ವಿಷಯಕ್ಕೆ ಹೋಗು

ಗೀಸರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಿ ಸುಮಾರು ನಿಯತಾಂತರಗಳಲ್ಲಿ ಬಿಸಿನೀರಿನ ಒಂದು ರಾಶಿಯನ್ನೋ ಉಗಿಯ ಮೊತ್ತವನ್ನೋ ವಾಯು ಮಂಡಲಕ್ಕೆ ಚಿಮ್ಮಿಸುವ ನೈಸರ್ಗಿಕ ಚಿಲುಮೆ ಇಲ್ಲವೇ ಒರತೆ. ಇದೊಂದು ವಿಶಿಷ್ಟ ರೀತಿಯ ಊಟೆ. ಗೀಸóರಿನಿಂದ ಚಿಮ್ಮಿದ ನೀರು ಕೆಲವು ಮೀಟರುಗಳಿಂದ ಹಲವು ನೂರು ಮೀಟರುಗಳಷ್ಟು ಎತ್ತರಕ್ಕೂ ರಟ್ಟುವುದುಂಟು. ಆ ವೇಳೆಗೆ ಉಗಿ ಇನ್ನಷ್ಟು ಎತ್ತರ ಏರಬಹುದು. ಗೀಸರ್ ಪದ ಐಸ್ಲೆಂಡಿನವರ ಭಾಷೆಯದು; ಇದರ ಅರ್ಥ ಚಿಮ್ಮುಗ ಎಂದು.

ಎಲ್ಲೆಲ್ಲಿ[ಬದಲಾಯಿಸಿ]

ಗೀಸರುಗಳು ಪ್ರಪಂಚದ ಅಪೂರ್ವ ವಿದ್ಯಮಾನಗಳಲ್ಲಿ ಒಂದು. ಅಮೆರಿಕದ ಸಂಯುಕ್ತ ಸಂಸ್ಥಾನಗಳ ವ್ಯೋಮಿಂಗಿನ ಎಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್, ನ್ಯೂಜಿಲೆಂಡ್, ಐಸ್ಲೆಂಡ್, ಅಲಾಸ್ಕ, ಚಿಲಿ, ಟಿಬೆಟ್, ಜಪಾನ್ ಮತ್ತು ಇಂಡೊನೇಷ್ಯಗಳಲ್ಲಿ ಗೀಸರುಗಳನ್ನು ಕಾಣಬಹುದು. ಇವುಗಳ ಪೈಕಿ ಯೆಲ್ಲೋಸ್ಟೋನ್ ಪಾರ್ಕ್ ಸುಪ್ರಸಿದ್ಧವಾದದ್ದು. ಅಲ್ಲಿ 100ಕ್ಕೂ ಮಿಕ್ಕಿದ ಪಟುಗೀಸರುಗಳೂ 3,000ಕ್ಕೂ ಮಿಕ್ಕಿದ ಚಿಮ್ಮದ ಬಿಸಿನೀರಿನ ಒರತೆಗಳೂ ಇವೆ. ಇವುಗಳ ಪೈಕಿ ಓಲ್ಡ್ ಫೇತ್ಫುಲ್ ಎಂಬ ಹೆಸರಿನ ಗೀಸರ್ ಪ್ರಸಿದ್ಧವಾದದ್ದು. ಸುಮಾರಾಗಿ ಗಂಟೆಗೊಂದು ಸಲ ಇದು ನೆಗೆಯುತ್ತದೆ. ಐದು ಮಿನಿಟುಗಳ ವರೆಗೆ ಚಿಮ್ಮುತ್ತಿದ್ದು ಮತ್ತೆ ಶಾಂತವಾಗುತ್ತದೆ. ಇದರಿಂದ ರಟ್ಟುವ ಕುದಿನೀರು ಸುಮಾರು 45.5 ಮೀ.ಗಳಷ್ಟು ಎತ್ತರ ಏರುವುದು; ಅದರೊಂದಿಗೆ ಸಾಕಷ್ಟು ಉಗಿಯೂ ಹೊರ ಹೊಮ್ಮುವುದು. ಅದೇ ಪಾರ್ಕಿನಲ್ಲಿರುವ ಕ್ಯಾಸಲ್ ಎನ್ನುವ ಇನ್ನೊಂದು ಗೀಸóರಿನಿಂದ ಹಾರುವ ನೀರು 79 ಮೀ.ಗಳನ್ನು ಮೀರಿದ ಎತ್ತರ ತಲಪುವುದುಂಟು.

ಕಾರಣ[ಬದಲಾಯಿಸಿ]

ಗೀಸರುಗಳ ಉದ್ಭೇದಕ ಪ್ರವೃತ್ತಿಯ ಕಾರಣ ನೆಲದಡಿಯಲ್ಲೇ ಅನತಿ ಆಳದಲ್ಲಿರುವ ಬಲುಕಾವಿನ ಕಲ್ಲುಗಳ ರಾಶಿ ಎಂದು ಊಹಿಸಲಾಗಿದೆ. ಜ್ವಾಲಾಮುಖಿಪಟುತ್ವ ತೀರ ಈಚೆಗಿದ್ದ ಪ್ರದೇಶಗಳಿಗೆ ಮಾತ್ರ ಗೀಸರುಗಳ ವಿತರಣೆ ಸೀಮಿತವಾಗಿರುವುದು ಮೇಲಿನ ಊಹೆಗೆ ಸಮರ್ಥನೆ ನೀಡುವುದು. ಗೀಸರಿನ ಕತ್ತು ಸಾಮಾನ್ಯವಾಗಿ ಅನಿಯತಾಕಾರದ ಒಂದು ನಾಳ. ಆಸುಪಾಸಿನ ಕಲ್ಲುಗಳಿಂದ ಒಸರಿದ ನೀರು ಅದರಲ್ಲಿ ಆಂಶಿಕವಾಗಿ ತುಂಬಿಕೊಂಡಿರುತ್ತದೆ. ಅಲ್ಲಿಂದ ಸಾಕಷ್ಟು ಆಳದಲ್ಲಿರುವ ನೀರು ತಳದ ಸುಡುಗಲ್ಲಿನ ಪ್ರಭಾವದಿಂದ ಕುದಿಬಿಂದುವಿನಲ್ಲಿರುತ್ತದೆ. ಒಸರು ನೀರು ಈ ವಲಯದಲ್ಲಿ ಒಟ್ಟಾದಂತೆ ನೀರಿನ ಗಾತ್ರ ಮತ್ತು ಒತ್ತಡ ಉಷ್ಣತೆಯೊಂದಿಗೆ ಏರುತ್ತವೆ. ಒಂದಷ್ಟು ಅಂಶ ಉಗಿಯಾಗಿ ರಭಸದಿಂದ ಮೇಲೇರಲು ತೊಡಗುತ್ತದೆ. ಅದರೊಂದಿಗೆ ನೀರು ಮೇಲಕ್ಕೆ ಚಿಮ್ಮುತ್ತದೆ. ಈ ಉಗಿಮಿಶ್ರಿತ ಬಿಸಿನೀರು ಗೀಸರಿನ ಕತ್ತಿನಲ್ಲಿದ್ದ ನೀರನ್ನು ಬಾಯಿಯೆಡೆಗೆ ತಳ್ಳುತ್ತ ದಾರಿಮಾಡಿಕೊಂಡು ಮಹಾ ವೇಗದಿಂದ ಆಕಾಶಕ್ಕೆ ನೆಗೆಯುತ್ತದೆ. ಇದೇ ಗೀಸರ್.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಗೀಸರ್&oldid=877661" ಇಂದ ಪಡೆಯಲ್ಪಟ್ಟಿದೆ