ನಾಗಮಂಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಗಮಂಡಲ- ಡಕ್ಕೆಬಲಿ ದಕ್ಷಿಣ ಕನ್ನಡಕರಾವಳಿಯಲ್ಲಿ ಉಳಿದು ಬಂದಿರುವ ಅತ್ಯಂತ ಸುಂದರ ಕಲಾತ್ಮಕ ನೃತ್ಯಾಚರಣೆಯಲ್ಲಿ ಒಂದು. ಕ್ರಿ.ಶ ೧೪೫೮ ರಲ್ಲಿ ಬಾರಕೂರಿನ ಶಾಸನದಲ್ಲಿ ಡಕ್ಕೆಬಲಿಯ ಪ್ರಸ್ತಾಪ ಬರುತ್ತದೆ. ೧೩ನೇ ಶತಮಾನಕ್ಕೆ ಅನ್ವಯಿಸುವ ನಾಗಮಂಡಲದ ಶಿಲ್ಪವೊಂದು ನಂದಳಿಕೆಯಲ್ಲಿ ದೊರೆತಿದೆ. ಕ್ರಿ.ಶ ೧೪೦೨ ರ ಬಾರಕೂರಿನ ಶಾಸನದಲ್ಲಿ "ಮಂಡಲ ಭಂಡಾರಿ" ಎಂಬ ಪದ ಬಳಕೆಯಾಗಿದೆ.

ಇತಿವೃತ್ತ[ಬದಲಾಯಿಸಿ]

ನಾಗಮಂಡಲ ನಾಗನಿಗೆ ಹಾಗೂ ಡಕ್ಕೆಬಲಿ ಸ್ಥಳೀಯ ಆರ್ಯೇತರ ದೈವಗಳಿಗೆ ಸಂಬಂಧಿಸಿದ ನೃತ್ಯ ಉಪಚಾರ. ಇಂದು ನಾಗಮಂಡಲ ಶುದ್ಧ ವೈದಿಕ ಆಚರಣೆಯಂತಿದೆ. ಬ್ರಾಹ್ಮಣ, ಪುರೋಹಿತ, ಬ್ರಾಹ್ಮಣ ನಾಗಪಾತ್ರಿ, ಬ್ರಾಹ್ಮಣ ನರ್ತಕ (ವೈದ್ಯ) ರ ಕೂಡುವಿಕೆಯಿಂದ ಮಂತ್ರೋಕ್ತ, ಹೋಮ, ಹವನಾದಿಗಳ ಹಿನ್ನೆಲೆಯಲ್ಲಿ ನಡೆಯುತ್ತದೆ. ಆದರೂ ಇದೊಂದು ಆರ್ಯೇತರ - ತಾಂತ್ರಿಕ ವಿಧಿಯಾಗಿರಬಹುದು. "ದಕ್ಷಿಣ - ಉತ್ತರ ಕನ್ನಡ ಕರಾವಳಿ ಪ್ರದೇಶಕ್ಕೆ ನಾಗರ ಖಂಡವೆಂದು ಹೆಸರಿತ್ತಲ್ಲದೆ ಇಲ್ಲಿ 'ನಾಗ'ರೆಂಬ ಆದಿವಾಸಿಗಳು ವಾಸಿಸುತ್ತಿದ್ದರು. ಸರ್ಪಕುಲ ಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚರಣೆಯಾಗಿತ್ತು". ವೈದಿಕ ಧರ್ಮ ಪ್ರವೇಶ ಆದ ನಂತರ ನಾಗಾರಾಧನೆ ಬ್ರಾಹ್ಮಣ (ವೈದ್ಯ) ರ ಪಾಲಿಗೆ ಬಂದಿತು. ನಾಗಮಂಡಲ, ಬ್ರಹ್ಮಮಂಡಲ ಡಕ್ಕೆ ಬಲಿಗಳ ನೃತ್ಯ ವಿಧಾನದಲ್ಲಿ ವಿಶೇಷ ವ್ಯತ್ಯಾಸವಿಲ್ಲ. ಉದ್ದೇಶ ಮಾತ್ರ ಬೇರೆ ಬೇರೆ ನಾಗಮಂಡಲವನ್ನು ನಡೆಸಿಕೊಡುವವರು ವೈದ್ಯರೆನ್ನುವ ಬ್ರಾಹ್ಮಣ ಕುಲದವರು ನಾಗಮಂಡಲ ಖಚಿತವಾಗಿ ಯಾವಾಗ ನಮ್ಮಲ್ಲಿ ಆರಂಭವಾಯಿತೆಂದು ಹೇಳಲು ಸಾಧ್ಯವಿಲ್ಲ. ಕೇರಳದಲ್ಲಿ ಸುಬ್ರಮಣ್ಯನನ್ನು ಮುದ್ದುಸ್ವಾಮಿ ಎನ್ನುವುದೂ ಇದೆಯಂತೆ. ನಾಗಾರಾಧನೆ ಕರಾವಳಿಯ ಆಮದು ಆರಾಧನಾ ವಿಧಿಗಳಲ್ಲಿ ಒಂದು. ನಾಗಮಂಡಲ ಇಂದು ವೈದಿಕ ವಿಧಿಯಾಗಿ ಆಚರಣೆಗೊಳ್ಳ ದಿದ್ದರೂ, ಅದರ ಮೂಲ ಸ್ವರೂಪವನ್ನು ಪಾಣರು (ನಲ್ಕೆ) ಜನಾಂಗದವರು ಸ್ವಾಮಿಗೆ ನಡೆಸುವ ಡಕ್ಕೆಬಲಿಯಲ್ಲಿ ಗುರುತಿಸಬಹುದು.

ನಾಗಮಂಡಲದ ಹಿನ್ನೆಲೆ[ಬದಲಾಯಿಸಿ]

ನಾಗಮಂಡಲದ ಚಿತ್ರಕ್ಕೂ, ನಾಗಪಾತ್ರಿಯಲ್ಲಿ ಆವಾಹನೆಗೊಳ್ಳುವ "ಯಕ್ಷಿಗೂ" ಮಾಂತ್ರಿಕ-ತಾಂತ್ರಿಕ ಸಂಬಂಧವಿರಬೇಕು. ಈ ವಿಧಿಯಲ್ಲಿ ಬರೆವ ಚಿತ್ರ (ಮಂಡಲ) ದಲ್ಲಿ ನಾಗಯಕ್ಷಿ, ಬ್ರಹ್ಮಯಕ್ಷಿ, ತ್ರಿಶೂಲ, ಗಣಪತಿ, ನಾಗ ಎನ್ನುತ್ತಾರೆ. ಪಾತ್ರಿಯ ಮೈದುಂಬುವುದು ನಾಗಯಕ್ಷಿಯೇ ಹೊರತು ನಾಗನಲ್ಲವೆಂದು ಹೇಳುತ್ತಾರೆ. ತ್ರಿಕೋನವನ್ನು ಮೇಲು ಕೆಳಗೆ ಮಾಡಿ ಜೋಡಿಸಿದಾಗ ತಾಂತ್ರಿಕ ರೂಪ ಪಡೆದುಕೊಳ್ಳುತ್ತದೆ. ತಾಂತ್ರಿಕರು ಇದನ್ನು "ಶ್ರೀ ಚಕ್ರ" ಎಂದು ಕರೆದದ್ದು. ಇದು ಹೆಣ್ಣು-ಗಂಡಿನ ಮಿಲನದ ಸಂಕೇತ. ಇದಕ್ಕೆ ನಾಗಮಂಡಲದ ಸಂದರ್ಭದಲ್ಲಿ ಗಣೇಶ ಎಂದು ಕರೆಯುತ್ತಾರೆ. ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಂತಿಯ ಚಿತ್ರವನ್ನು "ಬ್ರಹ್ಮಯಕ್ಷ" ಎಂದು ಕರೆಯುತ್ತಾರೆ. ಈ ಬ್ರಹ್ಮವೈದಿಕ ಚತುರ್ಮುಖ ಬ್ರಹ್ಮನಲ್ಲ. ತುಳುವ ರು ಹೇಳುವ ಬೆರ್ಮೆರ್ - ಇದನ್ನು ಸಂತಾನದ ಅಧಿದೇವತೆ ಎಂದು ಹೇಳುತ್ತಾರೆ. ನಾಗನ ಹೆಡೆಯನ್ನು ಹೋಲುವ ಆಕೃತಿಯನ್ನು ಹಳದಿ ಬಿಳಿ ಬಣ್ಣದಲ್ಲಿ ರೇಖಿಸಲಾಗುವುದು. ಅದನ್ನು ಯಕ್ಷಿ ಎನ್ನುತ್ತಾರೆ. ಈ ಆಚರಣೆಯಲ್ಲಿ ಯಕ್ಷ ಸಂಕೇತವನ್ನು ಆರ್ಯ-ದ್ರಾವಿಡರ ನಡುವಣ ಆತ್ಮೀಯತೆಯ ಬೆಸುಗೆ ಏರ್ಪಟ್ಟ ಸಂಕೇತವಾಗಿರುತ್ತದೆ. ನಾಗರಹಾವಿನ ಚಿತ್ರವನ್ನು ನಾಗಯಕ್ಷ ಎನ್ನುತ್ತಾರೆ. ಇದನ್ನು "ಪುರುಷ" ಸೂಚಕವಾಗಿಯೂ ತ್ರಿಶೂಲ "ಶೈವ" ಸೂಚಕವಾಗಿ ಗುರುತಿಸುತ್ತಾರೆ.

ಜಾನಪದ ಹಿನ್ನೆಲೆ[ಬದಲಾಯಿಸಿ]

ಹಿಂದೆ ಮಹಾಭಾರತ ಕಾಲದಲ್ಲಿ ಪರೀಕ್ಷಿತನ ಮಗನಾದ “ಜನಮೇಜಯ” ಉತ್ತಂಕನೆಂಬವನಿಂದ ಪ್ರೇರಿತನಾಗಿ ತನ್ನ ತಂದೆಯ ಮರಣದ ಹಗೆಯನ್ನು ಸಾಧಿಸುವುದಕ್ಕಾಗಿ ಸರ್ಪಕುಲವನ್ನೇ ನಾಶಪಡಿಸುವಂತಹ “ಸರ್ಪಯಾಗ”ವನ್ನು ಮಾಡುತ್ತಾನೆ. ಇದಕ್ಕೆ ಕದ್ರುವಿನ ಶಾಪವೂ ಪೂರಕವಾದುದು. ಹೀಗಾಗಿ ಸರ್ಪಯಾಗದಲ್ಲಿ ಅನೇಕಾನೇಕ ಸರ್ಪಗಳು ಅಗ್ನಿದೇವನಿಗೆ ಅರ್ಪಿತವಾದುವು. ಕೊನೆಗೆ ತಕ್ಷಕನೆಂಬ ಸರ್ಪವು ಇಂದ್ರನ ಆಶ್ರಯದಲ್ಲಿ ಇದ್ದುದನ್ನು ಗಮನಿಸಿದ ಹೋತೃಗಳು, ಇಂದ್ರಸಮೇತ ತಕ್ಷಕನನ್ನು ಆಹ್ವಾನಿಸಿದಾಗ, ಇನ್ನೇನು ಇಂದ್ರಸಮೇತ ತಕ್ಷಕ ಅಗ್ನಿಗೆ ಬೀಳುವುದರಲ್ಲಿದ್ದಾಗ ಜರಾತ್ಕಾರುವಿನ ಮಗನಾದ ಅಸ್ತಿಕನೆಂಬ ಜ್ಞಾನಿಯು ಯಾಗವನ್ನು ನಿಲ್ಲಿಸುತ್ತಾನೆ. ಇದರಿಂದ ಅಲ್ಪ- ಸ್ವಲ್ಪ ನಾಗಗಳು ಬದುಕಿದವು. ಕ್ರಮೇಣ ಮಹಾಭಾರತದ ದ್ವಾಪರಯುಗವು ಮುಗಿಯಿತು. ಕಲಿಯುಗದಲ್ಲಿ ಮಾನವರು ನಾಗಗಳ ವಂಶವನ್ನು ನಾಶಪಡಿಸತೊಡಗಿದರು. ನಾಗರೂಪದ ಸ್ಕಂದನು ನಾಗಗಳ ವಂಶವನ್ನು ಉದ್ಧಾರ ಮಾಡುವುದಕ್ಕೋಸ್ಕರ ಮನುಷ್ಯರನ್ನು ಕಚ್ಚತೊಡಗಿದನು. ಮನುಷ್ಯರಿಗೆ ನಾಗಗಳ ಭಯ ಹುಟ್ಟಿತು. ಇದಕ್ಕೆ ಪರಿಹಾರವೆಂಬಂತೆ ನಾಗಗಳ ಆರಾಧನೆ ಪ್ರಾರಂಭವಾಯಿತು. ಈ ರೀತಿಯಾಗಿ ಆರಂಭವಾದ ನಾಗನ ಸ್ತುತಿಗೆ “ನಾಗಮಂಡಲ”ವೆಂದು ಹೆಸರಾಯಿತು. ಈ ಮಂಡಲವನ್ನು ಶ್ರದ್ಧೆಯಿಂದ ಮಾಡಿದವರಿಗೆ ನಾಗ ಕೃಪೆ ಹಾಗೂ ಸುಬ್ರಹ್ಮಣ್ಯನ ಅನುಗ್ರಹ ಸದಾ ಇರುತ್ತದೆ ಎಂದು ನಂಬಲಾಯಿತು.

ಸ್ಕಂದ ಪುರಾಣದ ಉಲ್ಲೇಖದಲ್ಲಿ ನಾಗಮಂಡಲ[ಬದಲಾಯಿಸಿ]

ಕ್ಷತ್ರಿಯ ರಾಜನಿಂದ ಹತನಾದ ತನ್ನ ತಂದೆಯನ್ನು ನೋಡಿದ ಕಿಂದದಂತಿ ಅತಿ ದು:ಖದಿಂದ ತನ್ನ ತಾಯಿಯನ್ನು ನೋಡಿದಾಗ ಆಕೆ 21 ಬಾರಿ ತನ್ನ ಎದೆಯನ್ನು ಬಡಿದುಕೊಳ್ಳುತ್ತಿದ್ದಳು. ಇದನ್ನು ನೋಡಿದ ಪರಶುರಾಮ 21 ಸಲ ಇಡೀ ಭೂಮಂಡಲವನ್ನು ತಿರುಗಿ ಕಣ್ಣೆದುರು ಕಂಡ ಕ್ಷತ್ರಿಯರನ್ನು ಸಂಹಾರ ಮಾಡಿದ್ದನು. ತನ್ನ ಮಹಿಮೆಯಿರುವ ಪರಶುವನ್ನು ತೆಗೆದುಕೊಂಡು ಕಾರ್ತವೀರ್ಯನ ಮಕ್ಕಳನ್ನು ಸಂಹರಿಸಿ ಅವರ ಸಾಮಂತರಂತಿರುವ ಎಲ್ಲಾ ರಾಜಕುಲವನ್ನು ಸಂಹರಿಸಿ ಧರ್ಮ ಸಂಸ್ಥಾಪನೆಗೈದನು. ಕ್ಷತ್ರಿಯ ಸಂಹಾರದ ಪಾಪ ಪರಿಹಾರಕ್ಕಾಗಿ ಅಶ್ವಮೇಧ ಯಾಗವನ್ನು ತಾನು ಜಯಿಸಿದ ಭೂಮಿಯಲ್ಲಿ ಮಾಡಿದನು. ಯಾಗ ಮುಗಿದ ಬಳಿಕ ಕಶ್ಯಪ ಮಹರ್ಷಿಗೆ ಆ ಭೂಮಿಯನ್ನು ದಾನವಿತ್ತು ತಪಸ್ಸಿಗೆ ತೆರಳುತ್ತಾನೆ. ಕಶ್ಯಪ ಮಹರ್ಷಿಗಳು ಭೂಮಿಯನ್ನು ಪ್ರತಿಗ್ರಹ ಮಾಡಿದ್ದರಿಂದ ಈ ಭೂಮಿಗೆ ಕಶ್ಯಪೀ ಎಂದು ನಾಮಕರಣವಾಯಿತು. ಪರಶುರಾಮನಿಗೆ ತಪಸ್ಸು ಮಾಡಲು ತನ್ನದೇ ಭೂಮಿ ಬೇಕೆಂಬ ದೃಷ್ಠಿಯಿಂದ ಸಮುದ್ರದ ಮುಂದೆ ಬಂದು ಪರಶುವನ್ನು ಎತ್ತಿದನು. ಪಾತಾಳ ಲೋಕದ ರಾಜನಾದ ಅನಂತನು ಸಮುದ್ರ ರಾಜನೊಂದಿಗೆ ಪರಶುರಾಮನಿಗೆ ಶರಣಾಗಿ “ನಿಮ್ಮ ಕೊಡಲಿ ಬೀಳುವ ಪ್ರದೇಶದವರೆಗಿನ ಜಾಗವನ್ನು ನಿಮಗೆ ಒಪ್ಪಿಸುತ್ತೇನೆ” ಎಂದು ಹೇಳಿದಾಗ ಕೊಡಲಿ ಬೀಸಿದನು. ಆಗ ಅಲ್ಲಿವರೆಗೆ ಸಮುದ್ರವು ಹಿಂದೆ ಸರಿಯಿತು. ನಾನು ಇಲ್ಲಿ ಒಂದು ದೇಶವನ್ನು ಸ್ಥಾಪಿಸುತ್ತೇನೆ. ಹಾಗೂ ಇಲ್ಲಿ ಧರ್ಮ ಸಂಸ್ಥಾಪನೆ ಮಾಡುತ್ತೇನೆ. ಇಲ್ಲಿ ಎಲ್ಲ ದೇವರ ದೇವಾಲಯಗಳನ್ನು ನಿರ್ಮಿಸುತ್ತೇನೆ ಎಂದು ಅನೇಕ ದೇವರಿಗೆ ವರವನ್ನು ಅನುಗ್ರಹಿಸುತ್ತಾನೆ. ಹಾಗಾಗಿ ಇಲ್ಲಿ ಅನೇಕ ಕಡೆಗಳಲ್ಲಿ ನಾಗಾರಾಧನೆಯು ನಡೆಯುತ್ತದೆ. ಅಷ್ಟೇ ಅಲ್ಲದೆ ಎಲ್ಲಾ ದೇವರ ದೇವಾಲಯಗಳು ಇವೆ.

ವೈದ್ಯ ಮತ್ತು ನಾಗಯಕ್ಷನ ವೇಷಭೂಷಣ[ಬದಲಾಯಿಸಿ]

ನಾಗಮಂಡಲದಲ್ಲಿ ವೈದ್ಯ ಅರ್ಧನಾರಿಯ ವೇಷವನ್ನು ತೊಡುತ್ತಾರೆ. ಈ ಸ್ತ್ರೀವೇಷವು ಕೆಂಪು ಬಣ್ಣದ ಚೌಕುಳಿ ಸೀರೆ, ಕಾಲಿಗೆ ಪಾಡಗ (ಗೆಜ್ಜೆ), ಎದೆಗೆ ತೋಳಿಲ್ಲದ ರವಿಕೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು ಅದರ ಸುತ್ತ ಜರಿರುಮಾಲು ಅದರ ತುದಿಗೆ ಕೋರೆ ಬಂಗಾರ ಇದಿಷ್ಟು ಅರ್ಧನಾರಿಯ ವೇಷಭೂಷಣ.ನಾಗಯಕ್ಷನನ್ನು ತನ್ನಲ್ಲಿ ಅವಾಹಿಸಿಕೊಳ್ಳುವ ಪಾತ್ರಿಗೆ ವಿಶೇಷ ವೇಷಭೂಷಣಗಳಿಲ್ಲ. ಮುಂಗೈಗೆ ಕಡಗ, ಮೈಗೆ ಕೆಂಪುಬಟ್ಟೆ, ಕೆದರಿದ ತಲೆಕೂದಲು ಕುಣಿತಕ್ಕೆ ಭಯಾನಕತೆಯನ್ನೂ ರೌದ್ರತೆಯನ್ನೂ ತುಂಬಿಕೊಡುತ್ತದೆ. ತೆಕ್ಕೆ ತುಂಬ ಒತ್ತಿಕೊಂಡಿರುವ ಹಿಂಗಾರದ ಹೂಗಳನ್ನು ಮುಖಕ್ಕೆ ಆಗಿಂದಾಗ್ಗೆ ತುರುಬಿಕೊಂಡು, ಅದರ ಕಾಳುಗಳು ಮುಖದಲ್ಲಿ ಒತ್ತೊತ್ತಾಗಿ ಅಂಟಿಕೊಂಡು ನಾಗನ ರೂಪ ತೋರುತ್ತದೆ. ನಾಗಪಾತ್ರಿ ರಂಗೋಲಿಯ ನಾಗನನ್ನು ಪ್ರತಿನಿಧಿಸಿದರೆ, ಅರ್ಧನಾರಿವೇಷ ತೊಟ್ಟ ವೈಧ್ಯ ರಂಗೋಲಿಯು ಗಣಪತಿಯನ್ನು (ಶ್ರೀ ಚಕ್ರ) ಪ್ರತಿನಿಧಿಸುತ್ತಾರೆ. ನಾಗಮಂಡಲಗಳು ಫಲವಂತಿಕೆಯ ಕ್ರಿಯೆಯಾಗಿದ್ದ ಮೂಲತಃ ಸ್ತ್ರೀಯೇ ಎಲ್ಲಾ ಆರಾಧನಾ ವಿಧಿಯಲ್ಲಿ ಪಾಲ್ಗೊಳ್ಳುತ್ತಾಳೆ. ಪಿತೃ ಪ್ರಧಾನ ಕುಟುಂಬ ವ್ಯವಸ್ಥೆ ನೆಲೆಗೊಳ್ಳುತ್ತಾ ಮಹಿಳೆಯರ ಕಾರ್ಯ ಪುರುಷರಿಗೆ ವರ್ಗಾವಣೆಗೊಂಡು ಹೋಯಿತು. ಆದರೂ ಅವರು ಪುರುಷರಾಗಿ ಈ ಆರಾಧನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಸ್ತ್ರೀವೇಷ ಧರಿಸಿ ಮಾತ್ರ ಆರಾಧನೆ ವಿಧಿಯಲ್ಲಿ ಪಾಲ್ಗೊಳ್ಳಬಹುದು.

ನಾಗಮಂಡಲ ಚಿತ್ತಾರ ಮಾಡುವ ಕ್ರಮ[ಬದಲಾಯಿಸಿ]

ನಾಗಮಂಡಲ ವಿಧಿ ಆಚರಣೆಯಲ್ಲಿ (೪ ಪವಿತ್ರ ಗಂಟುಗಳಿದ್ದರೆ ಕಾಲು ಅಂಶ (೧/೪) ಮಂಡಲ, ೮ ಪವಿತ್ರ ಗಂಟುಗಳಿದ್ದರೆ ಅರ್ಧ (೧/೨) ಮಂಡಲ, ೧೬ ಇದ್ದರೆ ಪೂರ್ಣ ಮಂಡಲ) ವಿಶಾಲವಾದ ಬಯಲಿನ ನಡುವೆ ಎತ್ತರಿಸಿದ ವೇದಿಕೆಯನ್ನು ಸಜ್ಜು ಮಾಡಿ, ರಂಗದ ನಡುವೆ ಕಂಬಬಾರದ ಚಪ್ಪರ, ಅದರ ಕೆಳಗೆ ಮೇಲ್ಗಟ್ಟು ಕಟ್ಟಿ ವಸ್ತ್ರದ ಜಾಲರಿ ಇಳಿ ಬಿಡುತ್ತಾರೆ. ಇಳಿಬಿಟ್ಟ ಸಿರಿಯೊಲಿ (ತೆಂಗಿನ ಮರದ ಎಳೆಗರಿ)ಯಿಂದ ತಾವರೆ ಮೊಗ್ಗು, ಹೂ, ಗಿಳಿ ಮುಂತಾದ ರಚನೆ ಮಾಡಿ ಮೇಲ್ಗಟ್ಟಿನಿಂದ ಇಳಿಬಿಡುತ್ತಾರೆ. ನಾಗಮಂಡಲದ ಸ್ವರೂಪಕ್ಕೆ ಅನುಸಾರ ವೈದ್ಯರು ಬಾಳೆದಿಂಡಿನ ಹೊರ ಕವಚವನ್ನು ಅಳತೆಪಟ್ಟಿಯಿಂದ ಮಂಡಲಕ್ಕೆ ಹೊರ ಚೌಕಟ್ಟನ್ನು ಹಳದಿ ಬಣ್ಣದ ಹುಡಿಯಿಂದ ರೇಖಿಸುತ್ತಾರೆ. ಮೊದಲು ಮಂಡಲದ ಮಧ್ಯಭಾಗದಲ್ಲಿ ಗಣಪತಿ, ನಂತರ ನಾಗಮಂಡಲವನ್ನು ನಡೆಸುವ ವೈದ್ಯರ ಯಜಮಾನ, ಪುರೋಹಿತರ ಸಮಕ್ಷಮದಲ್ಲಿ ಮಂಡಲ ರಚನೆಗೆ ಅಡೆತಡೆ ಬಾರದಂತೆ ಪಾರ್ಥನೆ ಸಲ್ಲಿಸುತ್ತಾರೆ. ಪೂರ್ಣ ಮಂಡಲಕ್ಕೆ ರಂಗೋಲಿ ಬರೆಯಲು ೬ ಮಂದಿಗೆ ಸುಮಾರು ೬ ಗಂಟೆ ಬೇಕಾಗುತ್ತದೆ. ೭ ಹೆಡೆಯ ಸರ್ಪದ ಭೀಮಕಮನೀಯ ಆಕೃತಿಯನ್ನು ಸುರುಳಿ ಸುರುಳಿಯಾಗಿ ಪವಿತ್ರ ಗಂಟುಗಳೊಂದಿಗೆ ಬರೆಯುವ ಮೊದಲು ಜೀವ/ಆಧಾರ ರೇಖೆಯನ್ನು ಎಳೆಯುತ್ತಾರೆ. ಇದನ್ನು ಒಬ್ಬನೇ ಮೊದಲಿನಿಂದ ಕೊನೆಯವರೆಗೂ ಬರೆದು ಮಂಡಲ ಸ್ವರೂಪಕ್ಕೆ ಅನುಸಾರ ಪವಿತ್ರ ಗಂಟುಗಳನ್ನು ಹಾಕಿ ಜೀವರೇಖೆಯ ಇಕ್ಕೆಲಗಳಲ್ಲಿ ಹಳದಿ ಬಣ್ಣದ ಹಾವಿನ ನಕ್ಷೆ ಬಿಡಿಸುತ್ತಾರೆ. ಹಾವಿನ ಕಣ್ಣಿಗೆ ಕೆಂಪು ಬಣ್ಣವನ್ನು ಬಳಸುತ್ತಾರೆ."ಪವಿತ್ರ"ದೊಳಗಿನ ಹೊಗ್ಗೂ ಹೊರಡುವಿಕೆಯನ್ನು ಕಪ್ಪು ಬಣ್ಣದಲ್ಲಿ ಬಿಡಿಸುತ್ತಾರೆ. ಬಿಳಿ ಹುಡಿಯಿಂದ ಚುಕ್ಕಿ-ಚುಕ್ಕಿ ಆಕಾರದಲ್ಲಿ ನಾಗನಿಗೆ ಕಾಲು, ನಾಗನ ಆಕೃತಿಯ ನಡು ನಡುವೆ ಮರಿಮೊಟ್ಟೆ ಬಿಡಿಸುತ್ತಾರೆ. ಮೇಲಿನಿಂದ ಕೆಳಗೆ ಮೊದಲು ಹಸುರು, ಬಿಳಿ, ಅರಸಿನ, ಕೆಂಪು, ಕಪ್ಪು-ಹೀಗೆ ೫ ಬಣ್ಣ ಬಳಸಿ ಹೆಡೆಯ ಹುಬ್ಬನ್ನು ಬಿಡಿಸುತ್ತಾರೆ. ಹೆಡೆಯ ಕೆಳಭಾಗದಲ್ಲಿ ವಿಷ್ಣು ಪಾದ ರೇಖಿಸುತ್ತಾರೆ. (ಇದು ಕೃಷ್ಣ ಕಾಳಿಂಗನ ಹೆಡೆ ಮುಟ್ಟಿದ ಸಂಕೇತ), ಹೆಡೆಯ ಮೇಲೆ ಪ್ರಭಾವಳಿ, ಅದರ ಕೆಳಗೆ ಬ್ರಹ್ಮನ ಮುಖ, ದ್ರಾಕ್ಷಿಬಳ್ಳಿ, ಎಲೆ ಕಪ್ಪು ಬಣ್ಣದಲ್ಲಿ '೨' ಇಂಚು ಅಗಲ ಬಿಡಿಸುತ್ತಾರೆ. ಜಂಗಮನ ಸೊಪ್ಪಿನ ಹಸಿರು ಹುಡಿಯಿಂದ ದಂಡೆಕಟ್ಟಿ ಅದರ ಮೇಲೆ ಸ್ವಸ್ತಿಕ, ಚಿತ್ತಾರದ ಪಕ್ಕದಲ್ಲಿ ಸೀಯಾಳ, ಹಿಂಗಾರ, ಅಡಕೆ, ವೀಳ್ಯದೆಲೆ, ಹಣ್ಣಿನ ರಾಶಿ ಇರಿಸುತ್ತಾರೆ.

ನಾಗಮಂಡಲ ಕುಣಿತದ ಕ್ರಮ[ಬದಲಾಯಿಸಿ]

ಸುಂದರವಾಗಿ ರೇಖಿಸಿದ ಮಂಡಲದ ಸುತ್ತಲೂ ಪಾತ್ರಿ ಮತ್ತು ವೈದ್ಯ ಅಂದರೆ ಕ್ರಮವಾಗಿ ಪುರುಷ ಮತ್ತು ಪ್ರಕೃತಿಯರು ಕುಣಿಯುತ್ತಾರೆ. ನಾಗಪಾತ್ರಿ ಮೊದಲು ಕುಪಿತನಾಗಿ, ಸುತ್ತಿ ಸುಳಿದು, ಶರೀರವನ್ನು ಸುರುಳಿ ಸುರುಳಿಯಾಗಿ ಗಂಟಿಕ್ಕಿಕೊಂಡು ಹಡೆ ಎತ್ತುತ್ತಾನೆ. ಮುಂದೆ ಪ್ರಕೃತಿಯ ಭಕ್ತಿಗೆ ಮಣಿದು ಒಲಿಯುತ್ತಾನೆ. ಈ ಭಾವನೆ ಕುಣಿತದ ತರಂಗಿತತೆಗೆ ಎಡೆ ಮಾಡಿಕೊಡುತ್ತದೆ. ಹಾಡುವ ಹಾಡು ನಾಗನಿಗೆ ಕುರಿತಾಗಿರುತ್ತದೆ. ಕುಣಿತದಲ್ಲಿ ಒಮ್ಮೆ ಕಲಹ ಇನ್ನೊಮ್ಮೆ ಸ್ನೇಹ, ಧೀನತೆ, ಆಕ್ರೋಶ ಹೀಗೆ ಬಗೆ ಬಗೆಯ ಭಾವ ಪ್ರದರ್ಶನ ಕಾಣುತ್ತದೆ. ನಾಗಮಂಡಲದ ವೈದ್ಯರ ಕುಣಿತದಲ್ಲಿ ಅನೇಕ ಮುದ್ರೆಗಳೂ ಬಳಕೆಯಾಗುತ್ತದೆ. ಕೆಲವೊಂದು ಭರತನಾಟ್ಯದಲ್ಲಿರುವಂತದ್ದು, ಇನ್ನೂ ಕೆಲವು ಹೊಸದಾದವು.

  1. ಪಾತಕ ಹಸ್ತ - ನಾಗದೇವತೆಯನ್ನು ಶಾಂತಗೊಳ್ಳುವಂತೆ ಪ್ರಾರ್ಥಿಸುವ ಸಂದರ್ಭ.
  2. ತ್ರಿಪಾತಕ - ದೇವಾನುದೇವತೆಗಳ ಪ್ರಾರ್ಥನೆಯ ಸಂದರ್ಭ
  3. ಅರ್ಧಚಂದ್ರ - ಪ್ರಾರ್ಥನಾ ಸಂದರ್ಭ
  4. ಸೂಚಕ - ಕ್ರೋಧ ಅಸಹನೆಯ ಅಭಿವ್ಯಕ್ತಿಯ ಸಂದರ್ಭ
  5. ಅನುಪಲ್ಲವಿ
  6. ಪದ್ಮಕೋಶ
  7. ಶಿಖರ
  8. ಸರ್ಪಶೀರ್ಷ - ನಾಗನ ಸೂಚಕ
  9. ಮೃಗಶೀರ್ಷ
  10. ಸಿಂಹಮುಖ
  11. ಕಪಿತ್ಥ
  12. ಅಂಗುಲ
  13. ಅಭಯ
  14. ಕರ್ತರಿಮುಖ
  15. ಸುಖ ತುಂಡ

ನಾಗಮಂಡಲ ಆರಾಧನಾ ವಿಧಿಗಳು[ಬದಲಾಯಿಸಿ]

ನಾಗಮಂಡಲ ಆರಾಧನಾ ವಿಧಿಗಳಾದರೂ ಅಲ್ಲಿನ ಕಲೆಯ ಅಂಶವನ್ನು ಖಚಿತವಾಗಿ ಗುರುತಿಸಬಹುದು. ಧಾರ್ಮಿಕ ಅಂಶಗಳು ಪ್ರಧಾನವಾಗಿದ್ದರೂ ಒಬ್ಬ ಕಲಾ ವಿಮರ್ಶಕ ಅಲ್ಲಿಕೆ ಕಲೆಯ ಹಲವು ಅಂಶಗಳನ್ನು ಗುರುತಿಸುತ್ತಾನೆ. ನಾಗಮಂಡಲದ ರಂಗ ಪರಿಕರ, ಮಂಡಲಚಿತ್ತಾರ, ಕುಣಿತ, ಗೀತೆ, ಪ್ರಕೃತಿಯ ಗೂಢತೆ, ಅದೃಶ್ಯದ ಶಕ್ತಿಯ ಕುರಿತು ಭಯ ಒಳಿಸಿಕೊಂಡು ಸಂತೃಪ್ತಿಗೊಳಿಸುವುದು, ಮಂಡಲದ ಬಣ್ಣಗಳ ಹದವಾದ ಮೈತ್ರಿ, ಅರ್ಧನಾರಿ ವೇಷಧಾರಿಯ ವೇಷಭೂಷಣ, ಉಪಯೋಗಿಸುವಂತಹ ವಾದ್ಯಗಳು, ಶ್ರಾವ್ಯಾತ್ಮಕ ವಾತಾವರಣ, ಬಾಗು ಬಳುಕು, ತರಂಗಿತತೆ ಹಾಡುವ ವೈದ್ಯನ ಸಾಹಿತ್ಯ ನಿರ್ಮಿಸುವ ರಾಗ ಸಂಚಾರ ಇವೆಲ್ಲವೂ ಪ್ರೇಕ್ಷಕ ವರ್ಗದಲ್ಲಿ ಉಂಟಾಗುವ ಆನಂದ, ತೃಪ್ತಿಯ ಜೊತೆಗೆ ಕಲೆಯ ಅಸ್ತಿತ್ವವನ್ನು ಗುರುತಿಸಬಹುದು.

  1. ಹಳದಿ ಬಣ್ಣ - ಅರಸಿನ ಬೇರಿನ ಹುಡಿ,
  2. ಕೆಂಪು ಬಣ್ಣ - ಅರಸಿನ+ಸುಣ್ಣದ ಹುಡಿ,
  3. ಕಪ್ಪು ಹುಡಿ - ಭತ್ತದ ಹುಟ್ಟನ್ನು ಸುಟ್ಟ ಕರಿ ಹುಡಿ,
  4. ಹಸಿರು ಬಣ್ಣ - ಜಂಗಮನ ಎಲೆಯ ಹುಡಿ,
  5. ಬಿಳಿ ಬಣ್ಣ - ಬೆಳ್ತಿಗೆ ಅಕ್ಕಿಯ ಹುಡಿ.

ನಾಗಮಂಡಲದಲ್ಲಿ ವಾದ್ಯವನ್ನು ನುಡಿಸುವ ಕ್ರಮ[ಬದಲಾಯಿಸಿ]

ನಾಗಮಂಡಲದಲ್ಲಿ ಬಳಸುವ ವಾದ್ಯಗಳಾದ ಅರ್ಧನಾರಿ, ವೈದ್ಯನ ಕೈಯಲ್ಲಿ ಕಂಚಿನ ಡಕ್ಕೆ, ಜೊತೆಗಿರುವ ಇಬ್ಬರು ಮೇಳದವರು ಕೈಯಲ್ಲಿ ತಾಳ ಮತ್ತು ಚಕ್ರತಾಳ ಇರುತ್ತದೆ. ಕಾಚು ಮರದ ಕೆಳಸಿಗೆ ಮತ್ತು ಆಡಿನ ಜಠರ ಕೋಶದ ಚರ್ಮವನ್ನು ಬಳಸಿ ಡಕ್ಕೆ ತಯಾರಿಸುತ್ತಾರೆ. ಬ್ರಾಹ್ಮಣನಾದವನು ಚರ್ಮವಾದ್ಯವನ್ನು ನುಡಿಸುವುದು ಶಾಸ್ತ್ರನಿಷಿದ್ದವಂತೆ. ಆದರೆ ಎಂದೂ ನಾಗಮಂಡಲಗಳಲ್ಲಿ ವೈದ್ಯರು ಡಕ್ಕೆ ನುಡಿಸುತ್ತಾರಷ್ಟೆ. ಇದರ ಸಮರ್ಥನೆಗಾಗಿ ವೈದ್ಯರು ತಮ್ಮ ಡಕ್ಕೆ ಶಿವನ ಡಮರು ಅಲ್ಲದೆ ಬೇರೆ ಅಲ್ಲ. ಸಾಕ್ಷಾತ್ ಶಿವನೇ ಮಂಡಲ ಬರೆದು ಮಂಗಳಾಂತ್ಯದವರೆಗೆ ಡಮರು ಬಾರಿಸುವ ಅಧಿಕಾರವನ್ನು ಬ್ರಾಹ್ಮಣನಿಗೆ ನೀಡಿದನೆನ್ನುವುದು ವೈದ್ಯರು ಹೇಳುವ ಪುರಾಣ ಕತೆ. ಇದರಿಂದ ಮೂಲತಃ ಬ್ರಾಹ್ಮಣರಲ್ಲದ ಒಂದು ಆಚರಣೆಯನ್ನು ಮತ್ತೆ ಸ್ವೀಕರಿಸಿದ್ದು ಎಂಬ ಪರಿಕಲ್ಪನೆ ಇದೆ. ತುಳುವರ ಭೂತಗಳ ಹುಠ್ಟು-ಪ್ರತಾಪ-ಸಂಚಾರವನ್ನು ವಿವರಿಸುವ ಹಾಡಿನ ರೂಪದ ಗೀತ ಸಾಹಿತ್ಯವನ್ನು ಪಾಡ್ದನ ಎಂದು ಕರೆದಂತೆ ಜಿಲ್ಲೆಯ ಕನ್ನಡ ಪ್ರದೇಶಗಳ ದೇಶೀಯ ದೈವಗಳ ಆರಾಧನೆ ಡಕ್ಕೆಬಲಿಯ ಸಂದರ್ಭದಲ್ಲಿ ವೈದ್ಯರು/ಪಾಣರು ಹಾಡುವ ಗೀತರೂಪವೇ ಹೊಗಳಿಕೆ. ನಾಗನಿಗೆ ಸಮಾಜದ ಎಲ್ಲಾ ಸ್ಥರಗಳಿಂದಲೂ ಆರಾಧನೆ ನಡೆದು ಬರುತ್ತಿತ್ತು ಎನ್ನುವುದಕ್ಕೆ ಕುಂದಾಪುರ, ಉಡುಪಿ ತಾಲೂಕುಗಳ ಹರಿಜನ ವರ್ಗದ ಮೇರ ಜನಾಂಗದವರು ನಡೆಸಿಕೊಂಡು ಬರುತ್ತಿರುವ ಕಾಡ್ಯನ ಕೋಲವೇ ಸಾಕ್ಷಿ. ಕಾಡ್ಯ ಎಂದರೆ ಅಷ್ಟಕುಲದ ನಾಗಗಳಲ್ಲಿ ಒಂದಾದ 'ಕಾಳಿಂಗ' ಎಂದರ್ಥ. ಬ್ರಹ್ಮಮಂಡಲವು ಬ್ರಹ್ಮನ ಪೀತ್ಯರ್ಥವಾಗಿ ಜರುಗುವ ವಿಧಿ ಆಚರಣೆಯಾಗಿದೆ. ಇಲ್ಲಿ ಬ್ರಹ್ಮನೆಂದರೆ ಚತುರ್ಮುಖ ಬ್ರಹ್ಮನಲ್ಲ. ತುಳು ಭಾಷೆಯಲ್ಲಿ ಬೆರ್ಮೆರ್ ಎಂದು ಜನ ಜನಿತವಾಗಿರುವ ದೈವ. ಬೆರ್ಮೆರ ತುಳುವರ ಆದಿಮೂಲ ದೈವ.

ನಾಗಮಂಡಲದ ಪರ್ಯಾಯ ನಾಮಗಳು[ಬದಲಾಯಿಸಿ]

ಡಕ್ಕೆಬಲಿ, ಮಂಡ್ಲಬೋಗ, ಮಂಡ್ಲಸೇವೆ, ಹೊಡಿಸೇವೆ, ದೈವಮಂಡ್ಲ, ಡಮರು ಸೇವೆ ಇವೆಲ್ಲ ನಾಗಮಂಡಲದ ಆರಾಧನಾ ವಿಧಿಯ ಪರ್ಯಾಯ ನಾಮಗಳು.

ನಾಗಮಂಡಲದ ಹಾಡುಗಳು[ಬದಲಾಯಿಸಿ]

ನಾಗಮಂಡಲಗಳಲ್ಲಿ ಹಾಡುವ ಹಾಡುಗಳು ಕೃಷ್ಣನಿಗೂ ಮತ್ತು ಲಲಿತ ದೇವತೆಗೂ ಸಂಬಂಧಿಸಿದ್ದು, ಆರ್ಯ ಪೌರಾಣಿಕ ದೇವತೆಗೆ ಸಂಬಂಧಿಸಿದವು ಎಂಬ ಅಭಿಪ್ರಾಯವಿದೆ. ಆದರೆ ವೈದ್ಯರು ಮತ್ತು ಪಾಣರು ಈ ಆಚರಣೆಗಳಲ್ಲಿ ನಾಗನಿಗೆ, ಬ್ರಹ್ಮನಿಗೆ, ಯಕ್ಷಿಗೆ, ನಂದಿಗೆ, ಕ್ಷೇತ್ರ ಪಾಲನಿಗೆ, ಬೊಬ್ಬರ್ಯನಿಗೆ, ವೀರಭಧ್ರನಿಗೆ, ಹಳೆಯಮ್ಮನಿಗೆ, ಮರ್ಲ್ಚಚಿಕ್ಕು ಮುಂತಾದ ದೈವಗಳಿಗೆ ಸಂಬಧಿಸಿದ ಹಾಡುಗಳನ್ನು ಹಾಡುತ್ತಾರೆ. ವೈದ್ಯರು ನಾಗಮಂಡಲಗಳಲ್ಲಿ ಕೆಲವೊಂದು ಕನಕದಾಸ, ಪುರಂದರದಾಸರ ಕೀರ್ತನೆಗಳನ್ನೂ ಹಾಡುವುದುಂಟು. ಆದರೆ ಈ ಹಾಡುಗಳು ವಿಧಿ ಆಚರಣೆಗಳಿಗೆ ಹೊಂದುವಂತದಲ್ಲ. ನಾಗಮಂಡಲದ ಹಾಡುಗಳು ಬಹುಮಟ್ಟಿಗೆ ಸ್ತುತಿರೂಪದವು. ಇದನ್ನು ಹಾಡುವ ವೈದ್ಯರ ಪ್ರಕಾರ ಇವುಗಳನ್ನು ಬಹಳ ಕ್ರಮವಾಗಿ ಲಯಬದ್ದವಾಗಿ ಹಾಡುತ್ತಾರೆ.

ಸಾರ್ವಜನಿಕ ಅನ್ನಸಂತರ್ಪಣೆ[ಬದಲಾಯಿಸಿ]

ಅನ್ನಸಂತರ್ಪಣೆಯು ನಾಗಮಂಡಲದ ಒಂದು ವಿಶೇಷ ಧಾರ್ಮಿಕ ಕ್ರಿಯೆ. ಸುಮಾರು ೫ ಸಾವಿರದಿಂದ ೩೦ ಸಾವಿರ ಮಂದಿ ಈ ಅನ್ನಸಂತರ್ಪಣೆಯಲ್ಲಿ ಭಾಗವಹಿಸುತ್ತಾರೆ. ಜನ ಇದನ್ನು ಪ್ರಸಾದವೆಂದು ಭಾವಿಸುತ್ತಾರೆ.

ಅನ್ನಸಂತರ್ಪಣೆಯ ನಂತರದ ಸೇವೆಗಳು[ಬದಲಾಯಿಸಿ]

ಅನ್ನಸಂತರ್ಪಣೆಯ ಬಳಿಕ ನಾಗಬನದಲ್ಲಿ ನಾಗನ ಸೇವೆಯಾಗುತ್ತದೆ. ಅರಶಿನ, ಅಕ್ಕಿಹಿಟ್ಟು, ಹಾಲು ಇವುಗಳನ್ನು ಸೇರಿಸಿ ನಾಗನ ಕಲ್ಲುಗಳಿಗೆ ಅಭಿಷೇಕ ಮಾಡಿ ಹಾಲು ಹಣ್ಣುಗಳ ನೈವೇದ್ಯ ಮಾಡಲಾಗುತ್ತದೆ. ನಂತರ ಮಂಗಳಾರತಿ, ಆಗ ನಾಗಪಾತ್ರಿಗೆ ಆವೇಶ ಬರುತ್ತದೆ. ವೈದ್ಯರು ಡಕ್ಕೆ ಬಾರಿಸಿ ಹಾಡುತ್ತಾರೆ. ಮಂಡಲ ಚೆನ್ನಾಗಿ ನಡೆಸುವಂತೆ ಪ್ರಾರ್ಥನೆ ಮಾಡಿ ಎಲ್ಲರೂ ವಾದ್ಯಗಳ ನುಡಿತಗಳೊಂದಿಗೆ ನಾಗಮಂಡಲ ನಡೆಯುವ ಸ್ಥಳಕ್ಕೆ ಬಂದು ಸೇರುತ್ತಾರೆ. ನಾಗಮಂಡಲಗಳ ಆಚರಣೆಯ ಸಲುವಾಗಿ ಹಗಲಲ್ಲಿ ಯಜಮಾನ ಪುರೋಹಿತರ ನೇತೃತ್ವದಲ್ಲಿ 'ಶಾಕಾ ಸಂಸ್ಕಾರ' (ಹಿಟ್ಟಿನಿಂದ ಮಾಡಿದ ನಾಗಸಂಸ್ಕಾರ) ನಡೆಸಬೇಕು. ಮುಂದೆ ವಟುಗಳ ಆರಾಧನೆ ಧಾನ ಸಂಸ್ಕಾರ ಇತ್ಯಾದಿ ನಡೆಯುತ್ತದೆ. ಮಂಡಲದ ದಿನ ಸರ್ವ ಪ್ರಾಯಶ್ಚಿತವಾಗಿ ಗಣಹೋಮ, ಚಂಡಿಕಾ ಹೋಮ, ಗೋದಾನ, ಭೂದಾನಾದಿಗಳು ನಡೆಯುವುದಿದೆ. ಸಾಮಾನ್ಯವಾಗಿ ಗದ್ದೆಯಲ್ಲಿ ವಿಶಿಷ್ಟವಾದ ಎತ್ತರದ ವೇದಿಕೆಯ ಮೇಲೆ 'ಮಂಡಲ ಸೇವೆ' ಜರಗುತ್ತದೆ. ಅಲಂಕಾರಗೊಂಡ ವೇದಿಕೆಯ ಮಧ್ಯಭಾಗ ಮಂಡಲದ ಪ್ರಮಾಣಕ್ಕನುಸರಿಸಿ ಪಂಚವರ್ಣದ ಹುಡಿಯಿಂದ ವೈದ್ಯರು ಏಳುಹೆಡೆಯ ಸರ್ಪವನ್ನು ಆರಾಧಿಸುತ್ತಾರೆ. ಸೂರ್ಯಾಸ್ತವಾದ ಎರಡು-ಮೂರು ಗಂಟೆಗಳ ಬಳಿಕ ನಾಗಮಂಡಲ ನಡೆಯುವ ಜಾಗಕ್ಕೆ ಸಮೀಪದಲ್ಲಿರುವ ನಾಗಬನದಲ್ಲಿ ಹಾಲಿಟ್ಟು ಸೇವೆ ಜರಗುತ್ತದೆ. ಇಲ್ಲಿ ಬ್ರಾಹ್ಮಣ ಪುರೋಹಿತರದೇ ನೇತೃತ್ವ. ವೈದ್ಯರದು ಡಮರು ಸೇವೆ ಮಾತ್ರ. ನಾಗಸಂಬಂಧಿ "ಹೊಗಳಿಕೆಗಳು" ಕನ್ನಡದಲ್ಲಿದ್ದು ಯಕ್ಷಗಾನದ ರಾಗ ಸಂಚಾರವನ್ನು ಹೋಲುತ್ತದೆ.

ಹೊಗಳಿಕೆಯ ಶಾಬ್ದಿಕ ಪಠ್ಯದ ಮಾದರಿ[ಬದಲಾಯಿಸಿ]

ಪಾತಾಳವು ನಾಗನರಮನೆಯು/ಪ್ರೀತಿಯಿಂದಲಿವಾಸವಿರುತಾಲಿದ್ರೀ

ಭೂತಳಕ್ಕೆ ತಾನು ಬರಬೇಕೆಂದು/

ಸಂಪ್ರೀತಿಯೊಳು ಮರಿಮಟ್ಟೆ ಕೂಡಿಕೊಂಡು//

ನಾಗರಥ, ನಾಗವಾಜಿ ಏರಿಕೊಂಡು/

ಹಿಡಿವ ಕಹಳೆಯ ಕೊಂಬು/

ಬಡಿವ ಭೇರಿಯ ವಾದ್ಯ ಅಡಿಗಡಿಗೆ ಹೊಡೆವ ತಮ್ಮಟೆ ಹೆಗ್ಗಾಳೆ/

ತುಡುಬು, ಗಡೆಬಡೆ ಭೇರಿ ಹೊಡೆಸಿಕೊಂಡು ಹರುಷದಿ. ಪಯಣ ಬರುತಾಲಿದ್ರಿ

ನಾಗಮಂಡಲದ ಅಧ್ಯಯನಗಳು[ಬದಲಾಯಿಸಿ]

ನಾಗಮಂಡಲ-ಡಕ್ಕೆ ಬಲಿಗಳನ್ನು ಕುರಿತು ಮೊದಲ ಅಧ್ಯಯನ ಪ್ರಕಟವಾದದ್ದು ಡಾ.ಶಿವರಾಮ ಕಾರಂತರದು. 'ಪ್ರಾಚೀನ ದೈವಾರಾಧನೆಯ ಮೇಲೆ ಆರ್ಯ ಸಂಸ್ಕೃತಿಯ ವರ್ಚಸ್ಸನ್ನು ಬೀರುವ ಒಂದು ಕುಣಿತ ವಿಧಾನವೇ ನಾಗಮಂಡಲವೆಂದು ಡಾ.ಶಿವರಾಮ ಕಾರಂತರು ಬರೆದರು. ಪ್ರೊ.ಎಸ್.ಕೆ ರಾಮಚಂದ್ರರಾವ್ ಅವರು ಬರೆದ "ಮೂರ್ತಿಶಿಲ್ಪ ನೆಲೆಬೆಲೆ" ಹಾಗೂ "ದೇವಾಲಯಗಳ ಜಾನಪದ ಮೂಲೆ" ಈ ಗ್ರಂಥಗಳಲ್ಲಿ ನಾಗಮಂಡಲ ಆಚರಣೆಯ ವಿವರ ದೊರೆಯುತ್ತದೆ. ಈ ಎಲ್ಲಾ ಅಧ್ಯಯನಗಳು ನಾಗಮಂಡಲ - ಡಕ್ಕೆಬಲಿಗಳನ್ನು ಕುರಿತಂತೆ ದ್ವಿತಾಲಿಕ ಅಧ್ಯಯನವಾಗಿ ಹೊಮ್ಮಿತಷ್ಟೇ ಹೊರತು ಪಠ್ಯ, ಸಂದರ್ಭ, ಪ್ರದರ್ಶನ ಮತ್ತು ಅರ್ಥ ಇವುಗಳ ಸಂಬಂಧವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಾತಿ ಆಧಾರಿತ ಸಮಾಜದ ಉತ್ಪನ್ನದ ಹಿನ್ನೆಲೆಯಲ್ಲಿ ಅರಿಯುವ ಪ್ರಯತ್ನ ನಡೆಯಲಿಲ್ಲ. ಮತಾಚಾರವನ್ನು ತಮ್ಮ ಜಾತಿಯ ಹಿನ್ನಲೆಯಲ್ಲಿ ನಿಯಂತ್ರಿಸುವ ಜನವರ್ಗ, ಮತಾವಾರ ನಡೆಯುವ ಪ್ರದೇಶದ ವಿವರ, ಆಚರಣೆಯ ಸಿದ್ದತೆ, ಅಲಂಕರಣ, ಕುಣಿತದ ಸಂದರ್ಭದ ಹಾಡು, ಕುಣಿತ, ವೇಷಭೂಷಣ, ತಾಂತ್ರಿಕಾಂಶ, ಪ್ರತೀಕಾರ್ಥ, ಸಮೂಹದ ಪಾಲ್ಗೊಳ್ಳುವಿಕೆ - ಹೀಗೆ ಹಲವು ಸಂಗತಿಗಳನ್ನು ಒಳಗೊಂಡ ಒಂದು 'ಬೃಹತ್ ಪಠ್ಯ' ಶರೀರವನ್ನು ಗಮನಿಸಿ ವಿವರಿಸಬೇಕಾಗುತ್ತದೆ. ಅಂತಹ ಒಂದು ಪ್ರಯತ್ನವಾಗಿದೆ. ನಾಗಮಂಡಲವನ್ನು ಬರಿಯ ಆಚರಣೆಯ ಸಂದರ್ಭವಷ್ಟರಿಂದಲೇ ಅರ್ಥ ಪಡೆಯುವುದು ಅಸಾಧ್ಯ ಸಮಾನ ಪ್ರದೇಶದ ಬ್ರಾಹ್ಮಣೇತರ ಸರ್ಪ ಸಂಬಂಧಿ ಮತಾಚಾರ ಡಕ್ಕೆಬಲಿಯ ಸಂದರ್ಭದಲ್ಲಿರಿಸಿದಾಗ ಕೆಲವೊಂದು ಅರ್ಥ ಹಾಗೂ ಈ ಆಚರಣೆಯ ಸ್ವರೂಪವನ್ನು ವಿವರಿಸಬಹುದು.

ಉಲ್ಲೇಖ[ಬದಲಾಯಿಸಿ]

  1. ಸಂಪಾದಕರು: ಕ.ವೆಂ.ರಾಜಗೋಪಾಲ, ತುಳುವರ ಆಚರಣೆಗಳಲ್ಲಿ ಕಲಾವಂತಿಕೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು - ೧ (೧೯೮೯), ಪುಟ ಸಂಖ್ಯೆ ೧೩-೨೨.
  2. ಸಂಪಾದಕರು: ಪ್ರೊ.ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ ೧೯೯೬, ಪುಟ ಸಂಖ್ಯೆ: ೪೭-೫೩
"https://kn.wikipedia.org/w/index.php?title=ನಾಗಮಂಡಲ&oldid=789064" ಇಂದ ಪಡೆಯಲ್ಪಟ್ಟಿದೆ