ಇಲ್ಮೆನೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಲ್ಮೆನೈಟ್ ಒಂದು ಖನಿಜ, ರಾಸಾಯನಿಕ ಸೂತ್ರ FeTiO3. ಇದು ರಾಂಬೊಹೀಡ್ರಲ್ ವರ್ಗಕ್ಕೆ ಸೇರಿದ ಹರಳುಗಳಾಗಿ ದೊರೆಯುತ್ತದೆ. ಹರಳುಗಳಿಗೆ ಸಾಮಾನ್ಯವಾಗಿ ಮಂದವಾದ ಫಲಾಕೃತಿ ಇರುವುದು. ಅಲ್ಲದೆ ಅಸ್ಪಷ್ಟ ಮುದ್ದೆ ಅಥವಾ ಸಣ್ಣ ಸಣ್ಣ ಕಣರಚನೆಯೂ ತೋರಿಬರುವುದುಂಟು. ಹಲವು ವೇಳೆ ಮರಳಿನೋಪಾದಿಯಲ್ಲೂ ದೊರೆಯುತ್ತದೆ. ಬಣ್ಣದಲ್ಲಿ ಕಬ್ಬಿಣದ ಕಪ್ಪು; ಒರೆ ಕಪ್ಪು ಅಥವಾ ಕಂದು ಕೆಂಪು ಮಿತಲೋಹ ಹೊಳಪು. ಶಂಖಾಕೃತಿಯ ಬಿರಿತ. ಅಪಾರದರ್ಶಕ. ಅಯಸ್ಕಾಂತದ ಆಕರ್ಷಣೆ ಬಹು ದುರ್ಬಲ. ಕಾಠಿಣ್ಯ 5-6. ಅಂದರೆ ಉಗುರಿನಿಂದ ಗೀರಲು ಸಾಧ್ಯವಿಲ್ಲ. ಸಾಪೇಕ್ಷ ಸಾಂದ್ರತೆ 4.5-5.[೧]

ರಾಸಾಯನಿಕ ಸಂಯೋಜನೆ[ಬದಲಾಯಿಸಿ]

ಕಬ್ಬಿಣ ಮತ್ತು ಟೈಟೇನಿಯಂ ಆಕ್ಸೈಡು. ಅನೇಕ ವೇಳೆ ನಿರ್ದಿಷ್ಟ ರಾಸಾಯನಿಕ ಸಂಯೋಜನೆಯನ್ನು ತೋರದೆ ಧಾತುಗಳ ಪ್ರಮಾಣದಲ್ಲಿ ಏರುಪೇರುಗಳನ್ನು ತೋರಿಸುವುದು ಉಂಟು. ಹಲವು ಬಾರಿ ಹಿಮಟೈಟ್ ಅಥವಾ ಮ್ಯಾಗ್ನಟೈಟ್ ಪದರುಗಳೊಡನೆ ಒಂದು ರೀತಿಯ ವಿಶಿಷ್ಟ ಹೆಣಿಗೆ ರಚನೆಯನ್ನು ಇಲ್ಮನೈಟ್ ತೋರಿಸುತ್ತದೆ. ಇದು ವಿವಿಧ ಅಗ್ನಿಶಿಲೆಗಳಲ್ಲಿ ಅದರಲ್ಲೂ ಬಹುತೇಕ ಗ್ಯಾಬ್ರೋ ಮತ್ತು ಡಯೋರೈಟ್ ಗುಂಪಿನ ಶಿಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಹಲವು ಸಾರಿ ರೂಪಾಂತರಿತ ಶಿಲೆಗಳಲ್ಲಿ ಕಂಡು ಬರುವುದುಂಟು. ಈ ಖನಿಜದ ಉತ್ತಮ ಬಗೆಯ ಮೆಕ್ಕಲು ನಿಕ್ಷೇಪಗಳನ್ನು ಕಾಣಬಹುದು.[೨]

