ವಜ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಜ್ರವು ಇಂಗಾಲದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು. ಅಲ್ಲದೆ ಇದುವರೆಗೆ ತಯಾರಾಗಿರುವ ವಸ್ತುಗಳಲ್ಲಿ ಮೂರನೆಯ ಅತಿ ಕಠಿಣ ವಸ್ತು. ವಜ್ರವು ತನ್ನ ಕಾಠಿಣ್ಯ ಮತ್ತು ಬೆಳಕನ್ನು ಚದುರಿಸುವ ಗುಣಗಳಿಂದಾಗಿ ಆಭರಣಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ "It is a beautiful thing in the world".

ವಜ್ರವು ತನ್ನ ಕೆಲವು ಅತಿ ವಿಶಿಷ್ಟ ಭೌತಿಕ ಗುಣಗಳಿಗೆ ಹೆಸರಾಗಿದೆ. ಅತಿ ಕಠಿಣವಾಗಿರುವುದರಿಂದ ವಜ್ರವನ್ನು ಘರ್ಷಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಒಂದು ವಜ್ರವನ್ನು ಗೀರಲು ಇನ್ನೊಂದು ವಜ್ರವೇ ಬೇಕು ಅಥವಾ ಬೋರಜೋನ್, ಅತಿ ಗಡಸು ಫುಲ್ಲರೈಟ್ ಅಥವ ವಜ್ರದ ನ್ಯಾನೋಕೊಳವೆಗಳು ಬೇಕು. ವಜ್ರವು ತನ್ನ ಹೊಳಪನ್ನು ಮತ್ತು ಮೆರುಗನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು.

ಪ್ರತಿವರ್ಷ ಸುಮಾರು ೧೩ ಕೋಟಿ ಕ್ಯಾರಟ್ (೨೬೦೦೦ ಕಿ.ಗ್ರಾಂ) ಗಳಷ್ಟು ವಜ್ರವನ್ನು ಗಣಿಗಳಿಂದ ಪಡೆಯಲಾಗುವುದು. ಇದರ ಒಟ್ಟು ಮೌಲ್ಯ ಸುಮಾರು ೯ ಬಿಲಿಯನ್ ಡಾಲರುಗಳಷ್ಟು. ಇದಲ್ಲದೆ ಸಾಲಿಯಾನ ಸುಮಾರು ೧೦೦,೦೦೦ ಕಿಲೋಗ್ರಾಂ ಗಳಷ್ಟು ಕೃತಕ ವಜ್ರವನ್ನು ಉತ್ಪಾದಿಸಲಾಗುತ್ತದೆ. ಈ ಕೃತಕ ವಜ್ರವು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ.

ವಜ್ರದ ಆಂಗ್ಲ ಹೆಸರಾದ ಡೈಮಂಡ್ ಪದವು ಅಜೇಯ ಎಂಬ ಅರ್ಥವುಳ್ಳ ಅದಮಾಸ್ ಎಂಬ ಗ್ರೀಕ್ ಶಬ್ದದಿಂದ ವ್ಯುತ್ಪತ್ತಿಯಾಗಿದೆ. ಅತಿ ಪ್ರಾಚೀನ ಕಾಲದಿಂದಲೂ ವಜ್ರಗಳನ್ನು ಧಾರ್ಮಿಕ ಸಂಕೇತಗಳಾಗಿ ಮತ್ತು ಕೊರೆಯುವ ಸಾಧನಗಳಾಗಿ ಮಾನವನು ಬಳಸುತ್ತಾ ಬಂದಿರುವನು. ಅಮೂಲ್ಯರತ್ನವನ್ನಾಗಿ ವಜ್ರವನ್ನು ಜೋಪಾನ ಮಾಡಿಕೊಂಡೂ ಬಂದಿರುವನು. ೧೯ನೆಯ ಶತಮಾನದಿಂದೀಚೆಗೆ ವಜ್ರದ ಜನಪ್ರಿಯತೆ ಹೆಚ್ಚುತ್ತಲೇ ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ವಜ್ರಗಳ ಲಭ್ಯತೆ, ಕತ್ತರಿಸಲು ಮತ್ತು ಹೊಳಪು ನೀಡಲು ಉತ್ತಮ ನವೀನ ತಂತ್ರಜ್ಞಾನ ಮತ್ತು ಒಟ್ಟಾರೆ ವಿಶ್ವದ ಆರ್ಥಿಕ ಸ್ಥಿತಿಯ ಮೇಲ್ಮುಖ ಪ್ರಗತಿ ಇವುಗಳು ವಜ್ರವನ್ನು ಹೆಚ್ಚುಹೆಚ್ಚು ಜನರೆಡೆಗೆ ತಲುಪಿಸುತ್ತಿವೆ.

ವಜ್ರದ ಗುಣಮಟ್ಟವನ್ನು ಅದರ ತೂಕ (ಕ್ಯಾರಟ್), ಬಣ್ಣ, ಕತ್ತರಿಸಲ್ಪಟ್ಟ ರೀತಿ ಮತ್ತು ಸ್ಪಷ್ಟತೆಗಳಿಂದ ಅಳೆಯಲಾಗುತ್ತದೆ.

ಜಗತ್ತಿನ ಒಟ್ಟು ನೈಸರ್ಗಿಕ ವಜ್ರಗಳಲ್ಲಿ ೪೯% ಪಾಲು ಮಧ್ಯ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ದೊರೆಯುತ್ತದೆ. ಉಳಿದಂತೆ ಕೆನಡ, ಭಾರತ, ರಷ್ಯಾ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಸಹ ಗಣನೀಯ ಪ್ರಮಾಣದ ವಜ್ರದ ನಿಕ್ಷೇಪವಿರುವುದು ಕಂಡುಬಂದಿದೆ. ವಜ್ರವನ್ನು ಕಿಂಬರ್ಲೈಟ್ ಮತ್ತು ಲಾಂಪೊರೈಟ್ ಗಳಿಂದ ಗಣಿಗಾರಿಕೆಯ ಮೂಲಕ ತೆಗೆಯಲಾಗುವುದು. ಈ ಎರಡೂ ಅದಿರುಗಳು ಭೂಗರ್ಭದಿಂದ ಜ್ವಾಲಾಮುಖಿಗಳ ಚಟುವಟಿಕೆಯಿಂದಾಗಿ ಮೇಲ್ಭಾಗಕ್ಕೆ ತಳ್ಳಲ್ಪಟ್ಟವಾಗಿವೆ. ಸಾಮಾನ್ಯವಾಗಿ ವಜ್ರದ ಹರಳುಗಳು ಬಹಳ ಆಳದಲ್ಲಿ ಅತಿಯಾದ ಉಷ್ಣತೆ ಮತ್ತು ಒತ್ತಡಗಳಿರುವ ಸನ್ನಿವೇಶದಲ್ಲಿ ಸೃಷ್ಟಿಯಾಗುತ್ತವೆ.

ವಜ್ರದ ಗುಣಗಳು[ಬದಲಾಯಿಸಿ]

ವಜ್ರವು ಒಂದು ಪಾರದರ್ಶಕ ಹರಳು. ಇದರಲ್ಲಿ ಇಂಗಾಲದ ಪರಮಾಣು ಒಂದು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಸಲ್ಪಟ್ಟಿರುತ್ತವೆ. ತನ್ನ ಹಲವು ಅದ್ಭುತ ಭೌತಿಕ ಗುಣಗಳಿಂದಾಗಿ ವಜ್ರವು ಹಲವು ಉಪಯೋಗಗಳನ್ನು ಕಂಡಿದೆ. ವಜ್ರವು ಅತಿ ಕಠಿಣ ವಸ್ತು. ಇದರ ಬೆಳಕು ಚದುರಿಸುವಿಕೆಯ ಸೂಚ್ಯಂಕ ಬಹಳ ಹೆಚ್ಚು. ವಜ್ರವು ಅತುತ್ತಮ ಉಷ್ಣವಾಹಕ ಕೂಡ. ವಜ್ರವು ೩೫೪೭ ಡಿಗ್ರಿ ಸೆಂಟಿಗ್ರೇಡ್ ತಾಪಮಾನ್ದಲ್ಲಿ ಕರಗುವುದು ಮತ್ತು ೪೮೨೭ ಡಿಗ್ರಿಯಲ್ಲಿ ಕುದಿಯುತ್ತದೆ. ನೈಸರ್ಗಿಕ ವಜ್ರದ ಸಾಂದ್ರತೆ ಪ್ರತಿ ಘನ ಸೆಂಟಿಮೀಟರಿಗೆ ೩. ೧೫ ರಿಂದ ೩. ೫೩ ಗ್ರಾಂ ಗಳಷ್ಟಿರುವುದು. ಅತಿ ಶುದ್ಧ ವಜ್ರದ ಸಾಂದ್ರತೆ ೩.೫೨ ಗ್ರಾಂ ನಷ್ಟು.

ಕಾಠಿಣ್ಯ[ಬದಲಾಯಿಸಿ]

ಮಾನವನಿಗೆ ತಿಳಿದಿರುವ ಪ್ರಾಕೃತಿಕ ವಸ್ತುಗಳಲ್ಲಿ ವಜ್ರ ಎಲ್ಲಕ್ಕಿಂತ ಕಠಿಣ. ಇದತ ಕಾಠಿಣ್ಯವನ್ನು ಖನಿಜಗಳ ಕಠಿಣತೆಯ ಮಾನದಂಡದಲ್ಲಿ ವಜ್ರಕ್ಕೆ ೧೦ ಅಂಕಗಳನ್ನು ನೀಡಲಾಗಿದೆ. ಅಲ್ಲದೆ ಬೇರೆ ಅಳತೆಗೋಲಿನ ಪ್ರಕಾರ ಪರೀಕ್ಷೆಗಳಲ್ಲಿ ವಜ್ರವು ೯೦,೧೬೭ ರಿಂದ ೨೩೧ ಗಿಗಾಪಾಸ್ಕಲ್ ನಷ್ಟು ಕಾಠಿಣ್ಯ ಹೊಂದಿರುವುದೆಂದು ಕಂಡುಕೊಳ್ಳಲಾಗಿದೆ.

ಜಗತ್ತಿನ ಅತಿ ಕಠಿಣ ವಜ್ರಗಳು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರಾಂತ್ಯದಲ್ಲಿ ದೊರೆಯುತ್ತವೆ. ಈ ವಜ್ರಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ಹೆಚ್ಚೂಕಡಿಮೆ ಪರಿಪೂರ್ಣ ಅಷ್ಟಮುಖಿಗಳು. ಇವನ್ನು ಇತರ ವಜ್ರಗಳಿಗೆ ಸಾಣೆ ಹಿಡಿಯಲು ಮತ್ತು ಹೊಳಪು ಬರಿಸಲು ಉಪಯೋಗಿಸುವರು. ಬಹುಶಃ ಈ ವಜ್ರಗಳ ಸೃಷ್ಟಿಯು ಒಂದೇ ಘಟ್ಟದಲ್ಲಿ ಪೂರ್ಣಗೊಂಡುದರಿಂದ ಇವುಗಳ ಕಾಠಿಣ್ಯ ಅತಿ ಹೆಚ್ಚೆಂದು ನಂಬಲಾಗಿದೆ. ಇತರ ವಜ್ರಗಳ ಸೃಷ್ಟಿ ಮತ್ತು ಬೆಳವಣಿಗೆ ಹಲವು ಘಟ್ಟಗಳನ್ನು ಒಳಗೊಂಡಿರುವುದು. ಹಲವು ಘಟ್ಟಗಳಲ್ಲಿ ವಜ್ರ ಉಂಟಾಗುವಾಗ ಅದರಲ್ಲಿ ದೋಷಗಳು ಮತ್ತು ಕೊಂಚ ವಕ್ರತೆ ಸಹ ಮೂಡಿ ವಜ್ರದ ಕಾಠಿಣ್ಯ ಕಡಿಮೆಯಾಗುವುದು.

ಅತಿ ಗಡಸಾಗಿರುವುದರಿಂದ ವಜ್ರವು ರತ್ನವಾಗಿ ಇರಿಸಿಕೊಳ್ಳಲು ಅನುವಾಗಿದೆ. ಈ ಗುಣದಿಂದಾಗಿಯೇ ವಜ್ರದ ಆಭರಣಗಳನ್ನು ದಿನಾ ತೊಟ್ಟರೂ ವಜ್ರದ ಹೊಳಪಾಗಲೀ ಮೆರುಗಾಗಲೀ ಕುಂದುವುದಿಲ್ಲ. ಅಲ್ಲದೇ ಯಾವುದೇ ಗೀರುಗಳಾಗುವುದಿಲ್ಲ.

ಕೈಗಾರಿಕೆಗಳಲ್ಲಿ ತನ್ನ ಕಾಠಿಣ್ಯದ ಕಾರಣದಿಂದಾಗಿ ವಜ್ರವು ಕತ್ತರಿಸುವ ಮತ್ತು ಅರೆಯುವ ಸಾಧನಗಳಲ್ಲಿ ಬಳಸಲ್ಪಡುತ್ತದೆ. ವಜ್ರವನ್ನು ಬೇರಾವುದೇ ವಸ್ತುವನ್ನು ಕತ್ತರಿಸಲು, ಅರೆಯಲು ಮತ್ತು ಮೆರುಗು ಹೊಳಪು ನೀಡಲು ಬಳಸಬಹುದು. ವಜ್ರವನ್ನು ತುದಿಯಲ್ಲಿ ಹೊಂದಿರುವ ಭೈರಿಗೆಗಳು, ವಿಶೇಷ ಗರಗಸಗಳು ವ್ಯಾಪಕವಾಗಿ ಚಾಲ್ತಿಯಲ್ಲಿವೆ. ವಜ್ರದ ಪುಡಿಯನ್ನು ಅರೆಯುವ ಸಾಧನವಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಕೈಗಾರಿಕೆಗಳಲ್ಲಿ ಕೃತಕ ವಜ್ರಗಳನ್ನು ಅಥವಾ ಕಳಪೆ ಗುಣಮಟ್ಟದ ನೈಸರ್ಗಿಕ ವಜ್ರಗಳನ್ನು ಉಪಯೋಗಿಸುವರು.

ವಿದ್ಯುತ್ ವಾಹಕ ಶಕ್ತಿ[ಬದಲಾಯಿಸಿ]

ಕೆಲ ನೀಲಿ ವಜ್ರಗಳು ವಿದ್ಯುತ್ತಿನ ಅರೆವಾಹಕಗಳಾಗಿವೆ. ಉಳಿದ ಹೆಚ್ಚಿನ ಎಲ್ಲಾ ವಜ್ರಗಳು ವಿದ್ಯುತ್ ನಿರೋಧಕಗಳು. ನೀಲ ವಜ್ರಗಳ ಅರೆವಾಹಕ ಗುಣವನ್ನು ಉಪಯೋಗಿಸಿಕೊಳ್ಳುವಲ್ಲಿ ಪ್ರಯೋಗಗಳು ನಡೆದಿವೆ.

ಗಡಸುತನ[ಬದಲಾಯಿಸಿ]

ವಸ್ತುವಿನ ಗಡಸುತನವನ್ನು ಅದರ ಮೇಲೆ ಬಲಪ್ರಯೋಗ ಮಾಡಿದಾಗ ಮುರಿಯದೆ ಇರುವಿಕೆಯ ಮೇಲೆ ನಿರ್ಧರಿಸಲಾಗುತ್ತದೆ. ವಜ್ರವು ಗಡಸುತನಕ್ಕೆ ಹೆಸರಾಗಿದೆ. ವಜ್ರದ ರಚನೆಯ ವೈಶಿಷ್ಠ್ಯದಿಂದಾಗಿ ಅದಕ್ಕೆ ಇಷ್ಟು ಗಡಸುತನ ಬಂದಿದೆ. ಹೀಗಾಗಿ ಕೆಲ ಆಕಾರ ಮತ್ತು ರಚನೆಯ ವಜ್ರಗಳು ಉಳಿದವಕ್ಕಿಂತ ಕಡಿಮೆ ಗಟ್ಟಿ.

ವಜ್ರಗಳು ಯಾವುದೇ ಬಣ್ಣದಲ್ಲಿಯೂ ಇರಬಹುದು. ಆದರೆ ಹಳದಿ ಮತ್ತು ಕಂದು ಬಣ್ಣದವು ಅತಿ ಸಾಮಾನ್ಯ. ಕೆಲ ಗಾಢವರ್ಣದ ವಸ್ತುಗಳು ಮಿಶ್ರವಾಗಿರುವ ವಜ್ರಗಳನು ಕಪ್ಪು ವಜ್ರವೆಂದು ಕರೆಯುವರು. ಬಣ್ಣದ ವಜ್ರಗಳು ಒಂದೋ ಕೆಲ ಅಶುದ್ಧಿಯನ್ನು ಹೊಂದಿರುತ್ತವೆ ಇಲ್ಲವೆ ಅವುಗಳ ರಚನೆ ದೋಷಪೂರಿತವಾಗಿರುತ್ತದೆ. ಶುದ್ಧ ಅಥವಾ ಸರಿಸುಮಾರು ಶುದ್ಧವಾದ ವಜ್ರಗಳು ವರ್ಣರಹಿತವಾಗಿದ್ದು ಸಂಪೂರ್ಣ ಪಾರದರ್ಶಕವಾಗಿರುವುವು. ಸಾಮಾನ್ಯವಾಗಿ ವಜ್ರದೊಳಗಿನ ಅಶುದ್ಧ ವಸ್ತುವು (ಇಂಗಾಲವಲ್ಲದ ವಸ್ತು) ವಜ್ರದ ರಚನೆಯಲ್ಲಿ ಇಂಗಾಲದ ಅಣುಗಳ ಸ್ಥಾನದಲ್ಲಿ ಸೇರಿಕೊಂಡಿರುವುದು. ಇಂತಹ ದೋಷವನ್ನು ಇಂಗಾಲದ ದೋಷ ಎಂದು ಕರೆಯುವರು. ವಜ್ರದ ಅತ್ಯಂತ ಸಾಮಾನ್ಯ ಅಶುದ್ಧಿಯೆಂದರೆ ಸಾರಜನಕ. ವಜ್ರದೊಳಕ್ಕೆ ಸೇರಿರುವ ಸಾರಜನಕದ ಪ್ರಮಾಣಕ್ಕನುಗುಣವಾಗಿ ವಜ್ರವು ತಿಳಿಯಿಂದ ದಟ್ಟ ಹಳದಿ ಬಣ್ಣವನ್ನು ಪಡೆಯುತ್ತದೆ. ಈಚೆಗೆ ಒಂದು ನೀಲ ವಜ್ರವು ಸುಮಾರು ೮ ಮಿಲಿಯನ್ ಡಾಲರುಗಳಿಗೆ ಮಾರಾಟವಾಯಿತು. ಈ ವಜ್ರದೊಳಗೆ ಸೇರಿದ್ದ ಬೋರೋನ್ ಧಾತುವಿನಿಂದ ವಜ್ರಕ್ಕೆ ನೀಲ ಛಾಯೆ ಬಂದಿತ್ತು.

ಗುರುತಿಸುವಿಕೆ[ಬದಲಾಯಿಸಿ]

ಅತಿ ಹೆಚ್ಚಿನ ಉಷ್ಣವಾಹಕತೆಯಿಂದ ವಜ್ರವನ್ನು ಗುರುತಿಸಬಹುದು. ಅವುಗಳ ಹೆಚ್ಚಾದ ವಕ್ರೀಭವನ ಸೂಚ್ಯಂಕವು ಕೂಡ ವಜ್ರಗಳನ್ನು ಗುರುತಿಸುವಲ್ಲಿ ಸಹಾಯಕಾರಿ. ಒಂದರಿಂದ ಇನ್ನೊಂದು ವಜ್ರವನ್ನು ಗೀರುವ ಮೂಲಕ ಮೊದಲನೆಯದು ವಜ್ರವು ಹೌದೋ ಅಲ್ಲವೋ ಎಂಬುದನ್ನು ತಿಳಿಯಬಹುದಾದರೂ ಈ ಪರೀಕ್ಷೆಯಿಂದಾಗಿ ಎರಡು ವಜ್ರಗಳೂ ಹಾಳಾಗುತ್ತವೆ.

ನೈಸರ್ಗಿಕ ಇತಿಹಾಸ[ಬದಲಾಯಿಸಿ]

ರಚನೆ[ಬದಲಾಯಿಸಿ]

ಅತ್ಯಂತ ನಿಖರವಾದ ಸನ್ನಿವೇಶದಲ್ಲಿ ಮಾತ್ರ ನೈಸರ್ಗಿಕ ವಜ್ರದ ಹರಳಿನ ರಚನೆಯಾಗುವುದು. ಇದು ಸೃಷ್ಟಿಯಾಗಬೇಕಾದರೆ ಇಂಗಾಲವನ್ನು ಹೊಂದಿರುವ ವಸ್ತುಗಳು ೪೫ ರಿಂದ ೬೦ ಕಿಲೋಬಾರ್ ಗಳ ಒತ್ತಡಕ್ಕೆ ೯೦೦ ರಿಂದ ೧೩೦೦ ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಒಳಗಾಗಬೇಕು. ಭೂಮಿಯಲ್ಲಿ ಈ ಸನ್ನಿವೇಶವಿರುವ ಎರಡು ಸ್ಥಾನಗಳು ಮಾತ್ರ ಇವೆ. ಅವೆಂದರೆ ನೆಲದಾಳದ ಭೂಖಂಡ ಫಲಕಗಳ ಅಡಿಯಲ್ಲಿರುವ ಲಿಥೋಸ್ಫಿಯರ್. ಇನ್ನೊಂದು ಭೂಮಿಯ ಮೇಲೆ ಉಲ್ಕೆಗಳು ಅಪ್ಪಳಿಸಿದ ಸ್ಥಳಗಳು.

ಕ್ರೇಟನ್ ಗಳಲ್ಲಿ ವಜ್ರಗಳ ಸೃಷ್ಟಿ[ಬದಲಾಯಿಸಿ]

ವಜ್ರದ ಸೃಷ್ಟಿಗೆ ಬೇಕಾದ ಮೇಲ್ಕಾಣಿಸಿದ ಒತ್ತಡ ಮತ್ತು ಉಷ್ಣತೆಗಳು ನೆಲದಾಳದಲ್ಲಿ (೧೪೦ರಿಂದ ೧೯೦ ಕಿ.ಮೀ ಆಳದಲ್ಲಿ) ಕ್ರೇಟನ್ ಗಳಿರುವ ಲಿಥೋಸ್ಫಿಯರ್ ನ ದಪ್ಪ, ಪ್ರಾಚೀನ ಮತ್ತು ಸ್ಥಿರವಾದ ಭಾಗಗಳು. ಇಲ್ಲಿ ಹೆಚ್ಚು ಕಾಲ ಉಳಿದಷ್ಟೂ ವಜ್ರದ ಗಾತ್ರವು ವೃದ್ಧಿಸುತ್ತದೆ. ವಜ್ರಗಳ ಸೃಷ್ಟಿಯು ಒಂದು ದೀರ್ಘಕಾಲೀನ ಪ್ರಕ್ರಿಯೆ. ವಜ್ರದಲ್ಲಿನ ಇಂಗಾಲವು ಸಾವಯವ ಮತ್ತು ನಿರವಯವ ವಸ್ತುಗಳೆರಡರಿಂದಲೂ ಒದಗಿರಬಹುದೆಂದು ಅಧ್ಯಯನಗಳು ತೋರಿಸಿವೆ. ವಜ್ರವು ಪ್ರಕೃತಿಯಲ್ಲಿ ಸಾಮಾನ್ಯವಾಗಿ ಅಷ್ಟಮುಖಿ ಅಥವಾ ಅವಳಿ ಅಷ್ಟಮುಖಿಗಳ ಆಕಾರದಲ್ಲಿರುತ್ತವೆ. ಅಂಚುಗಳು ಮೊಂಡಾಗಿರಬಹುದು ಅಥವಾ ಹೊರಚಾಚಿರಬಹುದು.

ಉಲ್ಕಾಪಾತ ಮತ್ತು ವಜ್ರಗಳು[ಬದಲಾಯಿಸಿ]

ಉಲ್ಕೆಗಳು ಭೂಮಿಗೆ ಅಪ್ಪಳಿಸಿದ ಸ್ಥಳದಲ್ಲಿ ಅತಿ ಹೆಚ್ಚಿನ ಒತ್ತಡ ಮತ್ತು ಉಷ್ಣತೆ ಉಂಟಾಗಿ ಹಲವೊಮ್ಮೆ ವಜ್ರಗಳು ಹರಳುಗಟ್ಟುತ್ತವೆ. ಇಂತಹ ವಜ್ರಗಳು ಅತಿ ಚಿಕ್ಕದಾದ ಗಾತ್ರದಲ್ಲಿದ್ದು ಮೈಕ್ರೋವಜ್ರ ಹಾಗೂ ನ್ಯಾನೋವಜ್ರಗಳೆಂದು ಕರೆಯಲ್ಪಡುತ್ತವೆ.

ಭೂಮಿಯಾಳದಿಂದ ಮೇಲಕ್ಕೆ ಬರುವಿಕೆ[ಬದಲಾಯಿಸಿ]

ಭೂಮಿಯ ಆಳದಲ್ಲಿ ಉಂಟಾಗುವ ಜ್ವಾಲಾಮುಖಿಯ ಸ್ಫೋಟದಂತಹ ವಿದ್ಯಮಾನವು ವಜ್ರಗಳು ಹುದುಗಿರುವ ಕಲ್ಲು, ಬಂಡೆಗಳನ್ನು ಭೂಮಿಯ ಮೇಲ್ಭಾಗದತ್ತ ತಳ್ಳುತ್ತದೆ. ಆದರೆ ಇಂತಹ ಜ್ವಾಲಾಮುಖಿಯ ಮ್ಯಾಗ್ಮಾ ಭೂಮಿಯಡಿ ವಜ್ರ ಸೃಷ್ಟಿಯಾಗುವ ಆಳದಿಂದ ಉಗಮಿಸಿದರೆ ಮಾತ್ರ ಇದು ಸಾಧ್ಯ. ಸಾಮಾನ್ಯವಾಗಿ ಜ್ವಾಲಾಮುಖಿಗಳ ಮ್ಯಾಗ್ಮಾ ಸರಾಸರಿ ೫೦ ಕಿ.ಮೀ. ಆಳದಲ್ಲಿ ನಿರ್ಮಾಣವಾದರೆ ವಜ್ರದ ಸೃಷ್ಟಿಯು ಸುಮಾರು ೧೫೦ ಕಿ.ಮೀ. ಆಳದಲ್ಲಿ ನಡೆಯುವುದು. ಹೀಗಾಗಿ ಇಂತಹ ವಿದ್ಯಮಾನ ಅತಿ ಅಪರೂಪ. ಆದಾಗ್ಯೂ ಈ ಸಣ್ಣ ಜ್ವಾಲಾಮುಖಿಗಳ ಬಾಯಿಯು (ಕಣಿವೆ) ನೆಲದಾಳಕ್ಕೆ ಕೊಳವೆಯಂತೆ ಚಾಚುವುದು. ಈ ಕೊಳವೆಗಳಲ್ಲಿ ಜ್ವಾಲಾಮುಖಿಯು ಪೂರ್ತಿಯಾಗಿ ಹೊರವಾತಾವರಣಕ್ಕೆ ಕಕ್ಕದ ವಸ್ತುಗಳು ಸೇರಿರುತ್ತವೆ. ವಜ್ರವಿರುವ ಕಲ್ಲುಗಳು ಸಹ ಇವುಗಳಲ್ಲಿ ಸೇರಿರುವ ಸಾಧ್ಯತೆ ಸಾಕಷ್ಟು ಇರುವುದು. ಆದರೆ ಇಂತಹ ಎಲ್ಲ ಕೊಳವೆಗಳಲ್ಲಿಯೂ ವಜ್ರ ದೊರೆಯಲಾರದು. ಹೆಚ್ಚಿನವುಗಳಲ್ಲಿ ಅತಿ ಕಡಿಮೆ ಪ್ರಮಾಣದ ವಜ್ರ ಇದ್ದು ಅದು ಗಣಿಗಾರಿಕೆಯ ದೃಷ್ಟಿಯಿಂದ ಅತಿ ದುಬಾರಿ. ಒಮ್ಮೆ ಈ ರೀತಿಯಾಗಿ ಮ್ಯಾಗ್ಮಾದ ಮೂಲಕ ಭೂಮಿಯ ಮೇಲ್ಭಾಗಕ್ಕೆ ತಳ್ಳಲ್ಪಟ್ಟ ವಜ್ರಗಳು ತಮ್ಮ ಶಿಲಾವರಣದಲ್ಲಿ ಉಳಿಯದೆ ಗಾಳಿ ಮತ್ತು ನೀರಿನಿಂದಾಗಿ ಆಸುಪಾಸಿನ ಪ್ರದೇಶಗಳಲ್ಲಿ ಚದುರಿಹೋಗಬಹುದು.

ಅನರ್ಘ್ಯರತ್ನವಾಗಿ ವಜ್ರ[ಬದಲಾಯಿಸಿ]

ಉಂಗುರಕ್ಕೆ ಜೋಡಿಸಲಾಗಿರುವ ಸುಂದರ ವಜ್ರ

ಭಾರತೀಯರು ಮೊದಲಬಾರಿಗೆ ವಜ್ರವನ್ನು ಗುರುತಿಸಿ ಅದರ ಗಣಿಗಾರಿಕೆಯನ್ನು ಆರಂಭಿಸಿದರು. ಸುಮಾರು ೩೦೦೦ವರ್ಷಗಳ ಹಿಂದೆಯೇ ಭಾರತೀಯರಿಗೆ ವಜ್ರದ ಗುಣ ಮತ್ತು ಮೌಲ್ಯಗಳ ಅರಿವಿತ್ತೆನ್ನಲಾಗಿದೆ. ಗೋದಾವರಿ, ಕೃಷ್ಣಾ ಮತ್ತು ಪೆನ್ನೇರ್ ನದಿಗಳ ದಂಡೆಗುಂಟ ವಜ್ರದ ನಿಕ್ಷೇಪಗಳು ಅಂದಿನ ಕಾಲದಲ್ಲಿ ಇದ್ದುವು. ಆಭರಣಗಳ ಮುಖೇನ ವಜ್ರವನ್ನು ಶರೀರದ ಮೇಲೆ ಧರಿಸುವ ಸಂಪ್ರದಾಯವೂ ಬಹಳ ಪ್ರಾಚೀನಕಾಲದಿಂದ ಬಂದಿದೆ.

ತನ್ನ ಮೂಲಕ ಹಾಯ್ದ ಬೆಳಕನ್ನು ವಜ್ರವು ಹಲವು ವರ್ಣಗಳಾಗಿ ವಿಭಜಿಸಿ ಚದುರಿಸುತ್ತದೆ. ವಜ್ರದ ಈ ಗುಣವು ಆಭರಣಗಳಲ್ಲಿ ಬಳಸಲು ಬಲು ಸೂಕ್ತ. ಅಲ್ಲದೆ ತನ್ನ ಅಪ್ರತಿಮ ಹೊಳಪು ಮತ್ತು ಮೆರುಗುಗಳಿಂದಾಗಿ ಸಹ ವಜ್ರವು ಶರೀರದ ಮೇಲೆ ಧಾರಣೆಗೆ ಬಲು ಒಪ್ಪುವಂತಹುದು.

ವಜ್ರೋದ್ಯಮ[ಬದಲಾಯಿಸಿ]

ವಜ್ರದ ಉದ್ಯಮವನ್ನು ಸ್ಥೂಲವಾಗಿ ಆಭರಣಗಳಲ್ಲಿ ಬಳಸುವ ವಜ್ರಕ್ಕೆ ಸಂಬಂಧಿಸಿದ ಮತ್ತು ಕೈಗಾರಿಕೆಗಳಲ್ಲಿ ಬಳಸುವ ವಜ್ರಗಳಿಗೆ ಸಂಬಂಧಿಸಿದವೆಂದು ವಿಭಾಗಿಸಬಹುದು.

ರತ್ನದ ದರ್ಜೆಯ ವಜ್ರಗಳ ಉದ್ಯಮ ಇಂದು ಸಾಕಷ್ಟು ಬೆಳೆದಿದೆ. ಆದರೆ ರಾಜಲೋಹಗಳ (ಚಿನ್ನ, ಪ್ಲಾಟಿನಮ್) ಉದ್ಯಮದಲ್ಲಿಯಂತೆ ವಜ್ರವನ್ನು ಎಂದೂ ಒಂದು ಸರಕನ್ನಾಗಿಸಿ ಬೆಲೆಕಟ್ಟಲಾಗುವುದಿಲ್ಲ. ಅಲ್ಲದೆ ವಜ್ರದ ಮರುವ್ಯಾಪಾರದ ಮಾರುಕಟ್ಟೆ ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಒಂದು ವಿಶಿಷ್ಟ ಸಂಗತಿಯೆಂದರೆ ವಿಶ್ವದ ಒಟ್ಟೂ ರತ್ನದ ದರ್ಜೆಯ ವಜ್ರಗಳ ಮಾರುಕಟ್ಟೆಯು ಕೆಲವೇ ಕೆಲವು ಸ್ಥಳಗಳಲ್ಲಿ ಕೇಂದ್ರೀಕೃತವಾಗಿದೆ. ಇವುಗಳಲ್ಲಿ ಆಂಟ್ವರ್ಪ್, ನ್ಯೂ ಯಾರ್ಕ್, ಲಂಡನ್, ಟೆಲ್ ಅವೀವ್ ಮತ್ತು ಸೂರತ್ ಮುಖ್ಯವಾದವು.

ರತ್ನದ ದರ್ಜೆಯವಲ್ಲವಾದ ವಜ್ರಗಳು ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತವೆ. ಇಂತಹ ವಜ್ರಗಳ ಉಷ್ಣವಾಹ ಶಕ್ತಿ ಮತ್ತು ಗಡಸುತನ ಮುಖ್ಯವಾಗುತವೆಯೇ ಹೊರತು ಅದರ ಬಣ್ಣ ಅಥವಾ ಸ್ವಚ್ಛತೆಯಲ್ಲ. ಇಂದು ಗಣಿಗಾರಿಕೆಯ ಮೂಲಕ ಪಡೆಯಲಾಗುವೆ ಒಟ್ಟೂ ವಜ್ರಗಳ ಪೈಕಿ ೮೦% ರಷ್ಟು ಕೈಗಾರಿಕೆಯಲ್ಲಿ ಬಳಸಲು ಮಾತ್ರ ಸೂಕ್ತವಾದವು. ಇಂತಹ ವಜ್ರಗಳನ್ನು ಬಾರ್ಟ್ ಎಂದು ಕರೆಯುತ್ತಾರೆ. ಈ ಕಳಪೆ ಗುಣಮಟ್ಟದ ನೈಸರ್ಗಿಕ ವಜ್ರಗಳಲ್ಲದೆ ಕೃತಕ ವಜ್ರಗಳು ಸಹ ಕೈಗಾರಿಕೆಗಳಲ್ಲಿ ಬಳಸಲ್ಪಡುವುವು. ಕೈಗಾರಿಕೆಗಳಲ್ಲಿ ವಜ್ರವನ್ನು ಸಾಮಾನ್ಯವಾಗಿ ಕತ್ತರಿಸುವ, ಕೊರೆಯುವ, ಅರೆಯುವ ಮತ್ತು ಉಜ್ಜುವ ಸಲಕರಣೆಗಳಲ್ಲಿ ಬಳಸಲಾಗುವುದು.

ವಜ್ರದ ಗಣಿಗಳು ಮತ್ತು ಉತ್ಪಾದನೆ[ಬದಲಾಯಿಸಿ]

ಅದಿರಿನಲ್ಲಿ ಹುದುಗಿರುವ ಒಂದು ವಜ್ರ

ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು ೯ ನೆಯ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ ೧೮ನೆಯ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್ ದಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ ಅಲ್ಲಿ ಉತ್ಪಾದನೆ ಆರಂಭವಾಯಿತು. ೧೮೭೦ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಇಂದು ಅಲ್ಲಿ ಮಾತ್ರವಲ್ಲದೆ ಕೆನಡ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾ ಗಳಲ್ಲಿ ಸಹ ವಜ್ರದ ಗಣಿಗಳಿವೆ.

ವಜ್ರಗಳು ಭೂಮಿಯಲ್ಲಿ ಮೂರು ತೆರವಾಗಿ ಸಿಕ್ಕುವುವು[ಬದಲಾಯಿಸಿ]

ಆಭರಣಗಳಿಗಾಗಿ ಉಪಯೋಗಿಸುವ ಸ್ಫಟಕಾಕೃತಿಯ ವಜ್ರ[ಬದಲಾಯಿಸಿ]

ಇದು ಸ್ವಾಭಾವಿಕವಾಗಿ ಎಂಟು ತ್ರಿಕೋಣಾಕಾರದ ಪಟ್ಟಿಗಳು ಹೊಡೆದಂತೆ ಇರುತ್ತದೆ. ಕೆಲವು ವೇಳೆ ಪಟ್ಟಿಗಳು ಎಂಟಕ್ಕಿಂತಲೂ ಹೆಚ್ಚಾಗಿಯೂ ಅಥವಾ ಕಡಿಮೆಯಾಗಿಯೂ ಇರಬಹುದು. ಈ ಪಟ್ಟಿಗಳು ಸಾಮಾನ್ಯವಾಗಿ ಚಪ್ಪಟೆಯಾಗಿರುವುದಿಲ್ಲ, ಸ್ವಲ್ಪ ಗುಂಡುತಿರುಗಿರುತ್ತವೆ.

ಕೊಂಚಮಟ್ಟಿಗೆ ಸ್ಫಟಿಕಾಕೃತಿಯಿದ್ದು ಮೊದಲಿನದಕ್ಕಿಂತ ಗಡುಸಾಗಿರುವ ಬೋರ್ಟ್ ವಜ್ರ[ಬದಲಾಯಿಸಿ]

ಆಭರಣಗಳಿಗೆ ಉಪಯೋಗವಾಗದ ಸ್ಫಟಿಕಾಕೃತಿಯ ವಜ್ರದ ಚೂರುಗಳನ್ನೂ ಈ ಹೆಸರಿಂದ ವ್ಯಾಪಾರಸ್ಥರು ಕರೆಯುವುದುಂಟು. ಈ ವಜ್ರಗಳು ಗಾಜು ಮೊದಲಾದುವನ್ನು ಸೀಳುವ, ಅಥವಾ ಅವುಗಳಲ್ಲಿ ಕಂಡಿಮಾಡುವ ಆಯುಧಗಳಿಗಾಗಿ ಉಪಯೋಗವಾಗುತ್ತವೆ, ಕಲ್ಲುಗಳನ್ನು ಕುಯ್ಯುವ ಗರಗಸಗಳನ್ನು ಮಾಡುವುದಕ್ಕೂ ಒದಗಿಸುತ್ತವೆ.

ಸ್ಫಟಿಕಾಕೃತಿಯೇ ಇಲ್ಲದೆ ಇದ್ದಲಿನಂತೆ ಕಪ್ಪಗಿರುವ ಮತ್ತು ಮೇಲೆ ಹೇಳಿದ ಎರಡು ಜಾತಿಗಳಿಗಿಂತಲೂ ಹೆಚ್ಚು ಗಡುಸಾಗಿರುವ “ಕಾರ್ಪೊನೇಡೋ’’ಕರೀವಜ್ರ[ಬದಲಾಯಿಸಿ]

ಇದನ್ನು ಭೂಮಿಯಲ್ಲಿ ಸಾವಿರಾರು ಅಡಿಗಳ ಆಳಕ್ಕೆ ಕಂಡಿಗಳನ್ನು ಕೊರೆಯುವುದಕ್ಕಾಗಿ ತಯಾರುಮಾಡುವ ಬೈರಿಗೆಗಳಿಗೆ ಉಪಯೋಗಿಸುವರು. ಇದು ಎಂತಹ ಗಟ್ಟಿ ಬಂಡೆಯನ್ನಾದರೂ ಸುಲಭವಾಗಿ ಕೊರೆದುಹಾಕುವುದು. ಚಿನ್ನ, ಬೆಳ್ಳಿ, ತಾಮ್ರ ಮೊದಲಾದ ಗಣಿಗಳನ್ನು ಕಂಡುಹಿಡಿಯುವುದಕ್ಕಾಗಿ ಈ ಬೈರಿಗೆಯನ್ನು ಉಪಯೋಗಿಸುವರು. ಈ ತರದ ವಜ್ರವು ಬ್ರೆಜಿಲ್ ದೇಶದ ಒಂದು ಪ್ರಾಂತ್ಯದಲ್ಲಿ ಮಾತ್ರ ದೊರೆತಿರುವುದು. ಬೋರ್ಟ್ ವಜ್ರವನ್ನೂ ಬೈರಿಗೆಯ ಕೆಲಸಕ್ಕೆ ಉಪಯೋಗಿಸುವರು, ಆದರೆ ಕರೀವಜ್ರದಂತೆ ಇದು ತಡೆಯಲಾರದು. ಮೇಲೆ ಹೇಳಿದ ಮೂರು ಜಾತಿಯ ವಜ್ರಗಳಲ್ಲಿ ಮೊದಲೆನೆಯದು ಪ್ರಪಂಚಕ್ಕೆ ಅಷ್ಟು ಉಪಯೋಗವಿಲ್ಲದಿದ್ದರೂ, ಅದರ ಥಾಳಥಳ್ಯದಿಂದ ಎಲ್ಲರ ಮನಸ್ಸನ್ನೂ ಸೆಳೆದು ಚಕ್ರವರ್ತಿಗಳೇ ಮೊದಲಾದವರ ಉತ್ತಮಾಂಗದಲ್ಲಿ ಸೇರುವುದು. ಮಿಕ್ಕವೆರಡೂ ಅತಿ ಕಾಠಿಣ್ಯ ಸ್ವಭಾವವುಳ್ಳವುಗಳಾದುದರಿಂದ, ಈ ರೀತಿಯಾದ ಮನ್ನಣೆಯನ್ನು ಹೊಂದದೆ, ಕಲ್ಲುಬಂಡೆ ಮೊದಲಾದವನ್ನು ಕೊರೆಯುವ ಕೆಲಸದಲ್ಲಿ ಉಪಯೋಗಿಸಲ್ಪಡುವವು. ಕರೀವಜ್ರಕ್ಕಿರುವ ಕಾಠಿಣ್ಯವೂ ಶಕ್ತಿಯೂ ಪ್ರಪಂಚದಲ್ಲಿ ಮತ್ತಾವ ಪದಾರ್ಥಕ್ಕೂ ಇಲ್ಲ. ಈ ಕಾರಣದಿಂದ ಇದರ ಬೆಲೆಯೂ ಹೆಚ್ಚಾಗಿಯೇ ಇರುವುದು. ಸ್ವಭಾವಸ್ಥಿತಿಯಲ್ಲಿಯೇ ಕ್ಯಾರಟ್ ಒಂದಕ್ಕೆ ಇನ್ನೂರ ಐವತ್ತು ರೂಪಾಯಿಗಳಾಗಬಹುದು.

ವಜ್ರವು ನದಿಗಳು ಹೊಡೆದುಕೊಂಡುಬಂದ, ಗ್ರಾವೆಲ್, ಮರಳು, ಅಥವಾ ಜೇಡಿಮಣ್ಣಿನಲ್ಲಿ ಬೆಣಚುಕಲ್ಲು, ಕುರಂಗದಕಲ್ಲು ಮೊದಲಾದ ಕಲ್ಲುಗಳೊಡನೆಯೂ, ಚಿನ್ನ, ಪ್ಲಾಟಿನಮ್ ಲೋಹಗಳೊಡನೆಯೂ, ಬೇರೆ ಬೇರೆ ಹಳಕುಗಳಾಗಿ ಸೇರಿಯೂ, ಕಂಗ್ಲಾಮರೇಟ್ ಎಂಬ ಶಿಲಾ ವಿಶೇಷದಲ್ಲಿಯೂ, ದಕ್ಷಿಣ ಆಫ್ರಿಕದ ,ಕಿಂಬರ್ಲಿ’ ಪ್ರಾಂತದಲ್ಲಿ ಸಿಕ್ಕುವ “ಕಿಂಬರ್ಲೈಟ್’’ ಎಂಬ ಹಸಿರು ಮತ್ತು ನೀಲಿ ಮಿಶ್ರವಾದ ಖನಿಜ ವಿಶೇಷದಲ್ಲಿಯೂ ದೊರೆಯುವುದು. ಪ್ರಪಂಚದಲ್ಲಿ ವಜ್ರಗಳು ಸಿಕ್ಕುವ ಮುಖ್ಯವಾದ ಪ್ರದೇಶಗಳು ಮೂರು.

  1. ಇಂಡಿಯಾ ದೇಶ – ಇಲ್ಲಿ ಬಹಳ ಪೂರ್ವ ಕಾಲದಿಂದಲೂ ಮೊನ್ನೆ ಮೊನ್ನೆಯವರೆಗೂ ಎಂದರೆ, 19ನೇ ಶತಮಾನದ ಅಂತ್ಯದವರೆಗೂ, ವಜ್ರಗಳನ್ನು ತೆಗೆಯುತ್ತಿದ್ದರು. 1891 ನೆಯ ಸುಮಾರಿನಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿ ಮಾತ್ರ, ವರುಷ 1ಕ್ಕೆ ಒಂದುಸಾವಿರ ಕ್ಯಾರೆಟ್ ವಜ್ರಗಳನ್ನು ತೆಗೆಯುತ್ತಿದ್ದರೆಂದು ತಿಳಿದುಬಂದಿದೆ.
  2. ದಕ್ಷಿಣ ಅಮೇರಿಕ – ಇಲ್ಲಿ 18ನೆಯ ಶತಮಾನದ ಮಧ್ಯದಿಂದ ವಜ್ರಗಳನ್ನು ತೆಗೆಯುತ್ತಿದ್ದಾರೆ.
  3. ದಕ್ಷಿಣ ಆಫ್ರಿಕ – ಇಲ್ಲಿ 1870 ನೆ ಇಸವಿಯಿಂಯುವ ವಜ್ರ ತೆಗೆಯುವ ಕೆಲಸವು ದಿನೇ ದಿನೇ ಅಭಿವೃದಿ ಹೊಂದಿ, ಈಗ ಪ್ರಪಂಚದ ಇತರ ದೇಶಗಳಲ್ಲಿ ಆ ಕೆಲಸವು ನಿಂತುಹೋಗುವಂತೆ ಆಗಿರುತ್ತದೆ. ಇಲ್ಲಿನ ಗಣಿಗಳಿಂದ ತೆಗೆದ ವಜ್ರಗಳೇ ಪ್ರಪಂಚಕ್ಕೆಲ್ಲಾ ಈಗ ಸರಬರಾಜು ಆಗುತ್ತಿರುವುದು. ಸಾಧಾರಣವಾಗಿ ಪೂರ್ವಕಾಲದಲ್ಲಿ ಮಾನನಿಯವಾದವುಗಳಿಗೆಲ್ಲಾ ಇಂಡಿಯಾ ದೇಶವೇ ತೌರುಮನೆಯಾಗಿದ್ದಂತೆ ವಜ್ರಕ್ಕೂ ಇದೇ ತೌರುಮನೆಯಾಗಿತ್ತು. 18ನೆಯ ಶತಮಾನದ ಆರಂಭದವರೆಗೂ ಪ್ರಪಂಚದ ಎಲ್ಲಾ ಪ್ರಾಂತ್ಯಗಳಿಗೂ ಇಂಡಿಯಾ ದೇಶದಿಂದಲೇ ವಜ್ರಗಳು ಹೋಗಬೇಕಾಗಿತ್ತು. ಪ್ರಸಿದ್ಧಿ ಹೊಂದಿದ ಗೋಲುಕೊಂಡೆಯ ವಜ್ರದ ಗಣಿಗಳಿಂದಲೇ ‘ಕೋಹಿನೂರ್’ ಮೊದಲಾದ ಸುಪ್ರಸಿದ್ಧಗಳಾದ ರತ್ನಗಳು ಬಂದದ್ದು. 1665 ನೆ ಇಸವಿಯಲ್ಲಿ ಗೋಲ್ಕೊಂಡೆಗೆ ವಜ್ರವ್ಯಾಪಾರಕ್ಕಾಗಿ ಬಂದಿದ್ದ ಫ್ರೆಂಚ್ ದೇಶಸ್ಥನಾದ ,ಟ್ಯಾನರ್ನಿಯರ್’ ಎಂಬ ದೇಶ ಸಂಚಾರಿಯು ಆ ಪ್ರಾಂತ್ಯದಲ್ಲಿ ಆಗ ಅರವತ್ತು ಸಾವಿರ ಜನರು ವಜ್ರವನ್ನು ತೆಗೆಯುವ ಕೆಲಸದಲ್ಲಿ ನಿಯತರಾಗಿದ್ದರೆಂದು ಬರೆದಿರುತ್ತಾನೆ. ಈ ಗಣಿಗಳು ಈಗ ಬಿದ್ದಿವೆ. ಪ್ರಕೃತದಲ್ಲಿ ಇಂಡಿಯಾ ದೇಶದ ವಜ್ರದ ಗಣಿಗಳು ಮುಂದೆ ಹೇಳುವ ಪ್ರಾಂತಗಳಲ್ಲಿರುವವು.
  1. ಪೆನ್ನಾರು ನದಿ ತೀರದಲ್ಲಿ ಕಡಪಾಬಳಿ ಚೆನ್ನೂರು ಪ್ರಾಂತ,
  2. ಪೆನ್ನಾರು ಕೃಷ್ಣಾನದಿಗಳಿಗೆ ಮಧ್ಯೆ ಇರುವ ಕರ್ನೂಲು ಪ್ರಾಂತ,
  3. ಕೃಷ್ಣಾ ತೀರದಲ್ಲಿ ಬೆಜವಾಡದ ಬಳಿ ಕೊಲ್ಲೇರ್ (ಕೊಲ್ಲೂರು?) ಪ್ರಾಂತ,
  4. ಮಹಾನದಿ ತೀರದಲ್ಲಿ ಸಾಂಬಲಪುರದ ಪ್ರಾಂತ,
  5. ಬಂದಲಖಂಡಿನಲ್ಲಿ ಪನ್ನಾಪ್ರಾಂತ.

ದಕ್ಷಿಣ ಆಫ್ರಿಕಾ ದೇಶದಲ್ಲಿ ವಜ್ರಗಳು ವಿಶೇಷವಾಗಿ ತೆಗೆಯುವುದು ಪ್ರಾರಂಭವಾದಾಗಿನಿಂದ ಇಂಡಿಯಾ ದೇಶದಲ್ಲಿನ ವಜ್ರಗಳ ಸಂಗ್ರಹವು ಮೂಲೆಗೆ ಬಿತ್ತೆಂದೇ ಹೇಳಬೇಕು. ಚರಿತ್ರೆಯಲ್ಲಿ ಸುಪ್ರಸಿದ್ಧಗಳಾದ ದೊಡ್ಡ ವಜ್ರಗಳೆಲ್ಲವೂ ಇಂಡಿಯಾ ದೇಶದಲ್ಲಿ ಸಿಕ್ಕಿದವುಗಳೇ. ಸಾಮಾನ್ಯವಾಗಿ ಗೋಲ್ಕೊಂಡದ ಗಣಿಗಳೆಂದು ಹೆಸರನ್ನು ಪಡೆದ ಕೊಲ್ಲೇರು ಪ್ರಾಂತ್ಯದ ಗಣಿಗಳಲ್ಲಿಯೇ ಈ ದೊಡ್ಡ ವಜ್ರಗಳನೇಕವು ಸಿಕ್ಕಿರುವುವು. 1881ನೆ ಇಸವಿಯಲ್ಲಿ ಚೆನ್ನೂರು ಪ್ರಾಂತದ ವಜ್ರ ಕರೂರಿನಲ್ಲಿ 67/0 ಕ್ಯಾರಟ್ ತೂಕದ ಒಂದು ವಜ್ರವು ದೊರೆಯಿತು.

ನೋಡಿ[ಬದಲಾಯಿಸಿ]

ಹೆಚ್ಚಿನ ಓದು[ಬದಲಾಯಿಸಿ]

[[೧]]

ಉಲ್ಲೇಖ[ಬದಲಾಯಿಸಿ]"https://kn.wikipedia.org/w/index.php?title=ವಜ್ರ&oldid=892256" ಇಂದ ಪಡೆಯಲ್ಪಟ್ಟಿದೆ