ವಿಷಯಕ್ಕೆ ಹೋಗು

ಪುಷ್ಯರಾಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಷ್ಯರಾಗವು ನವರತ್ನಗಳ ಪೈಕಿ ಒಂದು (ಟೋಪಾಜ್). ವಜ್ರದಂತೆ ಇದನ್ನೂ ಕೂಡ ಕಂಡರಿಸಿ ಅಲಂಕರಣ ಆಭರಣವಾಗಿ ಉಪಯೋಗಿಸುತ್ತಾರೆ. ಗಾಜಿನಂಥ ಹೊಳಪಿದೆ. ಒರೆಗೆ ಬಣ್ಣವಿಲ್ಲ. ಶ್ವೇತ, ಹಳದಿ ಹಾಗೂ ಪಾಟಲವರ್ಣದ ಪುಷ್ಯರಾಗ ಆಭರಣ ರತ್ನವಾಗಿ ಹೆಚ್ಚು ಪ್ರಶಸ್ತ ಎನ್ನಿಸಿದೆ. ಮಧ್ಯ ಹಳದಿ (ವೈನ್ ಯೆಲ್ಲೋ). ಗರಿಕೆ ಹಳದಿ, ಬೂದು, ಕೆಲವೊಮ್ಮೆ ನೀಲವರ್ಣಗಳಲ್ಲೂ ಇದು ದೊರೆಯುತ್ತದೆ. ಪಾಟಲವರ್ಣದ ಪುಷ್ಯರಾಗಕ್ಕೆ ಬೇಡಿಕೆ ಹೆಚ್ಚು. ಇತ್ತೀಚಿಗೆ ಕೃತಕವಾಗಿ ಈ ವರ್ಣದ ರತ್ನವನ್ನು ತಯಾರಿಸಲಾಗುತ್ತಿದೆ. ಪುಷ್ಯರಾಗ ಆರ್ಥೋರಾಂಬಿಕ್ ಗಣದಲ್ಲಿ ಸ್ಫಟಿಕೀಕರಿಸುತ್ತದೆ. ಇದು ಪಟ್ಟಕಗಳ ಹರಳಿನಿಂದ ಕೂಡಿರುತ್ತದೆ. ಮೋಕಾಠಿನ್ಯ ಮಾನಕದಲ್ಲಿ ಇದಕ್ಕೆ ಎಂಟನೆಯ ಸ್ಥಾನವಿದೆ. ಅಂದರೆ ಇದರ ಕಾಠಿನ್ಯಾಂಕ 8. ಸಾಂದ್ರತೆ 3.5 ರಿಂದ 3.6 ರ ವರೆಗಿದೆ.

ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಪುಷ್ಯರಾಗ ನಿರ್ವರ್ಣವಾಗಿ ಕಂಡುಬರುತ್ತದೆ. ಅದರಲ್ಲೂ ತಲ ಸೀಳುಗಳನ್ನು ಸ್ಪಷ್ಟವಾಗಿ ಗುರ್ತಿಸಬಹುದು. ಇದರ ವಕ್ರೀಭವನ ಸೂಚ್ಯಂಕ α=1.619, β+=1.2, γ=1.627. ಎಂದರೆ ಕ್ವಾಟ್ರ್ಸ್ ಖನಿಜಕ್ಕಿಂತಲೂ ಇದು ಅಧಿಕ. ಇದರಿಂದಾಗಿಯೇ ಗೋಚರವೂ ನಿಚ್ಚಳ. ದ್ವಿಅಕ್ಷ, ಧನದೃಕ್ ಗುಣ, ನಿಷ್ಕರ್ಷ ಸೀಳು, ಉನ್ನತ ವಕ್ರೀಭವನ ಸೂಚ್ಯಂಕಗಳಿಂದಾಗಿ ಈ ರತ್ನವನ್ನು ಕ್ವಾಟ್ರ್ಸ್ ಖನಿಜದಿಂದ ಸುಲಭವಾಗಿ ಪ್ರತ್ಯೇಕಿಸಬಹುದು.

ಪುಷ್ಯರಾಗ ನೀಸೋಸಿಲಿಕೇಟ್ ಗುಂಪಿಗೆ ಸೇರಿದೆ. ರಾಸಾಯನಿಕವಾಗಿ ಇದೊಂದು ಅಲ್ಯೂಮಿನಿಯಮ್ ಫ್ಲೂರೊ ಸಿಲಿಕೇಟ್ : ಂ12ಈ2Siಔ4. ಇದರಲ್ಲಿ ಫ್ಲೂರಿನ್ನಿನ ಒಂದು ಭಾಗ ಔಊ ಹೈಡ್ರಾಕ್ಸಿಲಿನಿಂದ ಸ್ಥಾನಪಲ್ಲಟಗೊಳ್ಳಬಹುದು. ಆಮ್ಲೀಯ ಅಗ್ನಿ ಶಿಲೆಗಳಾದ ಗ್ರಾನೈಟ್ ಮತ್ತು ರಯೊಲೈಟ್ ಪುಷ್ಯರಾಗದ ಮಾತೃಶಿಲೆಗಳು. ಕೋಲೊರ್ಯಾಡೊದ ಮೋರನ್ ಗ್ರಾನೈಟ್ ಪರ್ವತ ಮತ್ತು ರಯೊಲೈಟ್ ಕುಳಿಗಳಲ್ಲಿ ಈ ರತ್ನ ಗುಚ್ಛರೂಪದಲ್ಲಿ ಚಾಚಿಕೊಂಡಿದೆ. ಕೆಲವೊಮ್ಮೆ ಫ್ಲೂರ್‍ಸ್ಟಾರ್, ಕ್ಯಾಸಿಟೆರೈಟ್ ಹಾಗೂ ಟೂರ್ಮಲೀನಿಗಳಂಥ ಅನಿಲಜನಿಕ ಖನಿಜಗಳೊಡಗೂಡಿ ಇರುವುದು. ಇಂಥ ನಿದರ್ಶನಗಳಲ್ಲಿ ತವರಯುಕ್ತ ಪೆಗ್ಮಟೈಟ್ (ಮಧ್ಯಸ್ಥ ಶಿಲೆ) ಮಾತೃಶಿಲೆಯಾಗಿರುವುದುಂಟು. ಗ್ರಾನೈಟ್ ಶಿಲಾ ಅಂಚಿನ ಸನಿಹದ ಸಂಪರ್ಕ ರೂಪಾಂತರಿತ ವಲಯಗಳಲ್ಲೂ ಪುಷ್ಯರಾಗ ಕಂಡುಬಂದಿರುವ ನಿದರ್ಶನಗಳಿವೆ. ಪುಷ್ಯರಾಗಕ್ಕೆ ಹೆಸರಾಂತ ಪ್ರದೇಶಗಳೆಂದರೆ ರಷ್ಯದ ಯುರೇಲ್ ಪರ್ವತ, ಬೋಹೀಮಿಯ, ನಾರ್ವೆ, ಸ್ವೀಡನ್ ಸ್ಯಾಕ್ಸೋನಿ, ನೈಜೀರಿಯ, ಜಪಾನ್, ಬ್ರಜಿಲ್, ಮೆಕ್ಸಿಕೊ, ನ್ಯೂ ಸೌತ್ ವೇಲ್ಸ್, ಟಾಸ್ಮೇನಿಯ, ಸಂಯುಕ್ತ ಸಂಸ್ಥಾನ ಹಾಗೂ ರೋಡಿಷಿಯ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: