ಗುಮಟೆ ಕುಣಿತ
ಗುಮಟೆ ಕುಣಿತ ಕರ್ನಾಟಕ ಕುಣಿತಗಳಲ್ಲಿ ಒಂದು.
ಗುಮಟೆಯ ರಚನೆ
[ಬದಲಾಯಿಸಿ]ಗುಮಟೆ ಎಂದರೆ ವಿಶಿಷ್ಟ ತಾಳವಾದ್ಯದೊಡನೆ ಹಾಡುವ ಪದ.[೧] ಆಕಾರದಲ್ಲಿ ಗುಮಟೆ ಉದ್ದುದ್ದನಾಗಿ ಇರುವುದು ಉಂಟು. ಹೆಚ್ಚು ಬಳಕೆಯಲ್ಲಿರುವ ಗುಂಡು ಗುಮಟೆ ಕೊಡದ ಆಕಾರದಲ್ಲಿರುತ್ತದೆ. ಆದನ್ನು ಪಾಂಗು ಎನ್ನುತ್ತಾರೆ.[೨] ಪಾಂಗಿಗೆ ಎರಡು ಮೂತಿಗಳಿರುತ್ತವೆ. ಚಿಕ್ಕ ಮೂತಿಯ ಭಾಗವನ್ನು ಎಡಗೈಯಲ್ಲಿ ಹಿಡಿದುಕೊಂಡು ಅಗಲವಾದ ಮೂತಿಯ ಮೇಲೆ ಬಲಗೈಯಿಂದ ಬಾರಿಸುತ್ತಾರೆ. ಬಡಿಯುವ ಬಾಯಿಗೆ ಚಾಪವನ್ನು (ಉಡದ ಅಥವಾ ಕಾನಕುರಿಯ ಚರ್ಮವನ್ನು) ಬಿಗಿದಿರುತ್ತಾರೆ. ಎರಡು ಬಾಯಿಗಳಿಗೂ ಸರದ ಮಾದರಿಯಲ್ಲಿ ಹುರಿ ಕಟ್ಟಿ ಗುಮಟೆಯನ್ನು ಕೊರಳಿಗೆ ಮಾಲೆಯಾಗಿ ಧರಿಸಿಕೊಳ್ಳುವುದು ವಾಡಿಕೆ.
ಕುಣಿತದ ಹಿನ್ನೆಲೆ
[ಬದಲಾಯಿಸಿ]ತಾಳಪ್ರಧಾನವಾಗಿದ್ದು ವೀರ್ಯವತ್ತಾಗಿ ಹಾಡುವ ಗುಮಟೆ ಪದಗಳನ್ನು ಗಂಡಸರ ಪದಗಳು ಎನ್ನುತ್ತಾರೆ.[೩] ನಿಧಾನವಾಗಿ ಎಳೆದೆಳೆದು ಹೇಳುವ ಹೆಂಗಸರ ಹಾಡುಗಳು ಗುಮಟೆಗೆ ಹೊಂದುವುದಿಲ್ಲ. ತಾಳದ ಗತ್ತಿಗೆ ಹೊಂದುವ ಯಾವುದೇ ಪದವನ್ನೂ ಅದರ ಜೊತೆಗೆ ಹೇಳಬಹುದು. ಸುಗ್ಗಿಯ ಕುಣಿತದ (ಕೋಲಾಟದ) ಪದಗಳನ್ನೂ, ಕಾಮದಹನದ ಪದಗಳನ್ನೂ sಸಂಗ್ಯಾ-ಬಾಳ್ಯಾ ಹಾಗೂ ಗುಂಡಿಬೀರ ಎಂಬ ಜಾನಪದ ನಾಟಕಗಳ ಪದಗಳನ್ನೂ ಗುಮಟೆ ವಾದನದ ಜೊತೆಗೆ ಹೇಳುತ್ತಾರೆ. ಇವನ್ನು ಕ್ರಮವಾಗಿ ಸುಗ್ಗಿಪದಗಳು, ಕಾಮನ ಕರಿಯ (ದುಮಸಾಲೆ) ಪದಗಳು, ಹಾಗೂ ಸಿಂಬೋಳನ ಪದ-ಇತ್ಯಾದಿಯಾಗಿ ಗುರುತಿಸುತ್ತಾರೆ.
ಸುಂಕಸಾಳೆ ರಾಮ ಅವಲೆ (ಮಾವಳೆ?)ಯವರೊಡನೆ ಯುದ್ಧಮಾಡಿ ಮಡಿದ ಕಥೆ, ಮಾರಿಯಮ್ಮನ ಕಥೆ, ಬರ್ಗಿ ಅಮ್ಮನವರು ಆ ಊರಿಗೆ ಬಂದು ನಿಂತ ಕಥೆಗಳನ್ನು ಗುಮಟೆ ಪದಗಳಲ್ಲಿರುವ ಐತಿಹ್ಯಗಳಿಗೆ ನಿದರ್ಶನವಾಗಿ ಉಲ್ಲೇಖಿಸಬಹುದು.
ಸಣ್ಣ ಸಣ್ಣ ಗುಮಟೆಪದಗಳಲ್ಲಿ ಪ್ರಣಯದ ವಿವಿಧಮುಖಗಳ ಪದಗಳೂ ಇತರ ಜೀವನ ಚಿತ್ರಣಗಳೂ ಹಾಸ್ಯದ ಹಾಗೂ ಇತರ ತುಂಡುಪದಗಳೂ ಹೇರಳವಾಗಿವೆ. ಶ್ರಮದಾನ ಮುಂತಾದ ಇತ್ತೀಚಿನ ವಿಷಯಗಳ ಪದಗಳೂ ಉಂಟು.
ಹಾಸ್ಯದ ಹಾಡುಗಳಲ್ಲಿ ದಿನಾಶು ಬರುವವನೋ ಬಾ ವಾ ನೆರಮಣೆ ಮೈದೀಣೋ! ಎಂಬಂಥ ದೇಸಿಯ ಶೈಲಿಯ ಸೊಗಸುಳ್ಳ ಅನೇಕ ಹಾಡುಗಳಿವೆ. ಪಟ್ಟೆ ಉಟ್ಟಿಕೆಂಡಿ ಪಟ್ಟಾಂಗ (ಹರಟೆ) ಮಾಡುತ್ತಾಳೆ ಪಟಗಾರ ಹುಡುಗಿ-ಮುಂತಾದ ಪದಗಳಲ್ಲಿ ಪ್ರಾಸವೂ ಹಾಸ್ಯಕ್ಕೆ ಪೋಷಕವಾಗುತ್ತದೆ.
ಹಲವು ಪದಗಳಲ್ಲಿ ಕಾವ್ಯಗುಣ ಪ್ರಧಾನವಾಗಿಲ್ಲ. ಕಥನಕವನಗಳಲ್ಲಿ ಕಥನ ಕಲೆ ಹೃದ್ಯವಾಗಿರುತ್ತದೆ. ಪ್ರಾಸದ ಹಾಗೂ ಪುನರಾವೃತ್ತಿಯ ಸಾಲುಗಳ ನಾದದ ಸೊಗಸು ಹಲವು ಪದಗಳ ಪ್ರಧಾನಗುಣ. ಆದರೂ ಕೆಲವು ಕಡೆ ಸೊಗಸಾದ ಕಲ್ಪನೆಗಳಿವೆ. ಗಿಳಿಯು ಪಂಜರಕೆ ಬರಲಿಲ್ಲ - ಎಂಬ ಪದದಲ್ಲಿ ಪರರ ಹೆಣ್ಣುಗಳ ಬೆಂಬತ್ತಿ ಹೋದ ಗಂಡನ ಪರಿ ಸಾಂಕೇತಿಕವಾಗಿ ನಿರೂಪಿತವಾಗಿದೆ. ಬರುವೆನೆಂದು ಬಾರದೆ ದಾರಿಕಾಯಲು ಹಚ್ಚಿದ ನಲ್ಲನಿಗೆ, `ಇನ್ನಾಗಿನ (ನಿನ್ನೆಯ) ಹೂವಾ ಇವತ್ತ ಮುಡಿದರೆ ಪರಿಮಲ ಬೇರಾಯ್ತವಾ ಮುಂತಾದ ದೃಷ್ಟಾಂತಗಳನ್ನು ಹೇಳುವ ನಲ್ಲೆಯ ಸರಣಿ ಚೆನ್ನಾಗಿದೆ. ಕನ್ನಡಿವಲಗಿನ ಕಮಲದ ಮೊಕೆಯೇ - ಎಂಬಂಥ ಸುಂದರ ರೂಪಕಗಳಿವೆ. ಬಿರುಗಾಳಿ ಇರುವೆಗಳ ಸಾಲನ್ನು ಹಾರಿಸಿಕೊಂಡು ಹೋಗುವ ಕಲ್ಪನೆ ಒಂದು ಪದದಲ್ಲಿದ್ದು ಮೆಚ್ಚುವಂಥದಾಗಿದೆ.
ಜಾನಪದ ಗೀತೆಗಳ ರಚನೆಯ ರಹಸ್ಯವನ್ನು ಈ ಪದಗಳಿಂದ ಮನಗಾಣಬಹುದು. ಇವುಗಳಲ್ಲಿ ಹಾಲಕ್ಕಿ ಒಕ್ಕಲಿಗರ, ಅಂಬಿಗರ ಹಾಗೂ ಇತರರ ವಿಶಿಷ್ಟ ದೇಸಿಯ ಸರಣಿಗಳಿವೆ. ಇವು ಭಾಷಾಶಾಸ್ತ್ರದ ಅಭ್ಯಾಸಕ್ಕೆ ನೆರವಾಗುತ್ತದೆ. ಇಲ್ಲಿ ಶ್ರೀಕೃಷ್ಣ ಸಿರಿಕುಟ್ಣನಾಗುತ್ತಾನೆ. ಚಂದ್ರ ಶಂದೋರಾಯನಾಗುತ್ತಾನೆ. ಅಪೂರ್ವ ಶಬ್ದಗಳಿಲ್ಲಿ ದೊರಕುತ್ತವೆ. ಗಾಮೆ (ಸುವಾಸನೆ), ಮುಸ್ತಾಪಾ (ವೇಷಭೂಷಣ), ಪಾಶಾಣ (ಭೋಜನ), ಗಳಿದು ಹೋಗು (ದಾಟಿ ಹೋಗು), ಕುಂಬರಿ (ಕುಮರಿ, ಬೆಟ್ಟ ಕಡಿದು ಸಾಗುವಳಿ ಮಾಡುವ ಭೂಮಿ) - ಇತ್ಯಾದಿ.
ಇತಿಹಾಸ
[ಬದಲಾಯಿಸಿ]ಗುಮಟೆ ಪದಗಳು ಉತ್ತರ ಕನ್ನಡದ ಕಥನ ಕವನಗಳ ಗಣಿಗಳು, ರಾಮಾಯಣ, ಮಹಾಭಾರತ, ಭಾಗವತ ಕಥೆಗಳ ಜಾನಪದ ಸರಣಿಯ ಕಥನಗಳನ್ನೂ ಇತರ ಜಾನಪದ ಕಥೆಗಳನ್ನೂ ಹಿಂದಿನ ಜನ ದೊಡ್ಡ ದೊಡ್ಡ ಗುಮಟೆಪದಗಳಲ್ಲಿ ಹಿಡಿದಿಟ್ಟು ಅವುಗಳ ಪ್ರಸಾರ ಮಾಡುತ್ತಿದ್ದರು. ಇತ್ತೀಚಿನ ಜನರಲ್ಲಿ ಸೌಲಭ್ಯಾಕಾಂಕ್ಷೆ ಬೆಳೆಯುತ್ತಿದೆಯಾಗಿ ಇಂಥ ದೀರ್ಘ ಕಥನಕವನಗಳನ್ನು ಬೆಳ್ಳಂಬೆಳಗೂ ಹಾಡುವ ಘಟಾನುಘಟಿಗಳೂ ಕೂತು ಕೇಳುವ ರಸಿಕರೂ ಮರೆಯಾಗುತ್ತಿದ್ದಾರೆ. ಈಗಿನವರು ಕೆಲವು ದೀರ್ಘಪದಗಳ ಪ್ರಾರಂಭ ಭಾಗಗಳನ್ನು ಮಾತ್ರ ಹೇಳಿ, ಮುಂದಿನ ಭಾಗಗಳನ್ನು ಹಾರಿಸಿಬಿಡುತ್ತಾರೆ. ಕನ್ನಡ ಜನಪದದಲ್ಲಿ ಗುಮಟೆ ಪದಗಳಲ್ಲಿ ಆದಷ್ಟು ನಷ್ಟ ಇನ್ನು ಯಾವ ಪ್ರಕಾರದಲ್ಲಿಯೂ ಆಗಿಲ್ಲ.
ಎಲ್. ಆರ್. ಹೆಗಡೆಯವರ ಸಂಗ್ರಹದಲ್ಲಿ ವೃದ್ಧರಾದ ಅಡಲೂರು ದೇವುಗೌಡ, ತೊಳಶುಗೌಡ, ಹೊನ್ನಳ್ಳಿ ಅಂತುತಿಮ್ಮ-ಇವರು ಹೇಳಿದ ಮಹಾಭಾರತ, ರಾಮಾಯಣ, ಭಾಗವತಗಳ ಅನೇಕ ಗುಮಟೆ ಪದಗಳಿವೆ. ಅವು ಮೂಲ ಪುರಾಣಗಳಿಗಿಂತ ಬೇರೆಯಾದ ಹಾಗೂ ನೈಜ ಜೀವನದ ಅನೇಕಾನೇಕ ಚಿತ್ರಣಗಳನ್ನು ಮೂಡಿಸುವ ಅಪೂರ್ವ ಕಥೆಗಳನ್ನೊಳಗೊಂಡಿವೆ. ಒಂದು ಕಥೆಯಲ್ಲಿ ಮೂಡಿನ ಬೆಟ್ಟದ ಬೇಣದಲ್ಲಿ ಗದ್ದೆಮಾಡಿ ಪಾಂಡವರು ಬೆಳೆ ತೆಗೆಯುತ್ತಾರೆ. ಮೈನೆರೆದ ಕನ್ಯೆಯನ್ನು ಅಡವಿಯಲ್ಲಿ ಬಿಟ್ಟಾಗ ಬೇಟೆಗೆ ಹೋದ ಪಾಂಡವರು ಅವಳನ್ನು ಮನೆಗೆ ಕರೆತಂದು ತಾಯಿಯ ಹತ್ತಿರ ಹಣ್ಣು ತಂದೆವೆಂದು ಹೇಳುವ ವೃತ್ತಾಂತ ಮತ್ತೊಂದು ಕಥೆಯಲ್ಲಿದೆ. ಭೀಮನ ತಿಂಡಿಪೋತತನ, ಭಯ ಭಕ್ತಿ, ಶಕ್ತಿಸಾಮಥ್ರ್ಯಗಳನ್ನು ವರ್ಣಿಸುವ ಅನೇಕ ಪ್ರಸಂಗಗಳುಂಟು. ಭೀಮ ಕೆಂದಾಳಿರಾಯನ ತಲೆಯಮೇಲಿನ ಹೂವನ್ನು ತರುವ, ಶಂಬರಾಸುರನನ್ನು ವಧಿಸುವ ಕಥಾನಕಗಳೂ ಸೊಗಸಾಗಿವೆ. ಒಂದು ಕಥೆಯಲ್ಲಿ ದ್ರೌಪದಿ ಜೂಜಾಡಿ ಕೌರವರನ್ನು ಸೋಲಿಸುತ್ತಾಳೆ. ಪಾಂಡವರೇ ದೇವತೆಗಳಲ್ಲಿ ಶ್ರೇಷ್ಠರೆಂದು ಒಂದು ಕಥೆ ತಿಳಿಸುತ್ತದೆ. ಜಗತ್ತು ಹುಟ್ಟುವ ಮೊದಲು ಏಳು ಹೆಡೆಗಳ ಮಹಾಶೇಷನಿದ್ದನೆಂದು ಒಂದು ಕಥೆ ಹೇಳಿದರೆ ಇನ್ನೊಂದು ವಿಷ್ಣು ದತ್ತಾತ್ರೇಯನಾಗಿ ಒಂಟೆಯನ್ನು ತೆಗೆದುಕೊಂಡು ಬಂದ ವೃತ್ತಾಂತವನ್ನು ತಿಳಿಸುತ್ತದೆ. ಇಂಥವು ಉತ್ತರ ಕನ್ನಡ ಜಿಲ್ಲೆಯ ಜಾನಪದ ಪುರಾಣಗಳ ತುಣುಕುಗಳಾಗಿರುಬಹುದು. ಪ್ರಸಿದ್ಧವಾದ ಭಾನುಮತಿಯ ಕಥೆ. ಕುರುಬನೊಬ್ಬ ದೇವಕನ್ನಿಕೆಯ ದೇವಾಂಗವನ್ನು ಕದ್ದು ತಂದು ಅವಳನ್ನು ಮದುವೆಯಾದ ಕಥೆ. ತನ್ನನ್ನು ಮೋಹಿಸಲಿಲ್ಲವೆಂದು ಮೈದುನನನ್ನು ಕೊಂದ ಅತ್ತಿಗೆಯ ಕಥೆ. ರಾಮಸ್ವಾಮಿ-ಲಕವಿಂದರ ಕಥೆ. ಬಿಸಿಲಲ್ಲೇ ಸುತ್ತಬೇಕೆಂದು ಸೂರ್ಯದೇವ ತಾಯಿಯಿಂದ ಶಾಪ ಪಡೆದ ಕಥೆ, ಸಿರಿಕವಲಿಯ ಕಥೆ, ಮುಂಗುಲಿ ರಾಯನ ಕಥೆ, ಕೊಡವನ್ನು ಒಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೆಣ್ಣಿನ ಕಥೆ, ಮನುಷ್ಯನಿಗೆ ನೂರು, ಕಾಗೆಗೆ ಸಾವಿರವರ್ಷ ಆಯುಷ್ಯವಾದುದರ ಕಥೆ, ಜೋಡು ನವಿಲುಗಳ ತಲೆ ತಿಂದವನು ರಾಜ, ದೇಹ ತಿಂದವನು ಮಂತ್ರಿ ಆದ ಕಥೆ-ಇವು ಇನ್ನು ಕೆಲವು ಉದಾಹರಣೆಗಳು. ವಂದೂರು ತಿಮ್ಮಕ್ಕ ಹೇಳಿದ ಈರಸೂರನ ಕಥೆ, ಬಾವಿನೀರಿಗೆ ಬಲಿಯಾದ ಕಥೆ, ಹುಲಿ ಬೇಟೆಯ ಕಥೆ, ಜಂಗಮ ಜೋಗಿಯ ಕಥೆ, ಹೆಂಗಸಿನ ಧೈರ್ಯದ ಕಥೆ-ಇಂಥವುಗಳಲ್ಲಿ ನಮ್ಮ ಜಾನಪದ ಕಥನದ ವಿಶಿಷ್ಟ ಸರಣಿಗಳನ್ನು ಕಾಣಬಹುದು.
ಪ್ರಸರಣ
[ಬದಲಾಯಿಸಿ]ದಾಸರ ಪದಗಳನ್ನೂ ಇತರ ಭಜನೆಯ ಪದಗಳನ್ನೂ `ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು - ಮುಂತಾದ ಪಠ್ಯಪುಸ್ತಕದ ಪದಗಳನ್ನೂ ಪಂಚವಟಿಯ ಪ್ರಸಂಗದಂಥ ಯಕ್ಷಗಾನದ ತುಂಡುಪದಗಳನ್ನೂ ಗುಮಟೆ ಪದಗಳಂತೆ ಹೇಳುವುದುಂಟು. ಸ್ವತಂತ್ರವಾದ ಅನೇಕ ಕಥನ ಕವನಗಳೂ ಜಾನಪದ ಪ್ರೇಮಗೀತೆಗಳೂ, ಹಾಸ್ಯಗೀತೆಗಳೂ ಇತರ ಜನಜೀವನದ ಚಿತ್ರಗಳೂ ಬಳಕೆಯಲ್ಲಿರುವುದರಿಂದ ಗುಮಟೆ ಪದಗಳ ಕ್ಷೇತ್ರ ಸಾಕಷ್ಟು ವಿಶಾಲವಾಗಿದೆ.
ಕುಣಿತ ಪ್ರಯೋಗ
[ಬದಲಾಯಿಸಿ]ಉತ್ತರ ಕನ್ನಡದ ಅಂಕೋಲಾ ತಾಲ್ಲೂಕು, ಕಾರವಾರ ತಾಲ್ಲೂಕಿನ ದಕ್ಷಿಣ ಭಾಗ, ಕುಮಟ ತಾಲ್ಲೂಕು, ಹೊನ್ನಾವರ ತಾಲ್ಲೂಕಿನ ಉತ್ತರ ಭಾಗ, ಮತ್ತು ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ, ಬಾರೆ ಮುಂತಾದ ಹಳ್ಳಿಗಳಲ್ಲಿ ಈ ಪದಗಳು ಪ್ರಚಾರದಲ್ಲಿವೆ ಸಿರ್ಸಿ, ಸಿದ್ದಾಪುರ ತಾಲ್ಲೂಕುಗಳ ಕಡೆ ಡೋಲಿನ ಪದಗಳೂ ಭಟ್ಕಳ ತಾಲ್ಲೂಕಿನಲ್ಲಿ ಢಕ್ಕೆಯ ಪದಗಳೂ ರೂಢಿಯಲ್ಲಿವೆ. ಹರಕಂತ್ರ ಅಂಬಿಗರೆಂಬ ಮೀನುಗಾರರೂ ಹಾಲಕ್ಕಿ ಒಕ್ಕಲಿಗರೂ ಉಪ್ಪಾರರೂ ಕೋಮಾರ ಪಂತರೂ ಸ್ವರ್ಣಕಾರರೂ ಮುಕರಿ ಹಳ್ಳೇರರೆಂಬ ಹರಿಜನರೂ ಯಲ್ಲಾಪುರದ ಹಳ್ಳಿಗಳಲ್ಲಿನ ಕರೇ ಒಕ್ಕಲಿಗರೂ ಸಿದ್ದಿಜನರೂ ಗುಮಟೆಯನ್ನು ಉಪಯೋಗಿಸುತ್ತಾರೆ.
ಗುಮಟೆ ಪದಗಳು ವಿಶೇಷವಾಗಿ ಸಾಮೂಹಿಕ ಕಾರ್ಯಕ್ರಮಗಳು, ಇಬ್ಬರು, ಮೂವರು, ನಾಲ್ವರು ಗುಂಪಾಗಿ ಪದ ಹೇಳುತ್ತ ಗುಮಟೆ ಬಡಿಯುತ್ತಾರೆ. ಒಬ್ಬ ಒಂದು ಸಾಲನ್ನೆತ್ತಿ ಗುಮಟೆ ಬಡಿಯುವಾಗ ಇತರರು ಸುಮ್ಮನೆ ಗುಮಟೆ ಬಡಿಯುತ್ತಿದ್ದು ಆಮೇಲೆ ಒಬ್ಬೊಬ್ಬರೇ ಆ ಸಾಲನ್ನೆತ್ತಿ ಹೇಳಿ, ಗುಮಟೆ ಬಡಿಯುವುದೂ ಉಂಟು. ಹಗಲಿನಲ್ಲಿ ಕೆಲಸಮಾಡಿ ದಣಿದ ಜನ ರಾತ್ರಿಯಲ್ಲಿ ಗುಮಟೆ ಬಡಿದು, ಪದ ಹೇಳಿ, ಕೇಳಿ ಮನೋರಂಜನೆ ಪಡೆಯುತ್ತಾರೆ. ಚೌತಿಯ ಹಬ್ಬದಲ್ಲಿ ಗಣಪತಿ ಮುಂದೆ ಇಂಥ ಗುಮಟೆ ಕಾರ್ಯಕ್ರಮವನ್ನು ಹಗಲಿಗೇ ಮಾಡಿಸುವ ಪದ್ಧತಿಯೂ ಹಿಂದೆ ಇತ್ತು. ಆಗ ಕುಂಬಾರರೂ ಭಂಡಾರಿಗಳೂ ಗಾವೊಕ್ಕಲೂ ಕೊಂಕಣಿಗರೂ ಈ ಪದಗಳನ್ನು ಅನ್ನುತ್ತಿದ್ದರು. ತಿರುಪತಿಯಾತ್ರೆ ಮಾಡಿ ಬಂದ ಮೇಲೆ ಮಾಡುವ ದೇವಕಾರ್ಯಗಳಲ್ಲಿಯೂ, ಮದುವೆಯಂಥ ಸಂತೋಷ ಸಮಾರಂಭದಲ್ಲಿಯೂ ರಾತ್ರಿಯಲ್ಲಿ ಗುಮಟೆಪಾಂಗು ನಡೆಯುತ್ತದೆ. ಅತ್ಯುತ್ತಮವಾಗಿ ಪದ ಹೇಳಿದವರಿಗೆ ಧೋತರದ ಉಡುಗೊರೆ ಮಾಡುವ ಪದ್ಧತಿ ಕೆಲವು ಕಡೆಗಳಲ್ಲಿದೆ. ಅಂತರವಳ್ಳಿಯ ಹುಲಿದೇವರ ಹಬ್ಬದಲ್ಲಿ ಒಂದೊಂದು ದಿನ ಒಂದೊಂದು ಸಮಾಜದವರು ಗುಮಟೆಯ ಪದಗಳ ಸೇವೆಯನ್ನು ಸಲ್ಲಿಸುತ್ತಾರೆ. ಗಂಗಾಷ್ಟಮಿಯಲ್ಲಿ ಗೋಕರ್ಣದ ಮಹಾಬಲೇಶ್ವರ ದೇವರ ಮೆರವಣಿಗೆ ಹೋದಾಗ ಗಂಗಾವಳಿಯಲ್ಲೂ ಇಂಥ ಸೇವೆ ಉಂಟು.
ಗುಮಟೆ ಹಾಡುಗಾರರ ಉತ್ಸಾಹವನ್ನೂ ಆನಂದವನ್ನೂ ನೋಡಿಯೇ ಅನುಭವಿಸಬೇಕು. ಕೇಳುವವರು ಮೈಮರೆಯುವಂತೆ ಮಾಡುವ ನಾಗಮೋಡಿ ಇವರ ಹಾಡುಗಾರಿಕೆಗುಂಟು.
ಉಲ್ಲೇಖ
[ಬದಲಾಯಿಸಿ]- ↑ https://shodhganga.inflibnet.ac.in/bitstream/10603/100788/11/11_chapter%208.pdf
- ↑ "ಆರ್ಕೈವ್ ನಕಲು". Archived from the original on 2020-08-03. Retrieved 2019-08-31.
- ↑ https://www.youtube.com/watch?v=Ky0dSZuBcZ0