ವಿಷಯಕ್ಕೆ ಹೋಗು

ಶ್ರೀ ಕೃಷ್ಣ ಪಾರಿಜಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುನ್ನುಡಿ

[ಬದಲಾಯಿಸಿ]

ಶ್ರೀಕೃಷ್ಣ ಪಾರಿಜಾತಕಥೆ ಪ್ರಾಚೀನವಾದುದು. ಅಷ್ಟೇ ಜನಪ್ರಿಯವಾದುದು. ಭಾಗವತ ಹರಿವಂಶಗಳಲ್ಲಿ ನಿರೂಪಿತವಾಗಿರುವ ಕಥಾಂಶ ಮುಂದೆ ಹಲವು ಸ್ವತಂತ್ರ ರಚನೆಗಳಿಗೆ ವಸ್ತುವಾಯಿತು. ಕನ್ನಡದಲ್ಲಿ ಮೊದಲುಕಥೆ ಕಂಡುಬರುವುದು 'ಜಗನ್ನಾಥ ವಿಜಯ'ದಲ್ಲಿ. ಪ್ರಸನ್ನ ವೆಂಕಟದಾಸರು 'ಕೃಷ್ಣ ಪಾರಿಜಾತ' ಎಂಬ ಲಘು ಕಾವ್ಯ ಬರೆದಿದ್ದಾರೆ. ಆ ಹೊತ್ತಿಗಾಗಲೇ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ತನ್ನ ನೆಲೆ ಕಂಡುಕೊಂಡಿತ್ತು. ಮಧ್ಯಮ ವರ್ಗದ ಕವಿಗಳ ದಂಡು ಯಕ್ಷಗಾನಕ್ಕೆ ಪ್ರವೇಶಿಸಿ ಸಮೃಧ್ಧವಾದ ಸಾಹಿತ್ಯ ರಚಿಸಿದರು. ಅವರಿಗೆಲ್ಲ ಈ ಪಾರಿಜಾತಕಥೆ ಆಕರ್ಷಕವೆನಿಸಿತು. ಆಕರ್ಷಣೆ ಹೆಚ್ಚಾದಂತೆ ಮೂಲಕಥೆಯನ್ನು ವೈವಿಧ್ಯಮಯವಾಗಿ ಬೆಳೆಸಿಕೊಳ್ಳುವ ಪ್ರವೃತ್ತಿಯೂ ಬೆಳೆಯಿತು. ರಾಮ ಪಾರಿಜಾತ, ವೀರಭದ್ರ ಪಾರಿಜಾತ ಮುಂತಾದ ೩೫ ಪಾರಿಜಾತ ಕೃತಿಗಳು ರಚನೆಗೊಂಡಿವೆ. ಬೆಳಗಾವಿ ಜಿಲ್ಲೆಗೋಕಾಕ ತಾಲೂಕಿಕುಲಗೋಡು ಗ್ರಾಮತಮ್ಮಣ್ಣದೃಷ್ಟಿ ಅಪರಾಳಪಾರಿಜಾತ ಕೃತಿಯತ್ತ ಹರಿದದ್ದು ಒಂದು ಯೋಗಾಯೋಗ. ಚಿನಿವಾಲ ವೃತ್ತಿತಮ್ಮಣ್ಣ ಪ್ರವಾಸಪ್ರಿಯನೂ ಆಗಿದ್ದ. ಮಹಾರಾಷ್ಟ್ರತಮಾಷಾ ಮತ್ತು ಕನ್ನಡ-ಮರಾಠಿ ಅಭಿಜಾತ ನಾಟಕಗಳು ಎಲ್ಲೆಡೆ ಪಸರಿಸಿದವು. ತಮ್ಮಣ್ಣ ಇಂತಹ ನಾಟಕಗಳನ್ನು ನೋಡಿದಾಗ ಅವನ ಪ್ರತಿಭೆಯನ್ನು ಕೆಣಕಿದವು. ಅಪರಾಳರ ಪಾರಿಜಾತದಲ್ಲಿ ಅಂತರ್ಗತವಾಗಿರುವ ನಾಟಕೀಯತೆ ಅವನನ್ನು ತುಂಬ ಆಕರ್ಷಿಸಿತು. ತನ್ನ ಸಾಹಿತ್ಯ ಸಂಗೀತ ಅಭಿನಯ ಪ್ರತಿಭೆಗಳನ್ನು ಹುರಿಗೊಳಿಸಿ ಒಂದು ಸಿದ್ಧಪಡಿಸಿದ. ಅಪರಾಳ ಪಾರಿಜಾತ ದೃಶ್ಯ ಸಂಯೋಜನೆ ಮತ್ತು ಮೂಲ ಹಾಡುಗಳನ್ನು ಅಧಾರವಾಗಿಟ್ಟುಕೊಂಡು ಶ್ರೀಕೃಷ್ಣ ಪಾರಿಜಾತವನ್ನು ಪ್ರಯೋಗಕ್ಕೆ ಅಳವಡಿಸಿದ. ಅವನ ಈ ನೂತನ ಪ್ರಯೋಗ ಕೇವಲ ಅಪರಾಳ ಪಾರಿಜಾತ ಕಾವ್ಯರಂಗ ನಿರೂಪಣೆಯಾಗದೆ ಸ್ವತಂತ್ರ ನಾಟಕವೆನಿಸಿತು.

ಹುಟ್ಟು ಮತ್ತು ಪಾರಿಜಾತ ಸಣ್ಣಾಟದ ವಿಶೇಷ

[ಬದಲಾಯಿಸಿ]

ವಿಶೇಷತೆಕಾರಣಕ್ಕಾಗಿಯೇ ಅದು ಸಣ್ಣಾಟಗಳ ವರ್ಗದಿಂದ ಪ್ರತ್ಯೇಕವಾಗಿ ನಿಂತಿದೆ. ಶ್ರೀಕೃಷ್ಣ ಪಾರಿಜಾತ ಭಕ್ತಿಯುಗಪ್ರಮುಖ ಕಲೆ. ಅಪರಾಳ ತಮ್ಮಣ್ಣ ಮತ್ತು ಶಿರಗುಪ್ಪಿಸದಾಶಿವ ಶ್ರೀಕೃಷ್ಣ ಪಾರಿಜಾತವನ್ನು ರಚಿಸಿದರು. ಇವರಿಬ್ಬರೂ ಬಾಳಿ ಬದುಕಿದ್ದು ರಾಯಚೂರು ಜಿಲ್ಲೆಅಪರಾಳ ಎಂಬ ಗ್ರಾಮದಲ್ಲಿ. ಆ ವೇಳೆಗೆ ದಾಸಪಂಥ ಪ್ರಬುದ್ಧ ಸ್ಥಿತಿಯಲ್ಲಿತ್ತು. ರಾಯಚೂರು ಜಿಲ್ಲೆಯಲ್ಲಿ ಪ್ರಖ್ಯಾತರಾಗಿದ್ದ ಜಗನ್ನಾಥದಾಸಪ್ರೇರಣೆಯೂ ಅವರಿಗಿತ್ತು. ಅಪರಾಳರ ತಮ್ಮಣ್ಣ ಶ್ರೀಕೃಷ್ಣ ಪಾರಿಜಾತ ಬಯಲಾಟಕ್ಕೆ ಪ್ರಥಮ ಭಾಗವತ. ಹರಿವಂಶ ಪುರಾಣಗಳು ಇವನಿಗೆ ಆಕರ. ಆಂಧ್ರ ಪ್ರದೇಶಭಾಮಾ ಕಲಾಪ, ಕೂಚಿಪುಡಿ ನೃತ್ಯಗಳು ಮತ್ತು ತೆಲುಗಿನ ಪಾರಿಜಾತಗಳು ಇದಕ್ಕೆ ಪೂರಕ. ಇಂದು ಶ್ರೀಕೃಷ್ಣ ಪಾರಿಜಾತದೃಶ್ಯ ಪ್ರಕಾರವಾಗಿ ಪ್ರಸಿದ್ಧಿ ಪಡೆದಿದ್ದರೂ ಮೂಲತ: ಅದು ವಿಷ್ಣು ಪಾರಮ್ಯಕೀರ್ತನ ಕಾವ್ಯವಾಗಿತ್ತು. ಆ ಕೀರ್ತನ ಕಾವ್ಯವನ್ನು ಆದ‍ಷ್ಟು ಅಪರಾಳ ತಮ್ಮಣ್ಣ ಬರೆದರೆ; ಇನ್ನರ್ಧ ಭಾಗವನ್ನು ಸಿರಗುಪ್ಪಿ ಸದಾಶಿವ ರಚಿಸಿದ್ದಾನೆ. ಶ್ರೀಕೃಷ್ಣ ಪಾರಿಜಾತದಲ್ಲಿ ನೇರವಾಗಿ ಎಲ್ಲಿಯೂ ಅರ್ಧ ಭಾಗವನ್ನು ಸದಾಶಿವಯ್ಯನು ರಚಿಸಿದ್ದಾನೆಂದು ಹೇಳಿಕೆ ಕಂಡುಬರದಿದ್ದರೂ, ಕೊರವಂಜಿ ಭಾಗಪ್ರಕರಣ ಪ್ರಾರಂಭವಾದಾಗ ಕೃತಿಕಾರನ ಸೂಚನೆ ಇದೆ. ಅಪರಾಳತಮ್ಮಣ್ಣನು ಶ್ರೀಕೃಷ್ಣ ಪಾರಿಜಾತವನ್ನು ಕೀರ್ತನವನ್ನಾಗಿ ರಚಿಸಿರಬಹುದೆಂಬ ಸಂಶಯವಿದೆ. ಇದು ಬಯಲಾಟವೆಂದು ಎಲ್ಲಿಯೂ ತಿಳಿಸಿಲ್ಲ. ಕೃತಿಕೊನೆಯಲ್ಲಿ 'ನಾಡೊಳ್ ಪಸರಿಸಿತೀ ಕಾವ್ಯ' ಎಂದು ಹೇಳಿ ಸದಾಶಿವನು ಇದನ್ನು ಕಾವ್ಯ ವರ್ಗಕ್ಕೆ ಸೇರಿಸಿದ್ದಾನೆ. ಅಂದು ಶ್ರೀಕೃಷ್ಣ ಪಾರಿಜಾತವನ್ನು ಬಯಲಾಟವಾಗಿ ಆಡಿದಕ್ಕೆ ಯಾವ ಆಧಾರಗಳೂ ಸಿಗುವುದಿಲ್ಲ. ಹೀಗಾಗಿ ಅಪರಾಳ ತಮ್ಮಣ್ಣ ಮತ್ತು ಸಿರಗುಪ್ಪಿ ಸದಾಶಿವನು ರಚಿಸಿದ ಶ್ರೀಕೃಷ್ಣ ಪಾರಿಜಾತ ಕಾವ್ಯ ಮೂಲದಲ್ಲಿ ಕೇವಲ ಕೀರ್ತನ ರೂಪವಾಗಿರಬಹುದು ಎಂಬ ಸಂಶಯ ಮೂಡುತ್ತದೆ. ಬಯಲಾಟಪದ್ಯಗಳು ಸಾಮಾನ್ಯವಾಗಿ ಚಿಕ್ಕವಾಗಿರುತ್ತವೆ. ಆದರೆ ತಮ್ಮಣ್ಣನ ಶ್ರೀಕೃಷ್ಣ ಪಾರಿಜಾತಹಾಡುಗಳು ದೀರ್ಘವಾಗಿವೆ. ಬಯಲಾಟಪದ್ಯಗಳು ಸಾಮಾನ್ಯವಾಗಿ ಕಂದ, ಷಟ್ಪದಿ, ಅಕ್ಷರ ವೃತ್ತಗಳ ಛಂದೋಶಿಲ್ಪವನ್ನು ಹೊಂದಿರುತ್ತವೆ. ಅಪರಾಳತಮ್ಮಣ್ಣಪಾರಿಜಾತಪದ್ಯಗಳು ಸಂಗೀತ ಶಿಲ್ಪವನ್ನು ಹೊಂದಿವೆ. ನಿಶ್ಚಿತವಾದ ಕಥೆಯನ್ನು ಹೊಂದಿದ ಈ ಕಾವ್ಯದಲ್ಲಿ ಕೀರ್ತನ ಮಾದರಿಯ, ವಿಷ್ಣು ಮಹಿಮೆಯ ಅನೇಕ ಪದ್ಯಗಳು ಬರುವುದುಂಟು. ಇಂತಹ ಅನೇಕ ಪದ್ಯಗಳನ್ನೇ ಬಿಡಿ ಬಿಡಿಯಾಗಿ ತೆಗೆದುಕೊಂಡು ಹಾಡಿದರೆ ಒಂದೊಂದೂ ಕೀರ್ತನೆಗಳೇ ಆಗುತ್ತವೆ. ಹರಿದಾಸಕೀರ್ತನೆಗಳು ಬಿಡಿ ಬಿಡಿ ಕವನಗಳಾದರೆ, ಅಪರಾಳ ತಮ್ಮಣ್ಣಪಾರಿಜಾತ ಇಡಿಯಾಗಿ ಕಥೆಯನ್ನು ಹಿನ್ನಲೆಯಾಗಿಟ್ಟುಕೊಂಡು, ಕೃಷ್ಣನನ್ನು ಕೀರ್ತಿಸುವ ಹಿನ್ನಲೆ ಕಾವ್ಯವಾಗಿದೆ. ಆದರೆ ಅಪರಾಳ ತಮ್ಮಣ್ಣನಾಗಲಿ ಅಥವಾ ಸಿರಗುಪ್ಪಿ ಸದಾಶಿವನಾಗಲೀ ಕೀರ್ತನಾಕಾರರಾಗಿದ್ದರೂ ಎಂಬುದಕ್ಕಾಗಲೀ ಮತ್ತು ಈ ಕಾವ್ಯವನ್ನು ಕೀರ್ತನೆಗಾಗಿ ಉಳಿದವರು ಬಳಸಿಕೊಂಡಿದ್ದಾರೆ ಎಂದು ಹೇಳುವುದಕ್ಕಾಗಲೀ ಯಾವ ಆಧಾರಗಳೂ ಸಿಗುವುದಿಲ್ಲ.

ಭಕ್ತಿ ಮತ್ತು ತಾತ್ವಿಕ ವಿವೇಚನೆ

[ಬದಲಾಯಿಸಿ]

ಶ್ರೀಕೃಷ್ಣ ಪಾರಿಜಾತದ ಕೃತಿಯನ್ನು ಅವಲೋಕಿಸಿದಾಗ, ಭಕ್ತಿ ಮತ್ತು ತಾತ್ವಿಕ ವಿವೇಚನೆಯ ಗುಣ ಕಂಡುಬರುತ್ತದೆ. ಅಪರಾಳ ತಮ್ಮಣ್ಣನು ರಚಿಸಿದ ಭಾಗದಲ್ಲಿ ಭಕ್ತಿಯ ಆವೇಶವಿದ್ದರೆ, ಸದಾಶಿವನ ಭಾಗದಲ್ಲಿ ಭಕ್ತಿ ಅನುಭವವಾದದ್ದು ಕಂಡುಬರುತ್ತದೆ. ಭಕ್ತಿ ಅಪರಾಳ ತಮ್ಮಣ್ಣನ ಸ್ಥಾಯಿ ಭಾವವಾಗಿದೆ. ಕಥೆಗೆ ಸಂಬಂಧಿಸಿದಂತೆ ಉಳಿದ ಭಾವಗಳ ಪರಿಣಾಮಗಳು ಏನೇ ಇರಲಿ, ಅವು ಸಂಚಾರಿ ಭಾವಗಳು. ಪಾರಿಜಾತದುದ್ದಕ್ಕೂ ಕೃಷ್ಣ ಭಕ್ತಿ ಹಾಸುಹೊಕ್ಕಾಗಿದೆ. ವಿಜಯನಗರ ಸಾಮ್ರಾಜ್ಯ ಹಾಳಾಗುತ್ತಲೇ ದಾಸಕೂಟ, ವ್ಯಾಸಕೂಟಗಳು ಸ್ಥಳಾಂತರ ಹೊಂದಿ, ಅನೇಕ ಕಡೆ ಪಸರಿಸಿದವು. ರಾಯಚೂರು ಜಿಲ್ಲೆ ಇವರಿಗೆ ಆಶ್ರಯವನ್ನು ನೀಡಿತು. ರಾಜಾಶ್ರಯವಿಲ್ಲದ ಇವರು ಕೃಷ್ಣ ಭಕ್ತಿಯನ್ನು ಜನರಲ್ಲಿ ಬಿತ್ತರಿಸುತ್ತಿದ್ದರು. ಗೀತ ನೃತ್ಯಗಳಿಗೆ ಹೆಚ್ಚಿನ ಸ್ಥಾನ ದೊರೆಯಿತು. ಶ್ರೀಕೃಷ್ಣನ ಲೀಲೆಗಳನ್ನು ಭಾಗವತದ ಆಧಾರದ ಮೇಲೆ ಅಭಿನಯಿಸಲು ಆರಂಭಿಸಿದರು. ರಾಯಚೂರು ಜಿಲ್ಲೆಯಲ್ಲಿ ಕೆಲಸದ ಸಮಯದಲ್ಲಿ ದಾಸಕೂಟಗಳು ಜನಪ್ರಿಯವಾದವು. ಇಂತಹಾ ಪರಿಸರದಲ್ಲಿ ಹುಟ್ಟಿದ ಅಪರಾಳ ತಮ್ಮಣ್ಣನಿಗೆ ಶ್ರೀಕೃಷ್ಣ ಪಾರಿಜಾತ ರಚಿಸಲು ದಾಸಕೂಟಗಳು ಪ್ರೇರಣೆಯನ್ನು ನೀಡಿದೆ. ಕರ್ನಾಟಕದ ಸಂಗೀತವನ್ನು ಅಧ್ಯಯನ ಮಾಡಿದ ಇವನಿಗೆ ಆಂಧ್ರ ಭಾಷೆಯ ಸಂಪರ್ಕವಿತ್ತೆಂದು ತಿಳಿಯುತ್ತದೆ. ಇದರಿಂದಲೆ ಶ್ರೀಕೃಷ್ಣ ಪಾರಿಜಾತದಲ್ಲಿ ಕೊರವಂಜಿ ಪಾತ್ರವನ್ನು ಸೇರಿಸಿದನೆಂದು ಈ ವಿದ್ವಾಂಸರ ಅಭಿಪ್ರಾಯ. ಅಪರಾಳ ತಮ್ಮನ್ಣನ ಪಾರಿಜಾತವು ಒಂದು ಕಾಲಕ್ಕೆ ಪ್ರಸಿದ್ಧವಾಗಿತ್ತೆಂದು ತಿಳಿಯುತ್ತದೆ. ಮೂಲತ: ಇದೊಂದು ಹಾಡುಗಬ್ಬವಾಗಿತ್ತೇ ಹೊರತು ದೃಶ್ಯ ಮಾಧ್ಯಮವಾಗಿರಲಿಲ್ಲ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಲಗೋಡ ಗ್ರಾಮದ ತಮ್ಮಣ್ಣನು ಈ ಅಪರಾಳ ತಮ್ಮಣ್ಣನ ಶ್ರೀಕೃಷ್ಣ ಪಾರಿಜಾತವನ್ನು ಮಾರ್ಪಡಿಸಿ ದೃಶ್ಯಮಾಧ್ಯಮಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದ. ಅಪರಾಳ ತಮ್ಮಣ್ಣ ರಚಿಸಿದ ಪಾರಿಜಾತಕ್ಕೆ ಕುಲಗೋಡ ತಮ್ಮಣ್ಣ ಸಂಭಾಷಣೆಯನ್ನು ಹೊಸ ಹಾಡುಗಳನ್ನು ಸೇರಿಸಿ ಶ್ರೀಕೃಷ್ಣ ಪಾರಿಜಾತವನ್ನು ಉತ್ತುಂಗಕ್ಕೆ ಮುಟ್ಟುವಂತೆ ಮಾಡಿ, ಜಾನಪದ ರಂಗಭೂಮಿಯನ್ನು ವಿಸ್ತಾರಗೊಳಿಸಿದವರಲ್ಲಿ ಪ್ರಮುಖವೆನಿಸುತ್ತಾನೆ. ಕುಲಗೋಡ ತಮ್ಮಣ್ಣನ ಕಾಲ ಸುಮಾರು ಕ್ರಿ.ಶ ೧೮೬೦. ಇವನು ಪತ್ತಾರರ ಜಾತಿಗೆ ಸೇರಿದವನು. ತಮ್ಮಣ್ಣನ ಪತ್ನಿ ಯಮುನಾಬಾಯಿ. ತಮ್ಮಣ್ಣ ವಿದ್ಯಾಭ್ಯಾಸದಲ್ಲಿ ದಡ್ಡನಿದ್ದ. ತಂದೆ ಎಷ್ಟು ಪ್ರಯತ್ನಿಸಿದರೂ ವಿದ್ಯಾಭ್ಯಾಸ ಮಾಡಲಿಲ್ಲ. ಈತನಿಗೆ ಸೋಗು ಹಾಕುವುದರಲ್ಲಿ ಆಸಕ್ತಿಯಿತ್ತು. ಆ ಆಸಕ್ತಿಯೇ ಶ್ರೀಕೃಷ್ಣ ಪಾರಿಜಾತವನ್ನು ರಂಗಭೂಮಿಗೆ ಅಳವಡಿಸಲು ಪ್ರೇರಣೆಯಾಯಿತು. ವೃತ್ತಿಯಿಂದ ಬಂಗಾರದ ವ್ಯಾಪಾರಸ್ಥನಾಗಿದ್ದರೂ ಆಸಕ್ತಿ ಸಾಹಿತ್ಯದ ಕಡೆಗೆ ಇತ್ತು. ಭಕ್ತಿ ಪರವಾದ ಹಾಡುಗಳನ್ನು ರಚಿಸಿ ಹಾಡುವುದು ಇವನಿಗೆ ಅಚ್ಚುಮೆಚ್ಚಾಗಿತ್ತು. ಅವನು ನಾಡಿನಲ್ಲಿ ಪ್ರದರ್ಶನವಾಗುತ್ತಿದ್ದ ಯಕ್ಷಗಾನ, ದೊಡ್ಡಾಟ, ಬಯಲಾಟಗಳನ್ನು ನೋಡಿ ಪ್ರಭಾವಿತನಾಗಿದ್ದ. ಹನುಮಂತ ದೇವರ ಭಕ್ತನಾದ ತಮ್ಮಣ್ಣನಲ್ಲಿ ಭಕ್ತಿ ಉಕ್ಕಿ ಶ್ರೀಕೃಷ್ಣ ಪಾರಿಜಾತವನ್ನು ರಂಗಕ್ಕೇರಿಸಿದ. ಇದು ಪ್ರತೀ ವರ್ಷ ಹನುಮಂತ ದೇವರ ಹೆಸರಲ್ಲಿ ಪ್ರದರ್ಶನವಾಗುತ್ತಿತ್ತು. ಅವನು ತನ್ನ ಆರಾಧ್ಯ ದೈವವಾದ ಕುಲಗೋಡದ ಭೀಮೇಶನ ಅಂಕಿತದಲ್ಲಿ ಹಲವಾರು ಜಾವಳಿ ಪಂದ್ಯಗಳನ್ನು ರಚಿಸಿದ್ದಾನೆ. ಕುಲಗೋಡ, ಪಾರಿಜಾತ ತಮ್ಮಣ್ಣನ ಪದಗಳು ಎಂಬ ಪುಸ್ತಕವೂ ಬಂದಿದೆ. ಕುಲಗೋಡ ತಮ್ಮಣ್ಣನಿಗೆ ಮರಾಠಿ ರಂಗಭೂಮಿಯು ಪ್ರೇರಣೆ ನೀಡಿದೆ. ಇವನು ಪಂಡರಾಪುರಕ್ಕೆ ನಡೆಯುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಅನೇಕ 'ತಮಾಶಾ'ಗಳನ್ನು ನೋಡಿ ಪ್ರಭಾವಿತನಾಗಿದ್ದಾನೆ ಎಂದು ಕೆಲವರು ಊಹಿಸುತ್ತಾರೆ. ಮರಾಠಿ ರಂಗಭೂಮಿಯ 'ಗೌಳಣ' ಭಾಗವನ್ನು ತನ್ನ ಪ್ರಯೋಗದ ಪೂರ್ವ ರಂಗದಲ್ಲಿ ಸೇರಿಸಿದ್ದಾನೆ. ಈ ಗೊಲ್ಲತ್ತಿಯ ಭಾಗ ಶ್ರೀಕೃಷ್ಣ ಪಾರಿಜಾತದಲ್ಲಿ ಅತ್ಯಂತ ಜನಪ್ರಿಯವಾಯಿತು. ಅದನ್ನೇ ದಾಸರಾಟದಲ್ಲಿಯೂ ಕಾಣುತ್ತೇವೆ. ಶ್ರೀಕೃಷ್ಣ ಪಾರಿಜಾತದ ಎರಡನೇಯ ಹಂತದ ಜನಪ್ರಿಯತೆಗೆ ತಮ್ಮಣ್ಣನ ಜೊತೆಗೆ ಕೌಜಲಗಿ ನಿಂಗಮ್ಮ ಕಾರಣೀಭೂತಳಾಗಿದ್ದಾಳೆ. ಪಾರಿಜಾತಕ್ಕೆ ಭದ್ರಬುನಾದಿ ಹಾಕಿದವರಲ್ಲಿ ಅವಳೂ ಒಬ್ಬಳು. ತಮ್ಮಣ್ಣ ತೀರಿಕೊಂಡ ನಂತರ ನಿಂಗಮ್ಮ ಸ್ವತ: ಮೇಳ ಕಟ್ಟಿ ಕರ್ನಾಟಕದಾದ್ಯಂತ ಸಂಚರಿಸಿ ಜನಪ್ರಿಯಗೊಳಿಸಿದಳು. ಕೌಜಲಗಿ ನಿಂಗಮ್ಮ ಸುಮಾರು ಕ್ರಿ.ಶ ೧೮೫೭ರಲ್ಲಿ ಜನಿಸಿದಳು.ಮರಾಠಿಯಲ್ಲಿ ಶಿಕ್ಷಣ ಪಡೆದ ಅವಳಿಗೆ ಇತರ ಐದಾರು ಭಾಷೆಗಳ ಪರಿಚಯವಿತ್ತೆಂದು ಹೇಳುತ್ತಾರೆ. ಸಂಗೀತ ಪರಿಣತಳಾಗಿದ್ದಳಲ್ಲದೆ ಸ್ವತ: ಶ್ರೇಷ್ಠ ಕಲಾವಿದೆಯಾಗಿದ್ದಳು. ಅನೇಕ ಶ್ರೀಕೃಷ್ಣ ಪಾರಿಜಾತ ಕಲಾವಿದರನ್ನು ಬೆಳೆಸಿ ಅವರಿಗೆ ಪ್ರೇರಣೆ ನೀಡಿದರು. ಪ್ರಪ್ರಥಮವಾಗಿ ಕೌಜಲಗಿ ನಿಂಗಮ್ಮನೇ ಶ್ರೀಕೃಷ್ಣ ಪಾರಿಜಾತವನ್ನು ಮೂರು ದಿನಗಳವರೆಗೆ ಆಡಿ ದಾಖಲೆ ಸ್ಥಾಪಿಸಿದ್ದಾಳೆ. ಒಂದನೆಯ ದಿನ ಗೊಲ್ಲತಿಯ ರುಕ್ಮಣಿಯ ಭಾಗ. ಎರಡನೇಯ ದಿನ ಸತ್ಯಭಾಮೆಯ ಭಾಗ. ಮೂರನೆಯ ದಿನ ಕೊರವಂಜಿಯ ಭಾಗ. ಹೀಗಾಗಿ ಶ್ರೀಕೃಷ್ಣ ಪಾರಿಜಾತವು ರಂಗಪ್ರಯೋಗ, ಸಂಗೀತ ಶೈಲಿ ಕಥಾವಸ್ತುವಿನ ನವೀಕರಣ, ಸಂಭಾಷಣಾ ಕ್ರಮ, ಇವುಗಳಿಂದ ಸ್ವತಂತ್ರ ಪ್ರಕಾರವಾಗಿದೆ. ತನ್ನದೇ ಆದ ಸ್ವರೂಪ ಲಕ್ಷಣ ಸಂಪ್ರದಾಯಗಳನ್ನು ಹೊಂದಿದೆ. ಕೆಲವರು ಊಹಿಸುವಂತೆ ಶ್ರೀಕೃಷ್ಣ ಪಾರಿಜಾತವು ದಾಸರಾಟದ ಒಂದು ಪ್ರಕಾರವಲ್ಲ. ದಾಸರಾಟ ಬೇರೆ ಶ್ರೀಕೃಷ್ಣ ಪಾರಿಜಾತ ಬೇರೆ. ಎರಡೂ ಆಟಗಳು ಎಂದೂ ಒಂದನ್ನೊಂದು ಹೋಲುವುದಿಲ್ಲ.

ಶ್ರೀ ಕೃಷ್ಣ ಪಾರಿಜಾತದ ಕಥಾವಸ್ತು

[ಬದಲಾಯಿಸಿ]

ಧರಣೀ ದೇವಿ ದೈತ್ಯರ ಕಾಟ ತಾಳಲಾರದೇ ಶ್ರೀಹರಿಗೆ ಬೇಡಿಕೊಂಡಳು. ಅವಳ ಆಸೆ ಪೂರೈಸಲು ವಿಷ್ಣು ಕೃಷ್ಣನಾಗಿ ಅವತರಿಸಿ ಬಂದು ಕಂಸನನ್ನು ಕೊಂದು, ತಂದೆ ತಾಯಿಗಳನ್ನು ರಕ್ಷಿಸಿ ದ್ವಾರಕೆಯಲ್ಲಿ ರುಕ್ಮಿಣಿ, ಸತ್ಯಭಾಮೆ ಮೊದಲಾದ ಎಂಟು ಸುಂದರಿಯರೊಂದಿಗೆ ಅಷ್ಟೈಶ್ವರ್ಯ ಭೋಗದಲ್ಲಿದ್ದನು.ಒಂದು ದಿನ ನಾರದನು ಅಪರೂಪದ ಪಾರಿಜಾತ ಪುಷ್ಪವನ್ನು ಕೃಷ್ಣನ ಕೈಯಲ್ಲಿ ಕೊಟ್ಟನು. ಕೃಷ್ಣ ಅದನ್ನು ರುಕ್ಮಿಣಿಗೆ ನೀಡಿದ, ನಾರದನು ಸತ್ಯಭಾಮೆಯ ಮುಂದೆ ಪಾರಿಜಾತ ಪುಷ್ಪವನ್ನು ಕೊಂಡಾಡಿ ನಾನು ಅದನ್ನು ಕೃಷ್ಣನಿಗೆ ಕೊಟ್ಟರೆ, ಅವನು ರುಕ್ಮಿಣಿಗೆ ಕೊಟ್ಟನಲ್ಲಾ ಎಂದು ಚಾಡಿ ಹೇಳಿ ಹೋದ.ಕೃಷ್ಣನ ಪಕ್ಷಪಾತವನ್ನು ಕಂಡ ಸತ್ಯಭಾಮೆ ಧೂತನ ಮುಖಾಂತರ ಕೃಷ್ಣನನ್ನು ಕರೆತರಿಸುವ ಪ್ರಯತ್ನ ಮಾಡುತ್ತಾಳೆ. ಕೃಷ್ಣ ಬಾರದಿದ್ದಾಗ ತಾನೇ ಸ್ವತ: ಹೋಗುತ್ತಾಳೆ. ಕೃಷ್ಣ ಅವಳನ್ನು ನೋಡದ್ದಕ್ಕೆ ಅಪಮಾನದಿಂದ ಸತ್ಯಭಾಮೆ ಮೂರ್ಛೆ ಹೋಗುತ್ತಾಳೆ. ಕೃಷ್ಣ ಉಪಚಾರ ಮಾಡಿ ಸಂತೈಸುತ್ತಾನೆ. ಸಮಾಧಾನ ಹೊಂದದೇ ರುಕ್ಮಿಣಿಯನ್ನು ಬೈದು, ತಪಸ್ಸು ಮಾಡಿ ನಿನ್ನನ್ನು ಒಲಿಸಿಕೊಳ್ಳುವೆ ಎಂದು ಪ್ರತಿಜ್ನೆ ಮಾಡಿ, ಶಿವನನ್ನು ಸತಿಯನ್ನು ಪೂಜೆಯ ದಿನ ವರ ಪಡೆದು, ಕೃಷ್ಣ ತನ್ನ ಮನೆಗೆ ಬಂದು ಅವಳ ಮನಸನ್ನು ತಿಳಿದು, ಸತ್ಯಭಾಮೆಗೆ ಕೃಷ್ಣ ಬೇಗನೆ ಬರುವೆನೆಂಬ ಸಂತಸದ ವಿಷಯ ತಿಳಿಸಿ ಅವಳಿಂದ ಸತ್ಕರಿಸಿಕೊಂಡು, ರುಕ್ಮಿಣಿಯ ಮನೆಗೆ ಕೊರವಂಜಿಯ ವೇಷದಲ್ಲಿ ಹೋಗುತ್ತಾನೆ. ರುಕ್ಮಿಣಿ ಕೃಷ್ಣನನ್ನು ಗುರುತಿಸಿ ಆರತಿ ಮಾಡುತ್ತಾಳೆ. ಸತ್ಯಭಾಮೆಗೆ ಭವಿಷ್ಯ ಹೇಳಿದಂತೆ ಕೃಷ್ಣ ಸತ್ಯಭಾಮೆಯ ಮನೆಗೆ ಹೋಗಿ ಮನೆಬಾಗಿಲು ತಟ್ಟಿ, ದಶಾವತಾರದ ಗುರುತು ಹೇಳಿ, ತಾನು ಕೃಷ್ಣನೆಂದು ತಿಳಿಸಿದರೂ ಸತ್ಯಭಾಮೆಯು ಸೊಕ್ಕಿನಿಂದ ತಿರಸ್ಕರಿಸುತ್ತಾಳೆ. ಕೃಷ್ಣನು ತಾನು "ಅಲ್ಲೀಪುರ ಭೀಮನೊಡೆಯ ಕಾಣೆ ಭಾಮಿನೀ ಬಾಗಿಲ ತೆರೆಯೇ" ಎಂದಾಗ ಕಾಲಿಗೆರಗಿ ಕರುಣಿಸಲು ಬೇಡಿಕೊಳ್ಳುತ್ತಾಳೆ. ಕೃಷ್ಣ ಜೊತೆಗೆ ಸರಸ ಸಲ್ಲಾಪ ನಡೆಸುತ್ತಾಳೆ. ಒಂದು ಹೂವಿಗೆ ಇಷ್ಟು ಸಿಟ್ಟಾಗುವುದೇ, ಆ ಹೂವಿನ ಗಿಡವನ್ನೇ ತಂದು ಕೊಡುತ್ತೇನೆಂದು ಕೃಷ್ಣ ಹೇಳುತ್ತಾನೆ. ಕೃಷ್ಣನು ಅವಳಿಗೆ ಭಕ್ತರ ಚರಿತ್ರೆಯನ್ನೂ, ನವವಿಧ ಭಕ್ತಿಯ ರೀತಿಯನ್ನು ತಿಳಿಸಿ ಅವಳನ್ನು ಮೆಚ್ಚಿಸುತ್ತಾನೆ. ಆ ಕಾಲಕ್ಕೆ ದೇವೇಂದ್ರನು ಕೃಷ್ಣನ ಬಳಿ ಬಂದು ಮುರನರಕರ ಉಪಟಳ ನೀಗಿಸಲು ಬೇಡಿಕೊಳ್ಳುತ್ತಾನೆ. ಕೃಷ್ಣ ನರಕಾಸುರನನ್ನು ಸಂಹರಿಸಿ, ಹದಿನಾರು ಸಾವಿರ ಕನ್ಯೆಯರನ್ನು ಸೆರೆಯಿಂದ ಮುಕ್ತಗೊಳಿಸಿ ದ್ವಾರಕೆಗೆ ಕಳುಹಿಸಿ, ಸತ್ಯಭಾಮೆಯೊಂದಿಗೆ ದೇವೇಂದ್ರನ ಮನೆಗೆ ಬಂದು ಪೂಜೆಗೊಂಡು ತಾಯಿಯಾದ ಅದಿತಿಗೆ ವಂದಿಸಿದನು. ಆಕೆ ಮಗನನ್ನು ಮುದ್ದಾಡಿ ಸತ್ಯಭಾಮೆಯು ವಸ್ತ್ರಾಭರಣವಿಟ್ಟು ಆಶೀರ್ವದಿಸಿದಳು. ಆ ವೇಳೆಗೆ ಇಂದ್ರನ ರಾಣಿ ಶಚೀದೇವಿ ಅಲ್ಲಿ ಬಂದಳು. ಅವಳ ಮುಂದೆ ಅದಿತಿ ಸತ್ಯಭಾಮೆಯ ಗುಣಗಾನ ಮಾಡಿದರೆ, ಅವಳು ಅದನ್ನು ಸಹಿಸಲಿಲ್ಲ. ಸತ್ಯಭಾಮೆ ಭೂಲೋಕದವಳು. ತಾನು ಇಂದ್ರನ ಹೆಂಡತಿ ದೇವಲೋಕದವಳು. ನನಗೆ ಅವಳು ಸರಿಸಮಾನಳಲ್ಲ ಎನ್ನುತ್ತಾಳೆ. ಅದಿತಿ ಹಿರಿಸೊಸೆಗೆ ಬುದ್ಧಿ ಹೇಳಿ ಸತ್ಯಭಾಮೆಯನ್ನು ಸಂತೈಸುವಳು. ಕೃಷ್ಣ ಸತ್ಯಭಾಮೆ ಗರುಡವನ್ನೇರಿ ಬರುವಾಗ ದಾರಿಯಲ್ಲಿ ಪಾರಿಜಾತಕ್ಕೆ ಸತ್ಯಭಾಮೆ ಸೋತು, ಶಚಿಯ ಮೊದಲಿಕೆ ನೆನೆದು, ಕೃಷ್ಣ ಕೊಟ್ಟ ವಚನವನ್ನು ನೆನಪಿಸಿದಳು. ಕೃಷ್ಣನ ಸನ್ನೆಯಿಂದ ಗರುಡನು ವೃಕ್ಷವನ್ನು ಕಿತ್ತನು. ಇದನ್ನು ತಿಳಿದ ಸುರೇಂದ್ರನು ಯುದ್ಧಕ್ಕೆ ಬಂದನು.

ಹಾಡು ಜೋಡು

[ಬದಲಾಯಿಸಿ]

ಶ್ರೀಕೃಷ್ಣ ಪಾರಿಜಾತದಲ್ಲಿ ಮಾತಿಗಿಂತ ಹಾಡಿಗೆಯೇ ಪ್ರಾಧಾನ್ಯ. ಇಲ್ಲಿ ಹಾಡು ನಿಶ್ಚಿತ, ಮಾತು ಅನಿಶ್ಚಿತ. ಯಕ್ಷಗಾನ ರೀತಿಯಲ್ಲಿ ಮೊದಲು ಹಾಡಿ ನಂತರ ಆ ಹಾಡಿನ ಇಂಗಿತವನ್ನು ವಿವರಿಸುವುದು ಪಾರಿಜಾತದ ಕ್ರಮವಾಗಿದೆ. ಮಾತು ಲಿಖಿತ ರೂಪದಲ್ಲಿರುತ್ತದೆ. ಪಾರಿಜಾತದಲ್ಲಿ ಮಾತ್ರ ಹಾಗಿಲ್ಲ. ಹಾಡು ನಿಶ್ಚಿತವಾಗಿದ್ದು ಮಾತುಗಳನ್ನು ಮಾತ್ರ ಆಯಾ ಪಾತ್ರಗಳೇ ವಿವರಿಸಿ ಹೇಳುತ್ತವೆ. ಕರ್ನಾಟಕದಲ್ಲಿ ಜನಪ್ರಿಯವಾದ ರಾಗಗಳಲ್ಲಿಯೇ ಶ್ರೀಕೃಷ್ಣ ಪಾರಿಜಾತದ ಹಾಡುಗಳಿರುವುದೇ ಒಂದು ವೈಶಿಷ್ಟ್ಯ.

ಪಾತ್ರ ಸೃಷ್ಟಿ

[ಬದಲಾಯಿಸಿ]

ಶ್ರೀಕೃಷ್ಣ ಪಾರಿಜಾತದಲ್ಲಿ ಭಾಗವತನದು ಒಂದು ದೊಡ್ಡ ಪಾತ್ರ. ಮೊದಲಿನಿಂದಲೂ ಕೊನೆಯವರೆಗೆ ಅವನು ಇದ್ದೇ ಇರುವನು. ಅವನಿಲ್ಲದೇ ಆಟ ಮುಂದೆ ಸಾಗದು ಮತ್ತು ಕೊನೆಗೊಳ್ಳದು. ರಂಗಭೂಮಿಯ ಮೇಲೆ ಬಂದ ಪ್ರತಿಯೊಂದು ಪಾತ್ರದ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿ, ಆಯಾ ಪಾತ್ರದ ಉದ್ದೇಶ, ಧೋರಣೆಯನ್ನು ಕೇಳಿಕೊಂಡು, ಕಥೆಯನ್ನು ಮುಂದೋಡಿಸುವ ಕಾರ್ಯವೆಲ್ಲಾ ಈ ಭಾಗವತನದು. ಇವನು ಯಾರ ಪಕ್ಷಕ್ಕೂ ಅಂಟಿಕೊಂಡವನಲ್ಲ. ಸರ್ವರ ಸೇವೆಗೂ ಅವನು ಸಿದ್ಧ. ಕೈಯಲ್ಲಿ ತಾಳ ಹಿಡಿದು ಹಾಡುತ್ತ, ಪಾತ್ರಗಳನ್ನೆಲ್ಲಾ ಕುಣಿಸುತ್ತಲೇ ಇರುವನು. ಅವನಿಗೆ ಯಾವ ತರದ ಅಹಂಕಾರವಿಲ್ಲ. ಹಲವಾರು ಪ್ರಸಂಗಗಳಲ್ಲಿ ನಲ್ಲನಲ್ಲೆಯರ ಮಧ್ಯದಲ್ಲಿ ನಿಂತು ಈತ ಕಾರ್ಯ ಮಾಡಬೇಕಾಗುತ್ತದೆ. ಅದು ಕುಂಟಲಗಿತ್ತಿ ಕಾರ್ಯವೇ ಸರಿ. ಹೆಣ್ಣು ಪಾತ್ರಗಳು ನಾಚಿಕೆ ಬಿಟ್ಟು ವರ್ತಿಸಲು ಅನುಕೂಲವಾಗಲೆಂದು ಈ ಭಾಗವತನನ್ನು ಧೂತೆಯೆಂದು ಸಂಭೋದಿಸುವುದು ರೂಢಿಯಾಗಿದೆ. ಶ್ರೀಕೃಷ್ಣ ಪಾರಿಜಾತದಲ್ಲಂತೂ ಈ ಧೂತೆಯ ಪಾತ್ರ ಅತಿ ದೊಡ್ಡದು. ಕೃಷ್ಣ, ಸತ್ಯಭಾಮೆ, ರುಕ್ಮಿಣಿ ಇವರ ಪ್ರೇಮಕೂಟದಲ್ಲಿ ಧೂತೆ ಮಧ್ಯಸ್ಥಳಾಗಿ ನಿಂತು, ಪ್ರಸಂಗಾನುಸಾರ ಪರಿಹಾರ ನೀಡುವ ಮಹತ್ವದ ಪಾತ್ರವಹಿಸುತ್ತಾನೆ. ಪಾತ್ರಗಳಡನೆ ಹೊಂದಿಕೊಂಡು, ಅವರಾಡುವ ಮಾತಿಗೆ ಅಪಾರ್ಥ ಕಲ್ಪಿಸಿ ನಗೆ ಹುಟ್ಟಿಸುವುದೂ ಭಾಗವತನ ಕಾರ್ಯವೇ ಆಗಿದೆ. ಒಮ್ಮೊಮ್ಮೆ ಪಾಂಡಿತ್ಯ ಪೂರ್ಣವಾಗಿ, ಮಗದೊಮ್ಮೆ ಗ್ರಾಮ್ಯವಾಗಿ, ಹೇಗೆ ಬೇಕೋ ಹಾಗೆ, ಮಾತನಾಡುವ ಕಲೆ ಅವನಿಗೆ ಸಾಧಿಸಿದೆ.

ವೇಷಭೂಷ

[ಬದಲಾಯಿಸಿ]

ಶ್ರೀಕೃಷ್ಣ ಪಾರಿಜಾತದ ಪಾತ್ರಧಾರಿಗಳು ದೊಡ್ಡಾಟದ ಪಾತ್ರಧಾರಿಗಳಂತೆ ಆಡಂಬರದ ಬಣ್ಣ, ವೇಷಭೂಷಣ ಬೇಡುವುದಿಲ್ಲ. ಸ್ತ್ರೀ ಪಾತ್ರಗಳನ್ನು ಹೆಚ್ಚಾಗಿ ಗಂಡಸರೇ ವಹಿಸುವುದರಿಂದ ಅವರು ಸರ್ವಾಂಗ ಭೂಷಿತರಾಗುವುದು ಅಗತ್ಯ. ಶ್ರೀಕೃಷ್ಣ, ಗೋಪಾಲ ಮುಂತಾದ ಪುರುಷ ಪಾತ್ರಗಳು ಬಣ್ಣ ಹಚ್ಚಿಕೊಂಡರೂ ಭರ್ಜರಿ ವೇಷವನ್ನು ಹಾಕುವುದಿಲ್ಲ. ಶ್ರೀಕೃಷ್ಣ ಪಾತ್ರಧಾರಿ ಬಿಳಿಯ ಅಂಗಿ, ಪೀತಾಂಬರ ಉಟ್ಟುಕೊಂಡು, ಜರತಾರೀ ಪೇಟಾ ಸುತ್ತಿ ಚುಂಗು ಬಿಟ್ಟಿರುತ್ತಾನೆ. ಪಾರಿಜಾತದಲ್ಲಿ ಪಾತ್ರ ವಿವರಣೆಗಿಂತಲೂ ಮಾತಿನ ಮೋಡಿಗೆ ಹೆಚ್ಚಿನ ಪ್ರಾಧಾನ್ಯ. ಸರ್ವರ ಮನವನ್ನು ಸೆಳೆಯುವ ಪಾತ್ರ ಪಾರಿಜಾತದಲ್ಲಿ ಇನ್ನೊಂದಿದೆ. ಅದೇ ಕೊರವಂಜಿ ಪಾತ್ರ. ಅವಳ ವೇಷಭೂಷಣ ಕೊರವಂಜಿಯ ವೇಷದಂತೆ ತೋರಿದರೂ ದೇವಲೋಕದ ಕೊರವಿ ಅವಳು. ಬ್ರಹ್ಮಾಂಡವನ್ನೇ ಬುಟ್ಟಿಯಾಗಿ ಮಾಡಿಕೊಂಡು, ಪರಮಾತ್ಮನನ್ನೇ ಶಿಶುವಾಗಿ ಎತ್ತಿಕೊಂಡು , ಕಣಿ ಹೇಳುವ ತ್ರಿಕಾಲಜ್ನಾನಿ ಅವಳು. ಅವಳಿಗೆ ತಿಳಿಯದ ವಿಶಯವೇ ಇಲ್ಲೆನ್ನಬಹುದು. ಈ ಪಾತ್ರ ಪಾರಿಜಾತದಲ್ಲಿ ಬಂದು ಸೇರಿದ್ದು ಆಂಧ್ರ ಪ್ರದೇಶದ ಪ್ರಭಾವದಿಂದ. ಅವಳು ರಂಗಭೂಮಿಗೆ ಬಂದಾಗಲೇ ಶ್ರೀಕೃಷ್ಣ ಪಾರಿಜಾತ ಕಥೆ ಪರಾಕಾಷ್ಠೆ ದಿಸೆಗೆ ಬಂದು ಮುಟ್ಟುತ್ತದೆ. ಇಂತಹ ಅಗಾಧ ಪಾತ್ರ ಸೃಷ್ಠಿ ಇಲ್ಲಿರುವುದರಿಂದಲೇ ಪಾರಿಜಾತ ಆಟ ಇಂದಿಗೂ ಸರ್ವಜನಾದರಣೀಯವಾಗಿ ಮೆರೆಯುತ್ತಲಿದೆ.

ಶ್ರೀಕೃಷ್ಣ ಪಾರಿಜಾತದ ಸಂಭಾಷಣೆ

[ಬದಲಾಯಿಸಿ]

ಅಪರಾಳರ ತಮ್ಮಣ್ಣನೂ ಶಿರಗುಪ್ಪಿ ಸದಾಶಿವನೂ ಸೇರಿಕೊಂಡು ರಚಿಸಿದ ಶ್ರೀಕೃಷ್ಣ ಪಾರಿಜಾತ ಸಂಪೂರ್ಣ ಕಾವ್ಯ ರೂಪದ್ದು ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಆ ಕಾಲಕ್ಕೆ ಹೇಗೆ ಪ್ರದರ್ಶನವಾಗುತ್ತಿತ್ತು ಎಂಬುದನ್ನು ಸೃಷ್ಟೀಕರಿಸುವುದಕ್ಕೆ ಆಧಾರಗಳಿಲ್ಲ. ಅಂದು ಪ್ರದರ್ಶನವಾಗಿದ್ದರೂ ಕೂಡ, ಹಾಡಿನ ಲಯಕ್ಕೆ ತಕ್ಕಂತೆ, ಪಾತ್ರಗಳು ಹಾವಭಾವ ಮಾಡುತ್ತಾ ನಟಿಸುತ್ತಿರಬೇಕು. ಸಂಭಾಷಣೆಯು ರಂಗಸೃಷ್ಟಿಯಾಗಿರಬಹುದು. ಸಂಪೂರ್ಣ ಹಾಡುಗಬ್ಬವಾದ ಅಪರಾಳ ತಮ್ಮಣ್ಣನ ಪಾರಿಜಾತವನ್ನು ಜನಪದ ರಂಗಭೂಮಿಗೆ ಒಪ್ಪುವಂತೆ ಮಾರ್ಪಾಡಿಸಿಕೊಂಡ ಕೀರ್ತಿ ಕುಲಗೋಡ ತಮ್ಮಣ್ಣನಿಗೆ ಸಲ್ಲುತ್ತದೆ. ಕುಲಗೋಡ ತಮ್ಮಣ್ಣ ಚತುರ ಸಂಭಾಷಣೆ ಮೂಲಕ ಪಾರಿಜಾತಕ್ಕೊಂದು ಗಟ್ಟಿಯಾದ ನೆಲೆ ಸಿಗುವಂತೆ ಮಾಡಿದ್ದಾನೆ. ಶ್ರೀಕೃಷ್ಣ ಪಾರಿಜಾತದಲ್ಲಿ ಕೆಲ ಆಶು ಸಂಭಾಷಣೆಗಳು ಒಮ್ಮೊಮ್ಮೆ ವೇದಾಂತ ಭಾಷಣವಾಗುವುದುಂಟು. ಅಲ್ಲಿಯ ನಟನಿಗಿರುವ ವಾಕ್ ಸ್ವಾತಂತ್ರ್ಯ ಇತರ ಬಯಲಾಟದ ಯಾವ ನಟನಿಗೂ ಇಲ್ಲ. ಈ ಸ್ವಾತಂತ್ರ್ಯದ ದುರುಪಯೋಗಪಡೆದುಕೊಂಡು ಇಂದಿನ ಕಲಾವಿದರು ಅಶ್ಲೀಲಕ್ಕೆ ಕೊಂಡೊಯ್ಯುವ ಉದಾಹರಣೆಗಳಿವೆ. ಶ್ರೀಕೃಷ್ಣ ಪಾರಿಜಾತದ ಮಾತುಗಾರಿಕೆಯನ್ನು ಕುರಿತು ಹೇಳೂವುದಾದರೆ ‘ತಾಳ ಮದ್ದಳೆಯ ಅರ್ಥದಾರಿಗಳಂತೆ ಈ ನಟರು ನಡುನಡುವೆ ತಮ್ಮ ನಿಶ್ಚಿತ ಮತಿಯನ್ನು ಮರೆಯುತ್ತಾರೆ. ಹೀಗಾಗಿ ಇವರಿಗೆ ಪುರಾಣಗಳ ದಟ್ಟ ಪರಿಚಯವೂ ವಾಕ್ಚಾತುರ್ಯವೂ ಇರಬೇಕು. ಪದ್ಯವನ್ನು ಬಿಟ್ಟು ಪಠ್ಯೇತರ ಪುರಾಣ ಮಾತುಗಳನ್ನೇ ಸೇರಿಸಿ ಚೆನ್ನಾಗಿ ಮಾತನಾಡುವವನಿಗೆ ಈಗಲೂ ಹಳ್ಳಿಗಳಲ್ಲಿ ತುಂಬ ಗೌರವ ಕೊಡುತ್ತಾರೆ. ಶ್ರೀಕೃಷ್ಣ ಪಾರಿಜಾತದ ಭಾಷೆ ತುಂಬ ವೈಶಿಷ್ಟ್ಯವನ್ನು ಪಡೆದಿದೆ. ಈ ಕಾರಣದಿಂದಲೇ ಕಾಲಮಾನದ ಯಾವ ಏರಿಳಿತಕ್ಕೂ ಆಹುತಿಯಾಗದೇ , ಪಾರಿಜಾತ ತನ್ನದೇ ಆದ ನೆಲೆ ಕಂಡುಕೊಂಡಿದೆ. ಕಲಾವಿದರಿಗೆ ಇಲ್ಲಿಯ ಭಾಷೆ ಸ್ವಾತಂತ್ರ್ಯ ನೀಡುವುದರಿಂದ ಸಂಭಾಷಣೆಗಳನ್ನು ತೆಗೆಯುವುದಕ್ಕೆ ಮತ್ತು ಸೇರಿಸುವುದಕ್ಕೆ ಸುಲಭವಾಗುತ್ತದೆ. ಇಲ್ಲಿಯ ಸಂಭಾಷಣೆಯ ಸಹಜತೆ ಪ್ರೇಕ್ಷಕರಿಗೆ ಹೆಚ್ಚಿನ ಸಂತೋಷ ನೀಡುತ್ತದೆ. ಅಲ್ಲಲ್ಲಿ ಸಂಸ್ಕೃತ ಶ್ಲೋಕಗಳನ್ನು ಮತ್ತು ಹಿಂದಿ ಭಾಷೆಯ ಶಬ್ಧಗಳನ್ನು ಉಪಯೋಗಿಸುವುದೂ ಉಂಟು. ಆದರೆ ದೂತಿ ಅಥವಾ ಭಾಗವತನ ಭಾಷೆ ಸಂದರ್ಭಕ್ಕೆ ತಕ್ಕಂತೆ ಪ್ರಾದೇಶಿಕವಾಗಿ ಕೂಡ ಬದಲಾಗುತ್ತಿರುತ್ತದೆ. ಶ್ರೀಕೃಷ್ಣ ಪಾರಿಜಾತದಲ್ಲಿ ನವಿರಾದ ಹಾಸ್ಯವಿದೆ. ಕಟಕಿ ಅಥವಾ ವಿಡಂಬನೆಯ ರೂಪದ ಹಾಸ್ಯವು ಬೆಳಗಿನ ತನಕ ಶ್ರೀಕೃಷ್ಣ ಪಾರಿಜಾತ ನೋಡುವ ಪ್ರೇಕ್ಷಕರಿಗೆ ಚೇತನಾ ಶಕ್ತಿಯನ್ನು ಕೊಡುತ್ತದೆ. ಸಹಜತೆಯನ್ನು ನೆನಪು ಮಾಡಿಕೊಂಡು ನಕ್ಕು ನಗಿಸುವ ಹಾಸ್ಯ ಶ್ರೀಕೃಷ್ಣ ಪಾರಿಜಾತ ನೋಡುವ ಪ್ರೇಕ್ಷಕರಿಗೆ ಚೇತನಾ ಶಕ್ತಿಯನ್ನು ಕೊಡುತ್ತದೆ, ಸಹಜತೆಯನ್ನು ಕೊಡುತ್ತದೆ. ಸಹಜತೆಯನ್ನು ನೆನಪು ಮಾಡಿಕೊಂಡು ನಕ್ಕು ನಗಿಸುವ ಹಾಸ್ಯ ಶ್ರೀಕೃಷ್ಣ ಪಾರಿಜಾತದ್ದು. ಇದರಿಂದಾಗಿಯೇ ಶ್ರೀಕೃಷ್ಣ ಪಾರಿಜಾತವನ್ನು ಎಷ್ಟು ಸಲ ನೋಡಿದರೂ ಎಷ್ಟು ವೇಳೆ ಕುಳಿತರೂ ಬೇಸರವೆನ್ನಿಸುವುದಿಲ್ಲ. ಶ್ರೀಕೃಷ್ಣ ಪಾರಿಜಾತದ ಹಾಸ್ಯ ಆರಂಭದಿಂದ ಅಂತ್ಯದವರೆಗೆ ನಿರಾಯಾಸವಾಗಿ ಸಾಗಿರುತ್ತದೆ. ಶ್ರೀಕೃಷ್ಣ ಪಾರಿಜಾತ ಹಾಸ್ಯದ ಕೇಂದ್ರ ಬಿಂದುಗಳು ಭಾಗವತ ಅಥವಾ ಮರಿ ಭಾಗವತ, ಇವರನ್ನೇ ‘ದೂತಿ’ ಎಂದು ಕರೆಯುತ್ತಾರೆ. ಪಾರಿಜಾತದಲ್ಲಿಯ ಹಾಸ್ಯದಿಂದಾಗಿ ಪ್ರೇಕ್ಷಕರ ಮನಸ್ಸು ಪೂರ್ತಿಯಾಗಿ ರಂಗದ ಮೇಲೆಯೇ ಇರುತ್ತದೆ. ಆದ್ದರಿಂದ ಗಂಭೀರ ವಿಷಯವನ್ನೂ ಹಾಸ್ಯವನ್ನೂ ಮುಂದೆ ಮಾಡಿಕೊಂಡೇ ಆಟ ಸಾಗಿಸುತ್ತಾರೆ. ಗಣಪತಿ ಪೂಜೆ ಪ್ರಾರಂಭವಾದಾಗ ಕಂಡು ಬರುವ ಹಾಸ್ಯದ ಉದಾಹರಣೆ:

ಮರಿ ಭಾಗವತ: ಏನ್ರವಾ ಇವರು ಬಂದಂಥವರು ದಾರು?

ಭಾಗವತ: ಏನ್ರಪಾ ಇವರು ಬಂದಂಥವರು ದಾರ? ನಮಗೇನ ತಿಳಿಲಿಲ್ಲ?

ಮರಿ ಭಾಗವತ: ನಮಗೇನು ತಿಳಿಲಿಲಪಾ, ಮ್ಯಾಲ ನೋಡಿದರ ಆನೆಯ ಮುಖ ಕೆಳಗೆ ನೋಡಿದರ ಮಾನವನಾಕಾರ. ಭಾರೀ ವಿಚಿತ್ರ ಇದ್ದಾರೆ.

ಭಾಗವತ: ಮೂರ್ಖಾ, ಹಾಗಲ್ಲ ಇವರಿಗೆ ಪ್ರಥಮದಲ್ಲಿ ಬಂದು ವಿಘ್ನೇಶ್ವರ ವಿಘ್ನೇಶ್ವರಾ ಅಂತಾರ.

ಮರಿ ಭಾಗವತ: ಅಲೆ ಇವ್ನ ; ಬಂದ ಕೂಡಲೇ ವಿಘ್ನ ಸುರುವೇನು?

ಭಾಗವತ: ಹುಚ್ಚಾ ಹಾಗಲ್ಲ. ಇವರು ಬಂದಂಥಾ ವಿಘ್ನಗಳನ್ನು ದೂರ ಮಾಡುವರು.

ಮರಿ ಭಾಗವತ: ಎಷ್ಟು ದೂರ ಮಾಡುತಾರೆಪ್ಪಾ?

ಭಾಗವತ: ಸರಾಸರಿ ಏಳೆಂಟು ಹರದಾರಿ ಮಾಡತಾರ.

ಮರಿ ಭಾಗವತ:: ಯಾಕ ಇನ್ನೊಂದು ಎಂಟ್ಹತ್ತು ಹರದಾರಿ ಮಾಡುವುದಿಲ್ಲ?

ಗಣಪತಿ ಪೂಜೆಗೆ ಕರಿಕೆ ಬೇಕು ಎಂದು ಹೇಳಿದಾಗ

ಭಾಗವತ: ಇವರಿಗೆ ಕರಿಕೆ ಬೇಕು.

ಮರಿ ಭಾಗವತ: ಏಸ್ ಹೊರಿ?

ಭಾಗವತ: ಮೂರ್ಖಾ ಹೊರಿಗಟ್ಲೆ ತರ್ಲಿಕ್ಕ ಇವರ್ನೇನ ಕುದರಿ ಮಾಡಿಯೇನ್

ಗಣಪತಿಯ ಊಟಕ್ಕೆ ಸಣ್ಣಕ್ಕಿ ಬೇಕೆಂದಾಗ,

ಮರಿ ಭಾಗವತ: ಸಣ್ಣಕ್ಕಿ ಬೇಕು.

ಮರಿ ಭಾಗವತ: ಖಬರ್ದಾರ್

ಭಾಗವತ: ಯಾಕೋ?

ಮರಿ ಭಾಗವತ: ಏನ್ರಿ ಇಷ್ಟರತನಕ ನೀವ್ ಹೇಳಿದಕ್ಕೆಲ್ಲಾ ಹೂಂ ಅಂದ್ಯಾ. ಸಲಿಗಿ ಸಿಕ್ತೇನ ನಿಮಗ? ಬಾಳ ಎಚ್ಚರದಿಂದ ಮಾತಾಡ್ರಿ ಈಗ ಸಣ್ಣಕ್ಕಿ ಅಂತೀರಿ. ಇನ್ನೋಟ ನಿಂತು ದೊಡ್ಡಾಕಿ ಅಂತೀರಿ.

ಗಣಪತಿಗೆ ಊಟವಾದ ನಂತರ ಏನು ಕೊಡಬೇಕು ಎಂದಾಗ :

ಭಾಗವತ: ಊಟ ಆದ ಕೂಡ್ಲೆ ಏನ್ ಕೊಡತರಕ್ಕದ್ದು?

ಮರಿ ಭಾಗವತ: ಬಾಳತ್ರಾಸ್ ಅನಿಸಿದ್ರ, ಎರಡು ಜುಲಾಬಿನ ಗುಳಿಗಿ ಕೊಡಬೇಕು.

ಭಾಗವತ: ಅದ್ಯಾಕೋ

ಮರಿ ಭಾಗವತ: ತಿಂದದ್ದೆಲ್ಲಾ ಹೊರಗೆ ಬರಾಕ.

ಈ ರೀತಿಯ ಹಾಸ್ಯ ಕೃಷ್ಣ ಪಾರಿಜಾತದುದ್ದಕ್ಕೂ ಕಂಡು ಬರುತ್ತದೆ. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಚೊಕ್ಕದಾದ ಅರ್ಥವನ್ನು ಕೊಡುವ ಸಂಭಾಷಣೆಯ ರೂಪವನ್ನು ಕೃಷ್ಣ ಪಾರಿಜಾತದಲ್ಲಿ ಕಾಣುತ್ತೇವೆ.

ಸಂಗೀತ ಹಾಡುಗಾರಿಕೆ

[ಬದಲಾಯಿಸಿ]

ಕೃಷ್ಣ ಪಾರಿಜಾತದ ಜೀವಾಳವೇ ಅದರ ಸಂಗೀತದಲ್ಲಿದೆ. ಪಾರಿಜಾತದ ಸಂಗೀತಕ್ಕೆ ತಲೆ ದೂಗದವರು ಯಾರೂ ಇಲ್ಲ. ಬರೀ ಸಂಗೀತಕ್ಕೆ ಅದರೂ ಪಾರಿಜಾತ ನಿರಂತರವಾಗಿ ಉಳಿಯಬಹುದೆಂಬ ಭರವಸೆ ಇದೆ. ತನ್ನ ವಿಶಿಷ್ಟ ಸಂಗೀತ ಶೈಲಿಯಿಂದ, ಪಾರಿಜಾತದ ಹಾಡುಗಳಿಗಿರುವಷ್ಟು ಮೆಚ್ಚುಗೆ ಜನಪ್ರಿಯತೆ ಇತರ ಯಾವ ಬಯಲಾಟಕ್ಕೂ ಇಲ್ಲ. ಅಪರಾಳ ತಮ್ಮಣ್ಣ ರಚಿಸಿದ ಪಾರಿಜಾತ ಹಾಡುಗಬ್ಬವಾಗಿದ್ದು ಅಂದು ಅದನ್ನು ಕರ್ನಾಟಕ ಸಂಗೀತದ ಶೈಲಿಯಲ್ಲಿ ಹಾಡುತ್ತಿದ್ದರೆಂಬುದು ತಿಳಿಯುತ್ತದೆ. ಪಾರಿಜಾತದ ಎಲ್ಲ ಹಾಡುಗಳು ಮಾರ್ಗ ಶೈಲಿಯಲ್ಲಿದ್ದವು. ಸುಮಾರು ಕ್ರಿ.ಶ ೧೯೩೦ರಿಂದೀಚೆಗೆ ಉತ್ತರ ಕರ್ನಾಟಕದಲ್ಲಿ ಹಿಂದೂಸ್ಥಾನಿ ಸಂಗೀತದ ಶೈಲಿ ಪ್ರಬಲವಾದಾಗ ಮೊದಲು ಪ್ರಾಬಲ್ಯ ಪಡೆದಿದ್ದ ಕರ್ನಾಟಕ ಸಂಗೀತ ಜನರಿಂದ ದೂರಾಯಿತು. ಅದರ ಸ್ಥಾನವನ್ನು ಹಿಂದೂಸ್ಥಾನಿ ಸಂಗೀತ ಪಡೆದುಕೊಂಡಿತು. ಅಪರಾಳ ತಮ್ಮಣ್ಣನು ರಚಿಸಿದ ಹಾಡುಗಳು ಭಕ್ತಿ ಮತ್ತು ಶೃಂಗಾರದ ಎರಡೂ ಮುಖಗಳನ್ನು ತೋರಿಸುತ್ತಿದ್ದುದರಿಂದ, ಜನಸಾಮಾನ್ಯರಿಂದ ಮಾನ್ಯತೆ ಪಡೆದುಕೊಂಡವು.

ವಾದ್ಯಗಳು

[ಬದಲಾಯಿಸಿ]

ತಬಲಾ, ಹಾರ್ಮೋನಿಯಂ, ತಾಳಗಳನ್ನು ಪಾರಿಜಾತದಲ್ಲಿ ಬಳಸುತ್ತಾರೆ. ಕೃಷ್ಣ ಪಾರಿಜಾತ ತಬಲಾ ಡಡ್ಗಾಗಳನ್ನು ಪ್ರಾರಂಭದಿಂದಲೆ ಹೊಂದಿದೆ. ಹಿಂದೂಸ್ಥಾನಿ ಸಂಗೀತಕ್ಕೆ ತಬಲಾ ಡಗ್ಗಾ ಅವಶ್ಯ. ತಾಳಗಳು ಕೊಬ್ಬರಿ ಬಟ್ಟಲಿನಂತೆ ದೊಡ್ಡವು. ಎರಡು ತಾಳಗಳು ಒಂದೇ ಆಕಾರದಲ್ಲಿರುವುದಿಲ್ಲ. ಒಂದು ದೊಡ್ಡದು ಒಂದು ಚಿಕ್ಕದು ಇರುತ್ತದೆ. ಹಾರ್ಮೋನಿಯಂ ಮೂಲಕ ಸಂಗೀತದ ಸ್ವರಗಳನ್ನು ಅಚ್ಚುಕಟ್ಟಾಗಿ ಹೊರಡಿಸುತ್ತಾರೆ. ಹಾಡುವಾಗ ಕಂಠಸ್ವರಕ್ಕೆ ಸಾಥಿಯಾಗಿ ಬಳಸುತ್ತಾರೆ. ಶಾಸ್ತ್ರೀಯ ಸಂಗೀತ ಅಳವಡಿಸಿಕೊಂಡು ಹೊಂದಿದ ಕೃಷ್ಣ ಪಾರಿಜಾತಕ್ಕೆ ಹಾರ್ಮೋನಿಯಂ ಅತ್ಯವಶ್ಯಕವಾಗಿದೆ.

ಕುಣಿತ

[ಬದಲಾಯಿಸಿ]

ಶ್ರೀಕೃಷ್ಣ ಪಾರಿಜಾತದ ಕುಣಿತದಲ್ಲಿ ವಿಶೇಷತೆ ಕಂಡುಬರುವುದಿಲ್ಲ. ಹೆಣ್ಣು ಪಾತ್ರಗಳ ಲಘು ಕುಣಿತ ಪಾರಿಜಾತದಲ್ಲಿದೆ. ರಂಗಸ್ಥಳದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಸರಿದಾಡುತ್ತಾ ಲಘು ಕುಣಿತದ ಪ್ರದರ್ಶನವನ್ನು ಪಾತ್ರಗಳು ನೀಡುತ್ತವೆ.

ಪ್ರದರ್ಶನ

[ಬದಲಾಯಿಸಿ]

ಶ್ರೀಕೃಷ್ಣ ಪಾರಿಜಾತದಲ್ಲಿ ಸಾಮಾನ್ಯವಾಗಿ ಎಂಟು ಜನರಿರುತ್ತಾರೆ. ಭಾಗವತನ ನಾಂದಿ ಹಾಡಿನೊಂದಿಗೆ ಆಟ ಪ್ರಾರಂಭವಾಗುತ್ತದೆ. ರಂಗಮಂದಿರದ ಮಧ್ಯಕ್ಕೆ ಮುಖವಾಡ ಧರಿಸಿದ ಬಾಲಗಣಪತಿ ಬಂದು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾನೆ. ಭಾಗವತನು ಗಣಪತಿಯ ಸುತ್ತಿ ಪಂದ್ಯವನ್ನು ಹಾಡುತ್ತಾನೆ. ಗಣಪತಿಯ ಪೂಜೆಯ ಕಾರ್ಯ ಮುಗಿದ ಮೇಲೆ ವರವನ್ನು ಪಡೆದುಕೊಂಡು ಕಥಾ ಭಾಗವನ್ನು ಆರಂಭಿಸುತ್ತಾನೆ. ಗೊಲ್ಲತಿ ಕೃಷ್ಣ ರಂಗಸ್ಥಳಕ್ಕೆ ಬರುತ್ತಾನೆ. ಕೃಷ್ಣ ಗೊಲ್ಲತಿಯನ್ನು ಒಲಿಸಿಕೊಂಡ ಮೇಲೆ ಪೂರ್ವ ರಂಗ ಮುಕ್ತಾಯವಾಗುತ್ತದೆ. ಭಾಗವತ ಅಥವಾ ದೂತಿ ಆಟದ ಆರಂಭದಿಂದ ಮುಕ್ತಾಯದವರೆಗೆ ರಂಗಸ್ಥಳದಲ್ಲಿಯೇ ಇರಬೇಕಾಗುತ್ತದೆ. ಬಂದ ಪಾತ್ರಗಳನ್ನು ಪರಿಚಯಿಸುವುದು ಆ ಪಾತ್ರಗಳಿಗೆ ಸೇವಕನಾಗಿ ಕೆಲಸಮಾಡುವುದು, ಹಾಡುವುದು, ಹಾಸ್ಯ ಮಾಡುವುದು ಮುಂತಾದ ಪ್ರತಿಯೊಂದು ಜವಾಬ್ದಾರಿ ದೂತಿಯ ಮೇಲೆ ಇರುತ್ತದೆ. ಕೃಷ್ಣ ಪಾರಿಜಾತ ಪ್ರದರ್ಶನದ ಕೀರ್ತಿ ಅಪಕೀರ್ತಿಗೆ ದೂತಿಯೇ ಕಾರಣೀಭೂತಳಾಗುತ್ತಾಳೆ. ಅಷ್ಟರಮಟ್ಟಿಗೆ ಅವಳೇ ಪ್ರಮುಖ ಪಾತ್ರ. ಇವರ ಪಾತ್ರಗಳು ತಾವೇ ಸಂಭಾಷಣೆಗೆ ತೊಡಗುವುದಕ್ಕಿಂತ ಹೆಚ್ಚಾಗಿ ಭಾಗವತನೊಂದಿಗೆ ಮಾತಿಗೆ ಅರಂಭಿಸುತ್ತವೆ. ಇದೇ ಪಾರಿಜಾತದ ಪ್ರಮುಖ ವೈಶಿಷ್ಟ್ಯವೂ ಆಗಿದೆ.

ಉಲ್ಲೇಖ

[ಬದಲಾಯಿಸಿ]
  1. ಪ್ರೋ, ಹಿ.ಚಿ.ಬೋರಲಿಂಗಯ್ಯ. ಕರ್ನಾಟಕ ಜನಪದ ಕಲೆಗಳ ಕೋಶ. ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ಸಂಖ್ಯೆ: ೨೮೮ - ೨೯೩.