ಬಿಸಿನೀರಿನ ಚಿಲುಮೆ
ಬಿಸಿನೀರಿನ ಬುಗ್ಗೆ (ಬಿಸಿನೀರಿನ ಚಿಲುಮೆ) ಭೂಮಿಯ ಅಂತರಾಳದಲ್ಲಿನ ಶಾಖಭರಿತ ನೀರು ಭೂಮಿಯ ಮೇಲ್ಪದರದಿಂದ ಹೊರಕ್ಕೆ ಚಿಮ್ಮಿದಾಗ ಉಂಟಾಗುತ್ತದೆ. ಪೃಥ್ವಿಯ ಎಲ್ಲಾ ಭೂಖಂಡಗಳಲ್ಲಿ ಮತ್ತು ಸಮುದ್ರ, ಸಾಗರಗಳಲ್ಲಿ ಸಹ ಬಿಸಿನೀರಿನ ಬುಗ್ಗೆಗಳಿವೆ. ಭೂಮಿಯ ನಾನಾಕಡೆ ನೀರು ನೆಲದಿಂದ ಹೊರಚಿಮ್ಮಿದರೂ ಸಹ ಅವುಗಳಲ್ಲಿನ ನೀರಿನ ತಾಪಮಾನವು ವಾತಾವರಣದ ತಾಪಮಾನಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದಾಗ ಮಾತ್ರ ಅಂತಹ ಚಿಲುಮೆಗಳು ಬಿಸಿನೀರಿನ ಚಿಲುಮೆಗಳೆನ್ನಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಇಂತಹ ಬುಗ್ಗೆಗಳಲ್ಲಿ ನೀರಿನ ಉಷ್ಣತೆ ೫೦ ಡಿ. ಸೆಲ್ಸಿಯಸ್‌ಗಿಂತ ಹೆಚ್ಚು.[೧]
ಬುಗ್ಗೆಯ ಬಿಸಿನೀರು
[ಬದಲಾಯಿಸಿ]ಸಾಮಾನ್ಯವಾಗಿ ಬಿಸಿನೀರಿನ ಬುಗ್ಗೆಯ ನೀರು ತನ್ನ ಶಾಖವನ್ನು ಭೂಗರ್ಭದಲ್ಲಿನ ಶಿಲೆಗಳಿಂದ ಪಡೆದುಕೊಳ್ಳುತ್ತದೆ. ಭೂಮಿಯ ಆಳಕ್ಕೆ ಹೋದಂತೆಲ್ಲ ಒಳಗಿನ ಶಿಲೆಗಳ ತಾಪಮಾನವು ಹೆಚ್ಚುತ್ತಾ ಹೋಗುತ್ತದೆ. ನೀರು ಇಲ್ಲಿ ಕೆಳಕ್ಕೆ ಇಳಿದಂತೆ ಅಲ್ಲಿನ ಶಿಲೆಗಳ ಸಂಪರ್ಕದಿಂದಾಗಿ ಅದರ ಶಾಖವು ಹೆಚ್ಚುತ್ತದೆ. ಪೃಥ್ವಿಯ ಜ್ವಾಲಾಮುಖಿರಹಿತ ಪ್ರದೇಶಗಳಲ್ಲಿ ಈ ವಿಧಾನದಿಂದಾಗಿ ಬುಗ್ಗೆಯ ನೀರು ಬಿಸಿಯಾಗುತ್ತದೆ. ಇನ್ನು ಜ್ವಾಲಾಮುಖಿಯುಳ್ಳ ಪ್ರದೇಶಗಳಲ್ಲಿ ನೀರು ಅಲ್ಲಿನ ಕರಗಿರುವ ಶಿಲೆಗಳ (ಮ್ಯಾಗ್ಮಾ) ಸಂಪರ್ಕದಿಂದಾಗಿ ಅತಿಯಾಗಿ ಬಿಸಿಯಾಗುವುದು. ಇಂತಹ ಸಂದರ್ಭಗಳಲ್ಲಿ ನೀರು ಕುದಿಯುವ ತಾಪಮಾನಕ್ಕಿಂತ ಹೆಚ್ಚು ಶಾಖವನ್ನು ಹೊಂದಿ ಬಹ್ವಂಶ ಆವಿಯಾಗಿ ಪರಿವರ್ತಿತವಾಗುವುದು. ಇಂತಹ ನೀರು ಅತೀವ ಒತ್ತಡವನ್ನು ಸಹ ಒಳಗೊಂಡಿದ್ದು ಭೂಪದರವನ್ನು ಭೇದಿಸಿ ಬಲು ಎತ್ತರದವರಗೆ ಕಾರಂಜಿಯಾಗಿ ಚಿಮ್ಮುತ್ತದೆ. ಇಂತಹ ಬುಗ್ಗೆಗಳಲ್ಲಿ ಗೀಸರ್, ಫ್ಯುಮರೋಲ್, ಮಡ್ ಫಾರ್ಮ್ ಎಂಬ ಹಲವು ವಿಧಗಳಿವೆ. ಇಂತಹ ಬುಗ್ಗೆಗಳ ನೀರು ಅತಿ ಬಿಸಿಯಾಗಿದ್ದು ಇದರ ಸಂಪರ್ಕದಿಂದಾಗಿ ಹಲವರು ತೀವ್ರ ಸುಟ್ಟಗಾಯಗಳನ್ನು ಅನುಭವಿಸಿದ್ದಿದೆ.
ಸಣ್ಣ ಪ್ರಮಾಣದ ಒಸರುವಿಕೆಯಿಂದ ಹಿಡಿದು ದೊಡ್ಡ ಬಿಸಿನೀರಿನ ನದಿಗಳ ಪ್ರಮಾಣದವರೆಗೆ ಬಿಸಿನೀರಿನ ಬುಗ್ಗೆಯು ನೀರನ್ನು ಹೊರಚೆಲ್ಲುವುದು. ಪ್ರತಿ ಸೆಕೆಂಡಿಗೆ ಒಂದು ಲೀಟರ್‌ಗಿಂತ ಹೆಚ್ಚಿನ ಬಿಸಿನೀರನ್ನು ಹೊರಚಿಮ್ಮುವ ಬುಗ್ಗೆಗಳನ್ನು ಗಣನೀಯವೆಂದು ಪರಿಗಣಿಸಲಾಗುತ್ತದೆ. ಚಿಲುಮೆಯ ಅತೀವ ಶಾಖಭರಿತ ನೀರಿನಲ್ಲಿ ಸಹ ಕೆಲ ಜೀವಿಗಳು ಇದ್ದು ಇವು ಕೆಲವೇಳೆ ಮಾನವನಿಗೆ ರೋಗಗಳನ್ನು ಉಂಟುಮಾಡುವುದಿದೆ. ಆದರೆ ಈ ಚಿಲುಮೆಗಳಲ್ಲಿನ ನೀರಿನಲ್ಲಿ ಹಲವು ವಿಧದ ಖನಿಜಗಳು ಕರಗಿದ್ದು ಸಾಮಾನ್ಯವಾಗಿ ಬಿಸಿನೀರಿನ ಬುಗ್ಗೆಗಳ ನೀರು ಮಾನವರ ಹಲವು ರೋಗಗಳಿಗೆ ಶಮನಕಾರಿಯೆಂದು ನಂಬಿಕೆಯಿದ್ದು ಈ ಬುಗ್ಗೆಗಳ ನೀರಿನಲ್ಲಿ ಸ್ನಾನವು ಅತಿ ಜನಪ್ರಿಯವಾಗಿದೆ. ಹಲವು ಬಿಸಿನೀರಿನ ಚಿಲುಮೆಗಳ ನೀರು ಗಂಧಕವನ್ನು ಹೆಚ್ಚಾಗಿ ಒಳಗೊಂಡಿದ್ದು ಇದು ಚರ್ಮರೋಗಗಳನ್ನು ಗುಣಪಡಿಸುವಲ್ಲಿ ಗಣನೀಯವಾಗಿ ಸಹಕಾರಿಯಾಗಿದೆ.
ವಿಶ್ವದ ಪ್ರಸಿದ್ಧ ಬಿಸಿನೀರಿನ ಚಿಲುಮೆಗಳು
[ಬದಲಾಯಿಸಿ]ಜಗತ್ತಿನ ಎಲ್ಲೆಡೆ ಬಿಸಿನೀರಿನ ಬುಗ್ಗೆಗಳಿದ್ದರೂ ಚೀನಾ, ಕೋಸ್ಟ ರಿಕ, ಐಸ್‌ಲ್ಯಾಂಡ್, ನ್ಯೂಜಿಲೆಂಡ್, ಕೆನಡಾ, ಪೆರು, ಟೈವಾನ್ ಮತ್ತು ಜಪಾನ್ ದೇಶಗಳು ಬಿಸಿನೀರಿನ ಚಿಲುಮೆಗಳಿಗೆ ಹೆಸರಾಗಿವೆ.
ವಿಶ್ವದ ಕೆಲ ಪ್ರಸಿದ್ಧ ಬಿಸಿನೀರಿನ ಬುಗ್ಗೆಗಳು ಇಂತಿವೆ:
- ಐಸ್‌ಲ್ಯಾಂಡ್‌ನ ಗೀಸರ್ ಚಿಲುಮೆ. ಗೀಸರ್ ಪದವು ಈ ಚಿಲುಮೆಯ ಹೆಸರಿನಿಂದಲೇ ಬಂದಿದೆ.
- ಕೋಸ್ಟ ರಿಕದ ರಿಂಕನ್ ಡಿ ಲಾ ವಿಯೇಜಾ ರಾಷ್ಟ್ರೀಯ ಉದ್ಯಾನವು ಹಲವು ವಿಧದ ಬಿಸಿನೀರಿನ ಚಿಲುಮೆಗಳನ್ನು ಹೊಂದಿದೆ. ಇಲ್ಲಿನ ಬುಗ್ಗೆಗಳಲ್ಲಿ ಕೆಲವು ಸಧಾರಣ ಬಿಸಿನೀರನ್ನು ಹೊಂದಿದ್ದರೆ ಇನ್ನು ಕೆಲವಿ ಗಂಧಕಯುಕ್ತ ಬಿಸಿನೀರನ್ನು ಮತ್ತೂ ಕೆಲವು ಕೆಸರುಯುಕ್ತ ಬಿಸಿನೀರನ್ನು ಹೊಂದಿವೆ.
- ಜರ್ಮನಿಯ ಆಚೆನ್ ಬುಗ್ಗೆಯು ೭೪ ಡಿ. ಸೆಂ. ಉಷ್ಣತೆಯ ಬಿಸಿನೀರನ್ನು ಹೊರಚಿಮ್ಮಿಸುತ್ತದೆ.
- ಟಿಬೆಟ್‌ನ ಯಾಂಗ್‌ಬಾಜಿಂಗ್ ಚಿಲುಮೆ ಪ್ರದೇಶವು ಹಲವು ಚ.ಕಿ.ಮೀ. ವಿಸ್ತಾರವಾಗಿದ್ದು ಲ್ಹಾಸಾ ನಗರಕ್ಕೆ ಈ ಬುಗ್ಗೆಗಳಿಂದ ಉತ್ಪಾದಿಸಲ್ಪಟ್ಟ ವಿದ್ಯುತ್ತನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಚಿಲುಮೆಗಳು ಜಗತ್ತಿನಲ್ಲಿ ಅತಿ ಎತ್ತರದ ಪ್ರದೇಶದಲ್ಲಿನ ಬಿಸಿನೀರಿನ ಚಿಲುಮೆಗಳೆಂದು ಅಭಿಪ್ರಾಯಗಳಿವೆ.
- ಟೈವಾನ್ ದೇಶದಲ್ಲಿ ದೊಡ್ಡ ಸಂಖ್ಯೆಯ ಬಿಸಿನೀರಿನ ಚಿಲುಮೆಗಳು, ಶೀತಲ ನೀರಿನ ಬುಗ್ಗೆಗಳು, ಕೆಸರುನೀರಿನ ಚಿಲುಮೆಗಳು ಹಾಗೂ ಸಾಗರದಡಿಯ ಚಿಲುಮೆಗಳಿವೆ.
- ಗ್ರೀಸ್ ದೇಶದ ಇಕಾರಿಯಾ ಬಿಸಿನೀರಿನ ಚಿಲುಮೆಯು ವಿಕಿರಣಯುಕ್ತ ನೀರನ್ನು ಹೊಂದಿದೆ.
- ಐಸ್‌ಲ್ಯಾಂಡ್‌ನ ಡೆಯಿಲ್ಡ್‌ಆರ್ಟುಂಗುವರ್ ಚಿಲುಮೆಯ ನೀರು ೯೭ ಡಿ. ಸೆಂ. ಉಷ್ಣತೆಯ ನೀರನ್ನು ಹೊಂದಿದ್ದು ಈ ನೀರನ್ನು ಹಲವು ಕಿ.ಮೀ. ದೂರದವರೆಗೆ ಕೊಳವೆಗಳ ಮುಖಾಂತರ ಹಾಯಿಸಿ ಸಮೀಪ ಪಟ್ಟಣಗಳನ್ನು ಬೆಚ್ಚಗಿಡಲು ಉಪಯೋಗಿಸಲಾಗುತ್ತಿದೆ.
- ಭಾರತದಲ್ಲಿ ಮಣಿಕರಣ್, ಬದರಿನಾಥ, ಯಮುನೋತ್ರಿ ಮುಂತಾದ ಹಲವು ತೀರ್ಥಕ್ಷೇತ್ರಗಳಲ್ಲಿ ಬಿಸಿನೀರಿನ ಚಿಲುಮೆಗಳಿವೆ. ಕರ್ಣಾಟಕದ ಪುತ್ತೂರಿನ ಸಮೀಪದ ಬೆಂದ್ರ್ ತೀರ್ಥ ಸಹ ಒಂದು ಪ್ರಸಿದ್ಧ ಬಿಸಿನೀರಿನ ಚಿಲುಮೆ.
ಉಲ್ಲೇಖಗಳು
[ಬದಲಾಯಿಸಿ]