳುನಾಡಿನ ನೀಲಗಿರಿ, ಸೇಲಂ ಮುಂತಾದ ಪ್ರದೇಶಗಳಲ್ಲಿರುವ ಬಾಕ್ಸೈಟ್ ಮತ್ತು ಲ್ಯಾಟರೈಟ್ ನಿಕ್ಷೇಪಗಳು ಈ ವರ್ಗದವು. ಕರ್ನಾಟಕದ ಪಶ್ಚಿಮ ಕರಾವಳಿಯ ಬಾಕ್ಸೈಟ್ ನಿಕ್ಷೇಪಗಳಂತೂ ಅಲ್ಯುಮಿನಂನ ಅತ್ಯುತ್ತಮ ನಿಕ್ಷೇಪಗಳೆನಿಸಿವೆ.

ಇಮರು ನಿಕ್ಷೇಪಗಳು: ಕೆಲವು ಸಂದರ್ಭಗಳಲ್ಲಿ ಶಿಲೆಗಳು ಸವೆತಕ್ಕೊಳಗಾದಾಗ ಅವುಗಳಲ್ಲಿರುವ ಹಲವು ಖನಿಜಗಳು ರಾಸಾಯನಿಕವಾಗಿ ಶಿಥಿಲಗೊಂಡು ನೀರಿನಲ್ಲಿ ವಿಲೀನಗೊಳ್ಳುತ್ತವೆ. ಈ ನೀರು ಸೂಕ್ತ ಸ್ಥಳಗಳಲ್ಲಿ ಶೇಖರವಾಗಿ ಮುಂದೆ ಹವಾಗುಣದಲ್ಲಾಗುವ ವ್ಯತ್ಯಾಸಗಳಿಂದ ಉಷ್ಣ ಹೆಚ್ಚಿದಾಗ ನೀರೆಲ್ಲವೂ ಇಮರಿ ಖನಿಜ ನಿಕ್ಷೇಪಗಳುಂಟಾಗುತ್ತವೆ. ಲವಣ ನಿಕ್ಷೇಪಗಳ ಜನನ ಈ ರೀತಿಯದು. ಅನೇಕ ವೇಳೆ ಇವುಗಳಲ್ಲಿ ಸ್ತರಸ್ವರೂಪವನ್ನು ಗುರುತಿಸಬಹುದು. ಲವಣ, ಜಿಪ್ಸಂ, ಅನ್‌ಹೈಡ್ರೈಟ್ ಮುಂತಾದ ಬೃಹತ್ ನಿಕ್ಷೇಪಗಳನ್ನು ಚಿಲಿ,[] ಜರ್ಮನಿ ಹಾಗೂ ಭಾರತೀಯ ಉಪಖಂಡದ ಹಿಮಾಲಯ ಶ್ರೇಣಿಯ ಸಾಲ್ಟ್‌ರೇಂಜ್ ಪ್ರದೇಶದಲ್ಲಿ ಕಾಣಬಹುದು.[][] ಮರುಭೂಮಿಗಳ ಪ್ಲಾಯಾ ಸರೋವರಗಳೂ ಇಮರಿ ಈ ತೆರನಾದ ಲವಣ ನಿಕ್ಷೇಪಗಳುಂಟಾಗಿವೆ. ಲವಣಗಳಲ್ಲಿ ಕೆಲವು ಮತ್ತೆ ಕರಗಿ ಕ್ರಮೇಣ ದ್ರಾವಣಗಳು ಇಮರಿ ಖನಿಜ ನಿಕ್ಷೇಪಗಳಾಗಿರುವುದೂ ಉಂಟು. ಪೊಟ್ಯಾಷ್ ಲವಣಗಳ, ಬೋರೇಟುಗಳ ಹಾಗೂ ವೈಟ್ರೇಟುಗಳ ನಿಕ್ಷೇಪಗಳು ಈ ಗುಂಪಿನವು.