ಟೈಟೇನಿಯಂ ಮತ್ತು ಟೈಟೇನಿಯಂ ಡೈ ಆಕ್ಸೈಡುಗಳು ಉತ್ಪತ್ತಿಗೆ ಮುಖ್ಯ ಮೂಲ ಖನಿಜ ಇಲ್ಮನೈಟ್. ಈ ಆಕ್ಸೈಡುಗಳನ್ನು ಪಡೆಯಲು ಖನಿಜದ ಅದುರನ್ನು ವಿದ್ಯುತ್ ಕುಲುಮೆಗಳಲ್ಲಿ ಕಾಸಿ ಕರಗಿಸುತ್ತಾರೆ. ಹೀಗೆ ಕರಗಿಸಿದ ವಸ್ತುವನ್ನು ಸಲ್ಫ್ಯೂರಿಕ್ ಆಮ್ಲದೊಡನೆ ಬೆರೆಸಿ ಶುದ್ಧೀಕರಣಕ್ಕೊಳಪಡಿಸಿದಾಗ ಟೈಟೇನಿಯಂ ಆಕ್ಸೈಡುಗಳನ್ನು ಪಡೆಯಬಹುದು. ಈಚಿನ ವರ್ಷಗಳಲ್ಲಿ ಟೈಟೇನಿಯಂ ಡೈ ಆಕ್ಸೈಡನ್ನು ಹೆಚ್ಚಿನ ಪ್ರಮಾಣದಲ್ಲಿ ನಾನಾ ಬಗೆಯ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಉದಾಹರಣೆಗೆ, ದ್ರವಬಣ್ಣಗಳ ತಯಾರಿಕೆಗೆ ಅಗತ್ಯವಾದ ಬಿಳಿ ಬಣ್ಣ, ಕಾಗದ, ರಬ್ಬರ್, ಪ್ಲಾಸ್ಟಿಕ್ ಸಾಮಾನು, ಪಿಂಗಾಣಿ ಸಾಮಾನು, ಮುದ್ರಣ ಶಾಯಿ, ಹತ್ತಿ ಬಟ್ಟೆ, ಸಾಬೂನು, ಸುಗಂಧ ದ್ರವ್ಯಗಳು, ಕೃತಕ ದಂತ ನಿರ್ಮಾಣ, ಚರ್ಮ ಹದ ಮಾಡುವಿಕೆ ಹೀಗೆ ನಾನಾ ಬಗೆಯ ಕೈಗಾರಿಕೆಗಳಲ್ಲಿ ಇದೊಂದು ಅಗತ್ಯವಾದ ಮೂಲ ಪದಾರ್ಥವೆನಿಸಿದೆ.

ಪ್ರಾಮುಖ್ಯತೆ[ಬದಲಾಯಿಸಿ]

ಖನಿಜದ ಈ ಬಗೆಯ ಪ್ರಾಮುಖ್ಯಕ್ಕೆ ಮುಖ್ಯ ಕಾರಣಗಳು ಟೈಟೇನಿಯಂ ಡೈ ಆಕ್ಸೈಡಿನ ಅಚ್ಚ ಬಿಳಿಯ ಬಣ್ಣ. ಹೊಳಪು (ಬಹುಕಾಲ ಮಾಸದಿರುವ), ಬಣ್ಣ ಕೆಡದಿರುವಿಕೆ. ಯಾವ ತೆರನಾದ ರಾಸಾಯನಿಕ ಕ್ರಿಯೆಗೂ ಒಳಗಾಗದಿರುವಿಕೆ, ಆರೋಗ್ಯಕ್ಕೆ ಅಪಾಯಕಾರಿಯಾಗಿಲ್ಲದಿರುವುದು ಮತ್ತು ಸುಲಭವಾಗಿ ಇತರ ದ್ರವ ಬಣ್ಣಗಳೊಡನೆ ಬೆರೆಯುವುದು. ಇತ್ತೀಚಿನ ಸಂಶೋಧನೆಗಳಿಂದ ಖನಿಜದಿಂದ ದೊರೆಯುವ ರಾಸಾಯನಿಕ ವಸ್ತುಗಳ ಮತ್ತಷ್ಟು ಉತ್ತಮ ಗುಣಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ ಬಲು ಮುಖ್ಯವಾದ ಗುಣ-ಟೈಟೇನಿಯಂ ಬಲು ಹಗುರವಾಗಿರುವುದೇ ಅಲ್ಲದೆ ಹೆಚ್ಚಿನ ನಿರ್ವಹಣ ಶಕ್ತಿಯನ್ನೂ ಹೊಂದಿದೆ; ಅಲ್ಲದೆ ಬಹು ಕಾಲ ಉಪಯೋಗಿಸಿದರೂ ತುಕ್ಕು ಹಿಡಿಯುವುದಿಲ್ಲ ಮತ್ತು ಸವೆಯುವುದೂ ಇಲ್ಲ. ಹೀಗೆ ಅಲ್ಯೂಮಿನಿಯಂ ಮತ್ತು ತುಕ್ಕು ಹಿಡಿಯದ ಉಕ್ಕಿನ ಉತ್ತಮ ಗುಣಗಳನ್ನು ಇಲ್ಮನೈಟ್ ಹೊಂದಿರುವುದರ ಜೊತೆಗೆ ಅವಕ್ಕಿಂತಲೂ ಮಿಗಿಲಾದ ನಿರ್ವಹಣಾ ಶಕ್ತಿಯನ್ನೂ ಸವೆಯದ ಗುಣವನ್ನೂ ಹೊಂದಿದೆ. ಹೀಗಾಗಿ ಈಗೀಗ ವಿಮಾನಗಳು, ನೌಕೆಗಳು ಮತ್ತು ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಇದರ ಬಳಕೆ ಹೆಚ್ಚುತ್ತಿದ್ದು ಇದಕ್ಕೆ ಎಲ್ಲಿಲ್ಲದ ಮಹತ್ತ್ವ ಬಂದಿದೆ. ಸದ್ಯದಲ್ಲಿ ಇದನ್ನು ಬಲುಮಟ್ಟಿಗೆ ವಿಪರೀತ ಗಡುಸಾದ ಮತ್ತು ಅಷ್ಟೇ ಪ್ರಮಾಣದ ಸ್ಥಿತಿಸ್ಥಾಪಕ ಸಾಮಥ್ರ್ಯವುಳ್ಳ ಲೋಹಮಿಶ್ರಣಗಳಾದ ಫೆರೋ-ಟೈಟೇನಿಯಂ ಮತ್ತು ಫೆರೋ ಕಾರ್ಬನ್-ಟೈಟೇನಿಯಂಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಹೀಗೆಯೇ ನಿಕ್ಕಲ್, ತಾಮ್ರ, ಮ್ಯಾಂಗನೀಸ್, ಕ್ರೋಮಿಯಂ, ಸಿಲಿಕಾನ್, ಟಂಗ್‍ಸ್ಟನ್ನುಗಳೊಡನೆ ಬೆರೆಸಿ ವಿಶೇಷ ರೀತಿಯ ಉಕ್ಕನ್ನು ತಯಾರಿಸುತ್ತಾರೆ.[೩]

ಇಲ್ಮೆನೈಟ್ ಮತ್ತು ಟೈಟೇನಿಯಂ ಡೈಆಕ್ಸೈಡುಗಳನ್ನು ಉಕ್ಕಿನ ಸರಳುಗಳ ಬೆಸೆಯುವಿಕೆ, ಆರ್ಕ್ ಲ್ಯಾಂಪುಗಳಲ್ಲಿ ಬಳಸುವ ಎಲೆಕ್ಟ್ರೋಡುಗಳ ತಯಾರಿಕೆ, ಕೃತಕ ಮೋಡಗಳ ಉತ್ಪತ್ತಿಗೆ ಅಗತ್ಯವಾದ ಟೈಟೇನಿಯಂ ಟೆಟ್ರಕ್ಲೋರೈಡ್ ತಯಾರಿಕೆ ಮತ್ತು ಬಣ್ಣಗಚ್ಚುಗಳ ತಯಾರಿಕೆಗಳಲ್ಲೆಲ್ಲ ಉಪಯೋಗಿಸುತ್ತಾರೆ. ಹತ್ತಿ ಬಟ್ಟೆಗಳಿಗೆ ಬಣ್ಣ ಹಾಕಲು ಇದು ಬಲು ಅಗತ್ಯವಾದ ವಸ್ತು.

ದೊರೆಯುವ ಪ್ರದೇಶಗಳು[ಬದಲಾಯಿಸಿ]

ಈ ಖನಿಜ ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ, ಭಾರತ, ಬ್ರೆಜಿûಲ್ ಮತ್ತು ಆಸ್ಟ್ರೇಲಿಯ ದೇಶಗಳಲ್ಲಿ ದೊರೆಯುತ್ತದೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಲೇಷಿಯ ಮತ್ತು ಜಪಾನುಗಳಲ್ಲೂ ದೊರೆಯುತ್ತದೆ. ಅಮೆರಿಕದಲ್ಲಿ ಮುಖ್ಯವಾಗಿ ವರ್ಜಿನಿಯ ಪ್ರಾಂತ್ಯದ ನೆಲ್ಸನ್ ಮತ್ತು ಆಮ್‍ಹಸ್ರ್ಟ್ ಕೌಂಟಿಗಳ ಕೆಲವು ಶಿಲಾ ಒಡ್ಡುಗಳಲ್ಲಿ ಮತ್ತು ಈ ಒಡ್ಡುಗಳು ಛೇದಿಸಿರುವ ಸಯನೈಟ್ ಎಂಬ ಅಗ್ನಿಶಿಲೆಯಲ್ಲಿ ಈ ಖನಿಜ ದೊರೆಯುತ್ತದೆ. ದೊರೆಯುವ ಖನಿಜದ ಪ್ರಮಾಣ ಕೇವಲ 3%-6% ರಷ್ಟಾದರೂ ಅದರ ಉಪಯುಕ್ತತೆಯ ಕಾರಣ ಗಣಿ ಉದ್ಯಮ ಲಾಭದಾಯಕವಾಗಿದ್ದು ಕೆಲಸ ಮುಂದುವರಿಯುತ್ತಿದೆ. ಈ ಪ್ರದೇಶದಲ್ಲಿ ಸುಮಾರು 4.4. ಮಿಲಿಯನ್ ಟನ್ನುಗಳಷ್ಟು ಇಲ್ಮೆನೈಟ್ ಮತ್ತು ಇತರ ಟೈಟೇನಿಯಂ ಖನಿಜಗಳು ದೊರೆಯಬಹುದೆಂಬ ಅಂದಾಜು. ಇವಿಷ್ಟೂ ಮೂಲ ಶಿಲಾದ್ರವದ ಚಟುವಟಿಕೆಯಿಂದ ಉಂಟಾಗಿರಬಹುದೆಂದು ಅಭಿಪ್ರಾಯಪಡಲಾಗಿದೆ.[೪]

ಇದಲ್ಲದೆ ಫ್ಲಾರಿಡ ಪ್ರಾಂತ್ಯದ ಜಾಕ್‍ಸನ್‍ವಿಲೆ ಮತ್ತು ಟ್ರೇಲ್‍ರಿಜ್ ಬಳಿಯ ಸಮುದ್ರದ ಕರಾವಳಿಯಲ್ಲಿ ಇಲ್ಮೆನೈಟ್ ಮೆಕ್ಕಲು ನಿಕ್ಷೇಪಗಳು ಹೆಚ್ಚಿನ ಪ್ರಮಾಣದಲ್ಲಿವೆ. ಸ್ಯಾನ್‍ಫರ್ಡ್ ಸರೋವರದ ಬಳಿಯ ಟಹಾವುಸ್ ಗಣಿಯಲ್ಲಿ ವರ್ಷಕ್ಕೆ 2,80,000ಟನ್ ಇಲ್ಮೆನೈಟ್ ಉತ್ಪತ್ತಿಯಾಗುತ್ತಿದೆ.

ಕ್ವಿಬ್ಬೆಕ್ಕಿನ ಅಲಾರ್ಡ್ ಸರೋವರದ ಬಳಿ ಸುಮಾರು 200 ಮಿಲಿಯನ್ ಟನ್ನುಗಳಷ್ಟು ಇಲ್ಮೆನೈಟ್ ಅದುರಿನ ಬಹು ದೊಡ್ಡ ನಿಕ್ಷೇಪವನ್ನು ಗುರುತಿಸಲಾಗಿದೆ. ಈ ಅದುರು ಬಲು ಉತ್ತಮ ದರ್ಜೆಯದು-ಇದರಲ್ಲಿ 37%ರಷ್ಟು ಟೈಟೇನಿಯಂ ಡೈ ಆಕ್ಸೈಡ್ ಇದೆ. ಇಲ್ಲಿ ಅನಾರ್ಥಸೈಟ್ ಎಂಬ ಅಗ್ನಿಶಿಲೆಯಲ್ಲಿ ಇಲ್ಮೆನೈಟ್ ಖನಿಜವಿರುವ ದೊಡ್ಡ ದೊಡ್ಡ ಪಟ್ಟಿಗಳನ್ನು ಕಾಣಬಹುದು. ಕೆಲವು ಕಡೆ ಇಲ್ಮೆನೈಟ್ ಖನಿಜವನ್ನು ಹೊಂದಿರುವ ಶಿಲೆಯ ಎಳೆಗಳು ಅನಾರ್ಥಸೈಟನ್ನು ಛೇದಿಸಿರುವುದನ್ನೂ ಕಾಣಬಹುದು. ಬಹುಶ: ಮಾತೃಶಿಲಾದ್ರವದ ಆರುವಿಕೆಯ ಕೊನೆಯ ಘಟ್ಟದಲ್ಲಿ ಇಲ್ಮೆನೈಟ್ ಜನಿಸಿತೆಂದು ಅಭಿಪ್ರಾಯಪಡಲಾಗಿದೆ. ಇಡೀ ಪ್ರಪಂಚದಲ್ಲೇ ಗಾತ್ರದಲ್ಲಿ ಅತಿ ದೊಡ್ಡವೆನಿಸಿದ ಇಲ್ಮೆನೈಟ್ ಮೂಲ ನಿಕ್ಷೇಪಗಳನ್ನು ಇಲ್ಲಿ ಕಾಣಬಹುದು. ಈ ಪ್ರದೇಶದಲ್ಲಿನ ಅದುರನ್ನು ವಿದ್ಯುತ್ ಕುಲುಮೆಗಳಲ್ಲಿ ಒಪ್ಪ ಮಾಡಿದಾಗ ಬರುವ ಕಿಟ್ಟವನ್ನು ಉಪಯೋಗಿಸಿಕೊಂಡು ಟೈಟೇನಿಯಂ ವೈಟ್ ಎಂಬ ದ್ರವಬಣ್ಣದ ವಸ್ತುವನ್ನು ತಯಾರಿಸುತ್ತಾರೆ.

ನಾರ್ವೆ ದೇಶದ ಬ್ಲಾಫೆಲ್‍ಡೈಟ್ ಎಂಬ ಪ್ರದೇಶದಲ್ಲಿ ಇಲ್ಮೆನೈಟ್ ಮ್ಯಾಗ್ನಟೈಟ್ ಖನಿಜಗಳಿಂದ ಕೂಡಿದ ವಿಸ್ತಾರವಾದ ನಿಕ್ಷೇಪಗಳಿವೆ. ಇಲ್ಲಿಯ ಶಿಲೆಯನ್ನು ಒಪ್ಪಮಾಡಿ ಸುಮಾರು 42%-45% ರಷ್ಟು ಟೈಟೇನಿಯಂ ಪಡೆಯಬಹುದು. ಸುಮಾರು ಮೂವತ್ತು ಮಿಲಿಯನ್ ಟನ್ ಇಲ್ಮೆನೈಟ್ ದೊರೆಯಬಹುದೆಂದು ಅಂದಾಜು ಮಾಡಲಾಗಿದೆ. ಬ್ರೆಜಿûಲ್, ಆಸ್ಟ್ರೇಲಿಯದ ನ್ಯೂಸೌತ್‍ವೇಲ್ಸ್ ಮತ್ತು ಕ್ವೀನ್ಸ್‍ಲೆಂಡ್ ಪ್ರಾಂತ್ಯಗಳ ಕರಾವಳಿಗಳಲ್ಲಿ ಈ ಖನಿಜದ ಉತ್ತಮ ಮೆಕ್ಕಲು ನಿಕ್ಷೇಪಗಳಿವೆ. ಹೀಗೆಯೇ ಜಪಾನಿನ ಹಾಂಡೂ ಸಮುದ್ರತೀರದ 10 ಬಿಲಿಯನ್ ಟನ್ ಮರಳಿನಲ್ಲಿ ಸುಮಾರು 8%-12% ರಷ್ಟು ಇಲ್ಮೆನೈಟ್ ದೊರೆಯಬಹುದೆಂದು ನಿರ್ಧರಿಸಲಾಗಿದೆ.

ಭಾರತ[ಬದಲಾಯಿಸಿ]

ಇಲ್ಮೆನೈಟ್ ಅದುರಿಗೆ ಪ್ರಸಿದ್ಧವಾದದ್ದು. ಪಶ್ಚಿಮ ಮತ್ತು ಪೂರ್ವ ಕರಾವಳಿ ಪ್ರದೇಶಗಳು ಈ ದೃಷ್ಟಿಯಿಂದ ಬಲು ಮುಖ್ಯ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಕರಾವಳಿಗಳಲ್ಲಿ ಇಲ್ಮೆನೈಟಿನಿಂದ ಕೂಡಿದ ಮರಳು ನಿಕ್ಷೇಪಗಳಿವೆ. ಇವುಗಳಲ್ಲೆಲ್ಲ ಅತಿ ಮುಖ್ಯವಾದ ನಿಕ್ಷೇಪ ಕೇರಳದ ಪಶ್ಚಿಮ ಕರಾವಳಿಯ ಕ್ವಿಲಾನಿನಿಂದ ಮೊದಲಾಗಿ ದಕ್ಷಿಣಕ್ಕೆ ತಮಿಳು ನಾಡಿನ ಕನ್ಯಾಕುಮಾರಿಯ ಉದ್ದಕ್ಕೂ ಹರಡಿದೆ. ಮುಖ್ಯ ಮೆಕ್ಕಲು ನಿಕ್ಷೇಪಗಳು ಕ್ವಿಲಾನ್ ಜಿಲ್ಲೆಯ ಚವರ ಮತ್ತು ಕನ್ಯಾಕುಮಾರಿ ಬಳಿಯಿರುವ ಮನವಾಲ ಕುರುಚಿಯಲ್ಲಿವೆ. ಚವರ ಕೇಂದ್ರದಲ್ಲಿ ಉತ್ಪತ್ತಿಯಾಗುವ ಇಲ್ಮೆನೈಟ್ ಬಲು ಉತ್ತಮ ದರ್ಜೆಯದು. ಇದರಲ್ಲಿ ಸುಮಾರು 58%-60% ರಷ್ಟು ಟೈಟೇನಿಯಂ ಡೈ ಆಕ್ಸೈಡಿದೆ. ಇದರೊಡನೆ ಇತರ ಖನಿಜಗಳಾದ ರೂಟೈಲ್ 3%-4% ಜಿûರ್‍ಕಾನ್ 5%-10%, ಮಾನಜೈಟ್ ಮತ್ತು ಮ್ಯಾಗ್ನಟೈಟ್ 1%-2%, ಸಿಲಿಮನೈಟ್ 5%-10% ಮತ್ತು ಕ್ವಾಟ್ರ್ಸ್ 5%-10% ರಷ್ಟು ಇರುವುದು ಕಂಡುಬಂದಿದೆ.[೫]

ಆದರೆ ಮನವಾಲ ಕುರುಚಿಯ ಬಳಿಯ ಮೆಕ್ಕಲು ನಿಕ್ಷೇಪದಲ್ಲಿ ಇಷ್ಟು ಹೆಚ್ಚಿನ ಪ್ರಮಾಣದ ಇಲ್ಮೆನೈಟ್ ದೊರೆಯುವುದಿಲ್ಲ. ಅಲ್ಲದೆ ಇದು ರಾಸಾಯನಿಕ ಗುಣದಲ್ಲಿ ಚವರದ ಇಲ್ಮೆನೈಟಿನಷ್ಟು ಉತ್ತಮ ದರ್ಜೆಯದಲ್ಲ. ಇದರಲ್ಲಿ ಸಾಮಾನ್ಯವಾಗಿ 54% ರಷ್ಟು ಟೈಟೇನಿಯಂ ಡೈ ಆಕ್ಸೈಡಿನ ಅಂಶವಿರುತ್ತದೆ. ಈ ಎರಡು ಪ್ರದೇಶಗಳಲ್ಲೂ ಸುಮಾರು 350 ಮಿಲಿಯನ್ ಮೆಟ್ರಿಕ್ ಟನ್ನುಗಳಷ್ಟು ಇಲ್ಮೆನೈಟ್ ದೊರೆಯಬಹುದೆಂದು ಅಂದಾಜು ಮಾಡಲಾಗಿದೆ.

ಭಾರತದ ನಾನಾ ಕೈಗಾರಿಕೆಗಳು ಸದ್ಯದಲ್ಲಿ ವರ್ಷಕ್ಕೆ ಸುಮಾರು 8,000 ಟನ್ನುಗಳಷ್ಟು ಇಲ್ಮೆನೈಟನನ್ನು ಬಳಸುತ್ತಿದ್ದು ಮಿಕ್ಕ ಅದುರನ್ನು ಇತರ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ (1969).

ಈ ಮುಖ್ಯ ಮೆಕ್ಕಲು ನಿಕ್ಷೇಪಗಳಲ್ಲದೆ ಬಿಹಾರ್, ಒರಿಸ್ಸಾ, ಕರ್ನಾಟಕ, ರಾಜಾಸ್ತಾನ ಮತ್ತು ಪಂಜಾಬಿನ ಶಿಲಾಸಮುದಾಯಗಳಲ್ಲಿ ಇಲ್ಮೆನೈಟ್ ಅಲ್ಪಸ್ವಲ್ಪ ಪ್ರಮಾಣದಲ್ಲಿ ಹುದುಗಿವೆ. ಬಿಹಾರಿನ ಮಯೂರ್‍ಭಂಜ್, ಒರಿಸ್ಸಾದ ಕಿಯಂಝರ್ ಜಿಲ್ಲೆಗಳಲ್ಲಿನ ಎಪಿಡಯೊರೈಟ್, ಸರ್ಪೆಂಟಿನೈಟ್ ಮೊದಲಾದ ಕ್ಷಾರ ಶಿಲೆಗಳಲ್ಲಿ ಅಲ್ಲಲ್ಲೇ ಈ ಖನಿಜದ ಪಟ್ಟಿಗಳನ್ನು ಕಾಣಬಹುದು. ಇವು ತಾವು ಹುದುಗಿರುವ ಶಿಲೆಯಂತೆ ಮಾತೃಶಿಲಾದ್ರವದ ಚಟುವಟಿಕೆಯಿಂದ ಉಂಟಾದುವು.


ಉಲ್ಲೇಖಗಳು[ಬದಲಾಯಿಸಿ]

  1. http://webmineral.com/data/Ilmenite.shtml
  2. http://rruff.geo.arizona.edu/doclib/hom/ilmenite.pdf
  3. http://www.mindat.org/min-2013.html
  4. http://www.infomine.com/minesite/minesite.asp?site=lactio
  5. https://www.nytimes.com/2015/12/29/science/new-type-of-rock-is-discovered-on-moon.html