ಆಟಿಕಳಂಜ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಟಿಕಳಂಜ

ಆಟಿ ಕಳೆಂಜ ತುಳು ನಾಡಿನ ಜನಪದ ಕುಣಿತಗಳಲ್ಲಿ ಒಂದು ಆಚರಣಾತ್ಮಕ ಕಲಾ ಪ್ರಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ನಲಿಕೆ ಜನವರ್ಗದಲ್ಲಿ ಕಾಣಸಿಗುವ ಕುಣಿತ. ಇದೇ ಕುಣಿತವನ್ನು ಬೆಳ್ತಂಗಡಿ ಭಾಗದಲ್ಲಿ ಮೇರ ಜನವರ್ಗದವರು ನಡೆಸಿಕೊಡುತ್ತಾರೆ.[೧] ಈ ಕುಣಿತವನ್ನು ಆಟಿ (ಆಷಾಡ) ತಿಂಗಳಲ್ಲಿ ನಡೆಸುವುದರಿಂದ ಇದನ್ನು ಆಟಿ ಕಳಂಜ ಎಂತಲೂ ಕರೆಯಲಾಗಿದೆ. ಕಳೆಂಜ ಎಂದರೆ ಚಿಕ್ಕ ಬಾಲಕ, ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂದರ್ಥವೂ ಇದೆ. ಕಳಂಜನು ಊರಿಗೆ ಬಂದ ಮಾರಿಯನ್ನು (ರೋಗ-ರುಜಿನವನ್ನು) ಹೊಡೆದೋಡಿಸುತ್ತಾನೆ ಎನ್ನುವ ಆಶಯದಿಂದಾಗಿ ಈ ಕುಣಿತ ಪ್ರಕಾರವನ್ನು ಆಹ್ವಾನಿಸಿ ದಾನ ನೀಡುವರು. ನಲಿಕೆ ಜನವರ್ಗದವರು ನಡೆಸಿಕೊಡುವ ಈ ಕಳಂಜ ವೇಷ ಕಣಿಂಜ ಇದ್ದಿರಬಹುದೇನೋ ಎನ್ನುವ ಅನುಮಾನವೂ ಇದೆ. ಕಾರಣ: ಕಣಿಂಜ-ಎಂದರೆ ಮಾಟ-ಮಂತ್ರಗಳನ್ನು ದೂರ ಮಾಡುವವ ಎಂದರ್ಥ. ತುಳುವಿನ ಆಟಿ (ಆಷಾಢ: ಚಾಂದ್ರಮಾನದಲ್ಲಿ ನಾಲ್ಕನೆಯ ತಿಂಗಳು) ತಿಂಗಳಲ್ಲಿ ನಲಿಕೆ ಅಥವಾ ಪಾಣಾರ ಜನವರ್ಗದವರು ಆಟಿಕಳೆಂಜ ವೇಷವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ, ಸಣ್ಣ ಬಾಲಕನಿಗೆ ತಾಳೆಗರಿಯ ತತ್ರ (ಛತ್ರಿ) ಕೊಟ್ಟು ಕುಣಿಯಲು ಹಿಮ್ಮೇಳದಲ್ಲಿ 'ತೆಂಬರೆ'-ಯನ್ನು (ಚರ್ಮ ವಾದ್ಯ)ಪುರುಷ ವ್ಯಕ್ತಿ ನುಡಿಸುತಿರುತ್ತಾನೆ. ಕಳೆಂಜನ ವೇಷ ಭೂಷಣದಲ್ಲಿ ಮುಖ್ಯವಾಗಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಅಥವಾ ಕೈಗೆ-ಮೈಗೆ ಬಣ್ಣ, ಮುಖ್ಯವಾಗಿ ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿಗೆ ಇವುಗಳು ಆಟಿಕಳೆಂಜನ ವೇಷಗಳು.

ಆಟಿಕಳೆಂಜ ವೇಷದ ವಿವರ[ಬದಲಾಯಿಸಿ]

ಸಿದ್ಧವಾಗುತ್ತಿರುವ ಆಟಿಕಳಂಜ ವೇಷಗಾರ

ಬೆಳ್ತಂಗಡಿ ತಾಲ್ಲೂಕಿನ ಮೇರರಲ್ಲಿನ ಆಟಿ ಕಳೆಂಜ ವೇಷದಲ್ಲಿ ಕಳೆಂಜನ ವೇಷ ಹಾಕುವವರು ವಯಸ್ಕರು ಮತ್ತು ಕೈಯಲ್ಲಿ 'ದುಡಿ '-ಎನ್ನುವ ವಿಶೇಷ ವಾದ್ಯವನ್ನು ಹಿಡಿದು ನುಡಿಸುತ್ತಾ ಪಾಡ್ದನವನ್ನು ಹೇಳುತ್ತಾ ಕುಣಿಯುತ್ತಾರೆ.

ಆಟಿಕಳೆಂಜ ಕುಣಿತದ ಉದ್ದೇಶ[ಬದಲಾಯಿಸಿ]

ಮನುಷ್ಯನಿಗಾಗಲಿ, ಪ್ರಾಣಿ ಪಶುಗಳಿಗಾಗಲಿ ಬಂದ ಮಾರಿಯನ್ನು ಅಥವಾ ರೋಗವನ್ನು ಓಡಿಸುವುದು ಆಟಿಕಳೆಂಜನ ಕಾರ್ಯ ಎಂಬುದಾಗಿ ತುಳು ಪಾಡ್ದನದಿಂದ ತಿಳಿದು ಬರುವುದು. ತುಳುವಿನಲ್ಲಿ ಆಷಾಡ ಆರಂಭವಾಗುವುದು ಎಂದರೆ ಮಳೆಗಾಲದ ಆರಂಭವೆಂದರ್ಥ, ಕೆಲವೊಮ್ಮೆ ಮಳೆ ಬೀಳದಿದ್ದರೆ ಬಿಸಿ ಹೆಚ್ಚಾಗಿ ಕೆರೆ-ಕುಂಟೆಗಳು ಬತ್ತಲಾರಂಭಿಸಿ ಜನ ನೀರಿಗಾಗಿ ಪರಿತಪಿಸುವರು, ಸಹಜವಾಗಿ ರೋಗ ರುಜಿನ ಹುಟ್ಟಿಕೊಳ್ಳುವುದು. ಮಳೆಗಾಲ ಆರಂಭ ಹಾಗೂ ಬೇಸಿಗೆಯ ಕೊನೆಯ ಈ ಕಾಲವು ಸಂಕ್ರಮಣದ ಸ್ಥಿತಿಯನ್ನು ತಂದೊಡ್ಡುತ್ತವೆ. ಆಟಿ ಅಥವಾ ಆಷಾಡ ತಿಂಗಳಲ್ಲಿ ಬಿಸಿಲು ಕಾದರೆ ಆನೆಯ ಬೆನ್ನೂ ಬಿರಿಯುವುದೆಂಬುದಾಗಿ ತುಳುನಲ್ಲಿ ಗಾದೆಯಿದೆ (ಆಟಿದ ದೊಂಬು ಆನೆತ ಬೆರಿ ಪುಡಪು) ಹೀಗಾಗಿ ಆಟಿಕಳೆಂಜ ಬಂದರೆ ರೋಗ ರುಜಿನಗಳನ್ನು ನಿವಾರಣೆ ಮಾಡುತ್ತಾನೆ ಎನ್ನುವ ನಂಬಿಕೆ ಜನರಲ್ಲಿ ಇದೆ. ಹೀಗಾಗಿ ಆಟಿಕಳಂಜನಿಗೆ ತುಳುನಾಡಿನಲ್ಲಿ ಮಹತ್ವದ ಸ್ಥಾನವಿದೆ. ಕಾಸರಗೋಡು ಪ್ರಾಂತ್ಯದಲ್ಲಿ ಕಳಂಜ ಕುಣಿತವನ್ನು 'ಕೋಪಾಳ'-ರು ನಡೆಸಿದರೆ 'ಮಲಯ' ಜನಾಂಗದವರು ಬೇಡ ಕುಣಿತವನ್ನೂ 'ವಣ್ಣನ್' ಜನಾಂಗದವರು 'ಮರ್ದ' ಎಂಬ ಕುಣಿತ ನೀಡಿ ಪಡಿ-ಹಣ ತೆಗೆದುಕೊಂಡು ಹೋಗುವ ಸಂಪ್ರದಾಯವನ್ನು ಕಾಣಬಹುದು.

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. http://www.thehindu.com/news/cities/Mangalore/kalenja-a-fading-tradition/article3678199.ece