ಜೀವಿಗಳಿಂದ ನಿಕ್ಷೇಪಗಳು ರೂಪಗೊಳ್ಳುವುದು: ಸೂಕ್ಷ್ಮ ಸಮುದ್ರಜೀವಿಗಳಾದ ಫೊರಾಮಿನಿಫೆರ, ಸ್ಪಂಜುಗಳು, ಮೃದ್ವಂಗಿಗಳು ನೀರಿನಲ್ಲಿ ಕರಗಿರುವ ಸುಣ್ಣ, ಸಿಲಿಕ ಮುಂತಾದ ಖನಿಜಾಂಶಗಳನ್ನು ಹೀರಿ ತಮ್ಮ ಚಿಪ್ಪುಗಳನ್ನೋ ಶರೀರದ ಕೆಲವು ಅಂಗಗಳನ್ನೋ ನಿರ್ಮಿಸಿಕೊಳ್ಳುತ್ತವೆ. ಈ ಜೀವಿಗಳ ಮರಣೋತ್ತರ ಗಟ್ಟಿಯಾದ ಭಾಗಗಳು ಶೇಖರಗೊಂಡು ಉತ್ತಮ ಖನಿಜ ನಿಕ್ಷೇಪಗಳಾಗುತ್ತವೆ. ಹೀಗೆಯೇ ಬ್ಯಾಕ್ಟೀರಿಯಗಳ ಚಟುವಟಿಕೆಯಿಂದ ಉತ್ತಮ ಹಾಗೂ ಬೃಹತ್ ಕಬ್ಬಿಣ ಖನಿಜದ ನಿಕ್ಷೇಪಗಳುಂಟಾಗಿವೆ. ಲವಣ ಗುಮ್ಮಟಗಳೊಡನೆ ಕಂಡುಬರುವ ಗಂಧಕ ನಿಕ್ಷೇಪಗಳಿಗೆ ಸಹ ಬ್ಯಾಕ್ಟೀರಿಯಗಳೇ ಮೂಲ. ಇವು ಜಿಪ್ಸಂ ಮತ್ತು ಅನ್‌ಹೈಡ್ರೈಟುಗಳಲ್ಲಿರುವ ಗಂಧಕಾಂಶವನ್ನು ಹೀರಿ ಹೊರತೆಗೆದು ಖನಿಜ ನಿಕ್ಷೇಪಗಳನ್ನು ರೂಪಿಸಿವೆ.

ಅಂತರ್ಜಲದಿಂದುಂಟಾದ ಖನಿಜ ನಿಕ್ಷೇಪಗಳು: ಅಂತರ್ಜಲ (ಗ್ರೌಂಡ್ ವಾಟರ್) ಸಹ ಖನಿಜ ನಿಕ್ಷೇಪಗಳ ಉತ್ಪತ್ತಿಯಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿದೆ. ಇದು ಶಿಲೆಗಳ ಮೂಲಕ ಹರಿಯುವಾಗ ಸುಲಭವಾಗಿ ಕರಗಬಲ್ಲ ಖನಿಜಗಳನ್ನು ತನ್ನೊಡನೆ ಹೊತ್ತು ಹರಿದು, ಅನುಕೂಲಕರವಾದ ಮತ್ತೊಂದೆಡೆ ಅವನ್ನು ಪ್ರಕ್ಷೇಪಿಸುತ್ತದೆ. ಅಮೆರಿಕದ ಕೊಲೆರಾಡೋ ಪ್ರಸ್ಥಭೂಮಿಯಲ್ಲಿರುವ ಯುರೇನಿಯಂ-ವೆನೇಡಿಯಂ ನಿಕ್ಷೇಪಗಳು ಇದಕ್ಕೆ ಅತ್ಯುತ್ತಮ ಉದಾಹರಣೆ.[] ಬಹುಶಃ ಅಂತರ್ಜಲ ಈ ಪ್ರದೇಶದ ಜ್ವಾಲಾಮುಖಿಜ ಬೂದಿ ಮತ್ತು ಶಿಲಾಸ್ತರಗಳ ಮೂಲಕ ಪ್ರವಹಿಸಿದಾಗ ಅಲ್ಲಿ ಅಡಕವಾಗಿದ್ದ ಯುರೇನಿಯಂ-ವೆನೇಡಿಯಂ ಖನಿಜಾಂಶಗಳನ್ನು ಹೊರದೂಡಿ ತನ್ನಲ್ಲೇ ಕರಗಿಸಿಕೊಂಡು ಮುಂದೆ ಮರಳುಶಿಲೆ, ಕದಂಬಶಿಲೆಗಳ ಮೂಲಕ ಹರಿಯುವಾಗ ಇಂಗಾಲೀಕರಣಗೊಂಡಿರುವ ಸಸ್ಯಾವಶೇಷಗಳಿಂದ ತಡೆಯುಂಟಾದ ಸಂದರ್ಭಗಳಲ್ಲಿ ವಿಲೀನ ಯುರೇನಿಯಂ-ವೆನೇಡಿಯಂ ಖನಿಜಗಳನ್ನು ಮತ್ತೆ ಪ್ರಕ್ಷೇಪಿಸಿ ಆ ಮೂಲಕ ನಿಕ್ಷೇಪಗಳುಂಟಾದುವೆಂದು ತಜ್ಞರ ಅಭಿಪ್ರಾಯ. ಮಿಸಿಸಿಪಿ ಕಣಿವೆ ಮಾದರಿಯ ಸೀಸ ಮತ್ತು ಸತುವಿನ ನಿಕ್ಷೇಪಗಳು ಸಹ ಅಂತರ್ಜಲದ ಕಾರ್ಯಾಚರಣೆಯಿಂದಾದವು. ಜಲಜಶಿಲಾ ಸ್ತರಗಳಲ್ಲಿದ್ದ ಈ ಲೋಹಾಂಶಗಳು ಅಂತರ್ಜಲದೊಡನೆ ಸ್ರವಿಸಿ ಹೊರ ಬಂದು ಕ್ರಮೇಣ ಸುಣ್ಣಶಿಲೆಗಳ ಮೂಲಕ ಹರಿದಾಗ ಅವನ್ನು ಅಲ್ಲಲ್ಲೇ ಕಾಯಾಂತರಕ್ಕೆ ಒಳಪಡಿಸಿ ನಿಕ್ಷೇಪಗಳುಂಟಾದುವು. ಅಂತೂ ಈ ತೆರನಾದ ನಿಕ್ಷೇಪಗಳು ಅಗ್ನಿಶಿಲಾ ಜನ್ಯವಲ್ಲವೆಂಬುದು ಗಮನಾರ್ಹವಾದ ಅಂಶ.

ನಿಕ್ಷೇಪಗಳು ರೂಪಾಂತರಗೊಳ್ಳುವುದು: ಶಿಲೆಗಳು ರೂಪಾಂತರ ಹೊಂದುವಾಗ ಅವುಗಳ ಖನಿಜಗಳೂ ಹೊಸ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮ ಸಂಯೋಜನೆ ಮತ್ತ ಸ್ವರೂಪಗಳಲ್ಲಿ ತಕ್ಕ ಮಾರ್ಪಾಡುಗಳನ್ನು ತಳೆಯುತ್ತವೆ. ಇದರಿಂದಲೇ ಸಸ್ಯಾಂಗಾರ ಕ್ರಮೇಣ ಲಿಗ್ನೈಟ್, ಬಿಟುಮಿನಸ್ ಕಲ್ಲಿದ್ದಲು, ಆಂಥ್ರಸೈಟ್ ಮತ್ತು ಕಟ್ಟಕಡೆಗೆ ಗ್ರ್ಯಾಫೈಟ್ ನಿಕ್ಷೇಪವಾಗಿ ರೂಪಾಂತರಗೊಳ್ಳುತ್ತದೆ. ದಕ್ಷಿಣ ಆಫ್ರಿಕದ ಪ್ರಸಿದ್ಧ ವಿಟ್‌ವಾಟರ್ಸ್‌ರ‍್ಯಾಂಡ್ ಚಿನ್ನದ ನಿಕ್ಷೇಪಗಳು ಹಾಗೂ ಕೆನಡದ ಬ್ಲೈಂಡ್ ನದಿ ಪ್ರದೇಶದ ಯುರೇನಿಯಂ ನಿಕ್ಷೇಪಗಳು[] ಮೊದಲಿಗೆ ಮೆಕ್ಕಲ ನಿಕ್ಷೇಪಗಳಾಗಿದ್ದು ರೂಪಾಂತರಗೊಂಡ ಕಾರಣ ತಮ್ಮ ಪ್ರಸಕ್ತ ಸ್ವರೂಪವನ್ನು ತಳೆದಿವೆ. ಹೀಗೆಯೇ ಜೇಡುಶಿಲೆಗಳ ರೂಪಾಂತರದಿಂದ ಗಾರ್ನೆಟ್, ಕೊರಂಡಂ, ಕಯನೈಟ್, ಸಿಲಿಮನೈಟ್ ಮುಂತಾದ ಅತ್ಯಂತ ಉಪಯುಕ್ತ ಖನಿಜಗಳ ನಿಕ್ಷೇಪಗಳು ರೂಪುಗೊಳ್ಳುತ್ತವೆ. ಕಬ್ಬಿಣಾಂಶದ ಜಲಜಶಿಲೆಗಳು ರೂಪಾಂತರ ಹೊಂದಿ ಅತ್ಯುತ್ತಮ ಮ್ಯಾಗ್ನಟೈಟ್ ನಿಕ್ಷೇಪಗಳಾಗಿವೆ.

ಅನುಷಂಗಿಕ ನಿಕ್ಷೇಪಗಳು: ಸಲ್ಫೈಟ್ ಖನಿಜಗಳಿಂದಾದ ಶಿಲೆಗಳು ಭೂಸವೆತಕ್ಕೆ ಒಳಗಾದಾಗ ಕ್ಷಯಿಸಿ ಅಥವಾ ವಿಭಿನ್ನಗೊಂಡು ಅವುಗಳ ಕೆಲವು ಘಟಕಗಳು ಸಾರೀಕರಣ ಹೊಂದಿ ಉತ್ತಮ ಅನುಷಂಗಿಕ ಖನಿಜಗಳ ನಿಕ್ಷೇಪಗಳಿಗೆ ಕಾರಣವಾಗಿವೆ. ಶಿಲೆಯ ಮೇಲ್ಮಟ್ಟ ಹಾಗೂ ಉತ್ಕರ್ಷಣ ವಲಯದಲ್ಲಿ (ಆಕ್ಸಿಡೈಸ್ಡ್ ಜ಼ೋನ್) ಸಲ್ಫೈಡ್ ಖನಿಜಗಳ ಶೈಥಿಲ್ಯದಿಂದ ಹೊರಬಿದ್ದ ಖನಿಜಾಂಶಗಳನ್ನು ಹರಿಯುವ ನೀರು ಸ್ಥಳಾಂತರಿಸುತ್ತದೆ. ಆದರೆ ಕರಗದ ಆಕ್ಸೈಡ್, ಕಾರ್ಬೊನೇಟ್ ಹಾಗೂ ಸಲ್ಫೇಟ್ ಖನಿಜಗಳು ತುಕ್ಕು ಹಿಡಿದು ಕಬ್ಬಿಣ-ಮ್ಯಾಂಗನೀಸುಗಳಿಂದ ಮಲಿನಗೊಂಡಿರುವ ಗೊಸಾನುಗಳಲ್ಲೆ ಉಳಿಯುತ್ತವೆ. ನಿಕ್ಷೇಪದ ಈ ಟೊಪ್ಪಿಗೆ ವಲಯದಲ್ಲಿ ಉತ್ಕರ್ಷಣಗೊಂಡಿರುವ ವರ್ಣಮಯ ತಾಮ್ರ, ನಿಕಲ್, ಕೊಬಾಲ್ಟ್ ಮತ್ತು ಯುರೇನಿಯಂ ಖನಿಜಗಳನ್ನು ಗುರುತಿಸಬಹುದು. ಹಲವು ವೇಳೆ ಈ ಶೇಷ ನಿಕ್ಷೇಪಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಮ್ಯಾಂಗನೀಸ್ ಖನಿಜಗಳು ಸಾಕಷ್ಟು ಮೊತ್ತದಲ್ಲಿರುತ್ತವೆ. ಉತ್ಕರ್ಷಣ ವಲಯದಿಂದ ಹೊರದೂಡಲ್ಪಟ್ಟ ಭಾರ ಲೋಹ ಖನಿಜಗಳು ಜಲಮಟ್ಟದ ಸಮೀಪದಲ್ಲಿರುವ ಅಪಕರ್ಷಣ ವಲಯದಲ್ಲಿ (ರಿಡಕ್ಷನ್ ಜ಼ೋನ್) ಪ್ರಕ್ಷೇಪಿತಗೊಂಡು ಉತ್ತಮ ಅನುಷಂಗಿಕ ನಿಕ್ಷೇಪಗಳಾಗಿವೆ. ಮೂಲಶಿಲೆಯಲ್ಲಿ ಚದರಿಹೋಗಿ ಅನುಪಯುಕ್ತವೆನಿಸಿದ್ದ ಕೆಲವು ಖನಿಜಗಳು ಈ ತೆರನಾದ ಸಾರೀಕರಣದಿಂದ ಉತ್ತಮ ನಿಕ್ಷೇಪಗಳಾಗಿ ಮಾರ್ಪಟ್ಟಿವೆ.

ಉಲ್ಲೇಖಗಳು

[ಬದಲಾಯಿಸಿ]
  1. Misra, Kula C. (2000), "Formation of Mineral Deposits", Understanding Mineral Deposits, Springer Netherlands, pp. 5–92, doi:10.1007/978-94-011-3925-0_2, ISBN 9789401057523
  2. Mesothermal.
  3. Camprubí, Antoni; et, al (2016). "Geochronology of Mexican mineral deposits. IV: the Cinco Minas epithermal deposit, Jalisco". Boletín de la Sociedad Geológica Mexicana. 68 (2): 357–364. doi:10.18268/BSGM2016v68n2a12.
  4. Chandran 2018, p. 343.
  5. Pueyo et al. 2021, p. 4.
  6.  Chisholm, Hugh, ed. (1911). "Salt Range" . Encyclopædia Britannica. Vol. 24 (11th ed.). Cambridge University Press. p. 94. {{cite encyclopedia}}: Cite has empty unknown parameters: |separator= and |HIDE_PARAMETER= (help)
  7. The Salt Range and Khewra Salt Mine whc.unesco.org, accessed 5 June 2023
  8. "Uravan". Geographic Names Information System. United States Geological Survey, United States Department of the Interior. Retrieved 2011-02-17.
  9. "Uranium mines and mills waste". Canadian Nuclear Safety Commission (in ಇಂಗ್ಲಿಷ್). 2014-02-03. Archived from the original on 2014-02-27. Retrieved 2021-11-25.

ಗ್ರಂಥಸೂಚಿ

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: