ಮರಳು ಶಿಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರಳುಶಿಲೆಯ ಕತ್ತರಿಸಿದ ಚಪ್ಪಡಿ

ಮರಳು ಶಿಲೆಯು ಭೂಮಿಯಲ್ಲಿಯ ಜಲಶಿಲೆಗಳ (ಸೆಡಿಮೆಂಟರಿ ರಾಕ್ಸ್) ಒಂದು ಮುಖ್ಯಭಾಗ (ಸ್ಯಾಂಡ್ ಸ್ಟೋನ್). ಇದು ಜಲಶಿಲೆಗಳ 25% ಭಾಗವನ್ನು ಆಕ್ರಮಿಸಿದೆ. ಮರಳುಶಿಲೆಗಳು ಸಾಮಾನ್ಯವಾಗಿ 0.0625ಮಿ ಮೀ ನಿಂದ 2.0ಮಿ ಮೀ ವರಗೆ ವ್ಯಾಸವಿರುವ ಖನಿಜಕಣಗಳನ್ನು ಹೊಂದಿವೆ. ಕೆಲವೊಮ್ಮೆ ಸಣ್ಣ ಸಣ್ಣ ಕಲ್ಲು ಚೂರುಗಳು ಸಹ ಇರುವುದುಂಟು. ಪ್ರಕೃತಿಯಲ್ಲಿ ನಾನಾ ಬಗೆಯ ಶಿಲಾ ಸಮೂಹಗಳು ಮಳೆ, ಗಾಳಿ ಹಾಗೂ ಬಿಸಿಲಿನ ಶಾಖದಿಂದ ಸವೆತ ಮತ್ತು ಕೊರೆತಕ್ಕೆ ಈಡಾಗಿ ಬೇರ್ಪಟ್ಟು ಖನಿಜಕಣ ಮತ್ತು ಸಣ್ಣ ಶಿಲಾಚೂರುಗಳು ಬೋಗುಣಿಗಳಲ್ಲಿ ಸಂಚಯನಗೊಂಡ ಅನಂತರ ಗಟ್ಟಿಗೊಂಡು ಮರಳುಶಿಲೆಗಳಾಗುತ್ತವೆ. ಹೀಗಾಗಿ ಮರಳುಶಿಲೆಗಳು ಭೂಮೇಲ್ಮೈ ಶಿಲೆಗಳ ರಾಸಾಯನಿಕ ಹಾಗೂ ಭೌತ ಶಿಥಿಲೀಕರಣ ಕಾರ್ಯಾಚರಣೆಯ ಅನಂತರ ಉಳಿದುಬಂದ ಭಾಗವನ್ನು ಪ್ರತಿನಿಧಿಸುವಂತಾಗಿದೆ. ವಿವಿಧ ಬಗೆಯ ಮರಳುಶಿಲೆಗಳಲ್ಲಿ ದೊರೆಯಬಹುದಾದಂಥ ವಿವಿಧ ಖನಿಜಗಳ ಸಂಖ್ಯೆಗೆ ಸಮ ಎಂದು ಪರಿಗಣಿಸುವುದುಂಟು.

ಮರಳು ಶಿಲಾಖನಿಜಗಳನ್ನು ಕುರಿತ ಅಧ್ಯಯನ ಮೂಲಶಿಲಾಸಮೂಹಗಳಿಂದ ಖನಿಜಗಳು ಬೇರ್ಪಡುವಿಕೆಯಿಂದ ಆರಂಭಗೊಂಡು ಸಂಚಯನ ಕಾರ್ಯಾಚರಣೆಯ ಮೂಲಕ ಮುಂದುವರಿದು ಅನಂತರ ಶಿಲೆಯಾಗಿ ಮಾರ್ಪಾಡಾಗುವಲ್ಲಿಯ ಕಣ ರಚನೆಯಲ್ಲಿ ರೂಪಾಂತರಗೊಳ್ಳುತ್ತದೆ. ಕಣಗಳ ಅಧ್ಯಯನದಿಂದ ಅವುಗಳ ಉಗಮಸ್ಥಾನ ಹಾಗೂ ಸಂಚಯಕಾಲದಲ್ಲಿ ಆದ ಭೂಚಟುವಟಿಕೆ ಮತ್ತು ಆಗಿನ ವಾಯುಗುಣ; ಕಣಗಳನ್ನು ನೀರು ಅಥವಾ ಗಾಳಿ ತನ್ನೂಡನೆ ಕೊಂಡೊಯ್ಯುವಾಗ ಉಂಟಾದ ಪರಿಣಾಮ; ಮತ್ತು ಯಾವ ದಿಕ್ಕಿನಲ್ಲಿ ಆ ಕಣಗಳು ಸಾಗಿದ ದೂರ ಎಷ್ಟು ಎಂಬುದನ್ನು ಕೂಡ ತಿಳಿಯಬಹುದಾಗಿದೆ. ಮರಳುಶಿಲೆ ರೂಪಾಂತರಗೊಳ್ಳುವಾಗ (ಡಯಾಜೆನಿಸಿಸ್) ಅಸ್ಥಿರ ಖನಿಜಗಳು ಸಂಪೂರ್ಣ ಇಲ್ಲವೆ ಭಾಗಶಃ ನಾಶವಾಗಿ, ಹೊಸ ಖನಿಜಗಳು ಅದರಲ್ಲೂ ಹೆಚ್ಚಾಗಿ ಸುಣ್ಣ ಮತ್ತು ಸಿಲಿಕಾಗಳು ದ್ರವರೂಪದಿಂದ ಘನರೂಪಕ್ಕೆ ಪ್ರಕ್ಷೇಪಗೊಳ್ಳುತ್ತವೆ. ಮರಳುಶಿಲೆಗಳನ್ನು ಕುರಿತ ಖನಿಜವಿಜ್ಞಾನ ಅವುಗಳಲ್ಲಿ ಇರುವ, ಮೊತ್ತಮೊದಲಿಗೆ ಸಂಚಯಗೊಂಡ ವಿವಿಧ ಖನಿಜಗಳು ಮತ್ತು ಅನಂತರ ಪ್ರಕ್ಷೇಪಗೊಂಡ ಬಂಧನ ಪದಾರ್ಥ (ಸಿಮೆಂಟ್) ಹಾಗೂ ಅನಂತರ ಅವು ಬದಲಾವಣೆ ಹೊಂದಿದಾಗ ಉಂಟಾದ ಪರಿಣಾಮಗಳನ್ನೂ ವಿಶದಪಡಿಸುತ್ತದೆ.

ರಚಾನವಿನ್ಯಾಸ[ಬದಲಾಯಿಸಿ]

ಮರಳುಶಿಲೆಗಳು ಹಲವಾರು ಜಲಶಿಲಾರಚನಾ ವಿನ್ಯಾಸಗಳನ್ನು ಪ್ರದರ್ಶಿಸುತ್ತವೆ. ಇವುಗಳಲ್ಲಿ ಮುಖ್ಯವಾದವು ಎಂದರೆ ಅಡ್ಡಹಾಯ್ದ ಶಿಲಾಸ್ತರಗಳು (ಕ್ರಾಸ್ ಬೆಡ್ಡಿಂಗ್ಸ್), ಅಲೆಗಳ ಗುರುತುಗಳು (ರಿಪ್ಪಲ್ಸ್) ಮತ್ತು ವರ್ಗೀಕೃತ ಶಿಲಾಪದರುಗಳು (ಗ್ರೇಡೆಡ್ ಬೆಡ್ಡಿಂಗ್ಸ್). ಇವುಗಳ ಪೈಕಿ ಮೊದಲೆರಡು ರಚನೆಗಳು ಆಳವಿಲ್ಲದ ಜಲಪ್ರದೇಶಗಳಲ್ಲಿ ಉಂಟಾಗುವುವು. ಮೂರನೆಯ ರಚನೆ ಆಳವಿರುವ ಜಲಪ್ರದೇಶದಲ್ಲಿ ಮಾತ್ರ ರೂಪುಗೊಳ್ಳುವಂಥದ್ದು.

ವರ್ಗೀಕರಣ[ಬದಲಾಯಿಸಿ]

ಮರಳುಶಿಲೆಗಳನ್ನು ರಚನೆ ಮತ್ತು ಖನಿಜಸಂಯೋಜನೆಯ ಆಧಾರದ ಮೇರೆಗೆ ಅಂತೆಯೇ ಮೊದಲಿಗೆ ಸಂಚಯನಗೊಂಡ ಕಣಗಳು ಮತ್ತು ಅವನ್ನು ಬಂಧಿಸಿರುವ ಸಿಮೆಂಟಿನ ಆಧಾರದ ಮೇರೆಗೆ (1) ಸಂಚಯನ ಮರಳುಶಿಲೆ (ಟೆರ್ರಿಜಿನಸ್ ಸ್ಯಾಂಡ್ ಸ್ಟೋನ್), (2) ಸುಣ್ಣಮರಳು ಶಿಲೆ (ಕ್ಯಾಲ್‍ಕೇರಿಯಸ್ ಸ್ಯಾಂಡ್ ಸ್ಟೋನ್) ಮತ್ತು (3) ಜ್ವಾಲಾಮುಖಿಜನ್ಯ ಮರಳುಶಿಲೆ (ಪೈರೊಕ್ಲಾಸ್ಟಿಕ್ ಸ್ಯಾಂಡ್ ಸ್ಟೋನ್) ಎಂದು ವರ್ಗೀಕರಿಸಲಾಗಿದೆ.

ಜಲಶಿಲಾಸಮೂಹಗಳಲ್ಲಿ ಸಂಚಯನಗೊಂಡ ಮರಳುಶಿಲೆಗಳೇ ಅತ್ಯಂತ ಹೆಚ್ಚು. ಈ ಶಿಲೆಗಳು ಬೋಗುಣಿಗಳ ಹೊರ ಪ್ರದೇಶದಲ್ಲಿಯ ಶಿಲೆಗಳು ಸವೆತಕ್ಕೆ ಈಡಾಗಿ, ಖನಿಜಗಳಾಗಿ ಮಾರ್ಪಟ್ಟು, ಸ್ಥಳಾಂತರಗೊಂಡು, ಬೋಗುಣಿಗಳಲ್ಲಿ ಸಂಚಯನಗೊಂಡುದರ ಫಲವಾಗಿ ಉಂಟಾದಂಥವು. ಸಂಚಯನವಾಗುವಾಗ ಇದ್ದಂಥ ಪರಿಸರ, ವಾಯುಗುಣ ಮತ್ತು ಭೂಭಾಗಗಳ ವಿವರಣೆಗಳನ್ನು ಈ ಶಿಲೆಗಳ ಖನಿಜವಿಜ್ಞಾನದ ಅಧ್ಯಯನದಿಂದ ತಿಳಿಯಬಹುದು. ಸುಣ್ಣ ಮರಳುಶಿಲೆಗಳು ತಮ್ಮಲ್ಲಿಯ ಕಣಗಳ ಜೊತೆಯಲ್ಲಿ ಸಣ್ಣ ಸಣ್ಣ ಸುಣ್ಣ ಶಿಲಾಚೂರುಗಳನ್ನು, ಸುಣ್ಣ ಚಿಪ್ಪು ಚೂರುಗಳನ್ನು ಪಳೆಯುಳಿಕೆಗಳಂತಿರುವ, ಗುಂಡುಕಣಗಳನ್ನು ಸುಣ್ಣದ ಉಂಡೆಗಳು ಮತ್ತು ಸ್ಥಳೀಯವಾಗಿ ಉತ್ಪತ್ತಿಯಾದ ಸುಣ್ಣಕಲ್ಲು ಚೂರುಗಳನ್ನು ಹೊಂದಿರುತ್ತವೆ. ಈ ಕಾರಣಕ್ಕಾಗಿ ಇವನ್ನು ಜೀವ್ಯವಶೇಷವುಳ್ಳ ಚೂರುಗಲ್ಲಿನ ಮರಳು ಶಿಲೆ (ಬಯೋಕ್ಲಾಸ್ಟಿಕ್), ಸುಣ್ಣದ ದುಂಡುಕಣಗಳುಳ್ಳ ಮರಳು ಶಿಲೆ (ಊಲಿಟಿಕ್), ಸುಣ್ಣದ ಉಂಡೆಗಳುಳ್ಳ ಮರಳುಶಿಲೆ(ಪೆಲೇಟಲ್) ಮತ್ತು ಅಂತರಮಿಶ್ರಿತ ಸುಣ್ಣ ಶಿಲಾಚೂರುಗಳುಳ್ಳ ಮರಳು ಶಿಲೆ(ಇಂಟ್ರಕ್ಲಾಸ್ಟಿಕ್) ಎಂದು ವಿಭಾಗಿಸಲಾಗಿದೆ. ಇವು ಸಾಮಾನ್ಯವಾಗಿ ಸಮುದ್ರತಳದ ಪರಿಸರದಲ್ಲಿ ಉಂಟಾಗತಕ್ಕವು. ಜ್ವಾಲಾಮುಖಿಜನ್ಯ ಮರಳುಶಿಲೆಗಳು ಜ್ವಾಲಾಮುಖಿಯ ಚಟುವಟಿಕೆಯಿಂದ ಉಂಟಾದ ಕಲ್ಲುಚೂರುಗಳನ್ನು ಹೆಚ್ಚಾಗಿ ಹೊಂದಿರುತ್ತವೆ. ಇಂಥ ಶಿಲೆಗಳು ಭೂಮಿಯಲ್ಲಿ ಹೆಚ್ಚಾಗಿ ಲಭ್ಯವಿಲ್ಲ. ಇವನ್ನು ಜ್ವಾಲಾಮುಖಿಯ ಗಾಜುಗಳುಳ್ಳ ಮರಳುಶಿಲೆ, ಜ್ವಾಲಾಮುಖಿಯ ಖನಿಜಗಳುಳ್ಳ ಮರಳುಶಿಲೆ ಮತ್ತು ಜ್ವಾಲಾಮುಖಿಯ ಶಿಲಾಚೂರುಗಳುಳ್ಳ ಮರಳುಶಿಲೆ ಎಂದೂ ವಿಭಾಗಿಸಲಾಗಿದೆ.

ಶಿಲಾರಚನೆ[ಬದಲಾಯಿಸಿ]

ಸಂಚಯನ ಪ್ರದೇಶದ ಭೌತಕಾರ್ಯಚರಣೆಗಳು ಮರಳು ಶಿಲೆಗಳ ರಚನೆಯ ಮೇಲೆ ತಮ್ಮ ಗುರುತರ ಮುದ್ರೆಯನ್ನು ಮೂಡಿಸುತ್ತವೆ. ಮರಳುಶಿಲಾರಚನೆಯ ಸಂಬಂಧದಲ್ಲಿ ಅಲ್ಲಿ ಸಂಚಯನಗೊಂಡ ಖನಿಜಗಳ ಆಕಾರ, ದುಂಡಾಗಿರುವಿಕೆ, ಮೇಲ್ಮೈ ಲಕ್ಷಣ, ಗಾತ್ರ ಮತ್ತು ವ್ಯಾಸ ಹಾಗೂ ಅವುಗಳ ರಚನಾಸ್ವರೂಪ (ಫಾಬ್ರಿಕ್) ಮುಖ್ಯಪಾತ್ರ ವಹಿಸುತ್ತವೆ. ಸಾಮಾನ್ಯವಾಗಿ ಮರಳುಶಿಲೆಗಳಲ್ಲಿ ಕಣಗಳ ಅಂತರ್ಭಾಗ ಸಿಲಿಕ ಅಥವಾ ಸುಣ್ಣದ ಕಾರ್ಬೊನೇಟ್ ಇಲ್ಲವೆ ಸೂಕ್ಷ್ಮರೂಪದ ಎರಕವಸ್ತುಗಳಿಂದ ತುಂಬಿರುತ್ತದೆ. ಇವುಗಳ ಆಧಾರದ ಮೇಲೆ ಮರಳುಶಿಲೆಗಳನ್ನು (1) ಮರಳುಶಿಲೆ(ಆರಿನೈಟ್) ಮತ್ತು (2) ಮಡ್ಡಿ ಬೆರೆತ ಶಿಲೆ (ವ್ಯಾಕೀಸ್) ಎಂದು ವಿಂಗಡಿಸಲಾಗಿದೆ. ಶೇಕಡಾ 15 ಕ್ಕಿಂತಲೂ ಕಡಿಮೆಯ ಎರಕವಸ್ತು ಇದ್ದು, ಮರಳುಕಣಗಳು ಒಂದಕ್ಕೊಂದು ಒಟ್ಟುಗೂಡಿ ಶಿಲೀಕರಣಗೊಂಡಿರುವ ಮೊದಲ ವರ್ಗದ ಶಿಲೆಗೆ ಚೊಕ್ಕಟ ಮರಳುಶಿಲೆ (ಕ್ಲೀನ್ ಸ್ಯಾಂಡ್ ಸ್ಟೋನ್) ಎಂದು ಹೆಸರು. ಶೇಕಡಾ 15 ಕ್ಕಿಂತಲೂ ಹೆಚ್ಚಿನ ಭಾಗ ಜೇಡು ಮತ್ತು ಮಡ್ಡಿಗಳನ್ನು ಒಳಗೊಂಡು, ಬಗ್ಗಡ ಪ್ರವಾಹಗಳು ತಂದೊಡ್ಡಿದ್ದ, ಸಂಚಯನದಿಂದ ಉಂಟಾದ ಎರಡನೆಯ ವರ್ಗದ ಶಿಲೆಗಳಿಗೆ ಕಲ್ಮಷಭರಿತ ಮರಳುಶಿಲೆ (ಡರ್ಟಿಸ್ಯಾಂಡ್ ಸ್ಟೋನ್) ಎಂದು ಹೆಸರು.

ಖನಿಜ ಸಂಯೋಜನೆ[ಬದಲಾಯಿಸಿ]

ಮರಳುಶಿಲೆಯಲ್ಲಿ ಬಹುತೇಕ ಖನಿಜಗಳು 0.0625ಮಿಮೀ ನಿಂದ 2ಮಿಮೀ ವರೆಗೆ ವ್ಯಾಸವುಳ್ಳ ಬೆಣಚುಕಣಗಳು, ಫೆಲ್ಡ್ಸ್‍ಪಾರ್‍ಗಳು ಮತ್ತು ಕಲ್ಲು ಚೂರುಗಳು ಇರುತ್ತವೆ. ಇವುಗಳ ಸಮೃದ್ಧಿಗೆ ಅನುಗುಣವಾಗಿ ಮರಳು ಶಿಲೆಗಳನ್ನು 4 ವರ್ಗಗಳಾಗಿ ಪುನರ್ವಿಂಗಡಿಸಲಾಗಿದೆ; (1) ಬೆಣಚುಮರಳು ಶಿಲೆ (ಕ್ವಾಟ್ರ್ಸ್ ಆರಿನೈಟ್), (2) ಆರ್ಕೋಸ್ ಅಥವಾ ಫೆಲ್ಡ್ಸ್‍ಪಾರ್ ಮರಳು ಶಿಲೆ (ಫೆಲ್ಡ್ಸ್‍ಸ್ಪಾಟಿಕ್-ಆರಿನೈಟ್), (3) ಬೂದುಬಣ್ಣದ ಮಡ್ಡಿಶಿಲೆ (ಗ್ರೇವ್ಯಾಕ್) ಮತ್ತು (4) ಕಲ್ಲು ಚೂರುಗಳ ಮರಳುಶಿಲೆ (ಲಿತಿಕ್ ಆರಿ ನೈಟ್). ಬೆಣಚು ಮರಳುಶಿಲೆಯಲ್ಲಿ 90% ಹೆಚ್ಚಿನ ಬೆಣಚುಕಣಗಳಿವೆ. ಫೆಲ್ಡ್ಸ್‍ಪಾರ್ ಮತ್ತು ಕಲ್ಲುಚೂರುಗಳು ಸೇರಿ 10% ಕ್ಕಿಂತಲೂ ಕಡಿಮೆ ಭಾಗವನ್ನು ಆಕ್ರಮಿಸಿರುವ ಅತ್ಯಲ್ಪ ಪ್ರಮಾಣದ ಎರಕವಸ್ತು ಇರುತ್ತದೆ. ಫೆಲ್ಡ್ಸ್‍ಪಾರ್ ಮರಳುಶಿಲೆಯಲ್ಲಿ ದಪ್ಪಕಣಗಳುಳ್ಳ ಬೆಣಚು ಮತ್ತು ಫೆಲ್ಡ್ಸ್‍ಪಾರ್‍ಗಳು ಹೆಚ್ಚಾಗಿರುತ್ತವೆ. ಅದರಲ್ಲೂ ಫೆಲ್ಡ್ಸ್‍ಪಾರ್‍ಗಳೇ 25% ಕಿಂತಲೂ ಹೆಚ್ಚಿನ ಭಾಗದಷ್ಟಿದ್ದು ಅಲ್ಪ ಪ್ರಮಾಣದ ಕಲ್ಲುಚೂರುಗಳು ಕೇವಲ 10%ಕ್ಕೂ ಕಡಿಮೆ ಇದ್ದು ಈ ಬಗೆಯ ಮರಳುಶಿಲೆಗಳು ಎರಕವಸ್ತುವಿನಿಂದ ತುಂಬಿರುತ್ತವೆ. ಬೂದು ಬಣ್ಣದ ಮಡ್ಡಿಶಿಲೆಗಳಲ್ಲಿ 20% ಕ್ಕೂ ಹೆಚ್ಚಿನ ಕಲ್ಲುಚೂರುಗಳು ಮತ್ತು ಕಬ್ಬಿಣಾಂಶವುಳ್ಳ ಖನಿಜಗಳು ಇರುತ್ತವೆ. ಮಾತ್ರವಲ್ಲ 15% ಹೆಚ್ಚಿನ ಜೇಡು ಮತ್ತು ಮಡ್ಡಿ ಇರುತ್ತವೆ. ಕಲ್ಲುಚೂರುಗಳ ಮರಳುಶಿಲೆಗಳಲ್ಲಿ 25%ಕ್ಕೂ ಹೆಚ್ಚು ಭಾಗ ಕಲ್ಲುಚೂರುಗಳಿರುತ್ತವೆ. ಅಲ್ಲದೆ ಇವು 10% ಕಡಿಮೆ ಭಾಗದಷ್ಟು ಫೆಲ್ಡ್ಸ್‍ಪಾರ್‍ಗಳು ಹಾಗೂ ಅಲ್ಪಪ್ರಮಾಣದ ಎರಕವಸ್ತುವಿನಿಂದ ರೂಪಗೊಂಡಿರುತ್ತವೆ.

ಸಂಚಯನ ಪರಿಸರ[ಬದಲಾಯಿಸಿ]

ಮರಳುಶಿಲೆಗಳ ಪ್ರತಿಯೊಂದು ವರ್ಗಗಳೂ ಭೂಕಾಲಮಾನ ಮತ್ತು ಪರಿಸರದಲ್ಲಿ ಸಂಚಯನಗೊಂಡು ಕೆಲವೇ ನಿಗದಿತ ಜಲಜಶಿಲೆಗಳೊಡನೆ ಸಂಪರ್ಕಹೊಂದಿರುತ್ತವೆ. ಬೆಣಚು ಮರಳುಶಿಲೆಗಳು ಸಾಮಾನ್ಯವಾಗಿ ಆಳವಿಲ್ಲದ ಸಮುದ್ರ ಭಾಗಗಳಲ್ಲಿ ಅದರಲ್ಲೂ ಶಿಲೆಗಳು ಹೆಚ್ಚಾಗಿರುವಲ್ಲಿ ಸಂಚಯನ ಗೊಂಡಿರುತ್ತವೆ. ಇದರಿಂದ ಸುಣ್ಣಶಿಲೆಗಳು ಕೆಲವೊಮ್ಮೆ ಜೇಡುಶಿಲೆಗಳೊಡನೆ ಸಹವರ್ತಿಯಾಗಿ ಇರುವುದೂ ಉಂಟು. ಇಂಥ ಮರಳುಶಿಲೆಗಳು ಭೂಕಾಲಮಾನದ ಪ್ರೀಕೇಂಬ್ರಿಯನ್ ಮತ್ತು ಆದಿಜೀವಿಕಲ್ಪದ ಪೂರ್ವಭಾಗದಲ್ಲಿ ಹೆಚ್ಚಾಗಿ ರೂಪುಗೊಂಡಿರುವುದು ಕಂಡುಬಂದಿದೆ. ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿಯ ಗುಹಾಂತರ ದೇವಾಲಯಗಳನ್ನು ಪ್ರೀಕೆಂಬ್ರಿಯನ್ ಕಲ್ಪದ ಬೆಣಚುಶಿಲಾಯುಕ್ತವಾದ ಬೆಟ್ಟಗಳಲ್ಲಿ ನಿರ್ಮಿಸಲಾಗಿದೆ. ದೆಹಲಿ ಮತ್ತು ಆಗ್ರಾದಲ್ಲಿರುವ ಕೆಂಪುಕೋಟೆಗಳು ಕೂಡ ಇದೇ ಕಾಲಮಾನದ ಮರಳುಶಿಲೆಗಳಿಂದ ನಿರ್ಮಾಣವಾದಂಥವು. ಬೂದುಬಣ್ಣದ ಮಡ್ಡಿ ಶಿಲೆಗಳು ಸಮುದ್ರದ ಆಳವಾದ ಭಾಗಗಳಲ್ಲಿ ಸಂಚಯನಗೊಂಡು ಸಮುದ್ರತಳದಲ್ಲಿ ಶೇಖರಣೆಗೊಳ್ಳುವ ಜೇಡಶಿಲೆಗಳೊಡನೆ ಸಂಪರ್ಕಹೊಂದಿರುತ್ತವೆ. ಭೂಚಲನವಲನದಿಂದ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಉತ್ಪತ್ತಿಗೊಂಡ ಬೂದುಮಡ್ಡಿ ಶಿಲೆ-ಮರಳುಶಿಲೆ-ಜೇಡುಶಿಲೆ-ಬಿಳೀಬೆಣಚುಶಿಲೆಗಳ ಶಿಲಾಸರಣಿ ನಿಕ್ಷೇಪಗಳಿಗೆ ಫ್ಲಿಷ್ ಸಂಚಯನಗಳು (ಪ್ಲ್ಲಿಷ್ ಡಿಪಾಸಿಟ್ಸ್) ಎಂದು ಹೆಸರು. ಕಲ್ಲುಚೂರು ಮರಳುಶಿಲೆಗಳಲ್ಲಿ ಚೂಪಾದ ಕಲ್ಲುಚೂರುಗಳು ಹೆಚ್ಚಾಗಿರುತ್ತವೆ. ಇವು ಭೂಮಿಯ ಮೇಲೆ ಪರ್ವತಶ್ರೇಣಿಗಳು ಮೇಲೆತ್ತಲ್ಪಟ್ಟಾಗ ಅವುಗಳ ಪಕ್ಕದಲ್ಲೇ ಉತ್ಪತ್ತಿಗೊಂಡ ಕಲ್ಲುಚೂರುಗಳ ಸಂಚಯನದಿಂದ ಉಂಟಾದಂಥವು. ಇಂಥ ಶಿಲೆಗಳು ಮಧ್ಯಜೀವಿಕಲ್ಪ ಮತ್ತು ಆಧುನಿಕ ಜೀವಿಕಲ್ಪದ ಶಿಲಾಸ್ತೋಮಗಳಲ್ಲಿ ಬಹಳ ಇವೆ. ಕೆಲವು ವೇಳೆ ಆ ಶಿಲಾಸ್ತೋಮಗಳು ನದಿಗಳು ಮತ್ತು ಸಮುದ್ರತೀರ ಪ್ರದೇಶಗಳಲ್ಲಿ ಸಂಚಯನಗೊಂಡ ಮರಳ ನಿಕ್ಷೇಪದಂತೆ ತೋರಿಬರುತ್ತವೆ. ಆರ್ಕೊಸ್ ಅಥವಾ ಫೆಲ್ಡ್ಸ್‍ಪಾರ್ ಮರಳುಶಿಲೆಗಳು ಭೂಚಲನವಲನದಿಂದ ಭೂಖಂಡಗಳಲ್ಲಿ ಸ್ತರಭಂಗಗಳು ಉಂಟಾಗಿ ದೋಣಿಯಾಕಾರದ ಬೃಹತ್ ಬಿರುಕುಕಣಿವೆಗಳು ಉದ್ಭವಿಸಿದಾಗ ಸಂಚಯನಗೊಂಡು ಉಂಟಾದಂಥವು. ಇಂಥ ಶಿಲೆಗಳು ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆ ಜಮಖಂಡಿ ಬಳಿಯ ಸಾಲು ಬೆಟ್ಟಗಳಲ್ಲಿ ವಿಶೇಷವಾಗಿ ಕಾಣಬರುತ್ತವೆ.

ಗ್ರಂಥಸೂಚಿ[ಬದಲಾಯಿಸಿ]

  • Folk, R.L., 1965, Petrology of sedimentary rocks PDF version. Austin: Hemphill's Bookstore. 2nd ed. 1981, ISBN 0-914696-14-9.
  • Pettijohn F. J., P.E. Potter and R. Siever, 1987, Sand and sandstone, 2nd ed. Springer-Verlag. ISBN 0-387-96350-2.
  • Scholle, P.A., 1978, A Color illustrated guide to constituents, textures, cements, and porosities of sandstones and associated rocks, American Association of Petroleum Geologists Memoir no. 28. ISBN 0-89181-304-7.
  • Scholle, P.A., and D. Spearing, 1982, Sandstone depositional environments: clastic terrigenous sediments , American Association of Petroleum Geologists Memoir no. 31. ISBN 0-89181-307-1.
  • USGS Minerals Yearbook: Stone, Dimension, Thomas P. Dolley, U.S. Dept. of the Interior, 2005 (format: PDF).

ಹೆಚ್ಚಿನ ಓದಿಗೆ[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: